ನಾವು ನಮ್ಮ ಬಾಂಧವ್ಯಗಳನ್ನು ನಿಸ್ವಾರ್ಥತೆಯಿಂದ ತುಂಬಿದರೆ ಘರ್ಷಣೆಗಳು
ನಮ್ಮನ್ನು ದೂರ ಸರಿಸುವ ಬದಲು ಇನ್ನಷ್ಟು ಸಮೀಪಕ್ಕೆ ಬರುವಂತೆ ಮಾಡುತ್ತವೆ.
ಶ್ರೀಮಂತ ತಂದೆಯು ಭಾರಿ ಪಿತ್ರಾರ್ಜಿತ ಪಾಲನ್ನು ಬಿಟ್ಟು ಇಹಲೋಕವನ್ನು ತ್ಯಜಿಸಿದಾಗ ಪದೇ ಪದೇ ಉತ್ತರಾಧಿಕಾರ ಘರ್ಷಣೆ ಸಾಮಾನ್ಯವಾಗಿ ಉಂಟಾಗುತ್ತದೆ. ಪ್ರತಿಯೊಂದು ಘರ್ಷಣೆಗೂ ತನ್ನದೇ ಆಯಾಮಗಳಿದ್ದರೂ ಸಾಮಾನ್ಯವಾಗಿ ಅವುಗಳಿಗೆಲ್ಲ ಒಂದು ಸಾಮಾನ್ಯ ವಿಷಯವಿರುತ್ತದೆ : ಸ್ವಾರ್ಥ. ಸತ್ತವರಿಗೆ ಸಂಬಂಧಿಸಿದ ಪ್ರತಿಯೊಬ್ಬರಿಗೂ ಆಸ್ತಿಯಲ್ಲಿ ಪಾಲು ಬೇಕು. ವಂಶಜರು ಪೂರ್ಣವಾಗಿ ಅಲ್ಲದಿದ್ದರೂ ದೊಡ್ಡ ಪಾಲು ಬೇಕೆಂದು ಒತ್ತಾಯಿಸುತ್ತಾರೆ.
ತಮ್ಮ ತಂದೆಯ ನಿಧನದ ಅನಂತರ ಇಬ್ಬರು ರಾಜಕುಮಾರರ ನಡುವಣ ಹಕ್ಕುದಾರಿ ಘರ್ಷಣೆಯನ್ನು ರಾಮಾಯಣವು ಚಿತ್ರಿಸುತ್ತದೆ. ಆದರೆ ಗಮನಾರ್ಹವೆಂದರೆ ಈ ಘರ್ಷಣೆಯು ಸ್ವಾರ್ಥದಿಂದ ಅಲ್ಲ, ನಿಸ್ವಾರ್ಥತೆಯಿಂದ ಉಂಟಾದುದು. ಉತ್ತರಾಧಿಕಾರವು ತನಗೆ ಸಿಗಬೇಕೆಂದು ಇಬ್ಬರು ಸೋದರರು ವಾದಿಸುವ ಬದಲು ಮತ್ತೊಬ್ಬರೇ ಅದನ್ನು ಒಪ್ಪಬೇಕೆಂದು ಅವರು ವಾದಿಸುತ್ತಾರೆ. ಮತ್ತು ಉತ್ತರಾಧಿಕಾರವು ಯಾವುದೋ `ಬಿಳಿ ಆನೆ’ (Liability) ಅಲ್ಲ. ಅದು ಪುರಾತನ ಭಾರತದ ಅತ್ಯಂತ ಪ್ರಬಲ ಸಾಮ್ರಾಜ್ಯ ಅಯೋಧ್ಯ. ಘರ್ಷಣೆಯು ಎಷ್ಟು ಕುತೂಹಲದಾಯಕವೋ ಅದರ ನಿರ್ಣಯ ಕೂಡ ಅಷ್ಟೇ ಸುಂದರ.
ಆಘಾತಗಳ ಸರಮಾಲೆ
ವಯೋವೃದ್ಧ ದೊರೆ ದಶರಥನು ತನ್ನ ನಿವೃತ್ತಿಯ ಸಿದ್ಧತೆ ಮಾಡಿಕೊಳ್ಳುತ್ತಾನೆ. ಅದಕ್ಕಾಗಿ ಅವನು ತನ್ನ ಹಿರಿಯ ಪುತ್ರ ಶ್ರೀರಾಮನಿಗೆ ತನ್ನ ಪ್ರತಿನಿಧಿಯಾಗಲು ಪಟ್ಟಾಭಿಷೇಕ ಮಾಡಲು ನಿರ್ಧರಿಸುತ್ತಾನೆ. ಅವನ ಕಿರಿಯ ಪತ್ನಿ ಕೈಕೇಯಿಯನ್ನು ಅವಳ ದಾಸಿ ತಪ್ಪುದಾರಿಗೆ ಎಳೆಯುತ್ತಾಳೆ. ರಾಜನ ಈ ಉತ್ತರಾಧಿಕಾರ ನಿರ್ಧಾರವು ತನ್ನನ್ನು ಮತ್ತು ತನ್ನ ಪುತ್ರ ಭರತನನ್ನು ಬದಿಗೆ ಸರಿಸುವ ಪ್ರಯತ್ನ ಎಂದು ಕೈಕೇಯಿ ಭಾವಿಸುತ್ತಾಳೆ. ರಾಜನು ಬಹಳ ಹಿಂದೆ ತನಗೆ ನೀಡಿದ್ದ ಎರಡು ವರಗಳನ್ನು ಅವಳು ಈಗ ಬಳಸಿಕೊಳ್ಳಲು ಆಶಿಸುತ್ತಾಳೆ. ಅದರಂತೆ ಅವಳು ರಾಮನನ್ನು 14 ವರ್ಷ ವನವಾಸಕ್ಕೆ ಕಳುಹಿಸಬೇಕು ಮತ್ತು ಭರತನಿಗೆ ಪಟ್ಟ ಕಟ್ಟಬೇಕೆಂದು ರಾಜನ ಮೇಲೆ ಒತ್ತಡ ಹೇರುತ್ತಾಳೆ. ಇಡೀ ಸಾಮ್ರಾಜ್ಯವು ಭಯ ಮತ್ತು ದುಃಖದ ಕಡಲಿನಲ್ಲಿ ಮುಳುಗಿದರೆ, ರಾಮನು ತನ್ನ ಪತ್ನಿ ಸೀತಾ ಮತ್ತು ಅನುಜ ಲಕ್ಷ್ಮಣನೊಂದಿಗೆ ವಿನೀತನಾಗಿ ವನದತ್ತ ಸಾಗುತ್ತಾನೆ. ರಾಮನ ಅಗಲಿಕೆಯನ್ನು ತಾಳಲಾಗದೆ ದಶರಥನು ಕೆಲವೇ ದಿನಗಳಲ್ಲಿ ಇಹಲೋಕವನ್ನು ತ್ಯಜಿಸುತ್ತಾನೆ. ಈ ದುರಂತ ಘಟನೆಗಳೆಲ್ಲ ಸಂಭವಿಸುತ್ತಿದ್ದಾಗ ಭರತನು ತನ್ನ ಬಂಧುಗಳ ರಾಜ್ಯದಲ್ಲಿದ್ದನು. ದಶರಥನ ಅಂತ್ಯ ಸಂಸ್ಕಾರ ಮಾಡಲು ಮತ್ತು ರಾಜ್ಯಭಾರವನ್ನು ವಹಿಸಿಕೊಳ್ಳಲು ಭರತನನ್ನು ತುರ್ತಾಗಿ ಅಯೋಧ್ಯೆಗೆ ಕರೆಸಿಕೊಳ್ಳಲಾಗುತ್ತದೆ.
ಭರತನು ಅಯೋಧ್ಯೆಗೆ ಹಿಂದಿರುಗಿದಾಗ ಅವನ ಮೇಲೆ ಆಘಾತಗಳ ಸರಮಾಲೆಯೇ ಎರಗುತ್ತದೆ. ಮೊದಲನೆಯದು ತಂದೆಯ ಸಾವು. ಎರಡನೆಯದು ತನ್ನ ಅಗ್ರಜನು ಅರಣ್ಯದಲ್ಲಿ. ಮೂರನೆಯದು ಈ ಭಯಂಕರ ಘಟನೆಗಳಿಗೆ ತನ್ನ ತಾಯಿಯೇ ಕಾರಣ ಎನ್ನುವುದು. ನಾಲ್ಕನೆಯದು, ತನ್ನ ತಂತ್ರಗಾರಿಕೆಯಿಂದ ಭರತನು ಸಂತೋಷಪಡುತ್ತಾನೆ ಎಂದು ಅವಳು ಭಾವಿಸಿದುದು. ಇದೆಲ್ಲ ಅವನು ತನ್ನ ತಾಯಿಯೊಂದಿಗೆ ಮಾಡಿದ ಕುತಂತ್ರಗಳೆಂದು ಆಸ್ಥಾನದಲ್ಲಿದ್ದವರು ಮತ್ತು ಪ್ರಜೆಗಳು ಅವನ ಬಗೆಗೆ ಶಂಕಿತರಾದುದು. ಅವನು ತನ್ನ ಮನಸ್ಸು ಗಟ್ಟಿಮಾಡಿಕೊಂಡು, ಚಕ್ರವರ್ತಿಗೆ ತಕ್ಕುನಾದ ವ್ಯಾಪಕವಾದ ಅಂತಿಮ ಸಂಸ್ಕಾರವನ್ನು ನೆರವೇರಿಸುತ್ತಾನೆ. ಅದರೊಂದಿಗೆ ಕೆಲವು ತೀವ್ರವಾದ ತಪ್ಪಭಿಪ್ರಾಯಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಾನೆ. ಅಯೋಧ್ಯೆಗೆ ಹಿಂದಿರುಗಿ ಸಿಂಹಾಸನವನ್ನು ಸ್ವೀಕರಿಸುವಂತೆ ರಾಮನನ್ನು ಕೋರಲು ಖುದ್ದಾಗಿ ಅರಣ್ಯಕ್ಕೆ ತೆರಳಲು ಭರತ ನಿರ್ಧರಿಸುತ್ತಾನೆ.
ಪ್ರಾಮಾಣಿಕತೆ ಶಂಕೆಯನ್ನು ದೂರಮಾಡಿತು
ಭರತನು ತನ್ನ ಆದರ್ಶನೀಯ ನಿರ್ಣಯವನ್ನು ಆಸ್ಥಾನದಲ್ಲಿ ವ್ಯಕ್ತಪಡಿಸಿದಾಗ, ದುಷ್ಕಾರ್ಯದಲ್ಲಿ ಅವನು ಭಾಗಿಯಾಗಿದ್ದನೆಂಬ ಶಂಕೆಗಳು ಮಂತ್ರಿ ವರ್ಗದ ಮನದಿಂದ ದೂರವಾದವು. ಅವನ ನಿಸ್ವಾರ್ಥತೆಯು ಅವರಲ್ಲಿ ಚೈತನ್ಯ ಉಂಟುಮಾಡಿತು ಮತ್ತು ತಮ್ಮ ಪ್ರೀತಿಯ ರಾಮನು ಹಿಂದಿರುಗುವ ಸಾಧ್ಯತೆಯನ್ನೂ ಮೂಡಿಸಿತು. ಭರತನೊಂದಿಗೆ ಅರಣ್ಯಕ್ಕೆ ತೆರಳಲು ಅವರೆಲ್ಲರೂ ಅಪೇಕ್ಷಿಸಿದರು. ಅವರ ಉಪಸ್ಥಿತಿಯು ತನ್ನ ಕೋರಿಕೆಯನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ತಿಳಿದಿದ್ದ ಅವನು ಅದಕ್ಕೆ ಸಂತೋಷದಿಂದ ಒಪ್ಪಿದ. ರಾಜಗುರು ವಸಿಷ್ಠರು, ಮಹಾಮಂತ್ರಿ ಸುಮಂತ್ರ ಹಾಗೂ ರಾಜಮಾತೆಯರಾದ ಕೌಸಲ್ಯ, ಸುಮಿತ್ರಾ ಮತ್ತು ಕೈಕೇಯಿ ಅವರುಗಳೂ ಹೊರಡಲು ಮುಂದಾಗುತ್ತಾರೆ.
ಕೈಕೇಯಿ ತನ್ನೊಂದಿಗೆ ಬರುವ ವಿಷಯದಲ್ಲಿ ಭರತನಿಗೆ ಒಲವಿರಲಿಲ್ಲ. ಆದರೆ ಭರತನು ತನ್ನ ಯೋಜನೆಯನ್ನು ತಿರಸ್ಕರಿಸಿ ಅವಳನ್ನು ದೂಷಿಸಿದ್ದರಿಂದ ಅವಳಲ್ಲಿ ಪರಿವರ್ತನೆಯಾಗಿತ್ತು. ಅವಳು ಪ್ರಾಮಾಣಿಕವಾಗಿ ಪಶ್ಚಾತ್ತಾಪಪಟ್ಟಿದ್ದಾಳೆ ಎನ್ನುವುದನ್ನು ಕಂಡುಕೊಂಡ ಭರತನು ಅವಳೂ ತನ್ನೊಂದಿಗೆ ಬರಲು ಒಪ್ಪಿದನು. ಅಲ್ಲದೆ, ರಾಮನ ವನವಾಸಕ್ಕೆ ಒತ್ತಾಯಿಸಿದ್ದ ಅವಳು ಈಗ ಅವನನ್ನು ಹಿಂದಿರುಗುವಂತೆ ಕೋರಿದರೆ ಅದು ಅವನ ಮೇಲೆ ಪ್ರಭಾವ ಬೀರಬಹುದು ಎಂದೂ ಭರತ ಭಾವಿಸಿದ. ಭರತನ ಈ ನ್ಯಾಯೋಚಿತ ನಿರ್ಣಯವನ್ನು ಕೇಳಿದ ಪ್ರಜೆಗಳು ಆನಂದಿತರಾದರು ಮತ್ತು ಅನೇಕ ಜನರು ಅವನೊಂದಿಗೆ ಹೋಗಲು ಆಶಿಸಿದರು. ಪ್ರಬಲ ಶಕ್ತಿಯ ಪ್ರದರ್ಶನವು ರಾಮನ ಮನ ಒಲಿಸಬಹುದು ಎಂದು ಭಾವಿಸಿದ ಭರತನು ಅರಣ್ಯಕ್ಕೆ ಜನರ ಭಾರಿ ಮೆರವಣಿಗೆಯನ್ನು ಒಯ್ಯಲು ಸಾಧ್ಯವಾಗುವಂತೆ ರಸ್ತೆಯನ್ನು ನಿರ್ಮಿಸಲು ಆದೇಶಿಸಿದ.
ರಸ್ತೆ ನಿರ್ಮಾಣವಾದ ಕೂಡಲೇ ಭರತನು ರಾಮನು ಸಾಗಿದ ಹಾದಿಯನ್ನು ಹುಡುಕಲು ಹೆಣಗಾಡಿದ. ಅವನು ಗುಹ ಮತ್ತು ಭರದ್ವಾಜ ಮುನಿಗಳ ನೆರವು ಕೋರಿದ. ಆದರೆ ಇಷ್ಟು ಅಗಾಧ ಗುಂಪಿನೊಂದಿಗೆ ಭರತನು ರಾಮನ ಶೋಧಕ್ಕೆ ಹೊರಟಿರುವ ಬಗೆಗೆ ಮೊದಲು ಅವರಿಗೆ ಶಂಕೆಗಳಿದ್ದವು. ರಾಮನ ಬಗೆಗೆ ಅವನ ಉದ್ದೇಶಗಳನ್ನು ಕುರಿತಂತೆ ಅವರು ತಮ್ಮ ಶಂಕೆಯನ್ನು ಮುಚ್ಚಿಡಲಿಲ್ಲ. ಅದರಿಂದ ದುಃಖಿತನಾದರೂ ಭರತನು ತನ್ನ ಅಗ್ರಜ ರಾಮನ ಬಗೆಗೆ ತನಗಿರುವ ಪ್ರಾಮಾಣಿಕ ನಿಷ್ಠೆಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟನು. ಇದು ಅವರ ಶಂಕೆಯನ್ನು ನಿವಾರಿಸಿತಲ್ಲದೆ ಅವರ ಪ್ರೀತಿಯನ್ನೂ ಗಳಿಸಿತು. ರಾಮನು ಸಾಗಿದ ಹಾದಿಯನ್ನು ಅವರು ತೋರಿಸಿದರು.
ನಾವು ತಪ್ಪು ಮಾಡಿದಾಗ ಯಾರಾದರೂ ಆರೋಪಿಸಿದರೂ ಕೂಡ ಸಾಮಾನ್ಯವಾಗಿ ನಾವು ಕೋಪಗೊಳ್ಳುತ್ತೇವೆ. ಇನ್ನು ತಪ್ಪೇ ಮಾಡದಿದ್ದಾಗ . . . ಏನು ಹೇಳುವುದು? ಭರತನು ಪದೇ ಪದೇ ತಪ್ಪು ಆರೋಪಗಳಿಗೆ ಗುರಿಯಾಗುತ್ತಿದ್ದ. ಅವರ ಬಾಯಿಮುಚ್ಚಿಸಲು ಅವನ ಬಳಿ ರಾಜ್ಯದ ಅಧಿಕಾರವಿತ್ತು. ಆದರೆ ಕೋಪದಿಂದ ಅಂತಹ ಅಧಿಕಾರವನ್ನು ಬಳಸುವುದಕ್ಕಿಂತ ಅವನು ತನ್ನ ಹೃದಯದ ಶಕ್ತಿಯಿಂದ ತನ್ನ ವಿರುದ್ಧ ಆರೋಪಿಸಿದವರ ಮನ ಗೆಲ್ಲುತ್ತಿದ್ದ. ತನ್ನ ಎದೆಯ ಬೇಗುದಿಯನ್ನು ಪ್ರಾಮಾಣಿಕವಾಗಿ ಹೊರಹಾಕುತ್ತ ಅವನು, ತನ್ನ ತಂದೆಯ ವಿರುದ್ಧದ ಸಂಚಿನ ಬಗೆಗೆ ತಾನೆಷ್ಟು ಅಜ್ಞಾನಿ ಎನ್ನುವುದನ್ನು ತೀವ್ರವಾಗಿ ವ್ಯಕ್ತಪಡಿಸುತ್ತಿದ್ದ ಮತ್ತು ತನ್ನನ್ನು ಶಂಕಿಸುವವರನ್ನು ನಿರಾಯುಧಗೊಳಿಸುತ್ತಿದ್ದ.
ಪ್ರೀತಿ ಗೆದ್ದಿತು, ಅಂತೆಯೇ ಕರ್ತವ್ಯ ಕೂಡ
ದಟ್ಟ ಅರಣ್ಯದಲ್ಲಿ ಸುದೀರ್ಘ ಪ್ರಯಾಣದ ಅನಂತರ ಭರತನು ಚಿತ್ರಕೂಟದಲ್ಲಿ ಒಂದು ಸರಳ ಕುಟೀರವನ್ನು ಕಂಡನು. ಅದರ ಹೊರಗೆ ರಾಮ, ಸೀತೆ ಮತ್ತು ಲಕ್ಷ್ಮಣ ಕುಳಿತಿದ್ದರು. ಪರಿಚಿತ ರಾಜ ವಸ್ತ್ರಗಳಿಗೆ ಬದಲಾಗಿ ನಾರು ಉಡುಗೆಯಲ್ಲಿದ್ದ ಅವರನ್ನು ನೋಡಿ ಭರತನಿಗೆ ನೋವಾಯಿತು. ತನ್ನ ಸೋದರನ ಕಾಲಿನಡಿ ಕುಸಿದು ಅವನು ಅವರ ವಿಧಿಯನ್ನು ಕಂಡು ದುಃಖಿಸುತ್ತಾನೆ. ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡ ಮೇಲೆ ರಾಮನು ತಮ್ಮ ತಂದೆಯ ಯೋಗಕ್ಷೇಮವನ್ನು ವಿಚಾರಿಸುತ್ತಾನೆ. ರಾಜ ಗಜವು ಅದರ ಮೇಲೆ ರಾಜನಿಲ್ಲದೆ ಮೆರವಣಿಗೆಯಲ್ಲಿ ಬರುತ್ತಿರುವುದನ್ನು ಕಂಡು ರಾಮನಿಗೆ ಶಂಕೆ ಕಾಡುತ್ತದೆ. ಭಾರ ಹೃದಯದಿಂದ ಭರತನು ತಂದೆಯ ನಿಧನ ವಾರ್ತೆಯನ್ನು ಅರುಹುತ್ತಾನೆ.
ರಾಮನಿಗೆ ದುಃಖದಿಂದ ಆಘಾತವಾಗುತ್ತದೆ. ಅಂತೂ ಹೇಗೋ ಧೀರ ಸಂಯಮದಿಂದ ಸಾಂತ್ವನಗೊಳ್ಳುವ ರಾಮನು, ತನ್ನ ತಂದೆಗೆ ಜಲ ಸಂಸ್ಕಾರ ನೀಡಲು ಸಮೀಪದ ನದಿ ಬಳಿಗೆ ಹೋಗುತ್ತಾನೆ. ನಿಧಾನವಾಗಿ ಆಘಾತ ಮತ್ತು ದುಃಖವು ಕಡಮೆಯಾದಾಗ ರಾಮನ ಜವಾಬ್ದಾರಿಯುತ ರಾಜನ ಮನಸ್ಸು ಬರಿದಾದ ಸಿಂಹಾಸನದತ್ತ ತಿರುಗುತ್ತದೆ. ಜೊತೆಗೆ ರಾಜ್ಯದ ಮೇಲಿನ ಆಕ್ರಮಣಕಾರರ ಬಗೆಗೂ ಯೋಚಿಸುತ್ತಾನೆ. ಭರತನು ಈ ಅವಕಾಶವನ್ನು ಉಪಯೋಗಿಸಿಕೊಂಡು ಅಯೋಧ್ಯೆಗೆ ಹಿಂದಿರುಗಿ ಸಿಂಹಾಸನವನ್ನು ಸ್ವೀಕರಿಸಬೇಕೆಂದು ತನ್ನ ಸೋದರನಲ್ಲಿ ಪರಿಪರಿಯಾಗಿ ಬೇಡುತ್ತಾನೆ.
ರಾಮನು ವಿನಯವಾಗಿಯೇ ತಿರಸ್ಕರಿಸುತ್ತಾನೆ. ತನ್ನ ತಂದೆಗೆ ತಾನು ಈಗ ಸಲ್ಲಿಸಬಹುದಾದ ಸೇವೆ ಎಂದರೆ ಅವರ ಮಾತನ್ನು ಈಡೇರಿಸಿ ಅವರ ನೆನಪಿಗೆ ಗೌರವ ಅರ್ಪಿಸುವುದಾಗಿದೆ ಎಂದು ರಾಮ ಹೇಳುತ್ತಾನೆ. ರಾಮನು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ ಎಂದು ಭರತನು ನಿರೀಕ್ಷಿಸಿಯೇ ಇದ್ದ. ಆದುದರಿಂದ ತಾನು ರಾಮನ ಸ್ಥಾನದಲ್ಲಿ ಅರಣ್ಯದಲ್ಲಿ ಇರುವುದಾಗಿ ಅವನು ಹೇಳುತ್ತಾನೆ. ಇದರಿಂದ ದಶರಥನ ಒಬ್ಬ ಮಗ ಅರಣ್ಯದಲ್ಲಿ ಇದ್ದಂತಾಯಿತು ಮತ್ತು ತಂದೆಯ ಮಾತನ್ನು ಗೌರವಿಸದಂತೆಯೂ ಆಯಿತೆಂದು ಭರತನು ವಾದಿಸುತ್ತಾನೆ. ಭರತನ ಅಚ್ಚರಿಯ ನಿಸ್ವಾರ್ಥ ಸಮರ್ಪಣೆಯನ್ನು ನೋಡಿ ರಾಮನು ನಸು ನಗುತ್ತಾನೆ. ಆದರೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಕರ್ಮವನ್ನು ಹೊರಬೇಕು ಮತ್ತು ಯಾರೂ ಕೂಡ ಮತ್ತೊಬ್ಬರ ಸ್ಥಾನವನ್ನು ಪಡೆದುಕೊಳ್ಳಲಾಗದು ಎಂದು ರಾಮನು ಉತ್ತರಿಸುತ್ತಾನೆ.
ರಾಮ ಮತ್ತು ಭರತ ಇಬ್ಬರ ಪ್ರೀತಿಯ, ತೀವ್ರವಾದ ಚರ್ಚೆಯು ಗಂಟೆಗಟ್ಟಲೆ ನಡೆಯುತ್ತದೆ. ಸೋದರರಿಬ್ಬರೂ ಪರಸ್ಪರ ಮನವೊಲಿಕೆಗಾಗಿ ಧರ್ಮ ಗ್ರಂಥಗಳನ್ನು ಮತ್ತು ಪಾರಂಪರಿಕ ನಿದರ್ಶನಗಳನ್ನು ನೀಡುತ್ತಾರೆ. ಸೋದರರ ಪಾಂಡಿತ್ಯವನ್ನು ನೋಡಿ ಪ್ರಜೆಗಳಿಗೆ ಅಚ್ಚರಿ ಮತ್ತು ಹೆಮ್ಮೆ. ಅಲ್ಲಿ ನೆರೆದಿದ್ದ ಬ್ರಾಹ್ಮಣರು ಮತ್ತು ಋಷಿಗಳೂ ಪ್ರಭಾವಿತರಾದರು ಮತ್ತು ಆನಂದಿತರಾದರು. ಸುದೀರ್ಘ ಚರ್ಚೆಯಾದರೂ ಇಬ್ಬರೂ ಪಟ್ಟು ಸಡಿಲಿಸಲಿಲ್ಲ : ಭರತ ತನ್ನ ಕೋರಿಕೆಯಲ್ಲಿ ಮತ್ತು ರಾಮ ತನ್ನ ತ್ಯಾಗದಲ್ಲಿ.
ಭರತನು ಮುನ್ನಡೆ ಸಾಧಿಸುವುದು ಅಸಾಧ್ಯವಾಗುತ್ತಿರುವುದನ್ನು ಕಂಡ ಹಿರಿಯರು ರಾಮನ ಮನವೊಲಿಕೆಗೆ ಪ್ರಯತ್ನಿಸಿದರು. ವಸಿಷ್ಠ, ರಾಣಿಯರು, ಸುಮಂತ್ರ ಮತ್ತು ಜೊತೆಗೂಡಿದ್ದ ಬ್ರಾಹ್ಮಣರು ರಾಮನೇಕೆ ಹಿಂದಿರುಗಬೇಕೆನ್ನುವುದಕ್ಕೆ ಅನೇಕ ಕಾರಣಗಳನ್ನು ನೀಡಿದರು. ರಾಮನು ಅವರ ವಾದಗಳಿಗೆ ಗೌರವದಿಂದಲೇ ಉತ್ತರಿಸುತ್ತಾನೆ. ಆದರೆ ಅವನು ತನ್ನ ನಿಲುವಿನಲ್ಲಿ ಕಿಂಚಿತ್ತೂ ಬದಲಾಗುವುದಿಲ್ಲ.
ಈ ಹಂತದಲ್ಲಿ ಭರತನು ಪ್ರಯತ್ನವನ್ನು ಕೈಬಿಟ್ಟಿದ್ದರೆ ಅದು ಸಮರ್ಥನೀಯವಾಗಬಹುದಿತ್ತು. ರಾಮನ ವನವಾಸಕ್ಕೆ ತಾನು ಕಾರಣನಲ್ಲ ಮತ್ತು ಅವನನ್ನು ವಾಪಸು ಕರೆತರಲು ತಾನು ಪ್ರಯತ್ನಿಸಿದೆ ಎಂದು ಅವನು ಹೇಳಬಹುದಿತ್ತು : “ರಾಮನು ಕೇಳಲು ಸಿದ್ಧನಾಗಿಲ್ಲದಿದ್ದರೆ, ಸಾಮ್ರಾಜ್ಯವನ್ನು ಸ್ವೀಕರಿಸದೆ ನಾನು ಇನ್ನೇನು ಮಾಡಲಿ?” ತಮ್ಮ ಮಡಿಲಿಗೆ ಬಂದು ಬೀಳುವ ರಾಜ್ಯವನ್ನು ಬಹಳ ಜನರು ಸ್ವೀಕರಿಸುತ್ತಿದ್ದರು.
ಆದರೆ ಭರತನು ಆ ಬಹಳ ಜನರಂತಲ್ಲ. ರಾಮನು ಹಿಂದಿರುಗುವ ತನ್ನ ಆಸೆ ಚದುರುತ್ತಿರುವುದನ್ನು ಕಂಡು ಭರತನು ತನ್ನ ಕೋರಿಕೆಯ ಕೊನೆ ಪ್ರಯತ್ನ ಮಾಡುತ್ತಾನೆ. ಅವನು ಅರಣ್ಯದ ನೆಲದ ಮೇಲೆ ಕೂರುತ್ತಾನೆ. ರಾಮನು ರಾಜ್ಯವನ್ನು ಸ್ವೀಕರಿಸುವವರೆಗೂ ತಾನು ಅಲ್ಲಿಯೇ ಉಪವಾಸ ಕೂರುವುದಾಗಿ ಅವನು ಸಾರುತ್ತಾನೆ. ಎಲ್ಲರೂ ಸ್ತಬ್ಧರಾಗಿ ರಾಮನ ಪ್ರತಿಕ್ರಿಯೆಗಾಗಿ ಕಾಯುತ್ತಾರೆ. ರಾಮನು ಭರತನನ್ನು ಮೇಲಕ್ಕೆತ್ತಿ ಆಲಿಂಗಿಸಿಕೊಳ್ಳುತ್ತಾನೆ. “ನಿನ್ನ ಪ್ರೀತಿ ಗೆದ್ದಿತು” ಎಂದು ರಾಮ ಹೇಳುತ್ತಾನೆ. ಭರತನ ಮುಖವು ಆನಂದದಿಂದ ಅರಳುತ್ತಿದ್ದಾಗ, ರಾಮನು ನಗೆ ಸೂಸುತ್ತ ತಾನು ರಾಜ್ಯವನ್ನು ಸ್ವೀಕರಿಸುವುದಾಗಿ ಹೇಳುತ್ತಾನೆ. ಆದರೆ ತಂದೆಯ ಮಾತನ್ನು ಗೌರವಿಸಲು ತಾನು ತನ್ನ 14 ವರ್ಷಗಳ ವನವಾಸ ಕಾಲದಲ್ಲಿ ರಾಜ್ಯವನ್ನು ಭರತನಿಗೆ ಒಪ್ಪಿಸುತ್ತಿರುವುದಾಗಿ ಹೇಳುತ್ತಾನೆ. ಹೀಗೆ ರಾಮನು ಭರತನ ಪ್ರೀತಿ ಮತ್ತು ತನ್ನದೇ ಕರ್ತವ್ಯವನ್ನು ಗೌರವಿಸುತ್ತ ಬುದ್ಧಿ ಮತ್ತು ವಿವೇಕದಿಂದ ಬಿಕ್ಕಟ್ಟನ್ನು ಪರಿಹರಿಸುತ್ತಾನೆ.
ನಿಸ್ವಾರ್ಥತೆಯ ಚಿಹ್ನೆಯಾಗಿ ಪಾದುಕೆ
ಭರತನಿಗೆ ನಿರಾಶೆಯಾಯಿತು. ಆದರೆ ರಾಮನಿಗೆ ಮನವರಿಕೆ ಮಾಡಲು ತಾನು ಇನ್ನೇನೂ ಮಾಡುವುದು ಸಾಧ್ಯವಿಲ್ಲ ಎಂದು ಅವನಿಗೆ ಗೊತ್ತು. ಆದರೂ ಅವನ ನಿಸ್ವಾರ್ಥತೆ ಮತ್ತೊಂದು ಪ್ರೀತಿಯ ಅಭಿವ್ಯಕ್ತಿಯನ್ನು ಕಂಡುಕೊಂಡಿತು.
ಅನೇಕ ಬಾರಿ ನಮ್ಮ ಅಹಂ ನಾವು ಇರುವುದಕ್ಕಿಂತ ಉತ್ತಮವಾಗಿರಲು ಅಪೇಕ್ಷಿಸುವಂತೆ ಮಾಡುತ್ತದೆ. ಉದಾಹರಣೆಗೆ ಜನರು ತಾವು ಇರುವುದಕ್ಕಿಂತ ಹೆಚ್ಚು ವಿದ್ವಾಂಸರೆಂದು ತೋರಿಸಿಕೊಳ್ಳಲು ವಾಗಾಡಂಬರ ಪ್ರದರ್ಶಿಸುತ್ತಾರೆ. ಜನಪ್ರಿಯ ವ್ಯಕ್ತಿಯೊಂದಿಗೆ ನಿಜವಾದ ಸಂಪರ್ಕಕ್ಕಿಂತ ಸಾಮೀಪ್ಯವನ್ನು ತೋರಿಸಿಕೊಳ್ಳುವುದು. ಉಸ್ತುವಾರಿ ಆಡಳಿತಗಾರನು ಎಲ್ಲರ ಮೇಲೆ ಅಧಿಕಾರ ಚಲಾಯಿಸುತ್ತ ತಾನೇ ನಿಜವಾದ ಆಡಳಿತಗಾರ ಎಂದು ತೋರಿಸಿಕೊಳ್ಳುವುದು.
ಅದಕ್ಕೆ ಪ್ರತಿಯಾಗಿ ಭರತನು ತಾನು ಉಸ್ತುವಾರಿ, ನಿಜವಾದ ರಾಜನಲ್ಲ ಎನ್ನುವುದನ್ನು ಎಲ್ಲರೂ ಅರಿಯಬೇಕೆಂದು ಬಯಸಿದ. ಆದುದರಿಂದ ಅವನು ರಾಮನ ಪಾದುಕೆಗಳನ್ನು ಬೇಡಿದ. ಅದನ್ನು ಸಿಂಹಾಸನದ ಮೇಲೆ ಇಡುವುದಾಗಿ ಹೇಳಿದ. ಸಿಂಹಾಸನದ ಕೆಳ ಭಾಗದಲ್ಲಿ ತಾನು ಆಸೀನನಾಗಬೇಕೆಂದು ಅವನು ಇಚ್ಛಿಸಿದ. ರಾಮನೇ ನಿಜವಾದ ರಾಜ ಮತ್ತು ಭರತ ಅವನ ಸೇವಕ ಎಂಬ ತನ್ನ ಹೃದಯದಾಳದ ಒಲವು ರಾಜನ ಆಸ್ಥಾನದ ಸ್ಥಾನದಲ್ಲಿ ಬಿಂಬಿತವಾಗಬೇಕೆನ್ನುವುದು ಅವನ ಉದ್ದೇಶವಾಗಿತ್ತು. ಅದನ್ನು ದೃಢಪಡಿಸಲು ಅವನು ಪಾದುಕೆಗಳನ್ನು ಬೇಡಿದ.
ರಾಮನು ತನ್ನ ಪಾದುಕೆಗಳನ್ನು ನೀಡಿದ ಮೇಲೆ ಭರತನು ಅವುಗಳನ್ನು ತನ್ನ ಶಿರದ ಮೇಲೆ ಇರಿಸಿಕೊಂಡ. ವನವಾಸದ ಕಾಲ ಪೂರ್ಣಗೊಂಡ ಕೂಡಲೇ ಹಿಂದಿರುಗಬೇಕೆಂದು ಅವನು ರಾಮನನ್ನು ಕೋರುತ್ತಾನೆ. ಅದಕ್ಕಿಂತ ಒಂದು ದಿನ ಕೂಡ ತಾನು ತನ್ನ ಜೀವನವನ್ನು ನಿರ್ವಹಿಸುವುದು ಸಾಧ್ಯವಿಲ್ಲ ಎಂದು ಅವನು ಸಾರುತ್ತಾನೆ. ರಾಮನನ್ನು 14 ವರ್ಷ ಅಗಲಿರುವುದೇ ಅತ್ಯಂತ ನೋವು ಮತ್ತು ದುಃಖದ ಸಂಗತಿ ಎನ್ನುತ್ತಾನೆ. ತಾನು ಹಿಂದಿರುಗುವೆನೆಂದು ರಾಮನು ಆಶ್ವಾಸನೆ ನೀಡುತ್ತಾನೆ ಮತ್ತು ಭರತನು ಕಣ್ಣೀರಿಡುತ್ತ ಹೊರಡುತ್ತಾನೆ.
ಮುಂದಿನ 14 ವರ್ಷಗಳ ಕಾಲ ಭರತನು ರಾಜನ ಎಲ್ಲ ಕರ್ತವ್ಯಗಳನ್ನೂ ನಿರ್ವಹಿಸುತ್ತಾನೆ. ಆದರೆ ಎಲ್ಲ ಹಕ್ಕು ಬಾಧ್ಯತೆಗಳನ್ನು ನಿರಾಕರಿಸುತ್ತಾನೆ. ಭರತನ ಕ್ರಮವು ಯಾವುದೇ ಕರ್ತವ್ಯಗಳನ್ನು ನಿರ್ವಹಿಸದೇ ಹಕ್ಕುಗಳನ್ನು ಅನುಭವಿಸುವ ಇಂದಿನ ನಾಯಕರ ಪ್ರವೃತ್ತಿಗೆ ತದ್ವಿರುದ್ಧ. ಭರತನು ನಗರದ ಹೊರ ಭಾಗದಲ್ಲಿ, ನಂದಿಗ್ರಾಮ ಎಂಬ ಸ್ಥಳದಲ್ಲಿ ಕುಟೀರದಲ್ಲಿ ನೆಲೆಸುತ್ತಾನೆ. ದಿಟವಾಗಿ ಭರತನು ರಾಮನು ಅಳವಡಿಸಿಕೊಂಡಿರುವ ಜೀವನ ಶೈಲಿಯನ್ನೇ ಅಳವಡಿಸಿಕೊಳ್ಳುತ್ತಾನೆ. ಅದೇ ರೀತಿಯ ಆಹಾರ ಮತ್ತು ವಸ್ತ್ರ. ಹೀಗೆ ರಾಮನು ಅರಣ್ಯದಲ್ಲಿ ನಡೆಸುತ್ತಿರುವ ನೇಮ ನಿಷ್ಠೆಯನ್ನು ಅವನು ರಾಜ್ಯದಲ್ಲಿ ನಡೆಸುತ್ತಾನೆ.
ಪರೀಕ್ಷೆ ಉತ್ತೀರ್ಣ
ರಾಮನ ವನವಾಸದ ಅಂತ್ಯದ ಸಮಯದಲ್ಲಿ ಅವನನ್ನು ಬರಮಾಡಿಕೊಳ್ಳಬೇಕೆಂಬ ತವಕದಲ್ಲಿಯೂ ಭರತನ ನಿಸ್ವಾರ್ಥತೆ ಕಾಣುತ್ತದೆ. ಅತ್ಯಂತ ಆದರ್ಶನೀಯವಾದ ನಿರ್ಣಯಗಳನ್ನೂ ನಾಶಪಡಿಸುವ ಶಕ್ತಿ ಕಾಲಕ್ಕಿದೆ ಎನ್ನುವುದು ರಾಮನಿಗೆ ಗೊತ್ತು. ಆದುದರಿಂದ ಈ 14 ವರ್ಷಗಳಲ್ಲಿ ಭರತನ ಭಾವನೆಗಳು ಬದಲಾಗಿದೆಯೇ, ಅವನು ರಾಜ್ಯದ ಅಧಿಕಾರಕ್ಕೆ ಅಂಟಿಕೊಂಡಿರುವನೇ ಎನ್ನುವುದನ್ನು ಪರೀಕ್ಷಿಸಲು ರಾಮನು ಬಯಸಿದ. ಭರತನು ರಾಜನಾಗಿಯೇ ಉಳಿಯಬೇಕೆಂದು ಬಯಸಿದರೆ ತಾನು ಹಿಂದಿರುಗುವುದು ಬೇಡ ಎಂದು ರಾಮನು ನಿರ್ಧರಿಸುತ್ತಾನೆ. ಅದರಂತೆ ಅವನು ಹನುಮಂತನನ್ನು ದೂತ ಮತ್ತು ವೀಕ್ಷಕನನ್ನಾಗಿ ಕಳುಹಿಸುತ್ತಾನೆ. ರಾಮನು ಅತಿ ಶೀಘ್ರದಲ್ಲಿ ಹಿಂದಿರುಗುತ್ತಾನೆ ಎಂಬ ಸಂದೇಶವನ್ನು ಅವನು ಭರತನಿಗೆ ನೀಡಬೇಕು. ಇದನ್ನು ಕೇಳಿ ಭರತನು ಏನಾದರೂ ಅಸಮಾಧಾನವನ್ನು ತೋರುವನೇ ಎನ್ನುವುದನ್ನು ಗಮನಿಸು ಎಂದು ರಾಮನು ಹನುಮಂತನಿಗೆ ಹೇಳುತ್ತಾನೆ. ಸದಾ ರಾಮನಿಗೆ ಸೇವೆ ಸಲ್ಲಿಸಬೇಕೆಂಬ ತವಕದಲ್ಲಿರುವ ಹನುಮಂತನು ತತ್‌ಕ್ಷಣ ಹಾರುತ್ತಾನೆ ಮತ್ತು ನಂದಿಗ್ರಾಮದಲ್ಲಿ ಬಂದಿಳಿಯುತ್ತಾನೆ. ಭರತನಿಗೆ ರಾಮನ ಸಂದೇಶವನ್ನು ಅರುಹುತ್ತಾನೆ. ಇದನ್ನು ಕೇಳಿ ಭರತನು ಸಂತೋಷಭರಿತನಾಗುತ್ತಾನೆ. ಅವನ ಮುಖದಲ್ಲಿ ಆನಂದ. ಅಂತಹ ಒಳ್ಳೆಯ ವಾರ್ತೆಯನ್ನು ತಂದಿದ್ದಕ್ಕಾಗಿ ಅವನು ಹನುಮಂತನನ್ನು ಆಲಂಗಿಸಿಕೊಂಡು ಕೃತಜ್ಞತೆ ಅರ್ಪಿಸುತ್ತಾನೆ ಮತ್ತು ಅವನಿಗೆ ಉಡುಗೊರೆಗಳನ್ನು ನೀಡುತ್ತಾನೆ. ಭರತನ ಮುಖದಲ್ಲಿ ಮತ್ತು ಮಾತಿನಲ್ಲಿ ವ್ಯಕ್ತವಾದ ಸಂತೋಷ ಕಂಡು ಅವನಿಗೆ ರಾಮನನ್ನು ಕುರಿತು ಇರುವ ಪ್ರೀತಿ ವಾತ್ಸಲ್ಯಗಳ ಬಗೆಗೆ ಹನುಮಂತನಿಗೆ ಕಿಂಚಿತ್ತು ಸಂದೇಹ ಉಂಟಾಗಲಿಲ್ಲ.
ರಾಮನಿಗೆ ಭವ್ಯವಾದ ಸ್ವಾಗತ ಕೋರುವ ಸಿದ್ಧತೆಗಾಗಿ ಭರತನು ಧಾವಿಸುತ್ತಾನೆ. ಅತಿ ಕ್ಷಿಪ್ರವಾಗಿ ಆಸ್ಥಾನದವರು ಮತ್ತು ಪ್ರಜೆಗಳು ಭಾರೀ ಸಂಖ್ಯೆಯಲ್ಲಿ ಅಯೋಧ್ಯೆಯ ಹೊರ ಭಾಗದಲ್ಲಿ ಸೇರುತ್ತಾರೆ. ರಾಮನಿಗೆ ಕಾತರದಿಂದ ಕಾಯುತ್ತಾರೆ. ರಾಮನು ಸೀತೆ, ಲಕ್ಷ್ಮಣ ಮತ್ತು ಅಪಾರ ಸಂಖ್ಯೆಯಲ್ಲಿ ವಾನರ ಯೋಧರೊಂದಿಗೆ ಪುಷ್ಪಕ ವಿಮಾನದಲ್ಲಿ ಬರುತ್ತಿರುವುದನ್ನು ನೋಡಿ ಅವರೆಲ್ಲರೂ ಅಚ್ಚರಿ ಮತ್ತು ಆನಂದದಿಂದ ಏದುಸಿರು ಬಿಡುತ್ತಾರೆ. ವಿಮಾನವು ಕೆಳಗಿಳಿಯುತ್ತಿರುವಾಗ ಭರತನು ರಾಮನಿಗೆ ಪೂಜಾ ವಸ್ತುಗಳನ್ನು ಅರ್ಪಿಸುತ್ತಾನೆ. ರಾಮನು ವಿಮಾನದಿಂದ ಇಳಿದ ಕೂಡಲೇ ಭರತನು ಅವನತ್ತ ಧಾವಿಸಿ ಪಾದದಡಿ ಕುಸಿಯುತ್ತಾನೆ. ರಾಮನು ಪ್ರೀತಿಯಿಂದ ಅವನನ್ನು ಮೇಲಕ್ಕೆತ್ತಿ ಆಲಿಂಗಿಸಿಕೊಳ್ಳುತ್ತಾನೆ. ಅವರ ಹೃದಯಗಳು ಒಂದಾಗುತ್ತವೆ.
ಸಂಪತ್ತು ಸ್ವಾಧೀನಕ್ಕಿಂತ ಸಂಬಂಧಕ್ಕೆ ಮಹತ್ತ್ವ
ರಾಮನೊಂದಿಗಿನ ಬಾಂಧವ್ಯದಲ್ಲಿ ತಾನು ಆಸ್ವಾದಿಸಿದ ಪ್ರೀತಿಯು ರಾಜ್ಯವನ್ನು ಆಳಿದ ಸುಖಕ್ಕಿಂತ ಹೆಚ್ಚು ಅರ್ಥಪೂರ್ಣ ಮತ್ತು ಪರಿರ್ಣತೆಯುಳ್ಳದ್ದು ಎಂದು ಭರತನು ಭಾವಿಸಿದ. ನಾವು ಅವನಷ್ಟು ನಿಸ್ಸ್ವಾರ್ಥಿಗಳಾಗದಿದ್ದರೂ ನಮ್ಮ ಸಂಬಂಧಗಳಲ್ಲಿ ಸ್ವಲ್ಪ ನಿಸ್ವಾರ್ಥತೆಯನ್ನು ಹೆಚ್ಚಿಸಿಕೊಂಡರೂ ಅದು ಸ್ವಲ್ಪವಾದರೂ ಘರ್ಷಣೆಯನ್ನು ಕಡಮೆಮಾಡುತ್ತದೆ.
ರಾಮಾಯಣದ ಪಾಠಗಳು ನಮ್ಮ ಸಂಬಂಧಗಳನ್ನು ಹೇಗೆ ಸುಧಾರಿಸಿಕೊಳ್ಳಬೇಕೆನ್ನುವುದನ್ನು ನಮಗೆ ಬೋಧಿಸುವುದಕ್ಕಿಂತ ಹೆಚ್ಚು ಗಾಢವಾದವು. ರಾಮನು ಕೇವಲ ಆದರಣೀಯ ಪೂಜ್ಯ ಸೋದರನಲ್ಲ. ಅವನು ಸ್ವತಃ ಭಗವಂತ. ಆದರ್ಶ ಮಾನವ ಜೀವಿಯ ಪಾತ್ರ ನಿರ್ವಹಿಸಲು ಅವತರಿಸಿದವನು. ಅವನತ್ತ ತೋರುವ ಭಾವೋದ್ರೇಕ ನಮ್ಮನ್ನು ಶುದ್ಧಗೊಳಿಸುವ ಮತ್ತು ನಮ್ಮನ್ನು ಮೇಲಕ್ಕೆತ್ತುವ ಸಾಮರ್ಥ್ಯ ಉಳ್ಳದ್ದು. ಅಂತಿಮವಾಗಿ ನಮಗೆ ಪರಮ ವಿಮೋಚನೆ ನೀಡುವಂತಹುದು. ನಾವು ನಮ್ಮ ಭಕ್ತಿಸೇವೆಯ ಆಚರಣೆಯನ್ನು ನಿಸ್ವಾರ್ಥತೆಯೊಂದಿಗೆ ತುಂಬಿದಷ್ಟೂ, ನಮ್ಮ ಭಕ್ತಿಯು ಹೆಚ್ಚು ಶಕ್ತಿಶಾಲಿ, ಗಾಢ ಮತ್ತು ಆನಂದಮಯವಾಗುತ್ತದೆ. ಇದು ನಮ್ಮನ್ನು ಶಾಶ್ವತ ಆಧ್ಯಾತ್ಮಿಕ ಸಾಫಲ್ಯದ ಪಥಕ್ಕೆ ಕರೆದೊಯ್ಯುತ್ತದೆ.