ಶ್ರೀ ಕೃಷ್ಣನ ಅನಂತ ಗುಣಗಳ ಬಗೆಗೆ ಹೆಚ್ಚು ಹೆಚ್ಚು ಕೇಳಿದಷ್ಟೂ ನಾವು ಅವನೊಂದಿಗಿನ ಮೈತ್ರಿಗಿಂತ ಇನ್ನಾವುದೂ ನಮಗೆ ತೃಪ್ತಿ ನೀಡದು ಎನ್ನುವುದನ್ನು ಅರ್ಥ ಮಾಡಿಕೊಳ್ಳುತ್ತೇವೆ.

ಸ್ನೇಹಕ್ಕಾಗಿ ಹಂಬಲಿಸುವುದು ಸರ್ವಸಾಮಾನ್ಯ. ಪ್ರೀತಿಸುವ ನಮ್ಮ ಪ್ರವೃತ್ತಿಯ ಮೇಲೆ ಇದು ಆಧಾರಿತವಾಗಿದೆ. ಕೃಷ್ಣ ಪ್ರಜ್ಞೆ ಆಂದೋಲನದ ತಾತ್ತ್ವಿಕ ತಳಹದಿಗಳಲ್ಲಿ ಒಂದಾದ ಭಕ್ತಿ ರಸಾಮೃತ ಸಿಂಧು ಗ್ರಂಥದಲ್ಲಿ ಶ್ರೀಲ ಪ್ರಭುಪಾದರು ಈ ಪ್ರವೃತ್ತಿಯ ಬಗೆಗೆ ವಿವರಿಸಿದ್ದಾರೆ :
ಯಾರೋ ಒಬ್ಬರಲ್ಲಿ ಪ್ರೇಮ ತೋರುವ ಸಾಮಾನ್ಯ ಲಕ್ಷಣವು ಜೀವಿತಾವಸ್ಥೆಯ ಮೂಲ ತತ್ತ್ವ. ಇನ್ನೊಬ್ಬರಲ್ಲಿ ಪ್ರೇಮ ತೋರದೆ ಬದುಕಿರುವುದು ಯಾರಿಂದಲೂ ಸಾಧ್ಯವಿಲ್ಲ. ಈ ಪ್ರವೃತ್ತಿಯು ಎಲ್ಲ ಜೀವಿಗಳಲ್ಲಿಯೂ ಉಂಟು. ಹುಲಿಯಂತಹ ಕ್ರೂರ ಪ್ರಾಣಿಯಲ್ಲಿಯೂ ಕೂಡ ಈ ಪ್ರೇಮ ಪ್ರವೃತ್ತಿ ಕೊನೆಯ ಪಕ್ಷ ಸುಪ್ತವಾಗಿಯಾದರೂ ಇದೆ. ಮನುಷ್ಯರಲ್ಲಂತೂ ನಿಶ್ಚಯವಾಗಿ ಈ ಪ್ರವೃತ್ತಿ ಇದೆ. ಆದರೆ ಲೋಪವಾಗಿರುವ ಅಂಶವೊಂದಿದೆ. ಸಂತೋಷದಿಂದಿರಲು ನಾವು ಯಾರಲ್ಲಿ ಪ್ರೇಮತೋರಬೇಕೆನ್ನುವುದೇ ಆ ಲೋಪವಾಗಿರುವ ಅಂಶ. ಆ ಲೋಪವಾಗಿರುವ ಅಂಶವೇ ಕೃಷ್ಣ. ನಮ್ಮ ಮೂಲಭೂತ ಪ್ರವೃತ್ತಿಯಾದ ಕೃಷ್ಣಪ್ರೇಮವನ್ನು ಬಲಪಡಿಸಿಕೊಳ್ಳುವುದು ಎಂತು ಎಂಬುವುದನ್ನು ಭಕ್ತಿ ರಸಾಮೃತ ಸಿಂಧುವು ಬೋಧಿಸುತ್ತದೆ.
ಮೂಲ ಮಿತ್ರ
ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನೇ ನಮ್ಮ ಮೂಲ ಸ್ನೇಹಿತ ಎಂದು ವೈದಿಕ ಸಾಹಿತ್ಯವು ತಿಳಿಸುತ್ತದೆ. ಕೃಷ್ಣನೊಂದಿಗಿರುವ ಆನಂದದ ಬಾಂಧವ್ಯವನ್ನು ಐಹಿಕ ಲೋಕದ ಸಂಬಂಧಗಳಲ್ಲಿ ಸೃಷ್ಟಿಸಲು ಪ್ರಯತ್ನಿಸುತ್ತೇವೆ. ಆದರೆ ಅದು ಪರಿಪೂರ್ಣ ಸ್ನೇಹಕ್ಕಾಗಿ ನಮ್ಮ ಸಾರ್ವಕಾಲಿಕ ಹಂಬಲವನ್ನು ತೃಪ್ತಿಪಡಿಸುವುದಿಲ್ಲ. ಕೃಷ್ಣ ಅಥವಾ ಭಗವಂತನು ಎಲ್ಲ ಜೀವಿಗಳಲ್ಲಿಯೂ ಕಾಣಬುಹುದಾದ ಪ್ರೇಮ ಭಾವನೆಯ ದೈವೀ ಮೂಲ. ಪ್ರೇಮ ವಿನಿಮಯಕ್ಕಾಗಿನ ತನ್ನ ಅಕ್ಷಯ ಅಪೇಕ್ಷೆಯಿಂದಾಗಿ ಭಗವಂತನು ನಮ್ಮನ್ನು ಸೃಷ್ಟಿಸಿದ ಎಂದು ವೇದಗಳು ಹೇಳುತ್ತವೆ. ಈ ರೀತಿ ಅವನೊಂದಿಗಿನ ಸ್ನೇಹವು ಆತ್ಮದ ಮೂಲ ಸ್ಥಿತಿ.
ನಾವು ಶಾಶ್ವತವಾಗಿ ಕೃಷ್ಣನ ಒಂದು ಅಂಗವಾಗಿರುವುದರಿಂದ, ಅವನು ಮತ್ತು ನಮ್ಮ ನಡುವೆ ಸ್ವಾಭಾವಿಕ ಆಪ್ತತೆ ಇದೆ. ಶಾಶ್ವತ ಸುಖದ ನಮ್ಮ ಶೋಧದಲ್ಲಿ ನಾವು ಜನ್ಮದಿಂದ ಜನ್ಮಕ್ಕೆ ಈ ವಿಶ್ವದಲ್ಲಿ ಅಲೆದಾಡುತ್ತಿರುವಂತೆ ಭಗವಂತನು ನಮ್ಮ ಹೃದಯಗಳಲ್ಲಿ ಪರಮಾತ್ಮನಾಗಿ ನೆಲೆಸಿ ದಯೆಯಿಂದ ನಮ್ಮೊಂದಿಗೆ ಇರುತ್ತಾನೆ. ನಮಗಿಂತ ಭಿನ್ನವಾಗಿ, ಭಗವಂತನು ಲೌಕಿಕ ಸಂಪರ್ಕದಿಂದ ಎಂದಿಗೂ ಮಂದವಾಗದ ಆಧ್ಯಾತ್ಮಿಕ ದೃಷ್ಟಿಯನ್ನು ಹೊಂದಿದ್ದಾನೆ. ಆದುದರಿಂದ ಅವನಿಗೆ ನಮ್ಮ ಮೂರ್ಖತನ ಚೆನ್ನಾಗಿ ಗೊತ್ತು. ನಮ್ಮ ಪ್ರಯತ್ನಗಳ ನಿಷ್ಫಲತೆಯ ಅನುಭವದಿಂದ ನಾವು ಕಲಿಯಲು ಅವಕಾಶ ನೀಡುತ್ತ ಅವನು ನಮ್ಮ ಮೇಲೆ ಕರುಣೆ ತೋರುತ್ತಾನೆ. ಮತ್ತು ಸರ್ವ ಸುಖದ ಧಾಮವಾದ ತನ್ನತ್ತ ಪ್ರೀತಿಯಿಂದ ನಮ್ಮ ಗಮನ ಮರಳುವಂತೆ ಮಾಡುತ್ತಾನೆ.
ಶ್ರೀ ಕೃಷ್ಣನು ಪರಿಶುದ್ಧನಾಗಿರುವುದರಿಂದ, ಅವನ ಸ್ನೇಹವು ಎಂದಿಗೂ ಕಲುಷಿತವಾಗಿರುವುದಿಲ್ಲ. ಲೌಕಿಕ ಲೋಕದಲ್ಲಿ ಅಂತಿಮವಾಗಿ ಎಲ್ಲರೂ ತಮ್ಮ ಹಿತಾಸಕ್ತಿಗಳ ಬಗೆಗೇ ಚಿಂತಿಸುತ್ತಾರೆ – ಸ್ನೇಹಗಳೂ ಕೂಡ ನಮ್ಮ ಸುಖದ ಯೋಜನೆಯ ಭಾಗವೇ ಆಗುತ್ತವೆ.
ಯೋಗಕ್ಷೇಮ
ಅದಕ್ಕೆ ಪ್ರತಿಯಾಗಿ, ಶ್ರೀ ಕೃಷ್ಣನು ನಮ್ಮ ಯೋಗಕ್ಷೇಮದ ಬಗೆಗೇ ಕಾತರನಾಗಿರುತ್ತಾನೆ. ನಾವು ಅವನಿಂದ ವಿಮುಖರಾಗಿದ್ದರೂ, ಪರಮ ಭೋಕ್ತನಾಗಿ ಅವನ ಸ್ಥಾನದ ಬಗೆಗೆ ನಮಗೆ ಅಸೂಯೆ ಇದ್ದರೂ ಅವನು ನಮ್ಮ ಅಗತ್ಯಗಳನ್ನು ಪೂರೈಸುವುದನ್ನು ಮುಂದುವರಿಸುತ್ತಾನೆ. ಗಾಳಿ, ಬೆಳಕು, ನಮ್ಮ ಸಾಮರ್ಥ್ಯಗಳು ಮತ್ತು ಇತರ ಅಸಂಖ್ಯ ಉಡುಗೊರೆಗಳು ಅವನು ನಮ್ಮ ಬಗೆಗೆ ತೋರುವ ಪ್ರೀತಿಯ ಸ್ಪಷ್ಟ ಸೂಚನೆಗಳು. ಸ್ನೇಹವನ್ನು ಕುರಿತಂತೆ ಕೃಷ್ಣನ ಶ್ರೇಷ್ಠ ಅಭಿವ್ಯಕ್ತಿ ಎಂದರೆ ಅವನ ಸಹವಾಸ. ಇದನ್ನು ಅವನು ಉದಾರವಾಗಿ ಅಪೌರುಷೇಯ ವೈದಿಕ ಗ್ರಂಥಗಳು, ಸಂತರು ಮತ್ತು ಆಧ್ಯಾತ್ಮಿಕ ಗುರುಗಳ ಮೂಲಕ ನಮಗೆ ಕೊಡುತ್ತಾನೆ. ಈ ಮಹಾ ಸಂತರು ಯುಗಯುಗಗಳಲ್ಲಿ ಪ್ರತ್ಯಕ್ಷರಾಗಿ ಆಧ್ಯಾತ್ಮಿಕ ಲೋಕಕ್ಕೆ ಹಿಂದಿರುಗುವಂತೆ ನಮ್ಮನ್ನು ಆಹ್ವಾನಿಸುತ್ತಾರೆ.
ಜಡ ವಸ್ತುವಿನೊಂದಿಗೆ ಆತ್ಮದ ಸಮ್ಮಿಳನದಿಂದಾಗಿ ಆತ್ಮದ ಆಕರ್ಷಕ, ಚೈತನ್ಯಶೀಲ ಗುಣಗಳು ಲೌಕಿಕ ಲೋಕದಲ್ಲಿ ಜಡವಾಗಿಬಿಡುವ ಪ್ರವೃತ್ತಿ ತೋರುತ್ತವೆ. ಇದರ ಪರಿಣಾಮವಾಗಿ ಲೌಕಿಕ ಬಾಂಧವ್ಯಗಳ ಉತ್ಸುಕತೆಯು ಕ್ಷಿಪ್ರವಾಗಿ ಮಾಯವಾಗುತ್ತದೆ. ಸದಾ ಅದೇ ಮುಖಗಳನ್ನು ನೋಡಿ ನಾವು ನೀರಸಗೊಳ್ಳುತ್ತೇವೆ. ಆದರೆ ಕೃಷ್ಣನ ಅಲೌಕಿಕ ಗುಣಗಳು ಸದಾ ನವ ನವೀನ ಮತ್ತು ವಿಸ್ತಾರಗೊಳ್ಳುತ್ತಿರುತ್ತವೆ. ಆದುದರಿಂದ ಅವನು ಎಂದಿಗೂ ನಮಗೆ ನೀರಸವಾಗುವುದಿಲ್ಲ.
ವಿಜ್ಞಾನಿಗಳಿಗೆ ಸಮುದ್ರ ತೀರದ ಮರಳಿನ ಕಣ ಕಣಗಳನ್ನು ಅಥವಾ ವಿಶ್ವದ ಎಲ್ಲ ಅಣುಗಳನ್ನು ಎಣಿಸುವುದು ಸಾಧ್ಯವಾದರೂ ಅವರಿಗೆ ಭಗವಂತನ ಆನಂದಮಯ, ಸರ್ವಾಕರ್ಷಕ ಲಕ್ಷಣಗಳಲ್ಲಿ ಒಂದು ಬಿಂದುವನ್ನೂ ಅಂದಾಜು ಮಾಡುವುದು ಸಾಧ್ಯವಿಲ್ಲ. ಭಕ್ತಿ ರಸಾಮೃತ ಸಿಂಧುವು ಶ್ರೀ ಕೃಷ್ಣನ ಆಧ್ಯಾತ್ಮಿಕ ಗುಣಗಳ ಜ್ಞಾನೋದಯದ ಸಾರಾಂಶವನ್ನು ನೀಡುತ್ತದೆ. ಭಕ್ತಿಭಾವದಿಂದ ಈ ಶ್ರೇಷ್ಠ ಕೃತಿಯನ್ನು ಅಧ್ಯಯನ ಮಾಡುವುದರಿಂದ ನಾವು ಭಗವಂತನನ್ನು ಕುರಿತ ನಮ್ಮ ಮೆಚ್ಚುಗೆಯನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಆ ರೀತಿ ಅವನ ಅದ್ಭುತ ಸ್ನೇಹವನ್ನು ಅರಿಯುವ ಅಪೇಕ್ಷೆಯನ್ನು ಬೆಳೆಸಿಕೊಳ್ಳಬಹುದು.
ಸುದಾಮನ ಪ್ರೀತಿ
ಉದಾಹರಣೆಗೆ, ಮಿತ್ರರೊಂದಿಗಿನ ಅವನ ವ್ಯವಹಾರದಲ್ಲಿ ಕಾಣುವಂತೆ, ಯಾರೂ ಕೂಡ ಕೃಷ್ಣನಿಗಿಂತ ಹೆಚ್ಚು ಮೆಚ್ಚುಗೆ ಅಥವಾ ಅನ್ಯೋನ್ಯತೆ ತೋರುವವರು ಇಲ್ಲ ಎಂದು ಭಕ್ತಿ ರಸಾಮೃತ ಸಿಂಧುವು ವಿವರಿಸುತ್ತದೆ. ಒಮ್ಮೆ, ಬಡ ಬ್ರಾಹ್ಮಣ ಸುದಾಮನು ಕೃಷ್ಣನಿಗೆ ಸ್ವಲ್ಪ ಅವಲಕ್ಕಿಯನ್ನು ನೀಡಿದನು. ಆದರೆ ಬಿಡಿಗಾಸೂ ಇಲ್ಲದ ಸುದಾಮನಿಗೆ, ಅಪೇಕ್ಷೆ ಇದ್ದರೂ ಭಗವಂತನಿಗೆ ಅಮೂಲ್ಯವಾದ ಉಡುಗೊರೆಯನ್ನು ನೀಡುವುದು ಸಾಧ್ಯವಾಗಲಿಲ್ಲ. ಆದರೆ ಪ್ರೀತಿಯಿಂದ ತುಂಬಿದ್ದ ಅವನ ವಿನಮ್ರ ಕಾಣಿಕೆಯನ್ನು ಕೃಷ್ಣನು ಕಾತರದಿಂದ ಸ್ವೀಕರಿಸಿದನು ಮತ್ತು ಪರಮಾನಂದದಿಂದ ಸೇವಿಸಿದನು. ಅತ್ಯಂತ ಶ್ರೀಮಂತರೂ ಊಹಿಸಲಾಗದಂತಹ ಸಂಪತ್ತನ್ನು ಸುದಾಮನಿಗೆ ನೀಡಿ ಅನ್ಯೋನ್ಯತೆ ತೋರಿದನು. ಅಂತಿಮವಾಗಿ, ಸುದಾಮನಿಗೆ ಶ್ರೀ ಕೃಷ್ಣನ ಆಧ್ಯಾತ್ಮಿಕ ಧಾಮಕ್ಕೆ ಪ್ರವೇಶ ನೀಡಲಾಯಿತು. ತನ್ನ ಭಕ್ತರ ಪ್ರೇಮವನ್ನು ಮೆಚ್ಚುವ ಮತ್ತು ಅನ್ಯೋನ್ಯತೆ ತೋರುವ ಶ್ರೀ ಕೃಷ್ಣನ ಅಸೀಮಿತ ಸಾಮರ್ಥ್ಯದ ಶ್ರವಣ ನಾವು ಅವನೊಂದಿಗೆ ನಮ್ಮ ಸ್ನೇಹವನ್ನು ಪುನಃ ಹೊತ್ತಿಸಲು ಸ್ಫೂರ್ತಿ ನೀಡುತ್ತದೆ.

ಶ್ರೀ ಕೃಷ್ಣನು ಅತ್ಯಂತ ನಿಷ್ಠಾವಂತ ಮತ್ತು ಕೃಪಾಳುವಾದ ಸ್ನೇಹಿತ ಕೂಡ. ಅವನು ಎಂದಿಗೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ ಅಥವಾ ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇನೆ ಎಂಬ ಭಾವನೆಗೆ ಅವಕಾಶ ನೀಡುವುದಿಲ್ಲ. ಪ್ರೇಮಿಸುವ ಅವನ ಪ್ರವೃತ್ತಿಯು ಎಷ್ಟು ಶ್ರೇಷ್ಠವೆಂದರೆ ಅವನು ಏಕ ಕಾಲಕ್ಕೆ ಎಲ್ಲ ಜೀವಿಗಳೊಂದಿಗೆ ಸಂವಾದ ನಡೆಸಲು ಅಪೇಕ್ಷಿಸುತ್ತಾನೆ. ಅವರಲ್ಲಿ ಯಾರೊಬ್ಬರನ್ನೂ ನಿರ್ಲಕ್ಷಿಸದೇ ಅವನು ಹಾಗೆ ಮಾಡಬಲ್ಲ. ಶ್ರೀ ಕೃಷ್ಣನು ದ್ವಾರಕೆಯಲ್ಲಿದ್ದಾಗ, ತನ್ನ ಪರಮ ದೈವೀ ಶಕ್ತಿಯಿಂದ ಅನೇಕ ಕೃಷ್ಣರಾಗಿ ವಿಸ್ತರಿಸಿಕೊಂಡನು. ಈ ಮೂಲಕ ಅವನು ತನ್ನ 16 ಸಾವಿರ ರಾಣಿಯರಿಗೂ ಆಧ್ಯಾತ್ಮಿಕ ಪರಮಾನಂದವನ್ನು ನೀಡಿದನು. ಅವರಲ್ಲಿ ಪ್ರತಿಯೊಬ್ಬರೂ ಕೃಷ್ಣನು ತಮ್ಮೊಂದಿಗೇ ಇದ್ದಾನೆಂದು ಭಾವಿಸಿದ್ದರು.
ಶಾಶ್ವತ ಬಾಂಧವ್ಯ
ಕೃಷ್ಣನ ಸ್ನೇಹವು ಅತ್ಯಂತ ಅಪೇಕ್ಷಿತ ಬಾಂಧವ್ಯ ಎನ್ನುವುದಕ್ಕೆ ಮತ್ತೊಂದು ಕಾರಣವೆಂದರೆ ಅದು ಶಾಶ್ವತವಾದುದು. ಇಹ ಲೋಕದಲ್ಲಿ ಕೆಲವು ಬಾರಿ ನಾವು ಒಳ್ಳೆಯ ಗುಣಮಟ್ಟದ್ದೆಂದು ಕಾಣುವ ಮತ್ತೊಂದು ಬಾಂಧವ್ಯವನ್ನು ಹೊಂದಿರಬಹುದು; ಆದರೆ ಅದೂ ಕೂಡ ಕನಸಿನಂತೆ ಹೊರಟು ಹೋಗುತ್ತದೆ. ಕಡಲ ಕಳೆಯು ಅಲೆಗಳ ಶಿಖರದ ಮೇಲೆ ಒಂದು ಕ್ಷಣ ಸೇರಿ ಅನಂತರ ಅಲೆಗಳು ತೀರದಲ್ಲಿ ಒಡೆದಾಗ ಶಾಶ್ವತವಾಗಿ ಅಗಲುವಂತೆ ಸಾವಿನ ಸಮಯದಲ್ಲಿ ಮಿತ್ರರಿಬ್ಬರ ಕರ್ಮವು ಒಬ್ಬರಿಂದ ಮತ್ತೊಬ್ಬರನ್ನು ಬಹಳ ದೂರಕ್ಕೆ ಕೊಂಡೊಯ್ಯುತ್ತದೆ.
ಸಮಾಧಾನವೆಂದರೆ, ಕೃಷ್ಣನೊಂದಿಗೆ ನಾವು ಗೆಳೆತನ ಮಾಡಿಕೊಂಡರೆ ಹಾಗೆ ಆಗುವುದಿಲ್ಲ. ಭಗವಂತ ಮತ್ತು ಜೀವಿಯ ನಡುವಣ ವಿನಿಮಯಕ್ಕೆ ಎಂದಿಗೂ ತಡೆ ಎನ್ನುವುದಿಲ್ಲ. ಯಾರಾದರೂ ಈ ಜನ್ಮದಲ್ಲಿ ಕೃಷ್ಣನನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಆರಂಭಿಸಿ, ತನ್ನ ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗದಿದ್ದರೆ, ಅವನು ತನ್ನ ಮುಂದಿನ ಜನ್ಮವನ್ನು ತಾನು ಈಗ ಬಿಟ್ಟಲ್ಲಿಂದ ಆರಂಭಿಸುತ್ತಾನೆ. ಇದು ಅವನು ಪರಿಪೂರ್ಣತೆಯನ್ನು ಸಾಧಿಸುವವರೆಗೂ ಮುಂದುವರಿಯುತ್ತದೆ.
ನಾವೆಲ್ಲರೂ ಕೃಷ್ಣನ ಸೇವಕರಾಗಿರುವುದರಿಂದ, ಅವನನ್ನು ತಲಪುವ ಯಾವುದೇ ಪ್ರಯತ್ನವು ಸೇವಾ ಮನೋಭಾವ ಹೊಂದಿರಬೇಕು ಎನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ. ಕೃಪಾಕರನಾದ ಭಗವಂತನು ತನ್ನ ಭಕ್ತರ ಸುಖಕ್ಕಾಗಿ ವ್ಯವಸ್ಥೆಮಾಡಲು ಸದಾ ನಿರತನಾಗಿರುವಂತೆ ನಾವೂ ಕೂಡ ಅವನ ಆನಂದಕ್ಕಾಗಿ ಪ್ರಯತ್ನಿಸಬೇಕು. ಇದು ಪ್ರೇಮದ ಆರಂಭದ ಲಕ್ಷಣ. ನಮ್ಮ ಭಕ್ತಿ ಭಾವನೆಗಳನ್ನು ಬೆಳೆಸಿಕೊಳ್ಳಲು ನಾವು ಒಪ್ಪಿದರೆ ಅದರಲ್ಲಿ ನಷ್ಟವೇನೂ ಇಲ್ಲ. ಶ್ರೀ ಕೃಷ್ಣನ ಸೇವೆ ಎಷ್ಟು ಹಿತಕರ ಎಂದರೆ, ಅದನ್ನು ಸವಿಯಲು ಸ್ವಯಂ ಕೃಷ್ಣನೇ ಶ್ರೀ ಚೈತನ್ಯ ಮಹಾಪ್ರಭುವಾಗಿ ಅವತರಿಸಿದನು, ಮತ್ತು ಕೃಷ್ಣನ ಮೈತ್ರಿಯ ಹೊರತು ಜೀವಿಗೆ ಮಹತ್ತರವಾದ ಗುರಿ ಇನ್ನೊಂದಿಲ್ಲ ಎಂದು ತೋರಿಸಿದನು.
ಕೃಷ್ಣ ಪ್ರಜ್ಞೆ ಆಂದೋಲನವು ಶ್ರೀ ಚೈತನ್ಯರ ಪರಂಪರೆಯಲ್ಲಿ ಬಂದ ನೇರವಾದ ಮಾರ್ಗದಲ್ಲಿದೆ. ಭಗವಂತನನ್ನು ಕುರಿತ ತಮ್ಮ ಸುಪ್ತ ಪ್ರೇಮವನ್ನು ಪುನರುಜ್ಜೀವಗೊಳಿಸುವ ತೀವ್ರ ಆಸಕ್ತಿ ಉಳ್ಳವರಿಗೆ ನೆರವಾಗಲು ಶ್ರೀಲ ಪ್ರಭುಪಾದರು ಇದನ್ನು ಸ್ಥಾಪಿಸಿದರು. ಎಲ್ಲರಿಗೂ ಇದರ ಬಾಗಿಲು ತೆರೆದಿದೆ. ಪರಿಪೂರ್ಣ ಮೈತ್ರಿಗೆ ಅಪೇಕ್ಷೆ ಉಳ್ಳ ಎಲ್ಲರೂ ಪರಿಪೂರ್ಣ ಮಿತ್ರ ಶ್ರೀ ಕೃಷ್ಣನ ಶಾಶ್ವತ ಸಹವಾಸದಲ್ಲಿ ಆಧ್ಯಾತ್ಮಿಕ ಸುಖವನ್ನು ಕಂಡುಕೊಳ್ಳಲು ಈ ಅಪರೂಪ ಮತ್ತು ಅದ್ಭುತ ಅವಕಾಶವನ್ನು ಖಂಡಿತ ಆಲಿಂಗಿಸಿಕೊಳ್ಳುತ್ತಾರೆ.