ಆಧ್ಯಾತ್ಮಿಕ ಗ್ರಹಕ್ಕೊಂದು ಆಹಾರ ಕ್ರಮ

ಶ್ರೀಕೃಷ್ಣನು ಭಗವದ್ಗೀತೆಯಲ್ಲಿ  ಸಸ್ಯಾಹಾರ ತತ್ತ್ವದ ಅಂತಿಮ ಉದ್ದೇಶವನ್ನು ಸ್ಪಷ್ಟಪಡಿಸುತ್ತಾನೆ: “ಯಾರಾದರೂ ನನಗೆ ಪ್ರೀತಿ ಮತ್ತು ಭಕ್ತಿಯಿಂದ ಒಂದು ಎಲೆ, ಒಂದು ಹೂವು, ಒಂದು ಹಣ್ಣು ಅಥವಾ ಒಂದಷ್ಟು ನೀರನ್ನು ಅರ್ಪಿಸಿದರೆ ನಾನು ಅದನ್ನು ಸ್ವೀಕರಿಸುತ್ತೇನೆ.” (ಭಗವದ್ಗೀತೆ 9.26). ಮೂಲತಃ ಸಸ್ಯಾಹಾರ ತತ್ತ್ವ ಎಂದರೆ ಅಹಿಂಸೆ, ಪ್ರಾಣಿಗಳನ್ನು ರಕ್ಷಿಸುವುದು. ಆದರೆ ಕೃಷ್ಣನಿಗೆ ಸಸ್ಯಾಹಾರವನ್ನು ಅರ್ಪಿಸಿ ಅನಂತರ ಅದನ್ನು ಅವನ ಕೃಪೆ (ಪ್ರಸಾದ) ಎಂದು ಸ್ವೀಕರಿಸುವುದರಲ್ಲಿ ಬಹಳ ಅರ್ಥವಿದೆ : ಭಕ್ತಿಯೋಗ ಅಥವಾ ದೇವೋತ್ತಮ ಪರಮ ಪುರುಷನನ್ನು ಕುರಿತಂತೆ ಪ್ರಜ್ಞಾವಂತನಾಗುವುದು. ದೇವೋತ್ತಮನ ಪವಿತ್ರ ನಾಮಗಳನ್ನು – ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ / ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ – ಜಪಿಸುವುದರೊಂದಿಗೆ ಸೇರಿದಾಗ ಸಸ್ಯಾಹಾರಿ ತತ್ತ್ವವು ಕೇವಲ ನೈತಿಕ ಸಿದ್ಧಾಂತ ಆಗುವ ಬದಲು ಮಾನವ ಜೀವನ ಕ್ರಮವಾಗುತ್ತದೆ. ಅದು ಆಧ್ಯಾತ್ಮಿಕ ಸಾಕ್ಷಾತ್ಕಾರವಾಗಿ ಈ ಲೋಕದಲ್ಲಿ ಅತ್ಯಂತ ಸರಳ ಮತ್ತು ಆನಂದ ಮಾರ್ಗವಾಗುತ್ತದೆ.

      ಕೇವಲ ಅತ್ಯಂತ ತಾಜಾ, ಪೌಷ್ಟಿಕಾಂಶದ ಮತ್ತು ಒಳ್ಳೆಯ ಆಹಾರಗಳನ್ನು ತಯಾರಿಸಿ ಕೃಷ್ಣನಿಗೆ ಅರ್ಪಿಸಲಾಗುವುದು. ನಾವು ವೈಜ್ಞಾನಿಕ ಮನೋಭಾವ ಹೊಂದಿರುವ ಕಾರಣ ಕೃಷ್ಣ – ಪ್ರಸಾದವನ್ನು ಸ್ವೀಕರಿಸುವುದರಿಂದ ಉಂಟಾಗುವ ಪ್ರಯೋಜನಗಳ ಬಗೆಗೆ –  ಕಟ್ಟುನಿಟ್ಟಿನ ಮತ್ತು ಆಧ್ಯಾತ್ಮಿಕ ಮನೋಭಾವದ ಸಸ್ಯಾಹಾರವನ್ನು ಕುರಿತಂತೆ ಜಾಗರೂಕತೆಯಿಂದ ವಿಶ್ಲೇಷಿಸಬೇಕು. ಸಸ್ಯಾಹಾರ ತತ್ತ್ವಕ್ಕೆ ಇರುವ ಮುಖ್ಯ ಆಕ್ಷೇಪಗಳನ್ನೂ ನಾವು ಪರಿಶೀಲಿಸುತ್ತೇವೆ. ಮಾಂಸ, ಮೀನು ಮತ್ತು ಮೊಟ್ಟೆಗಳನ್ನು ಸಂಪೂರ್ಣವಾಗಿ ವರ್ಜಿಸಿರುವವರನ್ನು ನಾವು “ಕಟ್ಟುನಿಟ್ಟಿನ ಸಸ್ಯಾಹಾರಿ” ಎಂದು ನಿರೂಪಿಸಬಹುದು. `ವೀಗನ್‌’ ಎಂದು ಕರೆಯುವ ಕೆಲವು ಸಸ್ಯಾಹಾರಿಗಳು ಮಾಂಸವನ್ನು ಮಾತ್ರವಲ್ಲ ಹಾಲನ್ನೂ ವರ್ಜಿಸುತ್ತಾರೆ. ಏಕೆಂದರೆ ಅವರಿಗೆ ಕೀಟನಾಶಕ ಮತ್ತು ಕೊಲೆಸ್ಟರಾಲ್‌ನ ಭಯ. ಆದರೆ ಹಣ್ಣು, ಧಾನ್ಯ ಮತ್ತು ತರಕಾರಿಗಳಲ್ಲಿ ಕೊಲೆಸ್ಟರಾಲ್‌ ಇಲ್ಲ. ಆದುದರಿಂದ ಶಿಫಾರಸು ಮಾಡಿರುವ ಗರಿಷ್ಠ ಪ್ರಮಾಣದ ಕೊಲೆಸ್ಟರಾಲ್‌ ಮೀರಿದಂತೆ ಸಸ್ಯಾಹಾರಿಯು ಪ್ರತಿ ದಿನ ಕಾಲು ಲೀಟರ್‌ ಹಾಲು ಮತ್ತು ಒಂದಷ್ಟು ಚೀಸ್‌ ಧಾರಾಳವಾಗಿ ಸೇವಿಸಬಹುದು. ಹಾಲನ್ನು ಕುಡಿಯದ ವ್ಯಕ್ತಿಯು ತನಗೆ ಅಗತ್ಯವಾದ ವಿಟಮಿನ್‌ ಬಿ12 ಮತ್ತು ಕ್ಯಾಲ್ಸಿಯಂ ಅನ್ನು ಪಡೆಯಲು ಅಗಾಧ ಪ್ರಮಾಣದಲ್ಲಿ ಪಾಚಿ, ಕಡಲ ಕಳೆ  ಅಥವಾ ಮಾತ್ರೆಗಳನ್ನು ನುಂಗುವ ಶಿಕ್ಷೆ ಅನುಭವಿಸಬೇಕು. ಕೀಟನಾಶಕಗಳ ವಿಷಯವನ್ನು ತೆಗೆದುಕೊಂಡರೆ, ರಾಸಾಯನಿಕ ಗೊಬ್ಬರವನ್ನು ಬಳಸುವುದರಿಂದ ನಾವು ತಿನ್ನುವ ಪ್ರತಿಯೊಂದರಲ್ಲಿಯೂ ಸ್ವಲ್ಪವಾದರೂ ಕೀಟನಾಶಕವಿರುತ್ತದೆ.

      ಮೊಟ್ಟೆ – ಸಸ್ಯಾಹಾರಿಗಳೆಂದು ಕರೆದುಕೊಳ್ಳುವವರನ್ನು ಕಟ್ಟುನಿಟ್ಟಿನ ಸಸ್ಯಾಹಾರಿಗಳೆಂದು ಕರೆಯುವುದು ಸಾಧ್ಯವಿಲ್ಲ. ಏಕೆಂದರೆ ಅವರು ಮೊಟ್ಟೆಗಳನ್ನು ತಿನ್ನುತ್ತಾರೆ. ಎಷ್ಟಾದರೂ ಅದು ಕ್ಯಾಲ್ಸಿಯಂ ಮುಚ್ಚಿದ ಮಾಂಸ, ಸಮರ್ಥನೀಯವಲ್ಲದ ಸ್ಥಿತಿಯಲ್ಲಿ ಕೃತಕವಾಗಿ, ಅಧಿಕವಾಗಿ ಉತ್ಪಾದಿಸಿದ್ದು. ಆದರೆ ಲ್ಯಾಕ್ಟೋ (ಹಾಲು ಕುಡಿಯುವ) ಸಸ್ಯಾಹಾರಿ ಎಂಬ ಪದ ಸ್ವೀಕೃತವಾದುದು.

ಮಾಂಸಾಹಾರಿಗಳ ಆಕ್ಷೇಪ

ಶಾಕಾಹಾರಿಗಳು ಗಿಡಗಳನ್ನು ಕೊಲ್ಲಬೇಕು ಮತ್ತು ಅದೂ ಕೂಡ ಹಿಂಸೆಯಾಗುತ್ತದೆ ಎನ್ನುವುದೇ ಮಾಂಸಾಹಾರಿಗಳು ಸಸ್ಯಾಹಾರಿಗಳ ವಿರುದ್ಧ ಮಾಡುವ ಒಂದು ಬಲವಾದ ಆಕ್ಷೇಪಣೆ. ಆದರೆ ಗೋವಿನಂತಹ ಚೇತನಾತ್ಮಕ ಪ್ರಾಣಿಯನ್ನು ಕೆಳಮಟ್ಟದ ಸಸ್ಯಗಳೊಂದಿಗೆ ಹೋಲಿಸುವುದು ಅಥವಾ ಸರಿಗಟ್ಟುವುದು ಅವಿವೇಕ. ಅಲ್ಲದೆ, ಈ ಸಸ್ಯಾಹಾರಗಳಲ್ಲಿ ಮಾತ್ರ ಸಿಗುವ ವಿಟಮಿನ್‌ ಮತ್ತು ಖನಿಜಗಳು ದೇಹ ಮತ್ತು ಆತ್ಮವನ್ನು ಜೊತೆಯಾಗಿರಿಸಲು ಅಗತ್ಯವಾಗಿರುವುದರಿಂದ ತರಕಾರಿ, ಹಣ್ಣು, ಧಾನ್ಯ ಇತ್ಯಾದಿಗಳನ್ನು ನಾವು ತಿನ್ನಲೇಬೇಕು. ಖಂಡಿತವಾಗಿಯೂ ಗಿಡಗಳೂ ಗೋವುಗಳಷ್ಟೇ ಜೀವಂತವಾಗಿವೆ. ಗಿಡಗಳಿಗೂ ಭಾವನೆಗಳಿವೆ ಎನ್ನುವುದನ್ನು ಆಧುನಿಕ ಪ್ರಯೋಗಗಳು ಸಾಬೀತುಪಡಿಸಿವೆ. ಎಲ್ಲ ಜೀವ ರೂಪಗಳೂ ಗುಣಾತ್ಮಕವಾಗಿ ಪರಸ್ಪರ ಸಮಾನವಾದ ಆಧ್ಯಾತ್ಮಿಕ ಆತ್ಮಗಳನ್ನು ಹೊಂದಿವೆ ಎಂದು ಭಗವದ್ಗೀತೆಯು ಸ್ಪಷ್ಟಪಡಿಸಿದೆ. ಆದರೂ ನಾವು ಏನನ್ನಾದರೂ ತಿನ್ನಲೇಬೇಕು; ಮತ್ತು ಜೀವೋ ಜೀವಸ್ಯ ಜೀವನಂ, ಅಸ್ತಿತ್ವದ ಹೋರಾಟದಲ್ಲಿ ಒಂದು ಜೀವಿಯು ಮತ್ತೊಂದರ ಆಹಾರವಾಗುತ್ತದೆ ಎಂದು ವೇದಗಳೂ ಹೇಳಿವೆ. ಆದುದರಿಂದ ಮಾನವೀಯ ದೃಷ್ಟಿಕೋನದಿಂದ ನೋಡಿದಾಗ, ಆಹಾರ ಕ್ರಮವನ್ನು ಆಯ್ಕೆ ಮಾಡಿಕೊಳ್ಳುವಾಗ ಸಂಪೂರ್ಣವಾಗಿ ಹತ್ಯೆಯನ್ನು ತಡೆಯಬೇಕೆನ್ನುವುದು ನಿಜವಾದ ಸಮಸ್ಯೆಯಲ್ಲ. ಆದರೆ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶ ಆಹಾರವನ್ನು ಪೂರೈಸುವಾಗ ಅತಿ ಕಡಮೆ ನೋವುಂಟುಮಾಡುವುದು ಹೇಗೆ ಎನ್ನುವುದೇ ನಿಜವಾದ ಪ್ರಶ್ನೆ. ಹಣ್ಣು, ಧಾನ್ಯ, ತರಕಾರಿಗಳು ಮತ್ತು ಹಾಲಿನ ಉತ್ಪನ್ನಗಳನ್ನು ಒಳಗೊಂಡ ಒಳ್ಳೆಯ ಸಮತೋಲನದ ಆಹಾರವು ಆ ಮಾನದಂಡಕ್ಕೆ ಸೂಕ್ತವಾಗಿದೆ. ಈ ಆಹಾರ ಕ್ರಮವು ಅತ್ಯಂತ ಮಾನವೀಯ ಎಂದು ಭಗವದ್ಗೀತೆಯಂತಹ ಧರ್ಮ ಗ್ರಂಥಗಳು ಶಿಫಾರಸು ಮಾಡಿವೆ.

      ಸಸ್ಯಾಹಾರ ತತ್ತ್ವಕ್ಕೆ ಇರುವ ಮತ್ತೊಂದು ಆಕ್ಷೇಪಣೆ ಎಂದರೆ, “ಏಸು ಕ್ರಿಸ್ತನು ಮಾಂಸವನ್ನು ಸೇವಿಸಿದ, ನಾನು ಯಾಕೆ ಸೇವಿಸಬಾರದು?” ಹೊಸ ಒಡಂಬಡಿಕೆಯನ್ನು ಭಾಷಾಂತರಿಸಿದ ಪುರಾತನ ಗ್ರೀಕ್‌ ಏಸು ಕ್ರಿಸ್ತನು ಮಾಂಸವನ್ನು ಸೇವಿಸಿದ ಎಂಬ ವಾದವನ್ನು ಬೆಂಬಲಿಸುವುದಿಲ್ಲ ಎಂದು ಸಸ್ಯಾಹಾರಿ ಕ್ರೈಸ್ತರು ಗಮನಸೆಳೆದಿದ್ದಾರೆ. ಉದಾಹರಣೆಗೆ, `ಆಹಾರ’  ಅಥವಾ `ಪೋಷಣೆ’ ಎಂದಷ್ಟೇ ಅರ್ಥ ನೀಡುವ ಬ್ರೊಸಿಮೋ, ಪ್ರೊಸಾಜಿಯನ್‌ ಮತ್ತು ಟ್ರೊಫೆಯಂತಹ ಗ್ರೀಕ್‌ ಶಬ್ದಗಳನ್ನು `ಮಾಂಸ’ ಎಂದು ಸಡಿಲವಾಗಿ, ಲಘುವಾಗಿ ಭಾಷಾಂತರಿಸಲಾಗಿದೆ. ಕ್ರಿಸ್ತನಿಗೆ ಮೀನು ಮತ್ತು ಜೇನುತುಪ್ಪವನ್ನು ನೀಡಿದಾಗ ಅವನು `ಅದನ್ನು’ ಸ್ವೀಕರಿಸಿದ ಎಂದು ಬೈಬಲ್‌ ಹೇಳಿದಾಗ `ಅದು’ (ಅವು ಅಲ್ಲ) ಜೇನು ಎಂದು ಅರ್ಥ ಎಂದು ಸಸ್ಯಾಹಾರಿ ಕ್ರೈಸ್ತರು ಪ್ರತಿಪಾದಿಸುತ್ತಾರೆ. ಯುವ ಕ್ರಿಸ್ತನನ್ನು ಕುರಿತಂತೆ ಹಳೆಯ ಒಡಂಬಡಿಕೆಯಲ್ಲಿ ಈ ಸಾಲುಗಳಿವೆ : “ಅವನು ಬೆಣ್ಣೆ ಮತ್ತು ಜೇನುತುಪ್ಪವನ್ನು ತಿನ್ನುವನು. ಇದರಿಂದ ಕೆಟ್ಟದ್ದನ್ನು ತಿರಸ್ಕರಿಸಿ ಒಳ್ಳೆಯದನ್ನು ಸ್ವೀಕರಿಸುವನು.” (ಇಸಾಯ್‌ 7:15) ಬೇರೆ ರೀತಿ ವರ್ತಿಸಿದರೆ ಅದು ಕ್ರೂರ ಮನಸ್ಥಿತಿಗೆ ಹಾದಿಹಾಕುತ್ತದೆ ಎನ್ನುವುದೇ ಅದರ ಭಾವಾರ್ಥವಿರುವಂತೆ ಕಾಣುತ್ತದೆ. ಕ್ರಿಸ್ತನ ವ್ಯಕ್ತಿತ್ವಕ್ಕೆ ಅದು ಹೊಂದುವುದಿಲ್ಲ.

      ವ್ಯಾಪಕವಾಗಿ ಹರಡಿರುವ ಮಾಂಸಾಹಾರ ಸೇವನೆಯ ಹಿಂದಿರುವ ಕಾರಣಗಳನ್ನು ಗಮನಿಸಿದಾಗ, ಜನರು ಬಾಲ್ಯದಿಂದಲೇ ಅದಕ್ಕೆ ರೂಢಿಯಾಗಿರುವುದನ್ನು ನಾವು ಕಾಣುತ್ತೇವೆ. ಅದರಲ್ಲಿ ಪಾಲ್ಗೊಳ್ಳದಿದ್ದರೆ ಅವರಿಗೆ ಅಪರಾಧಭಾವ ಉಂಟಾಗುತ್ತದೆ. ವಿರುದ್ಧವಾಗಿ ಪುಟಗಟ್ಟಲೆ ವೈಜ್ಞಾನಿಕ ಪುರಾವೆಗಳಿದ್ದರೂ ಮಾಂಸ ಭಕ್ಷಣೆ  ಅಗತ್ಯ ಕುರಿತ ಹುಸಿ ವಾದ ನಮ್ಮ ಮನದಲ್ಲಿ ಅಚ್ಚೊತ್ತುತ್ತದೆ. ಸಸ್ಯಾಹಾರವು ಸಾಕಷ್ಟು ಪೌಷ್ಟಿಕಾಂಶವನ್ನು ನೀಡುತ್ತದೆ ಎಂದು ನ್ಯಾಷನಲ್‌ ಲೈವ್‌ ಸ್ಟಾಕ್‌ ಅಂಡ್‌ ಮೀಟ್‌ ಬೋರ್ಡ್‌ ಕೂಡ ಒಪ್ಪುತ್ತದೆ.

ಪ್ರೋಟೀನ್ ಪ್ರಮಾಣದ ಹೋಲಿಕೆ

      “ಆದರೆ ಮಾಂಸವು ಪರಿಪೂರ್ಣ ಪ್ರೋಟೀನ್. ಪ್ರತಿ ದಿನ ಸಾಕಷ್ಟು ಪ್ರೋಟೀನ್ ಪಡೆಯಲು ನಾನು ಸೂಕ್ತವಾದ ತರಕಾರಿಗಳನ್ನು ಖರೀದಿಸಲು, ಬೇಯಿಸಲು ಮತ್ತು ಮಿಶ್ರಣ ಮಾಡಲು ಗಂಟೆಗಟ್ಟಲೆ ಸಮಯವನ್ನು ವ್ಯಯಿಸಬೇಕು” ಎಂದು ಮಾಂಸ ಭಕ್ಷಕರು ವಾದಿಸುತ್ತಾರೆ.

      ಮೊಟ್ಟ ಮೊದಲನೆಯದಾಗಿ ಮಾಂಸವು “ಶುದ್ಧ” ಅಥವಾ “ಪರಿಪೂರ್ಣ” ಪ್ರೋಟೀನ್ ಅಲ್ಲ. ಅದು ಶೇಕಡ 25-30ರಷ್ಟು  ಪ್ರೋಟೀನ್. ಅದರ ನಿವ್ವಳ ಪ್ರೋಟೀನ್ ಬಳಕೆಯು  (ಶರೀರವು ಜೀರ್ಣಮಾಡಿ ಹೀರಿಕೊಳ್ಳುವ ನಿಜವಾದ ಪ್ರಮಾಣ) ಶೇಕಡ 67. ಇದಕ್ಕೆ ಹೋಲಿಸಿದರೆ ಹಾಲಿನ ಪ್ರಮಾಣ ಶೇಕಡ 82, ಗಿಣ್ಣು ಶೇಕಡ 67, ಗೋಧಿ ಶೇಕಡ 60. ಮೇಲಿನ ಆಹಾರ ಪದಾರ್ಥಗಳು ಮಾಂಸಕ್ಕಿಂತ ಕಡಮೆ ತೂಕದ ಪ್ರೋಟೀನ್ ಹೊಂದಿರಬಹುದು. ಆದರೆ ಅವುಗಳ ನಿವ್ವಳ ಬಳಕೆಯು ಅಧಿಕವಾಗಿರುವುದರಿಂದ, ಅವುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಅಥವಾ ಅವುಗಳನ್ನು ಸೇರಿಸಿ ಬಳಸುವುದರಿಂದ ಶಿಫಾರಸು ಮಾಡಿರುವ ಪ್ರತಿ ನಿತ್ಯದ ಪ್ರೋಟೀನ್ ಪ್ರಮಾಣವನ್ನು ಪೂರೈಸಿಕೊಳ್ಳಬಹುದು. ಉದಾಹರಣೆಗೆ, ಹಾಲು ಕೇವಲ ಶೇಕಡ 4 ರಿಂದ 5 ಪ್ರೋಟೀನ್ ಹೊಂದಿದೆ. ಆದರೆ ಎರಡು ಬಟ್ಟಲು ಹಾಲು ಶೇಕಡ 40 ರಷ್ಟು ಬಳಸಬಹುದಾದ ಪ್ರೋಟೀನ್ ಅನ್ನು ನೀಡುತ್ತದೆ. ಎರಡು ಅಂಗುಲ ಘನದ ಚೀಸ್‌ ಶೇಕಡ 30 ರಷ್ಟು ನೀಡುತ್ತದೆ. ಸಸ್ಯಾಹಾರ ತಯಾರಿಕೆಗೆ ತುಂಬ ಸಮಯಬೇಕು ಎಂಬ ವಾದವು ಹಾಸ್ಯಾಸ್ಪದ. ಇನ್ನಷ್ಟು ಹೇಳುವುದಾದರೆ, ಅದು ಸಂಯೋಜಿತ ಆಹಾರಗಳ ಆಹಾರ ಮೌಲ್ಯವನ್ನು ಹೆಚ್ಚಿಸುತ್ತದೆ. ಉದಾಹರಣೆಗೆ, ಅನ್ನ ಮತ್ತು ಬೀನ್ಸ್ ಅನ್ನು ಜೊತೆಯಾಗಿ ಸೇವಿಸಿದರೆ ಅದರ ನಿವ್ವಳ ಪ್ರೋಟೀನ ಬಳಕೆಯು ಶೇಕಡ 43ರಷ್ಟು ಹೆಚ್ಚುತ್ತದೆ. ಹಾಲನ್ನು ಬ್ರೆಡ್‌ ಜೊತೆಗೂಡಿಸಿದರೆ ಅವುಗಳ ನಿವ್ವಳ ಪ್ರೋಟೀನ್ ಬಳಕೆಯು ಶೇಕಡ 13ರಷ್ಟು ಹೆಚ್ಚುತ್ತದೆ.

      ಅಲ್ಲದೆ, ಪ್ರೋಟೀನ್ ಎಲ್ಲವೂ ಅಲ್ಲ. ಕಬ್ಬಿಣ, ಪೊಟ್ಯಾಸಿಯಂ, ಮೆಗ್ನೀಸಿಯಂ ಮತ್ತು ಕ್ಯಾಲ್ಸಿಯಂನಂತಹ ಅಗತ್ಯ ಪೌಷ್ಟಿಕಾಂಶಗಳು ಹಾಗೂ ಸಿ, ಎ, ರಿಬೋಫ್ಲೇವಿನ್‌, ನಿಯಾಸಿನ್‌ನಂತಹ ಅಗತ್ಯ ವಿಟಮಿನ್‌ಗಳು ಹೆಚ್ಚೂ ಕಮ್ಮಿ ಮಾಂಸಾಹಾರಗಳಲ್ಲಿ ಇಲ್ಲವೇ ಇಲ್ಲ. ಆದುದರಿಂದ ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಸ್ಯಾಹಾರಿ ಆಹಾರವು ಅತ್ಯಗತ್ಯ. ಹಾಗಾದರೆ, ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದಕ್ಕೆ ಏನು ಕಾರಣ? ಮುಖ್ಯವಾಗಿ ಸಸ್ಯಾಹಾರ ಪದಾರ್ಥಗಳು ಸಮೃದ್ಧವಾಗಿ ಇರುವ ಅಮೆರಿಕ ಮತ್ತು ಯೂರೋಪ್‌ಗಳಲ್ಲಿ? ಗೋವಿನ ಶವವನ್ನು ತಿನ್ನಬೇಕೆಂದು ಕೆಲವೇ ಕೆಲವರು ಒತ್ತಾಯಿಸಿದರೆ, ಅವರು ಗೋವಿನ ಸಹಜ ಸಾವಿಗೆ ಕಾಯಬೇಕು. ಅಂತಹ ಮಾಂಸವು ತುಂಬ ಬಿಗಿ ಅಥವಾ ಒರಟು ಎಂದು ಆಕ್ಷೇಪಿಸುವವರು ಇದನ್ನು ನೆನಪುಮಾಡಿಕೊಳ್ಳಬೇಕು : ಸಂಹರಿಸಲ್ಪಟ್ಟ ಗೋವುಗಳ ಶವದ ಪೆಡಸನ್ನು ಮೃದುವಾಗಿಸಲು ಎರಡು ವಾರಗಳಾದರೂ ಅಗತ್ಯವಾಗಿರುವುದರಿಂದ ಅವು ತಾಜಾ ಆಗಿರುವುದಿಲ್ಲ.

      ಪ್ರತಿ ವರ್ಷ ಕೋಟ್ಯಂತರ ಗೋವುಗಳನ್ನು ಕೊಲ್ಲುವುದು “ಮಾನವನ ಪರಮಾಧಿಕಾರ” ಎನ್ನುವುದನ್ನು ಕ್ಷಮಿಸುವುದು ಸಾಧ್ಯವೇ ಇಲ್ಲ ಎಂಬ ನಂಬಿಕೆಯಿಂದ ಅನೇಕ ಜನರು ನೈತಿಕ ಕಾರಣಗಳಿಗಾಗಿ ಸಸ್ಯಾಹಾರಿಗಳಾಗಿದ್ದಾರೆ. ಇತರ ಅನೇಕ ಜನರು ಕಸಾಯಿಖಾನೆಗೆ ಭೇಟಿ ನೀಡಿದ್ದರೆ ಅಥವಾ ತಾವು ತಿನ್ನಬೇಕಾದ ಪ್ರಾಣಿಯನ್ನು ತಾವೇ ಕೊಲ್ಲಬೇಕಾಗಿದ್ದರೆ, ನಿಸ್ಸಂದೇಹವಾಗಿ ಸಸ್ಯಾಹಾರಿ ತತ್ತ್ವವನ್ನು ಸ್ವೀಕರಿಸುವರು. ಆಗ ಸರ್ಲೊಯಿನ್‌, ಬ್ರಿಸ್ಕೆಟ್‌ ಅಥವಾ ಕಟ್ಲೆಟ್‌ – ಇಂತಹ ಸೌಮ್ಯೋಕ್ತಿಗಳು ಗೋವಿನ ಕಸಾಯಿಖಾನೆಯ ಭಯಾನಕತೆಯನ್ನು ಮುಚ್ಚಿಡುವುದಿಲ್ಲ ಮತ್ತು ಅಂಗಡಿಗೆ ಬರುವವರು ಗೋವುಗಳ ದೇಹದ ಅಂಗಗಳು ಅಥವಾ ಕರುಳು ಸೇರಿದಂತೆ ಒಳ ಭಾಗಗಳನ್ನು ತಮ್ಮ ಬಾಯೊಳಗೆ ಹಾಕಿಕೊಳ್ಳಲು ಒಪ್ಪುವುದಿಲ್ಲ. ಎಲ್ಲ ಮಾಂಸ ಭಕ್ಷಕರಿಗೂ ಅಂತಹ ಭೇಟಿಯು ಕಡ್ಡಾಯವಾಗಬೇಕು. “ಏನು ಮಹಾ, ನನ್ನನ್ನು ಯಾರು ಶಿಕ್ಷಿಸುತ್ತಾರೆ? ಗೋಹತ್ಯೆಗೆ ಸರಕಾರವು ಯಾರನ್ನೂ ಬಂಸುವುದಿಲ್ಲ” ಎಂದು ಕೆಲವರು ಯೋಚಿಸಬಹುದು. ಆದರೆ ಅವರು ತಪ್ಪು ತಿಳಿದಿದ್ದಾರೆ. ಅವರು ಶಿಕ್ಷೆಗೆ ಒಳಗಾಗುತ್ತಾರೆ, ನಾವು ಈಗ ನೋಡುವಂತೆ.

ದಿಢೀರ್‌ ಕರ್ಮ, ಹುಚ್ಚು ವ್ಯರ್ಥತೆ

      ಸಮೃದ್ಧವಾಗಿ ಮಾಂಸವಿರುವ ಅಮೆರಿಕದ ಆಹಾರ ಪದ್ಧತಿಯು ರೋಗಕ್ಕೆ ಕಾರಣವಾಗುತ್ತಿರುವುದು ಸಾಬೀತಾಗಿದೆ. ಕೆಲವು ಉದಾಹರಣೆಗಳು : ಮಾಂಸವನ್ನು ಕರಿಯುವುದರಿಂದ ಕ್ಯಾನ್ಸರ್‌ ಕಾರಣವಾಗುವ ಕಾರ್ಸಿನೋಜೆನ್‌ ಉತ್ಪತ್ತಿಯಾಗುತ್ತದೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಸಸ್ಯಾಹಾರಿ ಮಹಿಳೆಯ ಎದೆ ಹಾಲಿನಲ್ಲಿ ಇರುವುದಕ್ಕಿಂತ ಹತ್ತು ಪಾಲು ಹೆಚ್ಚು ಕೀಟನಾಶಕಗಳು ಮಾಂಸಾಹಾರಿ ಮಹಿಳೆಯ ಎದೆ ಹಾಲಿನಲ್ಲಿ ಕಂಡು ಬಂದಿವೆ. ಅಮೆರಿಕದ ಅನೇಕ ಜನರು, ಮುಖ್ಯವಾಗಿ ಶ್ರೀಮಂತರು ಹೆಚ್ಚೂ ಕಮ್ಮಿ ತಮ್ಮ ಅಗತ್ಯಕ್ಕಿಂತ ಎರಡು ಪಟ್ಟು ಹೆಚ್ಚು ಪ್ರೋಟೀನ್ ಅನ್ನು ಸೇವಿಸುತ್ತಾರೆ. ಇದು ಮೂಳೆಯಿಂದ ಕ್ಯಾಲ್ಸಿಯಂ ಅನ್ನು ಬೇರ್ಪಡಿಸುವ ಪ್ರವೃತ್ತಿಯನ್ನು ತೋರುತ್ತದೆ. ಇದರಿಂದ ಮೂಳೆ ನಷ್ಟವಾಗಬಹುದು ಮತ್ತು 40ರ ವಯಸ್ಸಿನ ಆಸುಪಾಸಿನಲ್ಲಿ ಮೂಳೆ ಭಂಗುರಕ್ಕೆ ಕಾರಣವಾಗಬಹುದು. ಇದೆಲ್ಲ ದೇಶದ ಆಹಾರ ವ್ಯವಸ್ಥೆಯಲ್ಲಿ ಸಸ್ಯಾಹಾರ ಪದಾರ್ಥಗಳನ್ನು ಹೆಚ್ಚಿಸುವಂತೆ ಕರೆ ನೀಡಲು ಅಮೆರಿಕ ಸೆನೆಟ್‌ ಅನ್ನು ಪ್ರೇರೇಪಿಸಿತು. ಪ್ರಾಣಿಗಳಿಗೆ ಕೊಬ್ಬು ಒದಗಿಸಲು ಅವುಗಳಿಗೆ ಅಪಾರ ಪ್ರಮಾಣದಲ್ಲಿ ನೀಡುವ ಸೋಡಿಯಂ ನೈಟ್ರೇಟ್‌, ಹಾರ್ಮೋನುಗಳು ಮತ್ತು ಪ್ರತಿಜೀವಕಗಳು (ಆಂಟಿಬಯೋಟಿಕ್‌) ಮಾಂಸ ಭಕ್ಷಕರಿಗೆ ವರ್ಗಾಯಿಸಲ್ಪಡುತ್ತವೆ ಮತ್ತು ರೋಗಗಳಿಗೆ ಅದೇ ಕಾರಣವಾಗುತ್ತಿದೆ ಎಂದು ಅನೇಕ ಸಂಶೋಧಕರು ಭಾವಿಸಿದ್ದಾರೆ.

      ಮಾನವರು ಸಸ್ಯಾಹಾರವನ್ನು ಸೇವಿಸಲೆಂದೇ ಇರುವುದು. ಆದರೆ ಅವರ ಅನಿಯಂತ್ರಿತ ರುಚಿ ಆಸ್ವಾದನೆಯ ಅಪೇಕ್ಷೆಯು ಅವರನ್ನು ಮಾಂಸ ಭಕ್ಷಣೆಗೆ ಪ್ರೇರೇಪಿಸಿದಾಗ ಅವರು ಕರ್ಮ ಫಲವನ್ನು, ಪ್ರತಿಕ್ರಿಯೆಯನ್ನು ಅನುಭವಿಸಲೇಬೇಕು. ಪ್ರಾಣಿ ವಧೆಯಲ್ಲಿ ಪಾಲ್ಗೊಂಡ ಎಲ್ಲರೂ ಈ ಕರ್ಮ ಫಲದಲ್ಲಿ ಭಾಗಿಗಳೇ. ಪಶುಪಾಲಕರಿಂದ ಕಟುಕರವರೆಗೆ, ಮಾರಾಟಗಾರರವರೆಗೆ, ಬಾಣಸಿಗರವರೆಗೆ ಮತ್ತು ಬಳಕೆದಾರರವರೆಗೆ – ಎಲ್ಲರೂ ಪಾಪವನ್ನು ಹಂಚಿಕೊಳ್ಳುವರು. ಇದೇ ಆಹಾರ ಮತ್ತು ರೋಗದ ನಡುವಣ ನಿಜವಾದ ಸಂಬಂಧ – ದಿಢೀರ್‌ ಕರ್ಮ! ಸಾಮಾನ್ಯವಾಗಿ ವಿಷಾಹಾರದಂತಹ ಪ್ರಕರಣದಲ್ಲಿ ಅದು ತತ್‌ಕ್ಷಣ ವ್ಯಕ್ತಗೊಳ್ಳಬಹುದು. ಅಥವಾ ಮೂಳೆ ನಷ್ಟದಂತೆ ಮುಂದೆ ಪ್ರಕಟಗೊಳ್ಳಬಹುದು. ಅದು ಕ್ಯಾನ್ಸರ್‌ ರೋಗವಾಗಿ ಅಪ್ಪಳಿಸಬಹುದು ಅಥವಾ ಪ್ಲೇಗಿನ ರೂಪದಲ್ಲಿ ಸಾಮೂಹಿಕವಾಗಿ ಎರಗಬಹುದು. ಏನೇ ಆಗಲಿ, ಕರ್ಮ ಪ್ರತಿಕ್ರಿಯೆಯಿಂದ ಪಾರಾಗುವುದು ಸಾಧ್ಯವೇ ಇಲ್ಲ. ಐಹಿಕ ಪ್ರಕೃತಿ ನಿಯಮಗಳು ಇರುವುದರಿಂದ, ನಾವು ಏನು ಬಿತ್ತಿರುವೆವೋ ಅದರ ಬೆಳೆಯನ್ನು ಈ ಜನ್ಮದಲ್ಲಿ ಮತ್ತು ಮುಂದಿನದರಲ್ಲಿ ಉಣ್ಣುತ್ತೇವೆ.

ಪರಿಹಾರ

      ಭಕ್ತಿಯೋಗದೊಂದಿಗೆ ಸಂಯೋಜಿಸಿದಾಗ ಕಟ್ಟುನಿಟ್ಟಿನ ಸಸ್ಯಾಹಾರವು ಹೇಗೆ ಕರ್ಮವನ್ನು ಪ್ರತಿರೋಧಿಸುತ್ತದೆ ಎನ್ನುವುದನ್ನು ಭಗವದ್ಗೀತೆಯು ವಿವರಿಸುತ್ತದೆ : “ಭಗವಂತನ ಭಕ್ತರು ಎಲ್ಲ ರೀತಿಯ ಪಾಪಗಳಿಂದಲೂ ಬಿಡುಗಡೆ ಹೊಂದುತ್ತಾರೆ. ಏಕೆಂದರೆ ಅವರು ಮೊದಲು ಆಹಾರವನ್ನು ಭಗವಂತನಿಗೆ ಅರ್ಪಿಸುತ್ತಾರೆ. ವೈಯಕ್ತಿಕ ಸಂತೋಷಕ್ಕಾಗಿ ಪಾಕವನ್ನು ಮಾಡಿಕೊಳ್ಳುವವರು ಖಂಡಿತವಾಗಿಯೂ ಪಾಪವನ್ನೇ ಉಣ್ಣುತ್ತಾರೆ.” (ಭಗವದ್ಗೀತೆ 3.13) ಬೇರೆ ಮಾತಿನಲ್ಲಿ ಹೇಳುವುದಾದರೆ, ಯಾರು ತಮ್ಮ ಆಹಾರವನ್ನು ಭಕ್ತಿಯೋಗದ ತತ್ತ್ವದೊಂದಿಗೆ ಸೇರಿಸುವರೋ ಅವರು ಎಲ್ಲ ಕರ್ಮ ಪ್ರತಿಕ್ರಿಯೆಗಳಿಗೆ ಅತೀತರಾಗುತ್ತಾರೆ. ಆದರೆ ನಿರ್ಲಕ್ಷಿಸುವವರು ಕೆಟ್ಟ ಕರ್ಮಕ್ಕೆ ಗುರಿಯಾಗುತ್ತಾರೆ. ಅಲ್ಲದೆ, ಕರ್ಮವಿಲ್ಲದೆ ಕ್ರಿಯಾಶೀಲರಾಗುವವರು ತಮ್ಮ ಪ್ರಜ್ಞೆಯನ್ನು ಭಗವಂತನದೊಂದಿಗೆ ಸಂಯೋಜಿಸಿಕೊಳ್ಳಬಹುದು ಮತ್ತು ಅವನ ಉಪಸ್ಥಿತಿಯ ಅರಿವನ್ನು ಪ್ರತಿ ಹೆಜ್ಜೆಯಲ್ಲಿಯೂ ಅನುಭವಿಸಬಹುದು. ಇದೇ ಪ್ರಸಾದದ ನಿಜವಾದ ಫಲ, ಲಾಭ.

      ಆರ್ಥಿಕವಾಗಿ ಕೂಡ ಮಾಂಸಾಹಾರವು ದುರಂತ ಚಿತ್ರವನ್ನೇ ನೀಡಿದೆ. 1950 ರಿಂದ 1970ರವರೆಗೆ ಅಮೆರಿಕದಲ್ಲಿ ಧಾನ್ಯದ ಉತ್ಪಾದನೆ ಶೇಕಡ 50ರಷ್ಟು ಹೆಚ್ಚಾಯಿತು. ಆದರೆ ಧಾನ್ಯದ ವಿತರಣೆ ಹೇಗಾಗಿದೆ? ಅಮೆರಿಕದಲ್ಲಿ ಉತ್ಪಾದಿಸಿದ ಒಟ್ಟು ಖಾದ್ಯ ಕಾರ್ನ್‌, ಬಾರ್ಲಿ, ಓಟ್ಸ್, ಜೋಳ ಮತ್ತು ರಫ್ತು ಮಾಡದ ಸೋಯಾ ಬೀನ್‌ಗಳಲ್ಲಿ ಶೇಕಡ 85ರಷ್ಟನ್ನು ಜಾನುವಾರುಗಳಿಗೆ ನೀಡಲಾಗಿದೆ. ಇದರ ಜೊತೆಗೆ ಅಮೆರಿಕನ್ನರು ತಾವು ತಿನ್ನುವ ಗೋಧಿ ಪ್ರಮಾಣದಲ್ಲಿ ಹೆಚ್ಚೂ ಕಮ್ಮಿ ಅರ್ಧ ಭಾಗದಷ್ಟನ್ನು ಪ್ರಾಣಿಗಳಿಗೆ ನೀಡುತ್ತಿದ್ದಾರೆ. ಅಮೆರಿಕದ ಭೂ ಪ್ರದೇಶದ ದೊಡ್ಡ ಭಾಗವನ್ನು ಮಾಂಸದ ಹಸುಗಳನ್ನು ಮೇಯಿಸಲೆಂದೇ ಬಳಸಲಾಗುತ್ತಿದೆ. ಧಾನ್ಯವನ್ನು ಬೆಳೆಸಲು ಬಳಸಬಹುದಾಗಿದ್ದ ಅಮೂಲ್ಯ ಭೂಮಿಯ ಸ್ಥಿತಿ ಇದು. ಆಹಾರವನ್ನು ಹಾಳುಮಾಡುವುದು ಪಾಪ ಎಂದು ಬಹಳ ಜನರು ಒಪ್ಪಿಕೊಳ್ಳುತ್ತಾರೆ. ಆದರೂ ಈ ಎಲ್ಲ ಪ್ರಯತ್ನ ಮತ್ತು ಶ್ರಮಗಳು ಕೇವಲ ಸುಮಾರು ಒಂದು ಪೌಂಡ್‌ನಷ್ಟು ಮಾಂಸ ಪ್ರೋಟೀನ್ ಅನ್ನು ಉತ್ಪಾದಿಸುತ್ತವೆ. ಅದಕ್ಕೆ ಹೋಲಿಸಿದರೆ ಧಾನ್ಯದ್ದು 16 ಪೌಂಡುಗಳು. ಇಡೀ ವಿಶ್ವದ ವಾರ್ಷಿಕ ಪ್ರೋಟೀನ್ ಕೊರತೆಯ ಶೇಕಡ 90ರಷ್ಟನ್ನು ಈ ನಷ್ಟವೇ ತುಂಬಬಹುದು.

      ಮತ್ತೊಂದು ಕಡೆ, ಗೋವು ತಾನು ತಿನ್ನುವ ಪ್ರತಿ 1/2 ಕಿಲೋ ಧಾನ್ಯದಿಂದ 1/2 ಲೀಟರ್‌ ಹಾಲನ್ನು ಉತ್ಪಾದಿಸಬಲ್ಲದು. ಅದರಿಂದ ಚೀಸ್‌, ಬೆಣ್ಣೆ ಮತ್ತು ಮೊಸರನ್ನು ಪಡೆಯಬಹುದು. ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಬುದ್ಧಿವಂತಿಕೆಯಿಂದ ಸಂಯೋಜಿಸಿದಾಗ, ಈ ಆಹಾರಗಳು ಮಾನವ ಆಹಾರಕ್ಕೆ ಅಗತ್ಯ ಪೌಷ್ಟಿಕಾಂಶಗಳನ್ನು ಪೂರೈಸುತ್ತವೆ. ಕೊನೆ ಪಕ್ಷ 40 ಬಗೆಯ ತರಕಾರಿಗಳು, 9 ರೀತಿಯ ಬೇಳೆಕಾಳುಗಳು, 20 ವಿಧದ ಹಣ್ಣುಗಳು, 20 ಬಗೆಯ ಬೀನ್ಸ್ ಮತ್ತು ಬಟಾಣಿ ಹಾಗೂ 12 ವಿಧದ ಬೀಜಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಜೊತೆಗೆ ಗೋವಿನ ಕೊಡುಗೆ. ಹಾಗಾದರೆ, ಪ್ರಕೃತಿಯ ಮತ್ತು ಭಗವಂತನ ಉನ್ನತ ಕಾನೂನುಗಳಿಗೆ ಅವಿಧೇಯತೆ ಏಕೆ? ನಾವು ಹರೇ ಕೃಷ್ಣ ಮಂತ್ರವನ್ನು ಜಪಿಸೋಣ, ಕಟ್ಟುನಿಟ್ಟಿನ ಸಸ್ಯಾಹಾರಿಗಳಾಗಿ ಬದುಕೋಣ ಮತ್ತು ಈ ಜನ್ಮ  ಹಾಗೂ ಮುಂದಿನ ಜನ್ಮದಲ್ಲಿಯೂ ಸುಖ ಸಂತೋಷವಾಗಿರೋಣ!

ಈ ಲೇಖನ ಶೇರ್ ಮಾಡಿ