ಕೃತಯುಗದಲ್ಲಿ ಒಮ್ಮೆ ಬ್ರಹ್ಮನ ಪುತ್ರರಾದ ಸನಕ, ಸನಂದನ, ಸನಾತನ ಮತ್ತು ಸನತ್ ಕುಮಾರರು ತ್ರಿಲೋಕ ಸಂಚಾರ ಮಾಡುತ್ತಾ ವೈಕುಂಠ ಲೋಕಕ್ಕೆ ಬಂದರು. ಎಳೆಯ ಬಾಲಕರಂತೆ ತೋರುತ್ತಾ ನಗ್ನರಾಗಿದ್ದ ಅವರನ್ನು ಸಾಧಾರಣ ಮಕ್ಕಳೆಂದು ಭಾವಿಸಿ, ವೈಕುಂಠದ ದ್ವಾರಪಾಲಕರಾಗಿದ್ದ ಜಯ ವಿಜಯರು ಬಾಗಿಲಲ್ಲೇ ತಡೆದರು. ಇದರಿಂದ ಕೋಪಗೊಂಡ ಆ ಮುನಿಗಳು ಭೂಲೋಕದಲ್ಲಿ ಅಸುರರಾಗಿ ಜನಿಸುವಂತೆ ಅವರಿಗೆ ಶಾಪಕೊಟ್ಟರು. ಮರು ಕ್ಷಣದಲ್ಲಿ ಜಯ ವಿಜಯರು ಭೂಲೋಕಕ್ಕೆ ಬೀಳಲಾರಂಭಿಸಿದರು. ಆಗ ಅವರ ವಿಷಯದಲ್ಲಿ ಕರುಣೆ ತೋರಿದ ಮುನಿಗಳು, ಮೂರು ಜನ್ಮಗಳಲ್ಲಿ ಶಾಪ ವಿಮೋಚನೆ ಹೊಂದಿ ವೈಕುಂಠಕ್ಕೆ ಹಿಂದಿರುಗುವಂತೆ ವಿಶಾಪವನ್ನು ನೀಡಿದರು.
ಮೊದಲನೆಯ ಜನ್ಮದಲ್ಲಿ ಜಯ ವಿಜಯರು ಭೂಲೋಕದಲ್ಲಿ ದಿತಿಯ ಮಕ್ಕಳಾಗಿ, ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು ಎಂಬ ಸೋದರರಾಗಿ ಜನ್ಮ ತಾಳಿದರು. ದಿನೇ ದಿನೇ ಇವರ ಉಪಟಳವು ಅಧಿಕವಾಗುತ್ತ ಬಂತು. ಹಿರಣ್ಯಾಕ್ಷನು ಭೂದೇವಿಯನ್ನೇ ಅಪಹರಿಸಿದಾಗ ವಿಷ್ಣುವು ವರಾಹ ರೂಪವನ್ನು ತಾಳಿ ಅವನನ್ನು ಸಂಹಾರ ಮಾಡಿದನು. ಅಣ್ಣನ ಸಾವಿನಿಂದ ಹಿರಣ್ಯಕಶಿಪುವಿನ ದುಃಖ ಮತ್ತು ಕೋಪಗಳು ಮೇರೆ ಮೀರಿದವು. ವರಾಹ ರೂಪ ತಾಳಿದ ವಿಷ್ಣುವಿನ ರುಂಡವನ್ನು ತನ್ನ ತ್ರಿಶೂಲದಿಂದ ಛೇದಿಸಿ, ಹರಿಯುವ ರಕ್ತಧಾರೆಯಿಂದ ತನ್ನ ಅಣ್ಣನ ಆತ್ಮಕ್ಕೆ ತೃಪ್ತಿ ನೀಡುವುದಾಗಿ ಬೊಬ್ಬಿರಿದನು. ತನ್ನ ರಾಕ್ಷಸ ಮಿತ್ರರು ಭೂಲೋಕದಲ್ಲಿ ತಪಸ್ಸು, ಯಜ್ಞ, ವೇದಾಧ್ಯಯನ, ವ್ರತ, ದಾನ, ಧರ್ಮಗಳಲ್ಲಿ ತೊಡಗಿರುವ ಜನರ ಮೇಲೆ ಆಕ್ರಮಣ ಮಾಡಿ ಸಂಹಾರ ಮಾಡುವ ಮೂಲಕ ಅಲ್ಲೋಲ ಕಲ್ಲೋಲವನ್ನುಂಟು ಮಾಡುವಂತೆ ಪ್ರಚೋದಿಸಿದನು. ಯಜ್ಞ ಯಾಗಾದಿಗಳು ನಿಂತರೆ ದೇವತೆಗಳಿಗೆ ಸಲ್ಲುವ ಹವಿರ್ಭಾಗವು ತಪ್ಪಿ ಹೋಗಿ ಅವರು ಕಂಗಾಲಾಗುತ್ತಾರೆ. ಹಿರಣ್ಯಕಶಿಪುವಿನ ಆಜ್ಞೆಯಂತೆ ಅವನ ರಾಕ್ಷಸ ಮಿತ್ರರು ಪಟ್ಟಣ, ಹಳ್ಳಿ, ಗೋಮಾಳ, ಕೊಟ್ಟಿಗೆ, ತೋಟ, ಹೊಲಗದ್ದೆಗಳು ಮತ್ತು ಅರಣ್ಯಗಳಿಗೆ ಬೆಂಕಿಯಿಟ್ಟರು. ಋಷ್ಯಾಶ್ರಮ- ಗಳನ್ನೂ, ಕೃಷಿಕರ ನಿವಾಸಗಳನ್ನೂ, ಬೆಟ್ಟದ ತಪ್ಪಲಿನಲ್ಲಿರುವ ಹಳ್ಳಿಗಳನ್ನೂ, ಗೋಪಾಲಕರನ್ನೂ ಸುಟ್ಟು ಹಾಕಿದರು. ರಾಜಧಾನಿಗಳನ್ನು ಭಸ್ಮ ಮಾಡಿದರು. ಪಟ್ಟಣಗಳ ಸೇತುವೆಗಳನ್ನೂ, ಪ್ರಾಕಾರಗಳನ್ನೂ, ಗೋಪುರಗಳನ್ನೂ ಒಡೆದು ಕೆಡವಿಹಾಕಿದರು. ಫಲ ನೀಡುವ ವೃಕ್ಷಗಳನ್ನು ಕಡಿದರು. ಪ್ರಜೆಗಳ ಮನೆಗಳಿಗೆ ಕೊಳ್ಳಿಯಿಟ್ಟರು. ಹೀಗೆ ಹಿರಣ್ಯಕಶಿಪುವಿನ ಅನುಯಾಯಿಗಳು ಎಸಗಿದ ಪ್ರಳಯ ಕೃತ್ಯಗಳಿಂದ ಭೂಲೋಕದ ಜನಜೀವನ ಅಸ್ತವ್ಯಸ್ತವಾಯಿತು. ಯಜ್ಞ ಯಾಗಾದಿಗಳು ಸ್ಥಗಿತಗೊಂಡು ಹವಿಸ್ಸು ಲಭ್ಯವಾಗದೆ ದೇವತೆಗಳಿಗೆ ತೊಂದರೆಯಾಯಿತು.
ಅಣ್ಣನ ಉತ್ತರ ಕ್ರಿಯೆಗಳನ್ನು ಮುಗಿಸಿದ ಹಿರಣ್ಯಕಶಿಪುವು ಅತಿಯಾಗಿ ದುಃಖಿಸುತ್ತಾ ತನ್ನ ಸೋದರನ ಪುತ್ರರನ್ನು ಸಮಾಧಾನ ಪಡಿಸಿದನು. ಅನಂತರ ತಾನು ಅಜೇಯನಾಗಿರಬೇಕೆಂದೂ, ಜನನ ಮರಣಗಳಿಂದ ಅತೀತನಾಗಬೇಕೆಂದೂ ಬಯಸಿದನು. ಸಮಸ್ತ ಬ್ರಹ್ಮಾಂಡಕ್ಕೂ ತಾನೇ ಅಧಿಪತಿಯಾಗಬೇಕೆಂದು ಆಶಿಸಿದನು. ಅದಕ್ಕಾಗಿ ಮಂದರ ಪರ್ವತದ ತಪ್ಪಲಿಗೆ ಹೋಗಿ ಕಾಲಿನ ಹೆಬ್ಬೆರಳನ್ನು ಮಾತ್ರ ನೆಲಕ್ಕೆ ಊರಿ, ತೋಳುಗಳನ್ನು ಮೇಲಕ್ಕೆತ್ತಿ ಹಿಡಿದು ಆಕಾಶವನ್ನು ನೋಡುತ್ತಾ ತಪಸ್ಸನ್ನಾಚರಿಸಲು ಪ್ರಾರಂಭಿಸಿದನು.
ಹಿರಣ್ಯಕಶಿಪುವು ಹೀಗೆ ಕಠೋರವಾದ ತಪಸ್ಸನ್ನು ಮಾಡುತ್ತಿರುವಾಗ ಅವನ ತಲೆಗೂದಲಿನಿಂದ ಪ್ರಳಯಕಾಲದ ಸೂರ್ಯನ ಕಿರಣಗಳಂತೆ ಬೆಳಕು ಪ್ರಜ್ವಲಿಸಲಾರಂಭಿಸಿತು. ಅವನ ನೆತ್ತಿಯಿಂದ ಹೊರಟ ತಪೋಜ್ವಾಲೆಯ ಹೊಗೆಯು ಆಕಾಶವನ್ನೂ, ಊರ್ಧ್ವಲೋಕಗಳನ್ನೂ, ಅಧೋಲೋಕಗಳನ್ನೂ ವ್ಯಾಪಿಸಿತು. ಅವನ ಉಗ್ರ ತಪಸ್ಸಿನ ಶಕ್ತಿಯಿಂದ ನದಿಗಳೂ, ಸಮುದ್ರಗಳೂ ಪ್ರಕ್ಷುಬ್ಧವಾದವು. ಭೂಮಂಡಲವು ಕಂಪಿಸಿತು. ಗ್ರಹ ನಕ್ಷತ್ರಗಳು ಆಕಾಶದಿಂದ ಕಳಚಿಬಿದ್ದವು. ಎಲ್ಲ ದಿಕ್ಕುಗಳೂ ಹೊತ್ತಿ ಉರಿಯಲಾರಂಭಿಸಿದವು. ಲೋಕಗಳಲ್ಲೆಲ್ಲಾ ಸಂಚಾರ ಮಾಡುತ್ತಿದ್ದ ದೇವತೆಗಳು ಇದನ್ನೆಲ್ಲ ನೋಡಿ ಕಂಗಾಲಾಗಿ ತಮ್ಮ ತಮ್ಮ ಸ್ಥಾನಗಳಿಗೆ ಹೋಗಿ ಸೇರಿಕೊಂಡರು. ಅಲ್ಲಿಯೂ ಅವರು ನೆಮ್ಮದಿಯಾಗಿ ಉಳಿಯಲಾಗಲಿಲ್ಲ. ಅವರೆಲ್ಲ ಸೇರಿ ಬ್ರಹ್ಮಲೋಕಕ್ಕೆ ತೆರಳಿ ತಮ್ಮನ್ನು ರಕ್ಷಿಸುವಂತೆ ಬ್ರಹ್ಮದೇವನಲ್ಲಿ ಮೊರೆಯಿಟ್ಟರು. ಬ್ರಹ್ಮನ ಸ್ಥಾನವನ್ನೇ ಪಡೆಯಲು ಅತ್ಯುಗ್ರವಾದ ತಪಸ್ಸನ್ನು ಕೈಗೊಂಡಿರುವ ಹಿರಣ್ಯಕಶಿಪುವಿನ ನೆತ್ತಿಯಿಂದ ಹೊರಟಿರುವ ತಪೋಜ್ವಾಲೆಯ ಉಪಟಳವನ್ನು ನಿವೇದಿಸಿಕೊಂಡರು.
ಹೀಗೆ ದೇವತೆಗಳ ಮೊರೆಯನ್ನು ಆಲಿಸಿದ ಬ್ರಹ್ಮದೇವನು ಭೃಗು, ದಕ್ಷ ಮೊದಲಾದ ಮಹರ್ಷಿಗಳೊಡಗೂಡಿ ತನ್ನ ಹಂಸ ವಿಮಾನವನ್ನು ಏರಿ ಹಿರಣ್ಯಕಶಿಪುವು ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಬಂದನು. ಆದರೆ ಅವನು ಎಲ್ಲಿದ್ದಾನೆಂಬುದೇ ಮೊದಲು ತಿಳಿಯಲಿಲ್ಲ. ಏಕೆಂದರೆ ಹಿರಣ್ಯಕಶಿಪುವು ಬಹಳ ಕಾಲದಿಂದ ತಪಸ್ಸಿಗೆ ಕುಳಿತಿದ್ದರಿಂದ ಅವನ ಮೈಮೇಲೆ ಹುತ್ತ, ಹುಲ್ಲು, ಬಿದಿರುಮೆಳೆಗಳು ಬೆಳೆದುಕೊಂಡಿದ್ದವು. ಇರುವೆಗಳು ಅವನ ಚರ್ಮ, ಮಾಂಸ, ರಕ್ತಗಳನ್ನು ತಿಂದುಬಿಟ್ಟಿದ್ದವು. ಆದರೂ ತನ್ನ ತಪೋಜ್ವಾಲೆಯಿಂದ ಜಗತ್ತನ್ನೇ ಸುಡುತ್ತಾ ಮೋಡ ಮುಸುಕಿದ ಸೂರ್ಯನಂತಿದ್ದ ಅವನನ್ನು ಬ್ರಹ್ಮನೂ, ದೇವತೆಗಳೂ ಗುರುತಿಸಿದರು. ಅವನ ಕಠಿಣ ತಪಸ್ಸನ್ನು ಕಂಡು ಆಶ್ಚರ್ಯಗೊಂಡ ಬ್ರಹ್ಮದೇವನು ನಸುನಕ್ಕು, “ಕಶ್ಯಪ ಕುಮಾರ ಎದ್ದೇಳು. ನಿನ್ನ ತಪಸ್ಸಿಗೆ ಮೆಚ್ಚಿ ಬಂದಿದ್ದೇನೆ. ಭೃಗುವೇ ಮೊದಲಾದ ಮಹರ್ಷಿಗಳಿಗೂ ಸಾಧ್ಯವಾಗದಂತಹ ಉಗ್ರ ತಪಸ್ಸನ್ನು ಮಾಡಿ, ಇರುವೆಗಳು ನಿನ್ನ ದೇಹವನ್ನು ಕಿತ್ತು ತಿನ್ನುತ್ತಿದ್ದರೂ ಕೇವಲ ಮೂಳೆಗಳಲ್ಲಿ ಪ್ರಾಣವಾಯುವನ್ನು ಇರಿಸಿಕೊಂಡು ನೀರನ್ನೂ ಕುಡಿಯದೆ ಒಂದು ನೂರು ದೇವ ವರ್ಷಗಳ ಕಾಲ ತಪೋನಿಷ್ಠೆಯಿಂದಿದ್ದು ನನ್ನನ್ನು ಗೆದ್ದಿದ್ದೀಯೆ. ಅಸುರ ಶ್ರೇಷ್ಠನೇ, ನೀನು ಬಯಸಿದ ವರವನ್ನು ಕೊಡಲು ನಾನು ಸಿದ್ಧನಾಗಿದ್ದೇನೆ ಎದ್ದೇಳು” ಎಂದು ತನ್ನ ದಿವ್ಯಕಮಂಡಲುವಿನಿಂದ ಅಮೋಘವಾದ ಜಲವನ್ನು ಹಿರಣ್ಯಕಶಿಪುವಿನ ಅಸ್ಥಿಪಂಜರದ ಮೇಲೆ ಪ್ರೋಕ್ಷಣೆ ಮಾಡಿದನು. ಕೂಡಲೇ ಪುಟಕ್ಕಿಟ್ಟ ಚಿನ್ನದಂತಹ ದೇಹಕಾಂತಿಯಿಂದ ಒಡಗೂಡಿ, ಅರಣಿಯಿಂದ ಚಿಮ್ಮುವ ಬೆಂಕಿಯಂತೆ ಹಿರಣ್ಯಕಶಿಪುವು ಹುತ್ತದಿಂದ ನವ ತರುಣನಾಗಿ ಹೊರಬಂದನು.
ಆಕಾಶದಲ್ಲಿ ತನ್ನ ಹಂಸ ವಿಮಾನದಲ್ಲಿದ್ದ ಬ್ರಹ್ಮದೇವನನ್ನು ನೋಡಿದ ಹಿರಣ್ಯಕಶಿಪುವು ಅಮಿತಾನಂದಗೊಂಡು ದೀರ್ಘದಂಡ ನಮಸ್ಕಾರ ಮಾಡಿ, ದೀನನಾಗಿ ಕೈಗಳನ್ನು ಜೋಡಿಸಿ ಗದ್ಗದ ಕಂಠದಿಂದ ಸ್ತೋತ್ರ ಮಾಡಲಾರಂಭಿಸಿದನು. ಹೀಗೆ ಸ್ತೋತ್ರಗಳಿಂದ ಬ್ರಹ್ಮದೇವನನ್ನು ಸಂತುಷ್ಟಿಗೊಳಿಸಿ, ಕೊನೆಯಲ್ಲಿ, “ವರಗಳನ್ನು ನೀಡುವುದರಲ್ಲಿ ಶ್ರೇಷ್ಠನಾದವನೇ, ನನ್ನ ಇಷ್ಟಾರ್ಥ ಸಿದ್ಧಿಸುವಂತಹ ವರಗಳನ್ನು ನೀನು ಕೊಡುವುದು ನಿಶ್ಚಯವೇ ಆದ ಪಕ್ಷದಲ್ಲಿ, ನಿನ್ನಿಂದ ಸೃಷ್ಟಿಸಲ್ಪಟ್ಟ ಯಾವ ಜೀವಿಯಿಂದಲೂ ನನಗೆ ಸಾವು ಬರದಂತೆ ಅನುಗ್ರಹಿಸು. ಮನೆಯ ಒಳಗಾಗಲಿ ಹೊರಗಾಗಲಿ, ಹಗಲು ಹೊತ್ತಾಗಲಿ ರಾತ್ರಿ ಹೊತ್ತಾಗಲಿ, ಭೂಮಿಯ ಮೇಲಾಗಲಿ ಅಂತರಿಕ್ಷದಲ್ಲಾಗಲಿ ನನಗೆ ಸಾವು ಬರದಂತೆ ಅನುಗ್ರಹಿಸು. ನಿನ್ನಿಂದ ಸೃಷ್ಟಿಯಾಗದ ಜೀವಿಯಿಂದಾಗಲಿ, ಯಾವುದೇ ಆಯುಧದಿಂದಾಗಲಿ, ಯಾವುದೇ ಮನುಷ್ಯ ಜೀವಿಯಿಂದಾಗಲಿ ಅಥವಾ ಪ್ರಾಣಿಯಿಂದಾಗಲಿ ನನಗೆ ಮರಣವಿಲ್ಲದಂತೆ ಅನುಗ್ರಹಿಸು.” ಎಂದು ವರವನ್ನು ಬೇಡಿದನು.
ಹಿರಣ್ಯಕಶಿಪುವಿನ ಕಠೋರ ತಪಸ್ಸಿನಿಂದ ಸಂತುಷ್ಟನಾಗಿದ್ದ ಬ್ರಹ್ಮದೇವನು, ಅವನು ಕೇಳಿದ ವರವು ದುರ್ಲಭವಾಗಿದ್ದರೂ ಅನುಗ್ರಹಿಸಿ ತನ್ನ ಲೋಕಕ್ಕೆ ತೆರಳಿದನು.
ಬ್ರಹ್ಮದೇವನ ವರದಿಂದ ಅಪ್ರತಿಮ ಶಕ್ತಿಶಾಲಿಯಾದ ಹಿರಣ್ಯಕಶಿಪುವು ಸಮಸ್ತ ವಿಶ್ವವನ್ನೂ ಜಯಿಸಿದನು. ಎಲ್ಲ ಲೋಕಾಧಿಪತಿಗಳನ್ನೂ ಗೆದ್ದು ತನ್ನ ವಶಪಡಿಸಿಕೊಂಡನು.
ಹೀಗೆ ಎಲ್ಲ ಸಂಪತ್ತಿಗೆ ಒಡೆಯನಾದ ಹಿರಣ್ಯಕಶಿಪುವು ಸ್ವರ್ಗದಲ್ಲಿ ಇಂದ್ರನ ಅರಮನೆಯಲ್ಲಿಯೇ ವಾಸಮಾಡಲಾರಂಭಿಸಿದನು. ಅವನ ಅಧೀನರಾದ ದೇವತೆಗಳು ಅವನ ಕಾಲಿಗೆ ಬಿದ್ದು ನಮಸ್ಕರಿಸುತ್ತಿದ್ದರು. ಬ್ರಹ್ಮ-ವಿಷ್ಣು- ಮಹೇಶ್ವರರನ್ನು ಬಿಟ್ಟು ಉಳಿದ ದೇವತೆಗಳೆಲ್ಲ ಅವನಿಗೆ ಕಾಣಿಕೆಗಳನ್ನು ನೀಡುತ್ತಾ ಅವನನ್ನು ಸಂತುಷ್ಟಿಪಡಿಸಲು ಆರಾಧನೆಯನ್ನು ಮಾಡುತ್ತಿದ್ದರು. ಅಪ್ಸರೆಯರೂ, ಋಷಿಗಳೂ ಅವನನ್ನು ಸ್ತೋತ್ರ ಮಾಡಿದರು. ಯಜ್ಞಗಳಲ್ಲಿ ಅರ್ಪಿಸುತ್ತಿದ್ದ ಹವಿಸ್ಸಿನ ಭಾಗಗಳನ್ನು ಹಿರಣ್ಯಕಶಿಪುವೇ ಸ್ವೀಕರಿಸುತ್ತಿದ್ದನು. ಸಮಸ್ತ ಪ್ರಕೃತಿಯೂ ಅವನಿಗೆ ತಗ್ಗಿ ಬಗ್ಗಿ ನಡೆಯಲಾರಂಭಿಸಿತು.
ಹಿರಣ್ಯಕಶಿಪುವಿಗೆ ನಾಲ್ಕು ಜನ ಪುತ್ರರಿದ್ದರು. ಅವರಲ್ಲಿ ಪ್ರಹ್ಲಾದನು ದೇವೋತ್ತಮ ಪರಮ ಪುರುಷನಾದ ವಿಷ್ಣುವಿನ ಶ್ರೇಷ್ಠ ಭಕ್ತನಾಗಿದ್ದನು. ಅಸುರರ ಮನೆತನದಲ್ಲಿ ಹುಟ್ಟಿದ್ದರೂ ಅವನು ಅಸುರನಾಗಿರಲಿಲ್ಲ. ವೈಷ್ಣವರನ್ನು ದ್ವೇಷಿಸುತ್ತಿರಲಿಲ್ಲ. ಬಾಲ್ಯದಿಂದಲೇ ಅವನಿಗೆ ಆಟೋಟಗಳಲ್ಲಿ ಆಸಕ್ತಿಯಿರಲಿಲ್ಲ. ಅವನು ಸದಾ ಕೃಷ್ಣಪ್ರಜ್ಞೆಯಲ್ಲಿ ಮಗ್ನನಾಗಿರುತ್ತಿದ್ದನು. ಯಾವ ಲೌಕಿಕ ಆಸೆಗಳನ್ನೂ ಇಟ್ಟುಕೊಳ್ಳದೆ ಪರಿಶುದ್ಧ ಭಕ್ತರ ಸಾಹಚರ್ಯದಿಂದ ಪ್ರಹ್ಲಾದನು ಭಗವಂತನ ಪಾದಪದ್ಮಗಳ ಸೇವೆಯಲ್ಲಿ ನಿರಂತರವಾಗಿ ಮಗ್ನನಾಗಿರುತ್ತಿದ್ದನು. ಶುಕ್ರಾಚಾರ್ಯರು ಹಿರಣ್ಯಕಶಿಪುವಿನ ಪುರೋಹಿತರಾಗಿದ್ದರು. ಅವರ ಮಕ್ಕಳಾದ ಷಂಡ ಮತ್ತು ಅಮರ್ಕರ ಬಳಿ ಪ್ರಹ್ಲಾದನ ವಿದ್ಯಾಭ್ಯಾಸ ಆರಂಭವಾಯಿತು. ಅವರು ಕಲಿಸುತ್ತಿದ್ದ ರಾಜನೀತಿ ಮತ್ತು ಅರ್ಥಶಾಸ್ತ್ರಗಳು ಭೇದ ಮಾರ್ಗಗಳನ್ನು ಬೋಧಿಸುತ್ತಿದ್ದುದರಿಂದ ಪ್ರಹ್ಲಾದನಿಗೆ ಇಷ್ಟವಾಗಲಿಲ್ಲ.
ಒಂದು ಸಲ ಹಿರಣ್ಯಕಶಿಪುವು ತನ್ನ ಮಗ ಪ್ರಹ್ಲಾದನನ್ನು ಪ್ರೀತಿಯಿಂದ ತೊಡೆಯಮೇಲೆ ಕೂಡಿಸಿಕೊಂಡು, ಅವನು ಉಪಾಧ್ಯಾಯರಿಂದ ಕಲಿತ ವಿದ್ಯೆಯನ್ನು ಕುರಿತು ಕೇಳಿದನು. ಅದಕ್ಕೆ ಉತ್ತರವಾಗಿ ಪ್ರಹ್ಲಾದನು, “ತಂದೆಯೆ, ನನ್ನ ಗುರುಗಳಿಂದ ನಾನು ಕಲಿತದ್ದೇನೆಂದರೆ, ಈ ದೇಹವು ಅನಿತ್ಯ; ಇದು ಅನುಸರಿಸುವ ಗೃಹಸ್ಥ ಜೀವನವು ಅಶಾಶ್ವತ. ಅದನ್ನು ಸ್ವೀಕರಿಸಿದವನು ಸದಾ ಆತಂಕದಿಂದ ಪ್ರಕ್ಷುಬ್ಧನಾಗಿರುತ್ತಾನೆ. ಈ ಅವಸ್ಥೆಯನ್ನು ತ್ಯಜಿಸಿ ವೃಂದಾವನಕ್ಕೆ ಹೋಗಿ ದೇವೋತ್ತಮ ಪರಮ ಪುರುಷನಲ್ಲಿ ಆಶ್ರಯವನ್ನು ಪಡೆಯಬೇಕು. ಹೀಗೆ ಭಕ್ತಿ ಸೇವೆಯ ಮೂಲಕ ಆತ್ಮಸಾಕ್ಷಾತ್ಕಾರ ಪಡೆದುಕೊಳ್ಳಬೇಕು.” ಎಂದನು. ಈ ಮಾತುಗಳನ್ನು ಕೇಳಿ ಹಿರಣ್ಯಕಶಿಪುವಿಗೆ ನಗು ಬಂತು. “ಯಾರೋ ಶತ್ರುಗಳು ನಿನ್ನ ಬುದ್ದಿಯನ್ನು ಕೆಡಿಸಿಬಿಟ್ಟಿದ್ದಾರೆ” ಎಂದನು. ಅನಂತರ ತನ್ನ ಅನುಚರಿಗೆ, “ಇವನ ಗುರುಕುಲಕ್ಕೆ ಯಾವ ವೈಷ್ಣವನೂ ಪ್ರವೇಶಿಸದಂತೆ ಕಟ್ಟೆಚ್ಚರದಿಂದ ಕಾವಲು ನೀಡಿ” ಎಂದು ಆಜ್ಞಾಪಿಸಿದನು.
ಕೆಲ ಕಾಲಾನಂತರ ಇನ್ನೊಮ್ಮೆ ಹಿರಣ್ಯಕಶಿಪುವು, “ಪ್ರಹ್ಲಾದ, ನಿನ್ನ ಉಪಾಧ್ಯಾಯರಿಂದ ಇಷ್ಟು ಕಾಲ ನೀನು ಕಲಿತಿದ್ದರಲ್ಲಿ ಅತ್ಯುತ್ತಮವಾದ ಜ್ಞಾನ ಯಾವುದು ಹೇಳು” ಎಂದು ಕೇಳಿದನು.
“ತಂದೆಯೆ, ಭಗವಾನ್ ವಿಷ್ಣುವಿನ ಲೋಕೋತ್ತರ ಪವಿತ್ರ ನಾಮ, ರೂಪ, ಗುಣಗಳು, ಪರಿಕರಗಳು, ಲೀಲೆಗಳ ಶ್ರವಣ, ಕೀರ್ತನ, ಸ್ಮರಣ, ಭಗವಂತನ ಪಾದಾರವಿಂದಗಳ ಸೇವೆ, ಪೂಜೆ, ವಂದನೆ, ಪ್ರಾರ್ಥನೆ ಸಲ್ಲಿಸುವುದು, ಅವನ ದಾಸನಾಗುವುದು, ಭಗವಂತನನ್ನೇ ಶ್ರೇಷ್ಠ ಸಖನನ್ನಾಗಿ ತಿಳಿದುಕೊಳ್ಳುವುದು, ಸರ್ವಸ್ವವನ್ನೂ ಅವನಿಗೆ ಸಲ್ಲಿಸುವುದು – ಈ ಒಂಬತ್ತು ಪ್ರಕ್ರಿಯೆಗಳು ಪರಿಶುದ್ಧ ಭಕ್ತಿ ಸೇವೆಯೆಂದು ಅಂಗೀಕೃತವಾಗಿವೆ. ಈ ಒಂಬತ್ತು ರೀತಿಗಳಲ್ಲಿ ಕೃಷ್ಣಸೇವೆಯನ್ನು ಮಾಡಲು ತನ್ನ ಜೀವನವನ್ನು ಮುಡಿಪಾಗಿಟ್ಟಿರುವವನೇ ಅತಿಶ್ರೇಷ್ಠ ವಿದ್ಯಾವಂತ. ಏಕೆಂದರೆ ಅವನು ಸಂಪೂರ್ಣ ಜ್ಞಾನವನ್ನು ಪಡೆದುಕೊಂಡಿರುತ್ತಾನೆ.” ಎಂದು ಪ್ರಹ್ಲಾದನು ಉತ್ತರಿಸಿದನು.
ಪ್ರಹ್ಲಾದನ ಬಾಯಿಂದ ಭಕ್ತಿಸೇವೆಯನ್ನು ಕುರಿತ ಈ ಮಾತುಗಳನ್ನು ಕೇಳಿ ಹಿರಣ್ಯಕಶಿಪುವಿಗೆ ಅಪಾರವಾದ ಸಿಟ್ಟು ಬಂತು. ಕೋಪದಿಂದ ತುಟಿಗಳು ಕಂಪಿಸಿದವು. ಷಂಡನ ಕಡೆ ತಿರುಗಿ, “ಅಯ್ಯಾ, ನನ್ನ ಆಜ್ಞೆಯನ್ನು ಉಲ್ಲಂಘಿಸಿ ಈ ಬಡಪಾಯಿ ಬಾಲಕನಿಗೆ ಭಕ್ತಿ ಸೇವೆಯನ್ನು ಕುರಿತು ಶಿಕ್ಷಣ ನೀಡಿರುವೆಯಲ್ಲ, ಏನು ಇದರ ಅರ್ಥ? ” ಎಂದು ಅಬ್ಬರಿಸಿದನು.
ಹಿರಣ್ಯಕಶಿಪುವಿನ ಕೋಪದ ನುಡಿಗಳನ್ನು ಕೇಳಿ ತತ್ತರಿಸಿದ ಷಂಡನು, “ಮಹಾರಾಜ, ಪ್ರಹ್ಲಾದನಿಗೆ ಇದನ್ನು ನಾನಾಗಲಿ, ಇತರರಾಗಲಿ ಕಲಿಸಲಿಲ್ಲ. ಭಕ್ತಿಸೇವೆಯು ಅವನಲ್ಲಿ ತಾನಾಗಿಯೇ ಹುಟ್ಟಿ ಬೆಳೆದಿದೆ. ಆದ್ದರಿಂದ ನಮ್ಮ ಮೇಲೆ ವೃಥಾ ಕೋಪಮಾಡಿಕೊಳ್ಳಬೇಡ.” ಎಂದು ಬೇಡಿಕೊಂಡನು. ಹಿರಣ್ಯಕಶಿಪುವಿನ ಕೋಪವು ಮೇರೆ ಮೀರಿತು. ತೊಡೆಯ ಮೇಲೆ ಕೂಡಿಸಿಕೊಂಡಿದ್ದ ಪ್ರಹ್ಲಾದನನ್ನು ನೆಲಕ್ಕೆ ಎತ್ತಿ ಎಸೆದನು. “ರಾಕ್ಷಸರೆ, ಈ ಹುಡುಗನನ್ನು ದೂರ ಒಯ್ಯಿರಿ. ಅವನು ಮರಣದಂಡನೆಗೆ ಅರ್ಹ. ಸಾಧ್ಯವಾದಷ್ಟು ಬೇಗ ಅವನನ್ನು ಕೊಂದುಹಾಕಿರಿ.” ಎಂದು ಆಜ್ಞೆ ಮಾಡಿದನು.
ಹಿರಣ್ಯಕಶಿಪುವಿನ ಸೇವಕರಾದ ರಾಕ್ಷಸರು ಮಗು ಪ್ರಹ್ಲಾದನ ಕೋಮಲವಾದ ಶರೀರಕ್ಕೆ ತಮ್ಮ ತ್ರಿಶೂಲಗಳಿಂದ ತಿವಿಯತೊಡಗಿದರು. ಭಯಂಕರವಾಗಿ ಕಾಣುತ್ತಿದ್ದ ಅವರತ್ತ ಲಕ್ಷ್ಯಕೊಡದೆ ಪ್ರಹ್ಲಾದನು ಮೌನವಾಗಿ ದೇವೋತ್ತಮ ಪರಮ ಪುರುಷನನ್ನು ಕುರಿತು ಧ್ಯಾನ ಮಾಡಲಾರಂಭಿಸಿದನು. ರಾಕ್ಷಸರ ಆಯುಧಗಳ ಪ್ರಹಾರಗಳು ಪ್ರಹ್ಲಾದನ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಅವನನ್ನು ಕೊಲ್ಲಲು ರಾಕ್ಷಸರು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು. ಅದರಿಂದ ಭೀತನಾದ ಹಿರಣ್ಯಕಶಿಪುವು ಪ್ರಹ್ಲಾದನನ್ನು ಕೊಲ್ಲಲು ಬೇರೆ ಉಪಾಯಗಳನ್ನು ಯೋಚಿಸಲು ಪ್ರಾರಂಭಿಸಿದನು.
ಪ್ರಹ್ಲಾದನನ್ನು ದೊಡ್ಡ ಆನೆಗಳ ಕಾಲಿನ ಕೆಳಗೆ ಎಸೆದರು. ಭಯಂಕರವಾದ ವಿಷಸರ್ಪಗಳ ನಡುವೆ ಹಾಕಿದರು. ವಿನಾಶಕಾರಿ ಮಂತ್ರಗಳನ್ನು ಪ್ರಯೋಗಿಸಿದರು. ಪರ್ವತದ ಶಿಖರದಿಂದ ಕೆಳಗೆ ತಳ್ಳಿದರು. ವಿಷವನ್ನು ಕುಡಿಯಲು ಕೊಟ್ಟರು. ಉಪವಾಸ ಕೆಡವಿದರು. ಬೆಂಕಿಗೆ ತಳ್ಳಿದರು. ಮೈಮೇಲೆ ಬಂಡೆಗಳನ್ನು ಉರುಳಿಸಿದರು. ಏನೇ ಪ್ರಯತ್ನ ಮಾಡಿದರೂ ಪ್ರಹ್ಲಾದನನ್ನು ಕೊಲ್ಲುವುದು ಹಿರಣ್ಯಕಶಿಪುವಿಗೆ ಸಾಧ್ಯವಾಗಲಿಲ್ಲ. ನಿಷ್ಪಾಪಿಯಾದ ಬಾಲಕ ಪ್ರಹ್ಲಾದನನ್ನು ಸಂಹಾರ ಮಾಡುವುದು ತನ್ನ ಕೈಯಲ್ಲಾಗದೆಂದು ಗೊತ್ತಾದಾಗ ಹಿರಣ್ಯಕಶಿಪುವಿಗೆ ಮುಂದೇನು ಮಾಡುವುದೆಂದು ತಿಳಿಯದೆ ಆತಂಕವಾಯಿತು. ಅಪರಿಮಿತ ಸಾಮರ್ಥ್ಯದ ಈ ಮಗು ತಾನು ಕೊಟ್ಟ ಯಾವ ಶಿಕ್ಷೆಗೂ ಅಂಜಲಿಲ್ಲ. ಅವನು ಅಮರನಂತೆ ತೋರುತ್ತಿದ್ದಾನೆ. ಅವನನ್ನು ಎದುರಿಸಿರುವ ಶತ್ರುವಾದ ತಾನೇ ಸಾಯಬೇಕಾಗಬಹುದು ಎಂದು ಯೋಚಿಸಿ ಹಿರಣ್ಯಕಶಿಪುವು ಕಾಂತಿಹೀನನಾದನು. ಅನಂತರ ಗೃಹಸ್ಥನಾದ ಕ್ಷತ್ರಿಯರು ಅನುಸರಿಸಬೇಕಾದ ರಾಜಧರ್ಮವನ್ನು ಪ್ರಹ್ಲಾದನಿಗೆ ಉಪದೇಶಿಸಬೇಕೆಂದು ಷಂಡ ಮತ್ತು ಅಮರ್ಕರಿಗೆ ಆಜ್ಞೆ ಮಾಡಿದನು. ಅದರಂತೆ ಷಂಡ-ಅಮರ್ಕರು ಧರ್ಮ, ಅರ್ಥ ಮತ್ತು ಕಾಮಗಳೆಂಬ ಮೂರು ಪ್ರಕಾರದ ಲೌಕಿಕ ಪುರುಷಾರ್ಥಗಳನ್ನು ಕುರಿತು ಪ್ರಹ್ಲಾದನಿಗೆ ಶಿಕ್ಷಣವನ್ನು ನೀಡಿದರು.
ಪ್ರಹ್ಲಾದನು ತನ್ನ ಬಿಡುವಿನ ಸಮಯದಲ್ಲಿ ಸಹಪಾಠಿಗಳೊಡನೆ ಸಂವಾದ ಮಾಡುವಾಗ ದೇವೋತ್ತಮ ಪರಮ ಪುರುಷನನ್ನು ಕುರಿತು ವಿವರಿಸುತ್ತಿದ್ದನು. ನಾರದ ಮಹರ್ಷಿಗಳಿಂದ ತನಗೆ ಈ ಲೋಕೋತ್ತರ ಜ್ಞಾನವು ಲಭಿಸಿತೆಂದು ತಿಳಿಸಿದನು. ನಾರದ ಮಹರ್ಷಿಗಳಿಂದ ಅವನಿಗೆ ಈ ಜ್ಞಾನವು ಯಾವಾಗ ಲಭಿಸಿತೆಂದು ಅವರು ಕೇಳಿದರು.
ಹಿರಣ್ಯಕಶಿಪುವು ಉಗ್ರತಪಸ್ಸನ್ನು ಮಾಡಲು ಮಂದರಾಚಲ ಪರ್ವತಕ್ಕೆ ಹೋದಾಗ ಇಂದ್ರಾದಿ ದೇವತೆಗಳು ರಾಕ್ಷಸರನ್ನು ನಿರ್ಮೂಲ ಮಾಡಲು ಪ್ರಯತ್ನಿಸಿದರು. ದೇವತೆಗಳ ಉಗ್ರ ಹೋರಾಟವನ್ನು ಎದುರಿಸಲಾರದೆ ರಾಕ್ಷಸರು ದಿಕ್ಕಾಪಾಲಾಗಿ ಓಡಲಾರಂಭಿಸಿದರು. ಜಯಶಾಲಿಗಳಾದ ದೇವತೆಗಳು ಹಿರಣ್ಯಕಶಿಪುವಿನ ಅರಮನೆಯನ್ನು ಲೂಟಿ ಮಾಡಿ ರಾಣಿಯನ್ನು ಬಂಧಿಸಿದರು. ಅವಳ ಗರ್ಭದಲ್ಲಿ ಆ ದೈತ್ಯನ ಸಂತಾನವು ಬೆಳೆಯುತ್ತಿದ್ದುದರಿಂದ, ಪ್ರಸೂತಿಯ ಅನಂತರ ಆ ವೈರಿಶೇಷವನ್ನು ನಿರ್ಮೂಲ ಮಾಡುವುದು ಅವರ ಯೋಚನೆಯಾಗಿತ್ತು. ಆದರೆ ನಾರದ ಮಹರ್ಷಿಗಳು ದೇವೇಂದ್ರನಿಗೆ ಬುದ್ಧಿ ಹೇಳಿ ಆಕೆಯನ್ನು ಬಿಡುಗಡೆ ಮಾಡಿಸಿ ತಮ್ಮ ಆಶ್ರಮದಲ್ಲಿಟ್ಟುಕೊಂಡು ಸಲಹಿದರು. ತನ್ನ ಪತಿಯು ತಪಸ್ಸಿನಿಂದ ಹಿಂದಿರುಗಿದ ಮೇಲೆಯೇ ತಾನು ಪ್ರಸವಿಸಬೇಕೆಂದು ಆಕೆಯು ಬಯಸಿದಳು. ಅದರಂತೆ ನಾರದ ಮಹರ್ಷಿಗಳ ಆಶ್ರಮದಲ್ಲಿರುತ್ತ ಪರಮ ಭಕ್ತಿಯಿಂದ ಅವರ ಸೇವೆ ಮಾಡಿದಳು. ನಾರದ ಮಹರ್ಷಿಗಳು ಆಕೆಗೂ ಮತ್ತು ಗರ್ಭದಲ್ಲಿದ್ದ ಶಿಶುವಿಗೂ ದಿವ್ಯಜ್ಞಾನವನ್ನು ಕುರಿತು ಉಪದೇಶ ಮಾಡಿದರು. ಹೀಗೆ ಪ್ರಹ್ಲಾದನು ಗರ್ಭದಲ್ಲಿರುತ್ತಲೇ ದಿವ್ಯಜ್ಞಾನವನ್ನು ಪಡೆದು ಪರಮಭಾಗವತನಾದನು. ಈ ಸಂಗತಿಯನ್ನು ಅವನು ತನ್ನ ಸಹಪಾಠಿಗಳಿಗೆ
ವಿವರಿಸಿದನು. ಪ್ರಹ್ಲಾದನ ದಿವ್ಯೋಪದೇಶವನ್ನು ಮೆಚ್ಚಿದ ರಾಕ್ಷಸ ಪುತ್ರರು ತಾವೂ ಶ್ರದ್ಧೆಯಿಂದ ಅದನ್ನು ಅನುಸರಿಸಿದರು.
ಪ್ರಹ್ಲಾದನ ಸಹವಾಸದಿಂದ ಇತರ ರಾಕ್ಷಸ ಪುತ್ರರೆಲ್ಲ ಕೃಷ್ಣಪ್ರಜ್ಞೆಯಲ್ಲಿ ಪ್ರಗತಿ ಸಾಧಿಸುತ್ತಿರುವುದನ್ನು ತಿಳಿದು ಹಿರಣ್ಯಕಶಿಪುವಿಗೆ ಪ್ರಚಂಡ ಕೋಪ ಉಕ್ಕಿತು.
ತನ್ನೆದುರು ವಿನೀತನಾಗಿ ಕೈಜೋಡಿಸಿ ನಿಂತ ಪ್ರಹ್ಲಾದನನ್ನು ಕುರಿತು, “ಹೇ ದುರ್ವಿನೀತ, ಮೂರ್ಖ, ಕುಲಗೇಡಿ! ನೀನು ನನ್ನ ಶಾಸನವನ್ನು ಉಲ್ಲಂಘಿಸಿದ್ದೀಯೆ. ನಿನ್ನನ್ನು ಇಂದೇ ಯಮಪುರಿಗೆ ಕಳುಹಿಸುತ್ತೇನೆ.” ಎಂದು ಆರ್ಭಟಿಸಿದನು.
“ತಂದೆಯೇ ಸಕಲ ಚರಾಚರಗಳಿಗೂ ಭಗವಂತನೇ ನಿಯಾಮಕ ಶಕ್ತಿಯಾಗಿದ್ದಾನೆ. ಪ್ರಪಂಚದ ಸೃಷ್ಟಿ, ಸ್ಥಿತಿ, ಲಯಗಳನ್ನು ನಡೆಸುವವನು ಅವನೇ. ಆದ್ದರಿಂದ ತಂದೆಯೇ, ನಿನ್ನ ರಾಕ್ಷಸೀ ಬುದ್ಧಿಯನ್ನು ಬಿಟ್ಟುಬಿಡು.”
“ಎಲವೋ ಮೂರ್ಖ! ಇಂದ್ರಿಯ ನಿಗ್ರಹದಲ್ಲಿ ನನಗಿಂತ ನೀನೇ ದೊಡ್ಡವನೆಂದುಕೊಂಡು ನನ್ನನ್ನೇ ಕೀಳಾಗಿ ಕಾಣುತ್ತಿರುವೆಯಲ್ಲ. ನಿನ್ನ ಅತಿಬುದ್ಧಿವಂತಿಕೆ ಸಾಕು. ಮರಣಕಾಲ ಸನ್ನಿಹಿತವಾಗಿರುವುದರಿಂದ ನೀನು ಹೀಗೆ ಅಸಂಬದ್ಧವಾಗಿ ಮಾತನಾಡುತ್ತಿದ್ದೀಯೆ. ಹೇ ಮಂದಭಾಗ್ಯ, ಎಲ್ಲಕ್ಕಿಂತ ಮಿಗಿಲಾದ, ಪ್ರತಿಯೊಬ್ಬರ ಪ್ರಭುವೂ ಆದ ಸರ್ವವ್ಯಾಪಿಯಾದ ಜಗದೀಶ್ವರನುಂಟೆಂದು ಹೇಳುತ್ತೀಯಲ್ಲ? ಅವನು ಎಲ್ಲಿದ್ದಾನೆ? ಅವನು ಎಲ್ಲಾ ಸ್ಥಳದಲ್ಲೂ ಇರುವುದಾದರೆ ನನ್ನೆದುರಿಗಿರುವ ಈ ಕಂಬದಲ್ಲಿ ಏಕೆ ಕಾಣಿಸುತ್ತಿಲ್ಲ? ನೀನು ಅಬದ್ಧವನ್ನೇ ಬಡಬಡಿಸುತ್ತಿರುವುದರಿಂದ ಈಗಲೇ ನಿನ್ನ ತಲೆಯನ್ನು ಕಡಿದುಹಾಕುತ್ತೇನೆ. ಈಗ ನಿನ್ನ ಆ ಭಗವಂತನು ಬಂದು ನಿನ್ನನ್ನು ರಕ್ಷಿಸುತ್ತಾನೆಯೋ ಎಂದು ನೋಡೋಣ” ಎಂದು ಕೋಪದಿಂದ ಆರ್ಭಟಿಸುತ್ತಾ ಹಿರಣ್ಯಕಶಿಪುವು ತನ್ನ ಖಡ್ಗವನ್ನು ಹಿಡಿದುಕೊಂಡು ಮುನ್ನುಗ್ಗಿದ್ದನು. ಕೋಪಾತಿರೇಕದಿಂದ ಎದುರಿಗಿದ್ದ ಕಂಬವನ್ನು ಗದೆಯಿಂದ ಗುದ್ದಿದನು.
ಆಗ ಬ್ರಹ್ಮಾಂಡದ ಕವಚವನ್ನೇ ಭೇದಿಸುವಂತಹ ಭಯಂಕರವಾದ ಶಬ್ದವು ಆ ಕಂಬದೊಳಗಿಂದ ಹೊರಹೊಮ್ಮಿತು. ಹಿರಣ್ಯಕಶಿಪುವು ಶಬ್ದದ ಮೂಲವನ್ನು ತಿಳಿಯಲು ತಬ್ಬಿಬ್ಬಾಗಿ ನೋಡುತ್ತಿರುವಾಗ ಬೃಹತ್ತಾದ ಆಕೃತಿಯೊಂದು ಆ ಕಂಬವನ್ನು ಒಡೆದುಕೊಂಡು ಹೊರಬಂದಿತು. ಉಗ್ರವಾದ ಸಿಂಹದ ಮುಖ ಮತ್ತು ಮನುಷ್ಯನ ದೇಹವನ್ನು ಹೊಂದಿದ್ದ ಆ ಆಕೃತಿಯನ್ನು ಆಘಾತಿಸಲು ತನ್ನ ಗದೆಯನ್ನು ಹಿಡಿದುಕೊಂಡು ಹಿರಣ್ಯಕಶಿಪುವು ಎರಗಿದನು. ಇಬ್ಬರಿಗೂ ಘನ ಘೋರವಾದ ಕಾಳಗವು ನಡೆಯಿತು. ಹಿರಣ್ಯಕಶಿಪುವಿನ ಆಘಾತಗಳಿಂದ ನಲುಗದ ನೃಸಿಂಹ ದೇವನು, ಗರುಡನು ವಿಷಸರ್ಪವನ್ನು ಸೆರೆಹಿಡಿಯುವಂತೆ ಅವನನ್ನು ಗಟ್ಟಿಯಾಗಿ ಹಿಡಿದುಕೊಂಡನು. ಹಿರಣ್ಯಕಶಿಪುವು ಅವನ ಹಿಡಿತದಿಂದ ತಪ್ಪಿಸಿಕೊಳ್ಳಲು ಕೈಕಾಲುಗಳನ್ನು ಝಾಡಿಸುತ್ತಾ ವಿಲವಿಲ ಒದ್ದಾಡುತ್ತಿರುವಾಗ ಭಗವಾನ್ ನೃಸಿಂಹದೇವನು ಆ ರಾಕ್ಷಸನನ್ನು ಹೊತ್ತುಕೊಂಡು ಬಂದು ಸಭಾಮಂಟದ ಹೊಸ್ತಿಲ ಮೇಲೆ ಕುಳಿತು, ರಾಕ್ಷಸನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ತನ್ನ ಕೈಯ ಉಗುರುಗಳಿಂದ ಅನಾಯಾಸವಾಗಿ ಅವನ ಹೊಟ್ಟೆಯನ್ನು ಬಗಿದನು. ಅವನ ಕರುಳನ್ನು ಕಿತ್ತು ಮಾಲೆಯಾಗಿ ಹಾಕಿಕೊಂಡನು. ಹೀಗೆ ಹಿರಣ್ಯಕಶಿಪುವನ್ನು ಸಂಹಾರ ಮಾಡಿದ ನೃಸಿಂಹ ದೇವನು ಆನೆಯನ್ನು ಕೊಂದ ಸಿಂಹದಂತೆ ಭಯಂಕರವಾಗಿ ಕಾಣುತ್ತಿದ್ದನು. ಹಿರಣ್ಯಕಶಿಪುವಿನ ಅನುಚರರು ಆಯುಧಗಳನ್ನು ಹಿಡಿದುಕೊಂಡು ಸಹಸ್ರ ಸಂಖ್ಯೆಯಲ್ಲಿ ನೃಸಿಂಹನ ಮೇಲೆ ಆಕ್ರಮಣ ಮಾಡಿದರು. ನೃಸಿಂಹ ದೇವನು ಕೇವಲ ತನ್ನ ನಖಾಗ್ರಗಳಿಂದ ಅವರನ್ನು ಛೇದಿಸಿ ಸಂಹಾರ ಮಾಡಿದನು. ನೃಸಿಂಹ ದೇವನ ತಲೆಗೂದಲು ಅಲುಗಾಡಿದ ರಭಸಕ್ಕೆ ಆಕಾಶದಲ್ಲಿದ್ದ ಮೇಘಗಳು ಅತ್ತಿತ್ತ ಚದುರಿದವು. ಸೂರ್ಯ ಚಂದ್ರರು ಕಳಾಹೀನರಾದರು. ಅವನ ಗರ್ಜನೆಯಿಂದ ಬೆದರಿದ ದಿಗ್ಗಜಗಳು ಭಯದಿಂದ ಘೀಳಿಟ್ಟವು. ನೃಸಿಂಹ ದೇವನ ತಲೆಗೂದಲ ರಭಸಕ್ಕೆ ಆಕಾಶದಲ್ಲಿ ಸಂಚರಿಸುತ್ತಿದ್ದ ವಿಮಾನಗಳು ದಿಕ್ಕುತಪ್ಪಿದವು. ಅವನ ಹೆಜ್ಜೆಯ ಆಘಾತಕ್ಕೆ ಭೂಮಿಯು ಕದಲಿದಂತಾಯಿತು. ಬೆಟ್ಟಗುಡ್ಡಗಳು ಮೇಲೆದ್ದವು. ಅವನ ತೇಜಸ್ಸಿನಿಂದ ಆಕಾಶ ಮತ್ತು ಅಷ್ಟದಿಕ್ಕುಗಳ ಬೆಳಕು ಕುಗ್ಗಿತು.
ಅನಂತರ ತನ್ನನ್ನು ಎದುರಿಸುವವರು ಯಾರೂ ಇಲ್ಲವೆಂದು ತಿಳಿದು ಆ ಸಭೆಯಲ್ಲಿದ್ದ ಶ್ರೇಷ್ಠವಾದ ಸಿಂಹಾಸನದ ಮೇಲೆ ಕುಳಿತುಕೊಂಡನು. ಹಿರಣ್ಯಕಶಿಪುವಿನ ಸಂಹಾರದಿಂದ ಸಂತೋಷಗೊಂಡ ದೇವತಾಸ್ತ್ರೀಯರು ಸ್ವರ್ಗಲೋಕದಿಂದ ನೃಸಿಂಹ ದೇವನ ಮೇಲೆ ಪುಷ್ಪವೃಷ್ಟಿ ಮಾಡಿದರು. ದೇವತೆಗಳು ದೇವದುಂದುಭಿಗಳನ್ನು ಮೊಳಗಿಸಿದರು. ಅಪ್ಸರೆಯರು ನರ್ತಿಸಿದರು. ಗಂಧರ್ವರು ಇಂಪಾಗಿ ಗಾಯನ ಮಾಡಿದರು. ಆಮೇಲೆ ದೇವತೆಗಳು ಭಗವಂತನ ಬಳಿಗೆ ಬಂದರು. ಅವರಲ್ಲಿ ಬ್ರಹ್ಮ, ಇಂದ್ರ, ಶಿವನೇ ಮೊದಲಾದ ಪ್ರಮುಖರೂ, ಮಹರ್ಷಿಗಳೂ, ಪಿತೃಲೋಕ ನಿವಾಸಿಗಳೂ, ಸಿದ್ಧರೂ, ವಿದ್ಯಾಧರರೂ, ನಾಗರೂ ಇದ್ದರು. ಮನುಗಳೂ ಇತರ ಲೋಕಗಳ ಪ್ರಮುಖರೂ ಬಂದರು. ಅಪ್ಸರೆಯರು, ಗಂಧರ್ವರು, ಚಾರಣರು, ಯಕ್ಷರು, ಕಿನ್ನರರು, ಕಿಂಪುರುಷರು ಮುಂತಾದವರೆಲ್ಲ ನೃಸಿಂಹ ದೇವನ ಬಳಿಗೆ ಬಂದು ನಮಸ್ಕರಿಸಿ ಸ್ತೋತ್ರ ಮಾಡಿದರು. ಅವರೆಲ್ಲರ ಸ್ತೋತ್ರದಿಂದ ಸುಪ್ರೀತನಾದ ನೃಸಿಂಹ ದೇವನು ಶಾಂತನಾಗಿ ಎಲ್ಲರನ್ನೂ ಅನುಗ್ರಹಿಸಿದನು. ಬಾಲಕ ಪ್ರಹ್ಲಾದನನ್ನು ಅನುಗ್ರಹಿಸಿದ ನೃಸಿಂಹ ದೇವನು ಸರ್ವರಿಗೂ ಮಂಗಳವನ್ನುಂಟು ಮಾಡಿದನು.