ಚಾತುರ್ಮಾಸ್ಯ ವ್ರತ, ಅದರ ಉದ್ದೇಶ, ಅದರ ಅವಧಿ , ಚಾತುರ್ಮಾಸ್ಯ ಕಾಲದಲ್ಲಿ ಉಪವಾಸ ಮುಂತಾದವುಗಳ ಬಗೆಗೆ ಈ ಲೇಖನವು ಮೂಲ ಮಾಹಿತಿಯನ್ನು ನೀಡುತ್ತದೆ.
ಸಾಮಾನ್ಯವಾಗಿ ಸಂನ್ಯಾಸಿಗಳು ಬೋಧನಾ ಕಾರ್ಯಕ್ಕಾಗಿ ದೇಶ ಸಂಚಾರ ಮಾಡಬೇಕು. ಆದರೆ ಭಾರತದಲ್ಲಿನ ಮಳೆಗಾಲದಲ್ಲಿ ನಾಲ್ಕು ತಿಂಗಳು, ಜುಲೈನಿಂದ ಅಕ್ಟೋಬರ್‌ವರೆಗೆ, ಅವರು ಯಾತ್ರೆ ಕೈಗೊಳ್ಳುವುದಿಲ್ಲ. ಅವರು ಒಂದು ಕಡೆ ಆಶ್ರಯ ಪಡೆದು ಅಲ್ಲಿಯೇ ಇರುತ್ತಾರೆ. ಈ ರೀತಿ ಸಂನ್ಯಾಸಿಗಳ ಚಲಿಸದ ಸ್ಥಿತಿಯನ್ನು ಚಾತುರ್ಮಾಸ್ಯ ವ್ರತ ಎಂದು ಕರೆಯುತ್ತಾರೆ. ಹೀಗೆ ಸಂನ್ಯಾಸಿಯು ನಾಲ್ಕು ತಿಂಗಳು ಒಂದೇ ಕಡೆ ಇದ್ದಾಗ ಸ್ಥಳೀಯ ಜನರು ತಮ್ಮ ಆಧ್ಯಾತ್ಮಿಕ ಪ್ರಗತಿಗೆ ಸಂನ್ಯಾಸಿಯ ಉಪಸ್ಥಿತಿಯ ಪ್ರಯೋಜನ ಪಡೆಯುತ್ತಾರೆ.
ಕೃಷ್ಣಪ್ರಜ್ಞೆಯನ್ನು ಹರಡಲು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವುದು ರೂಢಿಯಾಗಿದ್ದ ಸಂತ ಪುರುಷರು ಈ ನಾಲ್ಕು ತಿಂಗಳು ಸಾಮಾನ್ಯವಾಗಿ ಯಾವುದಾದರೂ ಪವಿತ್ರ ಸ್ಥಳದಲ್ಲಿ ಇರುತ್ತಾರೆ. ಈ ಅವಧಿಯಲ್ಲಿ ಕೆಲವು ನಿಯಮ ಮತ್ತು ನಿಯಂತ್ರಣಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುವುದು. ಈ
ಅವಧಿಯಲ್ಲಿ ಯಾರಾದರೂ ಕೊನೆ ಪಕ್ಷ ನಾಲ್ಕು ಬಾರಿಯಾದರೂ ವಿಷ್ಣು ಮಂದಿರವನ್ನು ಪ್ರದಕ್ಷಿಣೆ ಮಾಡಿದರೆ ಅವರು ವಿಶ್ವ ಪ್ರದಕ್ಷಿಣೆ ಮಾಡಿದಂತೆ ಎಂದು ಅರ್ಥಮಾಡಿಕೊಳ್ಳಬೇಕೆಂದು ಸ್ಕಾಂದ ಪುರಾಣದಲ್ಲಿ ಹೇಳಲಾಗಿದೆ. ಅಂತಹ ಪ್ರದಕ್ಷಿಣೆಯಿಂದ ಗಂಗಾ ನದಿ ಹರಿಯುವ ಎಲ್ಲ ಪವಿತ್ರ ಸ್ಥಳಗಳನ್ನು ನೋಡಿದಂತೆ ಎಂದು ಹೇಳುತ್ತಾರೆ. ಮತ್ತು ಚಾತುರ್ಮಾಸ್ಯದ ನಿಯಂತ್ರಣ ತತ್ತ್ವಗಳನ್ನು ಅನುಸರಿಸುವುದರಿಂದ ವ್ಯಕ್ತಿಯು ಅತಿ ಶೀಘ್ರವಾಗಿ ಭಕ್ತಿಸೇವೆಯ ವೇದಿಕೆಯನ್ನು ಏರಬಹುದು.
ಚಾತುರ್ಮಾಸ್ಯ ಅವಧಿ
ಚಾತುರ್ಮಾಸ್ಯದ ಅವಧಿಯು ಆಷಾಢ ಮಾಸದ (ಜೂನ್-ಜುಲೈ) ಹುಣ್ಣಿಮೆ ಪಕ್ಷದಲ್ಲಿ, ಶಯನ ಏಕಾದಶಿಯಿಂದ ಆರಂಭವಾಗುತ್ತದೆ. ಅದರ ಅವಧಿಯು ಕಾರ್ತಿಕ ಮಾಸದ (ಅಕ್ಟೋಬರ್-ನವೆಂಬರ್) ಹುಣ್ಣಿಮೆ ಪಕ್ಷದಲ್ಲಿ, ಉತ್ತಾನ ಏಕಾದಶಿಯಂದು ಪೂರ್ಣಗೊಳ್ಳುತ್ತದೆ. ಕೆಲವು ವೈಷ್ಣವರು ಇದನ್ನು ಆಷಾಢದ ಹುಣ್ಣಿಮೆಯಿಂದ ಕಾರ್ತಿಕದ ಹುಣ್ಣಿಮೆವರೆಗೆ ಆಚರಿಸುತ್ತಾರೆ. ಅದೂ ಕೂಡ ನಾಲ್ಕು ತಿಂಗಳ ಅವಧಿಯದು. ಚಾಂದ್ರಮಾನ ತಿಂಗಳುಗಳಿಂದ ಲೆಕ್ಕ ಹಾಕುವ ಈ ಅವಧಿಯನ್ನು ಚಾತುರ್ಮಾಸ್ಯ ಎಂದು ಕರೆಯುತ್ತಾರೆ. ಆದರೆ ಇತರ ಕೆಲವರೂ ಕೂಡ ಇದನ್ನು ಶ್ರಾವಣದಿಂದ ಕಾರ್ತಿಕದವರೆಗೆ ಸೌರಮಾನ ತಿಂಗಳಿನಂತೆ ಆಚರಿಸುತ್ತಾರೆ. ಚಾಂದ್ರಮಾನ ಅಥವಾ ಸೌರಮಾನ, ಯಾವುದೇ ಇರಲಿ, ಇಡೀ ಅವಧಿಯು ಮಳೆಗಾಲದಲ್ಲಿ ಬರುತ್ತದೆ.
ಚಾತುರ್ಮಾಸ್ಯದಲ್ಲಿ ಉಪವಾಸ
ಎಲ್ಲರೂ ಚಾತುರ್ಮಾಸ್ಯವನ್ನು ಆಚರಿಸಬೇಕು. ನೀವು ಗೃಹಸ್ಥರೇ ಅಥವಾ ಸಂನ್ಯಾಸಿಯೇ ಎನ್ನುವುದು ಮುಖ್ಯವಲ್ಲ. ಎಲ್ಲ ಆಶ್ರಮಗಳಿಗೂ ಆಚರಣೆಯು ಅನಿವಾರ್ಯ ಕರ್ತವ್ಯ. ಈ ನಾಲ್ಕು ತಿಂಗಳುಗಳ ಅವಧಿಯಲ್ಲಿ ಕೈಗೊಳ್ಳುವ ವ್ರತದ ಉದ್ದೇಶವು ಇಂದ್ರಿಯ ಸುಖದ ಪ್ರಮಾಣವನ್ನು ಕನಿಷ್ಠಗೊಳಿಸುವುದಾಗಿದೆ. ಅದು ಅಷ್ಟೇನೂ ಕಷ್ಟವಲ್ಲ. ಮೊದಲ ತಿಂಗಳು ಶ್ರಾವಣದಲ್ಲಿ ಹಸಿರು ಸೊಪ್ಪು ತಿನ್ನಬಾರದು, ಎರಡನೆಯ ತಿಂಗಳು ಭಾದ್ರದಲ್ಲಿ ಮೊಸರು ಸೇವನೆ ಬೇಡ, ಮೂರನೆಯ ತಿಂಗಳು ಆಶ್ವಿನದಲ್ಲಿ ಹಾಲು ಸ್ವೀಕರಿಸಬಾರದು. ನಾಲ್ಕನೆಯ ಕಾರ್ತಿಕ ಮಾಸದಲ್ಲಿ ಮೀನು ಅಥವಾ ಮಾಂಸಾಹಾರ ಸೇವನೆ ವರ್ಜ್ಯ. ಅದೇ ರೀತಿ ಮಸೂರು ಬೇಳೆ ಮತ್ತು ಉದ್ದಿನ ಬೇಳೆಯನ್ನೂ ಸಸ್ಯಾಹಾರವೆಂದು ಪರಿಗಣಿಸಿಲ್ಲ. ಈ ಎರಡೂ ಬೇಳೆಗಳಲ್ಲಿ ಅಪಾರ ಪ್ರಮಾಣದ ಪ್ರೋಟೀನ್ ಇದೆ. ಪ್ರೋಟೀನ್ ಹೆಚ್ಚಾಗಿರುವ ಆಹಾರವನ್ನು ಮಾಂಸಾಹಾರವೆಂದು ಪರಿಗಣಿಸುತ್ತಾರೆ. ಆದುದರಿಂದ ಈ ನಾಲ್ಕು ತಿಂಗಳು ಅವುಗಳನ್ನು ಸೇವಿಸಬಾರದು. ಒಟ್ಟಾರೆ, ಈ ನಾಲ್ಕು ತಿಂಗಳ ಅವಧಿಯಲ್ಲಿ ಇಂದ್ರಿಯ ಸುಖದ ಎಲ್ಲ ಆಹಾರ ಸೇವನೆಯನ್ನು ಬಿಟ್ಟು ಬಿಡಬೇಕು.