ಬಾಲ ಭಕ್ತ  (ಭಾಗ-1)

ರಾಜಾ ಉತ್ತಾನಪಾದನಿಗೆ ಸುನೀತಿ, ಸುರುಚಿ ಎಂಬ ಇಬ್ಬರು ಪತ್ನಿಯರಿದ್ದರು. ರಾಜನಿಗೆ ಸುರುಚಿಯನ್ನು ಕಂಡರೆ ಬಹಳ ಪ್ರೀತಿ. ಸುನೀತಿಯ ಮೇಲೆ ಅವನಿಗೆ ಅಷ್ಟಾಗಿ ಒಲವಿರಲಿಲ್ಲ. ಸುನೀತಿಗೆ ಧ್ರುವನೆಂಬ ಮಗನಿದ್ದರೆ, ಸುರುಚಿಗೆ ಉತ್ತಮನೆಂಬ ಮಗನಿದ್ದನು.

ಅದೊಂದು ದಿನ, ರಾಜನು ಸಿಂಹಾಸನದ ಮೇಲೆ ಕುಳಿತುಕೊಂಡಿದ್ದನು. ಉತ್ತಮನನ್ನು ಪ್ರೀತಿಯಿಂದ ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಮುದ್ದಿಸುತ್ತಿದ್ದನು. ಆಗ ಧ್ರುವನು ಆಡುತ್ತಾ ಅಲ್ಲಿಗೆ ಬಂದನು. ಅಪ್ಪನ ತೊಡೆಯ ಮೇಲೆ ತಾನೂ ಕುಳಿತುಕೊಳ್ಳಬೇಕೆಂಬ ಆಸೆಯಿಂದ ಅವನ ಬಳಿಗೆ ಹೋದನು. ರಾಜನ ತೊಡೆಯೇರಲು ಅವನು ಪ್ರಯತ್ನಿಸಿದರೂ, ರಾಜನು ಅವನ ಮೇಲೆ ಪ್ರೀತಿ ತೋರಲಿಲ್ಲ. ಅಷ್ಟರಲ್ಲಿ, ಅಲ್ಲೇ ಇದ್ದ ಸುರುಚಿ ಅವನನ್ನು ತಡೆದು ರಾಜನಿಗೂ ಕೇಳುವಂತೆ ಅವನನ್ನು ಜೋರಾಗಿ ಗದರಿದಳು, “ಏ ಮಗು! ಸಿಂಹಾಸನದ ಮೇಲಾಗಲೀ ರಾಜನ ತೊಡೆಯ ಮೇಲಾಗಲೀ ಕೂರಲು ನಿನಗಾವ ಅರ್ಹತೆಯೂ ಇಲ್ಲ! ಏಕೆಂದರೆ ನೀನು ರಾಜನ ಮಗನೇ ಆದರೂ ನನ್ನ ಹೊಟ್ಟೆಯಲ್ಲಿ ಹುಟ್ಟದೆ ಇನ್ನೊಬ್ಬ ಹೆಂಗಸಿನ ಹೊಟ್ಟೆಯಲ್ಲಿ ಹುಟ್ಟಿರುವೆ! ಈ ನಿನ್ನ ಆಸೆ ನೆರವೇರುವುದು ಬಹು ಕಷ್ಟ, ಅಸಾಧ್ಯ! ರಾಜನ ಸಿಂಹಾಸನದಲ್ಲಿ ಕೂರುವ ಆಸೆಯಿದ್ದರೆ ಹೋಗಿ ಭಗವಂತನನ್ನು ಕುರಿತು ತಪಸ್ಸು ಮಾಡು! ಅನಂತರ ನನ್ನ ಗರ್ಭದಲ್ಲಿ ಮತ್ತೆ ಹುಟ್ಟಿ ನಿನ್ನ ಆಸೆಯನ್ನು ಪೂರೈಸಿಕೋ!”

ಚಿಕ್ಕಮ್ಮ ಆಡಿದ ಬಿರುನುಡಿಗಳಿಂದ ಧ್ರುವನ ಮನಸ್ಸು ಚುಚ್ಚಿದಂತಾಯಿತು. ಅಪ್ಪನೂ ಏನೂ ಮಾತನಾಡದಿದ್ದುದನ್ನು ಕಂಡು ಅವನಿಗೆ ಅಳುವೇ ಬಂದಿತು. ಪೆಟ್ಟು ತಿಂದ ಹಾವು ಬುಸುಗುಟ್ಟುವಂತೆ ಕೋಪದಿಂದ ನಿಟ್ಟುಸಿರು ಬಿಡುತ್ತಾ ಅರಮನೆಯನ್ನು ಬಿಟ್ಟು ಅಮ್ಮನ ಬಳಿಗೆ ಓಡಿಹೋದನು.

ತನ್ನ ಬಳಿಗೆ ಅಳುತ್ತಾ ಬಂದ ಕಂದನನ್ನು ಕಂಡ ಸುನೀತಿಗೆ ಆಶ್ಚರ್ಯವಾಯಿತು. ಕೂಡಲೇ ಅವಳು ಮಗುವನ್ನು ತನ್ನ ತೊಡೆಯ ಮೇಲೆ ಕೂರಿಸಿ, ಅಪ್ಪಿಕೊಂಡಳು. ಧ್ರುವನೊಂದಿಗಿದ್ದ  ಸೇವಕರು ಅರಮನೆಯಲ್ಲಿ ನಡೆದ ಘಟನೆಯನ್ನು ನಿಧಾನವಾಗಿ ಸುನೀತಿಗೆ ಹೇಳಿದರು. ಅದನ್ನು ಕೇಳಿ ಅವಳಿಗೆ ದುಃಖ ಉಕ್ಕಿ ಬಂದಿತು. ಕಣ್ಣೀರು ಸುರಿಸುತ್ತಾ ಅವಳು ಧ್ರುವನಿಗೆ ಹೇಳಿದಳು, “ಕಂದಾ! ಯಾರಿಗೂ ಕೆಟ್ಟದ್ದನ್ನು ಬಯಸಬೇಡ! ಇನ್ನೊಬ್ಬನಿಗೆ ದುಃಖವುಂಟು ಮಾಡುವವನು ತಾನೇ ಆ ದುಃಖವನ್ನನುಭವಿಸುತ್ತಾನೆ. ಮಗು, ಸುರುಚಿ ಹೇಳಿದ್ದು ಸತ್ಯವೇ! ನೀನು ನನ್ನಂಥ ನಿರ್ಭಾಗ್ಯಳ ಹೊಟ್ಟೆಯಲ್ಲಿ ಹುಟ್ಟಿರುವೆ! ನನ್ನಂಥ ನತದೃಷ್ಟೆಯ ಎದೆಹಾಲು ಕುಡಿದು ಬೆಳೆದಿರುವೆ! ಆ ರಾಜನು ನನ್ನನ್ನು ಪತ್ನಿಯಂತಲ್ಲದಿದ್ದರೂ ದಾಸಿಯಂತೆಯೂ ನೋಡುವುದಿಲ್ಲ! ಆದರೆ ಮಗು, ಆ ನಿನ್ನ ಮಲತಾಯಿಯು ಕಟುವಾಗಿ ಮಾತನಾಡಿದ್ದರೂ ಅವಳು ಹೇಳಿರುವುದು ಸತ್ಯವೇ ಆಗಿದೆ! ನೀನೂ ಉತ್ತಮನಂತೆ ಸಿಂಹಾಸನವೇರಬೇಕೆಂದರೆ ಆ ಶ್ರೀಹರಿಯ ದಿವ್ಯ ಪಾದಗಳನ್ನು ಆರಾಧಿಸು. ಆ ಪುರುಷೋತ್ತಮನು ಎಂಥ ಮಹಿಮಾವಂತನು ಗೊತ್ತೇ? ನಿನ್ನ ಪ್ರಪಿತಾಮಹನಾದ ಬ್ರಹ್ಮದೇವನು ಅವನನ್ನು ಪೂಜಿಸಿ ಇಡೀ ಜಗತ್ತನ್ನೇ ಸೃಷ್ಟಿಸುವ ಶಕ್ತಿಯನ್ನು ಪಡೆದುಕೊಂಡನು! ನಿನ್ನ ಪಿತಾಮಹನಾದ ಮನುವಾದರೋ  ಯಜ್ಞಯಾಗಗಳಿಂದಲೂ, ದಾನಧರ್ಮಗಳಿಂದಲೂ ಅವನನ್ನು ಅನನ್ಯ ಭಕ್ತಿಯಿಂದ ಆರಾಧಿಸಿ ಅಖಿಲೈಶ್ವರ್ಯವನ್ನೂ,  ಸ್ವರ್ಗವನ್ನೂ ಕಡೆಗೆ ಮೋಕ್ಷವನ್ನೂ ಪಡೆದನು. ಇಷ್ಟೆಲ್ಲಾ ಸಾಧಿಸಬೇಕಾದರೆ ಅವನ ಅನುಗ್ರಹವಷ್ಟೇ ಬೇಕು! ಬೇರಾವ ಸಾಧನದಿಂದಲೂ ಸಾಧ್ಯವಿಲ್ಲ. ಮಹಾ ಯೋಗಿಗಳು ತಮ್ಮ ಮನಸ್ಸನ್ನೂ ಪ್ರಾಣವನ್ನೂ ನಿಯಂತ್ರಿಸಿ ಅವನನ್ನು ಕುರಿತು ತಪಸ್ಸು ಮಾಡುತ್ತಾರೆ.

ಮಗು! ಮುಮುಕ್ಷುಗಳು ಸದಾ ಬಯಸುವ ಆ ದೇವೋತ್ತಮ ಪರಮ ಪುರುಷನ ಪಾದಾರವಿಂದಗಳನ್ನು ಅನನ್ಯ ಭಾವದಿಂದ ಭಜಿಸು. ನಿನ್ನ ಧರ್ಮವನ್ನಾಚರಿಸುತ್ತಲೂ ಅವನನ್ನೇ ಸದಾ ಮನಸ್ಸಿನಲ್ಲಿ ಸ್ಮರಿಸುತ್ತಿರು. ಪದ್ಮದಳಾಯತಾಕ್ಷನಾದ ಶ್ರೀಹರಿಯನ್ನಲ್ಲದೆ ನಿನ್ನ ದುಃಖ ಪರಿಹರಿಸುವ ಮತ್ತೊಬ್ಬರನ್ನು ನಾನು ಕಾಣೆ. ಯಾವ ಲಕ್ಷ್ಮೀದೇವಿಯ ಕೃಪೆಯನ್ನು ಬ್ರಹ್ಮಾದಿ ದೇವತೆಗಳೂ ಸದಾ ಆಶಿಸುವರೋ, ಆ ಸಿರಿದೇವಿಯೇ ತನ್ನ ಕೈಯಲ್ಲಿ ಕಮಲಪುಷ್ಪವನ್ನು ಹಿಡಿದು ಅವನನ್ನು ಅರ್ಚಿಸಲು ಸದಾ ಕಾತರಳಾಗಿದ್ದಾಳೆ!”

ತಾಯಿಯ ಉಪದೇಶ ಧ್ರುವಕುಮಾರನ ಮನಸ್ಸಿಗೆ ಚೆನ್ನಾಗಿ ನಾಟಿತು.  ಅದು ಅವನ ಉದ್ದೇಶವನ್ನು ಪೂರೈಸುವುದಾಗಿತ್ತು. ಆದ್ದರಿಂದ ಅವನು ಪರಮ ಪುರುಷನನ್ನು ಮೆಚ್ಚಿಸಬೇಕೆಂಬ ದೃಢ ನಿರ್ಧಾರದಿಂದ ಅರಮನೆಯನ್ನು ತ್ಯಜಿಸಿ ಹೊರಟುಬಿಟ್ಟನು. ಈ ವಿಚಾರವನ್ನು ತಿಳಿದ ನಾರದರಿಗೆ ಬಹಳ ಆಶ್ಚರ್ಯವಾಯಿತು.

“ಅಬ್ಬಾ! ಈ ಕ್ಷತ್ರಿಯರ ಮನೋಬಲ ಎಂಥದ್ದು! ಅವರಿಗೆ ಕಿಂಚಿತ್ತು ಗೌರವಹಾನಿಯಾದರೂ ಅದನ್ನು ಅವರು ಸಹಿಸುವುದಿಲ್ಲ! ಪುಟ್ಟ ಮಗುವಾದರೂ ಇವನು ತನ್ನ ಮಲತಾಯಿಯಾಡಿದ ಮಾತುಗಳನ್ನು ತೀವ್ರವಾಗಿ ಪರಿಗಣಿಸಿದ್ದಾನೆ!”

ತಮ್ಮ ಮನಸ್ಸಿನಲ್ಲಿ ಹೀಗೆ ಹೇಳಿಕೊಂಡು ಅವರು ಧ್ರುವನ ಮುಂದೆ ಪ್ರತ್ಯಕ್ಷರಾದರು. ತಮ್ಮ ಅಮೃತ ಹಸ್ತದಿಂದ ಅವನ ನೆತ್ತಿಯನ್ನು ನೇವರಿಸಿ ಪ್ರೀತಿಯಿಂದ ಹೇಳಿದರು, “ಮಗು! ಆಡುವ ವಯಸ್ಸು ನಿನ್ನದು. ನಿನಗೆಂಥ ಮಾನಾಪಮಾನಗಳು? ಅವುಗಳ ಕಡೆಗೆ ನೀನೇಕೆ ಅಷ್ಟು ಲಕ್ಷ್ಯ ಕೊಡುತ್ತಿರುವೆ? ಒಂದು ವೇಳೆ ನಿನಗಂಥ ಅವಮಾನವೇ ಆಗಿದ್ದರೂ ಅದಕ್ಕೆ ನೀನು ದುಃಖಿಸುವ ಅಗತ್ಯವಿಲ್ಲ. ಏಕೆಂದರೆ ಇದು ಭ್ರಮೆಯನ್ನುಂಟುಮಾಡುವ ಮಾಯೆಯ ಪರಿಣಾಮವೇ ಆಗಿದೆ. ಮಗು, ಪ್ರತಿಯೊಬ್ಬರೂ ತಮ್ಮ ಪೂರ್ವಕರ್ಮಾನುಸಾರವಾಗಿಯೇ ಸುಖದುಃಖಗಳನ್ನನುಭವಿಸುತ್ತಾರೆ. ಇದು ಆ ಪುರುಷೋತ್ತಮನ ಕಾರ್ಯ ವಿಧಾನ. ಆದ್ದರಿಂದ ಮನುಷ್ಯನು ತನಗೆ ಒದಗಿಬಂದುದನ್ನು ಅನುಭವಿಸಿ ತೃಪ್ತನಾಗಿರಬೇಕು. ನೀನಾದರೋ ನಿನ್ನ ತಾಯಿಯ ಉಪದೇಶದಂತೆ ಆ ಪರಮ ಪುರುಷನನ್ನು ಮೆಚ್ಚಿಸಲು ಯೋಗದ ಪಥ ಹಿಡಿಯ ಹೊರಟಿದ್ದೀಯೆ. ಆದರೆ ಅದು ಅಷ್ಟು ಸುಲಭವಲ್ಲ. ಮಹಾಮುನಿಗಳೇ ಸರ್ವಸಂಗಗಳನ್ನೂ ತ್ಯಜಿಸಿ ಉಗ್ರತಪಗೈಯುತ್ತಾ ಸಮಾಧಿಸ್ಥಿತಿ ತಲಪಿದರೂ, ಅನೇಕ ಜನ್ಮಗಳನ್ನೆತ್ತಿ ತಮ್ಮ ಸಾಧನೆಯನ್ನು ಮುಂದುವರಿಸಿದರೂ ಅವನನ್ನು ಕಾಣಲಾಗಲಿಲ್ಲ! ಇನ್ನು ಪುಟ್ಟ ಬಾಲಕನಾದ ನೀನು ಈ ಸಾಧನೆಯನ್ನು ಮಾಡಬಲ್ಲೆಯಾ? ಆಗದು! ಆದ್ದರಿಂದ  ನೀನೀಗ  ಹಿಂದಿರುಗು.  ಪ್ರಾಪ್ತ ವಯಸ್ಕನಾದಾಗ ನೀನು ತಪಸ್ಸು ಮಾಡುವೆಯಂತೆ.”

ನಾರದರು ಮುಂದುವರಿಸಿದರು, “ನೋಡು ಮಗು, ಸಂತೋಷವಾಗಲೀ ದುಃಖವಾಗಲೀ   ದೈವವು ವಿಧಿಸಿದಂತಿರಬೇಕು. ಆಗಲೇ ಮಾಯಾಂಧಕಾರವನ್ನು ದಾಟಲು ಸಾಧ್ಯ. ನಮಗಿಂತ ಗುಣವಂತರನ್ನು ಭೇಟಿಯಾದಾಗ ನಾವು ಸಂತಸಪಡಬೇಕು. ನಮಗಿಂತ ಕಡಮೆ ಅರ್ಹತೆಯುಳ್ಳವರನ್ನು ಎದುರುಗೊಂಡಾಗ ಅನುಕಂಪ ತೋರಿಸಬೇಕು. ನಮಗೆ ಸಮಾನರಾದವರನ್ನು ಸಂಧಿಸಿದಾಗ ಸ್ನೇಹ ಬೆಳೆಸಬೇಕು. ಆಗ ನಾವು ಪ್ರಾಪಂಚಿಕ ಕ್ಲೇಶಗಳಿಗೊಳಗಾಗುವುದಿಲ್ಲ.”

ದೇವರ್ಷಿ ನಾರದರು ಹೇಳಿದ ಮಾತುಗಳನ್ನು ಕೇಳಿ ಧ್ರುವನು ಹೇಳಿದನು, “ಪೂಜ್ಯರೇ, ಪ್ರಾಪಂಚಿಕ ಸುಖದುಃಖಗಳಿಂದ ಕದಡಲ್ಪಟ್ಟ ಮನಸ್ಸುಳ್ಳವರಿಗೆ  ಮನಶ್ಯಾಂತಿ ತರಲು ತಾವು  ಅನುಕಂಪದಿಂದ ಹೇಳಿದ ಮಾತುಗಳು ಉಚಿತವಾಗಿವೆ. ಆದರೆ ಅಜ್ಞಾನದಿಂದ ಆವರಿಸಲ್ಪಟ್ಟಿರುವ ನನ್ನಂಥವರಿಗೆ ಅವು ರುಚಿಸವು. ಮಹರ್ಷಿಗಳೇ, ನಾನು ನಿಮಗೆ ಅವಿಧೇಯನಂತೆ ತೋರಬಹುದು. ಆದರೆ ನಾನೇನು ಮಾಡಲಿ? ನಾನೊಬ್ಬ ಕ್ಷತ್ರಿಯನಾಗಿರುವುದೇ ಅದಕ್ಕೆ ಕಾರಣ. ಆ ನನ್ನ ಮಲತಾಯಿಯಾಡಿದ ಶರಗಳಂಥ ನುಡಿಗಳು ನನ್ನ ಹೃದಯವನ್ನೇ ಕೊರೆಯುತ್ತಿವೆ!”

“ಮಹಾಮುನಿಗಳೇ! ತ್ರಿಭುವನಗಳಲ್ಲೇ ಯಾರೂ ಸಾಧಿಸದಿರುವಂತಹ ಅತ್ಯುತ್ತಮ ಸ್ಥಾನವನ್ನು ನಾನು ಪಡೆಯಲಿಚ್ಛಿಸುತ್ತೇನೆ. ನನ್ನ ತಂದೆ, ತಾತಂದಿರೂ ಸಾಧಿಸಿರಬಾರದು, ಅಂಥ ಉತ್ಕೃಷ್ಟ ಪದವಿಯನ್ನು ನಾನು ಸಾಧಿಸಬೇಕು! ಪೂಜ್ಯರೇ, ನೀವಾದರೋ ಬ್ರಹ್ಮದೇವನ ಪುತ್ರರು. ಜಗತ್ತಿನ ಹಿತಕ್ಕಾಗಿ ನಿಮ್ಮ ವೀಣೆಯನ್ನು ಮೀಟುತ್ತಾ ಸೂರ್ಯನಂತೆ ಎಲ್ಲೆಡೆ ಸಂಚರಿಸುವಿರಿ. ಆದ್ದರಿಂದ ಅಂಥ ಮಹತ್ಸಾಧನೆ ಮಾಡಲು ಸೂಕ್ತ ಮಾರ್ಗವಾವುದೆಂದು ತಾವು ದಯವಿಟ್ಟು ನನಗೆ ಹೇಳಿ!”

ಬಾಲಕನ ಮಾತುಗಳನ್ನು ಕೇಳಿ ಸುಪ್ರೀತರಾದ ನಾರದ ಮುನಿವರ್ಯರು ಅನುಕಂಪದಿಂದ ಹೇಳಿದರು, “ಕಂದ! ನಿನ್ನ ತಾಯಿಯು ತೋರಿದ ದಾರಿಯು ಖಂಡಿತವಾಗಿಯೂ ಶ್ರೇಯಸ್ಕರವಾಗಿದೆ. ಆದ್ದರಿಂದ ನೀನು ಶ್ರೀಕೃಷ್ಣನ ಭಕ್ತಿಸೇವೆಯಲ್ಲಿ ನಿರತನಾಗು. ಧರ್ಮಾರ್ಥಕಾಮಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳ ಸಾಧನೆ ಮಾಡಬಯಸುವ ಮನುಷ್ಯನಿಗೆ ಹರಿಪಾದ ಸೇವೆಯೊಂದೇ ದಾರಿ.”

“ಮಗು! ನಿನಗೆ ಮಂಗಳವಾಗಲಿ! ನೀನು ಯಮುನಾ ನದಿಯ ದಡದಲ್ಲಿರುವ ಶುಚಿಯೂ ಪುಣ್ಯಪ್ರದವೂ ಆದ ಮಧುವನಕ್ಕೆ ಹೋಗು. ಅಲ್ಲಿ ಶ್ರೀ ಹರಿಯ ಸಾನ್ನಿಧ್ಯವೂ ಇದೆ. ಪವಿತ್ರವಾದ ಕಾಲಿಂದೀ (ಯಮುನೆ) ನದಿಯಲ್ಲಿ ಮೂರು ಬಾರಿ ಸ್ನಾನ ಮಾಡಿ ಅಷ್ಟಾಂಗ ಯೋಗಕ್ಕೆ ಸೂಕ್ತವಾದ ನಿಯಮಗಳನ್ನು ಪಾಲಿಸು. ಹಿತಕರವಾದ ಆಸನದಲ್ಲಿ  ಮೂರು ಬಗೆಯ ಪ್ರಾಣಾಯಾಮಗಳನ್ನು ಮಾಡು. ನಿಧಾನವಾಗಿ ಪ್ರಾಣವಾಯುವನ್ನು ನಿಯಂತ್ರಿಸುತ್ತಾ ಮನಸ್ಸನ್ನೂ ಇಂದ್ರಿಯಗಳನ್ನೂ ನಿಗ್ರಹಿಸಿ ಮನಸ್ಸಿನ ಕಲ್ಮಷಗಳನ್ನು ತೊಡೆದು ಹಾಕು. ಅನಂತರ ಆ ಭಗವಂತನನ್ನು ಚಿತ್ತೈಕಾಗ್ರತೆಯಿಂದ ಧ್ಯಾನಿಸು.”

“ಶ್ರೀಹರಿಯ ಮುಖವು ಅತ್ಯಂತ ಸುಂದರವಾಗಿದೆ. ಅವನು ಸದಾ ಪ್ರಸನ್ನವದನನು. ಭಕ್ತರಿಗೆ ಅನುಗ್ರಹವುಂಟುಮಾಡಲು ತನ್ನ ಕರುಣಾಪೂರಿತ ದೃಷ್ಟಿಯನ್ನು ಬೀರುತ್ತಿರುವನು. ಸ್ವಲ್ಪ ಎತ್ತರವಾದ ಸುಂದರ ಮೂಗು, ಸುಂದರ ಭ್ರೂಲತೆಗಳು, ಸುಂದರ ಹಣೆ, ಕಮನೀಯ ಕಪೋಲಗಳು. ಎಲ್ಲ ದೇವತೆಗಳಿಗಿಂತಲೂ ಅವನು ಬಹು ಸುಂದರನಾಗಿದ್ದಾನೆ. ಅವನು ಸದಾ ತರುಣನು. ರಮಣೀಯಾಂಗನು. ಅರುಣೋದಯದ ಕೆಂಬಣ್ಣದ ಕಣ್ದುಟಿಗಳನ್ನು ಹೊಂದಿರುವ ಅವನು ಶರಣಾಗತರಿಗೆ ಆಶ್ರಯ ನೀಡುವ ಕೃಪಾಸಾಗರನು. ಶ್ರೀವತ್ಸಾಂಕಿತನೂ ಶ್ಯಾಮಲಾಂಗನೂ ಆದ ಆ ಪುರುಷೋತ್ತಮನು ವನಮಾಲೆಯನ್ನು ಧರಿಸಿ ತನ್ನ ಚತುರ್ಭುಜಗಳಲ್ಲಿ ಶಂಖ ಚಕ್ರಗದಾಪದ್ಮಗಳನ್ನು ಧರಿಸಿರುತ್ತಾನೆ. ಪೀತಾಂಬರಧಾರಿಯಾದ ಆ ಪರಮ ಸುಂದರನು ಕಿರೀಟ ಕುಂಡಲಕೇಯೂರ ಕೌಸ್ತುಭಾಭರಣಗಳನ್ನು ಧರಿಸಿ ರಾರಾಜಿಸುತ್ತಿರುತ್ತಾನೆ. ಅವನ ನಡುವಿನಲ್ಲಿ ಚಿನ್ನದ ಒಡ್ಯಾಣವೂ ಕಾಲುಗಳಲ್ಲಿ ಕಾಂಚನನೂಪುರಗಳೂ ಶೋಭಿಸುತ್ತಿರುತ್ತವೆ. ಆ ವರದಾತನು ಸದಾ ತನ್ನ ಮಂದಹಾಸಯುಕ್ತವಾದ ನೋಟದಿಂದಲೂ ಸುಂದರತಮವಾದ ತನ್ನ ಶಾಂತ ರೂಪದಿಂದಲೂ ಭಕ್ತರ ಕಣ್ಮನಗಳಿಗೆ ಹಿತವನ್ನುಂಟು ಮಾಡುತ್ತಾನೆ. ಹೊಂಬೆಳಕನ್ನು ಸೂಸುವ ನಖಮಣಿಗಳನ್ನುಳ್ಳ ಪಾದಪದ್ಮಗಳಿಂದ ಕೂಡಿದ ಭಗವಂತನ ಶ್ರೀವಿಗ್ರಹವನ್ನು ತಮ್ಮ ಹೃತ್ಕಮಲದ ಕರ್ಣಿಕೆಯಲ್ಲಿ ಸ್ಥಾಪಿಸಿಕೊಂಡು ಮಹಾಯೋಗಿಗಳು ಧ್ಯಾನಿಸುತ್ತಾರೆ.”

“ಭಗವಂತನ ಇಂಥ ಸುಂದರ ರೂಪವನ್ನು ಏಕೋಭಾವದಿಂದ ಮನಸ್ಸಿನಲ್ಲಿ ಧ್ಯಾನಿಸಬೇಕು. ಅದರಿಂದ ಸಕಲ ಕಲ್ಮಷಗಳೂ ನಾಶವಾಗಿ ಪರಮಾನಂದದ ಸ್ಥಿತಿಯಿಂದ ಚ್ಯುತನಾಗದೆ ಉಳಿಯುವೆ. ರಾಜಕುಮಾರ, ಹೀಗೆ ಧ್ಯಾನಿಸುವುದರೊಂದಿಗೆ ಪರಮಗುಹ್ಯವಾದ ಒಂದು ದಿವ್ಯ ಮಂತ್ರವನ್ನೂ ಜಪಿಸಬೇಕು. ಇದನ್ನು ಏಳುರಾತ್ರಿಗಳ ಕಾಲ ಜಪಿಸಿದರೆ ಮನುಷ್ಯನು ಆಕಾಶದಲ್ಲಿ ಸಂಚರಿಸುವ ದಿವ್ಯ ಪುರುಷರನ್ನು ನೋಡಬಹುದು! ಆ ಮಂತ್ರ, `ಓಂ ನಮೋ ಭಗವತೇ ವಾಸುದೇವಾಯ’ ಎಂಬುದು. ದ್ವಾದಶಾಕ್ಷರದ ಈ ಮಂತ್ರೋಚ್ಚಾರಣೆ ಮಾಡುತ್ತಾ ದೇಶಕಾಲಗಳ ಅನುಕೂಲಕ್ಕೆ ತಕ್ಕಂತೆ ಕಂದಮೂಲ ಜಲಾದಿಗಳ ಅರ್ಪಣೆಯಿಂದಲೂ ಅವನಿಗೆ ಬಹಳ ಪ್ರಿಯವಾದ ತುಳಸೀದಳಗಳಿಂದಲೂ ಭಗವಂತನನ್ನು ಅರ್ಚಿಸಬೇಕು. ಮೃತ್ತಿಕೆ, ನೀರು, ಮರ, ಮೊದಲಾದ ದ್ರವ್ಯಗಳಿಂದ ಭಗವಂತನ ಅರ್ಚಾವಿಗ್ರಹವನ್ನು ಮಾಡಿ ಪೂಜಿಸಬೇಕು. ಶಾಂತನಾಗಿ, ಮೌನವಾಗಿ, ಅರಣ್ಯದಲ್ಲಿ ಸಿಗುವ ಕಂದಮೂಲ ಫಲಾದಿಗಳಷ್ಟರಲ್ಲೇ ತೃಪ್ತನಾಗಿರಬೇಕು. ಭಗವಂತನು ತನ್ನ ಇಚ್ಛೆಯಿಂದಲೇ ಮಾಡಿದ ಹೃದಯಂಗಮವಾದ ದಿವ್ಯ ಲೀಲೆಗಳನ್ನು ಸ್ಮರಿಸುತ್ತಿರಬೇಕು.”

“ಮಗು, ನಾನು ಹೇಳಿದ ರೀತಿಯಲ್ಲಿ ಮಂತ್ರೋಚ್ಚಾರಣೆ ಮಾಡುತ್ತಾ ಆ ಅರ್ಚಾಮೂರ್ತಿಯನ್ನು ಸಂಪೂಜಿಸು. ಮನಸ್ಸು, ಮಾತು, ದೇಹಗಳಿಂದ ಅವನ ಸೇವೆ ಮಾಡಲು, ಅವನು ಧರ್ಮ, ಅರ್ಥ, ಕಾಮ, ಮೋಕ್ಷಗಳಲ್ಲಿ ಯಾವುದನ್ನಾದರೂ ಕೊಡುತ್ತಾನೆ. ಒಂದು ವೇಳೆ ಭಕ್ತನಿಗೆ ಮೋಕ್ಷದಲ್ಲಿಯೇ ಆಸಕ್ತಿಯಿದ್ದರೆ ಅವನು ಭಗವಂತನನ್ನು ತೀವ್ರಭಕ್ತಿಯಿಂದ ನಿರಂತರವಾಗಿ ಸೇವಿಸಬೇಕು.”

ನಾರದರು ಹೀಗೆ ಉಪದೇಶಿಸಲು, ಧ್ರುವಕುಮಾರನು ಅವರಿಗೆ ಪ್ರದಕ್ಷಿಣೆ ನಮಸ್ಕಾರಗಳನ್ನು ಸಮರ್ಪಿಸಿ ಶ್ರೀಹರಿಯ ಪಾದಕಮಲಗಳ ಗುರುತುಗಳಿಂದ ಅಲಂಕೃತವಾಗಿದ್ದ ಮಧುವನಕ್ಕೆ ಹೊರಟನು.

ಅನಂತರ ನಾರದ ಮಹರ್ಷಿಗಳು ಉತ್ತಾನಪಾದ ರಾಜನನ್ನು ಭೇಟಿಯಾಗಲು ಅವನ ಅರಮನೆಗೆ ಹೋದರು. ಅವರು ಆಗಮಿಸಿದೊಡನೆಯೇ ರಾಜನು ಗೌರವಾದರಗಳಿಂದ ಅವರನ್ನು ಸತ್ಕರಿಸಿ ಉಚಿತಾಸನವನ್ನು ನೀಡಿದರು. ಸುಖಾಸೀನರಾದ ನಾರದರು ರಾಜನ ಮುಖವು ಬಾಡಿದುದನ್ನು ಗಮನಿಸಿದರು. ಅವನು ಯಾವುದೋ ದುಃಖದಲ್ಲಿರುವಂತೆ ಕಾಣುತ್ತಿದ್ದ.

“ಎಲೈ ರಾಜನೇ, ಇದೇಕೆ ನಿನ್ನ ಮುಖ ಹೀಗೆ ಬಾಡಿದೆ? ನೀನು ಯಾವುದೋ ದೀರ್ಘಾಲೋಚನೆಯಲ್ಲಿ ಮುಳುಗಿರುವಂತೆ ಕಾಣುತ್ತಿರುವೆ. ಧರ್ಮಾರ್ಥಕಾಮಗಳ ಸಾಧನೆಯಲ್ಲಿ ಯಾವ ವಿಘ್ನವೂ ತಲೆದೋರುತ್ತಿಲ್ಲವಷ್ಟೇ?” ನಾರದರು ಪ್ರಶ್ನಿಸಿದರು.

“ಪೂಜ್ಯರೇ, ನಾನು ಬಹುದೊಡ್ಡ ತಪ್ಪು ಮಾಡಿಬಿಟ್ಟೆ ! ಹೆಣ್ಣಿನ ವ್ಯಾಮೋಹಕ್ಕೊಳಗಾಗಿ ಮಹಾಭಕ್ತನಾದ ಐದು ವರ್ಷಗಳ ವಯಸ್ಸಿನ ನನ್ನ ಪುಟ್ಟ ಮಗುವನ್ನೂ ಅವನ ತಾಯಿಯನ್ನೂ ಮನೆಯಿಂದ ಹೊರಗಿಟ್ಟೆ ! ಆ ಪುಟ್ಟ ಬಾಲಕನು ಈಗ ಕಾಡಿನಲ್ಲಿ ಅನಾಥನಂತೆ ಬಿದ್ದಿರುವನೇನೋ! ಕಮಲದಂತಿರುವ ಅವನ ಮುದ್ದು ಮುಖ ಸೊರಗಿ ಬಾಡಿಹೋಗಿರಬಹುದು! ಕ್ಷುಧಾತೃಷೆಗಳಿಂದ ಬಳಲಿ ಅವನು ಕಂಗೆಟ್ಟಿರಲೂಬಹುದು! ತೋಳಗಳು ಅವನನ್ನು ತಿನ್ನಲು ಯತ್ನಿಸುತ್ತಿರಬಹುದು! ನಾನೆಂಥ ದುರಾತ್ಮ! ನಾನೆಂಥ ಕರುಣಾಹೀನ! ಛೇ! ಹೆಂಡತಿಯ ವೈಯಾರಕ್ಕೆ ಸೋತು ಅವಳ ಕೈಗೊಂಬೆಯಂತಾಗಿಬಿಟ್ಟಿದ್ದೇನೆ. ಪಾಪ, ನನ್ನ ಮಗು ಪ್ರೀತಿಯಿಂದ ನನ್ನ ತೊಡೆಯೇರಲು ಬಂದರೆ ನಾನು ಅವನನ್ನು ಆದರಿಸಲಿಲ್ಲ!” ರಾಜನು ತನ್ನ ಕಣ್ಣುಗಳಲ್ಲಿ ನೀರು ತುಂಬಿಕೊಂಡು ದುಃಖದಿಂದ ಹೇಳಿದ.

ನಾರದರು  ಅವನನ್ನು  ಸಮಾಧಾನಪಡಿಸಿದರು, “ಮಹಾರಾಜ! ಶೋಕಿಸಬೇಡ. ನಿನ್ನ ಮಗನನ್ನು ಭಗವಂತನೇ ರಕ್ಷಿಸಿದ್ದಾನೆ. ಅವನ ಪ್ರಭಾವವೇನೆಂದು ನಿನಗಿನ್ನೂ ತಿಳಿಯದು. ಆದರೆ ಅವನ ಯಶಸ್ಸು ಈಗಾಗಲೇ ವಿಶ್ವವನ್ನೆಲ್ಲಾ ವ್ಯಾಪಿಸುತ್ತಿದೆ. ರಾಜ, ನಿನ್ನ ಮಗನು ಲೋಕಪಾಲಕರಿಂದಲೂ ಸಾಧಿಸಲಾಗದ ಅದ್ಭುತಕಾರ್ಯವನ್ನೇ ಸಾಧಿಸುತ್ತಾನೆ. ನಿನ್ನ ಯಶಸನ್ನೂ ಅವನು ವಿಶ್ವಾದ್ಯಂತ ವಿಸ್ತರಿಸುತ್ತಾನೆ.”

ನಾರದರು ಹೀಗೆ ಹೇಳಿ ಹೊರಟು ಹೋದರು. ಅವರ ಮಾತಿನಿಂದ ರಾಜನಿಗೆ ಸ್ವಲ್ಪ ಸಮಾಧಾನವಾದರೂ ಅವನು ಧ್ರುವನ ಚಿಂತೆಯಲ್ಲೇ ಮುಳುಗಿಬಿಟ್ಟನು. ರಾಜ್ಯಾಡಳಿತಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಉತ್ಸಾಹಹೀನನಾದನು. ಸುಖಭೋಗಗಳಲ್ಲಿ ಆಸಕ್ತಿಯನ್ನು ಕಳೆದುಕೊಂಡನು. ಸದಾ ತನ್ನ ಪುತ್ರನನ್ನೇ ನೆನೆನೆನೆದು ಶೋಕಿಸಹತ್ತಿದನು. ಅವನಿಗೆ ವಾಸ್ತವವಾಗಿ ಧ್ರುವನ ಮೇಲೆ ಪ್ರೀತಿಯಿತ್ತು. ಆದರೆ ಸುರುಚಿಯ ಮೇಲೆ ಅತಿವ್ಯಾಮೋಹದಿಂದ ಅಂದು ಅವನನ್ನು ಉಪೇಕ್ಷಿಸಿದ್ದನು. ಈಗ ಅದನ್ನು ಸ್ಮರಿಸಿ ದುಃಖಿಸಿದನು.

ಇತ್ತ ಮಧುವನವನ್ನು ಪ್ರವೇಶಿಸಿದ ಧ್ರುವನು ಯಮುನೆಯಲ್ಲಿ ಮಿಂದು ಅಂದು ರಾತ್ರಿ ಉಪವಾಸ ಮಾಡಿ ಎಚ್ಚರವಾಗಿಯೇ ಇದ್ದನು.  ಮರುದಿನದಿಂದ ಪರಮ ಪುರುಷನನ್ನು ಅರ್ಚಿಸಿ ತಪಸ್ಸು ಮಾಡಲಾರಂಭಿಸಿದನು. ಅವನು ಮೊದಲ ಮಾಸದಲ್ಲಿ ಮೂರು ದಿನಗಳಿಗೊಮ್ಮೆ ಹಣ್ಣುಕಾಯಿಗಳನ್ನಷ್ಟೇ ತಿನ್ನುತ್ತಿದ್ದನು. ಎರಡನೆಯ ತಿಂಗಳಲ್ಲಿ ಆರು ದಿನಗಳಿಗೊಮ್ಮೆ ಹುಲ್ಲು, ಎಲೆಗಳನ್ನು ಮಾತ್ರ ಸೇವಿಸುತ್ತಿದ್ದನು. ಮೂರನೆಯ ಮಾಸದಲ್ಲಿ ಒಂಬತ್ತು ದಿನಗಳಿಗೊಮ್ಮೆ ಕೇವಲ ನೀರನ್ನು ಕುಡಿಯುತ್ತಿದ್ದನು. ನಾಲ್ಕನೆಯ ತಿಂಗಳಲ್ಲಿ ಹನ್ನೆರಡು ದಿನಗಳಿಗೊಮ್ಮೆ  ಕೇವಲ ವಾಯುವನ್ನು ಸೇವಿಸತೊಡಗಿದನು. ಐದನೆಯ ತಿಂಗಳು ಬರುತ್ತಲೇ  ಪ್ರಾಣವಾಯುವನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದ ಅವನು, ಒಂದೇ ಕಾಲಿನಲ್ಲಿ ಕಂಬದಂತೆ ನಿಶ್ಚಲನಾಗಿ ನಿಂತು ತಪಸ್ಸು ಮಾಡತೊಡಗಿದನು. ಮನಸ್ಸನ್ನೂ ಇಂದ್ರಿಯಗಳನ್ನೂ ಅವುಗಳ ವಿಷಯಗಳಿಂದ ಸಂಪೂರ್ಣವಾಗಿ ಹಿಂತೆಗೆದುಕೊಂಡು ಭಗವಂತನ ರೂಪವೊಂದರ ಮೇಲೆಯೇ ಕೇಂದ್ರೀಕರಿಸಿದನು. ಆಗ ಅವನಿಗೆ ಆ ದಿವ್ಯ ರೂಪವೊಂದನ್ನು ಬಿಟ್ಟು ಬೇರೆನೂ ಕಾಣಲಿಲ್ಲ.

ಸಮಸ್ತ ಸೃಷ್ಟಿಗೆ ಆಧಾರನೂ ಪರಬ್ರಹ್ಮನೂ ಜೀವಕೋಟಿಗಳ ಒಡೆಯನೂ ಆದ ಶ್ರೀಹರಿಯನ್ನು ಅವನು ತನ್ನ ಹೃದಯದಲ್ಲಿ  ಹೀಗೆ ಧರಿಸಲು, ಮೂರು ಲೋಕಗಳೂ ಕಂಪಿಸಿದವು. ಆನೆಯನ್ನು ಹೊತ್ತಿರುವ ದೋಣಿಯು, ಆನೆಯ ಪ್ರತಿ ಹೆಜ್ಜೆಗೆ ಎಡಕ್ಕೂ ಬಲಕ್ಕೂ ತೂಗಾಡುವಂತೆ, ಏಕಪಾದದಲ್ಲಿ ನಿಂತಿದ್ದ ಧ್ರುವನ ಅಂಗುಷ್ಠದಿಂದ ಒತ್ತಲ್ಪಟ್ಟ ಭೂಮಿಯು ಕೆಳಕ್ಕೆ ಕುಸಿಯಲಾರಂಭಿಸಿತು!  ದೇಹದ ನವದ್ವಾರಗಳನ್ನೂ  ಪ್ರಾಣವಾಯುವನ್ನೂ ಅವನು ನಿರೋಧಿಸಿ ಭಾರದಲ್ಲಿ ವಿಷ್ಣುವಿನೊಂದಿಗೆ ಒಂದಾಗಲು, ವಿಶ್ವದ ಉಸಿರಾಟವೇ ಸ್ತಬ್ಧವಾಗಿ ಹೋಯಿತು! ಆಗ ದೇವಾನುದೇವತೆಗಳೆಲ್ಲಾ ಭಯಭೀತರಾಗಿ ಮಹಾವಿಷ್ಣುವಿನಲ್ಲಿ ಶರಣು ಹೊಕ್ಕರು.

“ಹೇ ಭಗವಂತ! ಆಶ್ರಯದಾತ! ಸಮಸ್ತ ಜೀವರಾಶಿಯ ಉಸಿರು ಕಟ್ಟಿಹೋಗುತ್ತಿದೆ. ಇದೇಕೆ ಹೀಗಾಗುತ್ತಿದೆಯೋ ನಾವು ತಿಳಿಯದಾಗಿದ್ದೇವೆ. ಪ್ರಭು! ಸಕಲ ಚರಾಚರವಸ್ತುಗಳಿಗೂ ನೀನೇ ಆಶ್ರಯಸ್ಥಾನ. ಆದ್ದರಿಂದ ನಿನ್ನಲ್ಲಿ ಶರಣು ಬಂದಿದ್ದೇವೆ. ಕೃಪೆ ಮಾಡು ತಂದೆ! ಈ ಸಂಕಟದಿಂದ ಪಾರು ಮಾಡು!” ದೇವತೆಗಳು ಪ್ರಾರ್ಥಿಸಿದರು.

ಶ್ರೀಮನ್ನಾರಾಯಣನು ಹೇಳಿದನು, “ಹೆದರಬೇಡಿ ದೇವತೆಗಳೇ! ಉತ್ತಾನಪಾದರಾಜನ ಮಗನಾದ ಧ್ರುವನು ತನ್ನ ಚಿತ್ತವನ್ನು ನನ್ನಲ್ಲೇ ಮುಳುಗಿಸಿ ಅತ್ಯುಗ್ರವಾದ ತಪಶ್ಚರಣೆಯಲ್ಲಿ ತೊಡಗಿದ್ದಾನೆ. ಅದರ ಫಲವೇ ಇದು. ನೀವು ನಿಶ್ಚಿಂತರಾಗಿ ನಿಮ್ಮ ಲೋಕಗಳಿಗೆ ಹಿಂದಿರುಗಿ. ನಾನೇ ಸ್ವಯಂ ಹೋಗಿ ಅವನ ತಪಸ್ಸನ್ನು ನಿಲ್ಲಿಸುವೆ.”

ದೇವೋತ್ತಮ ಪರಮ ಪುರುಷನು ಹೀಗೆ ಅಭಯವನ್ನು ನೀಡಲು ದೇವತೆಗಳು ಅವನಿಗೆ ನಮಸ್ಕರಿಸಿ ತಮ್ಮ ನೆಲೆಗಳಿಗೆ ತೆರಳಿದರು. ಶ್ರೀಹರಿಯೂ ಗರುಡನನ್ನೇರಿ ತನ್ನ ಭಕ್ತನಿಗೆ ದರ್ಶನ ನೀಡಲು ಮಧುವನಕ್ಕೆ ಹೊರಟನು.

ಧ್ರುವನು ಯೋಗದಲ್ಲಿ ಪರಿಪೂರ್ಣತೆಯನ್ನು ಸಾಧಿಸಿ ತನ್ನ ಹೃದಯದಲ್ಲಿ ಮಿಂಚಿನ ಕಾಂತಿಯಿಂದ ಬೆಳಗುತ್ತಿದ್ದ ಪರಮಾತ್ಮನನ್ನೇ ನೋಡುತ್ತಿದ್ದನು. ಆದರೆ ಇದ್ದಕ್ಕಿದ್ದಂತೆ ಆ ದಿವ್ಯ ರೂಪವು ಮರೆಯಾಗಿ ಅವನ ಧ್ಯಾನಕ್ಕೆ ಭಂಗವುಂಟಾಯಿತು. ಧ್ರುವನು ತನ್ನ ಕಣ್ತೆರೆದು ನೋಡಲು, ಅದೇ ರೂಪವೇ ತನ್ನೆದುರು ನಿಂತಿರುವುದು ಕಂಡಿತು!

ಭಗವಂತನನ್ನು ಕಾಣುತ್ತಲೇ ಧ್ರುವನಿಗೊ ದಿಗ್ಭ್ರಮೆಯಾಯಿತು. ಒಡನೆಯೇ ಅವನ ಮುಂದೆ ಸಾಷ್ಟಾಂಗ ಬಿದ್ದನು. ಆನಂದಸಾಗರದಲ್ಲಿ ಮುಳುಗಿಹೋದನು. ದೇವೋತ್ತಮ ಪರಮ ಪುರುಷನ ದಿವ್ಯ ಸೌಂದರ್ಯ ರಸವನ್ನು ತನ್ನ ಕಂಗಳಿಂದಲೇ ಕುಡಿಯುತ್ತಿರುವಂತೆಯೂ, ಅವನ ಪಾದಾರವಿಂದಗಳನ್ನು ಚುಂಬಿಸುತ್ತಿರುವಂತೆಯೂ ತನ್ನ ಭುಜಗಳಿಂದ ಅವನನ್ನು ಬಿಗಿದಪ್ಪಿಕೊಳ್ಳುತ್ತಿರುವಂತೆಯೂ ಅವನಿಗೆ ಭಾಸವಾಯಿತು.

ಧ್ರುವನಿಗೆ ಶ್ರೀಹರಿಯನ್ನು ಸ್ತುತಿಸಬೇಕೆನಿಸಿತು. ಆದರೆ ಪುಟ್ಟ ಬಾಲಕನಾದ  ಅವನು  ಆ  ವಿಷಯದಲ್ಲಿ ಅನನುಭವಿಯಾದುದರಿಂದ ಏನೂ ಹೇಳದಂತಾದನು. ಆದರೆ ಎಲ್ಲರ ಹೃದಯಾಂತರಾಳದಲ್ಲಿಯೂ ಇರುವ ಪರಮಾತ್ಮನಿಗೆ ಅವನ ಮನೋಭಿಲಾಷೆ ತಿಳಿಯದೇ? ಧ್ರುವನ ಇಚ್ಛೆಯನ್ನು ನೆರವೇರಿಸಲು ತನ್ನ ದಿವ್ಯ ಶಂಖದಿಂದ ಅವನ ಕಪೋಲವನ್ನು ಸ್ಪರ್ಶಿಸಿದನು. ಕೂಡಲೇ ಬಾಲಕನಿಗೆ ವೇದಾರ್ಥಗಳೆಲ್ಲವೂ, ಜೀವಿಗಳಿಗೂ ಪರಮ ಪುರುಷನಿಗೂ ಇರುವ ಸಂಬಂಧವೂ ತಿಳಿದವು! ಅವನ ಹೃದಯ ಭಕ್ತಿಭಾವದಿಂದ ತುಂಬಿಹೋಯಿತು. ಮಹಾವಿಷ್ಣುವನ್ನು ನಿಧಾನವಾಗಿ ಸ್ತುತಿಸತೊಡಗಿದನು.

“ಯಾವ ಸರ್ವಶಕ್ತನಾದ ದೇವೋತ್ತಮ ಪರಮ ಪುರುಷನು ತನ್ನ ಶಕ್ತಿಯಿಂದ ನನ್ನಲ್ಲಿ ಪ್ರವೇಶಿಸಿ ಸುಪ್ತವಾಗಿದ್ದ ಮಾತು, ಶ್ರವಣ, ನೇತ್ರ, ಚರ್ಮ, ಕೈಕಾಲುಗಳೇ ಮೊದಲಾದ ಇಂದ್ರಿಯಗಳನ್ನೂ ಪ್ರಾಣವಾಯುವನ್ನೂ ಚೇತನಗೊಳಿಸಿದನೋ, ಅವನಿಗೆ ನಮೋ ನಮಃ.”

“ಪ್ರಭೋ! ಪರಮ ಪುರುಷನಾದ ನೀನು ಒಬ್ಬನೇ ಆದರೂ ನಿನ್ನ ವಿವಿಧ ಶಕ್ತಿಗಳಿಂದ ಅನೇಕವಾಗಿ ಕಾಣಿಸಿಕೊಳ್ಳುವೆ. ನಿನ್ನ ಬಹಿರಂಗ ಶಕ್ತಿಯಾದ ಮಾಯೆಯಿಂದ ಈ ವಿಶ್ವವನ್ನು ಸೃಷ್ಟಿಸಿ, ಅನಂತರ ಪರಮಾತ್ಮನಾಗಿ ಅದನ್ನೇ ಪ್ರವೇಶಿಸುವೆ. ನೀನು ಪರಮ ಪುರುಷನೇ ಆದರೂ, ಅಗ್ನಿಯು ವಿವಿಧ ರೂಪದ ಕಟ್ಟಿಗೆಗಳನ್ನು ಪ್ರವೇಶಿಸಿ ವಿಧವಿಧವಾಗಿ ಉರಿಯುವಂತೆ ಅಶಾಶ್ವತವಾದ ಭೌತಿಕ ಗುಣತ್ರಯಗಳ ಮೂಲಕ ಈ ವಿಶ್ವದ ವಿವಿಧ ರೂಪಗಳನ್ನು ಸೃಜಿಸುವೆ.”

“ಹೇ ಅನಾಥಬಂಧು! ಬ್ರಹ್ಮದೇವನು ಸೃಷ್ಟಿಯ ಆದಿಯಲ್ಲಿ ನಿನಗೆ ಸಂಪೂರ್ಣವಾಗಿ ಶರಣಾಗಿ ನಿನ್ನಿಂದ ಜ್ಞಾನವನ್ನು ಪಡೆದ. ನಿದ್ರಿಸುತ್ತಿರುವ ಮನುಷ್ಯನು ಎದ್ದಕೂಡಲೇ ಕಾರ್ಯಪ್ರವೃತ್ತನಾಗುವಂತೆ ಅವನು ಸೃಷ್ಟಿರಹಸ್ಯವನ್ನರಿತ. ಪ್ರಭು, ಆರ್ತರಿಗೂ ಮುಮುಕ್ಷುಗಳಿಗೂ ನೀನೋಬ್ಬನೇ ಶರಣ್ಯನು. ನಿನ್ನನ್ನರಿತವನು ಹೇಗೆ ತಾನೇ ನಿನ್ನನ್ನು ಮರೆತಾನು?”

“ಶ್ರೀಹರಿ! ಜನನ ಮರಣವೆಂಬ ಸಂಸಾರಚಕ್ರದಿಂದ ಜೀವಿಗಳನ್ನು ಬಿಡಿಸುವ ನೀನು ಒಂದು ಕಲ್ಪತರುವಿನಂತಿದ್ದರೂ, ನಮ್ಮಂತಹ ಜನರು ನರಕದಂಥ ಸ್ಥಿತಿಯಲ್ಲೂ ಸಿಗಬಹುದಾದ ಇಂದ್ರಿಯ ಸುಖಕ್ಕಾಗಿಯೇ ಬೇಡುತ್ತೇವೆ. ನಿಶ್ಚಯವಾಗಿಯೂ ನಾವು ಮಾಯೆಯಿಂದ ವಿಮೋಹಿತರಾಗಿರುವರೇ ಸರಿ!”

“ಪ್ರಭು! ನಿನ್ನ ಪಾದಪದ್ಮಗಳನ್ನು ಧ್ಯಾನಿಸುವುದರಿಂದಾಗಲೀ, ನಿನ್ನ ಭಕ್ತರಿಂದ ನಿನ್ನ ದಿವ್ಯ ಕಥೆಗಳನ್ನು ಕೇಳುವುದರಿಂದಾಗಲೀ ದೊರಕುವ ಪರಮಾನಂದವು, ನಿನ್ನದೇ ನಿರಾಕಾರಸ್ವರೂಪವಾದ ಬ್ರಹ್ಮಜ್ಯೋತಿಯಲ್ಲಿ ಲೀನವಾಗುವುದರಿಂದ ಸಿಗುವ ಆನಂದಕ್ಕಿಂತಲೂ ಮಿಗಿಲಾದುದು. ಇನ್ನು ಕಾಲಖಡ್ಗದ ಪ್ರಹಾರಕ್ಕೊಳಗಾಗಿ ವಿಮಾನಗಳಿಂದ ಪತನಹೊಂದಬೇಕಾದಂಥ ಸ್ವರ್ಗಸುಖದ ಬಗ್ಗೆ ಏನು ಹೇಳುವುದು? ಅನಂತ! ಅಲೆಗಳು ಪ್ರವಹಿಸುವಂತೆ ನಿನ್ನ ಕಥಾ ಪ್ರಸಂಗಗಳ ಸವಿಯನ್ನುಣಿಸುವ ನಿನ್ನ ಭಕ್ತಜನರ ಸಂಗವನ್ನು ಮತ್ತೆ ಮತ್ತೆ ಕರುಣಿಸು! ನಿನ್ನ ದಿವ್ಯಕಥಾಮೃತವನ್ನು ಕುಡಿದು ಮತ್ತೇರಿ, ಈ ಭವಜಲಾಬ್ಧಿಯನ್ನು ನಾನು ಸುಲಭವಾಗಿ ದಾಟಿಬಿಡುವೆ! ಕಮಲನಾಭನೇ! ನಿನ್ನ ಚರಣಾರವಿಂದಗಳ  ಸುಗಂಧವನ್ನಾಶಿಸುವ  ಭಕ್ತರ ಸಂಗದಲ್ಲಿರುವವರು ತಮ್ಮ ದೇಹ, ಮನೆ, ಹೆಂಡತಿ, ಮಕ್ಕಳು, ಐಶ್ವರ್ಯ, ಮೊದಲಾದವುಗಳ ಬಗ್ಗೆ  ಆಸಕ್ತರಾಗುವುದಿಲ್ಲ.”

“ಜನ್ಮರಹಿತನೇ! ಈ ವಿಶ್ವವು ಕೆಲವೊಮ್ಮೆ ವ್ಯಕ್ತವಾಗುವ ಮತ್ತು ಕೆಲವೊಮ್ಮೆ ವ್ಯಕ್ತವಾಗದ ಸುರನರೋರಗ ದೇವ ದೈತ್ಯ ಪಶುಪಕ್ಷಿಗಳಾದಿಯಾಗಿ ವಿವಿಧ ಬಗೆಯ ರೂಪಗಳ ಜೀವಿಗಳಿಂದ ತುಂಬಿದೆಯೆಂದು ನಾನು ಬಲ್ಲೆ. ಆದರೆ ಪರಮೋನ್ನತವಾದ ಈ ನಿನ್ನ ದಿವ್ಯರೂಪವನ್ನು ಈ ಮೊದಲು ನಾನು ಎಂದೂ ನೋಡಿಲ್ಲ. ಸದಸದಾತ್ಮಕವಾದ ನಿನ್ನ ವಿರಾಡ್ರೂಪಕ್ಕಿಂತಲೂ ಈಗ ಮೈದೋರಿರುವ ನಿನ್ನ ದಿವ್ಯಸ್ವರೂಪವು ಮಿಗಿಲಾದುದೆಂಬುದರಲ್ಲಿ ಯಾವ ಸಂಶಯವೂ ಇಲ್ಲ.”

“ಕಲ್ಪಾಂತ್ಯದಲ್ಲಿ ಯಾವ ಭಗವಂತನು ಅಖಿಲ ಬ್ರಹ್ಮಾಂಡವನ್ನೂ ತನ್ನ ಜಠರದಲ್ಲಿ ಅಡಗಿಸಿ ಆದಿಶೇಷನ ತಲ್ಪದಲ್ಲಿ ಪವಡಿಸುವನೋ, ಯಾರ ನಾಭಿಯಿಂದ ಹೊನ್ನ ಕಮಲವು ಉದಿಸಿ ಅದರಲ್ಲಿ ಬ್ರಹ್ಮದೇವನು ಜನಿಸುವನೋ, ಅಂಥ ಶ್ರೀಹರಿಗೆ ನನ್ನ ಭಕ್ತಿಯುತ ಪ್ರಣಾಮಗಳನ್ನು ಸಲ್ಲಿಸುವೆ.”

“ದೇವದೇವ! ನಿತ್ಯ ಮುಕ್ತನೂ ಪರಿಶುದ್ಧನೂ ಜ್ಞಾನಪೂರ್ಣನೂ ನಿರ್ವಿಕಾರನೂ ಆದಿಪುರುಷನೂ ತ್ರಿಗುಣಗಳಿಗೆ ಈಶನೂ ಆದ ನೀನು ಜೀವಿಗಳಿಗಿಂತ ಭಿನ್ನನಾಗಿರುವೆ. ಬುದ್ಧಿಯ ಚಟುವಟಿಕೆಗಳಿಗೆ ಸಾಕ್ಷಿಯಾಗಿರುವ ನೀನು ವಿಶ್ವದ ಸ್ಥಿತಿಗಾಗಿ, ವಿಷ್ಣುವಾಗಿ ನಿರ್ಲಿಪ್ತತೆಯಿಂದ ಯಜ್ಞಫಲಗಳನ್ನು ಭುಂಜಿಸುವೆ. ವಿದ್ಯೆ, ಅವಿದ್ಯೆಗಳೆಂಬ ವಿರುದ್ಧಾಂಶಗಳಿರುವ ನಿನ್ನ ನಿರಾಕಾರಬ್ರಹ್ಮಸ್ವರೂಪದಲ್ಲಿ ನಾನಾಶಕ್ತಿಗಳು ಕಾರ್ಯಪ್ರವೃತ್ತವಾಗಿರುತ್ತವೆ. ವಿಶ್ವಕ್ಕೆ ಕಾರಣವೂ, ಅಖಂಡವೂ, ಅನಂತವೂ, ಆದಿಮೂಲವೂ, ಆನಂದಮಾತ್ರವೂ ಆದ ಆ ಪರಬ್ರಹ್ಮನಿಗೆ ನನ್ನ ಗೌರವಪೂರ್ಣ ನಮನಗಳು.

“ಭಗವಂತನೇ! ನೀನೇ ಪರಮಪುರುಷಾರ್ಥ! ಬೇರಾವ ಆಸೆಯೂ ಇಲ್ಲದೆ ನಿನ್ನನ್ನೇ ಭಜಿಸುವ ಭಕ್ತರಿಗೆ ರಾಜ್ಯಭಾರ ನಡೆಸುವುದಕ್ಕಿಂತಲೂ ನಿನ್ನ ಪಾದಪದ್ಮಗಳನ್ನು ಸೇವಿಸುವುದೇ ಮೇಲು. ಆದರೂ ನನ್ನಂಥ ದೀನರಿಗೆ, ಹಸುವು ತನ್ನ ನವಜಾತ ಕರುವಿಗೆ ಹಾಲು ಕುಡಿಸಿ ಅದನ್ನು ಕಾಯುವಂತೆ ರಕ್ಷಣೆ ನೀಡುವೆ!”

ಧ್ರುವನ ಪ್ರಾರ್ಥನೆಯಿಂದ ಸುಪ್ರಸನ್ನನಾದ ಭಗವಂತನು ನುಡಿದನು, “ರಾಜಕುಮಾರ, ಧ್ರುವ! ನಿನಗೆ ಮಂಗಳವಾಗಲಿ! ಮಗು, ನಿನ್ನ ಹೃದಯದಾಶೆಯನ್ನು ನಾನು ಬಲ್ಲೆನು. ಅದನ್ನು ನೆರವೇರಿಸುವುದು ಕಷ್ಟವಾದರೂ ನಾನು ನೆರವೇರಿಸುವೆ. ಜಾಜ್ವಲ್ಯಮಾನವಾಗಿ ಬೆಳಗುವ ಧ್ರುವ ನಕ್ಷತ್ರವೆಂಬ ಅದ್ಭುತ ಲೋಕವನ್ನು ನಿನಗೆ ದಯಪಾಲಿಸುವೆ. ಲೋಕಪ್ರಳಯವಾದ ಬಳಿಕವೂ ಶಾಶ್ವತವಾಗಿ ಉಳಿಯುವ ಈ ಧಾಮವನ್ನು ಇದುವರೆವಿಗೂ ಯಾರೂ ಪಡೆದಿಲ್ಲ. ಗ್ರಹತಾರಾ-ಜ್ಯೋತಿರ್ಮಂಡಲಗಳೆಲ್ಲವೂ, ಧರ್ಮ, ಅಗ್ನಿ, ಕಶ್ಯಪ, ಶುಕ್ರರೇ ಮೊದಲಾದ ಮಹರ್ಷಿಗಳು ವಾಸಿಸುವ ನಕ್ಷತ್ರ ಮಂಡಲಗಳೂ ನಿನ್ನ ಲೋಕವನ್ನು ಸುತ್ತುವರಿದಿದ್ದು, ಮೇಟಿಯನ್ನು ಸುತ್ತುವ ಎತ್ತುಗಳಂತೆ ನಿನ್ನ ಲೋಕಕ್ಕೆ ಪ್ರದಕ್ಷಿಣೆ ಹಾಕುತ್ತಿರುತ್ತವೆ.”

“ನಿನ್ನ ತಂದೆಯು ನಿನಗೆ ರಾಜ್ಯಭಾರ ವಹಿಸಿ ವಾನಪ್ರಸ್ಥಕ್ಕೆ ಹೋದ ಬಳಿಕ, ಕುಂದದ ಯೌವನದಿಂದ ಈ ಭೂಮಂಡಲವನ್ನು ಮೂವತ್ತಾರು ಸಾವಿರ ವರ್ಷಪರ್ಯಂತ ಆಳುವೆ. ಒಂದು ದಿನ, ಮೃಗಯಾ ವಿಹಾರಕ್ಕೆಂದು ಹೋಗುವ ನಿನ್ನ ತಮ್ಮ ಉತ್ತಮನು ಸಾವಿಗೀಡಾಗುತ್ತಾನೆ. ಅದರಿಂದ ವ್ಯಾಕುಲಗೊಳ್ಳುವ ನಿನ್ನ ಮಲತಾಯಿ ಸುರುಚಿಯು ಅವನನ್ನು ಹುಡುಕ ಹೋಗಿ ಕಾಡ್ಗಿಚ್ಚಿಗೆ ಸಿಕ್ಕಿ ತಾನೂ ಸಾಯುತ್ತಾಳೆ.

“ವತ್ಸ! ಸಕಲ ಯಜ್ಞಗಳ ಹೃದಯಸ್ವರೂಪಿಯಾದ ನನ್ನನ್ನು ಅನೇಕ ಯಜ್ಞಯಾಗಗಳನ್ನು ಮಾಡುವುದರಿಂದಲೂ ದಾನದಕ್ಷಿಣೆಗಳನ್ನು ನೀಡುವುದರಿಂದಲೂ ಅರ್ಚಿಸುವೆ. ನಾನು ಕರುಣಿಸುವ ಇಹಲೋಕದ ಭೋಗಭಾಗ್ಯಗಳನ್ನೆಲ್ಲಾ ಅನುಭವಿಸಿ ಜೀವನದ ಕಡೆಯಲ್ಲಿ ನನ್ನನ್ನು ಸ್ಮರಿಸುವೆ. ಅನಂತರ, ಸರ್ವಲೋಕವಾಸಿಗಳಿಂದಲೂ ನಮಸ್ಕರಿಸಲ್ಪಡುವ, ಸಪ್ತರ್ಷಿ ಮಂಡಲಕ್ಕೂ ಮೇಲಿರುವ ನನ್ನ ದಿವ್ಯಧಾಮಕ್ಕೆ ತೆರಳುವ ನೀನು, ಪುನಃ ಈ ಮರ್ತ್ಯಲೋಕಕ್ಕೆ ಹಿಂದಿರುಗುವುದಿಲ್ಲ.”

ಹೀಗೆ ಧ್ರುವನಿಗೆ ತನ್ನ ದಿವ್ಯಲೋಕವನ್ನೇ ನೀಡಿದ ವಿಷ್ಣುವು ಅವನು ನೋಡುತ್ತಿರುವಂತೆಯೇ ಗರುಡನನ್ನೇರಿ ಸ್ವಧಾಮಕ್ಕೆ ತೆರಳಿದನು.

ದುರ್ಲಭವಾದ ವರವನ್ನು ಪಡೆದ ಧ್ರುವಕುಮಾರನು ತನ್ನ ರಾಜ್ಯಕ್ಕೆ ಹಿಂದಿರುಗಿ ಹೊರಟನು. ಆದರೆ ಅವನಿಗೆ ಭಗವಂತನ ವರದಿಂದ ತೃಪ್ತಿಯಾಗಲಿಲ್ಲ. ಮುಕ್ತಿಪತಿಯೇ ಪ್ರತ್ಯಕ್ಷನಾಗಿದ್ದರೂ ಮಲತಾಯಿಯ ಮಾತುಗಳಿಂದ ನೊಂದಿದ್ದ ತಾನು ಮುಕ್ತಿಯನ್ನು ಬೇಡದೆ ಅಶಾಶ್ವತವಾದ ಐಹಿಕ ಸುಖವನ್ನೇ ಬೇಡಿದೆನಲ್ಲಾ ಎಂದು ದುಃಖಿಸಿದನು, “ಅಯ್ಯೋ! ನಾನೆಂಥ ಮಂದಮತಿ! ಭವಪಾಶವನ್ನು ಒಮ್ಮೆಲೇ ಕತ್ತರಿಸಬಲ್ಲ ಭಗವಂತನ ಪಾದಾರವಿಂದಗಳ ಬಳಿ ಬಂದೂ ನಶ್ವರವಾದುದನ್ನೇ ಬೇಡಿದೆ! ಅವನ ಚರಣಕಮಲಗಳ ಆಶ್ರಯವನ್ನು ಪಡೆಯಲು ಸನಕಸನಂದಾದಿ ಮುನಿಗಳಿಗೆ ಅನೇಕ ಜನ್ಮಗಳೇ ಬೇಕಾದವು. ನಾನು ಕೇವಲ ಆರೇ ತಿಂಗಳುಗಳಲ್ಲಿ ಅದನ್ನು ಸಾಧಿಸಿದರೂ ಪುನಃ ಈ ದುಃಖಮಯವಾದ ಸಂಸಾರದಲ್ಲಿ ಬಿದ್ದೆ ! ನಾನು ವೈಕುಂಠವನ್ನು ಪಡೆಯುವೆನೆಂದೂ ತಾವು ತಮ್ಮ ಲೋಕಗಳಿಂದ ಎಂದಾದರೊಂದು ದಿನ ಕೆಳಗೆ ಬೀಳಬೇಕಾಗುವುದೆಂದೂ ಮಾತ್ಸರ್ಯ ತಾಳಿದ ದೇವತೆಗಳು ನನ್ನ ಬುದ್ಧಿಗೆ ಭ್ರಮೆಯನ್ನುಂಟು ಮಾಡಿಬಿಟ್ಟರು! ಅದರಿಂದಲೇ ನನಗೆ ನಾರದ ಮುನಿಗಳ ಉಪದೇಶವನ್ನೂ ಗ್ರಹಿಸಲಾಗಲಿಲ್ಲ. ನಿಶ್ಚಯವಾಗಿಯೂ ನಾನು ಮಾಯೆಗೆ ವಶನಾಗಿ ಮಲಗಿಬಿಟ್ಟಿದ್ದೆ! ದ್ವಂದ್ವಯುಕ್ತವಾದ ಮನಸ್ಸಿನಿಂದ ನನ್ನ ತಮ್ಮನನ್ನು ಒಬ್ಬ ವೈರಿಯೆಂದು ಪರಿಗಣಿಸಿದೆ. ಛೇ! ಪ್ರಾಣ ಹೋದ ಬಳಿಕ ಚಿಕಿತ್ಸೆ ಮಾಡಿದಂತಾಯಿತು ನನ್ನ ಸ್ಥಿತಿ! ಮೆಚ್ಚಿಸಲಸಾಧ್ಯನಾದ ಆ ಭವನಾಶಕನನ್ನು ದುಷ್ಕರ ತಪಸ್ಸಿನಿಂದ ಮೆಚ್ಚಿಸಿ ಪುನಃ ಭವವನ್ನೇ ಬೇಡಿದೆ. ಭಗವಂತನು ನನಗೆ ತನ್ನ ಸೇವೆ ಮಾಡುವ ಅವಕಾಶವನ್ನೇ ಕಲ್ಪಿಸಿಕೊಟ್ಟರೂ ನಾನು ಮೌಢ್ಯತೆಯಿಂದ ಸ್ಥಾನಮಾನಗಳನ್ನು ಬೇಡಿದೆ. ದೊಡ್ಡ ಸಮ್ರಾಟನೊಬ್ಬನಿಂದ ಒಂದು ಹಿಡಿ ಭತ್ತದ ಹೊಟ್ಟನ್ನು ಬೇಡಿದಂತಾಯಿತು ನನ್ನ ಸ್ಥಿತಿ!”

ಮುಕುಂದನ ಚರಣಕಮಲಗಳ ಮಧುವನ್ನಾಶಿಸುವ ಭಕ್ತಜನರು ಅವನ ಸೇವೆಯೊಂದನ್ನೇ ಬೇಡುತ್ತಾ ತಾನಾಗಿ ಒದಗಿಬಂದ ಸುಖದಲ್ಲಿ ಸಂತೃಪ್ತರಾಗಿರುತ್ತಾರೆ.

“ಮಹಾಸ್ವಾಮಿ! ರಾಜಕುಮಾರನು ಊರಿಗೆ ಹಿಂದಿರುಗಿ ಬರುತ್ತಿದ್ದಾನೆ.” ದೂತನೊಬ್ಬ ಉತ್ತಾನಪಾದರಾಜನ ಬಳಿ ಬಂದು ಹೇಳಿದನು.

ಆ ಮಾತನ್ನು ಕೇಳಿ ರಾಜನಿಗೆ ಕರ್ಣಾನಂದವಾಯಿತು. ಮೃತನಾದವನಿಗೆ ಮತ್ತೆ ಪ್ರಾಣ ಬಂದಂತಾಯಿತು. ಆದರೆ ಅದನ್ನು ನಂಬುವುದೇ ಕಷ್ಟವಾಯಿತು. ತನ್ನಂಥ ಪಾಪಿಗೆ ಪುನಃ ಧ್ರುವನನ್ನು ನೋಡುವ ಪುಣ್ಯವಿದೆಯೇ? ಆದರೆ ನಾರದರು ಹೇಳಿದ್ದರಲ್ಲ? ಅದರಿಂದ ರಾಜನಿಗೆ ದೂತನ ಮಾತಿನಲ್ಲಿ ನಂಬಿಕೆ ಬಂದಿತು. ಆನಂದೋತ್ಸಾಹದಲ್ಲಿ ತನ್ನ ಕಂಠೀ ಮಾಲೆಯನ್ನು ತೆಗೆದು ಅವನಿಗೆ ಉಡುಗೊರೆಯಾಗಿತ್ತನು. ಮಗನನ್ನು ಕಾಣುವ ಉತ್ಸುಕತೆಯಲ್ಲಿ ಉತ್ತಮಾಶ್ವಗಳನ್ನು ಹೂಡಲ್ಪಟ್ಟ ಹೊನ್ನಿನ ರಥವನ್ನೇರಿ, ಬ್ರಾಹ್ಮಣರಿಂದಲೂ ಗುರುಹಿರಿಯರಿಂದಲೂ ಬಂಧುಗಳಿಂದಲೂ ಸಮಾವೃತನಾಗಿ ಅವನು ಹೊರಟನು. ರಾಜನ ಹಿಂದೆ ವೇದಮಂತ್ರಗಳ ಘೋಷಣೆಯೊಂದಿಗೆ ಶಂಖ ಕೊಳಲು ದುಂದುಭಿಗಳ ನಿನಾದ ಮಾಡುತ್ತಾ ದೊಡ್ಡ ಮೆರವಣಿಗೆಯೇ ಹೊರಟಿತು. ರಾಣಿಯರಾದ ಸುನೀತಿ, ಸುರುಚಿಯರು ಉತ್ತಮನೊಂದಿಗೆ ಪಲ್ಲಕ್ಕಿಯನ್ನೇರಿ ಹೊರಟರು.

ಧ್ರುವನು ಉಪವನವೊಂದರ ಬಳಿ ನಡೆದು ಬರುತ್ತಿರುವುದನ್ನು ದೂರದಿಂದಲೇ ಕಂಡ ರಾಜನು ಬೇಗನೇ ತನ್ನ ರಥದಿಂದಿಳಿದು ಅವನ ಬಳಿಗೆ ಓಡಿಹೋದನು. ತುಂಬು ಪ್ರೀತಿಯಿಂದ ಅವನನ್ನು ಬಾಚಿ ತಬ್ಬಿಕೊಂಡನು. ಹರಿಯ ಪಾದಾಬ್ಜಗಳ ಸ್ಪರ್ಶದಿಂದ ಪಾಪಶೇಷಗಳನ್ನು ಕಳೆದುಕೊಂಡು ಪವಿತ್ರವಾಗಿದ್ದ ಆ ಬಾಲಕನ ದೇಹವನ್ನು ಮುದ್ದಾಡಿ ರಾಜನು ಪುಳಕಿತನಾದನು. ಆನಂದೋದ್ವೇಗದಿಂದ ಮತ್ತೆ ಮತ್ತೆ ನಿಟ್ಟುಸಿರುಬಿಟ್ಟನು. ಧ್ರುವನ ನೆತ್ತಿಯನ್ನು ಮತ್ತೆ ಮತ್ತೆ ಆಘ್ರಾಣಿಸುತ್ತಾ ಆನಂದಬಾಷ್ಪಗಳಿಂದ ಅವನನ್ನು ತೋಯಿಸಿಬಿಟ್ಟನು! ಪ್ರೇಮವಿಹ್ವಲತೆಯಿಂದ ರಾಜನಿಗೆ ಕಂಠವು ಬಿಗಿದು ಬಂದು ಮಾತೇ ಹೊರಡದಂತಾಯಿತು.

ಸಜ್ಜನವರೇಣ್ಯನಾದ ಧ್ರುವನು ತನ್ನ ತಂದೆಯ ಪಾದಗಳಿಗೆರಗಿದನು. ತಂದೆಯು ಅವನನ್ನು ಆಶೀರ್ವದಿಸಿದ ಬಳಿಕ ತನ್ನ ಇಬ್ಬರೂ ತಾಯಂದಿರಿಗೂ ನಮಸ್ಕರಿಸಿದನು. ಹಿಂದಿನ ಗರ್ವವಡಗಿದ್ದ ಸುರುಚಿಯು ಅವನನ್ನು ಹಿಡಿದೆತ್ತಿ ಅಪ್ಪಿಕೊಂಡಳು. ಆನಂದಬಾಷ್ಪಗಳನ್ನು ಸುರಿಸುತ್ತಾ, “ಚಿರಂಜೀವಿಯಾಗು ಮಗು!” ಎಂದು ಆಶೀರ್ವದಿಸಿದಳು. ಸುನೀತಿಯ ಆನಂದಕ್ಕಂತೂ ಪಾರವೇ ಇರಲಿಲ್ಲ. ಮಾತೃ ವಾತ್ಸಲ್ಯದಿಂದ ಅವಳ ಸ್ತನಗಳಲ್ಲಿ ಹಾಲು ತುಂಬಿ ಹರಿಯತೊಡಗಿತು! ಮತ್ತೆ ಮತ್ತೆ ಆನಂದಬಾಷ್ಪಗಳನ್ನು ಸುರಿಸುತ್ತಾ ತನ್ನ ವೀರಪುತ್ರನ ದೇಹವನ್ನು ನೆನೆಸಿದಳು!

“ಮಹಾರಾಣಿ! ನೀನು ಭಾಗ್ಯವಂತೆ!” ಸುನೀತಿಗೆ ಅವಳ ಸಖಿಯರು ಹೇಳಿದರು, “ಕಳೆದು ಹೋಗಿದ್ದ ನಿನ್ನ ಮಗನು ಹಿಂದಿರುಗಿಬಿಟ್ಟ! ಇನ್ನೇನೂ ಭಯವಿಲ್ಲ. ನಿನ್ನ ದುಃಖಗಳನ್ನೆಲ್ಲ ಅವನು ನಿವಾರಿಸುತ್ತಾನೆ. ನೀನು ಆರ್ತರ ಸಂಕಟಗಳನ್ನೆಲ್ಲ ಪರಿಹರಿಸುವ ಆ ಭಗವಂತನನ್ನು ಪೂಜಿಸಿರಬೇಕು. ಅವನನ್ನು ಧ್ಯಾನಿಸುವವರು ಜನನ ಮರಣಗಳಿಂದ ಕೂಡಿರುವ ಈ ಸಂಸಾರ ಚಕ್ರದಿಂದ ಮುಕ್ತರಾಗುತ್ತಾರೆ.”

ಉತ್ತಮನೂ ಪ್ರೀತಿಯಿಂದ ಧ್ರುವನನ್ನಾಲಂಗಿಸಿಕೊಂಡನು. ಭಾವಪರವಶತೆಯಿಂದ ಅವರೀರ್ವರೂ ಪುಳಕಿತರಾದರು.

ಹರಿಯು ಪ್ರಸನ್ನನಾದ ವ್ಯಕ್ತಿಯನ್ನು ಯಾರು ತಾನೇ ಸನ್ಮಾನಿಸುವುದಿಲ್ಲ? ಹಳ್ಳದ ಕಡೆಗೆ ನೀರು ತಾನಾಗಿಯೇ ಹರಿಯುವಂತೆ ಎಲ್ಲರೂ ಅವನನ್ನು ವಂದಿಸುತ್ತಾರೆ!

ಜನರೆಲ್ಲರೂ ಧ್ರುವನನ್ನು ಕೊಂಡಾಡುತ್ತಿರಲು, ಉತ್ತಾನಪಾದ ರಾಜನು ಪರಮ ಹೃಷ್ಟನಾಗಿ ಅವನನ್ನೂ, ಉತ್ತಮನನ್ನೂ ಪಟ್ಟದಾನೆಯ ಮೇಲೆ ಕೂರಿಸಿಕೊಂಡು ನಗರಕ್ಕೆ ಹಿಂದಿರುಗಿದನು.

ಇಡೀ ನಗರವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಬಾಳೆಗೊನೆಗಳಿಂದಲೂ, ಎಳೆಯ ಅಡಿಕೆ ಗಿಡಗಳಿಂದಲೂ, ಮಾವಿನ ಚಿಗುರುಗಳಿಂದಲೂ, ಹೂಮಾಲೆಗಳಿಂದಲೂ, ಮಕರ ದ್ವಾರಗಳಿಂದಲೂ ನಗರವು ಕಂಗೊಳಿಸುತ್ತಿತ್ತು. ದ್ವಾರಗಳು ಸುಂದರ ದೀಪಗಳಿಂದಲೂ, ರಮ್ಯ ವಸ್ತ್ರಗಳಿಂದ ಅಲಂಕೃತವಾಗಿದ್ದ ಪೂರ್ಣಕುಂಭಗಳಿಂದಲೂ ಬಹುವೈಭವೋಪೇತವಾಗಿ ಕಾಣುತ್ತಿದ್ದವು. ನಗರದ ತುಂಬ ಇದ್ದ ಅದ್ಭುತ ಪ್ರಾಕಾರಗಳೂ, ಗೋಪುರಗಳಿಂದ ಯುಕ್ತವಾಗಿದ್ದ ಭವ್ಯ ಸದನಗಳೂ, ಮಾಲ್ಯಾಭರಣಗಳಿಂದ ಸಿಂಗರಿಸಲ್ಪಟ್ಟು ಎಲ್ಲರ ಕಣ್ಮನಗಳನ್ನು ಸೆಳೆಯುತ್ತಿದ್ದವು. ಆಗಸದಲ್ಲಿ ಜಾಜ್ವಲ್ಯಮಾನವಾಗಿ ಹೊಳೆಯುತ್ತಿದ್ದ ವಿಮಾನಗಳು ಹಾರಾಡುತ್ತಿದ್ದವು. ನಗರದ ಪ್ರಾಂಗಣಗಳನ್ನೂ ಹಾದಿಬೀದಿಗಳನ್ನೂ ಶುದ್ಧವಾಗಿ ತೊಳೆದು ಗಂಧಾಕ್ಷತೆಗಳಿಂದಲೂ ಫಲಪುಷ್ಪಗಳಿಂದಲೂ ಮತ್ತಿತರ ಮಂಗಳದ್ರವ್ಯಗಳಿಂದಲೂ ಒಪ್ಪ ಓರಣ ಮಾಡಿದ್ದರು.

ಧ್ರುವಕುಮಾರನು ಮೆರವಣಿಗೆಯಲ್ಲಿ ಬರುತ್ತಿದ್ದಂತೆ ಪುರಸ್ತ್ರೀಯರು ತಮ್ಮ ಕೈಗಳಲ್ಲಿ ಸಾಸಿವೆ, ಅಕ್ಷತೆಗಳನ್ನು ತುಂಬಿದ್ದ ತಟ್ಟೆಗಳನ್ನೂ ಫಲಪುಷ್ಪಗರಿಕೆಗಳನ್ನೂ ಶುದ್ಧವಾದ ನೀರು ಮತ್ತು ಮೊಸರು ತುಂಬಿದ ಕುಂಭಗಳನ್ನೂ ಹಿಡಿದು ಅವನನ್ನು ಸ್ವಾಗತಿಸಿದರು. ಮಧುರವಾದ ಹಾಡುಗಳನ್ನು ಹಾಡುತ್ತಾ ಆ ಸಾಧ್ವೀಮಣಿಯರು ಅವನಿಗೆ ಮಂಗಳಾಶೀರ್ವಾದಗಳನ್ನು ಮಾಡಿದರು.

ಹೀಗೆ ರಾಜಮರ್ಯಾದೆಯಿಂದ ಮೆರವಣಿಗೆಯಲ್ಲಿ ಸಾಗಿದ ಧ್ರುವಕುಮಾರನು ತನ್ನ ತಂದೆಯ ಅರಮನೆಯನ್ನು ಪ್ರವೇಶಿಸಿದನು. ಮುತ್ತು ರತ್ನಗಳಿಂದ ಸಿಂಗರಿಸಲ್ಪಟ್ಟಿದ್ದ ಆ ಅರಮನೆಯು ದೇವಸದನದಂತೆ ದೇದೀಪ್ಯಮಾನವಾಗಿತ್ತು. ಆ ಅರಮನೆಯಲ್ಲಿದ್ದ ಹಾಸಿಗೆಗಳು ಹಾಲಿನ ನೊರೆಯ ಬಿಳುಪಿನಿಂದ ಕೂಡಿ ಬಹು ಸುಂದರವಾಗಿದ್ದವು, ಹಾಗೂ ಅತಿ ಕೋಮಲವಾಗಿದ್ದವು. ಅವುಗಳನ್ನು ಹಾಸಿದ್ದ ಮಂಚಗಳೋ ದಂತದಿಂದ ಮಾಡಲ್ಪಟ್ಟಿದ್ದು ಸ್ವರ್ಣಾಭರಣಯುಕ್ತವಾಗಿದ್ದವು. ಆಸನಗಳೆಲ್ಲವೂ ಚಿನ್ನದಿಂದ ಮಾಡಲ್ಪಟ್ಟಿದ್ದು ಬಹು ರಮಣೀಯವಾಗಿದ್ದವು. ಆ ಅರಮನೆಯ ಗೋಡೆಗಳು ಸ್ಫಟಿಕದಿಂದ ಮಾಡಲ್ಪಟ್ಟಿದ್ದು ವಜ್ರ, ಮರಕತ, ಮಾಣಿಕ್ಯವೇ ಮೊದಲಾದ ನವರತ್ನಗಳಿಂದ ಅಲಂಕೃತವಾಗಿದ್ದವು. ರತ್ನ ದೀಪಗಳನ್ನು ಹಿಡಿದಿದ್ದ ಸ್ತ್ರೀರೂಪದ ಕೆತ್ತನೆಗಳು ಲಾವಣ್ಯಾತಿಶಯಗಳಿಂದ ರಮ್ಯ ಮನೋಹರವಾಗಿದ್ದವು. ಆ ಅರಮನೆಯನ್ನು ಸುತ್ತುವರಿದಿದ್ದ ಉದ್ಯಾನಗಳು ಸ್ವರ್ಗಲೋಕದ ಅದ್ಭುತವೃಕ್ಷಗಳಿಂದ ಸಂಪನ್ನವಾಗಿದ್ದವು. ಹಸಿರು ಸೊಬಗಿನ ಆ ರಮ್ಯತಾಣಗಳಲ್ಲಿ ಪಕ್ಷಿಗಳು ತಮ್ಮ ಜೊತೆಗಳೊಂದಿಗೆ ಮಧುರವಾಗಿ ಹಾಡುತ್ತಿದ್ದರೆ, ಮಧುಪಾನ ಮಾಡಿ ಮತ್ತೇರಿದ್ದ ಭ್ರಮರಗಳು ಮನೋಹರವಾಗಿ ಝೇಂಕರಿಸುತ್ತಿದ್ದವು. ಆ ಉದ್ಯಾನಗಳಲ್ಲಿ ವಜ್ರವೈಡೂರ್ಯಯುಕ್ತವಾದ ಸೋಪಾನಗಳಿಂದ ಕೂಡಿದ್ದ ಸುಂದರ ಸರಸ್ಸುಗಳಿದ್ದವು. ಕಮಲ, ಕನ್ನೈದಿಲೆಗಳು ತುಂಬಿದ್ದ ಆ ರಮಣೀಯ ಸರೋವರಗಳಲ್ಲಿ ಹಂಸಕಾರಂಡವ ಚಕ್ರವಾಕಗಳು ನಲಿನಲಿಯುತ್ತಾ ವಿಹರಿಸುತ್ತಿದ್ದವು.

ಇಂಥ ಸುಂದರ ಅರಮನೆಯಲ್ಲಿ ತನ್ನ ತಂದೆಯ ಪ್ರೀತಿಯ ಆರೈಕೆಯಿಂದ, ಧ್ರುವನು ಸ್ವರ್ಗದಲ್ಲಿ ವಾಸಿಸುವ ದೇವತೆಯಂತೆ ಬಾಳಿದನು.

ಧ್ರುವನು ತಪಶ್ಚರ್ಯೆಗೆಂದು ಕಾಡಿಗೆ ಹೋಗಿದ್ದಾಗ ರಾಜರ್ಷಿ ಉತ್ತಾನಪಾದನು ಅವನ ಪ್ರಭಾವದ ಬಗ್ಗೆ ನಾರದರಿಂದ ಕೇಳಿ ತಿಳಿದಿದ್ದನು. ಈಗ ಅದನ್ನು ತಾನೇ ಕಣ್ಣಾರೆ ಕಂಡು ಬಹುವಿಸ್ಮಿತನಾದನು.

ಈ ಲೇಖನ ಶೇರ್ ಮಾಡಿ