ದುರ್ಗಮವಾದ ದಟ್ಟ ಅರಣ್ಯ. ಮಟಮಟ ಮಧ್ಯಾಹ್ನದ ಪ್ರಖರವಾದ ಬಿಸಿಲು ಕೆಂಡದಂತೆ ಸುಡುತ್ತಿತ್ತು. ನೀರಿನ ಮುಖ ಕಾಣದ ಹೂಬಳ್ಳಿಗಳು ಸೊರಗಿ ಶುಷ್ಕವಾಗಿದ್ದವು. ದಾಹದಿಂದ ನಿತ್ರಾಣಗೊಂಡಿದ್ದ ಪಶುಪಕ್ಷಿಗಳು ಜಲಾಶಯಗಳನ್ನರಸುತ್ತಾ ದೂರ ಸಾಗಿದ್ದವು. ಎಲ್ಲೆಲ್ಲೂ ಸ್ಮಶಾನವೌನ. ಮಹಾರಾಜನೊಬ್ಬ ಇಂಥ ಸಂದರ್ಭದಲ್ಲಿ ಏಕಾಂಗಿಯಾಗಿ ಬಿಲ್ಲುಬಾಣಗಳೊಂದಿಗೆ ಕುದುರೆಯನ್ನೇರಿ ಬೇಟೆಯನ್ನರಸಿ ಸಾಗಿದ್ದ. ಬೆಳಗಿನಿಂದಲೂ ಮೃಗಗಳನ್ನು ಹುಡುಕುತ್ತಾ ಅಲೆದಾಡಿ ಹಸಿವು, ಬಾಯಾರಿಕೆಗಳಿಂದ ಬಳಲಿ ಬೆಂಡಾಗಿದ್ದ. ಎಲ್ಲಿಯಾದರೂ ನೀರು ಸಿಗುವುದೇ ಎಂದು ಹುಡುಕಿದ. ಆಗ ಅವನಿಗೆ ಒಂದು ಋಷ್ಯಾಶ್ರಮ ಗೋಚರಿಸಿತು.
ಆಶ್ರಮದಲ್ಲಿ ನೀರು ಸಿಗಬಹುದೆಂಬ ಎಣಿಕೆಯಿಂದ ರಾಜನು ಅಲ್ಲಿ ಹೋಗಲು, ಕಣ್ಣುಗಳನ್ನು ಮುಚ್ಚಿ ವೌನವಾಗಿ ಧ್ಯಾನ ಮಾಡುತ್ತಿದ್ದ ಋಷಿಯೊಬ್ಬನನ್ನು ಕಂಡ. ಆ ಮುನಿಯ ದೇಹ ಬಹು ಕಾಲದ ದುಷ್ಕರ ತಪದಿಂದಾಗಿ ಕೃಶವಾಗಿತ್ತು. ನೆರೆದು ಜಡೆಗಟ್ಟಿದ್ದ ನೀಳವಾದ ಅವನ ತಲೆಗೂದಲು ದೇಹವನ್ನೆಲ್ಲಾ ಆವರಿಸಿತ್ತು. ಮನಸ್ಸು, ಬುದ್ಧಿ, ಪ್ರಾಣೇಂದ್ರಿಯಗಳನ್ನು ನಿಗ್ರಹಿಸಿ ಪರಮಾತ್ಮನನ್ನು ಧ್ಯಾನಿಸುತ್ತಾ ಅವನು ಯೋಗ ಸಮಾಧಿಯಲ್ಲಿದ್ದ.
ರಾಜನಿಗೆ ಗಂಟಲು ಒಣಗಿಹೋಗುತ್ತಿತ್ತು. ನೀರು ಬೇಕೆಂದು ಆ ಮುನಿಯನ್ನು ಮತ್ತೆ ಮತ್ತೆ ಕೇಳಿದ. ಆದರೆ ಧ್ಯಾನಾಸಕ್ತ ಋಷಿಗೆ ಅವನ ಯಾವೊಂದು ಮಾತೂ ಕೇಳಿಸಲಿಲ್ಲ. ಹಸಿವು, ಬಾಯಾರಿಕೆಗಳಿಂದ ಮೊದಲೇ ಬಳಲಿದ್ದ ರಾಜ, ತಾನು ಇಷ್ಟು ಬೇಡಿದರೂ ತನಗೆ ಕುಳಿತುಕೊಳ್ಳಲು ಆಸನ, ಅರ್ಘ್ಯ, ಪಾನೀಯ ಮೃದುವಚನಗಳೇ ಮೊದಲಾಗಿ ಯಾವ ಸತ್ಕಾರವೂ ದೊರೆಯಲಿಲ್ಲವೆಂದು ಕುಪಿತನಾದ. ಅವಮಾನ ತಾಳದೇ ಸನಿಹದಲ್ಲೇ ಬಿದ್ದಿದ್ದ ಸತ್ತ ಹಾವೊಂದನ್ನು ಬಿಲ್ಲಿನಿಂದೆತ್ತಿ ಋಷಿಯ ಭುಜದ ಮೇಲೆ ಹಾಕಿ ಹೊರಟು ಹೋದ!
ಈ ಮಹಾರಾಜ ಬೇರಾರೂ ಅಲ್ಲ. ಆತನೇ ಕುರುವಂಶದ ಉತ್ತರಾಧಿ ಕಾರಿಯೂ, ಅರ್ಜುನನ ಮೊಮ್ಮಗನೂ, ಅಭಿಮನ್ಯುವಿನ ಮಗನೂ ಆದ ಪರೀಕ್ಷಿತ. ಗುರು, ಹಿರಿಯರಲ್ಲಿ ಅವನಿಗೆ ಪರಮಾದರವಿತ್ತು. ಉದ್ದೇಶಪೂರಿತನಾಗಿ ಅವನು ಈ ಕಾರ್ಯವನ್ನೆಸಗಿರಲಿಲ್ಲ. ಹಸಿವು, ಬಾಯಾರಿಕೆಗಳಿಂದ ಮನಃಸ್ವಾಸ್ಥ್ಯ ಕಳೆದುಕೊಂಡು ಕೋಪದಿಂದ ಹೀಗೆ ಮಾಡಿದ್ದ. ಆದರೆ ಭಗವಂತನ ನಿಯಮವೆಂಬಂತೆ ಈ ದುರ್ಘಟನೆ ನಡೆದು, ಲೋಕಕಲ್ಯಾಣಕ್ಕಾಗಿ ಮುಂದೆ ಆಗಬೇಕಿದ್ದ ಒಂದು ಮಹತ್ಕಾರ್ಯಕ್ಕೆ ನಾಂದಿ ಹಾಡಿತ್ತು. ಋಷಿ, ಆಂಗಿರಸ ವಂಶದ ಶಮೀಕ. ಈ ಋಷಿಗೆ ಶೃಂಗಿಯೆಂಬ ಮಗನಿದ್ದ. ತನ್ನ ಮಿತ್ರರೊಂದಿಗೆ ವಿಹರಿಸುತ್ತಿದ್ದ ಶೃಂಗಿ, ರಾಜನಿಂದ ತನ್ನ ತಂದೆಗಾದ ದುಷ್ಕೃತ್ಯದ ಬಗ್ಗೆ ಕೇಳಿ ಬಹಳ ಕೋಪಗೊಂಡ.
“ಅಯ್ಯೋ! ಕ್ಷತ್ರಿಯರ ಈ ಪಾಪಕೃತ್ಯಗಳನ್ನು ನೋಡಿ! ಸೇವಕರಂತಿರಬೇಕಾದ ಅವರು ತಮ್ಮ ಒಡೆಯರ ವಿರುದ್ಧ ಪಾಪಾಚರಣೆಗಳಲ್ಲಿ ತೊಡಗಿರುವರಲ್ಲ!” ಎಂದು ಶೃಂಗಿಯು ವಿಷಾದದಿಂದ ಉದ್ಗರಿಸಿದ. “ಖಂಡಿತವಾಗಿಯೂ ಕ್ಷತ್ರಿಯರು ಬಾಗಿಲು ಕಾಯುವ ನಾಯಿಗಳೆಂದೇ ನಿರೂಪಿತರಾಗಿದ್ದಾರೆ. ಆದರೆ ಬಾಗಿಲ ಬಳಿಯಿರಬೇಕಾದ ಅವರು ಹೇಗೆ ಮನೆಯೊಳಗೆ ನುಗ್ಗಿ ತಮ್ಮ ಯಜಮಾನನ ತಟ್ಟೆಯಲ್ಲಿಯೇ ಉಣ್ಣಲು ಸಾಧ್ಯ? ಭಗವಂತನೂ ಸಕಲರ ಪಾಲಕನೂ ಆದ ಶ್ರೀಕೃಷ್ಣನು ತನ್ನ ಧಾಮಕ್ಕೆ ಹೊರಟುಹೋದ! ಅಂಥ ರಕ್ಷಕನಿಲ್ಲದಿರಲು, ದಾರಿ ತಪ್ಪಿ ನಡೆಯುವ ಈ ಪಾಪಿಗಳು ವರ್ಧಿಸುತ್ತಿದ್ದಾರೆ. ಆದ್ದರಿಂದ ಇಂಥವರನ್ನು ನಾನೇ ಶಿಕ್ಷಿಸುತ್ತೇನೆ. ನೋಡಿ ನನ್ನ ಶಕ್ತಿಯನ್ನು!” ಹೀಗೆನ್ನುತ್ತಾ ಕೋಪದಿಂದ ಉದ್ರಿಕ್ತನಾದ ಶೃಂಗಿ, ತನ್ನ ಕಮಂಡಲದಲ್ಲಿದ್ದ ಕೌಶಿಕೀ ನದಿಯ ಪವಿತ್ರ ಜಲವನ್ನು ಸ್ಪರ್ಶಿಸುತ್ತಾ ವಜ್ರದಂತೆ ಕಠೋರವಾದ ಬಿರುನುಡಿಗಳಿಂದ ರಾಜನನ್ನು ಶಪಿಸಿದ. “ಇಂದಿನಿಂದ ಸರಿಯಾಗಿ ಏಳೆನೆಯ ದಿನದಂದು, ನನ್ನ ತಂದೆಗೆ ಅವಮಾನಮಾಡಿ ಶಿಷ್ಟಾಚಾರ ಲಂಘಿಸಿದ ಆ ಕುಲಗೇಡಿಯನ್ನು ತಕ್ಷಕನೆಂಬ ಸರ್ಪವು ಕಚ್ಚಿ ಕೊಲ್ಲುತ್ತದೆ!”
ಅನಂತರ ಶೃಂಗಿ ತನ್ನ ಆಶ್ರಮಕ್ಕೆ ಮರಳಿ ತನ್ನ ತಂದೆಯ ಕೊರಳಲ್ಲಿದ್ದ ಸರ್ಪವನ್ನು ಕಂಡು ಬಹುವಾಗಿ ದುಃಖಿಸಿದ. ಜೋರಾಗಿ ಅತ್ತ. ಅವನ ರೋದನ ಕೇಳಿ ಎಚ್ಚರಗೊಂಡ ಶಮೀಕ ಋಷಿ ನಿಧಾನವಾಗಿ ಕಣ್ತೆರೆದು ತನ್ನ ಕೊರಳ ಸುತ್ತಲಿದ್ದ ಹಾವನ್ನು ನೋಡಿ ಅದನ್ನು ದೂರ ಎಸೆದ.
“ಯಾಕಪ್ಪಾ ಅಳುತ್ತಿರುವೆ ಮಗು? ಯಾರಾದರೂ ನಿನಗೆ ತೊಂದರೆಯುಂಟು ಮಾಡಿದರೇ?” ವಾತ್ಸಲ್ಯದಿಂದ ಕೇಳಿದ ಋಷಿ.
ನಡೆದ ವಿಚಾರವನ್ನು ಅಳುತ್ತಲೇ ವಿವರಿಸಿದ ಶೃಂಗಿ. ಇದನ್ನು ಕೇಳಿ ಶಮೀಕನಿಗೆ ಬಹಳ ಖೇದವಾಯಿತು. “ಛೆ! ಎಂಥ ನೀಚಕಾರ್ಯ ಮಾಡಿದೆ ಮಗು! ಅಲ್ಪಾಪರಾಧಕ್ಕೆ ಘೋರ ಶಿಕ್ಷೆ ವಿಧಿಸಿದಂತಾಯಿತು! ನಿನ್ನದು ಅಪಕ್ವ ಬುದ್ಧಿ. ರಾಜನ ಬಗ್ಗೆ ನಿನಗೇನು ತಿಳಿವಳಿಕೆ ಇದೆ? ಪ್ರಜಾಪಾಲನೆ ಮಾಡುವ ರಾಜ ದೇವೋತ್ತಮ ಪುರುಷನ ಪ್ರತಿನಿಧಿ . ಸಾಮಾನ್ಯ ವ್ಯಕ್ತಿಯೊಂದಿಗೆ ಅವನನ್ನು ಹೋಲಿಸುವುದು ತರವಲ್ಲ. ರಾಜನ ತೇಜಸ್ಸಿನಿಂದ ರಕ್ಷಿತರಾದ ಜನರು ಭೀತಿರಹಿತರಾಗಿ ಬಾಳಿ ಸಕಲ ಸಮೃದ್ಧಿಯನ್ನೂ ಪಡೆಯುತ್ತಾರೆ. ಅರಾಜಕವಾದ ದೇಶದಲ್ಲಿ ವೇದವಿಧಿ ಗಳು ನಾಶವಾಗಿ ನಾಗರೀಕತೆಯೇ ಹಾಳಾಗುತ್ತದೆ. ವರ್ಣಸಂಕರ ಹೆಚ್ಚುತ್ತದೆ. ಕಳ್ಳಕಾಕರು ಮುತ್ತಿ ದೇಶದ ಸಂಪತ್ತನ್ನು ಲೂಟಿ ಮಾಡುತ್ತಾರೆ. ಪಶುಗಳಿಗೂ ಸ್ತ್ರೀಯರಿಗೂ ರಕ್ಷಣೆಯಿಲ್ಲದಂತಾಗುತ್ತದೆ. ಅವಿವೇಕದಿಂದ ನೀನು ಪರೀಕ್ಷಿತನನ್ನು ಶಪಿಸಿಬಿಟ್ಟೆಯಲ್ಲ! ಭಗವಂತನ ಭಕ್ತರಲ್ಲಿ ಅವನು ಅಗ್ರಗಣ್ಯ. ಕ್ಷುಧಾತೃಷೆಗಳಿಂದ ಬಳಲಿ ಹೀಗೆ ಮಾಡಿದ. ಅವನು ಖಂಡಿತವಾಗಿಯೂ ಶಿಕ್ಷಾರ್ಹನಲ್ಲ” ಎಂದು ಋಷಿಯು ಮಗನ ಕೃತ್ಯವನ್ನು ವಿರೋಧಿಸಿದ. ಪಾಪರಹಿತನಾಗಿದ್ದ ರಾಜನನ್ನು ಶಪಿಸಿ ಪಾಪಕಾರ್ಯವೆಸಗಿದ್ದ ತನ್ನ ಅಪಕ್ವಬುದ್ಧಿಯ ಮಗನನ್ನು ಕ್ಷಮಿಸಬೇಕೆಂದು ಸರ್ವವ್ಯಾಪಿಯಾದ ಭಗವಂತನಲ್ಲಿ ಪ್ರಾರ್ಥಿಸಿಕೊಂಡ.
ರಾಜಾ ಪರೀಕ್ಷಿತನ ಜೀವನವೆಲ್ಲಾ ಇಂಥ ರೋಚಕ ಘಟನೆಗಳಿಂದ ತುಂಬಿಹೋಗಿತ್ತು. ಹುಟ್ಟಿದಾರಭ್ಯ ಸಾಯುವವರೆಗೂ ಅವನ ಬದುಕಿನಲ್ಲಿ ಅದ್ಭುತಗಳೇ ನಡೆದುಹೋಗಿದ್ದವು. ಅವನು ಜನಿಸಿದ್ದೇ ಒಂದು ಪವಾಡವಾಗಿತ್ತು.
ಜಗತ್ತಿನ ರಾಜವಂಶಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ಕುರುವಂಶ. ಜಗದ್ವಿಖ್ಯಾತ ಕೌರವ-ಪಾಂಡವರುದಿಸಿದ ಮಹಾ ಸದ್ವಂಶ. ಪರಮ ಪುರುಷನ ಶಕ್ತ್ಯಾವೆಷಾವತಾರವಾದ ಭಗವಾನ್ ವೇದವ್ಯಾಸರಿಂದ ಬೆಳೆದು ಬೆಳಗಿದ ದಿವ್ಯ ವಂಶ. ಪರಮಾತ್ಮನಿಗೆ ಪ್ರಿಯನಾಗಿ, ಖಾಂಡವವನದಹನ, ಮತ್ಸ್ಯಯಂತ್ರಭೇದನ, ಪಾಶುಪತಾಸ್ತ್ರಪ್ರಾಪ್ತಿ, ಇಂದ್ರಲೋಕ ದಿವ್ಯಲೋಕಗಳಿಗೆ ಪಯಣ, ದಿವ್ಯಾಸ್ತ್ರಗಳ ಸಿದ್ಧಿ ಮೊದಲಾದ ಅಪ್ರತಿಮ ಸಾಹಸಗಳನ್ನು ಮೆರೆದು, ಪಾರ್ಥ, ಫಲ್ಗುಣ, ಕಿರೀಟಿ, ಮುಂತಾಗಿ ಬಿರುದಾಂಕಿತನಾದ ಮಹಾವೀರ ಅರ್ಜುನನಿಂದ ಖ್ಯಾತಿವೆತ್ತ ವೀರವಂಶ. ಈ ಅರ್ಜುನನಿಗೆ ಶ್ರೀಕೃಷ್ಣನ ತಂಗಿಯಾದ ಸುಭದ್ರೆಯಲ್ಲಿ ಹುಟ್ಟಿದ ಪುತ್ರರತ್ನ ಅಭಿಮನ್ಯು. ಪಾಂಡವ ಕೌರವರಿಗೆ ರಾಜ್ಯ ಹಂಚಿಕೆಯ ವಿಷಯವಾಗಿ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ದ್ರೋಣರು ರಚಿಸಿದ್ದ ಚಕ್ರವ್ಯೂಹವನ್ನು ತನ್ನ ಹದಿನಾರನೇ ವಯಸ್ಸಿನಲ್ಲೇ ಭೇದಿಸಿ ವೀರಮರಣವನ್ನಪ್ಪಿದ ಗಂಡುಗಲಿ ಈ ಅಭಿಮನ್ಯು. ಅವನು ಮಡಿದ ಸಮಯದಲ್ಲಿ ವಿರಾಟರಾಜನ ಪುತ್ರಿಯಾಗಿದ್ದ ಅವನ ಪತ್ನಿ ಉತ್ತರೆ ಗರ್ಭಿಣಿಯಾಗಿದ್ದಳು.
ಕುರುಕ್ಷೇತ್ರ ಮಹಾಯುದ್ಧ ಹದಿನೆಂಟು ದಿನ ನಡೆದು, ಕುರುವಂಶದ ಪ್ರಮುಖ ವೀರರನೇಕರ ಮರಣದೊಂದಿಗೆ ಅಂತ್ಯಗೊಂಡಿತು. ಹಾಗೆ ಮಡಿದ ಆ ವೀರರಲ್ಲಿ, ಪಾಂಡವರನ್ನು ಬಿಟ್ಟು ಅವರ ವಂಶದ ಎಲ್ಲರೂ ಪರಲೋಕ ಸೇರಿದ್ದರು. ಗುರು ದ್ರೋಣಾಚಾರ್ಯರ ಪುತ್ರ ಅಶ್ವತ್ಥಾಮನು ಪಾಂಡವರ ಪುತ್ರರನ್ನು ನಿದ್ರಿಸುತ್ತಿದ್ದಾಗಲೇ ಕೊಂದಿದ್ದನು. ಈ ಹೇಯ ಕೃತ್ಯದಿಂದ ಶ್ರೀಕೃಷ್ಣ ಮತ್ತು ಪಾರ್ಥರಿಂದ ದಂಡನೆಗೊಳಗಾಗಿದ್ದ.
ಅನಂತರ, ಪಾಂಡವರು ಶೋಕಭರಿತರಾಗಿ, ಸತ್ತುಹೋದ ತಮ್ಮ ಪುತ್ರರ ಅಂತಿಮ ಸಂಸ್ಕಾರ ನೆರವೇರಿಸಿದರು.
ಅಜಾತಶತ್ರು ಯುಧಿಷ್ಠಿರ, ಮೋಸದಿಂದ ತನ್ನ ದಾಯಾದಿಗಳು ಅಪಹರಿಸಿದ್ದ ರಾಜ್ಯವನ್ನು ಭಗವಂತನ ಕೃಪೆಯಿಂದ ಮರಳಿ ಪಡೆದ. ಶ್ರೀಕೃಷ್ಣನ ಪ್ರೇರಣೆಯಿಂದ ಮೂರು ಅಶ್ವಮೇಧಯಾಗಗಳನ್ನೂ ಮಾಡಿದ. ಇದರಿಂದ ಅವನ ಉಜ್ವಲ ಕೀರ್ತಿ ಇಂದ್ರನ ಕೀರ್ತಿಯಂತೆ ದಶದಿಕ್ಕುಗಳಲ್ಲೂ ಹರಡಿತು. ಅನಂತರ, ಶ್ರೀಕೃಷ್ಣ ಎಲ್ಲರಿಗೂ ಅಭಿನಂದಿಸಿ ದ್ವಾರಕೆಗೆ ಹೊರಡಲನುವಾದ. ತನ್ನ ರಥವನ್ನು ಹತ್ತುತ್ತಿರುವಂತೆಯೇ ಹೆಣ್ಣೊಬ್ಬಳ ಆರ್ತನಾದ ಅರಮನೆಯಿಂದ ಕೇಳಿ ಬಂತು! ಅಭಿಮನ್ಯುವಿನ ಪತ್ನಿ ಉತ್ತರೆಯ ರೋದನ ಧ್ವನಿಯಾಗಿತ್ತದು. ಭಯಭೀತಳಾಗಿ ಹೊರಗೋಡಿಬಂದ ಅವಳು ಭಗವಂತನನ್ನು ಶರಣುಹೊಕ್ಕಳು, “ದೇವದೇವ! ಪರಮಯೋಗಿಯೆ! ನನ್ನನ್ನು ಕಾಪಾಡು! ಈ ಜಗತ್ತಿನಲ್ಲಿ ನಿನ್ನ ಹೊರತು ಬೇರಾರೂ ನನ್ನನ್ನು ಕಾಪಾಡಲಾರರು. ಕೆಂಡದಂತೆ ತೀಕ್ಷ್ಣವಾದ ಬಾಣವೊಂದು ನನ್ನ ಬೆನ್ನಟ್ಟಿ ಬರುತ್ತಿದೆ, ಪ್ರಭು! ಅದು ನನ್ನನ್ನು ಸುಡುವುದಾದರೆ ಸುಡಲಿ, ಆದರೆ ನನ್ನ ಗರ್ಭವನ್ನೇನೂ ಮಾಡದಿರಲಿ!”
ಭಕ್ತವತ್ಸಲನಾದ ಭಗವಂತ ಉತ್ತರೆಯ ಮಾತುಗಳನ್ನಾಲಿಸಿದ. ಪಾಂಡವ ವಂಶವನ್ನು ನಿರ್ಮೂಲನಗೊಳಿಸಬೇಕೆಂಬ ಉದ್ದೇಶದಿಂದ ಅಶ್ವತ್ಥಾಮ ಪ್ರಯೋಗಿಸಿದ ಬ್ರಹ್ಮಾಸ್ತ್ರವದೆಂದು ಅವನಿಗೆ ಕೂಡಲೇ ತಿಳಿಯಿತು. ತನಗೆ ಸಂಪೂರ್ಣ ಶರಣಾಗಿದ್ದ ಭಕ್ತರಾದ ಪಾಂಡವರ ಕುಡಿಯನ್ನು ರಕ್ಷಿಸಲು ಒಡನೆಯೇ ತನ್ನ ಸುದರ್ಶನ ಚಕ್ರವನ್ನೆತ್ತಿಕೊಂಡ. ಎಲ್ಲ ಜೀವಿಗಳ ಹೃದಯಾಂತರಾಳದಲ್ಲಿರುವ ಸರ್ವಶಕ್ತನಾದ ಶ್ರೀಕೃಷ್ಣ ಉತ್ತರೆಯ ಗರ್ಭವನ್ನೇ ಆವರಿಸಿದ! ಅಮೋಘವೂ ಅಪ್ರತಿಹತವೂ ನಿವಾರಿಸಲಸಾಧ್ಯವೂ ಆಗಿದ್ದರೂ ವೈಷ್ಣವ ತೇಜಸ್ಸಿನ ಮುಂದೆ ಬ್ರಹ್ಮಾಸ್ತ್ರ ನಿಷ್ಕ್ರಿಯವಾಯಿತು!
ದಹಿಸಿಹೋಗುತ್ತಿದ್ದ ತನ್ನನ್ನು ಈ ಪರಿಯಲ್ಲಿ ರಕ್ಷಿಸಬಂದ ದೇವೋತ್ತಮ ಪರಮ ಪುರುಷನನ್ನು ಗರ್ಭಾಂತಸ್ಥವಾಗಿದ್ದ ಶಿಶು ನೋಡಿ ಅತ್ಯಾಶ್ಚರ್ಯಗೊಂಡಿತು. ನಾಲ್ಕು ಬಾಹುಗಳಿಂದಲೂ, ಜಾಜ್ವಲ್ಯಮಾನ ಕಿರೀಟದಿಂದಲೂ, ಮಿಂಚಿನ ಪ್ರಭೆಯುಳ್ಳ ಪೀತಾಂಬರದಿಂದಲೂ, ಕರಗಿದ ಚಿನ್ನದ ಕಾಂತಿಯಿಂದ ಹೊಳೆಯುತ್ತಿದ್ದ ಕುಂಡಲಗಳಿಂದಲೂ ಬೆಳಗುತ್ತಿದ್ದ ಗದಾಪಾಣಿಯಾದ ಶ್ಯಾಮಲವರ್ಣದ ದಿವ್ಯ ಪುರುಷನನ್ನು ಅದು ನೋಡಿ ಬೆರಗಾಯಿತು. ಅಂಗುಷ್ಠ ಮಾತ್ರವಿದ್ದ ಅವನು ಯಾರಿರಬಹುದೆಂದು ಮಗು ಯೋಚಿಸುತ್ತಿರುವಾಗಲೇ ಭಗವಂತನು ಅಂತರ್ಧಾನನಾದ.
ಅನಂತರ, ಗ್ರಹಗಳು ಅನುಕೂಲಕರವಾಗಲು, ಶುಭಸೂಚಕಗಳೊಂದಿಗೆ ತನ್ನ ಪೂರ್ವಜನಾದ ಪಾಂಡುವಿನಂತೆಯೇ ತೇಜಸ್ವಿಯಾದ ಶಿಶುವು ಜನಿಸಿತು. ಸಂತಸಗೊಂಡ ಯುಧಿಷ್ಠಿರ ಮಗುವಿನ ಜಾತಕರ್ಮ ಸಂಸ್ಕಾರವನ್ನು ಮಾಡಿಸಿ ಬ್ರಾಹ್ಮಣರಿಗೆ ಹಿರಣ್ಯ ಗೋಧನಗಳನ್ನೂ ಗಜ ತುರಗ ಧಾನ್ಯಗಳನ್ನೂ ದಾನವಾಗಿ ನೀಡಿದ. ಧೌಮ್ಯ, ಕೃಪರೇ ಮೊದಲಾದ ವಿಪ್ರರು ಸ್ವಸ್ತಿ ವಾಚನವನ್ನು ಮಾಡಿದರು.
“ಮಹಾರಾಜ, ನಿಮ್ಮನ್ನು ಅನುಗ್ರಹಿಸಲೆಂದೇ ಭಗವಂತನಾದ ವಿಷ್ಣು ನಿಷ್ಕಳಂಕವಾದ ಈ ಮಗುವನ್ನು ರಕ್ಷಿಸಿದ್ದಾನೆ. ವಿಷ್ಣುವಿನಿಂದ ರಕ್ಷಿಸಲ್ಪಟ್ಟ ಇವನು ವಿಷ್ಣುರಾತನೆಂದೇ ಲೋಕವಿಖ್ಯಾತನಾಗುವನು. ಇವನೊಬ್ಬ ಮಹಾಭಾಗವತನಾಗುವುದರಲ್ಲಿ ಸಂದೇಹವೇ ಇಲ್ಲ’ ಎಂದು ಬ್ರಾಹ್ಮಣರು ಹೇಳಿದರು. “ಪೂಜ್ಯ ಬ್ರಾಹ್ಮಣರೇ, ರಾಜರ್ಷಿಗಳ ಸದ್ವಂಶದಲ್ಲಿ ಜನಿಸಿದ ಇವನು ಅಂಥ ಮಹಾತ್ಮರನ್ನನುಸರಿಸಿ ಪುಣ್ಯವಂತನಾಗುವನೇ? ಕೀರ್ತಿ, ಯಶಸ್ಸುಗಳನ್ನು ಗಳಿಸಿ ಸಾಧುರಾಜನಾಗುವನೇ?” ಧರ್ಮರಾಯ ಪ್ರಶ್ನಿಸಿದ.
ಬ್ರಾಹ್ಮಣರು ಹೇಳಿದರು, “ಕುಂತೀಪುತ್ರನೇ, ಇವನು ಪ್ರಜಾಪಾಲನೆಯಲ್ಲಿ ಇಕ್ಷ್ವಾಕುವಿನಂತಾಗುತ್ತಾನೆ. ಶ್ರೀರಾಮನಂತೆ ಬ್ರಹ್ಮಣ್ಯನೂ, ಸತ್ಯಸಂಧನೂ ಆಗುತ್ತಾನೆ. ದಾನದಲ್ಲಿ ಶಿಬಿಯಂತೆಯೂ, ಯಶಸ್ಸಿನಲ್ಲಿ ಭರತನಂತೆಯೂ, ಬಿಲ್ಲಾಳುಗಳಲ್ಲಿ ಅರ್ಜುನನಂತೆಯೂ, ಆಗುವನು. ಅಗ್ನಿಯಂತೆ ದುರತಿಕ್ರಮನೂ, ಸಮುದ್ರದಂತೆ ದುಸ್ತರನೂ, ಸಿಂಹದಂತೆ ಪರಾಕ್ರಮಿಯೂ, ಹಿಮವಂತನಂತೆ ಆಶ್ರಯದಾತನೂ, ಭೂಮಿಯಂತೆ ಕ್ಷಮಾಶೀಲನೂ, ತಾಯ್ತಂದೆಯರಂತೆ ತಾಳ್ಮೆಯುಳ್ಳವನೂ ಆಗುವನು. ಮನಸ್ಥೈರ್ಯದಲ್ಲಿ ಬ್ರಹ್ಮನನ್ನೂ, ಔದಾರ್ಯದಲ್ಲಿ ಶಿವನನ್ನೂ, ಆಶ್ರಯ ನೀಡುವುದರಲ್ಲಿ ರಮಾಪತಿ ವಿಷ್ಣುವನ್ನೂ ಸರಿಗಟ್ಟುವನು. ಶ್ರೀಕೃಷ್ಣನ ಹೆಜ್ಜೆಗಳನ್ನನುಸರಿಸಿ ಅವನಂತೆಯೇ ಆಗುವನು. ಔದಾರ್ಯದಲ್ಲಿ ರಂತಿದೇವನಂತೆ ಕೀರ್ತಿಶಾಲಿಯಾಗುವನು. ಯಯಾತಿ ರಾಜನಂತೆ ಧಾರ್ಮಿಕನಾಗುವನು. ಬಲಿಯಂತೆ ಸಹನಾಶೀಲನೂ, ಪ್ರಹ್ಲಾದನಂತೆ ಸದ್ಭಕ್ತನೂ ಆಗುವನು. ವೃದ್ಧ ಜನರನ್ನು ಸೇವಿಸಿ ಅನೇಕ ಅಶ್ವಮೇಧಯಾಗಗಳನ್ನು ಮಾಡುವನು. ಧರ್ಮವನ್ನೆತ್ತಿ ಹಿಡಿಯಲು ಕಲಿಕಲುಷಿತ ಉದ್ಧಟರನ್ನು ನಿಗ್ರಹಿಸುವನು. ತಕ್ಷಕನೆಂಬ ಸರ್ಪದಿಂದ ತನಗೆ ಸಾವುಂಟಾಗುವುದೆಂಬ ವಾರ್ತೆಯನ್ನು ಕೇಳಿ ವೈರಾಗ್ಯ ತಾಳುವನು ಮತ್ತು ಗಂಗಾತಟಾಕದಲ್ಲಿ ವ್ಯಾಸಪುತ್ರರಾದ ಶುಕದೇವರಿಂದ ಆತ್ಮಜ್ಞಾನ ಪಡೆಯುವನು.”
ಹೀಗೆ ಜ್ಯೋತಿಷ್ಯದಲ್ಲಿ ನಿಷ್ಣಾತರಾಗಿದ್ದ ಬ್ರಾಹ್ಮಣರು ಮಗುವಿನ ಭವಿಷ್ಯದ ಬಗ್ಗೆ ಯುಧಿಷ್ಠಿರನಿಗೆ ಹೇಳಿ ಅವನಿಂದ ಪುಷ್ಕಳ ಧನದಕ್ಷಿಣೆಗಳನ್ನು ಪಡೆದರು.
ಆ ಮಗು ಎಲ್ಲವನ್ನು ಪರೀಕ್ಷಿಸುವ ಸ್ವಭಾವವುಳ್ಳದ್ದಾಗಿತ್ತು. ಜನನಕ್ಕೆ ಮೊದಲು, ತಾನು ಕಂಡ ವ್ಯಕ್ತಿಯನ್ನು ಮನದಲ್ಲೇ ಧ್ಯಾನಿಸುತ್ತಾ ಎಲ್ಲ ಮಾನವರಲ್ಲೂ ಅವನನ್ನು ಪರೀಕ್ಷಿಸುತ್ತಿತ್ತು. ಹಾಗಾಗಿ, ಅವನಿಗೆ ಪರೀಕ್ಷಿತನೆಂದು ಹೆಸರಾಯಿತು. ಶುಕ್ಲಪಕ್ಷದ ಚಂದ್ರನಂತೆ ಪರೀಕ್ಷಿತನು ಸೌಂದರ್ಯ, ಪರಾಕ್ರಮಗಳಿಂದ ಹೆಸರುವಾಸಿಯಾದ.
ಹಲವು ವರ್ಷಗಳು ಉರುಳಿದವು. ಭಗವಂತನ ಪ್ರೇರಣೆಯೆಂಬಂತೆ, ಯದುವಂಶಜರು ತಮ್ಮ ತಮ್ಮಲ್ಲೇ ಹೋರಾಡಿ ನಾಶವಾದರು. ಪರಮ ಪುರುಷನಾದ ಶ್ರೀಕೃಷ್ಣನೂ ತನ್ನ ಅವತಾರ ಕಾರ್ಯವನ್ನು ಸಮಾಪ್ತಿಗೊಳಿಸಿ ಸ್ವಧಾಮಕ್ಕೆ ಮರಳಿದ. ಈ ವಾರ್ತೆ ಕೇಳಿದ ಪಾಂಡವರು ಅತ್ಯಂತ ದುಃಖಿತರಾದರು. ಭೂಮಿ ಮೇಲಿನ ಜೀವನ ಅವರಿಗೆ ಸಾಕೆನಿಸಿತು. ಕಲಿಯು ಪೂರ್ಣಪ್ರಮಾಣದಲ್ಲಿ ವ್ಯಕ್ತನಾಗತೊಡಗಿ ದುರಾಸೆ, ಸುಳ್ಳು, ವಂಚನೆ, ಹಿಂಸೆಗಳು ತಾಂಡವವಾಡತೊಡಗಿದವು. ಆಗ ಅವರು ಗೃಹಸ್ಥಾಶ್ರಮ ಪರಿತ್ಯಜಿಸಿ ವಾನಪ್ರಸ್ಥಿಗಳಾದರು. ಪರೀಕ್ಷಿತನಿಗೆ ಪಟ್ಟಕಟ್ಟಿ ಮಹಾಪ್ರಸ್ಥಾನಕ್ಕೆ ಹೊರಟರು.
ದ್ವಿಜ ಶ್ರೇಷ್ಠರಿಂದ ಸುಶಿಕ್ಷಿತನಾಗಿದ್ದ ಮಹಾಭಾಗವತ ಪರೀಕ್ಷಿತ ಸಮುದ್ರ ಪರ್ಯಂತವಾಗಿದ್ದ ರಾಜ್ಯವನ್ನು ಆಳತೊಡಗಿದ. ಅವನು ಹುಟ್ಟಿದಾಗ ಜ್ಯೋತಿಷಿಗಳು ಹೇಳಿದ್ದ ಸದ್ಗುಣಗಳನ್ನು ಮೈಗೂಡಿಸಿಕೊಂಡು ರಾಜ್ಯಭಾರ ಮಾಡತೊಡಗಿದ. ಅವನು ಉತ್ತರನ ಮಗಳಾದ ಇರಾವತಿಯನ್ನು ವರಿಸಿ, ಜನಮೇಜಯನೇ ಮೊದಲಾದ ನಾಲ್ವರು ಪುತ್ರರನ್ನು ಪಡೆದ. ಕೃಪಾಚಾರ್ಯರನ್ನು ಗುರುಗಳನ್ನಾಗಿ ಸ್ವೀಕರಿಸಿದ. ಮೂರು ಅಶ್ವಮೇಧಯಾಗಗಳನ್ನು ಮಾಡಿ ಕೀರ್ತಿವಂತನಾದ.
ಪರೀಕ್ಷಿತರಾಜನು ಕುರುಜಾಂಗಲ ದೇಶದಲ್ಲಿ ಸಾಮ್ರಾಟನಾಗಿದ್ದಾಗ ತನ್ನ ರಾಜ್ಯಕ್ಕೆ ಕಲಿಪುರುಷ ಪ್ರವೇಶಿಸಿರುವನೆಂದು ಕೇಳಿ ಅಸಮಾಧಾನಗೊಂಡ. ಅವನನ್ನು ನಿಗ್ರಹಿಸಬೇಕೆಂಬ ಉದ್ದೇಶದಿಂದ ಶ್ಯಾಮಲವರ್ಣದ ಕುದುರೆಗಳನ್ನು ಹೂಡಿದ, ಸಿಂಹಧ್ವಜದಿಂದ ಅಲಂಕೃತವಾದ ರಥವನ್ನೇರಿ, `ರಥಾಶ್ವಗಜಪದಾತಿ’ಗಳ ಸಹಿತ ಚತುರಂಗ ಬಲದೊಂದಿಗೆ ದಿಗ್ವಿಜಯಕ್ಕೆ ಹೊರಟ. ಭದ್ರಾಶ್ವ, ಕೇತುಮಾಲ, ಭಾರತ, ಉತ್ತರಕುರು, ಕಿಂಪುರುಷ ವರ್ಷಗಳನ್ನು ಜಯಿಸಿ ಕಪ್ಪಕಾಣಿಕೆಗಳನ್ನು ಸ್ವೀಕರಿಸಿದ. ಅಲ್ಲೆಲ್ಲಾ ತನ್ನ ಪೂರ್ವಜರಾದ ಪಾಂಡವರ ಹಾಗೂ ಭಗವಂತನಾದ ಶ್ರೀಕೃಷ್ಣನ ಮಹಿಮೆಯ ಬಗ್ಗೆ ಕೇಳುತ್ತಿದ್ದ. ಅಲ್ಲದೆ ಅಶ್ವತ್ಥಾಮ ಪ್ರಯೋಗಿಸಿದ ಮಹಾಸ್ತ್ರದಿಂದ ತನ್ನನ್ನು ಶ್ರೀಕೃಷ್ಣ ರಕ್ಷಿಸಿದ ಬಗೆಯನ್ನೂ, ವೃಷ್ಣಿಗಳಿಗೂ ಪಾಂಡವರಿಗೂ ಕೇಶವನಲ್ಲಿದ್ದ ಭಕ್ತಿಯ ವಿಷಯವನ್ನೂ ಕೇಳಿ, ಪರಮಸಂತುಷ್ಟನಾದ. ಇವುಗಳನ್ನು ವಿವರಿಸುತ್ತಿದ್ದ ಜನರಿಗೆ ಅಮೂಲ್ಯ ಹಾರಗಳನ್ನೂ, ಧನ, ವಸಾ್ತ್ರದಿಗಳನ್ನೂ ಉದಾರ ಮನಸ್ಸಿನಿಂದ ದಾನಮಾಡಿದ. ಇಂಥ ಸಮಾಚಾರಗಳನ್ನು ಕೇಳಿ ಅವನಿಗೆ ಶ್ರೀಕೃಷ್ಣನ ಚರಣಾವಿಂದಗಳಲ್ಲಿ ಹೆಚ್ಚಿನ ಭಕ್ತಿಯುಂಟಾಯಿತು. ಹೀಗೆ ತನ್ನ ಪೂರ್ವಜರ ಮಾರ್ಗವನ್ನು ಅವನು ಅನುಸರಿಸುತ್ತಿರಲು, ತನ್ನ ಶಿಬಿರದಿಂದ ಅನತಿದೂರದಲ್ಲೇ ಒಂದು ಆಶ್ಚರ್ಯಕರ ಘಟನೆ ಕಂಡ.
ಧರ್ಮ ಒಂದು ಎತ್ತಿನ ರೂಪದಲ್ಲಿ ಒಂಟಿಕಾಲಿನಲ್ಲಿ ಸಂಚರಿಸುತ್ತಿತ್ತು. ಆಗ ಅದು, ಮಗುವನ್ನು ಕಳೆದುಕೊಂಡು ದುಃಖಿಸುವ ತಾಯಿಯಂತೆ ಅಳುತ್ತಿದ್ದ ಒಂದು ಗೋವನ್ನು ಭೇಟಿಯಾಗಿ ಅದನ್ನು ಮಾತನಾಡಿಸಿತು. ಆ ಗೋವು, ಆ ರೂಪದಲ್ಲಿದ್ದ ಭೂದೇವಿಯೇ ಆಗಿದ್ದಳು.
ವೃಷಭರೂಪದ ಧರ್ಮ, ಧೇನುರೂಪದ ಭೂದೇವಿಯನ್ನು ಪ್ರಶ್ನಿಸಿತು, “ಭದ್ರೆ, ನಿನ್ನ ಮುಖ ಕಳೆಗುಂದಿದೆ. ನೀನು ಯಾವುದೋ ದುಃಖದಲ್ಲಿರುವಂತೆ ತೋರುತ್ತಿರುವೆ. ನಿನ್ನ ಬಂಧುಗಳಾರಾದರೂ ದೂರದೇಶಕ್ಕೆ ಹೋಗಿರುವರೇ? ಅಥವಾ ಒಂಟಿಕಾಲಿನಲ್ಲಿರುವ ನನ್ನನ್ನು ನೋಡಿ ನಿನಗೆ ಚಿಂತೆಯೇ? ನೀಚರಾದ ವೃಷಲರು ನಿನ್ನನ್ನಾಳುತ್ತಿರುವರೆಂಬ ಚಿಂತೆಯೇ? ದೇವತೆಗಳು ಯಜ್ಞ ಯಾಗಾದಿಗಳಲ್ಲಿ ಹವಿರ್ಭಾಗವನ್ನು ಪಡೆಯುತ್ತಿಲ್ಲವೆಂಬ ಚಿಂತೆಯೇ? ಸ್ತ್ರೀಯರೂ ಬಾಲಕರಿಗೆ ರಕ್ಷಣೆ ಇಲ್ಲದ್ದನ್ನು ನೋಡಿ ಚಿಂತೆಯೇ? ವಾಗ್ದೇವಿಯು ಕುಕರ್ಮಿಗಳಾದ ಬ್ರಾಹ್ಮಣರಿಗೆ ಸಿಕ್ಕಿರುವುದಕ್ಕಾಗಿ ಇಲ್ಲವೇ ಕುಲಗೇಡಿಗಳಾದ ಕ್ಷತ್ರಿಯರನ್ನು ಬ್ರಾಹ್ಮಣರು ಸೇವಿಸುತ್ತಿರುವುದಕ್ಕಾಗಿಯೇ ಚಿಂತೆಯೇ? ಕಲಿಪ್ರಭಾವಕ್ಕೊಳಗಾದ ರಾಜರು ಎಲ್ಲೆಂದರಲ್ಲಿ ತಿನ್ನುವುದು, ಕುಡಿಯುವುದು, ಭೋಗಿಸುವುದು ಮೊದಲಾಗಿ ಮಾಡುತ್ತಿರುವುದು ನಿನ್ನ ಚಿಂತೆಗೆ ಕಾರಣವೇ? ಅಮ್ಮಾ, ಭೂಭಾರವನ್ನಿಳಿಸ ಲೋಸುಗವಾಗಿ ಅವತರಿಸಿದ ಶ್ರೀಹರಿ ಅಂತರ್ಹಿತ ನಾದುದರಿಂದ ನಿನಗೆ ಚಿಂತೆಯೇ? ನಿನ್ನ ದುಃಖಕ್ಕೆ ಕಾರಣವೇನು ಹೇಳಮ್ಮಾ!”
ಧರ್ಮನ ಈ ಮಾತುಗಳನ್ನು ಕೇಳಿ ಭೂದೇವಿ ಉತ್ತರಿಸಿದಳು, “ಧರ್ಮನೇ ನೀನು ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ನೀನೇ ಬಲ್ಲೆ. ನಾಲ್ಕು ಕಾಲುಗಳಿಂದಲೂ ನಡೆಯುತ್ತಾ ನೀನು ಸುಖವಾಗಿರಲು ಯಾರು ಕಾರಣನಾಗಿದ್ದನೋ ಆ ಭಗವಂತ ಹೊರಟು ಹೋದನಲ್ಲಾ ಎಂಬುದೇ ನನ್ನ ಚಿಂತೆಗೆ ಕಾರಣ. ಸತ್ಯ, ಶೌಚ, ದಯೆ, ತಾಳ್ಮೆ, ತ್ಯಾಗ, ಸಂತೋಷ, ಶಮ, ದಮ, ತಪಸ್ಸು, ಜ್ಞಾನ, ವಿರಕ್ತಿ, ಐಶ್ವರ್ಯ, ಶೌರ್ಯ, ತೇಜಸ್ಸು, ಬಲ, ಸ್ಮೃತಿ, ಸ್ವಾತಂತ್ರ್ಯ, ಕೌಶಲ, ಕಾಂತಿ, ಧೈರ್ಯ, ಶೀಲ, ಗಾಂಭೀರ್ಯವೇ ಮೊದಲಾದ ಮಹಾನ್ ಗುಣಗಳು ಕ್ಷೀಣಿಸದೇ ನೆಲೆಸಿದ್ದ ದೇವೋತ್ತಮ ಪರಮ ಪುರುಷ ಇಲ್ಲದಿರಲಾಗಿ, ಕಲಿ ತನ್ನ ಪಾಪದೃಷ್ಟಿಯನ್ನು ಬೀರುತ್ತಿದ್ದಾನೆ. ನನಗಾಗಿಯೂ, ದೇವತೆಗಳಲ್ಲಿ ಉತ್ತಮನಾದ ನಿನಗಾಗಿಯೂ, ದೇವ ಪಿತೃ ಸಾಧು ಋಷಿವರ್ಯರಿಗಾಗಿಯೂ ವರ್ಣಾಶ್ರಮ ಗಳಿಗಾಗಿಯೂ ಶೋಕಿಸುತ್ತಿದ್ದೇನೆ.”
ಧರ್ಮ, ಭೂದೇವಿಯರು ಹೀಗೆ ಮಾತನಾಡುತ್ತಿರುವಾಗಲೇ ರಾಜರ್ಷಿಯಾದ ಪರೀಕ್ಷಿತನು ಸರಸ್ವತೀ ನದಿಯ ತೀರಕ್ಕೆ ಬಂದ. ಆ ಸಮಯದಲ್ಲಿ, ರಾಜವೇಷಧಾರಿಯಾದ ವೃಷಲನೊಬ್ಬ ದಂಡದಿಂದ ಆ ಗೋವೃಷಭಗಳನ್ನು ಹೊಡೆಯುತ್ತಿದ್ದುದನ್ನು ಕಂಡ. ಶೂದ್ರನಿಂದ ಹೊಡೆಯಲ್ಪಟ್ಟ ಆ ಬಡ ಪ್ರಾಣಿಗಳು ಅನಾಥರಂತೆ ಅಳುತ್ತಿದ್ದವು. ಆ ವೃಷಲ ಕಲಿ ಪುರುಷನೇ ಆಗಿದ್ದ. ರಥಾರೂಢನಾಗಿದ್ದ ರಾಜ ಮೇಘದಂತೆ ಗಂಭೀರವಾದ ಧ್ವನಿಯಿಂದ ಆ ವೃಷಲನನ್ನು ಪ್ರಶ್ನಿಸಿದ, “ಗಾಂಢೀವಧಾರಿಯಾದ ಅರ್ಜುನನೊಂದಿಗೆ ಶ್ರೀಕೃಷ್ಣನು ಪರಂಧಾಮಕ್ಕೆ ಹೋದ ಬಳಿಕ ರಹಸ್ಯವಾಗಿ ನಿರಪರಾಧಿ ಗಳನ್ನು ಹಿಂಸಿಸುತ್ತಿರುವ ನೀನು ಯಾರು? ನಟನಂತೆ ವೇಷಧರಿಸಿರುವ ನೀನು ರಾಜರಿಗೆ ತಕ್ಕುದಲ್ಲದ ಹೇಯ ಕಾರ್ಯ ಮಾಡುತ್ತಿರುವೆ! ನೀನು ಖಂಡಿತವಾಗಿಯೂ ವಧಾರ್ಹನಾಗಿದ್ದೀಯೆ!”
ಅನಂತರ, ಖಳರಿಗೆ ಶಾಸನ ಮಾಡಲು ತಾನಿರುವಾಗ ಅಳಬಾರದೆಂದು ವೃಷಭರೂಪ ಧಾರಿಯಾದ ಧರ್ಮವನ್ನೂ, ಗೋರೂಪಧಾರಿಯಾದ ಭೂದೇವಿ ಯನ್ನೂ ಹಿತವಾಕ್ಯಗಳಿಂದ ಸಮಾಧಾನಪಡಿಸಿದ. ಕೃತಯುಗದಲ್ಲಿ ಧರ್ಮಕ್ಕೆ ತಪ, ಶೌಚ, ದಯೆ, ಸತ್ಯ ಎಂಬ ನಾಲ್ಕು ಪಾದಗಳಿದ್ದುವೆಂದೂ, ಅಧರ್ಮದ ಅಂಶಗಳಾದ ಅಹಂಕಾರ, ಸಂಗದೋಷ, ಮತ್ತು ಮದದಿಂದ ಮೂರು ಪಾದಗಳು ಮುರಿದು ಹೋಗಿ, ಈಗ ಸತ್ಯವೆಂಬ ನಾಲ್ಕನೆಯದಾದ ಒಂದೇ ಪಾದದಲ್ಲಿ ಅದು ನಿಂತಿರುವುದೆಂಬುದನ್ನು ಅರಿತ. ಕೂಡಲೇ ರಾಜವೇಷದಲ್ಲಿದ್ದ ಕಲಿಪುರುಷನನ್ನು ಸಂಹರಿಸಲು ನಿಶಿತವಾದ ತನ್ನ ಖಡ್ಗವನ್ನು ಸೆಳೆದ.
ತನ್ನನ್ನು ಸಂಹರಿಸಲುದ್ಯುಕ್ತನಾದ ಪರೀಕ್ಷಿತನನ್ನು ನೋಡಿ ಭಯವಿಹ್ವಲನಾದ ಕಲಿಪುರುಷ ತನ್ನ ರಾಜವೇಷ ಪರಿತ್ಯಜಿಸಿ ದೀನನಂತೆ ರಾಜನ ಪಾದಗಳಿಗೆರಗಿದ. ದೀನವತ್ಸಲನಾದ ಪರೀಕ್ಷಿತ ಅವನನ್ನು ಕೊಲ್ಲದೇ ಹೀಗೆಂದ. “ಅರ್ಜುನನ ವಂಶದಲ್ಲಿ ಹುಟ್ಟಿದ ಯೋಧರಿಂದ ಬದ್ಧಾಂಜಲಿಗಳಿಗೆ ಯಾವ ಭಯವೂ ಇಲ್ಲ. ಆದರೆ ಅಧರ್ಮದ ಬಂಧುವಾಗಿರುವ ನೀನು ನನ್ನ ರಾಜ್ಯದಲ್ಲಿ ಇನ್ನು ಮುಂದೆ ಇರಕೂಡದು. ಸತ್ಯ, ಧರ್ಮಗಳು ನೆಲೆಸಿರುವ ಈ ಬ್ರಹ್ಮಾವರ್ತದಲ್ಲಿ ಯಜ್ಞಗಳಿಂದ ಯಜ್ಞೇಶ್ವರನನ್ನು ಸಂಪ್ರೀತಿಗೊಳಿಸಲಾಗುತ್ತದೆ. ಇಂಥ ಪವಿತ್ರ ಸ್ಥಳದಲ್ಲಿ ಶ್ರೀ ಹರಿ ಯಜ್ಞರೂಪದಿಂದ ಪೂಜೆಯನ್ನು ಸ್ವೀಕರಿಸಿ ಸಕಲ ಚರಾಚರರ ಕಾಮನೆಗಳನ್ನು ಪೂರೈಸುತ್ತಾ ವಾಯುವಿನಂತೆ ಬಾಹ್ಯಾಂತರಗಳಲ್ಲಿ ತುಂಬಿಕೊಂಡಿದ್ದಾನೆ. ಇಂಥ ಸ್ಥಳದಲ್ಲಿ ರಾಜರ ದೇಹಗಳನ್ನು ಪ್ರವೇಶಿಸಿ ಲೋಭ, ಅಸತ್ಯ, ಚೌರ್ಯ, ಕಲಹ ಮೊದಲಾದ ದುರ್ಗುಣಗಳನ್ನುಂಟು -ಮಾಡುವ ನೀನು ಇರಲೇಕೂಡದು.”
ಪರೀಕ್ಷಿತರಾಜನ ಆದೇಶ ಕೇಳಿ ಬಹುವಾಗಿ ಹೆದರಿದ ಕಲಿಯು, ತನಗೆ ವಾಸಿಸಲು ಸೂಕ್ತ ಸ್ಥಳ ನಿಯೋಜಿಸುವಂತೆ ರಾಜನನ್ನೇ ಕೇಳಿದ. ಅದಕ್ಕೆ ರಾಜನು ಕಲಿಗೆ, ಜೂಜು, ಮದ್ಯಪಾನ, ಅಧಾರ್ಮಿಕ ಸ್ತ್ರೀಸಂಗ, ಮತ್ತು ಹಿಂಸೆಯೆಂಬ ನಾಲ್ಕು ಸ್ಥಾನಗಳನ್ನು ವಾಸಿಸಲು ಕಲ್ಪಿಸಿಕೊಟ್ಟ. ಇವಲ್ಲದೆ ಇನ್ನೂ ಒಂದು ಸ್ಥಳ ಬೇಕೆಂದು ಕಲಿ ಯಾಚಿಸಲು, ಪರೀಕ್ಷಿತನು ಚಿನ್ನವನ್ನೂ ಅವನ ವಾಸಕ್ಕೆ ನೇಮಿಸಿದ. ಹೀಗೆ ಆ ಕಲಿಗೆ, ಅಸತ್ಯ, ಮದ, ಕಾಮ, ರಜೋಗುಣ, ಮತ್ತು ವೈರವೆಂಬ ದುರ್ಗುಣಗಳಿರುವ ಐದು ಸ್ಥಾನಗಳು ಪ್ರಾಪ್ತವಾದವು. ತನ್ನ ಸ್ಥಳಗಳಲ್ಲಿ ವಾಸಿಸಲು ಕಲಿಪುರುಷ ಹೊರಟುಹೋದ.
ಅನಂತರ ಪರೀಕ್ಷಿತ ವೃಷಭರೂಪೀ ಧರ್ಮನಿಗೆ ತಪ, ಶೌಚ, ದಯೆ ಎಂಬ ನಷ್ಟವಾಗಿದ್ದ ಮೂರು ಪಾದಗಳನ್ನು ಪ್ರತಿಸಂಧಾನ ಮಾಡಿದ. ಗೋರೂಪೀ ಭೂದೇವಿಗೂ ಆಶ್ವಾಸನೆಯಿತ್ತು ಅವಳನ್ನು ಸಮಾಧಾನಪಡಿಸಿದ.
ಇಂತಹ ಸತ್ವಶಾಲಿಯೂ ಭಗವದ್ಭಕ್ತನೂ ಆದ ರಾಜಾ ಪರೀಕ್ಷಿತನಿಗೆ ಘೋರ ಶಾಪ ಒದಗಿಬಂದಿತ್ತು. ಶಮೀಕ ಋಷಿಯ ಕೊರಳ ಸುತ್ತಲೂ ಸತ್ತ ಹಾವೊಂದನ್ನು ಹಾಕಿ ಬಂದಿದ್ದ ಅವನು ತಾನು ಮಾಡಿದ ಅಪಚಾರ ಕುರಿತು ಬಹಳ ಪಶ್ಚಾತ್ತಾಪಪಟ್ಟ. “ಗೂಢವಾದ ಬ್ರಹ್ಮತೇಜಸ್ಸಿನಿಂದ ಬೆಳಗುತ್ತಿದ್ದ ಮಹಾಮುನಿಗಳಿಗೆ ಎಂಥ ಅಪಚಾರವೆಸಗಿಬಿಟ್ಟೆನಲ್ಲ! ಇನ್ನು ನನಗೆ ನಿವಾರಿಸಲಸಾಧ್ಯವಾದ ಮಹಾ ವಿಪತ್ತೇ ಒದಗುವುದು! ಬ್ರಾಹ್ಮಣ ಕುಲದಿಂದ ಬರುವ ಶಾಪಾಗ್ನಿಯು ನನ್ನನ್ನೂ ನನ್ನ ರಾಜ್ಯವನ್ನೂ ಸೇನಾಬಲವನ್ನೂ ಸುಟ್ಟುಹಾಕಲಿ! ಇನ್ನೆಂದಿಗೂ ನನಗೆ ಬ್ರಾಹ್ಮಣರ ವಿಷಯದಲ್ಲಿ ಇಂಥ ಪಾಪಾಚರಣೆಯ ಆಲೋಚನೆ ಹುಟ್ಟದಿರಲಿ!” ಎಂದು ಮರುಗಿದ.
ಅಷ್ಟರಲ್ಲಿ ಅವನಿಗೊದಗಿದ ಶಾಪದ ವಿಷಯ ತಿಳಿಸಲೆಂದು ಶಮೀಕ ಋಷಿ ಕಳಿಸಿದ್ದ ಶಿಷ್ಯನು ಬಂದ. ಪರೀಕ್ಷಿತನಿಗೆ ಒದಗಿದ ಶಾಪದ ದುರ್ವಾರ್ತೆಯನ್ನರುಹಿದ. ಇದನ್ನು ಕೇಳಿದ ರಾಜನು ಶೋಕಿಸದೆ, ತನಗೆ ವೈರಾಗ್ಯವುಂಟಾಗಲೆಂದೇ ಹೀಗಾಗಿದೆಯೆಂದು ಭಾವಿಸಿದ. ಈ ಮೊದಲೇ ಈ ಲೋಕವನ್ನು ಹೇಯವೆಂದು ವಿಮರ್ಶಿಸಿದ್ದ ಅವನು, ಆಮರಣಾಂತ ಉಪವಾಸ ವ್ರತ ಕೈಗೊಂಡು ಭಗವಂತನ ಚರಣಾರವಿಂದಗಳನ್ನು ಸೇವಿಸಬೇಕೆಂದು ಸಂಕಲ್ಪಿಸಿದ. ಹೀಗೆ ನಿಶ್ಚಯಿಸಿದ ಆ ರಾಜೇಂದ್ರ ರಾಜ್ಯಭಾರವನ್ನು ತನ್ನ ಮಕ್ಕಳಿಗೆ ವಹಿಸಿ, ಮುನಿವೇಷತೊಟ್ಟು ಪವಿತ್ರ ಗಂಗಾತೀರಕ್ಕೆ ಹೋದ. ಶ್ರೀ ತುಲಸೀ ಎಲೆಗಳಿಂದ ಸಂಸೇವಿತವಾದ ಭಗವಂತನ ಪಾದಾರವಿಂದಗಳ ಧೂಳಿನಿಂದ ಪರಮ ಪವಿತ್ರವಾದ ಗಂಗಾನದಿಯ ದಡದಲ್ಲಿ ಪರೀಕ್ಷಿತ ಪ್ರಾಯೋಪವೇಶ ಮಾಡಲು ಉತ್ತರಾಭಿಮುಖವಾಗಿ ಕುಳಿತುಕೊಂಡ. ಏಕಾಗ್ರಚಿತ್ತನಾಗಿ ಶ್ರೀಹರಿಯ ಚರಣಾರವಿಂದಗಳನ್ನು ಧ್ಯಾನಿಸತೊಡಗಿದ. ಅವನ ಕಾರ್ಯವನ್ನು ಶ್ಲಾಘಿಸಲೆಂಬಂತೆ ಆಗಸದಿಂದ ದೇವತೆಗಳು ಪುಷ್ಪವೃಷ್ಟಿಗೈದರು. ಆಗ ಅಲ್ಲಿಗೆ ಅನೇಕ ಮಹರ್ಷಿಗಳು ಆಗಮಿಸಿದರು. ಅತ್ರಿ, ವಸಿಷ್ಠ, ಚ್ಯವನ, ಕೃಪ, ಅರಿಷ್ಟನೇಮಿ, ಭೃಗು, ಅಂಗಿರಸ್ಸು, ಪರಾಶರ, ವಿಶ್ವಾಮಿತ್ರ, ಪರಶುರಾಮ, ಉತಥ್ಯ, ಇಂದ್ರಪ್ರಮದ, ಇಧ್ಮವಾಹ, ಮೇಧಾತಿಥಿ, ದೇವಲ, ಆರ್ಷ್ಟಿಷೇಣ, ಭಾರದ್ವಾಜ, ಗೌತಮ, ಪಿಪ್ಪಲಾದ, ಮೈತ್ರೇಯ, ಔರ್ವ, ಕವಷ, ಅಗಸ್ತ್ಯ, ಕೃಷ್ಣ-ದ್ವೈಪಾಯನ ಮತ್ತು ನಾರದ ಮಹರ್ಷಿಗಳು ಅಲ್ಲಿಗೆ ಆಗಮಿಸಿದರು. ಇವರಲ್ಲದೆ ಇನ್ನೂ ಅನೇಕ ದೇವರ್ಷಿಗಳೂ ರಾಜರ್ಷಿಗಳೂ ಬಂದರು. ಪರೀಕ್ಷಿತ ಅವರೆಲ್ಲರನ್ನೂ ಸಂಪೂಜಿಸಿ ಶಿರಸಾ ನಮಸ್ಕರಿಸಿದ. ಅವರೆಲ್ಲರೂ ಸುಖಾಸೀನರಾಗಲು ರಾಜ ಅವರಿಗೆ ಮತ್ತೆ ಮತ್ತೆ ನಮಸ್ಕರಿಸುತ್ತಾ ವಿಜ್ಞಾಪನೆ ಮಾಡಿಕೊಂಡ.
“ಆಹಾ! ನಾನೆಷ್ಟು ಧನ್ಯ! ನಿಮ್ಮಂತಹ ಬ್ರಾಹ್ಮಣ ಶ್ರೇಷ್ಠರಿಂದ ಅನುಗೃಹೀತನಾಗುತ್ತಿರುವ ನಾನು ರಾಜರಲ್ಲೇ ಧನ್ಯ! ಸದಾ ಗೃಹಕಾರ್ಯಗಳಲ್ಲೇ ಆಸಕ್ತನಾಗಿದ್ದು ಪಾಪಾಚಾರವೆಸಗಿದ ನನಗೆ ಭಗವಂತನೇ ದ್ವಿಜಶಾಪ ರೂಪದಲ್ಲಿ ಅನುಗ್ರಹ ಮಾಡಿದ್ದಾನೆ. ನಾನು ಬೇಗನೇ ಭಯದಿಂದ ಮುಕ್ತನಾಗುತ್ತೇನೆ. ಬ್ರಾಹ್ಮಣನಿಂದ ಪ್ರೇರಿತನಾದ ತಕ್ಷಕ ನನ್ನನ್ನು ಕಚ್ಚಲಿ! ಆದರೆ ನೀವು ಮಾತ್ರ ವಿಷ್ಣು ಸಂಕೀರ್ತನೆಯನ್ನು ಮಾಡುತ್ತಲೇ ಇರಿ!”
“ಎಲೈ ರಾಜರ್ಷಿಯೇ, ರಾಜಮಹಾರಾಜರ ಕಿರೀಟಗಳಿಂದ ಸೇವಿಸಲ್ಪಡುತ್ತಿದ್ದ ನೀನು ಭಗವಂತನ ಸಾನ್ನಿಧ್ಯ ಪಡೆಯಲೋಸುಗ, ಸರ್ವಸಂಗಗಳನ್ನೂ ಪರಿತ್ಯಜಿಸಿರುವೆ. ಭಲೆ! ನೀನು ಪರಂಧಾಮವನ್ನೈದುವವರೆಗೂ ನಾವು ಇಲ್ಲೇ ಇರುವೆವು.”
“ಮಹರ್ಷಿಗಳೇ, ತಾವು ಮೂರ್ತಿಮತ್ತಾದ ವೇದಗಳಂತಿರುವಿರಿ. ಇಹಲೋಕದಲ್ಲಾಗಲೀ, ಪರಲೋಕದಲ್ಲಾಗಲೀ ಇತರರ ಮೇಲೆ ಅನುಗ್ರಹ ತೋರುವುದೇ ನಿಮ್ಮ ಸ್ವಭಾವವಾಗಿದೆ. ಆದ್ದರಿಂದ ನಿಮ್ಮನ್ನು ಒಂದು ಪ್ರಶ್ನೆ ಕೇಳುವೆ. ಒಬ್ಬ ವ್ಯಕ್ತಿಯು ಸರ್ವಕಾಲಗಳಲ್ಲಿಯೂ, ವಿಶೇಷವಾಗಿ, ಮರಣಕಾಲದಲ್ಲಿಯೂ, ಮನಸ್ಸಿನಿಂದಲೂ, ದೇಹದಿಂದಲೂ ಮಾಡಬೇಕಾದ ಶುದ್ಧ ಕರ್ತವ್ಯ ಯಾವುದು?” ಪರೀಕ್ಷಿತ ಪ್ರಶ್ನಿಸಿದ.
ಸ್ವಲ್ಪ ಹೊತ್ತು ವೌನವಾವರಿಸಿತು.
ಆಗ ಅಲ್ಲಿಗೆ ಅವಧೂತರಂತಿದ್ದ ಒಬ್ಬ ವ್ಯಕ್ತಿಯ ಆಗಮನವಾಯಿತು. ದಿಗಂಬರರಾಗಿಯೂ ಕೆದರಿದ ಕೂದಲುಳ್ಳವರೂ, ಶ್ಯಾಮಲವರ್ಣದ ಕಾಂತಿಯುತ ದೇಹವನ್ನು ಪಡೆದವರೂ ಆದ ಅವರು ಹದಿನಾರರ ಪ್ರಾಯದ ಸುಕುಮಾರರಾಗಿದ್ದರು. ರೂಪ, ಲಾವಣ್ಯಗಳಿಂದ ಕಂಗೊಳಿಸುತ್ತಿದ್ದ ಅವರು ತಮ್ಮ ಮಂದಹಾಸದಿಂದ ಸ್ತ್ರೀಯರನ್ನಾಕರ್ಷಿಸಿದ್ದರು. ಬಾಲರಿಂದ ಸುತ್ತುವರೆಯಲ್ಪಟ್ಟಿದ್ದ ಅವರು ಯಾವುದೇ ಬಾಹ್ಯ ಚಿಹ್ನೆಗಳಿಲ್ಲದೆ ಯದೃಚ್ಛಾ ಸಂಚರಿಸುತ್ತಿದ್ದರು. ಗೂಢವಾದ ವರ್ಚಸ್ಸಿನಿಂದ ಕೂಡಿದ್ದರೂ ಅವರನ್ನು ಗುರುತಿಸಿದ ಋಷಿಮುನಿಗಳು ತಮ್ಮ ಆಸನಗಳಿಂದೆದ್ದು ಅವರನ್ನು ಗೌರವಿಸಿದರು. ಅವರು ವೇದವ್ಯಾಸರ ಪುತ್ರರಾದ ಪರಮ ವಿರಾಗಿ ಭಗವಾನ್ ಶುಕಮುನಿಗಳಾಗಿದ್ದರು!
ವಿಷ್ಣುರಾತ ಪರೀಕ್ಷಿತರಾಜನು ಕೂಡಲೇ ಎದ್ದು ಅವರಿಗೆ ಸಾಷ್ಟಾಂಗವೆರಗಿ ಸಂಪೂಜಿಸಿದ. ಉಚಿತಾಸನವನ್ನು ನೀಡಿ ಗೌರವಿಸಿದ. ಅವರ ಸುತ್ತಲೂ ನೆರೆದಿದ್ದ ಸ್ತ್ರೀಯರೂ ಬಾಲಕರೂ ಕೂಡಲೇ ಹೊರಟುಹೋದರು. ಉತ್ತಮವಾದ ಆಸನದಲ್ಲಿ ಮಂಡಿಸಿದ್ದ ಶುಕಮುನಿಗಳು, ಬ್ರಹ್ಮಿರ್ಷಿ, ರಾಜರ್ಷಿ ದೇವರ್ಷಿಗಳ ನಡುವೆ, ನಕ್ಷತ್ರಗಳ ಮಧ್ಯದ ಚಂದ್ರನಂತೆ ಶೋಭಿಸಿದರು.
ಪ್ರಸನ್ನರಾಗಿ ಆಸೀನರಾಗಿದ್ದ ಮಹಾಜ್ಞಾನ ಸಂಪನ್ನ ಶುಕಮುನಿಗಳಿಗೆ ಮತ್ತೆ ಮತ್ತೆ ನಮಸ್ಕರಿಸಿ, ಪರಮ ಭಾಗವತನಾದ ಪರೀಕ್ಷಿತನು ಕೃತಾಂಜಲಿಯಾಗಿ ಹೇಳಿದನು; “ಕ್ಷತ್ರಬಂಧುಗಳಾದ ನಾವು ಇಂದು ನಿಮ್ಮ ಸೇವೆಯಿಂದ ಕೃತಾರ್ಥರಾದೆವು. ಅತಿಥಿರೂಪದಲ್ಲಿ ಆಗಮಿಸಿರುವ ತಮ್ಮ ಕೃಪೆಯಿಂದ ನಾವು ಶುದ್ಧರಾದೆವು. ಕೇವಲ ತಮ್ಮ ಸ್ಮರಣೆಯಿಂದಲೇ ಜನರ ಮನಗಳು ಶುದ್ಧವಾಗುತ್ತವೆ. ಇನ್ನು ತಮ್ಮ ದರ್ಶನ, ಸ್ಪರ್ಶ, ಪಾದಪ್ರಕ್ಷಾಳನೆ ಮತ್ತು ಆಸನಾರ್ಪಣೆಗಳಿಂದ ಉಂಟಾಗುವ ಸೌಭಾಗ್ಯವನ್ನು ಏನೆಂದು ಹೇಳೋಣ? ಮಹಾಯೋಗಿಗಳೇ, ನಿಮ್ಮ ಸಾನ್ನಿಧ್ಯದಲ್ಲಿ ವಿಷ್ಣುವಿನಿಂದ ಅಸುರರು ವಿನಾಶ ಹೊಂದುವಂತೆ ಮಹಾ ಪಾತಕಗಳೂ ನಶಿಸಿಹೋಗುತ್ತವೆ. ಪಾಂಡವರಿಗೆ ಪ್ರಿಯನಾದ ಶ್ರೀಕೃಷ್ಣ ನನ್ನಲ್ಲಿಯೂ ಸುಪ್ರೀತನಾಗಿದ್ದಾನೆ. ಇಲ್ಲಿದಿದ್ದರೆ ನಿಮ್ಮಂತಹ ಏಕಾಂತ ಸಂಚಾರಿಗಳು ನಮ್ಮಂತಹವರಿಗೆ ದರ್ಶನ ಕೊಡುತ್ತಿದ್ದಿರೇ?”
“ಆದ್ದರಿಂದ ಯೋಗಿಗಳಿಗೂ ಪರಮ ಗುರುಗಳಾಗಿರುವ ನಿಮ್ಮಲ್ಲಿ ನಾನು ಪ್ರಶ್ನಿಸುತ್ತೇನೆ. ಸಾಯುತ್ತಿರುವ ವ್ಯಕ್ತಿ ಸಂಸಿದ್ಧಿಗಾಗಿ ಯಾವ ಕಾರ್ಯ ಮಾಡಬೇಕು? ಏನನ್ನು ಕೇಳಬೇಕು? ಏನನ್ನು ಜಪಿಸಬೇಕು? ಯಾವುದನ್ನು ಸ್ಮರಿಸಬೇಕು ಮತ್ತು ಏನನ್ನು ಭಜಿಸಬೇಕು? ಇವೆಲ್ಲವನ್ನೂ ವಿಶದವಾಗಿ ಹೇಳಿ. ಒಂದು ಹಸುವಿನ ಹಾಲು ಕರೆಯುವಷ್ಟು ಕಾಲವೂ ಗೃಹಸ್ಥರ ಮನೆಗಳಲ್ಲಿ ನಿಲ್ಲದ ತಮ್ಮ ದರ್ಶನ ಬಹು ಅಪರೂಪವಾದುದು” ಎಂದು ಪ್ರಶ್ನೆಗಳ ಸರಮಾಲೆಯನ್ನು ಮುಂದಿಟ್ಟ.
“ಮಹಾರಾಜ, ಲೋಕಹಿತವನ್ನುಂಟುಮಾಡುವ ನಿನ್ನ ಪ್ರಶ್ನೆ ಬಹಳ ಶ್ರೇಷ್ಠವಾಗಿದೆ. ಆತ್ಮವಿದರು ಸಮ್ಮತಿಸುವ, ಕೇಳಲು ತಕ್ಕ ಪ್ರಶ್ನೆಯಾಗಿದೆ. ಎಲೈ ರಾಜೇಂದ್ರ, ಆತ್ಮ ತತ್ತ್ವವನ್ನು ಕಾಣದೆ ಗೃಹಾದಿಗಳಲ್ಲೇ ಆಸಕ್ತರಾಗಿರುವ ಜನರಿಗೆ ಕೇಳಲು ಎಷ್ಟೋ ವಿಷಯಗಳಿವೆ! ಹೇ ರಾಜ, ಅವರ ರಾತ್ರಿಯು ನಿದ್ರೆಯಲ್ಲೂ, ಸ್ತ್ರೀಸಂಗದಲ್ಲೂ ಕಳೆದುಹೋದರೆ, ಹಗಲು ಧನಾರ್ಜನೆಯಲ್ಲೂ, ಕುಟುಂಬ ಪೋಷಣೆಯಲ್ಲೂ ಕಳೆದುಹೋಗುತ್ತದೆ. ತನ್ನ ದೇಹ, ಹೆಂಡತಿ, ಮಕ್ಕಳು ಮೊದಲಾದವುಗಳಲ್ಲಿ ಪ್ರಮತ್ತನಾದ ಮನುಷ್ಯ ಅವುಗಳ ವಿನಾಶವಾಗುವುದನ್ನು ಕಂಡರೂ ಕಾಣದಂತಿರುತ್ತಾನೆ. ಆದ್ದರಿಂದ ಭರತವಂಶಜನೇ, ಅಭಯವನ್ನಿಚ್ಛಿಸುವವನು ಸದಾ ಸರ್ವಾತ್ಮನೂ, ಭಗವಂತನೂ, ಪರಮೇಶ್ವರನೂ ಆದ ಶ್ರೀಹರಿಯ ಮಹಿಮೆಗಳನ್ನು ಕೇಳಬೇಕು, ಕೀರ್ತಿಸಬೇಕು ಹಾಗೂ ಸ್ಮರಿಸುತ್ತಿರಬೇಕು.”
“ಸಾಂಖ್ಯದಿಂದಾಗಲೀ ಯೋಗದಿಂದಾಗಲೀ, ಅಥವಾ ಸ್ವಧರ್ಮ ಪರಿಪಾಲನೆಯಿಂದಾಗಲೀ, ಅಂತ್ಯಕಾಲದಲ್ಲಿ ನಾರಾಯಣನ ಸ್ಮರಣೆ ಮಾಡುವುದೇ ಮನುಷ್ಯನಾಗಿ ಹುಟ್ಟಿ ಮಾಡುವ ಪರಮಲಾಭಕರ ಕಾರ್ಯ. ಎಲೈ ರಾಜನೇ, ಪ್ರಾಪಂಚಿಕ ವಿಧಿನಿಯಮಗಳನ್ನು ಮೀರಿರುವ, ನೈರ್ಗುಣ್ಯದಲ್ಲಿ ನೆಲೆಸಿರುವ ಮಹಾಮುನಿಗಳೂ ಶ್ರೀಹರಿಯ ಗುಣಾನುಕಥನ ಮಾಡುತ್ತಾರೆ.”
“ರಾಜ, ನಿನಗೆ ನಾನು ಶ್ರೀಮದ್ಭಾಗವತವೆಂಬ ಬ್ರಹ್ಮ ಸಮ್ಮಿತವಾದ ಪುರಾಣಶ್ರವಣ ಮಾಡಿಸುವೆನು. ಇದನ್ನು ನಾನು ದ್ವಾಪರಯುಗದ ಆದಿಯಲ್ಲಿ ನಮ್ಮ ತಂದೆಯವರಾದ ಶ್ರೀ ವೇದವ್ಯಾಸರಿಂದ ಕೇಳಿದೆ. ನೈರ್ಗುಣ್ಯದಲ್ಲಿ ನಿಷ್ಠನಾಗಿದ್ದರೂ ದೇವೋತ್ತಮ ಪರಮ ಪುರುಷನ ಲೀಲೆಗಳಿಂದ ಯುಕ್ತವಾದ ಈ ಮಹಾಪುರಾಣವನ್ನು ಅಧ್ಯಯನ ಮಾಡಿದೆ. ಎಲೈ ರಾಜರ್ಷಿಯೇ, ಯೋಗಿಗಳೂ ಮುಕ್ತಿಯನ್ನು ಬಯಸುವವರೂ ಹರಿನಾಮ ಸಂಕೀರ್ತನೆ ಮಾಡಬೇಕೆಂದು ಶಾಸ್ತ್ರ ನಿರ್ಣಯವಾಗಿದೆ. ಪ್ರಮತ್ತನು ಅನೇಕ ವರ್ಷಗಳು ಬದುಕಿದರೇನು ಫಲ? ಶ್ರೇಯಸ್ಸಾಧನೆಯ ಒಂದು ಮುಹೂರ್ತ ಬದುಕಿದ್ದರೂ ಲೇಸು!”
ಹೀಗೆ ಹೇಳಿದ ಶುಕದೇವ ಗೋಸ್ವಾಮಿಗಳು ಪರೀಕ್ಷಿತ ರಾಜನಿಗೆ ಧೈರ್ಯ ತುಂಬಲೆಂದು ಖಟ್ವಾಂಗ ರಾಜನ ಕಥೆಯನ್ನು ಹೇಳಿದರು.
ಖಟ್ವಾಂಗನೆಂಬ ರಾಜರ್ಷಿಯು ದೇವತೆಗಳಿಂದ ತನ್ನ ಆಯುಷ್ಯವು ಇನ್ನು ಒಂದು ಮುಹೂರ್ತ ಕಾಲದಷ್ಟು ಮಾತ್ರ ಇರುವುದೆಂದು ತಿಳಿದು, ಆ ಕ್ಷಣವೇ ತನ್ನ ಸರ್ವಸ್ವವನ್ನೂ ತ್ಯಜಿಸಿ ಹರಿ ಧ್ಯಾನ ಮಾಡುತ್ತಾ ಭಗವದ್ಧಾಮ ಸೇರಿದ. ಪರೀಕ್ಷಿತನಿಗಾದರೋ ಇನ್ನೂ ಏಳು ದಿನಗಳ ಕಾಲವಿತ್ತು. ಏಳೂ ದಿನಗಳ ಕಾಲ, ಭಗವಾನ್ ಶುಕಮುನಿಗಳು ಭಾಗವತಪುರಾಣವನ್ನು ಅವನಿಗೆ ಸಮಗ್ರವಾಗಿ ಹೇಳಿದರು. ದೇವೋತ್ತಮ ಪುರುಷನ ದಿವ್ಯ ಲೀಲೆಗಳನ್ನು ಭಕ್ತಿಯಿಂದ, ಕಣ್ಣಿಗೆ ಕಟ್ಟುವಂತೆ ವರ್ಣಿಸಿದರು. ಭಗವಂತನ ಮತ್ಸ್ಯ, ಕೂರ್ಮ, ವರಾಹ, ನೃಸಿಂಹ, ವಾಮನ, ಪರಶುರಾಮ, ಶ್ರೀರಾಮ ಮೊದಲಾದ ಅವತಾರ ಕಥನಗಳನ್ನು ಮನೋಜ್ಞವಾಗಿ ನಿರೂಪಿಸಿ, ಕಡೆಗೆ ಪರೀಕ್ಷಿತನ ಬೇಡಿಕೆಯಂತೆ ಅವನನ್ನು ಸಾವಿನಿಂದ ರಕ್ಷಿಸಿದ ಶ್ರೀಕೃಷ್ಣನ ಸಮಗ್ರ ಕಥೆಯನ್ನೂ ವಿವರಿಸಿದರು. ಭಗವಂತನ ಲೀಲಾಶ್ರವಣದಿಂದ ಪರೀಕ್ಷಿತ ಪುನೀತನಾದ. ಭಗವದ್ಭಕ್ತಿಯೆಂಬ ಆನಂದಾಂಬುಧಿಯಲ್ಲಿ ಮಿಂದು ಪರವಶಗೊಂಡ. ಭಕ್ತಿರಸಾಮೃತವನ್ನು ಪಾನಮಾಡಿ ಭಯದೂರನಾದ.
ಪರೀಕ್ಷಿತನ ದೆಸೆಯಿಂದ ಲೋಕದ ಜನರಿಗೆ ಶ್ರೀಮದ್ಭಾಗವತದ ಲಾಭವಾಯಿತು. ಕಲಿಕಲುಷಿತ ಮನಸ್ಸಿನಿಂದ ಕಂಗೆಟ್ಟು ಅಂಧಕಾರದಲ್ಲಿ ಬಳಲಿ ತೊಳಲಾಡುವ ಜನರನ್ನು ಉದ್ಧರಿಸಲೆಂದೇ ಉದಿಸಿದ ಭಗವಂತನ ರೂಪವೇ ಆದ ದಿವ್ಯ ಸೂರ್ಯನಂಥ ಭಾಗವತ ಮಹಾಪುರಾಣ ಪರೀಕ್ಷಿತನಿಂದ ಭೂಲೋಕದ ಜನರಿಗೆ ದೊರೆಯುವಂತಾಯಿತು. ಮೊದಲಿಗೆ ಶ್ರೀಮನ್ನಾರಾಯಣನಿಂದಲೇ ಬ್ರಹ್ಮದೇವನಿಗೆ ಬೋಧಿಸಲ್ಪಟ್ಟು, ಅನಂತರ ಬ್ರಹ್ಮನಿಂದ ನಾರದರಿಗೆ, ನಾರದರಿಂದ ವೇದವ್ಯಾಸರಿಗೆ, ವೇದವ್ಯಾಸರಿಂದ ಶುಕಮುನಿಗಳಿಗೆ, ಮತ್ತು ಈಗ ಶುಕಮುನಿಗಳಿಂದ ಪರೀಕ್ಷಿತರಾಜನಿಗೆ ಪರಂಪರಾನುಗತವಾಗಿ ಬೋಧಿಸಲ್ಪಟ್ಟಿತು. ಅನಂತರ, ಅಲ್ಲಿ ನೆರೆದಿದ್ದ ಋಷಿಸ್ತೋಮದಲ್ಲಿ ಒಬ್ಬರಾದ ಸೂತಪುರಾಣಿಕರು ಶೌನಕಾದಿ ಋಷಿವೃಂದಕ್ಕೆ ಭಾಗವತವನ್ನು ತಲುಪಿಸಿದರು.
ತನ್ನ ಅಜ್ಜನಾದ ಅರ್ಜುನ ಭಗವಂತನಿಂದ ಗೀತೋದಯಕ್ಕೆ ಹೇಗೆ ಕಾರಣನಾದನೋ, ಪರೀಕ್ಷಿತನು ಭಾಗವತೋಪದೇಶಕ್ಕೆ ಕಾರಣನಾದ. ದುರ್ಮರಣವನ್ನು ತಂದೊಡ್ಡುವಂಥ ಒಂದು ಶಾಪ ಅವನಿಗೆ ಮುಕ್ತಿಯನ್ನು ನೀಡುವಂತಾಯಿತಲ್ಲದೆ ಅವನಿಂದ ಜನರಿಗೆ ಪರಮೋಪಕಾರವನ್ನೂ ಮಾಡಿಸಿತು. ಹೀಗೆ ಅವನಿಗೊದಗಿದ ಶಾಪವೇ ವರವಾಗಿ ಪರಿಣಮಿಸಿತು!
ಭಾಗವತವನ್ನು ಉಪದೇಶಿಸಿದ ಶುಕಮುನಿಗಳು ಪರೀಕ್ಷಿತನಿಗೆ ಭಯ ತ್ಯಜಿಸಲು ಹೇಳಿ ಪರಮ ಪುರುಷ ಶ್ರೀಕೃಷ್ಣನನ್ನೇ ಧ್ಯಾನಿಸಲು ಹೇಳಿದರು. ಆಗ ತಕ್ಷಕನು ಬಂದು ಕಚ್ಚಿದರೂ ಅವನಿಗೆ ಅದರ ಪರಿವೆಯೇ ಇರುವುದಿಲ್ಲವೆಂದು ಹೇಳಿದರು. ಹೀಗೆ ಹೇಳಿ ಅವರು ಹೊರಟುಹೋದರು.
ಪರೀಕ್ಷಿತ ತಾನು ನಾಶವಾಗುವ ದೇಹವಲ್ಲದೇ ಅವಿನಾಶಿಯಾದ ಆತ್ಮವೆಂದೂ ದೇವೋತ್ತಮ ಪರಮಪುರುಷನ ಅಂಶವೆಂದೂ, ಅರಿತು ಶ್ರೀಕೃಷ್ಣನ ಧ್ಯಾನದಲ್ಲಿ ತಲ್ಲೀನನಾದ. ಏಳನೆಯ ದಿನದಂದು, ಬ್ರಾಹ್ಮಣ ಕುಮಾರನ ಶಾಪದಿಂದ ಪ್ರೇರಿತವಾಗಿ ತಕ್ಷಕನೆಂಬ ಸರ್ಪ ರಾಜನನ್ನು ಕಚ್ಚಲು ಬಂದಿತು. ಅದೇ ಸಮಯದಲ್ಲಿ ವಿಷಚಿಕಿತ್ಸೆ ಮಾಡುವುದರಲ್ಲಿ ನಿಷ್ಣಾತನಾಗಿದ್ದ ಕಶ್ಯಪನೆಂಬ ಬ್ರಾಹ್ಮಣ ರಾಜನನ್ನುಳಿಸಲು ಬರುತ್ತಿದ್ದ. ತಕ್ಷಕನು ಅವನಿಗೆ ಯಥೇಷ್ಟವಾಗಿ ಹಣ ನೀಡಿ ಕಳುಹಿಸಿಬಿಟ್ಟ. ತನ್ನ ಇಚ್ಛೆಯಂತೆ ರೂಪವನ್ನು ಧರಿಸಬಲ್ಲವನಾದ ಅವನು ಬ್ರಾಹ್ಮಣನ ವೇಷಾಂತರದಲ್ಲಿ ಬಂದು ರಾಜನನ್ನು ಕಚ್ಚಿಬಿಟ್ಟ! ಒಡನೆಯೇ ರಾಜನ ದೇಹ, ಆಪಾದಮಸ್ತಕವಾಗಿ ಸುಟ್ಟು ಭಸ್ಮವಾಯಿತು! ಆದರೆ ರಾಜನ ದೇಹವಷ್ಟೇ ನಾಶವಾಯಿತೇ ಹೊರತು, ಕೃಷ್ಣಧ್ಯಾನದ ಮೂಲಕ ಅವನಾಗಲೇ ದೇಹವನ್ನು ತ್ಯಜಿಸಿ ಪರಂಧಾಮವನ್ನೈದಿದ್ದ. ನೆರೆದಿದ್ದ ಮುನಿವರ್ಯರು ಪರೀಕ್ಷಿತ ರಾಜನ ನಿರ್ಯ್ಣವನ್ನು ಕಂಡು ಆಶ್ಚರ್ಯಚಕಿತರಾದರು. ದೇವದುಂದುಭಿಗಳು ಮೊಳಗಿದವು. ಗಂಧರ್ವಾಪ್ಸರೆಯರು ಗಾನ, ನರ್ತನಗಳಿಂದ ಪರೀಕ್ಷಿತನನ್ನು ಪರಂಧಾಮಕ್ಕೆ ಸ್ವಾಗತಿಸಿದರು.