ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
ಸಂಸ್ಥಾಪಕರು ಮತ್ತು ಆಚಾರ್ಯರು : ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ
1973ರಲ್ಲಿ ಲಾಸ್‌ಏಂಜಲೀಸ್‌ನಲ್ಲಿ ನೀಡಿದ ಒಂದು ಉಪನ್ಯಾಸ.
ಆಧ್ಯಾತ್ಮಿಕ ಶಿಕ್ಷಣದಲ್ಲಿನ ಈ ಮೊದಲ ಪಾಠವು ಪ್ರಾಣಿಗಳು ಮತ್ತು ಪ್ರಾಣಿಗಳಲ್ಲದವರ ನಡುವೆ ಒಂದು ಸ್ಪಷ್ಟವಾದ ರೇಖೆಯನ್ನು ಎಳೆಯುತ್ತದೆ.
ದೇಹಿನೋಽಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ ।
ತಥಾ ದೇಹಾನ್ತರ ಪ್ರಾಪ್ತಿರ್ ಧೀರಸ್ತತ್ರ ನ ಮುಹ್ಯತಿ ॥
“ದೇಹಸ್ಥ ಆತ್ಮವು ಈ ದೇಹದಲ್ಲಿ ಬಾಲ್ಯದಿಂದ ಯೌವನಕ್ಕೆ, ಮುಪ್ಪಿಗೆ ಒಂದೇ ಸಮನೆ ಸಾಗುವ ರೀತಿಯಲ್ಲೇ, ಸಾವಿನ ಅನಂತರ ಮತ್ತೊಂದು ದೇಹಕ್ಕೆ ಸಾಗುತ್ತದೆ.

ಧೀರನಾದವನು ಇದರಿಂದ ಗೊಂದಲಕ್ಕೆ ಒಳಗಾಗುವುದಿಲ್ಲ.” (ಭಗವದ್ಗೀತೆ: 2.13)
ಇಲ್ಲಿ ದೇವೋತ್ತಮ ಪರಮ ಪುರುಷನು ನೀವು ಈ ದೇಹವಲ್ಲ ಎಂದು ಹೇಳುತ್ತಾನೆ. ಆಧ್ಯಾತ್ಮಿಕ ಶಿಕ್ಷಣದಲ್ಲಿ ಇದು ಮೊದಲನೆಯ ಪಾಠ – “ನಾನು ಈ ದೇಹವಲ್ಲ” ಎನ್ನುವುದನ್ನು ತಿಳಿದುಕೊಳ್ಳುವುದು.
ಯೋಗಿಗಳು ಎಂದು ಕರೆದುಕೊಳ್ಳುವವರು ಅನೇಕ ಚಿತ್ರಪಟಗಳು ಮತ್ತು ಕಪಟಾಚಾರದ ವಿಧಾನಗಳ ಮೂಲಕ ದೇಹದ ವ್ಯಾಯಾಮಗಳನ್ನು ಮಾಡುತ್ತಾರೆ ಮತ್ತು ಮನಸ್ಸಿನ ಸ್ವರೂಪವನ್ನು ಅಧ್ಯಯನ ಮಾಡುತ್ತಾರೆ. ಆದರೆ ನಮ್ಮ ತತ್ತ್ವಶಾಸ್ತ್ರವು ಬೋಧಿಸುವುದೇನೆಂದರೆ, ಈ ದೇಹವು ನಾವಲ್ಲವಾದ್ದರಿಂದ ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ಈ ದೇಹವನ್ನು ವ್ಯಾಯಾಮಕ್ಕೆ ಗುರಿಪಡಿಸುವ ಪ್ರಶ್ನೆಯೇ ಏಳುವುದಿಲ್ಲ. ನಾನು ಈ ದೇಹವಲ್ಲವಾದ್ದರಿಂದ ಅಂಗ ಸಾಧನೆಯ ಪ್ರಕ್ರಿಯೆಯಿಂದ ನನ್ನನ್ನು ನಾನು ಸಾಕ್ಷಾತ್ಕಾರ ಮಾಡಿಕೊಳ್ಳುವುದು ಹೇಗೆ ಸಾಧ್ಯ? ಇದು ಯೋಗಿಯು ಮಾಡುವ ತಪ್ಪು.
ಅನಂತರ ಕರ್ಮಿಗಳು ಬರುತ್ತಾರೆ – ಇವರು ಕಾಮ್ಯ ಕರ್ಮಗಳನ್ನು ಮಾಡುವವರು ಅಥವಾ ಐಹಿಕ ವ್ಯಕ್ತಿಗಳು. ಇವರು ದೈಹಿಕ ಸೌಕರ್ಯಗಳನ್ನು ಬಯಸುತ್ತಾರೆ. ಅವರ ಏಕಮೇವ ವಿಚಾರವೆಂದರೆ ದೇಹಕ್ಕೆ, ಅಥವಾ ಬೇರೆ ಮಾತುಗಳಲ್ಲಿ ಹೇಳುವುದಾದರೆ ಇಂದ್ರಿಯಗಳಿಗೆ, ಅತ್ಯುತ್ತಮ ಸೌಕರ್ಯಗಳನ್ನು ಪಡೆಯುವುದು ಹೇಗೆ ಎನ್ನುವುದು. ನಮಗೆ ಕಣ್ಣುಗಳು, ಕಿವಿಗಳು, ಮೂಗು, ಬಾಯಿ, ನಾಲಗೆ, ಕೈಗಳು ಮತ್ತು ಜನನೇಂದ್ರಿಯ ಇವೆ. ಹೀಗೆ ನಮಗೆ ಅನೇಕ ಇಂದ್ರಿಯಗಳು ಇವೆ. ಈ ದೇಹವೇ ನಾವು ಎಂಬ ಕಲ್ಪನೆಯಲ್ಲಿ ನಾವು ಇರುತ್ತಿದ್ದಂತೆಯೇ, ಕೂಡಲೇ ಇಂದ್ರಿಯ ತುಷ್ಟಿಯ ಅಗತ್ಯ ನಮಗೆ ಉಂಟಾಗುತ್ತದೆ.
ಆದರೆ ಕೃಷ್ಣನು ಅರ್ಜುನನಿಗೆ, “ನೀನು ಈ ದೇಹವಲ್ಲ” ಎಂದು ಹೇಳುತ್ತಾನೆ. ಆದ್ದರಿಂದ ಸ್ವಹಿತಾಸಕ್ತಿಯು ದೇಹದ ಸೌಕರ್ಯಗಳ ಮೇಲೆ ಅವಲಂಬಿಸುವುದಿಲ್ಲ. ಐಹಿಕವಾದಿಗಳು ಇದನ್ನು ತಿಳಿದಿಲ್ಲ. ಪ್ರಸ್ತುತ ಯುಗದಲ್ಲಿ ಪ್ರತಿಯೊಬ್ಬನೂ ತನ್ನ ಇಂದ್ರಿಯಗಳನ್ನು ತುಷ್ಟಿಗೊಳಿಸುವುದರಲ್ಲಿ ಮಗ್ನನಾಗಿದ್ದಾನೆ. ನಾನಾ ಬಗೆಯ ತತ್ತ್ವಜ್ಞಾನಗಳು ವಿಕಾಸಗೊಂಡಿರುವಂತಹ ಭಾರತದಲ್ಲಿ ಇಂದ್ರಿಯ ತುಷ್ಟಿಯ ನಾಸ್ತಿಕವಾದದ ತತ್ತ್ವಜ್ಞಾನವು ಕೂಡ ಇದೆ. ಈ ನಾಸ್ತಿಕವರ್ಗದ ತತ್ತ್ವಶಾಸ್ತ್ರಜ್ಞರಿಗೆ ಚಾರ್ವಾಕ ಮುನಿಯು ನಾಯಕನಾಗಿರುತ್ತಿದ್ದ. ಅವನ ತತ್ತ್ವಜ್ಞಾನವು ಪಾಶ್ಚಾತ್ಯ ಭೋಗವಾದ ತತ್ತ್ವಜ್ಞಾನದಂತಿತ್ತು: “ಈ ದೇಹವು ನಿನಗಿರುವವರೆಗೂ ತಿಂದು, ಕುಡಿದು, ಮಜಾ ಮಾಡು.” ಅಲ್ಲದೆ ಚಾರ್ವಾಕ ಮುನಿಯು ಋಣಂ ಕೃತ್ವಾ ಘೃತಂ ಪಿಬೇತ್ ಅಂದರೆ `ಸಾಲ ಮಾಡಿಯಾದರೂ ತುಪ್ಪ ತಿನ್ನು’ ಎಂದೂ ಹೇಳಿದ್ದ. “ಹೇಗೋ ತುಪ್ಪವನ್ನು ಸಂಪಾದಿಸಿ ರುಚಿಕರವಾದ ಪಕ್ವಾನ್ನಗಳನ್ನು ಭುಂಜಿಸು.” ದೈಹಿಕ ಉಪಭೋಗಗಳು ನಾಲಗೆಯಿಂದ ಪ್ರಾರಂಭವಾಗುತ್ತವೆ. ಆದ್ದರಿಂದ ಹಿಂದಿನ ಆಚಾರ್ಯರ ಹೆಜ್ಜೆಗುರುತುಗಳನ್ನು ಅನುಸರಿಸುತ್ತಾ ಭಕ್ತಿವಿನೋದ ಠಾಕುರರು, “ನಿಮ್ಮ ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕೆಂದರೆ ಮೊದಲು ನಿಮ್ಮ ನಾಲಗೆಯನ್ನು ನಿಯಂತ್ರಿಸಿ” ಎಂದು ಹೇಳುತ್ತಾರೆ. ಅನಂತರ ನಾವು ನಮ್ಮ ಇಂದ್ರಿಯಗಳನ್ನು ಪರಿಶುದ್ಧ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಹೀಗೆ ಒಂದು ದಿನ ನಾವು ಕೃಷ್ಣನನ್ನು ಅರ್ಥಮಾಡಿಕೊಳ್ಳುತ್ತೇವೆ.

ವೈದಿಕ ಧರ್ಮಗ್ರಂಥಗಳಲ್ಲಿ ಹೀಗೆ ಹೇಳಿದೆ: ಅತಃ ಶ್ರೀಕೃಷ್ಣ ನಾಮಾದಿ ನ ಭವೇದ್ ಗ್ರಾಹ್ಯಮ್ ಇಂದ್ರಿಯೈಃ “ಈ ಮೊಂಡಾದ ಐಹಿಕ ಇಂದ್ರಿಯಗಳಿಂದ ನಾವು ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.” ಅದು ಸಾಧ್ಯವಿಲ್ಲ. ಈ ಇಂದ್ರಿಯಗಳು ಎಷ್ಟು ಅಪರಿಪೂರ್ಣವಾಗಿವೆಯೆಂದರೆ ಅವುಗಳಿಂದ ಐಹಿಕವಾದ ಅಥವಾ ಆಧ್ಯಾತ್ಮಿಕವಾದ ಪರಿಪೂರ್ಣ ಜ್ಞಾನವನ್ನು ನೀವು ಗಳಿಸಲು ಸಾಧ್ಯವಿಲ್ಲ.
ಈಗ ವಿಜ್ಞಾನಿಗಳು ಚಂದ್ರನನ್ನು ಅಧ್ಯಯನ ಮಾಡುತ್ತಿದ್ದಾರೆ. ಆದರೆ ಚಂದ್ರನಲ್ಲದೆ ಕೋಟಿ ಕೋಟಿ ಇತರ ಗ್ರಹಗಳಿವೆ. ಇವುಗಳನ್ನು ಕುರಿತು ಅವರು ಏನನ್ನೂ ಹೇಳಲು ಸಾಧ್ಯವಿಲ್ಲ. ಏಕೆಂದರೆ ಅವರ ಇಂದ್ರಿಯಗಳು ಅಪರಿಪೂರ್ಣ. ನಾನು ಸುಮಾರು ಒಂದು ಮೈಲಿ ದೂರ ನೋಡಬಲ್ಲೆ. ಆದರೆ ಕೋಟಿ ಕೋಟಿ ಮೈಲಿ ದೂರದ ವಸ್ತುಗಳನ್ನು ಕುರಿತಂತೆ ನನ್ನ ಇಂದ್ರಿಯಗಳನ್ನು ಬಳಸಿ ಪರಿಪೂರ್ಣವಾದ ಜ್ಞಾನವನ್ನು ನಾನು ಹೇಗೆ ಸಂಪಾದಿಸಬಲ್ಲೆ?
ಹೀಗಾಗಿ ಈ ಇಂದ್ರಿಯಗಳನ್ನು ಬಳಸಿ ಪರಿಪೂರ್ಣವಾದ ಐಹಿಕ ಜ್ಞಾನವನ್ನು ಕೂಡ ನಾವು ಪಡೆಯಲಾರೆವು. ಇನ್ನು ಆಧ್ಯಾತ್ಮಿಕ ಜ್ಞಾನವನ್ನು, ದೇವರನ್ನು ಕುರಿತ ಜ್ಞಾನವನ್ನು ಕುರಿತು ಹೇಳುವುದೇನಿದೆ? ಅದು ನಿಮ್ಮ ಗ್ರಹಿಕೆಗೆ ಮೀರಿದ್ದು. ಆದ್ದರಿಂದ ಧರ್ಮಗ್ರಂಥಗಳು ಹೇಳುತ್ತವೆ. ಅತಃ ಶ್ರೀಕೃಷ್ಣ ನಾಮಾದಿ ನ ಭವೇದ್ ಗ್ರಾಹ್ಯಮ್ ಇಂದ್ರಿಯೈ: “ನಮ್ಮ ಐಹಿಕ ಬುದ್ಧಿ ಮತ್ತು ಇಂದ್ರಿಯಗಳಿಂದ ಕೃಷ್ಣನನ್ನು ಅರಿಯಲು ಸಾಧ್ಯವಿಲ್ಲ.”
ನಿಮ್ಮ ಮಾನಸಿಕ ಊಹಾಪೋಹಗಳಿಂದ ದೇವರನ್ನು ಅರಿಯಲು ನೀವು ಪ್ರಯತ್ನಿಸಿದರೆ, ಅದು ಕಪ್ಪೆಯ ತತ್ತ್ವಜ್ಞಾನವಾಗುತ್ತದೆ. ಕಪ್ಪೆ ಮಹಾಶಯನು ತನ್ನ ಬಾವಿಯಲ್ಲಿ ಕುಳಿತಿರುತ್ತಾ ಅಟ್ಲಾಂಟಿಕ್ ಸಾಗರದ ಉದ್ದಗಲವನ್ನು ಅಳೆಯಲು ಪ್ರಯತ್ನಿಸಿದನಂತೆ. ಅದೇ ರೀತಿಯಲ್ಲಿ ನಮ್ಮ ಪರಿಮಿತ ಬುದ್ಧಿ ಮತ್ತು ಇಂದ್ರಿಯಗಳ ಮೂಲಕ ದೇವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ನಿಷ್ಪ್ರಯೋಜಕ.
ಹಾಗಾದರೆ ದೇವರನ್ನು ಅರ್ಥಮಾಡಿಕೊಳ್ಳುವುದು ಹೇಗೆ ಸಾಧ್ಯವಾಗುತ್ತದೆ? ಸೇವೋನ್ಮುಖೇ ಹಿ ಜಿಹ್ವಾದೌ, ಸ್ವಯಮ್ ಏವ ಸ್ಫುರತಿ ಅದಃ “ದೇವರ ಸೇವೆಯಲ್ಲಿ ನಿನ್ನ ನಾಲಗೆಯನ್ನು ತೊಡಗಿಸಿದರೆ ಅವನು ತನ್ನನ್ನು ನಿನಗೆ ಪ್ರಕಟಗೊಳಿಸುತ್ತಾನೆ.” ಅದೇ ದಿವ್ಯಜ್ಞಾನ. ಆದ್ದರಿಂದ ನಾವು ನಮ್ಮ ನಾಲಗೆಯನ್ನು ನಿಯಂತ್ರಿಸಬೇಕು. ನಾಲಗೆಯ ಕರ್ತವ್ಯ ಏನು? ನಾಲಗೆಯ ಕರ್ತವ್ಯ ರುಚಿ ನೋಡುವುದು ಮತ್ತು ಧ್ವನಿಯನ್ನು ಮಿಡಿಯುವುದು. ಆದ್ದರಿಂದ ದೇವರ ಸೇವೆಯಲ್ಲಿ ನಿಮ್ಮ ನಾಲಗೆಯನ್ನು ತೊಡಗಿಸಿ: ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ / ಹರೇರಾಮ ಹರೇರಾಮ ರಾಮರಾಮ ಹರೇಹರೇ ಎಂದು ಜಪಿಸಿ. ಅದರ ಅರ್ಥ, “ಓ ನನ್ನ ಪ್ರಭು ಕೃಷ್ಣ, ಓ ಕೃಷ್ಣನ ಶಕ್ತಿಯಾದ ಶ್ರೀಮತಿ ರಾಧಾರಾಣಿಯೇ – ನೀವಿಬ್ಬರೂ ದಯವಿಟ್ಟು ನಿಮ್ಮ ಸೇವೆಯಲ್ಲಿ ನನ್ನನ್ನು ತೊಡಗಿಸಿ.”
ನರೋತ್ತಮದಾಸ ಠಾಕುರರು ಹಾಡುವಂತೆ, `ಹಾ ಹಾ ಪ್ರಭು ನಂದಸುತ, ವೃಷಭಾನು ಸುತಾಜುತ:’ “ನನ್ನ ಪ್ರೀತಿಯ ಪ್ರಭು ಕೃಷ್ಣ, ನೀನು ನಂದ ಮಹಾರಾಜನ ಪುತ್ರನೆಂದು ಪ್ರಖ್ಯಾತನಾಗಿದ್ದೀಯೆ, ಮತ್ತು ನಿನ್ನ ನಿತ್ಯ ಸಂಗಾತಿ ಶ್ರೀಮತಿ ರಾಧಾರಾಣಿಯು ವೃಷಭಾನು ರಾಜನ ಮಗಳೆಂದು ಪ್ರಖ್ಯಾತಳಾಗಿದ್ದಾಳೆ.” ಅನಂತರ, ಕೊರುಣಾ ಕರೋಹೋ ಏಇ ಬಾರೋ: “ಈಗ ನಾನು ನಿನ್ನಲ್ಲಿಗೆ ಬಂದಿದ್ದೇನೆ. ದಯವಿಟ್ಟು ನೀವಿಬ್ಬರೂ ನನ್ನ ಮೇಲೆ ಕರುಣೆ ತೋರಿ.” ನಾ ಥೇಲಿಹೋ ರಾಙ್ಗಾ ಪಾಯ್: “ ದಯವಿಟ್ಟು ನನ್ನನ್ನು ತಿರಸ್ಕರಿಸಬೇಡಿ ಅಥವಾ ನಿಮ್ಮ ಪಾದಕಮಲಗಳಿಂದ ನನ್ನನ್ನು ದೂರಕ್ಕೆ ಒದೆಯಬೇಡಿ.”
ಕೃಷ್ಣನು ನಮ್ಮನ್ನು ಕಾಲಿನಿಂದ ಒದ್ದು ದೂರಕ್ಕೆ ತಳ್ಳಿದರೂ, ಅದು ನಮ್ಮ ದೊಡ್ಡ ಸೌಭಾಗ್ಯವೇ. ಉದಾಹರಣೆಗೆ, ಕೃಷ್ಣನು ಕಾಳಿಂಗ ಸರ್ಪದ ಹೆಡೆಗಳನ್ನು ತುಳಿಯುತ್ತಿದ್ದಾಗ, ಕಾಳಿಂಗನ ಪತ್ನಿಯರು ಪ್ರಾರ್ಥಿಸಿದರು, “ನನ್ನ ಪ್ರೀತಿಯ ಪ್ರಭುವೇ, ಈ ದುರುಳ ಕಾಳಿಂಗ ಸರ್ಪಕ್ಕೆ ನಿನ್ನ ಪಾದಗಳಿಂದ ತನ್ನ ಹೆಡೆಗಳನ್ನು ತುಳಿಸಿಕೊಳ್ಳುವಂತಹ ಸೌಭಾಗ್ಯ ಹೇಗೆ ಪ್ರಾಪ್ತವಾಯಿತೋ ನಮಗೆ ತಿಳಿಯದು. ಎಲ್ಲ ಮಹಾ ಮಹಾ ಮುನಿಗಳು ಮತ್ತು ಸಾಧು ಪುರುಷರು ನಿನ್ನ ಪಾದಗಳ ಕ್ಷಣ ಮಾತ್ರ ದರ್ಶನಕ್ಕಾಗಿ ಕೋಟ್ಯಂತರ ವರ್ಷಗಳ ಕಾಲ ನಿನ್ನ ಪಾದ ಕಮಲಗಳನ್ನು ಕುರಿತು ಧ್ಯಾನ ಮಾಡುತ್ತಾರೆ. ಆದರೆ ಈ ಕಾಳಿಂಗನಿಗಾದರೋ ಆ ಪಾದಗಳಿಂದ ಮತ್ತೆ ಮತ್ತೆ ತುಳಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಅವನಿಗೆ ಇಂತಹ ಸೌಭಾಗ್ಯ ಪ್ರಾಪ್ತಿಯಾಗಲು ಅವನು ಹಿಂದಿನ ಜನ್ಮದಲ್ಲಿ ಏನು ಮಾಡಿದ್ದನೋ ನಮಗೆ ತಿಳಿಯದು.”

ಹೀಗೆ, ನಾವು ನಮ್ಮ ಮಾನಸಿಕ ಊಹಾಪೋಹಗಳಿಂದ, ನಮ್ಮ ಪರಿಮಿತ ಇಂದ್ರಿಯಗಳಿಂದ ಕೃಷ್ಣನನ್ನು ಅರ್ಥಮಾಡಿಕೊಳ್ಳಲಾರೆವು. ಅದು ಅಸಾಧ್ಯ. ನಾವು ಅವನ ಸೇವೆಯಲ್ಲಿ ನಿರತವಾಗಬೇಕು. ಹೇಗೆ? ಸೇವೋನ್ಮುಖೇ ಹಿ ಜಿಹ್ವಾದೌ: “ ನಾಲಗೆಯಿಂದ ಪ್ರಾರಂಭಮಾಡಿ” ನಾಲಗೆಯು ನಮ್ಮ ಅತ್ಯಂತ ದೊಡ್ಡ ಶತ್ರು ಮತ್ತು ಅತ್ಯಂತ ದೊಡ್ಡ ಮಿತ್ರ. ನಿಮ್ಮ ನಾಲಗೆಯು ಇಷ್ಟ ಬಂದಂತೆ ಮಾಡಲು – ಧೂಮಪಾನ, ಮದ್ಯಪಾನ, ಮಾಂಸಭಕ್ಷಣೆ – ನೀವು ಅವಕಾಶ ಕೊಟ್ಟರೆ ಆಗ ಅದು ನಿಮ್ಮ ಅತ್ಯಂತ ದೊಡ್ಡ ಶತ್ರು. ಆದರೆ ನೀವು ನಾಲಗೆಯನ್ನು ನಿಯಂತ್ರಿಸಬಲ್ಲಿರಾದರೆ, ಆಗ ತನ್ನಷ್ಟಕ್ಕೆ ಇತರ ಎಲ್ಲ ಇಂದ್ರಿಯಗಳನ್ನೂ ನೀವು ನಿಯಂತ್ರಿಸಬಲ್ಲಿರಿ.
ಪರಮ ಪ್ರಭುವನ್ನು ಕೀರ್ತಿಸಲು ಸದಾ ನಾಲಗೆಯನ್ನು ಬಳಸಬೇಕು. ಅದೇ ನಾಲಗೆಯೊಡನೆ ನಾವು ನಡೆಸಬೇಕಾದ ವ್ಯವಹಾರ. ಮತ್ತು ಕೃಷ್ಣ ಪ್ರಸಾದದ ವಿನಾ (ಕೃಷ್ಣನಿಗೆ ಸಮರ್ಪಿಸಿದ ಸಸ್ಯಾಹಾರ) ಬೇರೆ ಏನನ್ನೂ ತಿನ್ನಲು ನಾಲಗೆಗೆ ಅವಕಾಶ ಕೊಡಬಾರದು. ಆಗ ನೀವು ಕೇವಲ ನಾಲಗೆಯನ್ನು ನಿಯಂತ್ರಿಸುವ ಮೂಲಕವೇ ಮುಕ್ತರಾಗುತ್ತೀರಿ. ಆದರೆ ನಾಲಗೆಯು ಮನಸ್ಸಿಗೆ ಬಂದದ್ದನ್ನೆಲ್ಲಾ ಮಾಡಲು ಅವಕಾಶ ಕೊಟ್ಟರೆ, ಆಗ ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸುವುದು ಬಹಳ ದುಸ್ತರವಾಗುತ್ತದೆ.
“ನಾನು ಈ ದೇಹವಲ್ಲ, ಆದ್ದರಿಂದ ಇಂದ್ರಿಯಗಳನ್ನು ತುಷ್ಟಿಗೊಳಿಸುವುದು ನನ್ನ ಕೆಲಸವಲ್ಲ” ಎಂದು ನಾನು ಅರ್ಥಮಾಡಿಕೊಂಡ ಕೂಡಲೇ ಆಧ್ಯಾತ್ಮಿಕ ಶಿಕ್ಷಣ ಪ್ರಾರಂಭವಾಗುತ್ತದೆ. ನಾನು ಈ ದೇಹವಲ್ಲ ಎಂದ ಮೇಲೆ ಈ ದೇಹದ ಇಂದ್ರಿಯಗಳನ್ನು ತುಷ್ಟಿಗೊಳಿಸಲು ನಾನು ಏಕೆ ಪರಿತಪಿಸಬೇಕು? ಭಗವದ್ಗೀತೆಯಲ್ಲಿ ಪ್ರಭು ಕೃಷ್ಣನ ಪ್ರಪ್ರಥಮ ಬೋಧನೆ ಇದೇ ಆಗಿದೆ.
ಕರ್ಮಿಗಳು, ಜ್ಞಾನಿಗಳು ಮತ್ತು ಯೋಗಿಗಳು ಎಲ್ಲ ದೇಹದ ಆವಶ್ಯಕತೆಗಳನ್ನು ಪೂರೈಸಲು ಪ್ರಯತ್ನಿಸುತ್ತಿದ್ದಾರೆ. ಕರ್ಮಿಗಳು ಅದನ್ನು ನೇರವಾಗಿಯೇ ಮಾಡುತ್ತಿದ್ದಾರೆ: “ತಿನ್ನು, ಕುಡಿ, ಖುಷಿಯಾಗಿರು ಮತ್ತು ಮಜಾ ಮಾಡು.” ಅದು ಅವರ ತತ್ತ್ವ. ಇನ್ನು ಜ್ಞಾನಿಗಳ ಗುರಿಯೆಂದರೆ ಅವರು ಈ ದೇಹವಲ್ಲ ಎಂಬುದನ್ನು ಕೇವಲ ಅರ್ಥಮಾಡಿಕೊಳ್ಳುವುದೇ ಆಗಿದೆ (ನೇತಿ ನೇತಿ). ಯೋಗಿಗಳೆಲ್ಲರೂ ದೈಹಿಕ ವ್ಯಾಯಾಮಗಳಿಂದ ಇಂದ್ರಿಯಗಳನ್ನು ನಿಯಂತ್ರಿಸುವ ಮಟ್ಟಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಅದೇ ಹಠಯೋಗ. ಹೀಗೆ ಅವರ ಚಟುವಟಿಕೆಯ ಕೇಂದ್ರ ಬಿಂದು ಕೂಡ ದೇಹವೇ.
ಆದರೆ ನಮ್ಮ ತತ್ತ್ವಜ್ಞಾನವು ನಾವು ಈ ದೇಹವಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳು-ವುದರಿಂದಲೇ ಆರಂಭವಾಗುತ್ತದೆ ಅಲ್ಲವೇ? ಕರ್ಮಿಗಳು, ಜ್ಞಾನಿಗಳು ಮತ್ತು ಯೋಗಿಗಳು ಈ ದೇಹವನ್ನು ಅಧ್ಯಯನ ಮಾಡುವ ಬಿ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಮೇಲೆ, ಅವರು ತಾವು ನಿಜವಾಗಿಯೂ ಚೇತನಾತ್ಮರು ಎಂದು ಅರ್ಥಮಾಡಿಕೊಳ್ಳಬಹುದು. ಆದರೆ, ನಮ್ಮ ತತ್ತ್ವವು “ನೀನು ಈ ದೇಹವಲ್ಲ” ಎಂಬ ಕೃಷ್ಣನ ಉಪದೇಶದೊಡನೆ ಪ್ರಾರಂಭವಾಗುತ್ತದೆ. ಹೀಗೆ ಕೃಷ್ಣಪ್ರಜ್ಞೆಯು ಆಧ್ಯಾತ್ಮಿಕ ತತ್ತ್ವಜ್ಞಾನದ ಸ್ನಾತಕೋತ್ತರ ಅಧ್ಯಯನ.
ಭಾರತದಲ್ಲಿ ಅನೇಕ ದೊಡ್ಡ ರಾಜಕಾರಣಿಗಳು ಮತ್ತು ವಿದ್ವಾಂಸರು ಭಗವದ್ಗೀತೆಯನ್ನು ಕುರಿತು ವ್ಯಾಖ್ಯಾನಗಳನ್ನು ಬರೆದಿರುವುದನ್ನು ನಾವು ನೋಡಿದ್ದೇವೆ. ಆದರೆ ಅವರು ಬರೆದಿರುವುದು ಜೀವನವನ್ನು ಕುರಿತ ದೈಹಿಕ ಕಲ್ಪನೆಯನ್ನು ಆಧರಿಸಿದ್ದಾಗಿದೆ. ಮಹಾ ನಾಯಕರೊಬ್ಬರು ಭಗವದ್ಗೀತೆಯನ್ನು ಹಿಡಿದುಕೊಂಡು ತಮ್ಮ ಛಾಯಾಚಿತ್ರವನ್ನು ತೆಗೆಸಿಕೊಂಡಿದ್ದಾರೆ. ಆದರೆ ತಮ್ಮ ಬದುಕಿನುದ್ದಕ್ಕೂ ಅವರು ದೈಹಿಕ ಕಲ್ಪನೆಯ ಆಶ್ರಯದಲ್ಲಿಯೇ ಕೆಲಸ ಮಾಡಿದ್ದಾರೆ. “ನಾನು ಭಾರತೀಯ”, “ನಾನು ಅಮೆರಿಕನ್”, “ನಾನು ಕೆನಡಿಯನ್” ಎನ್ನಬಹುದು. ಆದರೆ ನಾವು ಈ ದೇಹವಲ್ಲವಾದ್ದರಿಂದ ಈ ಭಾರತೀಯ, ಅಮೆರಿಕನ್, ಕೆನಡಿಯನ್ ಎಂಬ ಪ್ರಶ್ನೆ ಎಲ್ಲಿ?
ಈ ಎಲ್ಲ ವ್ಯಾಖ್ಯಾನಕಾರರು ಜೀವನವನ್ನು ಕುರಿತ ದೈಹಿಕ ಕಲ್ಪನೆಯಲ್ಲಿಯೇ ಮಗ್ನರಾಗಿದ್ದರೂ, ಅವರು ಭಗವದ್ಗೀತೆಯನ್ನು ಆಧರಿಸಿ ಉಪದೇಶ ಮಾಡುತ್ತಾರೆ. ಭಗವದ್ಗೀತೆಯನ್ನು ಕುರಿತು ಅವರು ಏನನ್ನು ತಾನೆ ಅರ್ಥಮಾಡಿಕೊಳ್ಳಬಲ್ಲರು? ಒಬ್ಬ ವ್ಯಕ್ತಿಯು, “ನಾನು ಈ ದೇಶಕ್ಕೆ ಸೇರಿದವನು, ನಾನು ಈ ಕುಟುಂಬಕ್ಕೆ ಸೇರಿದವನು, ನಾನು ಈ ಸಮುದಾಯಕ್ಕೆ ಸೇರಿದವನು, ನಾನು ಈ ಜನಾಂಗಕ್ಕೆ ಸೇರಿದವನು, ನಾನು ಈ ಧರ್ಮಕ್ಕೆ ಸೇರಿದವನು” ಎಂದೆಲ್ಲಾ ಯೋಚಿಸಿದರೆ ಆಗ ಅವನು ಜೀವನವನ್ನು ಕುರಿತ ದೈಹಿಕ ಕಲ್ಪನೆಯಲ್ಲಿ ಆಳವಾಗಿ ಮುಳುಗಿದ್ದಾನೆ. ಆದರೆ ಭಗವದ್ಗೀತೆಯು ಪ್ರಾರಂಭದಲ್ಲಿಯೇ ನೀನು ಈ ದೇಹವಲ್ಲ ಎಂದು ಬೋಧಿಸುತ್ತದೆ.
ಹೀಗೆ, ಯೋಗಿಗಳು ದೈಹಿಕ ವ್ಯಾಯಾಮದಿಂದ ತಮ್ಮನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಜ್ಞಾನಿಗಳು ತಾವು ಈ ದೇಹವಲ್ಲ ಎಂದು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕರ್ಮಿಗಳಾದರೋ, ಪ್ರಾಣಿಗಳ ಹಾಗೆ, ತಾವು ಈ ದೇಹವಲ್ಲ ಎಂದು ಅರ್ಥಮಾಡಿಕೊಳ್ಳಲಾರರು. ಹೀಗೆ, ವಾಸ್ತವಿಕವಾಗಿ, ಕರ್ಮಿಗಳು, ಜ್ಞಾನಿಗಳು ಮತ್ತು ಯೋಗಿಗಳು ಪ್ರಾಣಿಗಳಿಗಿಂತ ಸ್ವಲ್ಪ ಮಟ್ಟಿಗೆ ಉನ್ನತ ಸ್ಥಾನದಲ್ಲಿದ್ದಾರೆ. ಅಷ್ಟೆ .
ಇಲ್ಲೊಂದು ಉದಾಹರಣೆ: ಭಾರತದಲ್ಲಿ ಜನರು ಬಯಲಿನಲ್ಲಿ ಮಲ ವಿಸರ್ಜನೆ ಮಾಡುತ್ತಾರೆ. ಅಲ್ಲಿ ಬಿಸಿಲು ಜಾಸ್ತಿಯಾದುದರಿಂದ ದಿನದ ಕೊನೆಯ ವೇಳೆಗೆ ಮಲದ ಹೊರಭಾಗ ಒಣಗಿರುತ್ತದೆ. ಆದರೆ ಒಳಭಾಗ ಇನ್ನೂ ಹಸಿಯಾಗಿಯೇ ಇರುತ್ತದೆ. ಆದ್ದರಿಂದ ಯಾರಾದರೊಬ್ಬರು ಹೇಳಬಹುದು, “ಈ ಹೊರಭಾಗ ತುಂಬ ಚೆನ್ನಾಗಿದೆ, ಏಕೆಂದರೆ ಅದು ಒಣಗಿದೆ.” ಆದರೆ ಅದು ಕೇವಲ ಮಲ. ಒಳಭಾಗವಾಗಿರಲಿ ಅಥವಾ ಹೊರಭಾಗವಾಗಿರಲಿ ಅದು ಮಲವೇ. ಅದೇ ರೀತಿಯಲ್ಲಿ ಜೀವನದ ದೈಹಿಕ ಕಲ್ಪನೆಯಲ್ಲಿರುವ ಈ ಮೂರ್ಖರು ಯೋಚಿಸುತ್ತಿದ್ದಾರೆ, “ನಾನೊಬ್ಬ ರಾಷ್ಟ್ರೀಯವಾದಿ”, “ನಾನೊಬ್ಬ ಯೋಗಿ”, “ನಾನೊಬ್ಬ ಇದು”, “ನಾನೊಬ್ಬ ಅದು”. ಆದರೆ ಜೀವನದ ದೈಹಿಕ ಕಲ್ಪನೆಯಲ್ಲಿ ನೀವಿರುವವರೆಗೂ, ನೀವು ಒಂದು ಪ್ರಾಣಿಗಿಂತ ಉತ್ತಮರೇನಲ್ಲ.
ಇದು ಶ್ರೀಮದ್ಭಾಗವತದ ಖಚಿತವಾದ ಹೇಳಿಕೆ (10.84.13) ಯಸ್ಯಾತ್ಮ ಬುದ್ಧಿಃ ಕುಣಪೇ ತ್ರಿಧಾತುಕೇ ಸ್ವಧೀಃ ಕಲತ್ರಾದಿಷು ಸ ಏವ ಗೋಖರಃ. ಗೋಖರಃ ಎಂದರೆ ಒಂದು ಹಸು ಅಥವಾ ಒಂದು ಕತ್ತೆ. ಪ್ರಾಣಿಗಳು ಯಾರು ಪ್ರಾಣಿ? ಯಸ್ಯಾತ್ಮ ಬುದ್ಧಿಃ ಕುಣಪೇ ತ್ರಿಧಾತುಕೇ ಅಂದರೆ “ವಾತ, ಪಿತ್ತ ಮತ್ತು ಕಫದ ಒಂದು ಚೀಲ.” ಆದ್ದರಿಂದ ಒಬ್ಬ ವ್ಯಕ್ತಿಯು “ನಾನು ಈ ದೇಹ, ವಾತ, ಪಿತ್ತ ಮತ್ತು ಕಫಗಳಿಂದ ತುಂಬಿದ ಈ ಚೀಲ” ಎಂದು ಯೋಚಿಸಿದರೆ ಅವನೊಂದು ಪ್ರಾಣಿ. “ನನಗೆ ನನ್ನ ಕುಟುಂಬವಿದೆ, ಸಮಾಜವಿದೆ, ಮಕ್ಕಳಿದ್ದಾರೆ, ಹೆಂಡತಿಯಿದ್ದಾಳೆ ಮತ್ತು ದೇಶವಿದೆ. ಅವೆಲ್ಲವೂ ನನ್ನವು” ಎಂದು ಒಬ್ಬ ವ್ಯಕ್ತಿಯು ಯೋಚಿಸಿದರೆ ಅವನೂ ಒಂದು ಪ್ರಾಣಿಯೇ.
ಪತ್ನಿಯ ಮೂಲಕ ನಾವು ಮಕ್ಕಳನ್ನು ಪಡೆಯುತ್ತೇವೆ. ನಾವು ವಿಸ್ತರಿಸುತ್ತೇವೆ. ಸಂಸ್ಕೃತ ಶಬ್ದ `ಸ್ತ್ರೀ’ ಎಂದರೆ “ವಿಸ್ತರಣೆ”. ನಾನು ಒಬ್ಬನು. ಆದರೆ ನನಗೊಬ್ಬಳು ಹೆಂಡತಿ ದೊರಕಿದ ಕೂಡಲೇ ನಾನು ಇಬ್ಬರಾಗುತ್ತೇನೆ. ಅನಂತರ ಮೂರು, ನಾಲ್ಕು, ಐದು ಆಗುತ್ತೇನೆ. ಆದರೆ ಈ ಐಹಿಕ ವಿಸ್ತರಣೆಗಳನ್ನು, ದೈಹಿಕ ವಿಸ್ತರಣೆಗಳನ್ನು ವಿಸ್ತರಿಸಿಕೊಳ್ಳುತ್ತಾ ಹೋದರೆ, ನಮ್ಮ ಮಾಯೆಯನ್ನು ಇನ್ನಷ್ಟು ಆಳಮಾಡಿಕೊಳ್ಳುತ್ತಾ ಹೋದಂತೆ. ಜನಸ್ಯ ಮೋಹೋಽಯಮ್ ಅಹಂ ಮಮೇತಿ. ನಮ್ಮ ಮಾಯೆಯೆಂದರೆ, “ನಾನು ಈ ದೇಹ, ಈ ದೇಹಕ್ಕೆ ಸಂಬಂಧಪಟ್ಟಿದ್ದೆಲ್ಲವೂ ನನ್ನದು” ಎಂದು ಯೋಚಿಸುವುದು. ಜೀವನದ ಈ ದೈಹಿಕ ಕಲ್ಪನೆಯಲ್ಲಿ ನಾವು ಇರುವವರೆಗೂ ನಮ್ಮ ಮಾಯೆಯು ಹೆಚ್ಚಾಗುತ್ತಲೇ ಹೋಗುತ್ತದೆ. ಅದು ಎಂದೂ ಕಡಮೆಯಾಗುವುದಿಲ್ಲ. ಆದ್ದರಿಂದ ಭಗವದ್ಗೀತೆಯಲ್ಲಿ ಅರ್ಜುನನಿಗೆ ಕೃಷ್ಣನ ಪ್ರಪ್ರಥಮ ಬೋಧನೆಯೆಂದರೆ, “ನೀನು ಈ ದೇಹವಲ್ಲ.” ಅರ್ಜುನನು ಮಾಯೆಯಲ್ಲಿದ್ದ. “ನಾನು ಈ ದೇಹ. ಶತ್ರು ಪಕ್ಷದಲ್ಲಿರುವವರು ನನ್ನ ಸೋದರರು, ಸೋದರ ಪುತ್ರರು, ನನ್ನ ಅಜ್ಜ – ಅವರೆಲ್ಲ ನನ್ನ ಬಂಧುಗಳು. ಅವರನ್ನು ನಾನು ಹೇಗೆ ಕೊಲ್ಲಲಿ?” ಎಂದು ಯೋಚಿಸುತ್ತಿದ್ದ. ಇದು ಮಾಯೆ. ಈ ಮಾಯೆಯನ್ನು, ಈ ಅಂಧಕಾರವನ್ನು ಚೆದುರಿಸಲು, ಮೊದಲನೆಯ ಪಾಠದಲ್ಲಿಯೇ “ನೀನು ಈ ದೇಹವಲ್ಲ” ಎಂದು ಕೃಷ್ಣನು ಹೇಳುತ್ತಾನೆ. ಪ್ರಭು ಹೇಳುತ್ತಾನೆ, ದೇಹಿನೋಽಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ ತಥಾ ದೇಹಾನ್ತರ ಪ್ರಾಪ್ತಿರ್: “ಈಗಾಗಲೇ ನೀನು ಬದಲಾವಣೆಯಾಗಿರುವಂತೆ ನೀನು ಈ ದೇಹವನ್ನು ಬದಲಾಯಿಸಬೇಕಾಗುತ್ತದೆ. ಒಂದು ಕಾಲದಲ್ಲಿ ನೀನು ಕೂಸಾಗಿದ್ದೆ. ಅನಂತರ ನೀನು ಒಂದು ಮಗುವಿನ ದೇಹಕ್ಕೆ ಬದಲಾದೆ. ಅನಂತರ ಕಿಶೋರನಾದೆ. ಆಮೇಲೆ ತರುಣನಾದೆ. ಮುಂದೆ ನೀನು ಒಬ್ಬ ವೃದ್ಧನ ದೇಹಕ್ಕೆ ಬದಲಾಗುತ್ತೀಯೆ. ಹೀಗೆ ಈಗಾಗಲೇ ನೀನು ಅನೇಕ ಬಾರಿ ಬದಲಾಯಿಸಿರುವುದರಿಂದ ಮರಣದಲ್ಲಿ ಇನ್ನೊಂದು ಬದಲಾವಣೆಯನ್ನು ನೀನು ಹೊಂದುತ್ತೀಯೆ. ಅನಂತರ ನೀನು ಇನ್ನೊಂದು ದೇಹವನ್ನು ಸ್ವೀಕರಿಸಬೇಕಾಗುತ್ತದೆ.” ತುಂಬ ಸರಳವಾದ ತರ್ಕ. ಮುಂದಿನ ಶ್ಲೋಕದಲ್ಲಿ ಕೃಷ್ಣ ಹೇಳುತ್ತಾನೆ, “ಆದ್ದರಿಂದ ನಿನ್ನ ಸೋದರ ಪುತ್ರರು ಅಥವಾ ಅಜ್ಜ ಅಥವಾ ಗುರುಗಳು ಸಾಯುತ್ತಾರೆಂದು ನೀನು ಹೆದರಬೇಡ. ಅವರು ಸಾಯುವುದಿಲ್ಲ. ಅವರು ಕೇವಲ ತಮ್ಮ ದೇಹವನ್ನು ಬದಲಾಯಿಸುತ್ತಾರೆ. ಅಷ್ಟೆ.”

ಕೃಷ್ಣನು ಮತ್ತೂ ಹೇಳುವುದೇನೆಂದರೆ, ಧೀರಃ ತತ್ರ ನ ಮುಹ್ಯತಿ. ಧೀರ ಎಂದರೆ “ಸ್ತಿಮಿತದಲ್ಲಿರುವವನು. ಅವನ ಮೆದುಳು ಉತ್ತಮವೂ ನಿರಾಕುಲವೂ ಆಗಿರುವುದು.” ಮರಣ ಸಮಯದಲ್ಲಿ ದೇಹವು ಮಾತ್ರ ಬದಲಾಗುವುದರಿಂದ ಅಂತಹ ವ್ಯಕ್ತಿಯು ದಿಗ್ಭ್ರಮೆಗೊಳ್ಳುವುದಿಲ್ಲ. “ಮುಂದೆ ನನಗೆ ಯಾವ ಬಗೆಯ ದೇಹ ಸಿಗುತ್ತದೆ?” ಎಂದು ಅವನು ಯೋಚಿಸುತ್ತಾನೆ. ಅದೇ ನಿಜವಾದ ಸಮಸ್ಯೆ.
ಆದರೆ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿರುವ ಈ ಮೂರ್ಖರಿಗೆ ಮುಂದಿನ ಜೀವನದ ಬಗೆಗೆ ಗೊತ್ತಿಲ್ಲ. ಇಷ್ಟಾಗಿಯೂ ಅವರು ತಮ್ಮ ಬುದ್ಧಿಶಕ್ತಿಯ ಬಗೆಗೆ ಹೆಮ್ಮೆ ಪಡುತ್ತಾರೆ. ಪ್ರಸ್ತುತ ದೇಹಕ್ಕೆ ಅವರು ಹೇಗೆ ಬಂದಿದ್ದಾರೆ ಅಥವಾ ಮುಂದೆ ಎಂತಹ ದೇಹ ಅವರಿಗೆ ಸಿಗಬಹುದು ಎನ್ನುವುದು ಅವರಿಗೆ ಗೊತ್ತಿಲ್ಲ. ಬುದ್ಧಿಶಕ್ತಿ ಇಲ್ಲ. ಕೆಲವು ಸಲ ಅವರು ಹೀಗೂ ಹೇಳುತ್ತಾರೆ, “ಮುಂದಿನ ಜನ್ಮದಲ್ಲಿ ನನಗೆ ಒಂದು ನಾಯಿಯ ದೇಹ ದೊರಕುತ್ತದೆ ಎಂದುಕೊಳ್ಳೋಣ. ಅದರಿಂದ ಏನು ತೊಂದರೆ?” ಹೌದು. ಹವಾಯಿ ವಿಶ್ವವಿದ್ಯಾನಿಲಯದಲ್ಲಿ ಒಬ್ಬ ವಿದ್ಯಾರ್ಥಿ ಹಾಗೆ ಹೇಳಿದ. ಅವನು ಶಿಕ್ಷಣವನ್ನು ಪಡೆಯುತ್ತಿದ್ದಂತಹವನು. ಆದರೆ ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟುವುದಕ್ಕೆ ಅವನ ಅಭ್ಯಂತರವಿರಲಿಲ್ಲ. ಇದು ಇಂತಹ ಶಿಕ್ಷಣ. ಮಾಸ್ಕೊದಲ್ಲಿ ಪ್ರಾಧ್ಯಾಪಕ ಕೊಟೋವ್‌ಸ್ಕಿ ನನಗೆ ಹೇಳಿದರು, “ಸ್ವಾಮೀಜಿ, ಈ ದೇಹ ಮುಗಿಯಿತೆಂದರೆ ಎಲ್ಲ ಮುಗಿದ ಹಾಗೆಯೇ.” ನೋಡಿದಿರಾ! ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಎನ್ನುವವರ ಪರಿಸ್ಥಿತಿ ಇದು. ಎಲ್ಲ ಮೂರ್ಖರು. ಇದು ನಮ್ಮ ಸವಾಲು. ಅವರೆಲ್ಲ ಮೂರ್ಖರು. ಏಕೆಂದರೆ ಅವರು ಜೀವನದ ದೈಹಿಕ ಕಲ್ಪನೆಯಲ್ಲಿದ್ದಾರೆ. ಈ ಜನ್ಮದಲ್ಲಿಯೇ ದೇಹವು ಬದಲಾಗುತ್ತಿರುವುದನ್ನು ಅವರು ಪ್ರತ್ಯಕ್ಷ ನೋಡುತ್ತಿದ್ದಾರೆ. ಆದರೂ ಕೂಡ ಈ ದೇಹವು ಅಂತ್ಯಗೊಂಡಮೇಲೆ ಅವರಿಗೆ ಇನ್ನೊಂದು ದೇಹ ದೊರೆಯುತ್ತದೆ ಎನ್ನುವುದನ್ನು ಅವರು ನಂಬುತ್ತಿಲ್ಲ.
ಅದು ತುಂಬ ತರ್ಕಬದ್ಧವಾಗಿದೆ. ದೇಹಿನೋಽಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ ತಥಾ ದೇಹಾನ್ತರ ಪ್ರಾಪ್ತಿರ್ ನಮ್ಮ ದೇಹವನ್ನು ಅನೇಕ ಬಾರಿ ನಾವು ಬದಲಾಯಿಸಿರುವ ರೀತಿಯಲ್ಲಿಯೇ ಮರಣ ಸಮಯದಲ್ಲಿ ನಾವು ಮತ್ತೆ ಅದನ್ನು ಬದಲಾಯಿಸಬೇಕಾಗುತ್ತದೆ. ಆದ್ದರಿಂದ ಬುದ್ಧಿವಂತನಾದವನು ಮುಂದೆ ತನಗೆ ಎಂತಹ ದೇಹ ಸಿಗುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಅದೇ ಬುದ್ಧಿವಂತಿಕೆ.
ಈಗ, ಯಾವ ಬಗೆಯ ದೇಹವನ್ನು ನೀವು ಪಡೆಯಬಹುದು ಎನ್ನುವುದನ್ನೂ ಭಗವದ್ಗೀತೆಯಲ್ಲಿ ವಿವರಿಸಲಾಗಿದೆ (9.25):
ಯಾನ್ತಿ ದೇವವ್ರತಾ ದೇವಾನ್ ಪಿತೄನ್ ಯಾನ್ತಿ ಪಿತೃವ್ರತಾಃ ।
ಭೂತಾನಿ ಯಾನ್ತಿ ಭೂತೇಜ್ಯಾ ಯಾನ್ತಿ ಮದ್ಯಾಜಿನೋಽಪಿ ಮಾಮ್ ॥
ನೀವು ಬಯಸಿದರೆ ಉನ್ನತ ಗ್ರಹವ್ಯೂಹಗಳಿಗೆ ಹೋಗಬಹುದು. ಅಲ್ಲಿ ದೇವತೆಗಳು ನೂರಾರು, ಸಾವಿರಾರು, ಲಕ್ಷಾಂತರ ವರ್ಷಗಳ ಕಾಲ ಜೀವಿಸಿರುತ್ತಾರೆ. ಅಲ್ಲಿ ನಿಮಗೆ ಇಂದ್ರಿಯ ತುಷ್ಟಿಗೆ ಸಾವಿರ ಸಾವಿರಪಟ್ಟು ಉತ್ತಮವಾದ ಸೌಕರ್ಯಗಳಿವೆ. ಇಲ್ಲದಿದ್ದರೆ ಜನರು ಸ್ವರ್ಗಲೋಕಗಳಿಗೆ ಹೋಗಲು ಏಕೆ ಬಯಸುತ್ತಿದ್ದರು? ಉನ್ನತ ಗ್ರಹವ್ಯೂಹಗಳಿಗೆ ಹೋಗಬೇಕೆಂದು ನೀವು ಪ್ರಯತ್ನ ಮಾಡಿದರೆ ಹೋಗಬಹುದು ಎಂದು ಕೃಷ್ಣ ಹೇಳುತ್ತಾನೆ. ಅದಕ್ಕೊಂದು ವಿಧಾನವಿದೆ. ಉದಾಹರಣೆಗೆ, ಚಂದ್ರಲೋಕಕ್ಕೆ ಹೋಗಬೇಕೆಂದರೆ ವ್ಯಕ್ತಿಯು ಕರ್ಮಕಾಂಡದಲ್ಲಿ, ಧರ್ಮನಿಷ್ಠವಾದ ಕಾಮ್ಯ ಕರ್ಮಗಳಲ್ಲಿ ಪಾರಂಗತನಾಗಿರಬೇಕು. ಆಗ, ಧರ್ಮನಿಷ್ಠವಾದ ಕಾರ್ಯಗಳ ಫಲವಾಗಿ ನಿಮ್ಮನ್ನು ಚಂದ್ರಲೋಕಕ್ಕೆ ಪದೋನ್ನತಿ ಮಾಡಬಹುದು. ಇದನ್ನು ಶ್ರೀಮದ್ ಭಾಗವತದಲ್ಲಿ ಹೇಳಲಾಗಿದೆ. ಆದರೆ ನೀವು ನಿಮ್ಮ ಗಗನ ನೌಕೆಗಳನ್ನು ಉಪಯೋಗಿಸಿ ಬಲಾತ್ಕಾರವಾಗಿ ಚಂದ್ರಲೋಕವನ್ನು ಪ್ರವೇಶಿಸಲಾಗುವುದಿಲ್ಲ. ಅದು ಸಾಧ್ಯವಿಲ್ಲ. ಉದಾಹರಣೆಗೆ ನನ್ನ ಬಳಿ ಅಮೆರಿಕದಲ್ಲಿ ಒಂದು ಸೊಗಸಾದ ಮೋಟಾರ್‌ಕಾರ್ ಇದೆ ಎಂದಿಟ್ಟುಕೊಳ್ಳೋಣ. ನಾನು ಇನ್ನೊಂದು ದೇಶವನ್ನು ಬಲ ಪ್ರಯೋಗದಿಂದ ಪ್ರವೇಶಿಸಬೇಕು ಎಂದು ಬಯಸಿದರೆ ಅದು ಸಾಧ್ಯವಾಗುತ್ತದೆಯೆ? ಇಲ್ಲ, ನಾನು ರಹದಾರಿ ಪತ್ರ ಅಥವಾ ಪ್ರವೇಶಪತ್ರವನ್ನು ಪಡೆದಿರಬೇಕು. ನಾನು ಸರ್ಕಾರದ ಅನುಮತಿಯನ್ನು ಪಡೆಯಬೇಕು. ಆಗ ನಾನು ಇನ್ನೊಂದು ದೇಶವನ್ನು ಪ್ರವೇಶಿಸಬಹುದು. ನನ್ನಲ್ಲಿ ಸೊಗಸಾದ ಕಾರ್ ಇದೆ ಎಂದಾಕ್ಷಣಕ್ಕೆ ನನಗೆ ಒಳಗೆ ಪ್ರವೇಶಿಸಲು ಬಿಡುತ್ತಾರೆ ಎಂದಲ್ಲ.
ಆದ್ದರಿಂದ ಚಂದ್ರಲೋಕಕ್ಕೆ ಹೋಗಲು ವಿಜ್ಞಾನಿಗಳ ಪ್ರಯತ್ನ ಮೂರ್ಖತನದ್ದು ಹಾಗೂ ಬಾಲಿಶವಾದದ್ದು. ಅವರು ಹೋಗುವುದು ಸಾಧ್ಯವಿಲ್ಲ. ತಮ್ಮ ವೈಫಲ್ಯದ ಅರಿವು ಅವರಿಗಾಗಿದೆ. ಆದರೆ ಚಂದ್ರಲೋಕಕ್ಕೆ ಹೋಗುವ ಒಂದು ಸಾಧ್ಯತೆ ಇದೆ. ಸರಿಯಾದ ವಿಧಾನವನ್ನು ನೀವು ಅಳವಡಿಸಿಕೊಂಡರೆ ಅಲ್ಲಿಗೆ ಹೋಗಬಹುದು. ಅದೇ ರೀತಿಯಲ್ಲಿ ಪಿತೃಗಳಿಗೆ ಶ್ರಾದ್ಧ ಮತ್ತು ಪಿಂಡವನ್ನು ಅರ್ಪಿಸುವ ಮೂಲಕ ನೀವು ಪಿತೃಲೋಕಕ್ಕೆ ಹೋಗಬಹುದು. ಅಥವಾ ಪಿಶಾಚಿಗಳು ಮತ್ತು ಭೂತಗಳನ್ನು ಆರಾಧಿಸುವ ಮೂಲಕ ನೀವು ಇದೇ ಭೂಲೋಕದಲ್ಲಿ ಉಳಿದುಕೊಳ್ಳಬಹುದು. ಹಾಗೆಯೇ ಕೃಷ್ಣನನ್ನು ಆರಾಧಿಸುವ ಮೂಲಕ ಭಗವದ್ಧಾಮಕ್ಕೆ ಮರಳಿ ಹೋಗಬಹುದು. ಭಗವದ್ಧಾಮಕ್ಕೆ ಮರಳಿ ಹೋಗುವುದರಿಂದ ಏನು ಪ್ರಯೋಜನ ಎಂದು ಯಾರಾದರೂ ಕೇಳಬಹುದು. ಕೃಷ್ಣನು ಭಗವದ್ಗೀತೆಯಲ್ಲಿ (8.15) ಹೀಗೆ ವಿವರಿಸಿದ್ದಾನೆ: ಮಾಮ್ ಉಪೇತ್ಯ ಪುನರ್ ಜನ್ಮ ದುಃಖಾಲಯಮ್ ಅಶಾಶ್ವತಮ್ ನಾಪ್ನುವಂತಿ: “ನೀನು ನನ್ನ ಬಳಿಗೆ ಬಂದರೆ, ಸಂಪೂರ್ಣವಾಗಿ ಯಾತನೆಯ ಪರಿಸ್ಥಿತಿಗಳಿಂದ ಕೂಡಿರುವ ಐಹಿಕ ದೇಹವನ್ನು ಮತ್ತೆ ನೀನು ಸ್ವೀಕರಿಸಬೇಕಾಗಿಲ್ಲ. ನೀನು ನಿನ್ನ ಆಧ್ಯಾತ್ಮಿಕ ದೇಹದಲ್ಲಿಯೇ ಉಳಿದುಕೊಳ್ಳುತ್ತೀಯೆ.”
ನಮ್ಮ ಕೃಷ್ಣಪ್ರಜ್ಞಾ ಆಂದೋಲನವು ಎಲ್ಲ ಜೀವಿಗಳನ್ನೂ ಕೃಷ್ಣನ ಆಧ್ಯಾತ್ಮಿಕ ಸಾಮ್ರಾಜ್ಯಕ್ಕೆ ಉನ್ನತೀಕರಿಸುವ ಉದ್ದೇಶವನ್ನು ಹೊಂದಿದೆ. ಕೃಷ್ಣಪ್ರಜ್ಞೆಯ ಸೂತ್ರಗಳನ್ನು ಯಾರು ಪಾಲಿಸುತ್ತಾರೆಯೋ ಅವರು ಭಗವದ್ಧಾಮಕ್ಕೆ ಮರಳುವುದು ನಿಶ್ಚಿತ. ಅದರಲ್ಲಿ ಅನುಮಾನವಿಲ್ಲ. ಆದರೆ ನೀವು ದಿಕ್ಚ್ಯುತಿಗೊಂಡರೆ, ಮಾಯೆಯ ಆಕರ್ಷಣೆಗೆ ತುತ್ತಾದರೆ ಅದು ನಿಮ್ಮ ಹೊಣೆ. ಆದರೆ ನಾವು ನಿಮಗೆ ಅಗತ್ಯವಾದ ಎಲ್ಲ ಮಾಹಿತಿಗಳನ್ನೂ ನೀಡುತ್ತಿದ್ದೇವೆ.
ಈ ವಿಧಾನ ಸರಳವಾದದ್ದು. ಹರೇಕೃಷ್ಣ ಮಹಾಮಂತ್ರವನ್ನು ಜಪಿಸಿ. ಪರಿಶುದ್ಧರಾಗಿ. ಸದಾ ಐಹಿಕ ಬಂಧನಗಳಿಂದ ಮುಕ್ತರಾಗಿರಿ. ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಭಗವದ್ಗೀತೆಯಲ್ಲಿ (4.9) ಕೃಷ್ಣನು ಹೇಳುವಂತೆ ಜನ್ಮ ಕರ್ಮಚಮೇ ದಿವ್ಯಮ್ ಏವಂ ಯೋ ವೇತ್ತಿ ತತ್ತ್ವತಃ; ತ್ಯಕ್ತ್ವಾದೇಹಂ ಪುನರ್ ಜನ್ಮ ನೈತಿ ಮಾಮ್ ಏತಿ: “ನೀನು ಸುಮ್ಮನೆ ನನ್ನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ, ಈ ದೇಹವನ್ನು ತ್ಯಜಿಸಿದ ಅನಂತರ ನನ್ನ ಬಳಿಗೆ ಬರುತ್ತೀಯೆ.” ಇದು ನಮ್ಮ ತತ್ತ್ವಜ್ಞಾನ. ಇದು ಬಹಳ ಸರಳವಾದದ್ದು. ಶ್ರೀಕೃಷ್ಣನು ಪ್ರತಿಯೊಂದನ್ನೂ ಭಗವದ್ಗೀತೆಯಲ್ಲಿ ವಿವರಿಸಿದ್ದಾನೆ.
ಈ ತತ್ತ್ವಜ್ಞಾನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಮತ್ತು ಇಡೀ ಜಗತ್ತಿಗೆ ಯೋಜನವಾಗುವಂತೆ ಅದನ್ನು ಬೋಧಿಸಿ. ಆಗ ಪ್ರತಿಯೊಬ್ಬನೂ ಸಂತೋಷವಾಗಿರುತ್ತಾನೆ.