ಮತ್ಸ್ಯಾವತಾರ

ಮಕ್ಕಳೇ, ಭಗವಂತನು ಲೋಕ ಕಲ್ಯಾಣಕ್ಕಾಗಿ ಅನೇಕ ಸಂದರ್ಭಗಳಲ್ಲಿ ಅನೇಕ ರೂಪಗಳಲ್ಲಿ ಅವತರಿಸಿ ತನ್ನ ಲೀಲೆಗಳನ್ನು ಮೆರೆಯುತ್ತಾನೆ. ಅವನ ಲೀಲೆಗಳನ್ನು ಶ್ರೀಮದ್ಭಾಗವತದಲ್ಲಿ ಅತ್ಯಂತ ರೋಚಕವಾಗಿ ವಿವರಿಸಲಾಗಿದೆ. ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಲು ಈ ಐಹಿಕ ಜಗತ್ತಿನಲ್ಲಿ ಅವನು ಕಾಣಿಸಿಕೊಳ್ಳುವುದನ್ನು `ಅವತಾರ’ ಎನ್ನುತ್ತಾರೆ. ಅಂತಹ ಅವತಾರಗಳ ಪೈಕಿ ಕೃತಯುಗದಿಂದ ಪ್ರಾರಂಭವಾಗಿ ಈಗಿನ ಕಲಿಯುಗದ ಅಂತ್ಯದವರೆಗೆ ವ್ಯಾಪಿಸಿರುವ ದಶಾವತಾರಗಳಲ್ಲಿ ಮೊದಲನೆಯದಾದ ಮತ್ಸ್ಯಾವತಾರದ ಕಥೆಯನ್ನು ತಿಳಿಯೋಣ.

ಕೃತಯುಗದಲ್ಲಿ ಧರ್ಮವನ್ನು ಅತ್ಯಂತ ಸೂಕ್ತ ರೀತಿಯಲ್ಲಿ ಕಾಪಾಡಲಾಗುತ್ತಿತ್ತು. ಅದಕ್ಕೆಂದೇ ಆ ಯುಗವನ್ನು ಸತ್ಯ ಯುಗವೆಂತಲೂ ಕರೆಯುತ್ತಾರೆ. ಅಂತಹ ಸತ್ಯ ಯುಗದಲ್ಲಿ ಸತ್ಯವ್ರತ ಎಂಬ ಒಬ್ಬ ರಾಜನಿದ್ದನು. ಅವನು ಭಗವಂತನ ಪರಮ ಭಕ್ತನಾಗಿದ್ದು ಧರ್ಮ ಕಾರ್ಯಗಳನ್ನು  ಚಾಚೂ ತಪ್ಪದೆ ಪಾಲಿಸುತ್ತಿದ್ದನು. ಒಂದು ದಿನ ಅವನು `ಕೃತ ಮಾಲಾ’ ಎಂಬ ನದಿಯಲ್ಲಿ ಸೂರ್ಯನಿಗೆ ಅರ್ಘ್ಯವನ್ನು ಕೊಡಲು ಬೊಗಸೆಯಲ್ಲಿ ನೀರು ತೆಗೆದುಕೊಂಡಾಗ ನೀರಿನ ಜೊತೆಯಲ್ಲಿ ಚಿಕ್ಕದಾದ ಮೀನೊಂದು ಅವನ ಕೈಗೆ ಬಂದಿತು. ಮನುಷ್ಯರ ರೀತಿಯಲ್ಲಿ ಮಾತನಾಡಿದ ಆ ಮೀನು ತನ್ನನ್ನು ಕಾಪಾಡುವಂತೆ ರಾಜನನ್ನು ಬೇಡಿತು. ಒಪ್ಪಿದ ರಾಜನು ಅದನ್ನು  ಕಮಂಡಲದಲ್ಲಿ ಹಾಕಿ ತನ್ನ ಅರಮನೆಗೆ  ತಂದನು. ಏನಾಶ್ಚರ್ಯ! ಆ ಮೀನು ಒಂದು ರಾತ್ರಿಯಲ್ಲಿ ಎಷ್ಟೊಂದು ಬೆಳೆಯಿತೆಂದರೆ ಕಮಂಡಲದಲ್ಲಿ ಹಿಡಿಸಲಿಲ್ಲ. ಆ ಕಮಂಡಲವು ಚಿಕ್ಕದಾಗಿರುವುದರಿಂದ ಬೇರೆಡೆ ತನ್ನನ್ನು ಇಡುವಂತೆ ಆ ಮೀನು ರಾಜನಲ್ಲಿ ವಿನಂತಿಸಿತು. ಅದರ ಮಾತಿನಂತೆ ರಾಜನು ಅದನ್ನು ತೆಗೆದುಕೊಂಡು ಬಾವಿಯಲ್ಲಿ ಹಾಕಿದನು. ಕ್ಷಣದಲ್ಲಿ ಮೀನು ಬಾವಿಯಲ್ಲಿಯೂ ಹಿಡಿಸದಷ್ಟು ದೊಡ್ಡದಾಯಿತು. ಅದನ್ನು ಬಾವಿಯಿಂದ ತೆಗೆದ ಸತ್ಯವ್ರತನು ದೊಡ್ಡ ಕೆರೆಗೆ ಹಾಕಿದನು. ಅಲ್ಲಿಯೂ ಬೃಹದಾಕಾರವಾಗಿ ಬೆಳೆದ ಮೀನಿಗೆ ನದಿಯೇ ಸೂಕ್ತವೆಂದು ತಿಳಿದ ರಾಜನು ಅದನ್ನು ತೆಗೆದುಕೊಂಡು ನದಿಗೆ ಹಾಕಿದನು. ಆಗ ಮೀನು ತನ್ನನ್ನು ಅದಕ್ಕಿಂತಲೂ ದೊಡ್ಡ ನೀರಿರುವ ಸ್ಥಳದಲ್ಲಿ ಹಾಕುವಂತೆ ವಿನಂತಿಸಿತು. ನದಿಯನ್ನೂ ಮೀರಿ ಬೆಳೆದ ಮೀನನ್ನು  ಸಾಗರದಲ್ಲಿ ಹಾಕಿದನು.

ಪುಟ್ಟದಾದ ರೂಪದಲ್ಲಿ ಸತ್ಯವ್ರತ ರಾಜನ ಬೊಗಸೆಗೆ ಸಿಕ್ಕಿದ್ದ ಆ ಮೀನು ಭಗವಂತನ ಮತ್ಸ್ಯಾವತಾರವೇ ಆಗಿತ್ತು. ಆಗ ರಾಜನು ತದೇಕ ಚಿತ್ತವಾಗಿ ಭಗವಂತನನ್ನು ಕುರಿತು ಪ್ರಾರ್ಥಿಸತೊಡಗಿದನು. ಇದರಿಂದ ತೃಪ್ತನಾದ ಭಗವಂತನು ರಾಜನನ್ನು ಕುರಿತು ಹೀಗೆಂದು ನುಡಿದನು – ಇಂದಿನಿಂದ ಏಳನೆಯ ದಿನದಂದು ಪ್ರಳಯವು ಸಂಭವಿಸುವುದು. ಆ ಪ್ರಳಯ ಕಾಲದಲ್ಲಿ ನನ್ನ ಪ್ರೇರಣೆಯಂತೆ ನಿನ್ನ ಬಳಿಗೆ ದೊಡ್ಡದಾದ ಹಡಗು ಬರುವುದು. ಸಪ್ತ  ಋಷಿಗಳ ಜೊತೆಗೆ ಆ ಹಡಗಿನಲ್ಲಿ ಕುಳಿತು ಅವರೊಂದಿಗೆ ಸಂಚರಿಸುತ್ತಿರು. ಚಂಡಮಾರುತವು ಬೀಸಿದಾಗ ಇದೇ ರೂಪದಿಂದ ಬಂದು ನಾನು ಕಾಪಾಡುತ್ತೇನೆ ಎಂದಿತು.

ಮತ್ಸ್ಯದೇವನ ಮಾತಿನಂತೆ ಏಳನೆಯ ದಿನದಂದು ಆಗಸದಲ್ಲಿ ದಟ್ಟನೆಯ ಮೋಡಗಳು ಕವಿದು ಘರ್ಷಿಸಿ ಅವುಗಳು ಸುರಿಸಿದ ಅಪಾರ ಮಳೆಯಿಂದಾಗಿ ಮಹಾಸಾಗರದಲ್ಲಿನ ನೀರು ತುಂಬಿ ಹರಿದು ಭೂಮಿಯನ್ನು ಆವರಿಸಲು ಪ್ರಾರಂಭಿಸಿತು. ಸತ್ಯವ್ರತನು ದೇವೋತ್ತಮ ಪರಮಪುರುಷನನ್ನು ನೆನೆಯುತ್ತಿರುವಾಗ ಒಂದು ಹಡಗು ಅವನತ್ತ ಸಾಗಿ ಬರುವುದನ್ನು ಕಂಡನು. ಆಗ ಬಳ್ಳಿಗಳು, ಗಿಡಮೂಲಿಕೆಗಳನ್ನು ಸಂಗ್ರಹಿಸಿಕೊಂಡು ಬ್ರಾಹ್ಮಣೋತ್ತಮರ ಜೊತೆಗೆ  ಆ ಹಡಗನ್ನು ಹತ್ತಿದನು. ರಾಜನು ನಿರಂತರವಾಗಿ ದೇವೋತ್ತಮ ಪರಮಪುರುಷನನ್ನು ನೆನೆಯುತ್ತಿರಬೇಕಾದರೆ ಪ್ರವಾಹದಿಂದಾಗಿ ಉಕ್ಕಿ ಹರಿಯುತ್ತಿದ್ದ ಮಹಾಸಾಗರದಲ್ಲಿ ಬಂಗಾರದ ಮೀನೊಂದು ಪ್ರಕಟವಾಯಿತು. ಅದು ಒಂದು  ಕೊಂಬನ್ನು ಹೊಂದಿತ್ತಲ್ಲದೇ, ಎಂಬತ್ತು ಲಕ್ಷ ಮೈಲಿಗಳಷ್ಟು ಉದ್ದವಿದ್ದಿತು. ಆಗ ರಾಜನು ವಾಸುಕಿ ಎಂಬ ಸರ್ಪವನ್ನು ಹಗ್ಗದಂತೆ ಬಳಸಿಕೊಂಡು ಹಡಗನ್ನು ಆ ಮೀನಿನ ಕೊಂಬಿಗೆ ಲಂಗರು ಹಾಕಿದನು.

ಬಳಿಕ ಭಗವಂತನು ಪ್ರಳಯ ಸಾಗರದಲ್ಲಿ ಸತ್ಯವ್ರತನಿಗೆ ಉಪದೇಶ ಮಾಡಿದನು. ಹೀಗೆ ಕರುಣಾ ಸಾಗರನಾದ ಭಗವಂತನು ಮತ್ಸ್ಯಾವತಾರದಲ್ಲಿ ಭಕ್ತನಾದ ಸತ್ಯವ್ರತನಿಗೆ ವೇದೋಪದೇಶವನ್ನು ಮಾಡುವ ಮೂಲಕ ತನ್ನ ವಿಶೇಷ ಕೃಪೆಯನ್ನು ತೋರಿದನು.

ಈ ಲೇಖನ ಶೇರ್ ಮಾಡಿ