ಹಿಂದೂ ಧರ್ಮವು ಹಿಂಸೆಯನ್ನು ಪ್ರಚೋದಿಸುತ್ತದೆಯೇ ?

– ಗಾಯತ್ರಿ ದೇವಿ

ಅಹಿಂಸೆಯು ಸನಾತನ ಧರ್ಮದ (ಹಿಂದೂ ಧರ್ಮದ) ಪುರಾತನ ತತ್ತ್ವ. ಸೌಹಾರ್ದತೆ ಅದರ ಮತ್ತೊಂದು ಗುಣ. ಹಿಂದೂಗಳು ಶಾಂತಿಪ್ರಿಯರೆನ್ನುವುದು ಇಡೀ ಜಗತ್ತಿಗೇ ಗೊತ್ತಿದೆ. ಇಷ್ಟಾದರೂ ಸನಾತನ ಧರ್ಮವು ಹಿಂಸೆಯನ್ನು ಪ್ರಚೋದಿಸುತ್ತದೆ ಎನ್ನುವ ಕೂಗು ಕೇಳಿಬರುತ್ತಿದೆ.

ಒಂದಷ್ಟು ಸಾಮಾನ್ಯ ಪ್ರಶ್ನೆಗಳು. ರಾಷ್ಟ್ರದ ಬಜೆಟ್ನಲ್ಲಿ ರಕ್ಷಣಾ ವೆಚ್ಚವನ್ನು ಹೆಚ್ಚಿಸಲಾಗಿದೆ ಎಂದರೆ ಭಾರತವು ಹಿಂಸೆಯನ್ನು ಪ್ರಚೋದಿಸುತ್ತದೆ ಎಂದು ಅರ್ಥವೇ? ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯು ಸೇನೆಯನ್ನು ನಿರ್ವಹಿಸುತ್ತಿದೆ ಎಂದರೆ ಅದು ಯುದ್ಧವನ್ನು, ಹಿಂಸೆಯನ್ನು ಪ್ರಚೋದಿಸುತ್ತಿದೆ ಎಂದು ಅರ್ಥವೇ? ವಾಸ್ತವವಾಗಿ ಈ ಸೇನೆಯನ್ನು ಶಾಂತಿ ಪಾಲನಾ ಪಡೆ ಎನ್ನುತ್ತಾರೆ! ಕೆಲವು ಸಂದರ್ಭಗಳಲ್ಲಿ ಕಾನೂನು ಮತ್ತು ಶಿಸ್ತು ಕಾಪಾಡಲು ಹಿಂಸೆಯನ್ನು ಬಳಸುವುದು ಕ್ರಮಬದ್ಧ. ರಾಷ್ಟ್ರ ರಕ್ಷಣೆಗೆ ಸೇನಾ ಬಲ ಅತ್ಯಗತ್ಯ. ಆದರೆ ದೇಶವೊಂದು ನೆರೆ ರಾಷ್ಟ್ರವನ್ನು ವಶಪಡಿಸಿಕೊಳ್ಳಲು ತನ್ನ ಸೈನ್ಯಬಲವನ್ನು ಹೆಚ್ಚಿಸಿಕೊಂಡರೆ ಅದು ಆಕ್ರಮಣಕಾರಿಯಾಗುತ್ತದೆ. ಉದ್ದೇಶ ಮುಖ್ಯವಾಗುತ್ತದೆ.

ಕುರುಕ್ಷೇತ್ರ ಯುದ್ಧದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಯುದ್ಧ ಮಾಡಬೇಕೆಂದು ನೇರವಾಗಿಯೇ ಹೇಳುತ್ತಾನೆ. ಅದು ಹಿಂಸೆಯ ಪ್ರಚೋದನೆಯಲ್ಲ, ಕರ್ತವ್ಯವನ್ನು ನೆನಪಿಸುವುದು. ಪಾಂಡವರಿಗೆ ನ್ಯಾಯ ದೊರಕಿಸಿಕೊಡಲು ಯುದ್ಧ ಅನಿವಾರ್ಯವಾಗಿತ್ತು. ಸಮರ ಭೂಮಿಯಲ್ಲಿ ನಿಂತು ಹಿಂಸೆ ಬೇಡ ಎಂದರೆ ಮೂರ್ಖತನ. ಇರಲಿ, ಕೃಷ್ಣನು ಅರ್ಜುನನಿಗೆ ಯಾವ ಕರ್ತವ್ಯವನ್ನು ನೆನಪಿಸುತ್ತಾನೆ?

ಅರ್ಜುನ ಒಬ್ಬ ಯೋಧ, ಕ್ಷತ್ರಿಯ. ಯುದ್ಧ ಮಾಡುವುದು ಕ್ಷತ್ರಿಯ ಧರ್ಮ. ಬಂಧುವಿನೊಡನೆ ಅಥವಾ ಮಿತ್ರನೊಡನೆ ಹಾಗೆಯೇ ಯುದ್ಧ ಮಾಡಬೇಕಾಗಿ ಬಂದರೂ ಕ್ಷತ್ರಿಯನು ತನ್ನ ನಿಯತ ಧರ್ಮದಿಂದ ದೂರವಾಗಬಾರದು. “ದಂಡಿನಲ್ಲಿ ಸೋದರಮಾವನೆ?” ಎನ್ನುವ ಗಾದೆಯನ್ನು ಕೇಳಿರಬಹುದು. ಒಳ್ಳೆಯ ಆಡಳಿತಕ್ಕೆ ಅಗತ್ಯವಾದ ವರ್ಗವನ್ನು ಕ್ಷತ್ರಿಯ ಎನ್ನುತ್ತಾರೆ. ಕ್ಷತ್‌‍ ಎಂದರೆ ಗಾಯ, ತ್ರಾಯತೆ ಎಂದರೆ ರಕ್ಷಿಸುವುದು. ಆದುದರಿಂದ ತೊಂದರೆಯಿಂದ ಅಪಾಯದಿಂದ ರಕ್ಷಿಸುವವನು ಕ್ಷತ್ರಿಯ. ಅದು ಯುದ್ಧದಲ್ಲಿಯಾದರೂ ಆಗಬಹುದು, ಸಮಾಜದಲ್ಲಿಯಾದರೂ ಆಗಬಹುದು. ರಕ್ಷಣೆ ಕ್ಷತ್ರಿಯ ಧರ್ಮ. ಧಾರ್ಮಿಕ ಹಿಂಸೆಯು ಕೆಲವೊಮ್ಮೆ ಅಗತ್ಯವಾಗುತ್ತದೆ. ವ್ಯಾಸದೇವರ ತಂದೆಯಾದ ಪರಾಶರರು (ಪರಾಶರ ಸ್ಮೃತಿ) ಹೇಳಿದ್ದಾರೆ,

ಕ್ಷತ್ರಿಯೋ ಹಿ ಪ್ರಜಾ ರಕ್ಷನ್‌‍ ಶಸ್ತ್ರಪಾಣಿಃ ಪ್ರದಣ್ಡಯನ್‌‍ ।

ನಿಜಿತ್ಯ ಪರಸೈನ್ಯಾದಿ ಕ್ಷಿತಿಂ ಧರ್ಮೇಣ ಪಾಲಯೇತ್‌‍ ।।

“ಪ್ರಜೆಗಳನ್ನು ಎಲ್ಲ ಬಗೆಯ ಕಷ್ಟಗಳಿಂದ ರಕ್ಷಿಸುವುದೇ ಕ್ಷತ್ರಿಯ ಧರ್ಮ. ಆದುದರಿಂದ ಅವನು ಶಾಸನ ಮತ್ತು ವ್ಯವಸ್ಥೆಗಳಿಗೆ ಸಂಬಂಧಿಸಿದ ಪ್ರಸಂಗಗಳಲ್ಲಿ ಸೂಕ್ತವಾಗಿ ಹಿಂಸೆಯನ್ನು ಬಳಸಬೇಕು.” ಆದುದರಿಂದ ಕೃಷ್ಣ ಹೇಳುತ್ತಾನೆ, “ಕ್ಷತ್ರಿಯನಾಗಿ ಯುದ್ಧ ಮಾಡು. ಮಡಿದರೆ ವೀರ ಸ್ವರ್ಗ. ಗೆದ್ದರೆ ರಾಜ್ಯ.”

ಹಿಂಸೆ, ಅಹಿಂಸೆ ಮತ್ತು ಸನಾತನ ಧರ್ಮದ ವಿಷಯಕ್ಕೆ ಬರೋಣ. ಒಂದು ಶತಕೋಟಿಗೂ ಹೆಚ್ಚು ಜನರು ಅನುಸರಿಸುತ್ತಿರುವ ಸನಾತನ ಧರ್ಮವು ಜಗತ್‌‍ ಪ್ರಸಿದ್ಧ. ಅದು ಅನನ್ಯ. ಏಕೆಂದರೆ, ಅದರಲ್ಲಿ ಅನೇಕ ಪರಂಪರೆಗಳಿವೆ, ಸಿದ್ಧಾಂತಗಳಿವೆ. ಹಿಂದೂಗಳು ಅನೇಕ ದೇವತೆಗಳನ್ನು ಪೂಜಿಸುತ್ತಾರೆ. ಅನೇಕ ಪವಿತ್ರ ಗ್ರಂಥಗಳನ್ನು ಗೌರವಿಸುತ್ತಾರೆ. ವೈವಿಧ್ಯಮಯವಾದ ಸಂಪ್ರದಾಯ, ಪವಿತ್ರ ದಿನಗಳು ಮತ್ತು ಪದ್ಧತಿಗಳನ್ನು ಅನುಸರಿಸುತ್ತಾರೆ. ಭಾರತವು ಧರ್ಮ ನಿರಪೇಕ್ಷೆಯ ರಾಷ್ಟ್ರ. ಭಾರತದ ಸಂವಿಧಾನದ ಪ್ರಕಾರ ಧರ್ಮ ನಿರಪೇಕ್ಷೆ ಎಂದರೆ ಸರಕಾರವು ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣಬೇಕು ಎಂದು ಅರ್ಥ. ಧರ್ಮವನ್ನೇ ಬಿಟ್ಟುಬಿಡಬೇಕು ಎಂದಲ್ಲ. ಅದನ್ನು ಅನುಸರಿಸುವುದು ಕರ್ತವ್ಯ. ಅದರಲ್ಲಿ ಲೋಪವಾದರೆ ಸಂವಿಧಾನವನ್ನು, ಧರ್ಮವನ್ನು ದೂಷಿಸಬಾರದು, ದುರುಪಯೋಗಪಡಿಸಿಕೊಳ್ಳುವವರನ್ನು ಖಂಡಿಸಬೇಕು.

ಅಹಿಂಸೆ ಎಂದರೆ, ಯಾರೂ ಕೂಡ ಯಾವುದೇ ಜೀವಿಗೆ ನೋವುಂಟು ಮಾಡಬಾರದು. ಅಹಿಂಸೆಯು ಕೇವಲ ಹಿಂಸೆರಹಿತ ಎಂದಲ್ಲ. ಆದರೆ ಯಾವುದೇ ದುರುದ್ದೇಶವಿಲ್ಲದ ಹಿಂಸೆ ಅನಿವಾರ್ಯವೆಂದು ಭಾವಿಸುವುದು.

ಸಾಮಾನ್ಯವಾಗಿ ಹೇಳುವುದಾದರೆ, ಯಾರನ್ನಾದರೂ ಗಾಯಗೊಳಿಸಲು ಅಥವಾ ನಿಂದಿಸಲು ಬಲ ಪ್ರಯೋಗ ಮಾಡಿದರೆ ಅದು ಹಿಂಸೆಯಾಗುತ್ತದೆ. ಆದರೆ ಶಾಂತಿಭಂಗ ಮಾಡುವುದೂ ಹಿಂಸೆ. ಯಾವುದೇ ಚಿಂತನೆ, ಅಪೇಕ್ಷೆ ಅಥವಾ ಮಾತುಗಳಿಂದ ಬೇರೆಯವರಿಗೆ ನೋವುಂಟು ಮಾಡುವುದೂ ಕೂಡ ಹಿಂಸೆ.

ಶ್ರೀಲ ಪ್ರಭುಪಾದರ ಪ್ರಕಾರ, ಸಮಾಜದ ಹಿರಿಯರು, ಮಾರ್ಗದರ್ಶಕರು, ಆಡಳಿತ ವರ್ಗದವರು ಪ್ರಜೆಗಳಿಗೆ ಆಧ್ಯಾತ್ಮಿಕ ಜೀವನದಲ್ಲಿ ಮುನ್ನಡೆಸದಿದ್ದರೆ, ಅವರು ಹಿಂಸೆಯನ್ನೇ ಆಚರಿಸುವರು.

ಆದುದರಿಂದ ಸಮಾಜದಲ್ಲಿ ಶಾಂತಿ, ಸೌಹಾರ್ದ ಬೆಳೆಯಬೇಕೆಂದರೆ, ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಹೇಳಿದ ಉಪದೇಶವನ್ನು ಅನುಷ್ಠಾನಗೊಳಿಸಬೇಕು.

ಭೋಕ್ತಾರಂ ಯಜ್ಞ ತಪಸಾಂ ಸರ್ವ ಲೋಕ ಮಹೇಶ್ವರಂ ।

ಸುಹೃದಂ ಸರ್ವ ಭೂತಾನಾಂ ಜ್ಞಾತ್ವಾ ಮಾಂ ಶಾಂತಿಮೃಚ್ಛತಿ ।।

ದೇವರೇ, ಶ್ರೀ ಕೃಷ್ಣನೇ ಎಲ್ಲರ ಪರಮ ಮಿತ್ರ, ಅವನೇ ಎಲ್ಲದರ ಒಡೆಯ, ಅವನು ಮಾತ್ರ ಎಲ್ಲದರ ಭೋಕ್ತೃ ಎಂದು ನಾವು ಅರಿತುಕೊಂಡು, ಎಲ್ಲ ಕಾರ್ಯವನ್ನೂ ಅವನಿಗೆ ಸಮರ್ಪಿಸಿ, ಅವನ ತೃಪ್ತಿಗಾಗಿ ಮಾಡಿದರೆ ಮಾತ್ರ ಎಲ್ಲರಿಗೂ ಸುಖ ಶಾಂತಿ ನೆಮ್ಮದಿಗಳು ದೊರಕುವುವು. ಇದುವೇ ಸನಾತನ ಧರ್ಮದ ತಿರುಳು. ಹರೇ ಕೃಷ್ಣ ।

ಈ ಲೇಖನ ಶೇರ್ ಮಾಡಿ