ಅನೇಕ ಸಂದರ್ಭಗಳಲ್ಲಿ ಸಣ್ಣ ವಿಷಯಗಳ ಬಗೆಗೆ ಜಾಣತನ ತೋರುವ ನಾವು ಮುಖ್ಯವಾದವುಗಳ ಬಗೆಗೆ ದಡ್ಡತನ ಪ್ರದರ್ಶಿಸುತ್ತೇವೆ. ಹಣ ಸಂಪಾದನೆ ಮತ್ತಿತರ ಐಹಿಕ ವಿಷಯಗಳಿಗೆ ಹೆಚ್ಚು ಗಮನ ಕೊಡುತ್ತ ನಾವು ಬದುಕಿನ ಮುಖ್ಯ ಧ್ಯೇಯವನ್ನು ಅಲಕ್ಷಿಸುತ್ತೇವೆ.
![](https://www.bhaktivedantadarshana.com/wp-content/uploads/2024/07/share-market2-1024x683.jpg)
ನಾಲ್ಕು ಮಿತ್ರರು ಅನೇಕ ವರ್ಷಗಳ ಅನಂತರ ಭೇಟಿಯಾದರು. ಒಂದೇ ಬೀದಿಯಲ್ಲಿ ವಾಸಿಸುತ್ತಿದ್ದ ಅವರು ಒಂದೇ ಶಾಲೆಯಲ್ಲಿ ಕಲಿತವರು. ಅನಂತರ ಉನ್ನತ ಶಿಕ್ಷಣಕ್ಕಾಗಿ ಅನ್ಯ ಊರುಗಳಿಗೆ ಸ್ಥಳಾಂತರಗೊಂಡರು ಮತ್ತು ಉದ್ಯೋಗಗಳಲ್ಲಿ ನಿರತರಾಗಿದ್ದರಿಂದ ಪರಸ್ಪರ ಭೇಟಿಯು ದೂರವೇ ಉಳಿಯಿತು. ಈಗ ಒಬ್ಬ ಮಿತ್ರನ ಪ್ರಯತ್ನದಿಂದ ಅವರು ಭೇಟಿಯಾದರು. ತಮ್ಮ ಹಳೆಯ ಅಡ್ಡೆಯಲ್ಲಿಯೇ ಸೇರಿದರು ಮತ್ತು ಬಾಲ್ಯದ ನೆನಪುಗಳನ್ನು ಮೆಲುಕುಹಾಕಿದರು. ಸಹಜವಾಗಿ ಅವರ ಮಾತಿನಲ್ಲಿ ಶ್ರೀಮತಿ ವಿಜಯಲಕ್ಷ್ಮಿ ಅವರು ಧಾರಾಳವಾಗಿ ಹಾದುಹೋದರು. ಯಾರು ಈ ವಿಜಯಲಕ್ಷ್ಮಿ? ಅವರನ್ನು ಈ ಮಿತ್ರಪಡೆ ಮಾಮಿ ಎಂದು ಗೌರವದಿಂದ ಕರೆಯುತ್ತಿದ್ದರು. ಅವರ ಗಟ್ಟಿಮಾತು ಮತ್ತು ಹಣ್ಣುತರಕಾರಿಯವರೊಂದಿಗೆ ಚೌಕಾಶಿ ಮಾಡುತ್ತಿದ್ದ ರೀತಿ ಯುವಜನರಲ್ಲಿ ಹಾಸ್ಯದ ವಿಷಯವಾಗಿತ್ತು. ಈ ಮಿತ್ರಗಣವೂ ತಮ್ಮ ಅಡ್ಡೆಯಲ್ಲಿ ಮಾಮಿಯನ್ನು ಗೇಲಿ ಮಾಡುತ್ತಿತ್ತು.
![](https://www.bhaktivedantadarshana.com/wp-content/uploads/2024/07/share-market3-1024x683.jpg)
ಒಂದಷ್ಟು ಕಾಸು ಉಳಿಸಲು ಈ ಮಾಮಿ ಮುನ್ನುಗ್ಗುತ್ತಿದ್ದರು. ಊರಿನಲ್ಲಿ ಯಾವುದೇ ಅಂಗಡಿ ಅಥವಾ ವಸ್ತು ಪ್ರದರ್ಶನಗಳು ಸ್ವಲ್ಪ ರಿಯಾಯಿತಿ ಪ್ರಕಟಿಸಿದರೂ ಸಾಕು, ವಿಜಯಾ ಮಾಮಿ ಅಲ್ಲಿಗೆ ಹಾಜರು. ರಿಯಾಯಿತಿಯಲ್ಲಿಯೂ ಚೌಕಾಶಿ ಮಾಡುತ್ತಿದ್ದರು! ಅದನ್ನೇ ಈ ಮಿತ್ರರು ನೆನಪು ಮಾಡಿಕೊಂಡು ಪುನಃ ವಿಜಯಾ ಮಾಮಿಯ ಬಗೆಗೆ ತಮಾಶೆಯಾಗಿ ಮಾತನಾಡಿತು. ಕಾಸು ಉಳಿಸುವುದರಲ್ಲಿ ಜಾಣತನ ತೋರುತ್ತಿದ್ದ ವಿಜಯಾ ಮಾಮಿ ರೂಪಾಯಿ ಗಳಿಸುವುದರಲ್ಲಿ ಎಡವಿದ್ದು ಆಶ್ಚರ್ಯ. ಏನಾಯಿತೆಂದರೆ,
ಅವರು ಅಪಾರ ಹಣವನ್ನು ಶೇರುಗಳಲ್ಲಿ ವಿನಿಯೋಗಿಸಿದರು. ಶೇರು ಮಾರುಕಟ್ಟೆಯ ಏರಿಳಿತಗಳ ಬಗೆಗೆ ಕುಶಾಗ್ರಮತಿಯಲ್ಲದ ಅವರು ಕೋಟಿಗಟ್ಟಲೆ ಹಣವನ್ನು ಕಳೆದುಕೊಂಡರು. ದಳ್ಳಾಳಿಗಳೂ ಅವರ ದಡ್ಡತನವನ್ನು ಧಾರಾಳವಾಗಿ ಉಪಯೋಗಿಸಿಕೊಂಡು ವಂಚಿಸಿದರು. ಈ ಮಾಮಿ “ಕಾಸಿನಲ್ಲಿ ಜಾಣೆ, ರೂಪಾಯಿಯಲ್ಲಿ ಕೋಣೆ” ಎಂದು ಗೆಳೆಯರ ಬಳಗವು ನಗೆಯಾಡಿತು. ಆದರೆ ಅವರ ಉದಾಹರಣೆಯನ್ನು ನಮ್ಮ ಜೀವನದಲ್ಲಿಯೂ ಕಾಣಬಹುದೇ? ಈ ಗೆಳೆಯರ ಗುಂಪು ತಮ್ಮ ತಮ್ಮ ಜೀವನದ ಯಶಸ್ಸಿನ ಬಗೆಗೆ ಹೇಳಿಕೊಳ್ಳಲಾರಂಭಿಸಿದಾಗ ಅಂತಹುದೊಂದು ಯೋಚನೆ ಬಂತು.
![](https://www.bhaktivedantadarshana.com/wp-content/uploads/2024/07/share-market1-1024x683.jpg)
ವಿದೇಶಿ ವಿನಿಮಯ ವ್ಯಾಪಾರದಲ್ಲಿ ತಜ್ಞನಾಗಿರುವ ಅಭಿಷೇಕ್ ವಿದೇಶಗಳ ಪ್ರಮುಖ ಕಂಪನಿಗಳ ಜೊತೆ ವ್ಯವಹಾರ ನಡೆಸುತ್ತಿದ್ದಾನೆ. ಈ ಯುವಕನು ಪ್ರತಿದಿನ 17 ರಿಂದ 20 ತಾಸು ತನ್ನ ವ್ಯವಹಾರದಲ್ಲಿಯೇ ಮುಳುಗಿರುತ್ತಾನೆ. ಮನೆಯಲ್ಲಿ ಊಟ ಮಾಡಲೂ ಪುರಸೊತ್ತು ಇಲ್ಲ. ಕೆಲಸಕ್ಕೆ ಹೋಗುವಾಗ ಜಂಕ್ ಆಹಾರಗಳನ್ನು ಸೇವಿಸುತ್ತ ಲೀಟರ್ ಗಟ್ಟಲೆ ಕಾಫಿ ಹೀರುತ್ತಿದ್ದ ಅಭಿಷೇಕ್ ಆರೋಗ್ಯವನ್ನು ಪೂರ್ಣವಾಗಿ ನಿಲರ್ಕ್ಷಿಸಿದ್ದ. ವೈದ್ಯ ವರದಿಗಳು ಚಿಂತೆಗೀಡುಮಾಡುವಂತಿದ್ದವು. ಆದರೂ ಅವನು ಆಶಾವಾದಿ, “ಅದು ಸರಿಯೇ. ಆದರೆ ನಾನು ವರ್ಷಕ್ಕೆ 60 ಲಕ್ಷ ರೂಪಾಯಿಗಳನ್ನು ಸಂಪಾದಿಸುತ್ತಿರುವೆನಲ್ಲ?” ಆದರೆ ಅದು ನಿಜವಾಗಿಯೂ ಯೋಗ್ಯವೇ? ಸಂಪತ್ತಿಗಾಗಿ ಆರೋಗ್ಯವನ್ನು ಹಾಳುಮಾಡಿಕೊಳ್ಳುವುದು ಜಾಣತನವೇ? ಆರೋಗ್ಯವನ್ನು ಮರಳಿ ಪಡೆಯಲು ಅವನು ಈಗ ಹಣವನ್ನು ಸುರಿಯುತ್ತಿದ್ದಾನೆ. “ಕಾಸಿನಲ್ಲಿ ಜಾಣ, ಕಾಳಜಿಯಲ್ಲಿ ಕೋಣ” ಎಂದು ಹೇಳಬೇಕೆನ್ನಿಸಿತು.
![](https://www.bhaktivedantadarshana.com/wp-content/uploads/2024/07/share-market4-1024x683.jpg)
ನರೇಶ್ ಸ್ವಲ್ಪ ಭಿನ್ನ. ಕ್ಷಿಪ್ರವಾಗಿ ಕಾಸು ಸಂಪಾದಿಸುವುದಕ್ಕಿಂತ ತನ್ನ ವೃತ್ತಿಯಲ್ಲಿ ಮೇಲೇರುವ ಮಹತ್ವಾಕಾಂಕ್ಷಿ. ತನ್ನ ಕಂಪನಿಯ ಸಿಇಓ ಆಗಲು ಅವನು ಏಳು ವರ್ಷದ ಪ್ರತಿಭಾಪೂರ್ಣ ಯೋಜನೆಯನ್ನು ರೂಪಿಸಿದ. ಈಗ ಅವನು ತನ್ನ ಗುರಿಯ ಯಶಸ್ಸಿನ ಹೊಸ್ತಿಲಲ್ಲಿ ಇದ್ದಾನೆ. ಅದೇ ವೇಳೆ ಅವನು ವಿವಾಹ ವಿಚ್ಛೇದನಕ್ಕಾಗಿ ವಕೀಲರನ್ನು ಭೇಟಿಯಾಗುತ್ತಿದ್ದಾನೆ. ತನ್ನ ಕನಸಿನ ಸಾಕಾರಕ್ಕೆ ನರೇಶ್ ತೆರುತ್ತಿರುವ ಬೆಲೆ, ಒಡೆದ ಮನೆಯಾಗಿದೆ.
![](https://www.bhaktivedantadarshana.com/wp-content/uploads/2024/07/share-market5-1024x683.jpg)
ಸಿದ್ಧಾರ್ಥನಿಗೆ ಅಂತಹ ಯಾವುದೇ ಮಹತ್ವಾಕಾಂಕ್ಷೆಗಳಿಲ್ಲ. ಸರ್ಕಾರಿ ಕಚೇರಿಯಲ್ಲಿ ಕೆಲಸಮಾಡುತ್ತಿರುವ ಅವನಿಗೆ ಅದರಲ್ಲಿ ತೃಪ್ತಿ ಇದೆ. ಆದರೆ ಅವನಿಗೆ ಬದುಕಿನ ದೊಡ್ಡ ಸವಾಲೆಂದರೆ ಕಚೇರಿಯ ಕಡತಗಳನ್ನು ವಿಲೇವಾರಿ ಮಾಡಿದ ಮೇಲೆ ಅತಿ ಬೇಗ ಮನೆಗೆ ಹಿಂದಿರುಗುವುದಾಗಿದೆ. ಏಕೆಂದರೆ ಅವನಿಗೆ ಟಿವಿ ಧಾರಾವಾಹಿಗಳ ಚಟ! ತಡವಾದರೆ ತಪ್ಪಿಹೋದೀತೆಂಬ ಚಿಂತೆ. ಆದುದರಿಂದ ಅವನು ಕಚೇರಿ ಕೆಲಸ ಮುಗಿದ ಕೂಡಲೇ ಮನೆಯತ್ತ ದೌಡಾಯಿಸುತ್ತಾನೆ. ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ಚಲಿಸುತ್ತಿರುವ ಲೋಕಲ್ ಟ್ರೇನ್ ಹತ್ತುತ್ತಾನೆ. ಮನೆಗೆ ಹೋಗಿ ಐದಾರು ತಾಸು ಟಿವಿ ನೋಡುತ್ತಾನೆ. ಅವನು ಮನೆಗೆ ಬರಲು ನಿಮಿಷಗಳನ್ನು ಉಳಿಸುತ್ತಾನೆ, ನಿಜ. ಆದರೆ ಅವನು ತನ್ನ ಅಪರೂಪದ ಮಾನವ ಜೀವನವನ್ನು ಸರಿಯಾಗಿ ಉಪಯೋಗಿಸುತ್ತಿದ್ದಾನೆಯೇ?
![](https://www.bhaktivedantadarshana.com/wp-content/uploads/2024/07/share-market6-1024x683.jpg)
ಮಾನವ ಜೀವನ ಇರುವುದು ಆತ್ಮ ಸಾಕ್ಷಾತ್ಕಾರಕ್ಕಾಗಿ. ಹಣ ಸಂಪಾದನೆಗಾಗಿ ಮಾನವನು ಗೋಣುಮುರಿದು ಧಾವಿಸಬಾರದು ಅಥವಾ ಇಂದ್ರಿಯ ಮತ್ತು ಲೌಕಿಕ ಸುಖಕ್ಕಾಗಿ ಸಮಯವನ್ನು ಹಾಳುಮಾಡಬಾರದು ಎಂದು ವೈದಿಕ ಗ್ರಂಥಗಳು ಪದೇ ಪದೇ ಪ್ರತಿಪಾದಿಸಿವೆ. ಶ್ರೀಲ ಪ್ರಭುಪಾದರು ಈ ವಿಷಯದಲ್ಲಿ ಸ್ಪಷ್ಟ ನುಡಿಗಳನ್ನಾಡಿದ್ದಾರೆ, “ ಮಾನವನಿಗೆ ಬದುಕಲು ಹಂದಿ ಅಥವಾ ಮತ್ತಿತರ ಪ್ರಾಣಿಗಳಿಗಿಂತ ಉತ್ತಮ ಅವಕಾಶವನ್ನು ಏಕೆ ನೀಡಲಾಗಿದೆ? ಒಬ್ಬ ಸರ್ಕಾರಿ ಅಧಿಕಾರಿಗೆ ಉತ್ತಮ ಜೀವನಕ್ಕಾಗಿ ಒಬ್ಬ ಸಾಮಾನ್ಯ ಗುಮಾಸ್ತನಿಗಿಂತ ಹೆಚ್ಚಿನ ಸೌಕರ್ಯಗಳನ್ನೇಕೆ ನೀಡಲಾಗಿದೆ? ಉತ್ತರ ತುಂಬ ಸರಳ : ಸರ್ಕಾರದ ಮುಖ್ಯ ಅಧಿಕಾರಿಯು ಒಬ್ಬ ಸಾಮಾನ್ಯ ನೌಕರನದಕ್ಕಿಂತ ಹೆಚ್ಚಿನ ಜವಾಬ್ದಾರಿಯುತ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿರುವುದರಿಂದ ಅವನಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗುತ್ತದೆ. ಅದೇ ರೀತಿ ಮಾನವ ಜೀವಿಯು ಸದಾ ಹೊಟ್ಟೆ ತುಂಬಿಸಿಕೊಳ್ಳುವುದರಲ್ಲಿಯೇ ನಿರತವಾಗಿರುವ ಪ್ರಾಣಿಗಳಿಗಿಂತ ಉನ್ನತ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿದೆ. ಆದರೆ ಪ್ರಾಣಿಗಳಂತಹ ಗುಣಮಟ್ಟದ ಆಧುನಿಕ ನಾಗರಿಕತೆಯು ಹೊಟ್ಟೆ ತುಂಬಿಸಿಕೊಳ್ಳುವ ಸಮಸ್ಯೆಯನ್ನು ಹೆಚ್ಚಿಸಿದೆ . . . “
![](https://www.bhaktivedantadarshana.com/wp-content/uploads/2024/07/share-market7-1024x683.jpg)
ಆಧುನಿಕ ಕಾಲದ ವಿಪರ್ಯಾಸವೆಂದರೆ ಯಾವುದೋ ದೂರದ ಭವಿಷ್ಯದಲ್ಲಿ ಆರಾಮ ಜೀವನ ನಡೆಸಲು ಈಗ ವಿಪರೀತ ಶ್ರಮದಿಂದ ಕೆಲಸ ಮಾಡುತ್ತೇವೆ. ಅಂತಹ ಅಪೇಕ್ಷಿತ ಶಾಂತಿಯುತ ಬದುಕು ಸಿಗದಿರುವುದಷ್ಟೇ ಅಲ್ಲ, ನಾವು ನಮ್ಮ ಕೆಲಸದಲ್ಲಿ ಸತತವಾದ ಆತಂಕದಲ್ಲಿಯೇ ಇರುತ್ತೇವೆ. ಆಧ್ಯಾತ್ಮಿಕ ಜೀವನದ ಪರ್ಯಾಯ ಆಯ್ಕೆಯನ್ನು ನೀಡಿದಾಗ, ಯಾವುದೋ ಆಸೆ ಇಟ್ಟುಕೊಂಡಿರುವ ಶ್ರಮಜೀವಿಗೆ ಅದು ಕ್ಷೋಭೆ ಉಂಟುಮಾಡುತ್ತದೆ. ಸ್ವಲ್ಪವೂ ಯೋಚಿಸದೆ ಅವನು ಆಧ್ಯಾತ್ಮಿಕ ಜೀವನವನ್ನು ತಿರಸ್ಕರಿಸುತ್ತಾನೆ ಮತ್ತು ತನ್ನ ದೇಹದ ಅಗತ್ಯಗಳನ್ನು ಪೂರೈಸಲು ಸಮಯವನ್ನು ವ್ಯಯಿಸುತ್ತಾನೆ. ಇದೊಂದು ದುರಂತವಲ್ಲವೇ? ಆಧುನಿಕ ಮಹತ್ವಾಕಾಂಕ್ಷಿಯ ದುರಂತವನ್ನು ಭಾಗವತವು ವಿವರಿಸುತ್ತದೆ, (2.1.3) “ಮಾತ್ಸರ್ಯವುಳ್ಳ ಗೃಹಸ್ಥನ ಆಯುಷ್ಯವು ರಾತ್ರಿಯ ವೇಳೆ ನಿದ್ರೆ ಅಥವಾ ಲೈಂಗಿಕ ಭೋಗದಲ್ಲಿ ಕಳೆಯುತ್ತದೆ. ಹಗಲಿನ ವೇಳೆ ಹಣ ಸಂಪಾದನೆಯಲ್ಲಿ ಅಥವಾ ಕುಟುಂಬ ಪಾಲನೆಯಲ್ಲಿ ಕಳೆಯುತ್ತದೆ.”
![](https://www.bhaktivedantadarshana.com/wp-content/uploads/2024/07/share-market8-1024x683.jpg)
ಎಲ್ಲವನ್ನೂ ಬಿಟ್ಟು ಅರಣ್ಯದಲ್ಲಿ ವಾಸಿಸಿ ಎಂದು ನಾವು ಹೇಳುವುದಿಲ್ಲ. ಮಾನವನು ತನ್ನ ದೈಹಿಕ ಅಗತ್ಯಗಳ, ತನ್ನ ಲೌಕಿಕ ಕರ್ತವ್ಯಗಳ ಪೂರೈಕೆಗೆ ಅಗತ್ಯವಾದ ಅಂಶಗಳತ್ತ ಗಮನ ಹರಿಸಬೇಕು. ಅದರೆ ಭಗವಂತನೊಂದಿಗಿನ ಶಾಶ್ವತವಾದ ಬಾಂಧವ್ಯವದ ಸಾಕ್ಷಾತ್ಕಾರಕ್ಕೆ ಕೂಡ ಅವನು ಶ್ರಮಿಸಬೇಕು ಎನ್ನುತ್ತೇವೆ.
ಕಾಲದ ಕಾರಣ ಲೌಕಿಕ ಜೀವನವು ಕ್ಷೀಣಿಸುತ್ತದೆ. ನಾವು ಸದಾ ವೈಭವೀಕರಿಸುವ ನಮ್ಮ ಶರೀರವು ವೃದ್ಧಾಪ್ಯ ಸ್ಥಿತಿಯನ್ನು ಮುಟ್ಟುತ್ತದೆ ಮತ್ತು ಅನೇಕ ಬಾರಿ ರೋಗರುಜಿನಗಳಿಂದ ಆತಂಕ ಉಂಟಾಗುತ್ತದೆ. ಮತ್ತು ಅಂತಿಮವಾಗಿ ಸಾವು. ಹಣ ಸಂಪಾದನೆ ಮತ್ತು ವೃತ್ತಿಯಲ್ಲಿ ಮೇಲಕ್ಕೆ ಏರಬೇಕೆನ್ನುವ ಬಯಕೆಯ ಈಡೇರಿಕೆಗಾಗಿ ಶ್ರಮಿಸುವುದರಲ್ಲಿಯೇ ಕಾಲವನ್ನು ವ್ಯಯಿಸುವ ನಮಗೆ ವಯಸ್ಸಾದಂತೆ ಅಂತಹ ಶ್ರಮ ಕಷ್ಟ ಎನ್ನುವುದು ಅರಿವಾಗುತ್ತದೆ ಮತ್ತು ಹತಾಶೆಗೆ ಒಳಗಾಗುವುದೂ ಉಂಟು. ಬುದ್ಧಿವಂತ ಮನುಷ್ಯನು ಕಾಲದೊಂದಿಗೆ ಆಧ್ಯಾತ್ಮಿಕ ಆನಂದವನ್ನು ಹೆಚ್ಚಿಸಿಕೊಳ್ಳುವತ್ತ ಪ್ರಯತ್ನಿಸುತ್ತಾನೆ. ಶರೀರವು ಕುಸಿದರೂ ಮಾನಸಿಕವಾಗಿ ವ್ಯಕ್ತಿಯು ಪತನಗೊಳ್ಳುವುದಿಲ್ಲ.
![](https://www.bhaktivedantadarshana.com/wp-content/uploads/2024/07/share-market9-1024x1008.jpg)
ಆಧ್ಯಾತ್ಮಿಕ ಪರ್ಯಾಯವು ವಿವೇಚನಾಯುತವಾದುದು. ಹೇಗೆ? ಭಗವಂತನಿಗೆ ಸೇವೆ ಮತ್ತು ಭಗವನ್ ನಾಮ ಜಪದ ಆಧ್ಯಾತ್ಮಿಕ ಪಥವನ್ನು ಅನುಸರಿಸಬೇಕು. ಈ ಮಾರ್ಗವು ವ್ಯಕ್ತಿಗೆ ಅವನ ಅಪೇಕ್ಷಿತ ಫಲವನ್ನು ನೀಡುತ್ತದೆ ಮತ್ತು ಕಾಲದ ಕಾರಣ ನಾಶವಾಗುವ ಯಾವುದೇ ಅಂಶದ ಪ್ರಭಾವ ಅದರ ಮೇಲೆ ಆಗುವುದಿಲ್ಲ. ಇಂತಹ ಪ್ರಯತ್ನದಿಂದ ನಮಗೆ ಬದುಕಿನಲ್ಲಿ ಆಧ್ಯಾತ್ಮಿಕ ಸುಖವಂತೂ ಲಭಿಸುತ್ತದೆ. ಇದರಲ್ಲಿ ಯಶಸ್ವಿಯಾದವರಿಗೆ ಭಗವದ್ಧಾಮದಲ್ಲಿ ಶಾಶ್ವತ ವಾಸ ಲಭಿಸುತ್ತದೆ. ಆದುದರಿಂದ ನಾವು ಕೃಷ್ಣಪ್ರಜ್ಞೆಯ ಆಂದೋಲನದಲ್ಲಿ ತೊಡಗಿಕೊಂಡು ಗುರುವಿನ ಮಾರ್ಗದರ್ಶನದಲ್ಲಿ ಅಭ್ಯಸಿಸಬೇಕು. ಪ್ರಯತ್ನ ಮಾಡಿ ನೋಡಿ. ಅದೇ ವಿವೇಚನವಾದುದು.
![](https://www.bhaktivedantadarshana.com/wp-content/uploads/2024/04/krishnarjuna-feature-1024x576.jpg)