ಚಟ್ನಿಗಳ ವೈವಿಧ್ಯ

ವಿವಿಧ ರೀತಿಯ ಚಟ್ನಿಗಳನ್ನು ಮಾಡುವ ವಿಧಾನವನ್ನು ಕೊಟ್ಟಿದ್ದೇವೆ.  ಈ ತಿನಿಸುಗಳನ್ನು ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.

ಕ್ಯಾರೆಟ್‌ ಚಟ್ನಿ

ಬೇಕಾಗುವ ಸಾಮಗ್ರಿಗಳು :

ತುರಿದ ಕ್ಯಾರೆಟ್‌ – 1 ಬಟ್ಟಲು

ಇಂಗು – ಚಿಟಿಕೆ

ಹುರಿಗಡಲೆ – 1 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – ಸ್ವಲ್ಪ

ಕೊತ್ತಂಬರಿ ಸೊಪ್ಪು – ಸ್ವಲ್ಪ

ಸಾಸಿವೆ – 1/4 ಚಮಚ

ಉದ್ದಿನ ಬೇಳೆ – 1/4 ಚಮಚ

ಕರಿಬೇವು – 1 ಎಸಳು

ಮಾಡುವ ವಿಧಾನ : ಹಸಿರು ಮೆಣಸು, ಕೊತ್ತಂಬರಿ ಸೊಪ್ಪು, ಇಂಗು, ಹುರಿಗಡಲೆ, ಉಪ್ಪನ್ನು ಸೇರಿಸಿ ರುಬ್ಬಬೇಕು. ಬಾಂಡ್ಲಿಯಲ್ಲಿ ಎಣ್ಣೆ ಹಾಕಿ ಸಾಸಿವೆಯನ್ನು ಸಿಡಿಸಿ ಉದ್ದಿನ ಬೇಳೆ ಹಾಗೂ ಕರಿಬೇವನ್ನು ಸೇರಿಸಿ ಹುರಿಯಬೇಕು. ರುಬ್ಬಿದ ಮಿಶ್ರಣಕ್ಕೆ ಸೇರಿಸಿ ಹಾಗೂ ತುರಿದ ಕ್ಯಾರೆಟನ್ನು ಸೇರಿಸಿ ಮಿಶ್ರಮಾಡಿದರೆ ರುಚಿಯಾದ ಚಟ್ನಿ ರೆಡಿ.

ಪಾಲಕ್‌ ಸೊಪ್ಪಿನ ಚಟ್ನಿ

ಬೇಕಾಗುವ ಸಾಮಗ್ರಿಗಳು :

ಪಾಲಕ್‌ ಸೊಪ್ಪು  – 1 ದೊಡ್ಡ ಕಟ್ಟು

ಎಣ್ಣೆ – ಸ್ವಲ್ಪ

ಹಸಿಮೆಣಸಿನಕಾಯಿ – 5 ರಿಂದ 6

ಜೀರಿಗೆ – 1 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ:  ಪಾಲಕ್‌ ಸೊಪ್ಪನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಬಿಡಿಸಿ, ಇದರ ಜೊತೆ ಮೇಲೆ ತಿಳಿಸಿದ ಎಲ್ಲ ಪದಾರ್ಥಗಳನ್ನು ಎಣ್ಣೆಯಲ್ಲಿ  ಹುರಿದು ತಣ್ಣಗಾದ ಅನಂತರ ಮಿಕ್ಸಿಯಲ್ಲಿ ರುಬ್ಬಿ. ಇದಕ್ಕೆ ನಿಂಬೆರಸ ಅಥವಾ ಮೊಸರನ್ನು ಸೇರಿಸಿ ಕಲೆಸಿದರೆ ರೆಡಿ. ಇದೇ ತರಹ ದಂಟಿನ ಸೊಪ್ಪಿನಲ್ಲೂ ಮಾಡಬಹುದು.

ಮೂಲಂಗಿ ಚಟ್ನಿ

ಬೇಕಾಗುವ ಸಾಮಗ್ರಿಗಳು :

ಮೂಲಂಗಿ ಹೋಳು  – 2 ಲೋಟ

ಒಣ ಮೆಣಸಿನಕಾಯಿ – 4 ರಿಂದ 5

ಉಪ್ಪು – ರುಚಿಗೆ ತಕ್ಕಷ್ಟು

ಹುಣಸೆ ಹಣ್ಣು – ಗೋಲಿ ಗಾತ್ರದ್ದು

ಇಂಗು – ಸ್ವಲ್ಪ

ಬೆಲ್ಲ – ಚೂರು

ತೆಂಗಿನ ತುರಿ – 1/4 ಲೋಟ

ಹುರಿಗಡಲೆ – 1 ಚಮಚ

ಕೊತ್ತಂಬರಿ ಸೊಪ್ಪು – ಸ್ವಲ್ಪ

ಕರಿಬೇವು – 1 ಕಡ್ಡಿ

ಸಾಸಿವೆ – ಸ್ವಲ್ಪ

ಎಣ್ಣೆ – ಸ್ವಲ್ಪ

ಮಾಡುವ ವಿಧಾನ :  ಒಣ ಮೆಣಸಿನಕಾಯಿ, ಕಾಯಿತುರಿ, ಉಪ್ಪು, ಇಂಗು, ಹುಣಸೆಹಣ್ಣು, ಹುರಿಗಡಲೆ, ಬೆಲ್ಲ ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿ ರುಬ್ಬಿದನಂತರ ಮೂಲಂಗಿ ಹೋಳುಗಳನ್ನು ಹಾಕಿ ಮಿಕ್ಸಿಯನ್ನು ಅರ್ಧ ತಿರುಗಿಸಿದರೆ ಸಾಕು. ಎಣ್ಣೆಯಲ್ಲಿ ಸಾಸಿವೆ ಹಾಗೂ ಕರಿಬೇವನ್ನು ಒಗ್ಗರಿಸಿ ಮಿಶ್ರಣಕ್ಕೆ ಹಾಕಿದರೆ ರುಚಿಯಾದ ಮೂಲಂಗಿ ಚಟ್ನಿ ರೆಡಿ. ಇದು ಅನ್ನಕ್ಕೆ ಹೆಚ್ಚು ಹೊಂದುತ್ತದೆ.

ಹೀರೇಕಾಯಿ ಚಟ್ನಿ

ಬೇಕಾಗುವ ಸಾಮಗ್ರಿಗಳು :

ಹೀರೇಕಾಯಿ ಹೋಳುಗಳು  – 2 ಲೋಟ

ಹಸಿ ಮೆಣಸಿನಕಾಯಿ – 3 ರಿಂದ 4

ಉಪ್ಪು – ರುಚಿಗೆ ತಕ್ಕಷ್ಟು

ಕೊತ್ತಂಬರಿ ಸೊಪ್ಪು – ಸ್ವಲ್ಪ

ಎಣ್ಣೆ , ಸಾಸಿವೆ – ಸ್ವಲ್ಪ

ಮಾಡುವ ವಿಧಾನ : ಸಾಸಿವೆ, ಎಣ್ಣೆ  ಹೊರತುಪಡಿಸಿ ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳನ್ನು ಎಣ್ಣೆಯಲ್ಲಿ ಹುರಿದು ತಣ್ಣಗಾದ ಅನಂತರ ರುಬ್ಬಿ. ಸಾಸಿವೆ ಹಾಗೂ ಕರಿಬೇವನ್ನು ಎಣ್ಣೆಯಲ್ಲಿ ಒಗ್ಗರಿಸಿ ತಯಾರಾದ ಮಿಶ್ರಣಕ್ಕೆ ಹಾಕಿದರೆ ಚಟ್ನಿ ರೆಡಿ.

ಈ ಲೇಖನ ಶೇರ್ ಮಾಡಿ