ನಿಮಿ-ವಸಿಷ್ಟರ ಶಾಪ-ಪ್ರತಿಶಾಪ!

`ವೈವಸ್ವತ ಮನುವಿನ ಮಗ ಇಕ್ಷ್ವಾಕು. ಇವನ ಹಿರಿಯ ಮಗ ವಿಕುಕ್ಷಿ. ಇನ್ನೊಬ್ಬ ಮಗ ನಿಮಿ. ಈ ನಿಮಿ ಮಹಾರಾಜನ ಕಥೆ ಮತ್ತು ರಾಜವಂಶ ಇಂದಿನ ಕಥಾನಕದ ವಸ್ತು!’ – ಎಂದು ಋಷಿಗಳ ಮುಖಗಳನ್ನೆ ನೋಡುತ್ತ ಸೂತಮುನಿಗಳು ಉಪನ್ಯಾಸ ಪ್ರಾರಂಭಿಸಿದರು.

ಈ ನಿಮಿ ಮಹಾರಾಜ ದೊಡ್ಡ ದೊಡ್ಡ ಯಜ್ಞಯಾಗಾದಿಗಳನ್ನು ಮಾಡುತ್ತಿದ್ದವನು. ಒಮ್ಮೆ ದೊಡ್ಡ ಯಜ್ಞವನ್ನು ಮಾಡಲು ನಿರ್ಧರಿಸಿ ಯಾವಾಗಲೂ ತನ್ನ ಪುರೋಹಿತರಾಗಿದ್ದ ವಸಿಷ್ಟರನ್ನು ಈ ಯಜ್ಞಕ್ಕೂ ಪ್ರಧಾನ ಋತ್ವಿಕರನ್ನಾಗಿ ನಿಯಮಿಸಿ, ವಿಶ್ವಾಸ ಗೌರವಗಳಿಂದ ಆ ಹಿರಿಯ ಬ್ರಹ್ಮರ್ಷಿಯ ಬಳಿಗೆ ಬಂದು ಹೇಳಿದನು : `ಗೌರವಾನ್ವಿತ ಬ್ರಹ್ಮರ್ಷಿಗಳೆ, ನಮ್ಮ ಅಧಿಪತ್ಯದ ಗುರುಹಿರಿಯರೆಲ್ಲರೂ ಸೇರಿ ಮಹಾಯಜ್ಞವೊಂದನ್ನು ಮಾಡಬೇಕೆಂದು ನನ್ನನ್ನು ಪ್ರೇರೇಪಿಸಿದ್ದಾರೆ. ನಾನೂ ಒಪ್ಪಿ ಸರಿಯಾದ ಕಾಲಸಂದರ್ಭಗಳನ್ನು ಆಯ್ಕೆ ಮಾಡಿ ನಿರ್ಧರಿಸಿದ್ದೇನೆ. ದಯವಿಟ್ಟು ತಾವು ಮುಂದಾಳತ್ವ ವಹಿಸಿ ಈ ಮಹಾಯಜ್ಞವನ್ನು ನಡೆಸಿಕೊಟ್ಟು ನಮ್ಮನ್ನೆಲ್ಲ ಕೃತಾರ್ಥರಾಗಿಸಬೇಕೆಂದು ಪ್ರಾರ್ಥಿಸುತ್ತೇನೆ!’

ವಸಿಷ್ಟರು ಸಂತೋಷದಿಂದ ಆಗಲಿ ಎಂಬಂತೆ ಮುಗುಳುನಕ್ಕರು. ಆದರೆ ನಿಮಿ ಆ ಮಹಾಯಜ್ಞದ ದಿನಾಂಕವನ್ನು ಹೇಳಿದ ಕೂಡಲೇ ಅವರ ಮುಖ ಬಾಡಿ ಹೋಯಿತು. ಅವರು ಹೇಳಿದರು : `ನನ್ನ ಪ್ರೀತಿಯ ನಿಮಿ ಮಹಾರಾಜ, ಈ ಸಲ ನೀವೆಲ್ಲ ನನ್ನನ್ನು ಮನ್ನಿಸಬೇಕು. ಈ ಮಹಾಯಜ್ಞದ ನೇತೃತ್ವ ವಹಿಸಲು ನನ್ನಿಂದಾಗುವುದಿಲ್ಲ! ಆ ದಿನವೇ ಇಂದ್ರನ ಇಂಥದೇ ಮಹಾಯಜ್ಞದ ನೇತೃತ್ವ ವಹಿಸಲು ಒಪ್ಪಿಕೊಂಡಿದ್ದೇನೆ!’

ನಿಮಿ ಮಹಾರಾಜ ಬೆಪ್ಪಾದ : ಗುರುಗಳೇ, ಯಾವಾಗಲೂ ನೀವೇ ಅಲ್ಲವೆ ನಮ್ಮ ಮಹಾಯಜ್ಞಗಳನ್ನೆಲ್ಲ ನೆರವೇರಿಸಿಕೊಡುವುದು! ನಿಮ್ಮ ಉಪಸ್ಥಿತಿಯಿಲ್ಲದೆ ನಾನಾಗಲೀ ನನ್ನ ಹಿರಿಯರಾಗಲೀ ಎಂದಾದರೂ ಯಜ್ಞ ಯಾಗಾದಿಗಳನ್ನು ಮಾಡಿದ್ದುಂಟೇ? ಇಂಥವೆಲ್ಲ ಪುಣ್ಯ ಕಾರ್ಯಗಳಲ್ಲಿ ನಾವು ನಿಮ್ಮ ಮೇಲೆಯೇ ಅವಲಂಬಿತರಾಗಿದ್ದೀವಿ ಎಂದು ನಿಮಗೆ ತಿಳಿಯದೇ?’

ವಸಿಷ್ಟರು ಹೇಳಿದರು : `ನಿಮಿ ಚಕ್ರವರ್ತಿ, ನೀನು ಹೇಳುವುದು ಸರಿ, ನಾನಿಲ್ಲದೆ ನೀನು ಏನನ್ನೂ ಮಾಡಿಲ್ಲ. ಆದರೆ, ಬಹಳ ಸಮಯದ ಹಿಂದೆಯೇ ಇಂದ್ರ ತನ್ನ ಈ ದಿನಾಂಕದ ಯಜ್ಞಕ್ಕೆ ನನ್ನನ್ನು ಪ್ರಧಾನನಾಗಿ ಇರಲು ಆಹ್ವಾನಿಸಿದ. ನೀನು ಆಗಲೇ ಒಂದು ದೊಡ್ಡ ಯಜ್ಞವನ್ನು ಮುಗಿಸಿದ್ದೆಯಾದ್ದರಿಂದ, ಅತಿ ಶೀಘ್ರದಲ್ಲಿ ನೀನು ಇನ್ನೊಂದು ಯಜ್ಞದ ಯೋಚನೆ ಮಾಡಬಹುದು ಎಂದು ನನಗನ್ನಿಸಲಿಲ್ಲವಾದ್ದರಿಂದ, ಇಂದ್ರನ ಯಜ್ಞದಲ್ಲಿ ಇರಲು ಒಪ್ಪಿಕೊಂಡೆ!’

ನಿಮಿಯು ಹೀಗೆ ನುಡಿದ : ಇಂದ್ರನಿಗೆ ಸಾವಿರಾರು ಋತ್ವಿಕರು ಸಿಗುತ್ತಾರೆ. ಅವನದೇ ದೇವಗುರುಗಳಾದ ಬೃಹಸ್ಪತ್ಯಾಚಾರ್ಯರು ಇದ್ದಾರೆ. ಇಷ್ಟೊಂದು ಅನುಕೂಲಗಳ ನಡುವೆ ನೀವೇ ಆಗಬೇಕು ಎಂದೇನಿಲ್ಲ ಅವನಿಗೆ. ಆದರೆ, ನಮಗೆ ನೀವೇ ಆಗಬೇಕು. ನೀವು ಇಂದ್ರನಿಗೆ ಬರಲಾಗುವುದಿಲ್ಲ ಎಂದು ಹೇಳಿ ನಮ್ಮ ಯಜ್ಞದ ನೇತೃತ್ವ ವಹಿಸಿ ಬರಬೇಕು! ಇದು ಚಕ್ರವರ್ತಿಯೊಬ್ಬನ ಕೋರಿಕೆ!’

ವಸಿಷ್ಟರು ತಾಳ್ಮೆಯಿಂದ ನುಡಿದರು : ನೀನು ಕರೆದಾಗಲೆಲ್ಲ ಬಂದಿದ್ದೇನೆ. ನನಗೆ ಇಂದ್ರನೂ ಒಂದೆ, ನೀನೂ ಒಂದೆ. ಈ ಸಲ ಯಾವ ಕಾರ್ಯಕ್ರಮವೂ ಇಲ್ಲದಿದ್ದಾಗ ಇಂದ್ರನೇ ಸ್ವತಃ ಬಂದು ಆಹ್ವಾನಿಸಿದ, ಒಪ್ಪಿಕೊಳ್ಳುವಂತಾಯಿತು. ಅವನಿಗೀಗ ಬರಲಾಗುವುದಿಲ್ಲ ಎಂದು ಹೇಳಿ ಕಳುಹಿಸಲಾರೆ.

ಮಾತು ಮುಗಿಸಿದ ಕೂಡಲೇ ಅವರು ಹೇಳಿದರು –

`ನಿಮಿ ಮಹಾರಾಜ, ಇಂದ್ರನ ಮಹಾಯಜ್ಞವನ್ನು ಮಾಡಿ ಮುಗಿಸಿದ ಕೂಡಲೇ ಬರುತ್ತೇನೆ. ನಿನ್ನ ಯಜ್ಞವನ್ನು ಪೂರೈಸಿಕೊಡುತ್ತೇನೆ. ನೀನು ನನಗಾಗಿ ಒಂದೆರಡು ದಿನ ಕಾಯುವುದೊಳ್ಳೆಯದು, ಖಂಡಿತಾ ಬರುತ್ತೇನೆ! ನಾನಿನ್ನೂ ಬರುತ್ತೇನೆ!’

ನಿಮಿ ಮಹಾರಾಜನ ಉತ್ತರಕ್ಕೆ ಕಾಯದೆ ವಸಿಷ್ಟರು ಹೊರಗೆ ಹೆಜ್ಜೆ ಹಾಕಿದರು.

ನಿಮಿಯು ಯೋಚಿಸಿ ಹೀಗೆಂದು ನಿರ್ಣಯಿಸಿದನು.

ಲೌಕಿಕ ಜೀವನ ಕ್ಷಣಿಕವಾದದ್ದು. ಅದನ್ನು ನಿತ್ಯವಾದದ್ದನ್ನು ಪಡೆಯಲು ಬಳಸಬೇಕು.

`ಈ ಬದುಕು ಕ್ಷಣ ಭಂಗುರವಾದದ್ದು. ಇಂದಿನವರು ನಾಳೆ ಇರುತ್ತಾರೆ ಎನ್ನುವುದು ಖಚಿತವಲ್ಲ. ಮನುಷ್ಯ ತನ್ನ ಜೀವಿತದ ಪ್ರತಿಕ್ಷಣವನ್ನೂ ಸಾರ್ಥಕವಾಗಿ ಉಪಯೋಗಿಸಿಕೊಳ್ಳಬೇಕು. ಇಲ್ಲದಿದ್ದರೆ ಅನಂತರ ಏನಾದರೂ ಮಾಡಲು ಕ್ಷಣಗಳೇ ಇಲ್ಲದಂತಾಗಿ ಹೋಗಬಹುದು! ನಾನಿನ್ನೂ ಬದುಕಿದ್ದೇನೆ ಎಂದು ತಿಳಿದಿದ್ದಾಗಲೇ, ಅಂದುಕೊಂಡದ್ದನ್ನು ಮಾಡಿ ಮುಗಿಸಿಬಿಡಬೇಕು. ನಾಳೆಗೆ ಮುಂದೂಡಬಾರದು. ನಾಳೆ ಎನ್ನುವುದು ಇಲ್ಲ!’ ಇಂದ್ರನ ಕಾಲಾವಧಿಯು ಬಹು ದೀರ್ಘವಾದದ್ದು ಅಲ್ಲಿಯವರೆಗೆ ಯಜ್ಞ ಮಾಡದೆ ಕಾಯುವುದು ತರವಲ್ಲ. ಆದ್ದರಿಂದ ವಸಿಷ್ಟರಿಲ್ಲದೆ ಯಜ್ಞವನ್ನು ಮಾಡೋಣ.

ಅಂತೆಯೇ ನಿಮಿ ಚಕ್ರವರ್ತಿ ವಸಿಷ್ಟರಿಗಾಗಿ ಕಾಯಲಿಲ್ಲ. ತತ್‌ಕ್ಷಣ ಕಾರ್ಯಪ್ರವೃತ್ತನಾದ. ಬೇರೆ ಕೆಲವರು ಋತ್ವಿಜರೊಂದಿಗೆ ಚರ್ಚಿಸಿ ತಾನು ನಿರ್ಧರಿಸಿದ್ದ ದಿನವೇ ಯಜ್ಞವನ್ನು ಪ್ರಾರಂಭಿಸಿಬಿಟ್ಟ.

`ಶರೀರಂ ಕ್ಷಣ ವಿಧ್ವಂಸಿ ಕಲ್ಪಾಂತ ಸ್ಥಾಯಿನೋ ಗುಣಾಃ’ -ಎಂದು ಚಾಣಕ್ಯ ಪಂಡಿತರು ಹೇಳುತ್ತಾರೆ. ಐಹಿಕ ಪ್ರಪಂಚದಲ್ಲಿ ಜೀವಿಯ ಆಯುಷ್ಯವು ಯಾವ ಕ್ಷಣದಲ್ಲಾದರೂ ಕೊನೆಗೊಳ್ಳಬಹುದು. ಆದರೆ, ಈ ಜೀವಮಾನದಲ್ಲಿ ಸಾರ್ಥಕವಾದ ಕೆಲಸವನ್ನು ಮಾಡಿದರೆ ಅದು ಶಾಶ್ವತವಾಗಿ ಚರಿತ್ರೆಯಲ್ಲಿ ಉಳಿಯುತ್ತದೆ, ಎನ್ನುವ ಸತ್ಯವನ್ನು ಅರಿತ ಮಹಾಪುರುಷ ನಿಮಿ ಚಕ್ರವರ್ತಿ. ಮಾನವ ಜನ್ಮದಲ್ಲಿ ನಾವು ಭಗವದ್ಧಾಮಕ್ಕೆ ಹಿಂತಿರುಗುವ ರೀತಿಯಲ್ಲಿ ಕಾರ್ಯಪ್ರವೃತ್ತರಾಗಬೇಕು. ಹೀಗಾಗಿ, ತಪ್ಪೊ-ಸರಿಯೊ ಅವನಂತೂ ವಸಿಷ್ಟರಿಗಾಗಿ ಕಾಯಲೇ ಇಲ್ಲ!

ಅತ್ಯಂತ ಶಾಸ್ತ್ರೋಕ್ತವಾಗಿ, ವಿಧಿವಿಧಾನಗಳೊಂದಿಗೆ, ಸಂಭ್ರಮ ಸಂತೋಷಗಳೊಂದಿಗೆ ನಿಮಿ ಮಹಾರಾಜನ ಯಾಗ ಜರುಗಿಹೋಯಿತು. ನಿಮಿಗೂ ಸಮಾಧಾನ, ಸಂತೃಪ್ತಿಯ ಸಾರ್ಥಕತೆ ಮೈದುಂಬಿಕೊಂಡಿತು.

ಅದೇ ವೇಳೆಗೆ ಸರಿಯಾಗಿ ವಸಿಷ್ಟರೂ ಇಂದ್ರನ ಮಹಾಯಜ್ಞವನ್ನು ಮಾಡಿ ಪೂರೈಸಿದ್ದರು. ಅವರೂ ಸಂತುಷ್ಟರಾಗಿ ನಿಮಿ ಮಹಾರಾಜನ ಯಜ್ಞವನ್ನು ನಡೆಸಿಕೊಂಡಲು ಧಾವಿಸಿದರು.

ಆದರೆ, ಇಲ್ಲಿ ಆಗಿರುವುದೇನು?

ನಿಮಿಯ ಮಹಾಯಜ್ಞ ಈಗಾಗಲೇ ಕಾರ್ಯಪ್ರವೃತ್ತವಾಗಿತ್ತು. ತನ್ನ ಮೇಲೆ ಅಷ್ಟೊಂದು ಗೌರವಗಳನ್ನಿಟ್ಟುಕೊಂಡಿದ್ದ ನಿಮಿ ಮಹಾರಾಜ ತನಗಾಗಿ ಕಾಯಲಿಲ್ಲ, ತನ್ನ ಮಾತಿಗೆ ಬೆಲೆ ಕೊಡಲಿಲ್ಲ, ತನ್ನ ಹಿರಿತನವನ್ನೂ ಗೌರವಿಸಲಿಲ್ಲ!

ವಸಿಷ್ಟರಿಗೆ ನಿಜವಾಗಲೂ ಎಲ್ಲ ಬೇಸರದ ಕೋಪರೋಷಗಳೂ ಒತ್ತರಿಸಿಕೊಂಡು ಬಂದವು.

ವಸಿಷ್ಟರು ದನಿಯೆತ್ತರಿಸಿ ಹೇಳಿದರು –

`ನಿಮಿ, ನೀನೇ ಮಹಾಜ್ಞಾನಿಯೆಂದು ನೀನು ಭಾವಿಸಿದಂತಿದೆ. ನಿನಗಿಂತಲೂ ಜ್ಞಾನಿಗಳು, ಹಿರಿಯರು, ತಪಸ್ವಿಗಳು ನಿನ್ನ ಗಣನೆಗೆ ಬರುವುದಿಲ್ಲವೆಂದು ಕಾಣುತ್ತದೆ. ನಾನು ಹಿಂತಿರುಗಿ ಬರುವೆ, ನನಗಾಗಿ ಕಾಯುತ್ತಿರು ಎಂದು ಹೇಳಿದರೂ, ನನ್ನ ಮಾತನ್ನು ಅಗೌರವಿಸುವ ಹಾಗೆ, ನನ್ನ ಅನುಪಸ್ಥಿತಿಯಲ್ಲಿ ಎಲ್ಲವನ್ನೂ ಮಾಡುತ್ತಿದ್ದೀಯ! ಇದು ನಿನ್ನಂತಹವನಿಗೆ ಶೋಭೆ ತರುವ ವಿಷಯವಲ್ಲ!’

ನಿಮಿ ನಮ್ರನಾಗಿ ಹೇಳಿದ –

`ಮಹರ್ಷಿಗಳೇ, ನಿಮಗಾಗಿ ಕಾಯುವುದರಲ್ಲಿ ಯಾವ ಅರ್ಥವೂ ಇಲ್ಲವೆಂದೆನ್ನಿಸಿತು. ನನ್ನ ಗುರುಹಿರಿಯರು ನಿರ್ಧರಿಸಿದ್ದ ಸಮಯದಲ್ಲೇ ಮಾಡಿ ಮುಗಿಸಬೇಕು, ಮುಂದೆ ಹಾಕುವುದು ಬೇಡ ಎಂದರು. ಇಡೀ ಮಾನವ ಕುಲಕ್ಕೆ ಒಳಿತಾಗಬೇಕು ಎಂದು ಆಯೋಜಿಸಿದ ಮಹಾಯಜ್ಞ. ಸರ್ವರ ಹಿತಕ್ಕಾಗಿ, ಸರ್ವರ ಬೆಂಬಲದಿಂದ ಸಾಂಗವಾಗಿ ನಡೆಯುತ್ತಿದೆ. ಇಂದ್ರನ ಮಹಾಸಂಭ್ರಮದ ಕಾರ್ಯಕ್ರಮದಿಂದ ಹಿಂತಿರುಗಿದ್ದೀರಿ. ಈ ತೃಣ ಮಾನವನ ಸೇವೆಯನ್ನೂ ಸ್ವೀಕರಿಸಬೇಕೆಂದು ಪ್ರಾರ್ಥಿಸುತ್ತೇನೆ!’

ಈಗ ವಸಿಷ್ಟರ ಕೋಪ ನೆತ್ತಿಗೇರಿತು –

`ರಾಜನ್‌, ನಿನ್ನ ವ್ಯಂಗ್ಯದ ನುಡಿಗಳು ನನ್ನನ್ನು ಅಲುಗಿನಂತೆ ತಾಗಿವೆ. ನೀನು ಗುರುದ್ರೋಹವೆಸಗಿದ್ದೀಯ… ನೀನು ಶಾಪಕ್ಕೆ ಗುರಿಯಾಗಲೇಬೇಕು. ನಿನ್ನನ್ನು ಕ್ಷಮಿಸಿಬಿಡುವಂತಿಲ್ಲ… ಇಗೋ, ಗುರುವಾಕ್ಯವನ್ನು ಪರಿಪಾಲನೆ ಮಾಡದೆ, ಎಲ್ಲ ಬಲ್ಲವನಂತೆ ನಡೆದುಕೊಂಡದ್ದು ಇತರರಿಗೆ ಮಾದರಿಯಾಗುವ ಮೊದಲು, ನಿನಗೆ ಶಿಕ್ಷೆಯಾಗಿ ಹೋಗಲಿ. ಮಹಾಜ್ಞಾನಿಯೆಂದು, ಮಹಾಶಕ್ತನೆಂದು ಭಾವಿಸಿರುವ ನಿನ್ನ ಶರೀರ ಕೂಡಲೇ ಪತನ ಹೊಂದಲಿ!’ ಎಂದು ಶಾಪಕೊಟ್ಟು ಬಿಟ್ಟರು.

ನಿಮಿ ಚಕ್ರವರ್ತಿಯ ಹೃದಯಕ್ಕೆ ಭಲ್ಲೆಯಿಂದ ತಿವಿದಂತಾಯಿತು. ತಾನು ಏನೊಂದು ಅಪರಾಧವನ್ನು ಮಾಡದಿದ್ದಾಗಲೂ ಅನಗತ್ಯವಾಗಿ ತನಗಿವರು ಶಾಪವಿತ್ತರಲ್ಲ ಅನ್ನಿಸಿತು. ವಿಧಿ ಆ ಕ್ಷಣವೇ ಅವನ ಬುದ್ಧಿಯನ್ನು ಕಂಗೆಡಿಸಿತು. ಯಾರಿಗೆ ಏನು ಹೇಳುತ್ತಿದ್ದೇನೆ ಎನ್ನುವ ಪರಿವೆಯೇ ಇಲ್ಲದೆ ಅವನ ನಾಲಗೆ ನುಡಿದುಬಿಟ್ಟಿತು : `ವಸಿಷ್ಟ ಮಹಾಮುನಿಗಳೇ, ಸ್ವರ್ಗದ ದೊರೆಯಿಂದ ಕಾಣಿಕೆ ಪಡೆಯುವ ಸಲುವಾಗಿ ನೀವು ನಿಮ್ಮ ಧಾರ್ಮಿಕ ಬುದ್ಧಿಯನ್ನು, ಋಷಿ ಚಿಂತನೆಯನ್ನು ಕಳೆದುಕೊಂಡುಬಿಟ್ಟಿದ್ದೀರಿ. ನನಗೆ ದೇಹವಿಲ್ಲದವನಾಗು ಎಂದು ಶಪಿಸಿದ್ದೀರಿ. ಈಗ ನಿಮ್ಮ ಆಧ್ಯಾತ್ಮಿಕ ಶಕ್ತಿ ಕುಂದಿಹೋಯಿತು. ಇಗೋ, ನಾನೂ ನಿಮಗೆ ಪ್ರತಿಶಾಪ ಕೊಡುತ್ತೇನೆ : ನಿಮ್ಮ ದೇಹವೂ ಪತನಹೊಂದಿ ಹೋಗಲಿ!’

ಮರುಕ್ಷಣವೇ ಅವರಿಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು!

ಇಬ್ಬರೂ ದುಡುಕಿದೆವು ಎಂದು ಅವರಿಗೆ ಅರ್ಥವಾಗುವುದರೊಳಗಾಗಿ ಬಹಳ ತಡವಾಗಿಹೋಗಿತ್ತು!

ಇಬ್ಬರ ದೇಹವೂ ನೆಲಕ್ಕೆ ಕುಸಿಯಿತು! ಎರಡು ದೇಹಗಳೂ ಜೀವವಿಲ್ಲದ ಕೊರಡುಗಳಂತೆ ಬಿದ್ದುಕೊಂಡವು!

“ಇಬ್ಬರು ಮಹಾನ್‌ ವ್ಯಕ್ತಿಗಳ ಜೀವನದಲ್ಲಿ ಹೇಗಾಗಿ ಹೋಯಿತು. ಇಬ್ಬರೂ ಸ್ವಲ್ಪ ತಾಳ್ಮೆಯಿಂದ, ಪರಸ್ಪರ ಗೌರವದಿಂದ ವರ್ತಿಸಿದ್ದರೆ ಈ ಶಾಪ-ಪ್ರತಿಶಾಪಗಳು ಅಗತ್ಯವಾಗುತ್ತಿರಲಿಲ್ಲ. ಮಹಾನ್‌ ದೈವಭಕ್ತ-ರಾಜಋಷಿ ಎಂಬಂತಿದ್ದ ನಿಮಿಗೆ ಮಹಾತಪಸ್ವಿಗಳಾದ ವಸಿಷ್ಟರು ತಾಳ್ಮೆತಪ್ಪಿ ಶಾಪಕೊಡುವುದೆಂದರೇನು? ಅದೂ ದೇಹವೇ ಪತನಹೊಂದಲಿ ಎನ್ನುವ ಶಾಪ. ಇಂತಹ ಕ್ರೂರ ಮಾತುಗಳು ಅವರ ಬಾಯಲ್ಲಿ ಬಂದದ್ದಾದರೂ ಹೇಗೆ? ಮತ್ತೆ ಅದೇ ರೀತಿ ಬ್ರಹ್ಮರ್ಷಿಗಳಾದ, ದೇವಋಷಿಗಳೂ ಎನಿಸಿದ ವಸಿಷ್ಟರಂತಹ ದೇವಾತ್ಮಕ್ಕೆ ನಿಮಿಯಂತಹ ರಾಜನೊಬ್ಬ, ದೇಹ ಪತನಹೊಂದಲಿ ಎಂದು ಪ್ರತಿಶಾಪ ಕೊಡುವುದೆಂದರೇನು? ಇಬ್ಬರ ನಡವಳಿಕೆಯೂ ಮೆಚ್ಚತಕ್ಕದಲ್ಲವೆಂಬಂತೆ ಜರುಗಿಹೋಯಿತು – ಇಬ್ಬರ ಬದುಕಿನ ದುರಂತ ಅದು!

`ಮತ್ತೆ ಹುಟ್ಟಿ ಬರಲು ವಸಿಷ್ಟರು ಕಾಯಬೇಕಾಯಿತು. ಸುಲಭವಾಗಿ ಅವರಿಗೆ ದೇಹರೂಪ ಬರಲಿಲ್ಲ. ಮುಂದೆ ಮಿತ್ರ ಮತ್ತು ವರುಣ ದೇವತೆಗಳು ಊರ್ವಶಿಯನ್ನು ಕಂಡು ಕಾಮವಾಂಛಿತರಾದಾಗ, ಅವರಿಗೆ ವೀರ್ಯ ಸ್ಕಲನವಾಗಿ, ಅದನ್ನು ಮಡಕೆಯಲ್ಲೇ ಕಾಯ್ದಿರಿಸಲಾಯಿತು. ಇದರಿಂದ ವಸಿಷ್ಟರು ಮತ್ತೆ ಜನಿಸಿದರು.

`ಹಾಗೆಯೇ ನಿಮಿಯ ಯಜ್ಞಯಾಗಾದಿಗಳಿಗೆ ಬಂದಿದ್ದ ಮಹಾನ್‌ ಮಹಾನ್‌ ಮಹರ್ಷಿಗಳು ಮತ್ತು ಬ್ರಾಹ್ಮಣರು, ರಾಸಾಯನಿಕ ಸುಗಂಧ ವಸ್ತುಗಳಿಂದ ರಕ್ಷಿಸಿದ್ದ ನಿಮಿಯ ನಿರ್ಜೀವ ದೇಹದಲ್ಲಿ ನಿಮಿಯ ಜೀವವನ್ನು ಸೇರಿಸಿ ದೇಹ ಜೀವಂತವಾಗಿಸುವಂತೆ ಯಾಗಕ್ಕೆ ಬಂದಿದ್ದ ದೇವತೆಗಳಿಗೆ ಮನವಿ ಮಾಡಿಕೊಂಡರು. ದೇವತೆಗಳು ತಥಾಸ್ತು ಎಂದರೂ ನಿಮಿ ಮಹಾರಾಜ ಒಪ್ಪಲಿಲ್ಲ – ಮತ್ತೊಮ್ಮೆ ನನ್ನನ್ನು ಈ ಐಹಿಕ ಶರೀರದಲ್ಲಿ ಬಂದಿಯಾಗಿಸಬೇಡಿ! ಎಂದುಬಿಟ್ಟ. ಅವನು ಮತ್ತೆ ಹುಲುಮಾನವ ಜನ್ಮವನ್ನು ಬಯಸಲಿಲ್ಲ. ಭಗವಂತನ ಪಾದಪದ್ಮಗಳನ್ನು ಸ್ಮರಿಸುವಂತಹ ಜನ್ಮವನ್ನು ಬಯಸಿದ. ನಾನು ಐಹಿಕ ದೇಹವನ್ನು ಸ್ವೀಕರಿಸಲು ಇಚ್ಛಿಸುವುದಿಲ್ಲ. ಏಕೆಂದರೆ ನೀರಿನೊಳಗಿನ ಮೀನು ಸದಾಕಾಲವೂ ಮರಣ ಭಯದಿಂದ ಆತಂಕದಲ್ಲಿ ಬದುಕುವಂತೆ ಈ ವಿಶ್ವದಲ್ಲಿ ಎಲ್ಲ ಕಡೆಯೂ ಇಂತಹ ದೇಹವು ಆಪತ್ತು, ಶೋಕ ಮತ್ತು ಭಯಗಳ ಮೂಲ!

ನಿಮಿಯ ಮಾತುಗಳನ್ನು ಕೇಳಿದ ದೇವತೆಗಳು ಹೇಳಿದರು:

`ಮಹಾರಾಜ ನಿಮಿಯ ಆಶಯ ಮೆಚ್ಚತಕ್ಕದ್ದಾಗಿದೆ. ಶರೀರವೇ ಬೇಡ ಎನ್ನುವ ಅವನು ಶರೀರವಿಲ್ಲದೆಯೆ ಜೀವಿಸಲಿ. ಅವನು ದೇವೋತ್ತಮ ಪರಮ ಪುರುಷನ ಆಪ್ತ ಸಂಗಡಿಗನಾಗಿ ಆಧ್ಯಾತ್ಮಿಕ ಶರೀರದಲ್ಲಿ ಜೀವಿಸಲಿ ಮತ್ತು ಅವನು ತನ್ನ ಇಚ್ಛಾನುಸಾರ ಐಹಿಕ ದೇಹಿಗಳಾದ ಶ್ರೀಸಾಮಾನ್ಯರಿಗೆ ದರ್ಶನಕೊಡಲಿ ಅಥವಾ ಕೊಡದಿರಲಿ!’

ದೇವತೆಗಳು ಹೀಗೆ ಸಕಲ ರೀತಿಯ ಸೂಕ್ಷ್ಮಾತಿಸೂಕ್ಷ್ಮ ಐಹಿಕ ಕಲ್ಮಶಗಳಿಂದ ಮುಕ್ತವಾದ ಪರಿಶುದ್ಧ ಆಧ್ಯಾತ್ಮಿಕ ಶರೀರದಲ್ಲಿ ನೆಲೆಸಲು ಸಾಧ್ಯವಾಗುವಂತೆ ನಿಮಿ ಮಹಾರಾಜನಿಗೆ ವರ ನೀಡಿದರು. ಅನಂತರ ಜನತೆಯನ್ನು ಅನಿಯಂತ್ರಿಕ ಸರ್ಕಾರದ ಅಪಾಯಗಳಿಂದ ಪಾರುಮಾಡಲು ಋಷಿಗಳು ಮಹಾರಾಜ ನಿಮಿಯ ಐಹಿಕ ಶರೀರವನ್ನು ಮಥಿಸಿದರು. ಈ ಮಥನದ ಫಲವಾಗಿ ಪುತ್ರನೊಬ್ಬ ಜನಿಸಿದ. ಅಸಾಮಾನ್ಯ ರೀತಿಯಲ್ಲಿ ಜನಿಸಿದ ಕಾರಣ ಅವನನ್ನು ಜನಕನೆಂದು ಕರೆಯಲಾಯಿತು. ತನ್ನ ತಂದೆಯ ಐಹಿಕ ದೇಹದ ಮಥನದಿಂದ ಜನಿಸಿದ ಕಾರಣ ಅವನನ್ನು ಮಿಥಿಲ ಎಂದು ಕರೆಯಲಾಯಿತು. ಮಹಾರಾಜ ಮಿಥಿಲನಾಗಿ ಅವನೊಂದು ನಗರವನ್ನು ನಿರ್ಮಿಸಿದ ಕಾರಣ ಆ ನಗರವನ್ನು ಮಿಥಿಲಾನಗರ ಎಂದು ಕರೆಯಲಾಯಿತು.

ಇಲ್ಲಿಗೆ ಒಂಭತ್ತನೆಯ ಸ್ಕಂಧದ ಅಧ್ಯಾಯ ಹದಿಮೂರರ ಕಥಾಂಶ ಮುಗಿದೇ ಹೋಗುತ್ತದೆ ಎನ್ನಬಹುದು. ಈ ಇಡೀ ಅಧ್ಯಾಯ ನಿಮಿಯ ಕಥೆ ಆವರಿಸಿಕೊಳ್ಳುತ್ತದೆ. ವಸಿಷ್ಟರೊಂದಿಗೆ ಅವನ ಒಡನಾಟದಲ್ಲಿ ಶಾಪ-ಪ್ರತಿಶಾಪದೊಂದಿಗೆ ಈ ಕಥೆ ಮುಗಿದುಹೋಗುತ್ತದೆ. ಮಿಥಿಲ ರಾಜ ನಿರ್ಮಿಸಿದ ಮಿಥಿಲಾನಗರ ಎನ್ನುವ ವಿಶೇಷವೇ ಇಲ್ಲಿ ಒಂದು ಅಂತ್ಯಘಟ್ಟ. ಮಿಥಿಲನ ಮುಂದಿನ ಸಂತಾನ, ವಂಶಾವಳಿಯ ವರ್ಣನೆಗಳನ್ನು ಕಾಣಬಹುದು. ಮುಂದಿನ ಶ್ಲೋಕಗಳಲ್ಲಿ ಭಗವಾನ್‌ ವ್ಯಾಸರು ಹೆಸರುಗಳನ್ನು ಪಟ್ಟಿ ಮಾಡಿ ಅಧ್ಯಾಯವನ್ನು ಸಮಾಪ್ತಿಗೊಳಿಸಿಬಿಡುತ್ತಾರೆ.

`ಈ ಸಂದರ್ಭದಲ್ಲಿ ಒಂದು ಅಂಶವನ್ನು ಗಮನಿಸಬೇಕಾಗುತ್ತದೆ. ಈ ಅಧ್ಯಾಯದ ಹನ್ನೆರಡನೆಯ ಶ್ಲೋಕದಲ್ಲಿ ಭಗವಾನ್‌ ವ್ಯಾಸರು ಅರಾಜಕ ಭಯಂ ಎಂದು ಹೇಳುತ್ತಾರೆ. ಅಂದರೆ ಅನಿಯಂತ್ರಿತವಾದ ರಾಜ್ಯಭಾರದಿಂದೊದಗುವ ಭಯ. ರಾಜ್ಯವೊಂದನ್ನು ಆಳುವ ರಾಜನೊಬ್ಬನಿಲ್ಲದಿದ್ದರೆ ಆ ರಾಜ್ಯಕ್ಕೆ ಅರಾಜಕತೆ ಆವರಿಸುವ ಭೀತಿಯುಂಟಾಗುತ್ತದೆ ಎನ್ನುತ್ತಾರವರು. ಪ್ರಾಚೀನ ಕಾಲದಿಂದಲೂ, ವೇದ ಕಾಲದಲ್ಲೂ ಯಾವ ದೇಶವೂ ರಾಜನಿಲ್ಲದೆ ಇರಲಿಲ್ಲ. ಯಾರಾದರೊಬ್ಬರು ಹಿರಿಯರು, ವಯೋವೃದ್ಧರು ಅಂತೂ ಇದ್ದೇ ಇರುತ್ತಿದ್ದರು – ಒಂದು ವೇಳೆ ರಾಜ ತೀರಿಕೊಂಡು, ರಾಜಕುಮಾರ ಬಾಲಕನಾಗಿದ್ದರೆ ಇವರಿಂದ ರಾಜ್ಯದ ಆಡಳಿತ ನಡೆಯುತ್ತಿತ್ತು. ಹೀಗಾಗಿ ಅರಾಜಕತೆಯ ಭಯ ಆವರಿಸದ ಹಾಗೆ ಸಂರಕ್ಷಣೆಗೆ ಇರುತ್ತಿತ್ತು.

`ನಿಮಿ ಮಹಾರಾಜ ಅನಿರೀಕ್ಷಿತವಾಗಿ ದೇಹ ತ್ಯಜಿಸಬೇಕಾಗಿ ಬಂದಾಗ ಅವನ ರಾಜ್ಯಕ್ಕೆ ವಾರಸುದಾರರಿಲ್ಲದೆ, ಆಡಳಿತ ನಡೆಸುವವರು ಇಲ್ಲದೆ ಹಾಗೊಂದು ಅರಾಜಕತೆಯ ಭಯ ಆವರಿಸಿತು. ಇದನ್ನು ಮನಗಂಡ ಹಿರಿಯರು, ಋಷಿಗಳು ವಂಶ ಮುಂದುವರಿಯುವಂತೆ, ನಾಯಕನೊಬ್ಬನ ಸೃಷ್ಟಿಯಾಗುವಂತೆ ಮಾಡಿದರು. ಮಿಥಿಲನ ಸೃಷ್ಟಿಯಾಯಿತು. ರಾಜ್ಯದ ಪ್ರಜೆಗಳಿಗೆ ಮಾರ್ಗದರ್ಶನ ನೀಡುತ್ತ, ಅವರನ್ನು ರಾಜ್ಯವನ್ನು ಸರಿಯಾದ ದಾರಿಗೆ ಮುನ್ನಡೆಸುವುದು ಕ್ಷತ್ರಿಯ ರಾಜನೊಬ್ಬನ ಮುಖ್ಯ ಕರ್ತವ್ಯ. ಪ್ರಜೆಗಳನ್ನು ಕೆಡುಕು-ಹಾನಿಗಳಿಂದ ಪಾರು ಮಾಡುವವನು ಕ್ಷತ್ರಿಯ. ಶಸ್ತ್ರಗಳಲ್ಲಿ, ಯುದ್ಧ ಕೌಶಲಗಳಲ್ಲಿ ಅವನು ಪರಿಣತ ತಪಸ್ವಿಗಳಿಂದ ತರಬೇತು ಪಡೆಯುತ್ತಾನೆ. ಆಡಳಿತದ ಚುಕ್ಕಾಣಿ ಹಿಡಿಯುವ ಸಾಮರ್ಥ್ಯವನ್ನು ಅವನಿಗೆ ಕಲಿಸಲಾಗಿರುತ್ತದೆ. ಸಾಮಾನ್ಯ ಪ್ರಜೆಗಿಂತಲೂ ಅಸಾಮಾನ್ಯನಾಗುವುದರಿಂದಲೇ ಇವನು ಆಡಳಿತದ ಸೂತ್ರಗಳನ್ನು ತನ್ನ ಕೈಗೆ ತೆಗೆದುಕೊಳ್ಳುವವನಾಗುತ್ತಾನೆ. ಹೀಗೆಲ್ಲ ತರಬೇತಿ ಹೊಂದಿದ ನಾಯಕ ರಾಜ್ಯಾಡಳಿತದ ಸೂತ್ರ ಹಿಡಿದು ಪ್ರಮಾಣೀಕೃತ ಧರ್ಮಗ್ರಂಥಗಳ ಆದರ್ಶ ನಿಯಮಾನುಸಾರ ಜನತೆಯನ್ನು ಆಳಿದಲ್ಲಿ ಪ್ರಜೆಗಳು ಸುಖಸಂತೋಷದಿಂದಿರುತ್ತಾರೆ!’

ಇಷ್ಟನ್ನು ಹೇಳಿ ಮುಗಿಸಿದ ಸೂತಮುನಿಗಳು ಮಿಥಿಲನ ಮುಂದಿನ ವಂಶಾವಳಿಯನ್ನೂ ಭಗವಾನ್‌ ವ್ಯಾಸರ ಶ್ಲೋಕಗಳ ಪ್ರಕಾರ ಹೇಳಿದರು.

ಮಿಥಿಲನಿಗೆ ಉದಾವಸು ಎನ್ನುವ ಪುತ್ರ ಹುಟ್ಟಿದ. ಉದಾವಸುವಿಗೆ ನಂದಿವರ್ಧನನೂ, ನಂದಿವರ್ಧನನಿಗೆ ಸುಕೇತನೂ ಜನಿಸಿದನು. ಸುಕೇತುವಿಗೆ ದೇವರಾತನು ಜನಿಸಿದರು. ದೇವರಾತನಿಗೆ ಬೃಹದ್ರಥ ಹೆಸರಿನ ಪುತ್ರ ಹುಟ್ಟಿದನು. ಬೃಹದ್ರಥನಿಗೆ ಮಹಾವೀರ್ಯನೆಂಬ ಮಗನಾದನು. ಮಹಾವೀರ್ಯನಿಗೆ ಸುಧೃತಿ, ಸುಧೃತಿಗೆ ಧೃಷ್ಟಕೇತು, ಧೃಷ್ಟಕೇತುವಿಗೆ ಹರ್ಯಶ್ವ, ಹರ್ಯಶ್ವನಿಗೆ ಮರು ಎನ್ನುವ ಪುತ್ರರ ಜನನವಾಯಿತು.

ಮರುವಿನ ಪುತ್ರ ಪ್ರತೀಪಕ. ಈ ಪ್ರತೀಪಕನ ಪುತ್ರ ಕೃತರಥ. ಕೃತರಥನಿಗೆ ದೇವಮೀಢನೆಂಬ ಮಗ ಹುಟ್ಟಿದ. ದೇವಮೀಡನಿಗೆ ವಿಶ್ರುತನೂ, ವಿಶ್ರುತನಿಗೆ ಮಹಾಧೃತಿಯೂ ಮಕ್ಕಳಾಗಿ ಹುಟ್ಟಿದರು.

ಮಹಾಧೃತಿಗೆ ಕೃತಿರಾತನೆಂಬ ಹೆಸರಿನ ಪುತ್ರ ಜನಿಸಿದ. ಈ ಕೃತಿರಾತನಿಗೆ ಮಹಾರೋಮನೆಂಬ ಪುತ್ರನ ಜನನವಾಯಿತು. ಹೀಗೆ ವಂಶ ಮುಂದುವರಿಯಿತು. ಮಹಾರೋಮನಿಗೆ ಸ್ವರ್ಣರೋಮನೂ, ಸ್ವರ್ಣರೋಮನಿಗೆ ಹ್ರಸ್ವರೋಮನೂ ಜನಿಸಿದರು.

ಹ್ರಸ್ವರೋಮನಿಗೆ ಶೀರಧ್ವಜ ಹುಟ್ಟಿದ. ಇವನನ್ನು ಜನಕನೆಂದೂ ಕರೆದರು. ಶೀರಧ್ವಜ ಭೂಮಿಯನ್ನು ಉಳುತ್ತಿದ್ದಾಗ ಅವನ ನೇಗಿಲ ಗುಳದ ಮುಖೇನ ಸೀತಾದೇವಿ ಎನ್ನುವ ಪುತ್ರಿಯೊಬ್ಬಳು ಆವಿರ್ಭವಿಸಿದಳು. ಇವಳೇ ಮುಂದೆ ಶ್ರೀರಾಮಚಂದ್ರನ ಕೈಹಿಡಿದವಳು. ಈ ಕಾರಣಕ್ಕಾಗಿಯೇ ಶೀರಧ್ವಜ ಅಥವಾ ಜನಕನೆಂದು ಕರೆಸಿಕೊಂಡ ಈ ರಾಜ ಪುರಾಣ ಪ್ರಖ್ಯಾತನಾದ. ಶ್ರೀಮದ್ರಾಮಾಯಣ ಪುರಾಣದಲ್ಲಿ ಅವನ ಹೆಸರು ನೆಲೆನಿಂತಿತು.

ಶೀರಧ್ವಜನ ಪುತ್ರ ಕುಶಧ್ವಜ. ಇವನ ಮಗ ಧರ್ಮಧ್ವಜ. ಇವನಿಗೆ ಕೃತಧ್ವಜ ಮತ್ತು ಮಿತಧ್ವಜ ಎನ್ನುವ ಇಬ್ಬರು ಮಕ್ಕಳು ಹುಟ್ಟಿದರು.

ಪುತ್ರ ಸಂತಾನ ಮುಂದುವರೆಯಿತು –

ಕೃತಧ್ವಜನಿಗೆ ಕೇಶಿಧ್ವಜ ಹುಟ್ಟಿದ. ಮಿತಧ್ವಜನಿಗೆ ಖಾಂಡಿಕ್ಯ ಹುಟ್ಟಿದ. ಕೃತಧ್ವಜನ ಪುತ್ರ ಕೇಶಿಧ್ವಜ ಆಧ್ಯಾತ್ಮಿಕ ಜ್ಞಾನದಲ್ಲಿ ಪರಿಣತನಾದನು. ಹಾಗೆಯೇ, ಮಿತಧ್ವಜನ ಮಗ ಖಾಂಡಿಕ್ಯ ವೇದಕರ್ಮಾಚರಣೆಗಳಲ್ಲಿ ಪರಿಣತನಾಗಿದ್ದ. ಆದರೆ, ರಾಜಕಾರಣದಲ್ಲಿ ಈ ಪರಿಣತಿಗಳಿಗಿಂತಲೂ ಯುದ್ಧಕೌಶಲ ಮುಖ್ಯವಾದುದರಿಂದಲೇನೊ, ಖಾಂಡಿಕ್ಯ ಸೋದರನೇ ಆದ ಕೇಶಿ ಧ್ವಜನನ್ನು ಎದುರಿಸಲಾರದೆ ಹೆದರಿ ಎಲ್ಲಿಗೊ ಓಡಿಹೋಗಿಬಿಟ್ಟ. ಕೇಶಿಧ್ವಜನಿಗೆ ಭಾನುಮಾನ್‌ ಎನ್ನುವ ಮಗ ಹುಟ್ಟಿದ. ಈ ಭಾನುಮಾನ್‌ಗೆ ಶತದ್ಯುಮ್ನನೆಂಬ ಮಗ ಹುಟ್ಟಿದ.

ಶತದ್ಯುಮ್ನನ ಮಗ ಶುಚಿ. ಶುಚಿಯ ಮಗ ಸನದ್ವಾಜ. ಸನದ್ವಾಜನಿಗೆ ಊರ್ಜಕೇತು ಎನ್ನುವ ಮಗ ಹುಟ್ಟಿದ. ಊರ್ಜಕೇತುವಿನ ಮಗ ಅಜ. ಅಜನ ಮಗ ಪುರುಜಿತ್‌. ಪುರುಜಿತ್‌ಗೆ ಅರಿಷ್ಟನೇಮಿ ಎನ್ನುವ ಮಗ, ಅರಿಷ್ಟನೇಮಿಗೆ ಶ್ರುತಾಯು ಎನ್ನುವ ಮಗ. ಶ್ರುತಾಯುವಿಗೆ ಸುಪಾರ್ಶ್ವಕ ಎನ್ನುವ ಮಗ ಜನಿಸಿದ. ಸುಪಾರ್ಶ್ವಕನಿಗೆ ಚಿತ್ರರಥನೆಂಬ ಮಗ ಹುಟ್ಟಿದ. ಚಿತ್ರರಥನ ಪುತ್ರ ಕ್ಷೇಮ. ಕ್ಷೇಮಯ ಪುತ್ರ ಸಮರಥ. ಸಮರಥನ ಪುತ್ರ ಸತ್ಯರಥ. ಸತ್ಯರಥನ ಪುತ್ರ ಉಪಗುರು. ಉಪಗುರುವಿನ ಮಗ ಉಪಗುಪ್ತ. ಈ ಉಪಗುಪ್ತ ಒಂದು ರೀತಿ ವಿಶೇಷವಾದವನು – ಇವನು ಅಗ್ನಿದೇವತೆಯ ಪಾರ್ಶ್ವಿಕ ವಿಸ್ತರಣೆಯಾದವನು.

ಉಪಗುಪ್ತನ ಮಗ ವಸ್ಪನಂತ. ವಸ್ಪನಂತನ ಮಗ ಯುಯುಧ, ಯುಯುಧನ ಮಗ ಸುಭಾಷಣ. ಇವನ ಮಗ ಶ್ರುತ. ಶ್ರುತನ ಪುತ್ರ ಜಯ. ಜಯನಿಂದ ವಿಜಯ. ವಿಜಯನಿಂದ ಋತ ಹುಟ್ಟಿದನು.

ಶುನಕ ಋತನ ಮಗ, ವೀತಹವ್ಯ ಶುನಕನ ಮಗ, ಅವನ ಮಗ ಧೃತಿ. ಧೃತಿಯ ಮಗ ಬಹುಲಾಶ್ವ, ಬಹುಲಾಶ್ವನ ಮಗ ಕೃತಿ. ಕೃತಿಯ ಮಗ ಮಹಾವಶೀ.

ಪರೀಕ್ಷಿತ ರಾಜನಿಗೆ ಈ ಕಥೆ, ವಂಶಾವಳಿಯನ್ನು ಹೇಳಿ ಮುಗಿಸಿದಾಗ ಶುಕಮುನಿಗಳು ಮರೆಯದೇ ಒಂದು ಮಾತು ಹೇಳುತ್ತಾರೆ. ಈ ವಂಶಾವಳಿಯ ಎಲ್ಲ ರಾಜರಿಗೂ ಒಂದು ಗೌರವದ, ಮೆಚ್ಚುಗೆಯ ಮಾತನ್ನಾಡುತ್ತಾರೆ : ಮಿಥಿಲಾವಂಶಜರಾದ ಎಲ್ಲ ದೊರೆಗಳೂ ತಮ್ಮ ಆಧ್ಯಾತ್ಮಿಕ ಅನನ್ಯತೆಯ ಸಂಪೂರ್ಣ ಅರಿವನ್ನು ಹೊಂದಿದ್ದರು. ಆದ್ದರಿಂದ ಅವರು ಗೃಹಸ್ಥಾಶ್ರಮದಲ್ಲಿದ್ದರೂ ಐಹಿಕ ಅಸ್ತಿತ್ವದ ದ್ವಂದ್ವಗಳಿಂದ ಮುಕ್ತರಾಗಿದ್ದರು ಎಂದು ಹೇಳುತ್ತಾರೆ. ಹೀಗೆ ಹೇಳಿ, ಮಿಥಿಲಾವಂಶ ಪ್ರಜೆಗಳಿಗೆ ಧಾರ್ಮಿಕವಾದ ಅತ್ಯುನ್ನತ ಆಡಳಿತವನ್ನು ನೀಡಿತು ಎಂದು ಹೇಳಿಬಿಡುತ್ತಾರೆ. ಬಹುಶಃ ಉತ್ತಮ ನಡವಳಿಕೆ, ದೈವಭಕ್ತಿ, ಪ್ರಜಾವಾತ್ಸಲ್ಯ, ಯಾಗಯಜ್ಞಗಳು ಮೊದಲಾದ ಕಾರಣಗಳಿಂದಲೇ ಮಿಥಿಲಾಪ್ರಭುಗಳು ಶಾಂತ ಸರಳ ರಾಜ್ಯಾಡಳಿತ ನಡೆಸಿದರು.

ದ್ವೈತೆ ಭಧ್ರಾ ಭಧ್ರ ಜ್ಞಾನ ಸಭಾ ಮನೋಧರ್ಮ

ಏ ಬಾಲ, ಏ ಮಂದ-ಏ ಸಬ ಭ್ರಮ

ಚೈತನ್ಯ ಚರಿತಾಮೃತದಲ್ಲಿ ಬರುವ ಈ ಶ್ಲೋಕದ ತಾತ್ಪರ್ಯ ಏನೆಂದರೆ; `ಐಹಿಕ ಜಗತ್ತಿನಲ್ಲಿ ಒಳ್ಳೆಯದು, ಕೆಟ್ಟದ್ದು ಎನ್ನಲಾದುದೆಲ್ಲವೂ ಒಂದೇ. ಆದ್ದರಿಂದ ಈ ಪ್ರಪಂಚದಲ್ಲಿ ಒಳ್ಳೆಯದು, ಕೆಟ್ಟದ್ದು, ಸುಖಸಂತೋಷ ಮತ್ತು ಕಷ್ಟ ಕ್ಲೇಶಗಳು ಇವುಗಳಲ್ಲಿ ಭೇದ ಎಣಿಸುವುದು ಅರ್ಥಹೀನ. ಏಕೆಂದರೆ ಇವೆರಡೂ ಮನೋಧರ್ಮಗಳು. ಬದುಕಿನಲ್ಲಿ ಇರುವುದೆಲ್ಲವೂ ಸಂಕಟಕರವಾದದ್ದು ಮತ್ತು ತ್ರಾಸದಾಯಕವಾದದ್ದು. ಕೃತಕ ವಾತಾವರಣವೊಂದನ್ನು ಸೃಷ್ಟಿಸಿ ತಾನು ಸುಖಸಂತೋಷಪೂರ್ಣನೆಂದು ನಟಿಸುವುದು ಕೇವಲ ಭ್ರಮೆ. ತ್ರಿವಿಧ ಐಹಿಕ ಗುಣಗಳ ಪ್ರಭಾವವನ್ನು ಮೀರಿ ನಿಂತ ಮುಕ್ತಾತ್ಮನು ಎಲ್ಲ ಸಂದರ್ಭಗಳಲ್ಲೂ ಈ ದ್ವಂದ್ವಗಳಿಂದ ನಿರ್ಬಾತನು. ಅವನು ಸುಖಸಂತೋಷ ಮತ್ತು ಕಷ್ಟಕ್ಲೇಶಗಳನ್ನು ಸಹಿಸಿಕೊಳ್ಳುತ್ತಾನೆ. ದೇಹವು ಮೊದಲಿನಿಂದಲೇ ಮೃತವಾಗಿದೆ. ಏಕೆಂದರೆ ಅದೊಂದು ಭೌತದ್ರವ್ಯ. ಅದಕ್ಕೆ ಸುಖಸಂತೋಷ, ಕಷ್ಟ ಕ್ಲೇಶಗಳ ಭಾವನೆ ಇಲ್ಲ!’ ಆದರೆ ಕೃಷ್ಣನು ಸಚ್ಚಿದಾನಂದ ವಿಗ್ರಹ ಸಮನಾದ್ದರಿಂದ ಮತ್ತು ಆತ್ಮವು ಅವನ ವಿಭಿನ್ನಾಂಶವೇ ಆದ್ದರಿಂದ ಆತ್ಮನೂ ಸಹ ಸಚ್ಚಿದಾನಂದ ಸ್ವರೂಪವನ್ನು ಪಡೆದಿರುತ್ತಾನೆ.  ಅವನು  ಐಹಿಕ ದೇಹದ ಜೊತೆ ಗುರುತಿಸಿಕೊಂಡಿರುವುದರಿಂದ ಕ್ಲೇಶಗಳನ್ನು ಅನುಭವಿಸುತ್ತಾನೆ.

ಈ ಲೇಖನ ಶೇರ್ ಮಾಡಿ