ರಸಗಳನ್ನು (ಬಾಂಧವ್ಯ) ಕುರಿತ ವೈದಿಕ ವಿಜ್ಞಾನವು ಭಗವಂತನನ್ನು
ಪ್ರೀತಿಸುವ ಅನೇಕ ವಿಧಾನಗಳನ್ನು ನಮಗೆ ತಿಳಿಸುತ್ತದೆ.
ನಿನ್ನನ್ನು ಹೇಗೆ ಪ್ರೀತಿಸಲಿ? ತಾಳು, ವಿಧಗಳನ್ನು ಎಣಿಸುವೆ. ಒಂದು, ಎರಡು, ಮೂರು, ನಾಲ್ಕು, ಐದು.
ಕವಯಿತ್ರಿ ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್ ತನ್ನ ದಿವ್ಯಾನಂದಕರ “ನಾನು ನಿನ್ನನ್ನು ಹೇಗೆ ಪ್ರೀತಿಸಲಿ?” ಪ್ರಶ್ನೆಯನ್ನು ಬರೆದಾಗ ಅವರ ಮನಸ್ಸಿನಲ್ಲಿ ಬೇರೇನೋ ಇತ್ತು. ಆದರೆ ಸ್ವತಃ ಕಾವ್ಯಮಯವಾದ, ಪುರಾತನ ಭಾರತದ ವೈದಿಕ ಸಾಹಿತ್ಯವು `ನಾನು’ ಮತ್ತು `ನೀನು’ ಪರಸ್ಪರ ಪ್ರೀತಿಸುವ ಐದು ಪ್ರಾಥಮಿಕ ವಿಧಾನಗಳಿವೆ ಎಂದು ಉತ್ತರಿಸುತ್ತದೆ : (1) ಪೂಜ್ಯಭಾವದಲ್ಲಿ, (2) ಸೇವೆಯ ಭಾವದಲ್ಲಿ, (3) ಸ್ನೇಹದ ಭಾವದಲ್ಲಿ, (4) ತಂದೆ ತಾಯಿ ಅಥವಾ ರಕ್ಷಣೆ, ವಾತ್ಸಲ್ಯದ ಭಾವದಲ್ಲಿ ಮತ್ತು (5) ದಾಂಪತ್ಯ ಪ್ರೀತಿಯ ಭಾವದಲ್ಲಿ.
ಆಧುನಿಕ ಕವಿಗಳ ಮತ್ತು ಮನೋವಿಶ್ಲೇಷಕರ ಬರೆಹಗಳಲ್ಲಿ ಪಟ್ಟಿಮಾಡಿಲ್ಲದಿದ್ದರೂ ಐದು ಪ್ರೀತಿಯ ಭಾವಗಳನ್ನು ನಮ್ಮ ನಿತ್ಯದ ಬದುಕಿನಲ್ಲಿ ಸುಲಭವಾಗಿ ಗುರುತಿಸಬಹುದು. ಈ ಭಾವಗಳಿಗೆ ಸಂಸ್ಕೃತದಲ್ಲಿ ರಸ ಎನ್ನುತ್ತಾರೆ. ಇದು “ಬಾಂಧವ್ಯ” ಮತ್ತು “ರುಚಿ, ಸ್ವಾದ” ಎಂಬ ಸೂಚಿತಾರ್ಥಗಳನ್ನೂ ಹೊಂದಿದೆ. ಈ ಐದು ರಸಗಳಲ್ಲಿ ನಾವು ಪ್ರೀತಿಯ ಬಾಂಧವ್ಯವನ್ನು ಆಸ್ವಾದಿಸುತ್ತೇವೆ. ಸ್ಪಷ್ಟೀಕರಣಕ್ಕಾಗಿ, ಪ್ರತಿಯೊಂದು ರಸವನ್ನೂ ಸಂಕ್ಷಿಪ್ತವಾಗಿ ವಿವರಿಸುತ್ತ ಮತ್ತೊಮ್ಮೆ ವಿಧಗಳನ್ನು ಎಣಿಸೋಣ.

1. ಪೂಜ್ಯಭಾವ, ಗೌರವಾದರ. ಒಬ್ಬ ರಾಜಕಾರಣಿ ಇರಬಹುದು, ಪ್ರಸಿದ್ಧ ಕಲಾವಿದರು ಅಥವಾ ಕ್ರೀಡಾಪಟು ಇರಬಹುದು, ಯಶಸ್ವೀ ಉದ್ಯಮಿ ಇರಬಹುದು – ನಾವು ನಮಗಿಂತ ಶ್ರೇಷ್ಠರೆಂದು ಪರಿಗಣಿಸುವವರ ಬಗೆಗೆ ಪೂಜ್ಯಭಾವ ತೋರುತ್ತೇವೆ. ವ್ಯಕ್ತಿಯ ಸಾಧನೆ ಮತ್ತು ಸಾಮಾಜಿಕ ಸ್ಥಾನದ ಅರಿವು ನಮ್ಮಲ್ಲಿ ಗೌರವ ಮೂಡಿಸುವ ಮುಖ್ಯ ಅಂಶವಾಗುತ್ತದೆ. ಗೌರವಾನ್ವಿತ ವ್ಯಕ್ತಿಯೊಂದಿಗೆ ಕ್ರಿಯಾತ್ಮಕ ವಿನಿಮಯವಲ್ಲ, ನಿಷ್ಕ್ರಿಯ ಮೆಚ್ಚುಗೆ ಮಾತ್ರ ಒಳಗೊಂಡಿರುವುದರಿಂದ ಈ ರಸವನ್ನು ಕೆಲವು ಬಾರಿ ತಟಸ್ಥ ರಸವೆಂದೂ ಕರೆಯುತ್ತಾರೆ. ಆದುದರಿಂದ ಕರಾರುವಾಕ್ಕಾಗಿ ಹೇಳಬೇಕೆಂದರೆ, ಅದು ಪ್ರೀತಿಯನ್ನು ಬೆಳೆಸಬಹುದಾದರೂ ಅದು ಪ್ರೀತಿಭಾವ ಅಲ್ಲ.
2. ಪ್ರೀತಿಯ ಸೇವೆ. ಪೂಜ್ಯಭಾವ ತೀವ್ರಗೊಂಡಾಗ, ಅದು ಸೇವೆ ಸಲ್ಲಿಸಲು ನಮಗೆ ಪ್ರೇರಣೆ ನೀಡುತ್ತದೆ. ಅದು ಮುಂದಿನ ರಸ. ಉದಾಹರಣೆಗೆ, ಒಬ್ಬ ರಾಜಕೀಯ ವ್ಯಕ್ತಿಯ ಬಗೆಗೆ ಇರುವ ಮೆಚ್ಚುಗೆಯಿಂದಾಗಿ ನಾವು ಅವನ ಚುನಾವಣೆ ಪ್ರಚಾರದಲ್ಲಿ ನೆರವಾಗಬಹುದು ಅಥವಾ ಕೊನೆಪಕ್ಷ ಅವನಿಗೆ ಮತ ನೀಡಬಹುದು. ಗೌರವಾದರದ ಭಾವನೆ ಇನ್ನೂ ಅಲ್ಲಿರುತ್ತದೆ, ಆದರೆ ನಾವು ಅದರ ಮೇಲೆ ಕೆಲಸ ಮಾಡುತ್ತೇವೆ. ರಾಜಕಿಯ ಕ್ಷೇತ್ರ ಮಾತ್ರವಲ್ಲ, ಇತರ ಸಾಮಾಜಿಕ ಪರಿಸ್ಥಿತಿಗಳಲ್ಲಿಯೂ ಸ್ವಯಂ ಸೇವೆ ನೀಡುವುದು ಗೌರವಾದರಗಳ ಪ್ರಧಾನ ಸ್ಥಾನದಿಂದ ಬೆಳೆಯುತ್ತದೆ. ಹಣಕ್ಕಾಗಿಯೇ ನೀಡುವ ಸೇವೆ ಅಥವಾ ಭಯದಿಂದ ನೀಡುವ ಸೇವೆಯು ಪ್ರೀತಿಯಲ್ಲ.
3. ಮೈತ್ರಿ. ಸೇವೆಯ ರಸವು ಗಾಢವಾದಾಗ, ಅದು ಮೈತ್ರಿಯಾಗಿ ಬೆಳವಣಿಗೆ ಹೊಂದಬಹುದು. ಪುನಃ ರಾಜಕಾರಣಿಯ ಉದಾಹರಣೆ: ಅವನ ಅಥವಾ ಅವಳ ಪ್ರಚಾರದಲ್ಲಿ ದೀರ್ಘಾವಧಿ ಸೇವೆಯ ಮೂಲಕ ನಿಮಗೆ ಅಭ್ಯರ್ಥಿಯು ವೈಯಕ್ತಿಕವಾಗಿ ಹೆಚ್ಚು ತಿಳಿಯಬಹುದು ಮತ್ತು ಅಭ್ಯರ್ಥಿಯು ನಿಮ್ಮನ್ನು ಸೇವಕನಂತೆ ಕಾಣುವ ಬದಲು ನಿಮ್ಮಲ್ಲಿ ಸ್ನೇಹಿತನಂತೆ ವಿಶ್ವಾಸ ಹೊಂದಬಹುದು. ಮೈತ್ರಿಯ ರಸವು ಹಿಂದಿನ ಎರಡು ರಸಗಳನ್ನು ಹೊಂದಿದೆ. ಆದರೆ ಮೈತ್ರಿಯು ಸಮಾನತೆ ಮತ್ತು ಆತ್ಮೀಯತೆಯನ್ನು ಒಳಗೊಂಡಿರುವುದರಿಂದ ಭಯಭಕ್ತಿಯ ರಸವು ಸ್ಪಷ್ಟವಾಗಿ ಕುಗ್ಗಿಹೋಗುತ್ತದೆ. ನಿಮ್ಮ ಮಿತ್ರನ ಭಯಭಕ್ತಿ ಪ್ರೇರಿತ ಗುಣಗಳು ಅವನ ವೈಯಕ್ತಿಕ ಗುಣಗಳಷ್ಟು ಮುಖ್ಯವಲ್ಲ.
4. ಮಾತಾಪಿತೃಗಳ ವಾತ್ಸಲ್ಯ. ಮೈತ್ರಿಯನ್ನು ತೀವ್ರಗೊಳಿಸಿ ಮತ್ತು ನಿಮ್ಮ ಪ್ರೀತಿಯ ವಸ್ತುವನ್ನು ಕುರಿತ ರಕ್ಷಣಾ ಪಾರಮ್ಯದ ಭಾವವನ್ನು ಅದಕ್ಕೆ ಸೇರಿಸಿ. ಆಗ ನಿಮಗೆ ವಾತ್ಸಲ್ಯ ರಸ ಸಿಗುತ್ತದೆ. ಸಾಮಾನ್ಯವಾಗಿ ಮಾತಾಪಿತೃತ್ವ ಎಂದರೆ ಜೈವಿಕ ತಂದೆ ಮತ್ತು ತಾಯಿ ಹಾಗೂ ಅವರ ಮಕ್ಕಳೊಂದಿಗಿನ ಬಾಂಧವ್ಯವನ್ನು ಸೂಚಿಸುತ್ತದೆ. ಆದರೆ ನಾವು ಮಾತಾಪಿತೃಗಳ ರಸವನ್ನು ಜೈವಿಕ ಬಂಧುಬಳಗಕ್ಕೆ ಸೀಮಿತಗೊಳಿಸಬಾರದು. ಸ್ತ್ರೀ ಪುರುಷರು ಇತರರ ಮಕ್ಕಳ ಬಗೆಗೆ ಅಥವಾ ಪರಸ್ಪರ ತಮ್ಮ ಬಗೆಗೂ ಮಾತಾಪಿತೃಗಳ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
5. ದಾಂಪತ್ಯ ಪ್ರೀತಿ. ಈ ಅತ್ಯಂತ ಪ್ರಮುಖ ರಸದಲ್ಲಿ ಮೇಲಿನ ನಾಲ್ಕೂ ರಸಗಳು ಸೇರಿವೆ. ಗೌರವ, ಸೇವೆ, ಮೈತ್ರಿ, ಮತ್ತು ರಕ್ಷಣಾ ಪ್ರೀತಿಯ ಜೊತೆಗೆ ದಾಂಪತ್ಯ ಪ್ರೇಮಿಗಳು ಕಾಮಾಸಕ್ತ ವಿನಿಮಯವಲ್ಲದೆ ವಿಶೇಷ ಆಪ್ತತೆಯ ಭಾವನೆಯನ್ನೂ ಆನಂದಿಸುವರು.
ಹೀಗೆ ಅವು ಇಲ್ಲಿವೆ. ಈ ಐದು ರಸಗಳು ನಮ್ಮ ನಿತ್ಯ ವ್ಯವಹಾರಗಳಲ್ಲಿ ಗೋಚರವಾಗುವುದಿಲ್ಲವೇ? ಪ್ರೀತಿಯನ್ನು ಕುರಿತಂತೆ ನಾವು ಗ್ರಹಿಸಬಹುದಾದ ಬೇರಾವ ಮೂಲತತ್ತ್ವ ಅಥವಾ ವಿಧವು ಇವುಗಳ ಉಪವಿಭಾಗಗಳು ಮಾತ್ರ ಎಂದು ವೈದಿಕ ಪ್ರಮಾಣಗಳು ಪ್ರತಿಪಾದಿಸಿವೆ.
ರಸದ ಕಲ್ಪನೆಯು ಪ್ರೀತಿಯ ಬಾಂಧವ್ಯಗಳನ್ನಷ್ಟೇ ಅಲ್ಲ, ಬೇರೆಯ ಬಾಂಧವ್ಯಗಳನ್ನು ಒಳಗೊಂಡಿದೆ. ಐದು ಪ್ರಾಥಮಿಕ ರಸಗಳಿಗೆ ಅಡಚಣೆಯಾದರೆ ಅಥವಾ ಸಂಪೂರ್ಣವಾಗಿ ಅನುಪಸ್ಥಿತವಾದರೆ ಏಳು ಆನುಷಂಗಿಕ ರಸಗಳು ಪ್ರಕಟವಾಗುತ್ತವೆ.
ದ್ವಿತೀಯ ದರ್ಜೆ
ವಿಧಗಳನ್ನು ಇನ್ನಷ್ಟು ಎಣಿಸುವಿರಾ? ಹೌದು, ಒಂದು ಕೊನೆಯ ಬಾರಿ. ಎರಡನೆಯ ದರ್ಜೆಯ ರಸಗಳೆಂದರೆ : 1) ರೌದ್ರ, 2) ಅದ್ಭುತ 3) ಹಾಸ್ಯ, 4) ವೀರ, 5) ದಯಾ, 6) ಭಯಾನಕ, ಮತ್ತು 7) ಬೀಭತ್ಸ. ದ್ವೀತಿಯ ದರ್ಜೆಯ ರಸಗಳು ಅವುಗಳ ಭಾವೋತ್ಕಟತೆಯಲ್ಲಿ ಭಿನ್ನವಾಗುತ್ತವೆ – ದಂತ ವೈದ್ಯರಲ್ಲಿಗೆ ಭೇಟಿ ನೀಡುವ ಭಯಾನಕದಿಂದ ಮಗು, ತಂದೆ ತಾಯಿ ಅಥವಾ ಇನ್ಯಾರೋ ಪ್ರೀತಿಪಾತ್ರದವರನ್ನು ಕಳೆದುಕೊಳ್ಳುವ ಭೀತಿಯವರೆಗೆ. ರೋಮಿಯೋ ಜೂಲಿಯೆಟ್ ಕಥೆಯು ಎರಡನೆಯ ದರ್ಜೆಯ ರಸ ಬೀಭತ್ಸಕ್ಕೆ ಒಳ್ಳೆಯ ಉದಾಹರಣೆ. ಪ್ರಾಥಮಿಕ ರಸ, ದಾಂಪತ್ಯ ರಸವನ್ನು ನಾಶಪಡಿಸಿದ ಪರಿಣಾಮವಾಗಿ ಉದ್ಭವಿಸಿದ ಬೀಭತ್ಸ ರಸ. ಐದು ಮೂಲ ಮತ್ತು ಏಳು ಎರಡನೆಯ ದರ್ಜೆಯ ರಸಗಳು ಸೇರಿ ಈ 12 ರಸಗಳು ನಮ್ಮ ನಿತ್ಯದ ಸಮಾಜದಲ್ಲಿ ವೈಯಕ್ತಿಕ ಬಾಂಧವ್ಯದ ಸಮಗ್ರತೆಯನ್ನು ರೂಪಿಸುತ್ತವೆ. ಬದುಕು ರಸಗಳ ಸಾಗರ.
ರಸವನ್ನು ಕುರಿತ ವೈದಿಕ ವಿಜ್ಞಾನವು ವ್ಯಕ್ತಿಗಳ ನಡುವಣ ಮನೋವೈಜ್ಞಾನಿಕ ಅಧ್ಯಯನಕ್ಕೆ ಕುತೂಹಲದಾಯಕ ಮತ್ತು ವಿಶ್ಲೇಷಣಾತ್ಮಕ ಚೌಕಟ್ಟನ್ನು ನೀಡಿದೆ. ಉದಾಹರಣೆಗೆ, ಪ್ರಾಥಮಿಕ ವೈವಾಹಿಕ ಮತ್ತು ತಂದೆ ತಾಯಿ ಬಾಂಧವ್ಯ ಕಡಿತಗೊಂಡಾಗ ಕುಟುಂಬ ಸದಸ್ಯರ ಮೇಲೆ ಉಂಟಾಗುವ ಎರಡನೆಯ ದರ್ಜೆಯ ರಸದ ಪ್ರಭಾವದ ದೃಷ್ಟಿಯಲ್ಲಿ ವಿವಾಹ ವಿಚ್ಛೇದನದ ಅಧಿಕ ಪ್ರಮಾಣವನ್ನು ನಾವು ಚರ್ಚಿಸಬಹುದು. ಮತ್ತೊಂದು ಉದಾಹರಣೆ – ಮೈತ್ರಿಯ ಅನುಪಸ್ಥಿತಿಯಲ್ಲಿ ಭಯಾನಕ ಯುದ್ಧಗಳ ಸಾಧ್ಯತೆ ಇರುವುದರಿಂದ ನಾವು ರಾಷ್ಟ್ರಗಳ ಮಧ್ಯೆ ಮೈತ್ರಿಯನ್ನು ಪ್ರತಿಪಾದಿಸಬಹುದು. ದೇವೋತ್ತಮ ಪರಮ ಪುರುಷ ಕೃಷ್ಣನೊಂದಿಗಿನ ಶಾಶ್ವತ ಪ್ರೀತಿ ಬಾಂಧವ್ಯವನ್ನು ಪುನರ್ ಎಚ್ಚರಿಸಲು ನಮಗೆ ನೆರವಾಗಲು ಆತ್ಮ ಸಾಕ್ಷಾತ್ಕಾರಹೊಂದಿದ ವೈದಿಕ ಸಾಹಿತ್ಯದ ಶ್ರೇಷ್ಠ ಲೇಖಕರು ನಮಗೆ ಮೊದಲು ರಸ ವಿಜ್ಞಾನ ನೀಡಿದ್ದಾರೆನ್ನುವುದನ್ನು ನಾವು ಅರ್ಥಮಾಡಿಕೊಳ್ಳುವುದು ಮುಖ್ಯ ಹಾಗೂ ಉಪಯೋಗಕಾರಿ.
ರಸಗಳ ಭೋಕ್ತ
ಕೃಷ್ಣನು ನಮಗಿಂತ ಕಡಮೆ ವ್ಯಕ್ತಿಯೇನಲ್ಲ. ಅಂದರೆ 12 ರಸಗಳಲ್ಲಿ ಬೇರೆಯವರೊಂದಿಗೆ ಅವನು ಸಂಬಂಧವನ್ನು ಹೊಂದಬಹುದು. ವಾಸ್ತವವಾಗಿ, ಅವನು ಎಲ್ಲ ಕಾರಣಗಳ ಆದಿ ಕಾರಣನಾದ ಮೂಲ ಪುರುಷ. ಭಗವಂತನು ರಸಗಳ ಭೋಕ್ತ ಎಂಬ ಕಲ್ಪನೆಯು ಮಾನವ ಕಲ್ಪನೆಯಲ್ಲಿ ಹುಟ್ಟಲಿಲ್ಲ. ಇಲ್ಲ. ಕೃಷ್ಣನು ನಮ್ಮ ಮೂಲ. ನಾವು ಅವನ ಗುಣಗಳನ್ನು ಬಿಂಬಿಸುತ್ತೇವೆ. ಕೃಷ್ಣನು ಶ್ರೇಷ್ಠ ಮತ್ತು ನಾವು ಅಲ್ಪವಾದರೂ ಕೂಡ ನಾವು ಗುಣಾತ್ಮಕವಾಗಿ ಅವನಿಗೆ ಸಮಾನರು. ಆದುದರಿಂದ, ಒಂದು ಹನಿ ನೀರಿನ ರುಚಿಯನ್ನು ನೋಡಿ ಅಟ್ಲಾಂಟಿಕ್ ಸಾಗರದ ಬಗೆಗೆ ನಿಮಗೆ ಏನಾದರೂ ಗೊತ್ತಾಗುವ ಹಾಗೆ, ನಿಮ್ಮನ್ನು ನೀವು ಗಮನಿಸುವ ಮೂಲಕ ನೀವು ಕೃಷ್ಣನ ಬಗೆಗೆ ಸ್ವಲ್ಪ ಅರಿಯಬಹುದು.
ನನ್ನನ್ನು ಗಮನಿಸುವ ಮೂಲಕ? ಏನು, ಕನ್ನಡಿಯಲ್ಲಿ ನೋಡುವ ಮೂಲಕ?
ಖಂಡಿತವಾಗಿ ಅಲ್ಲ. ಆತ್ಮವು ಲೌಕಿಕ ದೇಹವಲ್ಲ. ಆದರೆ ದೇಹದಲ್ಲಿ ವಾಸಿಸುವ ಶಾಶ್ವತ ಆತ್ಮ. ದೇಹವು ಶಾಶ್ವತ ಆತ್ಮವನ್ನು ಮುಚ್ಚಿರುವ ತಾತ್ಕಾಲಿಕ ಉಡುಪು. ಮಾನವ ದೇಹ ಮಾತ್ರವಲ್ಲ, ಗಿಡಗಳು, ಜಲಜೀವಿಗಳು, ಕೀಟಗಳು, ಪಕ್ಷಿಗಳು, ಮೃಗಗಳು ಮತ್ತು ಮಾನವ ಜೀವಗಳೆಲ್ಲರಲ್ಲಿಯೂ ವೈಯಕ್ತಿಕ ಆತ್ಮವಿದೆ. ಆತ್ಮದ ಉಪಸ್ಥಿತಿಗೆ ಪುರಾವೆ ಎಂದರೆ, ಪ್ರಾಣಿಗಳೂ ಕೂಡ ತಮ್ಮ ಸಂಗಾತಿಗಳಿಗೆ, ಮಕ್ಕಳಿಗೆ, ತಂದೆ ತಾಯಂದಿರಿಗೆ ಪ್ರೀತಿಯನ್ನು ತೋರುತ್ತ ರಸದ ವಿನಿಮಯ ಮಾಡಿಕೊಳ್ಳುತ್ತವೆ. ಆದುದರಿಂದ ಸ್ವಯಂ ವೀಕ್ಷಣೆ ಎಂದರೆ, ದೇಹವನ್ನು ಗಮನಿಸುವುದಲ್ಲ; ಆದರೆ ಹೇಗೆ ಜೀವಿಯು ರಸಗಳನ್ನು ವಿನಿಮಯ ಮಾಡಿಕೊಳ್ಳುತ್ತಾನೆ ಎನ್ನುವುದಾಗಿದೆ.
ರಸ ವಿನಿಮಯ
ತಾತ್ಕಾಲಿಕ ದೈಹಿಕ ಮುಸುಕು ಏನೇ ಇದ್ದರೂ ಪ್ರತಿ ವ್ಯಕ್ತಿಯೂ ಆಧ್ಯಾತ್ಮಿಕ ವೇದಿಕೆಯ ಮೇಲೆ ದೇವೋತ್ತಮ ಪರಮ ಪುರುಷ ಕೃಷ್ಣನ ಗುಣದಂತೆಯೇ ಇರುತ್ತಾನೆ. ಆದುದರಿಂದ ಕೃಷ್ಣನೊಂದಿಗೆ ರಸವನ್ನು ವಿನಿಮಯ ಮಾಡಿಕೊಳ್ಳುವುದು ಎಲ್ಲರಿಗೂ ಸಹಜ. ದೇವರನ್ನು ಸರ್ವ ಶ್ರೇಷ್ಠ, ಸರ್ವ ಶಕ್ತ, ಎಲ್ಲವನ್ನೂ ಬಲ್ಲ ಪರಮ ಎಂದು ಗೌರವಿಸಿ ಹಾಗೂ ಪೂಜ್ಯಭಾವದಿಂದ ಅವನ ಸೇವೆ ಸಲ್ಲಿಸಿ ಎಂದು ಬಹುತೇಕ ಧಾರ್ಮಿಕ ಪರಂಪರೆಗಳು ನಮಗೆ ಬೋಧಿಸುತ್ತವೆ. ಇದು ಖಂಡಿತವಾಗಿಯೂ ಸರಿ. ಆದರೆ ಮೈತ್ರಿ, ಮಾತಾ ಪಿತೃತ್ವ ಮತ್ತು ದಾಂಪತ್ಯ ಪ್ರೀತಿಯಂತಹ ಇತರ ಉನ್ನತ ರಸಗಳಲ್ಲಿ ಇತರರಿಗೆ ಅವನು ಸಂಬಂಧಿಸಿದ್ದಾನೆಂಬ ಅಂಶವನ್ನು ನಾವು ನಿರ್ಲಕ್ಷಿಸಿದರೆ ನಾವು ಅವನ ನಿಜವಾದ ಶ್ರೇಷ್ಠತೆ ಮತ್ತು ಶಕ್ತಿಯನ್ನು ಕಡೆಗಣಿಸಿದಂತೆ. ಭಗವಂತನಿಗೆ ಶುದ್ಧ ಪ್ರೇಮವೆಂದರೆ ನಮ್ಮ ಪ್ರೀತಿಯನ್ನು ಸಂಪೂರ್ಣವಾಗಿ ದೇವೋತ್ತಮನಿಗೆ ವರ್ಗಾಯಿಸುವುದು ಮತ್ತು ಅವನಲ್ಲಿ ಎಲ್ಲ ಸಂಬಂಧಗಳನ್ನು ಇಡುವುದು ಎಂದು ನಾರದ ಪಂಚರಾತ್ರವು ಸ್ಪಷ್ಟವಾಗಿ ತಿಳಿಸಿದೆ. ಶುದ್ಧ ಭಕ್ತನು ಕೃಷ್ಣನನ್ನು ಮಾಲೀಕ, ಮಿತ್ರ, ಮಗು, ಪ್ರಿಯತಮ ಹೀಗೆ ಎಲ್ಲ ರೀತಿಯಲ್ಲಿಯೂ ಭಾವಿಸುವನು ಮತ್ತು ಇತರ ಎಲ್ಲರೊಂದಿಗೆ ಕೃಷ್ಣನ ಪ್ರೀತಿಯ ಸೇವಕ ಎಂದು ಸಂಬಂಧ ಕಲ್ಪಿಸಿಕೊಳ್ಳುತ್ತಾನೆ.
ಈ ತಾತ್ಕಾಲಿಕ ಲೌಕಿಕ ಲೋಕದಲ್ಲಿ ಐಹಿಕ ವ್ಯವಹಾರಗಳು ನಮಗೆ ಧಾರ್ಮಿಕ ಅಥವಾ ಆಧ್ಯಾತ್ಮಿಕ ಧ್ಯೇಯದ ಅನುಸರಣೆಗಿಂತ ಹೆಚ್ಚು ಆಸಕ್ತಿದಾಯಕವಾಗಿರುವಂತೆ (ಆಕರ್ಷಣೆ) ಕಾಣುತ್ತವೆ. ಏಕೆಂದರೆ ಲೌಕಿಕ ವ್ಯವಹಾರಗಳು ಎಲ್ಲ 12 ರಸಗಳಲ್ಲಿ ವೈವಿಧ್ಯಮಯವಾದ ವೈಯಕ್ತಿಕ ವಿನಿಮಯಗಳ ಭರವಸೆಯನ್ನು ಹೊಂದಿವೆ. ಆದರೆ, ನಾವು ತಪ್ಪಾಗಿ ನಂಬಿರುವಂತೆ, ಧಾರ್ಮಿಕ ಪ್ರಗತಿಯಲ್ಲಿ ಇಲ್ಲ. ಭಗವಂತನ ವ್ಯಕ್ತಿತ್ವದ ಪರಿಪೂರ್ಣತೆ, ರಸಗಳ ವಿನಿಮಯದ ಅವನ ಸಾಮರ್ಥ್ಯಗಳನ್ನು ಕುರಿತಂತೆ ಸ್ವಲ್ಪವಾದರೂ ಪ್ರಾಥಮಿಕ ಜ್ಞಾನವಿಲ್ಲದಿದ್ದರೆ ಅವನನ್ನು ಪ್ರೀತಿಗೌರವಗಳಿಂದ ಕಾಣುವುದು ಕೂಡ ಅಸಾಧ್ಯವಲ್ಲದಿದ್ದರೂ ಕಷ್ಟಕರ. ಇನ್ನು, ಇಲ್ಲದ್ದನ್ನು ಹೇಗೆ ಗೌರವಿಸುವಿರಿ? ಕೃಷ್ಣಪ್ರಜ್ಞೆಯ ವೈದಿಕ ವಿಜ್ಞಾನ ಕುರಿತ ಅಜ್ಞಾನದಿಂದಾಗಿ ಜನರು ಕ್ರಮೇಣ ಅಜ್ಞೇಯತಾ ಸಿದ್ಧಾಂತ, ನಾಸ್ತಿಕತೆ ಮತ್ತು ಬಾಯುಪಚಾರ ಸಿದ್ಧಾಂತವನ್ನು ಸ್ವೀಕರಿಸುವರು.
ಪರಮ ಪುರುಷನ ಆಪ್ತ ಮಿತ್ರ ಎಂದು ನಾವು ಊಹಿಸಿಕೊಳ್ಳಲು ವೈದಿಕ ಸಾಹಿತ್ಯವು ಶಿಫಾರಸು ಮಾಡುವುದಿಲ್ಲ. ನಮ್ಮೊಂದಿಗೆ ಮೈತ್ರಿ, ತಂದೆತಾಯಿ ಮತ್ತು ದಾಂಪತ್ಯ ಪ್ರೀತಿಯನ್ನು ಹಂಚಿಕೊಳ್ಳುವುದು ಕೃಷ್ಣನಿಗೆ ಸಾಧ್ಯ. ಆದರೆ ಕೃಷ್ಣನೊಂದಿಗೆ ಪ್ರೀತಿಯ ವ್ಯವಹಾರದ ಆಧ್ಯಾತ್ಮಿಕ ಲಕ್ಷಣವನ್ನು ಗ್ರಹಿಸಿಕೊಳ್ಳಲು ಮೊದಲು ನಾವು ಅತ್ಯಲ್ಪ ಆತ್ಮ ಮತ್ತು ಕೃಷ್ಣನು ಪರಮ ಆತ್ಮ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಕೃಷ್ಣನ `ವರ್ಗ’ದ ಸದಸ್ಯರೆಂದು ನಮ್ಮ ದೈಹಿಕವಲ್ಲದ, ಆಧ್ಯಾತ್ಮಿಕ ಗುರುತನ್ನು ನಾವು ಅರಿತುಕೊಳ್ಳುವವರೆಗೆ, ಕೃಷ್ಣನ ಪರಮ, ಸರ್ವ ಶಕ್ತ ಸ್ಥಾನವನ್ನು ಪೂಜ್ಯಭಾವದಿಂದ ತಿಳಿದುಕೊಳ್ಳುವವರೆಗೆ ನಮಗೆ ಅವನೊಂದಿಗೆ ರಸದ ವಿನಿಮಯದ ಅನುಭವದ ಆರಂಭ ಕೂಡ ಸಾಧ್ಯವಿಲ್ಲ. ಭಗವಂತನೊಂದಿಗೆ ಆಪ್ತವಾಗಿರಬೇಕೆಂದು ನಾವು ಬಯಸಿದರೆ, ನಾವು ಅರ್ಹರಾದ ಬಳಿಕವಷ್ಟೇ ಅದು ಸಾಧ್ಯ.
ಅಲೌಕಿಕ ಪ್ರೀತಿ
ಕೃಷ್ಣನ ಪ್ರೀತಿಯ ವ್ಯವಹಾರಗಳು ನಾವು ನಮ್ಮ ಲೌಕಿಕ ಲೋಕದಲ್ಲಿ ಅನುಭವಿಸುವ ವ್ಯವಹಾರದಂತೆಯೇ ಎಂದು ಭಾವಿಸುವುದು ತಪ್ಪು. ಅಲ್ಲಿ ಸಮಾನ ಅಂಶಗಳಿರಬಹುದು. ಆದರೆ ಲೌಕಿಕ ಪ್ರೀತಿಯ ವ್ಯವಹಾರಗಳು ತಾತ್ಕಾಲಿಕ ಮತ್ತು ಅವು ನಮ್ಮನ್ನು ನಿರಾಶೆಗೊಳಿಸುವುದು ಖಚಿತ. ಆದರೆ ಆಧ್ಯಾತ್ಮಿಕ ರಸವು ಶಾಶ್ವತ, ಶುದ್ಧ, ಅಸೀಮಿತ ಮತ್ತು ಸದಾ ಅಧಿಕವಾಗಿ ತೃಪ್ತಿಕರ. ಮುಖ್ಯವಾಗಿ ನಾವು ಕೃಷ್ಣನ ದಾಂಪತ್ಯ ವ್ಯವಹಾರಗಳನ್ನು ಸಾಮಾನ್ಯ ಎಂದುಕೊಳ್ಳಬಾರದು. ಕೆಲವು ಬಾರಿ ಅದನ್ನು ಪೂರ್ವ ಧರ್ಮವನ್ನು ಕುರಿತ ಪುಸ್ತಕಗಳಲ್ಲಿ ಸಾಮಾನ್ಯ ಅಥವಾ ಅಸಾಮಾನ್ಯ ಸ್ತ್ರೀಪುರುಷರ ವ್ಯವಹಾರದೊಂದಿಗೆ ಚಿತ್ರಾತ್ಮಕವಾಗಿ ಬಿಂಬಿಸಲಾಗಿದೆ. ಅವೆರಡೂ ಒಂದೇ ರೀತಿ ಕಾಣಬಹುದಾದರೂ ಅಲ್ಲಿ ಬಹಳ ವ್ಯತ್ಯಾಸಗಳಿವೆ.
ಸರ್ವ ಶಕ್ತ ಸೃಷ್ಟಿಕರ್ತ ಮತ್ತು ಅಸಂಖ್ಯ ವಿಶ್ವಗಳ ರಕ್ಷಕ, ಪೋಷಕ ಕೃಷ್ಣನಿಗೆ ಈ ಪುಟ್ಟ ಗ್ರಹದ ಸ್ತ್ರೀಪುರುಷರ ವ್ಯವಹಾರಗಳಲ್ಲಿ ಆಸಕ್ತಿ ಇಲ್ಲ. ದಾಂಪತ್ಯ ಪ್ರೀತಿಯ ಕೃಷ್ಣನ ಲೀಲೆಗಳನ್ನು ಕೊಂಡಾಡುವ ಅವನ ಆಪ್ತ ಭಕ್ತರಿಗೂ ಕೂಡ ಲೌಕಿಕ ಪ್ರೀತಿ ವ್ಯವಹಾರಗಳಲ್ಲಿ ಆಕರ್ಷಣೆ ಇಲ್ಲ. ದಾಂಪತ್ಯ ಪ್ರೀತಿಯಲ್ಲಿ ಕೃಷ್ಣನನ್ನು ಪ್ರೀತಿಸಿದ ವ್ರಜದ ಗೋಪಿಯರ ಕೃಷ್ಣ ಆರಾಧನೆಗಿಂತ ಉತ್ತಮವಾದುದು ಇಲ್ಲ ಎಂದು 500 ವರ್ಷಗಳ ಹಿಂದೆ ಕೃಷ್ಣಪ್ರಜ್ಞೆ ಆಂದೋಲನವನ್ನು ಆರಂಭಿಸಿದ ಶ್ರೀ ಚೈತನ್ಯರು ಬೋಧಿಸಿದರು. ಆದರೂ ಶ್ರೀ ಚೈತನ್ಯರು ಕಟ್ಟುನಿಟ್ಟಿನ ಸಂನ್ಯಾಸಿಯಾಗಿದ್ದರು. ಮಹಿಳೆಯರ ಬಗೆಗೆ ಅಗೌರವ ಇಲ್ಲದಿದ್ದರೂ ಅವರ ಸಹವಾಸದಿಂದ ದೂರವೇ ಇರುತ್ತಿದ್ದರು. ಆದುದರಿಂದ ಕೃಷ್ಣನ ದಾಂಪತ್ಯ ಪ್ರೀತಿಯು ನಾವು ಲೌಕಿಕ ಲೋಕದಲ್ಲಿ ತಿಳಿದಿರುವ ದಾಂಪತ್ಯ ಪ್ರೇಮವಲ್ಲ. ಲೌಕಿಕವು ಆಧ್ಯಾತ್ಮಿಕದ ವಿಕೃತ ಪ್ರತಿಬಿಂಬ.
ಕೃಷ್ಣನು ತನ್ನ ಆಪ್ತ ಭಕ್ತರೊಂದಿಗೆ ಆಗೊಮ್ಮೆ ಈಗೊಮ್ಮೆ ಲೌಕಿಕ ಲೋಕಕ್ಕೆ ಭೇಟಿ ನೀಡುತ್ತಾನೆ. ತನ್ನ ಅಲೌಕಿಕ ಲೀಲೆಗಳನ್ನು ತೋರಲು ಮತ್ತು ತಾನು ಪ್ರೀತಿಯ ವ್ಯವಹಾರಗಳ ರಾಜ ರಸರಾಜ ಎನ್ನುವುದನ್ನು ತಾತ್ಕಾಲಿಕ ಪ್ರೀತಿಯಲ್ಲಿ ಮಗ್ನರಾಗಿರುವ ಸಶರೀರ ಆತ್ಮಗಳಿಗೆ ಪ್ರದರ್ಶಿಸಲು ಮಾನವ ಸಮಾಜದಲ್ಲಿ ಅವತರಿಸುತ್ತಾನೆ. ಅವನೊಂದಿಗೆ ನಮ್ಮ ಶಾಶ್ವತ ಆಧ್ಯಾತ್ಮಿಕ ರಸವನ್ನು ಪುನರ್ ಜಾಗೃತಿಗೊಳಿಸಲು ಈ ರೀತಿ ನಮ್ಮನ್ನು ಆಹ್ವಾನಿಸುತ್ತಾನೆ. ಶ್ರೀ ಕೃಷ್ಣನ ಭೌತಿಕ ಲೀಲೆಗಳನ್ನು ಶುದ್ಧ ಭಕ್ತರು ಮಹಾಭಾರತ (ಇದರಲ್ಲಿ ಭಗವದ್ಗೀತೆಯೂ ಇದೆ), ಭಾಗವತ ಮತ್ತು ರಾಮಾಯಣದಂತಹ ಪುರಾಣ ಕೃತಿಗಳಲ್ಲಿ ದಾಖಲಿಸಿದ್ದಾರೆ. ಈ ಶ್ರೇಷ್ಠ ಕೃತಿಗಳ ಮೂಲಕ ಭಕ್ತರೊಂದಿಗೆ ಭಗವಂತನ ಲೀಲೆಗಳನ್ನು ಆಸ್ವಾದಿಸಬಹುದು, ಭಕ್ತಿಯ ಕಲೆ ಮತ್ತು ವಿಜ್ಞಾನವನ್ನು ಅರಿಯಬಹುದು ಮತ್ತು ಕ್ರಮೇಣ ಶುದ್ಧ ಭಕ್ತಿಯ ವೇದಿಕೆಯನ್ನು ಏರಬಹುದು.
ದೌರ್ಭಾಗ್ಯವೆಂದರೆ, ಕೃಷ್ಣನು ದಯೆಯಿಂದ ಅವತರಿಸಿದಾಗ, ಅನೇಕ ಮೂರ್ಖರು ಅವನನ್ನು ಸಾಮಾನ್ಯ ಮಾನವ ಜೀವಿ ಎಂದು ತಪ್ಪು ತಿಳಿಯುತ್ತಾರೆ. ಅವರು ಅವನ ಮಾನವಾತೀತ ಲೀಲೆಗಳ ಪ್ರಾಮುಖ್ಯವನ್ನು ಕುಗ್ಗಿಸುತ್ತಾರೆ ಅಥವಾ ಪುರಾಣ, ಕಲ್ಪಿತ ಎಂದು ಭಾವಿಸುತ್ತಾರೆ ಮತ್ತು ಯಾವುದೇ ಅನುಮಾನವಿಲ್ಲದೆ ಎಲ್ಲದರ ಮೇಲೆಯೂ ಅವನ ಪಾರಮ್ಯವನ್ನು ಸ್ಥಾಪಿಸುವ ವೈದಿಕ ಬೋಧನೆಗಳನ್ನು ಅವರು ನಿರ್ಲಕ್ಷಿಸುತ್ತಾರೆ. ಈ ಲೌಕಿಕ ಲೋಕದಲ್ಲಿ ಪ್ರೀತಿಯ ಅಲ್ಪ ವಿಧಗಳನ್ನು ಎಣಿಸುವುದರ ಆಚೆಗೆ ನೋಡದ ಅಂತಹ ಗೊಂದಲಗಳೊಳಗೊಂಡ ವ್ಯಕ್ತಿಗಳಿಂದ ನಾವು ತಪ್ಪುದಾರಿಗೆ ಎಳೆಯಲ್ಪಡಬಾರದು. ಬದಲಿಗೆ ನಾವು ಕೃಷ್ಣನ ಕರುಣೆಯ ಲಾಭವನ್ನು ಪಡೆಯಬೇಕು ಮತ್ತು ಹಾಗೆಯೇ ಮಾಡಲು ಬಯಸುವವರಿಗೆ ನೆರವಾಗಬೇಕು.