ಪ್ರತಿಜನ್ಮದಲ್ಲೂ ನೀವು ಒಂದು ಹೊಸ ಭೌತಿಕ ಶರೀರವನ್ನು ಹೊಂದಿದ್ದೀರಿ – ಯಾದೃಚ್ಛಿಕವಾಗಿಯೂ ಮತ್ತು ಸ್ವಾಭಾವಿಕವಾಗಿಯೂ ಆಧ್ಯಾತ್ಮಿಕ ಶರೀರವನ್ನು ಪಡೆಯುವ ಅಭ್ಯಾಸ ಮಾಡಬೇಕಾಗುತ್ತದೆ.
ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮೆಕ್ಸಿಕೋದಲ್ಲಿ ಫೆಬ್ರವರಿ, 1975ರಲ್ಲಿ ಮಾಡಿದ ಉಪನ್ಯಾಸ.
ನ ತ್ವೇವಾಹಂ ಜಾತು ನಾಸಂ ನ ತ್ವಂ ನೇಮೇ ಜನಾಧಿಪಾಃ ।
ನ ಚೈವ ನ ಭವಿಷ್ಯಾಮಃ ಸರ್ವೇ ವಯಮ್ ಅತಃ ಪರಮ್ ॥
“ನಾನು ಇರಲಿಲ್ಲ ಎನ್ನುವ ಕಾಲವೇ ಇರಲಿಲ್ಲ. ನೀನೂ ಈ ರಾಜರೂ ಇರದಿದ್ದ ಕಾಲವೇ ಇರಲಿಲ್ಲ. ಭವಿಷ್ಯದಲ್ಲಿಯೂ ನಾವೆಲ್ಲರೂ ಇರುವುದಿಲ್ಲ ಎನ್ನುವುದೇ ಇಲ್ಲ.”
(ಭಗವದ್‌ಗೀತಾ: 2.12)

ಈ ಶ್ಲೋಕದಿಂದ ನಾವು ಅಳಿಯಲಾರೆವೆಂಬ ನಿರ್ಧಾರಕ್ಕೆ ಬರಬೇಕು. ಇಲ್ಲಿ ಕೃಷ್ಣ ಸ್ಪಷ್ಟಪಡಿಸುವುದೇನೆಂದರೆ, ಅವನೊಬ್ಬನೆ ಅಲ್ಲ, ಅರ್ಜುನನು ಸಹ ಮತ್ತು ಸಮರಾಂಗಣದಲ್ಲಿ ಯಾರೆಲ್ಲ ಇದ್ದರೋ ಎಲ್ಲರೂ ಜೀವಂತ ಇರುತ್ತಾರೆ. ಜೀವಾತ್ಮರಾಗಿ, ನಾವೀಗ ಜೀವಿಸಿದ್ದೇವೆ, ಒಂದು ಬಗೆಯ ಭೌತಿಕ ಶರೀರವನ್ನು ಒಪ್ಪಿಕೊಂಡಿದ್ದೇವೆ, ಜೀವಿಸಿದ್ದೇವೆ, ಅಂತೆಯೇ ಈ ದೇಹ ಮುಗಿದೊಡನೆ ಮತ್ತೊಂದು ದೇಹವನ್ನು ಅಂಗೀಕರಿಸಿ ಮತ್ತೆ ಜೀವಿಸಲು ಪ್ರಾರಂಭಿಸುತ್ತೇವೆ.
ಪ್ರಸ್ತುತ ಪ್ರಶ್ನೆಯೆಂದರೆ: “ಯಾವ ಬಗೆಯ ಶರೀರವನ್ನು, ನಮ್ಮ ಪ್ರಸ್ತುತ ದೇಹ ವಿಸರ್ಜನಾನಂತರ ಹೊರುತ್ತೇವೆ.” ಈ ಪ್ರಶ್ನೆಯನ್ನು ಭಗವದ್ಗೀತೆಯಲ್ಲಿ ಮತ್ತೊಂದೆಡೆ ವಿವರಿಸಿದೆ. ನಾವು ಬಯಸಿದರೆ, ಉನ್ನತ ಗ್ರಹವ್ಯವಸ್ಥೆಯಲ್ಲಿ ಜೀವಿಸಬಹುದು; ಅಲ್ಲಿ ಜೀವನಾವಧಿ ಸುದೀರ್ಘ, ಇಲ್ಲಿ ಇಹಲೋಕದ ಇಂದ್ರಿಯಾನುಭವಕ್ಕಿಂತ ಬಲು ಉತ್ತಮ. ಇದು ನಮಗೆ ಬೇಕಿದ್ದರೆ, ನಾವು ಪಡೆಯಬಹುದು. ನಾವು ಕೆಳವರ್ಗದ ಜೀವಿಗಳಂತೆಯೂ ಬದುಕಬಹುದು – ಬೆಕ್ಕು, ನಾಯಿ, ಕ್ರಿಮಿ, ಮರ ಮತ್ತು ಜಲಚರಗಳಂತೆ ಅಥವಾ ನಾವೀಗ ಇರುವಂತೆಯೇ ಇರಬಹುದು. ಇಲ್ಲವಾದಲ್ಲಿ ದೇವರಂತೆಯೇ ಇದ್ದು, ಶಾಶ್ವತ ಸುಖ, ಸಂತಸ, ಸಂತೃಪ್ತಿ, ಜ್ಞಾನವೆಲ್ಲವನ್ನು ಪಡೆಯಬಹುದು.

ಶಾಶ್ವತ ಜೀವನಕ್ಕೆ, ಸುಖ, ಶಾಂತಿ, ಜ್ಞಾನಪ್ರಾಪ್ತಿಯ ಅನುಭವಕ್ಕೆ ಬೇಕಾದುದು ಆಧ್ಯಾತ್ಮಿಕ ದೇಹ, ಮೊದಲು ಅದನ್ನು ಹೊಂದಬೇಕು. ನಮ್ಮ ಈಗಿರುವ ದೇಹ – ಭೌತಿಕ ದೇಹ – ಅದು ಶಾಶ್ವತವಲ್ಲ, ಆನಂದಮಯವೂ ಅಲ್ಲ, ಒಂದಲ್ಲೊಂದು ದಿನ, ಈ ಐಹಿಕ ಶರೀರ ಕೊನೆಗೊಳ್ಳುತ್ತದೆ ಎಂಬುದನ್ನು ಎಲ್ಲರೂ ಬಲ್ಲರು. ಅಲ್ಲಿ ಮೌಢ್ಯ ತುಂಬಿದೆ. ಉದಾಹರಣೆಗೆ, ನಮಗೆ ಜಗತ್ತಿನಾಚೆ ಏನಿದೆ ಎಂಬುದು ತಿಳಿಯದು. ನಮಗೆ ಇಂದ್ರಿಯಗಳಿವೆ, ಆದರೆ ಅವು ಸೀಮಿತ, ಅಸಮಪರ್ಕಕ. ಕೆಲವೊಮ್ಮೆ ನಾವು ಹುಂಬತನದಿಂದ ಬೀಗುತ್ತೇವೆ. ಸವಾಲೊಡ್ಡುತ್ತೇವೆ – `ನೀವು ನನಗೆ ದೇವರನ್ನು ತೋರಿಸಬಲ್ಲಿರಾ?’ ಎಂದು. ಆದರೆ ನಮ್ಮ ದೃಷ್ಟಿ ಎಷ್ಟು ಮಂದ ಎಂಬುದು ನಮಗರಿಯದು. ಬೆಳಕು ಹೋದ ತತ್‌ಕ್ಷಣ ನಮ್ಮ ದೃಷ್ಟಿಶಕ್ತಿಯೂ ಕುಂದುತ್ತದೆ; ಆದ್ದರಿಂದ ಐಹಿಕ ಶರೀರವು ಅಪರಿಪೂರ್ಣ ಮತ್ತು ಮೌಢ್ಯದ ಮಡು.
ಆಧ್ಯಾತ್ಮಿಕ ದೇಹದಲ್ಲಿ ಸಂಪೂರ್ಣ ಜ್ಞಾನ ತುಂಬಿರುತ್ತದೆ. ನಮ್ಮ ಮುಂದಿನ ಜನ್ಮದಲ್ಲಿ ನಾವು ಆಧ್ಯಾತ್ಮಿಕ ಶರೀರವನ್ನು ಪಡೆಯಬಹುದು. ಆದರೆ ಸೂಕ್ತ ಪ್ರಜ್ಞೆಯನ್ನು ನಾವು ಅಭಿವೃದ್ಧಿಪಡಿಸಿಕೊಳ್ಳಬೇಕು. ನಮ್ಮ ಪ್ರಜ್ಞೆಯನ್ನು ನಾವು ರೂಢಿಸಿಕೊಳ್ಳಬೇಕು. ಹಾಗಾದಾಗ, ನಮ್ಮ ಮುಂದಿನ ದೇಹ ಉನ್ನತ ಗ್ರಹವ್ಯವಸ್ಥೆಯಲ್ಲಿರುತ್ತದೆ. ಇಲ್ಲವಾದರೆ ಬೆಕ್ಕು ನಾಯಿಗಳ ಶರೀರಕ್ಕೆ ಇಳಿಯುತ್ತೇವೆ. ಬೇಡವೆಂದರೆ ಶಾಶ್ವತ ನೆಲೆಯನ್ನು ಕಾಣುತ್ತೇವೆ. ಅಲ್ಲಿ ಪರಿಪೂರ್ಣ ಜ್ಞಾನ ತುಂಬಿರುತ್ತದೆ.

ನಮ್ಮಲ್ಲಿ ಅತ್ಯಂತ ವಿವೇಕಿಯಾದವನು ಆನಂದ ತುಂಬಿದ ಜ್ಞಾನಪೂರ್ಣವಾದ ಶಾಶ್ವತವಾದ ದೇಹವನ್ನು ಹೊಂದುವುದಕ್ಕೆ ಪ್ರಯತ್ನಿಸುತ್ತಾನೆ. ಆಗ ಆತ ಮತ್ತೆ ಈ ಐಹಿಕ ಜಗತ್ತಿಗೆ ಮರಳಬೇಕಾಗಿಲ್ಲ. ಯದ್ ಗತ್ವಾ ನ ನಿವರ್ತನ್ತೇ ತದ್ಧಾಮ ಪರಮಂ ಮಮ (ಭಗವದ್ಗೀತಾ: 15.6) ನೀವು ಬ್ರಹ್ಮಲೋಕಕ್ಕೆ ಹೋದರೂ (ಭೌತಿಕ ಸ್ತರದಲ್ಲಿ ಅತಿ ಎತ್ತರದ ಗ್ರಹ), ನೀವು ಮತ್ತೆ ಬರಲೇಬೇಕು. ನೀವು ಆಧ್ಯಾತ್ಮಿಕ ಲೋಕಕ್ಕೆ ಹೋದಲ್ಲಿ ಮತ್ತೆ ಇಲ್ಲಿ ಬಂದು ಭೌತಿಕ ಶರೀರವನ್ನು ಹೊಂದುವ ಅಗತ್ಯವಿಲ್ಲ.
ಈಗ ಪ್ರಶ್ನೆ ಏಳುತ್ತದೆ; ನಾನು ಶಾಶ್ವತನೇ ಆಗಿದ್ದರೆ, ನನಗೇಕೆ ಈ ಪರಿಯ ಸಂಕಷ್ಟಗಳು, ನಾವೇಕೆ ಹುಟ್ಟು, ಸಾವು, ವೃದ್ಧಾಪ್ಯ, ರೋಗ ಮತ್ತು ಸಾವಿಗೆ ಗುರಿಯಾಗುತ್ತೇವೆ? ಇವೆಲ್ಲ ವಿವೇಕಪೂರ್ಣ ಪ್ರಶ್ನೆಗಳು. ಇವೆಲ್ಲ ನಿಮ್ಮ ಐಹಿಕ ಶರೀರದಿಂದ ಪ್ರಾಪ್ತವಾಗುವ ಈತಿಬಾಧೆಗಳೆಂದು ಕೃಷ್ಣ ಬೋಧಿಸುತ್ತಾನೆ – ಮುಂದೆ ಆಧ್ಯಾತ್ಮಿಕಲೋಕ ಪ್ರಾಪ್ತಿಯಾದಲ್ಲಿ ನಮಗೆ ಈ ತೆರನಾದ ಸಂಕಷ್ಟಗಳು ಒದಗಲಾರವು. ಇಂದ್ರಿಯ ಲೋಲುಪ್ತರಾದವರು ಭವಿಷ್ಯದ ಬಗ್ಗೆ ಚಿಂತಿಸಲಾರರು. ಅವರಿಗೆ ತತ್‌ಕ್ಷಣದಲ್ಲಿ ಜೀವನದ ಎಲ್ಲ ಸುಖ ಸೌಲಭ್ಯಗಳು ಪ್ರಾಪ್ತಿಯಾಗಬೇಕು. ಅವರು ಪೋಷಕರ ಪಾಲನೆಯಿಂದ ವಂಚಿತರಾದ ಮಕ್ಕಳಂತೆ ಇರುವವರು. ಮಕ್ಕಳು ಇಡೀ ದಿನ ಆಟವಾಡುತ್ತಾರೆ, ಅವರಿಗೆ ಭವಿಷ್ಯದ ಬಗ್ಗೆ ಚಿಂತೆಯಿಲ್ಲ, ಕಲಿಕೆಯ ಬಗ್ಗೆಯೂ ಲಕ್ಷ್ಯವಿಲ್ಲ.

ಮನುಷ್ಯ ಶರೀರ ಹೊತ್ತು ಜೀವನದಲ್ಲಿ, ನಾವು ನಿಜವಾಗಿಯೂ ಬುದ್ಧಿವಂತರೇ ಆಗಿದ್ದರೆ ಅಂತಹ ಅಲೌಕಿಕ ಶರೀರವನ್ನು ಹೊರಲು ಪ್ರಯತ್ನಿಸಬೇಕು. ಅದರಲ್ಲಿ ನಮಗೆ ಹುಟ್ಟು, ಮುದಿತನ, ರೋಗ, ಸಾವಿನ ಭಯವಿರುವುದಿಲ್ಲ. ಈ ಉದ್ದೇಶಕ್ಕಾಗಿಯೇ ನಾವು ಕೃಷ್ಣಪ್ರಜ್ಞೆಯನ್ನು ಕಲಿಸಿಕೊಡುತ್ತೇವೆ.
ಒಬ್ಬರು ಕೇಳಬಹುದು, `ನಾನು ಕೇವಲ ಕೃಷ್ಣಪ್ರಜ್ಞೆಯಲ್ಲಿ ತೊಡಗಿದ್ದರೆ, ನನ್ನ ಭೌತಿಕ ಅಗತ್ಯಗಳು ಪೂರೈಕೆಯಾಗುವುದು ಹೇಗೆ?’ ಇದಕ್ಕೆ ಉತ್ತರ ಭಗವದ್ಗೀತೆಯಲ್ಲಿದೆ (9.22) ಅದರಲ್ಲಿ ಕೃಷ್ಣ ಹೇಳುತ್ತಾನೆ.
ಅನನ್ಯಾಶ್ಚಿನ್ತಯನ್ತೋ ಮಾಂ ಯೇ ಜನಾಃ ಪರ್ಯುಪಾಸತೇ ।
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ॥
“ನನ್ನ ಸೇವೆಯಲ್ಲಿ ನಿರತನಾಗಿರುವ ಭಕ್ತನಿಗೆ, ಅವನ ಜೀವನದ ಅಗತ್ಯಗಳನ್ನು ನಾನು ಪೂರೈಸುತ್ತೇನೆ.” ಕೃಷ್ಣ ಈಗಾಗಲೇ ಎಲ್ಲರನ್ನು ಸಂರಕ್ಷಿಸುತ್ತಿರುವನು. ಏಕೋ ಬಹೂನಾಮ್ ಯೋ ವಿದಧಾತಿ ಕಾಮಾನ್ “ಎಲ್ಲ ಜೀವರಾಶಿಗಳ ಅಗತ್ಯಗಳನ್ನು ಪರಬ್ರಹ್ಮನು ಪೂರೈಸುತ್ತಿರುವನು.” ಆದ್ದರಿಂದ ಭಗವತ್ ಸನ್ನಿಧಾನಕ್ಕೆ ಮರಳುವ ಭಕ್ತನಿಗೆ ಯಾವುದರ ಕೊರತೆಯೂ ಇರುವುದಿಲ್ಲ. ನೀವು ನಂಬಬಹುದು ಆ ಮಟ್ಟಿನ ಖಾತರಿಯಿದೆ.

ಇದರ ಪ್ರಾಯೋಗಿಕ ಉದಾಹರಣೆಯೇ ಕೃಷ್ಣಪ್ರಜ್ಞಾ ಆಂದೋಲನ. ನಮ್ಮ ನೂರು ಕೇಂದ್ರಗಳು ವಿಶ್ವಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಪ್ರತಿಯೊಂದು ಕೇಂದ್ರದಲ್ಲಿ ಇಪ್ಪತ್ತೈದರಿಂದ ಇನ್ನೂರೈವತ್ತು ಭಕ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ನಮಗೊಂದು ಸ್ಥಿರ ಆದಾಯವಿಲ್ಲ. ಆದರೆ ನಾವು ಖರ್ಚು ಮಾಡುತ್ತಿದ್ದೇವೆ. ಎಲ್ಲ ಶಾಖೆಗಳಲ್ಲಿ ತಿಂಗಳಿಗೆ 80 ಸಾವಿರ ಡಾಲರುಗಳಷ್ಟು ವೆಚ್ಚವಾಗುತ್ತಿದೆ. ಕೃಷ್ಣನ ಕೃಪೆಯಿಂದ ನಮಗೆ ಯಾವುದರಲ್ಲೂ ಕೊರತೆ ಇಲ್ಲ. ಪ್ರತಿಯೊಂದೂ ಸರಬರಾಜಾಗುತ್ತಿದೆ. ಕೆಲವೊಮ್ಮೆ ಜನರಿಗೆ ಅಚ್ಚರಿ, “ಈ ಹರೇಕೃಷ್ಣ ಮಂದಿ ಕೆಲಸವೇ ಮಾಡುವುದಿಲ್ಲ. ಅವರಿಗೊಂದು ವೃತ್ತಿಯೆಂಬುದಿಲ್ಲ. ಕೇವಲ `ಹರೇಕೃಷ್ಣ’ ಅಂತ ನಾಮೋಚ್ಚಾರ ಮಾಡುತ್ತಾರೆ. ಅವರು ಹೇಗೆ ಬದುಕುತ್ತಾರೆ?” ಉತ್ತರ – ದೇವರ ದಯೆಯಿಂದ ಬೆಕ್ಕು ನಾಯಿಗಳು ಜೀವಿಸಬಹುದಾದರೆ, ಅವರ ಭಕ್ತರಾದವರು ಖಂಡಿತ ಸುಖಜೀವನವನ್ನು ಅವನ ಕೃಪೆಯಿಂದ ಜೀವಿಸಬಲ್ಲರು. ಅಲ್ಲಿ ಕೊರತೆಗೆ ಕಾರಣವೇ ಇಲ್ಲ.
ಆದರೆ, ಭಕ್ತನೊಬ್ಬನು `ನಾನು ಕೃಷ್ಣಪ್ರಜ್ಞೆಯಲ್ಲಿ ತೊಡಗಿದ್ದೇನೆ. ಆದರೂ ನನಗಿನ್ನೂ ಕಷ್ಟ ನಿವೃತ್ತಿಯಾಗಿಲ್ಲ’ವೆಂದು ಚಿಂತಿಸಿದರೆ, ಕೃಷ್ಣನ ಬೋಧೆ ಇಂತಿದೆ:
ಮಾತ್ರಾ-ಸ್ಪರ್ಶಾಸ್ತು ಕೌಂತೇಯ ಶೀತೋಷ್ಣ ಸುಖ ದುಃಖ ದಾಃ । ಆಗಮಾಪಾಯಿನೋಽನಿತ್ಯಾಃ ತಾಂಸ್ತಿತೀಕ್ಷಸ್ವ ಭಾರತ ॥
“ನೋವು ನಲಿವುಗಳು ಚಳಿಗಾಲ ಬೇಸಿಗೆಯಂತೆ ಅವುಗಳನ್ನು ತಾಳಿಕೊಳ್ಳುವುದನ್ನು ಕಲಿ.” ಚಳಿಗಾಲದಲ್ಲಿ ತಣ್ಣೀರು ಯಾತನಾಮಯ. ಬೇಸಿಗೆಯಲ್ಲಿ ಇದೇ ಆಪ್ಯಾಯಮಾನ. ಆದುದರಿಂದ ತಣ್ಣೀರಿನ ಪರಿಣಾಮವೇನು? ಎರಡೂ ಅಲ್ಲ. ಆದರೆ ಬೇರೆ ಬೇರೆ ಋತುಗಳಲ್ಲಿ ತ್ವಚೆಗೆ ತಗುಲಿದಾಗ ತಣ್ಣೀರು ಯಾತನಾಮಯವಾಗಿಯೋ ಅಥವಾ ಆಪ್ಯಾಯಮಾನವಾಗಿಯೋ ಇರುತ್ತದೆ. ಆ ಬಗೆಯ ನೋವು ನಲಿವು ಬರುತ್ತವೆ ಹೋಗುತ್ತವೆ ಅವು ಶಾಶ್ವತವಲ್ಲ. ಆದ್ದರಿಂದ ಕೃಷ್ಣ ಉಪದೇಶಿಸುತ್ತಾನೆ – ತಾಂಸ್ತಿತೀಕ್ಷಸ್ವ ಭಾರತ “ಸುಮ್ಮನೆ ತಾಳಿಕೊ” ಆದರೆ ನಿನ್ನ ಕರ್ತವ್ಯವನ್ನು ಮರೆಯಬೇಡ, ಕೃಷ್ಣಪ್ರಜ್ಞೆ ಎಂಬ ಕರ್ತವ್ಯ. ಹೌದು, ಕೆಲವು ನೋವುಗಳುಂಟು, ಅದನ್ನು ಪ್ರತಿರೋಧಿಸಲು ನಮ್ಮೆಲ್ಲ ಪ್ರಯತ್ನಗಳನ್ನು ತೊಡಗಿಸಬೇಕು. ಆದರೆ ಅದನ್ನು ಸಾಧಿಸಲಾಗದಿದ್ದರೂ ನಮ್ಮ ಭಕ್ತಿ ಕೈಂಕರ್ಯಗಳನ್ನು ಕೈಬಿಡಬಾರದು.

ಭಕ್ತಿಯ ಪ್ರಮುಖ ಲಕ್ಷಣಗಳಲ್ಲಿ ಸಹನೆ ಒಂದು ಮುಖ್ಯವಾದ ಲಕ್ಷಣ. ಜೀವನದ ಪ್ರತಿಯೊಂದು ಅವಸ್ಥೆಯನ್ನು ತಾಳಿಕೊಳ್ಳಲು ಕಲಿಯಬೇಕು. ಉದಾಹರಣೆಗೆ: ಯಾರು ನಿಜವಾದ ಬ್ರಾಹ್ಮಣರೋ ಅವರು ಉಷಃಕಾಲದಲ್ಲೆದ್ದು ಸ್ನಾನ ಮಾಡುವುದನ್ನು ಮರೆಯುವುದಿಲ್ಲ, ಕೊರೆಯುವ ಚಳಿ ನೆಪ ಒಡ್ಡುವುದಿಲ್ಲ, ಬೇಸಿಗೆಯ ನೇಸರ ನೆತ್ತಿಗೇರಿದಾಗ, `ನಾನು ಅಡುಗೆ ಮಾಡಲೊಲ್ಲೆ’ ಎಂದು ತೀರ್ಮಾನಿಸಕೂಡದು. ಹೀಗೆ ತಾಳ್ಮೆ ಎನ್ನುವುದು ಅಭ್ಯಾಸಬಲದಿಂದ ಬರುವಂತಹುದು. ಕೆಲವು ನೋವು ತರುತ್ತವೆ, ಒಂದೆರಡು ದಿನಗಳವರೆಗೆ, ನೀವು ಅಭ್ಯಾಸ ಮಾಡಿದರೆ, ಅದು ಒಗ್ಗಿಹೋಗುತ್ತದೆ. ಅದರಿಂದ ನೋವಾಗಲಾರದು.

ಕೃಷ್ಣಪ್ರಜ್ಞಾ ಅಭ್ಯಾಸದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕು. ಕೆಲವೊಮ್ಮೆ ಇದು ನೋವು ತರುತ್ತದೆ, ಆದರೆ ನಾವದನ್ನು ಬಿಡಲಾಗದು. ನಾವು ತಾಳಿಕೊಳ್ಳುವುದನ್ನೆ ಕಲಿಯಬೇಕು. ಕೃಷ್ಣಪ್ರಜ್ಞೆಯಲ್ಲಿ ತೊಡಗುವಾಗ, ತಾಳ್ಮೆಯನ್ನೇ ರೂಢಿಸಿಕೊಳ್ಳಬೇಕೆಂದು ಚೈತನ್ಯ ಮಹಾಪ್ರಭುಗಳು ನಮಗೆ ಉಪದೇಶಿಸಿದ್ದಾರೆ – ತೃಣಾದಪಿ ಸುನೀಚೇನ “ತೃಣಕ್ಕಿಂತಲೂ ಹಗುರವಾಗು.” ಹುಲ್ಲುಗಾವಲಿನಲ್ಲಿ ಎಷ್ಟೊಂದು ಜನ ಹುಲ್ಲಿನ ಮೇಲೆ ಕಾಲಿಡುತ್ತಾರೆ, ಆದರೂ ಅದು ಪ್ರತಿರೋಧ ಒಡ್ಡುವುದಿಲ್ಲ ಮತ್ತು ತರೋರ್ ಇವ ಸಹಿಷ್ಣುನಾ “ಮರಕ್ಕಿಂತಲೂ ಹೆಚ್ಚಿನ ತಾಳ್ಮೆ ವಹಿಸು.” ಕೆಲವರು ಮರದ ಕೊಂಬೆ ಕಡಿಯಬಹುದು, ಕೆಲವರು ಹಣ್ಣನ್ನು ಕೀಳಬಹುದು, ಕೆಲವರು ಮರವನ್ನೆ ಕಡಿದು ಬೀಳಿಸಬಹುದು, ಆದರೂ ಆ ಮರ ನಿಮಗೆ ನೆರಳು ಕೊಡುತ್ತದೆ, ಕಟ್ಟಿಗೆ, ಹಣ್ಣು ಮತ್ತು ಹೂವುಗಳನ್ನೆಲ್ಲ ಕೊಡುತ್ತದೆ. ಸಹನೆಗೆ ಅತ್ಯಂತ ಒಳ್ಳೆಯ ಉದಾಹರಣೆಯೆಂದರೆ ಮರ. ಮತ್ತೆ ಅಮಾನಿನಾಮಾನದೇನ “ಒಬ್ಬ ವ್ಯಕ್ತಿ ತನಗಾಗಿ ಗೌರವವನ್ನು ನಿರೀಕ್ಷಿಸಬಾರದು. ಎಲ್ಲ ಗೌರವವನ್ನು ಇತರರಲ್ಲಿ ತೋರಿಸಬೇಕು.” ಯಾರೆಲ್ಲ ಭಗವಂತನೆಡೆಗೆ ಎಂದರೆ ಪರಂಧಾಮಕ್ಕೆ ಹೋಗಬಯಸುವರೋ ಅವರು ತಾಳಿಕೊಳ್ಳುವುದನ್ನು, ಸಹಿಸಿಕೊಳ್ಳುವುದನ್ನು ಕಲಿಯಬೇಕು. ಅದೇ ಶ್ರೀ ಚೈತನ್ಯ ಮಹಾಪ್ರಭುಗಳ ಉಪದೇಶ.
ಯಂ ಹಿ ನ ವ್ಯಥಯನ್ತ್ಯೇತೇ ಪುರುಷಂ ಪುರುಷರ್ಷಭ ।
ಸಮದುಃಖಸುಖಂ ಧೀರಂ ಸೋಽಮೃತತ್ವಾಯ ಕಲ್ಪತೇ ॥
ಯಾರು ನೋವನ್ನು ಸಹಿಸಿಕೊಳ್ಳುತ್ತಾರೋ, ಅವರು ಭಗವದ್ಧಾಮಕ್ಕೆ ಮರಳಲು ಯೋಗ್ಯರು. ಅದು ಕೇವಲ ಅಭ್ಯಾಸದ ಪ್ರಶ್ನೆಯಷ್ಟೆ. ಬಂಗಾಳಿಯಲ್ಲಿ ಹೇಳುವಂತೆ, ಶರೀರ್ ನಾಮ್ ಮಹಾಶಯ್ “ಅಭ್ಯಾಸ ಬಲದಿಂದ, ಎಲ್ಲವನ್ನು ತಾಳಿಕೊಳ್ಳಬಹುದು.” ಉದಾಹರಣೆಗೆ, ಬೆಳಗ್ಗೆ, ನಾವು ವಾಯುವಿಹಾರಕ್ಕೆ ಹೊರಟಾಗ ಎಷ್ಟೋ ಮಂದಿ ಓಡುತ್ತಿರುವುದನ್ನು ನೋಡುತ್ತೇವೆ. ನಾನು ಓಡಲಾರೆ. ಕೆಲ ದಿನಗಳವರೆಗೆ ಓಡುವುದನ್ನು ಅಭ್ಯಾಸ ಮಾಡಿಕೊಂಡರೆ ನಾನೂ ಓಡಬಹುದು. ಸಾಕಷ್ಟು ಅಭ್ಯಾಸ ಮಾಡಿ ಯಾವುದರಲ್ಲಾದರೂ ಯಶಸ್ವಿಯಾಗಬಹುದು.

ಹಾಗಾಗಿ, ಕೃಷ್ಣಪ್ರಜ್ಞಾಭ್ಯಾಸದಿಂದ ನೀವು ವೈಕುಂಠಕ್ಕೆ ಹೋಗುವುದಾಗಿದ್ದರೆ, ಯಾಕೆ ಅಭ್ಯಾಸ ಮಾಡಬಾರದು, ಯಾಕೆ ಅಲಕ್ಷಿಸಬೇಕು? ಅದು ನಿಮ್ಮೆಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತದೆ. ನಿಮ್ಮ ನೈಜ ಸಮಸ್ಯೆ ಎಂದರೆ ಹುಟ್ಟು, ವಾರ್ಧಕ್ಯ, ರೋಗ ಮತ್ತು ಮರಣ. ನೀವು ಈ ಸಮಸ್ಯೆಗಳನ್ನು ಕೇವಲ ಕೃಷ್ಣಪ್ರಜ್ಞೆಯಿಂದ ಬಗೆಹರಿಸಬಹುದಾಗಿದ್ದರೆ, ನೀವೇಕೆ ಅಭ್ಯಾಸ ಮಾಡಬಾರದು?
ಜನರಿಗೆ ತರಬೇತಿ ನೀಡಲು ನಾವು ನೂರಾರು ಕೇಂದ್ರಗಳನ್ನು ತೆರೆಯುತ್ತಿದ್ದೇವೆ. ಇದರಿಂದ ಅವರು ಕೃಷ್ಣಪ್ರಜ್ಞೆಯನ್ನು ಅಭ್ಯಾಸ ಮಾಡಬಹುದು ಮತ್ತು ದೇವರೆಡೆಗೆ ಮರಳಬಹುದು. ವೈಕುಂಠಕ್ಕೆ ನೀವು ಅಷ್ಟು ಸುಲಭವಾಗಿ ಮರಳಲಾಗದು. ಕೆಲವು ನಿಯಂತ್ರಕ ನಿಯಮಗಳನ್ನು ಪಾಲಿಸಬೇಕು. ಆಗಲೇ ನೀವು ಹೋಗಲು ಯೋಗ್ಯರು. ಅದು ಅಂಥ ಕಷ್ಟವೇನಲ್ಲ. ಪ್ರಾರಂಭದಲ್ಲಿ ಕೇವಲ `ಹರೇ ಕೃಷ್ಣ’ ಮಂತ್ರೋಚ್ಚಾರಣೆ ಮಾಡಿದರೆ ಸಾಕು. ನೀವು ಇನ್ನೂ ಹೆಚ್ಚು ಅಭ್ಯಾಸ ಮಾಡಲಿಕ್ಕೆ ಅರ್ಹರಾಗುತ್ತೀರಿ.

ಈಗ, ನಮ್ಮದೊಂದು ಕೇಂದ್ರ ನಿಮ್ಮ ನಗರದಲ್ಲಿದೆ, ಇಲ್ಲಿ ಕೃಷ್ಣಪ್ರಜ್ಞಾ ಅಭಿಯಾನದ ಸಂಪೂರ್ಣ ಪ್ರಯೋಜನ ಪಡೆಯಬೇಕೆಂದು ನಿಮ್ಮಲ್ಲಿ ನನ್ನ ಪ್ರಾರ್ಥನೆ. ನಿಮ್ಮ ಇಡೀ ಜೀವನ ಯಶೋಮಯವಾಗುವಂತೆ ಮಾಡಿರಿ. ನಿಮಗೆ ಇದಿಷ್ಟು ಖಾತರಿಯಾಗಬೇಕು. ನಾವು ಈ ದೇಹವನ್ನು ತೊರೆದ ಮೇಲೆ, ಇನ್ನೊಂದು ದೇಹವನ್ನು ಪಡೆಯಲೇಬೇಕು. ನಾವು ಎಲ್ಲ ನಿಯಮಗಳನ್ನು ಉಲ್ಲಂಘಿಸಿ, ಮತ್ತೊಂದು ದೇಹ ನಾಯಿಯ ದೇಹವನ್ನು ಪಡೆಯುವುದಾದರೆ ನಮ್ಮ ಪಾಡು ಹೇಗಿದ್ದಿತು, ನಮ್ಮ ಯಾತನೆ ಹೇಗಿರಬಹುದು ಯೋಚಿಸಿ! ನಾವು ಕೃಷ್ಣಪ್ರಜ್ಞೆಯ ನಿಯಮಗಳನ್ನು ಪಾಲಿಸಿದರೆ, ಕೃಷ್ಣನು ಹೇಳಿದಂತೆ, ಯಾಂತಿ ಮತ್ ಯಾಜಿನೋಽಪಿ ಮಾಮ್ “ಕೃಷ್ಣಪ್ರಜ್ಞೆಯಲ್ಲಿ ತೊಡಗಿದವರು ಯಾರೇ ಆಗಲಿ ನನ್ನೆಡೆಗೆ ಬರುತ್ತಾರೆ.” ಆದುದರಿಂದ ಕೃಷ್ಣಪ್ರಜ್ಞೆಯಲ್ಲಿ ತೊಡಗಿ ಪರಂಧಾಮವನ್ನು ತಲಪಿರಿ.
