ಮಹಿಳೆಗೇಕೆ ಸಮಾನತೆ?

ಈ ಸಂವಾದವು ಶ್ರೀ ಶ್ರೀಮದ್‌ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಒಬ್ಬಳು ವರದಿಗಾರ್ತಿಯ ನಡುವೆ ಷಿಕಾಗೋ ಕೃಷ್ಣ ಕೇಂದ್ರದಲ್ಲಿ 1975ರ ಬೇಸಿಗೆಯಲ್ಲಿ ನಡೆಯಿತು.

ವರದಿಗಾರ್ತಿ: ಪುರುಷರಿಗೆ ಅಡಿಯಾಳಾಗಲು ಇಷ್ಟಪಡದ ಸ್ತ್ರೀಯರಿಗೆ ನಿಮ್ಮ ಬುದ್ಧಿವಾದವೇನು?

ಶ್ರೀಲ ಪ್ರಭುಪಾದ: ಇದು ನನ್ನ ಬುದ್ಧಿವಾದವಲ್ಲ. ಸ್ತ್ರೀಯು ನಿಷ್ಕಳಂಕಳಾಗಿರಬೇಕು ಮತ್ತು ತನ್ನ ಪತಿಗೆ ನಿಷ್ಠಳಾಗಿರಬೇಕು ಎನ್ನುವುದು ವೈದಿಕ ಸಾಹಿತ್ಯಗಳ ಬುದ್ಧಿವಾದ.

ವರದಿಗಾರ್ತಿ: ಅಮೆರಿಕದಲ್ಲಿ ನಾವೇನು ಮಾಡಬೇಕು? ನಾವು ಸ್ತ್ರೀಯರನ್ನು ಪುರುಷರಿಗೆ ಸಮಾನವಾಗಿರುವಂತೆ ಮಾಡಲು ಪ್ರಯತ್ನಿಸುತ್ತಿದ್ದೇವೆ.

ಶ್ರೀಲ ಪ್ರಭುಪಾದ: ನೀವು ಪುರುಷರಿಗೆ ಎಂದೂ ಸಮಾನರಾಗಲಾರಿರಿ. ಏಕೆಂದರೆ ಅನೇಕ ವಿಚಾರಗಳಲ್ಲಿ ನಿಮ್ಮ ಕಾರ್ಯಭಾರಗಳೇ ಬೇರೆಯಾಗಿವೆ. ನೀವು ಏಕೆ ಕೃತಕವಾಗಿ ಅವರು ಪುರುಷರಿಗೆ ಸಮಾನರು ಎಂದು ಹೇಳುತ್ತಿದ್ದೀರಿ? ಪತ್ನಿಯಾದವಳು ಗರ್ಭಿಣಿಯಾಗಬೇಕೇ ವಿನಾ ಪತಿಯಲ್ಲ. ಇದನ್ನು ನೀವು ಹೇಗೆ ಬದಲಾಯಿಸಬಲ್ಲಿರಿ? ಪತಿ ಮತ್ತು ಪತ್ನಿ ಇಬ್ಬರೂ ಗರ್ಭತಾಳಲು ಸಾಧ್ಯವೇ?

ವರದಿಗಾರ್ತಿ: (ಉತ್ತರವಿಲ್ಲ)

ಶ್ರೀಲ ಪ್ರಭುಪಾದ: ಅದು ಸಾಧ್ಯವೆ?

ವರದಿಗಾರ್ತಿ: ಇಲ್ಲ. ಅದು ಸಾಧ್ಯವಿಲ್ಲ

ಶ್ರೀಲ ಪ್ರಭುಪಾದ: ಎಂದ ಮೇಲೆ ನೈಸರ್ಗಿಕವಾಗಿಯೇ ಒಬ್ಬರು ಇನ್ನೊಬ್ಬರಿಗಿಂತ ಬೇರೆಯಾಗಿ ಕೆಲಸ ಮಾಡಬೇಕಾಗಿದೆ.

ವರದಿಗಾರ್ತಿ: ಸ್ತ್ರೀಯರು ಮಕ್ಕಳನ್ನು ಹಡೆಯುತ್ತಾರೆ ಮತ್ತು ಪುರುಷರಿಗೆ ಅದು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಸ್ತ್ರೀಯರು ಅಡಿಯಾಳಾಗಿರಬೇಕು ಎಂದು ಅರ್ಥವೆ?

ಶ್ರೀಲ ಪ್ರಭುಪಾದ: ಪ್ರಕೃತಿ ಸಹಜವಾಗಿಯೇ ನೀವು ಮಕ್ಕಳನ್ನು ಪಡೆಯುತ್ತಿದ್ದಂತೆ ನಿಮ್ಮ ಪತಿಯ ಬೆಂಬಲ ನಿಮಗೆ ಬೇಕಾಗುತ್ತದೆ. ಇಲ್ಲದಿದ್ದರೆ ನೀವು ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತೀರಿ.

ವರದಿಗಾರ್ತಿ: ಮಕ್ಕಳಿರುವ ಅನೇಕ ಸ್ತ್ರೀಯರಿಗೆ ಅವರ ಪತಿಯಿಂದ ಬೆಂಬಲವಿಲ್ಲ. ಅವರಿಗೆ ಬೇರೆ ಯಾವುದೂ…

ಶ್ರೀಲ ಪ್ರಭುಪಾದ: ಹಾಗಾದರೆ ಅವರು  ಬೇರೆಯವರಿಂದ ಬೆಂಬಲವನ್ನು ಪಡೆಯಬೇಕಾಗುತ್ತದೆ. ಅದನ್ನು ನೀವು ನಿರಾಕರಿಸಲಾರಿರಿ. ಸರ್ಕಾರವು ಅವರಿಗೆ ಬೆಂಬಲ ಕೊಡುತ್ತದೆ. ಇದು ಸರ್ಕಾರಕ್ಕೆ ಮುಜುಗರವಾಗಿದೆ. ಪತಿಯು ತನ್ನ ಪತ್ನಿ ಮತ್ತು ಮಕ್ಕಳಿಗೆ ಬೆಂಬಲವಾಗಿ ನಿಂತರೆ ಸರ್ಕಾರಕ್ಕೆ ಅಷ್ಟರಮಟ್ಟಿಗೆ ಕ್ಷೇಮಾಭಿವೃದ್ಧಿಯ ಖರ್ಚಿನಲ್ಲಿ ಉಳಿತಾಯವಾಗುತ್ತದೆ. ಆದ್ದರಿಂದ ಅದು ಒಂದು ಸಮಸ್ಯೆಯಾಗಿದೆ.

ವರದಿಗಾರ್ತಿ: ಸ್ತ್ರೀಯರು ಪುರುಷರಿಗೆ ಬೆಂಬಲ ಕೊಟ್ಟರೆ ಏನಾಗುತ್ತದೆ?

ಶ್ರೀಲ ಪ್ರಭುಪಾದ: ಮೊದಲನೆಯದಾಗಿ ನೀವು ಅವಲಂಬಿತರು ಎನ್ನುವುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಪುರುಷ ಮತ್ತು ಸ್ತ್ರೀ ಕೂಡಿದ ಮೇಲೆ ಮಕ್ಕಳು ಹುಟ್ಟುತ್ತಾರೆ. ಪುರುಷನು ಹೊರಟು ಹೋದರೆ ನಿಮಗೆ ಮುಜುಗರವಾಗುತ್ತದೆ. ಸ್ತ್ರೀಗೆ ಮುಜುಗರವಾಗುತ್ತದೆ. ಬಡಪಾಯಿ ಸ್ತ್ರೀ ತನ್ನ ಮಗುವಿನೊಡನೆ ದಿಕ್ಕು ತೋಚದವಳಾಗುತ್ತಾಳೆ. ಅವಳು ಸರ್ಕಾರದಿಂದ ಭಿಕ್ಷೆ ಬೇಡಬೇಕು. ಅದು  ಬಹಳ ಸೊಗಸಾದ ಅನುಭವ ಎಂದು ನಿಮಗೆ ಅನ್ನಿಸುತ್ತದೆಯೆ? ವೈದಿಕ ವಿಚಾರವೇನೆಂದರೆ ಒಬ್ಬಳು ಸ್ತ್ರೀಯು ಒಬ್ಬ ಪುರುಷನೊಡನೆ ವಿವಾಹವಾಗಬೇಕು ಮತ್ತು ಪುರುಷನು ಆ ಸ್ತ್ರೀ ಮತ್ತು ಮಕ್ಕಳನ್ನು ನೋಡಿಕೊಳ್ಳಬೇಕು. ಸ್ವತಂತ್ರವಾಗಿ ಇದರಿಂದ ಅವರು ಸರ್ಕಾರಕ್ಕಾಗಲಿ ಅಥವಾ ಸಾರ್ವಜನಿಕರಿಗಾಗಲಿ ಒಂದು ಹೊರೆಯಾಗುವುದಿಲ್ಲ.

ವರದಿಗಾರ್ತಿ: ನಿಮ್ಮ ಅಭಿಪ್ರಾಯದಲ್ಲಿ ಸಾಮಾಜಿಕ ಕ್ಷೋಭೆಯ….

ಶ್ರೀಲ ಪ್ರಭುಪಾದ: ನಾನು ಹೀಗೆ ಯೋಚಿಸುತ್ತಿದ್ದೇನೆ. ನೀವು ಉತ್ತರ ಕೊಡಿ! ನೀವು ಸುಮ್ಮನೆ ಪ್ರಶ್ನೆ ಕೇಳುತ್ತಲೇ ಇದ್ದೀರಿ. ನಾನು ನಿಮ್ಮನ್ನು ಪ್ರಶ್ನಿಸುತ್ತೇನೆ. ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ಹೀಗೆ ಹೊರೆಯಾಗುವುದು ಒಳ್ಳೆಯದೆಂದು ನೀವು ಭಾವಿಸುತ್ತೀರಾ?

ವರದಿಗಾರ್ತಿ: ನೀವು ಏನು ಹೇಳುತ್ತಿದ್ದೀರೋ ನನಗೆ ಅರ್ಥವಾಗುತ್ತಿಲ್ಲ.

ಶ್ರೀಲ ಪ್ರಭುಪಾದ: ಪ್ರತಿವರ್ಷವೂ ಸರ್ಕಾರವು ಅವಲಂಬಿತ ಮಕ್ಕಳ ಸಹಾಯಾರ್ಥವಾಗಿ ಮಿಲಿಯಾಂತರ ಡಾಲರುಗಳನ್ನು ನೀಡಬೇಕಾಗಿದೆ. ಪತಿಯು ತನ್ನ ಪತ್ನಿಯನ್ನು ತೊರೆದು ಹೋದಾಗ ಸರ್ಕಾರದ ಮೇಲೆ ಮತ್ತು ಸಾರ್ವಜನಿಕರ ಮೇಲೆ ಬೀಳುವ ಈ ಹೊರೆಯು ಒಳ್ಳೆಯದೆಂದು ನೀವು ಭಾವಿಸುತ್ತೀರಾ?

ವರದಿಗಾರ್ತಿ: ಇಲ್ಲ.

ಶ್ರೀಲ ಪ್ರಭುಪಾದ: ಸ್ತ್ರೀಯು ಅಧೀನವಾಗಿರಲು ಒಪ್ಪಿಕೊಳ್ಳದ ಕಾರಣದಿಂದ ಅದು ಹೀಗಾಗಿದೆ. ಅವಳು “ಸಮಾನ ಸ್ವಾತಂತ್ರ್ಯವನ್ನು” ಬಯಸುತ್ತಾಳೆ.

ವರದಿಗಾರ್ತಿ: ಸ್ತ್ರೀಯರು ಪುರುಷರಿಗೆ ಅಧೀನವಾಗಿದ್ದರೆ ಅದು ನಮ್ಮ ಎಲ್ಲ ಸಮಸ್ಯೆಗಳನ್ನೂ ನಿವಾರಿಸುತ್ತದೆ ಎಂದು ನಾನು ಭಾವಿಸಬಹುದೆ?

ಶ್ರೀಲ ಪ್ರಭುಪಾದ: ಹೌದು ತನ್ನ ಪತ್ನಿಯು ಅಧೀನವಾಗಿರಬೇಕು. ತನಗೆ ನಿಷ್ಠಳಾಗಿರಬೇಕು ಎಂದು ಪತಿಯು ಬಯಸುತ್ತಾನೆ. ಆಗ ಅವನು ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ಧನಾಗಿರುತ್ತಾನೆ. ಪುರುಷನ ಮನೋಧರ್ಮ ಮತ್ತು ಸ್ತ್ರೀಯ ಮನೋಧರ್ಮ ಬೇರೆ ಬೇರೆ. ಆದ್ದರಿಂದ ಸ್ತ್ರೀಯು ಪುರುಷನಿಗೆ ನಿಷ್ಠಳಾಗಿ ಮತ್ತು ಅಧೀನಳಾಗಿ ಇರಲು ಒಪ್ಪಿಕೊಂಡರೆ ಕುಟುಂಬ ಜೀವನ ಪ್ರಶಾಂತವಾಗಿರುತ್ತದೆ. ಹೀಗಲ್ಲದಿದ್ದರೆ ಪತಿಯು ತೊರೆದುಹೋಗುತ್ತಾನೆ, ಮತ್ತು ಸ್ತ್ರೀಯು ತನ್ನ ಮಕ್ಕಳೊಡಗೂಡಿ ದಿಕ್ಕುತೋಚದವಳಾಗುತ್ತಾಳೆ. ಇದು ಸರ್ಕಾರಕ್ಕೂ ಮತ್ತು ಜನಸಾಮಾನ್ಯರಿಗೂ ಹೊರೆಯಾಗುತ್ತದೆ.

ವರದಿಗಾರ್ತಿ: ಸ್ತ್ರೀಯು ಕೆಲಸ ಮಾಡುವುದರಲ್ಲಿ ಏನಾದರೂ ತಪ್ಪು ಇದೆಯೆ?

ಶ್ರೀಲ ಪ್ರಭುಪಾದ: ತಪ್ಪಾಗಿರುವ ಸಂಗತಿಗಳು ಅನೇಕವಾಗಿವೆ. ಆದರೆ ಮೊದಲನೆಯ ವಿಚಾರವೆಂದರೆ, ಯಾರೋ ಒಬ್ಬನ ಪತ್ನಿ ಮತ್ತು ಮಕ್ಕಳು ಸರ್ಕಾರಕ್ಕೆ ಅಥವಾ ಸಾರ್ವಜನಿಕರಿಗೆ ಏಕೆ ಹೊರೆಯಾಗಬೇಕು? ಮೊಟ್ಟ ಮೊದಲನೆಯದಾಗಿ ಈ ಪ್ರಶ್ನೆಗೆ ಉತ್ತರ ಕೊಡಿ. ಅವಳು ಏಕೆ ಒಂದು ಹೊರೆಯಾಗಬೇಕು?

ವರದಿಗಾರ್ತಿ: (ಉತ್ತರವಿಲ್ಲ)

ಶ್ರೀಲ ಪ್ರಭುಪಾದ: ನಿಮ್ಮ ಉತ್ತರ ಏನು?

ವರದಿಗಾರ್ತಿ: ಪುರುಷರೂ ಕೂಡ ಸರ್ಕಾರಕ್ಕೆ ಹೊರೆಯಾಗಿದ್ದಾರಲ್ಲ?

ಶ್ರೀಲ ಪ್ರಭುಪಾದ: ಸಾಮಾಜಿಕ ದೃಷ್ಟಿಕೋನದಿಂದ ಸ್ತ್ರೀಯರು ಮತ್ತು ತಂದೆಯಿಲ್ಲದ ಮಕ್ಕಳು ಇರುವ ಈ ಸನ್ನಿವೇಶವು ಒಂದು ಬಹಳ ಸೊಗಸಾದ ಸಂಗತಿಯೆ?

ವರದಿಗಾರ್ತಿ: ನಾನು ಏನು ಹೇಳಲು ಪ್ರಯತ್ನಿಸುತ್ತಿದ್ದೇನೆ ಎಂದರೆ … ಇದು ಕೆಲವು ಸ್ತ್ರೀಯರಿಗೆ ಆಗಬಹುದು…. ನಾನು ಮಾತನಾಡುತ್ತಿರುವುದು ಸ್ತ್ರೀಯರು…

ಶ್ರೀಲ ಪ್ರಭುಪಾದ: ಇದು ಸಾಮಾನ್ಯವಾಗಿ ಕಾಣುತ್ತಿರುವ ಮಾದರಿ. ನೀವು “ಕೆಲವು” ಎಂದು ಹೇಳಲಾಗದು. ಅಮೆರಿಕದಲ್ಲಿ ನಾನು ಕಂಡಂತೆ ಇಂತಹ ಅಧೀನರು ಹೆಚ್ಚಿನ ಪಾಲು ಸ್ತ್ರೀಯರೇ ಆಗಿದ್ದಾರೆ… ಸ್ತ್ರೀಯು ಪುರುಷನಿಗೆ ಅಧೀನವಾಗಿರಬೇಕು. ಆಗ ಪುರುಷನು ಸ್ತ್ರೀಯ ರಕ್ಷಣೆಯನ್ನು ವಹಿಸಿಕೊಳ್ಳಬಲ್ಲ. ಆಗ ಸ್ತ್ರೀಯು ಸಾರ್ವಜನಿಕರಿಗೆ ಒಂದು ಸಮಸ್ಯೆಯಾಗುವುದಿಲ್ಲ.

ವರದಿಗಾರ್ತಿ: ಎಲ್ಲ ಸ್ತ್ರೀಯರು ಮತ್ತು ಪುರುಷರ ವಿಷಯದಲ್ಲಿ ಇದು ನಿಜವೇ?

ಶ್ರೀಲ ಪ್ರಭುಪಾದ: ಹೌದು . ಅದು ಪ್ರಕೃತಿಯ ನಿಯಮ. ನಾಯಿಗಳ ಉದಾಹರಣೆಯನ್ನೇ ತೆಗೆದುಕೊಳ್ಳಿ – ಅವು ಕೂಡ ತಮ್ಮ ಮರಿಗಳ ರಕ್ಷಣೆಯನ್ನು ವಹಿಸಿಕೊಳ್ಳುತ್ತವೆ. ಹುಲಿಗಳು – ಅವೂ ತಮ್ಮ ಮರಿಗಳನ್ನು ರಕ್ಷಿಸುತ್ತವೆ. ಆದರೆ ಮಾನವ ಸಮಾಜದಲ್ಲಿ ಸ್ತ್ರೀಯನ್ನು ಗರ್ಭಿಣಿ ಮಾಡಿ ಪುರುಷನು ತೊರೆದು ಹೋದರೆ ಅವಳು ದಿಕ್ಕು ತೋಚದವಳಾಗುತ್ತಾಳೆ – ಅವಳು ಸರ್ಕಾರದಿಂದ ಭಿಕ್ಷೆ ಬೇಡಬೇಕು. ಅದು ಏನೂ ಒಳ್ಳೆಯ ಸನ್ನಿವೇಶವಲ್ಲ.

ವರದಿಗಾರ್ತಿ: ಮಕ್ಕಳಿಲ್ಲದ ಸ್ತ್ರೀಯರ ವಿಚಾರವೇನು?

ಶ್ರೀಲ ಪ್ರಭುಪಾದ: ಓ ಅದು ಇನ್ನೊಂದು ಅನೈಸರ್ಗಿಕವಾದ ಸಂಗತಿ. ಕೆಲವು ಸಲ ಅವರು ಗರ್ಭನಿರೋಧಕಗಳನ್ನು ಬಳಸುತ್ತಾರೆ ಅಥವಾ ತಮ್ಮ ಮಕ್ಕಳನ್ನು ಕೊಲ್ಲುತ್ತಾರೆ – ಗರ್ಭಪಾತ. ಅದು ತೀರ ಕೆಟ್ಟ ಸಂಗತಿ. ಇವು ಎಲ್ಲವೂ ಪಾಪಪೂರಿತವಾದ ಚಟುವಟಿಕೆಗಳು.

ವರದಿಗಾರ್ತಿ: ಏನೆಂದಿರಿ?

ಶ್ರೀಲ ಪ್ರಭುಪಾದ: ಇವು ಎಲ್ಲವೂ ಪಾಪಪೂರಿತವಾದ ಚಟುವಟಿಕೆಗಳು. ಮಗುವನ್ನು ಗರ್ಭದಲ್ಲೇ ಕೊಲ್ಲುವುದು ಮತ್ತು ಗರ್ಭಪಾತದ ಆಶ್ರಯವನ್ನು ತೆಗೆದುಕೊಳ್ಳುವುದು. ಇವು ಎಲ್ಲವೂ ಪಾಪಪೂರಿತ ಚಟುವಟಿಕೆಗಳು. ವ್ಯಕ್ತಿಯು ಅದಕ್ಕಾಗಿ ಯಾತನೆ ಪಡಬೇಕಾಗುತ್ತದೆ.

ವರದಿಗಾರ್ತಿ: ಈ ದೇಶದಲ್ಲಿರುವ ಸಾಮಾಜಿಕ ಕ್ಷೋಭೆಗೆ ಕಾರಣವೇನೆಂದರೆ…

ಶ್ರೀಲ ಪ್ರಭುಪಾದ: ಈ ಕಾರಣಗಳಿಂದಲೇ ಅದು ಆಗುತ್ತಿರುವುದು. ಅವರಿಗೆ ಅದು ತಿಳಿದಿಲ್ಲ.

ಈ ಲೇಖನ ಶೇರ್ ಮಾಡಿ