ಗಿಣಿಗೆ ಕಾಯಿಲೆ ಅಥವಾ ಹಸಿವಾಗಿರುವುದು ಸ್ಪಷ್ಟವಾಗಿರುವಾಗ ಮತ್ತು ಅದರತ್ತ ತುರ್ತು ಗಮನ ಹರಿಸುವುದು ಅಗತ್ಯವಾಗಿರುವಾಗ ಆ ಮಹಿಳೆ ಏಕೆ ಗಿಣಿಯ ಪಂಜರದ ಧೂಳು ಒರೆಸುವಲ್ಲಿ ನಿರತಳಾಗಿದ್ದಾಳೆ? ಅವಳು ತನ್ನ ಚಿನ್ನದ ಪಂಜರವನ್ನು ಉಜ್ಜಿ ಹೊಳೆಯುವಂತೆ ಮಾಡುವಲ್ಲಿ ಎಷ್ಟು ಮಗ್ನಳಾಗಿದ್ದಾಳೆಂದರೆ ಬಹುಶಃ ಅವಳು ಆ ಬಡ ಪಕ್ಷಿಯನ್ನು ಮರೆತುಬಿಟ್ಟಿರಬೇಕು. ಅಥವಾ ಅದರ ಸಂಕಷ್ಟವನ್ನು ಗ್ರಹಿಸಲಾರದಷ್ಟು ಅವಳಿಗೆ ಕಿವುಡಿರಬಹುದು ಅಥವಾ ದೃಷ್ಟಿ ದೋಷವಿರಬಹುದು.
ಈ ಅನ್ಯಾಯವನ್ನು ಪರಿಹರಿಸಲು ಏನಾದರೂ ತುರ್ತಾಗಿ ಮಾಡಬೇಕೆಂಬ ನಮ್ಮ ಭಾವನೆಯು ಭೌತಿಕ ಲೋಕದಲ್ಲಿ ನಮ್ಮ ಸಂಕಷ್ಟಗಳನ್ನು ನೋಡುವಾಗ ಆತ್ಮ ಸಾಕ್ಷಾತ್ಕಾರ ಹೊಂದಿದ ಆಧ್ಯಾತ್ಮಿಕ ಗುರುವಿಗೆ ಆಗುವ ಭಾವನೆಗೆ ಹೋಲುವಂತಹುದು. ನೀವು ನೋಡುವ ಗಿಣಿಯು ಲೌಕಿಕ ದೇಹದೊಳಗೆ ಕೂಡಿ ಹಾಕಿದ ಪ್ರಜ್ಞೆಯ ಕಿಡಿ, ಆಧ್ಯಾತ್ಮಿಕ ಆತ್ಮವನ್ನು ಪ್ರತಿನಿಧಿಸುತ್ತದೆ. ಪಂಜರವು ಸ್ವತಃ ದೇಹವೇ ಆಗಿದ್ದು, ಅದು ಆತ್ಮವನ್ನು ಮುಚ್ಚಿ ಭೌತಿಕ ಲೋಕದಲ್ಲಿ ಸಿಕ್ಕಿಬೀಳಿಸಿರುತ್ತದೆ. ವೃದ್ಧೆಯು ಆಧ್ಯಾತ್ಮಿಕ ಆತ್ಮದ ಅಗತ್ಯವನ್ನು ಉಪೇಕ್ಷಿಸಿ ಹೊರ ದೇಹದ ಬೇಡಿಕೆಗಳನ್ನು ತೃಪ್ತಿಪಡಿಸಲು ಮಗ್ನಳಾಗಿ ಆಧ್ಯಾತ್ಮಿಕ ವೌಢ್ಯ, ಅಜ್ಞಾನದ ವ್ಯಕ್ತಿಯನ್ನು ಪ್ರತಿನಿಧಿಸುತ್ತಾಳೆ.

ಶ್ರೀಲ ಪ್ರಭುಪಾದರು ಆಧ್ಯಾತ್ಮಿಕ ಅಜ್ಞಾನದಿಂದ ನರಳುತ್ತಿರುವವರ ಬಗೆಗೆ ಅಪಾರವಾದ ಕರುಣೆಯನ್ನು ತೋರಿ ಅವರಿಗೆ ಅರಿವು ಉಂಟುಮಾಡಲು ಕೃಷ್ಣಪ್ರಜ್ಞೆ ವಿಜ್ಞಾನವನ್ನು ಬೋಧಿಸಲು ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಭಾರತದ ಅತ್ಯಂತ ಶ್ರೇಷ್ಠ ಆಧ್ಯಾತ್ಮಿಕ ಕೃತಿ ಶ್ರೀಮದ್ ಭಾಗವತಂ ಗೆ ಬರೆದಿರುವ ವ್ಯಾಖ್ಯಾನದಲ್ಲಿ ಅವರು ಹೇಳುತ್ತಾರೆ, “ಆಧ್ಯಾತ್ಮಿಕ ಆತ್ಮದ ಅಗತ್ಯಗಳನ್ನು ಪೂರೈಸಬೇಕು. ಗಿಣಿಯ ಪಂಜರವನ್ನು ಶುದ್ಧಗೊಳಿಸುವುದರಿಂದಲೇ ಗಿಣಿಯನ್ನು ತೃಪ್ತಿಪಡಿಸಲಾಗದು. ವಾಸ್ತವವಾಗಿ ನಮಗೆ ಗಿಣಿಯ ಅಗತ್ಯ ಏನೆಂದು ತಿಳಿದಿರಬೇಕು. ಲೌಕಿಕ ಬಂಧನದ ಸೀಮಿತ ವಲಯದಿಂದ ಹೊರಗೆ ಬರಬೇಕು ಮತ್ತು ಸಂಪೂರ್ಣ ಸ್ವಾತಂತ್ರ್ಯದ ಅಪೇಕ್ಷೆಯನ್ನು ಪೂರೈಸಿಕೊಳ್ಳಬೇಕು ಎನ್ನುವುದೇ ಆತ್ಮದ ಅಗತ್ಯವಾಗಿದೆ. ವಿಶ್ವದ ಮುಚ್ಚಿರುವ ಗೋಡೆಗಳ ಆಚೆಗೆ ಬರಬೇಕೆನ್ನುವುದು ಅದರ ಬಯಕೆಯಾಗಿದೆ. ಮುಕ್ತವಾದ ಬೆಳಕನ್ನು ನೋಡುವುದು ಅದರ ಆಸೆ. ಪರಿಪೂರ್ಣ ಆತ್ಮ, ದೇವೋತ್ತಮ ಪರಮ ಪುರುಷನ ದರ್ಶನವಾದಾಗಲೇ ಆ ಸಂಪೂರ್ಣ ಸ್ವಾತಂತ್ರ್ಯವನ್ನು ಸಾಧಿಸುವುದು ಸಾಧ್ಯ.
ಎಲ್ಲಕ್ಕಿಂತ ಮೊದಲು ಗಿಳಿಯು ಪಂಜರದ ಒಳಗೆ ಹೇಗೆ ಹೋಯಿತು ಎಂದು ನೀವು ಕೇಳಬಹುದು. ಅದು ಹೇಗೆ ಆತ್ಮವು ವಸ್ತುವಿನಿಂದ ಮುಚ್ಚಲ್ಪಟ್ಟಿತು? ನಾವು ಹೇಗೆ ಭಗವಂತನ ನೋಟವನ್ನು ಕಳೆದುಕೊಂಡೆವು?
ನಾವು ಪ್ರತಿಯೊಬ್ಬರೂ ಭಗವಂತನ ವಿಭಿನ್ನಾಂಶ, ಅವನ ಆಧ್ಯಾತ್ಮಿಕ ಶಕ್ತಿಯ ಒಂದು ಪುಟ್ಟ ಅಂಶ. ನಾವು ದೇವರ ವಿಭಿನ್ನಾಂಶವಾಗಿರುವುದರಿಂದ, ನಮ್ಮಲ್ಲಿ ಅವನ ಗುಣಗಳು ಇವೆ. ಆದರೆ ಅದು ಅಲ್ಪ ಪ್ರಮಾಣದಲ್ಲಿ. ಆ ಗುಣಗಳಲ್ಲಿ ಸ್ವಾತಂತ್ರ್ಯವೂ ಒಂದು.
ಭಗವಂತ ಅಥವಾ ಕೃಷ್ಣನಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಅವನು ತನಗಿಷ್ಟವಾದುದನ್ನು ಯಾವಾಗ ಬೇಕಾದರೂ ಮಾಡುತ್ತಾನೆ. ಕೃಷ್ಣನಿಗೆ ಸೇವೆ ಸಲ್ಲಿಸುವುದು ಮತ್ತು ಅವನನ್ನು ಅನುಕರಿಸಲು ಪ್ರಯತ್ನಿಸುವುದರ ಮಧ್ಯೆ ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯವು ನಮ್ಮ ಸ್ವಾತಂತ್ರ್ಯದಲ್ಲಿದೆ.
ಕೃಷ್ಣಸೇವೆ
ಕೃಷ್ಣನಿಗೆ ಸೇವೆ ಸಲ್ಲಿಸುವುದು ನಮ್ಮ ಸ್ವರೂಪ ಕ್ರಿಯೆಯಾಗಿದೆ ಮತ್ತು ಕೃಷ್ಣನ ಆಧ್ಯಾತ್ಮಿಕ ಲೋಕದಲ್ಲಿ ನಮಗೆ ಶಾಶ್ವತ ಆನಂದವನ್ನು ತಂದುಕೊಡುತ್ತದೆ. ಆದರೆ ನಾವು ಕೃಷ್ಣನನ್ನು ಅನುಕರಿಸಲು ಪ್ರಯತ್ನಿಸಿದಾಗ, ಪರಮ ಭೋಕ್ತೃ ಮತ್ತು ನಿಯಂತ್ರಕನೆಂಬ ಅವನ ಸ್ಥಾನವನ್ನು ಅತಿಕ್ರಮಿಸಲು ಪ್ರಯತ್ನಿಸಿದಾಗ, ನಾವು ಲೌಕಿಕ ಲೋಕಕ್ಕೆ ಬರಬೇಕು. ಇಲ್ಲಿ ನಾವು ಕೃಷ್ಣನನ್ನು ಮರೆಯುತ್ತೇವೆ, ವಸ್ತುವಿನಿಂದ ಮಾಡಿದ ದೇಹವನ್ನು ಪಡೆಯುತ್ತೇವೆ ಮತ್ತು ಹುಟ್ಟು, ವೃದ್ಧಾಪ್ಯ, ರೋಗ ಮತ್ತು ಸಾವಿನ ವೃತ್ತದಲ್ಲಿ ನರಳುತ್ತೇವೆ. ಊಹಿಸಲಾರದಷ್ಟು ಬಹಳ ಹಿಂದೆ, ನಾವು ಕೃಷ್ಣನಿಗೆ ಸೇವೆ ಸಲ್ಲಿಸುವುದು ಬೇಡ, ಕೇವಲ ಅವನನ್ನು ಅನುಕರಿಸೋಣ ಎಂಬ ಆಯ್ಕೆಯನ್ನು ಮಾಡಿಕೊಂಡೆವು. ಆಗಿನಿಂದಲೂ ನಾವು ವಸ್ತುವಿನಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ.
ನಮ್ಮ ಸಂಕಷ್ಟಗಳಿಗೆ, ನೋವಿಗೆ ಅಂತ್ಯ ಹಾಡಲು ಕೃಷ್ಣಸೇವೆಯನ್ನು ಆಯ್ಕೆಮಾಡಿಕೊಳ್ಳುವುದೇ ನಮಗೆ ಈಗ ಅಗತ್ಯವಾಗಿರುವುದು. “ನನ್ನ ದೈವೀಶಕ್ತಿಯನ್ನು ಮೀರುವುದು ಬಹಳ ಕಷ್ಟ. ಆದರೆ ನನಗೆ ಶರಣಾಗತರಾದವರು ಸುಲಭವಾಗಿ ಅದನ್ನು ದಾಟಿ ಹೋಗಬಲ್ಲರು” ಎಂದು ಕೃಷ್ಣನು ಭಗವದ್ಗೀತೆಯಲ್ಲಿ ಪ್ರತಿಪಾದಿಸುವಂತೆ (7.14), ಬೇರೆ ಇನ್ನಾವ ಮಾರ್ಗವೂ ಇಲ್ಲ. ಎಷ್ಟಾಗಲೀ, ಕೃಷ್ಣನು ಭಗವಂತ, ಆಧ್ಯಾತ್ಮಿಕ ಮತ್ತು ಲೌಕಿಕ ಶಕ್ತಿಯ ಪರಮ ನಿಯಂತ್ರಕ. ಅವನನ್ನು ಬಿಟ್ಟು ಆಚೆಗೆ ಬದುಕುವುದು ದುಃಖ, ನೋವು ಎನ್ನುವ ಪಾಠ ಕಲಿಸಲೆಂದೇ ಅವನು ಐಹಿಕ ಲೋಕವನ್ನು ಸೃಷ್ಟಿಸಿದ್ದಾನೆ. ಅದನ್ನು ಅರಿತು ಪುನಃ ಅವನಿಗೆ ಸೇವೆ ಸಲ್ಲಿಸಲು ಆರಂಭಿಸಿದರೆ ಅವನು ಕರುಣೆಯಿಂದ ನಮ್ಮನ್ನು ಲೌಕಿಕ ಬದುಕಿನ ನೋವಿನಿಂದ ಮೇಲಕ್ಕೆತ್ತುವನು.
ತನ್ನ ಪೂರ್ಣ ಶಕ್ತಿಯೊಂದಿಗೆ ಭಗವಂತನಿಗೆ ಸೇವೆ ಸಲ್ಲಿಸುವವನು ಭೌತಿಕ ದೇಹದೊಳಗೆ ಬದುಕಿದ್ದರೂ ಲೌಕಿಕ ಬಂಧನದಿಂದ ಮುಕ್ತನಾದವನು ಎಂದು ವೈದಿಕ ಸಾಹಿತ್ಯವು ಹೇಳುತ್ತದೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ಲೌಕಿಕ ಅಸ್ತಿತ್ವದ ಸಂತೋಷ ಮತ್ತು ನೋವು, ಏಳು ಮತ್ತು ಬೀಳುಗಳಿಗೆ ತಾನು ಅಲೌಕಿಕ ಎಂದು ಅವನು ಪ್ರತಿ ಕ್ಷಣವೂ ಅರ್ಥಮಾಡಿಕೊಳ್ಳುತ್ತಾನೆ. ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿಯೂ ಅವನು ವಿಚಲಿತನಾಗುವುದಿಲ್ಲ, ಕೃಷ್ಣನೊಂದಿಗಿನ ಅಲೌಕಿಕ ಪ್ರೀತಿಯ ಬಾಂಧವ್ಯದಲ್ಲಿ ಪ್ರಶಾಂತನಾಗಿರುತ್ತಾನೆ. ಚಿನ್ನದ ಪಂಜರದ ಗಿಣಿಗೆ ಸರಿಯಾಗಿ ಆಹಾರ ನೀಡಿ ರಕ್ಷಿಸಿದರೆ ಅದರ ಬದುಕು ಆನಂದಮಯವಾಗಿರುವಂತೆ ಕೃಷ್ಣನೊಂದಿಗಿನ ಆಧ್ಯಾತ್ಮಿಕ ಸಂಪರ್ಕದಿಂದ ಪೋಷಿಸಲ್ಪಟ್ಟಾಗ ಈ ಲೌಕಿಕ ಲೋಕದಲ್ಲಿಯೂ ನಮ್ಮ ಬದುಕು ಆನಂದಮಯವಾಗಿರುತ್ತದೆ.
ನಿಜ, ಪಂಜರದ ಗಿಳಿಯು ಸ್ವಾತಂತ್ರ್ಯದಲ್ಲಿಯೇ ಅಂತಿಮ ಸಂತೋಷವನ್ನು ಕಾಣುತ್ತದೆ. ಅದು ಅರಣ್ಯದಲ್ಲಿನ ತನ್ನ ಧಾಮಕ್ಕೆ ಹಿಂದಿರುಗುವ ಸ್ವಾತಂತ್ರ್ಯ. ಅದೇ ರೀತಿ, ಸಾಕ್ಷಾತ್ಕಾರ ಪಡೆದ ಆತ್ಮವು ಭಗವದ್ಧಾಮಕ್ಕೆ ಹಿಂದಿರುಗಲು, ಕೃಷ್ಣನೊಂದಿಗೆ ಶಾಶ್ವತವಾಗಿ ಬದುಕಲು ಹಂಬಲಿಸುತ್ತದೆ. ಭಗವಂತನಿಗೆ ಪೂರ್ಣವಾಗಿ ಶರಣಾಗುವುದರ ಫಲವೇ ಇದು.
ವೇದಗಳ ಕರೆ
ವೇದಗಳು ಗಟ್ಟಿಯಾಗಿ ಕೂಗಿ ಹೇಳುತ್ತಿವೆ, “ಎದ್ದೇಳಿ! ಮಾನವ ರೂಪದ ಬದುಕಿನ ವೌಲ್ಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಆಧ್ಯಾತ್ಮಿಕ ಅಜ್ಞಾನದ ಕತ್ತಲಿನಲ್ಲಿಯೇ ಉಳಿಯಬೇಡಿ. ಅಲೌಕಿಕ ಜ್ಞಾನದ ಬೆಳಕಿಗೆ ಬನ್ನಿ.” ಕೃಷ್ಣಪ್ರಜ್ಞೆ ಆಂದೋಲನದ ಭಕ್ತರು ಶ್ರೀಲ ಪ್ರಭುಪಾದರನ್ನು ಅನುಸರಿಸಿ ವೈದಿಕ ಸಾಹಿತ್ಯದ ಈ ಕರೆಯನ್ನು ಪ್ರತಿಧ್ವನಿಸುತ್ತಿದ್ದಾರೆ.
ಮಾನವ ಜೀವನವು ಅಪರೂಪ. ಆತ್ಮವನ್ನು ಅಜ್ಞಾನದಲ್ಲಿ ಮುಚ್ಚಿರುವ ಬದುಕಿನ ಈ ರೂಪದಲ್ಲಿ ಮಾತ್ರ, ಅಜ್ಞಾನದಿಂದ ಆವೃತವಾದ ಆತ್ಮವು ದೈಪ್ರಜ್ಞೆಯ ವಿಜ್ಞಾನವನ್ನು ಅರ್ಥಮಾಡಿಕೊಳ್ಳಬಹುದು. ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ ಉದ್ದೇಶವೆಂದರೆ, ಪುಸ್ತಕಗಳು ಮತ್ತು ಇತರ ಮಾಧ್ಯಮಗಳ ರೂಪದಲ್ಲಿ ದೈವ ಜ್ಞಾನವನ್ನು ನೀಡುವುದು, ಭಕ್ತಿಸೇವೆಯ ಮೂಲಕ ಭಗವಂತನೊಂದಿಗೆ ನಮ್ಮ ಪ್ರೀತಿಯ ಬಾಂಧವ್ಯವನ್ನು ಪುನರ್ ಸ್ಥಾಪಿಸಲು ಪ್ರಾಯೋಗಿಕ ವಿಧಾನವನ್ನು ಒದಗಿಸುವುದು ಮತ್ತು ನಮ್ಮ ಎಲ್ಲ ಜೈವಿಕ ಶಕ್ತಿಯೊಂದಿಗೆ ಭಗವಂತನಿಗೆ ಸೇವೆ ಸಲ್ಲಿಸುತ್ತ ಈ ಲೋಕದಲ್ಲಿ ಹೇಗೆ ಮುಕ್ತರಾಗಿ ಮತ್ತು ಆನಂದದಿಂದ ಬದುಕುವುದು ಸಾಧ್ಯ ಎನ್ನುವುದನ್ನು ಉದಾಹರಣೆಗಳ ಮೂಲಕ ತೋರಿಸುವುದು.
ಪಂಜರವನ್ನು ಹೊಳೆಯುವಂತೆ ಮಾಡುವುದನ್ನು ಬಿಟ್ಟು ಅದರೊಳಗೆ ಸಂಕಟಪಡುತ್ತಿರುವ ಗಿಳಿಯ ರಕ್ಷಣೆ ಮಾಡುವ ಆಯ್ಕೆ ಈಗ ನಮಗೆ ಬಿಟ್ಟಿದ್ದು.