ಅಂಬರೀಷನ ವಂಶಜರು

ಮಹಾನ್‌ ತಪಸ್ವಿಗಳ ತಾಣವಾಗಿದ್ದ ಇಡೀ ನೈಮಿಷಾರಣ್ಯವೇ ಸಂತ ಮುನಿಗಳ ಭಾಗವತ ಕಥಾ ವಾಚನಕ್ಕೆ ಕಾದಿದೆಯೇನೋ ಎಂಬಂತಹ ಸುಂದರ ಮೌನ ನೆಲೆಸಿತ್ತು. ಎಲ್ಲರಿಗೂ ಹಿಂದಿನ ದಿನದಂದು ಹೇಳಿದ್ದ ಅಂಬರೀಷನ ಮಹಾನ್‌ ಪುಣ್ಯಕಥೆಯನ್ನು ಆಲಿಸಿ ಮನಸ್ಸು ತುಂಬಿ ಬಂದಿತ್ತು. `ಗುರುಗಳೇ, ಅಂಬರೀಷ ಮಹಾರಾಜನ ಹಿರಿಮೆ-ಹರಿಭಕ್ತಿಗಳ ನೆನಪು ಇನ್ನೂ ನಮ್ಮ ನೆನಪುಗಳಿಂದ ಮಾಸಿ ಹೋಗಿಲ್ಲ. ಹಾಗೆಯೇ ಆಲೋಚಿಸಿ ನೋಡಿದಾಗ, ಎಂತೆಂಥವರು ಈ ಭೂಮಂಡಲದಲ್ಲಿ ಆಗಿಹೋಗಿದ್ದಾರೆ. ಅವರೆಲ್ಲ ಯುಗಗಳಲ್ಲೂ ಎಲ್ಲ ಪೀಳಿಗೆಯವರೂ ಅನುಸರಿಸಬಹುದಾದ ಮೇಲ್ಮಟ್ಟದ ಗುಣಗಳನ್ನು ಹೊಂದಿದ್ದರು ಎಂದೆಲ್ಲ ಅಂದುಕೊಂಡಾಗ ಆನಂದವಾಗುತ್ತದೆ. ಅಂಬರೀಷ ಮಹಾರಾಜನ ಪುಣ್ಯಕಥಾಶ್ರವಣ, ಮತ್ತೆ ಅದರದೇ ಆಲೋಚನೆ ನಮ್ಮನ್ನೆಲ್ಲಾ ಪಾವನಗೊಳಿಸಿದೆ. ಶ್ರೀಮದ್ಭಾಗವತದ ತುಂಬ ಇಂತಹ ಮಹನಿಯರ ಕಥೆಗಳೇ ತುಂಬಿಕೊಂಡು ನಮ್ಮ ತಲೆಮಾರಿಗಲ್ಲದೆ ಮುಂದಿನ ತಲೆಮಾರಿಗೂ ಆದರ್ಶದ ಮಾದರಿ ಜೀವನಪಥಗಳಾಗಿವೆ. ನಮ್ಮ ಇತಿಹಾಸದಲ್ಲಿ, ಸಂಸ್ಕೃತಿಯಲ್ಲಿ ಇಂತಹ ಅನೇಕ ಮಾರ್ಗದರ್ಶಕ ಉದಾಹರಣೆಗಳು ಇರುವುದು ನಮ್ಮ ಸುಕೃತ!’ ದಿನದ ಉಪನ್ಯಾಸ ಪ್ರಾರಂಭವಾಗುವ ಮೊದಲು ಎಲ್ಲರೂ ನಡೆದು ಬರುತ್ತಿದ್ದಾಗ, ಋಷಿಪುಂಗವರಾದ ಶೌನಕ ಮುನಿಗಳು ಅತಿ ನಮ್ರತೆಯಿಂದ ಗುರುದೇವ ಸೂತಮುನಿಗಳಿಗೆ ಹೇಳಿದರು.

ಋಷಿಗಳೆಲ್ಲ ತಮ್ಮ ತಮ್ಮ ಆಸನದಲ್ಲಿ ಕುಳಿತುಕೊಂಡು, ಸೂತಮುನಿಗಳು ಪುರಾಣಿಕರ ಪ್ರಧಾನ ಸ್ಥಾನವನ್ನಲಂಕರಿಸಿದಾಗ ಅವರು ಮೊದಲ ಪ್ರಸ್ತಾಪ ಮಾಡಿದ್ದೇ ಶೌನಕ ಮುನಿಗಳ ಅನಿಸಿಕೆಗಳನ್ನು :

`ನನ್ನ ಪ್ರೀತಿ ಪಾತ್ರರಾದ ನೈಮಿಷಾರಣ್ಯ ಮುನಿಗಳೇ, ಹಿರಿಯರಾದ ಶೌನಕ ಮುನಿಗಳು ಇಂದು ಆಶ್ರಮದಿಂದ ನಡೆದು ಬರುತ್ತಿರುವಾಗ ತುಂಬ ಅಮೂಲ್ಯವಾದ ಮಾತುಗಳನ್ನು ಹೇಳಿದರು. ಶ್ರೀಮದ್ಭಾಗವತದಲ್ಲಿ ಕಾಲಕಾಲಕ್ಕೆ ಕಾಣಿಸಿಕೊಳ್ಳುವ ವಂಶಾವಳಿಗಳು, ಆಗಾಗ ಜನ್ಮ ತಾಳುವ ಮಹಾಭಕ್ತರ, ರಾಜರ್ಷಿಗಳ ಕಥೆಗಳು ಎಲ್ಲ ಕಾಲದವರಿಗೂ ಆದರ್ಶ – ಅನುಕರಣೀಯ ಎಂದು ಹೇಳಿದರು. ಎಂತಹ ಅಭಿಮಾನದ ತಿಳಿವಳಿಕೆ! ಹೌದು, ಅವರ ಅನಿಸಿಕೆ ನಿಜ. ಭಾಗವತದಲ್ಲಿ ನಮಗೆದುರಾಗುವ ಪಾತ್ರಗಳು ಸಹಸ್ರಾರು. ಅವು ಅನೇಕಾನೇಕ ವಂಶಾವಳಿಗಳ ಕಥೆಗಳಲ್ಲಿ ಹರಿದು ಬರುತ್ತವೆ. ದೇವ ದಾನವರು ಸಾಗರ ಕಡೆದಾಗ ಹುಟ್ಟಿಬಂದ ಅಪರೂಪವಾದ ವಿಶೇಷಗಳ ಹಾಗೆ, ತಪಸ್ವಿಗಳು, ದೈವಭಕ್ತರು, ಸತ್ಯನಿಷ್ಠರು ಕಾಣಿಸುತ್ತಾರೆ. ಒಬ್ಬ ವೈವಸ್ಪತ ಮನುವಿನ ಸಂತಾನದಲ್ಲಿಯೇ ಮಹಾಪುರುಷರು ಜನ್ಮತಾಳಿ ಭೂಲೋಕವನ್ನು ಪಾವನಗೊಳಿಸಿದ್ದಾರೆ, ಉದ್ದರಿಸಿದ್ದಾರೆ. ಯುಗಯುಗಗಳು ಕಳೆದರೂ ಮುಂದೆ ಇವರೆಲ್ಲ ಮಾನವ ಸಂಕುಲಕ್ಕೆ ಆದರ್ಶಪುರುಷರಾಗಿ ಕಂಗೊಳಿಸುತ್ತಾರೆ. ಇಂತಹ ಸತ್ಪುರುಷರ ಜೀವನವನ್ನು ಪುರಾಣ ಕಥೆಯಾಗಿಸಿ ನಮ್ಮ ಮುಂದಿರಿಸಿದ ಮಹಾ ಮಹಿಮರಾದ ಶ್ರೀವೇದವ್ಯಾಸರು ಯುಗಯುಗಗಳ ಮಾನವ ಜೀವಿಗಳನ್ನು ಉದ್ಧರಿಸಿದ್ದಾರೆ.

`ಪ್ರಿಯ ಮುನಿಗಳೆ, ಶ್ರೀಮದ್ಭಾಗವತದ ಒಂಭತ್ತನೆಯ ಸ್ಕಂದದ ತುಂಬ ಇಂತಹ ಮಹಾಪುರುಷರ ಜೀವನವನ್ನು, ಅವರ ವಂಶಾವಳಿಯನ್ನು ವಿಸ್ತಾರವಾಗಿ ವಿವರಿಸುವ ವಿಷಯಗಳೇ ತುಂಬಿವೆ. ಕೃಷ್ಣ ದ್ವೈಪಾಯನರಿಗೆ ಯಾರೂ ಕಿರಿಯರಲ್ಲ, ಯಾವ ಘಟನೆಯೂ ಬಿಟ್ಟು ಬಿಡುವಂತಹುದಲ್ಲ. ಹೀಗಾಗಿ ಅವರು ಶ್ರೀಮದ್ಭಾಗವತದ ಕಥೆಯನ್ನು ಸಾವಕಾಶವಾಗಿಯೇ ರಚಿಸಿದ್ದಾರೆ. ಅಂತೆಯೇ, ನನ್ನ ಈ ಪುರಾಣೋಪನ್ಯಾಸವೂ ವೇದವ್ಯಾಸರ ರಚನೆಗೆ ಅನುಗುಣವಾಗಿಯೇ ಇರುತ್ತದೆ. ಅವರ ಹಾಗೆಯೇ, ನಾನೂ ಎಲ್ಲ ಮಹನಿಯರ ಬಗ್ಗೆ, ಅವರ ಸಂತತಿಗಳ ಬಗ್ಗೆ, ಅವರ ವಂಶಗಳು – ಸಾಧನೆಗಳ ಬಗ್ಗೆ ಹೇಳುತ್ತಾ ಹೋಗುತ್ತೇನೆ!’

ಶೌನಕ ಮುನಿಗಳು ಹೇಳಿದರು : `ಪೂಜ್ಯ ಗುರುಗಳೇ, ವನ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ನಮ್ಮಂತಹವರಿಗೆ ಇದಕ್ಕಿಂತಲೂ ಪುಣ್ಯಕರವಾದ ಕೆಲಸ ಬೇರೇನಿದ್ದಿತು? ನೀವು ಎಲ್ಲವನ್ನೂ ವಿಶದವಾಗಿಯೇ ಹೇಳಬೇಕೆಂದು ಎಲ್ಲ ಋಷಿವರ್ಯರ ಪರವಾಗಿ ನಾನು ನಿಮ್ಮನ್ನು ಪ್ರಾರ್ಥಿಸುತ್ತೇನೆ.’

ಸೂತ ಮುನಿಗಳು ಮುಖದ ಮೇಲೆ ಸಮ್ಮತದ ನಗೆ ಮೂಡಿಸಿಕೊಂಡರು. ಕಣ್ಣನ್ನು ಮುಚ್ಚಿ ಕೈಜೋಡಿಸಿ ಕುಳಿತುಕೊಂಡರು. ಶ್ರೀಮದ್ಭಾಗವತ ಕಥಾಶ್ರವಣವನ್ನು ಮಾಡಿಸಲು ಪ್ರಾರಂಭಿಸಿದರು.

`ನೀವೆಲ್ಲ ಗೌರವದಿಂದ ಹೇಳಿದ ಮಹಾಭಕ್ತ ಅಂಬರೀಷನ ವಂಶ ಸಾರ್ಥಕವಾಗಿ ಮುಂದುವರಿಯಿತು. ಅವನಿಗೆ ವಿರೂಪ, ಕೇತುಮಾನ್‌, ಶಂಭು ಎನ್ನುವ ಮೂವರು ಸುಪುತ್ರರು ಜನಿಸಿದರು. ಇವರಿಂದ ವಂಶ ಮುಂದುವರಿಯಿತು. ಹಿರಿಮಗ ವಿರೂಪನಿಗೆ ಪೃಷದಶ್ವನೆಂಬ ಮಗ ಹುಟ್ಟಿದನು. ಇವನಿಗೆ ರಥೀತರ ಎನ್ನುವ ಮಗ ಹುಟ್ಟಿದನು. ಪುಣ್ಯ ಪುರುಷರಿಗೂ ಸಾಮಾನ್ಯರಿಗೆ ಎದುರಾಗುವ ಸಮಸ್ಯೆಗಳು ಸಹ ಎದುರಾಗುತ್ತವೆ ಎಂದುಕೊಂಡರೆ ಆಶ್ಚರ್ಯವಾಗುತ್ತದೆ. ಅವರವರು ಮಾಡಿದ ಪಾಪಪುಣ್ಯಗಳ ಫಲದ ಕರ್ಮಾನುಸಾರ ಎಲ್ಲರ ಜೀವನವೂ ನಡೆಯುತ್ತದೆ. ಅಂಬರೀಷನ ವಂಶ ಮೂರು ತಲೆಮಾರುಗಳ ಅನಂತರ ನಿಂತು ಹೋಗುವಂತಾಯಿತು. ಅಂತಹ ಸತ್ಪುರುಷನ ಹರಿಭಕ್ತನ ಮರಿಮಗನಿಗೆ ಸಂತಾನವೇ ಆಗಲಿಲ್ಲ. ವಂಶದ ಬೆಳವಣಿಗೆ ನಿಂತು ಹೋಯಿತು. ಸುಖ ಸಂತೋಷಗಳಲ್ಲಿ ಮುಳುಗಿದ್ದ ಚಕ್ರವರ್ತಿಯ ಸಂಸಾರಕ್ಕೂ ಚಿಂತೆಯ ಕಾರ್ಮೋಡ ಮುಸುಕಿಕೊಂಡಿತು. ಇಡೀ ಸಾಮ್ರಾಜ್ಯ ದುಃಖದಲ್ಲಿ ಮುಳುಗಿತು. ರಾಜ್ಯವಾಳುವಾತನಿಗೆ ದಾರಿಕಾಣದಾಯಿತು!

ಸೂತ ಮುನಿಗಳು ಆ ಕಾಲದ ಎಲ್ಲ ಆಚಾರ ಸಂಹಿತೆಗಳನ್ನು ಒಳಗೊಂಡ ತಮ್ಮ ಭಾಗವತ ಕಥಾ ಉಪನ್ಯಾಸವನ್ನು ಮುಂದುವರಿಸಿದರು :

ಅಂಬರೀಷ ಸಂಪಾದಿಸಿದ ಪುಣ್ಯ ಮೂರು ತಲೆಮಾರಿನ ಸಂತತಿಯನ್ನು ಕಾಪಾಡಿತು. ಆ ಪುಣ್ಯ ಕರಗಿಹೋಯಿತೇನೊ ಎಂಬಂತೆ ಅವರ ಮರಿಮಗ ರಥೀತರನಿಗೆ ಮಕ್ಕಳೇ ಹುಟ್ಟಲಿಲ್ಲ. ಕಾಲ ಸವೆಯುತ್ತಿತ್ತೇ ಹೊರತು ವಂಶ ತುಂಬಿಕೊಳ್ಳಲಿಲ್ಲ. ರಾಜನಿಗೆ ಚಿಂತೆಯಾಯಿತು. ಈ ಚಿಂತೆ ಇಡೀ ರಾಜ್ಯ ಹರಡಿಕೊಂಡಿತು. ಒಬ್ಬೊಬ್ಬರು ಒಂದೊಂದು ಸಲಹೆಯನ್ನು ನೀಡಲಾರಂಭಿಸಿದರು. ಕೆಲವರು ಹೇಳಿದ ಪೂಜೆ-ಪುನಸ್ಕಾರ-ಹೋಮಗಳನ್ನು ಮಾಡಿದ್ದಾಯಿತು. ಫಲ ಕಾಣಲಿಲ್ಲ. ರಾಜನ ಮನಸ್ಸಿನಲ್ಲಿ ತಳಮಳವೆದ್ದಿತು. ಮಹಾಭಕ್ತ ಅಂಬರೀಷನ ವಂಶ ನಿರ್ವಂಶವಾಗಿ ಹೋಗುವುದೇ? ಈ ಕಳಂಕ ತನಗೆ ಬಂದು ಅಂಟಿಕೊಳ್ಳುವುದೇ ತನಗೆ ಮೋಕ್ಷಕ್ಕೆ ದಾರಿಯಿಲ್ಲದಂತಾಗುತ್ತದೆಯೇ?

ರಾಜ ರಥೀತರ ಬೇಸರದಿಂದ ಕಂಗೆಟ್ಟು ತನ್ನ ಗುರುಗಳ ಆಶ್ರಮದಲ್ಲಿ ಪತ್ನಿಯೊಂದಿಗೆ ಹೋಗಿ ಕೆಲದಿನ ನಿಂತ. ಗುರುಗಳು ಅವನಿಗಾಗಿ ದೈವಿಕ ಉಪನ್ಯಾಸಗಳನ್ನು ಏರ್ಪಡಿಸಿದರು. ದೈವಾರಾಧನೆಗಳನ್ನು ನಡೆಸಿದರು. ಅವೆಲ್ಲವೂ ತಾತ್ಕಾಲಿಕವಾಗಿಯಾದರೂ ಅಂಬರೀಷನ ಮನಸ್ಸಿಗೊಂದಿಷ್ಟು ತಂಪನ್ನೆರೆದಿದ್ದವು. ಆದರೆ, ಹೃದಯಾಂತರಾಳದ ಚಿಂತೆ ಮಾತ್ರ ಮಚ್ಚೆಯ ಹಾಗೆ ಉಳಿದು ಹೋಗಿತ್ತು. ಕೊನೆಗೆ ಗುರುಗಳು ಅವನಿಗೆ ಹೇಳಿಬಿಟ್ಟರು. `ರಾಜನ್‌, ನೀನು ಮತ್ತು ನಿನ್ನ ಹೆಂಡತಿ ಮನಸ್ಸನ್ನು ಗಟ್ಟಿಮಾಡಿಕೊಳ್ಳಬೇಕು. ನಿಮ್ಮಿಬ್ಬರಿಗೂ ಈ ಜನ್ಮದಲ್ಲಿ ಮಕ್ಕಳಾಗುವುದು ಸಾಧ್ಯವಿಲ್ಲ. ನಿಮ್ಮಿಬ್ಬರ ಕರ್ಮಫಲ ಹಾಗಿದೆ!’

ರಥೀತರನ ಹೃದಯ ನೊಂದು ಹೋಯಿತು. ತನಗಿಂತಲೂ ತನ್ನ ಹೆಂಡತಿಗೆ ಪುತ್ರ ವ್ಯಾಮೋಹ ಬಹಳವಾಗಿದೆಯೆಂದು ಅವನಿಗೆ ಗೊತ್ತು. ಒಂದು ಮಗು ಇಲ್ಲದೆ ಅವಳು ದಿನೇ ದಿನೇ ಕುಗ್ಗಿ ಹೋಗುತ್ತಿದ್ದಾಳೆ. ಎಲ್ಲ ಕ್ಷಣಗಳಲ್ಲೂ ದುಃಖದಲ್ಲಿ ಮುಳುಗಿ ಹೋಗಿದ್ದಾಳೆ. ಅವಳ ಕಥೆ ಹಾಗಿದ್ದರೆ, ಇವನಿಗೆ ವಂಶದ ಚಿಂತೆ, ರಾಜ್ಯದ ಚಿಂತೆ. ತನ್ನ ತರುವಾಯ ಅಂಬರೀಷ ತಾತನ ಈ ಮಹಾಸಾಮ್ರಾಜ್ಯ ಅರಾಜಕವಾಗಿ ಹೋಗುತ್ತದೆಯೇ? ಈ ಮಹಾ ಸಾಮ್ರಾಜ್ಯವನ್ನು ತನ್ನ ತರುವಾಯ ಆಳಲು ಒಬ್ಬ ದಿವ್ಯ ತೇಜ ಇಲ್ಲವಾಗಿ ಹೋಗುತ್ತಾನೆಯೇ?

ದುಃಖದಿಂದ ಅವನು ಗುರುಗಳ ಪಾದದಡಿಯಲ್ಲಿ ಉರುಳಿದ. ಅವನ ಕಣ್ಣುಗಳಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ಅವನ ಹೆಂಡತಿ ಆಗಲೇ ಪ್ರಜ್ಞಾಹೀನಳಾಗಿ ಒಂದು ಕಡೆ ಕುಸಿದು ಬಿದ್ದು ಬಿಟ್ಟಿದ್ದಳು. ಆಶ್ರಮದ ಹೆಂಗಸರು ರಾಣಿಯ ನೆರವಿಗೆ ಧಾವಿಸಿದ್ದರು.

ರಥೀತರ ಕೇಳಿದ : `ಗುರುಗಳೇ, ಹೀಗೇಕೆ ಆಗಿ ಹೋಯಿತು. ನಾನೇನು ತಪ್ಪು ಮಾಡಿದೆ. ನಮ್ಮ ಹಿರಿಯರ ಮಹಾಪುಣ್ಯಗಳೂ ನನಗೆ ದಕ್ಕಲಿಲ್ಲವೇ? ನಾವೀಗ ಸಂತಾನಹೀನರಾಗಿಯೇ ಬದುಕಬೇಕೆ? ಪುತ್ರ ಸಂತಾನವಿಲ್ಲದೆ ಈ ಸಿಂಹಾಸನಕ್ಕೆ ವಾರುಸುದಾರರು ಇಲ್ಲದೆ ಉಳಿದು ಹೋಗಬೇಕೆ? ಮುಂದೆ ಈ ಮಹಾಸಾಮ್ರಾಜ್ಯದ ಭವಿಷ್ಯವೇನು?

ಇಂತಹ ಕ್ಷಣಗಳು ಉದ್ಭವವಾಗುತ್ತವೆ ಎನ್ನುವುದು ಗುರುಗಳಿಗೆ ತಿಳಿದಿತ್ತು. ರಥೀತರ ರಾಜನಿಗೆ ಸ್ವತಃ ಸಂತಾನೋತ್ಪತ್ತಿ ಶಕ್ತಿ ಇಲ್ಲವೆಂಬುದೂ ಅವರಿಗೆ ಗೊತ್ತಿತ್ತು. ಅವನ ರಾಣಿಗೆ ಆ ಭಾಗ್ಯವಿದೆ, ಆದರೆ ಅವಳಿಗೆ ಪತಿಯಿಂದ ಇಂತಹ ಸುಯೋಗ ದಕ್ಕುವುದಿಲ್ಲ. ಎನ್ನುವುದೂ ಗೊತ್ತಿತ್ತು.

ಆ ಕ್ಷಣ ಅವರ ನೆನಪಿಗೆ ಬಂದದ್ದು : ನಿಯೋಗ ಪದ್ಧತಿ.

ಅದು ಆ ಕಾಲದಲ್ಲಿ ಗುಟ್ಟಿನ ವಿಷಯವೇನಾಗಿರಲಿಲ್ಲ. ಪ್ರಾಚೀನ ಕಾಲದಿಂದಲೂ ಅದು ಆಚರಣೆಯಲ್ಲಿತ್ತು. ಮಾನವರಲ್ಲಿ, ದೇವದಾನವರಲ್ಲಿ ಅದು ಜಾರಿಯಲ್ಲಿತ್ತು. ರಥೀತರ ಮನಸ್ಸು ಮಾಡಿ ಹೀಗೊಂದು ನಿಯೋಗಕ್ಕೆ ಒಪ್ಪಿಕೊಂಡರೆ ಅವನ ಸಮಸ್ಯೆಗಳೆಲ್ಲ ಪರಿಹಾರವಾಗುತ್ತವೆ.

ಈ ಸಂದರ್ಭದಲ್ಲಿ ಸೂತ ಮುನಿಗಳು ಹೇಳಿದರು :

`ಎಲ್ಲ ಕಾಲಗಳಲ್ಲೂ, ಯುಗಯುಗಳಲ್ಲೂ ಕೆಲವೊಮ್ಮೆ ಉತ್ತಮ ಸಂತತಿಗಾಗಿ ಹೆಂಡತಿಯಲ್ಲಿ ಮಕ್ಕಳನ್ನು ಬಿತ್ತುವಂತೆ ಕೇಳಿಕೊಳ್ಳಲಾಗುತ್ತಿತ್ತು. ಅಂತಹ ಸಂದರ್ಭಲ್ಲಿ ಆ ಹೆಂಗಸನ್ನು, ಹೊಲಕ್ಕೆ ಹೋಲಿಸಲಾಗುತ್ತಿತ್ತು. ಹೊಲದ ಒಡೆಯ ತನ್ನ ಹೊಲದಲ್ಲಿ ದವಸ ಧಾನ್ಯ ಬೆಳೆಯಲು ಬೇರೋಬ್ಬರನ್ನು ನಿಯೋಜಿಸಬಹುದು. ಆದರೆ ಅಲ್ಲಿ ಬೆಳೆದ ಬೆಳೆಯನ್ನು ಆ ಹೊಲದೊಡೆಯನ ಸ್ವತ್ತು ಎಂದೆಲ್ಲ ಪರಿಗಣಿಸಲಾಗುತ್ತಿತ್ತು. ಅಂತೆಯೇ ಕೆಲವೊಮ್ಮೆ ಹೆಂಗಸಿಗೆ ಪರ ಪುರುಷನಿಂದ ಗರ್ಭಧಾರಣೆಗೆ ಅವಕಾಶವಿತ್ತು. ಆದರೆ, ಆಗ ಅವಳಿಗೆ ಹುಟ್ಟುವ ಮಗು ಅವಳ ಗಂಡನ ಮಗುವೇ ಆಗುತ್ತಿತ್ತು. ರಥೀತರನಿಗೆ ಸ್ವತಃ ಗರ್ಭಧಾರಣೆ ಮಾಡಿಸುವ ಶಕ್ತಿ ಇರಲಿಲ್ಲವಾದ್ದರಿಂದ ಅವನ ಗುರುಗಳಿಗೆ ಈ ನಿಯೋಗ ಪದ್ಧತಿಯ ಯೋಚನೆ ಬಂದಿತು!’

ಶೋಕದ ಮಡುವಿನಲ್ಲಿ ಮುಳುಗಿ ಹೋಗಿದ್ದ ತಮ್ಮ ಪ್ರೀತಿಯ ರಾಜನನ್ನು ನೋಡುತ್ತ ಗುರುಗಳು ಹೇಳಿದರು : `ರಾಜನ್‌, ನಿಮ್ಮಿಬ್ಬರ ದುಃಖ, ನಿನ್ನ ನಿರಾಶೆ ಎಲ್ಲವೂ ನನಗೆ ಅರ್ಥವಾಗುತ್ತದೆ. ತಾಯಿಗೆ ಮಕ್ಕಳು ಬೇಕು, ತಂದೆಗೆ ವಂಶೋದ್ಧಾರಕ ಬೇಕು. ಈಗ ನಿನಗೆ ಬೇರೆ ಯಾವ ದಾರಿಯೂ ಇಲ್ಲ. ನಿನಗೆ ಮಕ್ಕಳಾಗುವುದಿಲ್ಲ. ಆದರೆ, ಪ್ರಾಚೀನ ಕಾಲದಿಂದ ಹಿರಿಯರು ಒಪ್ಪಿಕೊಂಡಿರುವ ನಿಯೋಗ ಪದ್ಧತಿಯಿಂದ ನಿನ್ನ ಹೆಂಡತಿ ಗರ್ಭಧರಿಸುವ ಸಾಧ್ಯತೆ ಇದೆ. ಇದನ್ನು ನೀನು ಪರಿಗಣಿಸಬಹುದು.

ರಾಜ ಒಂದು ಕ್ಷಣ ಆಲೋಚಿಸಿದ. ನಿಯೋಗ ಪದ್ಧತಿಯ ಬಗ್ಗೆ ಅವನಿಗೆ ಚೆನ್ನಾಗಿ ಗೊತ್ತಿತ್ತು. ಅದು ಅವನಿಗೆ ಇತಿಹಾಸ. ಆದರೆ ತಾನೇ ಆ ಇತಿಹಾಸದ ಒಬ್ಬ ಸಾಕ್ಷಿ ಆಗಬೇಕಾಗಿತ್ತು.

ಒಪ್ಪಿಕೊಳ್ಳದೆ ಅವನಿಗೆ ಬೇರೆ ದಾರಿ ಇರಲಿಲ್ಲ. ಅಂದು ಸಂಜೆ ದಾಟಿದ ಮೇಲೆ ಗುರುಗಳೊಂದಿಗೆ ಆಶ್ರಮದ ಮುಂಭಾಗದಲ್ಲಿ ಕುಳಿತು ಮಾತನಾಡುತ್ತಿದ್ದಾಗ ಅವನು ಹೇಳಿದ : `ಗುರುಗಳೇ, ನಿಮ್ಮ ಸಲಹೆಯಂತೆಯೇ ನಡೆಯಲಿ ಅನ್ನಿಸುತ್ತಿದೆ. ಇದರ ಬಗ್ಗೆ ದೀರ್ಘವಾಗಿ ಚಿಂತಿಸಿದೆ. ಆದರೆ, ನನಗಿಂತಲೂ ವಂಶ ಮುಖ್ಯ. ವಂಶದ ಮತ್ತು ಸಾಮ್ರಾಜ್ಯದ ಹಿತದೃಷ್ಟಿಯಿಂದ ನಾನು ಒಂದೇ ಮನಸ್ಸಿನಿಂದ ಇದನ್ನು ಒಪ್ಪಿಕೊಳ್ಳುತ್ತೇನೆ!

ಗುರುಗಳು ಅವನ ಭುಜ ನೇವರಿಸಿ ಶಾಂತಗೊಳಿಸಿದರು. ಅವರ ಸ್ಪರ್ಶವೇ ಎಲ್ಲ ಮಾತುಗಳನ್ನು ಹೇಳಿತ್ತು.

ಕೊನೆಗೆ ಗುರುಗಳು ಹೇಳಿದರು : `ರಾಜನ್‌, ಮಹಾರಾಣಿಯೊಂದಿಗೆ ಸಂಸರ್ಗಗೊಂಡು, ಆಕೆಯಲ್ಲಿ ಸಂತಾನ ಬೀಜವನ್ನು ಬಿತ್ತುವಾತ ಮಹಾನ್‌ ಬ್ರಹ್ಮ ತೇಜಸ್ಸುಳ್ಳ ಬ್ರಾಹ್ಮಣ ನಡವಳಿಕೆಯುಳ್ಳಂತಹ ತಪಸ್ವಿಯಾಗಿರಬೇಕು. ಉತ್ತಮ ಸಂತಾನವನ್ನು ಅನುಗ್ರಹಿಸುವಂತಹವನಾಗಬೇಕು. ಇಂತಹ ವ್ಯಕ್ತಿ ಯಾರಾಗಬಹುದು ಎಂದು ಈಗಾಗಲೇ ನಾನು ಯೋಚಿಸಿದ್ದೇನೆ. ಎಲ್ಲ ರೀತಿಯಲ್ಲೂ ನನಗೆ ಮಹರ್ಷಿ ಅಂಗಿರ ಅವರು ಉತ್ತಮ ಆಯ್ಕೆ ಎನಿಸುತ್ತದೆ. ನೀನು ಒಂಟಿಯಾಗಿ ಅವರಲ್ಲಿಗೆ ಹೋಗಿ ನಮಸ್ಕರಿಸಿ, ನನ್ನ ಆಲೋಚನೆಗಳನ್ನು ಅವರಿಗೆ ನಿವೇದಿಸು. ಅವರು ಖಂಡಿತವಾಗಿಯೂ ಒಪ್ಪಿಕೊಳ್ಳುತ್ತಾರೆ. ನಿನಗೆ ಅನುಗ್ರಹಿಸುತ್ತಾರೆ. ನಿನ್ನ ಮೇಲೆ, ನಿನ್ನ ವಂಶದ ಮೇಲೆ ದೈವಾನುಗ್ರಹವಿದೆ. ಶ್ರೀಮನ್ನಾರಾಯಣ ದಾರಿ ತೋರಿಸುತ್ತಾನೆ. ನೀನೇನೂ ಚಿಂತಿಸಬೇಡ. ಈ ದಿಕ್ಕಿನಲ್ಲಿ ಧೈರ್ಯದಿಂದ ಮುಂದುವರಿಯಬಹುದು!

ರಥೀತರನ ಮುಖದಲ್ಲಿ ನೆಮ್ಮದಿಯ ಗೆರೆಗಳು ಮೂಡಿದವು. `ಗುರುಗಳೇ, ಧನ್ಯನಾದೆ. ನನ್ನ ವಂಶ ಪಾವನವಾಯಿತು. ನಿಮ್ಮ ಆಶೀರ್ವಾದ ಮಾರ್ಗದರ್ಶನ ನಮಗೆಲ್ಲ ಎಂದೆಂದಿಗೂ ಹೀಗೆಯೇ ಇರಲಿ!’ – ಎಂದು ಪ್ರಾರ್ಥಿಸಿ ಸಾಷ್ಟಾಂಗ ನಮಸ್ಕಾರ ಮಾಡಿದ. ಗುರುಗಳು ಅವನಿಗೂ, ಅವನ ಹೆಂಡತಿಗೂ ಆಶೀರ್ವದಿಸಿ ಬೀಳ್ಕೊಟ್ಟರು.

ಅರಮನೆಗೆ ಹಿಂತಿರುಗಿದ ಮೇಲೆ, ಒಂದು ರಾತ್ರಿ ರಾಜ, ಗುರುಗಳ ಮಾತುಗಳನ್ನು ರಾಣಿಗೆ ತಿಳಿಸಿದ. `ಪ್ರಿಯೆ, ಇದನ್ನು ದೇವರ ಆಣತಿ ಎಂದು ನಾವು ಭಾವಿಸೋಣ. ತನ್ನ ಪ್ರೀತಿಯ ಪತ್ನಿ ಇನ್ನೊಬ್ಬ ಗಂಡನನ್ನು ಕೂಡುವ ವಿಷಯ ಯಾವ ಪತಿಗೂ ಮಾನಸಿಕವಾಗಿ ಸಮ್ಮತವಾಗಲಾರದು.  ಆದರೆ ಈ ಕ್ರಿಯೆಯಲ್ಲಿ ಸ್ತ್ರಿಯೊಬ್ಬಳನ್ನು ವಂಶೋದ್ಧಾರಕರೊಬ್ಬರ ಬೀಜ ಬಿತ್ತುವ ಭೂಮಿಯಾಗಿ ಕಾಣಲಾಗುತ್ತದೆಯೇ ಹೊರತು ಲೈಂಗಿಕ ತೃಪ್ತಿಯನ್ನು ನೀಡುವ ಸಾಧನವಾಗಿ ಅಲ್ಲ. ಅಷ್ಟೇ ಅಲ್ಲದೆ ವಂಶೋದ್ಧಾರಕ ಹುಟ್ಟುವುದರಿಂದ ಇಡೀ ಸಾಮ್ರಾಜ್ಯಕ್ಕೆ ಒಳಿತಾಗುತ್ತದೆ. ಈ ದೃಷ್ಠಿಯಿಂದ ಅದು ಧರ್ಮಬಾಹಿರವಲ್ಲ.

ಮಹಾತ್ಮರಾದ ತೇಜಸ್ವೀ ಅಂಗಿರ ಮಹರ್ಷಿಗಳಲ್ಲಿ ನೀನು ನನ್ನನ್ನು ಕಾಣುವಂತಹವಳಾಗು. ನನ್ನ ದೇಹ, ನನ್ನ ಮುಖ, ನನ್ನ ಪ್ರೀತಿಯೆ ನಿನಗೆ ಸಂಪೂರ್ಣ ದರ್ಶನವಾಗಲಿ. ಮುಕ್ತ ಮನಸ್ಸಿನಿಂದ, ಯಾವ ಬೇಸರ, ಹೆದರಿಕೆ, ಅಸಹ್ಯವೂ ಇಲ್ಲದೆ ನೀನು ಸಿದ್ಧಳಾಗಬೇಕು.

ರಥೀತರ ತನ್ನ ಗುರುಗಳ ಅಣತಿಯಂತೆ ಅಂಗಿರ ಮಹರ್ಷಿಗಳನ್ನು ಹುಡುಕಿಕೊಂಡು ಅವರ ಆಶ್ರಮಕ್ಕೆ ಆಗಮಿಸಿದ. ಅಲ್ಲಿ ಬ್ರಹ್ಮ ತೇಜಸ್ಸಿನ ಆ ಋಷಿಯನ್ನು ನೋಡಿದ ಕೂಡಲೇ ಇವನ ಮನಸ್ಸಿನ ಆಂತಕಗಳೂ ಸಹ ದೂರವಾಗಿ ಆ ಮುನಿವರರ ಬಗ್ಗೆ ಪೂಜ್ಯ ಭಾವನೆ ಉದಿಸಿತು. ಪರಸ್ಪರ ಕಂಡ ಕೂಡಲೇ ರಾಜ ಮುನ್ನಡೆದು ಪೂಜ್ಯರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ. ಅವರು ಅವನ ತಲೆಯ ಮೇಲೆ ಕೈಯಿಟ್ಟು – `ಸುಪುತ್ರೋಭವ, ದೀರ್ಘಾಯುಷ್‌ಮಾನ್‌ ಭವ!’ ಎಂದು ಆಶೀರ್ವದಿಸಿದಾಗ, ರಾಜ ಥಟ್ಟನೆ ಮೇಲೆದ್ದು  ಆಶ್ಚರ್ಯದಿಂದ ಅವರನ್ನು ದಿಟ್ಟಿಸಿದ. ಅವರು ಮುಗುಳು ನಕ್ಕರು. `ರಾಜನ್‌, ನಿನಗೆ ಸುಸ್ವಾಗತ. ಆಶ್ರಮ ನಿನಗಾಗಿ ಕಾದಿದೆ. ವಿಶ್ರಮಿಸಿಕೋ. ಆ ಮೇಲೆ ಮಾತನಾಡೋಣ!’ ಎಂದರು.

ವಿಶ್ರಾಂತಿ ಪಡೆದು ಇಬ್ಬರೂ ಹತ್ತಿರ ಹತ್ತಿರ ಕುಳಿತಾಗ, ರಥೀತರನ ಮುಖ ಬಾಡಿ ಹೋಗಿತ್ತು. ಅಂಗಿರ ಮುನಿ ಅವನ ಮುಖವನ್ನು ಹಿಡಿದು ಮೇಲಕ್ಕೆತ್ತಿದರು. `ರಾಜನ್‌, ನಿನ್ನ ಸಮಸ್ಯೆ ನನ್ನವರೆಗೆ ತಲುಪಿದೆ. ನನಗೆ ಹಿರಿಯರಾದ ನಿನ್ನ ಗುರುಗಳು ನನ್ನನ್ನು ಭೇಟಿಯಾಗಿ ನಿನ್ನ ವಿಷಯ ತಿಳಿಸಿದ್ದಾರೆ. ನಿನಗೆ ಸಹಾಯ ಮಾಡಲು ಹೇಳಿದ್ದಾರೆ. ನಾನೂ ಒಪ್ಪಿಗೆ ನೀಡಿದ್ದೇನೆ.

ರಥೀತರನಿಗೆ ಬಹಳ ಸಂತೋಷವಾಗಿತ್ತು. ಅವನ ಗುರುಗಳು ಎಲ್ಲವನ್ನೂ ಹಗುರ ಮಾಡಿಬಿಟ್ಟಿದ್ದರು. ಮನಸ್ಸಿನಲ್ಲಿಯೆ ಮೊದಲು ಅವರಿಗೆ ನಮಿಸಿ ಅನಂತರ ಅಂಗಿರ ಮುನಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ.

ಅವರ ಅನುಗ್ರಹದಿಂದ ಬ್ರಹ್ಮವರ್ಚಸ್ವಿಗಳಾದ ಅನೇಕ ಪುತ್ರರನ್ನು ಮಹಾರಾಣಿ ಹೆತ್ತಳು. ರಥೀತರನ ಹೆಂಡತಿಯ ಹೊಟ್ಟೆಯಲ್ಲಿ ಹುಟ್ಟಿದ್ದರಿಂದ ಈ ಮಕ್ಕಳೆಲ್ಲ ರಥೀತರನ ವಂಶದವರೆನಿಸಿದರು. ಮತ್ತೆ ಅಂಗಿರಮುನಿ ವೀರ್ಯದಿಂದ ಜನ್ಮತಳೆದದ್ದರಿಂದ ಅಂಗಿರ ವಂಶದವರೂ ಆಗಿ, ರಾಜ ಪುತ್ರರೂ ಎನಿಸಿ, ಬ್ರಾಹ್ಮಣಪುತ್ರರೂ ಎನಿಸಿ ಎಲ್ಲರೂ ಮುಂದೆ ಬಹಳ ಪ್ರಮುಖರಾದರು. `ದ್ವಿ-ಜಾತಯಃ’ ಅಂದರೆ ಮಿಶ್ರಜಾತಿಜಾತರೆಂದು ಕರೆಸಿಕೊಂಡರು.

ಸೂತ ಮುನಿಗಳು ಹೇಳಿದರು :

`ಅಂಬರೀಷ ಮಹಾರಾಜನ ವಂಶ ಹೀಗೆ ಬೆಳೆಯಿತು. ಬ್ರಹ್ಮಕ್ಷತ್ರಿಯ ತೇಜಸ್ಸಿನಿಂದ ಕಂಗೊಳಿಸಿತು. ಮುಂದೆ ಭಾಗವತ ಕಥೆಯಲ್ಲಿ ಇವರಲ್ಲಿ ಅನೇಕರು ಪ್ರಮುಖರಾಗಿ ಕಾಣಿಸಿಕೊಂಡರು. ಇವರೆಲ್ಲರ ವಿಷಯ ಮುಂದೆ ಬರುತ್ತದೆ. ಈಗ ಈ ಸ್ಕಂಧದ ಪ್ರಾರಂಭದಲ್ಲಿ ಕಂಡಿದ್ದ ವೈವಸ್ವತ ಮನುವಿನ ವಿಷಯಕ್ಕೆ ಮತ್ತೆ ಬರುತ್ತಾರೆ ವೇದವ್ಯಾಸರು. ಹೀಗಾಗಿ ವೈವಸ್ವತ ಮನುವಿನ ಹತ್ತು ಪುತ್ರರಲ್ಲಿ ಹಿರಿಯನಾದ ಇಕ್ಷ್ವಾಕುವಿನ ವಂಶಾವಳಿಯ ಕಥೆಯನ್ನು ಅವರು ಹೇಳುತ್ತಾರೆ. ನಾನೂ ಸಹ ಅವರು ತಿಳಿಸಿದಂತೆಯೇ ಕಥೆಯನ್ನು ಮುಂದುವರಿಸುತ್ತೇನೆ.’

ಸೂತ ಮುನಿಗಳು ಭಾಗವತ ಕಥಾಶ್ರವಣ ಮುಂದುವರಿಸಿದರು :

ಇಕ್ಷ್ವಾಕು ಹುಟ್ಟಿದ ವಿಷಯವೇ ಒಂದು ರೋಚಕ ಕತೆ. ವೈವಸ್ವತ ಮನು ಒಮ್ಮೆ ಸೀನಿದಾಗ ಅವನ ಮೂಗಿನ ಹೊರಳೆಗಳಿಂದ ಇಕ್ಷ್ವಾಕು ಹುಟ್ಟಿದ್ದಾನೆ. ಇವನಿಗೆ ನೂರು ಜನ ಪುತ್ರರು ಹುಟ್ಟಿದರು. ಕೆಲವರು ಮಾತ್ರ ತಂದೆಯೊಂದಿಗೆ ಉಳಿದರು.

ಒಮ್ಮೆ ಅಷ್ಟಕ ಶ್ರಾದ್ಧ ಕಾಲದಲ್ಲಿ ಇಕ್ಷ್ವಾಕು ಮಹಾರಾಜ ಶ್ರಾದ್ಧವನ್ನು ಆಚರಿಸುತ್ತಿದ್ದ. ಅದಕ್ಕಾಗಿ ಶುಚಿಯಾದ ಮಾಂಸ ತರುವಂತೆ ಮಗನಾದ ವಿಕುಕ್ಷಿಗೆ ಹೇಳಿದ. ಮಗನೇನೊ ತಂದೆಯಾಜ್ಞೆಯನ್ನು ಪಾಲಿಸುವವನಂತೆ ಕಾಡಿಗೆ ಹೋದ.

ಪಿಂಡ ಪ್ರದಾನ ಯೋಗ್ಯವಾದ ಪ್ರಾಣಿಗಳನ್ನು ಕೊಂದ. ಅಷ್ಟೆಲ್ಲ ಆಗುವ ವೇಳೆಗೆ ಅವನಿಗೆ ಬಹಳ ಆಯಾಸವಾಯಿತು. ಹಸಿವೆ ಜವಾಬ್ದಾರಿಯನ್ನು ಮರೆಸಿತು. ಶ್ರಾದ್ಧಕ್ಕಾಗಿ ಕೊಂದ ಒಂದು ಮೊಲವನ್ನೇ ಗಬಗಬನೆ ತಿಂದು ಬಿಟ್ಟು ಹಿಂತಿರುಗಿ ಉಳಿದ ಮಾಂಸವನ್ನು ತಂದೆಗೆ ನೀಡಿದ. ಅದನ್ನು ಪಿತೃವಿಗರ್ಪಿಸುವುದಕ್ಕಾಗಿ ಪ್ರೋಕ್ಷಣೆ ಮಾಡಲು ಹೊರಟಿದ್ದ ಇಕ್ಷ್ವಾಕುವನ್ನು ಪುರೋಹಿತರಾಗಿದ್ದ ವಸಿಷ್ಟರು ತಡೆದರು. `ರಾಜನ್‌, ಇದು ನಿನ್ನ ಮಗ ತಿಂದು ಉಳಿದ ಮಾಂಸ. ಶ್ರದ್ಧಾಚರಣೆಗೆ ಯೋಗ್ಯವಲ್ಲ!’ ಎಂದು ಬಿಟ್ಟರು.

ಇಕ್ಷ್ವಾಕುವಿಗೆ ತಡೆದುಕೊಳ್ಳಲಾಗದಷ್ಟು ಕೋಪ ಬಂದಿತು. ನಿಯಾಮಕ ತತ್ವವನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ದೇಶಬಿಟ್ಟು ಹೋಗಲು ಮಗನಿಗೆ ಆಜ್ಞೆ ಮಾಡಿಬಿಟ್ಟ. ಮುಂದೆ ಶ್ರೇಷ್ಠರಾದ ವಸಿಷ್ಟರಿಂದ ಪರಾತ್ಪರ ಸತ್ಯದ ಬಗ್ಗೆ ತಿಳಿದುಕೊಂಡು ಇಕ್ವ್ವಾಕು ವಿರಕ್ತನಾಗಿ, ಯೋಗಿಯಾಗಿ, ಐಹಿಕ ದೇಹ ತ್ಯಜಿಸಿ ಪರಿಪೂರ್ಣತೆಯನ್ನು ಪಡೆದುಕೊಂಡನು. ತಂದೆ ತೀರಿದ ಮೇಲೆ ವಿಕುಕ್ಷಿ ರಾಜ್ಯಕ್ಕೆ ಹಿಂತಿರುಗಿ ರಾಜನಾದನು. ರಾಜ್ಯವನ್ನು ಚೆನ್ನಾಗಿ ಆಳಿ ಅನೇಕ ಯಾಗಗಳನ್ನು ಮಾಡಿ ದೇವೋತ್ತಮ ಪರಮ ಪರುಷನನ್ನು ತೃಪ್ತಿಗೊಳಿಸಿದನು. ಶಶಾದ – ಎಂದರೆ ಮೊಲವನ್ನು ತಿಂದವನು – ಎಂದೇ ಹೆಸರಾದನು. ಇವನ ಮಗ ಪುರಂಜಯ.

ಸೂತ ಮುನಿಗಳು ಹೇಳಿದರು :

`ಈ ಪುರಂಜಯ ಬಹಳ ದೊಡ್ಡ ಹೆಸರು. ಅಪಾರ ಕೀರ್ತಿ, ಗೌರವದ ದೊಡ್ಡ ಸ್ಥಾನಮಾನಗಳನ್ನು ಸಂಪಾದಿಸಿದ. ಅತಿ ಪರಾಕ್ರಮಿ. ಹಿಂದೊಮ್ಮೆ ದೇವದಾನವರಿಗೆ ಯುದ್ಧ ನಡೆದಾಗ ಪುರಂಜಯ ದೇವತೆಗಳ ಪರವಾಗಿ ಯುದ್ಧ ಮಾಡಿ ದಾನವರನ್ನು ಸೋಲಿಸಿದ. ಪ್ರಿಯ ಮುನಿಗಳೇ, ಈ ಸಂದರ್ಭದಲ್ಲೊಂದು ವಿಶೇಷವಾದ ಕಥೆ ಇದೆ. ದೇವತೆಗಳಿಗೆ ಸಹಾಯ ಮಾಡಬೇಕಾದರೆ ದೇವೇಂದ್ರ ತನ್ನ ವಾಹನವಾಗಬೇಕು ಎನ್ನುವ ನಿಬಂಧನೆಯನ್ನು ಪುರಂಜಯ ಒಡ್ಡಿದ. ಮಹಾವೃಷಭ ರೂಪದಲ್ಲಿ ದೇವೇಂದ್ರ ಅವನ ವಾಹನನಾದ. ಪುರಂಜಯ ನಾಯಕತ್ವ ವಹಿಸಿ ಹೋರಾಡಿ ದಾನವರನ್ನು ಕೊಚ್ಚಿ ಹಾಕಿದ. ಯುದ್ಧದ ಅನಂತರದ ಪರಿಣಾಮ ಅವನಲ್ಲೊಂದು ರೀತಿಯ ವಿರಕ್ತಿ ಹುಟ್ಟಿಸಿತು. ಅವನು ರಾಜರ್ಷಿಯಾದ. ಯುದ್ಧದಲ್ಲಿ ಸೂರೆ ಮಾಡಿದ್ದನ್ನೆಲ್ಲ ದೇವೇಂದ್ರನಿಗೆ ಒಪ್ಪಿಸಿಬಿಟ್ಟ.

ದೇವಾನುದೇವತೆಯರಿಗೆಲ್ಲ ಅಚ್ಚು ಮೆಚ್ಚಿನವನಾದ. ಹೀಗಾಗಿ ಇವನಿಗೆ ಇಂದ್ರವಾಹ, ಕಕುತ್‌ಸ್ಥ ಎನ್ನುವ ಹೆಸರುಗಳು ಬಂದವು. ಪುರಂಜಯನ ಮಗ ಅನೇನಾ. ಇವನ ಮಗ ಪೃಥು. ಇವನ ಮಗ ವಿಶ್ವಗಂ. ಇವನ ಮಗ ಚಂದ್ರ. ಇವನ ಮಗ ಯವನಾಶ್ವ. ಇವನ ಮಗ ಶ್ರಾವಸ್ತ. ಇವನು ಶ್ರಾವಸ್ತೀ ನಗರವನ್ನು ನಿರ್ಮಿಸಿದ. ಇವನ ಮಗ ಬೃಹದಶ್ವ. ಇವನ ಮಗ ಕುವಲಯಾಶ್ವ, ಹೀಗೆ ಈ ವಂಶ ದೊಡ್ಡದಾಗಿ ಬೆಳೆಯಿತು.  ಮಹಾಬಲಶಾಲಿಯಾದ ಕುವಲಯಾಶ್ವ ಉತಂಕನೆಂಬ ಋಷಿಯನ್ನು ತೃಪ್ತಿಗೊಳಿಸಲು ಧುಂಧು ಎಂಬ ಅಸುರನನ್ನು ಕೊಂದ. ಈ ಯುದ್ಧದಲ್ಲಿ  ಅವನ ಮಕ್ಕಳೆಲ್ಲರೂ ನಾಶವಾಗಿ, ದೃಢಾಶ್ವ, ಕಪಿಲಾಶ್ವ, ಭದ್ರಾಶ್ವ ಎನ್ನುವ ಮೂವರು ಮಕ್ಕಳು ಮಾತ್ರ ಉಳಿದರು. ದೃಢಾಶ್ವನ ಮಗ ಹರ್ಯಶ್ವ, ಅವನ ಮಗ ನಿಕುಂಭ. ನಿಕುಂಭನ ಮಗ ಬಹುಲಾಶ್ವ, ಇವನ ಮಗ ಕೃಶಾಶ್ವ, ಇವನ ಮಗ ಸೇನಜಿತ್‌, ಇವನ ಮಗ ಯುವನಾಶ್ವ. ಈ ಸಂತತಿಗಳ ಸಾಲಿನಲ್ಲಿ ಸ್ವಲ್ಪ ಗಮನಿಸಬೇಕಾದ ಹೆಸರು ಈ ಯುವನಾಶ್ವ. ಏಕೆಂದರೆ ಇಲ್ಲೊಂದು ವಿಚಿತ್ರ ರೀತಿಯಲ್ಲಿ ಈ ವಂಶದ ಸಂತತಿ ಚಿಗುರುತ್ತದೆ.!’

ನೈಮಿಷಾರಣ್ಯದ ಮಹಾನ್‌ ಮಹಾನ್‌ ಋಷಿಗಳೆಲ್ಲರೂ ಅತ್ಯಂತ ಕುತೂಹಲದಿಂದ ಸೂತ ಮುನಿಗಳ ಮುಖವಾಣಿಯಿಂದ ಏನು ಹೊರ ಹೊಮ್ಮುತ್ತದೆಯೊ ಎಂದು ಮೌನವಾಗಿ ಕಾದು ಕುಳಿತರು. ಸೂತ ಮುನಿಗಳು ಯುವನಾಶ್ವನ ಈ ವಿಚಿತ್ರ ಕಥೆಯನ್ನು ಹೇಳತೊಡಗಿದರು.

ಯುವನಾಶ್ವನಿಗೆ ಮಕ್ಕಳಿರಲಿಲ್ಲ. ಮತ್ತೊಮ್ಮೆ ದೊಡ್ಡ ವಂಶವೊಂದರ ಸಂತತಿ ಸ್ಥಗಿತಗೊಳ್ಳುವ ಅಂಚಿಗೆ ತಲುಪುವ ಅಪಾಯ ಕಂಡು ಬಂದಿತ್ತು. ಆದರೆ, ಹಿಂದಿನಿಂದಲೂ ಧಾರಾಳವಾಗಿ ಆಚರಣೆಯಲ್ಲಿದ್ದ ನಿಯೋಗ ಪದ್ಧತಿಯಿತ್ತು. ಯುವನಾಶ್ವನೇಕೊ ಹೊರಳಲಿಲ್ಲ. ಬದಲಾಗಿ ಜೀವನವೇ ಬೇಸರವಾದವನ ಹಾಗೆ ಕುಟುಂಬ ಜೀವನದಿಂದಲೇ ನಿವೃತ್ತನಾದವನ ಹಾಗೆ ಕಾಡಿಗೆ ಹೊರಟುಬಿಟ್ಟನು. ಆದರವನು ಒಂಟಿಯಾಗಿ ಹೋಗಲಿಲ್ಲ. ಜೊತೆಗೆ ತನ್ನ ನೂರು ಜನ ಪತ್ನಿಯರನ್ನು ಕರೆದೊಯ್ದಿದ್ದನು. ಈ ರಾಣಿಯರೂ ಅತ್ಯಂತ ಚಿಂತಿತರಾಗಿದ್ದರು. ಬಹುಶಃ, ತಮ್ಮ ಈ ಪತಿ ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಿಬಿಟ್ಟು ಸಂನ್ಯಾಸಿಯಾಗಿ ವನ್ಯಲೋಕದೊಂದಿಗೆ ಕರಗಿಹೋಗುತ್ತಾನೇನೊ ಎನ್ನುವ ಭಯ ಅವರನ್ನೆಲ್ಲ ಆವರಿಸಿಕೊಂಡು ಬಿಟ್ಟಿತ್ತು.

ಆಶ್ರಮದಲ್ಲಿ ಅಂದು ರಾತ್ರಿ ಮಲಗಿದ್ದಾಗ ರಾಜನಿಗೆ ಬಹಳ ಬಾಯಾರಿಕೆ ಆಯಿತು. ಎದ್ದು ಯಜ್ಞಶಾಲೆಯತ್ತ ಹೆಜ್ಜೆ ಹಾಕಿದಾಗ ಆಶ್ರಮವಾಸಿಗಳೆಲ್ಲರೂ ಗಾಢ ನಿದ್ರೆಯಲ್ಲಿ ಇರುವುದು ಕಂಡಿತು. ಕುಡಿಯಲು ನೀರು ಸಿಗುತ್ತದೇನೋ ಎಂದು ಗಮನಿಸಿದಾಗ ಅಲ್ಲೊಂದು ಪಾತ್ರೆಯಲ್ಲಿ ನೀರು ಕಂಡಿತು. ಕೂಡಲೇ ರಾಜ ಅದನ್ನು ಗಟಗಟನೆ ಕುಡಿದು ಬಿಟ್ಟು ತೃಪ್ತನಾಗಿ ಹೋಗಿ ಮಲಗಿಕೊಂಡ.

ಬೆಳಗಾದಾಗ, ಜಲಕುಂಭ ಬರಿದಾಗಿರುವುದನ್ನು ಬ್ರಾಹ್ಮಣರು ಕಂಡರು. ಎಲ್ಲರಿಗೂ ದಿಗಿಲಾಯಿತು. ಇನ್ನೂ ಕೆಲವೇ ಘಂಟೆಗಳಲ್ಲಿ ಇಂದ್ರಯಜ್ಞ ಪ್ರಾರಂಭ ಆಗಬೇಕಾಗಿತ್ತು. ರಾಜನಿಗೆ ಮಕ್ಕಳಾಗಲು ಇಂದ್ರನನ್ನು ಪ್ರಾರ್ಥಿಸಿ, ಕುಂಭದ ನೀರನ್ನು ಅನೇಕ ಮಂತ್ರಗಳಿಂದ ಮಂತ್ರಿಸಿ ಅನಂತರ ರಾಣಿಯರಿಗೆ ಕುಡಿಯಲು ಕೊಡುವುದಕ್ಕಾಗಿಯೇ ರಾತ್ರಿಯೇ ಸಿದ್ಧವಾಗಿರಿಸಿದ್ದರು. ಬೆಳಗಾದಾಗ ಜಲಕುಂಭ ಬರಿದಾಗಿತ್ತು. ನೀರಿರಲಿಲ್ಲ. ಚಿಂತಿತರಾದ ವಟುಗಳು ಅಲ್ಲಿದ್ದ ಎಲ್ಲರನ್ನೂ ವಿಚಾರಿಸತೊಡಗಿದರು. `ರಾತ್ರಿ ಯಜ್ಞಶಾಲೆಯಲ್ಲಿ ಮಂತ್ರಿಸಿ ಇರಿಸಿದ್ಧ ಜಲಕುಂಭದಲ್ಲಿ ಜಲವೇ ಕಾಣದಾಗಿದೆ. ಏನಾಯಿತು, ಎಲ್ಲಿ ಹೋಯಿತು?’

ಇದು ಯುವನಾಶ್ವರಾಜನ ಕಿವಿಗೂ ಬಿದ್ದಿತು. ಅವನು ಕೂಡಲೇ ಆ ಬ್ರಾಹ್ಮಣ ಸಮೂಹದ ಬಳಿ ಬಂದು ಹೇಳಿದ : `ಪುಣ್ಯಾತ್ಮರೇ, ಈ ನೀರನ್ನು ಕುಡಿದದ್ದು ನಾನೆ. ರಾತ್ರಿ ಥಟ್ಟನೆ ನೀರಡಿಕೆಯಾಯಿತು. ನಿಮ್ಮನ್ನು ಕೇಳೋಣ ಎಂದು ಹುಡುಕಿಕೊಂಡು ಬಂದೆ. ನೀವೆಲ್ಲ ಗಾಢನಿದ್ರೆಯಲ್ಲಿ ಇದ್ದಿರಿ. ನಿಮಗೆ ತೊಂದರೆಯುಂಟುಮಾಡಬಾರದು ಎಂದು ನಾನೇ ಹುಡುಕಿದೆ. ಈ ಜಲಕುಂಭ ಕಾಣಿಸಿತು. ಬಾಯಾರಿಕೆ ತಡೆಯಲಾರದೆ ಅದನ್ನು ನಾನು ಕುಡಿದುಬಿಟ್ಟೆ!’

ಆ ಬ್ರಾಹ್ಮಣ ಗುಂಪಿಗೆ ನಗಬೇಕೋ ಅಳಬೇಕೊ ತಿಳಿಯದಾಯಿತು. ಪೆದ್ದ ಕೆಲಸ ಆಗಿ ಹೋಗಿದೆ ಅನ್ನಿಸಿತು. ಹಿರಿಯರೊಬ್ಬರು ಹೇಳಿದರು. `ರಾಜನ್‌, ಈ ಮಂತ್ರಿಸಿದ ಜಲ ನಿನ್ನ ರಾಣಿಯರು ಕುಡಿಯಲೆಂದು ಸಿದ್ಧಪಡಿಸಿದ್ದು. ಸಂತಾನ ಅಪೇಕ್ಷಿಗಳಾದ ಅವರಿಗಾಗಿ ಇಟ್ಟಿದ್ದು. ಅದನ್ನೀಗ ನೀನು ಕುಡಿದು ಬಿಟ್ಟಿದ್ದೀಯ! ಯಜ್ಞಫಲವೇ ತಲೆಕೆಳಗು ಆಗಿಹೋಯಿತು.!’

ರಾಜನಿಗೆ ನಿರಾಸೆಯಾಯಿತು. `ಗುರು ಸಂಪನ್ನರೆ, ಈಗೇನು ಮಾಡುವುದು, ತಿಳಿಯದೆ ಇಂತಹದೊಂದು ತಪ್ಪು ಘಟಿಸಿಹೋಯಿತಲ್ಲ?’ ಎಂದು ಕೇಳಿದ.

ಅವರು ಹೇಳಿದರು : `ಏನು ಮಾಡುವುದು ದೈವ ಸಂಕಲ್ಪವೇ ಹೀಗಿರುವಾಗ! ನಾವು ಯಜ್ಞ ಮಾಡೋಣ. ದೇವತೆಗಳನ್ನು ಪ್ರಾರ್ಥಿಸೋಣ!’

ಯಜ್ಞ ಸಾಂಗವಾಗಿಯೇ ನೆರವೇರಿತು. ಬ್ರಾಹ್ಮಣರು ದೇವತೆಗಳನ್ನು ಪ್ರಾರ್ಥಿಸಿದರು. ಭಗವಂತನಿಗೆ ಅದರ ಪೂರ್ಣ ಪ್ರಣಾಮಗಳನ್ನು ಸಲ್ಲಿಸಿದರು.

ಫಲಶ್ರುತಿ ವಿಚಿತ್ರವಾಗಿತ್ತು. ಕಾಲಾಂತರದಲ್ಲಿ ಯುವನಾಶ್ವನ ಉದರದ ಬಲಭಾಗದಿಂದ ಒಬ್ಬ ಮಗ ಹುಟ್ಟಿದ. ತೇಜಸ್ವಿಯಾದ ಶಕ್ತಿಸಂಪನ್ನ ರಾಜ ಕಳೆ ಅವನ ಮುಖದಲ್ಲಿ ಕಂಡಿತು. ಹುಟ್ಟಿದ ಈ ಮಗು ಹಾಲಿಗಾಗಿ ಅತ್ತಾಗ, ದೇವೇಂದ್ರ ಬಂದು ಸಂತೈಸಿ, ತನ್ನ ತೋರುಬೆರಳನ್ನು ಆ ಮಗುವಿನ ಬಾಯಿಯಲ್ಲಿ ಇಟ್ಟು ಚೀಪಿಸಿದ.

ದೇವೇಂದ್ರನ ಅನುಗ್ರಹದಿಂದ ಬೆಳೆದ ಈ ಮಗುವಿಗೆ ಮಾಂಧಾತನೆಂದು ಹೆಸರಿಟ್ಟರು. ಇವನು ಬೆಳೆಯುತ್ತ ಪರಮ ಸಾಹಸಿಯಾದ. ಆ ಕಾಲದ ಗದ್ದಲಕೋರರ ಹುಟ್ಟಡಗಿಸಿದ. ಇದರಿಂದ ಇವನಿಗೆ ತ್ರಸದ್ದಸ್ಸು ಎನ್ನುವ ಹೆಸರೂ ಬಂದಿತು. ದೇವೋತ್ತಮ ಪರಮ ಪುರುಷನ ಅನುಗ್ರಹದಿಂದ ಇವನು ಬಹಳ ಬಲಶಾಲಿಯಾಗಿ ಏಳು ದ್ವೀಪಗಳನ್ನೊಳಗೊಂಡ ಇಡೀ ಭೂಮಂಡಲವನ್ನು ಚಕ್ರವರ್ತಿಯಾಗಿ ಆಳಿದ. ಅನೇಕಾನೇಕ ಯಜ್ಞಗಳನ್ನು ಮಾಡಿ ಧಾರಾಳವಾಗಿ ದಾನಧರ್ಮಗಳನ್ನು ಮಾಡಿದ. ಶಶಬಿಂದು ಎನ್ನುವ ರಾಜನ ಮಗಳಾದ ಬಿಂದುಮತಿಯನ್ನು ಮದುವೆಯಾದ. ಅವಳಲ್ಲಿ ಮೂವರು ಗಂಡು ಮಕ್ಕಳನ್ನು ಪಡೆದ. ಪುರುಕುತ್ಸ, ಅಂಬರೀಷ, ಮುಚುಕುಂದ ಎನ್ನುವ ಈ ಮೂವರು ಮಕ್ಕಳೊಂದಿಗೆ ಅವನಿಗೆ ಐವತ್ತು ಹೆಣ್ಣು ಮಕ್ಕಳೂ ಹುಟ್ಟಿದ್ದರು. ಈ ಐವತ್ತು ಹೆಣ್ಣು ಮಕ್ಕಳು ಯಾವಾಗಲೂ ತಮಗಿಷ್ಟವಾದ ವಸ್ತುವಿಗಾಗಿ ಕಾದಾಡುತ್ತಿದ್ದರು. ಚೆನ್ನಾಗಿರುವುದೆಲ್ಲ ತಮ್ಮದಾಗಬೇಕು ಎನ್ನುವ ಹಠ ಇವರದು. ಇವರ ಹಠಕ್ಕೆ ತಕ್ಕಂತೆ ಇವರ ಜೀವನವೂ ರೂಪಗೊಂಡದ್ದು ಒಂದು ಅಚ್ಚರಿಯ ವಿಷಯ.

ಈ ಲೇಖನ ಶೇರ್ ಮಾಡಿ