ಭಕ್ತಿಸೇವೆಯಿಂದ ಅರಿವು

ಶ್ರೀ ಮದನ ಮೋಹನ ಮಾಳವೀಯ ಎನ್ನುವುದು ಆ ಕಾಲದಲ್ಲಿ ತುಂಬಾ ಪ್ರಸಿದ್ಧವಾದ ಹೆಸರು. ಅವರು ಬೆನಾರಸ್‌ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ಒಮ್ಮೆ ಅವರು ಗೌಡೀಯ ಮಠಕ್ಕೆ ಬಂದರು. ಸರಸ್ವತಿ ಠಾಕುರ ಅವರ ಬಳಿ ಕೇಳಲು ಅವರಿಗೆ ಕೆಲವು ಸಂಕೀರ್ಣ, ಜಟಿಲ ಮತ್ತು ತಾತ್ವಿಕ ಪ್ರಶ್ನೆಗಳಿದ್ದವು. ಸರಸ್ವತಿ ಠಾಕುರ ಅವರು ಹೇಳಿದರು, ” ನಾನು ನಿಮಗೆ ಉತ್ತರಿಸುವುದಿಲ್ಲ. ಆದರೆ ದೇವರ ಆರತಿ ಪರಿಕರಗಳನ್ನು ತೊಳೆಯುತ್ತಿರುವ ಆ ಭಕ್ತರನ್ನು ನೀವು ಕೇಳಬೇಕು.” ಆಗ ಆ ವಿದ್ವಾಂಸರು ಹೇಳಿದರು, “ಇಲ್ಲ. ನಾನು ವೇದಾಂತವನ್ನು ಕುರಿತಂತೆ ತುಂಬ ಕ್ಲಿಷ್ಟಕರವಾದ ಪ್ರಶ್ನೆಗಳನ್ನು ಕೇಳುತ್ತಿರುವೆ. ಅವರಿಗೆ ಉತ್ತರಿಸಲಾಗದು!” ಆದರೂ ಆ ಪೂಜಾರಿಗಳ ಬಳಿಯೇ ಹೋಗಿ ಕೇಳಬೇಕೆಂದು ಸರಸ್ವತಿ ಠಾಕುರ ಅವರು ಒತ್ತಾಯಿಸಿದರು. ಆ ಸಮಯದಲ್ಲಿ ಪೂಜಾರಿಗಳು ದೇವರ ಪೂಜಾ ಸಾಮಾನುಗಳನ್ನು ತೊಳೆಯುತ್ತಿದ್ದರು.

ಸರಸ್ವತಿ ಠಾಕುರ ಅವರ ಇಚ್ಛೆಗೆ ವಿರೋಧ ತೋರದೆ ಮಾಳವೀಯ ಅವರು ವಿಧೇಯರಾಗಿ ಆ ಪೂಜಾರಿಗಳ ಬಳಿಗೆ ಹೋದರು. ಪೂಜಾರಿಗಳು ಹೇಳಿದರು, ನಾವು ಪೂಜಾ ಸಾಮಾನುಗಳನ್ನು ತೊಳೆಯುತ್ತಿದ್ದೇವೆ. ನಮಗೆ ಈಗ ಬಿಡುವಿಲ್ಲದಷ್ಟು ಕೆಲಸ. ನಮಗೆ ಸ್ವಲ್ಪ ಸಹಾಯ ಮಾಡಿ. ನಮ್ಮ ಕೆಲಸ ಮುಗಿದ ಮೇಲೆ ನಿಮ್ಮ ಪ್ರಶ್ನೆಗಳಿಗೆ ಉತ್ತರ ಲಭಿಸುತ್ತದೆ. ಅತ್ಯಂತ ಪ್ರಸಿದ್ಧರಾಗಿದ್ದರೂ ಗೌರವಾನ್ವಿತರಾಗಿದ್ದರೂ ಅವರು ವಿನಯದಿಂದ ಈ ಸೇವೆಯನ್ನು ಮಾಡಲು ಒಪ್ಪಿದರು. ಎಲ್ಲ ಪಾತ್ರೆಗಳನ್ನು ಶುದ್ಧಗೊಳಿಸಿದ ಮೇಲೆ ಮಾಳವೀಯ ಅವರು ಪೂಜಾರಿಗಳಿಗೆ ಏನೂ ಹೇಳದೆ ಶ್ರೀಲ ಸರಸ್ವತಿ ಠಾಕುರ ಅವರ ಬಳಿಗೆ ಬಂದರು.

ಸರಸ್ವತಿ ಠಾಕುರ ಅವರು ಕೇಳಿದರು, “ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತೇ?” ಮದನ ಮೋಹನ ಮಾಳವೀಯ ಅವರು ಉತ್ತರಿಸಿದರು, “ಹೌದು, ಚರ್ಚೆ ಇಲ್ಲದೆಯೇ. ಆರತಿ ಸಾಮಾನುಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಸಹಾಯ ಮಾಡುತ್ತಿದ್ದಾಗಲೇ ನನ್ನ ಮನಸ್ಸಿನಲ್ಲಿ ಸ್ವಯಂ ಉತ್ತರ ಬಂದಿತು.”

ಆಗ ಸರಸ್ವತಿ ಠಾಕುರರು ಉತ್ತರಿಸಿದರು, “ಹೌದು. ಕೃಷ್ಣಪ್ರಜ್ಞೆಯ ಸಿದ್ಧಾಂತವನ್ನು ಸೇವೆಯ ಮೂಲಕ ಅರ್ಥಮಾಡಿಕೊಳ್ಳಬಹುದು, ಯಾವುದೇ ಮಟ್ಟದ ಬುದ್ಧಿಮತ್ತೆಯಿಂದ ಅಲ್ಲ. ಸೇವೋನ್ಮುಖೇ ಹಿ ಜಿಹ್ವಾದೌ. . . ಕೇವಲ ಗ್ರಂಥಗಳನ್ನು ಓದುವುದರಿಂದ ಮತ್ತು ಶ್ಲೋಕಗಳನ್ನು ಪಠಿಸುವುದರಿಂದ ನಿಮಗೆ ಅದು ನೆರವಾಗುವುದಿಲ್ಲ. ಭಗವಂತನ ಸೇವೆ ಮಾಡುವುದರಿಂದ ನಮಗೆ ಶಾಸ್ತ್ರಗಳನ್ನು ಕುರಿತಂತೆ ಹೊರಹೊಮ್ಮುವ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ. ನನ್ನ ಗುರು, ಗೌರ ಕಿಶೋರ ದಾಸ ಬಾಬಾಜಿ ಅವರು ಅಕ್ಷರಸ್ಥರಾಗಿರಲಿಲ್ಲ. ಅವರು ಪಂಡಿತರಾಗಿರಲಿಲ್ಲ. ಆದರೆ ಎಲ್ಲ ಸಿದ್ಧಾಂತಗಳೂ ಮತ್ತು ಶ್ಲೋಕಗಳೂ ಅವರಿಗೆ ಬಾಯಿಗೆ ಬರುತ್ತಿದ್ದವು, ಭಾಯಿಪಾಠವಾಗಿತ್ತು. ಏಕೆಂದರೆ, ಅವರು ಸೇವೋನ್ಮುಖರಾಗಿದ್ದರು. ಅಂದರೆ ಕೃಷ್ಣನ ಸೇವೆಯಲ್ಲಿ ತೊಡಗಿಕೊಂಡಿದ್ದರು. ಅದರಲ್ಲಿಯೇ ಒಲವು ತೋರಿದ್ದರು ಮತ್ತು ತಲ್ಲೀನರಾಗಿದ್ದರು.”

ಈ ಲೇಖನ ಶೇರ್ ಮಾಡಿ