ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಫೆಬ್ರವರಿ 2, 1977ರಂದು ಭುವನೇಶ್ವರದಲ್ಲಿ ಮಾಡಿದ ಉಪನ್ಯಾಸ.
ಇಂದು ನಿತ್ಯಾನಂದ ಪ್ರಭುಗಳು ಆವಿರ್ಭವಿಸಿದ ದಿನ. ನಿತ್ಯಾನಂದ ಪ್ರಭುಗಳೇ ಬಲರಾಮ, ಬಲದೇವ-ತತ್ತ್ವ. ನರೋತ್ತಮ ದಾಸ ಠಾಕುರ ಹಾಡಿದ್ದಾರೆ, ವ್ರಜೇಂದ್ರ ನಂದನ ಯೇಯಿ, ಶಚಿ ಸುತ ಹೈಲ ಸೇಯಿ, ಬಲರಾಮ ಹೈಲ ನಿತಾಯ್ : `ನಂದ ಮಹಾರಾಜನ ಮಗನಾಗಿ ಹುಟ್ಟಿದವನು ಶಚೀದೇವಿಯ ಸುತನಾಗಿ ಆವಿರ್ಭಸಿದ್ದಾನೆ.’ ಶ್ರೀ ಚೈತನ್ಯ ಮಹಾಪ್ರಭುಗಳ ತಾಯಿಯ ಹೆಸರು ಶಚೀದೇವಿ. ಆದುದರಿಂದ ಕೃಷ್ಣನು ಶ್ರೀ ಚೈತನ್ಯ ಮಹಾಪ್ರಭು ಮತ್ತು ಬಲರಾಮನು ನಿತ್ಯಾನಂದ ಪ್ರಭು.
ವೈದಿಕ ಸಾಹಿತ್ಯದಲ್ಲಿ ಹೇಳಿದೆ, ನಾಯಂ ಆತ್ಮಾ ಬಲ ಹೀನೇನ ಲಭ್ಯಃ `ಬಲವಿಲ್ಲದೆ ಪರಮ ಸತ್ಯವನ್ನು ಅರ್ಥಮಾಡಿಕೊಳ್ಳುವುದು ಯಾರಿಗೂ ಸಾಧ್ಯವಿಲ್ಲ.’ ಬಲ ಎಂದರೆ ಶಕ್ತಿ. ಮೂರ್ಖ ತತ್ತ್ವಜ್ಞಾನಿಗಳು ಕೆಲವು ಸಂದರ್ಭಗಳಲ್ಲಿ ಬಲ ಎಂದರೆ ದೈಹಿಕ ಶಕ್ತಿ ಎಂದು ಹೇಳುತ್ತಾರೆ. `ನೀವು ದೈಹಿಕವಾಗಿ ಶಕ್ತಿ ಸಾಮರ್ಥ್ಯಗಳನ್ನು ಹೊಂದಿಲ್ಲದಿದ್ದರೆ, ನೀವು ಆಧ್ಯಾತ್ಮಿಕ ಮುಕ್ತಿ ಹೊಂದುವುದು ಸಾಧ್ಯವಿಲ್ಲ. ನೀವು ತುಂಬ ಶಕ್ತಿಶಾಲಿಯಾಗಿರಬೇಕು, ಮಾಂಸ ಭಕ್ಷಿಸಿ ಮತ್ತು ಹೋರಾಡಿ, ಆಗ ನಿಮಗೆ ಮುಂದಿನ ಜನ್ಮದಲ್ಲಿ ಆಧ್ಯಾತ್ಮಿಕ ಜೀವನ ಲಭ್ಯವಾಗುತ್ತದೆ.’ ಎಂಬ ಸಿದ್ಧಾಂತವನ್ನು ಬೋಧಿಸುತ್ತಾರೆ.
ಇಲ್ಲ. ಪರಮ ಸತ್ಯವನ್ನು ಅರ್ಥಮಾಡಿಕೊಳ್ಳಲು ಅಗತ್ಯವಾದ ಶಕ್ತಿ – ಬಲ – ಭಿನ್ನವಾದುದು. ಇದು ಆಧ್ಯಾತ್ಮಿಕ ಶಕ್ತಿ. ಪ್ರಸ್ತುತ ಪರಿಸ್ಥಿತಿಯ ಸಮಸ್ಯೆ ಏನೆಂದರೆ, ಆಧ್ಯಾತ್ಮಿಕ ಬಲದಿಂದ ನಾವು ಮುಂದುವರಿಯುತ್ತಿದ್ದರೂ ಜನರಿಗೆ ಆಧ್ಯಾತ್ಮಿಕ ಶಕ್ತಿಯ ಬಗೆಗೆ ಮಾಹಿತಿ ಇಲ್ಲ. ಅವರು ಲೌಕಿಕ ಶಕ್ತಿ ಕುರಿತು ಯೋಚಿಸುತ್ತಾರೆ.
ಮಾಯೆಯ ಪ್ರಭಾವ
ಅದನ್ನು ನರೋತ್ತಮ ಠಾಕುರರ ಹಾಡಿನಲ್ಲಿ ವ್ಯಕ್ತಪಡಿಸಲಾಗಿದೆ: ಅಹಂಕಾರೇ ಮತ್ತ ಹೋಯ್‌ಯಾ, ನಿತಾಯ್-ಪದ ಪಾಸರಿಯಾ, ಅಸತ್ಯೇರೇ ಸತ್ಯ ಕೋರಿ ಮಾನಿ. ಬಲ ಎಂದರೆ ದೈಹಿಕ ಶಕ್ತಿ ಎಂದು ತಪ್ಪಾಗಿ ಯೋಚಿಸಲು ಅಹಂಕಾರ, ಹುಸಿ ಅಹಂ ಕಾರಣ. ಮಾಯೆಯ ಪ್ರಭಾವದಿಂದ ಜನರು ಯೋಚಿಸುತ್ತಾರೆ, `ನಾವು ಸ್ವತಂತ್ರರು. ನಮಗಿಷ್ಟವಾದುದನ್ನು ನಾವು ಮಾಡಬಹುದು. ಇದನ್ನೇ ಅಹಂಕಾರ-ವಿಮೂಢಾತ್ಮಾ ಎಂದು ಕರೆಯುವರು. ಹುಸಿ ನೆಪ, ಒಣ ಪ್ರತಿಷ್ಠೆಯಲ್ಲಿ ಎಲ್ಲರೂ ಯೋಚಿಸುತ್ತಿದ್ದಾರೆ, `ನಾವು ಸ್ವತಂತ್ರರು. ಲೌಕಿಕ ಹೊಂದಾಣಿಕೆ ಮೂಲಕ ನಾವು ಬದುಕಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.’
ಅದೇ ಲೌಕಿಕ ರೋಗ – ಅಹಂಕಾರ-ವಿಮೂಢಾತ್ಮಾ. ತಬ್ಬಿಬ್ಬಾಗಿ, ಗೊಂದಲಕ್ಕೊಳಗಾಗಿ ಜನರು ನಿಜವಾದ ಬಲ ಆಧ್ಯಾತ್ಮಿಕ ಶಕ್ತಿ ಎಂದು ಅರ್ಥಮಾಡಿಕೊಳ್ಳುವುದಿಲ್ಲ. ನಾವು ದಿನನಿತ್ಯ ನೋಡುತ್ತೇವೆ, ವ್ಯಕ್ತಿಯು ಶಕ್ತಿಶಾಲಿಯಾಗಿ, ಪ್ರಬಲನಾಗಿ, ಒಳ್ಳೆಯ ಮಿದುಳು ಹೊಂದಿ, ಅತ್ಯುತ್ತಮ ವಿಜ್ಞಾನಿಯಾಗಿರಬಹುದು – ಆದರೆ ಆ ವ್ಯಕ್ತಿಯ ನಿಜವಾದ ಬಲವೇನು? ಶಕ್ತಿಯು ಆತ್ಮ. ಆತ್ಮ ಅಥವಾ ಜೀವವು ದೇಹದಿಂದ ಹೊರಗೆ ಹೋದ ಕೂಡಲೇ, ಬುದ್ಧಿ, ಶಕ್ತಿ – ಅನೇಕವು – ಅವು ಏನೂ ಅಲ್ಲವಾಗಿಬಿಡುತ್ತವೆ.
ಬದುಕಿದ ಮನುಷ್ಯ ಮತ್ತು ಸತ್ತ ವ್ಯಕ್ತಿಯ ನಡುವಣ ವ್ಯತ್ಯಾಸ ಅದೇ. ಜೀವಂತ ವ್ಯಕ್ತಿ ಅತ್ಯಂತ ಪ್ರಬಲನಾಗಿದ್ದು ಒಳ್ಳೆಯ ಸ್ಥಾನದಲ್ಲಿರಬಹುದು. ಆದರೆ, ಸತ್ತ ಕೂಡಲೇ ಅವನು ನೆಲದ ಮೇಲೆ ಮಲಗಿರುತ್ತಾನೆ. ನೀವು ಅವನ ಮುಖಕ್ಕೆ ಒದೆಯಿರಿ, ಅವನು ಪ್ರತಿಭಟಿಸುವುದಿಲ್ಲ. ಹಾಗಾಗಿ ಶಕ್ತಿ ಎಲ್ಲಿದೆ? ಶಕ್ತಿ ಹೊರಟು ಹೋಗಿದೆ. ಅದೇ ಆಧ್ಯಾತ್ಮಿಕ ಶಕ್ತಿ.
ಆಧ್ಯಾತ್ಮಿಕ ಶಕ್ತಿಯಿಂದ ದೇಹವು ಚಲಿಸುತ್ತದೆ. ನಿಮ್ಮ ಬಳಿ ಒಳ್ಳೆಯ ಕಾರ್ – ಮರ್ಸಿಡೀಸ್ ಅಥವಾ ರೋಲ್ಸ್ ರಾಯ್ಸ್. ಪೆಟ್ರೋಲ್ ಇಲ್ಲದಿದ್ದರೆ ಕಾರ್ ಹೇಗೆ ಚಲಿಸುತ್ತದೆ? ಅದು ಸಾಧ್ಯವಿಲ್ಲ. ಒಂದು ರೀತಿಯ ಸ್ಫೂರ್ತಿ, ಅಧ್ಯಾತ್ಮ ಬೇಕು -`ಪೆಟ್ರೋಲ್ ಸ್ಪಿರಿಟ್’.
ಆಧ್ಯಾತ್ಮಿಕ ಶಕ್ತಿ
ಅದೇ ರೀತಿ ನಿಜವಾದ ಬಲವೆಂದರೆ ಆಧ್ಯಾತ್ಮಿಕ ಶಕ್ತಿ. ಆ ಆಧ್ಯಾತ್ಮಿಕ ಶಕ್ತಿ ಬಲರಾಮ. ಆದುದರಿಂದ ನಾವು ಬಲರಾಮನ ಪಾದ ಕಮಲದಲ್ಲಿ ಆಶ್ರಯ ಪಡೆಯಬೇಕು. ಬಲರಾಮನೆಂದರೆ ಗುರು-ತತ್ತ್ವ. ಬಲರಾಮ ಗುರುವನ್ನು ಪ್ರತಿನಿಧಿಸುತ್ತಾನೆ. ಚೈತನ್ಯ ಮಹಾಪ್ರಭುವನ್ನು ಅರ್ಥಮಾಡಿಕೊಳ್ಳಬೇಕೆಂದರೆ, ಕೃಷ್ಣನನ್ನು ಅರ್ಥಮಾಡಿಕೊಳ್ಳಬೇಕೆಂದರೆ, ನಾವು ಬಲರಾಮನ ಆಶ್ರಯ ಪಡೆಯಬೇಕು.
ನಾಯಂ ಆತ್ಮಾ ಬಲಹೀನೇನ ಲಭ್ಯಃ ಈ ವೈದಿಕ ಆದೇಶದ ಅರ್ಥವೇನೆಂದರೆ, `ಬಲರಾಮನ ಕರುಣೆ, ಕೃಪೆ ಇಲ್ಲದಿದ್ದರೆ ನೀವು ನಿಮ್ಮ ಆಧ್ಯಾತ್ಮಿಕ ಗುರುತನ್ನು ಅರಿಯುವುದು ಸಾಧ್ಯವಿಲ್ಲ.’ ಬಲರಾಮನು ನಿತ್ಯಾನಂದ ಪ್ರಭುವಾಗಿ ಬರುತ್ತಾನೆ. ಆದುದರಿಂದ ನಾವು ನಿತ್ಯಾನಂದ ಪ್ರಭುವಿನ ಆಶ್ರಯ ಪಡೆಯಬೇಕು.
ನರೋತ್ತಮ ದಾಸ ಠಾಕುರರ ಹಾಡು ಹೀಗೆ ಆರಂಭವಾಗುತ್ತದೆ, ನಿತಾಯ್ ಪದ ಕಮಲ, ಕೋಟಿ ಚಂದ್ರ ಸುಶೀತಲ `ನಿತ್ಯಾನಂದರ ಪಾದ ಕಮಲವು ಕೋಟ್ಯಂತರ ಚಂದ್ರರಷ್ಟು ತಂಪಾಗಿರುತ್ತದೆ.’ ನಿತ್ಯಾನಂದ ಪ್ರಭುವಿನ ಆಶ್ರಯ ಪಡೆದರೆ ನಮಗೆ ಶಾಂತಿ ಲಭಿಸುತ್ತದೆ. ಉದಾಹರಣೆಗೆ, ಹಗಲಿನಲ್ಲಿ, ಮುಖ್ಯವಾಗಿ ಬೇಸಿಗೆಯಲ್ಲಿ, ಬಿಸಿಲಿನ ಬೇಗೆಯಿಂದ ನಾವು ಸುಸ್ತಾಗಿಬಿಡುತ್ತೇವೆ. ಆದರೆ, ಸಂಜೆ ವೇಳೆಗೆ, ಚಂದ್ರೋದಯವಾದ ಕೂಡಲೇ ನಮಗೆ ತೃಪ್ತಿಯಾಗುತ್ತದೆ. ಇಡೀ ದಿನದ ಶ್ರಮ ಮತ್ತು ಆಯಾಸ ಮಾಯವಾಗುತ್ತದೆ. ಒಂದು ಚಂದ್ರ ನಮಗೆ ಎಷ್ಟೊಂದು ಆನಂದ ನೀಡುತ್ತದೆ. ಮತ್ತು ನಿತ್ಯಾನಂದ ಪ್ರಭುಗಳ ಪಾದ ಕಮಲದ ನೆರಳು ಕೋಟ್ಯಂತರ ಚಂದ್ರರ ಕಿರಣಗಳಷ್ಟು ಆನಂದದಾಯಕ.
ನಮಗೆ ನಿಜವಾಗಿಯೂ ಮನಃಶಾಂತಿ ಬೇಕೆಂದರೆ, ನಿಜವಾಗಿಯೂ ಲೌಕಿಕ ಆಯಾಸದಿಂದ ಮುಕ್ತಿ ಬೇಕೆಂದರೆ ನಾವು ನಿತ್ಯಾನಂದ ಪ್ರಭುಗಳ ಆಶ್ರಯ ಪಡೆಯಬೇಕು. ನಿತ್ಯಾನಂದ ಪ್ರಭು ಶಕ್ತಿ, ಆಧ್ಯಾತ್ಮಿಕ ಶಕ್ತಿ. ಮತ್ತು ಆಧ್ಯಾತ್ಮಿಕ ಶಕ್ತಿ ಇಲ್ಲದಿದ್ದರೆ ನೀವು ಕೃಷ್ಣನತ್ತ ಹೋಗಲಾಗುವುದಿಲ್ಲ.
ನಾಯಂ ಆತ್ಮಾ ಪ್ರವಚನೇನ ಲಭ್ಯಃ `ನೀವು ಒಳ್ಳೆಯ ಉಪನ್ಯಾಸಕರೆಂದರೆ, ನೀವು ಕೃಷ್ಣನನ್ನು ಅರ್ಥಮಾಡಿಕೊಳ್ಳುವಿರೆಂದಲ್ಲ.’ ನ ಮೇಧಸಾ : `ಒಳ್ಳೆಯ ಮಿದುಳಿನಿಂದಲೂ’. ಉತ್ತಮ ಮಿದುಳಿದೆ, ಹಾಗಾಗಿ ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವೆಂದೇ? ಇಲ್ಲ. ನ ಬಹುನಾ ಶ್ರುತೇನ. ನೀವು ಒಳ್ಳೆಯ ವಿದ್ವಾಂಸರು, ವಿಶ್ವವಿದ್ಯಾಲಯದ ಪದವೀಧರರು, ಆದುದರಿಂದ ಕೃಷ್ಣನನ್ನು ಅರ್ಥಮಾಡಿಕೊಳ್ಳುತ್ತೇನೆಂದು ನೀವು ಭಾವಿಸುವಿರಾ? ಇಲ್ಲ. ಇದು ಸಾಧ್ಯವಿಲ್ಲ.
ನಮಗೆ ಆಧ್ಯಾತ್ಮಿಕ ಶಕ್ತಿ ಅತ್ಯಗತ್ಯ. ಆಧ್ಯಾತ್ಮಿಕ ಶಕ್ತಿಯ ಮೂಲ ಬಲರಾಮ, ಕೃಷ್ಣನ ಮೊದಲ ವಿಸ್ತರಣೆ, ಪ್ರಕಾಶ-ವಿಗ್ರಹ. ಕೃಷ್ಣನು ಬಲರಾಮನ ಮೂಲಕ ಪ್ರಕಟಗೊಳ್ಳುತ್ತಾನೆ. ಆದುದರಿಂದ ನಾವು ನಿತ್ಯಾನಂದ ಪ್ರಭುಗಳ ಆಶ್ರಯ ಪಡೆದುಕೊಳ್ಳಬೇಕು.
ಜೇ ಛಾಯಾಯ್ ಜಗತ ಜುರಾಯ್. ಇಡೀ ಜಗತ್ತು ಸಂಕಷ್ಟಪಡುತ್ತಿದೆ, ಆದರೆ ನಿಮಗೆ ಶಾಂತಿ ಬೇಕೆಂದರೆ ನಿತ್ಯಾನಂದ ಪ್ರಭುಗಳ ಆಶ್ರಯ ಪಡೆಯಿರಿ.
ಹೇನೋ ನಿತಾಯ್ ಬೀನೆ ಭಾಯ್, ರಾಧಾ ಕೃಷ್ಣ ಪಾಯ್ತೇ ನಾಯ್, ದೃಢ ಕೋರಿ ಧರೋ ನಿತಾಯ್ ಪಾಯ್. ನಮ್ಮ ಬದುಕಿನ ನಿಜವಾದ ಗುರಿ, ಉದ್ದೇಶವೆಂದರೆ ಭಗವದ್ಧಾಮಕ್ಕೆ ಮರಳಿ ಹೇಗೆ ರಾಧಾ-ಕೃಷ್ಣರ ಜೊತೆಗೂಡುವುದು ಎಂಬುದೇ ಆಗಿದೆ. ಅದೇ ಲೇಖಕರು ಮತ್ತೊಂದು ಹಾಡಿನಲ್ಲಿ ಹೇಳುತ್ತಾರೆ, ಮನುಷ್ಯ-ಜನಮ ಪಾಇಯಾ ರಾಧಾಕೃಷ್ಣ ನಾ ಭಜಿಯಾ, ಜಾನಿಯಾ, ಶುನಿಯಾ, ವಿಷ ಖಾಇನು. ರಾಧಾ-ಕೃಷ್ಣರ ಬಳಿಗೆ ಬರದಿದ್ದರೆ ನಿಮಗೆ ನಿಜವಾದ ಸಂತೋಷ ಸಿಗುವುದಿಲ್ಲ. ನಿಮಗೆ ನರ್ತಿಸಿ ಸಂತೋಷಿಸಬೇಕೆಂದಿದ್ದರೆ, ಏಕಾಂಗಿಯಾಗಿ ನರ್ತಿಸಬೇಡಿ, ಕೃಷ್ಣನೊಂದಿಗೆ ನರ್ತಿಸಿ.
ಆತಂಕ ಇಲ್ಲ
ಇಲ್ಲಿ, ನಮ್ಮ ದೇವಸ್ಥಾನದಲ್ಲಿಯಂತೆ. ನಾವೂ ಆಹಾರ ಸೇವಿಸುತ್ತೇವೆ. ಆದರೆ ಕೃಷ್ಣ ಸೇವಿಸಿ ಬಿಟ್ಟ ಉಳಿದ ತಿನಿಸನ್ನು ಸೇವಿಸುತ್ತೇವೆ. ಅದು ನಿಜವಾದ ಸಂತೋಷ. ನಾವು ಸೇವಿಸುವುದನ್ನು ನಿಲ್ಲಿಸಿಬಿಡುವುದಿಲ್ಲ. ನಾವು ಒಣ ತತ್ತ್ವಜ್ಞಾನಿಗಳಲ್ಲ. ಜಗತ್ತಿನಾದ್ಯಂತ ನಾವು ಕೃಷ್ಣ ಪ್ರಸಾದವನ್ನು ಸೇವಿಸುತ್ತಿದ್ದೇವೆ. ಹತ್ತು ಸಾವಿರ ಸ್ತ್ರೀ ಪುರುಷರಾದರೂ ಕೃಷ್ಣ ಪ್ರಸಾದವನ್ನು ಸ್ವೀಕರಿಸುತ್ತಿದ್ದಾರೆ, ಆದರೆ ನಮಗೆ ಆತಂಕವಿಲ್ಲ. ನಮಗೆ ತಳಮಳವಿಲ್ಲ. ಒಂದು ಪರಿವಾರವು ಕೆಲವೇ ಸದಸ್ಯರನ್ನು ಒಳಗೊಂಡಿರುತ್ತದೆ. ಹೇಗೆ ಸಂಸಾರವನ್ನು ನಿರ್ವಹಿಸುವುದೆಂಬ ಆತಂಕ ಅವರಿಗೆ. ನಾವು ಹತ್ತು ಸಾವಿರ ಸದಸ್ಯರಿರುವ ಕುಟುಂಬವನ್ನು ನಿರ್ವಹಿಸುತ್ತಿದ್ದೇವೆ. ಮತ್ತು ನಮಗೆ ಆತಂಕವಿಲ್ಲ. ಪ್ರಾಯೋಗಿಕವಾಗಿ ನೋಡಿ. ನಮಗೆ ತಳಮಳವಿಲ್ಲ. ಯೂರೋಪ್, ಅಮೆರಿಕಗಳಲ್ಲಿ ನಿರ್ವಹಣೆಗೆ ನಮಗೆ ಕೋಟ್ಯಂತರ ರೂಪಾಯಿಗಳು ಬೇಕು, ದುಬಾರಿಯದೇ. ಆದರೂ ನಮಗೆ ಆತಂಕವಿಲ್ಲ. ನಾವು ನಿತ್ಯಾಂದಪ್ರಭು, ಬಲರಾಮನ ಆಶ್ರಯದಲ್ಲಿರುವುದರಿಂದ ನಮಗೆ ಆತಂಕವಿಲ್ಲ.
ಲೌಕಿಕ ಬದುಕೆಂದರೆ ಆತಂಕ. ನೀವು ಪ್ರಾಪಂಚಿಕ ಬದುಕು ನಡೆಸಿದರೆ ಆತಂಕವನ್ನು ತಡೆಯಲಾಗದು. ಅದು ಪ್ರಹ್ಲಾದ ಮಹಾರಾಜನ ಸೂಚನೆ. ಅವನ ತಂದೆ ಅವನಿಗೆ ಕೇಳಿದರು: `ನನ್ನ ಪ್ರೀತಿಯ ಮಗನೇ, ನಿನ್ನ ಶಿಕ್ಷಕರಿಂದ ನೀನು ಕಲಿತ ಅತ್ಯುತ್ತಮವಾದುದು ಏನು?’
ಪ್ರಹ್ಲಾದ ಉತ್ತರಿಸಿದ: `ನನ್ನ ಪ್ರೀತಿಯ ಅಸುರವರ್ಯನೇ, ಇಡೀ ಮಾನವ ಸಮಾಜವು ಒಂದು ಕಾಯಿಲೆಯಿಂದಲಾದರೂ ನರಳುತ್ತಿದೆ – ಆತಂಕ, ತಳಮಳ.’
ಯಾರನ್ನಾದರೂ ಕೇಳಿ. ಸಣ್ಣ ಇರುವೆ ಮತ್ತು ಬೃಹತ್ ಗಾತ್ರದ ಆನೆ. ಅಮೆರಿಕದ ಅಧ್ಯಕ್ಷ ಅಥವಾ ಹಾದಿ ಬದಿಯ ಭಿಕ್ಷುಕ. ಅವರನ್ನು ಕೇಳಿ: `ನೀವು ಆತಂಕದಿಂದ ಮುಕ್ತರೇ’ ಎಂದು. ಯಾರೂ ಕೂಡ `ಹೌದು’ ಎನ್ನುವುದಿಲ್ಲ. `ನಾನು ಆತಂಕದಿಂದ ಇದ್ದೇನೆ’ ಎನ್ನುತ್ತಾರೆ. ಅದೇ ವಾಸ್ತವಾಂಶ. ಅವರಲ್ಲೇಕೆ ಆತಂಕ ತುಂಬಿದೆ? ಪ್ರಹ್ಲಾದ ಮಹಾರಾಜನು ಉತ್ತರಿಸಿದ್ದಾನೆ, ಸದಾ ಸಮುದ್ವಿಘ್ನಧಿಯಾಂ ಅಸದ್ ಗ್ರಹಾತ್ – `ಅವರು ಸಂತೋಷದಿಂದ ಇಲ್ಲ, ಏಕೆಂದರೆ ಅವರು ಅಸದ್ – ವಸ್ತು ಅಸ್ತಿತ್ವದಲ್ಲಿ ಇರಲಾರದ್ದನ್ನು ಅಂಗೀಕರಿಸಿದ್ದಾರೆ.’
ಎಲ್ಲವೂ ನಮ್ಮ ಬಳಿ ಇರುವುದೆಲ್ಲ ಅಸ್ತಿತ್ವದಲ್ಲಿ ಇರುವುದಿಲ್ಲ. ನಮ್ಮ ದೇಹ ಇರುವುದಿಲ್ಲ. ನಮ್ಮ ಪ್ರಸ್ತುತ ಅಸ್ತಿತ್ವಕ್ಕೆ ಇದೇ ಮುಖ್ಯ ವೇದಿಕೆಯಾಗಿದೆ. ಲೌಕಿಕ ಜಗತ್ತಿನಲ್ಲಿ ದೇಹವಿರುವವರೆಗೂ ನೀವು ಅಸ್ತಿತ್ವದಲ್ಲಿ ಇರುತ್ತೀರ. ಆದುದರಿಂದ ಪ್ರಹ್ಲಾದ ಮಹಾರಾಜ ಹೇಳಿದರು: `ಬದುಕಿನ ಸಮಸ್ಯೆಗೆ ನಿಜವಾದ ಪರಿಹಾರವೆಂದರೆ ಈ ಲೌಕಿಕ ಸ್ಥಿತಿಯಿಂದ ಹೊರಬರುವುದೇ ಆಗಿದೆ. ನನ್ನ ಅಭಿಪ್ರಾಯದಂತೆ, ಅದೇ ಅತ್ಯುತ್ತಮ.’
ವೈದಿಕ ಆದೇಶವೊಂದು ಹೇಳುತ್ತದೆ, ಅಸತೋ ಮಾ ಸದ್ಗಮಯ `ಈ ಅಸತ್‌ನಲ್ಲಿ ಬದುಕಿರಬೇಡಿ, ಈ ಲೌಕಿಕ ಸ್ಥಿತಿಯಲ್ಲಿ.’ ಸದ್ ಗಮಯ `ನಿಜವಾದ ಅಸ್ತಿತ್ವಕ್ಕೆ ಹೋಗಿ.’ ನಿಜವಾದ ಅಸ್ತಿತ್ವವೆಂದರೆ ಆಧ್ಯಾತ್ಮಿಕ ಜೀವನ. ನಮಗೆ ನಿಜವಾಗಿಯೂ ಬದುಕು, ಆನಂದದ ಬದುಕು ಬೇಕೆಂದರೆ, ನಾವು ಲೌಕಿಕ ಅಸ್ತಿತ್ವದಿಂದ ಹೊರಬರಬೇಕು. ಅದು ಪ್ರಹ್ಲಾದ ಮಹಾರಾಜನ ಸೂಚನೆ.’
ಸಮುದ್ವಘ್ನ ದಿಯಾಂ. ಮತ್ತು ನೀವು ಲೌಕಿಕ ಅಸ್ತಿತ್ವದಲ್ಲಿಯೇ ಉಳಿದರೆ, ನೀವು ಸ್ವಲ್ಪ ಆತಂಕ ಅನುಭವಿಸಬೇಕು. ನಿಮಗೆ ವಿನಾಯಿತಿ ಇಲ್ಲ. ಆದುದರಿಂದ ಪ್ರಹ್ಲಾದ ಮಹಾರಾಜ ಸಲಹೆ ನೀಡುತ್ತಾನೆ, ಹಿತ್ವಾತ್ಮ-ಪಾತಂ ಗೃಹಂ ಅಂಧ-ಕೂಪಂ ವನಂ ಗತೋ ಯದ್ ಹರಿಂ ಆಶ್ರಯೇತ. ವಾಸ್ತವವಾದ ಸಮಸ್ಯೆಯೆಂದರೆ ಆತಂಕ. ನೀವು ಲೌಕಿಕ ಅಸ್ತಿತ್ವದಲ್ಲಿ ಇರುವವರೆಗೂ ಆತಂಕ ಮುಂದುವರಿಯುತ್ತದೆ. ಆದುದರಿಂದ ಲೌಕಿಕ ಅಸ್ತಿತ್ವದಿಂದ ಹೊರಬರುವುದೇ ನಿಜವಾದ ಬದುಕು.
ಲೌಕಿಕ ನಾಗರಿಕತೆ
ಆತ್ಮ-ಪಾತಂ ಎಂದರೆ `ಆತ್ಮದ ಹತ್ಯೆ’. ಲೌಕಿಕ ನಾಗರಿಕತೆಯು ಆತ್ಮವನ್ನು ಕೊಲ್ಲುತ್ತಿದೆ. ಅವರಿಗೆ ಆತ್ಮದ ಬಗೆಗೆ ಮಾಹಿತಿಯೇ ಇಲ್ಲ. ಅವರಿಗೆ ಶಾಂತಿಯುತವಾಗಿರುವುದು ಮತ್ತು ಆನಂದದಿಂದ ಇರುವುದು ಹೇಗೆ ಎಂಬುದೇ ಗೊತ್ತಿಲ್ಲ. ಅವರು ಬಾಹ್ಯ ಲೌಕಿಕ ಶಕ್ತಿಯ ಮೂಲಕ ಶಾಂತಿಯಿಂದಿರಲು ಪ್ರಯತ್ನಿಸುತ್ತಿದ್ದಾರೆ. ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟುವುದರಿಂದ ತಾವು ಶಾಂತಿಯಿಂದ ಇರಬಹುದೆಂದು ಅವರು ಭಾವಿಸುತ್ತಾರೆ.
ಇಲ್ಲಿ, ಭುವನೇಶ್ವರದಲ್ಲಿ ಅವರು ಅದನ್ನು ಮಾಡುತ್ತಿದ್ದಾರೆ. ಅವರು ಬೃಹತ್ ರಸ್ತೆಗಳನ್ನು ನಿರ್ಮಿಸಿ ಕಾರುಗಳಲ್ಲಿ ಸಂಚರಿಸುತ್ತಿದ್ದಾರೆ. ಇದು ನಾಗರಿಕತೆಯ ಮುನ್ನಡೆ ಎಂದು ಅವರು ಭಾವಿಸಿದ್ದಾರೆ. ಇಲ್ಲ, ಇದು ನಾಗರಿಕತೆಯ ಪ್ರಗತಿಯಲ್ಲ. ಇದು ಅವರ ಆತಂಕವನ್ನು ಹೆಚ್ಚಿಸುತ್ತಿದೆ. ಈ ತಳಮಳಕ್ಕೆ ಪರಿಹಾರವಿಲ್ಲ.
ಮೊದಲೆಲ್ಲ ವಿಶ್ವವಿದ್ಯಾಲಯ ಇರಲಿಲ್ಲ. ವಿಶ್ವವಿದ್ಯಾಲಯವು ಕುಟೀರದಲ್ಲಿತ್ತು. ವ್ಯಾಸದೇವರು ಶ್ರೀಮದ್ ಭಾಗವತ ಮತ್ತು ಇತರ ಎಲ್ಲ ಪುರಾಣಗಳನ್ನು ಕುಟೀರವೊಂದರಲ್ಲಿಯೇ ಬರೆದದ್ದು. ಅದೇ ವಿಶ್ವವಿದ್ಯಾಲಯವಾಗಿತ್ತು. ವ್ಯಾಸದೇವ ನೀಡಿರುವಂತಹ ಸಾಹಿತ್ಯವನ್ನು ಯಾರು ಸೃಷ್ಟಿಸಬಲ್ಲರು? ಯಾವುದೇ ದೃಷ್ಟಿಕೋನದಿಂದ – ಸಾಹಿತ್ಯದ ನೋಟ, ತತ್ತ್ವದ ದೃಷ್ಟಿಯಿಂದ – ನೋಡಿದರೂ ಅವರು ಬರೆದಿರುವುದೆಲ್ಲ ಪರಿಪೂರ್ಣ: ಮಹಾಭಾರತ, ಪುರಾಣಗಳು, ವೇದಾಂತ-ಸೂತ್ರ…
ವಿಶ್ವವಿದ್ಯಾಲಯಗಳ ಅಗತ್ಯವಿರಲಿಲ್ಲ. ಅವರ ಬರವಣಿಗೆಗೆ ಅಗತ್ಯವಾದುದು ನಿಚ್ಚಳ, ಸ್ಪಷ್ಟ ಮಿದುಳು, ಅದನ್ನು ಗಳಿಸಿದ್ದು ಬ್ರಾಹ್ಮಣ ಗುಣಗಳಿಂದ – ಶಾಂತಿ, ಸ್ವಯಂ ನಿಯಂತ್ರಣ, ತಪಸ್ಯೆ, ಶುದ್ಧತೆ, ತಾಳ್ಮೆ, ಪ್ರಾಮಾಣಿಕತೆ, ಜ್ಞಾನ, ವಿಜ್ಞಾನ ಮತ್ತು ಧಾರ್ಮಿಕತೆ. ಈ ಗುಣಗಳನ್ನು ಕಲಿಸುವ ಶಿಕ್ಷಣ ಈಗೆಲ್ಲಿದೆ? ತಾಂತ್ರಿಕ ಶಿಕ್ಷಣ – ನೀವು ಹೇಗೆ ಚೆನ್ನಾಗಿ ಸುತ್ತಿಗೆಯಿಂದ ಬಡಿಯೋದು – ಬದುಕಿನ ಸಮಸ್ಯೆಯನ್ನು ಪರಿಹರಿಸಲಾರವು.
ಆದುದರಿಂದ ಬದುಕಿನ ಸಮಸ್ಯೆಗೆ ನಿಜವಾದ ಪರಿಹಾರಬೇಕೆಂದರೆ, ನಮ್ಮ ಮೊದಲ ಕರ್ತವ್ಯ ಶ್ರೀನಿತ್ಯಾನಂದರ ಚರಣ ಕಮಲದಲ್ಲಿ ಆಶ್ರಯ ಪಡೆಯುವುದು. ಆಗ ನಾವು ಸಂತೋಷದಿಂದ ಇರಬಹುದು. ಅವನ ಪಾದ ಕಮಲಗಳಿಂದ ಹೊರಹೊಮ್ಮುತ್ತಿರುವ ಚಂದ್ರ ಕಿರಣಗಳಿಂದ ನಾವು ಸಂತುಷ್ಟರಾಗಿ ನಮ್ಮೆಲ್ಲ ಆಯಾಸ ಮಾಯವಾಗುತ್ತದೆ.
ಸೇಯಿ ಸಂಬಂಧ ನಾಹಿ ಜಾರ್, ಬೃಥಾ ಜನ್ಮ ಗೇಲೋ ತಾರ್. ನಿಮಗೆ ನಿತ್ಯಾನಂದ ಪ್ರಭುಗಳೊಂದಿಗೆ ಏನೂ ಸಂಪರ್ಕವಿಲ್ಲದಿದ್ದರೆ, ನೀವು ಅನಗತ್ಯ ಕಾಲಹರಣ ಮಾಡುತ್ತಿದ್ದೀರಿ.
ಸೇ ಪಶು ಬೋಡೋ ದುರಾಚಾರ್. ಇಲ್ಲಿ ನರೋತ್ತಮ ದಾಸ ಠಾಕುರರು ಪ್ರಬಲವಾದ ಪದವನ್ನೇ ಬಳಸಿದ್ದಾರೆ. `ನಿತ್ಯಾನಂದ ಪ್ರಭುಗಳೊಂದಿಗೆ ಸಂಪರ್ಕ ಇಲ್ಲದವರು ಒಂದು ಪಶು.’ ಪಶುವಿಗೆ ಸಂತೋಷವೆಲ್ಲಿ ಸಿಗುತ್ತದೆ? ಅದು ಸಾಧ್ಯವಿಲ್ಲ. ಮರಿಯಾದಾಗಿನಿಂದಲೂ ನಾಯಿ ಆಹಾರಕ್ಕಾಗಿ ತಡಕಾಡುತ್ತದೆ. ಬೀದಿ ನಾಯಿಗೆ ಆಹಾರ ಸಿಗುವುದಿಲ್ಲ. ಯಜಮಾನನಿಲ್ಲದಿದ್ದರೆ ನಾಯಿ ಸಂತುಷ್ಟವಾಗಿರುವುದಿಲ್ಲ.
ಇತರ ಅನೇಕ ಜನರ ನಾಯಿಯಾಗುವುದಕ್ಕಿಂತ ನಿತ್ಯಾನಂದ ಪ್ರಭುಗಳ ನಾಯಿಯಾಗಿರುವುದು ಒಳ್ಳೆಯದು. ಆಗ ನಾವು ಸಂತೋಷದಿಂದ ಇರುತ್ತೇವೆ. ಪ್ರತಿಯೊಬ್ಬರೂ ನಾಯಿಯಂತೆ. ಪ್ರತಿಯೊಬ್ಬರೂ ಸೇವೆ ಸಲ್ಲಿಸಲು ಮಾಲಿಕನಿಗಾಗಿ, ಹುಡುಕುತ್ತಿರುತ್ತಾರೆ. ಆದರೆ ಯಾರೂ ಕೂಡ ಸಂತೃಪ್ತರಾಗಿರುವುದಿಲ್ಲ, ಏಕೆಂದರೆ ಅಂತಹವರು ಹುಸಿ ಮಾಲೀಕರಾಗಿರುತ್ತಾರೆ. ನೀವು ನಿಜವಾದ ಗುರು, ನಿತ್ಯಾನಂದ ಪ್ರಭುಗಳನ್ನು ಹೊಂದಿದರೆ ನೀವು ಖಂಡಿತ ಸಂತೋಷದಿಂದ ಇರಬಹುದು.
ಭಕ್ತಿ ವಿನೋದ ಠಾಕುರರು ಹಾಡಿದ್ದಾರೆ, ವೈಷ್ಣವ ಠಾಕುರ, ತೋಮಾರ ಕುಕ್ಕುರ, ಬೋಲಿಯಾ ಜಾನಹ ಮೋರೇ: `ನನ್ನ ಪ್ರೀತಿಯ ವೈಷ್ಣವ ಠಾಕುರ, ನನ್ನನ್ನು ನಿನ್ನ ನಾಯಿಯಾಗಿ ಸ್ವೀಕರಿಸುವ ಕೃಪೆ ಮಾಡು. ನಾನು ಈಗಾಗಲೇ ನಾಯಿ, ಆದರೆ ಮಾಯೆಯ ನಾಯಿ. ನಾನು ವೈಷ್ಣವನ ಶ್ವಾನವಲ್ಲ. ದಯೆಯಿಟ್ಟು ನನ್ನನ್ನು ಒಪ್ಪಿಕೋ.’ ನೀವು ನಿತ್ಯಾನಂದ ಪ್ರಭು, ಒಬ್ಬ ವೈಷ್ಣವ, ಅಥವಾ ಒಬ್ಬ ಗುರುವಿನ ನಾಯಿಯಾಗದಿದ್ದರೆ ನಿಮಗೆ ಸಂತೋಷ ಎಂಬುದಿಲ್ಲ. ನಿತಾಯ್ ನಾ ಬೋಲಿಲೋ ಮುಖೇ, ಮಜಿಲ ಸಂಸಾರ-ಸುಖೇ. ನಿತ್ಯಾನಂದ ಪ್ರಭುಗಳ ಜೊತೆ ಸಂಪರ್ಕ ಇಲ್ಲದವರು ಮತ್ತು ಯಾರು `ಜಯ ನಿತಾಯ್! ಜಯ ಗೌರ!’ ಎನ್ನುವುದಿಲ್ಲವೋ ಅವರು ಲೌಕಿಕ ಸುಖದಲ್ಲಿ ಮುಳುಗಿ ಹೋಗುತ್ತಾರೆ. ಮಜಿಲೋ ಸಂಸಾರ-ಸುಖೇ ಎಂದರೆ `ಮನುಷ್ಯನ ಮೇಲೆ ಸಮಾಜ, ಮೈತ್ರಿ ಮತ್ತು ಪ್ರೀತಿಯನ್ನು ದೈವಿಕವಾಗಿ ಅನುಗ್ರಹಿಸಿದೆ’ ಎಂದು ಚಿಂತಿಸುವುದೇ ಆಗಿದೆ. ಲೌಕಿಕವಾದಿ ಜನರು ಆ ರೀತಿ ಹೇಳುತ್ತಾರೆ. ಪುನರಪಿ ಜನನಂ ಪುನರಪಿ ಮರಣಂ ಕಾರಣ ಸಂಸಾರದಲ್ಲಿ ಸುಖ, ಸಂತೋಷ ಎಂಬುದಿರುವುದಿಲ್ಲ. ಆದರೆ ಲೌಕಿಕವಾದಿಯು ಲೌಕಿಕ ಅಸ್ತಿತ್ವದಿಂದ ಆಕರ್ಷಿತರಾಗುತ್ತಾನೆ.
ವಿದ್ಯಾ ಕುಲೇ ಕಿ ಕೋರಿಬೇ ತಾರ್. ವಿಶ್ವವಿದ್ಯಾಲಯ ಶಿಕ್ಷಣ ಅಥವಾ ದೊಡ್ಡ ಕುಟುಂಬದಲ್ಲಿ ಜನನದಿಂದ ಏನು ಸಹಾಯವಾದೀತು? ಇವು ಏನೂ ನೆರವಾಗದು. ನಾವು ಯಾಕೆ ಇಂತಹ ಹುಸಿ ಪರಿಹಾರಗಳನ್ನು ಒಪ್ಪಿಕೊಳ್ಳುತ್ತಿದ್ದೇವೆ?
ಅಹಂಕಾರೇ ಮತ್ತ ಹೋಯ, ನಿತಾಯ್ ಪಾದ ಪಾಸರಿಯಾ, ಅಸತ್ಯೇರೇ ಸತ್ಯ ಕೊರಿ ಮಾನಿ. ಒಣ ಪ್ರತಿಷ್ಠೆ ಮತ್ತು ಹುಸಿ ಅಹಂನಿಂದ ತಪ್ಪು ದಾರಿಗೆಳೆಯಲ್ಪಟ್ಟಿರುವ ನಾವು ಅಸ್ತಿತ್ವದಲ್ಲಿ ಉಳಿಯದ ದೇಹವನ್ನು ಒಪ್ಪಿಕೊಂಡಿದ್ದೇವೆ. ನಾವು ದೇಹವನ್ನು ವಾಸ್ತವ ಎಂದು ಸ್ವೀಕರಿಸಿದ್ದೇವೆ. ಆದರೆ ನಾವು ನಿತ್ಯಾನಂದ ಪ್ರಭುಗಳ ಆಶ್ರಯ ಪಡೆದರೆ ನಮಗೆ ಜ್ಞಾನೋದಯವಾಗುತ್ತದೆ.
ನಿತಾಯೇರ್ ಕೋರುಣ ಹಬೇ, ಬ್ರಜೇ ರಾಧಾ ಕೃಷ್ಣ ಪಾಬೇ, ಧರೋ ನಿತಾಯ್ ಚರಣ ದುಃಖಾನಿ. ಆದುದರಿಂದ ನೀವು ರಾಧಾ-ಕೃಷ್ಣರ ಜೊತೆಗೂಡಬೇಕೆಂದರೆ, ನೀವು ಮೊದಲು ಶ್ರೀ ನಿತ್ಯಾನಂದರ ಕೃಪೆಯನ್ನು ಪಡೆಯುವಲ್ಲಿ ಯಶಸ್ವಿಯಾಗಬೇಕು ಎಂದು ನರೋತ್ತಮ ದಾಸ ಠಾಕುರರು ಸಲಹೆ ಮಾಡಿದ್ದಾರೆ. ಇಂದು ನಿತ್ಯಾನಂದ ಪ್ರಭುಗಳು ಆವಿರ್ಭವಿಸಿದ ದಿನ. ನಿತ್ಯಾನಂದ ಪ್ರಭುಗಳ ಚರಣ ಕಮಲವನ್ನು ಇಂದಾದರೂ ನೆನಪು ಮಾಡಿಕೊಳ್ಳೋಣ. ಅದೇ ಬೇಕಾಗಿರುವುದು.
ನಿತಾಯೇರ್ ಚರಣ ಸತ್ಯ, ತಾಹಾರ ಸೇವಕ ನಿತ್ಯ. ವಾಸ್ತವವೆಂದರೆ ನಿತಾಯ್ ಚರಣ, ನಿತ್ಯಾನಂದ ಪ್ರಭುಗಳ ಚರಣ ಕಮಲ. ನಿತ್ಯಾನಂದ ಪ್ರಭುಗಳ ಸೇವಕರಾದವರು ಅಲೌಕಿಕರು. ನಿತ್ಯಾನಂದ ಪ್ರಭುಗಳ ನಾಯಿಯಾಗುವವರಿಗೆ ಶಾಶ್ವತ ಬದುಕು ಲಭಿಸುತ್ತದೆ. ನಾವು ಶಾಶ್ವತರು, ಆದರೆ ಲೌಕಿಕ ತಪ್ಪು ಗ್ರಹಿಕೆ ಕಾರಣ ನಾವು ಮಾಯೆಯ ನಿಯಂತ್ರಣಕ್ಕೆ ಒಳಗಾಗಿದ್ದೇವೆ. ಇದು ನಿಜವಾಗಿಯೂ ಕಷ್ಟಕರ, ಆದರೆ ಜನರಿಗೆ ಇದು ಗೊತ್ತಿಲ್ಲ. ನಾವು ಒಂದು ದೇಹದಿಂದ ಮತ್ತೊಂದಕ್ಕೆ ವಲಸೆ ಹೋಗುತ್ತಿದ್ದೇವೆ. ನಮ್ಮ ಮುಂದಿನ ದೇಹ ಯಾವುದೆಂಬುದರ ಬಗ್ಗೆ ಏನೂ ಖಾತರಿ ಇಲ್ಲ. ಆದರೆ ಜನರಿಗೆ ಈ ಬಗ್ಗೆ ವಿಜ್ಞಾನ ಗೊತ್ತಿಲ್ಲ, ಜ್ಞಾನವೂ ಇಲ್ಲ – ಭಗವದ್ಗೀತೆಯ ಮೊದಲ ಪಾಠ. ಅವರು ಮೂರ್ಖರು, ಅವರಿಗೆ ತಮ್ಮ ಶಿಕ್ಷಣ, ತಮ್ಮ ವಿಶ್ವವಿದ್ಯಾಲಯದ ಬಗೆಗೆ ಎಲ್ಲಿಲ್ಲದ ಹೆಮ್ಮೆ. ಇದು ನಡೆಯುತ್ತಲೇ ಇದೆ.
ನಿತಾಯ್ ಪದ ಸದಾ ಕೊರೋ ಆಶಾ. ಆದುದರಿಂದ ನಾವು ಸದಾ ನಿತ್ಯಾನಂದರ ಚರಣ ಕಮಲದ ಆಶ್ರಯದಲ್ಲಿರಬೇಕೆಂದು ಆಶಿಸಬೇಕು.
ನರೋತ್ತಮ ಬೋಡೋ ದುಃಖಿ. ನರೋತ್ತಮ ದಾಸ ಠಾಕುರ ಅವರು ಆಚಾರ್ಯರು, ಶ್ರೇಷ್ಠ ಆಧ್ಯಾತ್ಮಿಕ ಗುರು. ಆದರೆ ಅವರು ತಮ್ಮನ್ನು ತಾವು ಸಾಮಾನ್ಯನಂತೆ ಬಿಂಬಿಸುತ್ತಿದ್ದಾರೆ. ಅವರು ದುಃಖಿಯಲ್ಲ, ಅಸಂತೋಷಿಯಲ್ಲ, ಆದರೆ ದುಃಖಿಯಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಆಚಾರ್ಯರು ಎಂದಿಗೂ ದುಃಖಿಗಳಲ್ಲ. ಆದರೆ, ಸಾಮಾನ್ಯನ ಸ್ಥಾನ ಪಡೆದು ಹೇಳುತ್ತಾರೆ, `ನರೋತ್ತಮ ತುಂಬ ದುಃಖಿ.’ ನರೋತ್ತಮ ಎಂದರೆ `ಮಾನವರಲ್ಲಿ ಅತಿ ಶ್ರೇಷ್ಠ’ ಎಂದು ಅರ್ಥ. ಇಲ್ಲಿ, ಲೌಕಿಕ ಜಗತ್ತಿನಲ್ಲಿ, ಯಾರೂ ಕೂಡ ಮಾನವರಲ್ಲಿ ಉತ್ತಮರಾಗಬಹುದು – ಒಳ್ಳೆಯ ಸ್ಥಾನದಲ್ಲಿ – ಆದರೆ ಪ್ರತಿಯೊಬ್ಬರೂ ದುಃಖಿಗಳು, ಅಸಮಾಧಾನಿಗಳು.
ನಿತಾಯ್ ಮೋರೆ ಕೊರೋ ಸುಖಿ : `ನಿತ್ಯಾನಂದ ಮಾತ್ರ ನನ್ನನ್ನು ಸಂತೋಷಪಡಿಸಬಲ್ಲ. ಇಲ್ಲವಾದರೆ, ಸಂತೋಷದಿಂದಿರಲು ಸಾಧ್ಯವಿಲ್ಲ.’
ಪ್ರಭುಗಳನ್ನು ಪ್ರಾರ್ಥಿಸಬೇಕು: `ಕೃಪೆ ತೋರಿ ನಿನ್ನ ಆಶ್ರಯದಲ್ಲಿ ನನ್ನನ್ನು ಇಡು. ನಾನು ತುಂಬ ಅಸಮಾಧಾನಿಯಾಗಿದ್ದೇನೆ. ನಿನ್ನ ಪಾದಗಳ ಆಶ್ರಯದಲ್ಲಿ ನಾನು ಸಂತೋಷಿಯಾಗುತ್ತೇನೆ’. ಅದು ನಿಜವಾದ ಸಂತೋಷ.
ವಂದನೆಗಳು.