ಬಗೆಬಗೆಯ ದೋಸೆಗಳು

ದೋಸೆ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ತಿಂಡಿ. ಪ್ರೋಟೀನ್‌ ಮತ್ತು ಕಾರ್ಬೊಹೈಡ್ರೇಟ್‌ಗಳಿಂದ ಸಮೃದ್ಧವಾಗಿರುವ ಇದು ಉಪಹಾರದಲ್ಲಿ ಪ್ರಮುಖ ಸ್ಥಾನ ಹೊಂದಿದೆ.

ಸಾಧಾರಣವಾಗಿ ದೋಸೆಯ ಹಿಟ್ಟನ್ನು ಅಕ್ಕಿ ಮತ್ತು ಉದ್ದಿನಬೇಳೆಯನ್ನು ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ರುಬ್ಬಿ ಒಂದು ರಾತ್ರಿ “ಹುದುಗಲು” ಬಿಡುವುದರ ಮೂಲಕ ಸಿದ್ಧಪಡಿಸುತ್ತಾರೆ. ಯಾವ ರೀತಿಯ ದೋಸೆ ತಯಾರಿಸಲಾಗುತ್ತದೆ ಎಂಬುದನ್ನು ಆಧರಿಸಿ ಈ ಪ್ರಕ್ರಿಯೆಯಲ್ಲಿ ಮೆಂತ್ಯ, ಅವಲಕ್ಕಿ, ಕಡಲೆಬೇಳೆ ಇವುಗಳನ್ನು ಸೇರಿಸಿಕೊಳ್ಳುವುದು ಉಂಟು.

ಅಕ್ಕಿ ಮತ್ತು ಉದ್ದಿನಬೇಳೆಯ ಬದಲು ರವೆಯನ್ನು ಉಪಯೋಗಿಸಿ ರವೆ ದೋಸೆ, ಅಕ್ಕಿಹಿಟ್ಟು, ಗೋಹಿಟ್ಟು, ಮುಂತಾದವನ್ನು ಉಪಯೋಗಿಸಿ “ದಿಢೀರ್‌ ದೋಸೆ” ಮಾಡಬಹುದು.

ಭಕ್ತಿವೇದಾಂತ ದರ್ಶನದ ಓದುಗರಿಗಾಗಿ ವಿವಿಧ ದೋಸೆಗಳನ್ನು ಮಾಡುವುದರ ಬಗ್ಗೆ ತಿಳಿಸಿದ್ದೇವೆ.  ಈ ಎಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.

ತರಕಾರಿ ದೋಸೆ

ಬೇಕಾಗುವ ಪದಾರ್ಥಗಳು :

ಮೈದಾ – 2 ಕಪ್‌

ಮೊಸರು – 1/2 ಕಪ್‌

ಜೀರಿಗೆ – 2 ಚಮಚ

ಹುರುಳಿಕಾಯಿ – 1/2 ಕಪ್‌

ಕ್ಯಾರೆಟ್‌ – 1/2 ಕಪ್‌

ಕ್ಯಾಬೇಜ್‌ – 1/2 ಕಪ್‌

ಕ್ಯಾಪ್ಸಿಕಂ – 1/2 ಕಪ್‌

ಕೊತ್ತಂಬರಿ ಸೊಪ್ಪು – 1/4 ಕಟ್ಟು

ಶುಂಠಿ – 1/2 ಇಂಚು

ಹಸಿಮೆಣಸಿನಕಾಯಿ – 3

ಕರಿಬೇವು – 1 ಎಸಳು

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – ಸ್ವಲ್ಪ

ಮಾಡುವ ವಿಧಾನ: ಮೊದಲು  ತರಕಾರಿಗಳನ್ನು ತೊಳೆದು ಸಣ್ಣದಾಗಿ ಕತ್ತರಿಸಿ. ಸ್ವಲ್ಪ ಉಪ್ಪು, ನೀರು ಹಾಕಿ ಬೇಯಿಸಿಕೊಳ್ಳಿ. ಕೊತ್ತಂಬರಿ ಸೊಪ್ಪು, ಕರಿಬೇವು, ಶುಂಠಿ, ಹಸಿಮೆಣಸಿನಕಾಯಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಮೈದಾ ಹಿಟ್ಟಿಗೆ ಮೊಸರು, ಉಪ್ಪು, ಬೇಯಿಸಿದ ತರಕಾರಿ ಎಲ್ಲವನ್ನು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ ಕಾದ ಕಾವಲಿಯ ಮೇಲೆ ದೋಸೆ ಹೊಯ್ದರೆ ರುಚಿಯಾದ ತರಕಾರಿ ದೋಸೆ ತಿನ್ನಲು ಸಿದ್ಧ. ಮೃದುವಾಗಿರುವ ದೋಸೆ ತಿನ್ನಲು ರುಚಿ. ಪೌಷ್ಟಿಕವೂ ಹೌದು.

ಸೆಟ್‌ ದೋಸೆ

ಈ ದೋಸೆಗೆ ಉದ್ದಿನಬೇಳೆಯ ಅಗತ್ಯವಿಲ್ಲ.

ಬೇಕಾಗುವ ಪದಾರ್ಥಗಳು :

ಅಕ್ಕಿ – 2 ಕಪ್‌

ದಪ್ಪ ಅವಲಕ್ಕಿ – 3/4 ಕಪ್‌

ಮೊಸರು – 1 ಕಪ್‌

ಸಕ್ಕರೆ – 1 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – ಸ್ವಲ್ಪ

ಅಡಿಗೆ ಸೋಡಾ – 2 ಚಿಟಿಕೆ

ಮಾಡುವ ವಿಧಾನ : ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ಅವಲಕ್ಕಿಯನ್ನು ತೊಳೆದು 1 ಗಂಟೆ ಕಾಲ ನೆನೆಸಿ. ನೆನೆದ ಅಕ್ಕಿ ಮತ್ತು ಅವಲಕ್ಕಿಯನ್ನು ಮಿಕ್ಸಿಜಾರಿಗೆ ಹಾಕಿ ನುಣ್ಣಗೆ ರುಬ್ಬಿ. ರುಬ್ಬಿದ ದೋಸೆ ಹಿಟ್ಟನ್ನು ತೆಗೆಯುವ ಮೊದಲು ಮೊಸರು ಮತ್ತು ಉಪ್ಪನ್ನು ಹಾಕಿ ಮತ್ತೊಂದು ಸುತ್ತು ರುಬ್ಬಿ ಪಾತ್ರೆಗೆ ಹಾಕಿಡಿ. ಬೆಳಗ್ಗೆ ಆ ಹಿಟ್ಟು ಹುಳಿ ಬಂದಿರುತ್ತದೆ. ಒಂದಕ್ಕಿಂತ ಹೆಚ್ಚು ಕಪ್‌ ಮೊಸರು ಹಾಕಿದರೆ ಹುಳಿ ಜಾಸ್ತಿಯಾಗಿ ಹುಳಿ ವಾಸನೆ ಬರಬಹುದು.

ಬೆಳಗ್ಗೆ ಆ ಹಿಟ್ಟಿಗೆ 1 ಚಮಚ ಸಕ್ಕರೆ, ಅಡಿಗೆ ಸೋಡಾ ಹಾಕಿ ಕಲಸಿ. ಹಿಟ್ಟು ಸ್ವಲ್ಪ ನೀರಾಗಿರಬೇಕು. ಒಲೆಯ ಮೇಲೆ ಕಾವಲಿಯನ್ನು ಬಿಸಿಮಾಡಿ ಒಂದು ಸೌಟು ಹಿಟ್ಟನ್ನು ಹಾಕಿದರೆ ಅದೇ ಹರಡಿಕೊಳ್ಳುತ್ತದೆ. ನೀವು ಮತ್ತೆ ಅದನ್ನು ವೃತ್ತಾಕಾರವಾಗಿ ಸೌಟಿನಲ್ಲಿ ಹರಡುವುದು ಬೇಡ. 1 ಚಮಚ ಎಣ್ಣೆ ಹಾಕಿದರೆ ಬಿಸಿಯಾದ ಸೆಟ್‌ ದೋಸೆ ಸಿದ್ಧ. ಇದನ್ನು ಕಾಯಿಚಟ್ನಿ ಅಥವಾ ಸಾಗು ಜೊತೆ ತಿನ್ನಲು ತುಂಬ ರುಚಿಯಾಗಿರುತ್ತದೆ.

ಗಮನಿಸಬೇಕಾದ ವಿಷಯಗಳು

1.  ಅವಲಕ್ಕಿ ಹೆಚ್ಚಾಗಿ ಹಾಕಿದರೆ ದೋಸೆ ತುಂಬ ಮೃದುವಾಗಿ ಕಾವಲಿಯಿಂದ ತೆಗೆಯಲು ಕಷ್ಟವಾಗುತ್ತದೆ.

2. ಸಕ್ಕರೆ ಹೆಚ್ಚಾದರೆ ದೋಸೆಯ ತಳ ಕೆಂಪಾಗುತ್ತದೆ.

ರವೆ ದೋಸೆ

ಬೇಕಾಗುವ ಪದಾರ್ಥಗಳು :

ಚಿರೋಟಿ ರವೆ – 2 ಕಪ್‌

ಮೈದಾ – 1/2 ಕಪ್‌

ಅಕ್ಕಿಹಿಟ್ಟು – 1/2 ಕಪ್‌

ಮೊಸರು – 1 ಕಪ್‌

ಹಸಿಮೆಣಸಿನಕಾಯಿ -3

ಕೊತ್ತಂಬರಿ ಸೊಪ್ಪು – 1/4 ಕಟ್ಟು

ಕರಿಬೇವು – 2 ಎಸಳು

ಬಿಳಿ ಎಳ್ಳು – 2 ಚಮಚ

ಜೀರಿಗೆ – 1/2 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – ಸ್ವಲ್ಪ

ಮಾಡುವ ವಿಧಾನ : ಮೊದಲು ಕೊತ್ತಂಬರಿ ಸೊಪ್ಪು, ಕರಿಬೇವು, ಹಸಿಮೆಣಸಿನಕಾಯಿ ಇವುಗಳನ್ನು ತೊಳೆದು ಸಣ್ಣದಾಗಿ ಕತ್ತರಿಸಿಕೊಳ್ಳಿ. ಒಂದು ಪಾತ್ರೆಯಲ್ಲಿ ಚಿರೋಟಿ ರವೆ, ಮೈದಾ, ಅಕ್ಕಿಹಿಟ್ಟು, ಕತ್ತರಿಸಿದ ಸೊಪ್ಪು, ಜೀರಿಗೆ, ಎಳ್ಳು, ಮೊಸರು, ಉಪ್ಪನ್ನು ಹಾಕಿ ಕಲಸಿಕೊಂಡು 1/2 ಗಂಟೆ ಇಡಿ. ದೋಸೆ ಹಿಟ್ಟು ನೀರಾಗಿರಬೇಕು. ಹಿಟ್ಟು ದಪ್ಪ ಇದ್ದಷ್ಟು ದೋಸೆ ದಪ್ಪವಾಗಿರುತ್ತದೆ, ತಿನ್ನಲು ಕಷ್ಟ ಮತ್ತು ಗಟ್ಟಿಯಾಗಿರುತ್ತದೆ.

ದೋಸೆ ಹೆಂಚು ಕಾಯಲು ಇಡಿ. ಸ್ವಲ್ಪ ಎಣ್ಣೆ ಸವರಿ ನೀರಾಗಿರುವ ಹಿಟ್ಟನ್ನು ಒಂದು ಸೌಟು ಹಾಕಿರಿ. ಅದರ ಮೇಲೆ ಒಂದು ಚಮಚ ಎಣ್ಣೆ ಹಾಕಿ ಬೇಯಲು ಬಿಡಿ. ಕೆಲ ನಿಮಿಷಗಳ ಅನಂತರ ದೋಸೆ ಕೆಂಪಾಗುತ್ತ ಬರುತ್ತದೆ. ಸಣ್ಣ ಉರಿಯಲ್ಲಿ ಬೇಯಿಸಿ, ಹಾಗೆ ಮಾಡಿದಾಗ ದೋಸೆ ಗರಿಗರಿಯಾಗಿ ತೆಗೆಯಲು ಅನುಕೂಲವಾಗುತ್ತದೆ. ರವೆ ದೋಸೆ ತಿನ್ನಲು ಸಿದ್ಧ.

ಗಮನಿಸಬೇಕಾದ ವಿಷಯಗಳು

1.  ರವೆ ದೋಸೆ ಗರಿಯಾಗಿದ್ದಷ್ಟು ರುಚಿ. ಹಾಗಾಗಿ ಕೆಂಪಗಾಗುವವರೆಗೆ ಕಾಯಿರಿ.

2. ಕೆಂಪಗಾಗಲು ಸ್ವಲ್ಪ ಹೆಚ್ಚಾಗಿ ಎಣ್ಣೆ ಹಾಕಬೇಕು.

3. ಶುಂಠಿಯನ್ನು ಹಾಕಬಹುದು. ಆದರೆ ಸಣ್ಣ ಚೂರುಗಳಾಗಿ ಕತ್ತರಿಸಿ ಹಾಕಿ.

4. ಎಳ್ಳು ಹಾಕಿದರೆ ಅದರ ರುಚಿ ಮತ್ತು ಪರಿಮಳವು ಬೇರೆ.

ಸೌತೆಕಾಯಿ ದೋಸೆ

ಬೇಕಾಗುವ ಪದಾರ್ಥಗಳು :

ಸೌತೆಕಾಯಿ ತುರಿ – 1 ಕಪ್‌

ಅಕ್ಕಿ – 1 ಕಪ್‌

ತೆಂಗಿನ ತುರಿ – 1/2 ಕಪ್‌

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – ಸ್ವಲ್ಪ

ಮಾಡುವ ವಿಧಾನ : ಅಕ್ಕಿಯನ್ನು 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಅನಂತರ ಅಕ್ಕಿಯನ್ನು ತೊಳೆದು ಸೌತೆಕಾಯಿ ತುರಿ, ತೆಂಗಿನತುರಿ, ಉಪ್ಪು ಹಾಕಿ ರುಬ್ಬಿ. ದೋಸೆ ಹೆಂಚು ಕಾಯಲು ಇಡಿ. ಕಾದ ಹೆಂಚಿಗೆ ಎಣ್ಣೆ ಸವರಿ ದೋಸೆ ಹಾಕಿ. ಇದನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಬಹುದು.

ರಾಗಿ ದೋಸೆ

ಬೇಕಾಗುವ ಪದಾರ್ಥಗಳು :

ರಾಗಿಹಿಟ್ಟು – 2 ಕಪ್‌

ಅಕ್ಕಿಹಿಟ್ಟು – 1 ಕಪ್‌

ಉದ್ದಿನಬೇಳೆ – 1/2 ಕಪ್‌

ಮೆಂತ್ಯ – 1/2 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – ಸ್ವಲ್ಪ

ಮಾಡುವ ವಿಧಾನ : ಮೆಂತ್ಯ, ಉದ್ದಿನ ಬೇಳೆಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ  ನೆನೆಸಿ ರುಬ್ಬಿಕೊಳ್ಳಿ. ಇದಕ್ಕೆ ರಾಗಿಹಿಟ್ಟು, ಅಕ್ಕಿ ಹಿಟ್ಟು, ಉಪ್ಪು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಈ ಮಿಶ್ರಣವನ್ನು 8 ಗಂಟೆಗಳ ಕಾಲ ನೆನೆಯಲು ಬಿಡಿ. ಇದನ್ನು ಕಾದ ಹೆಂಚಿಗೆ ಎಣ್ಣೆ ಸವರಿ ದೋಸೆ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ನಿಮಗೆ ಇಷ್ಟವಾದ ಚಟ್ನಿಯೊಂದಿಗೆ ಸವಿಯಲು ಕೊಡಿ.

ಅವಲಕ್ಕಿ ದೋಸೆ

ಬೇಕಾಗುವ ಪದಾರ್ಥಗಳು :

ದಪ್ಪ ಅವಲಕ್ಕಿ – 1 ಕಪ್‌

ಹೆಸರುಬೇಳೆ – 1/2 ಕಪ್‌

ತೆಂಗಿನತುರಿ – 1/2 ಕಪ್‌

ಹಸಿಮೆಣಸಿನಕಾಯಿ – 5

ಶುಂಠಿ – 1/2 ಇಂಚು

ಜೀರಿಗೆ ಪುಡಿ – 1 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – ಸ್ವಲ್ಪ

ಮಾಡುವ ವಿಧಾನ : ಹೆಸರುಬೇಳೆ ಮತ್ತು ಅವಲಕ್ಕಿಯನ್ನು ನೀರಿನಲ್ಲಿ ಒಂದು ಗಂಟೆಯ ಕಾಲ ನೆನೆಯಲು ಬಿಡಿ. ಹಸಿಮೆಣಸಿನಕಾಯಿಯನ್ನು ಸಣ್ಣದಾಗಿ ಕತ್ತರಿಸಿ. ಒಂದು ಗಂಟೆ ಅನಂತರ ಹೆಸರುಬೇಳೆ, ಅವಲಕ್ಕಿಯನ್ನು ತೊಳೆದು ಕಾಯಿತುರಿ ಮತ್ತು ಶುಂಠಿಯ ಜೊತೆ ರುಬ್ಬಿಕೊಳ್ಳಿ. ಇದಕ್ಕೆ ಹಸಿಮೆಣಸಿನಕಾಯಿ, ಉಪ್ಪು, ಜೀರಿಗೆಪುಡಿ ಸೇರಿಸಿ ಕಲಸಿ. ಒಲೆಯ ಮೇಲೆ ಹೆಂಚನ್ನು ಇಟ್ಟು ದೋಸೆ ಹಾಕಿ.


ಪಾಕ ಪ್ರವೀಣರಾಗಲು ತಿಳಿದಿರಲಿ ಈ ಉಪಾಯಗಳು

1) ತರಕಾರಿಗಳನ್ನು ತುಂಬ ಬೇಯಿಸಬೇಡಿ. ಹೆಚ್ಚಾಗಿ ಬೇಯಿಸಿದರೆ ಅದರಲ್ಲಿರುವ ಪೌಷ್ಟಿಕಾಂಶಗಳು ಹಾಳಾಗುತ್ತವೆ.

2) ಬದನೆಕಾಯಿ ಮತ್ತು ಬಾಳೆಕಾಯಿಗಳನ್ನು ಹೆಚ್ಚಿದ ಅನಂತರ ಅಂಟು ಅಂಟಾಗುತ್ತದೆ ಹಾಗೂ ಕಪ್ಪಾಗುತ್ತದೆ. ಅದಕ್ಕೆ ಅದನ್ನು ನೀರಿನಲ್ಲಿ ಹಾಕಿಡಿ. ನೀರಿನ ಜೊತೆ ರಾಗಿಹಿಟ್ಟು/ಅರಿಶಿಣ/ ವಿನಿಗರ್‌/ನಿಂಬೆರಸ ಹಾಕಿ ಅದರಲ್ಲಿ  ಹಾಕಿದರೆ ಇನ್ನೂ ಒಳ್ಳೆಯದು.

3) ಹಸಿಮೆಣಸಿನಕಾಯಿಯ ತೊಟ್ಟು ಬಿಡಿಸಿಟ್ಟರೆ ಅದು ಬೇಗ ಹಣ್ಣಾಗುವುದಿಲ್ಲ.

4) ತರಕಾರಿ ಬೇಯಿಸಿದ ನೀರನ್ನು ಬಿಸಾಡುವ ಬದಲು ಅದನ್ನು ಸಾರು ಮಾಡಲು ಬಳಸಿದರೆ ಸಾರು ಮತ್ತಷ್ಟು ರುಚಿಕರವಾಗಿರುತ್ತದೆ. ಅಲ್ಲದೆ ತರಕಾರಿಯಲ್ಲಿರುವ ಪೌಷ್ಟಿಕಾಂಶಗಳು ಹಾಳಾಗುವುದಿಲ್ಲ.

5) ಚಟ್ನಿ, ಗೊಜ್ಜಿಗೆ ಬಳಸುವ ಹುಣಸೆ ಹಣ್ಣನ್ನು ಮೊದಲು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡಿ. ರುಬ್ಬಲು ಸುಲಭವಾಗುವುದು.

ಈ ಲೇಖನ ಶೇರ್ ಮಾಡಿ