
ಶ್ರೀ ಶ್ರೀ ಕೃಷ್ಣ ಬಲರಾಮ ರಥ ಯಾತ್ರೆ ದಿನಾಂಕ 11/2/2023 ರಂದು ಜರುಗಿತು. ಇಸ್ಕಾನ್ ಬೆಂಗಳೂರು ಅಧ್ಯಕ್ಷರು ಮತ್ತು ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷರೂ ಆದ ಶ್ರೀ ಮಧುಪಂಡಿತ ದಾಸ ಅವರ ಉಪಸ್ಥಿತಿಯಲ್ಲಿ ನೆಹರು ಕ್ರೀಡಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಮೆರವಣಿಗೆ ಪ್ರಾರಂಭವಾಯಿತು. ಡಾ. ವಿ.ಎಸ್.ವಿ. ಪ್ರಸಾದ್ – ಎಂ.ಡಿ., ಸ್ವರ್ಣ ಸಮೂಹ ಸಂಸ್ಥೆಗಳು, ಪಂಡಿತ್ ಶ್ರೀಧರ್ ರಾವ್ ಜಿ.ಜಿ. ಮತ್ತು ಶ್ರೀ ಗೋವಿಂದ ಜೋಶಿ – ಅಧ್ಯಕ್ಷರು, ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿ – ಉಪಸ್ಥಿತರಿದ್ದರು.

ಶ್ರೀ ಶ್ರೀ ಕೃಷ್ಣ ಬಲರಾಮರು ಸುಂದರ ವಸ್ತ್ರ ಮತ್ತು ಚಿನ್ನದ ಆಭರಣಗಳಿಂದ ಅಲಂಕೃತರಾಗಿದ್ದರು. ವೈಭವಯುತವಾಗಿ ಅಲಂಕರಿಸಿದ ರಥದಲ್ಲಿ ಕುಳಿತ ಶ್ರೀ ಕೃಷ್ಣ ಬಲರಾಮರು ಹುಬ್ಬಳ್ಳಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನರ ಮೇಲೆ ಕರುಣೆ ತೋರಿದರು. ರಥವನ್ನು ನೋಡಿದಾಗ, ತಮ್ಮ ದಿನಚರಿಯಲ್ಲಿ ನಿರತರಾಗಿರುವ ಜನರು, ಅದ್ಭುತ ಮೆರವಣಿಗೆಯಲ್ಲಿ ಭಾಗವಹಿಸಲು ತಮ್ಮ ಕೆಲಸಗಳನ್ನು ಬಿಟ್ಟು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಭಕ್ತರು ಭಾವಪರವಶದಲ್ಲಿ ಕೀರ್ತನೆಗಳನ್ನು ಹಾಡಿದರು ಮತ್ತು ಮನಃಪೂರ್ವಕವಾಗಿ ನೃತ್ಯ ಮಾಡಿದರು. ನೂರಾರು ಭಕ್ತರು ಸುಶ್ರಾವ್ಯವಾಗಿ ಹಾಡುವುದರೊಂದಿಗೆ ಮೆರವಣಿಗೆಯುದ್ದಕ್ಕೂ ಹರೇ ಕೃಷ್ಣ ಮಹಾಮಂತ್ರವು ಪ್ರತಿಧ್ವನಿಸಿತು. ಹುಬ್ಬಳ್ಳಿಯ ಬೀದಿಗಳು ಭಕ್ತಿ ಭಾವದಲ್ಲಿ ಮುಳುಗಿ ಆಧ್ಯಾತ್ಮಿಕ ಲೋಕವಾಗಿ ಮಾರ್ಪಾಡಾದವು.

ರಥವು ಹುಬ್ಬಳ್ಳಿಯ ಜನನಿಬಿಡ ಬೀದಿಗಳಾದ ಲ್ಯಾಮಿಂಗ್ಟನ್ ರಸ್ತೆ, ಅಂಬೇಡ್ಕರ್ ವೃತ್ತ, ಸ್ಟೇಷನ್ ರಸ್ತೆ, ಮರಟ ಗಲ್ಲಿ, ಕೊಪ್ಪಿಕರ ರಸ್ತೆ, ಎಚ್‌ಡಿಎಂಸಿ, ರಾಣಿ ಚೆನ್ನಮ್ಮ ವೃತ್ತದ ಮೂಲಕ ರಾತ್ರಿ 8.30ರ ಸುಮಾರಿಗೆ ನೆಹರೂ ಕ್ರೀಡಾಂಗಣ ತಲುಪಿತು. ರಾತ್ರಿ 9 ಗಂಟೆಗೆ ಶ್ರೀ ಕೃಷ್ಣ ಬಲರಾಮನಿಗೆ ಮಹಾಮಂಗಳಾರತಿ ನೆರವೇರಿತು. ಈ ಉತ್ಸವದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಪ್ರಸಾದ ವಿನಿಯೋಗ ಮಾಡಲಾಯಿತು.
