ಪರಮ ಪುರುಷನಾದ ಭಗವಂತನಿಗೆ ಈ ನಮ್ಮ ಪುಣ್ಯಭೂಮಿಯಲ್ಲಿ ಅದೆಷ್ಟು ಕ್ಷೇತ್ರಗಳು! ಅದೆಷ್ಟು ಉತ್ಸವಗಳು! ಅದೆಷ್ಟು ನೈವೇದ್ಯಗಳು! – ಕೋವಿಲ್ ಕದಂಬಮ್, ದಧ್ಯನ್ನ, ಕಲ್ಲು ಸಕ್ಕರೆ ಪೊಂಗಲ್ ಈ ತಿನಿಸುಗಳನ್ನು ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ತಮಿಳುನಾಡಿನ ವೈಷ್ಣವ ದೇವಾಲಯಗಳಲ್ಲಿ ಅಕ್ಕಿ, ಬೇಳೆ, ತರಕಾರಿಗಳು ಮತ್ತು ಕಾಳುಗಳಿಂದ ತಯಾರಿಸಲ್ಪಡುವ `ಕೋವಿಲ್ ಕದಂಬಮ್’ ಹೆಸರಾಂತ ನೈವೇದ್ಯ.
ಕೋವಿಲ್ ಕದಂಬಮ್
ತಯಾರಿಸಲು ಬೇಕಾದ ಪದಾರ್ಥಗಳು
ಅಕ್ಕಿ – 1 ಪಾವು
ತೊಗರಿ ಬೇಳೆ – 1/4 ಪಾವು
ಅರಿಶಿನ ಪುಡಿ – ಒಂದು ಚಿಟಿಕೆ
ನೆನೆಸಿದ ರಾಜ್ಮ, ಕಡಲೆ, ಕಾರಾಮಣಿ ಮತ್ತು ಹೆಸರು ಕಾಳುಗಳ ಮಿಶ್ರ – 3/4 ಪಾವು
ಹುಣಸೇ ಹಣ್ಣು – ಚಿಕ್ಕ ನಿಂಬೆ ಗಾತ್ರ (ನೆನೆಸಿ ರಸ ತೆಗೆದಿಟ್ಟುಕೊಳ್ಳಬೇಕು)
ತರಕಾರಿಗಳು – ಬದನೆ ಕಾಯಿ, ಕುಂಬಳ ಕಾಯಿ, ಬೆಂಡೆ ಕಾಯಿ, ತೊಂಡೆ ಕಾಯಿ, ಬೀನ್ಸ್, ಕ್ಯಾರಟ್, ಸೀಮೆ ಬದನೆ ಕಾಯಿಗಳ ಮಿಶ್ರ – 2 ಪಾವು (ಎಲ್ಲ ಕಾಯಿಗಳನ್ನೂ ಉದ್ದುದ್ದಕ್ಕೆ ಹೆಚ್ಚಿಕೊಳ್ಳಬೇಕು)
ಕದಂಬಮ್ ಸಾಂಬಾರ್ ಪುಡಿಗೆ
ಕೊತ್ತಂಬರಿ ಬೀಜ – 1 ಟೇಬಲ್ ಚಮಚ
ಉದ್ದಿನ ಬೇಳೆ – 1 ಟೀ ಚಮಚ
ಕಡಲೆ ಬೇಳೆ – 1 ಟೀ ಚಮಚ
ಇಂಗು – 1 ಚಿಟಿಕೆ
ಒಣ ಮೆಣಸಿನ ಕಾಯಿ – 6
ಮೆಂತ್ಯ – 1/4 ಟೀ ಚಮಚ
ಕರಿ ಮೆಣಸು ಕಾಳು – 1/2 ಟೀ ಚಮಚ
ಜೀರಿಗೆ – 1/2 ಟೀ ಚಮಚ
ಎಳ್ಳು – 2 ಟೇಬಲ್ ಚಮಚ
ಉಪ್ಪು – 2 ಟೀ ಚಮಚ ( ರುಚಿಗೆ ತಕ್ಕಷ್ಟು)
ಒಗ್ಗರಣೆಗೆ
ಸಾಸಿವೆ – 1/4 ಟೀ ಚಮಚ
ಕಡಲೆ ಕಾಯಿ – ಒಂದು ಹಿಡಿ
ಕರಿಬೇವಿನ ಸೊಪ್ಪು – ಒಂದು ಹಿಡಿ
ಎಳ್ಳೆಣ್ಣೆ – 3 ಟೇಬಲ್ ಚಮಚ
ತಯಾರಿಸುವ ವಿಧಾನ
1. ಮೂರು ಕುಕ್ಕರ್ ಪಾತ್ರೆಗಳಲ್ಲಿ ತೊಳೆದ ಅಕ್ಕಿ, ತೊಗರಿ ಬೇಳೆ (ಅರಿಶಿನ ಪುಡಿ ಸೇರಿಸಿ) ಮತ್ತು ನೆನೆಸಿದ ಕಾಳುಗಳನ್ನು ಬೇರೆ ಬೇರೆಯಾಗಿ, ತಕ್ಕಷ್ಟು ನೀರು ಹಾಕಿ ಕುಕ್ಕರಿನಲ್ಲಿಟ್ಟು ಬೇಯಿಸಿಕೊಳ್ಳಬೇಕು.
2. ಬಾಣಲೆಯಲ್ಲಿ ಮೆಂತ್ಯ, ಎಳ್ಳು, ಕರಿ ಮೆಣಸು, ಮತ್ತು ಜೀರಿಗೆಯನ್ನು ಒಂದಾದ ಮೇಲೆ ಒಂದನ್ನು ಹುರಿದುಕೊಳ್ಳಬೇಕು.
3. ಅನಂತರ ಬಾಣಲೆಯಲ್ಲಿ ಕಾಲು ಚಮಚ ಎಣ್ಣೆಯನ್ನು ಕಾಯಿಸಿ ಕೊತ್ತಂಬರಿ ಬೀಜ, ಕಡಲೆ ಬೇಳೆ, ಉದ್ದಿನ ಬೇಳೆ, ಒಣ ಮೆಣಸಿನಕಾಯಿ ಮತ್ತು ಇಂಗನ್ನು ಘಮ್ ಎನ್ನುವಂತೆ ಹುರಿದುಕೊಳ್ಳಬೇಕು.
4. ಆರಿದನಂತರ ಹುರಿದ ಪದಾರ್ಥಗಳನ್ನೆಲ್ಲ ಸೇರಿಸಿ ಪುಡಿ ಮಾಡಿಕೊಳ್ಳಬೇಕು.
5. ಅದೇ ಬಾಣಲೆಯಲ್ಲಿ ಉಳಿದ ಎಣ್ಣೆಯನ್ನು ಕಾಯಿಸಿ ಸಾಸಿವೆ ಮತ್ತು ಕಡಲೆ ಬೀಜಗಳನ್ನು ಸಿಡಿಸಿಕೊಳ್ಳಬೇಕು.
6. ಕರಿಬೇವನ್ನು ಹಾಕಿ ಕೆದಕಿ, ಅನಂತರ ತೊಂಡೆ ಕಾಯಿ ಹಾಕಿ ಸ್ವಲ್ಪ ಕೆದಕಬೇಕು.
7. ಎಲ್ಲ ತರಕಾರಿಗಳನ್ನೂ ಹಾಕಿ ನಾಲ್ಕೈದು ನಿಮಿಷಗಳು ಕೆದಕಿ ಹುಣಸೆ ರಸವನ್ನೂ ಉಪ್ಪನ್ನೂ ಹಾಕಿ ಕುದಿಸಬೇಕು.
8. ಕಾಯಿ ಬೆಂದನಂತರ ಬೆಂದ ಕಾಳುಗಳನ್ನೂ ಬೇಳೆಯನ್ನೂ ಸೇರಿಸಿ ಕುದಿಸಿ, ಕದಂಬಮ್ ಸಾಂಬಾರ್ ಪುಡಿಯನ್ನೂ ಹಾಕಬೇಕು.
9. ಗಂಟಿಲ್ಲದೇ ಸಾಂಬಾರನ್ನು ಕುದಿಸಿ, ಬೆಂದ ಅನ್ನವನ್ನು ಸೇರಿಸಿ ತಳ ಹಿಡಿಯದಂತೆ ಎಚ್ಚರ ವಹಿಸಿ ಕಲಸಿ ಒಲೆಯನ್ನು ಆರಿಸಬೇಕು.
ಘಮ ಘಮ ಪರಿಮಳ ಸೂಸುವ ಕೋವಿಲ್ ಕದಂಬಮ್ ನೈವೇದ್ಯಕ್ಕೆ ಸಿದ್ಧ.
ದಧ್ಯನ್ನ
ಕೃಷ್ಣನನ್ನು ಸ್ಮರಿಸುವಾಗ ಆತನಿಗೆ ಪ್ರಿಯವಾದ ಹಾಲು, ಮೊಸರು ಬೆಣ್ಣೆಗಳ ನೆನಪು ಬಾರದೆ ಇರುವುದಿಲ್ಲ. ಮೊಸರಿನಲ್ಲಿ ಶ್ರೀ ಲಕ್ಷ್ಮಿ ವಾಸವಾಗಿರುವುದಾಗಿ ಪ್ರತೀತಿ. ಅಂತಹ ಲಕ್ಷ್ಮೀಕರವಾದ ದಧ್ಯನ್ನವನ್ನು (ಮೊಸರನ್ನ) ಆತನಿಗೆ ನೈವೇದ್ಯ ಮಾಡುವುದು ಸೂಕ್ತವಲ್ಲವೇ?
ತಯಾರಿಸಲು ಬೇಕಾದ ಪದಾರ್ಥಗಳು
ಮೃದುವಾಗಿ ಬೇಯಿಸಿದ ಅನ್ನ – 1 ಕಪ್
ಗಟ್ಟಿ ಮೊಸರು – 2 ಕಪ್
ಕಾಯಿಸಿದ ಹಾಲು – 1/4 ಕಪ್
ಉಪ್ಪು – 1/4 ಟೀ ಚಮಚ
ಒಗ್ಗರಣೆಗೆ
ತುಪ್ಪ – 1 ಟೇಬಲ್ ಚಮಚ
ಕರಿ ಮೆಣಸು – 1/4 ಟೀ ಚಮಚ
ಜೀರಿಗೆ – 1/4 ಟೀ ಚಮಚ
ಕರಿ ಬೇವಿನ ಸೊಪ್ಪು
ಸಿಹಿಯಾದ ದಾಳಿಂಬೆ ಮಣಿಗಳು – 2 ಟೇಬಲ್ ಚಮಚ
ತಯಾರಿಸುವ ವಿಧಾನ
1. ಅಕ್ಕಿಯನ್ನು ಮೂರು ಪಟ್ಟು ನೀರು ಹಾಕಿ ಮೃದುವಾಗಿ ಬೇಯಿಸಿಕೊಳ್ಳಬೇಕು.
2. ಅನ್ನ ಸ್ವಲ್ಪ ಬಿಸಿ ಇರುವಾಗಲೇ ಉಪ್ಪನ್ನು ಹಾಕಿ ಚೆನ್ನಾಗಿ ಹಿಟ್ಟಿನಂತೆ ನಾದಿ ಕಲಸಬೇಕು. ಕೈಯಿಂದ ಕಲಸುವುದು ಉತ್ತಮ.
3. ಮೊಸರನ್ನು ಸೇರಿಸಿ ಅನ್ನವನ್ನು ಬೆಣ್ಣೆಯಷ್ಟು ಮೃದುವಾಗುವಂತೆ ಕಲಸಬೇಕು.
4. ಕಾಸಿದ ಹಾಲನ್ನು ಸೇರಿಸಿ ಮತ್ತೆ ಕಲಸಬೇಕು.
5. ತುಪ್ಪವನ್ನು ಬಿಸಿ ಮಾಡಿ ಮೆಣಸು ಜೀರಿಗೆ ಸಿಡಿಸಿ, ಕರಿಬೇವನ್ನೂ ಸೇರಿಸಿ ಒಗ್ಗರಣೆ ಹಾಕಬೇಕು.
ಸಿಹಿ ದಾಳಿಂಬೆ ಹಣ್ಣಿನ ಮಣಿಗಳನ್ನು ಹಾಕಿ ಅಲಂಕರಿಸಿದರೆ, ರತ್ನ ಖಚಿತ ಮುತ್ತಂಗಿಯನ್ನು ಹೋಲುವ ದಧ್ಯನ್ನ ನೈವೇದ್ಯಕ್ಕೆ ಸಿದ್ಧ.
ಕಲ್ಲು ಸಕ್ಕರೆ ಪೊಂಗಲ್
ಭಕ್ತಿಯಿಂದ ಒಂದು ತುಳಸಿ ದಳ ಅಥವಾ ಬೊಗಸೆ ನೀರನ್ನು ಅರ್ಪಿಸಿದರೂ ಸಂತುಷ್ಟನಾಗುವನು ಕರುಣಾಮಯಿ ಗೋವಿಂದ. ಕಲ್ಲು ಸಕ್ಕರೆಯಿಂದ ತಯಾರಿಸಲ್ಪಡುವ ಉತ್ತಮ ಮಹಾ ನೈವೇದ್ಯ ಕಲ್ಲು ಸಕ್ಕರೆ ಪೊಂಗಲ್.
ತಯಾರಿಸಲು ಬೇಕಾದ ಪದಾರ್ಥಗಳು
ಅಕ್ಕಿ – 3/4 ಪಾವು
ಹೆಸರು ಬೇಳೆ – 1/4 ಪಾವು
ಕುಟ್ಟಿ ಪುಡಿ ಮಾಡಿದ ಕೆಂಪು ಕಲ್ಲು ಸಕ್ಕರೆ – 1 1/2 ಪಾವು
ಹಾಲು – 1 ಕಪ್
ತುಪ್ಪ – 3 ಟೇಬಲ್ ಚಮಚ
ಬಾದಾಮಿ/ಗೋಡಂಬಿ ಮತ್ತು ದ್ರಾಕ್ಷಿ – ಬೇಕಿರುವಷ್ಟು
ಏಲಕ್ಕಿ ಪುಡಿ – 1 ಚಿಟಿಕೆ
ಕುಂಕುಮ ಕೇಸರಿ – 1 ಚಿಟಿಕೆ
ತಯಾರಿಸುವ ವಿಧಾನ
1. ಅಕ್ಕಿ ಮತ್ತು ಬೇಳೆಯನ್ನು ಬರಿ ಬಾಣಲೆಯಲ್ಲಿ ಘಮ್ ಎಂದು ಹುರಿದುಕೊಳ್ಳಬೇಕು.
2. ಹುರಿದ ಅಕ್ಕಿ ಬೇಳೆಗಳನ್ನು ಹಾಲು ಮತ್ತು ಮೂರು ಪಾವು ನೀರು ಹಾಕಿ ಕುಕ್ಕರಿನಲ್ಲಿ ಮೃದುವಾಗುವಂತೆ ಬೇಯಿಸಿಕೊಳ್ಳಬೇಕು.
3. ದಪ್ಪ ತಳವಿರುವ ಬಾಣಲೆಯಲ್ಲಿ ಪುಡಿ ಮಾಡಿದ ಕಲ್ಲು ಸಕ್ಕರೆ ಹಾಕಿ, ಅರ್ಧ ಲೋಟ ನೀರು ಹಾಕಿ ಕುದಿಸಬೇಕು.
4. ಎಳೆ ಪಾಕ ಬಂದಾಗ ಬೇಯಿಸಿದ ಅಕ್ಕಿ ಬೇಳೆ ಮಿಶ್ರವನ್ನು ಹಾಕಿ ಚೆನ್ನಾಗಿ ಕೈಯಾಡಿಸಬೇಕು.
5. ಪೊಂಗಲ್ ಒಟ್ಟಿಗೆ ಕೂಡಿ ಬರುವಾಗ ಏಲಕ್ಕಿ ಪುಡಿ, ಕುಂಕುಮ ಕೇಸರಿ ಮತ್ತು ತುಪ್ಪ ಸೇರಿಸಿ ಕೈಯಾಡಿಸಬೇಕು.
6. ಬಾಣಲೆಗೆ ಅಂಟದೇ ಇರುವ ಪಕ್ವವನ್ನು ಹೊಂದಿದಾಗ ಒಲೆ ಆರಿಸಬೇಕು.
ತುಪ್ಪದಲ್ಲಿ ಕರಿದ ದ್ರಾಕ್ಷಿ ಗೋಡಂಬಿ/ಬಾದಾಮಿಯಿಂದ ಅಲಂಕರಿಸಿದರೆ ಮಹಾ ನೈವೇದ್ಯಕ್ಕೆ ಘಮ ಘಮಿಸುವ ಕಲ್ಲು ಸಕ್ಕರೆ ಪೊಂಗಲ್ ಸಿದ್ಧ.