ವಿಕಾಸ ವಾದ

ವಿಕಾಸ ವಾದ ಎಂದು ಹೇಳಿದ ಕೂಡಲೇ ಡಾರ್ವಿನ್ ಸಿದ್ಧಾಂತವೇ ನೆನಪಿಗೆ ಬರುತ್ತದೆ. ಮಂಗನಿಂದ ಮಾನವ ಎಂದು ಅವನು ತನ್ನ ವಿಕಾಸ ವಾದದಲ್ಲಿ ಪ್ರತಿಪಾದಿಸಿದ್ದಾನೆ. ಡಾರ್ವಿನ್ ಸಿದ್ಧಾಂತವನ್ನು ಕುರಿತು ಅಪಾರ ಸಾಹಿತ್ಯವಿದೆ. ಶಾಲಾ ಕಾಲೇಜುಗಳಲ್ಲಿ ಅದನ್ನು ಬೋಧಿಸಲಾಗುತ್ತಿದೆ. ತುಂಬ ಜನಪ್ರಿಯವಾಗಿದೆ. ಡಾರ್ವಿನ್ನನು ಜೀವಜಾತಿಗಳ (ಸ್ಪೀಸೀಸ್) ವಿಕಾಸವನ್ನು ಕುರಿತು ಹೇಳುತ್ತಾನೆ. ಆದರೆ ಮೊದಲ ಜೀವಜಾತಿಗಳ ವಿಕಸನ ಹೇಗಾಯಿತು? ಈ ಜೀವಜಾತಿಗಳು ಸ್ವತಂತ್ರವಾಗಿ ಸೃಷ್ಟಿಯಾದವಲ್ಲ. ಒಂದರಿಂದ ಮತ್ತೊಂದು ವಿಕಾಸಗೊಂಡು ಬಂದಿವೆ ಎಂದು ಡಾರ್ವಿನ್ ವಾದಿಸುತ್ತಾನೆ. ಸ್ವತಂತ್ರ ಸೃಷ್ಟಿಯ ಪ್ರಶ್ನೆಯೇ ಇಲ್ಲ ಎಂದ ಮೇಲೆ, ಯಾವುದೋ ಒಂದು ನಿರ್ದಿಷ್ಟ ಜೀವಜಾತಿಯಿಂದ ಅವನು ಹೇಗೆ ತನ್ನ ಸಿದ್ಧಾಂತವನ್ನು ಪ್ರಾರಂಭಿಸುತ್ತಾನೆ? ಜೀವಜಾತಿಗಳಿಗೆ ಯಾವುದೋ ಒಂದು ಮೂಲವಿರಬೇಕಲ್ಲವೆ? ಅವು ಹೇಗೆ ಅಸ್ತಿತ್ವಕ್ಕೆ ಬಂದವು ಎನ್ನುವುದನ್ನು ಅವನು ವಿವರಿಸಬೇಕಾಗಿತ್ತಲ್ಲವೇ? ಅಂದಹಾಗೆ ಮಾನವ ಜನ್ಮ ಹೇಗಾಯಿತು ಎನ್ನುವುದರ ಬಗೆಗೆ ಅವನು ಸರಿಯಾಗಿ ಯೋಚಿಸಿದ್ದಾನೆಯೇ? ಏಕೆಂದರೆ,

“ಡಾರ್ವಿನ್ನನು ಜೀವಜಾತಿಗಳ ವಿಕಾಸವನ್ನು ಕುರಿತು ಹೇಳುತ್ತಾನೆ. ಆದರೆ ಆಧ್ಯಾತ್ಮಿಕ ವಿಕಾಸವನ್ನು ಕುರಿತು ಅವನಿಗೆ ಏನೂ ತಿಳಿಯದು. ಚೇತನಾತ್ಮವು ಕೀಳು ಜನ್ಮದಿಂದ ಉತ್ತಮ ಜನ್ಮಗಳತ್ತ ಪ್ರಗತಿ ಹೊಂದುವುದನ್ನು ಕುರಿತು ಅವನಿಗೆ ಏನೂ ತಿಳಿದಿಲ್ಲ. ವಾನರನಿಂದ ಮಾನವನ ವಿಕಾಸವಾಯಿತು ಎಂದು ಅವನು ಹೇಳುತ್ತಾನೆ. ಆದರೆ ವಾನರ ಸಂತತಿ ಇನ್ನೂ ನಶಿಸಿಲ್ಲ. ವಾನರನೇ ಮಾನವನ ನಿಕಟ ಪೂರ್ವಜನಾದರೆ, ವಾನರವು ಇನ್ನೂ ಏಕೆ ಅಸ್ತಿತ್ವದಲ್ಲಿದೆ?” ಎಂದು ಆಚಾರ್ಯರಾದ ಶ್ರೀಲ ಪ್ರಭುಪಾದರು ಕೇಳುತ್ತಾರೆ. ಅಲ್ಲಿಗೆ ನಾವು ಆಧ್ಯಾತ್ಮಿಕ ವಿಕಸನ ವಾದಕ್ಕೆ ಬರುತ್ತಿದ್ದೇವೆ. ಅದಕ್ಕೆ ಮೊದಲು ಇದನ್ನು ಗಮನಿಸಿ.

ಡಾರ್ವಿನ್ ವಿಕಾಸವಾದ ಸಿದ್ಧಾಂತಕ್ಕೆ ಕೆಲವು ಮುನ್ಸೂಚಕಗಳನ್ನು ನಾವು ಭಾರತದ ವಿದ್ವಾಂಸರ ಆರಂಭಿಕ ಬರೆಹಗಳಲ್ಲಿ ಕಾಣಬಹುದು. ಇದನ್ನು ಸ್ವಭಾವವಾದ ಎನ್ನುತ್ತಾರೆ. ಏನದು? ಇದೊಂದು ಸಿದ್ಧಾಂತ. ಬ್ರಹ್ಮಾಂಡ, ಭೌಗೋಳಿಕ ರಚನೆಗಳು, ಜೀವ (ಬದುಕು) ಮತ್ತು ಇತರ ಜೀವಿಗಳಲ್ಲಿನ ಎಲ್ಲ ಜೀವ ವೈವಿಧ್ಯಗಳು ಇವು ಯಾವುದೇ ಸೃಷ್ಟಿಕರ್ತನಿಲ್ಲದೆ ಸಹಜವಾಗಿ ಸಂಭವಿಸಿತು ಎಂದು ಈ ಸಿದ್ಧಾಂತವು ಪ್ರತಿಪಾದಿಸುತ್ತದೆ. ಭಾರತದ ದೇವತಾಶಾಸ್ತ್ರಜ್ಞರು ಈ ಸಿದ್ಧಾಂತವನ್ನು ವಿರೋಧಿಸಿದರು. ಜೀವವು ಜಡ ವಸ್ತುವಿನಿಂದ ಹುಟ್ಟುವುದು ಸಾಧ್ಯವಿಲ್ಲ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.

ಈಗ ಪುನಃ ಡಾವಿರ್ನ್ ಸಿದ್ಧಾಂತವನ್ನು ಪರಿಶಿಲಿಸೋಣ. ಅವನು ನೈರ್ಸಗಿಕ ಆಯ್ಕೆಯ ಮೂಲಕ ವಿಕಾಸವಾದ ಸಿದ್ಧಾಂತವನ್ನು ರೂಪಿಸಿದ ವಿಜ್ಞಾನಿ ಎಂದು ಆಧುನಿಕ ಯುಗದಲ್ಲಿ ಪರಿಗಣಿಸಲಾಗಿದೆ. ವಿಕಾಸ ಪ್ರಕ್ರಿಯೆಯನ್ನು ಮೊದಲು ಡಾರ್ವಿನ್ ಕಂಡುಹಿಡಿದನೆಂದು ಪಾಶ್ಚಿಮಾತ್ಯರು ಭಾವಿಸಿದ್ದಾರೆ. ಆದರೆ ವಿಕಸನದ ಕಲ್ಪನೆಯು ಬಹಳ ಹಿಂದೆಯೇ ಇತ್ತು. ಶ್ರೀಮದ್ ಭಾಗವತದಿಂದ ವಿಕಾಸದ ಬೆಳವಣಿಗೆಯು ತಿಳಿದು ಬರುತ್ತದೆ. (ಭಾಗವತ, 3.29.29). ನಿಜ, ಮಾನವನ, ಜೀವಿಗಳ ವಿಕಸನವನ್ನು ಕುರಿತಂತೆ ಡಾರ್ವಿನ್ ಅಪಾರವಾದ ಸಂಶೋಧನೆಯನ್ನು ನಡೆಸಿ ವಿಕಾಸವಾದವನ್ನು ಮುಂದಿಟ್ಟನು. ಜೀವಿಗಳ ವಿಕಾಸವನ್ನು ನಾವೂ ಒಪ್ಪುತ್ತೇವೆ. ಆದರೆ ಪೂರ್ತಿ ಅಲ್ಲ. ಇದಕ್ಕಾಗಿ ನಾವು ವಿಕಾಸದ ಯಾತ್ರೆಯನ್ನು ಅರಿಯಬೇಕು. ಏನದು? ಅದುವೇ ದೇಹಾಂತರ ವಿಧಾನ.


ವಿಕಾಸ ಯಾತ್ರೆ


ಒಂದು ಜೀವಜಾತಿ ಅಥವಾ ವರ್ಗವು ಮತ್ತೊಂದು ಜೀವಜಾತಿ ಅಥವಾ ವರ್ಗದಿಂದ ವಿಕಸನಗೊಳ್ಳಲಿಲ್ಲ. ಹುಟ್ಟು, ಸಾವು ಮತ್ತು ಪುನರ್ ಜನ್ಮದ ವೃತ್ತವಿದೆಯಲ್ಲ. ಅದರಲ್ಲಿ ಆತ್ಮದ ಪಾತ್ರ ತುಂಬ ಮುಖ್ಯ. ಈ ವೃತ್ತದಲ್ಲಿ ಕೆಳ ಹಂತದಿಂದ ಮೇಲ್ಮಟ್ಟಕ್ಕೆ ಸಾಗುತ್ತ ಆತ್ಮವು ಮಾನವ ರೂಪದಲ್ಲಿ ಪರ್ಯವಸನಗೊಳ್ಳುತ್ತದೆ. ಒಂದು ಜನ್ಮದಲ್ಲಿ ನಾವು ಮಾಡುವ ಕರ್ಮದ ಫಲದಂತೆ, ಅಂದರೆ ಕೆಲಸ ಕಾಯಗಳಿಗೆ ಅನುಗುಣವಾಗಿ ಮತ್ತೊಂದು ಹುಟ್ಟನ್ನು ಪಡೆಯುತ್ತೇವೆ. ಆತ್ಮವು ಹೀಗೆ ಪ್ರಗತಿ ಹೊಂದುತ್ತ ಉನ್ನತ ಪ್ರಜ್ಞೆಯಲ್ಲಿ ಹೊಸ ಹುಟ್ಟನ್ನು ಪಡೆದುಕೊಳ್ಳುತ್ತದೆ. ಶಾಶ್ವತವಾದ ಆತ್ಮವು ಪ್ರತಿಯೊಂದು ಜೀವಿಯಲ್ಲಿಯೂ ಉಂಟು. ಸಾವಿನ ಅನಂತರ ಈ ಶಾಶ್ವತ ಆತ್ಮವು ಅನ್ಯ ಶರೀರವನ್ನು ಹುಡುಕಿಕೊಳ್ಳುತ್ತದೆ. ಆ ದೇಹವು ಪ್ರಾಣಿಯದ್ದಾಗಿರಬಹುದು ಅಥವಾ ಮಾನವನದ್ದಾಗಿರಬಹುದು. ಈ ದೇಹ ವಿಕಸನ ಕ್ರಿಯೆಯನ್ನು ಶ್ರೀಲ ಪ್ರಭುಪಾದರು ಹೀಗೆ ಸಂಕ್ಷಿಪ್ತವಾಗಿ ಹೇಳುತ್ತಾರೆ, “ ನಾನಾ ಬಗೆಯ ದೇಹಗಳ ವಿಕಸನ ಕ್ರಿಯೆಯು ಹೂವು ಅರಳುವ ಪರಿಯಂತೆ. ಮೊಗ್ಗು, ಅರಳುವ ಹಂತ, ಸಂಪೂರ್ಣ ಅರಳುವಿಕೆ, ಹಾಗೂ ಸುಗಂಧ ಮತ್ತು ಸೌಂದರ್ಯ ಬೀರುವ ಪರಿಪೂರ್ಣತೆ ಹೀಗೆ ಹೂವು ಅರಳುವುದರಲ್ಲಿ ನಾನಾ ಹಂತಗಳಿರುವಂತೆ ಕ್ರಮಾನುಗತ ವಿಕಾಸದಲ್ಲಿ 84,00,000 ಜೀವ ಜಾತಿಗಳಿವೆ. ಆತ್ಮವು ಅವುಗಳಲ್ಲಿ ಒಂದನ್ನು ಹುಡುಕಿಕೊಳ್ಳುತ್ತದೆ. ಒಂದು ಸರಳ ಉದಾಹರಣೆಯ ಮೂಲಕ ಇದನ್ನು ಅರ್ಥಮಾಡಿಕೊಳ್ಳಬಹುದು – ನಗರವಾಸಿಯಾದ ಆಧುನಿಕ ಮಾನವನು ಅಪಾರ್ಟ್ ಮೆಂಟ್ಗಳಲ್ಲಿ ವಾಸಿಸುವುದು ಈಗ ಸಾಮಾನ್ಯವಾಗಿದೆ. ಅಗತ್ಯ ಕಂಡು ಬಂದಾಗ ತನ್ನ ಅಗತ್ಯಕ್ಕೆ ತಕ್ಕುನಾದ ಅಪಾರ್ಟ್ ಮೆಂಟ್ಗೆ ಬದಲಿಸುವುದೂ ಕೂಡ ಸಾಮಾನ್ಯ. ವ್ಯಕ್ತಿಯು ಬೇರೆ ಅಪಾರ್ಟ್ ಮೆಂಟ್ಗೆ ತನ್ನ ವಾಸ ಸ್ಥಳವನ್ನು ಬದಲಿಸಿಕೊಂಡರೆ, ಹಿಂದಿನ ವಾಸ ಸ್ಥಳವು ಹಾಗೆಯೇ ಇರುತ್ತದೆ. ನಿವಾಸಿಯ. ಸ್ಥಳ ಮಾತ್ರ ಬದಲಾಗಿರುತ್ತದೆ. ಅವನು ಅದೇ ವ್ಯಕ್ತಿಯಾಗಿರುತ್ತಾನೆ. ಅದೇ ರೀತಿ ಕೆಳಸ್ತರದ ಜೀವ ಜಾತಿಗಳಿಂದ ಹಿಡಿದು ಮೇಲ್ಸ್ತರದವರೆಗೆ ವ್ಯವಸ್ಥಿತವಾದ ಪ್ರಗತಿ ಇದೆ.” (ಭಾಗವತ 3.31.19)

ಲೌಕಿಕ ದೇಹದೊಳಗೆ ವಾಸಿಸುವ ಆತ್ಮದ ಬಗೆಗೆ ಡಾರ್ವಿನ್ ಗೆ ಏನೂ ಜ್ಞಾನವಿಲ್ಲ. ಅವನು ಶರೀರದ ವಿಕಸನವನ್ನು ಕುರಿತು ಮಾತ್ರ ಯೋಚಿಸುತ್ತಾನೆ. ಶರೀರವು ಶಾಶ್ವತ ಮತ್ತು ಆತ್ಮವೂ ಶಾಶ್ವತ. ಆದರೆ ಪರಿಸ್ಥಿತಿಗೆ ಅನುಗುಣವಾಗಿ ಭಿನ್ನವಾದ ಶರೀರಗಳಿರುತ್ತವೆ. ಆತ್ಮವು ನಿರ್ದಿಷ್ಟ ದೇಹವನ್ನು ಸ್ವೀಕರಿಸುತ್ತದೆ ಮತ್ತು ಸಾವಿನ ಸಮಯದಲ್ಲಿ ಬೇರೆ ಶರೀರಕ್ಕೆ ದೇಹಾಂತರಗೊಳ್ಳುತ್ತದೆ. ಇಂತಹ ಜೀವಿಗಳ ಯಾತ್ರೆಯ ಆರಂಭ ಹೇಗೆ? ಡಾರ್ವಿನ್ ಅಂತೂ ಹೇಳುವುದಿಲ್ಲ. ಆದರೆ ಮಹಾಮೇಧಾವಿಯಾದ ಭಗವಂತನು ಎಲ್ಲ ಜೀವ ಸಂಕುಲಗಳ ಸೃಷ್ಟಿಕರ್ತನು. ಪ್ರಾಕೃತಿಕ ಲೋಕದಲ್ಲಿ ನಾವು ಕಾಣುವ ವೈವಿಧ್ಯತೆಗಳು ದೇವರ ಕಲಾತ್ಮಕತೆ ಎನ್ನುವುದು ನಮ್ಮ ಧರ್ಮಗ್ರಂಥಗಳಿಂದ ನಮಗೆ ತಿಳಿದಿರುವ ಅಂಶಗಳು.

ಜೀವ ರೂಪಗಳು

ಈಗ ಮುಂದಿನ ಪ್ರಶ್ನೆ- ಅಷ್ಟೊಂದು ಜೀವ ರೂಪಗಳೇಕೆ? 84,00,000 ಜೀವ ಜಾತಿಗಳು! ಅವು ಆತ್ಮದ ಆನಂದಕ್ಕೆ ಇರುವ ವಿವಿಧ ಸಾಧನ ಎಂದು ಉತ್ತರಿಸಲಾಗುತ್ತದೆ. ಉದಾಹರಣೆಗೆ ಯಾರಿಗಾದರೂ ಮೀನು ಸೇವನೆಯ ಬಯಕೆ ಇರುತ್ತದೆ ಎಂದುಕೊಳ್ಳಿ. ಅಂತಹವರಿಗೆ ಹುಲಿಯ ಹಲ್ಲುಗಳು ಮತ್ತು ಉಗುರುಗಳು ಅತ್ಯಂತ ಸೂಕ್ತವಾದುದು. ಯಾರಿಗಾದರೂ ಹಾರಬೇಕೆನ್ನಿಸಿದರೆ ಅವರಿಗೆ ರೆಕ್ಕೆಗಳಿದ್ದರೆ ಒಳ್ಳೆಯದು. ನೀರಿನಲ್ಲಿ ಮುಳುಗಾಟ ಮತ್ತು ಈಜಾಟದ ಅಪೇಕ್ಷೆ ಉಳ್ಳವರಿಗೆ ಮೀನಿಗಿಂತ ಬೇರೆ ರೂಪ ಬೇಕೆ?

ಇವೆಲ್ಲ ಆತ್ಮದ ಮೂಲಕ ಭಗವಂತನ ಲೀಲೆಗಳು. ಆತ್ಮವು ಪ್ರಜ್ಞೆಯ ಕೆಳ ಮಟ್ಟವನ್ನು ಆವರಿಸಬಲ್ಲದು ಅಥವಾ ಉನ್ನತ ಮಟ್ಟಕ್ಕೆ ವಿಕಾಸಗೊಳ್ಳಲೂಬಲ್ಲದು. ಇದು ವಿಕಸನದ ಏಣಿ. ಪ್ರಾಣಿ, ಗಿಡಮರಗಳಿಂದ ಮಾನವ ರೂಪಕ್ಕೆ ವಿಕಾಸಗೊಳ್ಳಲು ಏರುವ ಏಣಿ ಇದು. ಆತ್ಮವು ಈ ಏಣಿಯ ಕೆಳ ಮಟ್ಟದಿಂದ ಮೇಲಕ್ಕೆ ಏರುತ್ತ ಹೋಗುತ್ತದೆ. ಆಯಾ ವ್ಯಕ್ತಿಗಳ ಮನಸ್ಥಿತಿಗೆ ಸೂಕ್ತವಾದ ಶರೀರಗಳಿಗೆ ಆತ್ಮವು ದೇಹಾಂತರಗೊಳ್ಳುತ್ತದೆ. ಭಗವಂತನು ಎಲ್ಲ ಜೀವಿಗಳನ್ನೂ ಪ್ರೀತಿಸುತ್ತಾನೆ. ಜೀವಿಗಳು ತಮ್ಮ ಅಪೇಕ್ಷೆಯ ಮಿತಿಯೊಳಗೆ ಆನಂದಿಸಲು ಭಗವಂತನು ಅವಕಾಶ ಕಲ್ಪಿಸುತ್ತಾನೆ. ಅಂದರೆ ಅವರು ತಮಗಿಷ್ಟವಾದ ಜೀವರೂಪದಲ್ಲಿ ಆನಂದಿಸಬಹುದು. ಗಿಡ, ಮೀನು, ಶ್ವಾನ, ಒಂಟೆ ಇತ್ಯಾದಿ ರೂಪಗಳು. ಆತ್ಮವು ಈ ಜೀವರೂಪಗಳಿಗೆ ದೇಹಾಂತರಗೊಳ್ಳುತ್ತಲೇ ಇರುತ್ತದೆ. ಅದು ಮಾನವ ಶರೀರ ಲಭ್ಯವಾಗುವವರೆಗೂ ಈ ವಿಕಾಸದ ಏಣಿಯನ್ನು ಏರುತ್ತಲೇ ಇರುತ್ತದೆ. ಮಾನವ ಶರೀರವು ಲಭಿಸಿದಾಗ ಅದನ್ನು ಅತ್ಯನ್ನುತ ಜನ್ಮ ಎನ್ನುತ್ತಾರೆ. ಏಕೆ ಹಾಗೆ ಭಾವಿಸುತ್ತೇವೆ?

ಮಾನವ ಜನ್ಮ

ಪ್ರಾಣಿಗಳಿಗೂ ಪ್ರಜ್ಞೆ ಉಂಟು. ಮಾನವನಿಗೂ ಪ್ರಜ್ಞೆ ಉಂಟು. ಆದರೆ ತನಗೆ ಪ್ರಜ್ಞೆ ಇದೆ ಎನ್ನುವ ಪ್ರಜ್ಞೆ ಮಾನವರಿಗಿದೆ. ಅವರು ವಿಚಾರಣೆ ಮಾಡಬಹುದು, ಅನೇಕ ವಿಷಯಗಳ ಬಗೆಗೆ ಪ್ರಶ್ನಿಸಿ ತಮ್ಮ ಅರಿವನ್ನು ಹೆಚ್ಚಿಸಿಕೊಳ್ಳಬಹುದು. ಸಂದೇಹಗಳನ್ನು ನಿವಾರಿಸಿಕೊಳ್ಳಬಹುದು. ಇದು ಮಾನವ ಜೀವನದ ವಿಶೇಷವಾದ ಗುಣವಾಗಿದೆ. ಪ್ರಾಣಿಗಳು ವಿಚಾರಣೆ ಮಾಡಲಾರವು. ಆತ್ಮವು ಮಾನವ ಜೀವಕ್ಕೆ ಬಂದ ಮೇಲೆ ವ್ಯಕ್ತಿಯು ಉತ್ತಮ ನಡೆನುಡಿ ಮತ್ತು ಕೆಲಸಗಳಿಂದ ಇನ್ನೂ ಉತ್ತಮ ಪ್ರಗತಿಯನ್ನು ಸಾಧಿಸಬಹುದು. ಭಗವಂತನ ಭಕ್ತನೆಂಬ ತನ್ನ ಮೂಲಕ್ಕೆ ಹಿಂದಿರುಗಬಹುದು. ಇದನ್ನು ಸಾಧಿಸಲು ನಾವೇನು ಮಾಡಬೇಕು? ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನಿಗೆ ಭಕ್ತಿ ಸೇವೆ ಸಲ್ಲಿಸುವ ಮೂಲಕ ನಾವು ಅದನ್ನು ಸಾಧಿಸಬಹುದು. ಭಕ್ತ ಪ್ರಹ್ಲಾದನು ಮಾನವ ಜೀವಿಗಳಿಗೆ ಹೇಳಿದ ಮಾತುಗಳು ಈ ಸಂದರ್ಭದಲ್ಲಿ ಗಮನಾರ್ಹ, “ಚಿಕ್ಕ ವಯಸ್ಸಿನಲ್ಲಿಯೇ ಮಾನವ ಶರೀರವನ್ನು ಭಕ್ತಿಸೇವೆಯ ಕೆಲಸಗಳನ್ನು ನೆರವೇರಿಸಲು ಉಪಯೋಗಿಸಬೇಕು. ಮಾನವ ಶರೀರವು ಅತ್ಯಂತ ದುರ್ಲಭವಾದುದು. ಬೇರೆಯ ಶರೀರಗಳಂತೆ ಅದೂ ಕೂಡ ಅನಿತ್ಯವಾದರೂ, ಅದು ಅರ್ಥವತ್ತಾದುದು. ಏಕೆಂದರೆ ಮಾನವ ಜೀವನದಲ್ಲಿ ವ್ಯಕ್ತಿಯು ಭಕ್ತಿಸೇವೆಯನ್ನು ಮಾಡಬಲ್ಲನು. ಪ್ರಾಮಾಣಿಕವಾದ ಭಕ್ತಿಸೇವೆಯನ್ನು ಸ್ವಲ್ಪ ಮಾಡಿದರೂ ಕೂಡ ವ್ಯಕ್ತಿಯು ಸಂಪೂರ್ಣ ಪರಿಪೂರ್ಣತೆಯನ್ನು ಪಡೆಯಬಬಹುದು.” (ಭಾಗವತ 7.6.1)

ಅಲ್ಲಿಗೆ ನಾವು ಮಾನವ ಜೀವನದ ಪರಿಪೂರ್ಣತೆಯನ್ನು ಸಾಧಿಸಲು ಭಕ್ತಿಸೇವೆಯೇ ಮಾರ್ಗ ಎಂದು ಅರಿತುಕೊಂಡೆವು. ಇನ್ನು ಆ ಮಾರ್ಗದತ್ತ ದಾಪುಗಾಲು ಹಾಕಬೇಕಷ್ಟೆ.

ಈ ಲೇಖನ ಶೇರ್ ಮಾಡಿ

ಹೊಸ ಪೋಸ್ಟ್‌ಗಳು