ಬಲರಾಮ ಅವತಾರ

ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನ ಮೊದಲ ಸ್ವಾಂಶ ವಿಸ್ತರಣೆಯೇ ಬಲರಾಮ. ಬಲರಾಮನು ದ್ವಾಪರ ಯುಗದಲ್ಲಿ ವಸುದೇವ ಮತ್ತು ರೋಹಿಣಿಯ ಮಗನಾಗಿ ಯದುಕುಲದಲ್ಲಿ ಅವತರಿಸಿದನು.

ಭೋಜವಂಶದ ರಾಜನಾದ ಕಂಸನು, ದೇವಕಿ ಮತ್ತು ವಸುದೇವರ ಎಂಟನೇ ಮಗುವು ತನ್ನನ್ನು ಸಂಹರಿಸುತ್ತದೆ ಎಂಬ ಅಶರೀರ ವಾಣಿಯನ್ನು ಕೇಳಿ ಅವರನ್ನು ಸೆರೆಮನೆಯಲ್ಲಿಟ್ಟಿದ್ದನು. ಅವರು ಜನ್ಮವಿತ್ತ ಆರು ಮಕ್ಕಳನ್ನು  ಸ್ವತಃ ಕಂಸನೇ ಕೊಂದಿದ್ದನು. ಅನಂತರ, ಕೃಷ್ಣನು ದೇವಕಿಯ ಗರ್ಭದಲ್ಲಿ ಬೆಳೆಯುತ್ತಿರುವ ತನ್ನ ಅಂಶದ ಶಿಶುವನ್ನು ಗೋಕುಲದಲ್ಲಿರುವ ರೋಹಿಣಿಯ ಗರ್ಭಕ್ಕೆ ಸ್ಥಳಾಂತರಿಸುವಂತೆ ಯೋಗಮಾಯೆಗೆ ಆದೇಶಿಸಿದನು. ಕೂಡಲೇ ಯೋಗಮಾಯೆಯು ದೇವಕಿಯ ಗರ್ಭಸ್ಥ ಶಿಶುವನ್ನು ವಸುದೇವನ ಇನ್ನೊಬ್ಬ ಪತ್ನಿ ರೋಹಿಣಿಯ ಗರ್ಭಕ್ಕೆ ಸ್ಥಳಾಂತರಿಸಿದಳು. ದೇವಕಿಯ ಗರ್ಭವಿಳಿಯಲು ಅವಳಿಗೆ ಗರ್ಭಪಾತವಾಯಿತೆಂದು ಕಂಸನೂ, ಪುರಜನರೂ ಭಾವಿಸಿದರು. ಇತ್ತ ಗೋಕುಲದಲ್ಲಿ ರೋಹಿಣಿಗೆ ಪುತ್ರನ ಜನನವಾಯಿತು.

ಗರ್ಗಮುನಿಗಳು ಮಗುವಿಗೆ ಈ ಹೆಸರುಗಳನ್ನು ಸೂಚಿಸುತ್ತಾ ನಂದ ಮಹಾರಾಜನಿಗೆ ಹೇಳಿದರು, “ಈ ರೋಹಿಣಿ ಪುತ್ರನು ತನ್ನ ಸಂಬಂಧಿಕರಿಗೂ, ಕುಟುಂಬ ವರ್ಗಕ್ಕೂ ಆನಂದದಾಯಕನಾಗಿರುತ್ತಾನೆ. ಹಾಗಾಗಿ ಇವನನ್ನು ರಾಮ ಎಂದು ಕರೆಯಬೇಕು. ಮುಂದೆ ಇವನು ಮಹಾಬಲಶಾಲಿಯಾಗುವುದರಿಂದ ಇವನು ಬಲದೇವನೆಂದು ಪ್ರಸಿದ್ಧನಾಗುತ್ತಾನೆ. ನಿಮ್ಮ ಮತ್ತು ಯದುವಂಶಜರ ಕುಟುಂಬಗಳು ಸದಾ ಆಕರ್ಷಿತರಾಗಿದ್ದು ಎರಡೂ ಕುಟುಂಬಗಳಲ್ಲೂ ಅನ್ಯೋನ್ಯ ಸಂಬಂಧವಿರುವುದರಿಂದ ಸಂಕರ್ಷಣನೆಂದೂ ಕರೆಯಲ್ಪಡುತ್ತಾನೆ.”

ಬಲರಾಮನು ಗೌರವರ್ಣದವನಾಗಿದ್ದನು ಮತ್ತು ನೀಲಾಂಬರವನ್ನು ಇಷ್ಟಪಡುತ್ತಿದ್ದನು. ಬಲರಾಮನು ತನ್ನ ತಮ್ಮನಾದ ಕೃಷ್ಣನೊಡಗೂಡಿ ಗೋಕುಲದ ಮನೆ ಮನೆಗೆ ನುಗ್ಗಿ ಗೋಪಿಯರು ರಕ್ಷಿಸಿಟ್ಟಿದ್ದ ಹಾಲು, ಮೊಸರು, ಬೆಣ್ಣೆಗಳನ್ನು ಕದ್ದು ತಿನ್ನುತ್ತಿದ್ದನು ಮತ್ತು ಸ್ನೇಹಿತರಿಗೂ, ಕೋತಿಗಳಿಗೂ ಹಂಚುತ್ತಿದ್ದರು. ಹಾಲು ಮೊಸರುಗಳ ಮಡಕೆಗಳನ್ನು ಎತ್ತರದಲ್ಲಿ ಕಟ್ಟಿದ್ದರೂ ಒಬ್ಬರ ಮೇಲೊಬ್ಬರು ಹತ್ತಿ ಮಡಕೆಗಳನ್ನು ಪಡೆದುಕೊಳ್ಳುತ್ತಿದ್ದರು. ದಿನದಿನವೂ ಬೆಣ್ಣೆ ಕದಿಯಲು ಹೊಸ ವಿಧಾನಗಳನ್ನು ಹುಡುಕುತ್ತಿದ್ದರು. ಹಾಲು ಮೊಸರು ಬೆಣ್ಣೆಗಳು ಸಿಗದಿದ್ದರೆ ಮನೆಗಳಲ್ಲಿದ್ದ ಮಡಕೆಗಳನ್ನು ಒಡೆದು, ಎಲ್ಲ ವಸ್ತುಗಳನ್ನು ಅಸ್ತವ್ಯಸ್ತಗೊಳಿಸುತ್ತಿದ್ದರು. ಗೋಪಿಯರು ದಿನವೂ ಬಲರಾಮ ಕೃಷ್ಣರ ತುಂಟಾಟಗಳ ಬಗ್ಗೆ ಯಶೋದೆಗೆ ದೂರಿಡುತ್ತಿದ್ದರು. ಯಶೋದೆ ದೂರುಗಳನ್ನು ಕೇಳಿ ಮಕ್ಕಳನ್ನು ದಂಡಿಸಲು ಹೊರಟರೆ ಅವರ ಮುದ್ದು ಮುಖಗಳನ್ನು ನೋಡಿ ಕೋಪವನ್ನು ಮರೆತುಬಿಡುತ್ತಿದ್ದಳು.

ಇತ್ತ ಮಥುರೆಯಲ್ಲಿ ತನ್ನ ಸಂಹಾರಕನು ಬೇರೆಲ್ಲೋ ಇರುವನೆಂದು ದುರ್ಗೆಯಿಂದ ಕೇಳಿದ ಕಂಸನು ಬಹುವಾಗಿ ಹೆದರಿದನು ಮತ್ತು ಕೃಷ್ಣನನ್ನು ಕೊಲ್ಲಲು ಪೂತನ, ತೃಣಾವರ್ತ, ಶಕಟಾಸುರನನ್ನು ಗೋಕುಲಕ್ಕೆ ಕಳುಹಿಸಿದನು. ಗೋಕುಲದಲ್ಲಿ ರಾಕ್ಷಸರ ಹಾವಳಿ ಹೆಚ್ಚಾಗಲು ಗೋಪ ಗೋಪಿಯರೆಲ್ಲರೂ ಸನಿಹದಲ್ಲಿದ್ದ ನಂದಗ್ರಾಮಕ್ಕೆ ಹೋಗಿ ನೆಲೆಸಿದರು. ನಂದಗ್ರಾಮದಲ್ಲಿ ಕೃಷ್ಣ ಬಲರಾಮರು ಕರುಗಳನ್ನು ಮೇಯಿಸುತ್ತಿದ್ದರು. ಇಬ್ಬರು ತಮ್ಮ ಸ್ನೇಹಿತರೊಡನೆ ಪ್ರತಿದಿನ ಅನೇಕ ಬಗೆಯ ಆಟಗಳನ್ನಾಡುತ್ತಿದ್ದರು. ಒಂದು ದಿನ ಒಬ್ಬ ಬಾಲಕ ಬಂದು, “ನನ್ನನ್ನು ಆಟಕ್ಕೆ ಸೇರಿಸಿಕೊಳ್ಳಿ” ಎಂದು ಕೇಳಿದ. ಇದಕ್ಕೆ ಕೃಷ್ಣ ಬಲರಾಮರು ಒಪ್ಪಿಕೊಂಡರು. “ಈಗ ನಾವೆಲ್ಲರೂ ಗುಂಪು ಮಾಡಿಕೊಂಡು ಆಡೋಣ. ಸೋತವರು ಗೆದ್ದವರನ್ನು ತಮ್ಮ ಹೆಗಲ ಮೇಲೆ ಹೊತ್ತು ನಡೆಯಬೇಕು” ಎಂದು ಕೃಷ್ಣನು ಹೇಳಿದನು. ಆ ಹೊಸ ಹುಡುಗ ಕೃಷ್ಣನ ಗುಂಪಿಗೆ ಸೇರಿದನು. ಕೃಷ್ಣನ ಗುಂಪಿಗೆ ಸೋಲಾಯಿತು ಒಪ್ಪಂದದಂತೆ ಎಲ್ಲರೂ ಒಬ್ಬೊಬ್ಬರನ್ನು ಹೊತ್ತುಕೊಂಡರು. ಹೊಸ ಹುಡುಗನು ಬಲರಾಮನನ್ನು ಹೊತ್ತು ನಡೆದ. ಆ ಹೊಸ ಹುಡುಗನು ಮುಗ್ಧ ಬಾಲಕನಾಗಿರಲಿಲ್ಲ. ಕೃಷ್ಣ ಬಲರಾಮರನ್ನು ಕೊಲ್ಲಲು ಬಂದಿದ್ದ ಪ್ರಲಂಬಾಸುರನೆಂಬ ರಾಕ್ಷಸ. ಕೃಷ್ಣನಿಂದ ಮರೆಯಾಗಲು ಪ್ರಲಂಬಾಸುರನು ಬಲರಾಮನನ್ನು ಹೊತ್ತು ವೇಗವಾಗಿ ನಡೆಯುತ್ತಾ ಬೇರೆಡೆಗೆ ಕರೆದುಕೊಂಡು ಹೋದನು ಮತ್ತು ನಿಜರೂಪವನ್ನು ತಾಳಿದನು. ತನ್ನನ್ನು ಹೊತ್ತಿದ್ದ ಹುಡುಗ ಕ್ಷಣದಲ್ಲಿ ಪರ್ವತಾಕಾರವನ್ನು ತಾಳಿದ್ದನ್ನು ನೋಡಿದ ಬಲರಾಮನು ಇವನು ತನ್ನನ್ನು ಕೊಲ್ಲಲು ಬಂದ ರಾಕ್ಷಸನೆಂದು ತಿಳಿದುಕೊಂಡನು ಮತ್ತು ತನ್ನ ಗಟ್ಟಿಯಾದ ಮುಷ್ಟಿಯಿಂದ ಅವನ ತಲೆಗೆ ಗುದ್ದಿದ. ಬಲರಾಮನ ಒಂದೇ ಏಟಿಗೆ ರಾಕ್ಷಸನು ಭಯಂಕರವಾಗಿ ಕಿರುಚುತ್ತಾ ಬಾಯಿಂದ ರಕ್ತಕಾರಿ ಸತ್ತುಬಿದ್ದನು.

ಒಂದು ದಿನ ಗೋಪ ಬಾಲಕರೆಲ್ಲಾ ಕೃಷ್ಣ ಬಲರಾಮರ ಬಳಿ ಬಂದು, “ಇಲ್ಲಿ ಒಂದು ತಾಳ ವನವಿದೆ. ಅದರಲ್ಲಿ ಬಹಳ ರುಚಿಕರವಾದ ಹಣ್ಣುಗಳಿವೆ. ಅವುಗಳನ್ನು ತಿನ್ನಲು ನಮಗೆ ತುಂಬ ಇಷ್ಟ. ಆದರೆ ಅಲ್ಲಿ ಧೇನುಕಾಸುರ ಎಂಬ ರಾಕ್ಷಸ ಕತ್ತೆಯ ರೂಪದಲ್ಲಿದ್ದಾನೆ” ಎಂದು ಹೇಳಿದರು. ಇದನ್ನು ಕೇಳಿದ ಕೃಷ್ಣ ಬಲರಾಮರು ತಾಳವನಕ್ಕೆ ಹೋದರು. ಬಲರಾಮನು ಒಂದು ದೊಡ್ಡ ಮರವನ್ನು ತನ್ನ ಬಲಿಷ್ಠ ಬಾಹುಗಳಿಂದ ಹಿಡಿದು ಜಗ್ಗಲು ಹಣ್ಣುಗಳು ತಪತಪನೆ ಕೆಳಗುದುರಿದವು. ಈ ಸದ್ದನ್ನು ಕೇಳಿದ ಕತ್ತೆರೂಪದ ಧೇನುಕಾಸುರನು ಓಡಿಬಂದು ಬಲರಾಮನನ್ನು ಒದೆಯಲಾರಂಭಿಸಿದನು. ಆಗ ಬಲರಾಮನು ರಾಕ್ಷಸನ ಹಿಂಗಾಲುಗಳನ್ನು  ಹಿಡಿದು ಗಿರಗಿರನೆ ತಿರುಗಿಸಿ ದೂರಕ್ಕೆಸೆದನು. ಬಲರಾಮನು ಹಾಗೆ ತಿರುಗಿಸುವಾಗಲೇ ಧೇನುಕನ ಪ್ರಾಣಪಕ್ಷಿ ಹಾರಿಹೋಯಿತು. ಅವನ ಮೃತದೇಹ ಒಂದು ದೊಡ್ಡ ಮರದ ಮೇಲೆ ಬಿತ್ತು. ಆ ಮರವು ಕಿತ್ತು ಹೋಗಿ ಇತರ ಮರಗಳ ಮೇಲೆ ಬಿದ್ದಿತು. ಹೀಗೆ ಆ ಮರಗಳೆಲ್ಲಾ ಬುಡಮೇಲಾದವು. ಧೇನುಕಾಸುರನ ಸಂಹಾರವನ್ನು ನೋಡಿದ ಕತ್ತೆರೂಪದಲ್ಲಿದ್ದ ಅವನ ಸಹಚರರು ಕೃಷ್ಣ ಬಲರಾಮರನ್ನು ಕೊಲ್ಲಲು ಬಂದರು. ಅವರನ್ನು ಸಹ ಕೃಷ್ಣ ಬಲರಾಮರು ಸಂಹರಿಸಿದರು.

ಅನಂತರ ಅಕ್ರೂರನು ಕಂಸನ ಆಜ್ಞೆಯ ಮೇರೆಗೆ ಕೃಷ್ಣ ಬಲರಾಮರನ್ನು ಮಥುರೆಗೆ ಕರೆದುಕೊಂಡು ಹೋದನು. ಅಲ್ಲಿ ಕೃಷ್ಣನು ಕಂಸನನ್ನು ಸಂಹರಿಸಿದ ಬಳಿಕ ಕಂಸನ ಎಂಟು ಮಂದಿ ಸಹೋದರರು ಸೇಡು ತೀರಿಸಿಕೊಳ್ಳಲು ಕೃಷ್ಣ ಬಲರಾಮರ ಮೇಲೆ ಎರಗಿದರು. ಆದರೆ ಅವರೆಲ್ಲರನ್ನೂ ಬಲರಾಮನೊಬ್ಬನೇ ಸಂಹರಿಸಿದನು. ಕಂಸನ ಸಾವಿನ ಅನಂತರ ಅವನ ಇಬ್ಬರು ಪತ್ನಿಯರು ತಮ್ಮ ತಂದೆ ಜರಾಸಂಧನಿಗೆ ನಡೆದ ಸಂಗತಿಯನ್ನು ತಿಳಿಸಿದರು. ಇದರಿಂದ ಕೋಪಗೊಂಡ ಜರಾಸಂಧನು 18 ಅಕ್ಷೌಹಿಣಿ ಸೈನ್ಯದೊಂದಿಗೆ ಮಥುರೆಯನ್ನು ಮುತ್ತಿದನು. ಕೃಷ್ಣಬಲರಾಮರು ಜರಾಸಂಧನೊಬ್ಬನನ್ನು ಬಿಟ್ಟು ಅಷ್ಟು ಸೈನ್ಯವನ್ನು ಸಂಹರಿಸಿದರು. ಹೀಗೆ ಜರಾಸಂಧನು ಹದಿನೇಳು ಬಾರಿ ಮಥುರೆಯ ಮೇಲೆ ದಂಡೆತ್ತಿ  ಬಂದ, ಪ್ರತಿ ಬಾರಿಯೂ ಕೃಷ್ಣ ಬಲರಾಮರು ಅವನನ್ನು ಸೋಲಿಸಿ ಓಡಿಸಿದರು. ಹದಿನೆಂಟನೆಯ ಬಾರಿ ಕೃಷ್ಣ ಬಲರಾಮರು ಯುದ್ಧ ಮಾಡದೆ ಪ್ರಹರ್ಷಣವೆಂಬ ಪರ್ವತವನ್ನು ಹತ್ತಿದರು. ಜರಾಸಂಧನು ಆ ಬೆಟ್ಟದ ಸುತ್ತಲೂ ಎಣ್ಣೆಯನ್ನು ಸುರಿದು ಬೆಂಕಿ ಹಚ್ಚಿಸಿದ. ಆಗ ಕೃಷ್ಣ ಬಲರಾಮರು ಎಂಬತ್ತೆಂಟು ಮೈಲಿಗಳಷ್ಟು ಎತ್ತರದಿಂದ ಕೆಳಕ್ಕೆ ಧುಮುಕಿದರು. ಇದನ್ನರಿಯದ ಜರಾಸಂಧ ಕೃಷ್ಣ ಬಲರಾಮರು ಬೆಂಕಿಯಲ್ಲಿ ಬೆಂದು ಹೋದರೆಂದು ತಿಳಿದು ತನ್ನ ರಾಜ್ಯಕ್ಕೆ ಹಿಂದಿರುಗಿದನು.

ಅನಂತರ ಕೃಷ್ಣ ಬಲರಾಮರು ಸಮುದ್ರದ ಮಧ್ಯೆ ದ್ವಾರಕಾ ನಗರವನ್ನು ನಿರ್ಮಿಸಿ, ಮಥುರೆಯಿಂದ ದ್ವಾರಕೆಗೆ ಹೋದರು. ದ್ವಾರಕೆಯಲ್ಲಿ ಬಲರಾಮನು ರೈವತ ಮಹಾರಾಜನ ಮಗಳಾದ ರೇವತಿಯನ್ನು ವಿವಾಹ ಮಾಡಿಕೊಂಡನು. ಬಲರಾಮನು ಹಲ ಮತ್ತು ಗದೆಯನ್ನು ತನ್ನ ಆಯುಧಗಳಾಗಿ ಬಳಸುತ್ತಿದ್ದನು.

ಶ್ರೀಕೃಷ್ಣನ ಮಗನಾದ ಸಾಂಬನು ದುರ್ಯೋಧನನ ಮಗಳು ಲಕ್ಷ್ಮಣೆಯನ್ನು ವಿವಾಹ ಮಾಡಿಕೊಳ್ಳಲು ತೀರ್ಮಾನಿಸಿ ಸ್ವಯಂವರದ ಸಭೆಯಿಂದ ಅವಳನ್ನು ಅಪಹರಿಸಿಕೊಂಡು ಹೋದನು. ಇದರಿಂದ ಕುಪಿತರಾದ ಕೌರವರು ಸಾಂಬನನ್ನು ಬಂಧಿಸಿದರು. ಇದನ್ನು ತಿಳಿದ ಬಲರಾಮನು ಕೌರವರೊಂದಿಗೆ ಯುದ್ಧ ಮಾಡುವುದು ಬೇಡ, ತಾನೇ ಅವರೊಡನೆ ಮಾತನಾಡಿ ಸಾಂಬನನ್ನು ಅವನ ಹೆಂಡತಿ ಲಕ್ಷ್ಮಣೆಯನ್ನು ಕರೆತರುತ್ತೇನೆ ಎಂದು ಯಾದವರಿಗೆ ಹೇಳಿ, ಹಸ್ತಿನಾಪುರಕ್ಕೆ ಬಂದು ಕೌರವರಿಗೆ ತಾನು ಬಂದಿರುವ ವಿಷಯವನ್ನು ಹೇಳಿ ಕಳುಹಿಸಿದನು. ಆದರೆ ಕೌರವರು ಯಾದವರನ್ನು ತಮ್ಮ ದಾಸರೆಂದೂ, ತಾವು ಯಾರ ಅಪ್ಪಣೆಯನ್ನು ಪಾಲಿಸುವುದಿಲ್ಲವೆಂದೂ ಹೇಳಿದರು. ಇದನ್ನು ಕೇಳಿದ ಬಲರಾಮನು ಎಷ್ಟು ಕುಪಿತನಾದನೆಂದರೆ ಇಡೀ ಬ್ರಹ್ಮಾಂಡವನ್ನು ಸುಟ್ಟು ಬೂದಿ ಮಾಡುವ ಹಾಗೆ ಕಂಡನು. ಅವನು ದೃಢವಾಗಿ ಎದ್ದು ನಿಂತು ತನ್ನ ಹಲಾಯುಧವನ್ನು ಕೈಗೆ ತೆಗೆದುಕೊಂಡು ಅದರಿಂದ ನೆಲವನ್ನು ಕುಟ್ಟಲು ಪ್ರಾರಂಭಿಸಿದನು. ಇದರಿಂದ ಇಡೀ ಹಸ್ತಿನಾಪುರವು ಭೂಮಿಯಿಂದ ಬೇರೆಯಾಯಿತು. ಆನಂತರ ಬಲರಾಮನು ಹಸ್ತಿನಾಪುರವನ್ನು ಹರಿಯುತ್ತಿದ್ದ ಗಂಗೆಯ ನೀರಿನ ಕಡೆಗೆ ಎಳೆಯಲು ಪ್ರಾರಂಭಿಸಿದನು. ಇದನ್ನು ನೋಡಿ ಹೆದರಿದ ಕೌರವರು ತತ್‌ಕ್ಷಣ ಸಾಂಬನನ್ನು ಅವನ ಪತ್ನಿ ಲಕ್ಷ್ಮಣೆಯನ್ನು ಬಲರಾಮನಿಗೆ ತಂದೊಪ್ಪಿಸಿ ಅವನ ಕ್ಷಮೆ ಬೇಡಿದರು. ಈಗ ಪ್ರತಿ ಮಳೆಗಾಲದಲ್ಲಿಯೂ ಯಮುನೆಯ ಕಡೆಗೆ ಇಳಿಜಾರದ ಹಸ್ತಿನಾಪುರಕ್ಕೆ ಪ್ರವಾಹವು ಬರುತ್ತದೆ. ಬಲರಾಮನು ನಗರವನ್ನು ಗಂಗೆಯಲ್ಲಿ ಎಸೆಯುವೆನೆಂದು ಬೆದರಿಸಿದುದನ್ನು ಇದು ನೆನಪಿಗೆ ತರುತ್ತದೆ.

ಬಲರಾಮನು ದ್ವಿವಿದ ಎನ್ನುವ ವಾನರನನ್ನು ಸಂಹರಿಸಿದನು ಮತ್ತು ನೈಮಿಷಾರಣ್ಯದಲ್ಲಿರುವ ಸಾಧುಸಂತರು ನಡೆಸುತ್ತಿದ್ದ ಯಜ್ಞ ಯಾಗಾದಿಗಳನ್ನು ಹಾಳು ಮಾಡುತ್ತಿದ್ದ ಬಲ್ವಲ ಎಂಬ ರಾಕ್ಷಸನನ್ನು ಸಂಹರಿಸಿದನು. ಅನಂತರ ಭಾರತದಲ್ಲಿರುವ ಅನೇಕ ತೀರ್ಥಸ್ಥಳಗಳಿಗೆ ಯಾತ್ರೆ ಕೈಗೊಂಡನು.

ಬಲರಾಮನು ಶ್ರೀಕೃಷ್ಣನ ಮೊದಲ ವಿಸ್ತರಣೆ. ಸಕಲ ಗ್ರಹಲೋಕಗಳನ್ನು ತನ್ನ ಶಿರದಲ್ಲಿ ಹೊತ್ತಿರುವ ಆದಿಶೇಷ. ಇಡೀ ವಿಶ್ವವನ್ನೇ ಧರಿಸಿರುವ ದೇವೋತ್ತಮ ಪುರುಷ, ಷಡೈಶ್ವರ್ಯಯುಕ್ತನಾದ ಭಗವಂತ. ಬಲವೆಂದರೆ ಕೇವಲ ದೈಹಿಕ ಬಲವಲ್ಲದೇ ಆಧ್ಯಾತ್ಮ ಬಲವೂ ಹೌದು. ರಾಮನೆಂದರೆ ರಂಜನೀಯನು. ಹಾಗಾಗಿ ಶ್ರೀಕೃಷ್ಣನಲ್ಲಿ ಭಕ್ತಿಯನ್ನು ಹೊಂದಲು, ಆನಂದವನ್ನನುಭವಿಸಲು ಬೇಕಾದ ಆಧ್ಯಾತ್ಮಿಕ ಬಲವನ್ನು ನೀಡುವವನೇ ಬಲರಾಮ. ಆದ್ದರಿಂದ ಕೃಷ್ಣನನ್ನು ಸೇರಲು ಬಲರಾಮನ ಕೃಪೆ ಅತ್ಯಗತ್ಯ. ನಮ್ಮೆಲ್ಲರಿಗೂ ಕೃಷ್ಣಭಕ್ತಿಯನ್ನು ದಯಪಾಲಿಸುವಂತೆ ಭಕ್ತಿಪೂರ್ವಕವಾಗಿ ಬಲರಾಮನನ್ನು ಪ್ರಾರ್ಥಿಸೋಣ.

ಹರೇಕೃಷ್ಣ.

ಈ ಲೇಖನ ಶೇರ್ ಮಾಡಿ