ವಿಷ್ಣುವು ತನ್ನ ಅನಂತ ಶಯ್ಯೆಯ ಮೇಲೆ ಪವಡಿಸಿರುವ ಭಂಗಿಯ ತಿರುವನಂತಪುರದ ಶ್ರೀ ಪದ್ಮನಾಭ ಸ್ವಾಮಿ ದೇವಾಲಯವು ಭಾರತದಲ್ಲಿ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಈ ದೇವಾಲಯವು ಭಕ್ತಿಗೆ ಒಂದು ಮೂರ್ತರೂಪವಾಗಿದ್ದು, ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ.
ಇತಿಹಾಸ
ಕೇರಳದ ಉತ್ತರ ಭಾಗದಲ್ಲಿ, ವಿಲ್ವಮಂಗಲ ಠಾಕುರ್ ಎಂಬ ಸಂನ್ಯಾಸಿ ಅನಂತಪುರದ ದೇವಾಲಯದಲ್ಲಿ ನಿತ್ಯಪೂಜೆಯನ್ನು ಮಾಡುತ್ತಿದ್ದರು. ಅಲ್ಲಿ ಪ್ರತಿನಿತ್ಯವೂ ಪೂಜೆಯನ್ನು ನೆರವೇರಿಸುವ ಸಮಯದಲ್ಲಿ ಓರ್ವ ಬಾಲಕನು ಕಾಣಿಸಿಕೊಂಡು ಪೂಜಿಸುತ್ತಿದ್ದ ಸಾಲಿಗ್ರಾಮ ಶಿಲೆಯನ್ನು ತನ್ನ ಬಾಯಿಯಲ್ಲಿ ಹಾಕಿಕೊಳ್ಳುವ ಮೂಲಕ ಪೂಜೆಗೆ ಅಡ್ಡಿಯನ್ನು ಉಂಟುಮಾಡುತ್ತಿದ್ದನು.
ವಿಲ್ವಮಂಗಲರು ಇದನ್ನು ಕುರಿತು ಕೋಪಗೊಂಡು ಬಾಲಕನನ್ನು ಗದರಿದರು. ಒಮ್ಮೆ ತಮ್ಮ ಕೈಯಿಂದ ಬಾಲಕನನ್ನು ಹಿಂದಕ್ಕೆ ತಳ್ಳುವ ಮೂಲಕ ತಮ್ಮ ಕೆರಳುವಿಕೆಯನ್ನು ತೋರಿಸಿದರು. ಆಗ ಆ ಬಾಲಕನು ಸಿಟ್ಟುಗೊಂಡು ವಿಲ್ವಮಂಗಲರನ್ನು ದೃಷ್ಟಿಸಿ ನೋಡಿದನು ಮತ್ತು ಈ ರೀತಿಯಾಗಿ ಹೇಳಿದನು “ಒಂದು ವೇಳೆ ನಿನಗೆ ಇನ್ನೊಮ್ಮೆ ನನ್ನನ್ನು ನೋಡಬೇಕು ಅನ್ನಿಸಿದಲ್ಲಿ ಅನಂತವೆಂಬ ಅರಣ್ಯಕ್ಕೆ ಬಾ”. ಆ ಬಾಲಕನು ಶ್ರೀ ಕೃಷ್ಣನಲ್ಲದೇ ಬೇರಾರೂ ಆಗಿರಲಿಲ್ಲ.
ಯಾವ ಅನಂತ ಅರಣ್ಯದಲ್ಲಿ ಅವನನ್ನು ಕಾಣಬಹುದಿತ್ತೋ ಅಂಥ ದೈವಿಕ ಮಗುವಿನ ಅನ್ವೇಷಣೆಯಲ್ಲಿ ವಿಲ್ವಮಂಗಲರು ಕೇರಳದ ಉತ್ತರಭಾಗದಿಂದ ದಕ್ಷಿಣಭಾಗಕ್ಕೆ ಪ್ರಯಾಣ ಹೊರಟರು. ಕೊನೆಗೆ ಅನೇಕ ದಿನಗಳ ಅನಂತರ ವಿಲ್ವಮಂಗಲರು ಆ ಅನಂತ ಅರಣ್ಯವನ್ನು ತಲಪಿದರು ಮತ್ತು ಸರ್ಪ ಅನಂತನ ಮೇಲೆ ಒರಗಿಕೊಂಡಿರುವ ಭಗವಂತನಾದ ಅನಂತಪದ್ಮನಾಭನ ದರ್ಶನವನ್ನು ಪಡೆದರು.
ಆಗ ವಿಲ್ವಮಂಗಲರು ಒಂದು ರೀತಿಯ ತನ್ಮಯತೆಯಲ್ಲಿ ಮುಳುಗಿದ್ದರು. ಆ ಸ್ಥಿತಿಯಲ್ಲಿ ಅವರು ತೆಂಗಿನ ಚಿಪ್ಪಿನಲ್ಲಿ ಪಕ್ವವಲ್ಲದ ಮಾವಿನ ಕಾಯಿಗಳನ್ನು ನೈವೇದ್ಯ ಮಾಡಿದರು. (ಇಂದು ಆ ತೆಂಗಿನ ಚಿಪ್ಪು ಚಿನ್ನ ಮತ್ತು ವಜ್ರಗಳಿಂದ ಅಲಂಕರಿಸಲ್ಪಟ್ಟಿದೆ ಮತ್ತು ಮಾಗಿಲ್ಲದ ಮಾವಿನಕಾಯಿಯನ್ನು ನಿತ್ಯವೂ ಭಗವಂತನಿಗೆ ಅದರಲ್ಲಿಯೇ ಅರ್ಪಿಸಲಾಗುತ್ತದೆ.)
ವಿಲ್ವಮಂಗಲ ಠಾಕೂರರ ಪ್ರಾರ್ಥನೆಯಂತೆ ಭಗವಂತನು ಶಾಶ್ವತವಾಗಿ ಅಲ್ಲಿಯೇ ನೆಲೆನಿಂತು ತನ್ನ ಭಕ್ತರನ್ನು ಅನುಗ್ರಹಿಸುವುದಾಗಿ ನಿಶ್ಚಯಿಸಿದನು. ಈಗ ಆ ಪ್ರದೇಶವು ತಿರು-ಅನಂತ-ಪುರಮ್, ತಿರ್ವನಂತಪುರಮ್ ಅಥವಾ ಟ್ರಿವೇಂಡ್ರಮ್ ಎಂಬುದಾಗಿ ಕರೆಯಲ್ಪಡುತ್ತಿದೆ. ಅದು ಶ್ರೀ ಅನಂತಪದ್ಮನಾಭನ ನಗರವಾಗಿದೆ.
ಭಗವಂತನನ್ನು ಕುರಿತು:
ವಿಲ್ವಮಂಗಲಸ್ವಾಮಿಯು ದರ್ಶನ ಮಾಡಿದ ಮೂಲ ವಿಗ್ರಹವು ಮರದಿಂದ ಮಾಡಲ್ಪಟ್ಟಿತ್ತು. ಈಗ ಇರುವ ಮುಖ್ಯ ದೇವರ ವಿಗ್ರಹವು ನೇಪಾಳದ ರಾಜನಿಂದ ತಿರುವಾಂಕೂರಿನ ರಾಜನಿಗೆ ವಿಶೇಷವಾದ ಆನೆಗಳ ಮೂಲಕ ಕಳುಹಿಸಲ್ಪಟ್ಟ 12008 ಸಾಲಿಗ್ರಾಮ ಶಿಲೆಗಳಿಂದ ನಿರ್ಮಿಸಲ್ಪಟ್ಟಿದೆ. ತನ್ನ ಪತ್ನಿಯರಾದ ಶ್ರೀ ದೇವಿ ಮತ್ತು ಭೂದೇವಿಯರ ಜೊತೆಯಲ್ಲಿ ಶ್ರೀ ಪದ್ಮನಾಭಸ್ವಾಮಿಯು ದಿನನಿತ್ಯ ಅಭಿಷೇಕವನ್ನು ಸ್ವೀಕರಿಸುತ್ತಾನೆ. ಶಿವನಿಗೆ ತನ್ನ ಬಲಗೈಯಲ್ಲಿ ಆಶ್ರಯವನ್ನು ನೀಡಿದ್ದಾನೆ.
ಭಗವಂತನು ಕ್ಷೀರಸಾಗರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ ಎಂಬಂತೆ, ಸಮುದ್ರದ ಅಲೆಗಳ ಮೊರೆತವು ಗರ್ಭಗುಡಿಯ ಪೀಠದ ಹಿಂಭಾಗದಲ್ಲಿ ಕೇಳಿಬರುತ್ತದೆ ಎಂದು ಹೇಳಲಾಗಿದೆ ಮತ್ತು ಅಲ್ಲಿ ನೋಡಲು ಅರ್ಚಕರಿಗೂ ಕೂಡ ನಿಷೇಧಿಸಲಾಗಿದೆ.
ಶ್ರೀ ಪದ್ಮನಾಭಸ್ವಾಮಿಯು ಸುಮಾರು 18 ಅಡಿ ಉದ್ದವಿದ್ದಾನೆ ಮತ್ತು ಸರ್ಪದ ಮೇಲೆ ಅತ್ಯಂತ ಭವ್ಯವಾಗಿ ಪವಡಿಸಿದ್ದಾನೆ. ಭಕ್ತರು ಮೂರು ದ್ವಾರಗಳ ಮೂಲಕ ದರ್ಶನವನ್ನು ಪಡೆಯಬಹುದಾಗಿದೆ. ಮೊದಲನೆಯ ದ್ವಾರದಿಂದ ನಾವು ದೇವರ ಸುಂದರವಾದ ಮುಖವನ್ನು ಕಾಣಬಹುದು. ಎರಡನೆಯ ದ್ವಾರದಿಂದ ಕಮಲದಿಂದ ಕೂಡಿದ ನಾಭಿಪ್ರದೇಶವನ್ನು ಮತ್ತು ಆ ಕಮಲದಲ್ಲಿ ಬ್ರಹ್ಮನು ಕುಳಿತಿರುವುದನ್ನು ಕಾಣಬಹುದು. ಮೂರನೆಯ ದ್ವಾರದ ಮೂಲಕ ನಾವು ಆತನ ಪಾದಕಮಲಗಳನ್ನು ಕಾಣಬಹುದಾಗಿದೆ.
ಪದ್ಮನಾಭ ದಾಸ:
ಕ್ರಿ.ಶ. 1780 ರಲ್ಲಿ ಈ ರಾಜ್ಯವನ್ನು ಆಳಿದ ತಿರುನಾಳ್ ಮಾರ್ತಾಂಡ ವರ್ಮನು ತಿರುವನಂತಪುರವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಅಲ್ಲಿಂದ ಮುಂದಕ್ಕೆ ಸದ್ಯದ ಕಾಲಘಟ್ಟದಲ್ಲಿ ಯಾರೊಬ್ಬರೂ ಮಾಡದೇ ಇರುವಂಥದ್ದನ್ನು ಈ ರಾಜನು ಮಾಡಿದನು. ಆತನು ತನ್ನ ಸಂಪೂರ್ಣ ರಾಜ್ಯವನ್ನು ಶ್ರೀ ಪದ್ಮನಾಭನಿಗೆ ದಾನ ಮಾಡಿದನು.
ಅಷ್ಟೇ ಅಲ್ಲದೇ, ತನ್ನನ್ನು ತಾನು “ಪದ್ಮನಾಭ ದಾಸ” ಎಂದು ಕರೆದುಕೊಂಡನು. ಇದರ ಹಿಂದಿರುವ ಆಶಯವೇನೆಂದರೆ ಶ್ರೀ ಪದ್ಮನಾಭನು ಮಾತ್ರ ನಿಜವಾದ ರಾಜ ಮತ್ತು ಉಳಿದ ಮಾನವ ರಾಜರೆಲ್ಲ ಕೇವಲ ಆತನ ಸೇವಕರು ಎಂಬುದಾಗಿ.
ಇಂದು ನಾವು ಯಾವ ರೀತಿಯ ದೇವಾಲಯವನ್ನು ಕಾಣುತ್ತಿದ್ದೇವೋ ಆ ರೀತಿಯಲ್ಲಿ ಆತನು ದೇವಾಲಯವನ್ನು ನವೀಕರಿಸಿದನು. ಆತನ ಉತ್ತರಾಧಿಕಾರಿಗಳು (ಇಲ್ಲಿಯವರೆಗೆ 12 ರಾಜರು) ದೇವಾಲಯವನ್ನು ವಿಸ್ತರಿಸಿದರು, ಸುದೃಢವಾದ ಮಹಾದ್ವಾರಗಳನ್ನು ನಿರ್ಮಿಸಿದರು ಮತ್ತು ಅಪಾರ ಮೊತ್ತದ ಸಂಪತ್ತನ್ನು ದೇವಾಲಯಕ್ಕೆ ದಾನ ಮಾಡಿದರು. ಯಾವಾಗ ರಾಜನ ಮನೆಯಲ್ಲಿ ಮಗುವಿನ ಜನನವಾಗುತ್ತದೋ, ಆಗ ಆ ಮಗುವನ್ನು ದೇವಾಲಯಕ್ಕೆ ಒಯ್ಯುತ್ತಾರೆ, ಭಗವಂತನ ಪವಿತ್ರ ಪೀಠದ ಮುಂದೆ ಇರಿಸಿ ಶ್ರೀ ಪದ್ಮನಾಭನಿಗೆ ಸಮರ್ಪಿಸುತ್ತಾರೆ ಮತ್ತು “ಪದ್ಮನಾಭದಾಸ” ಎಂಬ ಹೆಸರನ್ನು ಇಡುತ್ತಾರೆ. ತರುವಾಯ ಆತನು ರಾಜಪದವಿಯನ್ನು ಸ್ವೀಕರಿಸಿದ ಅನಂತರ, ಮಹತ್ತರವಾದ ಉತ್ಸವದೊಂದಿಗೆ ಆತನನ್ನು ಅಲ್ಲಿಗೆ ಒಯ್ಯುತ್ತಾರೆ. “ತುಲಾಪುರುಷದಾನ” ಎಂಬ ಈ ಉತ್ಸವದಲ್ಲಿ ಆತನನ್ನು ಚಿನ್ನದೊಂದಿಗೆ ತೂಗಲಾಗುತ್ತದೆ ಮತ್ತು ಆ ಚಿನ್ನವನ್ನೆಲ್ಲಾ ಶ್ರೀ ಪದ್ಮನಾಭನಿಗೆ ದಾನವಾಗಿ ಅರ್ಪಿಸಲಾಗುತ್ತದೆ.
ಪ್ರತಿದಿನವೂ ಒಂದು ನಿರ್ದಿಷ್ಟ ಸಮಯದಲ್ಲಿ ಪ್ರಸ್ತುತ ರಾಜನಾಗಿರುವ ಶ್ರೀಉತ್ತರದಂ ತಿರುನಾಳ್ ಮಾರ್ತಾಂಡ ವರ್ಮನು ಶ್ರೀ ಪದ್ಮನಾಭನನ್ನು ಸಂದರ್ಶಿಸಿ ಪ್ರಾರ್ಥಿಸಲು ದೇವಾಲಯಕ್ಕೆ ಬರುತ್ತಾನೆ. ಇದನ್ನು ತಪ್ಪಿಸಿದಲ್ಲಿ ಆತನು ದೇವಾಲಯಕ್ಕೆ ತಪ್ಪುಕಾಣಿಕೆಯನ್ನು ಕಟ್ಟಬೇಕು. ಯಾವಾಗ ರಾಜನು ಅಲ್ಲಿಗೆ ಬರುತ್ತಾನೋ ಆಗ ದೇವಾಲಯದ ಸಂಕೀರ್ಣವನ್ನು ಪ್ರವೇಶಿಸಲು ಯಾರಿಗೂ ಅವಕಾಶವಿರುವುದಿಲ್ಲ. ಆಗ ರಾಜನು ಹಿಂದಿನ ದಿನದ ತನ್ನ ಆಡಳಿತದ ವ್ಯವಹಾರಗಳನ್ನೆಲ್ಲ ಶ್ರೀ ಪದ್ಮನಾಭನಿಗೆ ನಿವೇದಿಸುತ್ತಾನೆ. ಇದರ ಆಶಯವೇನೆಂದರೆ ಈ ಸಂಪೂರ್ಣ ರಾಜ್ಯಕ್ಕೆ ಭಗವಂತನೇ ಒಡೆಯನಾಗಿದ್ದಾನೆ ಮತ್ತು ಪ್ರಸ್ತುತ ರಾಜನು ಕೇವಲ ಸೇವಕನಾಗಿದ್ದಾನೆ ಎಂಬುದಾಗಿ.
ನಿತ್ಯದ ಶಾಸ್ತ್ರೋಕ್ತ ಪದ್ಧತಿ:
ವಿಲ್ವಮಂಗಲ ಠಾಕುರರ ವಂಶಜರು ಶ್ರೀ ಪದ್ಮನಾಭನಿಗೆ “ಪುಷ್ಪಾಂಜಲಿ” ಸೇವೆಯನ್ನು ಮತ್ತು ದೇವಾಲಯದ ವ್ಯವಸ್ಥಾಪಕತ್ವದ ಮುಂದಾಳತ್ವವನ್ನು ಮುಂದುವರಿಸಿರುತ್ತಾರೆ. ಅವರಿಂದ ಎಲ್ಲ ರೀತಿಯ ಸಲಹೆಗಳನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ಅವರ ಉಪಸ್ಥಿತಿಯು ದೇವಾಲಯದ ಶಾಸ್ತ್ರಾಚರಣೆಗಳಲ್ಲಿ ಅತ್ಯಂತ ಮಹತ್ವದ್ದಾಗಿದೆ.
ಪೆರಿಯ ನಂಬಿ ಎಂದು ಕರೆಯಲ್ಪಡುವ ಮುಖ್ಯ ಅರ್ಚಕನು ಉಳಿದ ಅರ್ಚಕರ (21 ಅಥವಾ ಹೆಚ್ಚು) ಸಹಾಯದೊಂದಿಗೆ ನಿತ್ಯದ ಪೂಜೆಯನ್ನು ನೆರವೇರಿಸುತ್ತಾನೆ. ಈಗಿನ ವಿಲ್ವಮಂಗಲ ಸ್ವಾಮಿಯ ವಂಶಸ್ಥರಿಂದ ಅರ್ಚಕನು ಅನುಮತಿಯನ್ನು ಪಡೆಯುತ್ತಾನೆ ಮತ್ತು ತನ್ನ ಕರ್ತವ್ಯ ನಿರ್ವಹಿಸುತ್ತಾನೆ. ಇದು ಹಿಂದಿನಿಂದ ನಡೆದು ಬಂದಿರುವ ಪದ್ಧತಿಯಾಗಿದೆ. ಒಂದು ವೇಳೆ ಆತನು ಶ್ರೀ ಪದ್ಮನಾಭನ ಸೇವೆಯನ್ನು ಬಿಡಲು ಇಚ್ಛಿಸಿದಲ್ಲಿ, ಆತನು ಬೇರೆ ಯಾವುದೇ ದೇವಾಲಯದಲ್ಲಿ ಪೂಜಾಕಾರ್ಯವನ್ನು ಮಾಡುವಂತಿಲ್ಲ. ಶ್ರೀ ಪದ್ಮನಾಭನ ಸೇವೆ ಮಾಡುವುದೇ ಅಂತಿಮವಾದದ್ದು ಎಂದು ಪರಿಗಣಿಸಲಾಗಿದೆ. ನಂಬಿ ಅರ್ಚಕನು ನಂಬಿ ಮಠದಲ್ಲಿ ನೆಲೆಸತಕ್ಕದ್ದು ಮತ್ತು ಆತನ ಅಧಿಕಾರಾವಧಿಯಲ್ಲಿ ಸಂಪೂರ್ಣ ಬ್ರಹ್ಮಚರ್ಯವನ್ನು ಪಾಲಿಸತಕ್ಕದ್ದು. ಆತನ ಚಲನವಲನಗಳು ಮಠ ಮತ್ತು ದೇವಾಲಯಗಳ ನಡುವೆ ಸೀಮಿತವಾಗಿರುತ್ತವೆ. ದೀಪದಿಂದ ಕೂಡಿದ ಸಹಾಯಕನು ಆತನ ಆಗಮನವನ್ನು ಸಾರುತ್ತಾ ಆತನ ಮುಂದೆ ನಡೆಯುತ್ತಾನೆ. ಇದು ಆತನಿಗೆ ನೀಡಲ್ಪಡುವ ಗೌರವವಾಗಿದೆ.
ಸಂಕೀರ್ಣದಲ್ಲಿರುವ ಇತರ ದೇವಾಲಯಗಳು:
ನರಸಿಂಹ ದೇವಾಲಯ:
ಎಲ್ಲ ಸಮಯಗಳಲ್ಲಿಯೂ ಕೇರಳದ ಜನರಿಗೆ ಪ್ರೀತಿಪಾತ್ರವಾದ ಈ ತೀರ್ಥಕ್ಷೇತ್ರವು ಶ್ರೀಪದ್ಮನಾಭನ ಪವಿತ್ರಸ್ಥಾನದ ಅನಂತರದಲ್ಲಿದೆ. ಇಲ್ಲಿನ ನರಸಿಂಹನ ವಿಗ್ರಹವು ಅತ್ಯಂತ ಸುಂದರವಾಗಿದೆ ಮತ್ತು ಉಗ್ರವಾಗಿದೆ. ಒಮ್ಮೊಮ್ಮೆ ಈ ಪವಿತ್ರಸ್ಥಾನದಿಂದ ಸಿಂಹದ ಗರ್ಜನೆಯು ಕೇಳಿಬಂದಿದ್ದಿದೆ. ಆತನ ಕೋಪವನ್ನು ಶಾಂತಗೊಳಿಸಲು ಆ ದೇವಾಲಯವು ತೆರೆದಿದ್ದಾಗಲೆಲ್ಲ ರಾಮಾಯಣವು ಪಠಿಸಲ್ಪಡುತ್ತಿರುತ್ತದೆ. ಈ ನರಸಿಂಹನು ವಿಶೇಷವಾದ ತೇಜಸ್ಸನ್ನು ಹೊಂದಿದ್ದಾನೆ ಮತ್ತು ನೀವು ಯಾವಾಗ ಅವನ ಮುಂದೆ ನಿಲ್ಲುತ್ತೀರೋ ಆ ತೇಜಸ್ಸು ನಿಮ್ಮನ್ನು ಸುತ್ತುವರಿಯುತ್ತದೆ. ಉಳಿದ ಪವಿತ್ರಸ್ಥಾನಗಳ ಸೇವೆ ಮಾಡಿದ ಅನಂತರದಲ್ಲಿ ಮಾತ್ರ ಅರ್ಚಕರು ನರಸಿಂಹನಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಈ ನರಸಿಂಹನು ದೇವಾಲಯದ ರಕ್ಷಕನಾಗಿದ್ದಾನೆ ಎಂದು ಹೇಳಲ್ಪಡುತ್ತದೆ ಮತ್ತು ಅನೇಕ ಅಪಾಯಗಳಿಂದ ದೇವಾಲಯವನ್ನು ಆಶ್ಚರ್ಯಕರ ರೀತಿಯಲ್ಲಿ ರಕ್ಷಿಸಿರುವುದೂ ಉಂಟು.
ಶ್ರೀ ಕೃಷ್ಣ ದೇವಾಲಯ:
ಇನ್ನೊಂದು ದೇವಾಲಯ ಶ್ರೀ ಕೃಷ್ಣನದ್ದಾಗಿದೆ. ಇದು ಅತ್ಯಂತ ಸುಂದರವಾಗಿದೆ. ಇದರಲ್ಲಿರುವ ಶ್ರೀ ಕೃಷ್ಣ ತುಂಬಾ ಸುಂದರನಾಗಿದ್ದಾನೆ ಮತ್ತು ಆತನ ಕೈಯಲ್ಲಿ ಬೆಣ್ಣೆ ಹಿಡಿದಿರುವುದನ್ನು ಕಾಣಬಹುದಾಗಿದೆ. ಈ ದೇವಾಲಯದ ಮುಂದಿರುವ ಜಪಮಂಟಪದಲ್ಲಿ ಮನೋಹರವಾದ ಚಿತ್ರಗಳನ್ನು ಕೆತ್ತಿದ್ದಾರೆ.
ವರಾಹ ದೇವಾಲಯ:
ಈ ದೇವಾಲಯ ವರಾಹಮೂರ್ತಿಗೆ ಸೇರಿದ್ದಾಗಿದೆ. ಇದು ದೇವಾಲಯಗಳ ಸಂಕೀರ್ಣದ ಹೊರಗಡೆಯಲ್ಲಿದೆ. ಆತನ ತೊಡೆಯ ಮೇಲೆ ಲಕ್ಷ್ಮಿಯು ಕುಳಿತಿರುವುದನ್ನು ಕಾಣಬಹುದು. ಈ ದೇವಾಲಯದಲ್ಲಿ ಅತ್ಯಂತ ಸ್ವಚ್ಛತೆ ಮತ್ತು ಕಟ್ಟುನಿಟ್ಟನ್ನು ಪಾಲಿಸುತ್ತಾರೆ.
ಹಬ್ಬಗಳು:
ರಾಜವೈಭವದ ಆಶ್ರಯ ಮತ್ತು ಭಕ್ತಜನರ ಸಹಕಾರದೊಂದಿಗೆ ಈ ದೇವಾಲಯದಲ್ಲಿ ಅನೇಕ ಹಬ್ಬಗಳನ್ನು ಆಚರಿಸುತ್ತಾರೆ. ಅವೆಲ್ಲವನ್ನೂ ಅತ್ಯಂತ ಜಾಗರೂಕತೆಯಿಂದ ಆಚರಿಸುತ್ತಾರೆ. ಅಂಥ ಒಂದು ಹಬ್ಬ ಐಪಸಿ ಹಬ್ಬ ಅಥವಾ ಶ್ರೀ ಪದ್ಮನಾಭನ ರಾಜವೈಭವದ ಬೇಟೆಯ ಹಬ್ಬ.
ಪರಮೋಚ್ಚ ದೇವನಿಂದ ಬೇಟೆಯಾಡುವಿಕೆಯನ್ನು ಈ ಹಬ್ಬದಲ್ಲಿ ಆಚರಿಸಲಾಗುತ್ತದೆ. ಅನೇಕ ಹೂ ಮಾಲೆಗಳಿಂದ ಅಲಂಕೃತವಾದ ಮೂರು ಪಲ್ಲಕ್ಕಿಗಳಲ್ಲಿ ಶ್ರೀ ಪದ್ಮನಾಭ ಸ್ವಾಮಿ, ಶ್ರೀ ನರಸಿಂಹ ಸ್ವಾಮಿ ಮತ್ತು ಶ್ರೀ ಕೃಷ್ಣರನ್ನು ಬರಮಾಡಿಕೊಳ್ಳಲಾಗುತ್ತದೆ. ದೇವರು ಚಿನ್ನ ಮತ್ತು ವಜ್ರಗಳಿಂದ ಅಲಂಕರಿಸಲ್ಪಟ್ಟ ಗರುಡನ ಮೇಲೆ ಕುಳಿತಿರುವುದನ್ನು ಕಾಣಬಹುದಾಗಿದೆ. ವರಾಹದೇವನನ್ನು ಆನೆಯ ಮೇಲೆ ಬರಮಾಡಿಕೊಳ್ಳಲಾಗುತ್ತದೆ.
ತನ್ನ ಸಾಂಪ್ರದಾಯಿಕ ನಿಲುವಂಗಿ ಮತ್ತು ಕತ್ತಿಯನ್ನು ಧರಿಸಿರುವ ರಾಜನ ಮುಂದಾಳತ್ವದಲ್ಲಿ ಮೆರವಣಿಗೆಯು ಹೊರಡುತ್ತದೆ. ರಾಜಸ್ವಕ್ಕೆ ಸೇರಿದ ಉಳಿದೆಲ್ಲ ಸದಸ್ಯರು ಆತನನ್ನು ಅನುಸರಿಸುತ್ತಾರೆ. ಬಂದೂಕು ಮತ್ತು ಕತ್ತಿಗಳನ್ನು ಧರಿಸಿರುವ ಆರಕ್ಷಕರ ಕಾವಲಿನಲ್ಲಿ ಇದು ಮುಂದುವರಿಯುತ್ತದೆ. ಇದು ಬೇಟೆಗಾಗಿ ಹೊರಡುವುದಾದ್ದರಿಂದ ಈ ಸಮಯದಲ್ಲಿ ಯಾವುದೇ ಸಂಗೀತ ವಾದ್ಯ ಪರಿಕರಗಳನ್ನು ನುಡಿಸುವುದಿಲ್ಲ. ರಾಜನು ಸಾಂಕೇತಿಕವಾಗಿ ದೇವನ ಪರವಾಗಿ ಬೇಟೆಯಾಡುತ್ತಾನೆ.
ಅನಂತರದಲ್ಲಿ ಮೆರವಣಿಗೆಯು ಅನೇಕ ಸಂಗೀತ ವಾದ್ಯಗಳ ಹಿಮ್ಮೇಳದಲ್ಲಿ ದೇವಾಲಯಕ್ಕೆ ಹಿಂದಿರುಗುತ್ತದೆ. ದೇವರೆಲ್ಲ ದೇವಾಲಯವನ್ನು ತಲಪಿದಾಗ ಆರಕ್ಷಕರಿಂದ 22 ಬಾರಿ ಬಂದೂಕಿನಿಂದ ಗುಂಡು ಹಾರಿಸುವ ಮೂಲಕ ಗೌರವಾರ್ಪಣೆಯು ಸಲ್ಲಿಸಲ್ಪಡುತ್ತದೆ. ಶ್ರೀ ಪದ್ಮನಾಭ ಸ್ವಾಮಿ, ಶ್ರೀ ವರಾಹ ಸ್ವಾಮಿ ಮತ್ತು ಶ್ರೀ ಕೃಷ್ಣರಿಗೆ ವಿಸ್ತಾರವಾದ ಆರತಿ ಸೇವೆಯನ್ನು ಸಲ್ಲಿಸಲಾಗುತ್ತದೆ. ದೇವರ ವಿಶ್ರಾಂತಿಗೋಸ್ಕರ ಹೂವುಗಳಿಂದ ಮಾಡಲ್ಪಟ್ಟಿರುವ ಛತ್ರದಿಂದ ಕೂಡಿದ, ಸುಂದರವಾದ ಮೇಲಿನ ಆವರಣವನ್ನು ಹೊಂದಿರುವ, ತಲೆದಿಂಬುಗಳಿಂದ ಕೂಡಿರುವ, ಮಖಮಲ್ಲಿನಿಂದ ಹೊದೆಸಲ್ಪಟ್ಟ ಸೊಗಸಾದ ಹತ್ತಿಯ ಹಾಸಿಗೆಯನ್ನು ಮಾಡಿರುತ್ತಾರೆ. ಇದು ಕಣ್ಣಿಗೊಂದು ಹಬ್ಬವನ್ನು ಉಂಟುಮಾಡುತ್ತದೆ.
ಮುಂದಿನ ಸಾಯಂಕಾಲ ಈ ದೇವರನ್ನು ಹತ್ತಿರದಲ್ಲಿರುವ ಸಮುದ್ರತೀರಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ ಮತ್ತು ಅನೇಕ ಬ್ರಾಹ್ಮಣರು ಮಾಡುತ್ತಿರುವ ವೈದಿಕ ಮಂತ್ರಗಳ ಪಠನದೊಂದಿಗೆ ಸಮುದ್ರದಲ್ಲಿ ಪವಿತ್ರವಾದ ಮಜ್ಜನವನ್ನು ಮಾಡಿಸುತ್ತಾರೆ. ಇಲ್ಲಿಯೂ ರಾಜನು ತನ್ನ ಕುಟುಂಬದ ಉಳಿದ ಪುರುಷ ಸದಸ್ಯರಿಂದ ಕೂಡಿದ ಮೆರವಣಿಗೆಯಲ್ಲಿ ತನ್ನ ಸಾಂಪ್ರದಾಯಿಕ ನಿಲುವಂಗಿ ಮತ್ತು ಕತ್ತಿಯೊಂದಿಗೆ ಬರುತ್ತಾನೆ. ಭಾರತದಲ್ಲಿ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಈ ದೇವಾಲಯಕ್ಕೆ ಈ ಹಬ್ಬಗಳು ಮೀಸಲಾಗಿವೆ.
ದೇವಾಲಯದಲ್ಲಿ ಅನೇಕ ಸಮಯಗಳಲ್ಲಿ “ವಿಷ್ಣುಸಹಸ್ರನಾಮ” ವಿಷ್ಣುವಿನ ಪವಿತ್ರ ನಾಮಸಂಕೀರ್ತನೆಯು ನಡೆಯುತ್ತಿರುತ್ತದೆ. ಶ್ರೀ ರಾಮಾಯಣ ಮತ್ತು ಶ್ರೀ ಮದ್ಭಾಗವತಗಳ ಪಠನವು ಈ ದೇವಾಲಯದಲ್ಲಿ ನಿತ್ಯ ನಡೆಯುವ ಕಾರ್ಯಗಳಲ್ಲೊಂದಾಗಿದೆ.
ದೇವಾಲಯವನ್ನು ತಲಪುವ ಬಗೆ:
ತಿರುವನಂತಪುರವು ರೈಲುಮಾರ್ಗ, ವಾಯುಮಾರ್ಗ ಮತ್ತು ಭೂಮಾರ್ಗಗಳ ಸಂಪರ್ಕವನ್ನು ಹೊಂದಿದೆ. ದೇವಾಲಯವು ವಿಮಾನ ನಿಲ್ದಾಣದಿಂದ ಸುಮಾರು 5 ಕಿಲೊ ಮೀಟರ್ ದೂರದಲ್ಲಿ ನಗರದಲ್ಲಿಯೇ ಇದೆ.
ಉಳಿದ ಮಾಹಿತಿಗಳು:
ಈ ನಗರದಲ್ಲಿ ಅನೇಕ ವಸತಿ ವ್ಯವಸ್ಥೆಗಳಿವೆ. ದೇವಾಲಯದ ದರ್ಶನ ಸಮಯ: ಬೆಳಗ್ಗೆ 4:30 ರಿಂದ ಮಧ್ಯಾಹ್ನ 12:30 ರ ವರೆಗೆ ಮತ್ತು ಸಾಯಂಕಾಲ 5:15 ರಿಂದ 7:30 ರ ವರೆಗೆ. ಈ ದೇವಾಲಯವನ್ನು ಸಂದರ್ಶಿಸಲು ಬಯಸುವ ಭಕ್ತರು ಕಡ್ಡಾಯವಾಗಿ ಅಲ್ಲಿನ ವಸ್ತ್ರಧಾರಣ ನಿಯಮವನ್ನು ಪಾಲಿಸಲೇಬೇಕು. ಪುರುಷರಿಗೆ ಪಂಚೆ, ಸ್ತ್ರೀಯರಿಗೆ ಸೀರೆ ಕಡ್ಡಾಯ.