ಹಿಂದೂ ಎನ್ನುವ ಹೆಸರಿನ ಸುತ್ತ

ಮೂಲ ಲೇಖಕರು: ಶ್ರೀ ನಂದನಂದನ ದಾಸ

ಅನುವಾದ: ಗಾಯತ್ರಿ ದೇವಿ

“ಹಿಂದೂ” ಎನ್ನುವ ಶಬ್ದವು ಸಂಸ್ಕೃತ ಕೂಡ ಅಲ್ಲ! ಇದು ಯಾವುದೇ ವೈದಿಕ ಸಾಹಿತ್ಯದಲ್ಲಿ ಕಾಣುವುದಿಲ್ಲ ಎಂದು ವಿದ್ವಾಂಸರು ಹೇಳಿದ್ದಾರೆ. ಆದುದರಿಂದ ಅಂತಹ ಹೆಸರು ವೈದಿಕ ಪಥ ಅಥವಾ ಸಂಸ್ಕೃತಿಯನ್ನು ಪ್ರತಿನಿಧಿಸುವುದು ಹೇಗೆ ಸಾಧ್ಯ? ಸಿಂಧೂ ನದಿಯ ಹೆಸರನ್ನು ಸರಿಯಾಗಿ ಉಚ್ಚರಿಸಲಾಗದ ಆಕ್ರಮಣಕಾರರು ಹಿಂದೂ ಪದವನ್ನು ಅಭಿವೃದ್ಧಿ ಪಡಿಸಿದರೆಂದು ವಿದ್ವಾಂಸರು ಹೇಳುತ್ತಾರೆ. ಸಂಸ್ಕೃತ ನಿಘಂಟು ರಚನೆಗಾರ ಸರ್‌‍ ಮೋನಿಯರ್‌‍ ವಿಲಿಯಮ್ಸ್‌‍ ಪ್ರಕಾರ, ಹಿಂದೂ ಅಥವಾ ಇಂಡಿಯಾ ಎನ್ನುವ ಪದಗಳಿಗೆ ದೇಶೀಯ ಮೂಲ ಕಾಣಸಿಗುವುದಿಲ್ಲ. ಮಹಾನ್‌‍ ನಾಯಕನೆಂದು ಹೆಸರಾದ ಅಲೆಕ್ಸಾಂಡರನು ಭಾರತದ ದಂಡಯಾತ್ರೆಯ ಸಮಯದಲ್ಲಿ ಸಿಂಧೂ ನದಿಗೆ ‘ಇಂದು’ ಎಂದು ಅದೇ ಮೊದಲ ಬಾರಿಗೆ ಪುನರ್‌‍ ನಾಮಕರಣ ಮಾಡಿದನಂತೆ. ಇದು ಇಂಡಸ್‌‍ ಎಂದು ಪ್ರಸಿದ್ಧಿಯಾಯಿತು. ಇಂಡಸ್‌‍ನ ಪೂರ್ವದ ಭೂಮಿಯನ್ನು ಅವನ ಮೆಸಿಡೋನಿಯನ್‌‍ ಸೈನ್ಯವು ಇಂಡಿಯಾ ಎಂದು ಕರೆಯಿತು. ಮುಖ್ಯವಾಗಿ ಬ್ರಿಟಿಷ್‌‍ ಆಡಳಿತ ಕಾಲದಲ್ಲಿ ಈ ಹೆಸರನ್ನು ಬಳಸಲಾಗುತ್ತಿತ್ತು. ಅನಂತರ ಅಫ್ಘಾನಿಸ್ಥಾನ ಮತ್ತು ಪರ್ಷಿಯಾದಂತಹ ಸ್ಥಳಗಳಿಂದ ಬಂದ ಮುಸ್ಲಿಂ ಆಕ್ರಮಣಕಾರರು ಸಿಂಧೂ ನದಿಯನ್ನು ಹಿಂದೂ ನದಿ ಎಂದು ಕರೆದರು. ಅದರಿಂದ ಹಿಂದೂಗಳೆಂಬ ಪದ ಉದ್ಭವಿಸಿತು.

ಅನಂತರ ಹಿಂದೂ, ಹಿಂದುಸ್ತಾನ ಪದ ಬಳಕೆ ಆರಂಭವಾಯಿತು. ಹೇಗೆ? ಸಿಂಧೂ ನದಿ ಇರುವ ಭಾರತದ ವಾಯುವ್ಯ ಪ್ರದೇಶದಲ್ಲಿ ವಾಸಿಸುವವರನ್ನು ವಿವರಿಸಲು ಹಿಂದೂ ಎನ್ನುವ ಹೆಸರನ್ನು ಬಳಸಲಾಯಿತು. ಅನಂತರ ಆ ಪ್ರದೇಶವನ್ನು ಹಿಂದುಸ್ತಾನ ಎಂದು ಕರೆಯಲಾಯಿತು. ಆದರೆ ಆ ಕಾಲದಲ್ಲಿ, ಆ ಪ್ರದೇಶದ ಜನರು ತಮ್ಮನ್ನು “ಹಿಂದೂ” ಎಂದು ಕರೆದುಕೊಳ್ಳಲಿಲ್ಲ. ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರನ್ನು ಮತ್ತು ಅವರ ಧರ್ಮವನ್ನು ಗುರುತಿಸಲು ಮುಸ್ಲಿಂ ಪರದೇಶಿಯರು ಆ ಪದವನ್ನು ಬಳಸುತ್ತಿದ್ದರು. ಅನಂತರ ಭಾರತೀಯರೂ ಆಗಿನ ಅಧಿಕಾರಸ್ಥರ ಸೂಚನೆಗಳಂತೆ ಹಿಂದೂ, ಹಿಂದುಸ್ತಾನ ಎನ್ನುವ ಪದಗಳನ್ನು ಬಳಸತೊಡಗಿದರು.

ಭಾರತದ ಆಧ್ಯಾತ್ಮಿಕ ಪಥವನ್ನು ಅರ್ಥಮಾಡಿಕೊಳ್ಳಲು “ಹಿಂದೂ” ಎನ್ನುವ ಹೆಸರು ಗೊಂದಲ ಸೃಷ್ಟಿಸಿದೆ ಎನ್ನುವ ಅಭಿಪ್ರಾಯವೂ ಇದೆ. ಆರ್. ಎನ್. ಸೂರ್ಯನಾರಾಯಣ್‌‍ ಅವರು ಸಾರ್ವತ್ರಿಕ ಧರ್ಮ ಎನ್ನುವ ಪುಸ್ತಕ (1952ರಲ್ಲಿ ಮೈಸೂರಿನಲ್ಲಿ ಪ್ರಕಟಿತ) ಬರೆದಿದ್ದಾರೆ. ಅದರಲ್ಲಿ ಅವರು, “ಶತ ಶತಮಾನಗಳ ನಮ್ಮ ದೇಶದ ರಾಜಕೀಯ ಪರಿಸ್ಥಿತಿಯಿಂದಾಗಿ ಈ ದೇಶ ಮತ್ತು ಅದರ ಧರ್ಮವನ್ನು ಅರ್ಥಮಾಡಿಕೊಳ್ಳುವುದು ಕಷ್ಟವೆನ್ನಿಸಿಬಿಟ್ಟಿದೆ. ಬೃಹತ್‌‍ ರಾಷ್ಟ್ರವಾದ ಬ್ರಹ್ಮನ್‌‍ಭೂಮಿಯ ನಿಜವಾದ ಹೆಸರನ್ನು ಶೋಧಿಸುವಲ್ಲಿ ಪಾಶ್ಚಿಮಾತ್ಯ ವಿದ್ವಾಂಸರೂ ಇತಿಹಾಸಕಾರರೂ ವಿಫಲರಾಗಿದ್ದಾರೆ. ಹೀಗಾಗಿ ಅದನ್ನು ಹಿಂದೂ ಎನ್ನುವ ಅರ್ಥಹೀನ ಪದದಿಂದ ಕರೆಯುವುದರಲ್ಲಿಯೇ ತೃಪ್ತರಾಗಿದ್ದಾರೆ. ವಿದೇಶೀ ಶೋಧವಾದ ಈ ಪದವನ್ನು ನಮ್ಮ ಸಂಸ್ಕೃತ ವಿದ್ವಾಂಸರು ಮತ್ತು ಗೌರವಾನ್ವಿತ ಆಚಾರ್ಯರು ತಮ್ಮ ಕೃತಿಗಳಲ್ಲಿ ಬಳಸಿಲ್ಲ.

ಮುಸ್ಲಿಂ ಆಕ್ರಮಣಕಾರರು ಅವಹೇಳನ ಮಾಡಲು ಹಿಂದೂ ಪದವನ್ನು ಬಳಸಿದ್ದರೆ? ಪರ್ಷಿಯನ್‌‍ ಭಾಷೆಯ ನಿಘಂಟು “ಲುಗೇತ್‌‍ ಎ ಕಿಶ್ವಾರಿ”ಯಲ್ಲಿ ಹಿಂದೂ ಪದಕ್ಕೆ ಚೋರ್‌‍ (ಚೋರ), ಡಾಕೂ (ಡಕಾಯಿತ), ರಹಸಾನ್‌‍ (ದರೋಡೆಕಾರ) ಮತ್ತು ಗುಲಾಂ (ಸೇವಕ) ಎಂದು ಅರ್ಥ ನೀಡಲಾಗಿದೆ. ಎಂತಹ ಅಪಮಾನವಲ್ಲವೇ?

ಮತ್ತೊಂದು ವಾದದ ಪ್ರಕಾರ, ಹಿಂದೂ ಎನ್ನುವ ಹೆಸರು ಸಿಂಧೂ ಎನ್ನುವ ಹೆಸರಿನಿಂದ ಬಂದದ್ದೇ ಅಲ್ಲ! ಹೈದರಾಬಾದಿನ ಎ. ಕೃಷ್ಣ ಕುಮಾರ್‌‍ ವಿವರಿಸುತ್ತಾರೆ, “ಈ (ಸಿಂದೂ ಹಿಂದೂ) ಅಭಿಪ್ರಾಯವನ್ನು ಒಪ್ಪಲಾಗದು. ಏಕೆಂದರೆ ನಾಗರಿಕತೆ ಮತ್ತು ಸಂಪತ್ತಿನ ದೃಷ್ಟಿಯಲ್ಲಿ ಭಾರತೀಯರು ಆ ಕಾಲದಲ್ಲಿಯೇ ವಿಶ್ವದ ಉನ್ನತ ಸ್ಥಾನದಲ್ಲಿದ್ದರು. ಹೀಗಾಗಿ ಅವರು ಅನಾಮಧೇಯರಾಗಿರುವುದು ಸಾಧ್ಯವಿರಲಿಲ್ಲ. ವಿದೇಶಿಯರು ಬಂದು ಪತ್ತೆ ಹಚ್ಚಿ, ಗುರುತಿಸಿ, ಹೆಸರಿಡಲು ಕಾಯುತ್ತಿದ್ದ ಅನಾಮಧೇಯ ಮೂಲನಿವಾಸಿಗಳಾಗಿರಲಿಲ್ಲ, ಅವರು.”

ಎನ್.ಬಿ. ಪಾವ್ಗಿ ಅವರು ಬರೆದಿರುವ “ಭಾರತದಲ್ಲಿ ಸ್ವಯಂ ಸರ್ಕಾರ” ಎನ್ನುವ ಪುಸ್ತಕದಲ್ಲಿ (೧೯೧೨) ಉಲ್ಲೇಖಿಸಿರುವ ಶ್ಲೋಕವೊಂದನ್ನು ಕೃಷ್ಣ ಕುಮಾರ್‌‍ ಹೀಗೆ ಅನುವಾದಿಸಿದ್ದಾರೆ, “ಹಿಮಾಲಯ ಪರ್ವತ ಮತ್ತು ಬಿಂದು ಸರೋವರದ (ಕನ್ಯಾಕುಮಾರಿ) ನಡುವಣ ದೇಶವು ಹಿಂದೂಸ್ತಾನ ಎಂದು ಪ್ರಸಿದ್ಧಿಯಾಗಿದೆ. ಹಿಮಾಲಯದ ಮೊದಲ ಅಕ್ಷರ ಹಿ ನಿಂದ ಮತ್ತು ಬಿಂದುವಿನ ಕೊನೆಯ ಮೂರು ಅಕ್ಷರಗಳಿಂದ ಹಿಂದೂಸ್ತಾನವನ್ನು ಸಂಯೋಜಿಸಲಾಗಿದೆ. ಬಹುಶಃ ಇದರಿಂದ ಹಿಂದು ಎನ್ನುವ ಹೆಸರು ಉದ್ಭವಿಸಿರಬಹುದು. ಇದು ಅಪ್ಪಟ ದೇಶೀಯ ಪದವಾಗಿದೆ. ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರು ಈ ರೀತಿಯಲ್ಲಿ ಹಿಂದೂಗಳೆಂದು ಪ್ರಸಿದ್ಧರಾದರು.” ಕುತೂಹಲಕಾರಿಯೇ?

ಇವೆಲ್ಲ ಏನು ಹೇಳುತ್ತವೆ? ಹಿಂದೂ ಎನ್ನುವ ಹೆಸರು ಒಂದು ಸ್ಥಳ ಮತ್ತು ಅಲ್ಲಿನ ಜನರಿಗೆ ಸಂಬಂಧಿಸಿದ್ದಾಗಿದೆ. ಮೂಲತಃ ಅದು ಜನರ ಸಿದ್ಧಾಂತಗಳು, ಧರ್ಮ ಅಥವಾ ಸಂಸ್ಕೃತಿಗೆ ಸಂಬಂಧಿಸಿದ್ದಾಗಿರಲಿಲ್ಲ.. ಹಾಗಾದರೆ ಜನರ ಧರ್ಮ, ಶ್ರದ್ಧೆ ಅಥವಾ ಸಿದ್ಧಾಂತದ ವಿಷಯವೇನು? ಅದು ವಿವಿಧ ಶ್ರದ್ಧೆಯ ಪ್ರಕಾರವಿರುತ್ತದೆ. ಆದುದರಿಂದ ಭಾರತದಲ್ಲಿ ವಾಸಿಸುವವರೆಲ್ಲ ‘ಹಿಂದೂ’ಗಳೇ. ಆದಾಗ್ಯೂ ವಿವಿಧ ಧರ್ಮಗಳಿರುವುದರಿಂದ, ನಮ್ಮ ಆಧ್ಯಾತ್ಮಿಕ ಪಥಕ್ಕೆ ಹಿಂದೂ ಎನ್ನುವುದು ಸೂಕ್ತ ಪದವಲ್ಲ. ಸಂಸ್ಕೃತ ಶಬ್ದ ಸನಾತನ ಧರ್ಮ ಹೆಚ್ಚು ಸೂಕ್ತವಾದುದು. ಪ್ರಾಚೀನ ಭಾರತೀಯರ ಸಂಸ್ಕೃತಿ ಮತ್ತು ಅವರ ಮುಂಚಿನ ಇತಿಹಾಸವು ವೈದಿಕ ಸಂಸ್ಕೃತಿ ಅಥವಾ ವೈದಿಕ ಧರ್ಮ. ಆದುದರಿಂದ ಜನರ ಸ್ಥಳವನ್ನು ಕುರಿತಷ್ಟೇ ಹೇಳುವ ಹೆಸರಿಗಿಂತ ಆ ಸಂಸ್ಕೃತಿಯನ್ನು ಅನುಸಿರಿಸುವವರಿಗೆ ಆ ಸಂಸ್ಕೃತಿ ಆಧಾರಿತವಾದ ಹೆಸರನ್ನೇ ಬಳಸುವುದು ಹೆಚ್ಚು ಸೂಕ್ತ.

ಈ ಲೇಖನ ಶೇರ್ ಮಾಡಿ