ದುಷ್ಟ ದಂಡನೆ – ವೇನನ ಕಥೆ

ಧ್ರುವನು ತನ್ನ ಅಖಂಡ ಸಾಮ್ರಾಜ್ಯವನ್ನು  ತನ್ನ ಮಗನಾದ ಉತ್ಕಲನಿಗೊಪ್ಪಿಸಿ ವನಾಭಿಮುಖನಾಗಿ ಹೊರಟು ಹೋದನು. ಆದರೆ ಉತ್ಕಲನಿಗೆ ಸಾರ್ವಭೌಮತ್ವವನ್ನು ವಹಿಸಿಕೊಳ್ಳಲು ಇಷ್ಟವಿರಲಿಲ್ಲ. ಅವನು ಹುಟ್ಟುತ್ತಲೇ ವಿರಕ್ತನಾಗಿದ್ದನು. ಶಾಂತನೂ ನಿಸ್ಪೃಹನೂ ಸಮದರ್ಶಿಯೂ ಆಗಿದ್ದ ಅವನು, ಎಲ್ಲವೂ ಪರಮಾತ್ಮನಲ್ಲಿರುವುದಾಗಿಯೂ ಪರಮಾತ್ಮನು ಎಲ್ಲದರಲ್ಲಿರುವುದಾಗಿಯೂ ಕಂಡುಕೊಂಡನು. ಬ್ರಹ್ಮಜ್ಞಾನಿಯಾಗಿದ್ದ ಅವನು ಸದಾ ಆಧ್ಯಾತ್ಮಿಕ ಆನಂದವನ್ನನುಭವಿಸುತ್ತಿದ್ದನು. ಅವ್ಯವಿಚ್ಛಿನ್ನವಾದ ಭಕ್ತಿಯೋಗದಲ್ಲಿ ಅವನು ನೆಲೆಸಿ, ಕರ್ಮವಾಸನೆಗಳನ್ನು ಭಸ್ಮೀಭೂತಗೊಳಿಸಿದನು. ತನ್ನ ನಿತ್ಯ ಆಧ್ಯಾತ್ಮಿಕ ಸ್ವರೂಪವನ್ನು ಸಾಕ್ಷಾತ್ಕರಿಸಿಕೊಂಡ ಅವನು ಪರಮ ಪ್ರಭುವನ್ನಲ್ಲದೆ ಬೇರೇನನ್ನೂ ಕಾಣುತ್ತಿರಲಿಲ್ಲ. ನೋಡುಗರ ಕಣ್ಣಿಗೆ ಒಬ್ಬ ಜಡನಂತೆಯೂ, ಕುರುಡನಂತೆಯೂ, ಕಿವುಡನಂತೆಯೂ, ಹುಚ್ಚನಂತೆಯೂ ಕಾಣುತ್ತಿದ್ದ ಅವನು, ಬೂದಿಮುಚ್ಚಿದ ಕೆಂಡದಂತಿದ್ದನು.

ಉತ್ಕಲನನ್ನು ನಿಜವಾಗಿಯೂ ಒಬ್ಬ ಜಡನೆಂದೂ ಹುಚ್ಚನೆಂದೂ ಭಾವಿಸಿದ ಕುಲವೃದ್ಧರೂ ಮಂತ್ರಿಗಳೂ ಅವನಿಗಿಂತ ಚಿಕ್ಕವನೂ ಭ್ರಮಿಯ ಪುತ್ರನೂ ಆದ ವತ್ಸರನಿಗೆ ಚಕ್ರಾಧಿಪತ್ಯ ನೀಡಿದರು. ವತ್ಸರನು ತನ್ನ ಭಾರ್ಯೆಯಾದ ಸ್ವರ್ವೀಥಿಯಲ್ಲಿ ಪುಷ್ಪಾರ್ಣ, ತಿಗ್ಮಕೇತು, ಇಷ, ಊರ್ಜ, ವಸು, ಜಯ, ಎಂಬ ಆರು ಪುತ್ರರನ್ನು ಪಡೆದನು. ಪುಷ್ಪಾರ್ಣನು ತನ್ನ ಪತ್ನಿಯಾದ ಪ್ರಭೆಯೆಂಬುವಳಲ್ಲಿ ಪ್ರಾತಃ, ಮಧ್ಯಂದಿನಂ, ಮತ್ತು ಸಾಯಂ ಎಂಬ ಮೂರು ಪುತ್ರರನ್ನೂ ದೋಷಾ ಎಂಬ ಇನ್ನೊಬ್ಬ ಪತ್ನಿಯಲ್ಲಿ ಪ್ರದೋಷ, ನಿಶಿಥ, ವ್ಯಷ್ಟ ಎಂಬ ಮೂರು ಪುತ್ರರನ್ನೂ ಪಡೆದನು. ವ್ಯಷ್ಟನು ಪುಷ್ಕರಿಣೀ ಎಂಬ ತನ್ನ ಪತ್ನಿಯಲ್ಲಿ ಬಲಶಾಲಿಯಾದ ಸರ್ವತೇಜಸ್‌ ಎಂಬ ಮಗನನ್ನು ಪಡೆದ. ಸರ್ವತೇಜನು ತನ್ನ ಪತ್ನಿ ಆಕೂತಿಯಲ್ಲಿ ಚಾಕ್ಷುಷನೆಂಬ ಮಗನನ್ನು ಪಡೆದ. ಇವನು ಆರನೆಯ ಮನುವಾದ. ಚಾಕ್ಷುಷ ಮನುವಿನ ಪತ್ನಿ ನಡ್ವಲೆ, ಪುರು, ತ್ರಿತ, ದ್ಯುಮ್ನ, ಸತ್ಯವಾನ್‌, ಋತ, ವ್ರತ, ಅಗ್ನಿಷ್ಟೋಮ, ಅತೀರಾತ್ರ, ಪ್ರದ್ಯುಮ್ನ, ಶಿಬಿ, ಮತ್ತು ಉಲ್ಮುಕರೆಂಬ ನಿರ್ದೋಷಿಗಳಾದ ಮಕ್ಕಳನ್ನು ಪಡೆದಳು. ಈ ಹನ್ನೆರಡು ಪುತ್ರರಲ್ಲಿ  ಉಲ್ಮಕನೆಂಬುವನು ತನ್ನ ಪತ್ನಿ ಪುಷ್ಕರಿಣಿಯಲ್ಲಿ ಅಂಗ, ಸುಮನಸ್‌, ಖ್ಯಾತಿ, ಕ್ರತು, ಅಂಗಿರಸ ಮತ್ತು ಗಯರೆಂಬ ಸತ್ಪುತ್ರರನ್ನು ಪಡೆದ.

ಅಂಗನ ಪತ್ನಿಯಾದ ಸುನೀಥಿಯು ವೇನನೆಂಬ ದುಷ್ಟಪುತ್ರನಿಗೆ ಜನ್ಮವಿತ್ತಳು. ಸಾಧುರಾಜನಾದ ಅಂಗ, ತನ್ನ ಮಗನ ದುರ್ವರ್ತನೆಯಿಂದ ಬೇಸತ್ತು ರಾಜ್ಯವನ್ನು ತೊರೆದು ಕಾಡಿಗೆ ಹೊರಟುಹೋದ. ದುಷ್ಟನಾದ ವೇನರಾಜನನ್ನು ದಂಡಿಸಲೆಂದು ಮಹರ್ಷಿಗಳು ಅವನಿಗೆ ಸಿಡಿಲಿನಂತೆ ಕಠಿಣವಾದ ಶಾಪವನ್ನಿತ್ತರು. ತತ್ಫಲವಾಗಿ ಅವನು ಸತ್ತೇಹೋದನು! ರಾಜನಿಲ್ಲದೆ ರಾಜ್ಯವು ಅರಾಜಕವಾಗಲು, ದರೋಡೆಕೋರರು ಹೆಚ್ಚಿಕೊಂಡರು. ಆಗ ಋಷಿಮುನಿಗಳು ವೇನನ ದೇಹದ ಬಲಗೈಯನ್ನು ಕಡೆಯಲು, ಶ್ರೀಮನ್ನಾರಾಯಣನು ತನ್ನ ಅಂಶದಿಂದ ಪೃಥು ಎಂಬ ಹೆಸರಿನಲ್ಲಿ ಅವತರಿಸಿದನು. ಆ ಪೃಥುವೇ ಭೂಮಂಡಲದ ಆದಿ ಚಕ್ರವರ್ತಿ.

ಕಥೆ ಹೇಳುತ್ತಿದ್ದ ಮೈತ್ರೇಯರನ್ನು ತಡೆದು  ವಿದುರನು ಪ್ರಶ್ನಿಸಿದನು, “ಬ್ರಾಹ್ಮಣರನ್ನು ಗೌರವಿಸುವವನೂ ಶೀಲಗುಣ ಸಂಪನ್ನನೂ ಆಗಿದ್ದ ಆ ಮಹಾತ್ಮನಾದ ಅಂಗನಿಗೆ ವೇನನಂಥ ದುಷ್ಟ ಪುತ್ರನೇಕೆ ಜನಿಸಿದನು? ತೇಜಶಾಲಿಯಾದ ರಾಜನು ಏನಾದರೂ ತಪ್ಪು ಮಾಡಿದರೂ ಪ್ರಜೆಗಳು ಅವನನ್ನು ಅವಮಾನಿಸಬಾರದು. ರಾಜನು ಲೋಕಪಾಲಕರ ಶಕ್ತಿಯನ್ನೇ ಪಡೆದಿದ್ದು ಅವರ ಪ್ರತಿನಿಧಿಯೇ ಆಗಿರುತ್ತಾನೆ. ಆದರೆ ಧರ್ಮಕೋವಿದರಾದ ಮುನಿಗಳು ವೇನನಿಗೆ ಕಠೋರವಾದ ಬ್ರಹ್ಮಶಾಪವನ್ನೇಕಿತ್ತರು? ಪೂಜ್ಯರೇ, ನೀವು ಭೂತ ಭವಿಷ್ಯಗಳನ್ನೆಲ್ಲ ಬಲ್ಲವರು. ದಯವಿಟ್ಟು ನನಗೆ ಆ ವೇನನ ಕಥೆಯನ್ನು ಪೂರ್ತಿಯಾಗಿ ವಿವರಿಸಿ”

ವಿದುರನು ಹೀಗೆ ಕೇಳಿಕೊಳ್ಳಲು ಮೈತ್ರೇಯ ಮಹರ್ಷಿಗಳು ಅಂಗ ಮತ್ತು ವೇನರ ಕಥೆಯನ್ನು ಹೇಳತೊಡಗಿದರು.

ಸುಕ್ಷೇತ್ರದಲ್ಲಿ ಮುಳ್ಳುಕಂಟಿಗಳು ಬೆಳೆಯುವಂತೆ, ಸತ್ಕುಲಗಳಲ್ಲಿ ಕೆಲವೊಮ್ಮೆ ದುಷ್ಟರು ಹುಟ್ಟುತ್ತಾರೆ. ಇಂಥ ಉದಾಹರಣೆಗಳು ಇತಿಹಾಸದಲ್ಲಿ ಅನೇಕ. ಮಹಾತಪಸ್ವಿಯಾದ ಕಶ್ಯಪ ಮಹರ್ಷಿಗೆ ಹಿರಣ್ಯಾಕ್ಷ ಹಿರಣ್ಯಕಶಿಪುಗಳೆಂಬ ರಾಕ್ಷಸರು ಜನಿಸಲಿಲ್ಲವೆ? ಋಷಿವರ್ಯನಾದ ವಿಶ್ರವಸುವಿಗೆ ರಾವಣನಂಥ ರಾಕ್ಷಸರು ಹುಟ್ಟಲಿಲ್ಲವೆ? ಸಗರನಂಥ ಮಹಾತ್ಮನಿಗೆ ಅಸಮಂಜಸನೆಂಬ ದುಷ್ಟ ಪುತ್ರನು ಹುಟ್ಟಲಿಲ್ಲವೆ? ಇಂಥದ್ದೇ ಉದಾಹರಣೆ, ಭಾಗವತದಲ್ಲೂ ಇದೆ. ಒಳ್ಳೆಯ ವಂಶದಲ್ಲಿ ಹುಟ್ಟಿದರೂ ಸಹವಾಸದೋಷದಿಂದ ಹೀಗಾಗುವುದುಂಟು. ಈ ಕಥೆಯಲ್ಲಿ, ವೇನನೂ ತನ್ನ ದುಷ್ಟ ಅಜ್ಜನ ಸಹವಾಸದಿಂದ ಕೆಟ್ಟವನಾಗುತ್ತಾನೆ. ಪ್ರಜೆಗಳನ್ನು ಕಾಯಬೇಕಾದ ರಾಜನು ಪಟ್ಟವನ್ನೇರಿದರೂ, ದುಷ್ಟನಾದ ಅವನಿಂದ ಸಮಾಜಕ್ಕೆ ತೊಂದರೆಯಾಗುವುದೆಂದು ನಿರ್ಧರಿಸಿ ಋಷಿಮುನಿಗಳು ಅವನನ್ನು ಕೊಂದೇ ಬಿಡುತ್ತಾರೆ! ವೇನನ ಕಥೆ ಕುತೂಹಲಕರವಾಗಿರುವುದಲ್ಲದೆ, ದುಷ್ಟರಿಗೆ ಎಂದೆಂದೂ ಕಡೆಗೆ ದುಃಖವೇ ಉಂಟಾಗುವುದೆಂದು ಎಚ್ಚರಿಸುವ ನೀತಿಗಾಥೆಯಾಗಿದೆ.

ಸ್ವಾಯಂಭುವ ಮನುವಿನ ವಂಶದಲ್ಲಿ ಜನಿಸಿದ ಧ್ರುವ, ಶ್ರೀಹರಿಯ ಪರಮಭಕ್ತ. ತನ್ನ ಐದನೆಯ ವಯಸ್ಸಿನಲ್ಲೇ ಕಾಡಿಗೆ ಹೋಗಿ ತಪಸ್ಸಿನಿಂದ ವಿಷ್ಣುವನ್ನೊಲಿಸಿಕೊಂಡ ಮಹಾಭಾಗವತ. ಪರಮ ಪುರುಷನ ದಯೆಯಿಂದ ಅವನು ಶಾಶ್ವತವಾದ ನಕ್ಷತ್ರ ಪದವಿಯನ್ನಲಂಕರಿಸಿದ. ಧ್ರುವನ ವಂಶದಲ್ಲಿ ಉತ್ಕಲ, ವತ್ಸರ, ಸರ್ವತೇಜ, ಚಾಕ್ಷುಷ, ಮೊದಲಾದ ಅನೇಕ ಭಕ್ತರಾಜನು ಹುಟ್ಟಿದರು. ಇಂಥ ಮಹಾವಂಶದಲ್ಲಿ ಅಂಗನೆಂಬ ರಾಜನು ಹುಟ್ಟಿದ.

ಅಂಗನೂ ಒಬ್ಬ ಭಗವದ್ಭಕ್ತ. ಅವನು ಪಟ್ಟವನ್ನೇರಿ ನಿರಾತಂಕವಾಗಿ ರಾಜ್ಯವನ್ನಾಳುತ್ತಿದ್ದ. ಒಂದು ಬಾರಿ, ಅಂಗರಾಜನು ಅಶ್ವಮೇಧಯಾಗವನ್ನು ಆಚರಿಸಿದನು. ಬ್ರಾಹ್ಮಣೋತ್ತಮರು ಮಂತ್ರೋಚ್ಚಾರಣೆ ಮಾಡಿ ದೇವತೆಗಳನ್ನು ಆಹ್ವಾನಿಸಿದರೂ, ಯಾವ ದೇವತೆಯೂ ತನ್ನ ಹವಿರ್ಭಾಗ ಸ್ವೀಕರಿಸಲು ಬರಲಿಲ್ಲ. ಇದರಿಂದ ವಿಸ್ಮಿತರಾದ ಋತ್ವಿಜರು ಅಂಗರಾಜನಿಗೆ ಹೇಳಿದರು, “ಮಹಾರಾಜ! ನಾವು ವೇದೋಕ್ತ ರೀತಿಯಲ್ಲೇ ಹವಿಸ್ಸನರ್ಪಿಸುತ್ತಿದ್ದರೂ ದೇವತೆಗಳು ಅದನ್ನು ಸ್ವೀಕರಿಸಲು ಬರುತ್ತಿಲ್ಲ. ಯಜ್ಞವು ಯಾವ ದೋಷವೂ ಇಲ್ಲದೆ ಆಚರಿಸಲ್ಪಡುತ್ತಿದೆ. ನಾವು ದೇವತೆಗಳಿಗೆ ಕಿಂಚಿತ್ತಾದರೂ ಅಗೌರವ ಸಲ್ಲಿಸಿಲ್ಲ. ಆದರೂ ಕರ್ಮಸಾಕ್ಷಿಗಳಾದ ಅವರು ತಮ್ಮ ಹವಿರ್ಭಾಗಗಳನ್ನು ಸ್ವೀಕರಿಸಿಲು ಬರುತ್ತಿಲ್ಲ.”

ಋತ್ವಿಜರ ಮಾತುಗಳನ್ನು ಕೇಳಿ ಅಂಗನು ಬಹುದುಃಖಿತನಾದನು. ಅವರ ಒಪ್ಪಿಗೆ ಪಡೆದು ತನ್ನ ಮೌನ ಮುರಿದು ಮಾತನಾಡಿದನು, “ಪೂಜ್ಯರೇ, ಮಂತ್ರೋಚ್ಚಾರಣೆ ಮಾಡಿ   ದೇವತೆಗಳನ್ನು ಆಹ್ವಾನಿಸಿದರೂ ಅವರು ತಮ್ಮ ಹವಿರ್ಭಾಗ ಸ್ವೀಕರಿಸಲು ಬರುತ್ತಿಲ್ಲ. ನಾನೇನಾದರೂ ತಪ್ಪು ಮಾಡಿದ್ದರೆ ದಯವಿಟ್ಟು ಹೇಳಿ.”

ಯಜ್ಞ ಪುರೋಹಿತರು ಹೇಳಿದರು, “ರಾಜಾ, ನೀನು ಈ ಜನ್ಮದಲ್ಲಿ ಮನಸ್ಸಿನಿಂದಲೂ ಯಾವ ಪಾಪವನ್ನೂ ಮಾಡಿಲ್ಲ. ಹಿಂದಿನ ಜನ್ಮದಲ್ಲಿ ನೀನು ಏನೋ ಒಂದು ತಪ್ಪು ಮಾಡಿರಬೇಕು. ಅದರಿಂದಲೇ ನೀನಿನ್ನೂ ಅಪುತ್ರವಂತನಾಗಿದ್ದೀಯೆ. ಈ ಕಾರಣದಿಂದಲೇ ದೇವತೆಗಳು ನಿನ್ನ ಯಜ್ಞಕ್ಕೆ ಆಗಮಿಸಿಲ್ಲ. ರಾಜ, ನೀನು ಒಬ್ಬ ಪುತ್ರನನ್ನು ಪಡೆಯಲೋಸುಗವಾಗಿ ಪುತ್ರಕಾಮೇಷ್ಠಿಯಾಗವನ್ನು ಮಾಡು. ಯಜ್ಞಪತಿಯಾದ ಆ ಶ್ರೀಹರಿ ನಿನಗೆ ಪುತ್ರನನ್ನು ಕರುಣಿಸುತ್ತಾನೆ. ಈ ಉದ್ದೇಶದಿಂದ ನೀನು ಯಜ್ಞವನ್ನಾಚರಿಸಿ ವಿಷ್ಣುವನ್ನು ಆಮಂತ್ರಿಸಿದರೆ, ಅವನೊಂದಿಗೆ ದೇವತೆಗಳೆಲ್ಲರೂ ಆಗಮಿಸಿ ತಮ್ಮ ಯಜ್ಞಭಾಗಗಳನ್ನು ಸ್ವೀಕರಿಸುತ್ತಾರೆ. ಯಜ್ಞಾಚರಣೆ ಮಾಡುವವನು ಯಾವ ಆಸೆಯಿಂದ ಹರಿಯನ್ನು ಅರ್ಚಿಸುವನೋ, ಆ ದೇವನು ಅದಕ್ಕೆ ತಕ್ಕ ಫಲವನ್ನೇ ಕರುಣಿಸುತ್ತಾನೆ.”

ವಿಪ್ರರು ಹೀಗೆ ನುಡಿಯಲು ಅಂಗನು ಒಪ್ಪಿದನು. ಅನಂತರ ಅವನು ಪುತ್ರ ಕಾಮೇಷ್ಠಿಯಾಗವನ್ನು ಆಚರಿಸಿದನು. ವಿಪ್ರರು ರಾಜನಿಗೆ ಪುತ್ರನೊಬ್ಬನು ಜನಿಸಲೆಂದು ಸಂಕಲ್ಪಿಸಿ ಯಜ್ಞೇಶ್ವರನಾದ ವಿಷ್ಣುವಿಗೆ ಪುರೋಡಾಶವನ್ನರ್ಪಿಸಿದರು. ಕೂಡಲೇ ಸುವರ್ಣಹಾರವನ್ನು ಶುಭ್ರವಾದ ಶ್ವೇತವಸ್ತ್ರವನ್ನೂ ಧರಿಸಿದ್ಧ ಒಬ್ಬ ದಿವ್ಯ ಪುರುಷನು ಪಾಯಸ ತುಂಬಿದ್ದ ಚಿನ್ನದ ಪಾತ್ರೆಯೊಂದನ್ನು ಹಿಡಿದು ಅಗ್ನಿಯಲ್ಲಿ ಪ್ರತ್ಯಕ್ಷನಾದನು. ವಿಪ್ರರ ಅನುಮತಿಯನ್ನು ಪಡೆದು ಅಂಗನು ಆ ದಿವ್ಯ ಪುರುಷನಿಂದ ಪಾಯಸವನ್ನು ಸ್ವೀಕರಿಸಿದನು. ಸಂತೋಷಗೊಂಡ ಅವನು ಅದನ್ನು ಆಘ್ರಾಣಿಸಿ ತನ್ನ ಪತ್ನಿಯಾದ ಸುನೀಥಿಗೆ ನೀಡಿದನು. ಆ ದಿವ್ಯ ಪಾಯಸವನ್ನು ಸೇವಿಸಿದ ರಾಣಿಯು ತನ್ನ ಪತ್ನಿಯ ಸಮಾಗಮದಿಂದ ಗರ್ಭಧರಿಸಿದಳು. ಕಾಲಕ್ರಮದಲ್ಲಿ ಅವಳು ಒಂದು ಗಂಡು ಮಗುವಿಗೆ ಜನ್ಮಕೊಟ್ಟಳು.

ಅಂಗ ಮಹಾರಾಜನು ತನಗೆ ಪುತ್ರಪ್ರಾಪ್ತಿಯಾಗಲು ಸಂತೋಷಭರಿತನಾದನು. ಆದರೆ ಈ ಸಂತೋಷ ಬಹುಕಾಲ ಉಳಿಯಲಿಲ್ಲ. ವೇನನೆಂಬ ಆ ಬಾಲಕನು, ಸುನೀಥಿಯ ಪಿತನೂ ತನ್ನ ಮಾತಾಮಹನೂ ಆದ ಮೃತ್ಯುವಿನ ಆಶ್ರಯದಲ್ಲಿ ಬೆಳೆದನು. ತತ್ಫಲವಾಗಿ ಅವನೂ ತನ್ನ ಅಜ್ಜನಂತೆ ದುಷ್ಟಪ್ರವೃತ್ತಿಯನ್ನು ಬೆಳೆಸಿಕೊಂಡನು. ಅವನು ಸದಾ ತನ್ನ ಬಿಲ್ಲುಬಾಣಗಳನ್ನೆತ್ತಿಕೊಂಡು ಕಾಡಿಗೆ ಹೋಗಿ ಜಿಂಕೆಗಳೇ ಮೊದಲಾದ ಸಾಧುಪ್ರಾಣಿಗಳನ್ನು ನಿರ್ದಯೆಯಿಂದ ಕೊಲ್ಲುತ್ತಿದ್ದನು. ತನ್ನ ಗೆಳೆಯರೊಂದಿಗೆ ಆಡುವಾಗ, ಕರುಣಾಹೀನನಾಗಿ ಪ್ರಾಣಿಗಳನ್ನು ಕೊಲ್ಲುವಂತೆ ಅವರನ್ನು ಹಿಂಸಿಸಿ ಕೊಲ್ಲುತ್ತಿದ್ದನು. ಅವನು ಬಂದೊಡನೆಯೇ ಜನರು, “ಅದೋ! ವೇನ ಬಂದ! ಕ್ರೂರ ವೇನ ಬಂದ!” ಎಂದು ಅರಚುತ್ತಾ ಹೆದರಿ ಓಡಿಹೋಗುತ್ತಿದ್ದರು. ತನ್ನ ಮಗನ ದುಷ್ಟ ನಡವಳಿಕೆಯಿಂದ ಬೇಸತ್ತ ಅಂಗ ಮಹಾರಾಜನು ಅವನನ್ನು ಬುದ್ಧಿಮಾತುಗಳಿಂದಲೂ ಬಗೆ ಬಗೆಯ ಶಿಕ್ಷೆಗಳಿಂದಲೂ ತಿದ್ದಲು ಪ್ರಯತ್ನಿಸಿ ವಿಫಲನಾದನು. ಇದರಿಂದ ರಾಜನು ಅತೀವ ದುಃಖಿತನಾದನು.

ರಾಜನು ತನ್ನಲ್ಲಿಯೇ ಯೋಚಿಸಿದನು, “ಮಕ್ಕಳಿಲ್ಲದ ಜನರೇ ಭಾಗ್ಯವಂತರು! ಅಂಥವರು ನಿಶ್ಚಿತವಾಗಿಯೂ ತಮ್ಮ ಪೂರ್ವ ಜನ್ಮದಲ್ಲಿ ಭಗವಂತನನ್ನು ಅರ್ಚಿಸಿರಬೇಕು! ಅದರಿಂದಲೇ ಅವರು ದುಷ್ಪುತ್ರರಿಂದುಂಟಾಗುವ ಸಂಕಟದಿಂದ ದೂರವಾಗಿರುತ್ತಾರೆ. ಪಾಪಿಯಾದ ಪುತ್ರನಿಂದ ತಂದೆಯ ಕೀರ್ತಿಯು ನಾಶವಾಗುತ್ತದೆ.! ಅಂಥ ಪುತ್ರನ ಅಧಾರ್ಮಿಕ ಚಟುವಟಿಕೆಗಳು ಎಲ್ಲರಲ್ಲೂ ಕಲಹವನ್ನೆಬ್ಬಿಸಿ ಮನೆಯನ್ನು ನರಕವನ್ನಾಗಿಸುತ್ತವೆ! ಇದರಿಂದ ನಿರಂತರ ದುಃಖವುಂಟಾಗುತ್ತದೆ!

ಬುದ್ಧಿಶಾಲಿಯಾದ ಯಾವನು ತಾನೇ ಇಂಥ ಪುತ್ರನು ಹುಟ್ಟಲೆಂದು ಬಯಸಿಯಾನು? ಇಂಥ ಪುತ್ರನಿಂದ ಮೋಹವೂ ಸಂಸಾರಬಂಧನವೂ ಹೆಚ್ಚಾದೀತು! ಅಥವಾ ಇಂಥ ದುಷ್ಟಪುತ್ರನು ಹುಟ್ಟುವುದರಿಂದ ಒಳ್ಳೆಯದೂ ಆದೀತು! ಸತ್ಪುತ್ರನು ತನ್ನ ಉತ್ತಮ ನಡವಳಿಕೆಯಿಂದ ತಂದೆಗೆ ಅವನಲ್ಲೂ ಮನೆಯಲ್ಲೂ ಮೋಹವು ಹೆಚ್ಚಾಗುವಂತೆ ಮಾಡುತ್ತಾನೆ. ಅದೇ ದುಷ್ಟ  ಪುತ್ರನು ಮನೆಯನ್ನು ನರಕ ಸದೃಶವಾಗಿಸಿ ತಂದೆಗೆ ವೈರಾಗ್ಯವುಂಟು ಮಾಡುತ್ತಾನೆ. ಆಗ ತಂದೆಯು ವಿರಕ್ತನಾಗಿ ಆತ್ಮಸಾಕ್ಷಾತ್ಕಾರ ಸಾಧಿಸಿಕೊಳ್ಳಬಹುದು.”

ಹೀಗೆಲ್ಲಾ ಯೋಚಿಸಿದ ರಾಜನಿಗೆ ಒಂದು ರಾತ್ರಿಯೂ ನಿದ್ರೆ ಬರಲಿಲ್ಲ. ದಿನೇ ದಿನೇ ಅವನು ಸಂಸಾರದಲ್ಲಿ ಸಂಪೂರ್ಣ ವಿರಕ್ತನಾದನು. ಕಡೆಗೊಂದು ದಿನ, ಮಧ್ಯರಾತ್ರಿಯ ವೇಳೆಯಲ್ಲಿ, ಮಲಗಿದ್ದ ತನ್ನ ಪತ್ನಿಯನ್ನೂ ರಾಜ್ಯಕೋಶಗಳನ್ನೂ ತೊರೆದು ಯಾರಿಗೂ ತಿಳಿಯದಂತೆ ಕಾಡಿಗೆ ಹೊರಟು ಹೋದನು. ಮರುದಿನ, ರಾಜನು ರಾಜ್ಯವನ್ನು ತೊರೆದು ಹೋದ ವಿಷಯ ತಿಳಿದ ಅವನ ಪತ್ನಿಯೂ ಪ್ರಜೆಗಳೂ ಅಮಾತ್ಯರೂ ಮಿತ್ರಬಾಂಧವರೂ ಶೋಕಾತುರರಾದರು. ಯೋಗವನ್ನರಿಯದ ಜನರು ನಿಗೂಢನಾದ ಪರಮಾತ್ಮನನ್ನು ಹುಡುಕಾಡುವಂತೆ ಅವರೆಲ್ಲರೂ ರಾಜನನ್ನು ಭೂಮಂಡಲದಲ್ಲೆಲ್ಲಾ ಹುಡುಕಾಡಿದರು. ಅವನು ಎಲ್ಲು ಸಿಗದಿರಲು, ಎಲ್ಲರೂ ಹಿಂದಿರುಗಿ ಋಷಿಗಳೊಂದಿಗೆ ಸಭೆ ಸೇರಿದರು. ಪ್ರಜೆಗಳೆಲ್ಲರೂ ತಮ್ಮ ಕಣ್ಣುಗಳಲ್ಲಿ ನೀರು ತುಂಬಿಕೊಂಡು ರಾಜನಿಗಾಗಿ ತಮ್ಮ ಸಂತಾಪ ಸೂಚಿಸಿದರು.

ಭೃಗುಮುನಿಗಳಾದಿಯಾಗಿ ಋಷಿಗಳೆಲ್ಲರೂ ರಾಜ್ಯದ ಒಳಿತನ್ನು ಕುರಿತು ಯೋಚಿಸಿದರು. ರಾಜ್ಯವು ಹೆಚ್ಚು ಕಾಲ ಅರಾಜಕವಾಗಿರುವಂತಿಲ್ಲ. ಹಾಗಾದಲ್ಲಿ, ಕಳ್ಳಕಾಕರು ಹೆಚ್ಚುವರಲ್ಲದೆ, ಪ್ರಜೆಗಳೆಲ್ಲರೂ ಪ್ರಾಣಿಗಳಂತೆ ಸ್ವೇಚ್ಛಾಚಾರಿಗಳಾದಾರು! ಹೀಗೆ ಯೋಚಿಸಿದ ಆ  ಮುನಿಗಳು ರಾಣಿ ಸುನೀಥಿಯನ್ನು ಕರೆಸಿ ಅವಳ ಒಪ್ಪಿಗೆ ಪಡೆದು ವೇನನಿಗೆ ಪಟ್ಟ ಕಟ್ಟಿದರು. ವೇನನ ದುಷ್ಟ ಸ್ವಭಾವವನ್ನರಿತಿದ್ದ ಮಂತ್ರಿಗಳು ಇದನ್ನು ವಿರೋಧಿಸಿದರು. ಆದರೆ ಋಷಿಗಳಿಗೆ ಹೀಗೆ ಮಾಡುವುದರ ಹೊರತು ಬೇರೆ ದಾರಿಯಿರಲಿಲ್ಲ.

ವೇನನು ಸಿಂಹಾಸನವನ್ನೇರಿದನೆಂದು ಕೇಳುತ್ತಲೇ ಕಳ್ಳಕಾಕರು ಹೆದರಿ ನಡುಗಿದರು.

ಸರ್ಪಗಳ ಭಯದಿಂದ ಬಿಲಗಳಲ್ಲಡಗುವ ಇಲಿಗಳಂತೆ ಅಡಗಿಕೊಂಡರು. ವೇನನಾದರೋ ಅಷ್ಟೈಶ್ವರ್ಯಯುಕ್ತನಾಗಿ ಅಧಿಕಾರ ಮದದಿಂದ ಕುರುಡಾದನು. ತಾನೊಬ್ಬ ಮಹಾಪುರುಷನೆಂಬ ದುರಹಂಕಾರದಿಂದ ಕೂಡಿ ಮಹಾತ್ಮರನ್ನು ಅವಮಾನಿಸಹತ್ತಿದನು. ಅಂಕುಶದ ನಿಯಂತ್ರಣವಿರದ ಆನೆಯಂತೆ ಮದೋನ್ಮತ್ತನಾಗಿ, ಭೂಮ್ಯಾಕಾಶಗಳು ಕಂಪಿಸುವಂತೆ ರಥದಲ್ಲಿ ಸಂಚರಿಸತೊಡಗಿದನು.  ಯಾಗಯಜ್ಞಗಳು, ದಾನಧರ್ಮಾದಿ  ಶುಭ ಕಾರ್ಯಗಳಾವುವೂ ತನ್ನ ರಾಜ್ಯದಲ್ಲಿ ಇನ್ನು ಮುಂದೆ ನಡೆಯಕೂಡದೆಂದು ಡಂಗುರ ಸಾರಿಸಿದನು. ಎಲ್ಲೆಡೆಯೂ ಧಾರ್ಮಿಕ ಚಟುವಟಿಕೆಗಳನ್ನು ನಿಲ್ಲಿಸಿಬಿಟ್ಟನು. ಇದರಿಂದ   ಋಷಿಮುನಿಗಳೆಲ್ಲರೂ ಕಳವಳಗೊಂಡರು. ಲೋಕಕ್ಕೆ ಬಹುದೊಡ್ಡ ಆಪತ್ತು ಸಂಭವಿಸಬಹುದೆಂದು ಅವರು ಭಾವಿಸಿದರು. ಜನತೆಯ ಹಿತದೃಷ್ಟಿಯಿಂದ ತಮ್ಮ ತಮ್ಮಲ್ಲೇ ಸಮಾಲೋಚಿಸಿದರು.

“ನಮಗೆಂಥ ತೊಂದರೆ ಬಂದಿತಲ್ಲ!  ಕಟ್ಟಿಗೆಯೊಂದರ ಎರಡು ತುದಿಗಳು ಬೆಂಕಿಯಿಂದ ಉರಿಯುತ್ತಿರಲು ಮಧ್ಯೆ ಸಿಕ್ಕಿಬಿದ್ದಿರುವ ಇರುವೆಗಳು ನರಳುವಂತೆ, ಒಂದು ಕಡೆ ರಾಜನ ದುರಾಚಾರಗಳಿಂದಲೂ, ಇನ್ನೊಂದು ಕಡೆ ಕಳ್ಳಕಾಕರ ಅತ್ಯಾಚಾರಗಳಿಂದಲೂ ನಾವು ಸಂಕಟಪಡುವಂತಾಗಿದೆ! ರಾಜ್ಯವು ಅರಾಜಕವಾಗಬಾರದೆಂದು ನಾವು ವೇನನನ್ನು ಸಿಂಹಾಸನದ ಮೇಲೆ ಕೂರಿಸಿದೆವು. ಆದರೆ ರಾಜ್ಯವಾಳಲು ಅನರ್ಹನಾಗಿರುವ ಅವನಿಂದಲೇ ಪ್ರಜೆಗಳಿಗೆ ತೊಂದರೆಯಾಗುತ್ತಿದೆಯಲ್ಲ?! ಈ ವೇನನು ಸ್ವಭಾವತಃ ದುಷ್ಟನು. ಅಯ್ಯೋ! ಹಾವಿಗೆ ಹಾಲೆರೆದಂತಾಯಿತೇ?!

“ವೇನನೊಬ್ಬ ದುಷ್ಟನೆಂದು ಅರಿತೂ ನಾವು ಅವನಿಗೆ ರಾಜ್ಯಾಧಿಕಾರವನ್ನು ನೀಡಿದೆವು. ಇದರಿಂದ ನಾವೇ ಪಾಪವನ್ನು ತಂದುಕೊಂಡಂತಾಯಿತು. ಅವನೀಗ ಪ್ರಜೆಗಳನ್ನು ಹಿಂಸಿಸುತ್ತಿದ್ದಾನೆ. ನಾವೆಲ್ಲರೂ ಅವನಲ್ಲಿಗೆ ಹೋಗಿ ಬುದ್ಧಿ ಹೇಳೋಣ. ಆಗ ನಮ್ಮ ಪಾಪವನ್ನು ಕಳೆದುಕೊಂಡಂತಾಗುತ್ತದೆ. ಅವನು ನಮ್ಮ ಮಾತುಗಳನ್ನು ಕೇಳದಿದ್ದರೆ ಜನತೆಯೇ ಅವನನ್ನು ಧಿಕ್ಕರಿಸುತ್ತದೆ. ಆಗ ನಾವು ನಮ್ಮ ತೇಜೋಬಲದಿಂದ ಅವನನ್ನು ಸುಟ್ಟು ಬಿಡೋಣ!”

ಋಷಿಗಳು ಹೀಗೆ ಸಮಾಲೋಚಿಸಿ ತಮ್ಮ ಕೋಪವನ್ನು ತಡೆ ಹಿಡಿದು ಒಟ್ಟಾಗಿ ವೇನನ ಬಳಿಗೆ ಹೋದರು. ಸಮಾಧಾನದ ಸವಿಮಾತುಗಳನ್ನಾಡುತ್ತಾ ಅವನಿಗೆ ಉಪದೇಶ ಮಾಡತೊಡಗಿದರು, “ರಾಜವರೇಣ್ಯನೇ, ನಾವೀಗ ಹೇಳಲಿರುವುದನ್ನು ಸ್ವಲ್ಪ ಪರಿಗಣಿಸು. ಹಾಗೆ ಮಾಡುವುದರಿಂದ ನಿನ್ನ ಆಯುರಾರೋಗ್ಯ ಐಶ್ವರ್ಯಗಳು ವೃದ್ಧಿಸುತ್ತವೆ. ರಾಜ, ಜನರು, ಕಾಯಾ ವಾಚಾ ಮನಸಾ ಧರ್ಮವನ್ನಾಚರಿಸಿದರೆ ಸರ್ವ ಸಂಕಷ್ಟಗಳಿಂದಲೂ ಮುಕ್ತರಾಗಿ ಸ್ವರ್ಗವನ್ನು  ಸಂಪಾದಿಸಬಹುದು. ಜನರಿಗೆ ಕ್ಷೇಮವನ್ನುಂಟುಮಾಡುವ ಆ ಧರ್ಮವನ್ನು ನಾಶಪಡಿಸಬೇಡ. ನೀನು ಹಾಗೆ ಮಾಡಿದೆಯೆಂದರೆ ಖಂಡಿತವಾಗಿಯೂ ನಿನ್ನ ಐಶ್ವರ್ಯವನ್ನು ಕಳೆದುಕೊಂಡು ಪತಿತನಾಗುವೆ. ರಾಜ, ಜನರನ್ನು ನೀನು ಕೆಟ್ಟ ಮಂತ್ರಿಗಳಿಂದಲೂ ಚೋರರಿಂದಲೂ ರಕ್ಷಿಸಿದರೆ ಅವರಿಂದ ತೆರಿಗೆಗಳನ್ನು ವಸೂಲಿ ಮಾಡಬಹುದು. ಅದರಿಂದ ಇಹದಲ್ಲೂ ಪರದಲ್ಲೂ ನೀನು ಸುಖವಾಗಿರಬಹುದು.

ಮಹಾರಾಜ! ಯಾವ ರಾಜ್ಯದಲ್ಲಿ ಜನರು ತಮ್ಮ ವರ್ಣಾಶ್ರಮಧರ್ಮಗಳಿಂದ ಯಜ್ಞಪುರುಷನೆಂದು ಕರೆಯಲ್ಪಡುವ ಆ ಭಗವಂತನನ್ನರ್ಚಿಸುವರೋ, ಯಾವ ರಾಜ್ಯದ ರಾಜನು ಅವನನ್ನು ಎಲ್ಲರಲ್ಲಿಯೂ ನೆಲೆಸಿರುವ ಪರಮಾತ್ಮನನ್ನಾಗಿ ಕಾಣುತ್ತಾ ಯೋಗ್ಯ ರೀತಿಯಲ್ಲಿ ರಾಜ್ಯವಾಳುವನೋ, ಅಂತಹ ರಾಜ್ಯದ ಮತ್ತು ರಾಜನ ವಿಷಯದಲ್ಲಿ ಅವನು ಸಂತುಷ್ಟನಾಗಿರುತ್ತಾನೆ. ಈಶ್ವರರಿಗೂ ಈಶ್ವರನಾದ ಆ ಸರ್ವೇಶ್ವರನು ಸಂತುಷ್ಟನಾದನೆಂದರೆ, ಏನನ್ನು ತಾನೇ ಪಡೆಯುವುದು ಕಷ್ಟವಾಗುತ್ತದೆ? ಆದ್ದರಿಂದಲೇ ಸಕಲ ದೇವತೆಗಳೂ ಅವನಿಗೆ ವಿವಿಧ ಪೂಜೆಗಳನ್ನರ್ಪಿಸುತ್ತಾರೆ. ಆ ಭಗವಂತನು ವೇದಮಯನೂ ಯಜ್ಞಮಯನೂ ತಪೋಮಯನೂ ಆಗಿದ್ದಾನೆ. ಆದ್ದರಿಂದ ಅವನಿಗಾಗಿ ಯಜ್ಞಗಳನ್ನಾಚರಿಸಲು ನಿರತರಾದಾಗ ಶ್ರೀಹರಿಯ ಅಂಶಗಳಾದ ದೇವತೆಗಳು ಸಂತುಷ್ಟರಾಗಿ ವಾಂಛಿತ ಫಲವನ್ನು ನೀಡುವರು. ಯಜ್ಞಗಳನ್ನು ಆಚರಿಸದಿದ್ದರೆ ಅವರಿಗೆ ಅವಮಾನ ಮಾಡಿದಂತಾಗುತ್ತದೆ.”

ಋಷಿಗಳ ಮಾತುಗಳನ್ನು ಕೇಳಿ ವೇನನು ಹೇಳಿದನು, “ಅಯ್ಯೋ ಮೂರ್ಖ ಮುನಿಗಳಿರಾ! ನಿಮಗೆ ಅನುಭವವೇ ಸಾಲದು! ಪುಟ್ಟ ಮಕ್ಕಳಂತೆ ಮಾತನಾಡುತ್ತಿರುವ ನೀವು ಅಧರ್ಮವನ್ನೇ ಧರ್ಮವೆಂದು ಭಾವಿಸುತ್ತಿರುವಿರಲ್ಲ?! ಆಶ್ರಯ ನೀಡುತ್ತಿರುವ ಪತಿಯನ್ನು ಬಿಟ್ಟು ಜಾರುಪುರುಷನ ಬಳಿಗೆ ಹೋಗುವ ಹೆಣ್ಣಿನಂತಿದೆ ನಿಮ್ಮ ಮಾತು! ಮೂರ್ಖರು ಭಗವಂತನೇ ಆದ ರಾಜನನ್ನು ಗೌರವಿಸುವುದಿಲ್ಲ. ಅಂಥವರು ಇಹದಲ್ಲಾಗಲೀ ಪರದಲ್ಲಾಗಲೀ ಸುಖ ಪಡುವುದಿಲ್ಲ.

“ಈ ಯಜ್ಞಪುರುಷನೆಂಬುವನು ಯಾರು? ಅವನನ್ನೇಕೆ ಭಕ್ತಿಯಿಂದ ಸೇವಿಸಬೇಕು? ದೇವತೆಗಳಾರು? ಅಯ್ಯೋ ದಡ್ಡರೇ! ಇವರನ್ನೆಲ್ಲ ಪೂಜಿಸುವುದು, ಕೆಟ್ಟ ಹೆಂಗಸರು ತಮ್ಮ ಗಂಡಂದಿರನ್ನು ಉಪೇಕ್ಷಿಸಿ ಪರಪುರುಷರನ್ನು ಸೇವಿಸುವುದಕ್ಕೆ ಸಮ! ವರಗಳನ್ನೂ    ಶಾಪಗಳನ್ನೂ ನೀಡಲು ಸಮರ್ಥರಾಗಿರುವ ಹರಿ, ಹರ, ಬ್ರಹ್ಮರೂ, ಇಂದ್ರಾಗ್ನಿವಾಯುವರುಣರೂ ಸೂರ್ಯ, ಚಂದ್ರ, ಯಮ, ಕುಬೇರ, ಭೂದೇವಿಯೇ ಮೊದಲಾದ ದೇವತೆಗಳೂ ರಾಜನ ದೇಹದಲ್ಲೇ ನೆಲೆಸಿದ್ದಾರೆ. ಇವರೆಲ್ಲರೂ ರಾಜನ ಅಂಶಜರೇ ಆಗಿರುತ್ತಾರೆ. ಆದ್ದರಿಂದ ಮುನಿಗಳೇ, ನಿಮ್ಮ ಮಾತ್ಸರ್ಯವನ್ನು ತ್ಯಜಿಸಿ ನನ್ನನ್ನು ಪೂಜಿಸಿರಿ! ನನ್ನನ್ನು ಕುರಿತು ಯಜ್ಞಾಚರಣೆ ಮಾಡಿ! ನನಗಿಂತ ದೊಡ್ಡ ದೇವರು ಯಾರಿದ್ದಾರೆ?”

ಪಾಪಿಷ್ಠನಾದ ವೇನನು ಸತ್ಪಥದಿಂದ ದೂರಾಗಿದ್ದನು. ಸಂಪೂರ್ಣವಾಗಿ ಮತಿಹೀನನಾಗಿದ್ದನು. ಋಷಿಗಳು ಬಹಳ ಗೌರವಪೂರ್ವಕವಾಗಿ ಅವನ ಮುಂದೆ ತಮ್ಮ ಬೇಡಿಕೆಗಳನ್ನಿತ್ತರೂ ವೇನನು ಅವರನ್ನು ಹೀನಾಯವಾಗಿ ಜರಿದು ಅವಮಾನಿಸಿದನು. ಸಮಸ್ತ ಮಂಗಳಗಳನ್ನೂ ಕಳೆದುಕೊಂಡನು.

ವೇನನಿಂದ ತಿರಸ್ಕೃತರಾದ ಋಷಿಗಳು ಕ್ರೋಧಾವಿಷ್ಟರಾದರು. “ಕೊಂದುಹಾಕಿ! ವೇನನನ್ನು ಕೊಲ್ಲಿ!” ಅವರು ಕೂಗಿಕೊಂಡರು, “ಇವನೊಬ್ಬ ಮಹಾಪಾಪಿ! ಇವನನ್ನು ಇನ್ನೂ ಬದುಕಲು ಬಿಟ್ಟರೆ ಪ್ರಪಂಚವನ್ನೇ ಭಸ್ಮಗೊಳಿಸಿಬಿಡುವನು! ದುರಹಂಕಾರಿಯೂ ದುರಾಚಾರಿಯೂ ಆದ ಇವನು ಸಿಂಹಾಸನವನ್ನಲಂಕರಿಸಲು ಸರ್ವಥಾ ಯೋಗ್ಯನಲ್ಲ! ನಾಚಿಕೆಗೆಟ್ಟ ಈ ಅಧಮನು ಯಜ್ಞಪತಿಯಾದ ವಿಷ್ಣುವನ್ನೇ ನಿಂದಿಸುತ್ತಿದ್ದಾನೆ. ಯಾರ ಅನುಗ್ರಹದಿಂದ ಸಕಲೈಶ್ವರ್ಯಗಳೂ ಲಭಿಸುವವೋ, ಅಂಥ ಭಗವಂತನನ್ನು ಈ ನೀಚ ವೇನನನ್ನು ಹೊರತುಪಡಿಸಿ ಇನ್ನಾರು ನಿಂದಿಸಿಯಾರು?”

ಋಷಿಗಳು ವೇನನನ್ನು ಕೊಲ್ಲಲು ನಿರ್ಧರಿಸಿದರು. ಭಗವಂತನನ್ನು ನಿಂದಿಸಿದುದರಿಂದ ವೇನನು ಆಗಲೇ ಸತ್ತಂತಾಗಿದ್ದನು. ಋಷಿಗಳು ಕೋಪದಿಂದ ಹುಂಕರಿಸಿದರು. ಆ ತೇಜಃಪುಂಗವರ ಹುಂಕಾರವೇ ಸಾಕಾಯಿತು, ವೇನನು ಒಮ್ಮೆಲೆ ಸತ್ತು ಬಿದ್ದನು.

ಹೀಗೆ ವೇನನನ್ನು ಕೊಂದು ಋಷಿಮುನಿಗಳೆಲ್ಲರೂ ತಮ್ಮ ಆಶ್ರಮಗಳಿಗೆ ಹೊರಟುಹೋದರು. ಪುತ್ರನ ಮರಣದಿಂದ ತಾಯಿ ಸುನೀಥಿಯು ಶೋಕಾರ್ತಳಾದಳು. ಅವಳು ವೇನನ ಶರೀರಕ್ಕೆ ಕೆಲವು ವಿಶೇಷ ದ್ರವ್ಯಗಳನ್ನು ಸವರಿ ಮಂತ್ರೋಚ್ಚಾರಣೆಯ ಬಲದಿಂದ ಅದನ್ನು ಕೆಡದಂತೆ ಸಂರಕ್ಷಿಸಿದಳು.

ಒಂದು ದಿನ, ಋಷಿಮುನಿಗಳು ಸರಸ್ವತೀ ನದಿಯ ದಂಡೆಯ ಮೇಲೆ ಕುಳಿತು ಹೋಮ ಹವನಗಳನ್ನಾಚರಿಸಿ ಭಗವತ್ಕಥಾ ಪ್ರಸಂಗಗಳನ್ನು ಚರ್ಚಿಸತೊಡಗಿದರು. ಆಗ ಅವರು ರಾಜ್ಯದಲ್ಲಿ ಉಂಟಾಗುತ್ತಿದ್ದ ಅನೇಕ ಉಪದ್ರವಗಳನ್ನು ಕುರಿತು ಮಾತಾಡಿಕೊಂಡರು,  “ಈಗ  ರಾಜನು ಮಡಿದು ಲೋಕವು ಅರಾಜಕವಾಗಿರುವುದರಿಂದ ಕಳ್ಳಕಾಕರಿಗೆ ಅನುಕೂಲವಾದಂತಾಯಿತು. ಇಂಥವರಿಂದ ಜನರಿಗೆ ಬಹಳ ಕಷ್ಟವಾಗುತ್ತಿದೆ.”

ಅಷ್ಟರಲ್ಲಿಯೇ ಅವರು ಧೂಳಿನ ಬಿರುಗಾಳಿಯೇಳುತ್ತಿರುವುದನ್ನು ಕಂಡರು. ಅದು ಕಳ್ಳಕಾಕರು ಎಬ್ಬಿಸಿದ ಕೋಲಾಹಲದಿಂದುಂಟಾಗಿತ್ತು. ಅವರ ಕಣ್ಣಿದುರಿಗೇ ಕಳ್ಳರು ಜನರನ್ನು ಲೂಟಿ ಮಾಡತೊಡಗಿದರು. ರಾಜನಿಲ್ಲದುದರಿಂದ ಶಿಕ್ಷೆಯ ಭಯವಿಲ್ಲದಂತಾಗಿ ಕಳ್ಳರು ಮೆರೆಯುತ್ತಿದ್ದರು. ಇದನ್ನೆಲ್ಲ ತಮ್ಮ ತಪಶ್ಯಕ್ತಿಯಿಂದ ತಡೆಯಬಲ್ಲವರಾಗಿದ್ದರೂ ಅದರಲ್ಲಿ ದೋಷವನ್ನು ಕಂಡ ಮುನಿಗಳು ಹಾಗೆ ಮಾಡಲಿಲ್ಲ. ಬೇರೊಂದು ಉಪಾಯವನ್ನು ಯೋಚಿಸತೊಡಗಿದರು.

“ಬ್ರಾಹ್ಮಣನು ಸಮದರ್ಶಿಯೂ ಶಾಂತಮನಸ್ಕನೂ ಆದರೂ ದೀನಜನರನ್ನು ಉಪೇಕ್ಷಿಸಬಾರದು. ಹಾಗೆ ಮಾಡಿದರೆ, ಒಡೆದ ಮಡಕೆಯಿಂದ ಹಾಲು ಸೋರಿ ಹೋಗುವಂತೆ ಬ್ರಾಹ್ಮಣನ ತಪಶ್ಶಕ್ತಿಯೂ ನಷ್ಟವಾಗಿ ಬಿಡುತ್ತದೆ. ಅಂಗರಾಜನ ವಂಶವಾದರೋ ಅಮೋಘವಾದುದು. ರಾಜರ್ಷಿಯಾದ ಅವನ ವಂಶ ಹೀಗೆ ನಿಂತುಹೋಗಬಾರದು. ಅವನ ವಂಶದಲ್ಲಿ ಹುಟ್ಟುವವರು ಶ್ರೀಹರಿಯ ಭಕ್ತರಾಗುವಂಥವರು.”

ಹೀಗೆ ಯೋಚಿಸಿದ ಆ ಋಷಿಮುನಿಗಳು ಸಂರಕ್ಷಿಸಲ್ಪಟ್ಟಿದ್ದ ವೇನನ ಹೆಣವನ್ನು ತರಿಸಿದರು. ಆ ದೇಹದ ತೊಡೆಗಳನ್ನು ಬಲವಾಗಿ ಮಥಿಸತೊಡಗಿದರು. ಆಗ ಒಬ್ಬ ಕುಳ್ಳಾದ ವ್ಯಕ್ತಿಯು ಆ ದೇಹದಿಂದ ಹುಟ್ಟಿದನು! ಬಾಹುಕನೆಂಬ ಆ ಕುಳ್ಳನ ಮೈಬಣ್ಣ ಕಾಗೆಯಂತೆ ಕಡುಕಪ್ಪಾಗಿತ್ತು. ಪುಟ್ಟ ಕೈಕಾಲುಗಳನ್ನು ಪಡೆದಿದ್ದ ಅವನ ದವಡೆಗಳು ಮಾತ್ರ ದೊಡ್ಡದಾಗಿದ್ದವು. ಅವನ ಮೂಗು ಚಪ್ಪಟೆಯಾಗಿತ್ತು. ಅವನ ಕಣ್ಣುಗಳು ಕೆಂಪಾಗಿದ್ದರೆ, ಕೂದಲು ತಾಮ್ರವರ್ಣದಿಂದ ಕೂಡಿತ್ತು. ವಿನಯಶೀಲನಾದ ಅವನು ತಲೆಬಾಗಿ, “ನಾನೇನು ಮಾಡಲಿ ಸ್ವಾಮಿ?” ಎಂದು ಕೇಳಿದನು. ಅದಕ್ಕೆ ಋಷಿಗಳು, “ನಿಷೀದ! (ಸುಮ್ಮನೆ ಕುಳಿತುಕೋ)” ಎಂದರು. ಈ ಕಾರಣದಿಂದ ಅವನಿಗೂ ಅವನ ವಂಶಜರಿಗೂ `ನಿಷಾದ’ರೆಂಬ ಹೆಸರಾಯಿತು. ನಿಷಾದನು ವೇನನ ಪಾಪಫಲಗಳನ್ನೆಲ್ಲಾ ಹೊತ್ತುಕೊಂಡನು. ನೈಷಾದ ಜನಾಂಗವು ಬೆಟ್ಟ ಗುಡ್ಡಗಳಲ್ಲೂ ಕಾಡುಗಳಲ್ಲೂ ವಾಸಿಸತೊಡಗಿತು. ಈ ಜನರಿಗೆ ಕಳ್ಳತನ, ದರೋಡೆ, ಬೇಟೆ, ಮೊದಲಾದ ಪಾಪಕಾರ್ಯಗಳೇ ವೃತ್ತಿಗಳಾದವು.

ಋಷಿಗಳು ಈಗ ವೇನನ ದೇಹದ ತೋಳುಗಳನ್ನು ಮಥಿಸತೊಡಗಿದರು. ಆ ತೋಳುಗಳಿಂದ ಒಬ್ಬ ಪುರುಷನೂ ಒಬ್ಬ ಸ್ತ್ರೀಯೂ ಪ್ರಕಟವಾದರು. ಅವರೀರ್ವರೂ ಭಗವಂತನ ಅಂಶವಿಸ್ತರಣೆಗಳೆಂದು ಅರಿತ ಆ ಬ್ರಹ್ಮರ್ಷಿಗಳು ಸಂತೋಷಭರಿತರಾದರು.

ಆ ಪುರುಷನು ಭಗವಾನ್‌ ವಿಷ್ಣುವಿನ ಅಂಶಾವತಾರನಾಗಿದ್ದು ಪೃಥುವೆಂದು ಪ್ರಸಿದ್ಧನಾದನು. ಅವನೊಂದಿಗೆ ಆವಿರ್ಭವಿಸಿದ ಸ್ತ್ರೀ, ಅವನ ನಿತ್ಯ ಸಹಚಾರಿಣಿಯಾದ ಲಕ್ಷ್ಮೀದೇವಿಯ ಅಂಶಾವತಾರಳಾಗಿದ್ದು ಅರ್ಚಿಯೆಂದು ಖ್ಯಾತಳಾದಳು. ನಿತ್ಯ ದಂಪತಿಗಳಾದ ಅವರೀರ್ವರೂ ಪತಿಪತ್ನಿಯರಾಗಿ ಪ್ರಜಾಕೋಟಿಯನ್ನು ತಾಯ್ತಂದೆಯರಂತೆ ಸಲಹಿದರು. ಭೂಮಿಯನ್ನು ಹಳ್ಳಿ, ಪಟ್ಟಣ, ರಾಜಶಿಬಿರ, ಗಣಿಗಳು ಮೊದಲಾಗಿ ವಿಂಗಡಿಸಿ, ಅದರಿಂದ ದಿವ್ಯ ಸಂಪನ್ಮೂಲಗಳನ್ನು ಹೊರತೆಗೆದನು. ನೂರು ಅಶ್ವಮೇಧಯಾಗಗಳನ್ನಾಚರಿಸಿ ಶತಕ್ರತುವೆಂದು ಪ್ರಸಿದ್ಧನಾದ ಇಂದ್ರನನ್ನೇ ಮೀರಿಸಿದನು. ಅವನು ವಿಷ್ಣುವಿನ ಪರಮಭಕ್ತನಾಗಿದ್ದನು. ಅವನ ಭಕ್ತಿಗೆ ಮೆಚ್ಚಿ ಶ್ರೀಹರಿಯೇ ಅವನಿಗೆ ಪ್ರತ್ಯಕ್ಷನಾಗಿ ಹರಸಿದನು.

ಹೀಗೆ ಋಷಿಮುನಿಗಳು ದುಷ್ಟನಾದ ವೇನನನ್ನು ದಂಡಿಸಿ ಜಗತ್ತಿಗೆ ಉಪಕಾರ ಮಾಡಿದರು. ಇದರಿಂದ ರಾಜ್ಯವು ಅರಾಜಕವಾಗಲು, ಧರ್ಮಸಂಸ್ಥಾಪನೆಗಾಗಿ ಭಗವಂತನೇ ತನ್ನ ಆಂಶಿಕ ಪ್ರತಿನಿಧಿಯ ಮೂಲಕ ಅವತರಿಸಿ ಋಷಿಮುನಿಗಳ ಚಿಂತೆಯನ್ನು ದೂರ ಮಾಡಿದನು. ಭಗವಂತನು ಭಕ್ತರಿಗೆ, ಸಾಧುಗಳಿಗೆ ಪರಮಪ್ರಿಯನಾದ ಭಕ್ತವತ್ಸಲನಲ್ಲವೇ?

ಈ ಲೇಖನ ಶೇರ್ ಮಾಡಿ