ಗಾವೋ ರಕ್ಷಂತಿ ರಕ್ಷಿತಾಃ

ಹಸು ಸಂರಕ್ಷಣೆಯಿಂದ ಮನುಕುಲಕ್ಕೆ ಆಗುವ ಹಿತದ ಪರಾಮರ್ಶೆ

ಅದು ಸರಸ್ವತೀ ನದಿ ತೀರ. ಸುಮಾರು ಐವತ್ತು ಶತಮಾನಗಳ ಹಿಂದೆ ಶ್ವೇತ ವರ್ಣದ ಹಸು ಮತ್ತು ಎತ್ತು ಅಲ್ಲಿ ಶಾಂತಿಯುತವಾಗಿ, ಉಲ್ಲಾಸದಿಂದ ಮೇಯುತ್ತಿದ್ದವು. ಆ ಸಂತೋಷ ಕ್ಷಣ ಮಾತ್ರದ್ದಾಯಿತು. ದಿಢೀರನೆ, ಎತ್ತರವಾಗಿ ಬೆಳೆದಿದ್ದ ಹುಲ್ಲಿನ ನಡುವಿನಿಂದ ಕಪ್ಪು ವರ್ಣದ, ಗಡ್ಡಧಾರಿ ಮನುಷ್ಯನೊಬ್ಬ ಕಾಣಸಿಕೊಳ್ಳುತ್ತಾನೆ, ಕೈಯಲ್ಲಿ ಗದೆ ಝಳಪಿಸುತ್ತ. ಅವನ ವೇಷ ರಾಜರುಡುಗೆಯಾದರೂ ಮುಗ್ಧ ಹಸು, ಎತ್ತಿನ ಮೇಲೆ ಅವನು ಹಲ್ಲೆ ನಡೆಸಿದಾಗ ಅವನೊಬ್ಬ ಕೆಳ ಮಟ್ಟದ ಠಕ್ಕನೆಂಬುದು ವೇದ್ಯವಾಯಿತು. ಅನಂತರ  ನಿಜವಾದ ರಾಜ – ಮಹಾರಾಜ ಪರೀಕ್ಷಿತ ಪ್ರತ್ಯಕ್ಷನಾಗುತ್ತಾನೆ. ಖಡ್ಗವನ್ನು ಮೇಲಕ್ಕೆತ್ತಿ ಮಹಾರಾಜನು ಆ ಪುಂಡನತ್ತ ತಿರುಗಿ ಗುಡುಗಿನಂತಹ ದನಿಯಲ್ಲಿ ಗರ್ಜಿಸುತ್ತಾನೆ `ಏ ಪುಂಡ! ಶ್ರೀಕೃಷ್ಣ ಇಲ್ಲಿಲ್ಲವೆಂದು ಮುಗ್ಧ ಹಸುವಿನ ಮೇಲೆ ಹಲ್ಲೆ ಮಾಡಲು ನಿನಗೆಷ್ಟು ಧೈರ್ಯ? ನೀನೊಬ್ಬ ಅಪರಾಧಿ, ಹತ್ಯೆಗೆ ನೀನು ಅರ್ಹ!’ ಜೀವ ಭಯದಿಂದ ನಡುಗಿದ ಆ ಮನುಷ್ಯ – ಕಲಿ ಎಂಬುದು ಅವನ ಹೆಸರು – ತಾನು ಧರಿಸಿದ್ದ ರಾಜನ ಉಡುಗೆ ತೆಗೆದು ರಾಜನಿಗೆ ಶರಣಾಗಿ ಜೀವ ಭಿಕ್ಷೆ ಬೇಡುತ್ತಾನೆ. ಕ್ರೂರಿ ಕಲಿಗೆ ಜೀವದಾನ ಮಾಡುವ ಮಹಾರಾಜ ಪರೀಕ್ಷಿತ, ಅವನನ್ನು ಜೂಜು, ಕುಡಿತ, ವೇಶ್ಯಾಗೃಹ, ಪ್ರಾಣಿ ವಧೆ ಹಾಗೂ ಚಿನ್ನ ದಾಸ್ತಾನು ಸ್ಥಳಗಳಿಗೆ ಅಟ್ಟುತ್ತಾನೆ.

ಈ ಕಲಿ – ಪರೀಕ್ಷಿತ್‌ ಮುಖಾಬಿಲೆಯು ಕಲಿಯುಗದ ಆರಂಭದ ಸೂಚನೆಯಾಯಿತು. ಇದು ಪ್ರಸ್ತುತದ ಜಗಳ-ಕದನ, ಆಷಾಢಭೂತಿತನದ ಕಾಲವಾಗಿದೆ.  ದೇವೋತ್ತಮ ಪರಮಪುರುಷ ಶ್ರೀಕೃಷ್ಣನು ಆಗಷ್ಟೇ ಭೂಮಿಯಿಂದ ತೆರಳಿದ್ದ ಹಾಗೂ ತನ್ನ ಆವಿರ್ಭಾವದ ಕಾಲದಲ್ಲಿ ಶ್ರೀ ಕೃಷ್ಣನು ಪುನರ್‌ ಸ್ಥಾಪಿಸಿದ್ದ ಸಾರ್ವತ್ರಿಕ ಧಾರ್ಮಿಕ ತತ್ತ್ವಗಳನ್ನು ರಕ್ಷಿಸಲು ಪರೀಕ್ಷಿತ ದೃಢಮನಸ್ಕನಾಗಿದ್ದ. ಆದರೆ ಕಲಿಯು ನರಕ ಸೃಷ್ಟಿಗೆ ನಿರ್ಧಾರ ಕೈಗೊಂಡಿದ್ದ. ನಿಷ್ಕರುಣ, ಕಠೋರ ಕಾಲ ಅವನ ಪರವಾಗಿತ್ತು. ಹಸು, ಎತ್ತನ್ನು ಕೊಲ್ಲುವ ಮೊದಲ ಪ್ರಯತ್ನದಿಂದ ನಮ್ಮ ಕಲಿಯುಗದವರೆಗೆ ಸುದೀರ್ಘ ಹಾದಿ ಸಾಗಿದೆ. ಜೂಜು, ಕುಡಿತ, ವೇಶ್ಯಾವೃತ್ತಿ ಮತ್ತು ಗೋ ಹತ್ಯೆ ಈಗ ದೊಡ್ಡ ವ್ಯಾಪಾರಗಳಾಗಿವೆ. ಅನೇಕ ಬಾರಿ ಸರ್ಕಾರದ ಅನುಮತಿ ಮತ್ತು ತೆರಿಗೆ ಮೂಲಕ ಕಲಿಯ ಭೂತ ನಮ್ಮನ್ನು ಹೊಕ್ಕಿದೆ. ಎಷ್ಟು ಬಾರಿ ನಾವು ಒಂದು ಕೈಯಲ್ಲಿ ಹಸುವಿನ ಹಾಲು ಕುಡಿದು ಮತ್ತೊಂದು ಕೈಯಲ್ಲಿ ಅದರ ಮಾಂಸ ತಿಂದಿಲ್ಲ?

“ಹಸುವಿನ ಹಾಲು ಕುಡಿದು ಸಂತೃಪ್ತರಾದವರು ಅದನ್ನು ಕೊಲ್ಲುವ ಅಪೇಕ್ಷೆ ಹೊಂದಿದರೆ ಅವರಷ್ಟು ಅಜ್ಞಾನಿಗಳು ಬೇರೊಬ್ಬರಿಲ್ಲ ” ಎಂದು ಹರೇ ಕೃಷ್ಣ ಆಂದೋಲನದ ಸ್ಥಾಪಕರೂ ಆಧ್ಯಾತ್ಮಿಕ ಗುರುಗಳೂ ಆದ ಶ್ರೀಲ ಪ್ರಭುಪಾದರು ಬರೆಯುತ್ತಾರೆ. “ನಾವು ಹಸುವಿನ ಹಾಲು ಕುಡಿಯುತ್ತೇವೆ, ಆದುದರಿಂದ ಹಸು ನಮಗೆ ತಾಯಿ. ಮತ್ತು ನಮ್ಮ ಬದುಕಿಗೆ ಅಗತ್ಯವಾದ ಧಾನ್ಯ ಉತ್ಪಾದಿಸಲು ಶ್ರೀಕೃಷ್ಣನು ಎತ್ತನ್ನು ಸೃಷ್ಟಿಸಿದ, ಹೀಗಾಗಿ ಅದು ನಮಗೆ ತಂದೆ. ಎತ್ತು ಮತ್ತು ಹಸು ನಮಗೆ ತಂದೆ, ತಾಯಿಯಾಗಿರುವುದರಿಂದ ನಾವು ಅದು ಹೇಗೆ ಅವುಗಳನ್ನು ಕೊಂದು ತಿನ್ನುತ್ತೇವೆ? ಇದೆಂತಹ ನಾಗರಿಕತೆ?”

ಭಾರತದಲ್ಲಿ ಗೋಹತ್ಯೆ

ಭಾರತದ ಮೇಲೆ ಆಕ್ರಮಣ ನಡೆಸಿದ ಬ್ರಿಟಿಷರಿಗೆ ಎರಡು ಅಚ್ಚರಿ ಉಂಟುಮಾಡುವ ಸಂಗತಿಗಳು ಗೋಚರವಾದವು: ಭಾರತದ ಗುರುಕುಲ ಪದ್ಧತಿ ಮತ್ತು ಭಾರತದ ಕೃಷಿ ಪದ್ಧತಿ. ಭಾರತದ ಪ್ರಗತಿದಾಯಕ ಕೃಷಿ ವ್ಯವಸ್ಥೆಯನ್ನು ಹಾಳುಗೆಡವಲು ಹಾಗೂ ಬ್ರಿಟಿಷರು ಸ್ಥಾಪಿಸಿದ್ದ ಉದ್ದಿಮೆಗಳ ಮೇಲೆ ಅದು ಅವಲಂಬಿತವಾಗುವಂತೆ ಮಾಡಲು ಆಗಿನ ಗೌರ್ನರ್‌ ರಾಬರ್ಟ್‌ ಕ್ಲೈವ್‌ ವ್ಯಾಪಕ ಸಂಶೋಧನೆ ನಡೆಸಿದ. ಆ ಸಂಶೋಧನೆಯ ಫಲಿತಾಂಶ :

* ಭಾರತದ ಕೃಷಿಗೆ ಹಸು/ಎತ್ತುಗಳೇ ಆಧಾರ. ದನಗಳ ನೆರವಿಲ್ಲದೆ ಕೃಷಿ ಕಾರ್ಯ ನಡೆಯದು.

* ಭಾರತದ ಕೃಷಿಯ ಬೆನ್ನು ಮೂಳೆ ಮುರಿಯಲು ಹಸುಗಳನ್ನು ನಿರ್ನಾಮ ಮಾಡಬೇಕು.

* ಬಂಗಾಳದಲ್ಲಿ ಮನುಷ್ಯರಿಗಿಂತ ಹಸುಗಳ ಸಂಖ್ಯೆ ಹೆಚ್ಚು. ಭಾರತದ ಇತರ ಭಾಗಗಳಲ್ಲಿಯೂ ಅದೇ ಪರಿಸ್ಥಿತಿ.

ಭಾರತವನ್ನು ಅಸ್ಥಿರಗೊಳಿಸುವ ಬೃಹತ್‌ ಯೋಜನೆಯಾಗಿ ಗೋಹತ್ಯೆ ಆರಂಭಿಸಲಾಯಿತು. 1760ರಲ್ಲಿ ದೇಶದ ಮೊದಲ ಕಸಾಯಿಖಾನೆ ಸ್ಥಾಪಿತವಾಯಿತು. ಅದರ ಸಾಮರ್ಥ್ಯ ದಿನಕ್ಕೆ 30 ಸಾವಿರ ಹಸುಗಳ ಹತ್ಯೆ. ಒಂದು ವರ್ಷದಲ್ಲಿ ಸುಮಾರು ಒಂದು ಕೋಟಿ ಹಸುಗಳು ಕಟುಕರ ಆಯುಧಕ್ಕೆ ಆಹಾರವಾದವು. ಹಸುಗಳ ಹತ್ಯೆ ಎಂದರೆ ಗೊಬ್ಬರಕ್ಕೆ ಸೆಗಣಿ ಇಲ್ಲ, ಕೀಟನಾಶಕ್ಕೆ ಗೋಮೂತ್ರವಿಲ್ಲ. ದೇಶ ಬಿಡುವ ಮೊದಲು  ರಾಬರ್ಟ್‌ ಕ್ಲೈವ್‌ ಭಾರತದೆಲ್ಲೆಡೆ ಕಸಾಯಿಖಾನೆಗಳನ್ನು ತೆರೆದು ಬ್ರಿಟಿಷ್‌ ಇಂಡಿಯಾಕ್ಕೆ ಮಹದುಪಕಾರ ಮಾಡಿದ. 1910ರ ವೇಳೆಗೆ ಸುಮಾರು 350 ಕಸಾಯಿಖಾನೆಗಳು ರಾತ್ರಿ ಹಗಲೆನ್ನದೆ ಕಾರ್ಯಮಗ್ನವಾಗಿದ್ದವು. ಪಶುಗಳಿಲ್ಲದೆ ಕಂಗಾಲಾದ ಭಾರತವು ರಾಸಾಯನಿಕ ಗೊಬ್ಬರಕ್ಕಾಗಿ ಇಂಗ್ಲೆಂಡ್‌ನ ಬಾಗಿಲು ತಟ್ಟುವಂತಾಯಿತು. ಈ ರೀತಿ ಯೂರಿಯಾ, ಫಾಸೇಟ್‌ನಂತಹ ರಾಸಾಯನಿಕ ಗೊಬ್ಬರ ಭಾರತ ಪ್ರವೇಶಿಸಿತು.

ಕೆಲ ವಾಸ್ತವಾಂಶಗಳು

1) 1760 : ರಾಬರ್ಟ್‌ ಕ್ಲೈವ್‌ ದೇಶದ ಮೊದಲ ಕಸಾಯಿಖಾನೆಯನ್ನು ಕೋಲ್ಕತ್ತಾದಲ್ಲಿ ಸ್ಥಾಪಿಸಿದ.

2) 1861 : ಹಸುಗಳನ್ನು ಕುರಿತಂತೆ ಭಾರತೀಯರ ಭಾವನೆಗಳಿಗೆ ನೋವುಂಟುಮಾಡಲು ವಿಕ್ಟೋರಿಯಾ ರಾಣಿ ಭಾರತದ ವೈಸರಾಯ್‌ಗೆ ಪತ್ರ ಬರೆದದ್ದು.

3) 1947: ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಸುಮಾರು 300 ಕಸಾಯಿಖಾನೆಗಳಿದ್ದವು. ಈಗ – ಅಂಗೀಕಾರವಾಗಿರುವವೇ 35 ಸಾವಿರಕ್ಕೂ ಹೆಚ್ಚು. ಅನಧಿಕೃತ ಕಸಾಯಿಖಾನೆಗಳು ಅಸಂಖ್ಯ.

4) ಹಸು ತಳಿಗಳು 70ರಿಂದ 33ಕ್ಕೆ ಇಳಿದಿವೆ. ಉಳಿದ ತಳಿಗಳಲ್ಲೂ ಕೆಲವು ಮಾಯವಾಗುವ ಅಪಾಯದಲ್ಲಿವೆ.

5) ಸ್ವಾತಂತ್ರ್ಯ ಅನಂತರ ಹಸು ಸಂಖ್ಯೆ ಶೇ.80ರಷ್ಟು ಇಳಿದಿದೆ.

6) ಮಾಂಸ, ವ್ಯಾನಿಟಿ ಬ್ಯಾಗ್‌, ಲೆದರ್‌ ಚಪ್ಪಲಿ, ಬೆಲ್ಟ್‌, ಟೂತ್‌ ಪೇಸ್ಟ್‌, ವಿಟಮಿನ್‌ ಮಾತ್ರೆ, ಸಿಹಿ ತಿನಿಸಿನ ಮೇಲೆ ಚಿನ್ನ ಬೆಳ್ಳಿ ಹಾಳೆಗಳಿಗಾಗಿ ಗೋ ಹತ್ಯೆ ನಡೆದಿದೆ.

7) 17ನೇ ಜಾನುವಾರು ಗಣತಿಯು ಸತತವಾಗಿ ಪಶುಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ವರದಿ ಮಾಡಿದೆ. 1951ರಲ್ಲಿ 1000 ಮಾನವರಿಗೆ ಇದ್ದ ಪಶುಗಳ ಸಂಖ್ಯೆ 430. 2001ರಲ್ಲಿ ಅದು 110. 2011ರಲ್ಲಿ ಆ ಸಂಖ್ಯೆ 20!

ಗೋ ಹಂತಕರಿಗೆ ಕಾದಿರುವ ಶಿಕ್ಷೆ

ಮಾನವ ಸಮಾಜದಲ್ಲಿ ಕೊಲೆಗೆ ನೇಣೇ ಶಿಕ್ಷೆ. ಅದು ದೇಶದ ಕಾನೂನು. ಆದರೆ ಇಡೀ ವಿಶ್ವವು ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನ ನಿಯಂತ್ರಣದಲ್ಲಿದೆ ಎಂಬುವುದು ಅಜ್ಞಾನಿಗಳಿಗೆ ತಿಳಿಯದು. ಪ್ರತಿಯೊಂದು ಜೀವಿಯೂ ದೇವೋತ್ತಮನ ಮಗ. ಒಂದು ಇರುವೆಯನ್ನು ಕೊಂದರೂ ಅವನು ಸಹಿಸುವುದಿಲ್ಲ. ಅದಕ್ಕೆ ತಕ್ಕಶಾಸ್ತಿ ಅನುಭವಿಸಲೇಬೇಕು. ಹೀಗಾಗಿ ನಾಲಗೆ ರುಚಿಗಾಗಿ ಪ್ರಾಣಿವಧೆ ಮಾಡುವುದು ಅಜ್ಞಾನದ ಪರಮಾವಧಿ. ದೇವರು ಒಳ್ಳೆಯದನ್ನೆಲ್ಲ ನೀಡಿರುವಾಗ ಮಾನವರಿಗೆ ಪ್ರಾಣಿಗಳನ್ನು ಕೊಲ್ಲುವ ಅಗತ್ಯವಿಲ್ಲ. ಎಲ್ಲ ರೀತಿಯ ಪ್ರಾಣಿ ಹತ್ಯೆಗಳಲ್ಲಿ ಗೋ ವಧೆ ಅತ್ಯಂತ ದುಷ್ಟ ಪಾಪ. ಏಕೆಂದರೆ ಹಸು ಹಾಲು ಕೊಡುತ್ತ ನಮಗೆ ಎಲ್ಲ ಸುಖ ಸಂತೋಷ ನೀಡುತ್ತದೆ.

ಹತ್ಯೆಯ ಕಲೆ ಕಲಿಯಲು ಕ್ಷತ್ರಿಯರು ಕೆಲ ಬಾರಿ ಅರಣ್ಯಕ್ಕೆ ಹೋಗಿ ಜಿಂಕೆಯಂತಹ ಪ್ರಾಣಿಗಳನ್ನು ಕೊಲ್ಲುತ್ತಾರೆ. ಕೆಲ ಬಾರಿ ಅವರು ಪ್ರಾಣಿಗಳನ್ನು ತಿನ್ನುತ್ತಾರೆ. ಶೂದ್ರರೂ ಕೂಡ ಮೇಕೆಯಂತಹ ಪ್ರಾಣಿಗಳನ್ನೂ ಭಕ್ಷಿಸುತ್ತಾರೆ. ಆದರೆ ಹಸುಗಳು ಎಂದಿಗೂ ಕೊಲ್ಲಲು ಅಥವಾ ತಿನ್ನಲು ಸೂಕ್ತ ಅಲ್ಲವೇ ಅಲ್ಲ. ಎಲ್ಲ ಶಾಸ್ತ್ರಗಳಲ್ಲೂ ಗೋಹತ್ಯೆಯನ್ನು ತೀವ್ರವಾಗಿ ಖಂಡಿಸಲಾಗಿದೆ. ಹಸುವನ್ನು ಕೊಂದವರು ಅದರ ಮೇಲೆ ಇರುವ ಕೂದಲಿನ ಸಂಖ್ಯೆಯಷ್ಟು ವರ್ಷಗಳ ಕಾಲ ನರಕದಲ್ಲಿ ನೋವು ಅನುಭವಿಸಬೇಕು.

ಗೋ ಸಂರಕ್ಷಣೆಯ ಹಿಂದೆ ಇರುವ ತತ್ತ್ವ

`ಗೋ ಸಂರಕ್ಷಣೆ’ ಎಂದಾಕ್ಷಣ ಜನರು ಸಾಮಾನ್ಯವಾಗಿ ಎರಡು ರೀತಿ ಪ್ರತಿಕ್ರಿಯಿಸುತ್ತಾರೆ. ಸಂರಕ್ಷಣೆಯು ಅಪಾಯದಲ್ಲಿರುವ ಪ್ರಾಣಿಗಳಿಗಾಗಿ ಎಂದು ಭಾವಿಸುವ ಕೆಲವರು, ಲಕ್ಷಾಂತರ ಹಸುಗಳಿರುವುದರಿಂದ ಹುಲಿ, ತಿಮಿಂಗಿಲ, ಆಫ್ರಿಕ ಆನೆ ಮುಂತಾದುವುಗಳತ್ತ ಗಮನ ಕೇಂದ್ರೀಕರಿಸಬೇಕೆಂದು ವಾದಿಸುತ್ತಾರೆ. ಪ್ರಾಣಿಗಳನ್ನು ಸುಮ್ಮನೆ ಪೂಜಿಸಲೆಂದು – `ಪವಿತ್ರ ಹಸು’ ಕಲ್ಪನೆ – ಎಂದು ಯೋಚಿಸುವವರೂ ಇದ್ದಾರೆ.

ಗೋ ಸಂರಕ್ಷಣೆ ಕುರಿತ ತಾತಿ್ತ್ವಕ ಕಾರಣವಂತೂ ತುಂಬ ಸರಳ. ಎಲ್ಲ ಜೀವಿಗಳೂ ಮಾನವನಿಂದ ಹತ್ಯೆ ಮತ್ತಿತರ ಹಿಂಸೆಗೆ ಒಳಗಾಗುವುದರಿಂದ ರಕ್ಷಿಸಲ್ಪಡುವ ಹಕ್ಕು ಹೊಂದಿವೆ. ಹಸುಗಳಿಗಷ್ಟೇ ಅಲ್ಲ, ಎಲ್ಲ ಪ್ರಾಣಿಗಳಿಗೂ ನಮ್ಮಂತೆ ಆತ್ಮವಿದೆ. ಅವರೆಲ್ಲರೂ ಶ್ರೀಕೃಷ್ಣನ ಮಕ್ಕಳು, ಪ್ರೀತಿ ಪಾತ್ರರು. ಈ ದೃಷ್ಟಿಯಲ್ಲಿ  ಪ್ರಾಣಿ ಹತ್ಯೆಯನ್ನು ಕೊಲೆ ಎಂದು ಪರಿಗಣಿಸಬಹುದು. ಹಸುವಂತೂ ನಮಗೆ ತಾಯಿ. ವೇದ ತತ್ತ್ವವು ಏಳು ಮಾತೆಯರಿದ್ದಾರೆಂದು ಬೋಧಿಸುತ್ತದೆ:

1. ಜನ್ಮದಾತೆ   2. ದಾದಿ ಅಥವಾ ನರ್ಸ್‌  3. ಬ್ರಾಹ್ಮಣನ ಪತ್ನಿ 4. ರಾಜನ ಪತ್ನಿ   5. ಆಧ್ಯಾತ್ಮಿಕ ಗುರುವಿನ ಪತ್ನಿ   6. ಭೂಮಿ ಮತ್ತು   7. ಹಸು.

ಏಳು ತಾಯಂದಿರಲ್ಲಿ ಹಸುವಿಗೂ ಸ್ಥಾನವೇ ಎಂದು ಸೋಜಿಗವೇ? ನಮ್ಮ ಪೌಷ್ಟಿಕತೆಗೆ ಅಗತ್ಯವಾದ ಹಾಲನ್ನು ಹಸು  ನೀಡುತ್ತದೆಯಲ್ಲ. ಎಲ್ಲ ತಾಯಂದಿರೂ ಗೌರವಾನ್ವಿತರು. ಯಾರೂ ತಮ್ಮ ತಾಯನ್ನು ಕೊಂದು ತಿನ್ನದ ಕಾರಣ, ಹಸುವನ್ನು ಕೊಲ್ಲಬಾರದು, ತಿನ್ನಬಾರದು. ಅದೇ ರೀತಿ ಎತ್ತು ನಮ್ಮ ತಂದೆ. ಅದು ಧಾನ್ಯ ಉತ್ಪಾದನೆಗೆ ಹೊಲ ಉಳುತ್ತದೆ. ಯಾರೂ ತಮ್ಮ ತಂದೆ ತಾಯಿಯನ್ನು ಕೊಂದು ತಿನ್ನುವುದಿಲ್ಲ – ಅವರು ವೃದ್ಧರಾಗಿ ಆರ್ಥಿಕವಾಗಿ ಕಡಮೆ ಉಪಯುಕ್ತರಾದರೂ. ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನು ತನ್ನ ಭಕ್ತರನ್ನು ರಕ್ಷಿಸಲು ಮತ್ತು ತನ್ನ  ಲೀಲೆಗಳನ್ನು ಪ್ರದರ್ಶಿಸಲು ಐದು ಸಾವಿರ ವರ್ಷಗಳ ಹಿಂದೆ ಭೂಮಿಯ ಮೇಲೆ ಆವಿರ್ಭವಿಸಿದ. ಆ ಲೀಲೆಗಳಲ್ಲಿ ಅವನು ಗೋಪಾಲ ಬಾಲಕನಾಗಿ ಪಾತ್ರವನ್ನು  ನಿರ್ವಹಿಸಿದ. ವಾತ್ಸಲ್ಯ ಮತ್ತು ಮೃದು ಸ್ವಭಾವ ಹಾಗೂ ಮಾನವ ಸಮಾಜಕ್ಕೆ ನೀಡುವ ಕೊಡುಗೆಯಿಂದಾಗಿ ಹಸುಗಳು ಅವನಿಗೆ ಅತ್ಯಂತ ಪ್ರಿಯವಾಗಿದ್ದವು. ಅವನೂ ಅವುಗಳಿಗೆ ಕರುಣಾಮಯಿಯಾಗಿ ರಕ್ಷಕನಾಗಿದ್ದ. ನಾವು ಅವನನ್ನು ಅನುಸರಿಸಬೇಕು.

ಕೃಷ್ಣ ಗೋವಿಂದನಾಗಿ

ನಮೋ ಬ್ರಾಹ್ಮಣ್ಯ ದೇವಾಯ ಗೋ ಬ್ರಾಹ್ಮಣ ಹಿತಾಯ ಚ ಜಗದ್‌ ಹಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ `ಎಲ್ಲ ಬ್ರಾಹ್ಮಣರಿಗೆ ಆರಾಧ್ಯ ದೈವನಾದ, ಹಸುಗಳ, ಬ್ರಾಹ್ಮಣರ ಹಿತೈಷಿಯಾದ ಮತ್ತು ಇಡೀ ಜಗತ್ತಿಗೇ ಹಿತವನ್ನುಂಟು ಮಾಡುವ ಶ್ರೀಕೃಷ್ಣನಿಗೆ ನನ್ನ ಗೌರವ ಸಲ್ಲಿಸುವೆ. `ಕೃಷ್ಣ’, `ಗೋವಿಂದ’ ಎಂದು ಕರೆಯುವ ದೇವೋತ್ತಮ ಪರಮ ಪುರುಷನಿಗೆ ನಾನು ಪುನಃ ಪುನಃ ಗೌರವ ಅರ್ಪಿಸವೆ.’ (ವಿಷ್ಣು ಪುರಾಣ 1.19.65).

ಈ ಶ್ಲೋಕದಲ್ಲಿ ನಾವು ಮೊದಲು ಪರಿಗಣಿಸಬೇಕಾಗಿರುವುದು ಹಸು ಮತ್ತು ಬ್ರಾಹ್ಮಣರು (ಗೋ ಬ್ರಾಹ್ಮಣ). ಏಕೆ ಅದನ್ನು ಒತ್ತಿ ಹೇಳಲಾಗಿದೆ? ಏಕೆಂದರೆ ಬ್ರಾಹ್ಮಣ್ಯ ಸಂಸ್ಕೃತಿ ಮತ್ತು ಗೋ ಸಂರಕ್ಷಣೆ ಇಲ್ಲದ ಸಮಾಜ ಮಾನವ ಸಮಾಜವೇ ಅಲ್ಲ, ಅದು ಅವ್ಯವಸ್ಥಿತ ಮೃಗೀಯ ಸಮಾಜ.

ಗೋಪಾಲ ಬಾಲಕರು ಮತ್ತು ಹಸುಗಳೊಂದಿಗಿನ ಕೃಷ್ಣನ ಲೀಲೆಯು ಅವನಿಗೆ ಗೋವಿಂದನೆಂಬ ನಾಮ ತಂದುಕೊಟ್ಟಿತು. ಗೋವಿಂದನಾಗಿ ಶ್ರೀಕೃಷ್ಣನು ಬ್ರಾಹ್ಮಣರು ಮತ್ತು ಹಸುಗಳತ್ತಲೇ ಒಲವು ತೋರಿದ್ದಾನೆ. ಈ ಮೂಲಕ ಮಾನವ ಅಭ್ಯುದಯವು ಹೆಚ್ಚಾಗಿ ಬ್ರಾಹ್ಮಣ್ಯ ಸಂಸ್ಕೃತಿ ಮತ್ತು ಗೋ ಸಂರಕ್ಷಣೆ ಮೇಲೆ ಅವಲಂಬಿತ ಎಂಬುದನ್ನು ಸೂಚಿಸಿದ್ದಾನೆ. ಬ್ರಾಹ್ಮಣರು ಆಧ್ಯಾತ್ಮಿಕ ಶಿಕ್ಷಣದ ಪ್ರತೀಕವಾದರೆ ಗೋವು ಅತ್ಯಂತ ಮೌಲ್ಯ ಉಳ್ಳ ಆಹಾರದ ಪ್ರತೀಕ. ಈ ಎರಡು ಜೀವಿಗಳಿಗೆ – ಬ್ರಾಹ್ಮಣರು ಮತ್ತು ಹಸುಗಳಿಗೆ ಎಲ್ಲ ರೀತಿಯ ರಕ್ಷಣೆ ನೀಡಬೇಕು – ಅದೇ ನಾಗರಿಕತೆಯ ನಿಜವಾದ ಮುನ್ನಡೆ. ಬ್ರಾಹ್ಮಣ್ಯದ ಅರ್ಹತೆ ಪಡೆಯದೆ ಮತ್ತು ಗೋವುಗಳಿಗೆ ರಕ್ಷಣೆ ನೀಡದೆ ಯಾರೂ ಆಧ್ಯಾತ್ಮಿಕವಾಗಿ ಪ್ರಗತಿ ಸಾಧಿಸಲಾಗದು. ಹಸು ಸಂರಕ್ಷಣೆಯು ನಾಗರಿಕತೆಯ ಅಭಿವೃದ್ಧಿಗೆ ಅಗತ್ಯವಾದ ಹಾಲಿನ ಉತ್ಪನ್ನಗಳ ಭರವಸೆ ನೀಡುತ್ತದೆ. ಬುದ್ಧಿಹೀನ ಜನರು ಹಸುವಿನ ಹಾಲಿನ ಮೌಲ್ಯವನ್ನು ಕೀಳಂದಾಜು ಮಾಡುತ್ತಾರೆ. ಹಸುವಿನ ಹಾಲನ್ನು `ಗೋರಸ’ ಅಥವಾ ಹಸುವಿನ ದೇಹದ ರಸ ಎಂದೂ ಕರೆಯುತ್ತಾರೆ. ಹಾಲು ಗೋರಸದ ಅತ್ಯುತ್ತಮ ರೂಪವಾಗಿದ್ದು, ಹಾಲಿನಿಂದ ಆರೋಗ್ಯಕ್ಕೆ ಅಗತ್ಯವಾದ ಅನೇಕ ಪದಾರ್ಥಗಳನ್ನು ತಯಾರಿಸಬಹುದು. ಕೃಷ್ಣ ಗೋವಿಂದ. ಏಕೆಂದರೆ ಅವನು ಹಸು ಮತ್ತು ಇಂದ್ರಿಯಗಳ ಆನಂದ ಬಿಂದು. ಆ ಭಗವಂತನಿಗೆ ಭಕ್ತಿ ಪೂರ್ವಕ ಸೇವೆ ಸಲ್ಲಿಸಿ ತಮ್ಮ ಇಂದ್ರಿಯಗಳನ್ನು ಶುದ್ಧ ಮಾಡಿಕೊಂಡವರು ಅವನಿಗೆ ನಿಜವಾದ ಸೇವೆ ಸಲ್ಲಿಸಬಹುದು. ಆ ಮೂಲಕ ಅಂತಹ ಪರಿಶುದ್ಧ ಇಂದ್ರಿಯಗಳಿಂದ ಅಲೌಕಿಕ ಆನಂದ ಹೊಂದಬಹುದು.

ಶ್ರೀಕೃಷ್ಣನು ಬ್ರಾಹ್ಮಣ್ಯ ಸಂಸ್ಕೃತಿ ಮತ್ತು ಹಸುಗಳ ರಕ್ಷಕ. ಗೋ ಸಂರಕ್ಷಣೆ ಮತ್ತು ಬ್ರಾಹ್ಮಣ್ಯ ಸಂಸ್ಕೃತಿ ವಂಚಿತ ಸಮಾಜವು ದೇವರ ನೇರ ರಕ್ಷಣೆಯಲ್ಲಿ ಇರುವುದಿಲ್ಲ  – ಜೈಲಿನಲ್ಲಿರುವ ಕೈದಿಗಳು ರಾಜನ ನೇರ ರಕ್ಷಣೆಯಲ್ಲಿ ಇರದೆ ಅವನ ನಿಯೋಗಿಯ ರಕ್ಷಣೆಯಲ್ಲಿ ಇರುವಂತೆ. ಮಾನವ ಸಮಾಜದಲ್ಲಿ ಕಡೆಯ ಪಕ್ಷ ಅದರ ಒಂದು ಭಾಗದಲ್ಲಾದರೂ, ಗೋ ಸಂರಕ್ಷಣೆ ಮತ್ತು ಬ್ರಾಹ್ಮಣ್ಯ ಗುಣಗಳನ್ನು ಬೆಳೆಸದಿದ್ದರೆ ಯಾವುದೇ ನಾಗರಿಕತೆ ಹೆಚ್ಚುಕಾಲ ಅಭಿವೃದ್ಧಿ ಹೊಂದಿರಲು ಸಾಧ್ಯವಿಲ್ಲ.

ಹಾಲಿನಿಂದ ಆರೋಗ್ಯಕ್ಕೆ 6 ಲಾಭಗಳು

ನಮ್ಮ ಆಹಾರದಲ್ಲಿ ಹಾಲು ಪ್ರಮುಖ ಪಾತ್ರ ಹೊಂದಿದೆ. ಬಾಲ್ಯದಿಂದಲೇ ಹಾಲು ಕುಡಿಯಲು ಆರಂಭಿಸುತ್ತೇವೆ. ಆದರೆ ವಯಸ್ಸಾದಂತೆ ಹಾಲು ಸೇವನೆ ಪ್ರಮಾಣ ಕಡಮೆಯಾಗತೊಡಗುತ್ತದೆ. ಕೊಬ್ಬು ಹೆಚ್ಚಾಗುತ್ತದೆಂಬ ಭಯ ಕೆಲವರಿಗೆ. ಇನ್ನೂ ಕೆಲವರು ಇನ್ನದರ ಅಗತ್ಯವಿಲ್ಲವೆಂದು ಹಾಲಿನಿಂದ ದೂರ ಇರ ಬಯಸುತ್ತಾರೆ. ಹಾಲಿನ ಉಪಯೋಗ ಪಡೆಯಲು ವಯಸ್ಸಿನ ಮಿತಿಯೇ ಇಲ್ಲ. ವಿಟಮಿನ್‌, ಪೌಷ್ಟಿಕಾಂಶದ ಮೂಲವಾದ ಹಾಲಿನಲ್ಲಿ ಅನೇಕ ಆರೋಗ್ಯ ಲಾಭದ ಅಂಶಗಳಿವೆ. ಇಲ್ಲಿವೆ ಕೆಲವು :

1. ಥಳಥಳಿಸುವ ತ್ವಚೆ

ಅತ್ಯುತ್ತಮ ತ್ವಚೆ ನೀಡುವ ಅನೇಕ ಪೌಷ್ಟಿಕಾಂಶಗಳು ಹಾಲಿನಲ್ಲಿವೆ. ಅದರಲ್ಲಿನ ಲ್ಯಾಕ್ಟಿಟ್‌ ಆಮ್ಲವು ಮೃದು ತ್ವಚೆಗೆ ನೆರವಾಗುತ್ತದೆ. ಆಂಟಿಆಕ್ಸಿಡೆಂಟ್ಸ್‌ ಗುಣದ ಕಾರಣ ಅದು ಪರಿಸರ ವಿಷದ ಅಪಾಯದಿಂದ ಪಾರು ಮಾಡುತ್ತದೆ.

2. ಆರೋಗ್ಯಕರ ಮೂಳೆ, ಹಲ್ಲು

ಆರೋಗ್ಯಕರ ಮೂಳೆಗೆ ಅಗತ್ಯವಾದ ಕ್ಯಾಲ್ಸಿಯಂ ಹಾಲಿನಲ್ಲಿ ಅಪಾರವಾಗಿದೆ. ಮೂಳೆ ಬೆಳೆಯುವ ಸಮಯದಲ್ಲಿ ಕಿರಿಯರಿಗೆ ಇದರ ಅಗತ್ಯವಿದೆ. ಆದರೆ ಮೂಳೆ ಗಟ್ಟಿತನ ಕಾಪಾಡಿಕೊಳ್ಳಲು ಮತ್ತು ಓಸ್ಟಿಯೊಪೊರೋಸಿಸ್‌ ತಡೆಗೆ ವಯಸ್ಕರಿಗೂ ಇದರ ಆವಶ್ಯಕತೆ ಇದೆ. ಗಟ್ಟಿ ಹಲ್ಲಿಗಾಗಿ ಹಾಲು ಕುಡಿದರೆ ಅದು ಹಲ್ಲಿನ ಹುಳುಕನ್ನೂ ತಡೆಯುತ್ತದೆ.

3. ಸ್ನಾಯು/ಮಾಂಸ ಖಂಡ

ಹಾಲಿನಲ್ಲಿರುವ ಪ್ರೋಟೀನ್‌ ಮಾಂಸಖಂಡದ ಮರು ನಿರ್ಮಾಣಕ್ಕೆ ನೆರವಾಗುತ್ತದೆ. ವ್ಯಾಯಾಮದ ಅನಂತರ ಹಾಲು ಕುಡಿದರೆ ದೇಹಕ್ಕೆ ಅಗತ್ಯವಾದ ಚೇತನ ಶಕ್ತಿ ದೊರೆಯುತ್ತದೆ. ವ್ಯಾಯಾಮದ ವೇಳೆ ಕಳೆದುಕೊಳ್ಳುವ ದ್ರವಗಳ ಮರು ಭರ್ತಿಯಿಂದ ನೋವನ್ನು ತಡೆಯುತ್ತದೆ.

4. ತೂಕ ಇಳಿಕೆ

ತಮ್ಮ ಆಹಾರ ಪಟ್ಟಿಯಿಂದ ಹಾಲನ್ನು ಹೊರಗಿಡುವವರಿಗಿಂತ ಕಡಮೆ ಕೊಬ್ಬಿನ ಹಾಲು ಸೇವಿಸುವವರು ಹೆಚ್ಚು ತೂಕ ಕಳೆದುಕೊಳ್ಳುತ್ತಾರೆ ಎಂದು ಅಧ್ಯಯನಗಳು ಹೇಳುತ್ತವೆ. ಇದು ಹಸಿವು ಉಂಟುಮಾಡುವ ವಸ್ತುವಾಗಿದ್ದು ಆರೋಗ್ಯಕರ ಸ್ನಾಕ್‌ ಆಗುತ್ತದೆ. ರಾತ್ರಿ ಊಟಕ್ಕೆ ಒಂದು ಲೋಟ ಹಾಲಿರಲಿ ಅಥವಾ ಹಣ್ಣು ತಿನ್ನುವಾಗ ಒಂದು ಲೋಟ ಹಾಲು ಕುಡಿಯಿರಿ.

5. ಕಡಮೆ ಒತ್ತಡ:

ಇಡೀ ದಿನ ದುಡಿಮೆ, ಸಂಜೆ ದಣಿವು, ಒಂದು ಲೋಟ ಬಿಸಿ ಹಾಲು ಕುಡಿದು ನೋಡಿ. ಸ್ನಾಯು ಹಿಡಿತ ಹೇಗೆ ಸಂಕುಚಿತಗೊಳ್ಳುತ್ತದೆಂದು ನಿಮಗೇ ತಿಳಿಯುತ್ತದೆ.

6. ಆರೋಗ್ಯಕರ ದೇಹ

ರಕ್ತದೊತ್ತಡವನ್ನು ಕಡಮೆ ಮಾಡುವ ಹಾಗೂ ಸ್ಟ್ರೋಕ್‌ ಅಪಾಯ ತಡೆಯುವ ಗುಣ ಹಾಲಿನಲ್ಲಿದೆ. ಕೊಲೋಸ್ಟ್ರಾಲ್‌ ಉತ್ಪಾದನೆ ಕಡಮೆ ಮಾಡುತ್ತದೆ ಮತ್ತು ಆಂಟಾಸಿಡ್‌ ಕಾರ್ಯ ನಿರ್ವಹಿಸುತ್ತದೆ. ಹಾಲಿನಲ್ಲಿರುವ ವಿಟವಿನ್‌ ‘ಎ’ ಮತ್ತು ‘ಬಿ‘ ಉತ್ತಮ ದೃಷ್ಟಿಗೆ ಪೂರಕ. ಕೆಲ ಕ್ಯಾನ್ಸರ್‌ ಅಪಾಯವನ್ನೂ ತಡೆಯುತ್ತದೆಂದು ಹೇಳಲಾಗಿದೆ.

ಸಗಣಿ ಅಲ್ಲ ಚಿನ್ನದ ಗಣಿ

ಆಧುನಿಕ ನಾಗರಿಕತೆ ಆರಂಭವಾದಾಗಿನಿಂದಲೂ ನಾವು ಹಸು ಸಗಣಿಯನ್ನು ಕಡೆಗಣಿಸುತ್ತಿದ್ದೇವೆ. ನಮ್ಮ ಸಂಪನ್ಮೂಲಗಳ ಗರಿಷ್ಠ ಬಳಕೆಯ ಮೇಲೆ ನಮ್ಮ ಪ್ರಗತಿ ಆಧಾರಿತವಾಗಿದೆ ಎಂಬುದನ್ನು ನಾವು ಮರೆತಿರುವುದೇ ಇದಕ್ಕೆ ಕಾರಣ. ಹಸು ಸಗಣಿಯು ಅಂತಹ ಸಂಪನ್ಮೂಲಗಳಲ್ಲಿ ಪ್ರಮುಖವಾದುದು. ಹಾಲು ನೀಡದ ಹಸು ಅಥವಾ ಮುದಿ ಎತ್ತುಗಳನ್ನು  ಕೊಲ್ಲುವ ಧೋರಣೆ ಸರ್ಕಾರದ್ದಾಗಿದೆ. ಆದರೆ ಪ್ರಾಣಿಗಳ ಮೂರನೆಯ ಪ್ರಮುಖ ಸೇವೆ – ಸಗಣಿ ನೀಡುವುದನ್ನು – ಸರ್ಕಾರ ಮರೆತಿರುವುದು ದುರದೃಷ್ಟ. ಅನಾದಿಕಾಲದಿಂದಲೂ ಆರ್ಯನ್ನರು ಅಳವಡಿಸಿಕೊಂಡಿದ್ದ ಸಾಮಾಜಿಕ ಆರ್ಥಿಕ ವ್ಯವಸ್ಥೆಗೆ ಸಗಣಿ ಮೂಲವಾಗಿತ್ತೆಂಬುದನ್ನು ಮರೆಯಬಾರದು. ವಯಸ್ಸಾದಂತೆ ಪ್ರಾಣಿಯೊಂದು ಹಾಲು ಉತ್ಪಾದನೆ, ಉಳುಮೆ, ಅಥವಾ ಸಂತತಿ ವೃದ್ಧಿಗೆ ನಿರುಪಯುಕ್ತವಾಗಬಹುದು. ಆದರೆ ಅದರ ಸಗಣಿ ಸೇವೆಗೆ ವಯಸ್ಸು ಎಂದಿಗೂ ತಡೆಯಾಗದು. `ಸಗಣಿ ಆರ್ಥಿಕತೆ’ ಎಂದು ನಾವು ಇಂದು ನಿರ್ಲಕ್ಷಿಸುತ್ತಿರುವುದು ವಾಸ್ತವವಾಗಿ ಜನರ ಅಭ್ಯುದಯಕ್ಕೆ ದಾರಿ. ಆದುದರಿಂದಲೇ ನಮ್ಮ ಪ್ರಾಚೀನ ಆರ್ಥಿಕ ತಜ್ಞರು ಸಗಣಿಯನ್ನು ಸಂಪತ್ತಿನ ನೆಲೆ ಎಂದು ವರ್ಣಿಸಿ ಭಾರತದ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಅತೀ ಉಪಯೋಗಿ ಎಂದು ಸಾರಿದ್ದರು. ಸಗಣಿಯು ನಮ್ಮ ಪ್ರಗತಿಗೆ ದ್ಯೋತಕ ಎಂಬುದನ್ನು ಒಪ್ಪಿಕೊಂಡರೆ, ಈ ಕೆಳಗಿನವು ಅನುಕೂಲಗಳು :

1. ಪೌಷ್ಟಿಕ ಮತ್ತು ಅಗ್ಗದ ಆಹಾರ ಧಾನ್ಯ

ಜಗತ್ತಿನ ಯಾವುದೇ ಗೊಬ್ಬರವು ಸಗಣಿ ಗೊಬ್ಬರದಷ್ಟು ಅಗ್ಗವಾಗಿಲ್ಲ. ಜೊತೆಗೆ ಸಗಣಿ ಗೊಬ್ಬರ ಕಿಂಚಿತ್ತೂ ಹಾನಿಕರವಲ್ಲ. ಸಗಣಿ ಗೊಬ್ಬರ ಬಳಸಿ ಭಾರತದ ರೈತರು ಅತ್ಯುತ್ತಮ ಮತ್ತು ಅಗ್ಗದ ಆಹಾರ ಧಾನ್ಯ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದಾರೆ. ಭಾರತದ ಆರ್ಥಿಕತೆಗೆ ಸ್ಥಿರತೆ ತಂದುಕೊಡಲು ಇದೇ ಸಾಕು. ಆದರೆ, ಪಾಶ್ಚಿಮಾತ್ಯರ ಪ್ರಭಾವದಿಂದ ಸರ್ಕಾರವು ಮನಸೋ ಇಚ್ಛೆ ಪ್ರಾಣಿ ವಧೆಗೆ ಶರಣಾಗಿದೆ. ಇದರ ಪರಿಣಾಮವೆಂದರೆ ಪಶು ಸಗಣಿ ಲಭ್ಯತೆ ಕಡಮೆಯಾಗಿ ರೈತರು ದುಬಾರಿ ಹಾಗೂ ಅಪಾಯಕಾರಿ ರಾಸಾಯನಿಕ ಗೊಬ್ಬರ ಬಳಸುವಂತಾಗಿರುವುದು. ಇದು ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಕಾರಣವಾಗಿ ಅಂತಿಮವಾಗಿ ಇಡೀ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಉಂಟು ಮಾಡಿ ಹಣದುಬ್ಬರ ಒತ್ತಡಕ್ಕೆ ಕಾರಣವಾಗಿದೆ. ಎತ್ತುಗಳ ಲಭ್ಯತೆ ಕಡಮೆ ಮಾಡಿ ಟ್ರ್ಯಾಕ್ಟರ್‌ ಬಳಕೆಗೆ ಒತ್ತಡ ತರುವ ಮೂಲಕ ಅವ್ಯವಸ್ಥೆ ಹೆಚ್ಚಿಸಲಾಗಿದೆ. ಇದೆಲ್ಲದರ ಪರಿಣಾಮವಾಗಿ ಸ್ವತಂತ್ರನಾಗಿದ್ದ ರೈತ ಈಗ ರಾಸಾಯನಿಕ ಗೊಬ್ಬರ ಮತ್ತು ಟ್ರ್ಯಾಕ್ಟರ್‌ಗಾಗಿ ಬೇರೆಯವರ ಮೇಲೆ ಅವಲಂಬಿತನಾಗುವಂತಾಗಿದೆ. ಅವನು ರಾಸಾಯನಿಕ ಘಟಕ, ರೈಲು ಮತ್ತು ಲೇವಾದೇವಿಗಾರರು ಅಥವಾ ಬ್ಯಾಂಕುಗಳ ಮೇಲೆ ಅವಲಂಬಿತನಾಗಿದ್ದಾನೆ. ರಾಸಾಯನಿಕ ಗೊಬ್ಬರಗಳ ಬಗೆಗೆ ತಪ್ಪು ಪ್ರಚಾರ ಮಾಡುತ್ತ ರೈತರ ಮೇಲೆ ಒತ್ತಡ ತರಲಾಗುತ್ತಿದೆ. ನೈಸರ್ಗಿಕ ಸಗಣಿ ಗೊಬ್ಬರ ಲಭ್ಯವಿಲ್ಲದ ಕಾರಣ ಅವನಿಗೆ ಅನ್ಯ ಮಾರ್ಗವಿಲ್ಲದಂತಾಗಿದೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಕೃಷಿ ಉತ್ಪಾದನೆ ಸ್ವಲ್ಪ ಹೆಚ್ಚಾಗಿರಬಹುದು. ಆದರೆ ಉತ್ಪಾದನೆ ವೆಚ್ಚ ದುಪ್ಪಟ್ಟು ಆಗಿದೆಯಲ್ಲದೆ ಆಹಾರ ಧಾನ್ಯ ರುಚಿ ಮತ್ತು ಪೌಷ್ಟಿಕಾಂಶ ಗುಣ ಕಳೆದುಕೊಂಡಿದೆ.

2. ಭೂಮಿಯ ಫಲವತ್ತತೆ

ಪ್ರತಿ ಬೆಳೆಯ ಅನಂತರವೂ ಮಣ್ಣಿನ ಪೌಷ್ಟಿಕಾಂಶಗಳನ್ನು ಮತ್ತೆ ಭರ್ತಿ ಮಾಡದಿದ್ದರೆ ಮಣ್ಣು ಕ್ರಮೇಣ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಅಂಥ ಮಣ್ಣಿನಲ್ಲಿ ಬೆಳೆದ ಆಹಾರ ಪದಾರ್ಥವೂ ಕಳಪೆ ಪೌಷ್ಟಿಕಾಂಶ ಹೊಂದಿರುತ್ತದೆ. ಆ ಭೂಮಿ ಬರಡಾಗಿಬಿಡುತ್ತದೆ. ಮಣ್ಣಿಗೆ ಆ ರೀತಿ ಮತ್ತೆ ಪೌಷ್ಟಿಕಾಂಶ ತುಂಬಲು ಪಶು ಸಗಣಿ ಅಥವಾ ಸಾವಯವ ಗೊಬ್ಬರ ಅತ್ಯುತ್ತಮ ಮತ್ತು ಅಗ್ಗ. ಅಪಾಯಕಾರಿಯಲ್ಲದ ಈ ಗೊಬ್ಬರ ಸುಲಭವಾಗಿ ಲಭ್ಯ. ಮಣ್ಣಿನ ಫಲವತ್ತತೆ ಕಾಪಾಡಲು ಪ್ರತಿ ಎಕರೆಗೆ 10 ಎತ್ತಿನ ಗಾಡಿಯಷ್ಟು ಅಥವಾ 5 ಟನ್‌ ಸಗಣಿ ಗೊಬ್ಬರ ಅಗತ್ಯ.

3. ಆಹಾರ ಧಾನ್ಯ ಸಂರಕ್ಷಣೆ

ಬೆರಣಿ ಬೂದಿಯ ಮೌಲ್ಯವನ್ನು ಹೇಗೆ ಕಟ್ಟುವಿರಿ? ಈ ಬೂದಿ ನಮ್ಮನ್ನು ವಿಶ್ವ ಬ್ಯಾಂಕ್‌ ಗುಲಾಮಗಿರಿಯಿಂದ ಮುಕ್ತಗೊಳಿಸುತ್ತದೆ ಎಂದರೆ ನಂಬುವಿರಾ? ಅಡುಗೆ ಆದ ಅನಂತರ ಉಳಿಯುವ ಬೆರಣಿ ಬೂದಿಯ ಉಪಯೋಗವನ್ನು ನಗದಿನ ರೂಪದಲ್ಲಿ ವಿವರಿಸಲಾಗದು. ಆದರೆ ಅದು ತುಂಬ ಅಮೂಲ್ಯ. ಆಹಾರ ಪದಾರ್ಥಗಳ ಸಂರಕ್ಷಣೆಯಲ್ಲಿ ಈ ಬೂದಿ ಉಪಯೋಗ ಅಪಾರ. ಹಿಂದಿನ ಕಾಲದಲ್ಲಿ ರಾಜರು ಪ್ರಜೆಗಳಿಗೆ ಬರಗಾಲದಲ್ಲಿ ಆಹಾರ ಧಾನ್ಯ ಒದಗಿಸಲು ಜೋಳವನ್ನು ಈ ಬೂದಿ ಜೊತೆ ಬೆರೆಸಿ ವರ್ಷಾನುಗಟ್ಟಲೆ ಸಂರಕ್ಷಿಸಿಡುತ್ತಿದ್ದರು. ಸುಮಾರು 12 ವರ್ಷ ಹಾಗೆ ಇಡುವುದು ಸಾಧ್ಯವಿತ್ತು. ಸಾಮಾನ್ಯ ಸಂದರ್ಭಗಳಲ್ಲಿ ಕೂಡ ಮಣ್ಣಿನ ದಾಸ್ತಾನು ಉಪಕರಣದಲ್ಲಿ ಬೆರಣಿ ಬೂದಿ ಬೆರೆಸಿದ ಧಾನ್ಯವನ್ನು 2-3 ವರ್ಷ ಸಂರಕ್ಷಿಸಿಡಬಹುದು. ಆದರೆ ಈಗ ಬೂದಿ ಅಭಾವದ ಕಾರಣ ಜನರು ಅದರ ಉಪಯೋಗವನ್ನೇ ಮರೆತಿದ್ದಾರೆ. ಆಹಾರ ಧಾನ್ಯಗಳ ದಾಸ್ತಾನಿಗೆ ವೇರ್‌ ಹೌಸ್‌ ನಿರ್ಮಿಸಲು ವಿಶ್ವ ಬ್ಯಾಂಕ್‌ನಿಂದ ಕೋಟ್ಯಂತರ ರೂಪಾಯಿ ಸಾಲ ಪಡೆಯುತ್ತಿದ್ದೇವೆ. ಧಾನ್ಯಗಳ ಸಂರಕ್ಷಣೆಗೆ ವಿಷಕಾರಿ ಕೀಟನಾಶಕಗಳನ್ನು ಸಿಂಪಡಿಸುತ್ತೇವೆ. ಅದು ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟುಮಾಡುತ್ತಿದೆ. ವೃದ್ಧ ಹಸು, ಎತ್ತು ಜಮೀನಿನಲ್ಲಿ ದುಡಿಯಲು ಅನರ್ಹವಾಗಿರಬಹುದು; ಆದರೆ ಸಾಯುವವರೆಗೂ ಸಗಣಿ ನೀಡುವ ಸಾಮರ್ಥ್ಯ ಹೊಂದಿವೆ. ಈ ಸಗಣಿ ನಮ್ಮನ್ನು ಹಣದುಬ್ಬರ ಮತ್ತು ರೋಗದಿಂದ ದೂರವಿಡುತ್ತದೆ.

4. ಅಗ್ಗದ ಇಂಧನ

ಅಧಿಕ ಪ್ರಮಾಣದಲ್ಲಿ ಆಹಾರ ಧಾನ್ಯ ಉತ್ಪಾದಿಸಬಹುದು. ಆದರೆ ಬೇಯಿಸಲು ಇಂಧನವೇ ಇಲ್ಲದಿದ್ದರೆ? ಹಸಿಯಾಗಿ ತಿನ್ನಲು ಸಾಧ್ಯವಿಲ್ಲ. ಇಂಧನ ಬೇಕೇಬೇಕು. ಅತ್ಯಂತ ಅಗ್ಗ ಹಾಗೂ ಸುಲಭವಾಗಿ ದೊರೆಯಬಹುದಾದ ಇಂಧನವೆಂದರೆ ಬೆರಣಿ. ಆದು ಸದಾ ಲಭ್ಯ. ಪೂರೈಕೆ ನಿರಂತರ. ನಮ್ಮ ದೇಶ ಪ್ರಾಣಿಹತ್ಯೆಗೆ ಮೊರೆ ಹೋಗುವವರೆಗೆ ಗ್ರಾಮೀಣರಿಗೆ ಇಂಧನಕ್ಕಾಗಿ ಉಚಿತ ಬೆರಣಿ ಸಿಗುತ್ತಿತ್ತು. ಬೆರಣಿ ಕೊಳ್ಳುವ ಉಳ್ಳವರೂ ಸ್ವಲ್ಪ ಮಾತ್ರ ಖರ್ಚು ಮಾಡಬೇಕಾಗಿತ್ತು. ಈಗ ಜನರು ಅಡುಗೆ ಅನಿಲ ಅಥವಾ ಸೀಮೆಎಣ್ಣೆಯನ್ನು ಬಳಸಬೇಕು. ಇದನ್ನು ನಾವು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗಿದ್ದು ಆಯಾ ದೇಶಗಳು ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿವೆ. ಇದರಿಂದ ಬೇಕಾದಾಗೆಲ್ಲ  ತೈಲ ಬೆಲೆ ಏರಿಸಿ ಶೋಷಿಸುವುದು ಹೆಚ್ಚಾಗಿದೆ.

5. ಶುದ್ಧೀಕರಣ ಕಾರ್ಯ

ಪಾತ್ರೆ ಬೆಳಗುವುದು ಯಾವುದೇ ಮನೆಯಲ್ಲಿ ಅವಶ್ಯ ಕೆಲಸ. ಶತಮಾನಗಳಿಂದಲೂ ಪಾತ್ರೆ ತೊಳೆಯಲು ಬೆರಣಿ ಬೂದಿ ಬಳಸಲಾಗುತ್ತಿತ್ತು. ಈಗ ದುಬಾರಿಯಾದ ಶುದ್ಧೀಕರಣ ಸೋಪ್‌ ಅಥವಾ ಪುಡಿಗಳನ್ನು ಬಳಸಲಾಗುತ್ತಿದೆ. ಏನು ಅಗ್ಗವಾಗಿ ಅಥವಾ ಉಚಿತವಾಗಿ ದೊರಕುತ್ತಿತ್ತೋ ಅದು ಈಗ ಒಟ್ಟಾರೆ ಸಮಾಜಕ್ಕೆ ಆರ್ಥಿಕವಾಗಿ ವಿಪರೀತ ಭಾರವಾಗುತ್ತಿದೆ. ಮಧ್ಯಮವರ್ಗದ ಕುಟುಂಬಗಳಿಗೆ ಹೆಚ್ಚು ಸಂಕಟ.

6. ಲಕ್ಷಾಂತರ ಜನರಿಗೆ ಉದ್ಯೋಗ

ಅ] ಬೆರಣಿ V/s. ಮಾಂಸ

ಬೆರಣಿ ಮತ್ತು ಎತ್ತು/ಹಸುವಿನ ಮಾಂಸ ಎರಡೂ ವಾಣಿಜ್ಯ ವಸ್ತುಗಳು. ಒಂದು ಎತ್ತು/ಹಸುವನ್ನು ಕೊಂದರೆ ಅದರ ಮಾಂಸ ಕಟುಕರ ಒಂದು ದಿನದ ವ್ಯಾಪಾರವನ್ನು ತಡೆದುಕೊಳ್ಳಬಹುದು. ಮರುದಿನದ ವ್ಯಾಪಾರಕ್ಕೆ ಮತ್ತೊಂದು ಹಸುವನ್ನು ಕಡಿಯಬೇಕು. ಆದರೆ ಹಸುವನ್ನು ಕೊಲ್ಲದಿದ್ದರೆ ಅದರ ಸಗಣಿಯಿಂದ ಒಂದು ವರ್ಷಕ್ಕೆ 5 ರಿಂದ 6 ಸಾವಿರ ಬೆರಣಿ ಮಾಡಬಹುದು. ಈ ಬೆರಣಿ ಮಾರಾಟದಿಂದ ಒಬ್ಬ ವ್ಯಕ್ತಿ ಇಡೀ ವರ್ಷ ಬದುಕಬಹುದು. ಎತ್ತು /ಹಸು ಶ್ರಮದ ದುಡಿಮೆಗೆ ನಿರುಪಯೋಗಿಯಾದ/ಬರಡಾದ ಮೇಲೆ ಐದು ವರ್ಷ ಬದುಕಿದರೂ, ಐದು ವರ್ಷ ಒಬ್ಬರಿಗೆ ಉದ್ಯೋಗ ನೀಡಬಹುದು.

ಆ] ಚಮ್ಮಾರರಿಗೆ ಉದ್ಯೋಗ

ಪ್ರಾಣಿ ವಧೆ ಮತ್ತು ರಫ್ತಿನ ಕಾರಣ ಚಮ್ಮಾರರ ಸಮುದಾಯಕ್ಕೆ ನಿರುದ್ಯೋಗ ಕಾಡುತ್ತಿದೆ. ಏಕೆಂದರೆ ಸ್ವಾಭಾವಿಕ ಸಾವನ್ನಪ್ಪುವ ಪ್ರಾಣಿಗಳ ದೇಹ ಈಗ ಉಚಿತವಾಗಿ ಸಿಗುತ್ತಿಲ್ಲ. ಈಗ ಜೀವಂತ ಪ್ರಾಣಿಗಳನ್ನು ಕಸಾಯಿಖಾನೆಯಲ್ಲಿ ಕಡಿಯಲಾಗುತ್ತಿದ್ದು ಉತ್ತಮ ಗುಣ ಮಟ್ಟದ ಚರ್ಮವನ್ನು ಬೃಹತ್‌ ಕಾರ್ಪೊರೆಟ್‌ ಸಂಸ್ಥೆಗಳು ಚರ್ಮೋದ್ಯಮಕ್ಕಾಗಿ ಸಾಕಷ್ಟು ಬೆಲೆ ತೆತ್ತು ಖರೀದಿಸಿ ಬಿಡುತ್ತವೆ. ಕಳಪೆ ಗುಣ ಮಟ್ಟದ ಚರ್ಮವನ್ನು ಚಮ್ಮಾರರು ಖರೀದಿಸಬೇಕಾಗಿದೆ. ಗೋಹತ್ಯೆ ನಿಂತಲ್ಲಿ, ಚಮ್ಮಾರರಿಗೆ ಪ್ರಾಣಿಗಳ ದೇಹ ಉಚಿತವಾಗಿ ಸಿಗುವುದು.

ಇ] ಕಟ್ಟಡ ಮತ್ತು ಹೆಂಚು ನಿರ್ಮಾಣ

ಕುಂಬಾರರು ಹಸುವಿನ ಸಗಣಿ, ಮಣ್ಣು ಮತ್ತು ಕುದುರೆ ಸಗಣಿ ಮಿಶ್ರಣದಿಂದ ಗ್ರಾಮಗಳಲ್ಲಿ ಮನೆ ನಿರ್ಮಿಸುತ್ತಿದ್ದರು. ಅಂತಹ ಮನೆಗಳ ಮೇಲ್ಛಾವಣಿಗೆ ಹೆಂಚು ಮಾಡುತ್ತಿದ್ದರು. ಪ್ರಸ್ತುತದಲ್ಲಿ ಅಂತಹ ಮನೆಗಳ ನಿರ್ಮಾಣ ಹೆಚ್ಚಿದರೆ ಕುಂಬಾರರಿಗೂ ಉದ್ಯೋಗ.

ನಮಗೆ ನಮ್ಮ ಸಗಣಿ ಸಂಸ್ಕೃತಿ ಮತ್ತೆ ಅಗತ್ಯವಾಗಿದೆ. ಅದನ್ನು ಅದರ ಸ್ಥಾನದಲ್ಲಿ ಮರು ಸ್ಥಾಪಿಸಬೇಕಾಗಿದೆ. ಪ್ರಾಣಿ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಮಾತ್ರ ಅದು ಸಾಧ್ಯ. ಆದರೆ ದುರದೃಷ್ಟವೆಂದರೆ, ನಮ್ಮ ಸರ್ಕಾರ ನಮ್ಮ ಸುಸಂಸ್ಕೃತ ಹಾಗೂ ನಾಗರಿಕ ಜನರನ್ನು ವನ್ಯ ಮೃಗಗಳ ಗುಂಪಾಗಿ ಪರಿವರ್ತಿಸಲು ದೃಢ ಸಂಕಲ್ಪ ಮಾಡಿದೆ.

ಹಿಂದೂ ಧರ್ಮದಲ್ಲಿ ಗೋಹತ್ಯೆಗೆ ಅವಕಾಶ ಉಂಟೇ?

500 ವರ್ಷಗಳ ಹಿಂದೆ  ಶ್ರೀ ಚೈತನ್ಯರು ಹರೇ ಕೃಷ್ಣ ಮಂತ್ರ ಪಠಿಸುವಂತೆ ನವದ್ವೀಪದ ಪ್ರಜೆಗಳಿಗೆ ಆದೇಶಿಸಿದರು. ಆಗ ಪ್ರತಿಯೊಂದು ಮನೆಯಲ್ಲೂ ಸಂಕೀರ್ತನೆ ಆರಂಭವಾಯಿತು. ಹರೇ ಕೃಷ್ಣ ಮಂತ್ರದ ಪ್ರತಿದ್ವನಿಯಿಂದ ಕುಪಿತರಾದ ಸ್ಥಳೀಯ ಮುಸ್ಲಿಮರು ಕಾಜಿಗೆ ದೂರು ನೀಡಿದರು. ಚಾಂದ್‌ ಕಾಜಿ ಕೋಪದಿಂದ ಒಂದು ಮನೆಗೆ ಬಂದಾಗ ಅಲ್ಲಿ ಸಂಕೀರ್ತನೆ ನಡೆಯುತ್ತಿತ್ತು. ಅವರು ಮೃದಂಗ ಮುರಿದು, `ನಗರದ ಬೀದಿಗಳಲ್ಲಿ ಯಾರೂ ಸಂಕೀರ್ತನೆ ನಡೆಸಕೂಡದು. ಈ ದಿನಕ್ಕೆ ಕ್ಷಮಿಸಿ ಹೋಗುತ್ತಿರುವೆ.’ ಎಂದು ಹೇಳಿ ತೆರಳಿದರು.  ಹರೇ ಕೃಷ್ಣ ಸಂಕೀರ್ತನೆ ಮಾಡಲು ತಡೆ ಹಾಕಿದ ಕ್ರಮದಿಂದ ಭಕ್ತರು ದಿಗ್ಭ್ರಮೆಗೊಂಡರು. ಅವರು ಶ್ರೀ ಚೈತನ್ಯರಲ್ಲಿ ತಮ್ಮ ದುಃಖ ತೋಡಿಕೊಂಡರು. ಅವರ ಆತಂಕ ಅರ್ಥಮಾಡಿಕೊಂಡ ಶ್ರೀ ಚೈತನ್ಯರು ಅವರಿಗೆ ಸಮಾಧಾನ ಮಾಡಿ ಹೀಗೆಂದರು : `ಸಂಜೆ ಎಲ್ಲರ ಮನೆಯಲ್ಲಿ ದೀವಟಿಗೆ ಹಚ್ಚಿ. ಪ್ರತಿಯೊಬ್ಬರಿಗೂ ನಾನು ರಕ್ಷಣೆ ನೀಡುವೆ. ಯಾವ ಕಾಜಿ ನಮ್ಮ ಸಂಕೀರ್ತನೆಯನ್ನು ತಡೆಯುವನೋ ನೋಡೋಣ’. ಈ ರೀತಿ ಸಂಕೀರ್ತನೆ ನಗರದ ಎಲ್ಲೆಡೆ ಮಾಡುತ್ತ ಕಾಜಿ ನಿವಾಸ ತಲಪಿದರು.

`ಮಾಮ, ಕೆಲ ಪ್ರಶ್ನೆಗಳನ್ನು ಕೇಳಲು ನಿಮ್ಮ ಮನೆಗೆ ಬಂದಿರುವೆ’ ಎಂದರು ಶ್ರೀ ಚೈತನ್ಯರು.

`ಸ್ವಾಗತ. ನಿಮ್ಮ ಮನದಲ್ಲಿ ಇರುವುದೇನು?’ ಎಂದು ಕಾಜಿ ಕೇಳಿದರು.

ಶ್ರೀ ಚೈತನ್ಯರು ನುಡಿದರು : `ನೀವು ಹಸುವಿನ ಹಾಲು ಕುಡಿಯುವಿರಿ. ಆದುದರಿಂದ ಹಸು ನಿಮಗೆ ತಾಯಿ. ಎತ್ತು ನಿಮ್ಮ ಬದುಕಿನ ನಿರ್ವಹಣೆಗೆ ಧಾನ್ಯ ಉತ್ಪಾದಿಸುತ್ತದೆ. ಆದುದರಿಂದ ಅದು ನಿಮ್ಮ ತಂದೆ. ಎತ್ತು ಹಸು ತಂದೆ ತಾಯಿಯಾಗಿರುವುದರಿಂದ ನೀವು ಅದು ಹೇಗೆ ಅದನ್ನು ಕೊಂದು ತಿನ್ನುವಿರಿ? ಇದೆಂತಹ ಧಾರ್ಮಿಕ ನೀತಿ?  ಯಾವ ಧೈರ್ಯದ ಮೇಲೆ ಅಂತಹ ಪಾಪದ ಕೆಲಸ ಮಾಡುವಿರಿ?’

ಕಾಜಿ ಉತ್ತರಿಸಿದರು : `ನಿಮ್ಮ ವೇದ, ಪುರಾಣಗಳಂತೆ ನಮಗೆ ಪವಿತ್ರ ಕುರಾನ್‌ ಎಂಬ ಧರ್ಮ ಗ್ರಂಥವಿದೆ. ಕುರಾನ್‌ ಹೇಳುವಂತೆ ಎರಡು ಮಾರ್ಗಗಳಿವೆ : ನಿವೃತ್ತಿ ಮಾರ್ಗ ಮತ್ತು ಪ್ರವೃತ್ತಿಮಾರ್ಗ. ನಿವೃತ್ತಿ ಮಾರ್ಗದಲ್ಲಿ ಪ್ರಾಣಿ ವಧೆ ನಿಷೇಧ. ಆದರೆ ಲೌಕಿಕ ಚಟುವಟಿಕೆಯ ಪಥದಲ್ಲಿ ಗೋ ಹತ್ಯೆಗೆ ಕೆಲ ನಿರ್ಬಂಧಗಳಿವೆ. ಧರ್ಮಗ್ರಂಥಗಳ ಮಾರ್ಗದರ್ಶನದಲ್ಲಿ ಅಂತಹ ಹತ್ಯೆಗೈದರೆ ಅದು ಪಾಪವೆನಿಸದು.’ ಸ್ವತಃ ವಿದ್ವಾಂಸರಾದ ಕಾಜಿ, ಚೈತನ್ಯ ಮಹಾಪ್ರಭುಗಳಿಗೆ ಸವಾಲೆಸೆದರು: `ನಿಮ್ಮ ವೇದ ಧರ್ಮ ಗ್ರಂಥಗಳಲ್ಲಿ ಗೋಹತ್ಯೆಗೆ ಆದೇಶ, ಆಣತಿ ಇದೆ. ಇದರ ಬಲದ ಮೇಲೆ ಶ್ರೇಷ್ಠ ಋಷಿಗಳು ಗೋಬಲಿ ನೀಡುತ್ತಿದ್ದರು.’

ಕಾಜಿ ಹೇಳಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ ಶ್ರೀ ಚೈತನ್ಯರು, `ಹಸುಗಳನ್ನು ಕೊಲ್ಲಬಾರದೆಂದು ವೇದದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದುದರಿಂದ ಅವನು ಯಾರೆ ಆಗಿರಲಿ, ಪ್ರತಿಯೊಬ್ಬ ಹಿಂದೂ ಗೋಹತ್ಯೆಯಿಂದ ದೂರ ಇರುತ್ತಾನೆ. ಜೀವಿಗಳಿಗೆ ಮತ್ತೆ ಪ್ರಾಣ ನೀಡುವುದಾದರೆ ಅದನ್ನು ಪ್ರಯೋಗಕ್ಕಾಗಿ ಕೊಲ್ಲಬಹುದೆಂದು ವೇದ ಪುರಾಣಗಳಲ್ಲಿ ಆಣತಿ ಇದೆ. ಆದುದರಿಂದ ಶ್ರೇಷ್ಠ ಋಷಿಗಳು ಕೆಲ ಸಂದರ್ಭಗಳಲ್ಲಿ ವೃದ್ಧ ಹಸುಗಳನ್ನು ಕೊಲ್ಲುತ್ತಿದ್ದರು. ಅನಂತರ ವೇದ ಮಂತ್ರಗಳನ್ನು ಪಠಿಸುತ್ತ ಪರಿಪೂರ್ಣತೆಗಾಗಿ ಅವುಗಳಿಗೆ ಮತ್ತೆ ಜೀವ ಬರುವಂತೆ ಮಾಡುತ್ತಿದ್ದರು. ಅಂತಹ ವೃದ್ಧ ಮತ್ತು ನಿರುಪಯೋಗಿ ಹಸುಗಳ ಹತ್ಯೆ, ಮರು ಜೀವವು ಕೊಲೆ ಎಂದು ಪರಿಗಣಿತವಾಗದು. ಅದು ವಾಸ್ತವವಾಗಿ ಅವುಗಳಿಗೇ ಪ್ರಯೋಜನಕಾರಿ. ಮೊದಲೆಲ್ಲ ವೇದ ಮಂತ್ರ ಪಠಿಸುತ್ತ ಆ ರೀತಿ ಪ್ರಯೋಗ ಮಾಡುವ ಸಾಮರ್ಥ್ಯದ ಬ್ರಾಹ್ಮಣರು ಇದ್ದರು. ಆದರೆ, ಕಲಿಯುಗದಿಂದಾಗಿ, ಈಗ ಬ್ರಾಹ್ಮಣರು ಅಷ್ಟು ಸಾಮರ್ಥ್ಯ ಹೊಂದಿಲ್ಲ. ಆದುದರಿಂದ ಪುನರ್‌ ಜನ್ಮಕ್ಕಾಗಿ ಹಸು, ಎತ್ತನ್ನು ಕೊಲ್ಲುವುದು ನಿಷೇಧ. ಈ ಕಲಿಯುಗದಲ್ಲಿ ಐದು ಕ್ರಿಯೆಗಳನ್ನು ನಿಷೇಧಿಸಲಾಗಿದೆ – ಅಶ್ವಮೇಧ ಯಜ್ಞ, ಹಸು ಬಲಿಕೊಡುವುದು, ಸಂನ್ಯಾಸವನ್ನು ಸ್ವೀಕರಿಸುವುದು, ಪಿತೃಗಳಿಗೆ ಮಾಂಸ ಅರ್ಪಣೆ, ಸೋದರನ ಪತ್ನಿಯಿಂದ ಸಂತಾನೋತ್ಪತ್ತಿ.’

`ನೀವು ಮುಸ್ಲಿಮರು ಕೊಲೆಗೈದ ಹಸುಗಳಿಗೆ ಮರುಜೀವ ನೀಡಲಾಗದ ಕಾರಣ ಅವುಗಳ ಹತ್ಯೆಗೆ ನೀವು ಜವಾಬ್ದಾರರು. ಆದುದರಿಂದ ನೀವು ನರಕಕ್ಕೆ ಹೋಗುವಿರಿ. ಗೋ ಹಂತಕರು ಹಸುವಿನ ಮೈಯಲ್ಲಿ ರೋಮಗಳಿರುವಷ್ಟು  ವರ್ಷ ನರಕದಲ್ಲಿ ನರಳುತ್ತಾರೆ.  ನಿಮ್ಮ  ಧರ್ಮಗ್ರಂಥಗಳಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಜ್ಞಾನದ ಸಾರವನ್ನು ಅರಿಯದೆ ಅದರ ರಚನೆಕಾರರು ಸೂಕ್ತ ಸಮರ್ಥನೆಯಿಲ್ಲದೆ ಆದೇಶ ನೀಡಿದ್ದರು.

ಶ್ರೀ ಚೈತನ್ಯ ಮಹಾಪ್ರಭುಗಳ ಈ ಮಾತುಗಳನ್ನು ಕೇಳಿ ಕಾಜಿ ದಿಗ್ಮೂಢರಾದರು. ಅವರಿಂದ ಏನೂ ಉತ್ತರಿಸಲಾಗಲಿಲ್ಲ. ಸ್ವಲ್ಪ ವಿಚಾರಿಸಿದ ಅನಂತರ ಕಾಜಿ, “ನನ್ನ ಪ್ರೀತಿಯ ನಿಮಾಯ್‌ ಪಂಡಿತ, ನೀವು ಹೇಳಿದ್ದೆಲ್ಲ ಸರಿ. ನಮ್ಮ ಧರ್ಮ ಗ್ರಂಥಗಳು ಇತ್ತೀಚಿನವು. ಅವು ಖಂಡಿತ ತರ್ಕವಾಗಿಯೂ ಇಲ್ಲ, ತತ್ತ್ವವಾಗಿಯೂ ಇಲ್ಲ” ಎಂದು ಸೋಲೊಪ್ಪಿಕೊಂಡರು.

ಶ್ರೀಲ ಪ್ರಭುಪಾದ ಉವಾಚ

ಈಗ ಬಹಳ ಮುಖ್ಯ ಎನ್ನಿಸಿಕೊಂಡಿರುವ ಬೆಕ್ಕು, ನಾಯಿಗಳನ್ನು ನಿರ್ಲಕ್ಷಿಸಬಾರದೆಂದಾದರೂ ವಾಸ್ತವವಾಗಿ ಗೋ ಸಂರಕ್ಷಣೆಯು ನಾಯಿ, ಬೆಕ್ಕುಗಳ ರಕ್ಷಣೆಗಿಂತ ಹೆಚ್ಚು ಮುಖ್ಯ.

ಗೋ ಸಂರಕ್ಷಣೆ ವಿಷಯದಲ್ಲಿ ಮಾಂಸ ಭಕ್ಷಕರು ಪ್ರತಿಭಟಿಸುತ್ತಾರೆ. ಅವರಿಗೆ ಉತ್ತರಿಸುವಾಗ ನಾವು ಹೀಗೆ ಹೇಳಬಹುದು – ಗೋ ಸಂರಕ್ಷಣೆಗೆ ಶ್ರೀಕೃಷ್ಣನು ಹೆಚ್ಚು ಪ್ರಾಮುಖ್ಯ ನೀಡುವುದರಿಂದ ಮಾಂಸ ಅಪೇಕ್ಷಕರು ಅಷ್ಟೇನು ಪ್ರಾಮುಖ್ಯವಲ್ಲದ ಹಂದಿ, ನಾಯಿ, ಮೇಕೆ, ಕುರಿಯ ಮಾಂಸ ಸೇವಿಸಬಹುದು. ಆದರೆ ಅವರು ಹಸುವಿನ ಜೀವವನ್ನು ಸ್ಪರ್ಶಿಸಬಾರದು. ಏಕೆಂದರೆ ಇದು ಮಾನವ ಸಮಾಜದ ಆಧ್ಯಾತ್ಮಿಕ ಪ್ರಗತಿಗೆ ನಾಶಕಾರಕ.

ನಾವು ಗೋ ಸಂರಕ್ಷಣೆಯನ್ನು ಪ್ರಚುರ ಪಡಿಸುತ್ತ ಜನರಿಗೆ ಹೆಚ್ಚು ಹಾಲು ಮತ್ತು ಆಹಾರ ಉತ್ಪನ್ನಗಳನ್ನು ಬಳಸಲು ಉತ್ತೇಜನ ಕೊಡುತ್ತಿರುವಾಗ ರಾಕ್ಷಸರು ಅದಕ್ಕೆಲ್ಲ ಪ್ರತಿರೋಧ ತೋರಲು ತಾವು ವೈಜ್ಞಾನಿಕ ಜ್ಞಾನದಲ್ಲಿ ತುಂಬ ಮುಂದುವರಿದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರ ವೈಜ್ಞಾನಿಕ ಸಂಶೋಧನೆಯಂತೆ ಹಾಲು ಅಪಾಯಕಾರಿಯಂತೆ. ಮತ್ತು ಗೋಹತ್ಯೆ ಮಾಡಿದಾಗ ದೊರೆಯುವ ಮಾಂಸ ಪೌಷ್ಟಿಕಾಂಶ ಉಳ್ಳದ್ದಂತೆ.

`ಈ ಗೋಹತ್ಯೆ ನಿಲ್ಲಿಸಿ’ ಎಂದೇನೂ ಪ್ರಾರಂಭದಲ್ಲಿ ನಾವು ಪ್ರಚಾರ ಮಾಡುತ್ತಿಲ್ಲ. `ಮಾಂಸ ತಿನ್ನ ಬೇಡಿ’ ಎಂದು ಜನರಿಗೆ ಬೋಧಿಸುತ್ತಿದ್ದೇವೆ.  ಅವರಿಗೆ ಅರಿವು ಉಂಟಾದರೆ ಕಸಾಯಿಖಾನೆಗಳು ತಾನೇ ತಾನಾಗಿ ಮುಚ್ಚುತ್ತವೆ. ಇದೇ ನಮ್ಮ ಪ್ರಚಾರ. `ಕುಡಿಯಬೇಡಿ.’ ಜನರು ಕುಡಿತ ಬಿಟ್ಟರೆ ಆ ವ್ಯಾಪಾರ ತಾನೇ ಮುಚ್ಚಿಹೋಗುತ್ತದೆ.

ಕೀಳು ದರ್ಜೆಯವನೊಬ್ಬ ಹಸು ಹತ್ಯೆಗೆ ಪ್ರಯತ್ನಿಸುತ್ತಿದ್ದುದನ್ನು ನೋಡಿದ ಪರೀಕ್ಷಿತ ಮಹಾರಾಜನು ತನ್ನ ಕತ್ತಿ ಎತ್ತಿ `ಯಾರು ನೀನು, ಯಾಕೆ ಹಸುವನ್ನು ಕೊಲ್ಲುತ್ತಿರುವೆ’ ಎಂದು ಘರ್ಜಿಸಿದ. ಅವನು ನಿಜವಾದ ದೊರೆ. ಆದರೆ ಈಗಿನ ದಿನಗಳಲ್ಲಿ ಅನರ್ಹ ಜನರು ಅಧ್ಯಕ್ಷರ ಸ್ಥಾನಗಳಲ್ಲಿದ್ದಾರೆ. ಅವರು  ತಾವು ಧಾರ್ಮಿಕ ಮನೋಭಾವದವರೆಂದು ತೋರಿಸಿಕೊಂಡರೂ ಅವರೆಲ್ಲ ಠಕ್ಕರು. ಏಕೆ? ಅವರ ಮೂಗಿನಡಿಯೇ ಸಾವಿರಾರು ಹಸುಗಳ ಹತ್ಯೆಯಾಗುತ್ತಿದ್ದರೂ ಅವರು ಮಾತ್ರ  ಒಳ್ಳೆಯ ಸಂಬಳ ತೆಗೆದುಕೊಂಡು ಹಾಯಾಗಿದ್ದಾರೆ. ಯಾವುದೇ ನಾಯಕ ಅಥವಾ ಅಧಿಕಾರಿ ಅವನ ಆಡಳಿತದಲ್ಲಿ ಗೋಹತ್ಯೆ ನಡೆಯುತ್ತಿದ್ದರೆ ಪ್ರತಿಭಟನೆಯಾಗಿ ಕೂಡಲೇ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಬೇಕು. ಜನರಿಗೆ ಈ ಆಡಳಿತಾಧಿಕಾರಿಗಳು ಮೂರ್ಖರೆಂದು ತಿಳಿಯದ ಕಾರಣ ಸಂಕಷ್ಟ ಅನುಭವಿಸುತ್ತಿದ್ದಾರೆ.

ವೈಶ್ಯರು ಕೃಷಿ, ಗೋ ಸಂರಕ್ಷಣೆ ಮತ್ತು ವ್ಯಾಪಾರದಲ್ಲಿ ತೊಡಗಿಕೊಂಡಿರಬೇಕು ಎಂದು ಭಗವದ್ಗೀತೆ (18.44) ಯಲ್ಲಿ ಹೇಳಲಾಗಿದೆ. ಈ ಕಲಿಯುಗದಲ್ಲಿ ಕೆಳದರ್ಜೆಗಿಳಿದಿರುವ ವೈಶ್ಯರು, ಕಸಾಯಿಖಾನೆಗೆ ಹಸುಗಳನ್ನು ಒದಗಿಸುವ ಕಾರ್ಯದಲ್ಲಿ ಪ್ರವೃತ್ತರಾಗಿದ್ದಾರೆ. ಪ್ರಜೆಗಳ ರಕ್ಷಣೆ ಕಾರ್ಯ ಕ್ಷತ್ರಿಯರದಾದರೆ ಹಸು ಎತ್ತುಗಳನ್ನು ರಕ್ಷಿಸಿ ಧಾನ್ಯ ಮತ್ತು ಹಾಲು ಉತ್ಪಾದನೆಯಲ್ಲಿ ಅವು ಬಳಕೆಯಾಗುವಂತೆ ನೋಡಿಕೊಳ್ಳುವ ಕರ್ತವ್ಯ ವೈಶ್ಯರದು. ಹಸುವಿನ ಕೆಲಸ ಹಾಲು ಕೊಡುವುದು, ಎತ್ತಿನ ಕಾರ್ಯ ಧಾನ್ಯ ಉತ್ಪಾದನೆ. ಆದರೆ ಕಲಿಯುಗದಲ್ಲಿ, ಶೂದ್ರ ವರ್ಗದವರು ಆಡಳಿತದಲ್ಲಿದ್ದಾರೆ. ವೈಶ್ಯರ ರಕ್ಷಣೆ ಇಲ್ಲದ ಹಸು, ಎತ್ತುಗಳನ್ನು ಅಥವಾ ತಾಯಿ ತಂದೆಯರನ್ನು ಶೂದ್ರ ಅಧಿಕಾರಿಗಳು ರೂಪಿಸಿರುವ ಕಸಾಯಿಖಾನೆಗೆ ಕಳುಹಿಸುತ್ತಾರೆ.

ಸ್ಪಷ್ಟವಾಗಿ ಹೇಳಬೇಕೆಂದರೆ, ಹಸು ಮತ್ತು ಬ್ರಾಹ್ಮಣರಿಗೆ ಗೌರವ ಇಲ್ಲದಂತಹ ನಾಗರಿಕತೆ ಖಂಡನಾರ್ಹ. ಬ್ರಾಹ್ಮಣ್ಯದ ಅರ್ಹತೆ ಪಡೆಯದೆ ಹಾಗೂ ಗೋ ಸಂರಕ್ಷಣೆ ಮಾಡದೆ ಯಾರೂ ಆಧ್ಯಾತ್ಮಿಕವಾಗಿ ಪ್ರಗತಿ ಹೊಂದುವುದು ಸಾಧ್ಯವಿಲ್ಲ. ಗೋ ಸಂರಕ್ಷಣೆಯು ಹಾಲಿನಿಂದ ತಯಾರಿಸಿದ ಆಹಾರ ಪೂರೈಕೆಯ ಭರವಸೆ ನೀಡುತ್ತದೆ. ಅಭಿವೃದ್ಧಿ ಹೊಂದುವ ನಾಗರಿಕತೆಗೆ ಹಾಲು ಅಗತ್ಯವೆಂದು ಮತ್ತೆ ಹೇಳಬೇಕಾಗಿಲ್ಲ. ಗೋಮಾಂಸ ಸೇವಿಸಿ ನಾಗರಿಕತೆಯನ್ನು ಮಾಲಿನ್ಯಗೊಳಿಸಬಾರದು. ನಾಗರಿಕತೆಯು ಪ್ರಗತಿದಾಯಕವಾಗಿರಬೇಕು. ಆಗ ಅದು ಆರ್ಯ ನಾಗರಿಕತೆ. ಮಾಂಸಕ್ಕಾಗಿ ಹಸುವನ್ನು ಕೊಲ್ಲುವ ಬದಲು , ನಾಗರಿಕ ಮಾನವರು ಸಮಾಜದ ಸ್ಥಿತಿ ಗತಿ ಸುಧಾರಿಸುವ ವಿವಿಧ ಹಾಲು ಉತ್ಪನ್ನಗಳತ್ತ ಗಮನಹರಿಸಬೇಕು.

ಈ ಲೌಕಿಕ ಜಗತ್ತಿನ ದುಸ್ಥಿತಿಯನ್ನು ಹೇಗೆ ಸರಿಪಡಿಸುವುದು? ಹಾಲು, ಮೊಸರು, ತುಪ್ಪ, ಜೇನು, ಆಹಾರ ಧಾನ್ಯ, ಸಕ್ಕರೆ, ಆಭರಣ, ಇತ್ಯಾದಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಪೂರೈಸುವ ಮೂಲಕ ಸರಿಪಡಿಸಿಕೊಳ್ಳಬಹುದು. ಉತ್ತಮ ಕೃಷಿ ವ್ಯವಸ್ಥೆ ಮೂಲಕ ಹೆಚ್ಚಿನ ಪ್ರಮಾಣದಲ್ಲೇ ಆಹಾರ ಧಾನ್ಯ ಉತ್ಪಾದಿಸಬಹುದು. ಗೋ ಸಂರಕ್ಷಣೆಯಿಂದ ಹಾಲು, ಮೊಸರು ಮತ್ತು ತುಪ್ಪ ಅಧಿಕ ಪ್ರಮಾಣದಲ್ಲಿ ದೊರೆಯುವಂತೆ ಮಾಡಬಹುದು. ಅರಣ್ಯವನ್ನು ರಕ್ಷಿಸಿದರೆ ಜೇನು ಉತ್ಪಾದನೆ ಏರುಮುಖವಾಗುತ್ತದೆ. ದುರದೃಷ್ಟವೆಂದರೆ, ಆಧುನಿಕ ನಾಗರಿಕತೆಯಲ್ಲಿ, ಜನರು  ಹಾಲು, ಮೊಸರು, ತುಪ್ಪದ ಮೂಲವಾದ ಹಸುಗಳನ್ನು ಕೊಲ್ಲುತ್ತಿದ್ದಾರೆ. ಜೇನು ಪೂರೈಸುವ ಮರಗಳನ್ನು ಕಡಿಯುತ್ತಿದ್ದಾರೆ. ಮತ್ತು ಕೃಷಿಯಲ್ಲಿ ತೊಡಗುವ ಬದಲು ನಟ್‌, ಬೋಲ್ಟ್‌, ವಾಹನಗಳು ಹಾಗೂ ಸಾರಾಯಿ ತಯಾರಿಸುವ ಕಾರ್ಖಾನೆಗಳನ್ನು ಸ್ಥಾಪಿಸುತ್ತಿದ್ದಾರೆ. ಜನರು ಸಂತೋಷವಾಗಿರುವುದು ಹೇಗೆ ಸಾಧ್ಯ?

ಅಮೆರಿಕದಲ್ಲಿ ನಮಗೆ ಒಳ್ಳೆಯ ಅನುಭವವಿದೆ. ನಮ್ಮ ಅನೇಕ ಇಸ್ಕಾನ್‌ ಫಾರಂಗಳಲ್ಲಿ ಹಸುಗಳಿಗೆ ನಾವು ಸೂಕ್ತ ರಕ್ಷಣೆ ನೀಡುತ್ತಿರುವುದರಿಂದ ನಾವು ಸಾಕಷ್ಟು ಪ್ರಮಾಣದಲ್ಲಿಯೇ ಹಾಲು ಪಡೆಯುತ್ತಿದ್ದೇವೆ. ಬೇರೆ ಫಾರಂಗಳಲ್ಲಿ ನಮ್ಮ ಹಸುಗಳಷ್ಟು ಹಾಲು ಸಿಗುವುದಿಲ್ಲ. ನಮ್ಮ ಹಸುಗಳಿಗೆ ನಾವು ಅವುಗಳನ್ನು ಕೊಲ್ಲುವುದಿಲ್ಲ ಎಂದು ಚೆನ್ನಾಗಿ ಗೊತ್ತು. ಅವು ಸಂತೋಷದಿಂದ ಹೆಚ್ಚು ಹಾಲು ಕೊಡುತ್ತವೆ.

ಹಾಲು ರಕ್ತದ ರೂಪಾಂತರ. ನೀವು ಪನ್ನೀರ್‌ ಅನ್ನು ತೆಗೆದುಕೊಂಡರೆ, ಅದು ಮಾಂಸದಂತೆಯೇ – ರುಚಿ, ಉಪಯೋಗ, ಎಲ್ಲದರಲ್ಲೂ. ಮಾನವೀಯ ರೀತಿಯಲ್ಲೇ ರಕ್ತ ಮಾಂಸ ಪಡೆಯುವುದು ಸಾಧ್ಯವಾದರೆ ಏಕೆ ಹಾಲನ್ನು ಹೆಚ್ಚು ಬಳಸಿಕೊಳ್ಳುತಿಲ್ಲ? ಹಾಲಿನಿಂದ ಮೊಸರು, ತುಪ್ಪ, ಬರ್ಫಿ, ಪನ್ನೀರ್‌ ಏನೆಲ್ಲ ಸಾಧ್ಯ. ಪ್ರಾಣಿಗಳು ಶಾಂತಿಯಿಂದ ಬದುಕಿಕೊಳ್ಳಲಿ. ಅದರ ಕತ್ತನ್ನೇಕೆ ಕತ್ತರಿಸುವಿರಿ? ಪ್ರಾಣಿಯಿಂದ ನಿಮಗೆ ಪ್ರಯೋಜನವಾಗಬೇಕು. ಈ ಉಪಯೋಗವನ್ನೇ ಪಡೆದುಕೊಳ್ಳಿ. ಕೊಲ್ಲುವುದೇಕೆ? ಅದು ಒಳ್ಳೆಯ ಸೇವೆ ನೀಡುವುದಾದರೆ, ನಾನ್ಯಾಕೆ ಕೊಲ್ಲಬೇಕು? ಇದು ನಾಗರಿಕತೆಯೇ? ನಾನು ನಿಮ್ಮ ಸೇವೆ ಪಡೆಯುವೆ, ನಂತರ ನಿಮ್ಮ ಕತ್ತು ಕೊಯ್ಯುವೆ, ಎಂದರೆ ಅದು ಮಾನವೀಯತೆಯೇ?

ನಿಮ್ಮ ಬಳಿ ಹೆಚ್ಚುವರಿ ಹಾಲಿದ್ದರೆ, ಹಾಲಿನ ಪುಡಿ ಮಾಡಿ.  ಮೊದಲು ಬೇಕಾದಷ್ಟು ಹಾಲು ಕುಡಿಯಿರಿ. ಅನಂತರ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ. ತುಪ್ಪವನ್ನು ದೀರ್ಘ ಸಮಯದವರೆಗೆ ಕಾಪಾಡಬಹುದು. ಹೀಗೆ ಪ್ರತಿಯೊಂದು ಹಾಲಿನ ಹನಿಯು  ಗರಿಷ್ಠ ಪ್ರಮಾಣದಲ್ಲಿ ಉಪಯೋಗಿ.

ನೀವೇನು ಮಾಡಬಹುದು ?

ಗೋ ಸಂರಕ್ಷಣೆ ಹೇಗೆ ಸಾಧ್ಯ? ನೀವು ಮಾಂಸ ಭಕ್ಷಕರಾಗಿದ್ದರೆ ಮೊದಲು ಅದನ್ನು ನಿಲ್ಲಿಸಿ, ಹಾಗೆಯೇ ಲೆದರ್‌ ಚೀಲ,  ಬೆಲ್ಟ್‌, ಜಾಕೆಟ್‌, ಪಾದರಕ್ಷೆ, ಗಡಿಯಾರದ ಸ್ಟ್ರಾಪ್‌ನಂತಹ ಚರ್ಮ ಉತ್ಪನ್ನಗಳ ಬಳಕೆಗೆ ಇತಿಶ್ರೀ ಹಾಡಿ. ಸಗಣಿ ಬಳಕೆ ಪುನರಾರಂಭಿಸಿ. ಹಾಲಿಗಿಂತ ಬೇರೆ ಅಮೃತವಿಲ್ಲ ಎಂಬುದನ್ನರಿತು ಅದನ್ನು ಪ್ರಚುರಪಡಿಸಿ.  ಗೋ ಸಂರಕ್ಷಣೆಯ ಮಹತ್ವವನ್ನು ಜನರಲ್ಲಿ ಪಸರಿಸಿ.

ಈ ಲೇಖನ ಶೇರ್ ಮಾಡಿ