ದ್ವಾರಕಾಧೀಶ ಶ್ರೀಕೃಷ್ಣ

ಬಲರಾಮ-ಕೃಷ್ಣರು ಬಿಲ್ಲಹಬ್ಬಕ್ಕೆ ಮಥುರೆಗೆ ಬಂದ ಕಂಸನನ್ನು ಕೊಂದರು. ಅನಂತರ ಉಗ್ರಸೇನನಿಗೆ ಪಟ್ಟಾಭಿಷೇಕವಾಯಿತು. ಆದರೆ ಇದನ್ನು ಜರಾಸಂಧ ಸಹಿಸಲಿಲ್ಲ. ಜರಾಸಂಧನಿಗೆ ಇಡೀ ಭಾರತವನ್ನು ತನ್ನ ನಿಯಂತ್ರಣಕ್ಕೆ ತಂದುಕೊಳ್ಳುವ ಮಹತ್ವಾಕಾಂಕ್ಷೆ ಇತ್ತು. ಕಂಸವಧೆಯಿಂದ ಇದಕ್ಕೆ ಒಂದು ರೀತಿಯ ಆಘಾತವುಂಟಾಯಿತೆಂದೇ ಹೇಳಬೇಕು. ಹತ್ತು ವರುಷದ ಹುಡುಗ ಕೃಷ್ಣನ ಸಾಮರ್ಥ್ಯದಿಂದ ಜರಾಸಂಧನಿಗೆ ಒಳಗೊಳಗೇ ಒಂದು ರೀತಿಯ ನಡುಕವಿತ್ತು. ಹಾಗಾಗಿ ಅವನು 23 ಅಕ್ಷೋಹಿಣಿ ಸೇನೆಯನ್ನು ಸಜ್ಜುಗೊಳಿಸಿದ ಮತ್ತು ಮಥುರೆಯನ್ನು 16 ಬಾರಿ ಮುತ್ತಿಗೆ ಹಾಕಿ ಕೃಷ್ಣನಿಂದ ಸೋಲನ್ನುಂಡ. 17ನೆಯ ಬಾರಿ ಮುತ್ತಿಗೆ ಹಾಕಲು ಹವಣಿಸಿದ.

ಮಥುರೆಯ ಮೇಲೆ ಕಾಲಯವನ ಹಾಗೂ ಜರಾಸಂಧ ಈರ್ವರೂ ಏಕಕಾಲದಲ್ಲಿ ದಾಳಿಮಾಡುವುದೆಂದು ಯೋಜನೆ ಹೂಡಿದ್ದರು. ಕಾಲಯವನ ಯದುವಂಶದ ವೈರಿ. ಕಾಲಯವನನಿಗೆ ಶ್ರೀಕೃಷ್ಣ ಮಾತ್ರ ಕಾಣುತ್ತಾನೆ. ಅವನನ್ನು ಅಟ್ಟಿಕೊಂಡು ಹೋದಾಗ, ಶ್ರೀಕೃಷ್ಣ ದೂರದ ಕಾಡಿನ ಮಧ್ಯದ ಗುಹೆಯೊಂದರಲ್ಲಿ ಅವಿತು ಕುಳಿತುಕೊಳ್ಳುತ್ತಾನೆ. ಕಾಲಯವನನಾದರೋ ಶ್ರೀಕೃಷ್ಣನನ್ನು ಬೆನ್ನಟ್ಟಿಹೋಗಿ ಗುಹೆಯ ಕತ್ತಲಲ್ಲಿ ಮಲಗಿದ್ದ ಮುಚುಕುಂದನೆಂಬ ರಾಜನನ್ನು ಕಂಡು ಅವನೇ ಕೃಷ್ಣನೆಂದು ಭ್ರಮಿಸಿ, ಎಡಗಾಲಿನಿಂದ ಒದೆಯುತ್ತಾನೆ. ಮುಚುಕುಂದ ಸಿಟ್ಟಿನಿಂದ ಎಚ್ಚರಗೊಂಡು ಕಣ್ಣುಬಿಟ್ಟಾಗ, ಅವನ ದೃಷ್ಟಿಗೆ ಬಿದ್ದ ಕಾಲಯವನ ಬೆಂದು ಬೂದಿಯಾಗುತ್ತಾನೆ. ದುಷ್ಟನಾದ ಕಾಲಯವನನನ್ನು ಕೊಂದ ಮುಚುಕುಂದನಿಗೆ ಶ್ರೀಕೃಷ್ಣ ತನ್ನ ದಿವ್ಯರೂಪವನ್ನು ತೋರಿ ಅನುಗ್ರಹಿಸಿ ದ್ವಾರಕೆಗೆ ತೆರಳುತ್ತಾನೆ. ಶ್ರೀಕೃಷ್ಣನನ್ನು ನಿಗ್ರಹಿಸುವ ಜರಾಸಂಧನ ಕನಸು ಹಾಗೆಯೇ ಉಳಿಯುತ್ತದೆ.

ಇದನ್ನು ತಿಳಿದ ಶ್ರೀಕೃಷ್ಣ ಹೊಸ ಉಪಾಯದ ಅನ್ವೇಷಣೆಗೆ ತೊಡಗಿದ. ಜರಾಸಂಧನ ಆಕ್ರಮಣವನ್ನು ತಡೆದುಕೊಳ್ಳಬಲ್ಲ ಅಭೇದ್ಯ ನಗರವೊಂದನ್ನು ನಿರ್ಮಿಸಲು ಶ್ರೀಕೃಷ್ಣ ನಿರ್ಧರಿಸಿದ. ಯಾರೂ ಪ್ರವೇಶಿಸಲಾಗದ ದುರ್ಗಮ ಕೋಟೆಯಿಂದ ಕೂಡಿದ ನಗರವನ್ನು ಪಶ್ಚಿಮ ಸಮುದ್ರ ಮಧ್ಯದಲ್ಲಿ ನಿರ್ಮಿಸಲು ದೇವಶಿಲ್ಪಿ ವಿಶ್ವಕರ್ಮನನ್ನು ಕರೆಸಿಕೊಂಡ. ದ್ವಾರಕಾವತಿ ಎಂಬ ದ್ವೀಪನಗರ ವಿಶ್ವಕರ್ಮನಿಂದ ನಭೂತೋ ನಭವಿಷ್ಯತಿ ಎಂಬಂತೆ ನಿರ್ಮಾಣಗೊಂಡಿತು. ಅದರ ವಿಸ್ತೀರ್ಣ 96 ಚದರ ಮೈಲಿಗಳು. ಅನೇಕ ಸುಂದರ ಅರಮನೆಗಳು, ಕೋಟೆ ಕೊತ್ತಲಗಳು, ಕಲ್ಪವೃಕ್ಷ ಮಂದಾರ ಚಂದನಗಳಿಂದ ಕಂಗೊಳಿಸುವ ಉದ್ಯಾನಗಳು, ಅಲ್ಲಲ್ಲಿ ಲತಾಮಂಟಪಗಳು, ಮರಕತಮಯವಾದ ರಥ ಬೀದಿಗಳು, ಮನೋಹರವಾದ ಕೊಳಗಳು ಮುಂತಾದವುಗಳಿಂದ ದ್ವಾರಕಾವತಿ ಭುವನಮೋಹಕವಾಗಿ ಶೋಭಿಸಿತು. ದೇವಲೋಕವೇ ಭೂಮಿಗೆ ಇಳಿದುಬಂದ ಹಾಗೆ ಅದು ಕಂಗೊಳಿಸಿತು. ಭಗವಾನ್‌ ಶ್ರೀಕೃಷ್ಣನ ಮೇಲಿನ ಭಕ್ತಿಭಾವದಿಂದ ದೇವೇಂದ್ರನೇ ತನ್ನ ಸುಧರ್ಮ ಸಭಾಮಂದಿರವನ್ನು ದ್ವಾರಾವತಿಗೆ ಕಳುಹಿಸಿದನು. ಈ ಸುಧರ್ಮ ಸಭೆಯಲ್ಲಿ ಕುಳಿತುಕೊಂಡಷ್ಟು ಕಾಲ ಯಾರಿಗೂ ವೃದ್ಧಾಪ್ಯವೇ ಬಾರದು. ವರುಣದೇವ ತನ್ನ ಮನೋವೇಗದ ದಿವ್ಯ ಕುದುರೆಯೊಂದನ್ನು ಶ್ರೀಕೃಷ್ಣನಿಗೆ ಉಡುಗೊರೆಯಾಗಿ ನೀಡಿದನು. ಕುಬೇರನು ಅಷ್ಟಸಿದ್ಧಿಗಳನ್ನೇ ತಂದೊಪ್ಪಿಸಿದನು. ಹೀಗೆ ದೇವಾನುದೇವತೆಗಳಿಂದ ಸಂಪನ್ನಗೊಂಡ ದ್ವಾರಾವತಿಗೆ ಮಥುರೆಯ ಪುರಜನ ಪರಿಜನರೆಲ್ಲ ಬಂದು ವಾಸವಾದರು.

ರುಕ್ಮಿಣೀ ವಿವಾಹ

ವಿದರ್ಭದ ಕುಂಡಿನಾವತಿಯ ಅರಸು ಭೀಷ್ಮಕನಿಗೆ ರುಕ್ಮಿ, ರುಕ್ಮರಥ, ರುಕ್ಮಬಾಹು, ರುಕ್ಮಕೇಶ, ರುಕ್ಮಮಾಲಿ ಎಂಬ ಐವರು ಗಂಡು ಮಕ್ಕಳು. ರುಕ್ಮಿಣಿ ಏಕೈಕ ಪುತ್ರಿ, ತುಂಬಾ ಚೆಲುವೆ. ಅವಳ ಅಣ್ಣನಾದ ರುಕ್ಮಿಗೆ ಅವಳನ್ನು ಮಿತ್ರ ಶಿಶುಪಾಲನಿಗೆ ಕೊಟ್ಟು ಮದುವೆ ಮಾಡಿಸುವ ಆಲೋಚನೆ. ಶಿಶುಪಾಲನಾದರೋ ಶ್ರೀಕೃಷ್ಣನ ಬದ್ಧದ್ವೇಷಿ. ಜರಾಸಂಧನ ಆಪ್ತರಲ್ಲಿ ಶಿಶುಪಾಲನೂ ಒಬ್ಬ. ಆದರೆ ರುಕ್ಮಿಣಿಗೆ ಶ್ರೀಕೃಷ್ಣನನ್ನೇ ಮದುವೆಯಾಗಬೇಕೆಂಬ ಹಂಬಲ. ಅನುದಿನವೂ ಅವನದೇ ಸ್ಮರಣೆ. ಆದರೆ ಅದು ಈಡೇರುವುದು ಹೇಗೆಂಬ ಚಿಂತೆ ಅವಳಿಗೆ. ನಾರದ ಮಹರ್ಷಿಗಳು ಬಂದಾಗಲೆಲ್ಲ ರುಕ್ಮಿಣಿ ಅವರಲ್ಲಿ ಶ್ರೀಕೃಷ್ಣನ ಕುರಿತಾಗಿ ತಿಳಿದುಕೊಳ್ಳುತ್ತಿದ್ದಳು. ರುಕ್ಮಿಣಿಯ ಸೌಂದರ್ಯಗುಣಾತಿಶಯಗಳ ಬಗೆಗೆ ನಾರದರೂ ಶ್ರೀಕೃಷ್ಣನಿಗೆ ದ್ವಾರಕೆಗೆ ಹೋದಾಗಲೆಲ್ಲ ತಿಳಿಸುತ್ತಿದ್ದರು. ಕೊನೆಗೊಂದು ದಿನ, ರುಕ್ಮಿಣಿಯ ಅಣ್ಣ ಶಿಶುಪಾಲನೊಂದಿಗೆ ಅವಳ ಮದುವೆ ನಡೆಸುವುದಕ್ಕೆ ನಿಶ್ಚಯಿಸಿಯೇ ಬಿಟ್ಟ. ಮುಂದೇನು ಮಾಡುವುದೆಂದು ತೋಚದ ರುಕ್ಮಿಣಿ ಒಬ್ಬ ವೃದ್ಧ ಬ್ರಾಹ್ಮಣನನ್ನು ಕರೆದು, ಗುಟ್ಟಿನಲ್ಲಿ ಪ್ರೇಮಪತ್ರವೊಂದನ್ನು ಬರೆದು, ಅದನ್ನು ಶ್ರೀಕೃಷ್ಣನಿಗೆ ಕೊಡಬೇಕೆಂದು ವಿನಂತಿಸಿದಳು. ವೃದ್ಧ ವಿಪ್ರ ಕುಂಡಿನಾವತಿಯಿಂದ ದ್ವಾರಕೆಗೆ ಬಂದು, ಶ್ರೀಕೃಷ್ಣನಿಗೆ ರುಕ್ಮಿಣಿಯ ಓಲೆಯನ್ನು ನೀಡಿದನು. ಪ್ರೀತಿಯಿಂದ ಪೋಣಿಸಿದ ಮುತ್ತುಗಳಂತಿದ್ದ ಪತ್ರದ ಪದಪದಗಳೂ ಶ್ರೀಕೃಷ್ಣನ ಚಿತ್ತವನ್ನು ಆಕರ್ಷಿಸಿದವು – “ಭಗವಾನ್‌! ಈ ರುಕ್ಮಿಣಿಯ ಸರ್ವಸ್ವವೂ ನೀವೇ ಆಗಿದ್ದೀರಿ. ಕ್ಷಣಕ್ಷಣವೂ ನಿಮ್ಮ ನೆನಪಲ್ಲೇ ಮುಳುಗಿದ್ದೇನೆ ಪ್ರಭೂ! ನಿಮ್ಮ ಕೈಹಿಡಿದು ಬಾಳುವ ಭಾಗ್ಯ ನನ್ನದಾದರೆ, ನನ್ನಂತಹ ಸೌಭಾಗ್ಯವತಿಯರು ಈರೇಳು ಲೋಕದಲ್ಲೂ ಇರಲಾರರು. ದುಷ್ಟನಾದ ಶಿಶುಪಾಲನಿಗೆ ನನ್ನನ್ನು ಮದುವೆ ಮಾಡಿಕೊಡುವುದಕ್ಕಿಂತ ಮೊದಲು ಹೇಗಾದರೂ ನನ್ನನ್ನು ಕಾಪಾಡಿ. ಹೇ ಕರುಣಾಮೂರ್ತಿ! ಒಂದು ವೇಳೆ ನೀವು ರಕ್ಷಿಸದೇ ಹೋದರೆ, ನಾನು ಜೀವ ಉಳಿಸಿಕೊಳ್ಳುವುದಿಲ್ಲ. ನಿಮ್ಮ ದಾರಿಯನ್ನೇ ಕಾಯುತ್ತಿರುತ್ತೇನೆ.”

ರುಕ್ಮಿಣಿಯ ಪತ್ರವನ್ನು ಓದಿದ ಕೃಷ್ಣನಿಗೆ ಹೃದಯ ತುಂಬಿಬಂತು. ಹೆಚ್ಚು ಯೋಚಿಸಲು ಸಮಯಾವಕಾಶವಿರಲಿಲ್ಲ. ರಾತ್ರಿ ಬೆಳಗಾಗುವುದರೊಳಗೆ ಸಾವಿರ ಮೈಲಿ ದೂರದ ಕುಂಡಿನಾಪುರಕ್ಕೆ ತಲುಪಬೇಕಾಗಿತ್ತು. ಶೈಬ್ಯ, ಸುಗ್ರೀವ, ಮೇಘಪುಷ್ಪ, ಬಲಾಹಕಗಳೆಂಬ ದಿವ್ಯಹಯಗಳನ್ನು ಆಗಲೇ ಸಾರಥಿ ರಥಕ್ಕೆ ಕಟ್ಟಿದ್ದನು. ಶ್ರೀಕೃಷ್ಣ ವೃದ್ಧ ಬ್ರಾಹ್ಮಣನನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಕುಂಡಿನಾಪುರಕ್ಕೆ ಧಾವಿಸಿದನು.

ರುಕ್ಮಿಣಿಗೆ ಎಲ್ಲ ಶೃಂಗಾರಗಳನ್ನು ಮಾಡಲಾಗಿತ್ತು. ಶಿಶುಪಾಲನಂತೂ ಬಾಸಿಂಗ ಕಟ್ಟಿಕೊಂಡು ಪೂಜಾವಿಧಿ ಗಳಿಗೆ ಸಿದ್ಧನಾಗಿದ್ದನು. ಜರಾಸಂಧ, ದಂತವಕ್ರ, ವಿಡೂರಥ, ಪೌಂಡ್ರಕರೇ ಮೊದಲಾದ ಶಿಶುಪಾಲನ ಆಪ್ತರು ಒಂದು ವೇಳೆ ಶ್ರೀಕೃಷ್ಣ ಬಂದರೆ ಅವನನ್ನು ಎದುರಿಸುವುದಕ್ಕೆ ಸಿದ್ಧರಾಗಿದ್ದರು. ಸಂಪ್ರದಾಯದಂತೆ ಪೂಜೆಗಾಗಿ ನವವಧು ರುಕ್ಮಿಣಿಯನ್ನು ದುರ್ಗಾದೇವಿಯ ಗುಡಿಗೆ ಕರೆತರಲಾಯಿತು. ಶ್ರೀಕೃಷ್ಣನಾದರೋ

 ದುರ್ಗಾಮಂದಿರದ ಪ್ರವೇಶದ್ವಾರದಲ್ಲೇ ಅವಳ ಆಗಮನವನ್ನೇ ಕಾದು ನಿಂತುಕೊಂಡಿದ್ದನು. ಆಕೆ ಬಂದ ಕೂಡಲೇ ಅವಳನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಮಿಂಚಿನಂತೆ ಮಾಯವಾದನು. ತನ್ನನ್ನು ತಡೆದ ರಾಜಕುಮಾರರನ್ನು ಬಡಿದುರುಳಿಸಿ ಮುಂದೆ ಸಾಗುತ್ತಿದ್ದಾಗ ರುಕ್ಮಿಣಿಯ ಅಣ್ಣನಾದ ರುಕ್ಮಿಯೇ ಎದುರಾದನು. ಅವನನ್ನು ಯುದ್ಧದಲ್ಲಿ ಸೋಲಿಸಿ, ಶಿರಸ್ಸನ್ನೇ ಕತ್ತರಿಸಿಬಿಡುತ್ತೇನೆಂದು ಖಡ್ಗವನ್ನು ಸೆಳೆದನು. ಅಷ್ಟರಲ್ಲಿ ರುಕ್ಮಿಣಿಯು `ಅಣ್ಣನನ್ನು ದಯವಿಟ್ಟು ಕೊಲ್ಲಬೇಡಿ’ರೆಂದು ವಿನಂತಿಸಿದಳು. ಅವಳ ವಿನಂತಿಗೆ ಓಗೊಟ್ಟು, ರುಕ್ಮಿಯ ತಲೆಗೂದಲನ್ನು ನುಣ್ಣಗೆ ಬೋಳಿಸಿದನು. ರುಕ್ಮಿಣಿಯೊಂದಿಗೆ ಶ್ರೀಕೃಷ್ಣನ ರಥ ದ್ವಾರಕೆಯತ್ತ ಧಾವಿಸಿತು. ಆ ಬಳಿಕ ಸಂಪ್ರದಾಯದಂತೆ ವಿವಾಹ ವಿಧಿ ಗಳು ನಡೆದು ರುಕ್ಮಿಣಿ ಶ್ರೀಕೃಷ್ಣನ ಮಡದಿಯಾದಳು.

ಸ್ಯಮಂತಕ ರತ್ನ

ಸತ್ರಾಜಿತನೆಂಬ ದೊರೆಯ ಹತ್ತಿರ `ಸ್ಯಮಂತಕ’ ಎಂಬ ಅಪೂರ್ವ ರತ್ನವಿತ್ತು. ಅದು ಅವನಿಗೆ ಸೂರ್ಯದೇವರ ಅನುಗ್ರಹದಿಂದ ದೊರೆತಿತ್ತು. ಅದರ ಕಾಂತಿ ಎಷ್ಟೆಂದರೆ, ಆ ರತ್ನವನ್ನು ಧರಿಸಿದವರು ಸೂರ್ಯದೇವರಷ್ಟೇ ಕಾಂತಿಯಿಂದ ಬೆಳಗುತ್ತಿದ್ದರು. ಜೊತೆಗೆ ಆ ರತ್ನವು ಪ್ರತಿದಿನವೂ ಮಣಗಟ್ಟಲೆ ಚಿನ್ನವನ್ನೂ ನೀಡುತ್ತಿತ್ತು. ಈ ಕಾರಣದಿಂದ ಸ್ಯಮಂತಕ ರತ್ನದ ಬಗೆಗೆ ಎಲ್ಲರಿಗೂ ಅತಿಯಾದ ವ್ಯಾಮೋಹವಿದ್ದರೂ, ಅದು ಸತ್ರಾಜಿತನ ಹತ್ತಿರವಿದ್ದುದರಿಂದ ಉಳಿದವರು ಏನೂ ಮಾಡುವಂತಿರಲಿಲ್ಲ. ಒಂದು ದಿನ ಸತ್ರಾಜಿತನು ಶ್ರೀಕೃಷ್ಣನ ಅರಮನೆಗೆ ಬಂದನು. ಇಬ್ಬರೂ ಕುಶಲ ಸಮಾಚಾರದಲ್ಲಿ ತೊಡಗಿದಾಗ, ಶ್ರೀಕೃಷ್ಣನು ಸತ್ರಾಜಿತನಲ್ಲಿ ಸ್ಯಮಂತಕರತ್ನದ ವಿಷಯವನ್ನು ಪ್ರಸ್ತಾಪಿಸಿ ಅದನ್ನು ಯಾದವರ ಅರಸನಾದ ಉಗ್ರಸೇನನಿಗೆ ನೀಡಬೇಕೆಂದು ಕೇಳಿಕೊಂಡನು. ಆದರೆ ಅದಕ್ಕೆ ಸತ್ರಾಜಿತ ಒಪ್ಪಲಿಲ್ಲ. ಶ್ರೀಕೃಷ್ಣನ ಕೋರಿಕೆಯನ್ನು ನಿರಾಕರಿಸಿ ಸತ್ರಾಜಿತ ಹಿಂತಿರುಗಿಬಿಟ್ಟನು.

ಒಂದು ದಿನ ಸತ್ರಾಜಿತನ ತಮ್ಮನಾದ ಪ್ರಸೇನನೆಂಬವನು ಈ ರತ್ನವನ್ನು ಧರಿಸಿಕೊಂಡು ಬೇಟೆಯಾಡಲು ಹೊರಟನು. ದಟ್ಟವಾದ ಕಾಡಿನಲ್ಲಿ ಅವನು ಬೇಟೆಯಾಡುತ್ತಾ ಬಂದಾಗ, ಸಿಂಹವೊಂದು ಹಠಾತ್ತನೆ ಎರಗಿ ಪ್ರಸೇನನನ್ನು ಕೊಂದುಬಿಟ್ಟಿತು. ವಿಧಿಯಾಟವನ್ನು ಯಾರು ಬಲ್ಲರು? ಸ್ಯಮಂತಕ ರತ್ನವನ್ನು ಕಚ್ಚಿಹಿಡಿದ ಸಿಂಹವನ್ನು ಕರಡಿಗಳರಾಜ ಜಾಂಬವಂತನು ಕೊಂದು, ರತ್ನವನ್ನು ತನ್ನ ಗುಹೆಗೆ ಹಿಡಿದುಕೊಂಡೊಯ್ದನು.

ಪ್ರಸೇನನು ಕಾಡಿನಿಂದ ಹಿಂತಿರುಗಿ ಬಾರದಿದ್ದಾಗ, ಊರಲ್ಲಿ ಕಳವಳ ಹೆಚ್ಚಾಯಿತು. ಸತ್ರಾಜಿತನಿಗೆ ಚಿಂತೆ ಹೆಚ್ಚಾಯಿತು. ಪ್ರಸೇನನನ್ನು  ಸಿಂಹ ಕೊಂದ ವಿಚಾರವಾಗಲೀ, ಸಿಂಹವನ್ನು ಕೊಂದು ಸ್ಯಮಂತಕವನ್ನು ಕೊಂಡೊಯ್ದ ಜಾಂಬವಂತನ ವಿಚಾರವಾಗಲೀ ಸತ್ರಾಜಿತನಿಗೆ ತಿಳಿಯದೆ, ಕೃಷ್ಣನ ಮೇಲೆ ಅವನಿಗೆ ಸಂದೇಹ ಹೆಚ್ಚಿತು. ಶ್ರೀಕೃಷ್ಣನೇ ಪ್ರಸೇನನನ್ನು ಕೊಂದು ಸ್ಯಮಂತಕವನ್ನು ಅಪಹರಿಸಿರಬೇಕೆಂದು ಗಾಳಿಮಾತು ಹರಡಿತು. ಈ ಅಪವಾದವನ್ನು ಕೇಳಿದ ಶ್ರೀಕೃಷ್ಣ, ಸತ್ಯಸಂಗತಿಯನ್ನು ಲೋಕಕ್ಕೆ ತಿಳಿಸಬೇಕೆಂದು ಕಾಡಿನೊಳಗೆ ಹೋದನು. ಕಾಡೆಲ್ಲಾ ತಿರುಗಿ ಕೊನೆಗೆ ಗುಹೆಯೊಂದರಲ್ಲಿ ರತ್ನದ ಪ್ರಭೆಯನ್ನು ಕಂಡು, ಆ ಗುಹೆಯೊಳಗೆ ಪ್ರವೇಶಿಸಿದನು.

ಜಾಂಬವಂತನಾದರೋ ಶ್ರೀರಾಮಚಂದ್ರನ ಪರಮಭಕ್ತ. ತ್ರೇತಾಯುಗದಲ್ಲಿ ಭಗವಂತನ ಸೇವೆಮಾಡಿದ ಪುಣ್ಯಜೀವಿ. ಬ್ರಹ್ಮದೇವ ಸಂಜಾತನಾದ ಜಾಂಬವಂತ ತುಂಬಾ ಹಿರಿಯವನು. ಪಾರ್ವತೀ ಪರಮೇಶ್ವರ ವಿವಾಹಕಾಲಕ್ಕೆ ಅವನಿಗೆ ಹತ್ತೊಂಬತ್ತು ವರ್ಷವೆಂದು ಪುರಾಣಗಳು ಹೇಳುತ್ತವೆ. ಅವನಿಗೆ ಸ್ವಯಂ ಶ್ರೀರಾಮಚಂದ್ರನೇ – `ಮುಂದಿನ ಯುಗದಲ್ಲೂ ದರ್ಶನವೀಯುತ್ತೇನೆ’ ಎಂದು ಹೇಳಿದ್ದನು. ಆ ಮಾತಿನಂತೆ ದ್ವಾಪರಯುಗದಲ್ಲೂ ಭಗವಂತನು ತನ್ನ ಭಕ್ತ ಜಾಂಬವಂತನಿಗೆ ಶ್ರೀಕೃಷ್ಣ ರೂಪದಲ್ಲಿ ದರ್ಶನವೀಯಲು ಬಂದಿದ್ದಾನೆ. ಆದರೆ ಶ್ರೀಕೃಷ್ಣನನ್ನು ಗುರುತಿಸಲಾಗದೆ ಜಾಂಬವಂತ ದುರುಗುಟ್ಟಿ ನೋಡುತ್ತಾನೆ. ಸ್ಯಮಂತಕರತ್ನ ಬೇಕೆಂದು ಶ್ರೀಕೃಷ್ಣ ಕೇಳಿದಾಗ, ಅದನ್ನು ಕೊಡಲಾರೆನೆಂದು ಜಾಂಬವಂತ ಮಲ್ಲಯುದ್ಧಕ್ಕೆ ಸನ್ನದ್ಧನಾಗುತ್ತಾನೆ. ಕೃಷ್ಣ-ಜಾಂಬವಂತರ ನಡುವೆ 28 ದಿನಗಳ ದೀರ್ಘಯುದ್ಧ ನಡೆದು, ಕೊನೆಗೆ ಶ್ರೀಕೃಷ್ಣನು ಅವನಿಗೆ ತನ್ನ ಹಿಂದಿನ ಶ್ರೀರಾಮಾವತಾರದ ರೂಪವನ್ನು ತೋರಿಸುತ್ತಾನೆ. ಜಾಂಬವಂತ ಭಗವಂತನ ಚರಣಾರವಿಂದಕ್ಕೆ ತಲೆಬಾಗಿ, ಸ್ಯಮಂತಕ ರತ್ನದೊಂದಿಗೆ ತನ್ನ ಮಗಳು ಜಾಂಬವತಿಯನ್ನೂ ಶ್ರೀಕೃಷ್ಣನಿಗೆ ಸಮರ್ಪಿಸುತ್ತಾನೆ. ದ್ವಾರಕೆಗೆ ಹಿಂತಿರುಗಿದ ಶ್ರೀಕೃಷ್ಣ, ಸ್ಯಮಂತಕವನ್ನು ಸತ್ರಾಜಿತನಿಗೆ ಕೊಟ್ಟು ನಡೆದ ಕಥೆಯನ್ನೆಲ್ಲಾ ವಿವರಿಸುತ್ತಾನೆ. ಸತ್ರಾಜಿತನಿಗೆ ತಾನು ನಿರಪರಾಧಿಯಾದ ಕೃಷ್ಣನ ಮೇಲೆ ವಿನಾಕಾರಣ ಆರೋಪ ಹೊರಿಸಿದೆನಲ್ಲಾ ಎಂದು ದುಃಖವಾಗುತ್ತದೆ. ಅದಕ್ಕಾಗಿ ಸತ್ರಾಜಿತ ಶ್ರೀಕೃಷ್ಣನಿಗೆ ಸ್ಯಮಂತಕವನ್ನು ಕೊಟ್ಟು ತನ್ನ ಮಗಳಾದ ಸತ್ಯಭಾಮೆಯನ್ನೂ ಮದುವೆ ಮಾಡಿಕೊಡುತ್ತಾನೆ.

ಮತ್ತೆ ಐವರು ರಾಣಿಯರು

ಒಮ್ಮೆ ಪಾಂಡವರ ಕುಶಲವನ್ನು ವಿಚಾರಿಸಲು ಶ್ರೀಕೃಷ್ಣ ಹಸ್ತಿನಾವತಿಗೆ ಬಂದನು. ಅತ್ತೆ ಕುಂತೀದೇವಿಯ ಆಶೀರ್ವಾದಗಳನ್ನು ಪಡೆದು, ಧರ್ಮರಾಜಾದಿಗಳ ಕ್ಷೇಮವನ್ನೂ ವಿಚಾರಿಸಿದನು. ಆಪ್ತ ಗೆಳೆಯನಾದ ಅರ್ಜುನನೊಂದಿಗೆ ಯಮುನಾ ನದಿಯ ತೀರಕ್ಕೆ ವಿಹರಿಸುತ್ತಾ ಬಂದನು. ಆಗ ಅಲ್ಲಿ ಒಂದು ಅಚ್ಚರಿ ನಡೆಯಿತು. ನದೀತಟದಲ್ಲಿ ಒಬ್ಬಳು ಲಾವಣ್ಯವತಿಯಾದ ಕನ್ಯಾಮಣಿಯು ಅತ್ತಿಂದಿತ್ತ ಇತ್ತಿಂದತ್ತ ನಡೆದಾಡುತ್ತಿರುವುದನ್ನು ಶ್ರೀಕೃಷ್ಣ ಕಂಡು, ಅವಳಾರೆಂದು ತಿಳಿದು ಬರುವಂತೆ ಅರ್ಜುನನ್ನು ಕಳುಹಿಸಿದನು. ಅರ್ಜುನನಾದರೋ ಆ ತರುಣಿಯ ಹತ್ತಿರ ಬಂದು, `ನೀನು ಯಾರು? ಎಲ್ಲಿಯವಳು? ಏಕಾಂಗಿಯಾಗಿ ಯಾಕೆ ತಿರುಗುತ್ತಿರುವೆ?’ ಎಂದು ಪ್ರಶ್ನಿಸಿದನು. ಅದಕ್ಕೆ ಆಕೆ – `ಆಯ್ಯೊ! ನಾನು ಕಾಳಿಂದಿ ಎಂಬಾಕೆ; ಸೂರ್ಯಪುತ್ರಿ. ಈ ಯಮುನಾ ನದಿಯೊಳಗೆ ನನ್ನ ವಾಸ. ಭಗವಾನ್‌ ಶ್ರೀಕೃಷ್ಣನೇ ನನ್ನ ಪತಿಯಾಗಬೇಕೆಂದು ದೀಕ್ಷಾಬದ್ಧಳಾಗಿದ್ದೇನೆ. ಆ ಪರಮ ಪುರುಷನನ್ನು ಸೇರುವುದಕ್ಕಾಗಿ ಸದಾ ಅವನನ್ನೇ ಧ್ಯಾನಿಸುತ್ತಿದ್ದೇನೆ’ ಎಂದು ಮಾರ್ನುಡಿದಳು. ತತ್‌ಕ್ಷಣ ಶ್ರೀಕೃಷ್ಣನು ಅಲ್ಲಿಗೇ ಬಂದು, ಕಾಳಿಂದಿಯ ಕೈಹಿಡಿದು – `ಮುಗುದೆ, ನಿನ್ನ ತಪಸ್ಸಿಗೆ ನಾನು ಮೆಚ್ಚಿದ್ದೇನೆ. ನಿನ್ನನ್ನು ಪತ್ನಿಯಾಗಿ ಸ್ವೀಕರಿಸಿದ್ದೇನೆ’ ಎಂದು ಸಂತೈಸಿ, ಅವಳನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಹಸ್ತಿನಾವತಿಗೆ ಹಿಂದಿರುಗುತ್ತಾನೆ. ಅಲ್ಲಿ ಸ್ವಲ್ಪ ಕಾಲವಿದ್ದು, ಆ ಬಳಿಕ ದ್ವಾರಕಾವತಿಗೆ ಬಂದನು.

ಆವಂತಿಯ ದೊರೆಗಳಾದ ವಿಂದ್ಯ ಮತ್ತು ಅನುವಿಂದ್ಯ ಎಂಬವರಿಗೆ ಮಿತ್ರವಿಂದಾ ಎಂಬ ತಂಗಿಯಿದ್ದಳು. ಶ್ರೀಕೃಷ್ಣನ ಸೋದರತ್ತೆಯಾದ ರಾಜಾಧಿದೇವಿಯ ಮಕ್ಕಳಿವರು. ಆದರೆ ವಿಂದ್ಯಾನುವಿಂದ್ಯರು ದುರ್ಯೋಧನನಿಗೆ ಹೆಚ್ಚು ಆಪ್ತರು. ಮಿತ್ರವಿಂದೆಗಂತೂ ಶ್ರೀಕೃಷ್ಣನನ್ನೇ ವಿವಾಹವಾಗಬೇಕೆಂಬ ಉತ್ಕಟ ಬಯಕೆ. ಆದರೆ ಅದಕ್ಕೆ ವಿರುದ್ಧವಾಗಿ ಅವಳ ಅಣ್ಣಂದಿರು ಸ್ವಯಂವರವನ್ನು ಏರ್ಪಡಿಸಿದರು. ಆದರೆ ನಂಬಿದವರನ್ನು ಬೆಂಬಿಡದ ಕರುಣಾಮೂರ್ತಿಯಲ್ಲವೇ ಶ್ರೀಕೃಷ್ಣ? ಸ್ವಯಂವರ ಮಂಟಪಕ್ಕೆ ಆಗಮಿಸಿದ ಶ್ರೀಕೃಷ್ಣ, ಅನೇಕ ರಾಜಕುಮಾರರು ನೋಡುನೋಡುತ್ತಿದ್ದಂತೆಯೇ ಮಿತ್ರವಿಂದೆಯನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಹೋಗಿ, ಮದುವೆಯಾದನು.

ಇತ್ತ ಕೋಸಲದೇಶದಲ್ಲಿ ನಗ್ನಜಿತು ಎಂಬ ರಾಜನಿದ್ದನು. ಅವನಿಗೆ ಸತ್ಯಾ ಎಂಬ ಮಗಳು. ಅವಳಿಗೆ ನಾಗ್ನಜಿತಿ ಎಂದೂ ಕರೆಯುತ್ತಿದ್ದರು. ನಗ್ನಜಿತು ರಾಜನು ಏಳು ಸೊಕ್ಕಿದ ಗೂಳಿಗಳನ್ನು ಸಾಕಿದ್ದನು. ಅವು ಎಷ್ಟೊಂದು ಬಲಶಾಲಿಗಳಾಗಿದ್ದವೆಂದರೆ, ಅವುಗಳನ್ನು ಸೋಲಿಸಿದ ರಾಜಕುಮಾರರಿಗೆ ಮಾತ್ರ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿಸುತ್ತೇನೆಂದು ಸಾರಿದ್ದನು. ಈ ವಾರ್ತೆಯನ್ನು ಕೇಳಿದ ಶ್ರೀಕೃಷ್ಣ ನೇರವಾಗಿ ಒಂದು ದಿನ ಕೋಸಲಕ್ಕೆ ಬಂದು ಏಳು ಮದಭರಿತ ಗೂಳಿಗಳನ್ನು ಎದುರಿಸಿ, ಅವುಗಳನ್ನು ಮಣಿಸಿ ನಾಗ್ನಜಿತಿ ಕೈಹಿಡಿದನು.

ಕೇಕಯ ದೇಶದಲ್ಲಿ ಶ್ರೀಕೃಷ್ಣನ ಮತ್ತೊಬ್ಬಳು ಸೋದರ ಅತ್ತೆ ಶ್ರುತಕೀರ್ತಿ ಇದ್ದಳು. ಅವಳಿಗೆ ಭದ್ರಾ ಎಂಬ ಮಗಳು. ಅವಳ ಅಣ್ಣಂದಿರಾದ ಪಂಚಕೇಕಯರು ಭದ್ರೆಯನ್ನು ಶ್ರೀಕೃಷ್ಣನಿಗೆ ಧಾರೆಯೆರೆದು ಮದುವೆಮಾಡಿಕೊಟ್ಟರು. ಅಷ್ಟರಲ್ಲಿ ಮದ್ರಾ ದೇಶದಲ್ಲಿ ಲಕ್ಷಣೆ ಎಂಬವಳ ಸ್ವಯಂವರದ ಸುದ್ದಿ ಕೇಳಿ ಬಂತು. ಶ್ರೀಕೃಷ್ಣ ಅಲ್ಲಿಗೂ ಹೋಗಿ, ಆಕೆಯನ್ನೂ ಗೆದ್ದು ತಂದು ಮದುವೆಯಾದನು. ಹೀಗೆ ಶ್ರೀಕೃಷ್ಣನಿಗೆ ಐದು ಮಂದಿ ರಾಣಿಯರಾದರು.

ನರಕಾಸುರ ಮರ್ದನ

ದೂರದ ಪ್ರಾಗ್‌ಜೋತಿಷಪುರದಲ್ಲಿ ನರಕಾಸುರನ ಆಟಾಟೋಪ ಅತಿಯಾಗಿತ್ತು. ಅವನ ಸೆರೆಮನೆಯಲ್ಲಿ 16100 ಮಂದಿ ರಾಜಕುಮಾರಿಯರು ಬಂಧಿತರಾಗಿದ್ದರು. ನರಕಾಸುರನಂತೂ ದೇವಲೋಕಕ್ಕೂ ದಾಳಿಯಿಟ್ಟಿದ್ದ. ದೇವತೆಗಳನ್ನು ಸದೆಬಡಿದು, ಅವರ ಸೋಲಿನ ಸಂಕೇತವಾಗಿ ಅವರ ತಾಯಿ ಅದಿತೀದೇವಿಯ ಕುಂಡಲಗಳನ್ನು ಎಳೆದು ತಂದಿದ್ದ. ವರುಣನ ಛತ್ರವನ್ನೂ ಅಪಹರಿಸಿದ್ದ. ಮೇರು ಪರ್ವತದ ತುದಿಯಲ್ಲಿದ್ದ ಮಣಿಪರ್ವತದ ಮೇಲೆ ತನ್ನ ಕೀರ್ತಿಪತಾಕೆಯನ್ನು ಹಾರಿಸಿದ್ದ. ಇದರಿಂದ ನೊಂದ ದೇವತೆಗಳೆಲ್ಲ ಶ್ರೀಕೃಷ್ಣನನ್ನು ಮೊರೆಹೊಕ್ಕು, ನರಕಾಸುರನಿಂದ ತಮ್ಮನ್ನು ರಕ್ಷಿಸಬೇಕೆಂದು ಪ್ರಾರ್ಥಿಸಿದರು. ಭಗವಂತ ಭಕ್ತವತ್ಸಲನಲ್ಲವೆ? ಕೂಡಲೇ ಸತ್ಯಭಾಮೆಯೊಂದಿಗೆ ಗರುಡವಾಹನವೇರಿ ಪ್ರಾಗ್‌ಜೋತಿಷಪುರಕ್ಕೆ ಧಾವಿಸಿದ. ನರಕಾಸುರನ ಪಟ್ಟಣವಾದರೋ ದುರ್ಗಮವಾದ ಕೋಟೆಗಳಿಂದ ಕೂಡಿತ್ತು. ಅವುಗಳನ್ನು ಒಂದಾದ ಮೇಲೊಂದರಂತೆ ಭೇದಿಸಿ, ಶ್ರೀಕೃಷ್ಣ ಪಾಂಚಜನ್ಯ ಶಂಖವನ್ನು ಊದಿದ. ಅದರ ಪ್ರಚಂಡನಾದಕ್ಕೆ ನರಕನ ಸೇನಾಪತಿಯಾದ ಮುರಾಸುರನು ನಿದ್ರೆಯಿಂದ ಎಚ್ಚೆತ್ತು, ಯುದ್ಧಕ್ಕೆ ಸಿದ್ಧನಾದನು. ಅವನು ತನ್ನ ಐದು ಮುಖಗಳಿಂದ ಸಿಂಹದಂತೆ ಘರ್ಜಿಸಿ ಘನಘೋರ  ಸಂಗ್ರಾಮಕ್ಕೆ ತೊಡಗಿದನು. ಶ್ರೀಕೃಷ್ಣನಾದರೋ ತನ್ನ ಸುದರ್ಶನ ಚಕ್ರದಿಂದ ಅವನನ್ನು ಕತ್ತರಿಸಿ ಬಿಸುಟನು. ಅವನ ಹಿಂದೆಯೇ ತಾಮರ, ಅಂತರಿಕ್ಷ, ಶ್ರವಣ, ವಿಭಾವಸು, ವಸು, ನಭಸ್ವಂತ ಮತ್ತು ಅರುಣರೆಂಬ ಅವನ ಏಳು ಜನ ಮಕ್ಕಳೂ ಯುದ್ಧದಲ್ಲಿ ಕಾದಾಡಿ ಮಡಿದರು.

ಕೊನೆಗೆ ನರಕಾಸುರನೇ ರಣಕಣಕ್ಕೆ ಧಾವಿಸಿ ಬಂದನು. ಅವನು ಮೊದಲು ಶ್ರೀಕೃಷ್ಣನ ವಾಹನವಾದ ಗರುಡನನ್ನೇ ನುಂಗುವಂತೆ ಬೊಬ್ಬಿಟ್ಟನು. ತನ್ನ ಭಯಂಕರವಾದ ಮಂತ್ರಾಸ್ತ್ರಗಳಿಂದ ಅನೇಕ ಮಾಯಾರೂಪಗಳನ್ನು ತೋರಿ ಹೋರಾಡಿದನು. ಆದರೆ ಪರಮ ಪುರುಷೋತ್ತಮನಾದ ಶ್ರೀಕೃಷ್ಣನೆದುರಿಗೆ ಇಂತಹ ಮಾಯೆಗಳು ನಿಲ್ಲುತ್ತವೆಯೆ? ಸತ್ಯಭಾಮಾ ಸಮೇತನಾದ ಶ್ರೀಕೃಷ್ಣನು ಸುದರ್ಶನ ಚಕ್ರವನ್ನು ಪ್ರಯೋಗಿಸಿದ ಕೂಡಲೇ ಆ ದುಷ್ಟ ರಾಕ್ಷಸನ ಶಿರಸ್ಸು ಕೆಳಗುರುಳಿತು. ಭೂಭಾರ ಇಳಿಯಿತು. ಅಷ್ಟು ಕಾಲ ಇವನ ಉಪಟಳದಿಂದ ನೊಂದ ಭೂದೇವಿ ಶ್ರೀಹರಿಯ ಪಾದಾರವಿಂದಕ್ಕೆ ಪೊಡಮಟ್ಟು ತನ್ನ ಕೃತಜ್ಞತೆಗಳನ್ನು ಸೂಚಿಸಿದಳು.

ನರಕಾಸುರನ ವಧೆಯಾದ ಕೂಡಲೇ ಶ್ರೀಕೃಷ್ಣ ಸೆರೆಮನೆಯಲ್ಲಿದ್ದ 16100 ಮಂದಿ ರಾಜಕುಮಾರಿಯರನ್ನು ಬಿಡುಗಡೆಗೊಳಿಸಿದ. ಎಲ್ಲರೂ ಅವರವರ ತಾಯಿತಂದೆಯರಲ್ಲಿಗೆ ಹಿಂತಿರುಗಬಹುದೆಂದು ಸೂಚಿಸಿದ. ಆದರೆ ಆ ಕನ್ಯಾಮಣಿಗಳೆಲ್ಲರೂ `ನೀನೇ ನಮ್ಮನ್ನು ಕಾಪಾಡಿದ ಅನಾಥ ಬಂಧು ನೀನೇ ನಮ್ಮನ್ನು ಕೈಹಿಡಿದು ಬಾಳು ನೀಡು’ ಎಂದು ಭಕ್ತಿಯಿಂದ ಸಂಪ್ರಾರ್ಥಿಸಿದರು. ಹಿಂದಿನ ಕಾಲದಲ್ಲಿ ಪುತ್ರಿಯನ್ನು ಯಾರಾದರೂ ಅಪಹರಿಸಿದರೆ ಅವಳನ್ನು ಬೇರಿನ್ನಾವ ಪುರುಷನೂ ವರಿಸುತ್ತಿರಲಿಲ್ಲ. ಅದರಿಂದಾಗಿ ಈ 16100 ರಾಜಕುಮಾರಿಯರನ್ನು ವರಿಸುವುದಕ್ಕೆ ಯಾರೂ ಒಪ್ಪುತ್ತಿರಲಿಲ್ಲ. ದಿಟವಾಗಿ ಈ ರಾಜಕುವರಿಯರೆಲ್ಲರೂ ಹಿಂದೆ ಮಹಾಮುನಿಗಳಾಗಿದ್ದರು ಮತ್ತು ಪರಮ ಪುರುಷನ ಅಲೌಕಿಕ ರಾಣಿಯರಾಗ ಬಯಸಿದರು. ಆ ಇಚ್ಛೆಯನ್ನು ಪ್ರತಿಯೊಬ್ಬರ ಹೃದಯದಲ್ಲಿರುವ ಪರಮ ಪುರುಷನು ಈ ಸನ್ನಿವೇಶವನ್ನು ಏರ್ಪಡಿಸಿ ಅವರನ್ನು  ವರಿಸಿದನು. ಶ್ರೀಕೃಷ್ಣ ಅವರೆಲ್ಲರನ್ನೂ ಪತ್ನಿಯರನ್ನಾಗಿ ಸ್ವೀಕರಿಸಿ ದ್ವಾರಕೆಗೆ ಕರೆದೊಯ್ದ.

ಸರ್ವಂ ಕೃಷ್ಣಮಯಂ ಜಗತ್‌ !

ಒಮ್ಮೆ ನಾರದರಿಗೆ ಶ್ರೀಕೃಷ್ಣನ ಸಂಸಾರಜೀವನವನ್ನು ಕಣ್ಣಾರೆ ನೋಡುವ ಬಯಕೆಯುಂಟಾಯಿತು. ಒಬ್ಬಳು ಹೆಂಡತಿಯೊಂದಿಗೆ ಬದುಕು ಸಾಗಿಸುವುದೇ ಕಷ್ಟಕರವಾಗಿರುವಾಗ, ಈ ಶ್ರೀಕೃಷ್ಣ ಅದೆಂತು 16108 ಹೆಂಡತಿಯರೊಡನೆ ಬಾಳುತ್ತಾನೆಂದು ಪರೀಕ್ಷಿಸುವ ಕುತೂಹಲ ಮೊಳೆಯಿತು. ಅದನ್ನು ಪರೀಕ್ಷಿಸಿಯೇ ನೋಡೋಣವೆಂದು ನಾರದರು ನೇರವಾಗಿ ದ್ವಾರಕೆಗೆ ಬಂದರು. ಮೊದಲು ರುಕ್ಮಿಣಿಯ ಮನೆಗೇ ಹೋದರು. ಅಲ್ಲಿ ಶ್ರೀಕೃಷ್ಣ ರುಕ್ಮಿಣಿಯ ಜೊತೆಯಲ್ಲಿ ಕುಳಿತು ಕರ್ಪೂರ ವೀಳ್ಯವನ್ನು ಸವಿಯುತ್ತಿದ್ದನು. ಅಲ್ಲಿಂದ ಕೂಡಲೇ ಹೊರಟು ಸತ್ಯಭಾಮೆಯ ಮನೆಗೆ ಬಂದರೆ, ಅಲ್ಲೂ ಶ್ರೀಕೃಷ್ಣನಿದ್ದಾನೆ! ಸತ್ಯಭಾಮೆಯೊಂದಿಗೆ ಅವನು ಪಗಡೆಯಾಟದಲ್ಲಿ ಮಗ್ನನಾಗಿದ್ದಾನೆ! ನಾರದರಿಗೆ ಅತ್ಯಾಶ್ಚರ್ಯವಾಗುತ್ತದೆ. ಅಲ್ಲಿಂದ ಕೂಡಲೇ ಹೊರಬಂದು ಜಾಂಬವತಿಯ ಮನೆಗೆ ಹೋದರೆ, ಅಲ್ಲೂ ಶ್ರೀಕೃಷ್ಣ ತೂಗುಮಂಚದಲ್ಲಿ  ಕುಳಿತು ನಗುತ್ತಿರುವ ದೃಶ್ಯ! ನಾರದರಿಗೆ ಕಣ್ಣನ್ನೇ ನಂಬಲು ಸಾಧ್ಯವಾಗಲಿಲ್ಲ. ಭದ್ರೆಯ ಮನೆಯಲ್ಲಿ ಗೋಪೂಜೆಯಲ್ಲಿ ಕೃಷ್ಣ ತನ್ಮಯನಾಗಿದ್ದರೆ, ಮಿತ್ರವಿಂದೆಯ ಮನೆಯಲ್ಲಿ ಬ್ರಾಹ್ಮಣರಿಗೆ ದಾನಗಳನ್ನು ನೀಡಿ ಗೌರವಿಸುತ್ತಿದ್ದಾನೆ. ಒಂದೆಡೆ ಕೃಷ್ಣನಿಗೆ ಸ್ನಾನವಾದರೆ, ಮತ್ತೊಂದೆಡೆ ಪಂಚಭಕ್ಷ್ಯದ  ಮೃಷ್ಟಾನ್ನ ಭೋಜನ! ಇನ್ನೊಂದೆಡೆ ಸಂಧ್ಯಾವಂದನೆಯಾದರೆ, ಮಗದೊಂದೆಡೆ ಶ್ರೀಹರಿಗೆ ಸುಖನಿದ್ರೆ! ಏಕಕಾಲದಲ್ಲಿ 16108 ಹೆಂಡತಿಯರ ಮನೆಗಳಲ್ಲೂ  ಶ್ರೀಕೃಷ್ಣದರ್ಶನ! ಎಲ್ಲೆಲ್ಲೂ ಭಗವಂತನ ದಿವ್ಯಸಾನ್ನಿಧ್ಯ! ಅಣುರೇಣು ತೃಣಕಾಷ್ಠ ಪರಿಪೂರ್ಣನಾದ ಭಗವಂತನಿಗೆ ಮಾತ್ರ ಇದು ಸಾಧ್ಯ. ಉಂಡು ಉಪವಾಸಿ, ಹೆಂಡತಿ ಮಕ್ಕಳಿದ್ದು ಬ್ರಹ್ಮಚಾರಿಯೆನಿಸಿದ ಭಗವಂತನ ಲೀಲಾಮಾನುಷ ವಿಗ್ರಹಶಕ್ತಿ ಎಷ್ಟೆಂಬುದು ನಾರದರಿಗೆ ವೇದ್ಯವಾಯಿತು.

ಹುಸಿ ಅವತಾರಗಳ ಸಂಹಾರ

ಶ್ರೀಕೃಷ್ಣ-ರುಕ್ಮಿಣಿಯರ ಮಗನೇ ಪ್ರದ್ಯುಮ್ನ. ಅವನ ಸೋದರ ಮಾವನಾದ ರುಕ್ಮಿಯ ಮಗಳು ರುಕ್ಮವತಿಯೊಂದಿಗೆ ಅವನ ವಿವಾಹವಾಗಿತ್ತು. ಅವನ ಮಗನೇ ಅನಿರುದ್ಧ. ಅನಿರುದ್ಧನಿಗೂ ರುಕ್ಮಿಯ ಮೊಮ್ಮಗಳಾದ ರೋಚನೆಯೊಂದಿಗೆ ಮದುವೆ ಆಯಿತು. ಬಹಳ ಹಿಂದೆಯೇ ವಸುದೇವ ಕಾಶೀರಾಜನ ಮಗಳನ್ನು ಮದುವೆಯಾಗಿ ಒಬ್ಬ ಮಗನನ್ನು ಪಡೆದಿದ್ದ. ಅವನೇ ಪೌಂಡ್ರಕ ವಾಸುದೇವ. ಅವನು ಕಾಶಿಯ ಉತ್ತರಾಧಿ ಕಾರಿಯಾಗಿ ಅಲ್ಲೇ ಇದ್ದರೂ, ಶ್ರೀಕೃಷ್ಣನ ಜನಪ್ರಿಯತೆಯನ್ನು ಕೇಳಿ ಅಸೂಯೆ ಹೊಂದಿದ್ದ. ವಸುದೇವನ ಜ್ಯೇಷ್ಠಪುತ್ರನಾದುದರಿಂದ `ತಾನೇ ನಿಜವಾಗಿ ವಾಸುದೇವ’ ಎಂಬುದು ಅವನ ವಾದ. ಅವನಾಗಿಯೇ ಒಮ್ಮೆ ಕಾಲು ಕೆರೆದು ಶ್ರೀಕೃಷ್ಣನಲ್ಲಿಗೆ ಜಗಳಕ್ಕೆ ಬಂದ. ಕೃಷ್ಣ ಅವನನ್ನು ಕೊಂದ! ಒಮ್ಮೆ ಸೋದರತ್ತೆಯ ಮಗನಾದ ದಂತವಕ್ರ ಕೃಷ್ಣನನ್ನು ದಾರಿಯಲ್ಲಿ ಅಡ್ಡಗಟ್ಟಿದ. ಕೃಷ್ಣ ಅವನನ್ನೂ ಕೊಂದುಬಿಟ್ಟ! ಜರಾಸಂಧನ ಪಕ್ಷದಲ್ಲಿದ್ದ ಕಂಸ, ನರಕ, ಕಾಲಯವನ, ಪೌಂಡ್ರಕ, ದಂತವಕ್ರ ಹೀಗೆ ಒಬ್ಬೊಬ್ಬರಾಗಿ ಕೃಷ್ಣನಿಂದ ಹತರಾದರು.

ಜರಾಸಂಧನಿಗೆ ಹೇಗಾದರೂ ಕೃಷ್ಣನನ್ನು ಮುಗಿಸಬೇಕೆಂಬ ಹಠ. ಇದಕ್ಕಾಗಿ ಇಪ್ಪತ್ತಮೂರು ಅಕ್ಷೋಹಿಣೀ ಸೇನೆಯನ್ನು ಕಟ್ಟಿ ಹದಿನೆಂಟು ಬಾರಿ ಕೃಷ್ಣನ ಮೇಲೆ ಆಕ್ರಮಣ ನಡೆಸಿದ್ದ. ಆದರೆ ದ್ವಾರಕೆಯ ಸುತ್ತಲಿನ ಉಪ್ಪುನೀರು ಕುಡಿದದ್ದೇ ಬಂತು. ಶ್ರೀಕೃಷ್ಣ ಪ್ರತಿಬಾರಿಯೂ ಉಪಾಯದಿಂದ ತಪ್ಪಿಸಿಕೊಳ್ಳುತ್ತಿದ್ದ. ಜರಾಸಂಧ ವಿವಿಧ ದೇಶಗಳ 22800 ರಾಜಕುಮಾರರನ್ನು ಸೆರೆಯಲ್ಲಿಟ್ಟಿದ್ದ. ಕಂಸ, ನರಕ, ಕಾಲಯವನರ ನೆರವಿನಿಂದ ಇಡೀ ಆರ್ಯ್ವರ್ತವನ್ನು ತನ್ನ ವಶಕ್ಕೆ ತರುವ ಇವನ ಕಾರಸ್ಥಾನ ಕೃಷ್ಣನಿಂದಾಗಿ ವಿಫಲವಾಯಿತು. ಇಂದ್ರಪ್ರಸ್ಥದಲ್ಲಿ ಪಾಂಡವರು ರಾಜಸೂಯ ಯಾಗಕ್ಕೆ ಸಿದ್ಧತೆ ನಡೆಸಿದ್ದರು. ಆಗ `ಜರಾಸಂಧನನ್ನು ಮುಗಿಸಿದ ಮೇಲೆಯೇ ಅದು ಸಾಧ್ಯ’ವೆಂದು ಶ್ರೀಕೃಷ್ಣ ಸೂಚಿಸಿದ. ಅದಕ್ಕಾಗಿ ಭೀಮಾರ್ಜುನರ ಸಹಾಯ ಪಡೆದು ಬ್ರಾಹ್ಮಣರ ಮಾರುವೇಷದಿಂದ ಮಗಧಕ್ಕೆ ಹೊರಟು ಬಂದ. ಗಿರಿವ್ರಜ ಬೆಟ್ಟದ ಮೇಲಿದ್ದ ಭೇರಿಯನ್ನು ಭೇದಿಸಿ ಅಪಾಯದ ಮುನ್ಸೂಚನೆ ನೀಡಿದ. ವೈರಿಗಳು ಪ್ರವೇಶಿಸುವ ದಕ್ಷಿಣ ದ್ವಾರದಲ್ಲಿ ಜರಾಸಂಧನ ಅರಮನೆಯನ್ನು ಹೊಕ್ಕು   ಸೆರೆಮನೆಯಲ್ಲಿರುವ ರಾಜಕುಮಾರರನ್ನು ಬಿಡಬೇಕು ಎಂದು ಕೇಳಿಕೊಂಡ – ಅದಕ್ಕೆ ಜರಾಸಂಧ ಒಪ್ಪುವುದಿಲ್ಲ. ಪರಿಣಾಮ ಭೀಮ ಮತ್ತು ಜರಾಸಂಧರಲ್ಲಿ ದ್ವಂದ್ವಯುದ್ಧ ಏರ್ಪಡುತ್ತದೆ. ಇಬ್ಬರಲ್ಲೂ 27 ದಿವಸಗಳ ಅಹೋರಾತ್ರಿ ಯುದ್ಧವಾಗುತ್ತದೆ. ಕೊನೆಗೆ ಶ್ರೀಕೃಷ್ಣನ ಸೂಚನೆಯಂತೆ ಜರಾಸಂಧನನ್ನು ಎರಡಾಗಿ ಸೀಳಿ ವಿಲೋಮವಾಗಿ ಬಿಸುಟಾಗ, ಜರಾಸಂಧ ಕೊನೆಯುಸಿರೆಳೆಯುತ್ತಾನೆ. ಸೆರೆಯಲ್ಲಿದ್ದ 22800 ರಾಜಕುಮಾರರು ಶ್ರೀಕೃಷ್ಣನ ಉಪಕಾರವನ್ನು ಸ್ಮರಿಸಿ, ಧರ್ಮರಾಯನ ರಾಜಸೂಯಕ್ಕೆ ಕಪ್ಪ ಕೊಡುತ್ತಾರೆ.

ಶ್ರೀಕೃಷ್ಣನ ರಾಜಕೀಯ ತಂತ್ರವೇ ಅಂತಹುದು! ಒಬ್ಬ ಜರಾಸಂಧನನ್ನು ವಧಿಸುವ ಮೂಲಕ ಇಡೀ ಆರ್ಯ್ವರ್ತದ 22800 ರಾಜಕುಮಾರರು ಪಾಂಡವರ ಕಡೆಗೆ ಬರುತ್ತಾರೆ. ಜರಾಸಂಧನ ಕಾಲದಲ್ಲಿ ಅನೇಕಾನೇಕ ರಾಜರುಗಳು ಅವನಿಗೆ ಹೆದರಿಯೇ ಕೃಷ್ಣನ ವಿರುದ್ಧ ಸೈನ್ಯ ಕಳುಹಿಸಿದ್ದರು. ಈಗ ಆ ಎಲ್ಲ ರಾಜರುಗಳಿಗೆ ನಿರಾತಂಕವುಂಟಾಗಿದೆ. ರಾಜಸೂಯದಲ್ಲಿ ಶ್ರೀಕೃಷ್ಣನಿಗೆ ಅಗ್ರಪೂಜೆ ಆಗಬೇಕೆಂದು ಭೀಷ್ಮಾಚಾರ್ಯರು ಹೇಳಿದಾಗ ಶಿಶುಪಾಲನ ಹೊರತಾಗಿ ಯಾವ ರಾಜರೂ ಅದನ್ನು ಆಕ್ಷೇಪಿಸುವುದಿಲ್ಲ. ಶಿಶುಪಾಲ ಮಾತ್ರ ಶ್ರೀಕೃಷ್ಣನನ್ನು ಹಳಿದು ಹಂಗಿಸುತ್ತಾನೆ. `ರಾಜರಾಜರಿರುವ ಈ ರಾಜಸೂಯ ಯಾಗದಲ್ಲಿ ಗೊಲ್ಲರ ಹುಡುಗನಿಗೆ ಅಗ್ರಪೂಜೆಯಾಗುವುದು ರಾಜರುಗಳಿಗೇ ಅವಮಾನ.’ – ಎಂಬುದು ಅವನ ಕೂಗು. ಯಜ್ಞದ ಬ್ರಹ್ಮತ್ವವನ್ನು ವಹಿಸಿದ ಪರಶುರಾಮರು, ಮಹರ್ಷಿಗಳಾದ ವೇದವ್ಯಾಸರು, ಬ್ರಹ್ಮರ್ಷಿಗಳಾದ ದ್ರೋಣಾಚಾರ್ಯರು, ಪ್ರಾಜ್ಞನಾದ ಅಶ್ವತ್ಥಾಮ, ಹಿರಿಯರಾದ ಭೀಷ್ಮಾಚಾರ್ಯರು, ದ್ರುಪದ, ವಿರಾಟರಾಜ ಎಲ್ಲರನ್ನೂ ಬಿಟ್ಟು ಶ್ರೀಕೃಷ್ಣನಿಗೆ ಅಗ್ರಪೂಜೆ ಮಾಡುವುದು ಅನ್ಯಾಯವೆಂದು ಶಿಶುಪಾಲನ ಸಿಟ್ಟು. ಅವನ ನೂರೊಂದು ತಪ್ಪುಗಳನ್ನು ಸಹಿಸುತ್ತೇನೆಂದು ಶಿಶುಪಾಲನ ತಾಯಿಗೆ ಭಾಷೆಕೊಟ್ಟಿದ್ದ ಶ್ರೀಕೃಷ್ಣ, ಅಷ್ಟು ಹೊತ್ತು ಸುಮ್ಮನಿದ್ದು ಅನಂತರ ಸುದರ್ಶನ ಚಕ್ರ ಪ್ರಯೋಗಿಸಿದಾಗ ಶಿಶುಪಾಲನ ಶಿರಸ್ಸು ನೆತ್ತರ ಮಡುವಿನಲ್ಲಿ ಬಿತ್ತು.

ಭೂಭಾರ ಹರಣ

ಶ್ರೀಕೃಷ್ಣ ಎಷ್ಟೋ ಮಂದಿ ದುಷ್ಟರನ್ನು ಸಂಹರಿಸಿದರೂ, ಭೂಭಾರವೇನೂ ತಗ್ಗಲಿಲ್ಲ. ಕೌರವ-ಪಾಂಡವರಲ್ಲಿ ದಾಯಾದ್ಯ ಮತ್ಸರವು ದಿನದಿಂದ ದಿನಕ್ಕೆ ಪ್ರಜ್ವಲಿಸುತ್ತಾ ಹೋಯಿತು. ದುರ್ಯೋಧನನ ದುಷ್ಟತನದಿಂದ ಅನ್ಯಾಯ ಅಧರ್ಮಗಳು ಎಲ್ಲೆ ಮೀರಿದವು. ಕಪಟ ದ್ಯೂತದಿಂದ ಪಾಂಡವರು ರಾಜ್ಯವನ್ನೇ ಕಳೆದುಕೊಳ್ಳಬೇಕಾಗಿ ಬಂತು. ತುಂಬಿದ ಸಭೆಯಲ್ಲಿ ಪತಿವ್ರತೆಯಾದ ದ್ರೌಪದಿಯ ಮಾನಭಂಗದ ಪ್ರಯತ್ನವೂ ನಡೆಯಿತು. ಆಗ ಶ್ರೀಕೃಷ್ಣನ ಪರಮಾನುಗ್ರಹದಿಂದಾಗಿ ದ್ರೌಪದಿ ವಸಾ್ತ್ರಪಹರಣದ ಯತ್ನ `ಅಕ್ಷಯಾಂಬರ ವಿಲಾಸ’ವಾಗಿ ಪರಿಣಮಿಸಿತು. ಭಗವತ್‌ ಕೃಪೆಯಿಂದ ಹನ್ನೆರಡು ವರ್ಷದ ವನವಾಸ – ಅಜ್ಞಾತವಾಸಗಳೂ ಮುಗಿಯಿತು. ಮುಂದಿನ ಮಹಾಯುದ್ಧಕ್ಕೆ ಕೌರವ-ಪಾಂಡವರೀರ್ವರೂ ಸಿದ್ಧತೆಗಳನ್ನು ನಡೆಸುತ್ತಿದ್ದರು. ಈ ಯುದ್ಧದಲ್ಲಿ ಶ್ರೀಕೃಷ್ಣನ ಸಹಾಯವನ್ನು ತಮ್ಮ ಕಡೆಗೆ ಸೆಳೆಯುವುದಕ್ಕಾಗಿ ಅರ್ಜುನ ಮತ್ತು ಕೌರವರಿಬ್ಬರೂ ದ್ವಾರಕೆಗೆ ಬಂದರು.

ಆಗ ಶ್ರೀಕೃಷ್ಣ ದ್ವಾರಕಾವತಿಯಲ್ಲಿ ಮಧ್ಯಾಹ್ನದ ಭೋಜನ ಮುಗಿಸಿ ನಿದ್ರೆ ಮಾಡುತ್ತಿದ್ದನು. ಅರ್ಜುನ ಬಂದವನೇ ಭಗವಂತನ ಚರಣಾಶ್ರಿತಮ ತಾನೆಂದುಕೊಂಡು ಭಕ್ತಿಯಿಂದ ಶ್ರೀಕೃಷ್ಣನ ಕಾಲಬುಡದಲ್ಲೇ ಕುಳಿತಿದ್ದನು. ಅನಂತರ ಬಂದ ದುರ್ಯೋಧನ `ಅರಸುಗಳು ತಾವು, ಮಸ್ತಕದ ಹತ್ತಿರ ಕುಳಿತಿರುವುದೇ ಸೂಕ್ತ’ವೆಂದು ಅಹಂಭಾವ ತೋರಿದನು. ನಿದ್ರೆಯಿಂದ ಎಚ್ಚೆತ್ತ ಶ್ರೀಕೃಷ್ಣನು ಮೊದಲು ಅರ್ಜುನನನ್ನೇ ನೋಡುವುದು ಸಹಜ ತಾನೆ? ಪ್ರಿಯಮಿತ್ರನಾದ ಅರ್ಜುನನನ್ನು ನೋಡಿ – `ಬಂದ ಕಾರಣವೇನು?’ ಎಂದು ಕೇಳಿದಾಗ ಅರ್ಜುನ – `ಮುಂದಾಗುವ ಯುದ್ಧದಲ್ಲಿ ಸಹಾಯ’ ಬೇಕೆಂದು ಪ್ರಾರ್ಥಿಸಿಕೊಂಡನು. ಅದಕ್ಕೆ ಸಮ್ಮತಿಸಿದ ಶ್ರೀಕೃಷ್ಣ ಅನಂತರ ಹಿಂತಿರುಗಿ ಕೌರವನನ್ನು ಕಂಡನು. ಆಗ ಕೌರವನೂ `ಯುದ್ಧಕ್ಕೆ ಸಹಾಯ ಮಾಡಬೇಕೆಂದು’ ಕೇಳಿಕೊಂಡಾಗ, ಶ್ರೀಕೃಷ್ಣ – `ಆಯುಧರಹಿತನಾದ ನಾನು ಪಾಂಡವರ ಕಡೆಗೆ; ಆಯುಧ ಸಹಿತವಾದ ಇಡೀ ಯದುಸೇನೆ ಕೌರವರ ಕಡೆಗೆ, ಎಂದೂ ಘೋಷಿಸಿದನು. ಆದರೂ ಧರ್ಮರಾಯನಿಗೆ ಯುದ್ಧ ನಡೆಯುವುದರಲ್ಲಿ ಆಸಕ್ತಿ ಇರಲಿಲ್ಲ. `ಅರ್ಧರಾಜ್ಯದ ಬದಲು ಐದು ಊರುಗಳಾದರೂ ಸಾಕು’ ಎಂಬುದು ಅವನ ಅಂತರಂಗವಾಗಿತ್ತು. ಮಹಾಯುದ್ಧದಿಂದ ರಕ್ತದ ಹೊಳೆ ಹರಿಯುವುದು ಅವನಿಗೆ ಬೇಕಿರಲಿಲ್ಲ. ಇದಕ್ಕಾಗಿ ಸಂಧಾನದ ಪ್ರಯತ್ನವನ್ನು ಮಾಡಬೇಕೆಂದು ಶ್ರೀಕೃಷ್ಣನಲ್ಲಿ ಧರ್ಮರಾಯ ವಿನಂತಿಸುತ್ತಾನೆ. ರಾಯಭಾರದ ನೆವದಲ್ಲಿ ಶ್ರೀಕೃಷ್ಣ ಹಸ್ತಿನಾವತಿಗೆ ಹೊರಡುತ್ತಾನೆ. ಆದರೆ ಸಂಧಾನವು ವಿಫಲವಾಯಿತು. ಕುರುಕ್ಷೇತ್ರಕ್ಕೆ ಹದಿನೆಂಟು ಅಕ್ಷೋಹಿಣೀ ಸೇನೆಗಳು ಬಂದು ನಿಂತಿತು.

ಮಹಾಭಾರತ ಯುದ್ಧದ ಹದಿನೆಂಟು ದಿನಗಳ ಸಂಗ್ರಾಮದಲ್ಲಿ ಇತ್ತಂಡದ ಕರ್ಣ, ದುಶ್ಯಾಸನ, ಜಯದ್ರಥ, ದುರ್ಯೋಧನ, ಅಭಿಮನ್ಯು, ಘಟೋದ್ಗಜ, ಉಪಪಾಂಡವರು ಮುಂತಾಗಿ ಅನೇಕಾನೇಕರು ಧರೆಗೆ ಉರುಳಿದರು. ಜೊತೆಗೆ ಅರ್ಜುನನನ್ನು ನೆವವಾಗಿಟ್ಟುಕೊಂಡು ಲೋಕಮುಖಕ್ಕೆ ಶ್ರೀಕೃಷ್ಣನಿಂದ ಭಗವದ್ಗೀತೆಯೆಂಬ ಜ್ಞಾನಾಮೃತವೂ ಹರಿದುಬಂತು. ದ್ವಾರಕಾಧೀಶ ಶ್ರೀಕೃಷ್ಣನ ಅವತಾರ ಕಾರ್ಯದಿಂದ ದುಷ್ಟರ ಸಂಹಾರವಾದುದಷ್ಟೇ ಅಲ್ಲ, ಸಜ್ಜನರ ಉದ್ಧಾರವೂ, ಸುಜ್ಞಾನದ ಪ್ರತಿಷ್ಠೆಯೂ ಜೊತೆಜೊತೆಯಾಗಿಯೇ ಸಾಧ್ಯವಾಯಿತು. ಶ್ರೀಕೃಷ್ಣ ಕಲಿಯುಗ ಆರಂಭವಾದ ಮೇಲೂ ಮೂವತ್ತಾರು ವರ್ಷಗಳಷ್ಟು ಕಾಲ ಈ ಭೂಮಿಯಲ್ಲಿ ಓಡಾಡಿದನು. ಈ ಕಾರಣದಿಂದಾಗಿ ಶ್ರೀಕೃಷ್ಣ ನಮಗೆ ತುಂಬಾ ಹತ್ತಿರದ ದೇವರು. ಅವನು ತಿರುಗಾಡಿದ ಈ ಪುಣ್ಯಭೂಮಿಯಲ್ಲಿ ಬದುಕುವ ನಾವೇ ಭಾಗ್ಯವಂತರು !

      ಕೃಷ್ಣಾಯ ವಾಸುದೇವಾಯ ದೇವಕೀ ನಂದನಾಯ ಚ

      ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮಃ

ಈ ಲೇಖನ ಶೇರ್ ಮಾಡಿ

ಹೊಸ ಪೋಸ್ಟ್‌ಗಳು