ಅನ್ನ ಮತ್ತು ತಿಂಡಿಗಳ ಜೊತೆ ಅಗತ್ಯವಾದ ಸಾಂಬಾರು ಮತ್ತಿತರವುಗಳನ್ನು ಮಾಡುವ ವಿಧಾನವನ್ನು ನೀಡಿದ್ದೇವೆ. ಇವು ದಿನ ನಿತ್ಯದ ಬಳಕೆಯಾಗಿದ್ದು, ಅವುಗಳನ್ನು ಇನ್ನಷ್ಟು ರುಚಿಯಾಗಿ ಮಾಡುವ ರೀತಿ ಇಲ್ಲಿದೆ, ಇವುಗಳನ್ನು ತಯಾರಿಸಿ, ಶ್ರೀ ಕೃಷ್ಣನಿಗೆ ಅರ್ಪಿಸಿ ಮನೆ ಮಂದಿಗೆಲ್ಲ ನೀಡಿ.
ಮೈಸೂರು ಸಾರು
ಬೇಕಾಗುವ ಪದಾರ್ಥಗಳು
ತೊಗರಿ ಬೇಳೆ – 1/4 ಕಪ್
ಹುಣಸೇಹಣ್ಣು – ಸಣ್ಣ ನಿಂಬೆ ಗಾತ್ರ
ಕತ್ತರಿಸಿದ ಟೊಮ್ಯಾಟೋ – 1
ಅರಿಶಿನ ಪುಡಿ – 1/4 ಟೀ ಚಮಚ
ರಸಂ ಪುಡಿ – 2 ಟೀ ಚಮಚ
ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೇಬಲ್ ಚಮಚ
ಉಪ್ಪು – ರುಚಿಗೆ
ಎಣ್ಣೆ – 1 ಟೀ ಚಮಚ
ಸಾಸಿವೆ – 1/4 ಟೀ ಚಮಚ
ಜೀರಿಗೆ – 1/4 ಟೀ ಚಮಚ
ಕರಿಬೇವು – 6-8
ಒಣ ಮೆಣಸಿನಕಾಯಿ – 2
ಇಂಗು – ಚಿಟಿಕೆ
ಮಾಡುವ ವಿಧಾನ : ಎರಡು ಬಟ್ಟಲು ನೀರಿನಲ್ಲಿ ಹುಣಸೇಹಣ್ಣನ್ನು ನೆನಸಿಡಿ. ಬೇಳೆಯನ್ನು ಚೆನ್ನಾಗಿ ತೊಳೆದು ನೀರಿರುವ ಪಾತ್ರೆಗೆ ಹಾಕಿ. ಅರಿಶಿನ ಮತ್ತು ಅರ್ಧ ಟೀ ಚಮಚ ಎಣ್ಣೆ ಹಾಕಿ. ಪಾತ್ರೆಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಇಟ್ಟು ಬೇಳೆಯನ್ನು ಬೇಯಿಸಿ. ಮೂರು ಬಾರಿ ಕೂಗಲಿ. ಅದು ತಣ್ಣಗಾಗಲು ಬಿಡಿ. ಬೆಂದ ಬೇಳೆಯನ್ನು ಚೆನ್ನಾಗಿ ನೀರಿನಲ್ಲಿ ಬೆರೆಸಿ. ಒಂದು ಗಂಟೆಯ ಅನಂತರ ಬೇಳೆ ನೀರನ್ನು ಮತ್ತೊಂದು ಪಾತ್ರೆಗೆ ಹಾಕಿ. ಹುಣಸೇಹಣ್ಣಿನ ನೀರನ್ನು ಒಂದು ಬಾಣಲೆಗೆ ಹಾಕಿ. ಅದಕ್ಕೆ ಚೂರು ಮಾಡಿದ ಟೊಮ್ಯಾಟೊ ಹಾಕಿ ಚೆನ್ನಾಗಿ ಕುದಿಸಿ. ಈಗ ಬೇಳೆ ನೀರನ್ನು ಈ ಹುಣಸೆಹಣ್ಣಿನ ಮಿಶ್ರಣಕ್ಕೆ ಹಾಕಿ ಕುದಿಸಿ. ಇದಕ್ಕೆ ರಸಂ ಪುಡಿ ಹಾಕಿ ಕುದಿಸಿ. 5 ನಿಮಿಷಗಳ ಅನಂತರ ಸಾರಿನ ಪಾತ್ರೆಯನ್ನು ಕೆಳಗಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಇಂಗು ಮತ್ತು ಕರಿಬೇವನ್ನು ಹಾಕಿ ಸಿಡಿಸಿ. ಇದನ್ನು ಸಾರಿಗೆ ಹಾಕಿ. ಅನಂತರ ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಬಿಸಿ ಬಿಸಿ ಅನ್ನದ ಜೊತೆ ಸಾರು ಬಡಿಸಿ. ಜೊತೆಗೆ ಹಪ್ಪಳವಿರಲಿ.
ಉಡುಪಿ ಸಾಂಬಾರು
ಬೇಕಾಗುವ ಪದಾರ್ಥಗಳು
ಬೆಂದ ತರಕಾರಿಗಳು – 1 ಕಪ್
ತೊಗರಿ ಬೇಳೆ – 3/4 ಕಪ್
ನೀರು – 600 ಮಿ.ಲೀ.
ಹುಣಸೇಹಣ್ಣಿನ ರಸ – 2 ಟೀ ಚಮಚ
ಅರಿಶಿನ ಪುಡಿ – 1/2 ಟೀ ಚಮಚ
ಸಾಂಬಾರ್ ಪುಡಿ – 1 ಟೇಬಲ್ ಚಮಚ
ತುರಿದ ತೆಂಗಿನಕಾಯಿ – 1/2 ಟೇಬಲ್ ಚಮಚ
ಬೆಲ್ಲ – 2 ಟೀ ಚಮಚ
ಉಪ್ಪು – ರುಚಿಗೆ
ಎಣ್ಣೆ – 1/2 ಟೀ ಚಮಚ
ಸಾಸಿವೆ – 1/4 ಟೀ ಚಮಚ
ಕರಿಬೇವು – 1 ಟೇಬಲ್ ಚಮಚ
ಕೊತ್ತಂಬರಿ ಸೊಪ್ಪು – 1 ಟೀ ಚಮಚ
ಮಾಡುವ ವಿಧಾನ : ಪಾತ್ರೆಯಲ್ಲಿ ನೀರು ಮತ್ತು ಬೇಳೆಯನ್ನು ಹಾಕಿ. ಅರಿಶಿನ ಮತ್ತು ಎಣ್ಣೆಯನ್ನು ಹಾಕಿ ಕಲಸಿ. ದೊಡ್ಡ ಉರಿಯಲ್ಲಿ ಬೇಳೆಯನ್ನು ಬೇಯಿಸಿ. ಸಾಂಬಾರ್ ಪುಡಿ, ತೆಂಗಿನ ಕಾಯಿ, ಬೆಲ್ಲ ಮತ್ತು ಸ್ವಲ್ಪ ನೀರು ಹಾಕಿ ಮಿಕ್ಸಿ ಮಾಡಿ. ಇದನ್ನು ಬೇಯಿಸಿದ ಬೇಳೆಗೆ ಹಾಕಿ ಕುದಿಸಿ. ಅದಕ್ಕೆ ಬೇಯಿಸಿದ ತರಕಾರಿಗಳನ್ನು (ಟೊಮ್ಯಾಟೊ, ಕುಂಬಳಕಾಯಿ, ಹುರಳಿಕಾಯಿ ಯಾವುದಾದರೂ ಆಗಬಹುದು) ಹಾಕಿ ಮಿಶ್ರಣ ಮಾಡಿ. ಹುಣಸೇಹಣ್ಣಿನ ರಸವನ್ನು ಹಾಕಿ ಕುದಿಸಿ. ಉಪ್ಪು ಹಾಕಿದ ಮೇಲೆ 5 ನಿಮಿಷ ಕುದಿಸಿ. ಸಾರಿನ ಪಾತ್ರೆಯನ್ನು ಕೆಳಗಿಳಿಸಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ ಹಾಕಿ ಸಿಡಿಸಿ. ಇದಕ್ಕೆ ಕರಿಬೇವಿನ ಸೊಪ್ಪನ್ನು ಹಾಕಿ, ಅನಂತರ ಅದನ್ನು ಸಾರಿಗೆ ಹಾಕಿ ಮಿಶ್ರಣ ಮಾಡಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಇಡ್ಲಿ, ದೋಸೆ ಅಥವಾ ಅನ್ನದ ಜೊತೆ ಈ ಸಾರು ನೀಡಿ.
ಸೌತೆಕಾಯಿ ತೊವ್ವೆ
ಬೇಕಾಗುವ ಪದಾರ್ಥಗಳು
ತೊಗರಿ ಬೇಳೆ – 1 ಕಪ್
ಚೂರು ಮಾಡಿದ ಸೌತೆಕಾಯಿ – 1 ಕಪ್
ಅರಿಶಿನ ಪುಡಿ – ಒಂದು ಚಿಟಿಕೆ
ತುಪ್ಪ – 2 ಟೇಬಲ್ ಚಮಚ
ಸಾಸಿವೆ – 1/4 ಟೀ ಚಮಚ
ಜೀರಿಗೆ – 1/2 ಟೀ ಚಮಚ
ಇಂಗು – 1/4 ಟೀ ಚಮಚ
ಕರಿಬೇವು – 5-6 ಎಲೆಗಳು
ಒಣ ಮೆಣಸಿನಕಾಯಿ – 2
ಉಪ್ಪು – ರುಚಿಗೆ
ನಿಂಬೆ ರಸ – ರುಚಿಗೆ
ಮಾಡುವ ವಿಧಾನ : ಬೇಳೆಯನ್ನು ಚೆನ್ನಾಗಿ ತೊಳೆದು ಪಾತ್ರೆಗೆ ಹಾಕಿ. ನಾಲ್ಕು ಕಪ್ ನೀರು, ಅರಿಶಿನ ಪುಡಿ ಮತ್ತು ಸ್ವಲ್ಪ ತುಪ್ಪವನ್ನು ಹಾಕಿ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿ. ಮತ್ತೊಂದು ಪಾತ್ರೆಯಲ್ಲಿ ನೀರಿನಲ್ಲಿ ಕತ್ತರಿಸಿದ ಸೌತೆಕಾಯಿಯನ್ನು ಬೇಯಿಸಿ. ಈ ನೀರನ್ನು ಬಸಿದು ಸೌತೆಕಾಯಿಯನ್ನು ಬೆಂದ ಬೇಳೆಗೆ ಹಾಕಿ. ಬಾಣಲೆಯಲ್ಲಿ ತುಪ್ಪವನ್ನು ಕರಗಿಸಿ ಸಾಸಿವೆ ಮತ್ತು ಜೀರಿಗೆಯನ್ನು ಹಾಕಿ. ಅದು ಸಿಡಿದ ಮೇಲೆ ಕರಿಬೇವಿನ ಸೊಪ್ಪು, ಇಂಗು ಮತ್ತು ಒಣ ಮೆಣಸಿನ ಕಾಯಿ ಚೂರನ್ನು ಹಾಕಿ. ಅನಂತರ ತೊವ್ವೆಗೆ ಹಾಕಿ ಮಿಶ್ರಣ ಮಾಡಿ. ನಿಂಬೆ ರಸ ಮತ್ತು ಉಪ್ಪು ಹಾಕಿ ಬೆರೆಸಿ. ಮುಚ್ಚಿಡಿ. ಅನ್ನದ ಜೊತೆ ತೊವ್ವೆ ರುಚಿ ಹೆಚ್ಚು. ಜೊತೆಗೆ ತುಪ್ಪವಿರಲಿ!
ಮಜ್ಜಿಗೆ ಹುಳಿ
ಬೇಕಾಗುವ ಪದಾರ್ಥಗಳು
ಕತ್ತರಿಸಿದ ಬೂದು ಕುಂಬಳಕಾಯಿ – 3 ಕಪ್
ಕಡಲೆ ಬೇಳೆ- 3 ಟೀ ಚಮಚ
ತುರಿದ ತೆಂಗಿನಕಾಯಿ – 3 ಟೀ ಚಮಚ
ಹಸಿ ಮೆಣಸಿನಕಾಯಿ – 3-4
ಕತ್ತರಿಸಿದ ಕೊತ್ತಂಬರಿ ಸೊಪ್ಪು – 1/4 ಕಪ್
ಉಪ್ಪು – ರುಚಿಗೆ
ಮೊಸರು – 1 ಕಪ್ (1 ಕಪ್ ನೀರಿನಲ್ಲಿ ಕಡೆದದ್ದು)
ಎಣ್ಣೆ – 2 ಟೀ ಚಮಚ
ಸಾಸಿವೆ – 1/2 ಟೀ ಚಮಚ
ಜೀರಿಗೆ – 1 ಟೀ ಚಮಚ
ಇಂಗು – 1/4 ಟೀ ಚಮಚ
ಕರಿಬೇವು – 4-5 ಎಲೆಗಳು
ಶುಂಠಿ – 1 ಟೀ ಚಮಚ
ಮಾಡುವ ವಿಧಾನ : ಕಡಲೇ ಬೇಳೆಯನ್ನು 20 ನಿಮಿಷ ನೆನಸಿಡಿ. ಒಂದು ಪಾತ್ರೆಯಲ್ಲಿ ಬೂದು ಕುಂಬಳ ಕಾಯಿಯನ್ನು ಬೇಯಿಸಿ. ತೆಂಗಿನ ಕಾಯಿ, ಕಡಲೇ ಬೇಳೆ, ಹಸಿರು ಮೆಣಸಿನ ಕಾಯಿ, ಶುಂಠಿ ಮತ್ತು ಉಪ್ಪನ್ನು ಹಾಕಿ ಮಿಕ್ಸಿ ಮಾಡಿಕೊಳ್ಳಿ. ಇದನ್ನು ಬೆಂದ ಬೂದು ಕುಂಬಳ ಕಾಯಿಗೆ ಹಾಕಿ ಮಿಶ್ರಣ ಮಾಡಿ ಮತ್ತು ಒಂದು ಕಪ್ ನೀರು ಹಾಕಿ ಕುದಿಸಿ. ಅದು ಗಟ್ಟಿಯಾದಾಗ ಮೊಸರು ಹಾಕಿ ಒಂದು ನಿಮಿಷ ಕುದಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕರಿ ಬೇವಿನ ಸೊಪ್ಪು ಮತ್ತು ಇಂಗು ಹಾಕಿ ಸಿಡಿಸಿ. ಅನಂತರ ಇದನ್ನು ಕುಂಬಳಕಾಯಿ ಮಿಶ್ರಣಕ್ಕೆ ಹಾಕಿ ಕಲಸಿ. ಅನ್ನದ ಜೊತೆ ಬಿಸಿಯಾಗಿ ನೀಡಿ.