ಯಾರು  ಶ್ರೇಷ್ಠ  ತ್ಯಾಗಿ?

ವೈಯಕ್ತಿಕ ಅಪೇಕ್ಷೆಗಳನ್ನು ಕೃತಕವಾಗಿ ಹೆಚ್ಚಿಸಬಾರದೆಂಬ ವೌಲ್ಯವನ್ನು ವೈದಿಕ ಧರ್ಮ ಗ್ರಂಥಗಳು ಮೆಚ್ಚಿಕೊಂಡಿವೆ.

ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್‌ |
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್‌ ಧನಮ್‌ ॥

      ಈ ಜಗತ್ತಿನಲ್ಲಿರುವ ಪ್ರತಿಯೊಂದು ಚರಾಚರವಸ್ತುವೂ ಭಗವಂತನ ನಿಯಂತ್ರಣದಲ್ಲಿದೆ. ಅವನೇ ಅವುಗಳ ಒಡೆಯ. ಆದ್ದರಿಂದ ಪ್ರತಿಯೊಬ್ಬನೂ ತನಗೆ ಅವಶ್ಯವಾದ ವಸ್ತುಗಳನ್ನು ಮಾತ್ರ, ತನಗೆ ಮೀಸಲಿಟ್ಟಿದ್ದನ್ನು ಮಾತ್ರ ಸ್ವೀಕರಿಸಬೇಕು ಮತ್ತು ಇತರರಿಗೆ ಸೇರಿದ ವಸ್ತುಗಳನ್ನು ಸ್ವೀಕರಿಸಬಾರದು. (ಶ್ರೀ ಈಶೋಪನಿಷತ್‌ ಮಂತ್ರ 1)

      ದೇವೋತ್ತಮನ ಮಾಲೀಕತ್ವವನ್ನು ಒಪ್ಪಿಕೊಂಡಾಗ ಮತ್ತು ಎಲ್ಲರ ಅಗತ್ಯಗಳ ಸಂರಕ್ಷಣೆಗೆ ನಮ್ಮ ಅಲ್ಪ ಕಾಣಿಕೆಯನ್ನು ಸಲ್ಲಿಸಿದಾಗ ನಾವು ಜವಾಬ್ದಾರಿಯುತ ಜೀವನವನ್ನು ನಡೆಸುತ್ತೇವೆ. ಆದರೆ ಈ ದೇಹವೇ ಎಲ್ಲವೂ ಎಂದು ಭಾವಿಸಿದರೆ ಮತ್ತು ನಮ್ಮ ಗುರಿಗಳನ್ನು ಈ ಲೋಕಕ್ಕೆ ಸೀಮಿತಗೊಳಿಸಿದರೆ, ನಾವು ಸುಖದ ವ್ಯಾಪ್ತಿಯನ್ನು ನಿಯಂತ್ರಿಸಿದಂತೆ. ಮಾರುಕಟ್ಟೆಗಳಲ್ಲಿನ ಬದಲಾವಣೆ, ರಾಜಕೀಯ ಭವಿಷ್ಯಗಳ ತಿರುವು ಮತ್ತು ಷೇರು ಮಾರುಕಟ್ಟೆಯ ಕುಸಿತ – ಇವುಗಳಿಂದ ಒಂದು ಗಾಢವಾದ ಅಭದ್ರತೆಯ ಭಾವನೆ ಉಂಟಾಗುತ್ತದೆ. ಈ ಭಯಭೀತಿಗಳು ಮಾನವನಿಗೆ ಎಲ್ಲ ನೈತಿಕ ಪರಿಜ್ಞಾನವನ್ನು, ಧರ್ಮಭೀತಿಯನ್ನು ಬಿಟ್ಟುಬಿಡುವಂತೆ ಪ್ರಚೋದನೆ ನೀಡುತ್ತವೆ ಮತ್ತು ಎಲ್ಲ ಕಾಲದ ಗೌರವಿತ ಆಧ್ಯಾತ್ಮಿಕ ವೌಲ್ಯಗಳನ್ನು ಬಿಡುವಂತೆ ಪ್ರಚೋದಿಸುತ್ತವೆ. ಇದು ನಾಯಿ ನಾಯಿಯನ್ನು ತಿನ್ನುವ ಲೋಕವನ್ನು ಸೃಷ್ಟಿಸುತ್ತದೆ. ಶ್ರೀಲ ಪ್ರಭುಪಾದರು ಆಧುನಿಕ ಮಾನವನ ಉಗ್ರ ಪ್ರಯತ್ನಗಳನ್ನು ಸ್ಪಷ್ಟವಾಗಿ
ಬಹಿರಂಗಪಡಿಸಿದ್ದಾರೆ :

      “ಪ್ರಕೃತಿಯ ವ್ಯವಸ್ಥೆಯ ಪ್ರಕಾರ, ವಿಕಾಸ ಶ್ರೇಣಿಯಲ್ಲಿ ತಳಮಟ್ಟದಲ್ಲಿರುವ ಜೀವಿಗಳು ಆವಶ್ಯಕವಾದುದಕ್ಕಿಂತ ಹೆಚ್ಚಾಗಿ ತಿನ್ನುವುದೂ ಇಲ್ಲ, ಸಂಗ್ರಹಿಸುವುದೂ ಇಲ್ಲ. ಪರಿಣಾಮವಾಗಿ ಪ್ರಾಣಿ ರಾಜ್ಯದಲ್ಲಿ ಸಾಮಾನ್ಯವಾಗಿ ಆರ್ಥಿಕ ಸಮಸ್ಯೆಯಾಗಲಿ, ಆವಶ್ಯಕ ವಸ್ತುಗಳ ಅಭಾವವಾಗಲಿ ಇರುವುದಿಲ್ಲ. ಒಂದು ಮೂಟೆ ಅಕ್ಕಿಯನ್ನು ಸಾರ್ವಜನಿಕ ಸ್ಥಳದಲ್ಲಿಟ್ಟರೆ, ಹಕ್ಕಿಗಳು ಒಂದೆರಡು ಕಾಳುಗಳನ್ನು ತಿಂದು ಹೊರಟು ಹೋಗುತ್ತವೆ. ಆದರೆ ಮಾನವನಾದರೆ ಇಡೀ ಚೀಲವನ್ನೇ ಒಯ್ಯುತ್ತಾನೆ.  ಅವನು ತನ್ನ ಹೊಟ್ಟೆ ಬಿರಿಯುವಷ್ಟು ತಿಂದು ಉಳಿದದ್ದನ್ನು ಭದ್ರವಾಗಿ ರಕ್ಷಿಸಿಡಲು ಪ್ರಯತ್ನಿಸುತ್ತಾನೆ. ಶಾಸ್ತ್ರಗಳ ಪ್ರಕಾರ, ಆವಶ್ಯಕತೆಗಿಂತ ಹೆಚ್ಚಾಗಿ ಸಂಗ್ರಹಿಸುವುದು (ಅತ್ಯಾಹಾರ) ನಿಷಿದ್ಧ. ಈ ಕಾರಣದಿಂದ ಈಗ ಇಡೀ ಜಗತ್ತೇ ನರಳುತ್ತಿದೆ.” (ಉಪದೇಶಾಮೃತ ಶ್ಲೋಕ 2, ಭಾವಾರ್ಥ)

ಶಾಶ್ವತವಾಗಿ ಅತೃಪ್ತ ಮನ

      ಸಾಮಾಜಿಕ ಜವಾಬ್ದಾರಿಯ ಜೊತೆಗೆ ನಮ್ಮ ಬದುಕನ್ನು ಸರಳವಾಗಿಡಲು ಮತ್ತೊಂದು ಕಾರಣವೆಂದರೆ ಅದು ನೀಡುವ ಖಚಿತ ವೈಯಕ್ತಿಕ ತೃಪ್ತಿ. ನಾವು ನಮ್ಮ ಆಸೆಗಳನ್ನು ಈಡೇರಿಸಕೊಳ್ಳಬಹುದು, ಆದರೆ ಮನಸ್ಸು ಅತೃಪ್ತವಾಗಿಯೇ ಉಳಿಯುತ್ತದೆ. ಗಾಂಧೀಜಿ ಹೇಳಿದ್ದರು, “ಭೂಮಿಯು ಪ್ರತಿಯೊಬ್ಬ ಮನುಷ್ಯನ ಅಗತ್ಯವನ್ನು ಪೂರೈಸುವಷ್ಟು ಒದಗಿಸುತ್ತದೆ. ಆದರೆ ದುರಾಸೆಯನ್ನು ಅಲ್ಲ.” ಮಾನವ ಮನಸ್ಸು ಚಂಚಲ ಮತ್ತು ಅದನ್ನು ಸ್ವೇಚ್ಛೆಯಾಗಿ ಬಿಟ್ಟರೆ ನೆಮ್ಮದಿಯೇ ಇಲ್ಲ. ಅನೇಕ ಸುಖಗಳನ್ನು ಪಡೆಯಲು ನಾವು ನಮ್ಮ ಭಾವೋದ್ರೇಕವನ್ನು ಸಡಿಲಿಸಿದಾಗ, ಮನಸ್ಸು ಪಡೆಯದ ಆನಂದವನ್ನು ಸೂಚಿಸುತ್ತದೆ. ಅವು ನಮ್ಮಿಂದ ತಪ್ಪಿಸಿಕೊಂಡಷ್ಟೂ ಅದನ್ನು ಪಡೆಯುವ ನಮ್ಮ ಉದ್ರೇಕ ಹೆಚ್ಚುತ್ತದೆ.

      ಒಂದು ವಸ್ತು ಅಥವಾ ವ್ಯಕ್ತಿಯಿಂದ ನಾವು ಪಡೆಯುವ ಆನಂದ ಅಥವಾ ಸುಖವು ಅದನ್ನು ಮತ್ತೆ ಮತ್ತೆ ಪಡೆಯುವಾಗ ಹೆಚ್ಚಿಸುವುದಿಲ್ಲ, ಬದಲಿಗೆ ಅದರ ಬಗೆಗೆ ನಮ್ಮ ಒಲವನ್ನು ಕಡಮೆ ಮಾಡುತ್ತದೆ. ಸುಖದ ನಿರೀಕ್ಷೆ ಮತ್ತು ಅನುಭವಿಸಿದ ಸುಖದ ನಡುವೆ ದೊಡ್ಡ ಕಂದರ ಉಂಟಾಗುತ್ತದೆ. ಆ ಕಂದರವನ್ನು ಮುಚ್ಚಲು ಹೆಚ್ಚು ಖರ್ಚು ಮಾಡು, ಹೆಚ್ಚು ಖರೀದಿಸು ಮತ್ತು ಉಗ್ರವಾಗು ಎಂದು ಮನಸ್ಸು ನಮ್ಮನ್ನು ಪ್ರಚೋದಿಸುತ್ತದೆ. ಸುಖಕ್ಕಾಗಿನ ಸ್ಪರ್ಧೆಯಲ್ಲಿ ಮನಸ್ಸಿನ ಬೇಡಿಕೆಗಳು ಶಾಶ್ವತವಾಗಿ ಈಡೇರದೆಯೇ ಉಳಿದುಬಿಡುತ್ತವೆ. ಇದು ತುರಿಕೆಯನ್ನು ಪರಚಿಕೊಳ್ಳುವಂತೆ – ತತ್‌ಕ್ಷಣದ ಉಪಶಮನವು ಹೆಚ್ಚು ತುರಿಕೆಯನ್ನು ಉಂಟು ಮಾಡುತ್ತದೆ. ನೀವು ಹೆಚ್ಚು ಗೀರಿಕೊಂಡಷ್ಟೂ ತುರಿಕೆ ಹೆಚ್ಚಾಗುತ್ತದೆ. ಪದೇ ಪದೇ ಗೀರಿಕೊಂಡರೆ ನೋವಾಗುತ್ತದೆಯಲ್ಲದೆ ರಕ್ತವೂ ಬರುತ್ತದೆ.

      ಈ ಸಂಬಂಧದಲ್ಲಿ ಭಾಗವತವು ಅಸುರರ ರಾಜ ಹಿರಣ್ಯಕಶಿಪುವಿನ ಪಾಡನ್ನು ಹೊರಗೆಡಹುತ್ತದೆ :

ಸ ಇತ್ಥಂ ನಿರ್ಜಿತಕಕುಬೇಕರಾಡ್‌ ವಿಷಯಾನ್‌ ಪ್ರಿಯಾನ್‌ |
ಯಥೋಪಜೋಷಂ ಭುಂಜಾನೋ ನಾತೃಪ್ಯದಜಿತೇಂದ್ರಿಯಃ ॥

      “ಎಲ್ಲ ದಿಕ್ಕುಗಳಲ್ಲಿಯೂ ನಿಯಂತ್ರಣದ ಅಧಿ ಕಾರವನ್ನು
ಸಾಧಿಸಿಕೊಂಡಿದ್ದರೂ, ತನಗೆ ಸಾಧ್ಯವಿದ್ದ ಎಲ್ಲ ಇಂದ್ರಿಯ ಸುಖಗಳನ್ನು ಅನುಭವಿಸುತ್ತಿದ್ದರೂ ಹಿರಣ್ಯಕಶಿಪು ಅತೃಪ್ತನಾಗಿಯೇ ಇದ್ದನು. ಏಕೆಂದರೆ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವ ಬದಲು ಅವನೇ ಅವುಗಳ ದಾಸನಾಗಿ ಉಳಿದು ಬಿಟ್ಟದ್ದನು.”  (ಭಾಗವತ 7.4.19) ಇಡೀ ಜಗತ್ತೇ ಅವನ ಆಜ್ಞೆಗೆ ತಲೆಬಾಗಿದರೂ ಹಿರಣ್ಯಕಶಿಪು ದುಃಖಿತನಾಗಿಯೇ ಇದ್ದನು. ಅಂತಿಮವಾಗಿ ಅವನ ಈಡೇರದ ಕಾಮ ಮತ್ತು ದುರಾಸೆಯು ಅವನ ಮಗನ ವಿರುದ್ಧವೆ ಹಿಂಸೆಗೆ ದಾರಿ ಮಾಡಿತು ಮತ್ತು ಕೊನೆಗೆ ಸ್ವತಃ ಅವನ ನಾಶಕ್ಕೆ ಕಾರಣವಾಯಿತು.

ದೇವರೊಂದಿಗೆ ಸಂಪರ್ಕ: ತೃಪ್ತಿಯ ರಹಸ್ಯ

      “ಯಾರು ತೃಪ್ತರೋ ಅವರು ಶ್ರೀಮಂತರು” ಎಂದು ಜ್ಞಾನಿಯಾದ ಲಾವೊ ಟ್ಸು ಹೇಳಿದ. ಮೂಲ ಆಧಾರವಾಗಿ ಪ್ರಾರ್ಥನೆ ಮತ್ತು ಸೇವೆಯ ಸಂಸ್ಕೃತಿಯೊಂದಿಗೆ ದೈವ ಕೇಂದ್ರಿತ ಜೀವನವನ್ನು ನಡೆಸಿದರೆ ನಮ್ಮಲ್ಲಿ ಪ್ರಶಾಂತತೆ ತುಂಬುತ್ತದೆ. “ನನಗೆ ಯಾವಾಗ ಏನು ಬೇಕೋ ಅದನ್ನು ಪಡೆಯುವೆ” ಎಂಬುದರ ಸ್ಥಳದಲ್ಲಿ ಭಗವಂತ ಕೃಷ್ಣನಿಗೆ ನಾವು ಸಲ್ಲಿಸುವುದರ ಗುಣಮಟ್ಟವು ಸುಧಾರಣೆಯಾಗಬೇಕೆಂಬ ಅಪೇಕ್ಷೆಯು ಬರುತ್ತದೆ. ಮನಸ್ಸಿನ ಪ್ರಾಥಮಿಕ ಕಾರ್ಯವು ಇಷ್ಟಪಡುವುದು ಮತ್ತು ಇಷ್ಟಪಡದಿರುವುದೇ ಆಗಿದೆ. ಮನಸ್ಸಿನ ಸತತವಾದ ಸ್ವೀಕಾರ ಮತ್ತು ತಿರಸ್ಕಾರಗಳು ನಾವು ಯಾವಾಗಲೂ ನೆಮ್ಮದಿ ಮತ್ತು ಸುಖವಾಗಿ ಇಲ್ಲದಿರುವುದನ್ನು ಸ್ಪಷ್ಟಪಡಿಸುತ್ತದೆ.  ಆದರೆ ಕೃಷ್ಣನೊಂದಿಗಿನ ಸಂಪರ್ಕವು ಕ್ಷುಲ್ಲಕ ಮಾನಸಿಕ ಕ್ಷೋಭೆಯನ್ನು ನಿರ್ಲಕ್ಷಿಸಿ ಅದನ್ನು ಮೀರುವಂತೆ ಮಾಡುತ್ತದೆ. ಹರೇ ಕೃಷ್ಣ ಆಂದೋಲನದ ಅನೇಕ ಭಕ್ತರು ಮೊದಲು ಮಾದಕ ವಸ್ತು, ಮದ್ಯ ಮತ್ತು ಅಕ್ರಮ ಲೈಂಗಿಕತೆಗಳ ಮಧ್ಯೆ ಜೀವನ ನಡೆಸುತ್ತಿದ್ದರು. ಆದರೆ ಕೃಷ್ಣ ಪ್ರಜ್ಞೆ ವಿಧಾನವು ಅವೆಲ್ಲವನ್ನೂ ಪರಿವರ್ತಿಸಿತು ಮತ್ತು ಅವರು ಈಗ ಆ ಸೆಳೆತಗಳನ್ನು ನಿರ್ಲಕ್ಷಿಸುವುದನ್ನು ಆನಂದಿಸುತ್ತಾರೆ. ಬದಲಿಗೆ ಅವರು ಭಕ್ತಿಸೇವೆಯ ಆಚರಣೆಯನ್ನು ಸಂತೋಷದಿಂದ ಸಾಕಾರಗೊಳಿಸುತ್ತಿದ್ದಾರೆ.

      ದೈವ ಕೇಂದ್ರಿತ ಬದುಕಿನಲ್ಲಿ ಜೀವಿಸುತ್ತಿರುವ ಭಕ್ತರು ತಮ್ಮ ಹೃದಯಗಳಲ್ಲಿ ಕೃಷ್ಣನ ಪ್ರೀತಿಯನ್ನು ತುಂಬಿಕೊಳ್ಳುತ್ತಾರೆ. ಕೃಷ್ಣನ ಪವಿತ್ರ ನಾಮಗಳಲ್ಲಿ ತಲ್ಲೀನತೆ ಮತ್ತು ಅವನ ಲೀಲೆಗಳನ್ನು ಕೇಳುವುದು – ಇವು ಆಧ್ಯಾತ್ಮಿಕ ಆನಂದದ ಅನುಭವವನ್ನು ನಮಗೆ ನೀಡುತ್ತವೆ. ಇದು ಮನಸ್ಸಿನ ಸತತ ಬಡಿತವನ್ನು ಮೀರುವಂತೆ ಮಾಡುತ್ತದೆ. ಕೃಷ್ಣನೊಂದಿಗೆ ನಾವು ಸಂಪರ್ಕ ಹೊಂದಿರುವಷ್ಟರ ಮಟ್ಟಿಗೆ ಕಾಲ ಕ್ರಮೇಣ ನಮ್ಮ ಸಂತೋಷ ಹೆಚ್ಚುತ್ತದೆಯಷ್ಟೆ. ಅದೇ ಕಾಲಕ್ಕೆ ಲೌಕಿಕ ಸಿರಿ ಸಂಪತ್ತು ಹೊಂದಬೇಕೆಂಬ ಹಂಬಲವು ಕ್ಷೀಣಿಸುತ್ತದೆ.

ಚರಿತ್ರೆಯಿಂದ ಪಾಠ

      ಶ್ರೀಕೃಷ್ಣನು 500 ವರ್ಷಗಳ ಹಿಂದೆ ಶ್ರೀ ಚೈತನ್ಯ ಮಹಾಪ್ರಭುಗಳಾಗಿ ಆವಿರ್ಭವಿಸಿದಾಗ ಅವರು ಕೃಷ್ಣನ ಪ್ರೀತಿಯಲ್ಲಿ ತಲ್ಲೀನರಾದ ತನ್ನ ಭಕ್ತರ ಖ್ಯಾತಿಯನ್ನು ತಿಳಿಯಪಡಿಸಿದರು.  ಶ್ರೀಧರನು ಬಾಳೆ ಎಲೆಯನ್ನು ಮಾರಾಟ ಮಾಡುವ ಬಡವನಾಗಿದ್ದನು. ಅವನಿಗೆ ಅತ್ಯಲ್ಪ ಸಂಪಾದನೆ ಇತ್ತು. ಆದರೂ ತನ್ನ ವರಮಾನದಲ್ಲಿ ಅರ್ಧ ಭಾಗವನ್ನು ಸಂತೋಷದಿಂದ ಭಗವಂತನ ಸೇವೆಗೆ ನೀಡುತ್ತಿದ್ದ. ಅವನು ಕೃಷ್ಣನನ್ನು ಕುರಿತು ಜಪಿಸುವುದು ಮತ್ತು ಕೇಳುವುದರಲ್ಲಿ ತನ್ನ ಬಹಳಷ್ಟು ಸಮಯವನ್ನು ಆನಂದದಿಂದ ಕಳೆಯುತ್ತಿದ್ದ. ಶ್ರೀ ಚೈತನ್ಯರು ತಮ್ಮ ಸರ್ವೋತ್ಕೃಷ್ಟತೆಯನ್ನು ಅವನಿಗೆ ಹೊರಗೆಡಹಿದರು. ಯಾವುದೇ ವರವನ್ನು ಬೇಡುವಂತೆ ಶ್ರೀ ಚೈತನ್ಯರು ಶ್ರೀಧರನಿಗೆ ಕೋರಿದರು.  ಅಸೀಮಿತ ಸಂಪತ್ತು, ಅತೀಂದ್ರೀಯ ಶಕ್ತಿ ಅಥವಾ ಭಗವಂತನ ಸಾಮ್ರಾಜ್ಯದ ವೈಭವ ಇವುಗಳು ಯಾವುದೂ ಅವನಿಗೆ ಆಮಿಷ ಒಡ್ಡಲಿಲ್ಲ. ಭಗವಂತನ ಸ್ಮರಣೆ ಮತ್ತು ಶುದ್ಧ ಪ್ರೇಮದ ಭಕ್ತಿಸೇವೆಯಲ್ಲಿ ಮಾತ್ರ ತೊಡಗಿರುವಂತೆ ಮಾಡಬೇಕೆಂದು ಅವನು ಅಪೇಕ್ಷಿಸಿದ.

      ಅದೇ ರೀತಿ, ಮಹಾರಾಜ ಅಂಬರೀಷನು ಕೃಷ್ಣ ಪ್ರಜ್ಞೆಯ ಸಂಪತ್ತನ್ನು ತನ್ನ ಹೃದಯದಲ್ಲಿ ಹೊಂದಿದ್ದ ಆದರ್ಶ ರಾಜ. ಅವನು ತನ್ನ ಎಲ್ಲ ಸಂಪತ್ತು ಮತ್ತು ಇಂದ್ರಿಯಗಳನ್ನು ಕೃಷ್ಣನ ಸೇವೆಗೆ ವಿನಿಯೋಗಿಸಿದ. ಅವನು ಗ್ರಹದ ದೊರೆಯಾಗಿದ್ದ, ಆದರೂ ಅವನ ಬದುಕು ಕೃಷ್ಣ ಸೇವೆ ಮತ್ತು ಇತರ ಜೀವಿಗಳ ಸೇವೆಯಲ್ಲಿ ಕೇಂದ್ರೀಕೃತವಾಗಿದ್ದರಿಂದ ಅವನು ಅತ್ಯಂತ ತ್ಯಾಗಜೀವಿಯಾದನು.

ಶ್ರೀ ಚೈತನ್ಯರ ಶಿಷ್ಯರಾದ ಶ್ರೀಲ ರೂಪ ಗೋಸ್ವಾಮಿ ಅವರು ಬರೆದಿದ್ದಾರೆ :

      “ವ್ಯಕ್ತಿಯು ಯಾವುದರಲ್ಲಿಯೂ ಒಲವು ಇಟ್ಟುಕೊಳ್ಳದಿದ್ದಾಗ ಮತ್ತು ಅದೇ ವೇಳೆ ಕೃಷ್ಣನಿಗೆ ಸಂಬಂಧಿಸಿದಂತೆ ಎಲ್ಲವನ್ನೂ ಒಪ್ಪಿಕೊಂಡರೆ, ಅವನು ಸ್ವಾಮ್ಯತೆಗಿಂತ ಮೇಲ್ಮಟ್ಟದಲ್ಲಿ ಸರಿಯಾಗಿಯೇ ನೆಲೆಸಿರುತ್ತಾನೆ. ಮತ್ತೊಂದು ಕಡೆ, ಕೃಷ್ಣನಿಗೆ ಸಂಬಂಧಿಸಿದ್ದೆಂದು ಅರಿಯದೆ ಎಲ್ಲವನ್ನೂ ತಿರಸ್ಕರಿಸುವವನು ತನ್ನ ತ್ಯಾಗದಲ್ಲಿ ಪರಿಪೂರ್ಣನಲ್ಲ.” (ಭಕ್ತಿ ರಸಾಮೃತ ಸಿಂಧು 1.2.255-256)

ಅನಾಸಕ್ತಸ್ಯ ವಿಷಯಾನ್‌ ಯಥಾರ್ಹಂ ಉಪಯುಂಜತಃ |
ನಿರ್ಬಂಧಃ ಕೃಷ್ಣ ಸಂಬಂಧೇ ಯುಕ್ತಂ ವೈರಾಗ್ಯಂ ಉಚ್ಯತೇ

ಪ್ರಾಪಂಚಿಕತಯಾ ಬುದ್ಧ್ಯಾ ಹರಿ ಸಂಬಂಧಿ  ವಸ್ತುನಃ |
ಮುಮುಕ್ಷುಭಿಃ ಪರಿತ್ಯಾಗೋ ವೈರಾಗ್ಯಂ ಫಲ್ಗು ಕಥ್ಯತೇ ॥

ಕೃಷ್ಣನನ್ನು ಹೊಂದುವುದು : ಉನ್ನತ ತತ್ತ್ವ

      ಕೇವಲ ತ್ಯಾಗಕ್ಕಿಂತ ಕೃಷ್ಣನನ್ನು ಹೊಂದುವುದು ಉನ್ನತ ತತ್ತ್ವ ಎನ್ನುವುದು ಕೃಷ್ಣ ಪ್ರಜ್ಞಾವಂತನಾದ ವ್ಯಕ್ತಿಗೆ ಗೊತ್ತು. ಭಕ್ತನು ಕೃಷ್ಣನನ್ನು ಪ್ರೀತಿಸುತ್ತಾನೆ ಮತ್ತು ಎಲ್ಲವೂ ಅವನಿಗೆ ಸೇರಿದ್ದೆಂದು ತಿಳಿದಿದ್ದಾನೆ. ಆದುದರಿಂದ ಅವನು ತನ್ನ ಬಳಿ ಇರುವುದೆಲ್ಲವನ್ನೂ ತನ್ನ ಪ್ರೀತಿಯ ಕೃಷ್ಣನ ಸೇವೆಯಲ್ಲಿ ತೊಡಗಿಸುತ್ತಾನೆ. ಎಲ್ಲ ಲೌಕಿಕ ಸಂಪನ್ಮೂಲ ಮತ್ತು ಆಧುನಿಕ ಸೌಲಭ್ಯಗಳನ್ನು ಬಳಸಲು ಶ್ರೀಲ ಪ್ರಭುಪಾದರು ನಮ್ಮನ್ನು ಪ್ರೋತ್ಸಾಹಿಸಿದರು. ಆದರೆ ಅದು ನಮ್ಮ ಪ್ರಯೋಜನಕ್ಕಾಗಿ ಅಲ್ಲ, ಅದು ಕೃಷ್ಣನನ್ನು ಪೂಜಿಸಲು ಮತ್ತು ಅವನ ವೈಭವಗಳನ್ನು ಸಾರಲು. ಕೃಷ್ಣನ ಲೌಕಿಕ ಶಕ್ತಿಯಿಂದ ಅವನ ಸೇವೆಗೈಯುವುದು ನಿಜವಾದ ತ್ಯಾಗ, ಏಕೆಂದರೆ ಅಂತಹ ಸೇವೆಯಿಂದ ನಾವು ‘ಈ ಲೋಕದಲ್ಲಿ ನಾವೇ ಭೋಗಿಸುವವರು ಮತ್ತು ಮಾಲೀಕರು ಎಂದು ಆಳವಾಗಿ ಬೇರೂರಿರುವ ಕಲ್ಪನೆಯನ್ನು’ ಬಿಟ್ಟು ಬಿಡಬಹುದು.

      ಒಂದು ಹಣದ ಚೀಲದಲ್ಲಿ  2000 ನೋಟುಗಳನ್ನು ನೀವು ನೋಡಿದರೆ, ನಿಮ್ಮ ಬಳಿ ಮೂರು ಆಯ್ಕೆ ಇರುತ್ತದೆ. ಅದನ್ನು ನೀವೇ ಇಟ್ಟಕೊಳ್ಳುವುದು ಮೊದಲನೆಯ ಆಯ್ಕೆ. ಎರಡನೆಯದು ಅದನ್ನು ತ್ಯಾಗ ಮಾಡುವುದು ಮತ್ತು ಮೂರನೆಯದು ಅದನ್ನು ಸಂಬಂಧಿಸಿದವರಿಗೆ ಹಿಂದಿರುಗಿಸುವುದು. ಮೊದಲನೆಯ ಆಯ್ಕೆಯು ವ್ಯಕ್ತಿಯು ಈ ಲೋಕದಲ್ಲಿ ಆನಂದಿಸುವುದರ ಸಂಕೇತವಾಗಿದೆ. ಎರಡನೆಯದು ಅದು ತನ್ನದಲ್ಲವೆಂದು ಭಾವಿಸಿ ತ್ಯಾಗದ ನಿರ್ಧಾರ ಕೈಗೊಳ್ಳುವ ತತ್ತ್ವಜ್ಞಾನಿಯ ಸಂಕೇತ. ಮೂರನೆಯದು, ಭಗವಂತನ ಸಂಪತ್ತನ್ನು ಅವನ ಸೇವೆಗೆಂದು ಬಳಸುವುದನ್ನು ಸೂಚಿಸುತ್ತದೆ ಮತ್ತು ಅದು ಅತ್ಯಂತ ಜವಾಬ್ದಾರಿಯುತವಾದುದು. ಭಕ್ತನು ಮಾಲಿಕತ್ವ ಮತ್ತು ಆನಂದದ ಹುಸಿ ಪ್ರಜ್ಞೆಯನ್ನು ಬಿಡುತ್ತ ಸಂಪತ್ತನ್ನು ಭಗವಂತನ ಸೇವೆಯಲ್ಲಿ ತೊಡಗಿಸುತ್ತಾನೆ.

ಈ ಲೇಖನ ಶೇರ್ ಮಾಡಿ

ಹೊಸ ಪೋಸ್ಟ್‌ಗಳು