ಆಂಡಾಳ್-ಅನನ್ಯ ಭಕ್ತಿ ಭಂಡಾರ

– ಗಾಯಿತ್ರಿ ದೇವಿ

ತಮಿಳುನಾಡಿನ 12 ಮಹಾನ್ ಭಕ್ತರಲ್ಲಿ (ಆಳ್ವಾರ್) ಒಬ್ಬರಾದ ಆಂಡಾಳ್ ಹುಟ್ಟಿದ್ದು ಗೋದಾದೇವಿ ಎಂದು. ಪರಮ ಭಕ್ತರಾದ ವಿಷ್ಣುಚಿತ್ತರ ದತ್ತು ಪುತ್ರಿ. ಆಂಡಾಳ್ ರಚಿಸಿರುವ ತಿರುಪ್ಪಾವೈ ಅನ್ನು ಎಲ್ಲ ಕಡೆ ಈ ಮಾರ್ಗಳಿ ಮಾಸದಲ್ಲಿ (ಡಿಸೆಂಬರ್-ಜನವರಿ) ಹಾಡಲಾಗುತ್ತಿದೆ ಮತ್ತು ಅದನ್ನು ಕುರಿತ ಉಪನ್ಯಾಸಗಳಾಗುತ್ತಿವೆ.

ವಿಷ್ಣುವಿನ ಶ್ರೇಷ್ಠ ಭಕ್ತರಾದ ವಿಷ್ಣುಚಿತ್ತರು (ಅವರೇ ಪೆರಿಯಾಳ್ವಾರ್) ಮಧುರೈ ಸಮೀಪದ ಶ್ರೀ ವಿಲ್ಲಿಪುತ್ತೂರ್‌ನಲ್ಲಿ ವಾಸವಾಗಿದ್ದರು. ತೋಟದಲ್ಲಿ ಪುಷ್ಪವನ್ನು ಸಂಗ್ರಹಿಸಿ, ಮಾಲೆ ಕಟ್ಟಿ ಅದನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುವುದು ಅವರ ನಿತ್ಯ ಸೇವೆಯಾಗಿತ್ತು. ಹೀಗೆ ಹೂವು ಸಂಗ್ರಹಿಸುತ್ತಿದ್ದಾಗ, ಒಂದು ದಿನ ಅವರು ತುಳಸಿ ಗಿಡದ ಕೆಳಗೆ ಹೆಣ್ಣು ಶಿಶುವನ್ನು ಕಂಡರು. ಅವರಿಗೆ ಸಾಕ್ಷಾತ್ ಲಕ್ಷ್ಮಿಯನ್ನು ಕಂಡಂತಾಯಿತು. ಇದು ಭಗವಂತನ ಕೃಪೆ ಎಂದು ಭಾವಿಸಿದ ಅವರು ಮಗುವನ್ನು ತಮ್ಮ ಮನೆಗೆ ಕರೆದೊಯ್ದರು. ಅವಳಿಗೆ ಗೋದಾದೇವಿ, ಗೋಧೈ (ಭೂತಾಯಿಯ ಉಡುಗೊರೆ) ಎಂದು ನಾಮಕರಣ ಮಾಡಿದರು.

ಆಂಡಾಳ್ ಈಗ ತಮಿಳಿನ ಶ್ರೇಷ್ಠ ಕವಿ-ಸಂತರಲ್ಲಿ ಒಬ್ಬಳಾಗಿದ್ದಾಳೆ. ಅವಳು ಭೂಮಿದೇವಿಯ (ಭೂದೇವಿ) ಅವತಾರವೆಂದು ಪರಂಪರೆಯು ಹೇಳುತ್ತದೆ. ಪ್ರೀತಿ, ಶ್ರದ್ಧೆ ಮತ್ತು ಅರ್ಪಣಾಭಾವವಿದ್ದರೆ ಭಗವಂತನನ್ನು ತಲಪುವುದು ಸಾಧ್ಯ ಎನ್ನುವುದನ್ನು ಅವಳು ತೋರಿಸಿಕೊಟ್ಟಿದ್ದಾಳೆ. ಎಲ್ಲ ಶ್ರೀ ವೈಷ್ಣವ ಮಂದಿರಗಳಲ್ಲಿ ಆಂಡಾಳ್ ವಿಗ್ರಹವಿದೆ ಮತ್ತು ಆರಾಧಿಸಲಾಗುತ್ತಿದೆ.

ಗೋಧೆಯು ಪ್ರೀತಿ ಮತ್ತು ಭಕ್ತಿ, ಧರ್ಮನಿಷ್ಠೆಯ ವಾತಾವರಣದಲ್ಲಿ ಬೆಳೆದಳು. ವಿಷ್ಣುಚಿತ್ತರು ತಮ್ಮ ಪ್ರೀತಿಯ ಕೃಷ್ಣನನ್ನು ಕುರಿತು ಹಾಡುತ್ತಿದ್ದರು. ತಮಗೆ ತಿಳಿದಿದ್ದ ಎಲ್ಲ ದಿವ್ಯ ಕಥೆ ಮತ್ತು ತತ್ತ್ವಜ್ಞಾನವನ್ನು ಅವಳಿಗೆ ಹೇಳುತ್ತಿದ್ದರು. ಭಗವಂತನ ಬಗೆಗೆ ವಿಷ್ಣುಚಿತ್ತರಿಗಿದ್ದ ಪ್ರೀತಿಯು ಅವರ ಮಗಳಲ್ಲಿ ಇನ್ನಷ್ಟು ತೀವ್ರವಾಯಿತು. ಅತಿ ಶೀಘ್ರದಲ್ಲಿ ಅವಳು ಕೃಷ್ಣನನ್ನು ಪ್ರೇಮಿಸತೊಡಗಿದಳು. ತಾನು ವೃಂದಾವನದ ಕಣ್ಮಣಿ ಕೃಷ್ಣನನ್ನೇ ವಿವಾಹವಾಗುವುದಾಗಿ ಅವಳು ಬಾಲಕಿಯಾಗಿದ್ದಾಗಲೇ ನಿರ್ಧರಿಸಿಬಿಟ್ಟಿದ್ಧಳು. ಅಂತಿಮವಾಗಿ ಅದು ಶ್ರೀ ರಂಗನಾಥನನ್ನೇ ವಿವಾಹವಾಗಬೇಕೆನ್ನುವ ಅಪೇಕ್ಷೆಯಲ್ಲಿ ರೂಪಾಂತರಗೊಂಡಿತು!

ಮಾಲೆಯನ್ನೇ ಹಾಕಿಕೊಂಡಳು

ದೊಡ್ಡವಳಾಗಿ ಬೆಳೆಯುತ್ತ ಶ್ರೀ ರಂಗನಾಥನಲ್ಲಿನ ಅವಳ ಪ್ರೀತಿ ಇನ್ನೂ ಹೆಚ್ಚು ಗಾಢವಾಯಿತು. ಅವಳ ಈ ಭಗವತ್ ಪ್ರೇಮವು ಎಷ್ಟಿತ್ತೆಂದರೆ ಅವಳು ಭಗವಂತನ ವಧುವಾಗಿ, ಅವನ ಪ್ರೀತಿಪಾತ್ರಳ ಪಾತ್ರವನ್ನು ನಿರ್ವಹಿಸುವುದು, ಆನಂದಿಸುವುದು ಇವೆಲ್ಲ ಹೇಗಿರಬಹುದೆಂದು ಕಲ್ಪಿಸಿಕೊಳ್ಳುತ್ತಿದ್ದಳು. ಅವಳ ತಂದೆಗೆ ಗೊತ್ತಿಲ್ಲದಂತೆ ಅವಳು ಪ್ರತಿದಿನ ತನ್ನ ತಂದೆ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲು ಸಿದ್ಧಮಾಡಿ ಇಡುತ್ತಿದ್ದ ಪುಷ್ಪ ಮಾಲೆಯನ್ನು ತಾನು ಹಾಕಿಕೊಂಡು, ಕನ್ನಡಿಯಲ್ಲಿ ನೋಡಿ ಆನಂದಿಸಿಕೊಂಡು ಅನಂತರ ಅದನ್ನು ಪುನಃ ಬುಟ್ಟಿಯಲ್ಲಿ ಇಟ್ಟುಬಿಡುತ್ತಿದ್ದಳು.

ಒಂದು ದಿನ ವಿಷ್ಣುಚಿತ್ತರು ಪುಷ್ಪಮಾಲೆಯಲ್ಲಿ ಗೋಧೆಯ ಕೂದಲಿನ ಎಳೆಯನ್ನು ಕಂಡರು. ದಿಗ್ಭ್ರೆಮೆಗೊಂಡ ಅವರು ಭಗವಂತನಿಗೆ ಅನ್ಯರು ಬಳಸಿದ್ದ ಹಾರವನ್ನು ಅರ್ಪಿಸಿದ್ದಕ್ಕಾಗಿ ಸಂತಾಪಪಟ್ಟರು. ಅವರು ಗೋಧೆಯನ್ನು ತರಾಟೆಗೆ ತೆಗೆದುಕೊಂಡರು. ಅವರು ಹೊಸ ಮಾಲೆಯನ್ನು ಕಟ್ಟಿ ಭಗವಂತನಿಗೆ ಅರ್ಪಿಸಿದರು. ಮತ್ತು ಕ್ಷಮೆ ಯಾಚಿಸಿದರು.
ಅಂದು ರಾತ್ರಿ ಭಗವಂತನು ವಿಷ್ಣುಚಿತ್ತರ ಕನಸಿನಲ್ಲಿ ಕಾಣಿಸಿಕೊಂಡನು. ಗೋಧೆಯ ಮಾಲೆಯನ್ನು ತನಗೆ ನೀಡುವ ಬದಲು ಅದನ್ನೇಕೆ ದೂರ ಹಾಕಿದ್ದು ಎಂದು ಪ್ರಭು ಪ್ರಶ್ನಿಸಿದನು. ಗೋಧೆ ಹಾಕಿಕೊಂಡಿದ್ದ ಮಾಲೆಯೇ ಬೇಕು ಎಂದು ಭಗವಂತನು ಹೇಳಿದನು. ಭಾವೋದ್ರೇಕಕ್ಕೆ ಒಳಗಾದ ವಿಷ್ಣುಚಿತ್ತರು ಎಚ್ಚರಗೊಂಡರು ಮತ್ತು ಆನಂದ, ಪಶ್ಚಾತ್ತಾಪದಿಂದ ಕಣ್ಣೀರು ಸುರಿಸಿದರು. ಮಗಳ ಭಗವತ್ ಪ್ರೇಮವು ಗಾಢ ಮತ್ತು ಪರಿಶುದ್ಧ ಎನ್ನುವುದನ್ನು ತಾನು ಅರ್ಥಮಾಡಿಕೊಳ್ಳಲಿಲ್ಲ ಎನ್ನುವುದು ಅವರಿಗೆ ಅರಿವಾಯಿತು. ಅವಳ ಆಧ್ಯಾತ್ಮಿಕ ಶ್ರೇಷ್ಠತೆ ಎಷ್ಟಿತ್ತೆಂದರೆ ಭಗವಂತನೇ ಅವಳನ್ನು ಬಯಸಿದ್ದನು. ಅಂದಿನಿಂದ ಅವಳು ಆಂಡಾಳ್ ಎಂದು ಪ್ರಸಿದ್ಧಳಾದಳು. ಅಂದರೆ ಭಗವಂತನನ್ನೇ “ಆಳುವ” ಬಾಲಕಿ!

ವಿವಾಹ ಪ್ರಸ್ತಾಪ

ಆಂಡಾಳ್ ಸುಂದರ ಯುವತಿಯಾಗಿ ವಿಕಾಸಗೊಂಡಳು. ವಿಷ್ಣುಚಿತ್ತರು ವಿವಾಹದ ಬಗೆಗೆ ಮಗಳಲ್ಲಿ ಪ್ರಸ್ತಾಪಿಸಿದಾಗ, ಅವಳು ತಾನು ಶ್ರೀರಂಗದ ರಂಗನಾಥನನ್ನು ಬಿಟ್ಟರೆ ಬೇರೆ ಯಾರನ್ನೂ ಮದುವೆಯಾಗುವುದಿಲ್ಲ ಎಂದು ಬಿಟ್ಟಳು.

ಕೃಷ್ಣನಿಗಾಗಿನ ಅವಳ ಗಾಢವಾದ ಭಕ್ತಿ ಮತ್ತು ಪ್ರೇಮದಿಂದ ಸಂಪ್ರೀತನಾದ ಶ್ರೀರಂಗನಾಥನ ರೂಪದ ವಿಷ್ಣುವು (ಕೃಷ್ಣ) ಪುನಃ ತನ್ನ ಅಪೇಕ್ಷೆಯನ್ನು ವಿಷ್ಣುಚಿತ್ತರ ಕನಸಿನಲ್ಲಿ ವ್ಯಕ್ತಪಡಿಸಿದನು. ಗೋಧೆಯನ್ನು ವಧುವಾಗಿ ತನ್ನ ಮಂದಿರಕ್ಕೆ ಕಳುಹಿಸಬೇಕೆಂದು ಸೂಚಿಸಿದನು. ಅದೇ ರೀತಿ ಮಂದಿರದ ಅರ್ಚಕರ ಕನಸಿನಲ್ಲಿ ಕಾಣಿಸಿಕೊಂಡ ಶ್ರೀ ರಂಗನಾಥನು, ಆಂಡಾಳ್ ಅನ್ನು ಸ್ವಾಗತಿಸಲು ಸಿದ್ಧಮಾಡಿಕೊಳ್ಳಲು ತಿಳಿಸಿದನು. ವಿಷ್ಣುಚಿತ್ತರಿಗೆ ಮಗಳ ಜೀವನೋದ್ದೇಶ ಸಫಲವಾಗುತ್ತಿದೆ ಎಂದು ಆನಂದ ಮತ್ತು ಅವಳನ್ನು ಅಗಲಬೇಕಲ್ಲ ಎಂದು ದುಃಖ. ಅವರು ವಿವಾಹದ ಸಿದ್ಧತೆಗಳನ್ನು ಮಾಡಿದರು ಮತ್ತು ಅವಳು ಪಲ್ಲಕ್ಕಿಯಲ್ಲಿ ಶ್ರೀರಂಗಂಗೆ ತೆರಳಲು ವ್ಯವಸ್ಥೆ ಮಾಡಿದರು.
ಮದುವೆಯ ದಿಬ್ಬಣವು ಶ್ರೀರಂಗಂನಲ್ಲಿ ಶ್ರೀ ರಂಗನಾಥ ಮಂದಿರವನ್ನು ತಲಪಿದಾಗ, ಆಂಡಾಳ್ಗೆ ತನ್ನ ಭಾವೋದ್ರೇಕವನ್ನು ತಡೆದುಕೊಳ್ಳಲಾಗಲಿಲ್ಲ. ಅವಳು ಪಲ್ಲಕ್ಕಿಯಿಂದ ಕೆಳಗೆ ಹಾರಿ ಗರ್ಭಗುಡಿಯೊಳಗೆ ಓಡಿಹೋದಳು. ಅವಳು ಶ್ರೀ ರಂಗನಾಥನನ್ನು ಆಲಿಂಗಿಸಿಕೊಂಡಳು ಮತ್ತು ವೈಭವದಿಂದ ತನ್ನ ಸ್ವಾಮಿಯಲ್ಲಿ ಐಕ್ಯವಾದಳು. ಆಗ ಅವಳಿಗೆ ಕೇವಲ 15 ವರ್ಷ ವಯಸ್ಸು.

ಭಗವಂತನನ್ನೇ ಅಳಿಯನನ್ನಾಗಿ ಪಡೆದ ವಿಷ್ಣುಚಿತ್ತರು ತಮ್ಮ ಕೊನೆಯ ಉಸಿರಿರುವವರೆಗೂ ಅವನ ಸೇವೆಯಲ್ಲಿ ನಿರತರಾಗಿದ್ದರು.

ಸಾಹಿತ್ಯಿಕ ಕೃತಿಗಳು

ಆಂಡಾಳ್ ರಚನೆಯ, ತಮಿಳಿನ ಅತ್ಯಂತ ಜನಪ್ರಿಯ ಮತ್ತು ಭಕ್ತಿಭಂಡಾರವಾದ ತಿರುಪ್ಪಾವೈನಲ್ಲಿ ಆಂಡಾಳ್ ಶ್ರೀ ಕೃಷ್ಣನಲ್ಲಿ ಭಕ್ತಿಯ ಧಾರೆಯನ್ನೇ ಹರಿಸಿದ್ದಾಳೆ. 30 ಪಾಶುರಗಳ ತಿರುಪ್ಪಾವೈ ಕೃಷ್ಣನತ್ತ ಸಾಗುವ ಮಾರ್ಗವನ್ನು ಕಂಡುಕೊಳ್ಳುತ್ತದೆ. ತಿರುಪ್ಪಾವೈ ವೇದಗಳ ರಸಾಮೃತ ಮತ್ತು ಪರಿಶುದ್ಧವಾದ ಪ್ರೀತಿ, ಭಕ್ತಿ, ಶ್ರದ್ಧೆ, ಏಕಾಗ್ರ ಗುರಿ, ಮತ್ತು ಬದುಕಿನ ಅಂತಿಮ ಗುರಿ/ಉದ್ದೇಶವನ್ನು ಬೋಧಿಸುತ್ತದೆ.

ಈ ಮಾರ್ಗಳಿ ಮಾಸದಲ್ಲಿ (ಡಿಸೆಂಬರ್-ಜನವರಿ) ಎಲ್ಲ ಕಡೆ ತಿರುಪ್ಪಾವೈನ 30 ಪಾಶುರಗಳನ್ನು ದಿನಕ್ಕೊಂದರಂತೆ ಹಾಡಲಾಗುವುದು ಮತ್ತು ಅದನ್ನು ಕುರಿತ ಉಪನ್ಯಾಸ ನಡೆಯುತ್ತದೆ.

ಆಂಡಾಳ್ 143 ಪಾಶುರಗಳ ನಾಚಿಯಾರ್ ತಿರುಮೊಳಿ ಎನ್ನುವ ಭಕ್ತಿ ಗೀತಾಗುಚ್ಛ ಮಾಲೆಯನ್ನೂ ರಚಿಸಿದ್ದಾಳೆ. ಇದರಲ್ಲಿ ಅವಳು ಭಗವಂತನಲ್ಲಿ ಲೀನವಾಗುವ ಉತ್ಕಟ ಕಾತರ ಮತ್ತು ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದಾಳೆ.

ಫ್ರೇಂಚ್‌ನಲ್ಲಿ ತಿರುಪ್ಪಾವೈ : ವಸುಮತಿ ಭದ್ರೀನಾಥ್ ಅವರು ಆಂಡಾಳ್ ರಚಿಸಿರುವ ಪಾಶುರಗಳನ್ನು ಫ್ರೆಂಚ್ ಭಾಷೆಗೆ ಅನುವಾದಿಸಿದ್ದಾರೆ.

ಈ ಲೇಖನ ಶೇರ್ ಮಾಡಿ