ದೇವರನ್ನು ನೋಡಲು ಅರ್ಹತೆ

ಪಾಂಡವರು ಭಗವಂತನಾದ ಶ್ರೀಕೃಷ್ಣನನ್ನು ಸದಾ ಸ್ಮರಿಸುತ್ತಿದ್ದರು ಧ್ಯಾನಿಸುತ್ತಿದ್ದರು. ಇದೇ ಮೆಡಿಟೇಷನ್‌. ಶ್ರೀಕೃಷ್ಣನು ಕೂಡ ಪಾಂಡವರ ಭಕ್ತಿಗಾಗಿಯೇ ಸದಾ ಅವರೊಂದಿಗೆ ಆತ್ಮೀಯನಾಗಿದ್ದುಕೊಂಡು ಅವರ ಪ್ರತಿಯೊಂದು ಕೆಲಸಕಾರ್ಯದಲ್ಲಿ ವ್ಯವಹರಿಸಿಕೊಂಡಿದ್ದನು. ನಾವು ಕೂಡ ನಮ್ಮ ಜೀವನದಲ್ಲಿ ಅಭ್ಯಾಸ ಮಾಡಿಕೊಳ್ಳುವುದರ ಮೂಲಕ ಭಕ್ತಿ ಮನೋಭಾವನೆಯುಳ್ಳ ಭಕ್ತರಾದರೆ ಭಗವಂತನನ್ನು ಪಡೆಯುವುದು ಕಷ್ಟದ ಕೆಲಸವೇನೂ ಅಲ್ಲ. ಭಕ್ತಿಯಿಂದ ಮಾತ್ರ ಶ್ರೀಕೃಷ್ಣ ನಮ್ಮ ಜೊತೆ  ಗೆಳೆಯನಾಗಿ, ಮಾರ್ಗದರ್ಶಕನಾಗಿ, ಕೆಲವು ಸಲ ಆಜ್ಞಾಪಾಲಕನಾಗಿ ಇರುತ್ತಾನೆ. ಅರ್ಜುನನ ರಥದ ಸಾರಥಿಯಾಗಿ ಕೆಲಸ ಮಾಡಿರುವುದೇ ಇದಕ್ಕೆ ಉದಾಹರಣೆ.

ಮೂಢರು ಕೇಳುತ್ತಾರೆ – “ನೀವು ದೇವರನ್ನು ನೋಡಿದ್ದೀರಾ”? ಎಂದು.

ಯಾರು ಶ್ರೀಕೃಷ್ಣನಲ್ಲಿ ಭಕ್ತಿಯನ್ನು ಪಡೆದಿರುವ ಸಂತರೋ ಅವರು ಪ್ರತಿಯೊಂದು ಕ್ಷಣವೂ ಕೃಷ್ಣನನ್ನು ಕಾಣುತ್ತಾರೆ. ಈ ಸಂತರು ಕೃಷ್ಣನನ್ನು ಬಿಟ್ಟು ಬೇರೆ ಏನನ್ನೂ ಕಾಣುವುದಿಲ್ಲ. ಭಗವಂತನು ಜಗತ್ತಿನ ಸರ್ವ ಚೇತನಾತ್ಮಕಗಳಲ್ಲಿಯೂ ಅಂದರೆ ಬ್ರಹ್ಮನಂತಹ ಉನ್ನತವಾದ ಜೀವಿಯಿಂದ ಹಿಡಿದು ಸಣ್ಣ ಇರುವೆಯಲ್ಲೂ ಇದ್ದಾನೆ. ಒಂದು ಸಣ್ಣ ಅಣುವಿನ ಕಣ ಕಣದಲ್ಲಿಯೂ ಇದ್ದಾನೆ. ಅವನನ್ನು ಕಾಣಬೇಕಾದರೆ ನಮ್ಮ ಕಣ್ಣುಗಳನ್ನು ಆಧ್ಯಾತ್ಮಿಕವಾಗಿ ಅರ್ಹಮಾಡಿಕೊಳ್ಳಬೇಕು. ನಾವು ಪರಿಶುದ್ಧರಾಗಬೇಕು. ಆದರೆ ನಮ್ಮ ಆಲೋಚನೆಗಳು, ಪ್ರಜ್ಞೆ ಅಷ್ಟೊಂದು ಪರಿಶುದ್ಧವಾಗಿಲ್ಲ. ಈ ಐಹಿಕ ಜೀವನದ ನಾಲ್ಕು ತತ್ತ್ವಗಳಾದ ತಿನ್ನುವುದು, ಮಲಗುವುದು, ಲೈಂಗಿಕ ಜೀವನ ಮತ್ತು ರಕ್ಷಣೆ ಈ ಲೌಕಿಕ ವಿಷಯಗಳಲ್ಲಿಯೇ ನಾವು ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದೇವೆ. ಕೇವಲ ಈ ದೇಹಾಭಿಮಾನದಿಂದ ನಾನು, ನನ್ನದು ಎಂದು ಯೋಚಿಸುತ್ತೇವೆ. ಈ ಒಂದು ತಪ್ಪು ಕಲ್ಪನೆಯಿಂದ ನಾವು ಶುದ್ಧರಾಗಿ ಹೊರಬರಬೇಕು. ನಮ್ಮದು ನಾಯಿ, ಬೆಕ್ಕುಗಳಂತೆ ಸಾಮಾನ್ಯ ಜೀವನವಲ್ಲ, ನಮ್ಮದು ಮಾನವ ಜೀವನ. ನಮಗೊಂದು ಒಳ್ಳೆಯ ಜೀವನವಿದೆ. ನಮ್ಮಲ್ಲಿ ಪ್ರಗತಿಪೂರ್ಣ ಬುದ್ಧಿಮತ್ತೆ ಇದೆ. ನಾವು ಆಧ್ಯಾತ್ಮಿಕ ಜೀವನವನ್ನು ಬೆಳೆಸಿಕೊಂಡರೆ ಈ ಜೀವನದಲ್ಲಿ ಭಗವದ್ಧಾಮಕ್ಕೆ ಮರಳಬಹುದು.

ಈ ದೇಹ ಶಾಶ್ವತವಾದುದಲ್ಲ. ಅದು ಅರಿಷಡ್‌ ವಿಕಾರಗಳಿಗೆ ಒಳಗಾಗಿ ಹಲವು ದಿನಗಳು, ತಿಂಗಳು, ವರ್ಷಗಳು ಇದ್ದು ತಮ್ಮ ಉಪ ಪದಾರ್ಥಗಳನ್ನು ತಯಾರಿಸಿ, ವಿವಿಧ ರೂಪಗಳಲ್ಲಿ ಬದಲಾವಣೆ ಹೊಂದಿ (ಬಾಲ್ಯ, ಯೌವನ, ವೃದ್ಧಾಪ್ಯ) ಒಂದು ದಿನ ಕೃಶವಾಗಿ ಮರಣ ಹೊಂದುತ್ತದೆ. ಈ ದೇಹ ಕಳೆಯುವ ಒಂದೊಂದು ವರ್ಷ, ತಿಂಗಳು ದಿನಗಳು ಅದು ಸಾವಿನಲ್ಲಿ ಪ್ರಗತಿ ಹೊಂದುತ್ತಿದೆಯೆಂದು ಅರ್ಥ. ಮರಣದನಂತರ ಈ ದೇಹ ಬೂದಿ, ಮಣ್ಣು ಅಥವಾ ಹೇಸಿಗೆಯಾಗಿ ಪರಿವರ್ತಿತವಾಗುತ್ತದೆ ಅಷ್ಟೆ.

ಈ ದೇಹದಲ್ಲಿ ಅಸತ್‌ಗಿಂತಲೂ ಭಿನ್ನವಾದ ಸತ್‌ ಎಂಬುದೂ ಇದೆ. ಅದು ಪ್ರಜ್ಞೆ. ಪ್ರಜ್ಞೆ ಎಂಬುದು ಶರೀರದಿಂದ ಹೊರಟುಹೋದರೆ ಅಲ್ಲಿ ಯಾವ ಪ್ರತಿಕ್ರಿಯೆಯೂ ಇರುವುದಿಲ್ಲ. ಮೊದಲು ಆ ಪ್ರಜ್ಞೆಯ ಮೂಲವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಇದೇ ಆಧ್ಯಾತ್ಮಿಕ ಜೀವನದ ಪ್ರಾರಂಭ. ಭಗವದ್ಗೀತೆಯಲ್ಲಿ ಈ ಅಶಾಶ್ವತವಾದ ದೇಹದಲ್ಲಿ ಶಾಶ್ವತವಾದ ಮಾಲೀಕನಿದ್ದಾನೆ ಎಂದು ಹೇಳಲಾಗಿದೆ. ಅದೇ ಕೃಷ್ಣ ಪ್ರಜ್ಞೆ. ನಾವು ಭಗವಂತನಾದ ಶ್ರೀಕೃಷ್ಣನೊಂದಿಗೆ ಸಂಪರ್ಕವಿಟ್ಟುಕೊಂಡರೆ ಪರಿಶುದ್ಧರಾಗುತ್ತೇವೆ. ಈ ಸಂಪರ್ಕವು ಕೃಷ್ಣನ ಬಗ್ಗೆ ಕೇಳುವುದರಿಂದ ಬಹಳ ಸುಲಭವಾಗುತ್ತದೆ. ಯಾರು ಕೃಷ್ಣ ಪ್ರಜ್ಞೆ ತರಗತಿಗೆ ಹಾಜರಾಗುತ್ತಾರೋ ಅವರಿಗೆ ಕೃಷ್ಣನ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ಕೃಷ್ಣನ ಬಗ್ಗೆ ಕೇಳಲು ಆಸಕ್ತಿಯಿದೆ. ಕೃಷ್ಣನ ಬಗ್ಗೆ ಅನೇಕ ಆಧ್ಯಾತ್ಮಿಕ, ಸಾಹಿತ್ಯ ಗ್ರಂಥಗಳಿವೆ. ಅದರಿಂದಲೇ ಭಗವಂತನ ಬಗ್ಗೆ ಅನೇಕ ಮಾಹಿತಿಗಳು ಸಿಗುತ್ತವೆ. ನಾವು ಆಧ್ಯಾತ್ಮಿಕ ಜಗತ್ತಿನ ಸಮಾಚಾರದ ಬಗ್ಗೆ ಆಸಕ್ತಿ ಹೊಂದಿರಬೇಕು. ಯಾರು ಈ ಜೀವನದಲ್ಲಿ ನಾನು ಭಗವದ್ಧಾಮವೆಂಬ ನನ್ನ ಮನೆಗೆ ಪುನಃ ಮರಳಬೇಕು ಎಂದು ಯೋಚಿಸುತ್ತಾನೆಯೇ ಅಂತಹವನು ಕೃಷ್ಣ ಪ್ರಜ್ಞೆ ಪಡೆಯುತ್ತಾನೆ. “ಹರೇ ಕೃಷ್ಣ” ಮಹಾಮಂತ್ರವನ್ನು ಸದಾ ಜಪಿಸಬೇಕು ಇದೇ ಆಂತರಿಕ ಶುದ್ಧಿ. ಪಾಪ ಕರ್ಮಗಳಾದ ಮಾಂಸಾಹಾರ, ಮದ್ಯಸೇವನೆ, ಜೂಜು, ಅನೈತಿಕ ಲೈಂಗಿಕತೆಯಿಂದ ಹೊರಬಂದು ಪರಿಶುದ್ಧರಾಗಿ ಆಧ್ಯಾತ್ಮಿಕ ಜೀವನಕ್ಕೆ ಬರಬೇಕು. ಇಲ್ಲ, ನನಗೇನು ಬೇಕು ಅದನ್ನೇ ಮಾಡಿಕೊಂಡು ಇರುತ್ತೇನೆ ಎಂದು ಯೋಚಿಸಿದರೆ ಜೀವನದಲ್ಲಿ ಬದುಕಿನ ಅನಂತರ ಪುನಃ ಅಲ್ಲಿಯೇ ಹುಟ್ಟಿ ಬರಬೇಕಾಗುತ್ತದೆ.

ಈ ಲೇಖನ ಶೇರ್ ಮಾಡಿ