ಇರುಳ್ಗನಸು – ಹಗಲ್ಗನಸು

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ವಿಶ್ವವಿದ್ಯಾಲಯ ವಿದ್ಯಾರ್ಥಿಯ ನಡುವೆ 1974ರ ಜನವರಿಯಲ್ಲಿ ಲಾಸ್‌ಏಂಜಲೀಸ್‌ನಲ್ಲಿ ನಡೆದ ಸಂವಾದ.

ವಿದ್ಯಾರ್ಥಿ: ಜಗತ್ತು ಒಂದು ಕನಸಿನಂತೆ ಎಂದು ತಾವು ತಮ್ಮ ಪುಸ್ತಕದಲ್ಲಿ ತಿಳಿಸಿದ್ದೀರಿ.

ಶ್ರೀಲ ಪ್ರಭುಪಾದ: ಹೌದು ಅದೊಂದು ಕನಸು.

ವಿದ್ಯಾರ್ಥಿ: ಅದು ಹೇಗೆ ಕನಸಾಗುತ್ತೆ?

ಶ್ರೀಲ ಪ್ರಭುಪಾದ:  ಉದಾಹರಣೆಗೆ, ನಿನ್ನೆ ರಾತ್ರಿ ನೀನೊಂದು ಕನಸು ಕಂಡೆ. ಈಗ ಅದಕ್ಕೆ ಬೆಲೆಯಿಲ್ಲ. ಅದು ಕಳೆಯಿತು. ಮತ್ತೆ ಇವತ್ತು ರಾತ್ರಿ ನೀನು ನಿದ್ರೆ ಹೋದಾಗ ಈ ಎಲ್ಲವನ್ನು ಮರೆತು ಕನಸು ಕಾಣುತ್ತೀಯ. ಇಂದು ರಾತ್ರಿ ನೀನು ಕನಸು ಕಾಣುತ್ತಿರುವಾಗ ನಿನಗೆ ನೆನಪಿರುವುದಿಲ್ಲ – “ನನಗೊಂದು ಮನೆಯಿದೆ; ನನಗೊಬ್ಬಳು ಮಡದಿ ಇದ್ದಾಳೆ.” ಎಲ್ಲವನ್ನೂ ಮರೆಯುತ್ತೀಯ. ಹಾಗಾಗಿ ಎಲ್ಲವೂ ಕನಸೆ.

ವಿದ್ಯಾರ್ಥಿ: ಅದು ನಿಜವೆ, ಅಥವಾ ಅಲ್ಲವೆ?

ಶ್ರೀಲ ಪ್ರಭುಪಾದ:  ಅದು  ಹೇಗೆ ನಿಜವಾಗುತ್ತೆ, ರಾತ್ರಿ ಮರೆಯುತ್ತೀಯೆ. ನೀನು ನಿದ್ರೆ ಹೋಗುವಾಗ, ನಿನಗೊಬ್ಬಳು ಮಡದಿ ಇದ್ದಾಳೆಂಬುದು, ನೀನು ಹಾಸಿಗೆಯ ಮೇಲೆ ಮಲಗಿರುತ್ತೀಯ ಎಂಬುದು ನೆನಪಿರುತ್ತದೆಯೇ? ನೀನು ಮೂರು ಸಾವಿರ ಮೈಲುಗಳ ದೂರ ಹೋಗಿರುತ್ತೀಯೆ. ಕನಸಿನಲ್ಲಿ  ಭಿನ್ನವಾದುದನ್ನು ಕಾಣುತ್ತೀಯೆ, ನಿನಗೊಂದು ವಾಸಸ್ಥಳ ಇದೆ ಎಂಬುದನ್ನು ನೆನಪಿನಲ್ಲಿಡುತ್ತೀಯೋ?

ವಿದ್ಯಾರ್ಥಿ: ಇಲ್ಲ.

ಶ್ರೀಲ ಪ್ರಭುಪಾದ:  ಆದುದರಿಂದ ಇದು ಕನಸು. ಇಂದು ರಾತ್ರಿ ಈಗ ನೀನು ಕಾಣುತ್ತಿರುವುದೆಲ್ಲ ಕನಸಾಗುತ್ತದೆ; ನಿನ್ನೆ ರಾತ್ರಿ ಕಂಡಂತೆಯೇ – ಈಗ ಅದೆಲ್ಲವೂ ಕೇವಲ ಕನಸೆಂದು ನಿನಗೆ ತಿಳಿದಿದೆ. ಆದುದರಿಂದ ಎರಡೂ ಕನಸುಗಳೆ. ನೀನೊಬ್ಬ ಆಗಂತುಕ ಅಷ್ಟೆ . ಈ ಕನಸು, ಆ ಕನಸು ಅಂತ ಬರೆ ಕನಸನ್ನೆ ಕಾಣುತ್ತೀಯೆ. ನೀನು ಎಂದರೆ ಆತ್ಮ, ಅದು ವಾಸ್ತವ. ನಿನ್ನ ಭೌತಿಕ ಶರೀರ ಮತ್ತು ಭೌತಿಕ ಪರಿಸರ ಎಲ್ಲವೂ ಕನಸು.

ವಿದ್ಯಾರ್ಥಿ: ಆದರೆ, ನನ್ನ ಭಾವನೆ ಏನೆಂದರೆ, ನನ್ನ ಈ ಅನುಭವ ಸತ್ಯ; ಕನಸು ಮಿಥ್ಯ – ವ್ಯತ್ಯಾಸವೇನು?

ಶ್ರೀಲ ಪ್ರಭುಪಾದ:  – ಇಲ್ಲ. ಈ ಅನುಭವವೆಲ್ಲ ಅಸತ್ಯ – ಅದು ಹೇಗೆ ಸತ್ಯವಾಗಲು ಸಾಧ್ಯ. ಅದು ಸತ್ಯವಾಗಿದ್ದರೆ, ನೀನು ಅದನ್ನು ರಾತ್ರಿ ಹೇಗೆ ಮರೆಯಲು ಸಾಧ್ಯ. ಅದು ಸತ್ಯವಾಗಿದ್ದರೆ, ಅದನ್ನು ಮರೆಯಲು ಹೇಗೆ ಸಾಧ್ಯ. ರಾತ್ರಿ ಇದೆಲ್ಲ ನಿನಗೆ ನೆನಪಿರುತ್ತದೆ.

ವಿದ್ಯಾರ್ಥಿ:  ಇಲ್ಲ. ನೆನಪಿರುವುದಿಲ್ಲ.

ಶ್ರೀಲ ಪ್ರಭುಪಾದ:   – ಅದು ಹೇಗೆ ಸತ್ಯ? ನೀನು ನಿನ್ನೆ ರಾತ್ರಿ ಕಂಡ ಕನಸನ್ನು ಹೇಗೆ ನೆನಪಿನಲ್ಲಿ ಇಟ್ಟುಕೊಳ್ಳಲಾರೆಯೋ ಅಂತೆಯೇ ಅದನ್ನು ಹೇಗೆ ಕನಸೆಂದು ಕರೆಯುತ್ತೀಯೋ, ಅದೇ ರೀತಿ ಈ ಅನುಭವ – ನೀನು ರಾತ್ರಿ ಮರೆಯುವ ಕಾರಣದಿಂದ ಇದೂ ಕನಸೆ.

ವಿದ್ಯಾರ್ಥಿ: ಆದರೆ, ನನ್ನ ಭಾವ…..

ಶ್ರೀಲ ಪ್ರಭುಪಾದ:  ಇದು ಹಗಲುಕನಸು. ಅದು ಇರುಳ್ಗನಸು; ಅಷ್ಟೆ. ನೀನು ರಾತ್ರಿ ಕನಸು ಕಾಣುವಾಗ ಅದು ನಿಜವೆಂದುಕೊಳ್ಳುತ್ತೀ. ಹೌದು; ಅದು ನಿಜ ಎನಿಸುತ್ತೆ. ಅದು ಕನಸು. ಆದರೆ ನೀನು ಕೂಗಾಡುತ್ತೀಯೆ – ಹುಲಿ! ಹುಲಿ!! ಹುಲಿ!!!’ ಎಲ್ಲಿ ಹುಲಿ? ಆದರೆ ನೀನು ಅದನ್ನು ವಾಸ್ತವವೆಂದು ಭಾವಿಸುತ್ತೀಯೆ- ಅದು ಹುಲಿ. “ಹುಲಿ ನನ್ನನ್ನು ಕೊಲ್ಲಲಿಕ್ಕೆ ಬರ್ತಿದೆ” ಆದರೆ ಹುಲಿ ಎಲ್ಲಿ? ಅಥವಾ ನೀನೊಬ್ಬಳು ಸುಂದರಿಯನ್ನು ಆಲಿಂಗಿಸುತ್ತೀಯೆ. ಎಲ್ಲಿ ಆ ಸುಂದರ ಹುಡುಗಿ? ಆದರೆ ವಸ್ತುಶಃ ಅದು ನಡೆಯುತ್ತಿದೆ.

ವಿದ್ಯಾರ್ಥಿ: ಅದು ಸಂಭವಿಸುತ್ತಿದೆಯೇ?

ಶ್ರೀಲ ಪ್ರಭುಪಾದ:  ಒಂದು ಅರ್ಥದಲ್ಲಿ ಅದು ಸಂಭವಿಸುತ್ತಿದೆ. ಏಕೆಂದರೆ, ನಿನಗೆ ವೀರ್ಯಸ್ಖಲನವಾಗುತ್ತಿದೆ. ಸ್ವಪ್ನಸ್ಖಲನ. ಆದರೆ ಆ ಹುಡುಗಿ ಎಲ್ಲಿ? ಅದು ಕನಸಲ್ಲವೆ? ಆದರೆ ಅದರಂತೆ ಜೀವನಾನುಭವ ಅಂತ ಅಂದುಕೊಳ್ಳುವುದೆಲ್ಲವೂ ಕನಸೆ. ನೀನು ವಾಸ್ತವದ ಚಿತ್ರಬಿಂಬವನ್ನು ಕಾಣುತ್ತೀಯೆ. ಆದರೆ ಅದು ಕನಸು. ಆದುದರಿಂದ ಅದಕ್ಕೆ `ಮಾಯಾಸುಖಾಯ’ಎಂದು ಹೆಸರು. ಭ್ರಮಾತ್ಮಕ ಸುಖ. ನಿನ್ನ ಇರುಳಿನ ಮತ್ತು ಹಗಲಿನ ಸುಖ ಎರಡೂ ಒಂದೆ. ರಾತ್ರಿ ಒಬ್ಬಳು ಸುಂದರ ಹುಡುಗಿಯನ್ನು ಆಲಿಂಗಿಸಿದಂತೆ ಕನಸು ಕಾಣುತ್ತೀಯೆ. ಆದರೆ ನಿಜವಾಗಿ ಅದಾವುದೂ ಇಲ್ಲ. ಹಾಗೆಯೇ ಹಗಲಿನಲ್ಲಿ ನೀನೇನೆ ಮುನ್ನಡೆ ಪಡೆದಿದ್ದರೂ ಎಲ್ಲವೂ ಭ್ರಮೆಯೇ; `ಮಾಯಾಸುಖಾಯ’. ನೀನು ಕನಸು ಕಾಣುತ್ತಿದ್ದೀಯೆ. `ಈ ಪ್ರಕ್ರಿಯೆಯಿಂದ ನಾನು ಸುಖವಾಗಿರಬಲ್ಲೆ’, ಅಥವಾ `ಆ ಪ್ರಕ್ರಿಯೆಯಿಂದ ನಾನು ಸುಖವಾಗಿರಬಲ್ಲೆ’, ಇಡೀ ಪ್ರಕ್ರಿಯೆ ಒಂದು – ಕನಸೆ. ಹಗಲುಕನಸಿನ ಅವಧಿ ದೀರ್ಘವಾದುದು. ಹಾಗಾಗಿ ಅದು ನಿಜ ಎಂಬ ಭಾವನೆ ನಿನಗೆ. ರಾತ್ರಿಯ ಕನಸಿನ ಅವಧಿ ಕೇವಲ ಅರ್ಧತಾಸು. ಆದರೆ ಈ ಹಗಲುಕನಸನ್ನು ಹನ್ನೆರಡು ತಾಸುಗಳವರೆಗೆ ಅಥವಾ ಅದಕ್ಕಿಂತಲೂ ದೀರ್ಘಕಾಲ ಕಾಣುತ್ತೀಯೆ. ಅದೇ ವ್ಯತ್ಯಾಸ. ಇದು ಹನ್ನೆರಡು ತಾಸುಗಳ ಕನಸು. ಅದು ಅರ್ಧತಾಸಿನ ಕನಸು – ವಾಸ್ತವವಾಗಿ ಎರಡೂ ಕನಸುಗಳೆ. ಒಂದನ್ನು ಹನ್ನೆರಡು ತಾಸುಗಳವರೆಗೆ ಕಾಣುತ್ತೀಯೆ, ಆದುದರಿಂದ ಅದನ್ನು ನಿಜವೆಂದು ಒಪ್ಪಿಕೊಳ್ಳುತ್ತೀಯೆ. ಅದು ಭ್ರಮೆ.

ವಿದ್ಯಾರ್ಥಿ: ಭ್ರಮೆ.

ಶ್ರೀಲ ಪ್ರಭುಪಾದ:  ಹೌದು…. ನೀನು ಪ್ರಾಣಿಗೂ ನಿನಗೂ ಭೇದವನ್ನು ಎಣಿಸುತ್ತಿದ್ದೀಯೆ. ಪ್ರಾಣಿಗಳು ಸಾಯುವಂತೆ ನೀನು ಸಾಯುವೆ ಎಂಬುದನ್ನು ಮರೆತಂತಿದೆ. ಆದುದರಿಂದ ಎಲ್ಲಿ ನಿನ್ನ ಅಭಿವೃದ್ಧಿ? ನೀನು ಶಾಶ್ವತವೆ? ನೀನೂ ಸಾಯುತ್ತೀಯೆ. ಆ ಕಾರಣ ಪ್ರಾಣಿಗಿಂತ ನೀನು ಮುಂದುವರಿದುದು ಹೇಗೆ? ಅದು ವೇದ ಸಾಹಿತ್ಯದಲ್ಲಿ ಉಕ್ತವಾಗಿದೆ: ಆಹಾರ ನಿದ್ರಾ ಭಯ ಮೈಥುನಂ ಚ ಸಮಾನಂ ಏತತ್‌ ಪಶುಭಿರ್ನರಾಣಾಮ್‌ : ಈ ವ್ಯಾಪಾರ ತಿನ್ನುವುದು, ನಿದ್ರಿಸುವುದು, ಲೈಂಗಿಕ ಕ್ರಿಯೆ, ಆತ್ಮರಕ್ಷಣೆ – ಇದು ಪ್ರಾಣಿಯ ವ್ಯಾಪಾರವೂ ಹೌದು; ನೀನೂ ಸಹ ಆ ಕ್ರಿಯೆಯಲ್ಲಿ ಉದ್ಯುಕ್ತನಾಗಿದ್ದೀಯೆ. ಹಾಗಿರುವಾಗ ನೀನು ಪ್ರಾಣಿಗಿಂತ ಹೇಗೆ ಭಿನ್ನ? ನೀನು ಸಾಯುತ್ತೀಯೆ. ಪ್ರಾಣಿಯು ಸಾಯುತ್ತದೆ. ಆದರೆ  `ನಾನು ನೂರು ವರುಷಗಳ – ಅನಂತರ ಸಾಯುತ್ತೇನೆ, ಈ ಇರುವೆ ಒಂದು ಘಂಟೆಯ ಅನಂತರ ಸಾಯುತ್ತದೆ’ ಎಂದರೆ ಅದರರ್ಥ ನೀನು ವಾಸ್ತವದಲ್ಲಿದ್ದೀಯೆ ಎಂದಲ್ಲ; ಅದು ಕೇವಲ ಸಾಪೇಕ್ಷ. ಇಂದಲ್ಲದಿದ್ದರೆ ನಾಳೆ. ಅಥವಾ ಈ ಬ್ರಹ್ಮಾಂಡವನ್ನೇ ತೆಗೆದುಕೊ – ಅದು ಅಳಿದು ಹೋಗುತ್ತದೆ. ನಿನ್ನ ದೇಹದಂತೆಯೇ ಬ್ರಹ್ಮಾಂಡವೂ ನಾಶಹೊಂದುತ್ತದೆ. ಪ್ರಳಯ, ಪ್ರಕೃತಿಲೀನ. ಪ್ರಕೃತಿನಿಯಮ – ಇಡೀ ಬ್ರಹ್ಮಾಂಡವೇ ಅನಂತದಲ್ಲಿ ಕರಗಿಹೋಗುತ್ತದೆ. ಆದುದರಿಂದ ಅದು ಕನಸು. ಅದು ದೀರ್ಘಾವಧಿಯ ಕನಸು – ಅಷ್ಟೆ. ಬೇರೇನೂ ಇಲ್ಲ. ಈ ಮಾನವ ಶರೀರವನ್ನು ಹೊಂದುವುದರಿಂದ ಪ್ರಯೋಜನವೇನೆಂದರೆ, ಈ ಕನಸಿನಲ್ಲಿ ನೀನು ವಾಸ್ತವದ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು – ದೈವಸಾಕ್ಷಾತ್ಕಾರ, ಅದೊಂದು ಸೌಲಭ್ಯವಿದೆ. ಈ ಸೌಲಭ್ಯವನ್ನು ನೀನು ಪಡೆದುಕೊಳ್ಳದಿದ್ದಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತೀಯೆ.

ವಿದ್ಯಾರ್ಥಿ: ಹಾಗಾದರೆ, ನಾನು ಅರೆ ನಿದ್ರಾವಸ್ಥೆಯಲ್ಲಿದ್ದೇನೆಂದೆ ಅರ್ಥ?

ಶ್ರೀಲ ಪ್ರಭುಪಾದ:  ಹೌದು. ಅದು ಪರಿಸ್ಥಿತಿ. ಆದುದರಿಂದ ವೇದಸಾಹಿತ್ಯ ಹೇಳುತ್ತದೆ: ಉತ್ತಿಷ್ಠ “ಏಳು! ಏಳು!! ಏಳು!!!’ ಜಾಗ್ರತ ಎಚ್ಚರಗೊಳ್ಳು! ಪ್ರಾಪ್ಯವರಾನ್‌ ನಿಬೋಧತ – “ಈಗ ನಿನಗೊಂದು ಅವಕಾಶ ದೊರೆತಿದೆ. ಬಳಸಿಕೊ.” ತಮಸಿ ಮಾ ಜ್ಯೋತಿರ್ಗಮಯ “ಕತ್ತಲಲ್ಲಿ ಇರಬೇಡ, ಬೆಳಕಿನತ್ತ ಬಾ”, ಇವು ವೇದದ ಆದೇಶಗಳು. ನಾವಿದನ್ನೆ ಬೋಧಿಸುತ್ತಿದ್ದೇವೆ. ಇಲ್ಲಿ ಕೃಷ್ಣನೆ ವಾಸ್ತವ. ಕತ್ತಲ ಗೂಡಿನಲ್ಲಿ ಇರಬೇಡ. ಉನ್ನತ ಪ್ರಜ್ಞೆಯನ್ನು ಪಡೆದುಕೋ.”

ಈ ಲೇಖನ ಶೇರ್ ಮಾಡಿ

ಹೊಸ ಪೋಸ್ಟ್‌ಗಳು