ಆತ್ಮಾರಾಮ  ತತ್ತ್ವ

ಜ್ಞಾನೋದಯ ಹೊಂದಿದ ಆತ್ಮನು ಭೌತಿಕ ಕಾರ್ಯಗಳಲ್ಲಿ ತೊಡಗಿದ್ದರೂ, ಭೌತಿಕ ಪ್ರಕೃತಿಯ ಪ್ರಭಾವವು ಅವನಿಗೆ ಹಾನಿ ಉಂಟುಮಾಡುವುದಿಲ್ಲ. ಏಕೆಂದರೆ ಅವನು ಪರಮಸತ್ಯವನ್ನು ತಿಳಿದಿರುತ್ತಾನೆ ಮತ್ತು ಅವನ ಮನಸ್ಸು ದೇವೋತ್ತಮ ಪರಮ ಪುರುಷನಲ್ಲಿ ನೆಲೆಸಿರುತ್ತದೆ. (ಭಾಗವತ 3.27.26)

ಲೌಕಿಕ ಪ್ರಕೃತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವವರು ಅನೇಕ ಜನರಿದ್ದಾರೆ. ಸಾಂಖ್ಯ ತತ್ತ್ವಜ್ಞಾನಿಗಳು ಕೂಡ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಭೌತಿಕ ವಿಜ್ಞಾನಿಗಳೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಮತ್ತು ನಿರಾಕಾರವಾದಿಗಳಿದ್ದಾರೆ. ಅವರು ಇದೆಲ್ಲ ಭ್ರಮೆ ಎಂದು ಭಾವಿಸುತ್ತ ಭಿನ್ನವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ವಾಸ್ತವವಾಗಿ ಲೌಕಿಕ ಪ್ರಕೃತಿಯನ್ನು ಭಕ್ತಿಸೇವೆಯಿಂದ ಮಾತ್ರ ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯ.

ಬೇರಿಗೆ ನೀರು

      ಸಾಂಖ್ಯವು ಒಂದು ವೃಕ್ಷದ ಬೇರನ್ನು ಹುಡುಕುವಂತೆ ಮಾತ್ರ. ಆದರೆ ಭಕ್ತಿಸೇವೆಯು ಮರದ ಬೇರಿಗೆ ನೀರು ಹಾಕುವುದು ಎಂದು ಶ್ರೀಲ ಪ್ರಭುಪಾದರು ವಿವರಿಸುತ್ತಾರೆ. ಆದುದರಿಂದ ಸಾಂಖ್ಯವು ವಿವಿಧ ಅಂಶಗಳನ್ನು ಕಂಡುಹಿಡಿಯುವ ಕೆಲಸವನ್ನಷ್ಟೇ ಮಾಡುತ್ತದೆ. ಆದರೆ ಭಕ್ತಿಸೇವೆಯು ಮರದಲ್ಲಿ ಬೇರು ತುಂಬ ಮುಖ್ಯವಾಗಿದ್ದರೆ, ನಾನು ಅದಕ್ಕೆ ನೀರೆರೆಯಬೇಕು ಎಂಬ ನೈಜ ವೇದಿಕೆಯ ಮೇಲೆ ನಿರ್ವಹಿಸುತ್ತದೆ. ಆದುದರಿಂದ ಭಕ್ತಿಸೇವೆಯನ್ನು ಜ್ಞಾನ ಮತ್ತು ವಿಜ್ಞಾನ ಎಂದು ಎರಡು ರೀತಿಯಲ್ಲಿಯೂ ಕರೆಯುತ್ತಾರೆ. ಅದು ಕೇವಲ ತಾತ್ತ್ವಿಕ ಜ್ಞಾನವಲ್ಲ.

      ಆದುದರಿಂದ ಅವನು ಇಲ್ಲಿ ತುಂಬ ಮುಖ್ಯವಾದ ವಿಷಯವನ್ನು ವಿವರಿಸುತ್ತಿದ್ದಾನೆ. ಸಾಮಾನ್ಯವಾಗಿ ಇತರ ಎಲ್ಲ ರೀತಿಯ ಯೋಗ ಪದ್ಧತಿಯಲ್ಲಿ ಲೌಕಿಕ ಶಕ್ತಿ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳನ್ನು ಪ್ರತ್ಯೇಕಿಸುತ್ತಾರೆ. ಅದು ಹೇಗೆಂದರೆ, ನಿಮಗೆ ಅಷ್ಟಾಂಗ ಯೋಗವನ್ನು ಆಚರಿಸಬೇಕೆಂದರೆ, ನೀವು ವಿವಿಧ ಲೌಕಿಕ ಚಟುವಟಿಕೆಗಳನ್ನು ಬಿಟ್ಟುಬಿಡಬೇಕು ಎಂದು ಸೂಚಿಸಲಾಗುತ್ತದೆ. ನೀವು ಏಕಾಂತ ಸ್ಥಳಕ್ಕೆ ಹೋಗಬೇಕು, ನೀವು ಲೌಕಿಕ ಪ್ರಕೃತಿ, ನಗರದಲ್ಲಿ ಮಾಯೆಯ ಮಧ್ಯೆ ಇರಬಾರದು.

      ಜ್ಞಾನಯೋಗದಲ್ಲಿ ಎಲ್ಲ ರೀತಿಯ ಕಾಮ್ಯ ಕರ್ಮ ಪ್ರಯತ್ನಗಳನ್ನು ತ್ಯಜಿಸಬೇಕು ಮತ್ತು ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಕರ್ಮಯೋಗದಲ್ಲಿ ವ್ಯಕ್ತಿಯು ತನ್ನ ಚಟುವಟಿಕೆಗಳ ಫಲವನ್ನು ಬಿಟ್ಟುಬಿಡುವುದರೊಂದಿಗೆ ಆರಂಭಿಸಬೇಕು. ಆಗ ಕೂಡ ಅವನು ಇನ್ನೂ ಆರಂಭದ ಹಂತದಲ್ಲಿರುತ್ತಾನೆ. ಭಕ್ತಿಸೇವೆಯಲ್ಲಿ ಯಾರೂ ಯಾವುದನ್ನೂ ಬದಲಾಯಿಸುವ ಅಗತ್ಯವಿಲ್ಲ ಎಂದು ಕೃಷ್ಣನು ಭಗವದ್ಗೀತೆಯಲ್ಲಿ ವಿವರಿಸಿರುವಂತೆ ಶ್ರೀ ಕಪಿಲನು ಇಲ್ಲಿ ಭಕ್ತಿಸೇವೆಯ ರಹಸ್ಯವನ್ನು ತಿಳಿಸಿದ್ದಾನೆ. ಯಾರೂ ತನ್ನ ಸ್ಥಳವನ್ನು, ತನ್ನ ಉದ್ಯೋಗವನ್ನು ಬದಲಿಸಬೇಕಾಗಿಲ್ಲ. ಅಷ್ಟೇ ಅಲ್ಲ, ಹೊರ ನೋಟಕ್ಕೆ ಲೌಕಿಕವೆಂಬಂತೆ ಕಾಣುವ ತನ್ನ ಚಟುವಟಿಕೆಗಳನ್ನೂ ಬದಲಾಯಿಸಿಕೊಳ್ಳುವ ಅಗತ್ಯವಿಲ್ಲ. ಶ್ರೀಲ ಪ್ರಭುಪಾದರು ಉದಾಹರಣೆಯನ್ನು ನೀಡುತ್ತಾರೆ. ಭಕ್ತನು ಹಣ ಸಂಪಾದಿಸುತ್ತಿರಬಹುದು, ಭಕ್ತನು ಮರವನ್ನು ಸಂಗ್ರಹಿಸುತ್ತಿರಬಹುದು, ಭಕ್ತನು ಇಟ್ಟಿಗೆಯನ್ನು ಸಂಗ್ರಹಿಸುತ್ತಿರಬಹುದು ಮತ್ತು ಅವನೂ ಕೂಡ ಕಟ್ಟಡ ನಿರ್ಮಿಸುತ್ತಿರಬಹುದು. ಬಾಹ್ಯ ನೋಟಕ್ಕೆ ಅದು ಹಾಗೆಯೇ ಕಾಣುತ್ತದೆ. ಆದರೆ ಈ ಕಾರ್ಯದ ಫಲವು ಮತ್ತೊಂದರ ಫಲಕ್ಕಿಂತ ಭಿನ್ನ. ಆದುದರಿಂದ ಭಕ್ತಿಸೇವೆಯು ಅತ್ಯಂತ ರಹಸ್ಯ ಜ್ಞಾನವೆಂದು ಗ್ರಹಿಸಲಾಗಿದೆ. ಅದು ಬಾಹ್ಯವಾಗಿ ಇತರ ಯಾವುದೇ ಚಟುವಟಿಕೆಯಂತೆ ಕಂಡರೂ ಇದರ ಫಲವು ಬೇರೆ ಚಟುವಟಿಕೆಗಿಂತ ಭಿನ್ನ.

      ಇತರ ಎಲ್ಲ ಯೋಗ ಪದ್ಧತಿಗಳಲ್ಲಿ ಇವೆಲ್ಲವನ್ನೂ ನೀವು ತ್ಯಜಿಸಬೇಕೆಂದು ಸೂಚಿಸಲಾಗುತ್ತದೆ ಮತ್ತು ಬೇರೆ ಇತರ ಚಟುವಟಿಕೆಗಳನ್ನು ಆಚರಿಸಲು ತಿಳಿಸಲಾಗುತ್ತದೆ. ಆದರೆ ಭಕ್ತಿಸೇವೆಯಲ್ಲಿ ನಿಮಗೆ ಎಲ್ಲವೂ ಇದೆ, ಅದೇ ರೀತಿಯ ಚಟುವಟಿಕೆಗಳು. ನಾವು ಹಾಡುತ್ತೇವೆ, ನಾವು ನರ್ತನವನ್ನೂ ಮಾಡುತ್ತೇವೆ, ನಾವು ತಿನ್ನುತ್ತೇವೆ – ಎಲ್ಲವೂ ಉಂಟು. ಆದರೆ ಈ ಚಟುವಟಿಕೆಗಳ ಫಲವು ಸಂಪೂರ್ಣವಾಗಿ ಭಿನ್ನ. ಬದಲಿಗೆ, ಕಪಿಲದೇವನು ವಾಸ್ತವವಾಗಿ ವಿವರಿಸುತ್ತಿದ್ದಾನೆ – ಈ ಚಟುವಟಿಕೆಗಳನ್ನು ಮಾಡುತ್ತ ಭಕ್ತರು ಲೌಕಿಕ ಪ್ರಕೃತಿಯ ಪ್ರಭಾವದಿಂದ ಮುಕ್ತರಾಗುತ್ತಾರೆ.

      ಆ ಚಟುವಟಿಕೆಗಳಲ್ಲಿನ ವ್ಯತ್ಯಾಸವನ್ನು ವಿವರಿಸಲಾಗಿದೆ. ವ್ಯತ್ಯಾಸವು ಅವನ ಪ್ರಜ್ಞೆ ಮತ್ತು ಮನಸ್ಸು. ಮನಸ್ಸು ಭಗವಂತನ ಸೇವೆಯಲ್ಲಿ ಸಂಪೂರ್ಣವಾಗಿ ನೆಲೆಸಿರುತ್ತದೆ. ಮನಸ್ಸು ಪ್ರಭುವಿನ ಪಾದ ಕಮಲಗಳಲ್ಲಿ ನೆಟ್ಟಿರುತ್ತದೆ ಮತ್ತು ಅವನ ಎಲ್ಲ ಚಟುವಟಿಕೆಗಳು ಭಗವಂತನನ್ನು ತೃಪ್ತಿಪಡಿಸಲೆಂದೇ ಅರ್ಪಿತವಾಗಿರುತ್ತವೆ. ಈ ಗ್ರಹಿಕೆಯಿಂದ ಆಧ್ಯಾತ್ಮಿಕ ಗುರುವಿನ ಮಾರ್ಗದರ್ಶನದಲ್ಲಿ ಭಕ್ತನು ಬಾಹ್ಯವಾಗಿ ಲೌಕಿಕರಂತೆ ಇದ್ದರೂ ಅವನು ಎಂದಿಗೂ ಲೌಕಿಕ ಪ್ರಕೃತಿಯ ಗುಣಗಳಿಂದ ಪ್ರಭಾವಿತನಾಗುವುದಿಲ್ಲ. ಶ್ರೀ ಕಪಿಲನು ಈ ರಹಸ್ಯವನ್ನು ಈ ಶ್ಲೋಕದಲ್ಲಿ ವಿವರಿಸಿದ್ದಾನೆ.

      ಶ್ರೀ ಕಪಿಲನು ಹೇಳುತ್ತಿರುವ ಈ ಸುಂದರ ಅರ್ಥ ಗ್ರಹಿಕೆಯನ್ನು ನಾವು ಸುಮ್ಮನೆ ಗಮನಿಸೋಣ. ಅವನು ಹೇಳುತ್ತಿದ್ದಾನೆ – ಏವಂ ವಿದಿತ ತತ್ತ್ವಸ್ಯ, “ಯಾರಿಗೆ ಪರಮಸತ್ಯದ ಸಾಕ್ಷಾತ್ಕಾರ ಆಗಿರುವುದೋ.” ಭಗವದ್ಗೀತೆಯಲ್ಲಿ ಕೃಷ್ಣನು ಬಳಸಿರುವ ಪದಗಳನ್ನೇ ಶ್ರೀ ಕಪಿಲನೂ ಬಳಸಿದ್ದಾನೆ,

ತದ್‌ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ |
ಉಪದೇಕ್ಷ್ಯನ್ತಿ ತೇ ಜ್ಞಾನಂ ಜ್ಞಾನಿನಸ್ತತ್ತ್ವದರ್ಶಿನಃ ॥

(ಭಗವದ್ಗೀತೆ 4.34)

      “ಗುರುವಿನ ಬಳಿಗೆ ಹೋಗಿ ಸತ್ಯವನ್ನು ತಿಳಿದುಕೊಳ್ಳಲು ಪ್ರಯತ್ನಿಸು. ನಮ್ರನಾಗಿ ಅವರಿಗೆ ಪ್ರಶ್ನೆಮಾಡು ಮತ್ತು ಅವರಿಗೆ ಸೇವೆ ಮಾಡು. ಆತ್ಮಸಾಕ್ಷಾತ್ಕಾರ ಪಡೆದ ವ್ಯಕ್ತಿಗಳು ಸತ್ಯವನ್ನು ಕಂಡಿದ್ದಾರೆ. ಆದುದರಿಂದ ಅವರು ನಿನಗೆ ಜ್ಞಾನೋಪದೇಶ ಮಾಡಬಲ್ಲರು.”

ವಿವಿಧ ಹಂತದಲ್ಲಿ ಸಾಕ್ಷಾತ್ಕಾರ

      ವಿವಿಧ ಆಧ್ಯಾತ್ಮಿಕ ಅನುಸರಣೆಗಾರರು ಪರಮಸತ್ಯನನ್ನು ಕುರಿತಂತೆ ವಿವಿಧ ಹಂತಗಳಲ್ಲಿ ಸಾಕ್ಷಾತ್ಕಾರ ಪಡೆದುಕೊಂಡಿದ್ದಾರೆ ಎಂದು ಭಾಗವತವು ವಿವರಿಸುತ್ತದೆ. ಆರಂಭದ ಹಂತದಲ್ಲಿ ಪರಮ ಸತ್ಯನನ್ನು ನಿರಾಕಾರ ಬ್ರಹ್ಮನ್‌ ಎಂದು ಕಂಡುಕೊಳ್ಳಲಾಗುತ್ತದೆ. ಸ್ವಲ್ಪ ಮುಂದುವರಿದ ಹಂತದಲ್ಲಿ ಪರಮ ಸತ್ಯನನ್ನು ಅಂತರ್ಯಾಮಿ ಎಂದು ಕಂಡುಕೊಳ್ಳಲಾಗುತ್ತದೆ. ಕೊನೆಯ ಹಂತದಲ್ಲಿ ಪರಮ ಸತ್ಯನು ದೇವೋತ್ತಮ ಪರಮ ಪುರುಷ ಭಗವಾನ್‌ ಎಂದು ಅರಿತುಕೊಳ್ಳಲಾಗುತ್ತದೆ. ವಾಸ್ತವವಾಗಿ ಭಗವಂತನನ್ನು ಅರಿತುಕೊಂಡವರು ಎಂದರೆ ಅದರಲ್ಲಿ ಇತರ ಎಲ್ಲ ಅಂಶಗಳ ಸಾಕ್ಷಾತ್ಕಾರವೂ ಸೇರಿದೆ ಎಂದು ಶ್ರೀಲ ಪ್ರಭುಪಾದರು ವಿವರಿಸುತ್ತಿದ್ದಾರೆ. ಅದನ್ನು ಸಂಪೂರ್ಣ ಸಾಕ್ಷಾತ್ಕಾರ ಎನ್ನುತ್ತಾರೆ. ಅದನ್ನೇ ನಾವು ಅರ್ಥಮಾಡಿಕೊಳ್ಳಬೇಕು. ಅವರೆಲ್ಲರನ್ನೂ ಆತ್ಮ ಸಾಕ್ಷಾತ್ಕಾರ ಪಡೆದವರೆಂದು ಕರೆದರೂ ಅವರೆಲ್ಲರೂ ತಮ್ಮದೇ ಮಟ್ಟದಲ್ಲಿ ಪರಮಸತ್ಯನನ್ನು ಕಂಡುಕೊಳ್ಳುತ್ತಾರೆ. ಆದರೆ, ಭಗವಂತನನ್ನು ಅರಿತುಕೊಂಡವನೇ ಪೂರ್ಣವಾಗಿ ಸಾಕ್ಷಾತ್ಕಾರಹೊಂದಿದವನು.

      ಶ್ರೀಲ ಪ್ರಭುಪಾದರು ಇಲ್ಲಿ ವಿದಿತ ತತ್ತ್ವಸ್ಯದ ಅರ್ಥವನ್ನು ವಿವರಿಸುತ್ತಾರೆ. ಭಗವಂತನನ್ನು ಅರಿತುಕೊಂಡವರು, ಅವನೇ ಭೋಕ್ತೃ, ನಾನು ಸೇವಕ ಮತ್ತು ನಾನು ಅವನ ಭಕ್ತಿಸೇವೆಯಲ್ಲಿ ತೊಡಗಿಕೊಂಡಿರಬೇಕು ಎಂದು ಸಾಕ್ಷಾತ್ಕರಿಸಿಕೊಂಡವರು. ಅದನ್ನೇ ವಿದಿತ ತತ್ತ್ವಸ್ಯ ಎನ್ನುವರು ಎಂದು ಶ್ರೀಲ ಪ್ರಭುಪಾದರು ಹೇಳುತ್ತಿದ್ದಾರೆ.

      ಏವಂ ವಿದಿತ ತತ್ತ್ವಸ್ಯ, ಪ್ರಕೃತಿರ್‌ ಮಯಿ ಮಾನಸಂ ಎಂದು ಅವರು ಹೇಳುತ್ತಿದ್ದಾರೆ, ಲೌಕಿಕ ಲೋಕದ (ಪ್ರಕೃತಿ) ಚಟುವಟಿಕೆಗಳಲ್ಲಿ ತೊಡಗಿದ್ದರೂ, ಬಾಹ್ಯದ ದೃಷ್ಟಿಗೆ ಐಹಿಕ ಚಟುವಟಿಕೆಗಳಲ್ಲಿ ತೊಡಗಿರುವಂತೆ ಕಂಡರೂ ಅದರಿಂದ ಅವನೇನೂ ಪ್ರಭಾವಿತನಾಗಿಲ್ಲ. ವಿದಿತ ತತ್ತ್ವಸ್ಯನಾದ ಅಂತಹ ವ್ಯಕ್ತಿಗೆ ಲೌಕಿಕ ಪ್ರಕೃತಿಯು ಏನೂ ಅಪಾಯ ಉಂಟುಮಾಡುವುದಿಲ್ಲ. ಆದರೆ ಅವನು ಬಾಹ್ಯವಾಗಿ ಲೌಕಿಕ ಚಟುವಟಿಕೆಯಲ್ಲಿ ತೊಡಗಿರುವಂತೆ ಕಾಣುತ್ತಾನೆ.

      ಯುಂಜಾತೋ ನಾಪಕುರುತ, ಆತ್ಮಾರಾಮಸ್ಯ ಕರ್ಹಿಚಿತ್‌. ಏಕೆಂದರೆ, ವಾಸ್ತವವಾಗಿ ಅವನು ಆತ್ಮಾರಾಮ. ಯಾವುದೋ ಲೌಕಿಕನಂತೆ ಕಾಣುತ್ತ ಬಾಹ್ಯವಾಗಿ ತೊಡಗಿದ್ದರೂ ಅವನು ಸಂಪೂರ್ಣವಾಗಿ ದೇವೋತ್ತಮ ಪರಮ ಪುರುಷನ ಸೇವೆಯಲ್ಲಿ ಮಗ್ನ. ಆದುದರಿಂದ ಶ್ರೀಲ ಪ್ರಭುಪಾದರು ಕೆಲವು ಮುಖ್ಯವಾದ ಅಂಶಗಳನ್ನು ಭಾವಾರ್ಥದಲ್ಲಿ ವಿವರಿಸುತ್ತಿದ್ದಾರೆ. ನಾವು ಆ ಮುಖ್ಯವಾದ ಅಂಶಗಳನ್ನು ನೋಡಲು ಪ್ರಯತ್ನಿಸುತ್ತೇವೆ.

      ಮೊದಲು ಪ್ರಭುಪಾದರು ಶ್ರೀ ಕಪಿಲರು ಬಳಸಿರುವ ಮಯಿ ಮಾನಸಂ ಪದಗಳ ಬಗೆಗೆ ಗಮನ ಸೆಳೆಯುತ್ತಾರೆ. ಅನಂತರ ಅವರು ಅದರ ಅರ್ಥ ಏನೆಂದು ವಿವರಿಸುತ್ತಾರೆ, “ದೇವೋತ್ತಮ ಪರಮ ಪುರುಷನ ಚರಣಕಮಲದಲ್ಲಿ ಸದಾ ತನ್ನ ಮನಸ್ಸನ್ನು ನೆಟ್ಟಿರುವ ಭಕ್ತನನ್ನು ಆತ್ಮಾರಾಮ ಅಥವಾ ವಿದಿತ ತತ್ತ್ವ ಎಂದು ಕರೆಯುತ್ತಾರೆ.” ಆದುದರಿಂದ ಶ್ಲೋಕದಲ್ಲಿ ನೋಡಿದರೆ, ಈ ಮೂರು ಪದಗಳನ್ನು ಬಳಸಲಾಗಿದೆ – ಆತ್ಮಾರಾಮ, ವಿದಿತ ತತ್ತ್ವ ಮತ್ತು ಮಯಿ ಮಾನಸಂ- “ನನ್ನ ಮೇಲೆ ಮನಸ್ಸನ್ನು ನೆಲೆಸಿರುವವರು.” ಈ ಮೂರೂ ಪದಗಳು ಒಂದೇ ಎಂದು ಶ್ರೀಲ ಪ್ರಭುಪಾದರು ಹೇಳುತ್ತಾರೆ. ಯಾರು ವಿದಿತ ತತ್ತ್ವರೋ ಅವರ ಮನಸ್ಸು ಭಗವಂತನ ಚರಣಕಮಲದಲ್ಲಿ ನೆಲೆಸಿರುತ್ತದೆ. ಅವನೇ ಆತ್ಮಾರಾಮ. ಬಾಹ್ಯವಾಗಿ ಹೇಳುವುದಾದರೆ, ಅಷ್ಟೊಂದು ಲೌಕಿಕ ಚಟುವಟಿಕೆಗಳಲ್ಲಿ ತೊಡಗಿದ್ದರೂ ಅವನು ವಾಸ್ತವವಾಗಿ ಆತ್ಮದಲ್ಲಿ ಮಾತ್ರ ಆನಂದಿಸುತ್ತಿದ್ದಾನೆ.

ಏಳು ಅರ್ಥಗಳು

      ಆತ್ಮಾರಾಮಕ್ಕೆ ಇತರ ಅನೇಕ ಅರ್ಥಗಳಿವೆ. ಶ್ರೀ ಚೈತನ್ಯ ಮಹಾಪ್ರಭುಗಳು ಎರಡು ಬಾರಿ ವಿವರಿಸಿರುವ ಆತ್ಮಾರಾಮ ಶ್ಲೋಕವನ್ನು ನೋಡಿದರೆ ಅದರಲ್ಲಿ ಆತ್ಮಾರಾಮವನ್ನು ಕುರಿತಂತೆ ಏಳು ಭಿನ್ನವಾದ ಅರ್ಥಗಳನ್ನು ಕಾಣಬಹುದು. ಆರಾಮ ಎಂದರೆ ಆನಂದವನ್ನು ಪಡೆದಿರುವವರು ಎಂದು ಅರ್ಥ. ದೇಹದಲ್ಲಿ ಆನಂದವನ್ನು ಪಡೆಯುವವರನ್ನೂ ಆತ್ಮಾರಾಮ ಎಂದು ಕರೆಯುತ್ತಾರೆ. ಮನಸ್ಸಿನಲ್ಲಿ ಆನಂದ ಪಡೆಯುವವರನ್ನೂ ಆತ್ಮಾರಾಮ ಎಂದು ಕರೆಯುತ್ತಾರೆ. ಯಾವುದೋ ಒಂದು ರೀತಿಯಲ್ಲಿ ಆನಂದವನ್ನು ಪಡೆಯುವವರನ್ನೂ ಆತ್ಮಾರಾಮ ಎಂದು ಹೇಳುತ್ತಾರೆ. ಆತ್ಮದಲ್ಲಿ ಆನಂದ ಪಡೆಯುವವರನ್ನೂ ಕೂಡ ಆತ್ಮಾರಾಮ ಎನ್ನುತ್ತಾರೆ. ಹೀಗೆ ಅನೇಕ ಅರ್ಥಗಳಿವೆ. ಒಬ್ಬರು ದೇಹದಲ್ಲಿ ಸುಖವನ್ನು ಪಡೆಯಲು ತೊಡಗಿರಬಹುದು, ಇನ್ಯಾರೋ ಮನಸ್ಸಿನಲ್ಲಿ ಆನಂದವನ್ನು ಪಡೆಯುತ್ತಿರಬಹುದು ಮತ್ತು ಮತ್ಯಾರೋ ಆತ್ಮನಲ್ಲಿ ಸಂತೋಷವನ್ನು ಪಡೆಯುತ್ತಿರಬಹುದು. ಆದರೂ ಅವರೆಲ್ಲರೂ ಶುದ್ಧ ಭಕ್ತಿಸೇವೆಯನ್ನು ಸಲ್ಲಿಸುವರು ಎಂದು ಆತ್ಮಾರಾಮವನ್ನು ಕುರಿತ ಶ್ಲೋಕದಲ್ಲಿ ಶ್ರೀ ಚೈತನ್ಯರು ವಿವರಿಸಿದ್ದಾರೆ – ಕುರ್ವಂತಿ ಅಹೈತುಕೀಂ ಭಕ್ತಿಂ, ಇತ್ಥಂ ಭೂತ ಗುಣೋ ಹರಿಃ. ಈ ಎಲ್ಲ ಆತ್ಮಾರಾಮರು ದೇವೋತ್ತಮ ಪರಮ ಪುರುಷನಿಗೆ ಭಕ್ತಿಸೇವೆ ಸಲ್ಲಿಸುವರು. ಏಕೆ? ಏಕೆಂದರೆ ದೇವೋತ್ತಮ ಪರಮ ಪುರುಷನಲ್ಲಿ ಅದ್ಭುತ ಅಲೌಕಿಕ ಗುಣಗಳು ತುಂಬಿವೆ.

      ಆದರೆ ಇಲ್ಲಿ ಪ್ರಭುಪಾದರು ವಿವರಿಸುತ್ತಿದ್ದಾರೆ. ಆತ್ಮಾರಾಮವನ್ನು ಇತರರನ್ನು ಕುರಿತು ಹೇಳುತ್ತಿಲ್ಲ. ದೇಹದಲ್ಲಿ ಸುಖವನ್ನು ಪಡೆಯುವವರ ಬಗೆಗೆ, ಮನಸ್ಸಿನಲ್ಲಿ ಆನಂದಿಸುವವರ ಬಗೆಗೆ ಇಲ್ಲಿ ಅವರು ಉಲ್ಲೇಖಿಸುತ್ತಿಲ್ಲ. ಇಲ್ಲಿ ಆತ್ಮಾರಾಮವನ್ನು ಯಾರ ಮನಸ್ಸು ಸಂಪೂರ್ಣವಾಗಿ ಭಗವಂತನ ಚರಣಕಮಲದಲ್ಲಿ ನೆಲೆಸಿರುವುದೋ ಅಂತಹವರ ಬಗೆಗೆ ಹೇಳಲಾಗುತ್ತಿದೆ.  ಶ್ರೀಲ ಪ್ರಭುಪಾದರ ವಿವರವು ಕುತೂಹಲದಾಯಕವಾಗಿದೆ. ಆತ್ಮಾರಾಮ ಎಂದರೆ “ಆತ್ಮನಲ್ಲಿ ಯಾರು ಸಂತೋಷಪಡುವರೋ” ಅಥವಾ “ಯಾರು ಆಧ್ಯಾತ್ಮಿಕ ವಾತಾವರಣದಲ್ಲಿ ಆನಂದಿಸುವರೋ” ಅವರು ಎಂದು ಶ್ರೀಲ ಪ್ರಭುಪಾದರು ಹೇಳುತ್ತಿದ್ದಾರೆ.

      “ಲೌಕಿಕ ದೃಷ್ಟಿಯಿಂದ ಆತ್ಮಾ ಎಂದರೆ ದೇಹ ಅಥವಾ ಮನಸ್ಸು.” ಭಿನ್ನ ವೇದಿಕೆಗಳಲ್ಲಿ ಆತ್ಮ ಎಂದರೆ ದೇಹ ಎಂದು ಅರ್ಥ. ದೇಹ ಪ್ರಜ್ಞೆ ಉಳ್ಳವರಿಗೆ ಆತ್ಮ ಎಂದರೆ ದೇಹ. ಮಾನಸಿಕ ವೇದಿಕೆಯಲ್ಲಿರುವವರಿಗೆ ಆತ್ಮ ಎಂದರೆ ಮನಸ್ಸು. ಬೌದ್ಧಿಕ ವೇದಿಕೆಯಲ್ಲಿರುವವರಿಗೆ ಆತ್ಮ ಎಂದರೆ ಬುದ್ಧಿ. ಆದರೆ ದೇವೋತ್ತಮ ಪರಮ ಪುರುಷನ ಚರಣಕಮಲದ ಮೇಲೆ ಯಾರ ಮನಸ್ಸು ನೆಲೆಸಿರುವುದೋ ಅಂತಹವರ ಬಗೆಗೆ ಉಲ್ಲೇಖಿಸುವಾಗ ಆತ್ಮಾರಾಮ ಎಂದರೆ “ಪರಮಾತ್ಮನೊಂದಿಗೆ ಸಂಬಂಧಿಸಿದಂತೆ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಯಾರು ನೆಲೆಸಿರುವವರೋ ಅವರು” ಎಂದು ಶ್ರೀಲ ಪ್ರಭುಪಾದರು ವಿವರಿಸುತ್ತಿದ್ದಾರೆ. ಆದುದರಿಂದ ಇಲ್ಲಿ ಆತ್ಮಾರಾಮವನ್ನು ಯಾರ ಮನಸ್ಸು ಭಗವಂತನ ಚರಣಕಮಲದಲ್ಲಿ ನೆಲೆಸಿರುವುದೋ, ಅಂತಹವರನ್ನು ಕುರಿತು ಹೇಳಲಾಗಿದೆ. 

ಇಂದ್ರಿಯಗಳ ಪರಿವರ್ತನೆ

      ಯಾರ ಮನಸ್ಸು ಭಗವಂತನ ಚರಣಕಮಲದಲ್ಲಿ ನೆಲೆಸಿರುವುದೋ ಅವರು ಎಂದು ಹೇಳಿದಾಗ ನಾವು ಏನು ಅರ್ಥ ಮಾಡಿಕೊಳ್ಳುತ್ತೇವೆ? “ಪರಮಾತ್ಮನ ಸಂಬಂಧದಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಯಾರು ನೆಲೆ ಕಂಡುಕೊಂಡಿರುವರೋ ಅವರು” ಎಂದು ಶ್ರೀಲ ಪ್ರಭುಪಾದರು ಹೇಳುತ್ತಿದ್ದಾರೆ. ಇದು ತುಂಬ ಮುಖ್ಯ. ಭಗವಂತನ ಚರಣಕಮಲದಲ್ಲಿ ಮನಸ್ಸನ್ನು ನೆಲೆಗೊಳಿಸುವುದು ಎಂಬ ಅಂಶವು ದೇವೋತ್ತಮನನ್ನು ತೃಪ್ತಿ ಪಡಿಸುವ ವಿವಿಧ ಚಟುವಟಿಕೆಗಳಲ್ಲಿ ನಮ್ಮ ಇಂದ್ರಿಯಗಳನ್ನು ಉಪಯೋಗಿಸುವುದು ಎಂದರ್ಥ. ಯೋಗ, ಜಿಮ್ನಾಸ್ಟಿಕ್ಸ್ ಮತ್ತು ದೈಹಿಕ ಆಸನಗಳು, ಪ್ರಾಣಾಯಾಮದಂತಹ ಆಚರಣೆಗಳಲ್ಲಿ ಮೊದಲು ಮನಸ್ಸನ್ನು ಇತರ ಚಟುವಟಿಕೆಗಳಿಂದ ಬೇರ್ಪಡಿಸಲಾಗುವುದು ಮತ್ತು ಅನಂತರ ಭಗವಂತನ ರೂಪದಲ್ಲಿ ನೆಲೆಸಲು ಪ್ರಯತ್ನಿಸಲಾಗುವುದು. ಆದರೆ ಭಕ್ತಿಸೇವೆಯಲ್ಲಿ ಅದು ಸಂಪೂರ್ಣವಾಗಿ ಭಿನ್ನ. ಚಟುವಟಿಕೆಗಳನ್ನು ಪ್ರತ್ಯೇಕಿಸುವ ಬದಲು ಅವುಗಳನ್ನು ಭಗವಂತನ ಸೇವೆಗೆ ಪರಿವರ್ತಿಸಲು ಭಕ್ತರಿಗೆ ಸೂಚಿಸಲಾಗುವುದು. ಬೇರೆ ಬೇರೆ ಚಟುವಟಿಕೆಗಳಿಂದ ಪ್ರತ್ಯೇಕಗೊಳ್ಳುವ ಅಗತ್ಯವಿಲ್ಲ. ಕಣ್ಣುಗಳು ನೋಡಲೆಂದು ಇವೆ. ನೋಡುವ ಸಾಮರ್ಥ್ಯವನ್ನು ಮೊಟಕು ಮಾಡಲು ಪ್ರಯತ್ನಿಸುವ ಬದಲು ದೇವಸ್ಥಾನಕ್ಕೆ ಹೋಗಿ ಭಗವಂತನ ಸುಂದರ ವಿಗ್ರಹವನ್ನು ನೋಡಿ ಎಂದು ಭಕ್ತರಿಗೆ ತಿಳಿಸಲಾಗುವುದು. ಮಂದಿರದಲ್ಲಿ ಭಗವಂತನ ಸುಂದರ ರೂಪವನ್ನು ನೋಡುವುದು ರೂಢಿಯಾದಾಗ, ಮನಸ್ಸು ಭಗವಂತನ ಚರಣಕಮಲದಲ್ಲಿ ಮಗ್ನವಾಗುತ್ತದೆ. ಅದೇ ರೀತಿ ಕಾಲುಗಳು. ಸುಮ್ಮನೆ ಒಂದು ಕಡೆಯಲ್ಲಿ ಕುಳಿತು ಸಮಾಧಿ  ಸ್ಥಿತಿಗೆ ಪ್ರಯತ್ನಿಸುವ ಬದಲು ಮಂದಿರಕ್ಕೆ ಹೋಗಲು ಭಕ್ತರಿಗೆ ಸಲಹೆ ಮಾಡಲಾಗುವುದು. ಕೈಗಳನ್ನು ಭಕ್ತಿಸೇವೆಗೆ ಬಳಸಲು ತಿಳಿಸಲಾಗುವುದು. ಉದಾಹರಣೆಗೆ ಮಂದಿರವನ್ನು ಸ್ವಚ್ಛ ಮಾಡುವುದು, ಗುಡಿಸುವುದು. ಹೀಗೆ ಇತರ ಇಂದ್ರಿಯಗಳನ್ನು, ಮುಖ್ಯವಾಗಿ ಮನಸ್ಸನ್ನು ಭಗವಂತನ ಸೇವೆಯಲ್ಲಿ ತೊಡಗಿಸಿಕೊಂಡರೆ ವ್ಯಕ್ತಿಯು ಯಾವುದೇ ಲೌಕಿಕ ಪ್ರಭಾವದಿಂದ ಮುಕ್ತನಾಗುವನು. ಶ್ರೀಲ ಪ್ರಭುಪಾದರು ಇದನ್ನೇ ಇಲ್ಲಿ ವಿವರಿಸುತ್ತಿದ್ದಾರೆ.

      “ಪರಮಾತ್ಮನು ದೇವೋತ್ತಮ ಪರಮ ಪುರುಷ ಮತ್ತು ಜೀವಾತ್ಮನು ಜೀವಿ. ಅವರು ಸೇವೆ ಮತ್ತು ಅನುಗ್ರಹಗಳಲ್ಲಿ ಪರಸ್ಪರ ತೊಡಗಿಕೊಂಡಾಗ ಜೀವಿಯು ಆತ್ಮಾರಾಮ ಸ್ಥಿತಿಯಲ್ಲಿ ಇರುತ್ತಾನೆ.” ಇದು ವಾಸ್ತವವಾಗಿ ಆತ್ಮಾರಾಮ. ಇದು ಏಕಪಕ್ಷೀಯವಲ್ಲ, ಪರಸ್ಪರ ಕ್ರಿಯೆ. ಪ್ರೀತಿಯ ಭಕ್ತಿಸೇವೆ. ಭಕ್ತನು ಸೇವೆಯನ್ನು ಸಲ್ಲಿಸುತ್ತಾನೆ ಮತ್ತು ಭಗವಂತನು ಅನುಗ್ರಹಿಸುತ್ತಾನೆ.

ಸತ್ಯದ ಅರಿವು

      ಈ ಆತ್ಮಾರಾಮ ಸ್ಥಾನವನ್ನು ಯಾರು ಪಡೆಯಬಹುದು ಎನ್ನುವುದನ್ನು ಶ್ರೀಲ ಪ್ರಭುಪಾದರು ವಿವರಿಸುತ್ತಾರೆ. ಇದೂ ಕೂಡ ತುಂಬ ಮುಖ್ಯವಾದುದು. “ಸತ್ಯವನ್ನು ಅದಿರುವಂತೆಯೇ ಬಲ್ಲವರು ಆತ್ಮಾರಾಮ ಸ್ಥಾನವನ್ನು ಪಡೆಯಬಹುದು.” ಯಾವುದು ಆ ಸತ್ಯ? “ಸತ್ಯವು ಏನೆಂದರೆ ದೇವೋತ್ತಮ ಪರಮ ಪುರುಷನು ಭೋಕ್ತೃ ಮತ್ತು ಜೀವಿಗಳು ಅವನ ಸೇವೆ ಮತ್ತು ಆನಂದಕ್ಕಾಗಿಯೇ ಇರುವುದು.” ಇದು ವಾಸ್ತವವಾಗಿ ಪರಮಸತ್ಯನನ್ನು ಅರಿಯುವುದಾಗಿದೆ. ಪರಮ ಪ್ರಭು ಇದ್ದಾನೆ; ಅವನೇ ಭೋಕ್ತೃ; ನಾನು ಜೀವಿ; ನಾನು ಅವನ ವಿಭಿನ್ನಾಂಶ; ನಾನು ಅವನ ಶಾಶ್ವತ ಸೇವಕ ಮತ್ತು ಅದರಿಂದ ನಾನು ನಿರಂತರವಾಗಿ ಅವನ ಸೇವೆಯಲ್ಲಿ ತೊಡಗಬೇಕು. ವಾಸ್ತವವಾಗಿ ಇದನ್ನು ಆತ್ಮಾರಾಮ ಸ್ಥಿತಿ ಎಂದು ಕರೆಯುತ್ತಾರೆ. ಇದು ನಿಜವಾದ ಆತ್ಮಾರಾಮ ಸ್ಥಾನ.

      ಆ ರೀತಿ ತೊಡಗಿಕೊಂಡಿರುವುದರ ಫಲವನ್ನು ಪ್ರಭುಪಾದರು ವಿವರಿಸುತ್ತಾರೆ, “ಈ ಸತ್ಯವನ್ನು ತಿಳಿದವರು ಮತ್ತು ತಮ್ಮ ಎಲ್ಲ ಸಂಪನ್ಮೂಲಗಳನ್ನು ಭಗವಂತನ ಸೇವೆಯಲ್ಲಿ ತೊಡಗಿಸಲು ಪ್ರಯತ್ನಿಸುವವರು ಎಲ್ಲ ಲೌಕಿಕ ಪ್ರತಿಕ್ರಿಯೆ ಮತ್ತು ಲೌಕಿಕ ಪ್ರಕೃತಿಯ ಗುಣಗಳ ಪ್ರಭಾವದಿಂದ ಪಾರಾಗುತ್ತಾರೆ.” ಲೌಕಿಕ ಪ್ರಕೃತಿಯ ಜೊತೆಗೆ ಸಂಪರ್ಕಕ್ಕೆ ಬಂದವರು ಅದರಿಂದ ಹೊರಬರುವುದು ತುಂಬ ಕಷ್ಟ. ಲೌಕಿಕ ಪ್ರಕೃತಿಯಿಂದ ಪ್ರಭಾವಿತರಾಗದಿರುವುದೂ ತುಂಬ ಕಷ್ಟ.  ಬ್ರಹ್ಮನಿಗೆ ಇದ್ದ ಭಯ ಅದೇ. ಆದುದರಿಂದ ಬ್ರಹ್ಮನು ದೇವರಲ್ಲಿ ಪ್ರಾರ್ಥಿಸುತ್ತಿದ್ದಾನೆ, “ನನ್ನ ಪ್ರಭುವೇ, ಈ ಭಿನ್ನವಾದ ಲೌಕಿಕ ವಸ್ತುಗಳನ್ನು ಸೃಷ್ಟಿಸಲು ನೀನು ನನಗೆ ಆದೇಶ ನೀಡಿರುವೆ. ಆದರೆ ಈ ಲೋಕದಲ್ಲಿ ನಾನು ಸಿಕ್ಕಿಬೀಳಬಾರದು. ನಾನು ಹೆಮ್ಮೆಯಿಂದ ಬೀಗಬಾರದು.”

ಭಗವಂತನ ಅನುಗ್ರಹ

      ಆದರೆ ವಾಸ್ತವವಾಗಿ ಲೌಕಿಕ ಪ್ರಕೃತಿಯಿಂದ ಪ್ರಭಾವಿತರಾಗದಿರಬೇಕಾದರೆ ನಾವು ನಿಜವಾಗಿಯೂ ಪರಮಾತ್ಮನ ಸಾಧನವಾದ ಸೇವಕರು ಎಂಬ ಗ್ರಹಿಕೆಯನ್ನು ಮರೆಯಬಾರದು. ಪ್ರತಿಯೊಂದೂ ಕೂಡ ಪರಮ ಪ್ರಭುವಿನ ಅನುಗ್ರಹ. ನಾವು ಭಕ್ತಸೇವೆಯಲ್ಲಿ ತೊಡಗುತ್ತೇವೆ. ಭಗವಂತನು ಬೃಹತ್‌ ಮಂದಿರವನ್ನು ಅನುಗ್ರಹಿಸುತ್ತಾನೆ. ಬ್ರಹ್ಮನು ಮಾಡಿದಂತೆ ಭಗವಂತನು ಇಡೀ ಐಹಿಕ ವಿಶ್ವದ ಸೃಷ್ಟಿಯನ್ನು ಅನುಗ್ರಹಿಸುತ್ತಾನೆ. ಬ್ರಹ್ಮನು ಕಾಪಾಡಿಕೊಳ್ಳುತ್ತಿದ್ದಂತೆ ನಾವು ನಮ್ರತೆಯ ಸ್ಥಿತಿಯನ್ನು ಕಾಪಾಡಿಕೊಳ್ಳಬೇಕು. ಆದುದರಿಂದ ಪ್ರಭುಪಾದರು ಹೇಳುತ್ತಿದ್ದರು – ಭಕ್ತಿಸೇವೆಯಲ್ಲಿ ನೀವು ಯಾವ ರೀತಿ ಪರಿಣತರಾಗಬೇಕೆಂದರೆ ನೀವು ಮೀನನ್ನು ಹಿಡಿದರೂ ತೊಯಿಸಿಕೊಳ್ಳಬಾರದು.

      ಭಗವಂತನ ಸೇವೆಗೆ ಬಳಸುವ ಬದಲು ನಾವು ಇನ್ನೋವಾದಲ್ಲಿ ಸುತ್ತಾಡಿದರೆ ಜನರು ನಮಗೆ ಗೌರವ ನೀಡುವರೆಂದು ನಾವು ಆರಂಭದ ದೆಶೆಯಲ್ಲಿ ಯೋಚಿಸಲು ಪ್ರಾರಂಭಿಸಿದರೆ, ವಾಸ್ತವವಾಗಿ ನಾವು ಲೌಕಿಕ ವಸ್ತುಗಳಿಗಾಗಿ ಮೈಮರೆಯುತ್ತೇವೆ.

ಕೃಷ್ಣನೇ ಕರ್ತೃ

      ನಾವು ಸರಿಯಾದ ಪ್ರಜ್ಞೆಯಿಂದ ಭಗವಂತನ ಸೇವೆಯಲ್ಲಿ ತೊಡಗಿದರೆ, ಸೂಕ್ತ ಸಮಯದಲ್ಲಿ ಪ್ರಭುವು ಪ್ರಕಟಗೊಳ್ಳುತ್ತಾನೆ. ಅಲ್ಲವೇ? ನಾವು ಯೋಜನೆಯ ಹಿಂದೆ ಇಲ್ಲ. ಅದನ್ನು ಪೂರ್ಣಗೊಳಿಸಬೇಕೆಂದು ನಾವು ಅದರ ಹಿಂದೆ ಓಡುತ್ತಿಲ್ಲ. ಅದು ಭಗವಂತನ ಮೇಲೆ ಅವಲಂಬಿತ. ಶ್ರೀ ಮಧು ಪಂಡಿತ ದಾಸ ಅವರು ವಿವರಿಸಿದಂತೆ, ಯೋಜನೆಯನ್ನು ಏಕೆ ಪೂರ್ಣಗೊಳಿಸಬೇಕು ಎನ್ನುವುದನ್ನು ನಾವೆಲ್ಲ ಭಕ್ತರು ಅರ್ಥಮಾಡಿಕೊಳ್ಳಬೇಕು. ಭಗವಂತನಿಗೆ ಅದು ಕಷ್ಟವೇ ಅಲ್ಲ. ಭಗವಂತನಿಗೆ ಇತರ ಅನೇಕ ಯೋಜನೆಗಳಿವೆ. ಯೋಜನೆಯೊಂದಿಗೆ ಪ್ರಭುವು ನಿಮ್ಮ ಆಧ್ಯಾತ್ಮಿಕ ಜೀವನವನ್ನೂ ರೂಪಿಸಬೇಕಲ್ಲವೇ? ಭಗವಂತನಿಗೆ ಇದು ಹೆಚ್ಚು ಮುಖ್ಯ. ಅವನಿಗೆ ಯಾವುದೂ ಕಷ್ಟವಲ್ಲ. ಸುದಾಮನಿಗೆ ಮಾಡಿದಂತೆ ಅವನು ಅದನ್ನು ಒಂದು ಕ್ಷಣದಲ್ಲಿ ಮಾಡಬಲ್ಲ. ಬೃಹತ್‌ ಅರಮನೆ ರೂಪುಗೊಂಡಿತ್ತಲ್ಲವೇ? ಆದುದರಿಂದ ಕೃಷ್ಣನಿಗೆ ಯಾವುದೂ ಕಷ್ಟವಲ್ಲ. ಆದರೆ ನಾವೆಲ್ಲರೂ ಭಿನ್ನವಾದ ಪರಿಸ್ಥಿತಿಯನ್ನು ಅನುಭವಿಸಬೇಕೆಂದು ಭಗವಂತನು ಇಚ್ಛಿಸುತ್ತಾನೆ. ನಾವು ಜನರ ಬಳಿಗೆ ಹೋಗುತ್ತೇವೆ ಮತ್ತು ಅಂತಿಮವಾಗಿ, “ಇದು ನಾನು ಮಾಡುವ ನನ್ನ ಪ್ರಯತ್ನವಲ್ಲ” ಎಂದು ಹೇಳುತ್ತೇವೆ. ಅನಂತರ ನಮಗೆ, “ಕೃಷ್ಣ, ನೀನು ಭೋಕ್ತೃ. ನೀನು ನಿಜವಾದ ಮಾಲೀಕ. ನೀನು ಅನುಗ್ರಹಿಸಿದಾಗ ಅದು ಬರುತ್ತದೆ.” ನಮ್ಮ ಆಧ್ಯಾತ್ಮಿಕ ಜೀವನವನ್ನು ರೂಪಿಸುವ ಇಚ್ಛೆ ಇರುವುದರಿಂದ ಕೃಷ್ಣನು ಈ ಮುಖ್ಯವಾದ ಅಂಶವನ್ನು ನಾವು ಅರ್ಥಮಾಡಿಕೊಳ್ಳಬೇಕೆಂದು ಬಯಸುತ್ತಾನೆ. ನಾವು ಅದನ್ನು ಅರ್ಥಮಾಡಿಕೊಳ್ಳಬೇಕು.

      ಆದುದರಿಂದ ಲೌಕಿಕ ಶಕ್ತಿಯನ್ನು ನಿರ್ವಹಿಸುವಾಗ ನಾವು ತುಂಬ ಜಾಗೃತರಾಗಿರಬೇಕು. ಆದುದರಿಂದ ನಮ್ಮ ಭಕ್ತಿ ಜೀವನದ ಆರಂಭದಲ್ಲಿ ನಾವು ಎಲ್ಲ ರೀತಿಯ ತಂತ್ರಜ್ಞಾನಗಳು, ಎಲ್ಲ ರೀತಿಯ ಸಾಮಾಜಿಕ ಮಾಧ್ಯಮಗಳನ್ನು ಬಳಸಲು ಕಾತರದಿಂದ ಇರಬಾರದು.

ವಿವೇಚನೆ ಬೇಕು

      ವಿವೇಚನೆಯೊಂದಿಗೆ ನಾವು ಹೆಚ್ಚು ಲೌಕಿಕ ಶಕ್ತಿಯನ್ನು ನಿರ್ವಹಿಸಬಹುದು. ಇಲ್ಲವಾದರೆ ನಾವು ಹೋಲಿಕೆಯ ಮನೋಭಾವಕ್ಕೆ ಸಿಲುಕಬಹುದು – “ಆ ಭಕ್ತರಿಗೆ ಕೊಡಲಾಗಿದೆ. ಕಾರ್‌ ಇದೆ. ಅವರಿಗೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ನೀಡಲಾಗಿದೆ. ಆಧುನಿಕ ಮೊಬೈಲ್‌ ಫೋನ್‌ ಕೊಡಲಾಗಿದೆ… ಈ ಎಲ್ಲವೂ.” ನಾವು ಯೋಚಿಸುತ್ತಿರಬೇಕಾದುದು ಅದಲ್ಲ. ನಾವು ಜ್ಞಾನವನ್ನು ಪಡೆಯುತ್ತಿದ್ದೇವಾ, ನಾವು ಈ ಲೌಕಿಕ ಲೋಕದಿಂದ ನಿರ್ಲಿಪ್ತರಾಗಿದ್ದೇವಾ ಎನ್ನುವುದರ ಬಗೆಗೆ ನಾವು ಚಿಂತಿಸಬೇಕು. ಅದು ಮುಖ್ಯ.

      ನಾವು ಜ್ಞಾನವನ್ನು ಪಡೆದಾಗ ಮತ್ತು ನಿರ್ಲಿಪ್ತರಾದಾಗ ನೀವು ಯಾವುದೇ ರೀತಿಯಲ್ಲಿ ಲೌಕಿಕ ಶಕ್ತಿಯನ್ನು ನಿರ್ವಹಿಸಿದರೂ ಅದು ನಿಮಗೆ ಪರಿಣಾಮ ಉಂಟುಮಾಡುವುದಿಲ್ಲ. ಶ್ರೀಲ ಪ್ರಭುಪಾದರು ಲೌಕಿಕ ಶಕ್ತಿಯನ್ನು ನಿರ್ವಹಿಸುವಾಗ ಅದು ಯಾವ ರೀತಿಯಲ್ಲಿಯೂ ಅವರ ಮೇಲೆ ಪ್ರಭಾವ ಬೀರುವುದಿಲ್ಲ. ಬ್ರಹ್ಮನು ಲೌಕಿಕ ಶಕ್ತಿಯನ್ನು ನಿರ್ವಹಿಸುವಾಗ ಅದು ಯಾವ ರೀತಿಯಿಂದಲೂ ಅವನ ಮೇಲೆ ಪರಿಣಾಮ ಉಂಟುಮಾಡುವುದಿಲ್ಲ. ಆದರೆ ನಮ್ಮ ಕಲುಷಿತ ಸ್ಥಿತಿಯಲ್ಲಿ, ಸ್ಥಾನದಲ್ಲಿ ನಾವು ನಿಜವಾದ ಆಧ್ಯಾತ್ಮಿಕ ಗುಣಗಳಿಗೆ ಅಪೇಕ್ಷಿಸುವ ಬದಲಿಗೆ ಇದನ್ನು ಆಶಿಸಿದಾಗ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಆದುದರಿಂದ ನಾವೆಲ್ಲರೂ ನಮ್ಮ ಸಾಧನೆ ಮತ್ತು ಸೇವೆಯ ಮೇಲೆ ಪ್ರಮುಖವಾಗಿ ಕೇಂದ್ರೀಕರಿಸುವುದು ತುಂಬ ಅಗತ್ಯ. ವಾಟ್ಸ್ಅಪ್‌ ಇಲ್ಲದೆಯೂ ನಾವು  ಬೋಧಿಸಬಹುದು, ಅವುಗಳು ಇಲ್ಲದೆಯೂ ನಾವು ಬೋಧಿಸಬಹುದು. ಅದು ಅಗತ್ಯವಾದರೆ, ನಾವು ಖಂಡಿತ ಅದನ್ನು ಉಪಯೋಗಿಸೋಣ. ಆದರೆ ಅವುಗಳನ್ನು ನಿರ್ವಹಿಸುವಾಗ ನಾವು ತುಂಬ ಜಾಗ್ರತೆಯಿಂದ ಇರಬೇಕು. ಅಧಿಕೃತತೆ ಇದ್ದರೆ, ಭಗವಂತನು ಬ್ರಹ್ಮನಿಗೆ ಅಧಿಕಾರ ನೀಡಿದಾಗ ಅವನಿಗೆ ನಿರ್ವಹಿಸುವುದು ತುಂಬ ಸುಲಭವಾಯಿತು. ಆದುದರಿಂದ ನಮ್ಮ ಭಕ್ತಿಸೇವೆಯ ಜೀವನದ ಲೌಕಿಕ ಅಂಶಗಳನ್ನು ನಿರ್ವಹಿಸಲು ನಮ್ಮ ಹಿರಿಯ ಅಧಿಕಾರಿಗಳು ಅನುಮತಿ ನೀಡುವವರೆಗೆ ಕಾಯಬೇಕು. ಇಲ್ಲವಾದರೆ ಅವುಗಳಿಗೆ ನಾವು ಅಪೇಕ್ಷಿಸಬಾರದು. ಅದು ತುಂಬ ಮುಖ್ಯ.

ಈ ಲೇಖನ ಶೇರ್ ಮಾಡಿ