– ಮಧು ಪಂಡಿತ ದಾಸ
ಒಂದು ರಾಜ್ಯದಲ್ಲಿ ಅಲ್ಲಿನ ಸರಕಾರದ ಆಡಳಿತ ವ್ಯವಸ್ಥೆಯು ಎಲ್ಲ ಪ್ರಜೆಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದ್ದರೆ ಅದನ್ನು ಒಂದು ಆದರ್ಶ ರಾಜ್ಯ ಎನ್ನುತ್ತೇವೆ. ಯಾವುದೇ ಜಾತಿ, ಮತ, ಲಿಂಗ ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವುದು ಸರಕಾರದ ಕರ್ತವ್ಯ. ಅಂತಹ ವ್ಯವಸ್ಥೆಯನ್ನು ರೂಪಿಸಿದಾಗ ಅಂತಹ ಸರಕಾರಕ್ಕೆ ದೈವೀಪ್ರಜ್ಞೆ ಇದೆ ಎಂದು ಹೇಳಬಹುದು.
ಧರ್ಮಸಂಪನ್ನನಾದ ಧ್ರುವ ಮಹಾರಾಜನ ಆಡಳಿತವನ್ನು ಸಾಮಾನ್ಯವಾಗಿ ಒಂದು ಉತ್ತಮ ಮಾದರಿ ವ್ಯವಸ್ಥೆಗೆ ಉದಾಹರಿಸಲಾಗುತ್ತದೆ.
![](https://www.bhaktivedantadarshana.com/wp-content/uploads/2023/03/The-History-of-a-Great-Boy-Devotee-Dhruva-Maharaja.jpg)
ದೈವಿಪ್ರಜ್ಞಾವಂತನಾಗಿದ್ದ ಧ್ರುವ ಮಹಾರಾಜನು ಪ್ರಜೆಗಳಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಿ ಒಬ್ಬ ಆದರ್ಶ ರಾಜನಾಗಿದ್ದನು. ಪ್ರಜೆಗಳನ್ನು ತನ್ನ ಮಕ್ಕಳೆನ್ನುವಂತೆ ಭಾವಿಸುತ್ತಿದ್ದನು. ಎಲ್ಲ ಪ್ರಜೆಗಳನ್ನೂ ರಕ್ಷಿಸುವುದು ಒಬ್ಬ ರಾಜನ ಕರ್ತವ್ಯ. ಅವರಿಗೆ ಸಕಲ ಸೌಲಭ್ಯಗಳನ್ನು ಒದಗಿಸುವುದಷ್ಟೇ ಅಲ್ಲ, ಅವರ ಧಾರ್ಮಿಕ ಜೀವನಕ್ಕೆ ಅಡ್ಡಿ ಉಂಟು ಮಾಡುವವರ ವಿರುದ್ಧದ ರಕ್ಷಣೆಯೂ ಮುಖ್ಯ. ಯಾವುದೇ ರಾಜ್ಯದಲ್ಲಿ ಅಂತಹ ಪೂರಕ ವಾತಾವರಣ ಅಗತ್ಯ. ಅದನ್ನು ಒದಗಿಸುವ ಕರ್ತವ್ಯ ರಾಜನದು, ಸರಕಾರದ್ದು.
ಧ್ರುವ ಮಹಾರಾಜನ ರಾಜ್ಯದಲ್ಲಿ ಅಂತಹ ವಾತಾವರಣವಿತ್ತು. ಹೀಗಾಗಿ ಪ್ರಜೆಗಳು ಧ್ರುವನನ್ನು ತಮ್ಮ ಜನಕ ಎಂದೇ ಭಾವಿಸಿದ್ದರು. ಅವನಿಗೆ ಮುಗ್ಧರು ಮತ್ತು ಬಡವರ ಬಗೆಗೆ ತುಂಬ ಕಾಳಜಿ ಇತ್ತು. ಅವನು ಕರುಣಾಮಯಿಯಾಗಿದ್ದನು. ಪ್ರಜೆಗಳ ಹಿತವೇ ತನಗೆ ಮುಖ್ಯ ಎಂದು ಅವನು ಭಾವಿಸಿದ್ದನು. ಒಟ್ಟಿನಲ್ಲಿ ಅವನು ಧಾರ್ಮಿಕ ತತ್ತ್ವಗಳನ್ನು ರಕ್ಷಿಸುತ್ತಿದ್ದ ಎನ್ನುವುದನ್ನು ಆಚಾರ್ಯ ಶ್ರೀಲ ಪ್ರಭುಪಾದರೂ ಕೂಡ ಪ್ರಸ್ತಾಪಿಸಿದ್ದಾರೆ.
ಧ್ರುವ ಮಹಾರಾಜನ ಆಡಳಿತ ಮತ್ತು ಪ್ರಸ್ತುತ ಕಲಿಯುಗದಲ್ಲಿನ ಆಡಳಿತ ವ್ಯವಸ್ಥೆಗಳನ್ನು ಹೋಲಿಸಿದಾಗ ಅದು ಅಜಗಜಾಂತರ ಎನ್ನುವುದು ಸ್ಪಷ್ಟವಾಗುತ್ತದೆ. ಈಗಿನ ವಾತಾವರಣದಲ್ಲಿ ರಾಜ್ಯಗಳಲ್ಲಿನ ಸರಕಾರಗಳಿಂದ ಜೀವನದ ಮೂಲ ಅವಶ್ಯಕತೆಗಳಾದ ಪ್ರಾಣರಕ್ಷಣೆ ಹಾಗೂ ಪ್ರಜೆಗಳ ಆಸ್ತಿಪಾಸ್ತಿಯ ರಕ್ಷಣೆ ಕುರಿತು ಯಾವುದೇ ಭರವಸೆ ಸಿಗದಾಗಿದೆ. ಬದಲಿಗೆ ಕಸಾಯಿಖಾನೆಗಳು ಸೃಷ್ಟಿಯಾಗುತ್ತಿವೆ, ನಿರಂತರವಾಗಿ ಪ್ರಾಣಿವಧೆಯಾಗುತ್ತಿದೆ.
ನಿಜ, ಧ್ರುವ ಮಹಾರಾಜನ ಆದರ್ಶ ಲೋಕವನ್ನು ಕಲಿಯುಗದಲ್ಲಿ ಕಾಣಲಾರೆವು. ಆದರೆ ನಾವು ನಮ್ಮ ಸ್ಥಳಗಳಲ್ಲಿಯೇ, ಅಂತಹ ಲೋಕವನ್ನು ಸೃಷ್ಟಿಸಿಕೊಳ್ಳಲು ಪ್ರಯತ್ನಿಸಬಹುದಲ್ಲವೇ? ನಮ್ಮ ಸರಕಾರಗಳೂ ಕೂಡ ಅಂತಹ ಲೋಕ ಸೃಷ್ಟಿಗೆ ಪ್ರಯತ್ನಿಸಬಹುದು. ಸರಕಾರದ ಆಡಳಿತಾಧಿಕಾರಿ ಒಬ್ಬ ಕ್ಷತ್ರಿಯನಂತೆ ಆಡಳಿತ ನಿರ್ವಹಿಸಬೇಕು. ಧ್ರುವ ಮಹಾರಾಜನು ಕ್ಷತ್ರಿಯನಾಗಿದ್ದನು ಮತ್ತು ಧರ್ಮಬೀರುವಾಗಿದ್ದನು. ದೈವಪ್ರಜ್ಞೆ ಉಳ್ಳವರನ್ನು ಗೌರವಿಸುತಿದ್ದನು. ಅದೇ ರೀತಿ ನಮ್ಮ ಸರಕಾರಗಳು ಉತ್ತಮ ಆಡಳಿತ ನೀಡುವತ್ತ ಗಮನಹರಿಸಬೇಕಾಗಿದೆ. ಅದಕ್ಕೆ ಪೂರಕ ಅಂಶಗಳಾವುವು?
ದೈವಿಪ್ರಜ್ಞೆಯನ್ನು ಇಡೀ ಜಗತ್ತಿಗೆ ಹಂಚುವ ಸಂಘಸಂಸ್ಥೆಗಳಿವೆ. ಅವುಗಳನ್ನು ಕುರಿತು ಸರಕಾರಗಳು ಗೌರವ ತೋರಬೇಕು. ಆದರೆ ಈ ದಿನಗಳಲ್ಲಿ ಅಂತಹ ಆಂದೋಲನಗಳಿಗೆ ಬಹಳಷ್ಟು ರಾಜ್ಯದ ಅಥವಾ ಸರಕಾರದ ನೆರವು ಸೂಕ್ತವಾಗಿ ಸಿಗುತ್ತಿಲ್ಲ. ನೆರವು ಕೇಳಿ ಬರುವ ಜನರಿಗೆ ನಿರಾಕರಣೆಯ ಉತ್ತರವೇ ಸಿಗುತ್ತದೆ. ಪ್ರಜೆಗಳಿಗೆ ಇಲ್ಲ ಎಂದು ಹೇಳಲು ಅಧಿಕಾರಿಗಳು ವೇತನ ಪಡೆಯುತ್ತಿರುವಂತೆ ಕಾಣುತ್ತದೆ.
ಆಡಳಿತ ನಡೆಸುವವರು ಪತಿತಗೊಂಡಿದ್ದಾರೆ ಎಂದು ಶ್ರೀಲ ಪ್ರಭುಪಾದರು ಹೇಳುತ್ತಾರೆ. ಆಡಳಿತ ನಡೆಸುವವರಿಗೆ ತಾವು ಅಧಿಕಾರದ ಸ್ಥಾನದಲ್ಲಿ ಕುಳಿತಿರುವುದೇಕೆ ಎನ್ನುವ ಪರಿವೆಯೇ ಇಲ್ಲ. ಬದುಕಿನ ಉದ್ದೇಶವನ್ನೇ ಅರಿಯದ ವ್ಯಕ್ತಿಯು ಆಡಳಿತ ಚುಕ್ಕಾಣಿ ಹಿಡಿದರೆ ಏನಾಗುತ್ತದೆ? ಅಂತಹ ವ್ಯಕ್ತಿಯು ಜನರಿಗೆ ಯಾವ ರೀತಿ ನೆರವಾಗುತ್ತಾನೆ? ಬದುಕಿನ ಉದ್ದೇಶವೇನು? ಭಗವಂತನೇ ತಿಳಿಸಿರುವಂತೆ, ಪ್ರತಿಯೊಬ್ಬರೂ ನೆಮ್ಮದಿಯ ಜೀವನ ನಡೆಸಲು ಆಧ್ಯಾತ್ಮಿಕ ವಾತಾವರಣ ಅಗತ್ಯ. ಅದಕ್ಕೆ ಪೂರಕವಾದ ಆಡಳಿತ ವ್ಯವಸ್ಥೆ ಇರಬೇಕು.
ಇದರಲ್ಲಿ ಪ್ರಜೆಗಳ ಪಾತ್ರವೂ ಮುಖ್ಯ. ಸಂಸ್ಕೃತಿ ಶಿಕ್ಷಣ ಅಗತ್ಯವಾಗಿದೆ. ನಮ್ಮ ಮಕ್ಕಳಿಗೆ ಮೊದಲು ಮನೆಗಳಲ್ಲಿಯೇ ಸಂಸ್ಕೃತಿ ಶಿಕ್ಷಣ ಲಭ್ಯವಾಗುತ್ತಿತ್ತು. ಜಂಟಿ ಕುಟುಂಬಗಳಲ್ಲಿ ಮಕ್ಕಳು ವಿವಿಧ ಜನರೊಂದಿಗೆ ವ್ಯವಹರಿಸುವ ರೀತಿಯನ್ನು ಅರಿಯುತ್ತಿದ್ದರು. ಈಗ ಜಂಟಿ ಕುಟುಂಬಗಳು ವಿರಳ. ಶಾಲೆಗಳು ಕೇವಲ ಮಾಹಿತಿ ನೀಡುವ ಕೇಂದ್ರಗಳಾಗಿವೆ. ಹೆಚ್ಚೆಂದರೆ ಕ್ರೀಡೆಗೆ ಒಂದಷ್ಟು ಪ್ರಾಮುಖ್ಯ ನೀಡುತ್ತವೆ. ಆದುದರಿಂದ ದೈವಿಪ್ರಜ್ಞೆಯನ್ನು ವಿತರಿಸುವ ಸಂಘಸಂಸ್ಥೆಗಳಿಂದ ಸಂಸ್ಕೃತಿ ಶಿಕ್ಷಣವನ್ನು ಪಡೆಯಬೇಕಾಗಿದೆ. ಸುಸಂಸ್ಕೃತ ಪ್ರಜೆಗಳು ಸರಕಾರದ ಕರ್ತವ್ಯಗಳನ್ನು ಸದಾ ಜಾಗೃತಾವಸ್ಥೆಯಲ್ಲಿ ಇಡಬಹುದು. ಕೆಲವರು ಸಮಾಜಕ್ಕೆ ಕೆಡುಕನ್ನೇ ಉಂಟು ಮಾಡುತ್ತಾರೆ.
ಲೌಕಿಕ ಲೋಕದಲ್ಲಿ ಒಳ್ಳೆಯ ಜೀವನವನ್ನು ನೀಡುವ ಕಾನೂನುಗಳನ್ನು ಅವರು ಮುರಿಯುತ್ತಾರೆ. ಉದಾಹರಣೆಗೆ, ಕಸಾಯಿಖಾನೆಗಳ ನಿರ್ಮಾಣ, ಪ್ರಾಣಿವಧೆ, ಭೂಮಿಯ ಶೋಷಣೆ ಇತ್ಯಾದಿ. ಇವೆಲ್ಲವೂ ಜನರ ಮೇಲೆ ಪರಿಣಾಮ ಬೀರುತ್ತವೆ. ಆದುದರಿಂದ ಸಂಸ್ಕೃತಿ ಶಿಕ್ಷಣ ಮತ್ತು ಧಾರ್ಮಿಕ ಜೀವನ ಅಗತ್ಯ. ಈ ದೃಷ್ಟಿಯಿಂದ ಸಮಾಜದಲ್ಲಿ ಧರ್ಮಪ್ರಜ್ಞೆಯನ್ನು ಉಂಟುಮಾಡುವ ಸಂಘಸಂಸ್ಥೆಗಳಿಗೆ ಸರಕಾರವು ಉತ್ತೇಜನ ನೀಡಬೇಕು ಎಂದು ಪ್ರಭುಪಾದರು ಪ್ರತಿಪಾದಿಸಿದ್ದಾರೆ.
ಇಲ್ಲವಾದರೆ ಅಮೆರಿಕದಲ್ಲಿ ನಡೆಯುತ್ತಿರುವುದರ ಪುನರಾವೃತ್ತಿ ಇಲ್ಲಿಯೂ ಆಗುತ್ತದೆ. ಅಲ್ಲಿ ಏನಾಗುತ್ತಿದೆ? ಅಮೆರಿಕದಲ್ಲಿ ತಲಾ ಆದಾಯ, ಜಿಡಿಪಿ ಹೆಚ್ಚಾದರೂ ಸುಖ, ನೆಮ್ಮದಿಯ ಮಾಪಕ ಮಾತ್ರ ಇಳಿಯುತ್ತಲೇ ಹೋಗುತ್ತಿದೆ. ಹೀಗಾಗಿ ನಾವು ಗಳಿಸಿದ್ದೇನು? ಸಾಧಿಸಿದ ಪ್ರಗತಿ ಏನು? ಯೋಚಿಸಲು ಸಕಾಲ. ಜನಗಳೂ ಸರಕಾರಗಳೂ ಚಿಂತಿಸಬೇಕು.