ದೇವರು ನಿಷ್ಪಕ್ಷಪಾತಿಯಾಗಿದ್ದರೆ, ಒಬ್ಬ ಕೋಟ್ಯಧೀಶನಾಗುತ್ತಾನೆ, ಮತ್ತೊಬ್ಬ ಭಾರಿ ನಷ್ಟಕ್ಕೆ ಒಳಗಾಗುತ್ತಾನೆ – ಹೇಗೆ? ಏಕೆ? ಒಬ್ಬ ರಕ್ಷಿಸಲ್ಪಡುತ್ತಾನೆ ಮತ್ತೊಬ್ಬ ಕೊಲ್ಲಲ್ಪಡುತ್ತಾನೆ ಏಕೆ?
ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಲಾಸ್‌ಏಂಜಲೀಸ್‌ನಲ್ಲಿ
1973ರ ಡಿಸೆಂಬರ್‌ನಲ್ಲಿ ನೀಡಿದ ಉಪನ್ಯಾಸ.
ಪ್ರಾಯೇಣೈತದ್ ಭಗವತ ಈಶ್ವರಸ್ಯ ವಿಚೇಷ್ಟಿತಮ್ ।
ಮಿಥೋ ನಿಘ್ನಂತಿ ಭೂತಾನಿ ಭಾವಯಂತಿ ಚ ಯನ್ಮಿಥಃ ॥
ವಾಸ್ತವವಾಗಿ ಇದೆಲ್ಲ ದೇವೋತ್ತಮ ಪರಮ ಪುರುಷನ ಪರಮೋನ್ನತ ಸಂಕಲ್ಪದಿಂದಲೇ ಆಗಿದೆ. ಕೆಲವೊಮ್ಮೆ ಜನರು ಒಬ್ಬರನ್ನೊಬ್ಬರು ರಕ್ಷಿಸುತ್ತಾರೆ; ಮತ್ತೆ ಕೆಲವೊಮ್ಮೆ ಅವರು ಪರಸ್ಪರ ಕೊಲ್ಲುತ್ತಾರೆ.” (ಶ್ರೀಮದ್ ಭಾಗವತಮ್: 1.15.24)
ಶ್ರೀಲ ಪ್ರಭುಪಾದ: ಈಗ ಅದರ ತಾತ್ಪರ್ಯ ಓದು.
ಭಕ್ತ: (ಓದುತ್ತಾನೆ): ಮಾನವ ಶಾಸ್ತ್ರಜ್ಞರ ಅಭಿಮತದಂತೆ, ಅಸ್ತಿತ್ವಕ್ಕಾಗಿ ಹೋರಾಟ ಮಾಡುವುದು, ಪ್ರಕೃತಿ ನಿಯಮ. ಬಲಿಷ್ಠನು ಬದುಕುತ್ತಾನೆ. ಆದರೆ, ಆ ಪ್ರಕೃತಿ ನಿಯಮದ ಹಿಂದೆ ಪರಮೇಶ್ವರನ ನಿರ್ದೇಶನವಿದೆ ಎಂಬುದು ಅವರಿಗೆ ತಿಳಿಯದು. ಪ್ರಕೃತಿ ನಿಯಮ ನಿರ್ದೇಶನಕ್ಕೆ ಬದ್ಧವೆಂಬುದನ್ನು ಭಗವದ್ಗೀತೆ ಖಚಿತಪಡಿಸಿದೆ. ಜಗತ್ತಿನಲ್ಲಿ ಶಾಂತಿ ನೆಲೆಗೊಂಡಾಗ ಅದು ಭಗವಂತನ ಸತ್ಯಕಲ್ಪವೆಂಬುದನ್ನು ತಿಳಿಯಬೇಕು. ಅಶಾಂತಿ ನೆಲೆಸಿದಾಗಲೂ ಅದು ದೈವೇಚ್ಛೆಯಂತೆಯೇ ನಡೆಯುವುದು. ಭಗವಂತನ ಸಂಕಲ್ಪವಿಲ್ಲದೆ, ತೃಣವೂ ಚಲಿಸುವುದಿಲ್ಲ. ಪರಮೇಶ್ವರ ಪ್ರಣೀತವಾದ ನಿಯಮಾವಳಿಯ ಉಲ್ಲಂಘನೆ ನಡೆದಾಗ, ಜನರ ನಡುವೆ, ರಾಷ್ಟ್ರಗಳ ನಡುವೆ ಯುದ್ಧವೇರ್ಪಡುತ್ತದೆ. ಆದುದರಿಂದ ಶಾಂತಿ ಸ್ಥಾಪನೆಗೆ ಖಚಿತವಾದ ಮಾರ್ಗವೆಂದರೆ, ಪ್ರತಿಯೊಂದನ್ನು ಭಗವನ್ನಿಯಾಮಕಕ್ಕೆ ಅನುಸಾರವಾಗಿ ನಡೆಸುವುದು. ಭಗವನ್ನಿಯಾಮಕವೆಂದರೆ ನಾವೇನೇ ಮಾಡಲಿ, ಏನೇ ತಿನ್ನಲಿ, ತ್ಯಾಗ ಮಾಡಲಿ, ದಾನ ಮಾಡಲಿ, ಎಲ್ಲವನ್ನೂ ಭಗವತ್ ಪ್ರೀತ್ಯರ್ಥ ಮಾಡಬೇಕು. ಭಗವದಿಚ್ಛೆಗೆ ವಿರುದ್ಧವಾಗಿ ಯಾರೂ ಏನನ್ನೂ ಮಾಡಬಾರದು, ತಿನ್ನಬಾರದು, ತ್ಯಾಗಮಾಡಬಾರದು, ದಾನಮಾಡಬಾರದು. ವಿವೇಕವು ಶೌರ್ಯದ ಉತ್ತಮ ಅಂಶ. ಪರಮಾತ್ಮ ಪ್ರೀತ್ಯರ್ಥವಾದ ಕಾರ್ಯಗಳೇನು, ಭಗವಂತನಿಗೆ ತೃಪ್ತಿತಾರದ ಕಾರ್ಯಗಳೇನು – ಇವೆರಡರ ಅಂತರವನ್ನು ತಿಳಿಯಲು ಕಲಿಯಬೇಕು. ಒಂದು ಕ್ರಿಯೆ ಭಗವತ್ ಪ್ರೀತ್ಯರ್ಥವೇ ಅಲ್ಲವೆ ಎಂಬುದರಿಂದ ತೀರ್ಮಾನವಾಗುತ್ತದೆ. ವೈಯಕ್ತಿಕ ಖಯಾಲಿಗೆ ಇಲ್ಲಿ ಆಸ್ಪದವಿಲ್ಲ. ಭಗವತ್ ಪ್ರೀತಿ ನಮಗೆ ಮಾರ್ಗದರ್ಶನ ನೀಡಬೇಕು. ಅಂತಹ ಕ್ರಿಯೆಗೆ ಯೋಗಃ ಕರ್ಮಸು ಕೌಶಲಂ ಎಂದು ಹೆಸರು. ಅಥವಾ ಒಂದು ಕ್ರಿಯೆಯನ್ನು ಭಗವಂತನೊಡನೆ ಒಗ್ಗೂಡಿಸುವುದು. ಅದು ಒಂದು ಕ್ರಿಯೆಯಲ್ಲಿ ಕಂಡರಿಸುವ ಪರಿಪೂರ್ಣ ಕಲೆ.
ಶ್ರೀಲ ಪ್ರಭುಪಾದ: ಈ ಭೌತಿಕ ಜಗತ್ತಿನಲ್ಲಿ ಸುಖ, ಯಾವುದೂ ಇರುವುದಿಲ್ಲ, ಕೇವಲ ಸಂಕಷ್ಟವೆ ಎಂಬುದನ್ನು ಅರಿಯುವುದೆ ಅಧ್ಯಾತ್ಮ ಜ್ಞಾನದ ಮೊದಲ ಹಂತ. ಅಸ್ತಿತ್ವದ ಹೋರಾಟದಲ್ಲಿ ಕಿಂಚಿತ್ ಪ್ರತಿರೋಧವೊಡ್ಡಿ ಸಂಕಷ್ಟವನ್ನು ತಡೆಯುವುದನ್ನೇ ನಾವು ಸುಖಾನುಭವ ಎಂದು ಭಾವಿಸುತ್ತೇವೆ. ಆದರೆ ವಸ್ತುಶಃ ಅಂತಹ ಸುಖಾನುಭವವಿಲ್ಲ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳುತ್ತಾನೆ, ಈ ಐಹಿಕ ಪ್ರಪಂಚ ದುಃಖಾಲಯಂ ಎಂದು. ಎಂದರೆ “ಸಂಕಷ್ಟದ ತಾಣ.” ಅದು ವಾಸ್ತವ.
ನೋವನ್ನೆ, ಸುಖಾನುಭವ ಎಂದು ಒಪ್ಪಿಕೊಳ್ಳುವುದಾದರೆ ಆತ ಹುಚ್ಚ. ಆ ಸಂಕಷ್ಟವನ್ನು ನಿವಾರಿಸಲು ಪ್ರಯತ್ನಿಸುವವ ವಿವೇಕಿ. ನಾನೊಂದು ವ್ಯವಹಾರ್ಯ ಉದಾಹರಣೆ ಕೊಡುತ್ತೇನೆ. ಕಾರಾಗೃಹದಲ್ಲಿ ಕೆಲವು ಸೆರೆಯಾಳುಗಳನ್ನು ಮೊದಲನೆಯ ದರ್ಜೆಯವರೆಂದು ಗುರುತಿಸುತ್ತೇವೆ. ಸರ್ಕಾರ ಅವರಿಗೆ ವಿಶೇಷ ಸವಲತ್ತುಗಳನ್ನು ಕೊಡುತ್ತೆ. ಅಂತೆಯೇ ಮೂರನೆಯ ದರ್ಜೆಯ ಖೈದಿಗಳಿರುತ್ತಾರೆ. ಇಬ್ಬರೂ ಖೈದಿಗಳೆ. ಇಬ್ಬರೂ ಸೆರೆವಾಸ ಅನುಭವಿಸಲೇಬೇಕು. ಮೊದಲನೆಯ ದರ್ಜೆ ಖೈದಿ, ಸೆರೆಮನೆಯಲ್ಲಿ ತಾನು ಸುಖಪಡಬಹುದೆಂದು ತಿಳಿದರೆ ಅವನು ಮಹಾ ಮೂರ್ಖ. ಸೆರೆಮನೆ ಇರುವುದು ಸುಖೀ ಜೀವನ ನಡೆಸಲೆಂದಲ್ಲ. ಅದು ಅವನು ಕಷ್ಟವನ್ನು ಅನುಭವಿಸಲಿಕ್ಕಾಗಿ ಇರುವುದು. ಆದುದರಿಂದ ಶ್ರೀಲ ಭಕ್ತಿವಿನೋದ ಠಾಕುರರು ಹಾಡುತ್ತಾರೆ, ಅನಾದಿ ಕರ್ಮಫಲೇ, ಪಡಿ ಭವಾರ್ಣವ ಜಲೇ ತರಿಬಾರೇ ನಾ ದೇಖಿ ಉಪಾಯ : “ನನ್ನ ಕಾಮ್ಯ ಕರ್ಮಗಳಿಂದ ನಾನು ಭವಸಾಗರದಲ್ಲಿ ಬಿದ್ದಿದ್ದೇನೆ, ಈ ಕಷ್ಟದಿಂದ ಬಿಡಿಸಿಕೊಳ್ಳುವ ದಾರಿಯೇ ಕಾಣುತ್ತಿಲ್ಲ.”
ಈ ಭೌತಿಕ ಜಗತ್ತು ಒಂದು ಸೆರೆಮನೆ, ಇಲ್ಲಿ ನಾವು ಸ್ವತಂತ್ರರಾಗಿ ಏನೊಂದೂ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬನೂ, “ನಾನು ಸ್ವತಂತ್ರ” ಎಂದು ಭಾವಿಸುತ್ತಾನೆ. ಆದರೆ ಅದು ನಿಜವಲ್ಲ. ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿರುವಂತೆ (3.27),
ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ ।
ಅಹಙ್ಕಾರವಿಮೂಢಾತ್ಮಾ ಕರ್ತಾಹಮಿತಿ ಮನ್ಯತೇ ॥
ಪ್ರತಿಯೊಬ್ಬನೂ ಭೌತಿಕ ಪ್ರಕೃತಿಯ ನಿಯಮಗಳಿಂದ ನಿಯಂತ್ರಿತನಾಗಿದ್ದಾನೆ. ಆದರೆ ಮೂಢರು ತಾವು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ತಿಳಿದುಕೊಳ್ಳುತ್ತಾರೆ.
ಆತ್ಯಂತಿಕವಾಗಿ ಕೃಷ್ಣನೇ ಎಲ್ಲರನ್ನೂ ನಿರ್ವಹಿಸುತ್ತಿರುವವನು. ಭಾಗವತ ಶ್ಲೋಕದಲ್ಲಿ ಹೇಳಿರುವಂತೆ, ಪ್ರಾಯೇಣೈತದ್ ಭಗವತ ಈಶ್ವರಸ್ಯ ವಿಚೇಷ್ಟಿತಮ್ : “ಪ್ರತಿಯೊಂದೂ ಭಗವದಿಚ್ಛೆಯಿಂದಲೇ ನಡೆಯುವುದು. ಪರಮೇಶ್ವರನ ಇಚ್ಛೆಗೆ ವಿರುದ್ಧವಾಗಿ ನಾವೇನನ್ನೂ ಮಾಡಲಾಗದು. ಪ್ರಜಾ ರಾಜ್ಯದಲ್ಲಿ, ಸರ್ಕಾರದ ಮಂಜೂರಾತಿ ಇಲ್ಲದೆ ಏನನ್ನೂ ಮಾಡಲಾಗದು.” ಅಂತೆಯೇ ಪರಮೇಶ್ವರನೆಂಬ ಪ್ರಭುವಿನ – ಪರಮ ಆಜ್ಞಾಕಾರಕ ಕೃಷ್ಣ ಅಥವಾ ದೇವರು ಅನುಗ್ರಹಿಸದೆ ನಾವೇನನ್ನೂ ಮಾಡಲಾಗದು.
ಇಲ್ಲಿ ಇನ್ನೊಂದು ಸೂಕ್ತಿ ಉಕ್ತವಾಗಿದೆ, ಮಿಥೋ ನಿಘ್ನಂತಿ ಭೂತಾನಿ ಭಾವಯಂತಿ ಚ ಯನ್ಮಿಥಃ “ಕೆಲವೊಮ್ಮೆ ಅವನಿಚ್ಛೆಯಂತೆ ನಾವೊಬ್ಬರಿಗೊಬ್ಬರು ಕೊಲ್ಲುತ್ತೇವೆ, ಕೆಲವೊಮ್ಮೆ ಪರಸ್ಪರ ರಕ್ಷಣೆ ಕೊಡುತ್ತೇವೆ.” ಇದರರ್ಥ ಕೃಷ್ಣ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ರೀತಿಯಾಗಿ ಆಲೋಚಿಸುತ್ತಾನೆಂದೆ? ಅವನು ಪಕ್ಷಪಾತಿ ಎಂದೆ? ಇಲ್ಲ. ಕೃಷ್ಣನ ಕ್ರಿಯೆಗಳು ದೈವಿಕ, ಪರಮೋಚ್ಚ ಕೃಷ್ಣ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಂತೆ. ಒಂದು ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನು ಶಿಕ್ಷಿಸಿ ಗಲ್ಲಿಗೇರಿಸುವ ನ್ಯಾಯಾಧೀಶರು, ಮತ್ತೊಂದು ಪ್ರಕರಣದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಪರಿಹಾರ ಧನವನ್ನಾಗಿ ನೀಡುತ್ತಾರೆ. ಆತ ಪಕ್ಷಪಾತಿಯೇ? ಅಲ್ಲ. ಆತ ಕೇವಲ ಆಡಳಿತ ನಿರ್ವಹಿಸುತ್ತಾನೆ, ಕಾನೂನಿನ್ವಯ ನ್ಯಾಯ ವಿತರಿಸುತ್ತಾನೆ. ಒಬ್ಬ ವ್ಯಕ್ತಿ ನಿರ್ಮಿಸುವ ಪರಿಸ್ಥಿತಿಯಿಂದಾಗಿ, ಆತನಿಗೆ ಮರಣದಂಡನೆ, ಮತ್ತೊಬ್ಬ ಸೃಷ್ಟಿಸಿದ ಪರಿಸ್ಥಿತಿಯಿಂದ ಆತನಿಗೆ ಲಕ್ಷ ರೂಪಾಯಿಗಳ ಪರಿಹಾರ. ಪ್ರತಿಯೊಂದೂ ಅವನವನ ಕ್ರಿಯೆಗೆ ಅನುಸಾರವಾಗಿ ನಡೆಯುತ್ತದೆ.
ಆದುದರಿಂದ, ನಾವು ವಿಭಿನ್ನ ರೀತಿಯಲ್ಲಿ ವರ್ತಿಸುತ್ತಿದ್ದೇವೆ. ಸರ್ವೋಚ್ಚ ಆಡಳಿತಕ್ಕೆ ಒಳಪಟ್ಟು, (ದೈವ ನೇತ್ರೇಣ), ನಾವು ಬೇರೆ ಬೇರೆ ಸುಖದಾಯಕವೋ, ಕಷ್ಟದಾಯಕವೋ ಆದ ಶರೀರದ ಅವಸ್ಥೆಯನ್ನು ಅನುಭವಿಸುತ್ತಿದ್ದೇವೆ. ಇದು ನಮ್ಮ ಪರಿಸ್ಥಿತಿ. ಕೃಷ್ಣ ಪಕ್ಷಪಾತ ರಹಿತ. ಭಗವದ್ಗೀತೆಯಲ್ಲಿ ಆತ ಹೇಳಿರುವಂತೆ, ಸಮ್ಮೋಽಹಂ ಸರ್ವಭೂತೇಷು `ನಾನು ಎಲ್ಲರಿಗೂ ಸಮ.’ ಇಲ್ಲವಾದಲ್ಲಿ ಅವನು ಹೇಗೆ ದೇವರಾಗುತ್ತಾನೆ? ದೇವರು ಪಕ್ಷಪಾತಿಯಲ್ಲ, ಮನಸೋ ಇಚ್ಛೆಯಂತೆ ಒಬ್ಬನನ್ನು ಕೊಲ್ಲಿಸಿ ಮತ್ತೊಬ್ಬನಿಗೆ ಲಕ್ಷ ರೂಪಾಯಿ ಕೊಡಿಸಲಾರ. ಇಲ್ಲ. ನಮ್ಮ ನಮ್ಮ ಕ್ರಿಯಾನುಸಾರ ನಾವೇ ಅನುಕೂಲ ಪ್ರತಿಕೂಲ ಪರಿಸ್ಥಿತಿಗಳನ್ನು ನಿರ್ಮಾಣ ಮಾಡುತ್ತೇವೆ. ಅದು ನಿಮಗೆ ಅರ್ಥವಾಗಬೇಕು.
ಸರ್ಕಾರದ ಕಾನೂನಿನಂತೆ, ನಾನು ಯಾರನ್ನಾದರೂ ಕೊಂದರೆ, ನಾನೂ ಕೊಲೆಯಾಗಬೇಕು. ಪ್ರಕೃತಿ ನಿಯಮ, ಅಥವಾ ದೈವ ನಿಯಮ. ಅಂತೆಯೇ ಕಾರ್ಯ ನಿರ್ವಹಿಸುತ್ತದೆ. ನಾವು ನಮ್ಮ ಭೂತ ಜೀವನವನ್ನು ಮರೆಯುತ್ತೇವೆ. “ನಾನು ಹೋದ ಜನ್ಮದಲ್ಲಿ ಆತನನ್ನು ಕೊಂದಿದ್ದೆ. ಹಾಗಾಗಿ ಈಗ ಕೊಲೆಗೀಡಾಗುತ್ತಿದ್ದೇನೆ” ಎಂಬುದನ್ನು ಯಾರೊಬ್ಬರೂ ಯೋಚಿಸಲಾರ. ನಾವು ನಮ್ಮ ಭೂತಕಾಲವನ್ನು ಮರೆತರೂ ಸಹ ಕೃಷ್ಣ ಅದನ್ನು ಮರೆಯಲಾರ. ಆತ ನಮಗೆ ನೆನಪು ಮಾಡಿಕೊಡುತ್ತಾನೆ: “ಈ ಮಗು ನಿನ್ನ ಹಿಂದಿನ ಜನ್ಮದಲ್ಲಿ ನಿನ್ನನ್ನು ಕೊಂದ. ಈಗ ನೀನು ಅದನ್ನು ಗರ್ಭದಲ್ಲೇ ಕೊಲ್ಲಬಹುದು.” ಕೃಷ್ಣನನ್ನು `ಉಪದ್ರಷ್ಟಾ’ ಮತ್ತು `ಅನುಮಂತಾ’ ಎಂದು ಬಣ್ಣಿಸಲಾಗಿದೆ, “ಸಾಕ್ಷಿ ಮತ್ತು ಅನುಮೋದಕ.” ಹಾಗಾಗಿ ಆತ ಎಲ್ಲವನ್ನೂ ನೋಡುತ್ತಾನೆ. ಮತ್ತು ಅವರ ಪುಣ್ಯಕ್ಕೆ ಸುಖಪಡಲು ಅಥವಾ ಪಾಪಕಾರ್ಯಗಳಿಗೆ ಪ್ರಾಯಶ್ಚಿತ್ತವನ್ನು ಅನುಭವಿಸುವಂತೆ ಎಲ್ಲರಿಗೂ ನೆನಪು ಮಾಡಿಕೊಡುತ್ತಾನೆ. ಕೆಲವೊಮ್ಮೆ ಯಾರನ್ನಾದರೂ ಕೊಲ್ಲುವಂತೆಯೂ ಕೆಲವೊಮ್ಮೆ ರಕ್ಷಿಸುವಂತೆಯೂ ನೆನಪು ಮಾಡಿಕೊಡುತ್ತಾನೆ.
ಇದರಲ್ಲಿ ತಪ್ಪೇ ಇಲ್ಲ. ಅದು ಸಮತಾನ್ಯಾಯ. ಆದುದರಿಂದ, ಕೃಷ್ಣ ಮಂಜೂರಾತಿ ನೀಡುತ್ತಾನೆಂಬ ಕಾರಣಕ್ಕಾಗಿ (ವಿಚೇಷ್ಟಿತಮ್) ಆತ ಪಕ್ಷಪಾತಿ ಎಂದು ತೀರ್ಮಾನಿಸಬೇಡಿ. ಆತ ಯಾವತ್ತೂ ನಿಷ್ಪಕ್ಷಪಾತಿ. ನಾವು ಭಗವನ್ನಿಯಮವನ್ನು ಉಲ್ಲಂಘಿಸಿ, ಪಾಪಫಲವನ್ನು ಅನುಭವಿಸುತ್ತೇವೆ. ಅದು ನಮ್ಮ ಕರ್ತವ್ಯ. ಭಗವದಿಚ್ಛೆಯನ್ನು ತಿಳಿಯಲು ಮಾನವ ಜನ್ಮ ಒಂದು ಒಳ್ಳೆಯ ಅವಕಾಶ ತಂದು ಕೊಡುತ್ತದೆ. ಆತ ತನ್ನ ಇಚ್ಛೆಯನ್ನು ಭಗವದ್ಗೀತೆಯಲ್ಲಿ ಸ್ಪಷ್ಟಪಡಿಸಿದ್ದಾನೆ (18.66), ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ “ನಿನ್ನೆಲ್ಲ ಕರ್ತವ್ಯವನ್ನು ಬಿಡು. ನನಗೆ ಶರಣಾಗು.” “ಭಗವದಿಚ್ಛೆ ಏನು ನನಗೆ ಗೊತ್ತಿಲ್ಲ.” ಎಂದು ಯಾರೂ ಹೇಳುವಂತಿಲ್ಲ. ಅದು ಹಾಗಲ್ಲ. ನಿಮಗೆ ಗೊತ್ತು. ಕೃಷ್ಣ ಶರಣಾಗತಿಯ ಫಲವೇನು? ಆತ ಹೇಳುತ್ತಾನೆ, ಅಹಂ ತ್ವಾಂ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚ “ನಾನು ನಿನಗೆ ರಕ್ಷಣೆ ಕೊಡುತ್ತೇನೆ. ನಿನ್ನ ಪಾಪಗಳ ಫಲದಿಂದ ನಿನ್ನನ್ನು ಮುಕ್ತಗಳಿಸುತ್ತೇನೆ.”
ನೀವು ವಿದ್ಯಾವಂತರಾದರೆ, ಸುಸಂಸ್ಕೃತರಾದರೆ ನಿಮಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನಗಳು ಸಿಗುತ್ತವೆ. ನೀವು ಅಯೋಗ್ಯರಾಗಿದ್ದರೆ ಕಷ್ಟವನ್ನು ಅನುಭವಿಸುತ್ತೀರಿ. ಹಾಗೆಯೇ ನಾವು ನಮ್ಮ ಪಾಪಕೃತ್ಯಗಳಿಂದ ಕಷ್ಟವನ್ನು ಪಡುತ್ತೇವೆ, ಪುಣ್ಯಕಾರ್ಯಗಳನ್ನು ನಡೆಸಿದರೆ, ಸುಖ ಶತಸ್ಸಿದ್ಧ. ಇದು ಪ್ರಕೃತಿ ನಿಯಮ. ಇದರ ಹೆಸರೇ ಕರ್ಮಬಂಧ. ಭಗವಂತನ ಇಚ್ಛೆ ಏನೆಂದು ಎಲ್ಲಿಯವರೆಗೆ ನಾವು ತಿಳಿಯುವುದಿಲ್ಲವೋ, ನಮ್ಮ ಕರ್ತವ್ಯವೇನೆಂಬುದನ್ನು ಅರಿಯುವುದಿಲ್ಲವೋ, ಅಲ್ಲಿಯವರೆಗೆ ನಮ್ಮ ಪಾಪ, ಪುಣ್ಯಗಳಿಂದ ನಮ್ಮ ಪರಿಸ್ಥಿತಿಯನ್ನು ನಾವೇ ಸೃಷ್ಟಿಸಿಕೊಳ್ಳುತ್ತೇವೆ. ಹಾಗಾಗಿ ಕೆಲವು ನೋವುಣ್ಣುತ್ತೇವೆ, ಮತ್ತೆ ಕೆಲವೊಮ್ಮೆ ನಲಿವನ್ನು.
ಆದುದರಿಂದ ನಮ್ಮ ಕರ್ತವ್ಯವೇನೆಂಬುದು ನಮಗರಿವಾಗಬೇಕು. ಅದನ್ನು ನಾವು ಮರೆತಿದ್ದೇವೆ. ನ ತೇ ವಿದುಃ ಸ್ವಾರ್ಥಃ ಗತಿಮ್ ಹಿ ವಿಷ್ಣುಮ್ ಭೌತಿಕ ಅವಸ್ಥೆಯಲ್ಲಿ ನಾವು ನಮ್ಮ ಜೀವನದ ಗುರಿಯನ್ನೇ ಮರೆತಿದ್ದೇವೆ. ಭಗವಾನ್ ಕೃಷ್ಣನೇ ಗುರಿ: ಆದುದರಿಂದ ಕೃಷ್ಣ ಇಲ್ಲಿಗೆ ಬರುತ್ತಾನೆ. ಅವನು ಭಗವದ್ಗೀತೆಯಲ್ಲಿ (4.7) ಹೇಳುತ್ತಾನೆ, ಯದಾ ಯದಾ ಹಿ ಧರ್ಮಸ್ಯ ಗ್ಲಾನಿಭರ್ವತಿ ಭಾರತ … ತದಾತ್ಮಾನಂ ಸೃಜಾಮ್ಯಹಮ್ : “ಯಾವಾಗ ಜನರು ತಮ್ಮ ಕರ್ತವ್ಯವನ್ನು ಮರೆಯುತ್ತಾರೋ, ಆಗ ನಾನು ಅವತರಿಸುತ್ತೇನೆ.” ನಾವು ನಮ್ಮ ಕರ್ತವ್ಯವನ್ನು ಮರೆತಾಗ, ಅದಕ್ಕೆ `ಧರ್ಮಸ್ಯಗ್ಲಾನಿಃ’ ಎಂದು ಹೆಸರು. ಧರ್ಮವೆಂಬುದು ಧಾರ್ಮಿಕ ಸಂವೇದನ ಸೂಚನಾತ್ಮಕ ಶಬ್ದವಲ್ಲ. ಧರ್ಮ ಎಂದರೆ `ವ್ಯಕ್ತಿಯ ವಸ್ತುನಿಷ್ಠ ಕರ್ತವ್ಯ’ ಇದು ಶ್ರೀಮದ್ ಭಾಗವತದಲ್ಲಿ ಉಕ್ತವಾಗಿದೆ.
ಆದುದರಿಂದ ನಮ್ಮ ನಿಜವಾದ, ವೃತ್ತಿನಿಷ್ಠ ಕರ್ತವ್ಯವೆಂದರೆ ಭಗವತ್‌ಕೈಂಕರ್ಯ. ನಮ್ಮ ಕರ್ತವ್ಯ ಕೃಷ್ಣನ ಸೇವೆ. ನಾವು ಕೃಷ್ಣನನ್ನು ಸೇವಿಸುವುದನ್ನೇ ಮರೆತು, ಮಿಕ್ಕೆಲ್ಲವನ್ನೂ – ಕಾಮ, ಲೋಭ, ಮೋಹ – ಸೇವಿಸಿದರೆ, ಎಷ್ಟೊಂದು ಕಷ್ಟಗಳು ಪರಿಣಮಿಸುತ್ತವೆ. ಅದು ನಮ್ಮ ಪರಿಸ್ಥಿತಿ. ಸೇವೆಯ ಜವಾಬ್ದಾರಿಯಿಂದ ನಾವು ಕಳಚಿಕೊಳ್ಳಲಾಗದು. ಅದು ಸಾಧ್ಯವಿಲ್ಲ. ನಮ್ಮ ಸೇವೆಯನ್ನು ಎಲ್ಲಿ ಸಲ್ಲಿಸಬೇಕೆಂಬುದು ತಿಳಿಯದು. ಅದನ್ನು ಮರೆತಿದ್ದೇವೆ.
ಕಾಮಾದೀನಾಂ ಕತಿ ನ ಕತಿಧಾ ಪಾಲಿತಾ ದುರ್ನಿದೇಶಾಸ್ : ಮಾನವ ಜೀವಿಗಳು ಮೌಢ್ಯದಿಂದ ಕಾಮ, ಲೋಭ, ಮೋಹ, ಕ್ರೋಧ – ಇನ್ನೂ ಅನೇಕ ವಿಷಯಗಳಿಗೆ ಗಮನಕೊಟ್ಟು, ಆ ನಿಟ್ಟಿನಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಒಬ್ಬ ಮತ್ತೊಬ್ಬನನ್ನು ಕೊಲ್ಲುತ್ತಾನೆ, ಕಾರಣ ಕಾಮಾಸಕ್ತಿ ಅಥವಾ ಮೋಹ. ಆದುದರಿಂದ ನಾವು ಕೇವಲ ಕಾಮ, ಲೋಭ, ದುರಾಸೆ ಅವುಗಳ ಸೇವಾ ನಿರತರಾಗಿದ್ದೇವೆ ಎಂಬುದು ನಿಸ್ಸಂದೇಹ. ಇವೆಲ್ಲಕ್ಕೂ ಸೊಪ್ಪು ಹಾಕುವುದರಿಂದ ನಾವು ಹತಾಶರಾಗುತ್ತಿದ್ದೇವೆಂಬುದನ್ನು ಅರ್ಥಮಾಡಿಕೊಳ್ಳಬೇಕು. ಆ ಸೇವೆಯನ್ನು ದಿಕ್‌ಪಲ್ಲಟಗೊಳಿಸಿ ಕೃಷ್ಣನತ್ತ ತಿರುಗಿಸಬೇಕು. ಅದು ಕೃಷ್ಣನ ಸಂದೇಶ. ಕೃಷ್ಣ ಹೇಳುತ್ತಾನೆ, “ನೀವು ಆಗಲೆ ಸೇವಾನಿರತರಾಗಿದ್ದೀರಿ. ನೀವು ಆ ಸೇವೆಯಿಂದ ಮುಕ್ತರಾಗಲು ಸಾಧ್ಯವಿಲ್ಲ. ಆದರೆ ನಿಮ್ಮ ಸೇವೆ ಅಪಾತ್ರದಲ್ಲಿದೆ. ಆದುದರಿಂದ ಅದನ್ನು ನನ್ನತ್ತ ತಿರುಗಿಸಿ. ನೀವು ಸುಖವಾಗಿರುತ್ತೀರಿ.” ಅದು ಕೃಷ್ಣಪ್ರಜ್ಞೆ.
ಹೊಟ್ಟೆಬಾಕ ಅಗತ್ಯಕ್ಕಿಂತ ಮೀರಿ ತಿನ್ನುತ್ತಾನೆ. ಹಾಗಾಗಿ ನರಳುತ್ತಾನೆ. ಸಕ್ಕರೆ ಕಾಯಿಲೆ, ಆಮಶಂಕೆ, ಈ ರೋಗಗಳು, ಅಗತ್ಯಕ್ಕಿಂತ ಮೀರಿ ತಿಂದಾಗ ಬರುವಂಥವು. ಆದರೂ, ಆತ ನರಳುತ್ತಿದ್ದರೂ, ತಿನ್ನುವುದನ್ನು ಬಿಡಲಾರ. ಏಕೆಂದರೆ ಆತ ಆಸೆಬುರುಕ ಮತ್ತು ಕಾಮಾಂಧ. ಆತನ ನರಳಿಕೆಗೆ ಅದೇ ಕಾರಣ. ನಿಮಗೆ ಹಸಿವಿಲ್ಲದಿರುವಾಗಲೂ ತಿನ್ನುವುದಾದರೆ ನೀವು ನರಳಲೇಬೇಕು. ಯಾವುದಾದರೂ ರೋಗ ಬರಿಸಿಕೊಂಡು ಕಷ್ಟಪಡಬೇಕು. ಇದು ವೈದ್ಯಕೀಯ ವಿಜ್ಞಾನದ ವಾಸ್ತವಿಕ ಅಂಶ.
ನಾವು ಸೇವೆ ಮಾಡುತ್ತಲೆ ಇದ್ದೇವೆ, ಆದರೆ ನಮ್ಮ ಕಾಮ, ನಮ್ಮ ದುರಾಸೆಗಳನ್ನು ಸೇವಿಸುತ್ತಿದ್ದೇವೆ. ಅದರಿಂದಲೆ ನೋವು, ನರಳುವಿಕೆ. ನಾವು ಕಾಮ, ದುರಾಸೆ, ಮೋಹ, ಭೀತಿ ಇವುಗಳಿಂದ ಸೋಂಕಿತರಾಗಿದ್ದೇವೆ. ನೀವು ಕದ್ದರೆ ಭಯಗ್ರಸ್ತರಾಗುತ್ತೀರಿ: “ಓ! ನನ್ನನ್ನು ಬಂಧಿಸುತ್ತಾರೆ, ನನ್ನನ್ನು ಬಂಧಿಸಬಹುದು.” ಏಕೆಂದರೆ ನೀವೇನೋ ತಪ್ಪು ಮಾಡಿದ್ದೀರಿ. ನೀವು ಭಯದ ಪ್ರಭಾವಕ್ಕೆ ಒಳಗಾಗಿದ್ದೀರಿ. ಅದು ಅರ್ಥವಾಗುವುದು ಸುಲಭ.
ನಮ್ಮ ವಿವಿಧ ಬಯಕೆಗಳನ್ನು ತೀರಿಸಿಕೊಂಡು ವಿವಿಧ ಸಂದರ್ಭಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಿದ್ದೇವೆ. ಅಷ್ಟೆ. ಕೆಲವೊಮ್ಮೆ, ನಾವು ಮಾಡುತ್ತಿರುವುದು ಸರಿಯಲ್ಲವೆಂದು ತಿಳಿದೂ ಅದೇ ತಪ್ಪು ಮಾಡುತ್ತಿದ್ದೇವೆ. ಆದರೆ ನಾವು ನಮ್ಮ ಕಾಮ, ದುರಾಸೆ ಪೂರೈಸಲು ಏನೆಲ್ಲ ಮಾಡಿದರೂ ಅವಕ್ಕೆ ಕರುಣೆ ಬಾರದು. ಮತ್ತೆ ಮತ್ತೆ ಹೇಳುತ್ತವೆ, “ನೀನು ಮಾಡುತ್ತಲೇ ಹೋಗು.” ನಾವು ಕಷ್ಟಕ್ಕೀಡಾಗಿದ್ದೇವೆ. ಆದರೂ ನಾವು ಕಾಮ ಮತ್ತು ದುರಾಸೆಯ ಆದೇಶಕ್ಕೆ ಮಣಿಯುತ್ತೇವೆ. ಹೀಗೆ ನಮ್ಮ ಕರ್ಮವನ್ನು ನಾವೇ ಸೃಷ್ಟಿಸುತ್ತಿದ್ದೇವೆ. ವಿವೇಕಿಯಾದವನು, “ದೀರ್ಘಕಾಲ ನನ್ನ ಕೀಳು ಅಭಿರುಚಿಗಳಿಗೆ ಬೆಲೆಕೊಟ್ಟು ಬೆಳೆಸುತ್ತಿದ್ದೇನೆ. ಆದರೂ ನಾನು ಸುಖಿಯಲ್ಲ, ನನ್ನ ಕಾಮನೆಗಳು ತೃಪ್ತಿಯಾಗಿಲ್ಲ” ಎಂದುಕೊಳ್ಳುತ್ತಾನೆ. ಕಾಮದಾಹಕ್ಕೆ ತುತ್ತಾದವನ ಬಯಕೆ ಎಂದೂ ಈಡೇರದು. ಅವನು ಎಷ್ಟೋ ಪ್ರಾಣಿಗಳನ್ನು ಕೊಂದಿದ್ದಾನೆ. ಕೇವಲ ನಾಲಗೆ ರುಚಿಗೆ, ಈ ಕುಕೃತ್ಯವನ್ನು ನಿಲ್ಲಿಸಬೇಕೆಂದು ಅವನು ತಿಳಿದಿರಬಹುದು; ಆದರೆ ಅದಾಗದು, ಆತ ಮುಗಿಸಲಾರ, ಕೊಲ್ಲುತ್ತಲೇ ಹೋಗುತ್ತಾನೆ. ಅವನು ತೃಪ್ತನಾಗಲಾರ. “ನಾನು ಎಷ್ಟೋ ಮುಗ್ಧ ಪ್ರಾಣಿಗಳನ್ನು ಕೊಂದಿದ್ದೇನೆ, ಇನ್ನು ಸಾಕು, ನಿಲ್ಲಿಸೋಣ” ಎಂದು ಆತ ನಿರ್ಧರಿಸಲಾರ. ಇಲ್ಲ. ಅವನು ನಿಲ್ಲಿಸಲಾರ.
ಬೈಬಲ್ ಆದೇಶ ನೀಡುತ್ತೆ, `ನೀನು ಕೊಲ್ಲಬಾರದು’, ಆದರೆ ಜನರು ಕೊಲ್ಲುತ್ತಲೇ ಹೋಗುತ್ತಾರೆ. ಇಷ್ಟಾದರೂ ಅವರಿಗೆ ನೆಮ್ಮದಿಬೇಕು. ನೋಡಿ! ಬೈಬಲ್ ಹೇಳುತ್ತೆ, “ನೀವು ಕೊಲ್ಲಕೂಡದು,” ಆದರೆ ಕೊಲ್ಲುವ ಆ ಕೃತ್ಯದಲ್ಲಿ ಮುಂದುವರಿಯುತ್ತಲೇ ಸಂತಸದಿಂದ ಇರಲು ಬಯಸುತ್ತಾರೆ. ಆದುದರಿಂದ, `ಆಗಾಗ್ಗೆ ಸಂಭವಿಸುವ ಜಾಗತಿಕ ಯುದ್ಧದಲ್ಲಿ ಹತ್ಯೆಗೀಡಾಗಿ’ ಎನ್ನುತ್ತಾನೆ ಕೃಷ್ಣ , ನೀವು ಹತ್ಯೆಗೀಡಾಗಲೇಬೇಕು. ನೀವೇ ಈ ಪರಿಸ್ಥಿತಿಯನ್ನು ತಂದವರು, ಹಾಗಾಗಿ ನೀವು ಹತ್ಯೆಗೀಡಾಗಬೇಕು. ನೀವು ಅಮೆರಿಕದವನೆ ಆಗಿರಲಿ, ಇಂಗ್ಲಿಷ್ ಅಥವಾ ಜರ್ಮನಿಯವನೆ ಆಗಿರಲಿ, ಯಾರೇ ಆಗಿರಲಿ, ನಿಮ್ಮ ರಾಷ್ಟ್ರದ ಬಗ್ಗೆ ನೀವು ಹೆಮ್ಮೆ ಪಡಬಹುದು, ಆದರೂ ನೀವು ಹತ್ಯೆಗೀಡಾಗಬೇಕು. ಇದು ಆಧುನಿಕ ನಾಗರಿಕತೆಯ ಪರಿಸ್ಥಿತಿ. ಪ್ರತಿಯೊಂದೂ ಭಗವದಿಚ್ಛೆಗನುಗುಣವಾಗಿ ನಡೆಯುತ್ತದೆ. ಈಶ್ವರಸ್ಯ ವಿಚೇಷ್ಟಿತಮ್ ನೀವು ಅಸಂಖ್ಯ ಪ್ರಾಣಿಗಳನ್ನು ಕೊಂದಿದ್ದೀರಲ್ಲವೆ? ಹಾಗಿದ್ದಲ್ಲಿ ಎಲ್ಲ ಮಾನವ ಕೊಲೆಗಡುಕರೂ ಸಾರಾಸಗಟು ಒಂದು ಅಣುಬಾಂಬ್‌ನಿಂದ ಕೊಲೆಯಾಗಲಿ.
ಈ ಅಯೋಗ್ಯರು, ಭಗವನ್ನಿಯಮಾನುಸಾರ, ಸಂಭವಿಸುತ್ತಿರುವ ಘಟನೆಗಳ ಬಗ್ಗೆ ಅರಿಯರು. ಒಂದು ಮಾಮೂಲಿ ನ್ಯಾಯಾಲಯವೇ, ಕೊಲೆಗಾರನಿಗೆ ಮರಣದಂಡನೆ ವಿಧಿಸುತ್ತದೆ. ಹಾಗಿರುವಾಗ, ಪರಮೋಚ್ಚ ಅಧಿಕಾರಿ ಕೃಷ್ಣನ ಕಣ್ಣುತಪ್ಪಿಸಿ ಕೊಲೆ ಮಾಡಲಾದೀತೆ? ನೀವು ಕೊಲೆ ಮಾಡುತ್ತಲೆ ಹೋದರೂ ಶಿಕ್ಷೆಗೆ ಗುರಿಯಾಗದೆ ತಪ್ಪಿಸಿಕೊಳ್ಳಬಹುದೆನ್ನುತ್ತೀರಾ? ಅಂಟುರೋಗ, ಬರ, ನಿಮ್ಮ ತಾಯಿಯ ಗರ್ಭದೊಳಗಿದ್ದು ಸಾಯಬಹುದು. ಆ ತಾಯಿಯ ಗರ್ಭ ಮಗುವಿಗೆ ಒಳ್ಳೆಯ ರಕ್ಷಣೆ ನೀಡುತ್ತದೆ. ಆದರೆ ಅದರೊಳಗಿಂದಲೂ, ನೀವು ಕೊಲೆಗೀಡಾಗುತ್ತೀರಿ. ಮಾನವ ಜನಾಂಗದ ನಾಗರಿಕತೆ ಎಷ್ಟು ಹದಗೆಟ್ಟಿದೆ ಎಂದರೆ, ದಿನಂಪ್ರತಿ ಕೊಲೆಯ ಕೆಲಸ ಹೆಚ್ಚುತ್ತಿದೆ.
ಆದುದರಿಂದ ನಾವು ಕೃಷ್ಣನಿಗೆ ಶರಣಾಗಬೇಕು. ದೈವದ ನಿಯಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾವು ಶರಣಾಗಬೇಕು: “ಓ ಕೃಷ್ಣ, ಓ ದೇವರೆ, ನಾನು ಪಾಪಕೃತ್ಯವನ್ನು ಮಾಡಿದ್ದೇನೆ, ಅನೇಕ ಜನ್ಮಗಳಲ್ಲಿ, ಆದರೆ ನಾನು ಸುಖಿಯಾಗಲಿಲ್ಲ. ವರ್ತಮಾನದಲ್ಲಿ ಸಹ ನಾನು ಸುಖಿಯಲ್ಲ. ಆದರೆ ಈಗ ನಾನು ನಿನಗೆ ಶರಣಾಗತನಾಗಿದ್ದೇನೆ. ನೀನು ನನಗೆ ರಕ್ಷಣೆ ಕೊಡು, ಏಕೆಂದರೆ ನೀನು ಶರಣಾಗತ ರಕ್ಷಕ. ಆದ್ದರಿಂದ ದಯಮಾಡಿ ನನ್ನ ಪಾಪಗಳಿಂದ ಪ್ರಾಪ್ತವಾಗುವ ಪರಿಣಾಮಗಳಿಂದ ನನ್ನನ್ನು ರಕ್ಷಿಸು, ನಿನ್ನ ಸೇವೆಯಲ್ಲಿ ತೊಡಗಿಸು. ಇದು ಕೃಷ್ಣಪ್ರಜ್ಞಾ ಚಳವಳಿ.
ಧನ್ಯವಾದಗಳು, ಹರೇಕೃಷ್ಣ.