ದುಷ್ಯಂತ ಮತ್ತು ಭರತವಂಶ

ಈ ಕಥಾಭಾಗದಲ್ಲಿ ಅನೇಕಾನೇಕ ರಾಜವಂಶಗಳ ವಿವರಣೆ ಬರುತ್ತದೆ, ಜೊತೆಗೆ ದುಷ್ಯಂತ, ಶಕುಂತಲೆ, ಭರತ, ಭಾರಧ್ವಾಜರ ಕಥೆಗಳೂ ಬರುತ್ತವೆ. ಪುಂಖಾನುಪುಂಖವಾಗಿ ಹೆಸರುಗಳು ಬರುವುದರ ಜೊತೆಗೆ, ಸ್ವಾರಸ್ಯವಾದ ಕಥಾಭಾಗವೂ ಇರುತ್ತದೆ. ನೈಮಿಷಾರಣ್ಯದ ಮುನಿಗಳು ಎಂದಿನಂತೆ ಅತ್ಯಂತ ಕುತೂಹಲದಿಂದ ಆ ಪುಣ್ಯಕರವಾದ ಶ್ರೀಮದ್ಭಾಗವತ ಕಥೆ ಕೇಳಲು ಒಂದೇ ಮನಸ್ಸಿನಿಂದ ಕುಳಿತಿದ್ದರು.

ಸೂತಮುನಿಗಳು ಪ್ರಾರಂಭಿಸಿದರು :

`ಪ್ರಿಯ ಮುನಿಗಳೇ, ಯಯಾತಿಯ ಮತ್ತು ದೇವಯಾನಿಯ ಅಪೂರ್ವ ಕಥಾಭಾಗವನ್ನು ಹೇಳಿ ಮುಗಿಸಿದ ಶುಕಮುನಿಗಳು ಪರೀಕ್ಷಿತ ರಾಜನಿಗೆ, ಕಥಾಭಾಗಕ್ಕೆ ಪೀಠಿಕೆಯ ಹಾಗೆ ಒಂದಿಷ್ಟು ವಿವರಗಳನ್ನು ತಿಳಿಸುತ್ತಾರೆ.’

`ಪ್ರಿಯ ಪರೀಕ್ಷಿತ ಮಹಾರಾಜನೆ, ಇಂದು ನಾನು ಹೇಳಲಿರುವ ಪುರುವಿನ ವಂಶದ ರಾಜರ ವಿವರಗಳನ್ನು ಮತ್ತು ಆಗುಹೋಗುಗಳನ್ನು ತುಂಬ ಆಸಕ್ತಿಯಿಂದ ಕೇಳುವಂತಹವನಾಗು. ಏಕೆಂದರೆ, ಈ ವಂಶದ ಹೆಸರುಗಳಲ್ಲಿ ನಿನ್ನ ಹೆಸರೂ ಬರುತ್ತದೆ. ನೀನೂ ಸಹ ಪುರು ರಾಜನ ವಂಶದಲ್ಲಿ ಹುಟ್ಟಿದವನು. ಇದು ಎಂತಹ ಮಹಾನ್‌ ವಂಶವೆಂದರೆ, ಇದರಲ್ಲಿ ಮಹಾನ್‌ ರಾಜರು ಹುಟ್ಟಿದ್ದಾರೆ, ರಾಜರ್ಷಿಗಳು ಜನ್ಮ ತಳೆದಿದ್ದಾರೆ. ಅಷ್ಟೇ ಅಲ್ಲದೆ, ಈ ವಂಶದಿಂದಲೇ ಅನೇಕಾನೇಕ ಬ್ರಾಹ್ಮಣ ವಂಶಗಳೂ ಆರಂಭವಾಗಿವೆ!’

-ಹೀಗೆ ಹೇಳುತ್ತ ಸೂತಮುನಿಗಳು ಪುರುವಿನ ವಂಶಾವಳಿಯನ್ನು ವಿವರಿಸತೊಡಗಿದರು.

ಪುರುವಿನ ವಂಶದಲ್ಲಿ ಜನಮೇಜಯ ರಾಜ ಹುಟ್ಟಿದ. ಇವನ ಮಗ ಪ್ರಚಿನ್ವಾನ್‌. ಇವನ ಮಗ ಪ್ರವೀರ. ಇವನ ಮಗ ಮನಸ್ಯು. ಇವನಿಗೆ ಚಾರುಪದ ಎನ್ನುವ ಮಗ. ಚಾರುಪದನ ಮಗ ಸುದ್ಯು. ಇವನ ಮಗ ಬಹುಗವ. ಇವನ ಮಗ ಸಂಯಾತಿ. ಸಂಯಾತಿಗೆ ಅಹಂಯಾತಿ; ಅಹಂಯಾತಿಗೆ ರೌದ್ರಾಶ್ವ ಹುಟ್ಟಿದರು.

ರೌದ್ರಾಶ್ವನಿಗೆ ಹತ್ತು ಮಕ್ಕಳು ಹುಟ್ಟಿದರು. ಇವರ ಹೆಸರು – ಋತೇಯು, ಕಕ್ಷೇಯು, ಸ್ಥಂಡಿಲೇಯು, ಕೃತೇಯುಕ, ಜಲೇಯು, ಸನ್ನತೇಯು, ಧರ್ಮೇಯು, ಸತ್ಯೇಯು, ವ್ರತೇಯು ಮತ್ತು ವನೇಯು. ಇವರೆಲ್ಲರೂ ಘೃತಾಚೀ ಎಂಬ ಅಪ್ಸರೆಗೆ ಹುಟ್ಟಿದರು. ಈ ಹತ್ತು ಮಕ್ಕಳೂ, ಜಗತ್ಪ್ರಾಣದ ಪರಿಣಾಮಗಳಾದ ದಶೇಂದ್ರಿಯಗಳು ಪ್ರಾಣಕ್ಕೆ ವಶವಾಗಿ ವರ್ತಿಸುವಂತೆ, ತಂದೆ ರೌದ್ರಾಶ್ವನಿಗೆ ಸಂಪೂರ್ಣ ಅಧೀನರಾಗಿ ವರ್ತಿಸುತ್ತಿದ್ದರು.

ಇವರಲ್ಲಿ ಹಿರಿಯವನಾದ ಋತೇಯುವಿಗೆ ರಂತಿನಾವ ಎನ್ನುವ ಮಗ ಹುಟ್ಟಿದ. ಇವನಿಗೆ ಸುಮತಿ, ಧ್ರುವ, ಅಪ್ರತಿರಥ ಎನ್ನುವ ಮೂವರು ಮಕ್ಕಳು. ಅಪ್ರತಿರಥನಿಗೆ ಒಬ್ಬನೇ ಮಗ – ಅವನ ಹೆಸರು ಕಣ್ವ. ಇವನಿಗೆ ಮೇಧಾತಿಥಿ ಎನ್ನುವ ಮಗ. ಇವನಿಗೆ ಪ್ರಸ್ಕನ್ನ ಮೊದಲಾದ ಮಕ್ಕಳಿದ್ದರು – ವಿಶೇಷವೆಂದರೆ, ಇವರೆಲ್ಲ ಬ್ರಾಹ್ಮಣರಾಗಿದ್ದರು.

ಋತೇಯುವಿನ ಮಗನಾದ ಈ ರಂತಿನಾವನ ಮಗನಾದ ಸುಮತಿಗೆ ರೇಭಿ ಎನ್ನುವ ಮಗ ಹುಟ್ಟಿದನು. ಈ ರೇಭಿಯ ಮಗನೇ, ಪುರಾಣ ಪ್ರಸಿದ್ಧ ಚಕ್ರವರ್ತಿಯಾಗಿ ಕಂಗೊಳಿಸಿದ, ದುಷ್ಯಂತ ಮಹಾರಾಜ.

ಸೂತಮುನಿಗಳು ಹೇಳಿದರು :

`ದುಷ್ಯಂತ ಮಹಾರಾಜ ಅತ್ಯಂತ ಕೀರ್ತಿಶಾಲಿಯಾಗಿದ್ದವನು. ಅತ್ಯಂತ ಶಕ್ತಿಶಾಲಿ, ಸುಂದರ ಪುರುಷ. ವಿಸ್ತಾರವಾದ ರಾಜ್ಯವನ್ನು ಹೊಂದಿದ್ದವನು. ಈ ದುಷ್ಯಂತ ಒಂದು ಸಲ ಬೇಟೆಯಾಡಲು ಕಾಡಿಗೆ ಹೋದ. ಓಡಾಡುತ್ತ ತುಂಬ ದಣಿದ. ಎಲ್ಲಿಯಾದರೂ ಒಂದಿಷ್ಟು ಆತಿಥ್ಯ ದೊರಕೀತೇ ಎಂದು ಮುಂದುವರಿಯುತ್ತ ಕೊನೆಗೆ ಕಣ್ವಮುನಿಯ ಆಶ್ರಮಕ್ಕೆ ಬಂದ. ಅಲ್ಲಿ ಅವನು ಅತ್ಯಂತ ಸುಂದರಿಯೊಬ್ಬಳನ್ನು ನೋಡಿದ. ಅವಳು ಸಾಕ್ಷಾತ್‌ ಲಕ್ಷ್ಮೀದೇವಿಯಂತೆ ಕಂಗೊಳಿಸುತ್ತಿದ್ದಳು. ತನ್ನ ಮೈಕಾಂತಿಯಿಂದ ಇಡೀ ಆಶ್ರಮವನ್ನೇ ಬೆಳಗುತ್ತಿದ್ದಳು. ದುಷ್ಯಂತ ಮಹಾರಾಜನನ್ನು ಇವಳ ಅದ್ಭುತ ಸೌಂದರ್ಯ ಸಹಜವಾಗಿಯೇ ಆಕರ್ಷಿಸಿತು. ಅವನಿಗೆ ಅವಳೊಂದಿಗೆ ಒಂದಿಷ್ಟು ಮಾತನಾಡಬೇಕು ಎನ್ನಿಸಿತು. ಕೂಡಲೇ ಅವಳ ಬಳಿಗೆ ಹೋದ…!’

ಆ ವೇಳೆಗಾಗಲೇ ದುಷ್ಯಂತ ಆ ಸುಂದರಿಯ ಬಗ್ಗೆ ಕಾಮಮೋಹಿತನಾಗಿಹೋಗಿದ್ದ. ಅವಳನ್ನು ಪಡೆಯಬೇಕೆಂಬ ಅತೀವ ಆಸೆ ಅವನಲ್ಲಿ ಉದ್ಭವಿಸಿಬಿಟ್ಟಿತ್ತು.

ದುಷ್ಯಂತನಂತಹ ಸುಂದರ ಪುರುಷನೊಬ್ಬ ತನ್ನ ಅತಿ ಹತ್ತಿರ ಬಂದುದನ್ನು ನೋಡಿದಾಗ, ಆ ಸುಂದರಿಯ ಎದೆ ಮೃದುವಾಗಿ ಬಡಿದುಕೊಂಡಿತು. ಇಡೀ ದೇಹ ಆಸೆ ಸಂಕೋಚಗಳಿಂದ ತಲ್ಲಣಿಸಿತು. ಅವಳು ತಲೆಬಗ್ಗಿಸಿಕೊಂಡು ನಿಂತಳು.

ದುಷ್ಯಂತ ಹೇಳಿದ –

`ಕಮಲಲೋಚನೆ, ಸುಂದರಿ, ಯಾರು ನೀನು? ಯಾರ ಮಗಳು? ಹೀಗೊಂದು ನಿರ್ಜನ ಅರಣ್ಯದಲ್ಲಿ ಓಡಾಡುತ್ತ ಏನು ಮಾಡುತ್ತಿದ್ದೀಯ? ಅಥವಾ ನೀನು ಇಲ್ಲೇ ನೆಲೆಸಿರುವವಳೇ?’

ಇವಳು ಖಂಡಿತವಾಗಲೂ ಒಬ್ಬ ಕ್ಷತ್ರಿಯ ರಾಜನ ಮಗಳೇ ಇರಬೇಕು ಎಂದು ಆಗಲೇ ದುಷ್ಯಂತ ಮಹಾರಾಜನಿಗೆ ಅನ್ನಿಸಿಬಿಟ್ಟಿತ್ತು. ಅಂತಹ ಸುಂದರ ರಾಜಕುಮಾರಿಯನ್ನು ತಾನು ಮದುವೆಯಾಗಬೇಕು ಎಂದು ಮನಸ್ಸಿನೊಳಗೇ ನಿರ್ಧರಿಸಿಬಿಟ್ಟಿದ್ದ. ಹೀಗಾಗಿಯೇ ಅವನು ಅವಳೊಂದಿಗೆ ಅತಿ ಪ್ರೀತಿ ಸ್ನೇಹದಿಂದ ಸಹಜವಾಗಿಯೇ ಮಾತನಾಡಿಸಿದ.

ತನ್ನೆದುರು ನಿಂತ ಆ ಸೊಬಗಿನ ವ್ಯಕ್ತಿ, ರಾಜರೂಪಿಯಂತೆ ಕಂಡವ, ತನ್ನನ್ನು ಹೀಗೆ ಮೃದುವಾಗಿ, ಆತ್ಮೀಯವಾಗಿ ಮಾತನಾಡಿಸಿದಾಗ, ಜೊತೆಗೆ ತಾನು ವಾಸವಿರುವ ಈ ಕಣ್ವಾಶ್ರಮಕ್ಕೆ ಅತಿಥಿ ಎಂಬಂತೆ ಬಂದವನೊಂದಿಗೆ, ಮಾತನಾಡಿಸದೇ ಇರುವುದು ಆ ಸುಂದರಿಯಿಂದ ಸಾಧ್ಯವಾಗಲಿಲ್ಲ.

ಅವಳು ಹೇಳಿದಳು :

`ನಾನು ವಿಶ್ವಾಮಿತ್ರನ ಮಗಳು. ನನ್ನ ತಾಯಿ ಮೇನಕಾ. ಆಕೆ ನನ್ನನ್ನು ಕಾಡಿನಲ್ಲಿ ತೊರೆದಾಗ ಪೂಜ್ಯ ಕಣ್ವ ಮಹರ್ಷಿಗಳೇ ನನ್ನನ್ನು ಸಾಕಿ, ಬೆಳೆಸಿದ್ದಾರೆ. ಅವರೇ ನನಗೆ ಈ ವಿಷಯವನ್ನೆಲ್ಲ ಹೇಳಿದರು. ಮಹಾವೀರನಂತೆ ಕಾಣುತ್ತಿರುವ, ಚಕ್ರವರ್ತಿಯ ಹಾಗೆ ಬೆಳಗುತ್ತಿರುವ ವೀರ ಪುರುಷನೇ, ನಿನಗೆ ನಮ್ಮ ಆಶ್ರಮಕ್ಕೆ ಸ್ವಾಗತ. ಒಂದಿಷ್ಟು ವಿಶ್ರಮಿಸಿಕೊಂಡು, ನಮ್ಮ ಆತಿಥ್ಯ ಸ್ವೀಕರಿಸಬೇಕೆಂದು ಪ್ರಾರ್ಥಿಸುತ್ತೇನೆ!’

ದುಷ್ಯಂತನಿಗೆ ಬಹಳ ಸಂತೋಷವಾಯಿತು, ಸಮಾಧಾನವೂ ಆಯಿತು. ತಾನಂದುಕೊಂಡಂತೆ ಇವಳು ಕ್ಷತ್ರಿಯ ರಾಜನ ಮಗಳು, ಜೊತೆಗೆ ಅಪ್ಸರ ಸ್ತ್ರೀಯ ಪುತ್ರಿ. ಇವೆರಡು ವಿಶೇಷಗಳೂ ಇವಳಲ್ಲಿ ಮೇಳೈಸಿವೆ.

ದುಷ್ಯಂತ ಹೇಳಿದ :

`ಚೆಂದದ ಹುಬ್ಬಿನ ಶಕುಂತಲೆ, ನೀನು ಕ್ಷತ್ರಿಯನೂ ಆಗಿದ್ದ ವಿಶ್ವಾಮಿತ್ರ ಮಹರ್ಷಿಯ ಕುಟುಂಬದಲ್ಲಿ ಜನ್ಮ ತಳೆದಿದ್ದೀಯ. ದೇವಲೋಕದ ಅಪ್ಸರೆ ಮೇನಕೆಯ ಪುತ್ರಿಯೆನಿಸಿಕೊಂಡಿದ್ದೀಯ. ನಿನ್ನ ಪರಿಚಯ ನಿನ್ನ ಹುಟ್ಟಿಗೆ ತಕ್ಕುದಾಗಿದೆ. ಪ್ರಿಯ ಸುಂದರಿ, ಸಾಮಾನ್ಯವಾಗಿ ರಾಜಕುಮಾರಿಯರು ತಮ್ಮ ಗಂಡನನ್ನು ತಾವೇ ಆಯ್ದುಕೊಳ್ಳುತ್ತಾರೆ. ನಿನ್ನ ಈ ಆತ್ಮೀಯ ಸುಸ್ವಾಗತ, ಆತಿಥ್ಯದ ಕೋರಿಕೆಗಳು, ನಿನ್ನ ಮನಸ್ಸಿನಲ್ಲಿ ನಾನು ಮೂಡಿದೆ ಎನ್ನುವುದನ್ನು ಸೂಚಿಸುತ್ತವೆ. ನಾನು ನಿನ್ನನ್ನು ಗಾಂಧರ್ವ ವಿವಾಹ ಮಾಡಿಕೊಳ್ಳಲು ಬಯಸಿದ್ದೇನೆ. ನಿನ್ನನ್ನು ನನ್ನ ಮಹಾರಾಣಿಯನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ!’

ದುಷ್ಯಂತನು ಪರಿಪೂರ್ಣ ರಾಜಶ್ರೀ ಆಗಿದ್ದ. ಅವನೆಂದೂ ಧರ್ಮಕ್ಕೆ ಬಾಹಿರವಾಗಿ ನಡೆದವನಲ್ಲ. ವಿವಾಹ ಕ್ರಮವನ್ನು ಅನುಸರಿಸಿ, ಗೃಹಸ್ಥಾಶ್ರಮಕ್ಕೆ ಸೇರುವುದು ಧರ್ಮಕ್ಕೆ ವಿರುದ್ಧವಲ್ಲ. ವಿವಾಹಗಳಲ್ಲಿ 8 ಬಗೆಗಳುಂಟು. ಸಾಮಾನ್ಯವಾಗಿ ತಂದೆ ತಾಯಿಯರು ಭಾವಿ ಪತಿಪತ್ನಿಯರ ಹೊಂದಾಣಿಕೆಗಳನ್ನು ಸರಿಯಾಗಿ ನೋಡಿ ಹಿರಿಯರ ಅನುಮತಿ ಪಡೆದು ನಡೆಸುವ ವಿವಾಹ ಪದ್ಧತಿ ಪ್ರಚಲಿತವಾದದ್ದು. ಆದರೆ ಹುಡುಗ-ಹುಡುಗಿಯರ ಸ್ವಂತ ಆಯ್ಕೆಯನ್ನು ಆಧರಿಸಿ ನಡೆಸುವ ವಿವಾಹ ಕ್ರಮ ಉಂಟು. ಅದನ್ನೇ ಗಾಂಧರ್ವ ವಿವಾಹ ಎನ್ನುವುದು. ಈ ಗಾಂಧರ್ವ ವಿವಾಹ ಉನ್ನತ ರಾಜಕುಲಗಳಲ್ಲಿ ನಡೆಯುತ್ತಿತ್ತು. ಇಂತಹ ವಿವಾಹ ನಡೆದರೂ ವಿಚ್ಛೇದನ ಎನ್ನುವ ಮಾತೇ ಇರಲಿಲ್ಲ. ಅವನು ಓಂಕಾರವನ್ನು ಪಠಿಸುತ್ತ ಆ ಕೂಡಲೇ ಅವಳನ್ನು ಮದುವೆಯಾದನು – ಅದು ಗಾಂಧರ್ವರು ಆಚರಿಸುವ ವಿವಾಹದ ಆಚರಣೆಗೆ ಅನುಗುಣವಾಗಿ ಇದ್ದಿತು.

ದುಷ್ಯಂತ ಆ ರಾತ್ರಿ ಅಲ್ಲಿಯೇ ಉಳಿದುಕೊಂಡ. ಅದು ಅವರಿಬ್ಬರ ಸುಂದರ ಸಮಾಗಮ ರಾತ್ರಿಯಾಯಿತು.

ಬೆಳಗಾಗುತ್ತಲೇ ದುಷ್ಯಂತ ತನ್ನ ಅರಮನೆಗೆ ಹಿಂತಿರುಗಿದ.

ಕೆಲ ದಿನಗಳು ಕಳೆದಮೇಲೆ ಕಣ್ವಮಹರ್ಷಿಗಳು ಆಶ್ರಮಕ್ಕೆ ಹಿಂತಿರುಗಿದರು. ದುಷ್ಯಂತ ಮಹಾರಾಜ ಬಂದಿದ್ದು, ಶಕುಂತಲೆಯೊಂದಿಗೆ ಗಾಂಧರ್ವ ವಿವಾಹ ಮಾಡಿಕೊಂಡು, ಸಮಾಗಮ ಹೊಂದಿ ಮತ್ತು ಇದೀಗ ಶಕುಂತಲೆ ಆ ರಾಜನ ಫಲವನ್ನು ತನ್ನ ಗರ್ಭದಲ್ಲಿ ಧರಿಸಿರುವುದು – ಎಲ್ಲವೂ ಅವರ ಜ್ಞಾನನೋಟಕ್ಕೆ ಅರಿವಾಗಿತ್ತು. ಅವರು ಸಂತೋಷದಿಂದಲೇ ಶಕುಂತಲೆಯನ್ನು ಆಶೀರ್ವದಿಸಿದರು. `ಮಗೂ, ಶಕುಂತಲಾ, ನಿನ್ನ ಆಯ್ಕೆ ಉತ್ತಮವಾದದ್ದೇ ಆಗಿದೆ. ಮಹಾನ್‌ ಚಕ್ರವರ್ತಿ ನಿನ್ನನ್ನು ಮೆಚ್ಚಿ ವಿವಾಹವಾಗಿದ್ದಾನೆ. ನಿನಗೆ ಅವನಂತಹ ಸುಪುತ್ರನೇ ಜನಿಸುತ್ತಾನೆ!’ – ಎಂದು ಹೇಳಿದರು.

ಕಾಲಾಂತರದಲ್ಲಿ ಶಕುಂತಲೆ ಗಂಡು ಮಗುವೊಂದಕ್ಕೆ ಜನ್ಮವಿತ್ತಳು. ಭರತನೆಂದು ನಾಮಕರಣ ಮಾಡಿದರು. ಜಾತಕರ್ಮಾದಿ ಸಂಸ್ಕಾರಗಳನ್ನೆಲ್ಲ ಮಾಡಿದರು. ಮುಂದೆ ಆ ಹುಡುಗ ಎಷ್ಟು ಶಕ್ತಿವಂತನಾದನೆಂದರೆ, ಸಿಂಹವನ್ನು ಹಿಡಿದು ಅದರೊಂದಿಗವನು ಆಟವಾಡುತ್ತಿದ್ದನು.

ಮುಂದೊಂದು ದಿನ ಕಣ್ವಮುನಿಗಳು, ಶಕುಂತಲೆಯನ್ನೂ ಮತ್ತು ಭರತನನ್ನೂ ದುಷ್ಯಂತನ ಬಳಿಗೆ ಕಳುಹಿಸಿಕೊಟ್ಟರು.

ಆದರೆ, ದುಷ್ಯಂತ ಅವಳನ್ನು ಕೂಡಲೇ ಸ್ವೀಕರಿಸಲಿಲ್ಲ. ಅವಳನ್ನು ತನ್ನ ಹೆಂಡತಿಯೆಂದು ಸ್ವೀಕರಿಸಲು ನಿರಾಕರಿಸಿಬಿಟ್ಟ.

ಆದರೆ ಆ ಸಂದರ್ಭದಲ್ಲಿ ಆಕಾಶದಿಂದ ಅಶರೀರವಾಣಿಯೊಂದು ಕೇಳಿಬಂತು. ದುಷ್ಯಂತನಾದಿಯಾಗಿ ಅಲ್ಲಿದ್ದವರೆಲ್ಲರೂ ಅದನ್ನು ಕೇಳಿಸಿಕೊಂಡರು :

`ದುಷ್ಯಂತ ಮಹಾರಾಜನೇ, ವಾಸ್ತವಿಕವಾಗಿ ಮಗನು ತಂದೆಗೇ ಸೇರುತ್ತಾನೆ; ತಾಯಿಯೇನಿದ್ದರೂ ಚರ್ಮದ ತಿದಿಯ ಹಾಗೆ ಧಾರಣ ಮಾಡುವ ಪಾತ್ರೆ ಅಷ್ಟೇ! ವೈದಿಕ ಕಟ್ಟಳೆಯ ಪ್ರಕಾರ ತಂದೆಯೇ ಮಗನಾಗಿ ಹುಟ್ಟುವನು. ಹೀಗಾಗಿ ಈ ಮಗ ನಿನ್ನ ಮಗನೇ, ಇವಳು ನಿನ್ನ ಹೆಂಡತಿಯೇ, ಅದರಲ್ಲಿ ಅನುಮಾನವೇ ಇಲ್ಲ. ಹೆಂಡತಿ-ಮಗನನ್ನು ಸ್ವೀಕರಿಸು. ಶಕುಂತಲೆಯನ್ನು ಅವಮಾನಿಸಬೇಡ!

`ದುಷ್ಯಂತ ಮಹಾರಾಜನೇ, ನಿನ್ನ ರೇತಸ್ಸು ಸಂಚಿಸಿದರಿಂದ ಜನಿಸಿದ ಮಗ ಇವನು. ಹೀಗಾಗಿ ನೀನೇ ನಿಜವಾದ ತಂದೆ. ಮಗ ಎನ್ನುವವನು ಯಾವಾಗಲೂ ತಂದೆಯನ್ನು ಯಮನ ವಶದಿಂದ ಪಾರುಮಾಡುವವನು. ಈ ಮಗುವಿಗೆ ನೀನೇ ನಿಜವಾಗಿ ಜನ್ಮಕೊಟ್ಟವನು. ನಿಜಕ್ಕೂ ಶಕುಂತಲೆ ಸತ್ಯವನ್ನೇ ನುಡಿಯುತ್ತಿದ್ದಾಳೆ!’

ದೇವನುಡಿಯನ್ನು ಮನ್ನಿಸಿದ ದುಷ್ಯಂತ ಮಹಾರಾಜ ತನ್ನ ಹೆಂಡತಿ ಮತ್ತು ಮಗುವನ್ನು ಸ್ವೀಕರಿಸಿದನು.

ಮುಂದೆ ದುಷ್ಯಂತ ಮಹಾರಾಜ ಮರಣಹೊಂದಿದಾಗ ಅವನ ಮಗನಾಗಿ ಭರತ ಸಪ್ತದ್ವೀಪವನ್ನು ಒಳಗೊಂಡ ಈ ಲೋಕದ ಚಕ್ರವರ್ತಿಯಾದನು. ಅವನು ಈ ಜಗತ್ತಿನಲ್ಲಿ ದೇವೋತ್ತಮ ಪರಮ ಪುರುಷನ ಆಂಶಿಕ ಪ್ರತಿನಿಧಿ ಎಂದು ಹೇಳಲಾಗಿದೆ.

ಭರತ ಚಕ್ರವರ್ತಿ ಮಹಾಪುರುಷನಾಗಿ ಬದುಕಿ ಬಾಳಿದ. ಅವನ ಬಲಗೈಯಲ್ಲಿ ಭಗವಾನ್‌ ಕೃಷ್ಣನ ಚಕ್ರದ ಚಿಹ್ನೆ ಇತ್ತು. ಕಾಲುಗಳಲ್ಲಿ ಪದ್ಮಕೋಶದ ಚಿಹ್ನೆ ಇತ್ತು. ಮುಂದೆ ಅವನು ಮಹಾ ಧಾರ್ಮಿಕ ಆಚರಣೆಯಿಂದ ದೇವೋತ್ತಮ ಪರಮ ಪುರುಷನನ್ನು ಆರಾಧಿಸಿ, ಇಡೀ ಲೋಕದ ಚಕ್ರವರ್ತಿಯೂ, ಒಡೆಯನೂ ಆದನು. ಆ ಬಳಿಕ ಅವನು ಮಾಮತೇಯನಾದ ಭೃಗುಮುನಿಯ ಪೌರೋಹಿತ್ಯದಲ್ಲಿ ಐವತ್ತೈದು ಅಶ್ವಮೇಧ ಯಾಗಗಳನ್ನು ಮಾಡಿದನು. ಈ ಯಾಗಗಳು ಗಂಗಾನದಿಯ ತೀರದಲ್ಲಿ ನಡೆದವು. ಅದರ ಮುಖಜ ಭೂಮಿಯಲ್ಲಿ ಆರಂಭವಾಗಿ ಮೂಲದಲ್ಲಿ ಕೊನೆಗೊಂಡವು. ಯಮುನಾ ನದಿಯ ತೀರದಲ್ಲಿ ಎಪ್ಪತ್ತೆಂಟು ಅಶ್ವಮೇಧ ಯಾಗಗಳನ್ನು ಆಚರಿಸಿದನು. ಅವು ಪ್ರಯಾಗದ ಸಂಗಮದಲ್ಲಿ ಆರಂಭವಾಗಿ ಮೂಲದಲ್ಲಿ ಕೊನೆಗೊಂಡವು. ಅವನು ಅತ್ಯುತ್ತಮವಾದ ನೆಲದಲ್ಲಿ ಅಗ್ನಿಯನ್ನು ಸ್ಥಾಪಿಸಿದ್ದನು. ಬ್ರಾಹ್ಮಣರಿಗೆ ಭಾರಿ ಸಂಪತ್ತನ್ನು ವಿತರಿಸಿದನು. ಅವನು ಅದೆಷ್ಟು ಹಸುಗಳನ್ನು ಹಂಚಿದನೆಂದರೆ, ಸಾವಿರಾರು ಬ್ರಾಹ್ಮಣರಲ್ಲಿ ಪ್ರತಿಯೊಬ್ಬರ ಪಾಲಿಗೂ ಸಾವಿರಾರು ಗೋವುಗಳು ದೊರೆತವು.

ಭರತ ಪರಮ ಗುರುವಾದ ಹರಿಯನ್ನು ಸಿದ್ಧಿಸಿಕೊಂಡಿದ್ದರಿಂದ ದೇವತೆಗಳ ಸಮೃದ್ಧಿಯನ್ನೂ ಮೀರಿದ್ದನು. ಅವನು ಮಷ್ಣಾರ ಎಂಬ ಯಾಗವನ್ನೂ ಮಾಡಿದನು. ಅನೇಕ ದುಷ್ಟ ರಾಜರನ್ನು ಕೊಂದು ದಿಗ್ವಿಜಯ ಸಾಧಿಸಿದನು.

ಸೂತಮುನಿಗಳು ಹೇಳಿದರು :

`ನೈಮಿಷಾರಣ್ಯದ ಪ್ರಿಯ ಮುನಿಗಳೆ, ಸರ್ವಶ್ರೇಷ್ಠನೆಂಬಂತೆ ಬೆಳೆದಿದ್ದ, ಸಮಸ್ತರನ್ನೂ ಗೆದ್ದು ಒಡೆತನ ಸ್ಥಾಪಿಸಿದ್ದ ಭರತ ಚಕ್ರವರ್ತಿಗೂ ಬದುಕಿನ ಒಂದು ಕಾಲಘಟ್ಟದಲ್ಲಿ, ತನ್ನೆಲ್ಲ ಸಾಧನೆಗಳು, ಆಧ್ಯಾತ್ಮಿಕ ಮುನ್ನಡೆಗೆ ಅಡ್ಡಿಯಾಗಿವೆ ಎನ್ನುವ ಜ್ಞಾನೋದಯವಾಯಿತು. ಕೂಡಲೇ ಅವನು ತನ್ನೆಲ್ಲ ವೈಭೋಗಗಳ ಅನುಭೋಗವನ್ನು ನಿಲ್ಲಿಸಿಬಿಟ್ಟನು.

`ಭರತ ಮಹಾರಾಜನಿಗೆ ಮೂವರು ಹೆಂಡತಿಯರಿದ್ದರು. ಎಲ್ಲರೂ ವಿದರ್ಭರಾಜನ ಪುತ್ರಿಯರು. ಈ ಮೂವರೂ ಮಕ್ಕಳನ್ನು ಹೆತ್ತಾಗಲೇ, ಭರತವೈಭವದ ಇಳಿತ ಪ್ರಾರಂಭವಾಗಿತ್ತು. ಮೂವರು ರಾಣಿಯರಿಗೂ ತಮ್ಮ ಮಕ್ಕಳು ಗಂಡ ಭರತನ ಹಾಗಿಲ್ಲವೆಂಬಂತೆ ಕಂಡಿತು, ತಮ್ಮ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಾಗಬಹುದು ಎನ್ನಿಸಿತು. ಬೆದರಿ ಅವರು ತಮ್ಮ ಈ ಮಕ್ಕಳನ್ನೇ ಕೊಂದುಬಿಟ್ಟರು. ಅಂತೂ ಏನೋ ಒಂದು ಕಾರಣ, ಭರತನಿಗೆ ಸಂತಾನಭಾಗ್ಯವೇ ಆಗಲಿಲ್ಲ. ಮಗನೊಬ್ಬನನ್ನು ಪಡೆಯಲು ಅವನು ಮರುತ್‌ಸ್ತೋಮ ಎನ್ನುವುದೊಂದು ಯಾಗ ಮಾಡಿದ. ಮರುತ್‌ ಎಂಬ ದೇವತೆಗಳು ಸಂತೃಪ್ತರಾಗಿ ಭರಧ್ವಾಜ ಎನ್ನುವ ಮಗನನ್ನು ತಂದುಕೊಟ್ಟರು.

`ಪ್ರಿಯ ಮುನಿಗಳೇ, ಮನುಷ್ಯರು-ದೇವತೆಗಳ ಮಟ್ಟದಲ್ಲಿ ಏನೇನು ನಡೆಯುತ್ತದೆ ಎಂದು ಊಹಿಸಿಕೊಳ್ಳುವುದಕ್ಕಾಗುವುದಿಲ್ಲ. ಯಾವುದು ಸರಿ, ಯಾವುದು ತಪ್ಪು ಎಂದು ತೀರ್ಪು ಕೊಡಲಾಗುವುದಿಲ್ಲ. ಎಲ್ಲವೂ ಪ್ರಕೃತಿಯ ಒಂದು ಲೀಲೆ ಎಂದುಕೊಳ್ಳಬೇಕಷ್ಟೆ!

`ದೇವತಾ ಲೋಕದಲ್ಲಿ ಹೀಗೂ ಆಯಿತು. ಬೃಹಸ್ಪತಿ ಎನ್ನುವ ಗುರು ಗರ್ಭಿಣಿಯಾಗಿದ್ದ ತನ್ನ ಸೋದರನ ಹೆಂಡತಿ ಮಮತಾಳನ್ನು ಮೋಹಿಸಿ, ಬಯಸಿದ. ಆದರೆ, ಅವಳ ಗರ್ಭದಲ್ಲಿದ್ದ ಮಗ ಇದನ್ನು ತಡೆದನು. ಕೋಪಗೊಂಡು ಬೃಹಸ್ಪತಿ ಅವನನ್ನು ಶಪಿಸಿ ಮಮತಾಳ ಗರ್ಭದಲ್ಲಿ ವೀರ್ಯ ನಿಷೇಕ ಮಾಡಿಬಿಟ್ಟನು. ಈ ಗರ್ಭವನ್ನು ಪಡೆದು ಹೆತ್ತ ಮಗನನ್ನು ತ್ಯಜಿಸಿಬಿಡಲು ಮಮತಾ ತೀರ್ಮಾನಿಸಿದಾಗ, ದೇವತೆಗಳೆಲ್ಲರೂ ಒಟ್ಟುಗೂಡಿ ಈ ಮಗುವಿಗೆ ಭರಧ್ವಾಜ ಎನ್ನುವುದೊಂದು ಅನ್ವರ್ಥನಾಮವನ್ನಿಟ್ಟರು. ಆದರೆ, ಈ ಮಗುವನ್ನು ಸಾಕಲು ಮಮತಾ ಮತ್ತು ಬೃಹಸ್ಪತಿ ಇಬ್ಬರೂ ನಿರಾಕರಿಸಿದರಿಂದ, ದೇವತೆಗಳು ಭರಧ್ವಾಜ ಎನ್ನುವ ಈ ಮಗುವನ್ನು, ಸಂತಾನವಿಲ್ಲದೆ ಚಡಪಡಿಸುತ್ತಿದ್ದ ಭರತ ಮಹಾರಾಜನಿಗೆ ತಂದುಕೊಟ್ಟರು.

ಮುಂದಿನ ಕಥಾಭಾಗದಲ್ಲಿ ಭರತನ ರಾಜವಂಶದ ವಿವರಣೆ ಬರುತ್ತದೆ. ಇಲ್ಲಿ ಘಟನೆಗಳಿಗಿಂತಲೂ ಹೆಸರುಗಳೇ ಹೆಚ್ಚು. ಅನೇಕ ಹೆಸರುಗಳ ನಡುವೆ ಯಾವುದೊ ಒಂದು ಕಾಲಘಟ್ಟದಲ್ಲಿ ಸಾಧನಶೀಲರ ಹೆಸರುಗಳೂ ಬರುತ್ತವೆ. ಆದರೆ, ಒಂದು ಆನಂದದಾಯಕವಾದ ವಿಷಯವೆಂದರೆ, ಭರತವಂಶದ ರಾಜರ ವಂಶಾವಳಿಗಳು ಮುಂದೆ ಪುಣ್ಯಕರವಾದ ಮಹಾಭಾರತದ ಪಾತ್ರಗಳಿಗೆ, ಘಟನಾವಳಿಗಳಿಗೆ ದಾರಿಮಾಡಿಕೊಡುತ್ತವೆ. ಈಗ ಭರತನ ರಾಜವಂಶದ ವಿವರಗಳು ನಮ್ಮ ಮುಂದೆ ಬರುತ್ತವೆ!

ಭರತನ ಮಗನಾಗಿ ಬಂದ ಭರಧ್ವಾಜನು ವಿತಥನೆಂದು ಪ್ರಖ್ಯಾತನಾದನು. ಇವನ ಪುತ್ರ ಮನ್ಯು. ಇವನಿಗೆ ಐವರು ಪುತ್ರರು – ಬೃಹತ್‌ಕ್ಷತ್ರ, ಜಯ, ಮಹಾವೀರ್ಯ, ನರ ಮತ್ತು ಗರ್ಗ. ನರನಿಗೆ ಸಂಕೃತಿ ಎನ್ನುವ ಮಗ. ಸಂಕೃತಿಗೆ ಗುರು ಮತ್ತು ರಂತಿದೇವ ಎಂಬ ಇಬ್ಬರು ಪುತ್ರರಿದ್ದರು. ರಂತಿದೇವ ಲೋಕವಿಖ್ಯಾತನೆನಿಸಿಕೊಂಡ – ದೇವಲೋಕದಲ್ಲೂ ಅವನ ಗುಣಗಾನವಾಗಿತ್ತು.

ವಿಚಿತ್ರವೆಂದರೆ ಹೀಗೆ ಪ್ರಖ್ಯಾತನಾಗಿದ್ದ ರಂತಿದೇವನಿಗೂ ಕಡುಬಡತನ ಕಾಡಿತು ಎಂದರೆ ಆಶ್ಚರ್ಯವಾಗುತ್ತದಲ್ಲವೇ? ಬಹುಶಃ, ತನ್ನ ಸಮಸ್ತವನ್ನೂ ದಾನಮಾಡುವ ಗುಣ ಅವನಲ್ಲಿ ತುಂಬಿತುಳುಕಾಡಿದ್ದರಿಂದ ಅವನು ಇಂತಹ ದುಃಸ್ಥಿತಿಗೆ ಬಂದಿರಬಹುದು! ಅವನು, ಅವನ ಮನೆಯವರು ಅನ್ನ ಆಹಾರಗಳಿಗಾಗಿ ತತ್ತರಿಸಿ ಹೋಗುವಂತಾಯಿತು. ಆದರೂ ರಂತಿದೇವ ತನ್ನ ಮನಃಸ್ವಾಸ್ಥ್ಯವನ್ನು ಕಳೆದುಕೊಳ್ಳಲಿಲ್ಲ. ಯಾವಾಗಲೂ ಶಾಂತಚಿತ್ತನಾಗಿಯೇ ಇರುತ್ತಿದ್ದನು.

ಒಮ್ಮೆ ರಂತಿದೇವ ತನ್ನ ಕುಟುಂಬದವರೊಂದಿಗೆ ಲೋಕಕಲ್ಯಾಣಾರ್ಥವಾಗಿ ನಲವತ್ತೆಂಟು ದಿವಸಗಳ ಉಪವಾಸ ವ್ರತ ಮಾಡಿದ. ಅದು ಮುಗಿದಾಗ ಸುತ್ತಲಿದ್ದ ದೈವಭಕ್ತರು ಹಾಲು ಮತ್ತು ತುಪ್ಪದಲ್ಲಿ ಮಾಡಿದ ಆಹಾರ ಪದಾರ್ಥಗಳನ್ನು ತಂದುಕೊಟ್ಟರು. ದೀರ್ಘಕಾಲದ ಉಪವಾಸ ಮುರಿದ ರಂತಿದೇವ ತನ್ನವರೊಂದಿಗೆ ಅದನ್ನು ಸೇವಿಸಬೇಕು ಎಂದುಕೊಂಡಾಗಲೇ ಒಂದು ಆರ್ತ ದನಿ ಕೇಳಿಸಿತು :

`ಭವತೀ ಭಿಕ್ಷಾಂದೇಹಿ!’

ರಂತಿದೇವ ಥಟ್ಟನೆ ದನಿಬಂದತ್ತ ನೋಡಿದ.

ಬಡಕಲು ಬ್ರಾಹ್ಮಣನೊಬ್ಬ ಕರುಣಾಜನಕ ಸ್ಥಿತಿಯಲ್ಲಿ ನಿಂತಿದ್ದ. ಅವನ ಕೈಯಲ್ಲೊಂದು ಭಿಕ್ಷಾಪಾತ್ರೆ!

ಕೂಡಲೇ ರಂತಿದೇವ ತಮಗಾಗಿ ಇದ್ದ ಆಹಾರದಲ್ಲಿ ಅವನಿಗೊಂದು ಪಾಲು ನೀಡಿದ. ಆ ಬ್ರಾಹ್ಮಣ ಅದನ್ನುಂಡು ಸಂತೃಪ್ತನಾಗಿ ಹೊರಟುಹೋದ. ಅನಂತರ ಉಳಿದ ಆಹಾರವನ್ನು ಹಂಚಿಕೊಂಡು ತಿನ್ನಲು ಅಣಿಯಾದಾಗ, `ತಂದೆ, ಆಹಾರ ನೀಡು ತಂದೆ!’ – ಎನ್ನುವ ದನಿ ಕೇಳಿಸಿತು. ಹಸಿದು ಕಂಗಾಲಾಗಿದ್ದ ಶೂದ್ರನೊಬ್ಬ ರಂತಿದೇವನಿಗೆ ಕಾಣಿಸಿದ. ಅವನನ್ನು ಶೂದ್ರ ಎಂದು ಕಾಣದೇ ದೇವೋತ್ತಮ ಪರಮ ಪುರುಷನ ಪ್ರತಿನಿಧಿ ಎಂದೇ ಬಗೆದು ಅವನಿಗೆ ಆಹಾರದಲ್ಲಿ ಒಂದು ಪಾಲು ನೀಡಿದ. ಮತ್ತೆ, ಇನ್ನೇನು ತಿನ್ನಬೇಕು ಅಂದುಕೊಂಡಾಗ, ಇನ್ನೊಬ್ಬ ವ್ಯಕ್ತಿ ತನ್ನ ನಾಯಿಗಳೊಂದಿಗೆ ಬಂದು ಆರ್ತನಾಗಿ ಬೇಡಿದ : `ದೊರೆ, ನಾನು ಮತ್ತು ನನ್ನ ಶ್ವಾನ ಪರಿವಾರ ಹಸಿವಿನಿಂದ ಬಳಲಿದ್ದೇವೆ. ದಯವಿಟ್ಟು ನಮಗೆ ಏನಾದರೂ ತಿನ್ನಲು ಕೊಡು!’

ರಂತಿದೇವ ಯಾವ ಅನುಮಾನ-ನಿಧಾನಗಳೂ ಇಲ್ಲದೆ ಉಳಿದಿದ್ದ ಎಲ್ಲ ಆಹಾರವನ್ನೂ ಅವರಿಗೆ ಹಂಚಿಬಿಟ್ಟ. ಗೌರವದಿಂದ ನಮಸ್ಕರಿಸಿದ.

ಈಗ ಅವನಲ್ಲಿ ಉಳಿದಿದ್ದದ್ದು ಬರೀ ಒಂದಿಷ್ಟು ನೀರು ಮಾತ್ರ. ಅದನ್ನಾದರೂ ಕುಡಿಯೋಣ ಎಂದುಕೊಂಡಾಗ ಚಂಡಾಲನೊಬ್ಬ ಅಲ್ಲಿ ಕಾಣಿಸಿಕೊಂಡ. `ಹೇ, ದೊರೆಯೇ, ನಾನು ನೀಚ ಕುಲದಲ್ಲಿ ಹುಟ್ಟಿದವನು. ಆದರೂ ಕುಡಿಯಲು ನನಗೊಂದಿಷ್ಟು ನೀರು ಕರುಣಿಸು!’

ರಂತಿದೇವ ಹಿಂದುಮುಂದು ನೋಡಲಿಲ್ಲ. ಮರುಕ್ಷಣವೇ ಅವನ ಕೈಯಲ್ಲಿದ್ದ ನೀರು, ಆ ದೇಹಿ ಎಂದವನ ಕೈಯಲ್ಲಿತ್ತು.

ಆ ಸಮಯದಲ್ಲಿ ರಂತಿದೇವ ಮನಸ್ಸಿನಲ್ಲಿ ಹೀಗಂದುಕೊಂಡಿದ್ದ :

`ನಾನು ಅಷ್ಟಾಂಗ ಯೋಗಸಿದ್ಧಿಗಾಗಿ ಅಥವಾ ಪುನಃ ಪುನಃ ಜನನ ಮರಣಗಳಿಂದ ವಿಮೋಚನೆಗಾಗಿ ದೇವೋತ್ತಮ ಪರಮ ಪುರುಷನನ್ನು ಪ್ರಾರ್ಥಿಸುವುದಿಲ್ಲ. ನಾನು ಎಲ್ಲ ಜೀವಿಗಳ ನಡುವೆ ಬದುಕಲಿಚ್ಛಿಸುತ್ತೇನೆ ಮತ್ತು ಅವರ ಪರವಾಗಿ ಅವರ ಸಕಲ ಸಂಕಷ್ಟಗಳನ್ನೂ ಅನುಭವಿಸಲು ಬಯಸುತ್ತೇನೆ. ಹೀಗಾದರೂ ಅವರು ಸಕಲ ಸಂಕಷ್ಟಗಳಿಂದ ಪಾರಾದರೆ ಸಾಕು. ಬದುಕಲು ಹೋರಾಟ ನಡೆಸಿರುವ ಈ ಬಡ ಚಂಡಾಲನ ಪ್ರಾಣ ಉಳಿಸಲು ನೀರು ನೀಡುತ್ತೇನೆ. ಆ ಮೂಲಕ ನಾನು ಹಸಿವೆ, ಬಾಯಾರಿಕೆ, ದಣಿವು, ದೇಹದ ನಡುಕ, ವ್ಯಾಕುಲತೆ, ಕಷ್ಟ ಕ್ಲೇಶಗಳು, ಮೋಹ ಮತ್ತು ಭ್ರಮೆಗಳಿಂದ ಮುಕ್ತನಾಗುತ್ತೇನೆ!

ಮರುಕ್ಷಣದಲ್ಲೇ, ಬ್ರಹ್ಮ-ವಿಷ್ಣು-ಮಹೇಶ್ವರರು ದಿವ್ಯ ರೂಪದಿಂದ ಬೆಳಗುತ್ತ ಅವನ ಮುಂದೆ ನಿಂತಿದ್ದರು.

`ರಂತಿದೇವ, ನಿನ್ನ ಬಡತನ, ಈ ಉಪವಾಸ ವನವಾಸಗಳೆಲ್ಲ ನಾವು ನಿನಗೆ ಒಡ್ಡಿದ ಪರೀಕ್ಷೆಗಳು. ನೀನು ಇದನ್ನು ದಾಟಿದ್ದೀಯ, ನಮ್ಮ ಅಭಿಮಾನವನ್ನು ಗಳಿಸಿದ್ದೀಯ. ನಿನಗೇನು ಬೇಕು ಬೇಡು – ಎಲ್ಲವನ್ನೂ ನೀಡುತ್ತೇವೆ, ಯಾವ ಸಂಕೋಚವನ್ನೂ ಇಟ್ಟುಕೊಳ್ಳಬೇಡ!’

ಮೂವರೂ ಒಂದೇ ದನಿಯಾಗಿ ಅನುಗ್ರಹಿಸಿದಾಗ, ರಂತಿದೇವ ಭಕ್ತಿಯಿಂದ ವಿನೀತನಾಗಿ ಹೇಳಿದ :

`ದೇವದೇವರೆ, ನಾನಿಂದು ಕೃತಾರ್ಥನಾದೆ. ಆದರೆ, ನನಗೆಂದು ಏನೂ ಬೇಡ. ನನಗಿನ್ನೂ ಯಾವ ಐಹಿಕ ಆಸೆ-ಆಕಾಂಕ್ಷೆಗಳೂ ಉಳಿದಿಲ್ಲ. ನಾನು ಶುದ್ಧ ಭಕ್ತನಾಗಿ ಉಳಿಯಲು ಬಯಸುತ್ತೇನೆ!’

ಹೀಗೆ ರಂತಿದೇವ ತಾನೂ ಶುದ್ಧಭಕ್ತನಾದ, ತನ್ನವರನ್ನೂ ತನ್ನ ದಾರಿಯಲ್ಲಿ ನಡೆಸಿಕೊಂಡು ಹೋದ. ದೇವೋತ್ತಮ ಪರಮ ಪುರುಷನಲ್ಲಿ ಅನುರಕ್ತನಾದ. ಶ್ರೇಷ್ಠ ಯೋಗಿಯಾದ.

ಭರಧ್ವಾಜರ ವಂಶದ ಗರ್ಗನಿಗೆ ಶಿನಿ ಎಂದೊಬ್ಬ ಮಗ ಜನಿಸಿದನು. ಇವನ ಮಗ ಗಾರ್ಗ್ಯ. ಈ ಗಾರ್ಗ್ಯ ಕ್ಷತ್ರಿಯನಾದರೂ ಅವನಿಂದ ಬ್ರಾಹ್ಮಣರ ಸಂತಾನವೊಂದು ಜನಿಸಿತು. ಇವನ ಸೋದರನೇ ಆದ ಮಹಾವೀರ್ಯನಿಗೆ ದುರಿತಕ್ಷಯನೆಂಬ ಮಗ ಹುಟ್ಟಿದ. ಇವನಿಗೆ, ತ್ರೈಯ್ಯಾರುಣಿ, ಕವಿ ಮತ್ತು ಪುಷ್ಕರಾರುಣಿ ಎನ್ನುವ ಮಕ್ಕಳು. ಇವರು ಕ್ಷತ್ರಿಯ ವಂಶದಲ್ಲಿ ಹುಟ್ಟಿದರೂ ಬ್ರಾಹ್ಮಣರ ಸ್ಥಾನಮಾನಗಳನ್ನು ಪಡೆದರು. ಗರ್ಗನ ಇನ್ನೊಬ್ಬ ಸೋದರ ಬೃಹತ್‌ಕ್ಷತ್ರನಿಗೆ ಹಸ್ತೀ ಎನ್ನುವ ಮಗನಿದ್ದ. ಇವನೇ ಹಸ್ತಿನಾಪುರವನ್ನು ನಿರ್ಮಿಸಿದವನು.

ದೊರೆ ಹಸ್ತಿಗೆ, ಅಜಮೀಢ, ದ್ವಿಮೀಢ, ಪುರುಮೀಢ ಎನ್ನುವ ಮೂವರು ಪುತ್ರರು ಹುಟ್ಟಿದರು. ಅಜಮೀಢನ ಮಗನಾದ ಪ್ರಿಯಮೇಧನ ನೇತೃತ್ವದಲ್ಲಿ ಅಜಮೀಢನ ವಂಶಜರೆಲ್ಲರೂ ಬ್ರಾಹ್ಮಣ ಸ್ಥಾನಮಾನಗಳನ್ನು ಗಳಿಸಿದರು. ಅಜಮೀಢನ ಇನ್ನೊಬ್ಬ ಮಗ ಬೃಹದಿಷುವಿಗೆ ಬೃಹದ್ಧನು ಎನ್ನುವ ಮಗ, ಅವನಿಗೆ ಬೃಹತ್ಕಾಯ, ಇವನಿಗೆ ಜಯದ್ರಥನೆಂಬ ಪುತ್ರರು ಜನಿಸಿದರು. ಜಯದ್ರಥನ ಮಗ ವಿಶದ. ವಿಶದನ ಮಗ ಸ್ಯೇನಜಿತ್‌. ಇವನಿಗೆ, ರುಚಿರಾಶ್ವ, ದೃಢಹನು, ಕಾಶ್ಯ ಮತ್ತು ವತ್ಸ ಎನ್ನುವ ನಾಲ್ವರು ಮಕ್ಕಳು. ರುಚಿರಾಶ್ವನ ಮಗ ಪಾರ. ಇವನಿಗೆ ಪೃಥುಸೇನ ಮತ್ತು ನೀಪ ಎನ್ನುವ ಮಕ್ಕಳು. ನೀಪನಿಗೆ ನೂರು ಮಂದಿ ಪುತ್ರರು.

ಮಹಾರಾಜ ನೀಪ, ಶುಕನ ಪುತ್ರಿ ಕೃತ್ವೀಯಳನ್ನು ಮದುವೆಯಾದನು. ಇವರಿಗೆ ಬ್ರಹ್ಮದತ್ತನೆಂಬ ಮಗ. ಬ್ರಹ್ಮದತ್ತ ಮಹಾನ್‌ ಯೋಗಿಯಾಗಿ ಬೆಳೆದ. ಸರಸ್ವತಿಯನ್ನು ಮದುವೆಯಾಗಿ ವಿಷ್ವಕ್ಸೇನ ಎನ್ನುವ ಮಗನನ್ನು ಪಡೆದ. ಮಹರ್ಷಿ ಜೈಗೀಷವ್ಯರ ಉಪದೇಶಾನುಸಾರ ಇವನು ಹಠಯೋಗ ಪದ್ಧತಿಯ ಕುರಿತು ವಿಶದವಾದ ವ್ಯಾಖ್ಯಾನವನ್ನು ಸಂಕಲಿಸಿದ. ವಿಷ್ವಕ್ಸೇನನಿಗೆ ಉದಕಸೇನ ಹುಟ್ಟಿದ. ಇವನಿಗೆ ಭಲ್ಲಾಟನೆಂಬ ಮಗ. ಇವರೆಲ್ಲರೂ ಅಜಮೀಢನ ಮಗ ಬೃಹದೀಷುವಿನ ವಂಶಜರೆಂದೇ ಕೀರ್ತಿವಂತರಾದರು.

ಅಜಮೀಢನ ಸೋದರ ದ್ವಿಮೀಢನಿಗೆ ಯವೀನರ ಎಂಬ ಪುತ್ರ. ಇವನ ಮಗ ಕೃತಿಮಾನ್‌, ಇವನ ಮಗ ಸತ್ಯಧೃತಿ. ಇವನಿಗೆ ದೃಢನೇಮಿ ಎನ್ನುವ ಮಗ ಹುಟ್ಟಿದನು. ಇವನ ಮಗ ಸುಪಾರ್ಶ್ವ. ಇವನ ಮಗ ಸುಮತಿ. ಇವನಿಗೆ ಸನ್ನತಿಮಾನ್‌ ಎನ್ನುವ ಮಗ. ಇವನ ಮಗನಾದ ಕೃತೀ ಬ್ರಹ್ಮನಿಂದ ಸಿದ್ಧಯೋಗವನ್ನು ಪಡೆದವನಲ್ಲದೆ, ಸಾಮವೇದದ ಆರು ಪ್ರಾಚ್ಯಸಾಮ ಸಂಹಿತೆಗಳನ್ನು ಬೋಧಿಸಿದ. ಇವನ ಮಗ ನೀಪ, ಇವನ ಪುತ್ರ ಉದ್ಗ್ರಾಯುಧ. ಇವನ ಮಗ ಕ್ಷೇಮ್ಯ. ಇವನ ಮಗ ಸುವೀರ. ಇವನ ಪುತ್ರ ರಿಪುಂಜಯ. ಬಹುರಥ ಇವನ ಮಗ.

ಅಜಮೀಢನ ಇನ್ನೊಬ್ಬ ಸೋದರ ಪುರುಮೀಢನಿಗೆ ಪುತ್ರಸಂತಾನ ಇರಲಿಲ್ಲ. ಆದರೆ, ಅಜಮೀಢನಿಗೆ ಪತ್ನಿ ನಳಿನಿಯಿಂದ ನೀಲ ಎನ್ನುವ ಮಗ ಹುಟ್ಟಿದ. ನೀಲನ ಮಗ ಶಾಂತಿ. ಶಾಂತಿಯ ಮಗ ಸುಶಾಂತಿ. ಇವನ ಮಗ ಪುರುಜ. ಪುರುಜನ ಮಗ ಅರ್ಕ. ಇವನ ಮಗ ಭರ್ಮ್ಯಾಶ್ವ. ಭರ್ಮ್ಯಾಶ್ವನಿಗೆ ಐವರು ಗಂಡುಮಕ್ಕಳು – ಮುದ್ಗಲ, ಯವೀನರ, ಬೃಹದ್ವಿಶ್ವ, ಕಾಂಪಿಲ್ಲ ಮತ್ತು ಸಂಜಯ. ಭರ್ಮ್ಯಾಶ್ವ ತನ್ನ ಐವರು ಮಕ್ಕಳಲ್ಲಿ ಒಂದು ನಿವೇದನೆ ಮಾಡಿಕೊಂಡ –

`ಮಕ್ಕಳೇ, ದಯವಿಟ್ಟು ನನ್ನ ಐದು ರಾಜ್ಯಗಳ ರಾಜ್ಯಭಾರವನ್ನು ವಹಿಸಿಕೊಳ್ಳಿ. ಅದನ್ನು ವಹಿಸಿಕೊಳ್ಳಲು ನೀವು ಸಮರ್ಥರಾಗಿರುವಿರಿ!’

ಈ ಕಾರಣದಿಂದಲೇ ಈ ಐವರು ರಾಜಕುಮಾರರೂ ಪಾಂಚಾಲರೆಂದು ಪ್ರಸಿದ್ಧರಾದರು. ಹಿರಿಮಗ ಮುದ್ಗಲನಿಂದ ವೌದ್ಗಲ್ಯವೆಂದು ಪ್ರಸಿದ್ಧವಾದ ಬ್ರಾಹ್ಮಣರ ವಂಶ ಹುಟ್ಟಿಕೊಂಡಿತು.

ಮುದ್ಗಲನಿಗೆ ಒಂದು ಗಂಡು-ಒಂದು ಹೆಣ್ಣು ಎಂದು ಅವಳಿ ಮಕ್ಕಳು ಹುಟ್ಟಿದರು. ಗಂಡು ಮಗುವಿಗೆ ದಿವೋದಾಸನೆಂದು ನಾಮಕರಣ ಮಾಡಿದರು. ಹೆಣ್ಣು ಮಗುವಿಗೆ ಅಹಲ್ಯಾ ಎಂದು ಹೆಸರಿಟ್ಟರು. ಇವಳನ್ನು ಗೌತಮ ಮದುವೆಯಾದ. ಇವರಿಗೆ ಶತಾನಂದ ಎನ್ನುವ ಮಗ ಹುಟ್ಟಿದ. ಶತಾನಂದನ ಪುತ್ರ ಸತ್ಯಧೃತಿ. ಇವನು ಬಿಲ್ಲುಗಾರಿಕೆಯಲ್ಲಿ ತಜ್ಞನಾಗಿದ್ದನು. ಇವನ ಮಗ ಶರದ್ವಾನ. ಇವನು ಊರ್ವಶಿಯನ್ನು ಸಂಧಿಸಿದಾಗ ವೀರ್ಯಸ್ಕಲನವಾಗಿ ಶರ ಎನ್ನುವ ಪೊದೆಯಮೇಲೆ ಬಿದ್ದಿತು. ಇದರಿಂದ ಒಂದು ಗಂಡು ಒಂದು ಹೆಣ್ಣು ಮಕ್ಕಳು ಹುಟ್ಟಿದವು.

ಎಲ್ಲೊ ಪೊದೆಯ ಮೇಲೆ ಹುಟ್ಟಿ ಅನಾಥರಾಗಿ ಬಿದ್ದಿದ್ದ ಇವೆರಡು ಮಕ್ಕಳು ಮಹಾಭಾರತದ ಮುಖ್ಯ ಪಾತ್ರಗಳಾದದ್ದು ಒಂದು ವಿಶೇಷ!

ಶಂತನು ಮಹಾರಾಜ ಬೇಟೆಗೆ ಹೋದಾಗ ಅರಣ್ಯದಲ್ಲಿ ಈ ಮಕ್ಕಳು ಬಿದ್ದಿರುವುದನ್ನು ನೋಡಿದ. ಅನುಕಂಪದಿಂದ ತನ್ನರಮನೆಗೆ ಕರೆದುಕೊಂಡು ಬಂದ. ಗಂಡು ಮಗುವಿಗೆ ಕೃಪ ಎಂದು ನಾಮಕರಣ ಮಾಡಿದ. ಈ ಮಗುವೇ ಮುಂದೆ ಕೃಪಾಚಾರ್ಯ ಎನ್ನುವ ಹೆಸರಿನಲ್ಲಿ ಸುಪ್ರಸಿದ್ಧರಾದರು. ಮತ್ತೆ ಹೆಣ್ಣು ಮಗುವಿಗೆ ಕೃಪೀ ಎಂದು ಹೆಸರಿಡಲಾಯಿತು. ಇವಳು ಮುಂದೆ ದ್ರೋಣಾಚಾರ್ಯರ ಪತ್ನಿಯಾದಳು.

ಈ ಲೇಖನ ಶೇರ್ ಮಾಡಿ