ವಿಜ್ಞಾನದಲ್ಲಿ ಅಲೌಕಿಕತೆ

ಇತ್ತೀಚೆಗೆ ವಿಜ್ಞಾನಿಗಳಲ್ಲಿ ಅಲೌಕಿಕ ಪ್ರವೃತ್ತಿ ಹೆಚ್ಚಾಗುತ್ತಿರುವುದು ಒಳ್ಳೆಯ ಸಂಕೇತ. ಭೌತಿಕ ಲೋಕ ಮತ್ತು ಅಲೌಕಿಕ ಲೋಕಗಳನ್ನು ಕುರಿತಂತೆ ಅವರಲ್ಲಿ ಗೊಂದಲ ಸಂಶಯಗಳಿದ್ದರೂ ಕೆಲವರಲ್ಲಿ ಅರಿಯುವ ಪ್ರವೃತ್ತಿ ಇರುವುದು ಸ್ವಾಗತಾರ್ಹ. ಸೌರಮಂಡಲ ಒಂದು ವಿಸ್ಮಯಕಾರಿ ಎಂದು ಭಾವಿಸುವ ವಿಜ್ಞಾನಿಗಳು ಅಲ್ಲಿ, ಅದರಾಚೆ ಏನಿದೆ, ಏನಾಗುತ್ತಿದೆ ಎಂದು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಾರೆ. ಕೆಲವರು ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಸಂಶೋಧನೆಯನ್ನು ನಡೆಸುತ್ತಲೂ ಇದ್ದಾರೆ. ಆದರೆ ಅವರು ನಮ್ಮ ಧರ್ಮಗ್ರಂಥಗಳನ್ನು, ಮುಖ್ಯವಾಗಿ ಭಗವದ್ಗೀತೆ ಮತ್ತು ಶ್ರೀಮದ್ ಭಾಗವತವನ್ನು ಗುರುಗಳ ಮುಖೇನ ಅಧ್ಯಯನ ಮಾಡಿದರೆ ಅವರ ಪ್ರಶ್ನೆಗಳಗೆ ಉತ್ತರ ದೊರೆಯುವುದಷ್ಟೇ ಅಲ್ಲ, ಮುಂದಿನ ಸಂಶೋಧನೆಗಳಿಗೂ ನೆರವಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಜ್ಞಾನ ಮತ್ತು ಅಲೌಕಿಕ ಲೋಕಗಳ ಇತಿಹಾಸ ಪುಟಗಳನ್ನು ಅವಲೋಕಿಸಿದಾಗ…

ಖ್ಯಾತ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ಒಮ್ಮೆ ಸೌರ ವ್ಯೂಹದ ಅದ್ಭುತ ಮಾದರಿಯನ್ನು ಮಾಡಿದರು. ಅತ್ಯಂತ ಜಾಣ್ಮೆಯ, ತಿರುಗಿಸುವ ಯಾಂತ್ರಿಕ ಕೌಶಲದಿಂd ಮಾಡಿದ ಮಾದರಿ. ಎಲ್ಲ ಗೋಳಗಳು “ಸೂರ್ಯ”ನ ಕಕ್ಷೆಯಲ್ಲಿ ಸುತ್ತುತ್ತಿದ್ದವು.

ಸಹೋದ್ಯೋಗಿಯೊಬ್ಬರು ನ್ಯೂಟನ್ ಕೋಣೆಗೆ ಬಂದರು. ಅವರೊಬ್ಬ ಐಹಿಕವಾದಿ. ಅವರು ಸೌರವ್ಯೂಹದ ಮಾದರಿಯನ್ನು ನೋಡಿ ದಂಗಾಗಿಹೋದರು. ಮೂಕವಿಸ್ಮಿತರಾದರು. ಸಾವರಿಸಿಕೊಂಡು ಅದನ್ನೇ ದಿಟ್ಟಿಸಿ ನೋಡುತ್ತ ಕೇಳಿದರು,

“ಡಾ. ನ್ಯೂಟನ್, ಈ ಅದ್ಭುತ ಸಾಧನವನ್ನು ಯಾರು ಮಾಡಿದ್ದು? ನೋಡಿ, ಗ್ರಹಗಳು ಹೇಗೆ ಅತ್ಯಂತ ನಿಖರವಾಗಿ ಚಲಿಸುತ್ತಿವೆ! ಓಹ್, ಇದು ಕುಶಾಗ್ರಮತಿಯ ಕೌಶಲ್ಯ! ಯಾರು ಯಾರು ಇದನ್ನು ಮಾಡಿದ್ದು?”

ನ್ಯೂಟನ್ ಉತ್ತರಿಸಿದರು, “ಯಾರೂ ಅಲ್ಲ. ಹೋದವಾರ, ಒಂದು ದಿನ ಇದು ಪ್ರತ್ಯಕ್ಷವಾಗಿಬಿಟ್ಟಿತು.”

“ನ್ಯೂಟನ್, ನಿಜವಾಗಿಯೂ. ನೀವು ನನ್ನನ್ನು ಸಾಕಷ್ಟು ರಹಸ್ಯದಲ್ಲಿ ಇಟ್ಟಿರುವಿರಿ. ದಯೆಯಿಟ್ಟು ಈಗಲಾದರೂ ಹೇಳಿ, ಯಾರು ಈ ಸೌರಮಂಡಲವನ್ನು ಮಾಡಿದ್ದು?”, ಸಹೋದ್ಯೋಗಿ ಪೀಡಿಸಿದ.

ನ್ಯೂಟನ್ ನುಡಿದರು, “ನನ್ನ ಪ್ರೀತಿಯ ಡಾಕ್ಟರ್, ನೀವು ಕ್ಷಮಿಸುವುದಾದರೆ ನಾನು ನಿಮ್ಮನ್ನು ಮೂರ್ಖ ಎನ್ನುವೆ. ಈ ಸೌರಮಂಡಲದ ಮಾದರಿಯತ್ತ ಒಂದು ನೋಟ ಬೀರಿ ಇದನ್ನು ಯಾರು ಮಾಡಿದ್ದು ಎಂದು ಕೇಳುತ್ತಿರುವಿರಿ. ಆದರೆ ಪ್ರತಿ ದಿನ ಸಂಜೆ ನೀವು ನಿಜವಾದ ಸೌರಮಂಡಲವನ್ನು ನೋಡುವಿರಿ, ಅಲ್ಲವೇ? ಅದನ್ನು ಯಾರು ಮಾಡಿದ್ದು ಎಂದು ನೀವು ಏಕೆ ಕೇಳುವುದಿಲ್ಲ? ಗ್ರಹಗಳ ಚಲನೆಗೆ ಯಾರು ಕಾರಣರು ಎಂದು ನೀವು ಏಕೆ ಪ್ರಶ್ನಿಸುವುದಿಲ್ಲ?”

ನ್ಯೂಟನ್ಗೆ ಸೌರಮಂಡಲದ ಅಗಾಧತೆಯ ಬಗೆಗೆ ಅರಿವಿತ್ತು. ತನಗೆ ತಿಳಿದಿರುವುದು ಅತ್ಯಲ್ಪ ಎಂದು ಗೊತ್ತಿತ್ತು. ತಾವು ಒಂದು ಮಾದರಿಯನ್ನಷ್ಟೇ ಮಾಡುವುದು ಸಾಧ್ಯ, ನಿಜವಾದ ಸೌರಮಂಡಲವನ್ನು ನಿರ್ಮಿಸಿದ್ದು ಮತ್ತು ಗ್ರಹಗಳ ಚಲನೆಗೆ ನಿರ್ದೇಶನ ನೀಡುತ್ತಿರುವವರು ಬೇರೆ ಯಾರೋ ಬುದ್ಧಿಶಾಲಿ ಎನ್ನುವ ಖಚಿತತೆ ಅವರಿಗಿತ್ತು. ಅವರ ಸಮಕಾಲೀನರಾದ ಅನೇಕ ವಿಜ್ಞಾನಿಗಳಿಗೂ ಅದೇ ಅಭಿಪ್ರಾಯವಿತ್ತು. “ಸೂರ್ಯ, ಗ್ರಹಗಳು, ಧೂಮಕೇತುಗಳ ಈ ಅತ್ಯಂತ ಸುಂದರ ವ್ಯವಸ್ಥೆಯು ಒಬ್ಬ ಬುದ್ಧಿವಂತ ಮತ್ತು ಶಕ್ತಿಶಾಲಿ ವ್ಯಕ್ತಿಯ ವಿವೇಚನೆ, ಆಲೋಚನೆ ಮತ್ತು ಒಡೆತನ, ಪ್ರಭುತ್ವದಿಂದ ಮಾತ್ರ ಸಾಗುವುದು (ಚಲಿಸುವುದು) ಸಾದ್ಯ ಎನ್ನುವದರ ಅರಿವು ನ್ಯೂಟನ್ಗೆ ಇತ್ತು.” ನಿಜ, ಅದು 17ನೆಯ ಶತಮಾನದಲ್ಲಿ. ಅದನ್ನು ಒಪ್ಪದ ವಿಜ್ಞಾನಿಗಳ ಗುಂಪೂ ಇತ್ತು.

ವಿಜ್ಞಾನ ಅಥವಾ ವಿಜ್ಞಾನಿಗಳಲ್ಲಿ ಅಲೌಕಿಕ ಪ್ರವೃತ್ತಿಯಂತಹ ವಿಷಯಗಳು ಅನಾದಿಕಾಲದಿಂದಲೂ ಚರ್ಚಿತವಾಗುತ್ತಿವೆ. ವಿಶ್ವದ ಆಚೆಗೆ ಏನಿದೆ, ವಿಶ್ವದ ಮಾಲಿಕತ್ವ ಯಾರದ್ದು ಎನ್ನುವುದು ಬಹು ಚರ್ಚಿತ ವಿಷಯಗಳಾಗಿವೆ. ಎಲ್ಲವೂ ಶೂನ್ಯದಿಂದಲೇ ಉದ್ಭವಿಸಿದ್ದು ಎಂದು ವಾದಿಸಿದ ಪುರಾತನ ಗ್ರೀಕ್ ಡೆಮೊಕ್ರಿಟಸ್ ಅನ್ನು ಖ್ಯಾತ ತತ್ತ್ವಜ್ಞಾನಿ ಪ್ಲೆಟೋ ಕೂಡ ಖಂಡಿಸಿದ್ದನ್ನು ನಾವು ಇತಿಹಾಸಪುಟಗಳಲ್ಲಿ ಕಾಣುತ್ತೇವೆ.
ಸೌರಮಂಡಲದಂತಹ ಒಂದು ಅಪೂರ್ವ ವ್ಯವಸ್ಥೆಯು ಒಬ್ಬ ಬುದ್ಧಿಶಾಲಿ ಮತ್ತು ಶಕ್ತಿಶಾಲಿ ವ್ಯಕ್ತಿಯಿಂದ ಮಾತ್ರ ಸಾಧ್ಯ ಎಂದು ಖ್ಯಾತ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ (17ನೆಯ ಶತಮಾನ) ನಂಬಿದ್ದರೆ, 19ನೆಯ ಶತಮಾನದಲ್ಲಿ ಜಾನ್ ಟಿಂಡಲ್ ಎನ್ನುವ ವಿಜ್ಞಾನಿಯು, “ವಿಶ್ವದ ಒಡೆಯ ನಾವೇ, ಅದರ ಮೇಲೆ ಹಕ್ಕು ಸ್ಥಾಪಿಸಿಕೊಳ್ಳುತ್ತೇವೆ” ಎಂದು ವಿಜ್ಞಾನದ ಸಾರ್ವಭೌಮತ್ವವನ್ನು ಸಾರಲು ಪ್ರಯತ್ನಿಸಿದರು. 1874ರ ವೇಳೆಗೆ, ಜಾನ್ ಟಿಂಡಲ್ ಲೌಕಿಕ ವಿಜ್ಞಾನದ ಈ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು :

“ಅಜೇಯವಾದ ವಿಜ್ಞಾನದ ಸ್ಥಾನವನ್ನು ಕೆಲವೇ ಮಾತುಗಳಲ್ಲಿ ವಿವರಿಸಬಹುದು. ವಿಶ್ವ ವಿಜ್ಞಾನದ ಇಡೀ ಒಡೆತನದ ಮೇಲೆ ಹಕ್ಕು ಸ್ಥಾಪಿಸಲು ನಾವು ಮುಂದಾಗುತ್ತೇವೆ. ಮತ್ತು ನಾವು ಅದನ್ನು ಧರ್ಮಶಾಸ್ತ್ರದಿಂದ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ವಿಜ್ಞಾನದ ಒಡೆತನವನ್ನು ಉಲ್ಲಂಘಿಸುವ ಎಲ್ಲ ಯೋಜನೆ ಮತ್ತು ವ್ಯವಸ್ಥೆಗಳು ತಮ್ಮ ನಿಯಂತ್ರಣಗಳನ್ನು ವಿಜ್ಞಾನದ ಒಡೆತನಕ್ಕೆ ಸಲ್ಲಿಸಬೇಕು ಮತ್ತು ಅದನ್ನು ನಿಯಂತ್ರಿಸುವ ಎಲ್ಲ ಯೋಚನೆಗಳನ್ನು ಬಿಟ್ಟುಬಿಡಬೇಕು. ಅನ್ಯ ರೀತಿಯಲ್ಲಿ ನಡೆದುಕೊಂಡಾಗ ಅದು ಈ ಹಿಂದೆ ವಿನಾಶಕಾರಿಯಾಗಿತ್ತು ಮತ್ತು ಇಂದು ಅದು ಮೂರ್ಖತನವಾಗುತ್ತದೆ.”

ಜಾನ್ ಟಿಂಡಲ್ ಅಭಿಪ್ರಾಯದಲ್ಲಿ ನ್ಯೂಟನ್ನ ದೇವರು ಅದಾಗಲೇ ನಿವೃತ್ತನಾಗಿಯಾಗಿತ್ತು. ಈಗ ಮಾನವನೇ ಹತೋಟಿ ಪಡೆದಿದ್ದಾನೆ ಎಂದು ಅವರು ಪ್ರತಿಪಾದಿಸಿದರು. ಆದರೆ ಕೇವಲ 50 ವರ್ಷಗಳ ಅನಂತರ, ಲೌಕಿಕ ವಿಜ್ಞಾನದ ಈ ಹತೋಟಿ ವಾದವು ಅಡಗಿಹೋಯಿತು. ಅನಂತರದಲ್ಲಿ, ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಂಶೋಧನೆಗಳ ಜೊತೆಗೆ ವಿಜ್ಞಾನದಲ್ಲಿ ಅಲೌಕಿಕ ಪ್ರವೃತಿ ಕೂಡ ಪ್ರಾಮುಖ್ಯ ಪಡೆದುಕೊಂಡಿತು.
1900ರವೇಳೆಗೆ, ಮ್ಯಾಕ್ಸ್ ಪ್ಲಾಂಕ್ಸ್ ನ ಕ್ವಾಂಟಂ ಸಿದ್ಧಾಂತವು ಅಣುಶಕ್ತಿಯನ್ನು ಕುರಿತು ಮಹತ್ವದ ಅಂಶವನ್ನು ಸಾರಿತು. ಗೆಲಾಕ್ಸಿಗಳು ಇನ್ನು ಮುಂದೆ ನಿಜವಾಗಿರಬೇಕಾಗಿಲ್ಲ. ಅಣು ದ್ರವ್ಯಗಳಷ್ಟೇ ವಾಸ್ತವ ಎಂದು ಸಾರಲಾಯಿತು. ಇದನ್ನು “ಅತಿರೇಕತರ್ಕ”ದ ತತ್ತ್ವ ಎಂದು ಕರೆದರು. ಇದು ಎಂತಹ ಹುಚ್ಚನ್ನೆಬ್ಬಿಸಿತೆಂದರೆ, ವಿಜ್ಞಾನದ ಪ್ರತಿ ವಿಭಾಗದಲ್ಲಿಯೂ ತಜ್ಞರು “ಅತಿರೇಕತರ್ಕ” ಸಿದ್ಧಾಂತವನ್ನು ಕುರಿತು ಯೋಚಿಸಲಾರಂಭಿಸಿದರು. ಒಂದು ಸಂದರ್ಭದಲ್ಲಿಯಂತೂ ವಿಜ್ಞಾನಿಗಳ ಹುಚ್ಚುತನದಿಂದ “ಅತಿರೇಕತರ್ಕ”ವು ಮನೋವಿಜ್ಞಾನದ ಅಧ್ಯಯನದಂತೆ ಕಂಡು ಬಂದಿತು.

ಬದಲಾದ ದಿಕ್ಕು

ಆದರೆ ಅದು ಬಹಳ ಕಾಲ ಮುಂದುವರಿಯಲ್ಲಿಲ್ಲ. ಕಳೆದ 50 ವರ್ಷಗಳಲ್ಲಿ ನೊಬೆಲ್ ಬಹುಮಾನ ಪುರಸ್ಕೃತ ಹೇಸನ್ಬರ್ಗ್ ಮತ್ತಿತರರು ವೈಜ್ಞಾನಿಕ ಅಲೆ ಅಥವಾ ವೈಜ್ಞಾನಿಕ ಅಭಿಪ್ರಾಯದ ದಿಕ್ಕನೇ ಬದಲಿಸಿಬಿಟ್ಟಿದ್ದಾರೆ. ಭೌತಿಕ ಮತ್ತು ಅತಿರೇಕತರ್ಕ ವಾದಿಗಳ ಜೊತೆಗೆ ಅವರಿಗಿಂತ ಪ್ರಬಲವಾಗಿರುವ ಮತ್ತೊಂದು ತಂಡವೂ ಸ್ಪಷ್ಟವಾಗಿ ಗೋಚರಿಸಿದೆ. ಅದುವೇ ಭೌತಿಕ ಮತ್ತು ಅತಿರೇಕತರ್ಕ ವಿರೋಧಿ ಅಲೆಯಾಗಿದೆ.
ಈ ಅಲೆಯ ಪ್ರಮುಖ ಸದಸ್ಯ, ನೊಬೆಲ್ ಬಹುಮಾನ ಪುರಸ್ಕೃತ ಇರ್ವಿನ್ ಶ್ರೋಡಿಂಗರ್ 1925ರಲ್ಲಿ ಬರೆದ ಬರೆಹವೊಂದು ಎಲ್ಲರ ಗಮನ ಸೆಳೆಯಿತು. ಅವರು “ವೈದಿಕ ಸಾಹಿತ್ಯದಲ್ಲಿನ ʼಮೂಲ ಬದ್ಧತೆʼ” ಕುರಿತು ಬರೆದರು. (ಭಗವದ್ಗೀತೆ ಮತ್ತು ಶ್ರೀಮದ್ ಭಾಗವತಗಳ ಆಧಾರದಂತೆ) :

“ನೀವು ನಿಮ್ಮದೇ ಎಂದು ಹೇಳುವ ಈ ಜ್ಞಾನ, ಭಾವನೆ ಮತ್ತು ಆಯ್ಕೆಯ ಏಕತೆಯು ಯಾವುದೋ ಶೂನ್ಯದಿಂದ ಹೊರಹೊಮ್ಮಿದೆ ಎನ್ನುವುದು ಸಾಧ್ಯವಿಲ್ಲ. .. . ಅದು ಅವಶ್ಯವಾಗಿ ಶಾಶ್ವತವಾದುದು ಮತ್ತು ಸ್ಥಿರವಾದುದು (ಬದಲಾವಣೆಯಾಗದ್ದು) ಹಾಗೂ ಎಲ್ಲರಲ್ಲಿಯೂ, ಎಲ್ಲ ಸೂಕ್ಷ್ಮ ಜೀವಿಗಳಲ್ಲಿಯೂ ಏಕತ್ವ (ರೂಪ) ಹೊಂದಿದೆ.”

ಇದನ್ನು ನೋಡಿ . . . ಸರಿ ಸುಮಾರು 35 ವರ್ಷಗಳ ಅನಂತರ . . . ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಆಧ್ಯಾತ್ಮಿಕ ಗ್ರಹಿಕೆಯನ್ನು ಕುರಿತಂತೆ ಸ್ಪಷ್ಟವಾಗಿ ಹೇಳಿದರು. ಶ್ರೀಮದ್ ಭಾಗವತಂಗೆ ಬರೆದ ಪ್ರಸ್ತಾವನೆಯಲ್ಲಿ ಅವರು, ಆಧ್ಯಾತ್ಮಿಕ ಗ್ರಹಿಕೆಯು “ಆಧ್ಯಾತ್ಮಿಕ ಸಮಾಜದ ಏಕತೆಯನ್ನು, ಅಲ್ಲ ಇಡೀ ಜೀವರಾಶಿಯ ಒಟ್ಟು ಚೈತನ್ಯವನ್ನು ಆಧರಿಸಿವೆ” ಎಂದು ಹೇಳಿದರು.

ಈ ಎರಡೂ ಹೇಳಿಕೆಯಲ್ಲಿ ನಾವು ಸಾಮ್ಯವನ್ನು ಕಾಣುತ್ತೇವೆ. ಅಲೌಕಿಕವಾದಿ ಮತ್ತು ಭೌತವಿಜ್ಞಾನಿಯ ಹೇಳಿಕೆಯಲ್ಲಿನ ಪದಗಳಲ್ಲಿಯೂ ನಾವು ಏಕರೂಪತೆಯನ್ನು ಕಾಣಬಹುದು. ಎಂತಹ ಅದ್ಭುತ ಸೌಹಾರ್ದತೆ!

ಮಾನವ ವ್ಯಕ್ತಿತ್ವವು “ಶೂನ್ಯದಿಂದ ಹೊಮ್ಮಿದೆ” ಎಂದು ಹೇಳುವುದು ಸಾಧ್ಯವಿಲ್ಲ ಎಂದು ಹೇಳಿರುವ ಶ್ರೋಡಿಂಗರ್, ಶಾಶ್ವತವಾದ ಅಲೌಕಿಕ ಶಕ್ತಿಯ ಅಸ್ತಿತ್ವವನ್ನು ಪ್ರತಿಪಾದಿಸಿದ್ದಾರೆ. ಅಷ್ಟೇ ಅಲ್ಲ, ಅವರ ವಾದದ ಪ್ರಕಾರ, ಆ ಶಕ್ತಿಯು ಶಾಶ್ವತ ಮಾತ್ರವಲ್ಲ, ಅಲೌಕಿಕ ಮಾತ್ರವಲ್ಲ, ಅದು ಸಾಕಾರ ಕೂಡ. ತಮ್ಮ ಸಹ ವಿಜ್ಞಾನಿಗಳ ನಿರಾಕಾರವಾದವನ್ನು ಅವರು ಒಪ್ಪಲಿಲ್ಲ. ಭೌತಿಕ ವಿಜ್ಞಾನಕ್ಕೆ ದಿಗ್ಭ್ರಮೆ ಉಂಟು ಮಾಡುವ ವಿಷಯವನ್ನು 5000 ವರ್ಷಗಳ ಹಿಂದೆಯೇ ವೈದಿಕ ಸಾಹಿತ್ಯಗಳು ಹೇಳಿದ್ದವು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಅವರು ವೈದಿಕ ಸಾಹಿತ್ಯದ ಮಾತುಗಳನ್ನು ಪ್ರತಿಧ್ವನಿಸಿದ್ದಾರೆ (ಭಗವದ್ಗೀತೆ, 12.5),

“ಪರಮ ಪ್ರಭುವಿನ ಅವ್ಯಕ್ತವಾದ ಮತ್ತು ನಿರಾಕಾರವಾದ ರೂಪವನ್ನು ಪ್ರೀತಿಸುವ ಮನಸ್ಸಿನವರಿಗೆ ಪ್ರಗತಿಯು ತುಂಬ ಕ್ಲೇ಼ಷಕರವಾದದ್ದು. ಆ ಶಿಸ್ತಿನಲ್ಲಿ ಮುಂದುವರಿಯುವುದು, ಪ್ರಗತಿ ಹೊಂದುವುದು ದೇಹಧಾರಿಗಳಿಗೆ ಬಹು ಕಷ್ಟ.”

ಸಾಕಾರವಾದಿ ಮತ್ತು ನಿರಾಕಾರವಾದಿ ವಿಜ್ಞಾನದ ಬೆಂಬಲಿಗರು ಅನಂತ ಕಾಲದಿಂದಲೂ ನಮ್ಮೊಂದಿಗೆ ಇದ್ದಾರೆ. ವೈಜ್ಞಾನಿಕ ಚಿಂತನೆಯ ಅಲೌಕಿಕ ಪರಂಪರೆಯು ವೈದಿಕ ಸಾಹಿತ್ಯ ಮತ್ತು ಋಷಿಗಳಿಂದ ಪ್ಲೆಟೋ ಮತ್ತು ಶ್ರೋಡಿಂಗರ್ವರೆಗೆ ಸಾಗಿ ಬಂದಿದೆ. ಮತ್ತು ನಮ್ಮಂತಹ ಓದುಗರಿಗೆ ಶ್ರೀಲ ಪ್ರಭುಪಾದರ ಸಾಹಿತ್ಯವು ತುಂಬ ನೆರವಾಗಿವೆ.

ಪುರಾತನ ಜ್ಞಾನ

ಈ ಹಿನ್ನೆಲೆಯಲ್ಲಿ ಅಮೆರಿಕದ ಖ್ಯಾತ ತತ್ತ್ವಜ್ಞಾನಿ ಮತ್ತು ಪ್ರಾಧ್ಯಾಪಕ ಥಿಯೋಡೊರ್ ರೊಸಾಕ್ (ನಿಧನ 2011) ಅಭಿಪ್ರಾಯ ಗಮನಾರ್ಹ. “ಮಾನವ ಸಂಸ್ಕೃತಿಯ ಶ್ರೀಮಂತ ಸಂಕೇತಗಳು ಅತ್ಯಂತ ಪ್ರತಿಭಾನ್ವಿತ ದಾರ್ಶನಿಕರಿಂದ ನಮಗೆ ಬಂದಿವೆ” ಎಂದು ಹೇಳುವ ಅವರು, ಮಾನವ ಸಮುದಾಯದ ಪ್ರಗತಿಯ “ಹಿಂದಿನ ಪಥವನ್ನು ಕಂಡುಕೊಳ್ಳಬೇಕು. ಮಾನವ ಸಂಸ್ಕೃತಿಯ ಆರಂಭದ ಹೆಜ್ಜೆಗಳ ಮೂಲವನ್ನು ಕಂಡುಕೊಳ್ಳಬೇಕು” ಎನ್ನುತ್ತಾರೆ.

ಈ ಆದರ್ಶವನ್ನು ಅವರು “ಪುರಾತನ ಜ್ಞಾನ” ಎನ್ನುತ್ತಾರೆ. “ಅದ್ಭುತವಾದ ಹಳೆಯ ಜ್ಞಾನಕ್ಕೆ ಸೇರಿಸಲು ನಮ್ಮ ಬಳಿ ಏನೂ ಇಲ್ಲ. ಅದರ ಆಚೆಗೆ ನಾವು ಪ್ರಗತಿ ಸಾಧಿಸುವಂತಹುದು ಏನೂ ಇಲ್ಲ. ಅದಕ್ಕೆ ಹಿಂದಿರುಗುವುದು, ಅದರಿಂದ ಪಡೆಯುವುದು ಮತ್ತು ಪ್ರಸ್ತುತ ಕಾಲಕ್ಕೆ ಸೂಕ್ತವಾಗಿ ಅದನ್ನು ಪುನರ್ ರೂಪಿಸುವುದನ್ನು ಬಿಟ್ಟರೆ ಹೆಚ್ಚಿನದನ್ನು ನಾವು ಏನೂ ಮಾಡಲಾರೆವು.”

ವೈದಿಕ ಸಾಹಿತ್ಯಗಳು, “ಮುಖ್ಯವಾಗಿ ಉಪನಿಷತ್ಗಳು ಮತ್ತು ಭಗವದ್ಗೀತೆಯಂತಹ ಶ್ರೇಷ್ಠ ಕೃತಿಗಳು ಸಂಸ್ಕೃತಿಗೆ ಮೂಲವಾದ ಅಥವಾ ಪುರಾತನ ಜ್ಞಾನದ ಸೂಕ್ಷ್ಮದೃಷ್ಟಿಯ ಅಭಿವ್ಯಕ್ತಿಗಳಾಗಿವೆ. ಸ್ವಾಮಿ ಭಕ್ತಿವೇದಾಂತ ಅವರ ಗೀತಾ ರೂಪವು ಅತ್ಯುತ್ತಮ ಕೃತಿಯಾಗಿದೆ ಮತ್ತು ಯಥಾರ್ಥವಾಗಿ ತುಂಬ ಚೆನ್ನಾಗಿದೆ” ಎಂದೂ ಡಾ. ರೊಸಾಕ್ ಕೊಂಡಾಡಿದ್ದಾರೆ.

ಶ್ರೀಲ ಪ್ರಭುಪಾದರು ಪುರಾತನ ಜ್ಞಾನವನ್ನು ಪ್ರಸ್ತುತ ಕಾಲಕ್ಕೆ ಹೊಂದುವಂತೆ ಪುನರ್ ರೂಪಿಸುವ ಮಹತ್ತರ ಕಾರ್ಯವನ್ನು ಈಗಾಗಲೇ ಮಾಡಿದ್ದಾರೆ. ಇತರ ಲೋಕಗಳಿಗೆ ಸುಗಮ ಪ್ರಯಾಣ ಎನ್ನುವ ತಮ್ಮ ಪುಸ್ತಕದಲ್ಲಿ ಶ್ರೀಲ ಪ್ರಭುಪಾದರು ಬಾಹ್ಯಾಕಾಶ ವಿಜ್ಞಾನ ಮತ್ತು ಭೌತಿಕ ವಿಜ್ಞಾನದ ಇತ್ತೀಚಿನ ಶೋಧನೆಯ ಭಾಷೆಯಲ್ಲಿಯೇ ವೈದಿಕ ಜ್ಞಾನವನ್ನು ವಿವರಿಸಿದ್ದಾರೆ. “ಮಾನವ ಜೀವಿಯ ಸನಾತನ ಆಧ್ಯಾತ್ಮಿಕ ತತ್ತ್ವವನ್ನು ಆಧುನಿಕ ವಿಜ್ಞಾನಿಯ ದೃಷ್ಟಿಕೋನದಲ್ಲಿ ನೋಡುವುದು ಚೈತನ್ಯದಾಯಕ” ಎಂದು ಅವರು ಹೇಳಿದ್ದಾರೆ.
ಶ್ರೀಲ ಪ್ರಭುಪಾದರು ಅದೇ ಕೃತಿಯಲ್ಲಿ ಬರೆಯುತ್ತಾರೆ, “ಆಧುನಿಕ ವಿಜ್ಞಾನಿಯು ಅಭೌತ ಜಗತ್ತಿನ ಅಸ್ತಿತ್ವದ ಬಗೆಗೆ ಸಂಶೋಧನೆಯನ್ನು ಮುಂದುವರಿಸುತ್ತ ಹೋದಂತೆ, ಬ್ರಹ್ಮ ಸಂಹಿತೆ ಮತ್ತು ಭಗವದ್ಗೀತೆಗಳ ಬೋಧನೆಗಳು ಸ್ಥಿರಪಡುವುದು. ಭಗವದ್ಗೀತೆಯಲ್ಲಿನ ಅಮೂಲ್ಯವಾದ ಮಾಹಿತಿಗಳ ಆಧಾರದಿಂದ ವಿಜ್ಞಾನಿಯು ಮುಂದಿನ ಸಂಶೋಧನೆಯನ್ನು ಮಾಡಬಹುದು.”

ವೈಜ್ಞಾನಿಕ ಪ್ರಗತಿಯು ಮಾನವನಿಗೆ ಎಂದೆಂದಿಗೂ ಬದುಕಿರುವಂತೆ ಮಾಡಲು ಸಹಾಯಮಾಡಬಲ್ಲುದು ಎಂಬ ಸೂಚನೆಗಳನ್ನು ಒಬ್ಬ ರಷ್ಯನ್ ಕಾದಂಬರಿಗಾರನು ಕೊಟ್ಟಿದ್ದಾನೆ. ಅವನಿಗೆ ಸೃಷ್ಟಿಕರ್ತನಾದ ಒಬ್ಬ ಪರಮಪ್ರಭುವಿನಲ್ಲಿ ನಂಬಿಕೆ ಇಲ್ಲದಿರಬಹುದು. ಆದರೂ ಅವನ ಮಾತುಗಳು ಸ್ವಾಗತಾರ್ಹ. ಏಕೆಂದರೆ ವೈಜ್ಞಾನಿಕ ಜ್ಞಾನದ ಪ್ರಗತಿಯು ಖಂಡಿತವಾಗಿಯೂ ಮನುಷ್ಯರನ್ನು ಆಧ್ಯಾತ್ಮಿಕ ಆಕಾಶಕ್ಕೆ ಒಯ್ಯುತ್ತದೆ. ಆಗ ಅವನಿಗೆ ಪರಮೋನ್ನತ ಸೃಷ್ಟಿಕರ್ತನೊಬ್ಬನಿದ್ದಾನೆ, ಅವನಿಗೆ ಭೌತ ವೈಜ್ಞಾನಿಕ ಕಲ್ಪನೆಗಳಿಗೆ ಅತೀತವಾದ ಪೂರ್ಣ ಶಕ್ತಿಸಾಮರ್ಥ್ಯಗಳಿವೆ ಎನ್ನುವ ಪರಮಸತ್ಯದ ಅರಿವಾಗುತ್ತದೆ. ಆದುದರಿಂದ ವಿಜ್ಞಾನಿಗಳ ಅಲೌಕಿಕ ಪ್ರವೃತ್ತಿ ಮಾನವ ಕಲ್ಯಾಣಕ್ಕೂ ನೆರವಾಗಬಲ್ಲುದು.

ಈ ಲೇಖನ ಶೇರ್ ಮಾಡಿ

ಹೊಸ ಪೋಸ್ಟ್‌ಗಳು