ಏಕಾದಶಿಯಂದು ಉಪವಾಸ ವ್ರತ ಆಚರಿಸುವುದು ಕೃಷ್ಣ ಭಕ್ತರಿಗೆ ಕಡ್ಡಾಯ. ನಿರಶನರಾಗಿದ್ದು ಕೃಷ್ಣನಾಮವನ್ನು ಹೆಚ್ಚಾಗಿ ಜಪಿಸಬೇಕೆಂದು ಶ್ರೀಲ ಪ್ರಭುಪಾದರು ಹೇಳುತ್ತಿದ್ದರು. ಆದರೆ ನಿರಶನರಾಗಿರುವುದು ಕಲಿಯುಗದವರಿಗೆ ಸಾಧ್ಯವಿಲ್ಲವೆಂದು ಅರಿತ ಪ್ರಭುಪಾದರು ಧಾನ್ಯಗಳು, ಹುರಳಿಕಾಯಿ, ಬಟಾಣಿ ವಂಶ ತರಕಾರಿಗಳನ್ನು, ಸೇವಿಸದೆ ಏಕಾದಶಿಯಂದು ಬರಿಯ ಹಾಲು, ಹಣ್ಣು ಹಾಗೂ ಕೆಲವು ಗೆಣಸುಗಳಿಂದ ತಯಾರಿದ ಪ್ರಸಾದವನ್ನು ಸ್ವೀಕರಿಸಬಹುದೆಂಬ ವಿನಾಯಿತಿ ನೀಡಿದರು. ಏಕಾದಶಿಯಂದು ಸೇವಿಸಬಹುದಾದ ಕೆಲವು ತಿನಿಸುಗಳನ್ನು ತಯಾರಿಸುವ ವಿಧಾನವನ್ನು ನಿಮಗಾಗಿ ಇಲ್ಲಿ ನೀಡಿದ್ದೇವೆ.
ಆಲೂ ಮಸಾಲ
ಬೇಕಾಗುವ ಪದಾರ್ಥಗಳು
ಚಿಕ್ಕ ಗಾತ್ರದ ಆಲೂ – 400 ಗ್ರಾಂ.
ಮೊಸರು – ಅರ್ಧ ಅಳತೆ
ಕಾಳು ಮೆಣಸಿನ ಪುಡಿ – 1/4 ಟೀ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಹಸಿ ಮೆಣಸು – ಮೂರು, ಸಾಧಾರಣ ಗಾತ್ರದ್ದು
ಶುಂಠಿ – ಹೆಬ್ಬೆರಳ ಗಾತ್ರದ್ದು, ಒಂದು ಇಂಚು ಉದ್ದದ ಚೂರು
ತುಪ್ಪ – ಎರಡು ಚಮಚ
ಕರಿಬೇವು – ಒಂದು ಎಸಳು
ಓಮ – ಒಂದು ಚಮಚ
ಸಕ್ಕರೆ – ಒಂದು ಚಮಚ
ಲವಂಗ – ಮೂರು
ಏಲಕ್ಕಿ – ಮೂರು
ದಾಲ್ಚಿನ್ನಿ – ಒಂದು ಇಂಚು ಉದ್ದದ ಚೂರು
ತಯಾರಿಸುವ ವಿಧಾನ : ಸಕ್ಕರೆ, ಲವಂಗ, ಏಲಕ್ಕಿ, ದಾಲ್ಚಿನ್ನಿಗಳನ್ನು ಪುಡಿ ಮಾಡಿಟ್ಟುಕೊಳ್ಳಿ. ಆಲೂಗಡ್ಡೆಗಳನ್ನು ಚೆನ್ನಾಗಿ ತೊಳೆದು, ಬೇಯಿಸಿ, ಸಿಪ್ಪೆ ಸುಲಿದಿಟ್ಟುಕೊಳ್ಳಿ. ಹಸಿ ಮೆಣಸು ಮತ್ತು ಶುಂಠಿಯನ್ನು ನುಣ್ಣಗೆ ರುಬ್ಬಿ ಕೊಳ್ಳಿ. ಹಸಿಮೆಣಸು-ಶುಂಠಿ ಮಿಶ್ರಣಕ್ಕೆ ಬೇಯಿಸಿದ ಆಲೂ, ಮೊಸರು, ಕಾಳು ಮೆಣಸು, ಉಪ್ಪು ಸೇರಿಸಿ ಚೆನ್ನಾಗಿ ಹೊಂದಿಕೆಯಾಗುವಂತೆ ಕಲಸಿ.
ತುಪ್ಪವನ್ನು ಚಿಕ್ಕ ಬಾಣಲೆಯಲ್ಲಿ ಬಿಸಿ ಮಾಡಿ. ಬಿಸಿಯಾದ ನಂತರ ಅದಕ್ಕೆ ಓಮ ಮತ್ತು ಕರಿಬೇವಿನ ಎಲೆಗಳನ್ನು ಹಾಕಿರಿ. ಓಮ ಚಿಟಪಟನೆ ಸಿಡಿಯಲಾರಂಭಿಸಿದ ತಕ್ಷಣ ಒಲೆ ಮೇಲಿಂದ ಕೆಳಗಿಳಿಸಿ. ಎಲ್ಲಾ ಮಿಶ್ರಣಗಳನ್ನೂ ಚೆನ್ನಾಗಿ ಕಲೆಸಿ. ಕೃಷ್ಣನಿಗೆ ಅರ್ಪಿಸಿ. ಎಲ್ಲರಿಗೂ ಹಂಚಿ.
ಸಬ್ಬಕ್ಕಿ ವಡೆ (ಸಾಬುದಾನ ವಡಾ)
ಬೇಕಾಗುವ ಪದಾರ್ಥಗಳು :
ಸಬ್ಬಕ್ಕಿ (ಸಾಬುದಾನ) – 200 ಗ್ರಾಂ.
ಆಲೂ – ಮೂರು, ಮಧ್ಯಮ ಗಾತ್ರದ್ದು.
ಶೇಂಗಾ – 100 ಗ್ರಾಂ.
ಕೆಂಪು ಮೆಣಸಿನ ಪುಡಿ – ಮೂರು ಟೀ ಚಮಚ.
ಕೊತ್ತುಂಬರಿ ಸೊಪ್ಪು – ಮೂರು ಎಸಳು.
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು ಬೇಕಾಗುವಷ್ಟು
ತಯಾರಿಸುವ ವಿಧಾನ: ಸಬ್ಬಕ್ಕಿಯನ್ನು ಚೆನ್ನಾಗಿ ತೊಳೆಯಿರಿ. ಹೆಚ್ಚಿನ ನೀರನ್ನು ಬಸಿಯಿರಿ. ನಾಲ್ಕು ಗಂಟೆ ಕಾಲ ಹಾಗೆಯೇ ಪಾತ್ರೆಯಲ್ಲಿ ಇಡಿ. ನೆನಪಿಡಿ, ನೀರು ಜಾಸ್ತಿಯಾದರೆ ಸಬ್ಬಕ್ಕಿ ಅಂಟಂಟಾಗುತ್ತದೆ. ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ಸುಲಿದು, ಪುಡಿಮಾಡಿಟ್ಟುಕೊಳ್ಳಿ. ಶೇಂಗಾ ಬೀಜವನ್ನು ಹುರಿದು, ಮೆಣಸಿನ ಪುಡಿ ಜತೆ ಮಿಕ್ಸಿಯಲ್ಲಿ ನುಣ್ಣಗೆ ಹುಡಿ ಮಾಡಿ. ನಂತರ ಈ ಎಲ್ಲಾ ಮಿಶ್ರಣಗಳ ಜತೆ ಸಣ್ಣಗೆ ಕತ್ತರಿಸಿದ ಕೊತ್ತಂಬರಿ, ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ.
ಮಧ್ಯಮ ಗಾತ್ರದ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಬಾಣಲೆಯ ತಳ ದಪ್ಪವಾಗಿದ್ದರೆ ಒಳ್ಳೆಯದು. ಒಲೆಯ ಉರಿ ಸಣ್ಣದಾಗಿರಲಿ. ಈಗ ಆಲೂ -ಸಬ್ಬಕ್ಕಿ ಮಿಶ್ರಣವನ್ನು ಸಣ್ಣ ಉಂಡೆ ಮಾಡಿಕೊಂಡು, ಅಂಗೈನಲ್ಲಿ ಸಣ್ಣಗೆ ಚಪ್ಪಟೆಯಾಗುವಂತೆ ತಟ್ಟಿ ಕಾದ ಎಣ್ಣೆಗೆ ನಿಧಾನವಾಗಿ ಹಾಕಿ. ಬಾಣಲೆ ಗಾತ್ರ ಮತ್ತು ಎಣ್ಣೆ ಪ್ರಮಾಣ ಆಧರಿಸಿ ಒಮ್ಮೆಗೆ ಎಷ್ಟು ವಡೆ ಬೇಯಿಸಬಹುದು ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಿ. ವಡೆ ಕಂದು ಬಣ್ಣಕ್ಕೆ ತಿರುಗುವ ತನಕ ಎಣ್ಣೆಯಲ್ಲಿ ಬೇಯಿಸಿ. ಬಿಸಿ ಬಿಸಿ ವಡೆಯನ್ನು ಬಾಣಲೆಯಿಂದ ಇಳಿಸಿ, ಕೃಷ್ಣನಿಗೆ ಅರ್ಪಿಸಿ.
`ಸಾಬೂತ್’ ಆಲೂ
ಬೇಕಾಗುವ ಪದಾರ್ಥಗಳು
ಆಲೂ – ಅರ್ಧ ಕೆಜಿ, ಚಿಕ್ಕ ಗಾತ್ರದ್ದು.
ಮೊಸರು – ಅರ್ಧ ಅಳತೆ
ಧನಿಯಾ – 1/2 ಚಮಚ
ಕಾಳು ಮೆಣಸಿನ ಪುಡಿ – 1/4 ಚಮಚ
ಉಪ್ಪು – 1 ಚಮಚ
ಹಸಿ ಮೆಣಸು -ಮೂರು, ಮಧ್ಯಮ ಗಾತ್ರದ್ದು
ಶುಂಠಿ – ಸಣ್ಣಗೆ ಹೆಚ್ಚಿದ ಚೂರುಗಳು ಮೂರು ಚಮಚ
ತುಪ್ಪ – 2 ಚಮಚ
ಕರಿಬೇವು – ಒಂದು ಎಸಳು
ಜೀರಿಗೆ – ಒಂದು ಚಮಚ
ಸಕ್ಕರೆ – 2 ಚಮಚ
ಲವಂಗ – ಮೂರರಿಂದ ನಾಲ್ಕು
ದಾಲ್ಚಿನ್ನಿ – ಸಣ್ಣ ಚೂರುಗಳು 1/2 ಚಮಚ
ಏಲಕ್ಕಿ – 1/2 ಚಮಚ
(ನಿಮ್ಮ ಅಳತೆಯ ಚಮಚ ಮಧ್ಯಮ ಗಾತ್ರದ್ದಿರಲಿ. ತುಂಬಾ ದೊಡ್ಡದೂ ಬೇಡ, ಚಿಕ್ಕದೂ ಬೇಡ)
ತಯಾರಿಸುವ ವಿಧಾನ : ಆಲೂ ಗಡ್ಡೆಯನ್ನು ಚೆನ್ನಾಗಿ ತೊಳೆದು, ಬೇಯಿಸಿ, ಸಿಪ್ಪೆ ಸುಲಿದಿಟ್ಟುಕೊಳ್ಳಿ. ಹಸಿ ಮೆಣಸು, ಶುಂಠಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಸಕ್ಕರೆ, ಲವಂಗ, ದಾಲ್ಚಿನ್ನಿ, ಏಲಕ್ಕಿಯನ್ನು ಒಟ್ಟಿಗೆ ನುಣ್ಣಗೆ ಪುಡಿ ಮಾಡಿಕೊಳ್ಳಿ. ಬೇಯಿಸಿದ ಆಲೂ, ಮೊಸರು,ಕಾಳು ಮೆಣಸು, ಹಸಿಮೆಣಸು-ಶುಂಠಿ ಮಿಶ್ರಣ ಮತ್ತು ಉಪ್ಪನ್ನು ಮಿಶ್ರಣ ಮಾಡಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು, ಜೀರಿಗೆ, ಕರಿಬೇವಿನ ಸೊಪ್ಪು ಹಾಕಿ. ಜೀರಿಗೆ ಸಿಡಿಯಲಾರಂಭಿಸಿದ ತಕ್ಷಣ ಆಲೂ ಮಿಶ್ರಣವನ್ನು ಬಾಣಲೆಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಜಿಡ್ಡಿನ ಅಂಶ ಪ್ರತ್ಯೇಕಗೊಳ್ಳುವ ತನಕ ನಿಧಾನವಾಗಿ ಮಗುಚುತ್ತಿರಿ. ನಂತರ ಒಲೆಯಿಂದ ಕೆಳಗಿಳಿಸಿ, ಸಕ್ಕರೆ – ಲವಂಗ ಪುಡಿಯನ್ನು ಅದಕ್ಕೆ ಸೇರಿಸಿ. ಶ್ರೀ ಕೃಷ್ಣನಿಗೆ ನೈವೇದ್ಯ ಮಾಡಿ.
ಬೇಯಿಸಿದ ಬಾಳೆ ಹಣ್ಣು
ಬೇಕಾಗುವ ಪದಾರ್ಥಗಳು
ಬಾಳೆ ಹಣ್ಣು – ಚೆನ್ನಾಗಿ ಕಳಿತ, ಸಿಪ್ಪೆ ಸುಲಿದ 6 ಏಲಕ್ಕಿ ಬಾಳೆ ಹಣ್ಣು
ಸಕ್ಕರೆ – ಅರ್ಧ ಅಳತೆ
ತೆಂಗಿನ ಕಾಯಿ ತುರಿ – ಅರ್ಧ ಅಳತೆ
ಏಲಕ್ಕಿ – ಮೂರರಿಂದ ನಾಲ್ಕು
ತುಪ್ಪ – ಬಾಳೆ ಹಣ್ಣು ಬೇಯಿಸಲು ಬೇಕಾಗುವಷ್ಟು
ತಯಾರಿಸುವ ವಿಧಾನ : ಬಾಳೆ ಹಣ್ಣನ್ನು ಮೂರು ಇಂಚು ಉದ್ದದ ಚೂರುಗಳನ್ನಾಗಿ ಕತ್ತರಿಸಿ. ಸಕ್ಕರೆ, ಕಾಯಿ ತುರಿ, ಏಲಕ್ಕಿಯನ್ನು ಸಣ್ಣ ಉರಿಯಲ್ಲಿ ಬೇಯಿಸಿ. ಸಕ್ಕರೆ ಪಾಕವಾಗಿ ಕಾಯಿ ತುರಿಯೊಂದಿಗೆ ಚೆನ್ನಾಗಿ ಬೆರೆತು ಹದವಾದ ಮಿಶ್ರಣವಾಗುವ ತನಕ ಬೇಯಿಸಿ. ನಂತರ ಒಲೆಯಿಂದ ಕೆಳಗಿಳಿಸಿ. ಈಗ ಬಾಳೆ ಹಣ್ಣಿನ ಒಂದೊಂದೇ ಹೋಳನ್ನು ಪ್ರತ್ಯೇಕವಾಗಿ ತೆಗೆದುಕೊಂಡು, ನಾಜೂಕಾಗಿ ಸಕ್ಕರೆ – ಕಾಯಿ ತುರಿ ಪಾಕದೊಳಕ್ಕೆ ಮುಳುಗಿಸಿ.ಹಾಗೆಯೇ ತೆಳುವಾದ ಕಡ್ಡಿಯ ಸಹಾಯದಿಂದ ಬಾಳೆ ಹಣ್ಣನ್ನು ಹೊರ ತೆಗೆದು. ಇನ್ನೊಂದು ಬಾಣಲೆಯಲ್ಲಿ ತುಪ್ಪ ಹಾಕಿ, ಸಣ್ಣ ಉರಿಯಲ್ಲಿ ಬೇಯಿಸಿ. ಸಕ್ಕರೆ – ಕಾಯಿತುರಿ ಪಾಕದ ಕವಚ ಹೊದ್ದ ಬಾಳೆ ಹಣ್ಣಿನ ಚೂರು ಕಂದು ಬಣ್ಣಕ್ಕೆ ತಿರುಗುವ ತನಕ ತುಪ್ಪದಲ್ಲಿ ಬೇಯಲಿ. ನಂತರ ಬಾಣಲೆಯಿಂದ ತೆಗೆದು ಶ್ರೀ ಕೃಷ್ಣಾರ್ಪಣ ಮಾಡಿ.
ಸಬ್ಬಕ್ಕಿ ಕಿಚಡಿ
ಬೇಕಾಗುವ ಪದಾರ್ಥಗಳು
ಸಬ್ಬಕ್ಕಿ – ಎರಡು ಅಳತೆ
ಬಟಾಣಿ – ಒಂದು ಅಳತೆ
ಓಮ – ಒಂದು ಚಮಚ
ಹಸಿ ಮೆಣಸು – ಆರು
ತುಪ್ಪ – ನಾಲ್ಕು ಚಮಚ
ಲಿಂಬೆ ಹಣ್ಣು – ಅರ್ಧ
ಕಾಯಿ ತುರಿ – ಅರ್ಧ ಅಳತೆ
ನೀರು – ನಾಲ್ಕು ಅಳತೆ
ಉಪ್ಪು – ರುಚಿಗೆ ತಕ್ಕಷ್ಟು
ಸಕ್ಕರೆ – 3 ಚಮಚ
ಕೊತ್ತುಂಬರಿ ಸೊಪ್ಪು – ಬೇಕಾಗುವಷ್ಟು
ತಯಾರಿಸುವ ವಿಧಾನ : ಸಬ್ಬಕ್ಕಿಯನ್ನು ಚೆನ್ನಾಗಿ ತೊಳೆದು, ನೀರು ಬಸಿದು, ಹಾಗೆ ಒಂದು ಗಂಟೆ ಇಡಿ. ತುಪ್ಪ ಬಿಸಿ ಮಾಡಿಕೊಳ್ಳಿ. ಓಮ ಹಾಕಿ. ಅದು ಸಿಡಿಯಲಾರಂಭಿಸಿದ ನಂತರ ಸಿಗಿದ ಹಸಿ ಮೆಣಸು ಸೇರಿಸಿ. ಒಂದೆರಡು ನಿಮಷ ಬೇಯಿಸಿ. ನಂತರ ನೀರು ಬೆರೆಸಿ. ನೀರು ಕುದಿಯಲಾರಂಭಿಸಿದ ತಕ್ಷಣ ಸಬ್ಬಕ್ಕಿ, ಬಟಾಣಿ, ಉಪ್ಪು ಮತ್ತು ಸಕ್ಕರೆ ಬೆರೆಸಿ. ಸುಮಾರು 10ನಿಮಿಷ ಸಣ್ಣ ಉರಿಯಲ್ಲಿ ಬಾಣಲೆ ಮುಚ್ಚಿಟ್ಟು, ಬೇಯಿಸಿ. ಒಲೆಯಿಂದ ಕೆಳಗಿಳಿಸಿ. ನಿಂಬೆ ರಸ, ಕಾಯಿ ತುರಿ ಮತ್ತು ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ. ಸಬ್ಬಕ್ಕಿ ಕಿಚಡಿ ಸಿದ್ಧ. ಭಗವಂತನಿಗೆ ಅರ್ಪಿಸಿ. ಎಲ್ಲರೂ ಸಂತೋಷದಿಂದ ಸೇವಿಸಿ.