ಧ್ರುವಕುಮಾರನು ಐದು ವರ್ಷಗಳ ವಯಸ್ಸಿನ ಎಳೆಯ ಬಾಲಕನಾದರೂ ದಿಟ್ಟತನದಿಂದ ತಪಸ್ಸು ಮಾಡಿ ಶ್ರೀಹರಿಯನ್ನೇ ಸಾಕ್ಷಾತ್ಕರಿಸಿಕೊಂಡನು. ಗರ್ವದಿಂದ ಮೆರೆಯುತ್ತಿದ್ದ ಮಲತಾಯಿಯ ಪ್ರೀತಿಯನ್ನೂ ತನ್ನ ವಿಷಯದಲ್ಲಿ ಉದಾಸೀನನಾಗಿದ್ದ ತಂದೆಯ ವಾತ್ಸಲ್ಯವನ್ನೂ ಗಳಿಸಿಕೊಂಡನು. ಅವನ ತಾಯಿಯು ಅಂಥ ಪುತ್ರನನ್ನು ಪಡೆದುದಕ್ಕಾಗಿ ಹೆಮ್ಮೆಪಟ್ಟಳು. ಪುರಜನರೆಲ್ಲರೂ ಅವನನ್ನು ಅಭಿನಂದಿಸಿದರು. ಅವನ ಕೀರ್ತಿ ದಶದಿಕ್ಕುಗಳನ್ನೂ ವ್ಯಾಪಿಸಿತು. ಇಂಥ ಸತ್ಪುತ್ರರು ಎಷ್ಟು ಜನಕ್ಕೆ ದೊರೆತಾರು?
ತಾಯ್ತಂದೆಯರ ಪ್ರೀತಿಯ ಆರೈಕೆಯಲ್ಲಿ ಧ್ರುವನು ಬೆಳೆದು ಪ್ರಾಪ್ತವಯಸ್ಕನಾದನು. ಸುಂದರನೂ ಬುದ್ಧಿಶಾಲಿಯೂ ಪ್ರಜೆಗಳ ಪ್ರೀತಿಗೆ ಪಾತ್ರನೂ ಆಗಿದ್ದ ಅವನು ರಾಜನಾಗಲು ಯೋಗ್ಯನಾಗಿದ್ದನು. ಮಂತ್ರಿಗಳ ಅಭಿಪ್ರಾಯವೂ ಇದೇ ಆಗಿತ್ತು. ರಾಜಾ ಉತ್ತಾನಪಾದನು ತನ್ನ ಸಚಿವರೆಲ್ಲರೊಡನೆ ಸಮಾಲೋಚಿಸಿ ಧ್ರುವನಿಗೆ ಪಟ್ಟಾಭಿಷೇಕ ಮಾಡಿದನು. ಅನಂತರ, ಉತ್ತಾನಪಾದನು ಸಂಸಾರದಲ್ಲಿ ವಿರಕ್ತನಾಗಿ ಆತ್ಮಸಾಕ್ಷಾತ್ಕಾರವನ್ನು ಸಾಧಿಸಲು ಅರಣ್ಯಕ್ಕೆ ಹೊರಟುಹೋದನು.
ಧ್ರುವನು ಶಿಶುಮಾರ ಪ್ರಜಾಪತಿಯ ಮಗಳಾದ ಭ್ರಮಿ ಎಂಬುವಳನ್ನು ವಿವಾಹವಾದನು. ಅವಳಲ್ಲಿ ಅವನಿಗೆ ಕಲ್ಪ ಮತ್ತು ವತ್ಸರ ಎಂಬ ಪುತ್ರರು ಜನಿಸಿದರು. ಅವನು ವಾಯುದೇವನ ಮಗಳಾದ ಇಲಾ ಎಂಬುವಳನ್ನೂ ಮದುವೆಯಾದನು. ಅವಳಲ್ಲಿ ಅವನಿಗೆ ಉತ್ಕಲನೆಂಬ ಪುತ್ರನೂ, ರತ್ನಪ್ರಾಯಳಾದ ಒಬ್ಬ ಪುತ್ರಿಯೂ ಜನಿಸಿದರು. ಅವರೆಲ್ಲರೂ ಸುಖವಾಗಿದ್ದರು. ಧ್ರುವನ ಆಡಳಿತದಲ್ಲಿ ರಾಜ್ಯವು ಸುಭಿಕ್ಷವಾಗಿದ್ದು ಪ್ರಜೆಗಳು ಸಂತೃಪ್ತರಾಗಿದ್ದರು.
ಹೀಗಿರಲು, ಇನ್ನೂ ವಿವಾಹವಾಗದ ಧ್ರುವನ ತಮ್ಮನಾದ ಉತ್ತಮನು ಒಂದು ದಿನ ಬೇಟೆಯಾಡಲೆಂದು ಕಾಡಿಗೆ ಹೋದ. ಆಗ, ವಿಧಿಯ ಕ್ರೂರ ಪ್ರೇರಣೆಯಿಂದಲೋ ಎಂಬಂತೆ ಹಿಮಾಲಯ ಪ್ರಾಂತದಲ್ಲಿ ಒಬ್ಬ ಯಕ್ಷನು ಅವನನ್ನು ವಧಿಸಿದ! ಅವನು ಹಿಂದಿರುಗದಿರಲು, ವ್ಯಾಕುಲಗೊಂಡ ಅವನ ತಾಯಿ ಸುರುಚಿಯು ಅವನನ್ನು ಹುಡುಕಲು ಹೋಗಿ ಕಾಡ್ಗಿಚ್ಚಿಗೆ ಬಲಿಯಾಗಿಬಿಟ್ಟಳು!
ತನ್ನ ತಮ್ಮನು ಯಕ್ಷನೋರ್ವನಿಂದ ಹತನಾದನೆಂದು ಕೇಳಿದ ಧ್ರುವ ಮಹಾರಾಜನು ದುಃಖ, ಕೋಪಗಳಿಗೊಳಗಾದ. ಯಕ್ಷರನ್ನು ಶಿಕ್ಷಿಸಿ ಸೇಡು ತೀರಿಸಿಕೊಳ್ಳಲೆಂದು ಅವನು ಅಲಕಾಪುರಿಗೆ ಜೈತ್ರಯಾತ್ರೆ ಹೊರಟ. ಹಿಮಾಲಯ ಪ್ರಾಂತದ ಉತ್ತರ ದಿಕ್ಕಿಗೆ ದಂಡೆತ್ತಿ ಹೋದ ಅವನು ರುದ್ರಾನುಚರರಾದ ಯಕ್ಷರು ವಾಸಿಸುತ್ತಿದ್ದ ಆ ನಗರವನ್ನು ಕಂಡ. ಕೂಡಲೇ ಅವನು ದಶದಿಕ್ಕುಗಳನ್ನೂ ಮೊಳಗಿಸುತ್ತಾ ತನ್ನ ಶಂಖವನ್ನೂದಿದ. ಆ ಭಯಂಕರ ನಾದವನ್ನು ಕೇಳಿ ಯಕ್ಷ ಪತ್ನಿಯರು ಗಡಗಡನೆ ನಡುಗತೊಡಗಿದರು. ಆ ಶಬ್ದವು ಯಕ್ಷರಿಗೂ ಸಹಿಸಲಸಾಧ್ಯವಾಗಿತ್ತು. ಒಡನೆಯೇ ಅವರು ತಮ್ಮ ಆಯುಧಗಳನ್ನೆತ್ತಿಕೊಂಡು ಬಂದು ಧ್ರುವನ ಮೇಲೆರಗಿದರು.
ಧ್ರುವ ಮಹಾರಾಜನಿಗೂ ಯಕ್ಷರಿಗೂ ಘನ ಘೋರ ಯುದ್ಧ ಆರಂಭವಾಯಿತು. ಮಹಾರಥಿಯೂ ಶ್ರೇಷ್ಠ ಬಿಲ್ಲಾಳುವೂ ಆಗಿದ್ದ ಧ್ರುವನು ಒಂದೇ ಬಾರಿಗೆ ಮೂರು ಬಾಣಗಳನ್ನು ಪ್ರಯೋಗಿಸುತ್ತಾ ಯಕ್ಷವೀರರನ್ನು ಕೊಲ್ಲತೊಡಗಿದ. ತೀಕ್ಷ್ಣ ವೇಗದ ಬಾಣ ಪ್ರಹಾರದಿಂದ ತಮ್ಮ ಸೈನಿಕರ ಶಿರಚ್ಛೇದನವಾಗುತ್ತಿದ್ದುದನ್ನು ಕಂಡಾಗ ಯಕ್ಷಪ್ರಮುಖರಿಗೆ ಬಹು ವಿಸ್ಮಯವಾಯಿತು. ಧ್ರುವನು ತಮ್ಮ ವೈರಿಯಾದರೂ ಅವನನ್ನು ಶ್ಲಾಘಿಸಿದರು. ಆದರೆ ಅವರೇನೂ ಕಡಮೆಯಿರಲಿಲ್ಲ. ಕಾಲಿನಿಂದ ತುಳಿಯಲ್ಪಟ್ಟ ಸರ್ಪವು ಸುಮ್ಮನಿರುವುದೇ? ಧ್ರುವ ಮಹಾರಾಜನು ಹೂಡುತ್ತಿದ್ದ ಬಾಣಗಳಿಗೆ ಎರಡರಷ್ಟು ಬಾಣಗಳನ್ನು ಹೂಡಿ ತಮ್ಮ ಪರಾಕ್ರಮವನ್ನು ತೋರಿದರು. ಅವರ ಸಂಖ್ಯೆಯೋ ಒಂದು ಲಕ್ಷದ ಮೂವತ್ತು ಸಾವಿರದಷ್ಟಿತ್ತು! ಎಲ್ಲ ಯಕ್ಷರೂ ಒಟ್ಟಿಗೆ ಸೇರಿ ಖಡ್ಗ ಪರಿಘ ಶೂಲಭಲ್ಲೆ ಭುಶುಂಡಿಗಳಿಂದಲೂ ಚಿತ್ರವಿಚಿತ್ರವಾದ ರೆಕ್ಕೆಪುಕ್ಕಗಳಿದ್ದ ಬಾಣಗಳಿಂದಲೂ ಧ್ರುವನನ್ನು ಆಕ್ರಮಿಸಿದರು. ವರ್ಷಧಾರೆಯಿಂದ ಬೆಟ್ಟವು ಮುಚ್ಚಿಹೋಗುವಂತೆ ಧ್ರುವನು ಅವರ ಶಸ್ತ್ರಾಸ್ತ್ರಗಳ ಸುರಿಮಳೆಯಿಂದ ಮುಚ್ಚಿಹೋಗಿ ಯಾರಿಗೂ ಕಾಣದಂತಾದನು!
“ಅಯ್ಯೋ! ಮನುವಿನ ಮೊಮ್ಮಗನಾದ ಈ ಧ್ರುವ ಮಹಾರಾಜನು ಹತನಾಗಿಹೋದ! ಸೂರ್ಯನಂತಿದ್ದ ಧ್ರುವನು ಯಕ್ಷರೆಂಬ ಸಮುದ್ರದಲ್ಲಿ ಮುಳುಗಿ ಹೋದ!” ಆಕಾಶದಲ್ಲಿ ಸಿದ್ಧರು ಹಾಹಾಕಾರಗೈದರು.
“ಆಹಾ! ನಾವು ವಿಜಯಿಗಳಾದೆವು! ಧ್ರುವನನ್ನು ಮುಗಿಸಿಬಿಟ್ಟೆವು!” ಯಕ್ಷರು ಸಂತೋಷದಿಂದ ಘೋಷಿಸಿಕೊಳ್ಳತೊಡಗಿದರು.
ಅಷ್ಟರಲ್ಲಿ ಮುಸುಕಿದ ಮಂಜು ಕರಗಿ ಸೂರ್ಯನು ಮೂಡಿ ಬರುವಂತೆ ಧ್ರುವನ ರಥವು ಮತ್ತೆ ಕಾಣಿಸಿಕೊಂಡಿತು!
ತನ್ನ ದಿವ್ಯ ಧನುಸ್ಸನ್ನು ಠೇಂಕರಿಸುತ್ತಾ ಧ್ರುವನು ಬಾಣಗಳ ಸುರಿಮಳೆಗೈದನು. ಅರಗಳಿಗೆಯಲ್ಲಿ ಭೀತಿಯ ಬುಗ್ಗೆಯೆಬ್ಬಿಸಿ ಮೋಡಗಳನ್ನು ಗಾಳಿಯು ಚದುರಿಸುವಂತೆ ಅವರನ್ನು ಚದುರಿಸಿಬಿಟ್ಟನು. ಅವನ ಧನುಸ್ಸಿನಿಂದ ಹೊರಟ ಅಂಬುಗಳು ಇಂದ್ರನ ವಜ್ರಾಯುಧವು ಗಿರಿಶಿಖರಗಳನ್ನು ಛಿದ್ರಛಿದ್ರಗೊಳಿಸುವಂತೆ ಯಕ್ಷರ ಕವಚಗಳನ್ನು ಭೇದಿಸಿ ಅವರ ದೇಹಗಳನ್ನು ಸೀಳಿದವು. ಸೊಗಸಾದ ಕರ್ಣಕುಂಡಲಗಳಿಂದಲೂ ವರ್ಣರಂಜಿತವಾದ ರುಮಾಲುಗಳಿಂದಲೂ ಅಲಂಕೃತವಾಗಿದ್ದ ಅವರ ರುಂಡಗಳೂ, ಹೊನ್ನಿನ ತಾಳೆಯ ಮರಗಳಂತಿದ್ದ ಅವರ ತೊಡೆಗಳೂ, ಕೇಯೂರ ಕಂಕಣಗಳಿಂದ ಅಲಂಕೃತವಾಗಿದ್ದ ಅವರ ತೋಳುಗಳೂ ಕೈಗಳೂ, ಅವರ ದೇಹಗಳಿಂದ ಕತ್ತರಿಸಲ್ಪಟ್ಟು ರಣಭೂಮಿಯ ತುಂಬ ಹರಡಿಕೊಂಡವು. ಆ ದೃಶ್ಯ ವೀರರ ಕಣ್ಣುಗಳಿಗೆ ಹಬ್ಬವನ್ನುಂಟುಮಾಡುವಂತಿತ್ತು!
ಅಳಿದುಳಿದ ಯಕ್ಷರು ಸಿಂಹಕ್ಕೆ ಸೋತ ಆನೆಗಳಂತೆ ಕ್ಷತ್ರಿಯವೀರನಾದ ಧ್ರುವನ ಕೈಯಿಂದ ತಪ್ಪಿಸಿಕೊಂಡು ಪಲಾಯನ ಮಾಡಿದರು. ಬಹುಬೇಗನೆ ರಣಭೂಮಿಯು ಬರಿದಾದುದನ್ನು ಕಂಡ ಧ್ರುವನು ಅಲಕಾಪುರಿಯನ್ನೊಮ್ಮೆ ನೋಡಬಯಸಿದನು. ಆದರೆ ಮಾಯಾವಿಗಳಾದ ಯಕ್ಷರು ಮತ್ತೆ ಏನಾದರೂ ಮಾಡಿಯಾರೆಂದು ಬಗೆದು ಪುರಿಯನ್ನು ಪ್ರವೇಶಿಸದೆ ಅಲ್ಲೇ ನಿಂತನು. ತನ್ನ ಸಾರಥಿಯ ಬಳಿ ಈ ಸಂಶಯವನ್ನು ವ್ಯಕ್ತಪಡಿಸಿ ಸ್ವಲ್ಪ ಕಾಲ ಮಾತನಾಡಹತ್ತಿದನು.
ಆಗ ಇದ್ದಕ್ಕಿದ್ದಂತೆ ಕಡಲು ಭೋರ್ಗರೆವಂತೆ ಒಂದು ಮಹಾಶಬ್ದ ಉಂಟಾಯಿತು! ದಿಕ್ಕು ದಿಕ್ಕುಗಳಲ್ಲೂ ಧೂಳನ್ನೆಬ್ಬಿಸುತ್ತಾ ಬಿರುಗಾಳಿಯು ಭರ್ರನೆ ಬೀಸತೊಡಗಿತು! ಆಗಸವೆಲ್ಲಾ ಘನಮೇಘಗಳಿಂದಲೂ ಮಿಂಚಿನ ಹೊಳಪಿನಿಂದಲೂ ಆವೃತವಾಗಿ ಭಯಂಕರವಾದ ಗುಡುಗಿನ ಸದ್ದಾಯಿತು. ರಕ್ತ, ಮಾಂಸ, ಮಲ, ಮೂತ್ರ, ಕೀವು, ಮಜ್ಜೆಗಳಿಂದ ಕೂಡಿದ ಭೀಕರ ಮಳೆ ಸುರಿಯಲಾರಂಭಿಸಿತು! ರುಂಡಗಳಿಲ್ಲದ ಮುಂಡಗಳು ರಾಶಿರಾಶಿಯಾಗಿ ಬಂದು ಬೀಳತೊಡಗಿದವು! ಆಕಾಶದಲ್ಲಿ ಹಠಾತ್ತನೆ ಒಂದು ದೊಡ್ಡ ಪರ್ವತವು ಕಾಣಿಸಿಕೊಂಡು ಎಲ್ಲ ದಿಕ್ಕುಗಳಲ್ಲೂ ಪರಿಘ, ಗದೆ, ಶೂಲ, ಖಡ್ಗ, ಬಂಡೆಯ ಚೂರು, ಆಲಿಕಲ್ಲುಗಳನ್ನು ಒಂದೇ ಸಮನೆ ಸುರಿಸತೊಡಗಿತು! ಉರಿಯುವ ಕೆಂಗಣ್ಣುಗಳಿಂದ ಕೂಡಿದ ಭಯಂಕರ ಸರ್ಪಗಳು ಎಲ್ಲೆಡೆಗಳಿಂದಲೂ ಬೆಂಕಿಯನ್ನುಗುಳುತ್ತಾ ಧ್ರುವನನ್ನು ನುಂಗಲು ಬರತೊಡಗಿದವು! ಮದೋನ್ಮತ್ತ ಗಜಗಳೂ ಸಿಂಹವ್ಯಾಘ್ರಗಳೂ ಗರ್ಜಿಸುತ್ತಾ ಹಿಂಡುಹಿಂಡಾಗಿ ಧ್ರುವನನ್ನಾಕ್ರಮಿಸತೊಡಗಿದವು! ಕಲ್ಪಾಂತ್ಯದ ಪ್ರಳಯಕಾಲವೇ ಬಂದಂತಾಗಿ ದೊಡ್ಡ ದೊಡ್ಡ ಅಲೆಗಳನ್ನೆಸೆಯುತ್ತಾ ಒಂದು ಮಹಾಸಾಗರವೇ ಅವನತ್ತ ಬರತೊಡಗಿತು!
ಇದೆಲ್ಲವೂ ಯಕ್ಷರು ಸೃಷ್ಟಿಸಿದ ಮಾಯೆಯ ಪರಿಣಾಮವಾಗಿತ್ತು. ಧ್ರುವನು ದುಸ್ತರವಾದ ಇಂಥ ಮಾಯೆಯಲ್ಲಿ ಸಿಕ್ಕಿಕೊಳ್ಳಲು, ಋಷಿಮುನಿಗಳು ಅವನಿಗೆ ಧೈರ್ಯತುಂಬಿ ಮಂಗಳಾಶೀರ್ವಾದಮಾಡಲೆಂದು ಆಗಸದಲ್ಲಿ ಕಾಣಿಸಿಕೊಂಡರು.
ಅವರು ಅವನನ್ನು ಹರಸುತ್ತಾ ಹೇಳಿದರು, “ಧ್ರುವಮಹಾರಾಜನೇ, ಶಾರ್ಙ್ಗಧನ್ವನಾದ ಶ್ರೀಹರಿಯು ನಿನ್ನನ್ನು ರಕ್ಷಿಸಲಿ! ಶರಣಾರ್ತಿಗಳ ಸಂಕಟಗಳನ್ನು ಪರಿಹರಿಸುವ ಆ ದೇವದೇವನು ನಿನ್ನ ಶತ್ರುಗಳನ್ನು ಖಂಡಿತವಾಗಿಯೂ ನೆಲಸಮ ಮಾಡುವನು. ಅವನ ನಾಮೋಚ್ಚಾರಣೆ ಮಾಡಿದರಾಗಲೀ ಕೇಳಿದರಾಗಲೀ ಕೂಡಲೇ ಜನರು ದುಸ್ತರವಾದ ಮೃತ್ಯುವನ್ನು ಜಯಿಸಿಬಿಡುವರು!”
ಮಹಾಮುನಿಗಳ ಈ ಉತ್ತೇಜನದ ಮಾತುಗಳನ್ನು ಕೇಳಿ ಧ್ರುವನು ಉತ್ಸಾಹಭರಿತನಾದನು. ಶುದ್ಧಾಚಮನ ಮಾಡಿ ನಾರಾಯಣ ನಿರ್ಮಿತವಾದ ನಾರಾಯಣಾಸ್ತ್ರವನ್ನು ತನ್ನ ಬಿಲ್ಲಿಗೆ ಅನುಸಂಧಾನ ಮಾಡಿದನು. ಆ ಮಹಾಸ್ತ್ರವನ್ನು ಅವನು ಪ್ರಯೋಗಿಸಲು, ಜ್ಞಾನೋದಯವಾದಾಗ ಕ್ಲೇಶಗಳೆಲ್ಲವೂ ನಶಿಸಿಹೋಗುವಂತೆ ಗುಹ್ಯಕರಿಂದ ನಿರ್ಮಿತವಾಗಿದ್ದ ಮಾಯೆಯು ನಾಶವಾಯಿತು. ಆ ನಾರಾಯಣಾಸ್ತ್ರದಿಂದ ಬಂಗಾರದ ಹಿಡಿಯುಳ್ಳ ಅನೇಕಾನೇಕ ಬಾಣಗಳು ಹೊರಹೊಮ್ಮಿ ಶತ್ರು ಬಲವನ್ನು ಧ್ವಂಸ ಮಾಡತೊಡಗಿದವು. ನವಿಲುಗಳು ಕೇಕೆ ಹಾಕುತ್ತಾ ಅರಣ್ಯವನ್ನು ಪ್ರವೇಶಿಸುವಂತೆ, ನಾರಾಯಣಾಸ್ತ್ರದಿಂದ ಹೊರಟ ಬಾಣಗಳು ಮಹಾಶಬ್ದ ಮಾಡುತ್ತಾ ಶತ್ರುಸೈನ್ಯವನ್ನು ಹೊಕ್ಕು ಅವರನ್ನು ಪ್ರಜ್ಞಾಹೀನರನ್ನಾಗಿಸಿದವು. ಆದರೂ ಯಕ್ಷರು ಚೇತರಿಸಿಕೊಳ್ಳುತ್ತಾ ಯುದ್ಧ ಮಾಡತೊಡಗಿದರು. ಗರುಡನಿಂದ ಕೆಣಕಲ್ಪಟ್ಟ ಹಾವುಗಳಂತೆ ಅವರು ಕೆರಳಿ ಧ್ರುವನ ಮೇಲೆರಗಿದರು. ಆದರೆ ಮಹಾಪ್ರತಾಪಶಾಲಿಯಾದ ಧ್ರುವನು ಅವರ ಅಂಗಾಂಗಳನ್ನು ಖಂಡತುಂಡ ಮಾಡುತ್ತಾ ಅವರನ್ನು ಕೊಲ್ಲತೊಡಗಿದನು. ಸತ್ತ ಯಕ್ಷರಲ್ಲಿ ಬ್ರಹ್ಮಚಾರಿಗಳಾಗಿದ್ದ ಅನೇಕ ಪುಣ್ಯಾತ್ಮರು ಉತ್ತಮ ಲೋಕಗಳನ್ನು ಹೊಂದಿದರು.
ನಿರಪರಾಧಿಗಳಾಗಿದ್ದ ಅನೇಕಾನೇಕ ಯಕ್ಷರ ವಧೆಯಾಗುತ್ತಿದ್ದುದನ್ನು ಅರಿತ ಧ್ರುವನ ಪಿತಾಮಹನಾದ ಸ್ವಾಯಂಭುವ ಮನುವು ಆ ದಾರುಣ ಕಾರ್ಯವನ್ನು ನಿಲ್ಲಿಸಬೇಕೆಂದು ಮಹರ್ಷಿಗಳೊಡನೆ ಆ ಸ್ಥಳಕ್ಕೆ ಆಗಮಿಸಿದನು.
ಧ್ರುವಮಹಾರಾಜನನ್ನು ತಡೆದು ಮನುವು ಹೇಳಿದನು, “ವತ್ಸ, ನಿಲ್ಲಿಸು! ಅನಗತ್ಯವಾದ ಈ ಕೋಪ ಒಳ್ಳೆಯದಲ್ಲ ಮಗು! ಇದು ನರಕಕ್ಕೆ ದಾರಿ ಮಾಡಿಕೊಡುತ್ತದೆ. ನಿರಪರಾಧಿಗಳಾದ ಯಕ್ಷರನ್ನು ಕೊಲ್ಲುತ್ತಿರುವ ನೀನು ಮಿತಿ ಮೀರುತ್ತಿರುವೆ. ಈ ನಿನ್ನ ಕಾರ್ಯ, ಧರ್ಮಾಧರ್ಮಗಳನ್ನು ತಿಳಿದಿರುವ ನಮ್ಮ ಕುಲಕ್ಕೆ ಯೋಗ್ಯವಾದುದಲ್ಲ. ಶಾಸ್ತ್ರಕೋವಿದರು ಇದನ್ನೊಪ್ಪುವುದಿಲ್ಲ. ನೀನು ನಿನ್ನ ತಮ್ಮನಲ್ಲಿ ಬಹಳ ಪ್ರೀತಿಯನ್ನಿಟ್ಟುದರಿಂದ ಅವನ ವಧೆಯಿಂದ ದುಃಖಿತನಾಗಿರುವೆ. ಆದರೆ ಇದು ಯಾರೋ ಒಬ್ಬರು ಮಾಡಿದ ತಪ್ಪು. ಒಬ್ಬನ ತಪ್ಪಿಗೆ ಎಲ್ಲರಿಗೂ ಶಿಕ್ಷೆಯೇ? ಇದು ಸರಿಯೇ? ದೇವೋತ್ತಮ ಪರಮ ಪುರುಷನನ್ನು ಅನುಸುವವರಿಗಂತೂ ಇದು ಯೋಗ್ಯ ಕಾರ್ಯವಲ್ಲವೇ ಅಲ್ಲ! ಶರೀರವನ್ನೇ ಆತ್ಮವೆಂದು ಭಾವಿಸಿ ಹೀಗೆ ಎಲ್ಲರನ್ನೂ ಪಶುಗಳಂತೆ ಕೊಲ್ಲುವುದು ಸರಿಯಲ್ಲ. ಬಹು ಕಷ್ಟವಾದರೂ, ನೀನು ಶ್ರೀಹರಿಯನ್ನು ಮೆಚ್ಚಿಸಿ ವೈಕುಂಠವೆಂಬ ದುರ್ಲಭವಾದ ಆ ಪರಮಪದವನ್ನು ಪಡೆದಿರುವೆ. ಆ ಪರಮ ಪುರುಷನೂ ನಿನ್ನನ್ನು ಸದಾ ಸ್ಮರಿಸುತ್ತಿರುತ್ತಾನೆ. ಅವನ ಭಕ್ತರಿಗೆ ನೀನು ಮಾನ್ಯನಾಗಿರುವೆ. ನಿನ್ನ ಜೀವನವೇ ಎಲ್ಲರಿಗೂ ಆದರ್ಶಪ್ರಾಯವಾಗಿರುವಾಗ ಇಂಥ ಹೀನಕೃತ್ಯವನ್ನೇಕೆ ಎಸಗಿದೆ?
“ಮಗು, ಸಹನೆ, ಕರುಣೆ, ಮೈತ್ರಿ, ಮತ್ತು ಸಮಭಾವನೆಯಿಂದ ಎಲ್ಲ ಜೀವಿಗಳನ್ನೂ ಎಲ್ಲ ಜನರನ್ನೂ ಕಾಣಬೇಕು. ಆಗಲೇ ಆ ಪುರುಷೋತ್ತಮನು ಪ್ರಸನ್ನನಾಗುವುದು. ಅವನು ಒಬ್ಬ ವ್ಯಕ್ತಿಯಲ್ಲಿ ಪ್ರಸನ್ನನಾದನೆಂದರೆ, ಆ ವ್ಯಕ್ತಿಯು ಐಹಿಕ ಗುಣಗಳ ಬಂಧನದಿಂದ ಬಿಡುಗಡೆ ಹೊಂದಿ ಆಧ್ಯಾತ್ಮಿಕ ಆನಂದವನ್ನನುಭವಿಸುತ್ತಾನೆ. ಮಗು, ಈ ಪ್ರಪಂಚವು ಪಂಚಭೂತಗಳಿಂದ ಆದುದಾಗಿದೆ. ಸ್ತ್ರೀಪುರುಷರ ದೇಹಗಳೂ ಈ ಪಂಚಭೂತಗಳಿಂದಲೇ ಆಗಿದ್ದು, ಅವರ ಸಂಯೋಗದಿಂದ ಮತ್ತೆ ಮತ್ತೆ ಸ್ತ್ರೀಪುರುಷರು ಹುಟ್ಟುತ್ತಾರೆ. ಆ ಪರಮಾತ್ಮನ ಮಾಯಾಶಕ್ತಿಯಿಂದ ಭೌತಿಕ ಗುಣಗಳಲ್ಲಿ ಪರಸ್ಪರ ಕ್ರಿಯೆಯುಂಟಾಗಿ ಸೃಷ್ಟಿ, ಸ್ಥಿತಿ, ಲಯಗಳು ಆಗುತ್ತಿರುತ್ತವೆ. ಆದರೆ ಆ ಪರಮ ಪುರುಷನು ಇದಕ್ಕೆಲ್ಲ ಕೇವಲ ನಿಮಿತ್ತಮಾತ್ರನಾಗಿ ಪ್ರಾಕೃತಿಕ ಗುಣಗಳಿಗೆ ಅಂಟದೆ ಇದ್ದಾನೆ. ಅವನ ಪ್ರೇರಣೆಯಿಂದ, ಅಯಸ್ಕಾಂತದ ಶಕ್ತಿಗೆ ಸೆಳೆಯಲ್ಪಟ್ಟ ಕಬ್ಬಿಣವು ಚಲಿಸುವಂತೆ ಈ ವಿಶ್ವವೂ ಚಲಿಸುತ್ತದೆ. ಅವನು ತನ್ನ ಅಚಿಂತ್ಯ ಮಹಾಶಕ್ತಿಯಾದ ಕಾಲದ ಮೂಲಕ ಈ ಭೌತ ಗುಣಗಳ ಪ್ರಕ್ರಿಯೆಯಾಗುವಂತೆ ಮಾಡುತ್ತಾನೆ. ಅವನು ಕಾರ್ಯ ಮಾಡುವಂತೆ ಕಂಡರೂ ಅವನು ಮಾಡುವುದಿಲ್ಲ. ಅವನು ಕೊಲ್ಲುತ್ತಿರುವಂತೆ ಕಂಡರೂ ಅವನು ಕೊಲ್ಲುವುದಿಲ್ಲ. ಎಲ್ಲವನ್ನೂ ಅವನ ಶಕ್ತಿಯೇ ಮಾಡುತ್ತದೆ. ಅವನು ಅನಂತನಾದರೂ ಕಾಲಶಕ್ತಿಯ ರೂಪದಲ್ಲಿ ಎಲ್ಲದರ ಅಂತಕನಾಗಿದ್ದಾನೆ. ಅವನು ಅನಾದಿಯಾದರೂ ಎಲ್ಲಕ್ಕೂ ಅವನೇ ಆದಿಮೂಲನಾಗಿದ್ದಾನೆ. ಜೀವಿಗಳಿಂದಲೇ ಜೀವಿಗಳನ್ನು ಸೃಷ್ಟಿಸಿ, ಮೃತ್ಯುವಿನ ಮೂಲಕ ಎಲ್ಲರ ಸಂಹಾರಕನಾಗಿದ್ದಾನೆ. ಆದರೆ ಅವನು ಜನನ ಮರಣಗಳಿಂದ ಮುಕ್ತನಾಗಿ ಅವ್ಯಯನಾಗಿದ್ದಾನೆ. ಅವನಿಗೆ ಶತ್ರುಗಳಾಗಲೀ ಮಿತ್ರರಾಗಲೀ ಇಲ್ಲ. ಅವನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಆದರೆ, ಬೀಸುವ ಗಾಳಿಯನ್ನು ಅನುಸರಿಸುವ ಧೂಳಿನ ಕಣಗಳಂತೆ ಜನರು ತಮ್ಮ ಕರ್ಮಗಳಿಗೆ ತಕ್ಕಂತೆ ಸುಖದುಃಖಗಳನ್ನನುಭವಿಸುತ್ತಾ ಕಾಲವನ್ನನುಸರಿಸಬೇಕು. ಅವರವರ ಕರ್ಮಾನುಸಾರವಾಗಿ ಕೆಲವರಿಗೆ ದೀರ್ಘಾಯುಸ್ಸನ್ನೂ ಕೆಲವರಿಗೆ ಅಲ್ಪಾಯುಸ್ಸನ್ನೂ ಅವನು ವಿಧಿಸುತ್ತಾನೆ. ಆದರೆ ಅವನು ಇವಕ್ಕೆ ಅತೀತನು. ಕೆಲವರು, ಇದಕ್ಕೆ ಕರ್ಮ ಕಾರಣವೆಂದರೆ, ಇನ್ನು ಕೆಲವರು ಇದನ್ನು ಪ್ರಾಕೃತಿಕ ಸ್ವಭಾವವೆನ್ನುವರು. ಮತ್ತೆ ಕೆಲವರು ಇದು ಕಾಲದಿಂದಾಗುವುದೆಂದೂ, ಕೆಲವರು ವಿಧಿಬರಹದಿಂದಲೆಂದೂ, ಕೆಲವರು ಕಾಮದಿಂದುಂಟಾಗುವುದೆಂದೂ ಹೇಳುತ್ತಾರೆ.
“ರಾಜ! ನಾನು ಶಕ್ತಿಗಳಿಗೆ ಪ್ರಭುವಾದ ಆ ಅಪ್ರಮೇಯ ಭಗವಂತನನ್ನು ಈ ಭೌತಿಕ ಇಂದ್ರಿಯಗಳಿಂದ ಅರಿಯಲಾಗುವುದಿಲ್ಲ. ವತ್ಸ ವಾಸ್ತವವಾಗಿ ನಿನ್ನ ತಮ್ಮನನ್ನು ಈ ಯಕ್ಷರು ಕೊಂದಿಲ್ಲ. ಹುಟ್ಟು ಸಾವುಗಳಿಗೆ ಸರ್ವಕಾರಣಮೂಲನಾದ ಆ ಭಗವಂತನೇ ಕಾರಣ. ಅವನೇ ಈ ವಿಶ್ವವನ್ನು ಸೃಷ್ಠಿಸುತ್ತಾನೆ, ಪಾಲಿಸುತ್ತಾನೆ, ಮತ್ತು ಸಂಹರಿಸುತ್ತಾನೆ ಕೂಡ. ಆದರೆ ಕರ್ತೃತ್ವದ ಅಹಂಭಾವದಿಂದ ದೂರನಾದ ಅವನು ತ್ರಿಗುಣಗಳ ಈ ಕರ್ಮಗಳಿಗೆ ಅಂಟಿಕೊಳ್ಳುವುದಿಲ್ಲ. ಎಲ್ಲ ಜೀವಿಗಳ ಅಂತರಾತ್ಮನೂ ನಿಯಂತ್ರಕನೂ ಪಾಲಕನೂ ಆದ ಅವನು, ತನ್ನ ಬಹಿರಂಗ ಶಕ್ತಿಯಾದ ಮಾಯೆಯ ಮೂಲಕ ಸೃಷ್ಟಿ ಸ್ಥಿತಿ ಲಯಗಳನ್ನು ಮಾಡುತ್ತಾನೆ. ಮೂಗುದಾರ ಹಾಕಲ್ಪಟ್ಟ ಆಕಳು ತನ್ನ ಒಡೆಯನ ಹಿಂದೆ ಹೋಗುವಂತೆ, ಸೃಷ್ಟಿಕರ್ತನಾದ ಬ್ರಹ್ಮದೇವನೇ ಮೊದಲ್ಗೊಂಡು ಸಕಲ ಜೀವಿಗಳೂ ಅವನಿಂದ ನಿಯಂತ್ರಿತರಾಗಿದ್ದಾರೆ. ಆದ್ದರಿಂದ ಅವನಲ್ಲೇ ಶರಣಾಗು.
“ಧ್ರುವ! ನೀನಾದರೋ ಐದು ವರ್ಷದ ಬಾಲಕನಾಗಿದ್ದಾಗಲೇ ನಿನ್ನ ಮಲತಾಯಿಯ ಮಾತಿಗೆ ನೊಂದು ತಾಯಿಯನ್ನೂ ಬಿಟ್ಟು ತಪಸ್ಸು ಮಾಡಲೆಂದು ಕಾಡಿಗೆ ಹೊರಟುಹೋದೆ. ತತ್ಫಲವಾಗಿ ಮೂರು ಲೋಕಗಳಿಗಿಂತಲೂ ಶ್ರೇಷ್ಠವಾದ ಸ್ಥಾನವನ್ನು ಪಡೆದೆ. ಆದ್ದರಿಂದ ನೀನು ಈ ಕೋಪವನ್ನು ತ್ಯಜಿಸಿ ನಿನ್ನ ಮನಸ್ಸನ್ನು ಗುಣಾತೀತನೂ ಅಕ್ಷರನೂ ಆದ ಆ ಭಗವಂತನ ಕಡೆಗೆ ತಿರುಗಿಸು. ಆಗ ನಿನಗೆ ಆತ್ಮ ಸಾಕ್ಷಾತ್ಕಾರವಾಗಿ ತಾತ್ಕಾಲಿಕವಾದ ಈ ಭೇದಜ್ಞಾನವು ಮರೆಯಾಗುತ್ತದೆ. ಸಮಸ್ತಶಕ್ತಿಗಳಿಗೆ ಆಧಾರನೂ ಆನಂದದ ಆಗರನೂ ಆದ ಆ ಪರಮ ಪುರುಷನಲ್ಲಿ ಭಕ್ತಿಯನ್ನಾಚರಿಸಿದರೆ, `ನಾನು’ `ನನ್ನದೆಂಬ’ ಈ ಅವಿದ್ಯಾ ಗ್ರಂಥಿಯು ಛೇದನಗೊಳ್ಳುತ್ತದೆ.
“ಈ ಕೆಟ್ಟ ರೋಷವನ್ನು ಬಿಡು ಮಗು! ನಾನು ಹೇಳಿದುದನ್ನೆಲ್ಲ್ಲ ಪರಿಗಣಿಸಿ ನೋಡು. ಕಾಯಿಲೆಗೊಳಗಾದವನಿಗೆ ನಾನು ಹೇಳಿದ ಮಾತು ಔಷಧಿಯಂತೆ ಕೆಲಸ ಮಾಡುತ್ತದೆ. ಈ ಕೋಪಕ್ಕೆ ವಶನಾಗಿರುವವನು ಎಲ್ಲರಿಗೂ ಭಯವನ್ನುಂಟು ಮಾಡುತ್ತಿರುತ್ತಾನೆ. ಮೋಕ್ಷವನ್ನು ಬಯಸುವವನಿಗೆ ಇದು ಶ್ರೇಯಸ್ಕರವಲ್ಲ. ನೀನು ನಿನ್ನ ಕೋಪದಿಂದ ಕುಬೇರನಿಗೂ ಅವನ ಸಹೋದರನಾದ ರುದ್ರದೇವನಿಗೂ ಅಪ್ರಿಯವನ್ನುಂಟು ಮಾಡಿರುವೆ. ನಿನ್ನ ತಮ್ಮನನ್ನು ಯಕ್ಷನೊಬ್ಬನು ಕೊಂದನೆಂದು ಪುಣ್ಯಾತ್ಮರಾದ ಅನೇಕ ಯಕ್ಷರನ್ನು ಸಂಹರಿಸಿರುವೆ. ಕುಬೇರನು ನಮ್ಮ ಕುಲದ ಮೇಲೆ ಕೋಪಗೊಳ್ಳಬಾರದಲ್ಲವೇ? ಅದಕ್ಕಾಗಿ ಬೇಗನೆ ಅವನನ್ನು ಸ್ತುತಿಗಳಿಂದ ಸುಪ್ರೀತಗೊಳಿಸು.”
ಸ್ವಾಯಂಭುವ ಮನುವು ಹೀಗೆ ಉಪದೇಶಿಸಲು ಧ್ರುವನು ಅವನ ಮಾತುಗಳನ್ನು ಶ್ರದ್ಧಾಭಕ್ತಿಗಳಿಂದ ಕೇಳಿ ಅವನನ್ನು ವಂದಿಸಿದನು. ಯುದ್ಧವನ್ನು ನಿಲ್ಲಿಸಿದನು. ಮನುವು ಋಷಿಮುನಿಗಳೊಂದಿಗೆ ತನ್ನ ಲೋಕಕ್ಕೆ ಹೊರಟು ಹೋದನು.
ಧ್ರುವನು ಕೋಪವನ್ನು ತ್ಯಜಿಸಿ ಯುದ್ಧವನ್ನು ನಿಲ್ಲಿಸಲು, ಯಕ್ಷಕಿನ್ನರ ಚಾರಣರಿಂದ ಸಂಪೂಜಿಸಲ್ಪಡುತ್ತಾ ಧನಾಧಿಪತಿಯಾದ ಕುಬೇರನು ಪ್ರತ್ಯಕ್ಷನಾದನು. ಧ್ರುವನು ಒಡನೆಯೇ ಕುಬೇರನಿಗೆ ಅಂಜಲೀಬದ್ಧನಾಗಿ ಪ್ರಣಾಮ ಸಲ್ಲಿಸಿದನು.
ಸುಪ್ರೀತನಾದ ಕುಬೇರನು ಹೇಳಿದನು, “ಎಲೈ ಕ್ಷತ್ರಿಯ ಕುಮಾರನೇ, ನಿನ್ನ ಪಿತಾಮಹನ ಆದೇಶದಂತೆ ತ್ಯಜಿಸಲು ಕಷ್ಟವಾದ ನಿನ್ನ ವೈರವನ್ನು ತ್ಯಜಿಸಿರುವೆ. ಇದರಿಂದ ನಾನು ಸಂತುಷ್ಟನಾಗಿರುವೆ. ಪಾಪರಹಿತನೇ, ನೀನು ಯಕ್ಷರನ್ನು ಕೊಂದಿಲ್ಲ. ಅಂತೆಯೇ ಅವರೂ ನಿನ್ನ ತಮ್ಮನನ್ನು ಕೊಂದಿಲ್ಲ. ಸೃಷ್ಟಿ ಸಂಹಾರಗಳೆರಡಕ್ಕೂ ಪರಮ ಪುರುಷನ ಆ ಕಾಲರೂಪವೇ ಕಾರಣ. ಅಜ್ಞಾನಕ್ಕೊಳಗಾಗಿ, ದೇಹಾಭಿಮಾನದಿಂದ `ನಾನು’, `ನೀನು’ ಎಂದು ನಾವು ತಪ್ಪಾಗಿ ಗುರುತಿಸಿಕೊಳ್ಳುತ್ತೇವೆ. ಸ್ವಪ್ನದಂತಿರುವ ಈ ಭಾವನೆಯೇ ಎಲ್ಲ ಬಂಧನಗಳಿಗೂ ಕಾರಣ. ಧ್ರುವ! ನಿನಗೆ ಮಂಗಳವಾಗಲಿ! ಆ ಅಧೋಕ್ಷಜನನ್ನಾಶ್ರಯಿಸು. ಸಕಲ ಜೀವಿಗಳಲ್ಲೂ ಆ ಪರಮಾತ್ಮನಿರುವುದರಿಂದ ಯಾರೊಬ್ಬರೂ ಅವನಿಂದ ಬೇರೆಯಲ್ಲವೆಂಬ ಭಾವನೆಯಿಂದ ಅವನಲ್ಲಿ ಭಕ್ತಿ ತೋರು. ಈ ಭವ ಬಂಧನದಿಂದ ಜೀವಿಗಳನ್ನು ಬಿಡಿಸಬಲ್ಲ ಅವನ ಅಂಘ್ರಿಯುಗ್ಮಗಳಿಗೆ ಸೇವೆ ಸಲ್ಲಿಸು. ಅವನು ಮಾಯಾಯುಕ್ತನಾಗಿದ್ದರೂ ಮಾಯಾರಹಿತನೂ ಆಗಿರುವನು. ಈ ಭೌತಿಕ ಪ್ರಪಂಚದಲ್ಲಿ ಅವನ ಅಚಿಂತ್ಯ ಶಕ್ತಿಯೇ ಎಲ್ಲವನ್ನೂ ನಡೆಸುತ್ತದೆ.
“ಮಹಾರಾಜ! ನೀನು ಆ ಕಮಲನಾಭನ ಪಾದಪದ್ಮಗಳನ್ನು ಸದಾ ಸೇವಿಸುತ್ತಿರುವೆಯೆಂದು ನಾವು ಕೇಳಿದ್ದೇವೆ. ಆದ್ದರಿಂದ ನೀನು ಎಂತಹ ವರಗಳನ್ನಾದರೂ ಪಡೆಯಲು ಅರ್ಹನಾಗಿರುವೆ. ನಿನಗೇನು ವರವು ಬೇಕೆಂದು ಕೇಳು, ನಾನು ಈಗಲೇ ನೀಡುವೆ!”
“ಧನಾಧಿಪತಿ ಕುಬೇರನೇ”, ಧ್ರುವನು ಹೇಳಿದನು, “ನೀನು ನನಗೆ ವರವನ್ನು ನೀಡುವೆಯಾದರೆ, ನನ್ನ ಮನಸ್ಸು ಶ್ರೀಹರಿಯನ್ನು ಸದಾ ಸ್ಮರಿಸುತ್ತಿರಲೆಂಬ ವರವನ್ನು ನೀಡು. ಹರಿಯಲ್ಲಿ ಅಚಲಿತವಾದ ಸ್ಮರಣೆಯಿದ್ದರೆ ಮಾಯಾಂಧಕಾರವನ್ನು ಸುಲಭವಾಗಿ ದಾಟಬಹುದು.”
ಭಾಗವತೋತ್ತಮನಾದ ಧ್ರುವನ ಮಾತನ್ನು ಕೇಳಿ ಇಡವಿಡೆಯ ಪುತ್ರನಾದ ಕುಬೇರನು ಪರಮ ಪ್ರೀತನಾದನು. ಧ್ರುವನಿಗೆ ಆ ವರವನ್ನು ಕರುಣಿಸಿ ಅವನು ನೋಡನೋಡುತ್ತಿದ್ದಂತೆಯೇ ಅಂತರ್ಧಾನನಾದನು. ಧ್ರುವನೂ ತನ್ನ ರಾಜ್ಯಕ್ಕೆ ಹಿಂದಿರುಗಿದನು.
ಧ್ರುವಮಹಾರಾಜನು ಮೂವತ್ತಾರು ಸಾವಿರ ವರ್ಷಗಳ ಕಾಲ ಭೂಮಂಡಲವನ್ನಾಳಿದನು. ಅನೇಕಾನೇಕ ಯಜ್ಞಗಳನ್ನು ಆಚರಿಸಿ ಭೂರಿದಕ್ಷಿಣೆಗಳನ್ನು ನೀಡುತ್ತಾ ಯಜ್ಞೇಶ್ವರನೂ ಸರ್ವಕರ್ಮಗಳ ಫಲಪ್ರದಾಯಕನೂ ಆದ ಭಗವಂತನನ್ನು ತೃಪ್ತಿಪಡಿಸಿದನು. ಪರಮಾತ್ಮನಾದ ವಿಷ್ಣುವಿನಲ್ಲಿ ಪರಮ ಭಕ್ತಿಯನ್ನಾಚರಿಸಿ ಎಲ್ಲ ಜೀವಿಗಳಲ್ಲೂ ಅವನಿರುವುದನ್ನೂ ಎಲ್ಲ ಜೀವಿಗಳೂ ಅವನಲ್ಲಿರುವರೆಂದೂ ಕಂಡುಕೊಂಡನು. ಶೀಲಗುಣಸಂಪನ್ನನೂ ಬ್ರಾಹ್ಮಣರನ್ನು ಗೌರವಿಸುತ್ತಿದ್ದವನೂ ಬಡಬಗ್ಗರಲ್ಲಿ ಬಹುಕರುಣಾಶಾಲಿಯೂ ಆಗಿದ್ದ ಧ್ರುವ ಮಹಾರಾಜನನ್ನು ಪ್ರಜೆಗಳು ತಮ್ಮ ತಂದೆಯೆಂದು ಭಾವಿಸಿದರು. ಭೋಗಭಾಗ್ಯಗಳನನ್ನುಭವಿಸುತ್ತಾ ತನ್ನ ಪುಣ್ಯಗಳನ್ನೂ, ವ್ರತಾಚರಣೆಗಳಿಂದ ತನ್ನ ಪಾಪಗಳನ್ನೂ ಧ್ರುವನು ಕ್ಷಯಿಸಿಕೊಂಡನು. ಹೀಗೆ ಜಿತೇಂದ್ರಿಯನಾಗಿದ್ದುಕೊಂಡು ಅವನು ಧರ್ಮಾರ್ಥ ಕಾಮಗಳನ್ನು ಸಾಧಿಸುತ್ತಾ ಬಹುಕಾಲ ರಾಜ್ಯವಾಳಿದನು.
ಅನಂತರ ಅವನು ತನ್ನ ವಿಶಾಲ ರಾಜ್ಯವನ್ನು ತನ್ನ ಮಗನಿಗೊಪ್ಪಿಸಿದನು. ಈ ವಿಶ್ವವು ಮಾಯಾಶಕ್ತಿಯ ಸೃಷ್ಟಿಯಾಗಿದ್ದು ಸ್ವಪ್ನ ಅಥವಾ ಒಂದು ಭ್ರಮಾಲೋಕದಂತೆ ಜೀವಿಗಳನ್ನು ಮರುಳುಗೊಳಿಸುತ್ತದೆಯೆಂದು ಅವನು ಕಂಡುಕೊಂಡನು. ಕ್ರಮೇಣ ಅವನು, ತನ್ನ ದೇಹ, ಪತ್ನಿಯರು, ಪುತ್ರರು, ರಾಜ್ಯಕೋಶಗಳು, ರಮ್ಯ ವಿಹಾರತಾಣಗಳು ಮತ್ತು ಸಾಗರಗಳಿಂದ ವ್ಯಾಪ್ತವಾಗಿದ್ದ ಸಮಸ್ತ ಭೂಮಂಡಲವೂ ಮಾಯಾಶಕ್ತಿಯ ಸೃಷ್ಟಿಯೆಂದು ಬಗೆದು ವಿರಕ್ತನಾದನು. ಎಲ್ಲವನ್ನೂ ತ್ಯಜಿಸಿ ಆತ್ಮೋನ್ನತಿಯನ್ನು ಸಾಧಿಸಲು ಪವಿತ್ರವಾದ ಬದರಿಕಾಶ್ರಮಕ್ಕೆ ಹೋದನು.
ಆ ಪರಿಶುದ್ಧ ತಾಣದಲ್ಲಿ ನಿರ್ಮಲಜಲದಿಂದ ಕೂಡಿದ ನದಿಯಲ್ಲಿ ಅವನು ಮಿಂದನು. ಆಸನವನ್ನು ಕಲ್ಪಿಸಿಕೊಂಡು ಪ್ರಾಣವಾಯುವನ್ನು ನಿಯಂತ್ರಿಸುತ್ತಾ ಜಿತಮನಸ್ಕನಾದನು. ಇಂದ್ರಿಯಗಳನ್ನು ಸಂಪೂರ್ಣವಾಗಿ ನಿಗ್ರಹಿಸಿ ಶ್ರೀಹರಿಯ ಅರ್ಚಾ ರೂಪವನ್ನೇ ಧ್ಯಾನಿಸುತ್ತಾ ಸಮಾಧಿಸ್ಥನಾದನು. ಹರಿಯ ಧ್ಯಾನದಲ್ಲಿ ತನ್ಮಯನಾದ ಅವನ ಹೃದಯವು ಕರಗಿ ಅಂಗಾಂಗಗಳು ಪುಳಕಗೊಂಡವು. ಅವನ ಕಂಗಳಿಂದ ಆನಂದ ಬಾಷ್ಪಗಳು ಉದುರಿದವು. ಭಕ್ತಿರಸಾಮೃತದಲ್ಲಿ ಮುಳುಗಿ ಅವನು ಮೈಮರೆತನು. ಬಹುಬೇಗನೆ ಅವನು ದೈಹಿಕ ಬಂಧನದಿಂದ ಬಿಡುಗಡೆ ಹೊಂದಿದನು.
ಒಂದು ದಿನ, ಆಗಸದಿಂದ ದಶದಿಕ್ಕುಗಳನ್ನೂ ಪೂರ್ಣಚಂದ್ರನಂತೆ ಜಾಜ್ವಲ್ಯಮಾನವಾಗಿ ಬೆಳಗುತ್ತಾ ದಿವ್ಯ ವಿಮಾನವೊಂದು ಧ್ರುವನ ಮುಂದೆ ಬಂದಿಳಿಯಿತು! ಆ ವಿಮಾನದಿಂದ ಚತುರ್ಭುಜಗಳನ್ನು ಹೊಂದಿದ್ದ ಇಬ್ಬರು ಸುಂದರ ದೇವತೆಗಳು ಹೊರಬಂದರು. ಶ್ಯಾಮಲವರ್ಣದ ಆ ಇಬ್ಬರು ದಿವ್ಯಪುರುಷರು ಕೆಂದಾವರೆಯಂತಹ ಕಣ್ಣುಗಳನ್ನು ಪಡೆದಿದ್ದರು. ಪೀತಾಂಬರಧಾರಿಗಳಾಗಿದ್ದ ಆ ತರುಣರು ಕಿರೀಟ ಕುಂಡಲ ಹಾರ ಕಂಕಣಗಳಿಂದ ಅಲಂಕೃತರಾಗಿದ್ದು ಗದೆಗಳನ್ನು ಹಿಡಿದಿದ್ದರು. ಧ್ರುವನು ಆ ದೇವತೆಗಳನ್ನು ನೋಡುತ್ತಲೇ ಅವರು ಶ್ರೀಹರಿಯ ಕಿಂಕರರೆಂದು ಅರಿತು ದಿಗ್ಭ್ರಮೆಗೊಂಡನು. ಅವರನ್ನು ಹೇಗೆ ಸತ್ಕರಿಸಬೇಕೆಂದರಿಯದೆ, ಎದ್ದು ನಿಂತು “ಹರಿ ಹರಿ!” ಎನ್ನುತ್ತಾ ನಮಸ್ಕರಿಸಿದನು.
ನಂದ, ಸುನಂದರೆಂಬ ಆ ವಿಷ್ಣುದೂತರು, ಶ್ರೀಕೃಷ್ಣನ ಮಹಾಭಕ್ತನಾದ ಧ್ರುವನನ್ನು ನೋಡಿ ಸಂತೋಷಗೊಂಡು, ನಸುನಗುತ್ತಾ ಹೇಳಿದರು, “ಹೇ ರಾಜನೇ! ನಮ್ಮ ಮಾತುಗಳನ್ನು ಗಮನವಿಟ್ಟು ಕೇಳು. ಕೇವಲ ಐದು ವರ್ಷ ವಯಸ್ಸಿನ ಮುಗ್ಧ ಬಾಲಕನಾಗಿದ್ದಾಗಲೇ ನೀನು ಆ ಪರಮಪುರುಷನನ್ನು ತಪಸ್ಸಿನಿಂದ ಮೆಚ್ಚಿಸಿದೆ. ಅಖಿಲ ಜಗತ್ತಿನ ಸೃಷ್ಟಿಕರ್ತನಾದ ಆ ಶಾರ್ಙ್ಗಧನ್ವನ ಪಾರ್ಷದರು ನಾವು. ನಿನ್ನನ್ನು ಆ ಭಗವದ್ಧಾಮಕ್ಕೆ ಕರೆದೊಯ್ಯಲು ಬಂದಿದ್ದೇವೆ. ವಿಷ್ಣು ಪದದ ಪ್ರಾಪ್ತಿಯಾಗುವುದು ಬಹುಕಷ್ಟ. ಆದರೆ ನೀನು ಅದನ್ನು ಪಡೆದಿದ್ದೀಯೆ. ದೇವಾನುದೇವತೆಗಳೂ ಅದನ್ನು ಪಡೆಯಲಾಗದೆ ಸದಾ ಅದನ್ನೇ ನೋಡುತ್ತಿರುತ್ತಾರೆ. ಸೂರ್ಯಚಂದ್ರಗ್ರಹತಾರಾಮಂಡಲಗಳೂ ಆ ದಿವ್ಯ ಲೋಕಕ್ಕೆ ಸದಾ ಪ್ರದಕ್ಷಿಣೆ ಹಾಕುತ್ತಿರುತ್ತವೆ. ಧ್ರುವ! ಆ ಪರಮಪದವನ್ನು ನಿನ್ನ ಪಿತೃಗಳಾರೂ ಹೊಂದಲಿಲ್ಲ. ಈಗ ನೀನು ನಮ್ಮೊಂದಿಗೆ ಬಂದು ಆ ಲೋಕವನ್ನು ಪಡೆ! ಎಲೈ ಮೃತ್ಯುರಹಿತನೇ, ದೇವೋತ್ತಮ ಪರಮ ಪುರುಷನು ಈ ಅಸಾಮಾನ್ಯವಾದ ವಿಮಾನವನ್ನು ನಿನಗಾಗಿ ಕಳಿಸಿದ್ದಾನೆ. ಇದನ್ನೇರಲು ನೀನು ಅರ್ಹನಾಗಿರುವೆ. ನಿನಗೆ ಮಂಗಳವಾಗಲಿ!”
ವೈಕುಂಠಪತಿಯ ಪಾರ್ಷದರು ಹೇಳಿದ ಮಾತುಗಳನ್ನು ಕೇಳಿ ಧ್ರುವನು ಮಂಗಳಸ್ನಾನ ಮಾಡಿದನು. ನಿತ್ಯ ಕರ್ಮಗಳನ್ನಾಚರಿಸಿ ಉತ್ತಮ ವಸ್ತ್ರಧಾರಣೆ ಮಾಡಿದನು. ತನ್ನೊಂದಿಗಿದ್ದ ಋಷಿಮುನಿಗಳೆಲ್ಲರಿಗೂ ಗೌರವಪೂರ್ವಕ ಪ್ರಣಾಮಗಳನ್ನು ಸಲ್ಲಿಸಿದನು. ಅವರು ಅವನಿಗೆ ಆಶೀರ್ವಾದ ಮಾಡಿದರು. ಅನಂತರ ಧ್ರುವನು ಆ ದಿವ್ಯ ವಿಮಾನಕ್ಕೆ ಪ್ರದಕ್ಷಿಣೆ ಮಾಡಿ ಅದನ್ನು ಅರ್ಚಿಸಿದನು. ವಿಮಾನವನ್ನು ಅವನು ಹತ್ತಲುದ್ಯುಕ್ತನಾದಂತೆ ಅವನ ದೇಹವು ಚಿನ್ನದಂತೆ ದೇದೀಪ್ಯಮಾನವಾಗಿ ಹೊಳೆಯುತ್ತಾ ಮಂಗಳ ಮಯವಾಯಿತು. ಆಗ ಅವನು, ಮೃತ್ಯುವು ತನ್ನತ್ತ ಬರುತ್ತಿರುವುದನ್ನು ಗಮನಿಸಿದನು. ಆ ಮೃತ್ಯುವಿನ ತಲೆಯನ್ನೇ ಮೆಟ್ಟಿ ಧ್ರುವನು ವಿಮಾನವನ್ನೇರಿದನು!
ದೇವದುಂದುಭಿಗಳು ಮೊಳಗಿದವು! ಭೇರಿಮೃದಂಗಗಳು ಪ್ರತಿಧ್ವನಿಸಿದವು! ಗಂಧರ್ವಾಪ್ಸರೆಯರು ಹಾಡಿ ನರ್ತಿಸಿದರು! ದೇವತೆಗಳು ಪುಷ್ಪವೃಷ್ಟಿಗೈದರು!
ಧ್ರುವನು ವಿಮಾನದಲ್ಲಿ ವೈಕುಂಠಧಾಮಕ್ಕೆ ಪಯಣಿಸಿದಂತೆ ಅವನಿಗೆ ತನ್ನ ದೀನಳಾದ ತಾಯಿಯ ನೆನಪಾಯಿತು. “ತಾಯಿಯನ್ನು ಬಿಟ್ಟು ನಾನೊಬ್ಬನೇ ಹೇಗೆ ವೈಕುಂಠಕ್ಕೆ ಹೋಗಲಿ?” ಎಂದು ಕಳವಳಗೊಂಡನು. ಅವನ ಮನಸ್ಸಿನ ದುಗುಡವನ್ನರಿತ ನಂದ, ಸುನಂದರು ಅವನ ತಾಯಿಯು ಮತ್ತೊಂದು ವಿಮಾನದಲ್ಲಿ ವೈಕುಂಠಕ್ಕೆ ಹೋಗುತ್ತಿದ್ದುದನ್ನು ತೋರಿಸಿದರು.
ಧ್ರುವನು ಆಕಾಶದಲ್ಲಿ ಸಾಗುತ್ತಿದ್ದಂತೆ ಸೌರವ್ಯೂಹದ ಗ್ರಹಮಂಡಲಗಳೆಲ್ಲವನ್ನೂ ಕಂಡನು. ದೇವತೆಗಳು ತಮ್ಮ ವಿಮಾನಗಳಿಂದ ಅವನ ವಿಮಾನದ ಮೇಲೆ ಪುಷ್ಪಗಳ ಸುರಿಮಳೆಯನ್ನೇ ಸುರಿಸಿದರು. ಧ್ರುವನು ಮೂರು ಲೋಕಗಳನ್ನೂ ಸಪ್ತರ್ಷಿಮಂಡಲಗಳನ್ನೂ ದಾಟಿ ಮಹಾವಿಷ್ಣುವಿನ ಆವಾಸಸ್ಥಾನವಾದ ಧ್ರುವ ನಕ್ಷತ್ರವೆಂಬ ದಿವ್ಯಧಾಮವನ್ನು ಸೇರಿದನು.
ಸ್ವಯಂಪ್ರಭೆಯಿಂದಲೇ ಬೆಳಗುವ ಆ ವೈಕುಂಠಧಾಮದ ಪ್ರಭೆಯಿಂದಲೇ ಮೂರು ಲೋಕಗಳೂ ಬೆಳಗುತ್ತವೆ. ಇತರ ಜೀವಿಗಳಿಗೆ ಕರುಣೆ ತೋರದ ಜನರು ಆ ಪರಮಪದವನ್ನು ಪಡೆಯಲಾರರು. ಸಕಲ ಜೀವಿಗಳಿಗೂ ಸದಾ ಒಳಿತನ್ನುಂಟು ಮಾಡುವವರು ಮಾತ್ರವೇ ಆ ಲೋಕವನ್ನು ಹೊಂದುವರು. ಶಾಂತರೂ ಸಮದರ್ಶಿಗಳೂ ಪರಿಶುದ್ಧರೂ ಸರ್ವ ಜೀವಿಗಳಿಗೂ ಪ್ರಿಯವನ್ನುಂಟು ಮಾಡುವವರೂ ಭಗವಂತನ ಭಕ್ತರ ಸ್ನೇಹ ಹೊಂದಿರುವವರೂ ಬಹು ಸುಲಭವಾಗಿ ತಮ್ಮ ನೈಜನೆಲೆಯಾದ ಆ ದಿವ್ಯಲೋಕಕ್ಕೆ ಮರಳುತ್ತಾರೆ. ಶ್ರೀಕೃಷ್ಣನ ಪರಮ ಭಕ್ತನಾದ ಧ್ರುವ ಮಹಾರಾಜನು ಮೂರು ಲೋಕಗಳಿಗೂ ಚೂಡಾಮಣಿಪ್ರಾಯವಾದ ಇಂಥ ಪರಮ ಪದವನ್ನು ಪಡೆದನು. ಎತ್ತುಗಳು ಮೇಟಿಯ ಸುತ್ತಲೂ ಸುತ್ತುವಂತೆ ಇಡಿಯ ಜ್ಯೋತಿಶ್ಚಕ್ರವೇ ಆ ಅಮರತಾರೆಯನ್ನು ಸುತ್ತುತ್ತದೆ!
ನಾರದ ಮುನಿಗಳು ಧ್ರುವನ ಮಹಿಮೆಯನ್ನು ಕಂಡು ಬೆರಗಾಗಿ ಧ್ರುವನ ವಂಶದಲ್ಲಿ ಜನಿಸಿದ ಪ್ರಚೇತಸರ ಯಾಗಭೂಮಿಯಲ್ಲಿ ತಮ್ಮ ವೀಣೆಯನ್ನು ನುಡಿಸುತ್ತಾ ಅವನನ್ನು ಕುರಿತು ಹಾಡಿದರು,
“ಪತಿವ್ರತೆಯಾದ ಸುನೀತಿಯ ಪುತ್ರನಾದ ಈ ಧ್ರುವನು ತನ್ನ ತಪೋನುಷ್ಠಾನದಿಂದ, ಸಾಮಾನ್ಯ ರಾಜರಿಗಿರಲಿ, ವೇದಾಂತಿಗಳಿಗೂ ದುರ್ಲಭವಾದ ಪರಮಪದವನ್ನು ಪಡೆದನು! ತನ್ನ ಮಲತಾಯಿಯ ಮಾತುಗಳಿಂದ ನೊಂದ ಅವನು, ಐದು ವರ್ಷದ ಮಗುವಾಗಿರುವಾಗಲೇ ನನ್ನ ಆದೇಶದಂತೆ ಕಾಡಿಗೆ ಹೋಗಿ ನನ್ನ ನೇತೃತ್ವದಲ್ಲಿ ಭಕ್ತಿ ಸೇವೆಯಿಂದ ಜಯಿಸಲಸಾಧ್ಯವಾದ ಆ ಪರಮಪುರುಷನನ್ನೇ ಜಯಿಸಿಬಿಟ್ಟನು!
ಧ್ರುವನು ಐದಾರು ವರ್ಷಗಳ ಬಾಲಕನಾಗಿರುವಾಗಲೇ, ಕೇವಲ ಆರೇ ತಿಂಗಳುಗಳಲ್ಲೇ ಮಹತ್ತರ ಸ್ಥಾನವನ್ನು ಗಳಿಸಿಬಿಟ್ಟನು. ಆದರೆ ಒಬ್ಬ ಕ್ಷತ್ರಿಯರಾಜನು ವರ್ಷಾನುಗಟ್ಟಲೇ ತಪಗೈದರೂ ಇಂಥ ಸ್ಥಾನವನ್ನು ಪಡೆಯಲಾರ!”
ಮೈತ್ರೇಯರು ವಿದುರನಿಗೆ ಪರಮಭಾಗವೋತ್ತಮನಾದ ಧ್ರುವಮಹಾರಾಜನ ಕಥೆಯನ್ನು ಹೀಗೆ ಹೇಳಿದರು. ಅದನ್ನು ಕೇಳಿ ಭಕ್ತಿಪರವಶನಾದ ವಿದುರನಿಗೆ ಕಥೆಯ ಫಲಶ್ರುತಿಯನ್ನು ಹೇಳಿದರು. “ವಿದುರ”, ಅವರು ಹೇಳಿದರು, “ಭಕ್ತರು ಕೇಳಲಿಚ್ಛಿಸುವ ಧ್ರುವನ ಯಶೋಗಾಥೆಯನ್ನು ನಿನಗೆ ಸಂಪೂರ್ಣವಾಗಿ ಹೇಳಿದ್ದೇನೆ. ಆಯುಸ್ಸು, ಯಶಸ್ಸು, ಪುಣ್ಯಗಳನ್ನು ವರ್ಧಿಸುವ ಈ ಮಂಗಳಕರವಾದ ಕಥೆಯನ್ನು ಕೇಳುವವನು ಸರ್ವಪಾಪಗಳನ್ನೂ ಕಳೆದುಕೊಂಡು ಸ್ವರ್ಗವನ್ನಾಗಲೀ ಧ್ರುವಲೋಕವನ್ನಾಗಲೀ ಹೊಂದುವನು. ಶ್ರೀಕೃಷ್ಣನಿಗೆ ಪ್ರಿಯನಾದ ಭಕ್ತ ಧ್ರುವನ ಕಥೆಯನ್ನು ಶ್ರದ್ಧೆಯಿಂದ ಕೇಳುವವನು ಭಗವಂತನಲ್ಲಿ ಭಕ್ತಿಯನ್ನು ಹೊಂದಿ ಸರ್ವಕ್ಲೇಶಗಳನ್ನೂ ನಿವಾರಿಸಿಕೊಳ್ಳುತ್ತಾನೆ. ಈ ಕಥೆಯನ್ನು ಕೇಳುವವನು ಧ್ರುವನಂತೆಯೇ ಶೀಲಗುಣಸಂಪನ್ನನಾಗುವನು. ಮಹತ್ವವನ್ನಿಚ್ಛಿಸುವವನು ಮಹತ್ವವನ್ನು ಪಡೆಯುವನು. ಶೌರ್ಯವನ್ನಿಚ್ಛಿಸುವವನು ಶೌರ್ಯವನ್ನು ಪಡೆಯುವನು. ಜನಮನ್ನಣೆಗಳಿಸಲಿಚ್ಛಿಸುವವನು ಎಲ್ಲರಿಂದ ಜನಮನ್ನಣೆ ಪಡೆಯುವನು.
“ಭಕ್ತ ಧ್ರುವನ ಈ ಪುಣ್ಯಚರಿತೆಯನ್ನು ಪ್ರಾತಃಕಾಲ, ಸಾಯಂಕಾಲಗಳಲ್ಲಿ ಬ್ರಾಹ್ಮಣರ ಸಭೆಯಲ್ಲಿ ದಿನವೂ ಕೀರ್ತಿಸಬೇಕು. ಭಗವಂತನ ಪಾದಾರವಿಂದಗಳನ್ನಾಶ್ರಯಿಸಿದ ಭಕ್ತಜನರು, ಪ್ರತಿಫಲಾಪೇಕ್ಷೆಯಿಲ್ಲದೆ ಈ ಕಥೆಯನ್ನು ಅಮಾವಾಸ್ಯೆ ಅಥವಾ ಪೌರ್ಣಿಮೆಯಂದು, ದ್ವಾದಶಿಯ ದಿನದಂದು, ಆಕಾಶದಲ್ಲಿ ಶ್ರವಣ ನಕ್ಷತ್ರವು ಗೋಚರಿಸುವ ಪುಣ್ಯದಿನದಂದು, ವಿಶಿಷ್ಟವಾದ ತಿಥಿಯ ಕೊನೆಯಲ್ಲಿ, ವ್ಯತೀಪಾತ ದಿನದಂದು, ತಿಂಗಳ ಕೊನೆಯಲ್ಲಿ, ಅಥವಾ ರವಿವಾರದ ದಿನದಂದು ಶ್ರದ್ಧಾವಂತ ಶ್ರೋತೃಗಳೆದುರು ಪಠಿಸಬೇಕು.
ಮೈತ್ರೇಯರು ಮುಂದುವರಿಸಿದರು, “ಅಜ್ಞಾನಿಗಳಿಗೆ ಜ್ಞಾನವನ್ನು ಕರುಣಿಸುವ ಈ ದಿವ್ಯಕಥೆ, ಕೇಳುಗರನ್ನು ಅಮರತ್ವದ ಹಾದಿಯಲ್ಲಿ ನಡೆಸುತ್ತದೆ. ಅಂಥವರಿಗೆ ಕಥೆಯನ್ನು ಹೇಳಿ ಉಪಕರಿಸುವ ಭಕ್ತಜನರನ್ನು ದೇವತೆಗಳೆಲ್ಲರೂ ಅನುಗ್ರಹಿಸುತ್ತಾರೆ.”