ಅಚ್ಚರಿಯ ಸೌತೆಕಾಯಿ

ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿಡುವ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಬೇಕು. ಅದರಲ್ಲೂ ಸೌತೆಕಾಯಿಯನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಬಳಸಿದರೆ ದೇಹ ತಂಪಾಗುತ್ತದೆ. ಬಾಯಾರಿಕೆಯಾದಾಗ ಸೌತೆಕಾಯಿ ಕಂಡರೆ ಸಾಕು ಅದನ್ನು ತಿನ್ನಬೇಕೆನಿಸುತ್ತದೆ. ಇದು ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ. ಇದರಲ್ಲಿ ಶೇ. 96 ರಷ್ಟು ನೀರಿನ ಅಂಶವಿದ್ದು, ಇದನ್ನು ತಿಂದರೆ ದೇಹದ ಉಷ್ಣತೆ ಕಡಮೆಯಾಗುವುದರಿಂದ ತುಂಬ ಸೆಕೆಯಾಗುವುದಿಲ್ಲ. ನೀರಿನಂಶವಿರುವ ಆಹಾರಗಳು ಬೇಸಿಗೆಗೆ ತುಂಬ ಸೂಕ್ತವಾದ ಆಹಾರವಾಗಿವೆ. ಸೌತೆಕಾಯಿಯಲ್ಲಿ ಹಲವು ಬಗೆಯ ತಿನಿಸುಗಳನ್ನು ಮಾಡಬಹುದು. ಇದಲ್ಲದೆ ಸೌತೆಕಾಯಿಯಲ್ಲಿ ಹತ್ತು ಹಲವು ಆರೋಗ್ಯಕರ ಗುಣಗಳಿವೆ. ಸೌತೆಕಾಯಿಯಿಂದ ಮಾಡುವ ಈ ಎಲ್ಲ ತಿನಿಸುಗಳನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.

ಸೌತೆಕಾಯಿ, ಹೆಸರುಕಾಳು ಸಬ್ಜಿ

ಬೇಕಾಗುವ ಪದಾರ್ಥಗಳು :

ಮೊಳಕೆ ಬರಿಸಿದ ಹೆಸರುಕಾಳು – 2 ಕಪ್‌

ಸೌತೆಕಾಯಿ – 1

ತೆಂಗಿನ ತುರಿ – 1 ಕಪ್‌

ಗೋಡಂಬಿ – 8

ಹಸಿ ಮೆಣಸಿನಕಾಯಿ – 4

ಒಣ ಮೆಣಸಿನಕಾಯಿ – 2

ಕೆಂಪು ಮೆಣಸಿನಕಾಯಿ ಪುಡಿ – 1 ಚಮಚ

ಕೊತ್ತಂಬರಿ ಸೊಪ್ಪು – ಸ್ವಲ್ಪ

ಒಗ್ಗರಣೆಗೆ:

ಎಣ್ಣೆ – 3 ಚಮಚ

ಸಾಸಿವೆ – 1 ಚಮಚ

ಅರಿಶಿನ – ಸ್ವಲ್ಪ

ಇಂಗು – ಸ್ವಲ್ಪ

ಕರಿಬೇವು – 2 ಎಸಳು

ಜೀರಿಗೆ – 1/2 ಚಮಚ

ಉಪ್ಪು – ರುಚಿಗೆ

ಮಾಡುವ ವಿಧಾನ : ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ತೆಂಗಿನ ತುರಿ, ಗೋಡಂಬಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಅನಂತರ ಒಂದು ದಪ್ಪತಳದ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಕಾದ ಎಣ್ಣೆಗೆ ಸಾಸಿವೆ, ಜೀರಿಗೆ, ಹಸಿ ಮೆಣಸಿನಕಾಯಿ, ಮುರಿದ ಒಣ ಮೆಣಸಿನಕಾಯಿ, ಕರಿಬೇವು, ಅರಿಶಿನ ಹಾಕಿ ಬಾಡಿಸಿ, ಅನಂತರ ಹೆಚ್ಚಿಟ್ಟ ಸೌತೆಕಾಯಿ, ಮೊಳಕೆ ಕಾಳುಗಳನ್ನು ಹಾಕಿ ನೀರನ್ನು ಸೇರಿಸಿ ಬೇಯಿಸಿಕೊಳ್ಳಿ. ರುಬ್ಬಿದ ತೆಂಗಿನ ತುರಿ, ಗೋಡಂಬಿ ಪೇಸ್ಟ್‌, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಿ. ಕೊನೆಯದಾಗಿ ಹೆಚ್ಚಿದ ಕೊತ್ತಂಬರಿ ಸೇರಿಸಿದರೆ ರುಚಿಯಾದ ಸೌತೆಕಾಯಿ, ಹೆಸರುಕಾಳು ಸಬ್ಜಿ ತಿನ್ನಲು ರೆಡಿ. ಇದು ರೋಟಿ, ಬಿಸಿಯಾದ ಅನ್ನದ ಜೊತೆ ತಿನ್ನಲು ತುಂಬ ರುಚಿಯಾಗಿರುತ್ತದೆ.

ಸೌತೆಕಾಯಿ, ತೆಂಗಿನಕಾಯಿ ದೋಸೆ

ಬೇಕಾಗುವ ಪದಾರ್ಥಗಳು :

ಸೌತೆಕಾಯಿ ತುರಿ – 1 ಕಪ್‌

ಅಕ್ಕಿ – 1 ಕಪ್‌

ತೆಂಗಿನ ತುರಿ – 1 ಕಪ್‌

ಉಪ್ಪು – ರುಚಿಗೆ

ತುಪ್ಪ ಅಥವಾ ಎಣ್ಣೆ – ಅಗತ್ಯವಿದ್ದಷ್ಟು

ಮಾಡುವ ವಿಧಾನ : ಅಕ್ಕಿಯನ್ನು 8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ಅನಂತರ ಅಕ್ಕಿಯನ್ನು ತೊಳೆದು ಇದಕ್ಕೆ ಸೌತೆಕಾಯಿ ತುರಿ, ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಕಾವಲಿಗೆ ಎಣ್ಣೆ ಸವರಿ ದೋಸೆ ಹೊಯ್ದು ಮೇಲೆ ತುಪ್ಪ ಹಾಕಿ ಬೇಯಿಸಿದರೆ ಸೌತೆಕಾಯಿ ದೋಸೆ ತಿನ್ನಲು ಸಿದ್ಧ. ಇದನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಿರಿ.

ಸೌತೆಕಾಯಿ ಮಸಾಲ

ಬೇಕಾಗುವ ಪದಾರ್ಥಗಳು :

ಕಡಲೆ ಪುರಿ – 3 ಕಪ್‌

ಎಳೆ ಸೌತೆಕಾಯಿ – 1

ಟೊಮೊಟೊ – 2

ಮಿಕ್ಸ್‌ಚರ್‌ – 1 ಕಪ್‌

ಕೊತ್ತಂಬರಿ ಸೊಪ್ಪು – ಸ್ವಲ್ಪ

ನಿಂಬೆರಸ – 1 ಚಮಚ

ಕ್ಯಾರೆಟ್‌ ತುರಿ – 2 ಚಮಚ

ಉಪ್ಪು – ರುಚಿಗೆ

ಮಾಡುವ ವಿಧಾನ : ಮೊದಲು ಸೌತೆಕಾಯಿ, ಟೊಮೊಟೊವನ್ನು ಚೆನ್ನಾಗಿ ತೊಳೆದು ಗುಂಡಗೆ ತೆಳುವಾಗಿ ಕತ್ತರಿಸಿಕೊಳ್ಳಿ. ಕ್ಯಾರೆಟ್‌ ಅನ್ನು ತುರಿದುಕೊಳ್ಳಿ. ಒಂದು ತಟ್ಟೆಯಲ್ಲಿ ಸೌತೆಕಾಯಿಯನ್ನು ಇಟ್ಟು ಅದರ ಮೇಲೆ ಉಪ್ಪು, ಅಚ್ಚ ಕಾರದ ಪುಡಿ, ನಿಂಬೆರಸ ಹಾಕಿ. ಇದರ ಮೇಲೆ ಟೊಮೊಟೊವನ್ನು ಇಟ್ಟು ಅದರ ಮೇಲೆ ಉಪ್ಪು, ಅಚ್ಚ ಕಾರದ ಪುಡಿ, ನಿಂಬೆರಸ ಹಾಕಿ. ಮೇಲೆ ಒಂದು ಹಿಡಿ ಕಡಲೆಪುರಿ, ಕ್ಯಾರೆಟ್‌ ತುರಿ, ಮಿಕ್ಸ್‌ಚರ್‌, ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ರುಚಿಯಾದ ಸೌತೆಕಾಯಿ ಮಸಾಲ ಸವಿಯಲು ಸಿದ್ಧ. ಇದನ್ನು ಬೇಸಿಗೆ ಕಾಲದಲ್ಲಿ ತಿಂದರೆ ತಂಪಾಗಿರುತ್ತದೆ.


ಸೌತೆಕಾಯಿಯಿಂದ ಆಗುವ ಉಪಯೋಗಗಳು :

ಹಲ್ಲುಗಳಿಗೆ: ಸೌತೆಕಾಯಿ ತಿಂದರೆ ಹಲ್ಲು ಹಾಗೂ ವಸಡುಗಳು ಗಟ್ಟಿಯಾಗುತ್ತವೆ. ಬಾಯಿ ದುರ್ವಾಸನೆ ಬೀರದಂತೆ ತಡೆಯುತ್ತದೆ.

ಕೂದಲಿಗೆ: ಕೂದಲಿಗೆ ಒಳ್ಳೆಯದು. ಸೌತೆಕಾಯಿಯಲ್ಲಿ ಸಿಲಿಕಾನ್‌ ಹಾಗೂ ಗಂಧಕದ ಅಂಶವಿರುವುದರಿಂದ ಕೂದಲಿನ ಪೋಷಣೆಯನ್ನು ಮಾಡುತ್ತದೆ.

ಮೂಳೆಗಳನ್ನು ಬಲಪಡಿಸುತ್ತದೆ: ಸಂಧಿನೋವು ಇರುವವರು ಇದನ್ನು ತಿಂದರೆ ಒಳ್ಳೆಯದು. ಏಕೆಂದರೆ ಸೌತೆಕಾಯಿಗೆ ಮೂಳೆಗಳನ್ನು ಬಲಪಡಿಸುವ ಸಾಮರ್ಥ್ಯವಿದೆ. ಇದು ಯೂರಿಕ್‌ ಆಸಿಡ್‌ ಅನ್ನು ಕಡಮೆ ಮಾಡುವುದರಿಂದ ಸಂಧಿ ನೋವು ಕಡಮೆಯಾಗುತ್ತದೆ.

ಕಣ್ಣಿನ ಆರೈಕೆ: ಕಣ್ಣಿಗೆ ಒಳ್ಳೆಯದು. ಕಣ್ಣಿನಲ್ಲಿ ನೀರಿನ ಅಂಶ ಕಡಿಮೆಯಾದರೆ ಕಣ್ಣಿನ ಕೆಳಭಾಗ ಊದಿಕೊಳ್ಳುತ್ತದೆ. ಸೌತೆಕಾಯಿ ತಿಂದರೆ ಕಣ್ಣಿನಲ್ಲಿ ನೀರಿನ ಪಸೆ ಇರುವಂತೆ ನೋಡಿಕೊಳ್ಳುತ್ತದೆ. ಅಲ್ಲದೆ ಇದನ್ನು ಕಣ್ಣಿನ ಕೆಳಗೆ ಇಟ್ಟರೆ ಡಾರ್ಕ್‌ ಸರ್ಕಲ್‌ ಹೋಗಲಾಡಿಸುತ್ತದೆ.

ಮಧುಮೇಹ ನಿಯಂತ್ರಣಕ್ಕೆ: ಇದು ದೇಹದಲ್ಲಿನ ಇನ್ಸುಲಿನ್‌ ಸಮ ಪ್ರಮಾಣದಲ್ಲಿರುವಂತೆ ಮಾಡುತ್ತದೆ. ಇದರಿಂದ ಮಧುಮೇಹವನ್ನು ನಿಯಂತ್ರಿಸಬಹುದು.

ಈ ಲೇಖನ ಶೇರ್ ಮಾಡಿ