ಜಾತ್ಯತೀತ ರಾಷ್ಟ್ರ

ಶ್ರೀ ಶ್ರೀಮದ್‌ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಸ್ವೀಡನ್ನಿನಲ್ಲಿರುವ ಭಾರತೀಯ ರಾಯಭಾರಿಯ ನಡುವೆ 1973ರಲ್ಲಿ ಸ್ಟಾಕ್‌ಹೋಮ್‌ನಲ್ಲಿ ನಡೆದ ಒಂದು ಸಂವಾದ

ಶ್ರೀಲ ಪ್ರಭುಪಾದ: ಅಮೆರಿಕದಲ್ಲಿ ಮತ್ತು ಭಾರತದಲ್ಲಿ ಮತ್ತು ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ ಒಂದು “ಜಾತ್ಯತೀತ ರಾಷ್ಟ್ರ”ವಿದೆ. ಸರ್ಕಾರದ ಮುಖಂಡರು ತಾವು ಯಾವುದೇ ನಿರ್ದಿಷ್ಟವಾದ ಧರ್ಮಕ್ಕೆ ಪಕ್ಷಪಾತ ತೋರಿಸುವುದಿಲ್ಲ ಎಂದು ಹೇಳುತ್ತಾರೆ, ಆದರೆ ವಾಸ್ತವವಾಗಿ ಅವರು ಅಧರ್ಮಕ್ಕೆ ಒತ್ತಾಸೆ ಕೊಡುತ್ತಾರೆ.

ರಾಯಭಾರಿ: ನಮಗೊಂದು ಸಮಸ್ಯೆಯಿದೆ. ನಮ್ಮಲ್ಲಿ ಬಹು ಧರ್ಮೀಯ ಸಮಾಜವಿದೆ. ಆದ್ದರಿಂದ ಸರ್ಕಾರದಲ್ಲಿರುವ ನಾವು ಜಾಗರೂಕವಾಗಿರಬೇಕು. ಆದ್ದರಿಂದ ಧರ್ಮವನ್ನು ಕುರಿತಂತೆ ನಾವು ಕಠಿಣವಾದ ನಿಲುವನ್ನು ತಳೆಯಲಾಗುವುದಿಲ್ಲ.

ಶ್ರೀಲ ಪ್ರಭುಪಾದ:  ಇಲ್ಲ, ಇಲ್ಲ. ಸರ್ಕಾರವು ಒಂದು ಬಲಿಷ್ಠವಾದ ನಿಲುವನ್ನು ತೆಗೆದುಕೊಳ್ಳಬೇಕು. ಸಹಜವಾಗಿಯೇ ಸರ್ಕಾರವು ಎಲ್ಲ ಸದ್ಧರ್ಮಗಳ ವಿಚಾರದಲ್ಲಿ ತಟಸ್ಥವಾಗಿರಬೇಕು. ಆದರೆ ಜನರು ಪ್ರಾಮಾಣಿಕವಾಗಿ ಧರ್ಮಶ್ರದ್ಧೆಯುಳ್ಳವರಾಗಿರುವಂತೆ ನೋಡಿಕೊಳ್ಳುವುದು ಕೂಡ ಸರ್ಕಾರದ ಒಂದು ಕರ್ತವ್ಯವೇ ಆಗಿದೆ. “ಜಾತ್ಯತೀತ  ರಾಷ್ಟ್ರ”ದ ಹೆಸರಿನಲ್ಲಿ ಸರ್ಕಾರವು ಜನರು ನರಕಕ್ಕೆ ಬೀಳುವುದಕ್ಕೆ ಅವಕಾಶ ಮಾಡಿಕೊಡುವುದಲ್ಲ.

ರಾಯಭಾರಿ: ಸರಿ, ಅದು ನಿಜ.

ಶ್ರೀಲ ಪ್ರಭುಪಾದ:  ಹೌದು, ನೀವು ಒಬ್ಬರು ಮುಸ್ಲಿಂ ಆಗಿದ್ದರೆ, ನೀವು ನಿಜವಾಗಿಯೂ ಒಬ್ಬ ಮುಸ್ಲಿಂ ಆಗಿ ನಡೆದುಕೊಳ್ಳುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ನೀವು ಒಬ್ಬರು ಹಿಂದೂ ಆಗಿದ್ದರೆ ನೀವು ನಿಜವಾಗಿಯೂ ಒಬ್ಬ ಹಿಂದೂ ಆಗಿ ನಡೆದುಕೊಳ್ಳುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ನೀವು ಒಬ್ಬ ಕ್ರಿಶ್ಚಿಯನ್‌ ಆಗಿದ್ದರೆ, ನೀವು ನಿಜವಾಗಿಯೂ ಒಬ್ಬ ಕ್ರಿಶ್ಚಿಯನ್‌ರಾಗಿ ನಡೆದುಕೊಳ್ಳುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಸರ್ಕಾರವೆಂದರೆ ಧರ್ಮವನ್ನು ಕೈಬಿಡುವುದು ಎಂದಲ್ಲ. ಧರ್ಮೇಣ ಹೀನ ಪಶುಭಿಃ ಸಮಾನಃ ಜನರು ಅಧಾರ್ಮಿಕರಾದರೆ ಆಗ ಅವರು ಕೇವಲ ಪಶುಗಳೇ ಆಗಿರುತ್ತಾರೆ. ಆದ್ದರಿಂದ ನಾಗರಿಕರು ಪ್ರಾಣಿಗಳಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಜನರು ಧರ್ಮದ ವಿವಿಧ ರೂಪಗಳನ್ನು ಘೋಷಿಸಿಕೊಳ್ಳಬಹುದು. ಅದು ಅಷ್ಟು ಮುಖ್ಯವಲ್ಲ. ಆದರೆ ಅವರು ಧರ್ಮಶ್ರದ್ಧೆಯವರಾಗಿರಬೇಕು. “ಜಾತ್ಯತೀತ ರಾಷ್ಟ್ರ” ಎಂದರೆ ಸರ್ಕಾರವು ಬೇಜವಾಬ್ದಾರಿಯಿಂದ ಕ್ರೂರವಾಗಿ ವರ್ತಿಸಬೇಕೆಂದಲ್ಲ – “ಧರ್ಮವಿಲ್ಲದೆ ಜನರು ನಾಯಿ ಬೆಕ್ಕುಗಳಾಗಲಿ.” ಸರ್ಕಾರವು ಲಕ್ಷ್ಯ ಕೊಡದಿದ್ದರೆ, ಆಗ ಅದು ಒಂದು ಉತ್ತಮ ಸರ್ಕಾರವಲ್ಲ.

ರಾಯಭಾರಿ: ನೀವು ಹೇಳುವುದರಲ್ಲಿ ಬಹಳಷ್ಟು ಸಂಗತಿಯಿದೆ ಎಂದು ನಾನು ಭಾವಿಸುತ್ತೇನೆ. ಆದರೆ, ನೀವು ತಿಳಿದಂತೆ, ರಾಜಕಾರಣವು ಸಾಧ್ಯತೆಯ ಒಂದು ಕಲೆ.

ಶ್ರೀಲ ಪ್ರಭುಪಾದ:  ಹಾಗಲ್ಲ. ರಾಜಕಾರಣವೆಂದರೆ ಜನರು ಪ್ರಗತಿಯನ್ನು ಸಾಧಿಸುವಂತೆ ನೋಡಿಕೊಳ್ಳುವುದು, ನಾಗರಿಕರು ಆಧ್ಯಾತ್ಮಿಕವಾಗಿ ಪ್ರಗತಿಯನ್ನು ಸಾಧಿಸುವಂತೆ ನೋಡಿಕೊಳ್ಳುವುದು. ಅವರು ಹೀನ ಸ್ಥಿತಿಗೆ ಇಳಿಯುವಂತೆ ಮಾಡುವುದಲ್ಲ.

ರಾಯಭಾರಿ: ಹೌದು, ನಾನು ಒಪ್ಪುತ್ತೇನೆ. ಆದರೆ ಸರ್ಕಾರದ ಪ್ರಮುಖವಾದ ಕರ್ತವ್ಯವೆಂದರೆ ಪ್ರತಿಭಾಶಾಲಿಯಾದ ಜನರು, ನಿಮ್ಮಂತಹ ಆಧ್ಯಾತ್ಮಿಕ ನೇತಾರರು ಕಾರ್ಯನಿರ್ವಹಿಸುವಂತಹ ಸನ್ನಿವೇಶಗಳನ್ನು ಒದಗಿಸುವುದು ಎಂದು ನಾನು ಭಾವಿಸುತ್ತೇನೆ. ಸರ್ಕಾರವು ಅದಕ್ಕಿಂತ ಹೆಚ್ಚಿನದನ್ನು ಏನನ್ನಾದರೂ ಮಾಡಿದರೆ ಅದು ವಿವಿಧ ಧಾರ್ಮಿಕ ಗುಂಪುಗಳನ್ನು ಭ್ರಷ್ಟಗೊಳಿಸಲೂಬಹುದು. ಸರ್ಕಾರವು ಒಂದು ಆಟದಲ್ಲಿ ಅಂಪೈರ್‌ (ನಿರ್ಣಯಕಾರ)ನ ಹಾಗೆ ಇರಬೇಕು ಎಂದು ನಾನು ಭಾವಿಸುತ್ತೇನೆ – ಸನ್ನಿವೇಶಗಳನ್ನು ಒದಗಿಸಬೇಕು, ಮಾತನಾಡಲು ಸನ್ನಿವೇಶಗಳನ್ನು ಒದಗಿಸಬೇಕು.

ಶ್ರೀಲ ಪ್ರಭುಪಾದ:  ಅಲ್ಲ. ಸರ್ಕಾರವು ಅದಕ್ಕಿಂತ ಹೆಚ್ಚಿನದನ್ನು ಮಾಡಬೇಕು. ಉದಾಹರಣೆಗೆ, ನಿಮ್ಮಲ್ಲೊಂದು ವಾಣಿಜ್ಯ ಇಲಾಖೆ ಇದೆ – ವ್ಯಾಪಾರ ಮತ್ತು ಕೈಗಾರಿಕೋದ್ಯಮಗಳು ಚೆನ್ನಾಗಿ ಮತ್ತು ಯುಕ್ತವಾಗಿ ನಡೆಯುತ್ತಿರುವಂತೆ ಸರ್ಕಾರವು ನೋಡಿಕೊಳ್ಳುತ್ತದೆ. ಸರ್ಕಾರವು ಪರವಾನಿಗೆಗಳನ್ನು ನೀಡುತ್ತದೆ. ಅವರಲ್ಲಿ ಮೇಲುಸ್ತುವಾರಿಯ ಅಧಿಕಾರಿಗಳು ಮತ್ತು ಪರೀಕ್ಷಕರು ಇರುತ್ತಾರೆ. ಅಥವಾ, ಉದಾಹರಣೆಗೆ, ನಿಮ್ಮಲ್ಲೊಂದು ಶಿಕ್ಷಣ ಇಲಾಖೆಯಿದೆ. ಶಿಕ್ಷಣದ ಅಧೀಕ್ಷರು ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ದೊರೆಯುತ್ತಿದೆಯೇ ಎಂದು ನೋಡಿಕೊಳ್ಳುತ್ತಾರೆ. ಅದೇ ರೀತಿಯಲ್ಲಿ ಸರ್ಕಾರದಲ್ಲಿ ತಜ್ಞರು ಇರಬೇಕು; ಅವರು ಹಿಂದೂಗಳು ನಿಜವಾಗಿಯೂ ಹಿಂದೂಗಳಂತೆ ವರ್ತಿಸುತ್ತಿದ್ದಾರೆಯೇ, ಮುಸ್ಲಿಮರು ನಿಜವಾಗಿಯೂ ಮುಸ್ಲಿಮರಂತೆ ವರ್ತಿಸುತ್ತಿದ್ದಾರೆಯೇ, ಮತ್ತು ಕ್ರೈಸ್ತರು ನಿಜವಾಗಿಯೂ ಕ್ರೈಸ್ತರಂತೆ ವರ್ತಿಸುತ್ತಿದ್ದಾರೆಯೇ ಎನ್ನುವುದನ್ನು ನೋಡಿಕೊಳ್ಳುವಂತಿರಬೇಕು. ಸರ್ಕಾರವು ಧರ್ಮದ ವಿಚಾರದಲ್ಲಿ ಜಡವಾಗಿರಬಾರದು. ಅವರು ತಟಸ್ಥರಾಗಿರಬಹುದು. “ನೀವು ಯಾವ ಧರ್ಮವನ್ನು ಬೇಕಾದರೂ ಘೋಷಿಸಿಕೊಳ್ಳಿ. ನಮಗೇನೂ ಸಂಬಂಧವಿಲ್ಲ.” ಆದರೆ ನೀವು ಯೋಗ್ಯವಾಗಿ ನಡೆದುಕೊಳ್ಳುವಂತೆ, ಒಣಬಡಾಯಿ ಕೊಚ್ಚಿಕೊಳ್ಳದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ.

ರಾಯಭಾರಿ: ಖಂಡಿತವಾಗಿ… ನೈತಿಕ ನಡವಳಿಕೆಗೆ ಸಂಬಂಧಿಸಿದಂತೆ. ಆದರೆ ಅದಕ್ಕಿಂತ ಮಿಗಿಲಾಗಿ, ಅದು ಹೇಗೆ ಸಾಧ್ಯ, ನೀವೇ ಹೇಳಿ.

ಶ್ರೀಲ ಪ್ರಭುಪಾದ:  ಇಲ್ಲಿನ ಸಂಗತಿ ಏನೆಂದರೆ, ಧಾರ್ಮಿಕ ತತ್ತ್ವಗಳನ್ನು ನೀವು ನಿಜವಾಗಿಯೂ ಅನುಸರಿಸದಿದ್ದರೆ, ನೀವು ಉತ್ತಮ ನೈತಿಕ ನಡವಳಿಕೆಯನ್ನು ಪ್ರಾಯಃ ಹೊಂದಲಾರಿರಿ.

ಯಸ್ಯಾಸ್ತಿ ಭಕ್ತಿಭರ್ಗವತ್ಯಕಿಞ್ಚನಾ ಸರ್ವೈರ್ಗುಣೈಸ್ತತ್ರ ಸಮಾಸತೇ ಸುರಾಃ

ಹರಾವಭಕ್ತಸ್ಯ ಕುತೋ ಮಹದ್ಗುಣಾ ಮನೋರಥೇನಾಸತಿ ಧಾವತೋ ಬಹಿಃ

ದೇವೋತ್ತಮ ಪರಮ ಪುರುಷನಾದ ವಾಸುದೇವನಲ್ಲಿ ಪರಿಶುದ್ಧ ಭಕ್ತಿಯನ್ನು ಯಾರು ಬೆಳೆಸಿಕೊಳ್ಳುತ್ತಾರೋ ಅಂತಹವನಲ್ಲಿ ಎಲ್ಲ ದೇವತೆಗಳೂ ಮತ್ತು ಅವರ ಧರ್ಮ ಜ್ಞಾನ ವೈರಾಗ್ಯದಂತಹ ಶ್ರೇಷ್ಠ ಗುಣಗಳೂ ಕಾಣಿಸಿಕೊಳ್ಳುತ್ತವೆ.  ಅದಕ್ಕೆ ಬದಲಾಗಿ ಯಾವ ವ್ಯಕ್ತಿಯು ಭಕ್ತಿಸೇವೆಯಲ್ಲಿ ತೊಡಗದೆ, ಪ್ರಾಪಂಚಿಕ ಚಟುವಟಿಕೆಗಳಲ್ಲಿ ತೊಡಗಿರುತ್ತಾನೋ ಅಂತಹವನಲ್ಲಿ ಶ್ರೇಷ್ಠ ಗುಣಗಳು ಕಾಣಿಸುವುದಿಲ್ಲ.  ಅಂತಹವನು ಹಠಯೋಗಾಚರಣೆಯಲ್ಲಿ ಅಥವಾ ತನ್ನ ಕುಟುಂಬ ಮತ್ತು ಬಂಧುಗಳ ಪೋಷಣೆಯ ಪ್ರಾಮಾಣಿಕ ಯತ್ನದಲ್ಲಿ ತೊಡಗಿದ್ದರೂ ಕೂಡ ಅವನು ತನ್ನ ಊಹಾತ್ಮಕ ಚಿಂತನೆಗಳ ಒತ್ತಾಯದಿಂದ ಭಗವಂತನ ಬಹಿರಂಗ ಶಕ್ತಿಯ ಸೇವೆಯಲ್ಲಿ ತೊಡಗಬೇಕಾಗುವುದು.  ಅಂತಹ ವ್ಯಕ್ತಿಯಲ್ಲಿ ಸದ್ಗುಣಗಳಿರುವುದು ಹೇಗೆ ತಾನೆ ಸಾಧ್ಯ? (ಶ್ರೀಮದ್‌ ಭಾಗವತ: 5.18.12). ದೇವರ ಬಗೆಗೆ ನಿಮಗೆ ಶ್ರದ್ಧೆ ಇರುವವರೆಗೆ, ಭಕ್ತಿ ಇರುವವರೆಗೆ ಪ್ರತಿಯೊಂದೂ ಸರಿಯಾಗಿರುತ್ತದೆ. ಅಷ್ಟಕ್ಕೂ ದೇವರು ಒಬ್ಬನೇ. ದೇವರು ಹಿಂದುವೂ ಅಲ್ಲ, ಕ್ರೈಸ್ತನೂ ಅಲ್ಲ, ಮುಸ್ಲಿಮನೂ ಅಲ್ಲ, ದೇವರು ಒಬ್ಬನೇ. ಅದರಿಂದಾಗಿಯೇ ವೈದಿಕ ಸಾಹಿತ್ಯಗಳು ನಮಗೆ ಹೇಳುತ್ತವೆ:

ಸ ವೈ ಪುಂಸಾಂ ಪರೋ ಧರ್ಮೋ ಯತೋ ಭಕ್ತಿರಧೋಕ್ಷಜೇ

ಅಹೈತುಕ್ಯಪ್ರತಿಹತಾ ಯಯಾತ್ಮಾ ಸುಪ್ರಸೀದತಿ

ಪರಮ ಪುರುಷನ ಪ್ರೇಮಪೂರ್ಣ ಭಕ್ತಿ ಸೇವೆಯ ನೆಲೆಗೆ ಕೊಂಡೊಯ್ಯುವ ವೃತ್ತಿಯೇ ಮಾನವರೆಲ್ಲರಿಗೂ ಪರಮ ವೃತ್ತಿ (ಧರ್ಮ) ಎನ್ನಿಸಿಕೊಳ್ಳುತ್ತದೆ.  ಆತ್ಮಕ್ಕೆ ಸಂಪೂರ್ಣ ತೃಪ್ತಿ ನೀಡಬೇಕಾದಲ್ಲಿ ಅಂತಹ ಭಕ್ತಿ ಸೇವೆಯು ಬೇರೆ ಯಾವುದರಿಂದಲೂ ಪ್ರೇರಿತವಲ್ಲದ್ದೂ ನಿರಂತರವಾದದ್ದೂ ಆಗಿರಬೇಕು. (ಭಾಗವತ: 1.2.6). ಆದ್ದರಿಂದ ವ್ಯಕ್ತಿಯು ಧಾರ್ಮಿಕನಾಗಿರಬೇಕು. ಧಾರ್ಮಿಕನಾಗಿರದೆ ಯಾರೂ ಸಂತೃಪ್ತನಾಗಿರುವುದಿಲ್ಲ. ಜಗತ್ತಿನಾದ್ಯಂತ ಎಷ್ಟೊಂದು ಗೊಂದಲ ಮತ್ತು ಅತೃಪ್ತಿ ಇದೆ? ಏಕೆಂದರೆ ಜನರು ಅಧಾರ್ಮಿಕರಾಗಿದ್ದಾರೆ.

ರಾಯಭಾರಿ: ಮಾಸ್ಕೊದಲ್ಲಿ ಎಷ್ಟೊಂದು ಜನರು ಧರ್ಮದ ವಿಷಯದಲ್ಲಿ ಪ್ರತಿಕೂಲರಾಗಿದ್ದಾರೆ. ಸಂಪೂರ್ಣವಾಗಿ ಅದರ ವಿರುದ್ಧ ಇದ್ದಾರೆ.

ಶ್ರೀಲ ಪ್ರಭುಪಾದ:  ಮಾಸ್ಕೊ ಎಂದು ಏಕೆ ಹೇಳುತ್ತೀರಿ? ಎಲ್ಲ ಕಡೆಯೂ ಹಾಗೆಯೇ ಇದೆ. ಕನಿಷ್ಠಪಕ್ಷ ಮಾಸ್ಕೊದಲ್ಲಿ ಅವರು ಪ್ರಾಮಾಣಿಕರಾಗಿದ್ದಾರೆ. “ನಮಗೆ ದೇವರಲ್ಲಿ ನಂಬಿಕೆಯಿಲ್ಲ” ಎಂದು ಅವರು ಪ್ರಾಮಾಣಿಕವಾಗಿ ಹೇಳುತ್ತಾರೆ.

ರಾಯಭಾರಿ: ಅದು ನಿಜ. ಅದು ನಿಜ.

ಶ್ರೀಲ ಪ್ರಭುಪಾದ:  ಆದರೆ ಬೇರೆ ಕಡೆ ಜನ ಹೇಳುತ್ತಾರೆ – “ನಾನು ಹಿಂದೂ”, “ನಾನು ಮುಸ್ಲಿಂ”, “ನಾನು ಕ್ರೈಸ್ತ… ನಾನು ದೇವರನ್ನು ನಂಬುತ್ತೇನೆ.” ಇಷ್ಟಾಗಿಯೂ ಧರ್ಮವನ್ನು ಕುರಿತು ಅವರಿಗೆ ಏನೂ ತಿಳಿದಿರುವುದಿಲ್ಲ. ಅವರು ದೇವರ ನಿಯಮಗಳನ್ನು ಅನುಸರಿಸುವುದಿಲ್ಲ.

ರಾಯಭಾರಿ: ನಮ್ಮಲ್ಲಿ ಬಹಳಷ್ಟು ಜನ ಹಾಗೇ ಇದ್ದೇವೆ ಎನ್ನುವುದು ನನ್ನ ವಿಷಾದ. ಅದು ಸತ್ಯ.

ಶ್ರೀಲ ಪ್ರಭುಪಾದ:  (ನಗುತ್ತಾ) ಮಾಸ್ಕೊದಲ್ಲಿ ಅವರು ಕನಿಷ್ಠಪಕ್ಷ ಸಜ್ಜನರಾಗಿದ್ದಾರೆ ಎನ್ನುವುದನ್ನು ನಾನು ಹೇಳಬೇಕು. ಅವರು ಧರ್ಮವನ್ನು ಅರ್ಥಮಾಡಿಕೊಳ್ಳಲಾರರು. ಅದರಿಂದಾಗಿ ಅವರು, “ನಾವು ನಂಬುವುದಿಲ್ಲ” ಎಂದು ಹೇಳುತ್ತಾರೆ. ಆದರೆ ಈ ಇತರ ಧೂರ್ತರು ಹೇಳುತ್ತಾರೆ, “ಹೌದು, ನಾವು ಧಾರ್ಮಿಕರು. ದೇವರಲ್ಲಿ ನಮಗೆ ನಂಬಿಕೆಯಿದೆ.” ಇಷ್ಟಾಗಿಯೂ ಅವರು ಅತ್ಯಂತ ಅಧಾರ್ಮಿಕವಾದ ಕೆಲಸಗಳನ್ನು ಮಾಡುತ್ತಾರೆ. ಅನೇಕ ಸಲ ನಾನು ಕ್ರೈಸ್ತರನ್ನು ಕೇಳಿದ್ದೇನೆ, “ನಿಮ್ಮ ಬೈಬಲ್‌ ಹೇಳುತ್ತದೆ, `ನೀನು ಕೊಲ್ಲಬೇಡ’ ನೀವು ಏಕೆ ಕೊಲ್ಲುತ್ತಿದ್ದೀರಿ?” ಅವರು ಯಾವುದೇ ತೃಪ್ತಿಕರವಾದ ಉತ್ತರವನ್ನು ಕೊಡಲಾರರು. ಅಲ್ಲಿ ಸ್ಪಷ್ಟವಾಗಿ ಹೇಳಿದೆ, “ನೀನು ಕೊಲ್ಲಬೇಡ” – ಆದರೆ ಅವರು ಕಸಾಯಿಖಾನೆಗಳನ್ನು ನಡೆಸುತ್ತಿದ್ದಾರೆ. ಇದು ಏನು?

ಈ ಲೇಖನ ಶೇರ್ ಮಾಡಿ

ಹೊಸ ಪೋಸ್ಟ್‌ಗಳು