ಬಲಿಪಶು ಆಗಬೇಡಿ

ನಿಮ್ಮ ಬುದ್ಧಿಯನ್ನು ಸರಿಯಾಗಿ ಬಳಸಿಕೊಂಡರೆ ನೀವು ಭ್ರಮೆಯ ಶಕ್ತಿಗಳಿಂದ
ಮತ್ತು ಪುನರ್ಜನ್ಮದ ಅಪಾಯದಿಂದ ಪಾರಾಗಬಹುದು.

ಪ್ರತಿ ದಿನ ಸಾವಿರಾರು ಮಾನವ ಜೀವಿಗಳು ಹುಟ್ಟುತ್ತಾರೆ ಮತ್ತು ಪ್ರತಿ ದಿನ ಸಾವಿರಾರು ಜನರು ಸಾಯುತ್ತಾರೆ. ವಾಸ್ತವವಾಗಿ, ಈ ಭೌತಿಕ ಲೋಕವನ್ನು ಹುಟ್ಟು ಸಾವಿನ ವಿಶಾಲ ಸಾಗರವೆಂದು ವರ್ಣಿಸಲಾಗಿದೆ. ಸಾಗರದ ಮೇಲೆ ತೇಲುವ ಸ್ಥಿತಿಯಲ್ಲಿಯೇ ಇರಲು ಯಾರಾದರೂ ಹೋರಾಡುತ್ತಿದ್ದರೆ ಕಾಲ ಕ್ರಮೇಣ ಅವರಿಗೆ ಸೋಲು ಖಚಿತ. ಯಾವುದಾದರೂ ಹಡಗು ಬಂದು ಅವರಿಗೆ ಆಶ್ರಯ ನೀಡಿದರೆ ಮಾತ್ರ ಅವರು ಪಾರಾಗಬಹುದು. ಏಕೆಂದರೆ ಸಾಗರದ ಮಧ್ಯದಲ್ಲಿ ಯಾರೂ ಕೂಡ ಅನಿರ್ದಿಷ್ಟವಾಗಿ ಈಜುವುದು ಸಾಧ್ಯವಿಲ್ಲ.

ಪ್ರಾಣಿಗಳು ಮತ್ತು ಮಾನವ ಜೀವಿಗಳಿಬ್ಬರೂ ಹುಟ್ಟು ಮತ್ತು ಸಾವಿನ ಸಾಗರದಲ್ಲಿ ಹೋರಾಡುತ್ತಿದ್ದಾರೆ. ಅವರ ಕರ್ಮ ಭಿನ್ನವಾಗಿದ್ದರೂ ಅಂತ್ಯದಲ್ಲಿ ಮಾನವ ದೇಹ ಮತ್ತು ಪ್ರಾಣಿ ದೇಹ ಸಮಾನವೇ. ಎರಡೂ ನಾಶವಾಗುತ್ತವೆ. ನಾವು ಹುಟ್ಟಿದ ಮೇಲೆ ಸಾವೂ ನಿಶ್ಚಿತ ಎನ್ನುವುದು ನಮಗೆ ತಿಳಿದಿರಬೇಕು.

ಭೌತಿಕ ಲೋಕದ ಅದ್ಭುತ

ಈ ಅಂಶವು ಮಾನವ ಜೀವಿಯ ಗಮನಕ್ಕೆ ಬರದಿರುವುದಕ್ಕೆ ಏನು ಕಾರಣ? ವೈದಿಕ ಸಾಹಿತ್ಯದಲ್ಲಿ ಎರಡು ಶ್ರೇಷ್ಠ ಆತ್ಮಗಳಾದ ಮಹಾರಾಜ ಯುಧಿಷ್ಠಿರ ಮತ್ತು ಮೃತ್ಯು ದೇವತೆ ಯಮರಾಜನ ನಡುವೆ ನಡೆಯುವ ಸಂವಾದವಿದೆ. ಇಬ್ಬರೂ ವಿದ್ವಾಂಸರಾದ ಅಲೌಕಿಕರು. ಭೌತಿಕ ಲೋಕದಲ್ಲಿ ಜನರ ಸ್ಥಿತಿಗತಿಯ ಬಗೆಗೆ ಅವರು ಚರ್ಚಿಸುತ್ತಿದ್ದರು. ಯಮರಾಜನು ಯುಧಿಷ್ಠಿರನನ್ನು ಕೇಳಿದ, “ಈ ಭೌತಿಕ ಲೋಕದಲ್ಲಿ ಅತ್ಯಂತ ಅದ್ಭುತವಾದುದು ಏನು?” ರಾಜ ಯುಧಿಷ್ಠಿರನು ಉತ್ತರಿಸಿದ, “ಮಾನವನು ತನ್ನ ಸುತ್ತಲಿನ ಎಲ್ಲರನ್ನೂ, ತಂದೆ, ತಾಯಿ, ಮಿತ್ರರು, ಹಿತೈಷಿಗಳು ಮತ್ತು ಪ್ರಾಣಿಗಳೂ ಕೂಡ ಸಾಯುವುದನ್ನು ನೋಡುತ್ತಾನೆ. ಆದರೂ ತಾನು ಸಾಯುವುದಿಲ್ಲವೆಂದು ಅವನು ಯೋಚಿಸುತ್ತಿರುತ್ತಾನೆ. ಅದು ಅದ್ಭುತ.” ಇದನ್ನು ಭ್ರಮೆ ಅಥವಾ ಮಾಯೆ ಎನ್ನುತ್ತಾರೆ. ತನಗೆ ಸಾವಿನಿಂದ ರಕ್ಷಣೆ ಇದೆ ಎಂದು ಮಾನವನು ಯೋಚಿಸುವುದರಿಂದ ಅವನು ತನ್ನ ಅಮೂಲ್ಯ ಜೀವನವನ್ನು ದುರುಪಯೋಗಪಡಿಸಿಕೊಳ್ಳುತ್ತಾನೆ.

ಮಾನವ ಜೀವಿಗೆ ಚೆನ್ನಾಗಿ ಬೆಳೆದ ಬುದ್ಧಿಶಕ್ತಿ ಇರುವುದರಿಂದ ಮಾನವನ ಬದುಕು ಜೀವನದ ಇತರ ರೂಪಗಳಿಗಿಂತ ಭಿನ್ನ. ಸಾಮಾನ್ಯವಾಗಿ ತಿನ್ನುವುದು, ಮಲಗುವುದು, ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಮತ್ತು ರಕ್ಷಿಸಿಕೊಳ್ಳುವುದು – ಇವು ಪ್ರಾಣಿಗಳ ಚಟುವಟಿಕೆ ಕ್ಷೇತ್ರವಾಗಿದೆ. ಮಾನವ ಜೀವಿಗಳೂ ಕೂಡ ತಿನ್ನುತ್ತಾರೆ, ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ ಮತ್ತು ರಕ್ಷಿಸಿಕೊಳ್ಳುತ್ತಾರೆ. ಆದರೆ ಅವರಲ್ಲಿ ಮತ್ತೊಂದು ವಿಶೇಷ ಕರ್ಮವಿದೆ : ಪರಮ ಸತ್ಯನನ್ನು ಅರ್ಥಮಾಡಿಕೊಳ್ಳಲು ತಮ್ಮ ಬೆಳೆದ ಬುದ್ಧಿಯನ್ನು ಉಪಯೋಗಿಸಿಕೊಳ್ಳುವುದು. ವೇದಾಂತ ಸೂತ್ರವು ಮಾನವ ಜೀವನದ ಪ್ರಾಥಮಿಕ ಕರ್ತವ್ಯವನ್ನು ನಮಗೆ ಅರುಹುತ್ತದೆ : ಅಥಾತೋ ಬ್ರಹ್ಮಜಿಜ್ಞಾಸಾ. ಬ್ರಹ್ಮಜಿಜ್ಞಾಸಾ ಎಂದರೆ `ಬ್ರಹ್ಮನ್‌’ ಅಥವಾ ಪರಮ ಸತ್ಯನನ್ನು ಕುರಿತು ವಿಚಾರಿಸುವುದು. ಅಥಾತೋ ಎಂದರೆ `ತತ್‌ಕ್ಷಣ.’ ನಮ್ಮ ಬಳಿ ಈಗ, ನಮ್ಮ ನಿಜವಾದ ಸ್ಥಾನ ಮತ್ತು ಬ್ರಹ್ಮನ್‌ ನೆಲೆಯನ್ನು ಅರ್ಥಮಾಡಿಕೊಳ್ಳುವ ಮಾನವ ಬುದ್ಧಿ ಶಕ್ತಿ ಇದೆ.

ಭಗವದ್ಗೀತೆಯ ಪ್ರಕಾರ, ವ್ಯಕ್ತಿಯು ತಾನು ಧರಿಸುವ ಉಡುಪಿನಿಂದ ಹೇಗೆ ಭಿನ್ನವಾಗಿರುವನೋ ಅದೇ ರೀತಿ ಜೀವಿಗಳು ಲೌಕಿಕ ಶಕ್ತಿಯಿಂದ ಭಿನ್ನವಾಗಿದ್ದಾರೆ. ನಾವು ಭೌತಿಕ ದೇಹವಲ್ಲ ಅಥವಾ ನಮ್ಮ ಅಸ್ತಿತ್ವವು ಭೌತಿಕ ದೇಹದ ಮೇಲೆ ಅವಲಂಬಿತವಾಗಿಲ್ಲ. ನಾವು ಪ್ರತಿಯೊಬ್ಬರೂ ಶುದ್ಧ ಆಧ್ಯಾತ್ಮಿಕ ಆತ್ಮ, ಕೃಷ್ಣ ಅಥವಾ ಭಗವಂತನ ಅಂಗ. ನಮ್ಮ ಅಲ್ಪ ಸ್ವಾತಂತ್ರ್ಯವನ್ನು ದುರುಪಯೋಗಮಾಡಿಕೊಂಡಿರುವುದರಿಂದ ನಾವು ಅವನ ಬಾಹ್ಯ ಶಕ್ತಿ, ಮಾಯೆಯ ನಿಯಂತ್ರಣಕ್ಕೆ ಬಂದಿದ್ದೇವೆ. ಆದುದರಿಂದ ನಾವು ಸತ್ತಾಗ, ನಮ್ಮ ಅಪೇಕ್ಷೆಯ ಗುಣಮಟ್ಟವು ಅನೇಕ ಜೀವ ವಿಧಾನಗಳಲ್ಲಿ ಮತ್ತೊಂದು ದೇಹವನ್ನು ಸ್ವೀಕರಿಸುವಂತೆ ಒತ್ತಾಯಿಸುತ್ತದೆ. ಅದು ಮರ, ಪ್ರಾಣಿ, ಹಕ್ಕಿ, ಕೀಟ, ಸರೀಸೃಪ, ಮಾನವ ಇತ್ಯಾದಿ. ಒಂದಲ್ಲ ಒಂದು ರೀತಿಯಲ್ಲಿ ಲೌಕಿಕವಾಗಿ ಸುಖಿಸಬೇಕೆಂಬ ನಮ್ಮ ಬಯಕೆಯ ಕಾರಣ ತನ್ನ ಭೌತಿಕ ಶಕ್ತಿಯ ಕಾರ್ಯಭಾರದ ಮೂಲಕ ಭಗವಂತನು ಈ ವಿವಿಧ ದೇಹಗಳನ್ನು ನಮಗೆ ನೀಡುತ್ತಾನೆ.

ವಿಶೇಷ ಸದವಕಾಶ

ಅಲೌಕಿಕ ವಿಜ್ಞಾನವನ್ನು ಅರ್ಥಮಾಡಿಕೊಂಡು ಪುನರ್ಜನ್ಮದಿಂದ ಮುಕ್ತರಾಗಲು ಮಾನವ ಜೀವನ ರೂಪವು ಒಂದು ವಿಶೇಷ ಅವಕಾಶವಾಗಿದೆ. ವಾಸ್ತವವಾಗಿ ಆತ್ಮವು ಬದಲಾಗುವುದಿಲ್ಲ. ಆದುದರಿಂದ ನಾವು ನಮ್ಮ ಇಡೀ ಬದುಕಿನಲ್ಲಿ ಬದಲಾವಣೆ ಇಲ್ಲದಿರುವ ಗುರುತನ್ನು ಅನುಭವಿಸುತ್ತೇವೆ. ನಮ್ಮ ಭೌತಿಕ ದೇಹಗಳ ಕಾರಣ ಸತತ ಬದಲಾವಣೆಯನ್ನು ಕಾಣುತ್ತೇವೆ. ತನ್ನ ಲೌಕಿಕ ಅಪೇಕ್ಷೆಯ ಕಾರಣದಿಂದ ಆತ್ಮವು ಲೌಕಿಕ ಸ್ವಭಾವದ ಮೂಲಕ ವಿವಿಧ ರೀತಿಯ ದೇಹಗಳಲ್ಲಿ ದೇಹಾಂತರಗೊಳ್ಳುತ್ತಾನೆ. ಶಾಶ್ವತ ಆತ್ಮವು ಸ್ವಭಾವತಃ ಪರಮಾನಂದ ಮತ್ತು ಜ್ಞಾನದಿಂದ ತುಂಬಿದ್ದರೂ ದೇಹಗಳು ಈ ಲೋಕದಲ್ಲಿ ವಿಧ ವಿಧವಾದ ಸುಖ ಮತ್ತು ಸಂಕಟಕ್ಕೆ ಕಾರಣವಾಗುತ್ತವೆ.

ಎಷ್ಟೇ ನಿಕೃಷ್ಟವಾಗಿದ್ದರೂ ಲೌಕಿಕ ಪ್ರಕೃತಿಯು ನ್ಯಾಯವಾಗಿಯೇ ಇದೆ. ಯಾರಾದರೂ ತಿನ್ನುವುದು, ಮಲಗುವುದು, ಲೈಂಗಿಕ ಸುಖ ಅನುಭವಿಸುವುದು ಮತ್ತು ರಕ್ಷಿಸಿಕೊಳ್ಳಲು ಮಾತ್ರ ಬಯಸಿದರೆ ಪ್ರಕೃತಿಯು ಅವರಿಗೆ ಅದಕ್ಕೆ ಸೂಕ್ತವಾದ ದೇಹಗಳನ್ನು ನೀಡುತ್ತದೆ. ತಿನ್ನುವುದು, ಮಲಗುವುದು, ಲೈಂಗಿಕ ಸುಖ ಅನುಭವಿಸುವುದು ಮತ್ತು ರಕ್ಷಿಸಿಕೊಳ್ಳುವುದು ಮಾನವ ಜೀವನದಲ್ಲಿ ಇದ್ದರೂ, ಕೆಳ ವರ್ಗದ ಪ್ರಾಣಿಗಳು ಅಂತಹ ಚಟುವಟಿಕೆಗಳಲ್ಲಿ ಹೆಚ್ಚು ನಿಪುಣವಾಗಿರುತ್ತವೆ. ನಾಗರಿಕ ಮಾನವನ ಸಂಕೀರ್ಣ ವ್ಯವಸ್ಥೆಗೆ ಹೋಲಿಸಿದರೆ, ಪ್ರಾಣಿಗಳು ಹೇಗೆ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತವೆ ಎನ್ನುವುದನ್ನು ಪರಶೀಲಿಸಿ ನೋಡಿ. ದುರದೃಷ್ಟವೆಂದರೆ, ಈ ತಿನ್ನುವುದು, ಮಲಗುವುದು, ಲೈಂಗಿಕ ಸುಖ ಅನುಭವಿಸುವುದು ಮತ್ತು ರಕ್ಷಿಸಿಕೊಳ್ಳುವ ವ್ಯವಹಾರದ ಆಚೆಗೆ ಏನೂ ಇಲ್ಲ ಎಂದು ಅನೇಕ ಜನರು ಯೋಚಿಸುತ್ತಾರೆ. ಅವರಿಗೆ ಆತ್ಮವನ್ನು ಒಪ್ಪಿಕೊಳ್ಳಲು ಇಷ್ಟವಿಲ್ಲ. ಏಕೆಂದರೆ, ಅವರ ಎಲ್ಲ ಅಸಹ್ಯ  ಕರ್ಮಗಳಿಗೆ ಆತ್ಮವು ಹೊರಬೇಕಾದ ವೈಯಕ್ತಿಕ ಜವಾಬ್ದಾರಿಯ ಭಯ ಅವರಿಗಿದೆ. ಅಂತಹ ಮಾನವ ಜೀವಿ ಎಂದು ಕರೆಸಿಕೊಳ್ಳುವವರು ವಾಸ್ತವವಾಗಿ ಪ್ರಾಣಿಗಳಿಗಿಂತ ಉತ್ತಮರಲ್ಲ. ವಾಸ್ತವವಾಗಿ ಅವರು ಮುಂದಿನ ಜನ್ಮದಲ್ಲಿ ಪ್ರಾಣಿಗಳಾಗುವ ಅಪಾಯವನ್ನು ತೆಗೆದುಕೊಳ್ಳುತ್ತಿದ್ದಾರೆ.

ಶ್ರೇಷ್ಠ ಸಂತರು ಮಾನವ ಜೀವನವನ್ನು ಬೃಹತ್‌ ಸಿರಿ ಸಂಪತ್ತಿಗೆ ಹೋಲಿಸಿದ್ದಾರೆ. ಈ ಮಾನವ ಜೀವನವನ್ನು ಅದರ ಶಕ್ತಿಯ ಅಪವ್ಯಯ ಅಥವಾ ಶೇಖರಣೆ ಮಾಡದೆ ಹೇಗೆ ನಡೆಸಿಕೊಂಡು ಹೋಗಬೇಕು ಎನ್ನುವುದನ್ನು ತಿಳಿದಿರಬೇಕು. ಬೃಹದಾರಣ್ಯಕ ಉಪನಿಷತ್‌ ಪ್ರಕಾರ, ವ್ಯಕ್ತಿಯು ಪರಮ ಸತ್ಯನ ಬಗೆಗೆ ಸಾಕಷ್ಟು ವಿಚಾರಿಸದೆ ಬೆಕ್ಕು ಅಥವಾ ನಾಯಿಯಂತೆ ದೇಹ ತ್ಯಜಿಸಿದರೆ, ಅವರನ್ನು ಕೃಪಣ ಎಂದು ಪರಿಗಣಿಸಲಾಗುತ್ತದೆ. ಆದುದರಿಂದ ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸದಸ್ಯರು ಮಾನವ ಜೀವನದ ದೊಡ್ಡ ವರವನ್ನು ಕುರಿತು ಜನರಿಗೆ ಅರಿವು ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ. ಪ್ರಾಮಾಣಿಕರಾಗಿದ್ದರೆ, ವ್ಯಕ್ತಿಯು ತನ್ನ ಶಾಶ್ವತವಾದ ಆನಂದಕರ ಪ್ರಜ್ಞೆಯನ್ನು ಪುನರ್‌ ಸ್ಥಾಪಿಸುಸುವ ಅತ್ಯುನ್ನತ ಫಲವನ್ನು ಪಡೆಯಲು ಇದನ್ನು ಬಳಸಬಹುದು. ಮತ್ತು ಈ ಸಂಕಟಮಯ ಭೌತಿಕ ಲೋಕದಲ್ಲಿ ಹುಟ್ಟು ಸಾವಿನ ಚಕ್ರದಿಂದ ಪಾರಾಗಬಹುದು.

ಶುದ್ಧ ನೀರು, ಶುದ್ಧ ಪ್ರಜ್ಞೆ

ಮೋಡದಿಂದ ಬೀಳುವಾಗ ಮೂಲತಃ ನೀರು ಶುದ್ಧವಾಗಿರುವಂತೆ ಜೀವಿಯ ಪ್ರಜ್ಞೆಯು ಮೂಲತಃ ಶುದ್ಧ. ಆದರೆ ನೀರು ಭೂಮಿಯ ಮೇಲೆ ಬಿದ್ದಾಗ ಪರಿಣಾಮ ಕೆಸರು. ಆದುದರಿಂದ ನಮ್ಮ ಮೂಲವಾದ ಶುದ್ಧ ಪ್ರಜ್ಞೆಯು ಲೌಕಿಕ ಪ್ರಕೃತಿಯ ಸಂಪರ್ಕದಿಂದ ಕಲುಷಿತಗೊಂಡಿದೆ. ಆದರೂ ಶುದ್ಧೀಕರಣ ವಿಧಾನದಿಂದ ಕೆಸರಿನಿಂದ ಶುದ್ಧ ನೀರನ್ನು ತೆಗೆಯುವಂತೆ ನಮ್ಮ ಮೂಲ ಶುದ್ಧ ಪ್ರಜ್ಞೆಯನ್ನು ಈ ಮಂತ್ರವನ್ನು ಜಪಿಸುವ ಮೂಲಕ ಪುನರ್‌ ಸ್ಥಾಪಿಸಿಕೊಳ್ಳಬಹುದು :

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ।
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

ಈ ವಿಷಯಗಳನ್ನು ಚರ್ಚಿಸಲು ಆಸಕ್ತಿ ಉಳ್ಳವರು ಜಗತ್ತಿನಾದ್ಯಂತ ಇರುವ ಯಾವುದಾದರೂ ಇಸ್ಕಾನ್‌ ಕೇಂದ್ರಗಳಿಗೆ ಬರಬೇಕೆಂದು ಮತ್ತು ಆತ್ಮ ಶುದ್ಧೀಕರಣಕ್ಕಾಗಿ ಭಗವಂತನ ಪವಿತ್ರ ನಾಮಗಳನ್ನು ಜಪಿಸಬೇಕೆಂದು ನಾವು ಆಹ್ವಾನಿಸುತ್ತೇವೆ.

ಈ ಲೇಖನ ಶೇರ್ ಮಾಡಿ