
ಈಗಿನ ಬನ್ನೇರುಘಟ್ಟ ಅರಣ್ಯಪ್ರದೇಶವು ಹಿಂದೆ ಚಂಪಕ ಮರಗಳ ಅರಣ್ಯವಾಗಿದ್ದು, ತಪಸ್ವಿಗಳ ಕ್ಷೇತ್ರವಾಗಿತ್ತು. ಈಗಿನ ದೇವಾಲಯದ ಕೆಳಗೆ ತ್ರೇತಾಯುಗದಲ್ಲಿ ರಾಮನ ದೇವಾಲಯವು ಮತ್ತು ದ್ವಾಪರಯುಗದಲ್ಲಿ ಶ್ರೀಕೃಷ್ಣನ ದೇವಾಲಯವಿದ್ದು, ಈ ಕಲಿಯುಗದಲ್ಲಿ ನಾರಾಯಣನ ದೇವಾಲಯವನ್ನು ಪಂಚಪಾಂಡವರು ಪ್ರತಿಷ್ಠಾಪಿಸಿದರೆಂದು ಹೇಳಲಾಗಿದೆ. ಈ ಪ್ರದೇಶ ಚಂಪಕಾರಣ್ಯವಾಗಿದ್ದರಿಂದ ದೇವರಿಗೆ `ಚಂಪಕರಾಯ’ ಎಂಬ ಹೆಸರು. ನಿತ್ಯವೂ ಕನಿಷ್ಠ ಪಕ್ಷ ಒಂದು ಸಂಪಿಗೆ ಹೂವನ್ನಾದರೂ ಭಗವಂತನಿಗೆ ಅರ್ಪಿಸಲಾಗುವುದು. ಯುಗಾದಿಯ ಅನಂತರ ಬ್ರಹ್ಮೋತ್ಸವಾಚರಣೆ, ಧ್ವಜಾರೋಹಣ, ವಿವಿಧ ವಾಹನ ಸೇವೆ, ಪ್ರತ್ಯೇಕ ಕಲ್ಯಾಣೋತ್ಸವ, ಬ್ರಹ್ಮರಥೋತ್ಸವಾದಿಗಳು ಚಕ್ರಸ್ನಾನದೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯುತ್ತವೆ. ಈ ದೇವಾಲಯವು ದ್ರಾವಿಡ ಶೈಲಿಯಲ್ಲಿದ್ದು, ಮಹಾರಾಜಗೋಪುರ, ಎರಡು ಪ್ರಾಕಾರಗಳು, ಅರ್ಧಮಂಟಪ, ಸುಕನಾಸಿ ಮತ್ತು ಗರ್ಭಗುಡಿಯನ್ನು ಹೊಂದಿದೆ. ಈ ದೇವಾಲಯಕ್ಕೆ ಸಂಬಂಧಿಸಿದ ಹಾಗೆ ಒಂದು ಘನ ಚರಿತ್ರೆಯುಳ್ಳ ಕಲ್ಯಾಣಿ ಇದೆ.

ಪಂಚಪಾಂಡವರ ವಂಶಜನಾದ ಜನಮೇಜಯ ಮಹಾರಾಜನು ತೊನ್ನಿನಿಂದ ಬಳಲುತ್ತಿದ್ದನು. ಇದರ ನಿವಾರಣೆಗಾಗಿ ಋಷಿಗಳ ಸಲಹೆಯ ಮೇರೆಗೆ ತನ್ನ ಪೂರ್ವಿಕರು ನಿರ್ಮಿಸಿದ ದೇವಾಲಯಗಳ ದರ್ಶನದಿಂದ ತನ್ನ ಎಲ್ಲ ಕಷ್ಟಗಳು ಪರಿಹಾರವಾಗುವುದೆಂದು ತಿಳಿದು, ಆ ದೇವಾಲಯಗಳ ದರ್ಶನವನ್ನು ಕೈಗೊಂಡನು. ಹೀಗೆ, ಅವನು ತೀರ್ಥಯಾತ್ರೆ ಮಾಡುವಾಗ, ಚಂಪಕರಾಯ ದೇವಾಲಯವು ತನ್ನ ತಾತಂದಿರಿಂದ ನಿರ್ಮಿತವಾದುದ್ದರಿಂದ, ಈ ಕ್ಷೇತ್ರಕ್ಕೂ ಚಂಪಕರಾಯನ ಸೇವೆಯನ್ನು ಮಾಡಲು ಬಂದನು.
ಜನಮೇಜಯ ಮಹಾರಾಜನ ಜೊತೆಗಿದ್ದ ಅವನ ಸಾಕುನಾಯಿ ಕೂಡ ಅದೇ ರೋಗದಿಂದ ಬಳಲುತ್ತಿತ್ತು. ಅರಣ್ಯ ಮಧ್ಯದಲ್ಲಿದ್ದ ಕಲ್ಯಾಣಿಯನ್ನು ನೋಡಿದ ನಾಯಿ, ಬಾಯಾರಿಕೆಯನ್ನು ನಿವಾರಿಸಿಕೊಳ್ಳಲು ಅಲ್ಲಿನ ನೀರನ್ನು ಕುಡಿಯಿತು. ಆ ನೀರು ತಾಕಿದ ಕೂಡಲೇ ನಾಯಿಯ ರೋಗ ನಿವಾರಣೆಯಾಯಿತು. ಆಗ ಜನಮೇಜಯ ಮಹಾರಾಜನು ಕೂಡ ಆ ನೀರಿನಲ್ಲಿ ಸ್ನಾನ ಮಾಡಲು, ಅವನ ತೊನ್ನು ನಿವಾರಣೆಯಾಗಿ, ದಣಿವೂ ತೀರಿತು. ಚಿರಂಜೀವಿಯಾದ ಆಂಜನೇಯನು ಪ್ರತ್ಯಕ್ಷನಾಗಿ, ಈ ಕಲ್ಯಾಣಿಯು ತನ್ನ ವಾಸಸ್ಥಾನವಾಗಿದ್ದು, ಇದರಲ್ಲಿನ ತೀರ್ಥವು ಸಕಲ ರೋಗ ನಿವಾರಣೆ ಮಾಡುವ ಮಹದೌಷದೀಯ ಗುಣಗಳನ್ನು ಹೊಂದಿದೆ ಎಂದು ಹೇಳಿ ಆಶೀರ್ವದಿಸಿದನು.

ಚಂಪಕರಾಯ ದೇವಾಲಯದ ಹಿಂಭಾಗದ ಗುಡ್ಡದ ಮೇಲೆ ಲಕ್ಷ್ಮೀನರಸಿಂಹ ದೇವಾಲಯವಿದೆ. ಇದರ ಹಿಂಭಾಗದಲ್ಲಿರುವ ಅರಣ್ಯಮಧ್ಯದಲ್ಲಿ ಈ ಕಲ್ಯಾಣಿ ಇದೆ. ಈ ಕಲ್ಯಾಣಿಯ ಹೆಸರು `ಸ್ವರ್ಣಮುಖಿ’ ಎಂದು. ಈಗಲೂ ಆಂಜನೇಯನ ವಿಗ್ರಹ ಕಲ್ಯಾಣಿಯ ಅಡಿಯಲ್ಲಿದೆ. ವರ್ಷದ ಜಾತ್ರಾಸಮಯದಲ್ಲಿ, ಕಲ್ಯಾಣಿಯ ನೀರನ್ನು ತೆಗೆದು ತಳದಲ್ಲಿರುವ ಆಂಜನೇಯನ ಪೂಜೆಗೈವ ಪದ್ಧತಿ ಇದೆ. ಪ್ರತೀ ಅಮಾವಾಸ್ಯೆಯಂದು ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಈ ಕಲ್ಯಾಣಿಯಲ್ಲಿ ಸ್ನಾನಕ್ಕಾಗಿ ಹೋಗುತ್ತಾರೆ.