ಎಲ್ಲ ರೀತಿಯ ಗೊಜ್ಜುಗಳು ರೊಟ್ಟಿ, ಚಪಾತಿಗೆ ಹೊಂದುತ್ತವೆ. ಇವುಗಳನ್ನು ತಯಾರಿಸಿ, ಶ್ರೀ ರಾಧಾ ಕೃಷ್ಣನಿಗೆ ಅರ್ಪಿಸಿದ ಅನಂತರ ಮನೆಯವರೊಂದಿಗೆ ನೀವೂ ಸವಿಯಿರಿ.
ಸೀಮೆಬದನೆಕಾಯಿ ಗೊಜ್ಜು

ಬೇಕಾಗುವ ಸಾಮಗ್ರಿ
ಸೀಮೆಬದನೆಕಾಯಿ ಹೋಳು – 1 ಕಪ್
ಟೊಮ್ಯಾಟೋ ಹೋಳು – 1/2 ಕಪ್
ಉಪ್ಪು – ರುಚಿಗೆ
ಎಣ್ಣೆ – 2 ಚಮಚ
ಚಕ್ಕೆ – 1/4 ಇಂಚು
ಕರೀಬೇವು – 1 ಕಡ್ಡಿ
ಹುರಿಗಡಲೆ – 1 ಚಮಚ
ಹಸಿರು ಮೆಣಸಿನಕಾಯಿ – 3, 4
ಕಾಯಿ ತುರಿ – 1/4 ಕಪ್
ಮಾಡುವ ವಿಧಾನ : ಸೀಮೆಬದನೆಕಾಯಿಯ ಹೋಳುಗಳನ್ನು ಆವಿಯಲ್ಲಿ ಬೇಯಿಸಿ. ಚಕ್ಕೆ, ಹುರಿಗಡಲೆ, ಕಾಯಿ ತುರಿ ಹಾಗೂ ಉಪ್ಪನ್ನು ಸೇರಿಸಿ ರುಬ್ಬಬೇಕು. ಬಾಂಡ್ಲಿಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ ಕರೀಬೇವನ್ನು ಸಿಡಿಸಿ. ಅನಂತರ ಟೊಮ್ಯಾಟೋ ಹೋಳುಗಳನ್ನು ಕಾಕಿ ಹುರಿದು ಬೆಂದ ಸೀಮೆಬದನೆಕಾಯಿ ಹೋಳುಗಳನ್ನು ಸೇರಿಸಿ ಸಾಕಷ್ಟು ನೀರನ್ನು ಹಾಕಿ ಕುದಿಸಿ. ಅನಂತರ ರುಬ್ಬಿದ ಮಿಶ್ರಣವನ್ನು ಸೇರಿಸಿ ಕುದಿಸಿದರೆ ಗೊಜ್ಜು ರೆಡಿ.
ಬೆಂಡೆಕಾಯಿ ಗೊಜ್ಜು

ಬೇಕಾಗುವ ಸಾಮಗ್ರಿ
ಬೆಂಡೆಕಾಯಿ ಹೋಳು – 1 ಕಪ್
ಉಪ್ಪು – ರುಚಿಗೆ
ಹಸಿರು ಮೆಣಸಿನಕಾಯಿ – 4, 5
ಕೆಂಪು ಮೆಣಸಿನಕಾಯಿ ಚೂರು – 4
ಕರೀಬೇವು – 1 ಕಡ್ಡಿ
ಸಾಸಿವೆ – 1/4 ಚಮಚ
ಟೊಮ್ಯಾಟೋ ಹೋಳು – 1/2 ಕಪ್
ಹುಣಿಸೇ ನೀರು – 1/2 ಚಮಚ
ಬೆಲ್ಲ – ಒಂದು ಚೂರು
ಹುರಿಗಡಲೆ – 1 ಚಮಚ
ಕಾಯಿ ತುರಿ – 1 1/2 ಚಮಚ
ಎಣ್ಣೆ – 2 ಚಮಚ
ಮಾಡುವ ವಿಧಾನ : ಬಾಂಡ್ಲಿಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ ಕರೀಬೇವನ್ನು ಸಿಡಿಸಿ. ಅನಂತರ ಕೆಂಪು ಮೆಣಸು ಮತ್ತು ಟೊಮ್ಯಾಟೋ ಹೋಳುಗಳನ್ನು ಹಾಕಿ ಸ್ವಲ್ಪ ಹುರಿದು ಬೆಂಡೇಕಾಯಿ ಹೋಳುಗಳನ್ನು ಹಾಕಿ ಮೆತ್ತಗಾಗುವವರೆಗೂ ಹುರಿಯಿರಿ. ಹುರಿಗಡಲೆ, ಕಾಯಿತುರಿ, ಹಸಿರು ಮೆಣಸು, ಬೆಲ್ಲ ಮತ್ತು ಉಪ್ಪನ್ನು ಸೇರಿಸಿ ರುಬ್ಬಿರಿ. ಇದನ್ನು ಬೆಂಡೆಕಾಯಿ ಮಿಶ್ರಣಕ್ಕೆ ಹಾಕಿ ಕೆದಕಿ. ಹುಣಸೇ ನೀರನ್ನು ಸೇರಿಸಿ ಕುದಿಸಿ. ಬೇಕಾದರೆ ನೀರು ಸೇರಿಸಿದರೆ ಬೆಂಡೆಕಾಯಿ ಗೊಜ್ಜು ರೆಡಿ.
ದಪ್ಪ ಮೆಣಸಿನಕಾಯಿ ಗೊಜ್ಜು

ಬೇಕಾಗುವ ಸಾಮಗ್ರಿ
ದಪ್ಪ ಮೆಣಸಿನಕಾಯಿ ಹೋಳು – 1 ಕಪ್
ಟೊಮ್ಯಾಟೋ ಹೋಳು – 1/2 ಕಪ್
ಹುರಿಗಡಲೆ ಹಿಟ್ಟು – 1 1/4 ಚಮಚ
ಹಸಿರು ಮೆಣಸಿನಕಾಯಿ – 4, 5
ಹುಣಿಸೇ ನೀರು – 1/2 ಚಮಚ
ಬೆಲ್ಲ – ಒಂದು ಚೂರು
ಉಪ್ಪು – ರುಚಿಗೆ
ಕರೀಬೇವು – 1 ಕಡ್ಡಿ
ಸಾಸಿವೆ – 1/4 ಚಮಚ
ಎಣ್ಣೆ – 2 ಚಮಚ
ಮಾಡುವ ವಿಧಾನ : ದಪ್ಪ ಮೆಣಸಿನಕಾಯಿಯನ್ನು ಆವಿಯಲ್ಲಿ ಬೇಯಿಸಿ. ಹಸಿ ಮೆಣಸಿನಕಾಯಿಯನ್ನು ಉದ್ದಕ್ಕೆ ಕತ್ತರಿಸಿ. ಬಾಂಡ್ಲಿಯಲ್ಲಿ ಎಣ್ಣೆ ಹಾಕಿ ಕಾಯಿಸಿ ಸಾಸಿವೆ, ಹಸಿ ಮೆಣಸಿನಕಾಯಿ, ಕರೀಬೇವನ್ನು ಹಾಕಿ ಒಗ್ಗರಣೆ ಮಾಡಿ. ಅನಂತರ ಟೊಮ್ಯಾಟೋ ಹೋಳುಗಳನ್ನು ಸೇರಿಸಿ ಹುರಿದು ಬೆಂದ ದಪ್ಪ ಮೆಣಸಿನಕಾಯಿಯನ್ನು ಹುರಿದು ಸಾಕಷ್ಟು ನೀರನ್ನು ಹಾಕಿ ಕುದಿಸಿ. ಬೆಲ್ಲ, ಉಪ್ಪು, ಹುಣಿಸೇ ನೀರನ್ನು ಸೇರಿಸಿ. ಅನಂತರ ಹುರಿಗಡಲೆ ಹಿಟ್ಟನ್ನು ನೀರಿನಲ್ಲಿ ಕಲೆಸಿ ಸುರಿದು ಕೆದಕಬೇಕು. ಕುದಿ ಬಂದರೆ ಸಾಕು. ರುಚಿಯಾದ ದಪ್ಪ ಮೆಣಸಿನಕಾಯಿ ಗೊಜ್ಜು ಸಿದ್ಧ.
ಬಟಾಣಿ ಗೊಜ್ಜು

ಬೇಕಾಗುವ ಸಾಮಗ್ರಿ
ಬಟಾಣಿ ಕಾಳು – 1 ಕಪ್
ಆಲೂಗೆಡ್ಡೆ ಹೋಳು – 1/2 ಕಪ್
ಕಾಯಿತುರಿ – 1/4 ಕಪ್
ಧನಿಯ ಮಿಕ್ಸರ್ – 1/4 ಚಮಚ
ಉಪ್ಪು – ರುಚಿಗೆ
ಬೆಲ್ಲ – ಒಂದು ಚೂರು
ಕರೀಬೇವು – 1 ಕಡ್ಡಿ
ಸಾಸಿವೆ – 1/4 ಚಮಚ
ಹುರಿಗಡಲೆ – 1 ಚಮಚ
ಹುರಿದ ಕೆಂಪು ಮೆಣಸಿನಕಾಯಿ – 5
ಅರಿಶಿನ ಪುಡಿ – ಚಿಟಿಕೆ
ಹುಣಿಸೇ ಹಣ್ಣು – 1/2 ಇಂಚು
ಮಾಡುವ ವಿಧಾನ : ಸಾಕಷ್ಟು ನೀರಿನಲ್ಲಿ ಬಟಾಣಿ ಹಾಗೂ ಆಲೂಗೆಡ್ಡೆ ಹೋಳುಗಳನ್ನು ಬೇಯಿಸಬೇಕು. ಸಾಸಿವೆ, ಕರೀಬೇವು ಹೊರತು ಉಳಿದ ಸಾಮಗ್ರಿಗಳನ್ನು ಸೇರಿಸಿ ರುಬ್ಬಿ ಬೆಂದ ಮಿಶ್ರಣಕ್ಕೆ ಸೇರಿಸಿ ಕುದಿಸಿ. ಕರೀಬೇವನ್ನು ಹಾಕಿ ಮತ್ತು ಕೊನೆಗೆ ಸಾಸಿವೆ ಕಾಳನ್ನು ಸಿಡಿಸಿ ಸೇರಿಸಿ ಕುದಿಸಿದರೆ ರುಚಿಯಾದ ಬಟಾಣಿ ಗೊಜ್ಜು ಸಿದ್ಧ.