ಅದ್ವೈತ ಆಚಾರ್ಯ

ಫೆಬ್ರವರಿ 16, 2024, ರಥಸಪ್ತಮಿ, ಅದ್ವೈತ ಆಚಾರ್ಯರ ಆವಿರ್ಭಾವ ದಿನ

ಜನರಲ್ಲಿ ಭಕ್ತಿಸೇವೆಯ ಮಹತ್ವವನ್ನು ತಿಳಿಯಪಡಿಸಲು ಅವಿರತ ಶ್ರಮಿಸಿದ ಅದ್ವೈತ ಆಚಾರ್ಯರ  ಜೀವನಗಾಥೆ ಅತ್ಯಂತ ಆದರ್ಶ‌ನೀಯ ಮತ್ತು ಅನುಸರಣೀಯ. ಅವರು ನಡೆದ ಪಥದತ್ತ ಒಂದು ನೋಟ…

ಶ್ರೀ ಕೃಷ್ಣ ಚೈತನ್ಯ ಮಹಾಪ್ರಭುಗಳು ಭಕ್ತಿ ಆಂದೋಲನದ  ಹರಿಕಾರರು. ಅವರು ಹರಿಭಕ್ತಿ ಪ್ರಸಾರದ ಶರೀರವಾದರೆ, ಅದ್ವೈತ ಮತ್ತು ನಿತ್ಯಾನಂದರು ಅದರ ಅವಯವಗಳು. ಅದ್ವೈತರು‌ ಮಹಾ ವಿಷ್ಣುವಿನ ಅವತಾರ. ಅವರು ಪರಮ ಪ್ರಭುವಾದ ಶ್ರೀ ಹರಿಗಿಂತ ಭಿನ್ನರಲ್ಲವಾದುದರಿಂದ ಅವರನ್ನು ಅದ್ವೈತರೆಂದು ಕರೆಯುತ್ತಾರೆ. ಭಕ್ತಿಪಂಥ ಪ್ರಚಾರಪಡಿಸಿದ್ದರಿಂದ ಆಚಾರ್ಯ‌ ಎಂದೂ ಹೇಳುತ್ತಾರೆ. ಹೀಗಾಗಿ ಅವರು ಅದ್ವೈತ ಆಚಾರ್ಯ.‌

ಮಹಾಪ್ರಭುಗಳ ಸಂಕೀರ್ತನ‌ ಪದ್ಧತಿಯನ್ನು ಪ್ರಚಾರ ಮಾಡುವುದರ ಮೂಲಕ ಅದ್ವೈತರು ಬ್ರಹ್ಮಾಂಡವನ್ನು ಉದ್ಧರಿಸಿದರು. ಹೀಗೆ ಅದ್ವೈತರ ಅನುಗ್ರಹದಿಂದಾಗಿ ಜಗತ್ತಿನ ಜನರು ದೈವಪ್ರೇಮ ಎನ್ನುವ ನಿಧಿಯನ್ನು ಪಡೆದುಕೊಂಡರು.

ಶ್ರೀ ಚೈತನ್ಯರ ಆವಿರ್ಭಾವಕ್ಕೆ ಅದ್ವೈತ ಆಚಾರ್ಯರ ಕೊಡುಗೆ ಅಪಾರ. ಅವರು ಚೈತನ್ಯ ಪ್ರಭುಗಳ ತಂದೆಯ ಸಮಕಾಲೀನರು. ಪ್ರಭು ಕೃಷ್ಣನು ಅವತರಿಸಿದ ಅನಂತರವೂ ಕೃಷ್ಣನಿಗೆ ಭಕ್ತಿಸೇವೆಯನ್ನು ಸಲ್ಲಿಸಲು ಈ ಜಗತ್ತಿನಲ್ಲಿ ಯಾರೂ ಹೆಚ್ಚಿನ ಆಸಕ್ತಿ ವಹಿಸುತ್ತಿರಲಿಲ್ಲ ಎನ್ನುವ ವ್ಯಥೆ ಅವರದಾಗಿತ್ತು. ಭಕ್ತಿಸೇವೆಯ ಬಗೆಗೆ ಜನರಿಗೆ ತಿಳಿವನ್ನು ಮೂಡಿಸುವವನು ಸ್ವಯಂ ಕೃಷ್ಣನೇ ಎನ್ನುವುದು ಸ್ಪಷ್ಟವಾಗಿತ್ತು. ಅಲ್ಲದೆ, ಕಲಿಯುಗದ ಕಷ್ಟಕಾರ್ಪಣ್ಯಗಳನ್ನು ಕಂಡು ಮರುಗಿದ ಅದ್ವೈತರು ದೇವೋತ್ತಮ ಪರಮ ಪುರುಷನ ಅವತಾರಕ್ಕೆ ಸೂಕ್ತ ಸಮಯವೆಂದು ಭಾವಿಸಿದರು. ಆದುದರಿಂದ ಕೃಷ್ಣನನ್ನು ಕುರಿತು ಧ್ಯಾನಿಸಿದರು. “ಅವತರಿಸು, ದೇವ” ಎಂದು ಪರಿಪರಿಯಾಗಿ ಬೇಡುತ್ತಾ ಪ್ರೇಮ ಹೂಂಕಾರ ಮಾಡುತ್ತಿದ್ದರು. ಕೃಷ್ಣ ಚೈತನ್ಯರ ಅವತಾರಕ್ಕೆ ಇದು ಒಂದು  ಕಾರಣವೆನ್ನಲಾಗುತ್ತದೆ.

“ಅದ್ವೈತರು ಮೊದಲು ಗೌರಾಂಗರನ್ನು ಈ ಲೋಕಕ್ಕೆ ಕರೆತಂದರು ಅನಂತರ ಎಲ್ಲ ಕಡೆ ಅವರನ್ನು ಕೊಂಡಾಡಿದರು” ಎಂದು ಭಕ್ತಿ ರತ್ನಾಕರದಲ್ಲಿ ಹೇಳಿದೆ.

 ಕೌಟುಂಬಿಕ ಹಿನ್ನಲೆ

ಅದ್ವೈತ ಆಚಾರ್ಯ‌ರು ಸಿಲ್‌ಹಟ್‌ ನಗರಕ್ಕೆ ಸಮೀಪದ ನವಗ್ರಾಮ ಹಳ್ಳಿಯಲ್ಲಿ ಅವತರಿಸಿದರು. ಅವರ ತಂದೆ ಬ್ರಾಹ್ಮಣ ಕುಬೇರ ಪಂಡಿತ ಮತ್ತು ತಾಯಿ ನಭಾದೇವಿ. ಮಾಘ ಮಾಸದ ಶುಕ್ಲಪಕ್ಷ ಸಪ್ತಮಿಯಂದು ಅದ್ವೈತರು ಆವಿರ್ಭವಿಸಿದರು.‌ ಅಲ್ಲಿಂದ ಮುಂದೆ ಶಾಂತಿಪುರಕ್ಕೆ ಸ್ಥಳಾಂತರಗೊಂಡರು. ನವದ್ವೀಪದಲ್ಲಿಯೂ ಅವರಿಗೆ ನಿವಾಸವಿತ್ತು. ಅವರ ಪೂರ್ಣ‌ ಹೆಸರು ಶ್ರೀ ಕಮಲಾಕ್ಷ ಅಥವಾ ಕಮಲಾಕಾಂತ ವೇದಪಂಚಾನನ. ಅವರು ಕ್ರಿಸ್ತ ಶಕ 1434ರಲ್ಲಿ ಅವತರಿಸಿದರು ಮತ್ತು 1559ರಲ್ಲಿ ಈ ಲೋಕವನ್ನು ತ್ಯಜಿಸಿದರು. ಅಂದರೆ ಅವರು 125 ವರ್ಷ‌ ಈ ಲೋಕದಲ್ಲಿದ್ದರು.

ತಂದೆ, ತಾಯಿ ಈ ಲೋಕದಿಂದ ನಿರ್ಗಮಿಸಿದ ಮೇಲೆ ಅದ್ವೈತರು ಶ್ರಾದ್ಧ ವಿಧಿಗಳನ್ನು ಆಚರಿಸಲು ಗಯಾಕ್ಕೆ ಹೋದರು ಮತ್ತು ಅಲ್ಲಿಂದ ಇನ್ನಿತರ ಪವಿತ್ರ ಸ್ಥಳಗಳಿಗೆ ಯಾತ್ರೆ ಕೈಗೊಂಡರು. ಅನಂತರ ಅವರು ಶಾಂತಿಪುರಕ್ಕೆ ಹಿಂದಿರುಗಿದರು. ಜನರಿಗೆ ಭಗವದ್ಗೀತೆ ಮತ್ತು ಭಾಗವತವನ್ನು ಬೋಧಿಸಲು ಆರಂಭಿಸಿದರು. ಹೆಚ್ಚೂಕಮ್ಮಿ ಅದೇ ಸಮಯದಲ್ಲಿ ಮಾಧವೇಂದ್ರ ಪುರಿಯವರು ಶಾಂತಿಪುರಕ್ಕೆ ಆಗಮಿಸಿ ಅದ್ವೈತರ ಮನೆಯಲ್ಲಿ ತಂಗಿದರು. ಅವರ ದಿವ್ಯಾನಂದಗಳನ್ನು ನೋಡಿದ ಅದ್ವೈತರು “ಇವರೇ ನನ್ನ ಗುರು” ಎಂದು ನಿರ್ಧರಿಸಿಬಿಟ್ಟರು.‌ ಸ್ವತಃ ದೇವೋತ್ತಮನ ವಿಸ್ತರಣೆಯಾದರೂ ಅದ್ವೈತರು ಆಧ್ಯಾತ್ಮಿಕ ಗುರುವನ್ನು ಸ್ವೀಕರಿಸುವ ಅಗತ್ಯವನ್ನು ತಿಳಿಸುವ ಸಲುವಾಗಿ ದೀಕ್ಷೆಯನ್ನು ಪಡೆದುಕೊಂಡರು.

ಅದ್ವೈತರಿಗೆ ಆರು ಪುತ್ರರು.  ಅವರಲ್ಲಿ ಅಚ್ಯುತಾನಂದ, ಗೋಪಾಲ ಮಿಶ್ರ , ಕೃಷ್ಣ ಮಿಶ್ರ  ಮಹಾಪ್ರಭುಗಳ ಅನುಯಾಯಿಗಳು.

ಅದ್ವೈತ ಆಚಾರ್ಯ‌ರು ನವದ್ವೀಪ ಮಾಯಾಪುರದಲ್ಲಿ ಸಂಸ್ಕೃತವನ್ನು ಕಲಿಸಲು ಶಾಲೆಯೊಂದನ್ನು ಸ್ಥಾಪಿಸಿದರು. ಇಲ್ಲಿ ಅವರು ಧರ್ಮಗ್ರಂಥಗಳ ಗಾಢ ಅಧ್ಯಯನದಲ್ಲಿ ತೊಡಗಿಕೊಂಡರು. ಪ್ರತಿ ದಿನ ಅವರು ಉಪನ್ಯಾಸಗಳನ್ನು ನೀಡುತ್ತಿದ್ದರು. ಮಹಾಪ್ರಭುಗಳ ಹಿರಿಯ ಸೋದರ ವಿಶ್ವರೂಪ ಅದನ್ನು ಕೇಳಲು ಅದ್ವೈತರ ಮನೆಗೆ ಹೋಗುತ್ತಿದ್ದರು.

ಹರಿದಾಸರಿಗೆ ಗೌರವ

ಅದ್ವೈತರು ಏನೇ ಹೇಳಿದರೂ ಅದನ್ನು ಕೃತಿಯಲ್ಲಿ ತೋರಿಸುತ್ತಿದ್ದರು. ಅದಕ್ಕೆ ಹರಿದಾಸ ಠಾಕುರರಿಗೆ ಅವರು ಕೊಟ್ಟ ಗೌರವಾದರಗಳೇ ಸಾಕ್ಷಿ. ಕೌಟುಂಬಿಕ ಹಿನ್ನೆಲೆಯನ್ನು ಲೆಕ್ಕಿಸದೆ ಒಬ್ಬ ವೈಷ್ಣವನು ಸ್ತೋತ್ರಾರ್ಹ‌, ಪ್ರಶಂಸನೀಯ ಮತ್ತು ಪೂಜಾರ್ಹ‌ ಎನ್ನುವುದನ್ನು ಅದ್ವೈತರು ಕಾರ್ಯತಃ ಮಾಡಿ ತೋರಿಸಿದ್ದಾರೆ.  ಹರಿದಾಸರಿಗೆ ಶ್ರಾದ್ಧ ಪ್ರಸಾದವನ್ನು ನೀಡಿ ತೋರಿದ ಗೌರವವೇ ಅದಕ್ಕೆ ಉದಾಹರಣೆ. ಮುಸ್ಲಿಂ ಸಮುದಾಯದಲ್ಲಿ ಜನಿಸಿದ್ದ ಹರಿದಾಸ ಠಾಕುರರು ವೈಷ್ಣವರಾಗಿ, ಕೃಷ್ಣಭಕ್ತರಾಗಿ ನಾಮಾಚಾರ್ಯರೆಂದು ಪ್ರಸಿದ್ಧರಾದರು. ಅವರಿಗೆ ಶಾಂತಿಪುರದ ಬಳಿ ಅದ್ವೈತರೊಂದಿಗೆ ಸಂಪರ್ಕ‌ ಬೆಳೆಯಿತು. ಅದ್ವೈತರು ಹರಿದಾಸರನ್ನು ತಮ್ಮ ಮನೆಗೆ ಪ್ರಸಾದ ಸ್ವೀಕರಿಸಲು ಆಗಾಗ್ಗೆ ಆಹ್ವಾನಿಸುತ್ತಿದ್ದರು. ಇದು ಹರಿದಾಸರಿಗೆ ಸಂಕೋಚ ಉಂಟು ಮಾಡುತ್ತಿತ್ತು. “ಮಹಾ ಬ್ರಾಹ್ಮಣರಾದ ನೀವು ಯಾವ ಭಯ ಅಥವಾ ಸಂಕೋಚವಿಲ್ಲದೆ ನನ್ನಂತಹ ಕೆಳವರ್ಗದ ವ್ಯಕ್ತಿಯನ್ನು ಆದರಿಸುತ್ತಿರುವಿರಿ. ನಿಮ್ಮ ನಡವಳಿಕೆ ಅಸಾಮಾನ್ಯವಾದುದು. ಕೆಲವು ಸಲ ನಿಮ್ಮೊಂದಿಗೆ ಮಾತನಾಡಲು ಭಯವಾಗುತ್ತದೆ. ನನ್ನನ್ನು ಈ ಸಮಾಜದ ವರ್ತನೆಯಿಂದ ರಕ್ಷಿಸುವ ಕೃಪೆ ಮಾಡಿ.” ಅದಕ್ಕೆ ಅದ್ವೈತರು ನುಡಿದರು, “ ಹರಿದಾಸರೇ, ಹೆದರಬೇಡಿ. ನಾನು ಪವಿತ್ರ ಗ್ರಂಥಗಳ ನಿಯಮಗಳಂತೆ ಕಟ್ಟನಿಟ್ಟಾಗಿ ನಡೆದುಕೊಳ್ಳುತ್ತಿದ್ದೇನೆ. ನಿಮ್ಮನ್ನು ಸತ್ಕರಿಸುವುದು ಕೋಟಿ ಬ್ರಾಹ್ಮಣರನ್ನು ಸತ್ಕರಿಸಿದಂತೆ. ಆದ್ದರಿಂದ ಈ ಶ್ರಾದ್ಧಪಾತ್ರವನ್ನು ಸ್ವೀಕರಿಸಿ.” ಎಂದು ಹೇಳಿ ಹರಿದಾಸರು ಪ್ರಸಾದವನ್ನು ಸ್ವೀಕರಿಸುವಂತೆ ಮಾಡಿದರು.

ಗುರು ಶಿಕ್ಷೆ

ಆಚಾರ್ಯರು ಸಕಲ ವೈಷ್ಣವರ ಗುರುಗಳು. ಆದರೂ ತಾವು ಮಹಾಪ್ರಭುಗಳ ದಾಸ ಎಂದು ಹೇಳಿಸಿಕೊಳ್ಳುವುದರಲ್ಲಿಯೇ ಅವರಿಗೆ ತೃಪ್ತಿ. ಆದುದರಿಂದ ಭಗವಂತ ಅಥವಾ ಗುರುವಿನಿಂದ ಅಥವಾ ವೈಷ್ಣವನಿಂದ ಶಿಕ್ಷೆ ಪಡೆಯುವುದೂ ಕೂಡ  ಶುಭಕರ ಎನ್ನುವುದನ್ನು ಅದ್ವೈತರು ತೋರಿಸಿಕೊಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಒಂದು ಪ್ರಸಂಗವನ್ನು ಅವಲೋಕಿಸಬಹುದು. “ಅದ್ವೈತ ಆಚಾರ್ಯರು ಮಹಾಪ್ರಭುಗಳ ಗುರುಗಳಾದ ಈಶ್ವರ ಪುರಿಯವರ ಆಧ್ಯಾತ್ಮಿಕ ಸೋದರರು. ಈ ಕಾರಣದಿಂದ, ಮಹಾಪ್ರಭುಗಳು ಅದ್ವೈತರನ್ನು ತಮ್ಮ ಗುರುಗಳಂತೆ ಕಂಡರು. ಆದರೆ ಅದ್ವೈತರಿಗೆ ಮಹಾಪ್ರಭುಗಳ ಈ ನಡವಳಿಕೆ ಹಿಡಿಸಲಿಲ್ಲ. ಏಕೆಂದರೆ ಪ್ರಭುಗಳು ತಮ್ಮನ್ನು ಸೇವಕ, ಶಿಷ್ಯನೆಂದು ಪರಿಗಣಿಸಬೇಕೆಂದು ಬಯಸಿದರು. ಆದುದರಿಂದ ಅವರು ಪ್ರಭುಗಳ ಕೋಪಕ್ಕೆ ತುತ್ತಾಗಲು ಒಂದು ಉಪಾಯ ಮಾಡಿದರು. ಅದ್ವೈತರು ಕೆಲವು ಅದೃಷ್ಟಹೀನ ಮಾಯಾವಾದಿಗಳ ನಡುವೆ ತಾತ್ವಿಕ ಊಹಾಪೋಹ ಜ್ಞಾನದ ಬಗೆಗೆ ವಿವರಿಸಲಾರಂಭಿಸಿದರು. ಮಹಾಪ್ರಭುಗಳಿಗೆ ಇದು ತಿಳಿದು ಅವರು ರೋಷಾವೇಶದಿಂದ ಶಾಂತಿಪುರಕ್ಕೆ ಹೋಗಿ ಅದ್ವೈತರನ್ನು ತರಾಟೆಗೆ ತೆಗೆದುಕೊಂಡರು. ಆಗ ಅದ್ವೈತರು ಆನಂದಾತಿರೇಕದಿಂದ ಕುಣಿಯಲಾರಂಭಿಸಿದರು, “ನನ್ನ ಆಸೆ ಈಡೇರಿತು! ಚೈತನ್ಯ ಮಹಾಪ್ರಭುಗಳು ಇಷ್ಟು ದಿನ ನನ್ನನ್ನು ಗೌರವದಿಂದ ಕಾಣುತ್ತಿದ್ದರು. ಆದರೆ ಈಗ ಅವರು ಕೋಪದಿಂದ ಕಾಣುತ್ತಿದ್ದಾರೆ. ಅವರಿಗೆ ನನ್ನ ಮೇಲೆ ಎಷ್ಟು ಪ್ರೀತಿ ಎಂದರೆ ಅವರು ನನ್ನನ್ನು ಮಾಯಾವಾದಿಗಳಿಂದ ಬಿಡಿಸಿದರು.” ಈ ಮಾತನ್ನು ಕೇಳಿ ಮಹಾಪ್ರಭುಗಳು ಸಂಪ್ರೀತರಾದರು.

ವೈಷ್ಣವ ಅಪರಾಧ

ವೈಷ್ಣವರಿಗೆ ಅಪರಾಧ ಎಸಗುವುದನ್ನು ಮಹಾಪ್ರಭು ಸಹಿಸಿಕೊಳ್ಳುತ್ತಿರಲಿಲ್ಲ. ಒಮ್ಮೆ ಹೀಗಾಯಿತು. ಅದ್ವೈತ ಆಚಾರ್ಯರನ್ನು ಕುರಿತು ಮಹಾಪ್ರಭುಗಳ ಮಾತೆ ಶಚಿದೇವಿ ಮನಸ್ಸಿನಲ್ಲಿಯೇ ಅಪರಾಧ ಎಸಗಿದರು. ಅಂದರೆ ಅವರಿಗೆ ವಿಶ್ವರೂಪ ಸಂನ್ಯಾಸ ಸ್ವೀಕರಿಸಿದಾಗ ನೋವಾಗಿತ್ತು. ವಿಶ್ವರೂಪ ಅದ್ವೈತರ ಬಳಿ ಅಧ್ಯಯನ ಮಾಡುತ್ತಿದ್ದರು. ಹೀಗಾಗಿ ಇದರಲ್ಲಿ ಅವರ ಪ್ರಭಾವ ಇದೆ ಎನ್ನುವ ಭಾವನೆ ಇತ್ತು. ಆದರೆ ನಿಮಾಯ್‌ ಕೂಡ ತಮ್ಮನ್ನೂ ಮತ್ತು ಲಕ್ಷ್ಮಿಪ್ರಿಯಳನ್ನು ಬಿಟ್ಟು ನಿರಂತರವಾಗಿ ಅದ್ವೈತರ ಬಳಿಗೆ ಹೋಗುವುದನ್ನು ನೋಡಿ ಚಿಂತಿತರಾದರು.

ಮಗನ ಮೇಲಿನ ಪ್ರೀತಿ ವಾತ್ಸಲ್ಯಕ್ಕಾಗಿ ಅವರು ಮನಸ್ಸಿನಲ್ಲಿಯೇ ಅದ್ವೈತರನ್ನು ಟೀಕಿಸಿದ್ದರು. ಇದು ಯಾರಿಗೂ ತಿಳಿದಿರಲಿಲ್ಲ. ಆದರೆ ಎಲ್ಲರಲ್ಲಿಯೂ ವಾಸಿಸುವ ಅವರ ಪುತ್ರ, ಗೌರಹರಿಗೆ ಇದು ತಿಳಿಯಿತು. ಹೀಗಾಗಿ ಶ್ರೀವಾಸರ ಮನೆಯಲ್ಲಿ ನಡೆದ ಮಹಾಪ್ರಕಾಶದ ವೇಳೆಯಲ್ಲಿ ಅವರು ಭಕ್ತರಿಗೆ ತೋರಿಸಿದಂತೆ ತಮ್ಮ ದಿವ್ಯ ರೂಪವನ್ನು ತಾಯಿ ಶಚಿದೇವಿಗೇ ತೋರಿಸಲಿಲ್ಲ. ಮಹಾಪ್ರಭು, “ನನ್ನ ತಾಯಿಯು ಅದ್ವೈತ ಪ್ರಭುಗಳ ವಿರುದ್ಧ ಅಪರಾಧ ಮಾಡಿದ್ದಾರೆ. ಅವರಿಗೆ ಈ ರೂಪವನ್ನು ತೋರಿಸುವುದಿಲ್ಲ” ಎಂದು ಹೇಳಿದರಂತೆ.

ಅದು ಶಚಿದೇವಿಗೆ ತಿಳಿಯಿತು. ಅವರು ಅದ್ವೈತರ ಕ್ಷಮೆಯಾಚಿಸಿದಾಗ ಅವರು ಶಚಿದೇವಿಯನ್ನೇ ಕೊಂಡಾಡಲು ಆರಂಭಿಸಿದರು. ಅನಂತರ ಅದ್ವೈತರು ಪ್ರೇಮಾವೇಶದಲ್ಲಿ ಪ್ರಜ್ಞಾಶೂನ್ಯರಾದರು. ಆಗ ಶಚಿದೇವಿ ಅದ್ವೈತರ ಪಾದಧೂಳಿಯನ್ನು ತಲೆಗೆ ಹಚ್ಚಿಕೊಂಡರು. ಇದರಿಂದ ತೃಪ್ತರಾದ ಮಹಾಪ್ರಭು ಅನಂತರ ಶಚಿದೇವಿಗೂ ದೈವ ರೂಪವನ್ನು ತೋರಿಸಿದರು.

ಶ್ರೀ ಚೈತನ್ಯರು ಹೇಳಿದ್ದಾರೆ,  “ನನ್ನ ಮನಸ್ಸು ದೇವೋತ್ತಮ ಪರಮ  ಪುರುಷರಾದ ಅದ್ವೈತ ಆಚಾರ್ಯರ ಸಾಂಗತ್ಯದಲ್ಲಿ ಪರಿಶುದ್ಧವಾಗಿದೆ. ಶಾಸ್ತ್ರಗಳ ಅರಿವು ಮತ್ತು ಶ್ರೀ ಕೃಷ್ಣನ ಭಕ್ತಿಸೇವೆಯಲ್ಲಿ ಅವರಿಗೆ ಸರಿಸಮಾನರು ಇಲ್ಲ. ಹೀಗಾಗಿಯೇ ಅವರನ್ನು ಅದ್ವೈತ ಆಚಾರ್ಯ‌ ಎಂದು ಕರೆಯಲಾಗುತ್ತದೆ. ಅವರು ಎಷ್ಟೊಂದು ಶ್ರೇಷ್ಠ ವ್ಯಕ್ತಿತ್ವದವರೆಂದರೆ ತಮ್ಮ ಕಾರುಣ್ಯದಿಂದ ಮ್ಲೇಚ್ಛರನ್ನೂ ಶ್ರೀ ಕೃಷ್ಣನ ಭಕ್ತಿಸೇವೆಯಲ್ಲಿ ತೊಡಗಿಸಬಲ್ಲರು. ಹೀಗಾಗಿಯೇ ಅವರ ವೈಷ್ಣವ ಸಿದ್ಧಾಂತದ ಶಕ್ತಿಯನ್ನು ಯಾರು ಅಳೆಯಬಲ್ಲರು?” (ಚೈತನ್ಯ ಚರಿತಾಮೃತ 3.7.17-19)

ಈ ಲೇಖನ ಶೇರ್ ಮಾಡಿ