ನುಗ್ಗೇಕಾಯಿಯಲ್ಲಿ ಅಮೂಲ್ಯವಾದ ಖನಿಜಗಳು ಮತ್ತು ಅಗತ್ಯ ಪ್ರೋಟೀನುಗಳು ಹೇರಳವಾಗಿ ಇವೆ. ಹೀಗಾಗಿ ಇದನ್ನು ಆರೋಗ್ಯಕರ ಆಹಾರವಾಗಿ ಬಳಸಬಹುದು. ಸಾಂಬಾರ್‌ನಲ್ಲಿ ನುಗ್ಗೇಕಾಯಿ ಅಗತ್ಯವಾದ ತರಕಾರಿಯಾಗಿದ್ದು, ಈ ಹಸಿರು ತರಕಾರಿಯ ಆರೋಗ್ಯ ಲಾಭಗಳನ್ನು ಅನೇಕ ರೀತಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಇತರ ತರಕಾರಿಗಳ ಜೊತೆ ಬೇಯಿಸಿ, ದಾಲ್ ಜೊತೆ ಸೇರಿಸಿ ಅಥವಾ ಸೂಪ್ ರೂಪದಲ್ಲಿ ನುಗ್ಗೇಕಾಯಿಯನ್ನು ಬಳಸಿ ಆರೋಗ್ಯ ಲಾಭ ಪಡೆದುಕೊಳ್ಳಿ. ಅತ್ಯಧಿಕ ಪ್ರಮಾಣದಲ್ಲಿ ಪೌಷ್ಟಿಕಾಂಶಗಳನ್ನು ಹೊಂದಿರುವ ನುಗ್ಗೇಕಾಯಿ ಸ್ವಾಭಾವಿಕವಾಗಿಯೇ ರುಚಿಕರವಾಗಿದೆ. ಈ ಎಲ್ಲವನ್ನು ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ನುಗ್ಗೇಕಾಯಿ ಮಸಾಲ
ಬೇಕಾಗುವ ಸಾಮಗ್ರಿಗಳು :
ನುಗ್ಗೇಕಾಯಿ ಕಾಯಿ – 5
ಟೊಮೊಟೊ – 2
ಶುಂಠಿ – 1/2 ಇಂಚು
ಜೀರಿಗೆ – 1 ಚಮಚ
ಕೆಂಪು ಮೆಣಸಿನಕಾಯಿ ಪುಡಿ – 2 ಚಮಚ
ಗರಂ ಮಸಾಲ – 1/2 ಚಮಚ
ಅರಿಶಿನ – 1/4 ಚಮಚ
ಇಂಗು – 1 ಚಿಟಿಕೆ
ಎಣ್ಣೆ – 2 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ
ಮಾಡುವ ವಿಧಾನ : ನುಗ್ಗೇಕಾಯಿಯನ್ನು ತೊಳೆದು ಸಿಪ್ಪೆ ತೆಗೆದು 2 ಇಂಚು ಉದ್ದದ ಚೂರಾಗಿ ಕತ್ತರಿಸಿ. ಟೊಮ್ಯಾಟೊ ಮತ್ತು ಶುಂಠಿಗೆ ನೀರು ಹಾಕದೆ ರುಬ್ಬಿ ಪೇಸ್ಟ್ ಮಾಡಿ. ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಕಾದ ಎಣ್ಣೆಗೆ ಜೀರಿಗೆ ಹಾಕಿ. ನಂತರ ರುಬ್ಬಿದ ಟೊಮೊಟೊ ಪೇಸ್ಟ್ ಹಾಕಿ ಬೇಯಿಸಿ. ಬೆಂದ ಅನಂತರ ಕೆಂಪು ಮೆಣಸಿನಕಾಯಿ ಪುಡಿ, ಅರಿಶಿನ, ಇಂಗನ್ನು ಹಾಕಿ ಕೈಯಾಡಿಸುತ್ತಿರಿ. ಎಣ್ಣೆ ಬಿಡುವವವರೆಗೂ ಬೇಯಿಸಿ ಅನಂತರ ಹೆಚ್ಚಿದ ನುಗ್ಗೇಕಾಯಿಯನ್ನು ಸೇರಿಸಿ ಬಾಡಿಸಿ. ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೆರೆಸಿ ಮುಚ್ಚಳ ಮುಚ್ಚಿ ಕಾಯಿ ಮೃದುವಾಗುವವರೆಗೂ ಬೇಯಿಸಿ. ಕೊನೆಗೆ ಗರಂ ಮಸಾಲ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ನುಗ್ಗೇಕಾಯಿ ಮಸಾಲ ತಿನ್ನಲು ಸಿದ್ಧ. ಇದನ್ನು ಹಬೆಯಾಡುತ್ತಿರುವ ಅನ್ನದ ಜೊತೆಗೆ ಸವಿಯಿರಿ.
ನುಗ್ಗೇಕಾಯಿ ಫ್ರೈ
ಬೇಕಾಗುವ ಸಾಮಗ್ರಿಗಳು :
ನುಗ್ಗೇಕಾಯಿ – 3
ಕೆಂಪು ಮೆಣಸಿನಕಾಯಿ ಪುಡಿ – 1 ಚಮಚ
ಧನಿಯಾ ಪುಡಿ – 1 ಚಮಚ
ಅರಿಶಿನ – 2 ಚಿಟಿಕೆ
ಸಾಸಿವೆ – 1/2 ಚಮಚ
ಇಂಗು – 1 ಚಿಟಿಕೆ
ಎಣ್ಣೆ – 2 ಚಮಚ
ಕರಿಬೇವು – 1 ಎಸಳು
ಉಪ್ಪು – ರುಚಿಗೆ
ಮಾಡುವ ವಿಧಾನ : ನುಗ್ಗೇಕಾಯಿಯನ್ನು 2 ಇಂಚು ಉದ್ದುದ್ದವಾಗಿ ಕತ್ತರಿಸಿ ಚಿಟಿಕೆ ಉಪ್ಪು ನೀರಿನಲ್ಲಿ ಹಾಕಿ ಹತ್ತು ನಿಮಿಷ ಬಿಡಿ. ಅನಂತರ ನೀರಿನಿಂದ ತೆಗೆದು ಇಡಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಕಾದ ಎಣ್ಣೆಗೆ ಸಾಸಿವೆ, ಕರಿಬೇವು, ಇಂಗು, ನುಗ್ಗೇಕಾಯಿ ಹಾಕಿ ಬಾಡಿಸಿ. ಅನಂತರ ಕೆಂಪು ಮೆಣಸಿನಕಾಯಿ ಪುಡಿ, ಧನಿಯಾ ಪುಡಿ, ಅರಿಶಿನ, ರುಚಿಗೆ ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿದರೆ ನುಗ್ಗೇಕಾಯಿ ಫ್ರೈ ಸವಿಯಲು ಸಿದ್ಧ.
ನುಗ್ಗೇಕಾಯಿ ಕರ್ರಿ
ಬೇಕಾಗುವ ಸಾಮಾನುಗಳು :
ನುಗ್ಗೇಕಾಯಿ – 3
ಆಲೂಗಡ್ಡೆ ಸಣ್ಣದಾಗಿ ಕತ್ತರಿಸಿದ್ದು – 1 ಕಪ್
ಪುಡಿ ಬೆಲ್ಲ – 1 ಚಮಚ
ಎಣ್ಣೆ – 2 ಚಮಚ
ಸಾಸಿವೆ – 1 ಚಮಚ
ಉದ್ದಿನಬೇಳೆ – 2 ಚಮಚ
ಕರಿಬೇವು – ಸ್ವಲ್ಪ
ಉಪ್ಪು – ರುಚಿಗೆ
ಮಸಾಲೆಗೆ:
ತೆಂಗಿನಕಾಯಿ ತುರಿ – 1/2 ಕಪ್
ಜೀರಿಗೆ – 1 ಚಿಕ್ಕ ಚಮಚ
ಕಾಶ್ಮೀರಿ ಕೆಂಪು ಮೆಣಸಿಕಾಯಿ – 5
ಧನಿಯಾ – 2 ಚಮಚ
ಹುಣಸೇ ರಸ – ಸ್ವಲ್ಪ
ಅರಿಶಿನ – 1/4 ಚಮಚ
ಮಾಡುವ ವಿಧಾನ : ನುಗ್ಗೇಕಾಯಿ, ಆಲೂಗೆಡ್ಡೆಯನ್ನು ತೊಳೆದು ಸಣ್ಣದಾಗಿ ಹೆಚ್ಚಿ ಮೂರು ಕಪ್ ನೀರು ಹಾಕಿ ಅಗಲವಾದ ಪಾತ್ರೆಯಲ್ಲಿ ಬೇಯಲು ಇಡಿ. ಬೆಂದ ಮೇಲೆ ಪಕ್ಕಕ್ಕಿಡಿ.
ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಕಾದ ಎಣ್ಣೆಗೆ ಸಾಸಿವೆ ಹಾಕಿ. ಅದು ಸಿಡಿದ ಅನಂತರ ಉದ್ದಿನ ಬೇಳೆ, ಕರಿಬೇವು ಹಾಕಿ ಬಾಡಿಸಿ. ಇದಕ್ಕೆ ಬೇಯಿಸಿದ ನುಗ್ಗೇಕಾಯಿ, ಆಲೂಗೆಡ್ಡೆ, ರುಬ್ಬಿದ ಮಸಾಲೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು, ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಹತ್ತು ನಿಮಿಷದವರೆಗೆ ಬೇಯಿಸಿದರೆ ನುಗ್ಗೇಕಾಯಿ ಕರ್ರಿ ಸವಿಯಲು ಸಿದ್ಧ.
ನುಗ್ಗೇಕಾಯಿಯಿಂದ ಆಗುವ ಉಪಯೋಗಗಳು :
1. ಬಲವಾದ ಮೂಳೆಗೆ:
ಕ್ಯಾಲ್ಸಿಯಂ, ಕಬ್ಬಿಣ ಮತ್ತು ಇತರ ವಿಟಮಿನ್‌ಗಳಿಂದ ಸಮೃದ್ಧವಾಗಿರುವ ನುಗ್ಗೇಕಾಯಿ ಮೂಳೆಗಳನ್ನು ಬಲಪಡಿಸಲು ನೆರವಾಗುತ್ತದೆ. ನಿಯಮಿತವಾಗಿ ಜ್ಯೂಸ್ ರೂಪದಲ್ಲಿ ಅಥವಾ ಹಾಲಿನೊಂದಿಗೆ ಸೇವಿಸಿದರೆ ಅದು ಮೂಳೆ ಸಾಂದ್ರತೆಯನ್ನು (ಡೆನ್‌ಸಿಟಿ) ಹೆಚ್ಚಿಸುತ್ತದೆ. ಅಲ್ಲದೆ, ಮಕ್ಕಳಲ್ಲಿ ಮೂಳೆ ಆರೋಗ್ಯವನ್ನು ವೃದ್ಧಿಸುತ್ತದೆ.
2. ರಕ್ತ ಶುದ್ಧೀಕರಣ:
ಈ ಹಸಿರು ತರಕಾರಿಯ ಸೊಪ್ಪು ಮತ್ತು ಉದ್ದವಾದ ಬೀಜ ಕೋಶ ರಕ್ತ ಶುದ್ಧೀಕರಣ ಗುಣಗಳನ್ನು ಹೊಂದಿವೆ. ನಿಯಮಿತವಾಗಿ ನುಗ್ಗೇಕಾಯಿಯನ್ನು ಸೇವಿಸಿದರೆ ತುರಿತ ಮತ್ತಿತರ ಚರ್ಮ ವ್ಯಾಧಿಗಳ ಸಮಸ್ಯೆಗಳು ಕಡಮೆಯಾಗುತ್ತವೆ.