ಬುದ್ಧಾವತಾರ

ದೇವೋತ್ತಮ ಪರಮ ಪುರುಷನ ಶಕ್ತಿಪೂರ್ಣವಾದ ಅವತಾರವೇ ಭಗವಾನ್‌ ಬುದ್ಧನ ಅವತಾರ. ಬುದ್ಧನು ಕಲಿಯುಗದ ಪ್ರಾರಂಭದಲ್ಲಿ, ಗಯಾ ಪ್ರಾಂತ್ಯದಲ್ಲಿ (ಈಗಿನ ಬಿಹಾರ) ಅಂಜನಾಳ ಮಗನಾಗಿ ಅವತರಿಸಿದನು. ಈಗ ಅದು ಬುದ್ಧಗಯಾ ಎಂದೇ ಪ್ರಸಿದ್ಧವಾಗಿದೆ. ಬುದ್ಧನು ತನ್ನದೇ ಆದ ಅಹಿಂಸಾ ತತ್ತ್ವವನ್ನು ಬೋಧಿಸಿದನು. ಶ್ರದ್ಧಾವಂತ ದೈವಭಕ್ತರ ದ್ವೇಷಿಗಳನ್ನು ಮಾರ್ಗಚ್ಯುತರನ್ನಾಗಿ ಮಾಡುವುದೇ ಬೌದ್ಧಾವತಾರದ ಉದ್ದೇಶ. ಜನಗಳನ್ನು ಪ್ರಾಣಿಹತ್ಯೆಯ ಅಭ್ಯಾಸದಿಂದ ಪಾರುಮಾಡಲು ಮತ್ತು ಬಡಪಾಯಿ ಪ್ರಾಣಿಗಳು ಹತ್ಯೆಯಾಗದಂತೆ ಕಾಪಾಡಲು ಭಗವಾನ್‌ ಬುದ್ಧನು ವೇದಗಳನ್ನು ತಿರಸ್ಕರಿಸಿದನು. ವೇದಸಮ್ಮತವಾದ ಪ್ರಾಣಿ ಬಲಿಗಳನ್ನು ಕೂಡಾ ಅವನು ನಿಷೇಧಿಸಿದನು.

ಭಗವಾನ್‌ ಬುದ್ಧನು ಅವತರಿಸಿದ ಸಮಯದಲ್ಲಿ ಜನಸಾಮಾನ್ಯರು ನಾಸ್ತಿಕರಾಗಿದ್ದರು. ಬೇರೆ ಎಲ್ಲದಕ್ಕಿಂತ ಪ್ರಾಣಿಮಾಂಸವೇ ಅವರಿಗೆ ಮುಖ್ಯವಾಗಿತ್ತು. ವೈದಿಕ ಯಜ್ಞಗಳ ನೆಪದಲ್ಲಿ ಪ್ರತಿಯೊಂದು ಸ್ಥಳವು ವಾಸ್ತವವಾಗಿ ಕಟುಕರ ಮನೆಯಾಗಿ ಹೋಗಿತ್ತು. ಯಾವುದೇ ನಿಯಂತ್ರಣವಿಲ್ಲದೆ ಪ್ರಾಣಿಹತ್ಯೆಯಲ್ಲಿ ಜನರು ತೊಡಗಿದ್ದರು. ಬಡಪಶುಗಳ ಮೇಲೆ ದಯೆ ತಾಳಿ ಭಗವಾನ್‌ ಬುದ್ಧನು ಅಹಿಂಸಾ ತತ್ತ್ವವನ್ನು ಬೋಧಿಸಿದನು. ತಾನು ವೇದ ತತ್ತ್ವಗಳನ್ನು ನಂಬುವುದಿಲ್ಲವೆಂದು ಹೇಳಿದನು. ಪ್ರಾಣಿಬಲಿಯಿಂದ ಉಂಟಾಗುವ ಮನೋವೈಜ್ಞಾನಿಕವಾದ ವಿರುದ್ಧ ಪರಿಣಾಮಗಳ ಬಗ್ಗೆ ಅವನು ಒತ್ತು ಕೊಟ್ಟು ಮಾತನಾಡಿದನು. ಜಾಗತಿಕ ಭ್ರಾತೃತ್ವ, ಶಾಂತಿ, ನ್ಯಾಯ ಮತ್ತು ಸಮಾನತೆಯ ಮಾತನಾಡುತ್ತಲೇ ಜನರು ತಮ್ಮ ಸೋದರ ಜೀವಿಗಳಾದ ಪ್ರಾಣಿಗಳ ಹತ್ಯೆಯಲ್ಲಿ ತೊಡಗುತ್ತಾರೆ. ಪ್ರಾಣಿಗಳ ಹತ್ಯೆ ನಡೆಯುತ್ತಿರುವಾಗ ನ್ಯಾಯ ಎಂಬುದು ಸಾಧ್ಯವಿಲ್ಲ. ಆದುದರಿಂದಲೇ ಭಗವಾನ್‌ ಬುದ್ಧನು ಪ್ರಾಣಿ ಹತ್ಯೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಅಪೇಕ್ಷೆಪಟ್ಟನು. ಹೀಗೆ ಮಾಡಿದ್ದರಿಂದ ಆತನ ಅಹಿಂಸಾತತ್ತ್ವವು ಕೇವಲ ಭಾರತದಲ್ಲಿ ಮಾತ್ರವಲ್ಲ, ಹೊರ ದೇಶಗಳಲ್ಲೂ ಪ್ರಚಾರ ಪಡೆಯಿತು.

ಭಗವಂತನಲ್ಲಿ ಶ್ರದ್ಧೆಯಿಲ್ಲದ ಕಲಿಯುಗದ ಅಲ್ಪಜ್ಞಾನಿಗಳು ಬುದ್ಧನ ತತ್ತ್ವವನ್ನು ಅನುಸರಿಸಿದರು. ಅಹಿಂಸೆ ಮತ್ತು ನೈತಿಕ ಶಿಸ್ತುಗಳ ಬಗ್ಗೆ ಅವರು ತತ್ಕಾಲದಲ್ಲಿ ಶಿಕ್ಷಣ ಪಡೆದರು. ದೈವಸಾಕ್ಷಾತ್ಕಾರದ ದಾರಿಯಲ್ಲಿ ಮುನ್ನಡೆಯಲು ಇವೇ ಆರಂಭದ ಹೆಜ್ಜೆಗಳು. ಬುದ್ಧನು ನಾಸ್ತಿಕರನ್ನು ಉದ್ದೇಶಪೂರ್ವಕವಾಗಿಯೇ ಮಾರ್ಗಚ್ಯುತರನ್ನಾಗಿ ಮಾಡಿದನು. ಬುದ್ಧನ ತತ್ತ್ವಗಳನ್ನು ಅನುಸರಿಸಿದ ಅಂತಹ ನಾಸ್ತಿಕರು ದೇವರಲ್ಲಿ ನಂಬಿಕೆ ಉಳ್ಳವರಾಗಿರಲಿಲ್ಲ. ಆದರೆ ಭಗವಾನ್‌ ಬುದ್ಧನಲ್ಲಿ ಮಾತ್ರ ಅವರಿಗೆ ಪರಿಪೂರ್ಣವಾದ ಶ್ರದ್ಧೆಯಿತ್ತು. ಆ ಬುದ್ಧನಾದರೋ, ಭಗವಂತನ ಅವತಾರವೇ ಆಗಿದ್ದನು. ಹಾಗಾಗಿ ದೇವರಲ್ಲಿ ನಂಬಿಕೆಯಿಲ್ಲದ ಜನರನ್ನು ಬುದ್ಧನ ರೂಪದಲ್ಲಿದ್ದ ದೇವರನ್ನು ನಂಬುವಂತೆ ಮಾಡಲಾಯಿತು. ಅದೇ ಬುದ್ಧನ ದಯೆ. ಅವನು ದೈವಶ್ರದ್ಧೆ ಇಲ್ಲದವರನ್ನು ತನ್ನಲ್ಲಿ ಶ್ರದ್ಧೆ ಹೊಂದುವಂತೆ ಮಾಡಿದನು.

ದೇವೋತ್ತಮ ಪರಮ ಪುರುಷನಿಗೆ ಎಲ್ಲ ಜೀವಿಗಳು ಸಮಾನರು. ಅವನು ಎಲ್ಲ ಜೀವಿಗಳನ್ನು ಸಮಾನವಾಗಿ ಪಾಲಿಸುತ್ತಾನೆ ಮತ್ತು ರಕ್ಷಿಸುತ್ತಾನೆ ಎಂಬುದು ನಮಗೆ ಬುದ್ಧಾವತಾರದಿಂದ ತಿಳಿಯುತ್ತದೆ. ಇಂತಹ ಪರಮ ದಯಾಪೂರ್ಣ ಅವತಾರವಾದ ಭಗವಾನ್‌ ಬುದ್ಧನಿಗೆ ನಮ್ಮ ಭಕ್ತಿಪೂರ್ವಕ ಪ್ರಣಾಮಗಳನ್ನು ಅರ್ಪಿಸೋಣ.

ಹರೇಕೃಷ್ಣ.

ಈ ಲೇಖನ ಶೇರ್ ಮಾಡಿ